“ತಮ್ಮ ಉಜ್ವಲವಾದ ಐತಿಹಾಸಿಕ ಕಾದಂಬರಿಗಳನ್ನು ನಮ್ಮ ನಾಡಿನ ಗತವೈಭವವನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸುತ್ತವೆ. ನಮ್ಮ ದೇಶಪ್ರೇಮವನ್ನು ಉಕ್ಕಿಸುತ್ತವೆ. ಮಹಾರಾಷ್ಟ್ರ ವೀರರೂ, ರಜಪೂತ ರಮಣಿಯರೂ, ಕನ್ನಡ ಕಲಿಗಳೂ ತಮ್ಮ ಲೇಖನಿಯ ಪ್ರಭಾವದಿಂದ ನಮ್ಮ ಸ್ಮೃತಿ ಮಂದಿರದಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ.

“ಜ್ಞಾನ ಸಂಪತ್ತಿನಿಂದಲೂ ಗ್ರಂಥ ಸಮೃದ್ಧಿಯಿಂದಲೂ ತಾವು ಅಖಿಲ ಕರ್ನಾಟಕಕ್ಕೆ ಪೂಜ್ಯರು. ಈ ಇಳಿ ವಯಸ್ಸಿನಲ್ಲಿ ಕೂಡ ತಾವು ಏಕನಿಷ್ಠೆಯಿಂದ ಮಾಡುತ್ತಿರುವ ಸಾಹಿತ್ಯ ಸೇವೆಯನ್ನು ನೋಡಿ ನಾವೆಲ್ಲರೂ ನಾಚಿ, ತಮ್ಮಿಂದ ಉದ್ಯೋಗಶೀಲತೆಯ ಪಾಠವನ್ನು ಕಲಿಯ ಬೇಕಾಗುತ್ತದೆ”.

ಸುಮಾರು ೪೫ ವರ್ಷಗಳ ಹಿಂದೆ, ಮೈಸೂರಿನ ವಿದ್ಯಾವಂತ ತರುಣರು ಗಳಗನಾಥರಿಗೆ ಸಲ್ಲಿಸಿದ ಮಾನಪತ್ರದ ವಾಕ್ಯಗಳಿವು. ಅವರನ್ನು ಈ ರೀತಿ ಸತ್ಕರಿಸಲು ಮುಂದಾದವರೆಂದರೆ, ದಿವಂಗತ ಬಿ.ಎಂ. ಶ್ರೀಕಂಠಯ್ಯನವರು.- ಕನ್ನಡದ ಇನ್ನೊಬ್ಬ ಶ್ರೇಷ್ಠ ಲೇಖಕರು.

ಅಸಾಧಾರಣ ಜನಪ್ರಿಯತೆ

ಕನ್ನಡ ಕಾದಂಬರಿಯ ಚರಿತ್ರೆಯಲ್ಲಿ ಗಳಗನಾಥರದು ಹಿರಿಯ ಸ್ಥಾನ. ಅವರು ೨೪ ಕಾದಂಬರಿಗಳನ್ನು ಬರೆದರು. ಒಂದೊಂದೂ ಹತ್ತು ಹತ್ತು ಸಾವಿರ ಪ್ರತಿಗಳ ಮುದ್ರಣವನ್ನು ಕಂಡವು. ಅವುಗಳ ಜನಪ್ರಿಯತೆ ಇಷ್ಟೇ ಎಂದು ಹೇಳಲುಂಟೇ? ಓದುಬರಹ ಗೊತ್ತಿದ್ದ ಎಲ್ಲ ಕನ್ನಡಿಗರ ಮನೆಯಲ್ಲಿಯೂ ಅವು ಇದ್ದುವೆಂಬುದರಲ್ಲಿ ಸಂದೇಹವಿಲ್ಲ.

ಅವರು ಬರೆಯುತ್ತಿದ್ದ ಕಾಲ (೧೯೧೦-೧೯೩೦) ಮಹತ್ವದ್ದು. ಆಗ ಕನ್ನಡಕ್ಕೆ ಏನೂ ಪ್ರೋತ್ಸಾಹವಿರಲಿಲ್ಲ. ಕನ್ನಡ ಪುಸ್ತಕಗಳನ್ನು ಓದುವವರ ಸಂಖ್ಯೆ ತೀರಾ ಕಡಿಮೆ. ಕಥೆ-ಕಾದಂಬರಿಗಳನ್ನು ಬರೆಯುವವರು ಇರಲೇ ಇಲ್ಲ. ಹೆಣ್ಣು ಮಕ್ಕಳು, ಹಳ್ಳಿಗರು, ವಿದ್ಯಾವಂತರು ಎಲ್ಲರಿಗೂ ಗಳಗನಾಥರ ಕಾದಂಬರಿಗಳು ಮೆಚ್ಚಿಕೆಯಾದವು. ಹಳ್ಳಿಗರ ಅವರ ಕಾದಂಬರಿಗಳನ್ನು ತಮ್ಮೂರ ಉಪಾಧ್ಯಾಯರಿಂದ ಓದಿಸಿ ಕೇಳುತ್ತಿದ್ದರು. ಅವರ ಒಂದು ಕಾದಂಬರಿಯಲ್ಲಿ ಬರುವ ಭಯಾನಕ ದೃಶ್ಯವನ್ನು ಓದಿ, ವಿಟ್ಲ ಗ್ರಾಮದ (ದಕ್ಷಿಣ ಕನ್ನಡ ಜಿಲ್ಲೆ) ಒಬ್ಬರು ಮೂರ್ಛೆ ಹೋದರಂತೆ. ಅವರ ಇನ್ನೊಂದು ಕಾದಂಬರಿಯನ್ನು, ಒಬ್ಬ ಶಾನುಭೋಗರು ತಮ್ಮ ಮನೆಯಲ್ಲಿಯ ಮಂತ್ರದ ಪುಸ್ತಕಗಳ ಜೊತೆಗೆ ಇಟ್ಟು ನಿತ್ಯ ಅದಕ್ಕೆ ನಮಸ್ಕಾರ ಮಾಡುತ್ತಿದ್ದಂತೆ. ಆ ಕೃತಿಯಲ್ಲಿ ಅಷ್ಟೊಂದು ಉದಾತ್ತ ವಿಚಾರಗಳು ಇದ್ದುವು. ಅವರು ಬರೆದ ಕರುಣಾಜನಕ ದೃಶ್ಯಗಳು ಅವೆಷ್ಟೋ, ಮುದ್ರಣಾಲಯದಲ್ಲಿ ಮೊಳೆ ಜೋಡಿಸುವವರು, ತಮ್ಮ ಕೆಲಸದಲ್ಲಿ ತೊಡಗಿರುವಾಗಲೇ ಓದಿ ಕಣ್ಣೀರು ಸುರಿಸಿದ ಪ್ರಸಂಗಗಳುಂಟು. ಅಷ್ಟು ರಸವತ್ತಾದ ಬರವಣಿಗೆ ಅವರದು.

ಬಾಲ್ಯ

ಗಳಗನಾಥರ ನಿಜವಾದ ಹೆಸರು ವೆಂಕಟೇಶ ತ್ರಿವಿಕ್ರಮ ಭಟ್ಟ ಕುಲಕರ್ಣಿ ಎಂದು. ಹುಟ್ಟಿದುದು ೧೮೬೯ ರಲ್ಲಿ. ಅವರು ಗಳಗನಾಥ ಗ್ರಾಮದವರು. ಆದ ಕಾರಣ ಆ ಹೆಸರೇ ಬಳಕೆಯಲ್ಲಿ ಬಂದಿತ್ತು. ಗಳಗನಾಥದಲ್ಲಿ ಇವರ ಮನೆಯ ಹತ್ತಿರವೇ ವರದಾ-ತುಂಗಭದ್ರಾ ನದಿಗಳ ಸಂಗಮವಿದೆ. ಅದು ಬಲು ರಮ್ಯ ಸ್ಥಳ. ಮನೆಯಲ್ಲಿ ಶಾರ್ಮಿಕ ವಾತಾವರಣ.

ವೆಂಕಣ್ಣನು ಗೋಲಿಗುಂಡು. ಮುಟ್ಟಾಟ ಆಡುತ್ತಲೇ ದೇವರ ಸ್ತ್ರೋತ್ರಗಳನ್ನು ಕಲಿತನು. ಪ್ರಾಥಮಿಕ ಶಿಕ್ಷಣವನ್ನು ಮುಗಿಸಿ ಧಾರವಾಡದಲ್ಲಿಯ ಶಿಕ್ಷಕರ ವಿದ್ಯಾಲಯವನ್ನು ಸೇರಿದನು. ಆಗಿನ ದಿನಗಳಲ್ಲಿ ಇಡೀ ಧಾರವಾಡ ಜಿಲ್ಲೆಗೆ ಒಂದೇ ಒಂದು ಇಂಗ್ಲಿಷ್ ಶಾಲೆ ಇದ್ದಿತು. ಕಾಲೇಜಂತೂ ಇರಲೇ ಇಲ್ಲ. ಹೆಚ್ಚಿನ ಶಿಕ್ಷಣ ಬೇಕೆಂದವರು, ಪ್ರಾಥಮಿಕ ಶಿಕ್ಷಕರನ್ನು ತರಬೇತುಗೊಳಿಸುವುದಕ್ಕೆಂದು ಇದ್ದ ಈ ವಿದ್ಯಾಲಯವನ್ನು ಸೇರಬೇಕಿತ್ತು. ಧಾರವಾಡ ಮತ್ತು ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಆಗ ಮರಾಠಿ ಪ್ರಭಾವ ಬಹಳವಾಗಿತ್ತು. ಹೆಚ್ಚಿನ ಜನರು ಕನ್ನಡವನ್ನು ಅಲಕ್ಷ್ಯ ಮಾಡಿ ಮರಾಠಿಯಲ್ಲಿ ಮಾತನಾಡುತ್ತಿದ್ದರು. ತಮ್ಮ ಮಕ್ಕಳನ್ನು ಮರಾಠಿ ಶಾಲೆಗೇ ಹಾಕುತ್ತಿದ್ದರು. ಹೀಗಾಗಿ ಜನಕ್ಕೆ ಕನ್ನಡದಲ್ಲಿ ಸರಿಯಾಗಿ ನಾಲ್ಕು ವಾಕ್ಯ ಬರೆಯಲೂ ಗೊತ್ತಿರಲಿಲ್ಲ. ಇನ್ನು ಗ್ರಂಥ ರಚಿಸುವುದಂತೂ ದೂರವೇ ಉಳಿಯಿತು.

ಈ ಶಿಕ್ಷಕ ವಿದ್ಯಾಲಯದಲ್ಲಿ ಮಾತ್ರ ಪರಿಸ್ಥಿತಿ ಹಾಗಿರಲಿಲ್ಲ. ಅಲ್ಲಿಗೆ ಬಂದವರಿಗೆಲ್ಲ ಕನ್ನಡದ ಬಗ್ಗೆ ಅಭಿಮಾನ ಮೂಡುವಂತಿದ್ದಿತು. ಅದಕ್ಕೆ ಕಾರಣವೆಂದರೆ ಅಲ್ಲಿಯ ಅಧ್ಯಾಪಕರು. ಗಳಗನಾಥರಿಗೆ ಅವರೆಲ್ಲರ ವಿಷಯದಲ್ಲಿ ಗೌರವ. ಧೋ.ನ. ಮುಳಬಾಗಲ ಎಂಬುವರು ಅವರಿಗೆ ಕನ್ನಡವನ್ನು ಕಲಿಸಿದರು. ಇತಿಹಾಸದ ಅಧ್ಯಾಪಕರಾಗಿದ್ದ ರಾ.ಹ. ದೇಶಪಾಂಡೆ ಲೇಖನ ಕಲೆಯನ್ನು ಹೇಳಿಕೊಟ್ಟರು. ಮುಖ್ಯಾಧ್ಯಾಪಕರಾಗಿದ್ದ ರಾ. ಬಾ. ಕರಂದೀಕರರು ಅವರಿಗೆ ರೀತಿ-ನೀತಿ, ಶಿಸ್ತುಗಳನ್ನು ತಿಳಿಸಿಕೊಟ್ಟರು.

ಸಾಹಿತ್ಯ ಪ್ರಪಂಚಕ್ಕೆ ಪ್ರವೇಶ

ಶಿಕ್ಷಕ ವಿದ್ಯಾಲಯದೊಂದಿಗೆ ಶಾಲೆಗಳಲ್ಲಿನ ಅವರ ವಿದ್ಯಾಭ್ಯಾಸ ಮುಗಿದಂತಾಯಿತು. ಆದರೆ ಇಡೀ ಜೀವಮಾನ ಅವರ ಕಲಿಯುವಿಕೆ ನಡೆದೇ ಇತ್ತು. ಹೊಸ ಹೊಸ ವಿಷಯಗಳನ್ನು ತಿಳಿದುಕೊಳ್ಳುವ ಉತ್ಸಾಹ ಅವರಲ್ಲಿ ಎಂದಿಗೂ ಕಡಿಮೆಯಾಗಲಿಲ್ಲ. ಮರಾಠಿ ಮತ್ತು ಸಂಸ್ಕೃತ ಭಾಷೆಗಳನ್ನು ಅಭ್ಯಾಸ ಮಾಡಿದರು. ಪುರಾಣಗಳನ್ನೂ ಶಾಸ್ತ್ರ ಗ್ರಂಥಗಳನ್ನೂ ಹೀಗೆಯೇ ತಾವೇ ಅಧ್ಯಯನ ಮಾಡಿದರು.

ಶಿಕ್ಷಕ ವಿದ್ಯಾಲಯದಲ್ಲಿ ಉತ್ತೀರ್ಣರಾದ ಮೇಲೆ ವೆಂಕಣ್ಣ ಮಾಸ್ತರರು ವಿವಿಧ ಗ್ರಾಮಗಳಲ್ಲಿ ಕೆಲಸ ಮಾಡಿದರು. “ಕೆಲಸದಲ್ಲಿ ನನ್ನ ಪ್ರೀತಿ ಹೆಚ್ಚು. ಮಾಡುವ ಕೆಲಸ ಬಿಟ್ಟು, ಸಿಕ್ಕಾಗ ಸುಮ್ಮನೆ ಸಾಗುವ ಚಾಳಿಯಂತೂ ನನಗೆ ಗೊತ್ತಿಲ್ಲ. ಒಟ್ಟಿನಲ್ಲಿ ನಾನು ಮಕ್ಕಳಿಗೆ ಕಲಿಸುವ ಕೆಲಸವನ್ನು ನಿರ್ವಂಚನೆಯಿಂದ ಮಾಡುತ್ತಿದ್ದೆ” ಎಂಬುದಾಗಿ ತಾವೇ ಆಗಿನ ದಿನಗಳನ್ನು ಬಣ್ಣಿಸಿದ್ದಾರೆ.

ಇದೇ ಕಾಲಕ್ಕೆ ಧಾರವಾಡದಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘ ಎಂಬ ಸಂಘದ ಸ್ಥಾಪನೆಯಾಯಿತು. ಕನ್ನಡದಲ್ಲಿ ಲೇಖನಗಳನ್ನು, ಪುಸ್ತಕಗಳನ್ನು ಬರೆಸುವುದು ಮತ್ತು ಕನ್ನಡದಲ್ಲಿ ಭಾಷಣ ಸ್ಪರ್ಧೆ ಏರ್ಪಡಿಸುವುದು ಹಾಗೂ ಗೆದ್ದವರಿಗೆ ಪಾರಿತೋಷಕಗಳನ್ನು ಕೊಡುವುದು- ಇವು ವಿದ್ಯಾವರ್ಧಕ ಸಂಘದ ಮುಖ್ಯ ಕಾರ್ಯಗಳು. ವೆಂಕಣ್ಣ ಮಾಸ್ತರರು ಇವುಗಳಲ್ಲಿ ಭಾಗವಹಿಸಿ, ಪ್ರತಿ ಸಲವೂ, ೮-೧೦ ವರ್ಷಗಳವರೆಗೆ, ಪಾರಿತೋಷಕಗಳನ್ನು ಪಡೆದರು. ವಿಠ್ಠಲ ದೇವರಿರುವ ಪಂಡರಪುರ ಕ್ಷೇತ್ರಕ್ಕೆ ಮಹಾರಾಷ್ಟ್ರ ಹಾಗೂ ಉತ್ತರ ಕರ್ನಾಟಕದಿಂದ ಅನೇಕ ಆಸ್ತಿಕರು ವಷಕ್ಕೊಮ್ಮೆ ತಪ್ಪದೇ ಹೋಗಿ ಬರುತ್ತಾರೆ. ಅವರಿಗೆ “ವಾರಕರಿ” ಎಂದು ಹೇಳುವುದುಂಟು. ವರ್ಷಕ್ಕೊಮ್ಮೆ ತಪ್ಪದೇ ಗಳಗನಾಥರೂ ಪಾರಿತೋಷಕ ಪಡೆಯಲು ಹೋಗುತ್ತಿದ್ದರು. ಆದುದರಿಂದ ಸಂಘದ ಗೆಳೆಯರು ಅವರಿಗೆ “ಪಂಡರಪುರದ ವಾರಕರಿ” ಎಂದು ಚೇಷ್ಟೇ ಮಾಡುತ್ತಿದ್ದರಂತೆ.

ಸಂಘದವರು ಪುಸ್ತಕ ಬರೆದವರಿಗೂ ಬಹುಮಾನ ಕೊಡುತ್ತಿದ್ದರು. ಅದಕ್ಕೆ ವೆಂಕಣ್ಣ ಮಾಸ್ತರರು “ಪದ್ಮನಯನೆ” ಎಂಬ ಕಾದಂಬರಿಯನ್ನು ಬರೆದರು (೧೮೬೮). ಇದು ಅದ್ಭುತವೂ ರಮ್ಯವೂ ಆದ ಕಥಾನಕ. ಪದ್ಮನಯನೆ ಒಬ್ಬ ರಾಜಕನ್ಯೆ. ಮೇಘನಾದನೆಂಬ ರಾಕ್ಷಸನು ಅವಳನ್ನು ಅಪಹರಿಸಿ ಅಡವಿಯಲ್ಲಿ ಇರಿಸುತ್ತಾನೆ. ಆಗ ಕಮಲಾಕ್ಷನೆಂಬ ರಾಜಪುತ್ರನು ಬಂದು ಗುಟ್ಟಾಗಿ ಅವಳನ್ನು ಮದುವೆಯಾಗುವನು. ಮೇಘನಾದನ ತಮ್ಮನಿಗೆ ಇದು ಗೊತ್ತಾಗಿ ಅವನು ಅವರನ್ನು ಅಗಲಿಸುತ್ತಾನೆ. ಮುಂದೆ ಇಬ್ಬರೂ ತುಂಬಾ ಕಷ್ಟಪಟ್ಟು, ಗುರುವಿನ ಅನುಗ್ರಹದಿಂದ ಕೊನೆಗೆ ಒಂದಾಗುತ್ತಾರೆ.

ಈ ಕಾದಂಬರಿಗೆ ವಿದ್ಯಾವರ್ಧಕ ಸಂಘದ ಬಹುಮಾನ ಸಿಕ್ಕಿತು. ಹಳ್ಳಿಯ ಜನರು ಇದರ ಬಯಲಾಟ ಆಡಿದರು. ಇದಕ್ಕಿಂತ ಮಿಗಿಲಾಗಿ, ಈ ಕಾದಂಬರಿ ಓದಿದ ಇತರರಿಗೂ ಕಾದಂಬರಿ ರಚಿಸಬೇಕೆಂಬ ಆಸೆಯಾಯಿತು.

 

ಕಳವು ಮಾಡಿದ ವಿದ್ಯಾರ್ಥಿ ಅಳುತ್ತಾ ಚಾಕುವನ್ನು ತಂದಿಟ್ಟ

ಆದರ್ಶ ಉಪಾಧ್ಯಾಯರು

 

ಈ ವೇಳೆಗೆ ಗಳಗನಾಥರು ಮುಖ್ಯೋಪಾಧ್ಯಾಯರಾಗಿದ್ದರು. ಅವರೊಬ್ಬ ಆದರ್ಶ ಶಿಕ್ಷಕರು. ಆಗಿನ ಕಾಲದಲ್ಲಿ ಮಕ್ಕಳನ್ನು ಹೊಡೆಯುವುದು ಸಾಮಾನ್ಯವಾಗಿದ್ದಿತು. ಆದರೆ ಗಳಗನಾಥರು ಮಕ್ಕಳ ಮೇಲೆ ಎಂದೂ ಛಡಿ ಎತ್ತಲಿಲ್ಲ. “ಮಕ್ಕಳಿಗೆ ಹೊಡೆತದ ಹೆದರಿಕೆ ಇರಬೇಕು. ಅವರನ್ನು ಹೊಡೆಯಬಾರದು. ಬದಲಾಗಿ ವಿದ್ಯಾರ್ಥಿಗಳಲ್ಲಿ ಒಳ್ಳೆಯ ನಡತೆ, ವಿದ್ಯಾಭ್ಯಾಸದಲ್ಲಿ ಹೆಚ್ಚು ಲಕ್ಷ್ಯ, ಸ್ವಚ್ಛತೆ, ಶಿಸ್ತು- ಈ ಗುಣಗಳನ್ನು ಬೆಳೆಸಿರಿ” ಎಂಬುದಾಗಿ ತಮ್ಮ ಕೈ ಕೆಳಗಿನ ಶಿಕ್ಷಕರಿಗೆ ಹೇಳುತ್ತಿದ್ದರು. ಆ ದೃಷ್ಟಿಯಿಂದ ಸ್ವತಃ ತಾವು ಸದಾ ಪ್ರಯತ್ನಿಸುತ್ತಿದ್ದರು.

ಅವರು ಬಂಕಾಪುರ ಶಾಲೆಯಲ್ಲಿದ್ದಾಗ ಒಮ್ಮೆ ಅವರ ಚಾಕು ಕಳುವಾಯಿತು. ನಿತ್ಯ ಉಪಯೋಗಿಸುತ್ತಿದ್ದ ಆ ಚಾಕುವಿನ ಮೇಲೆ ಅವರದು ವಿಶೇಷ ಮೋಹ. ವರ್ಗದಲ್ಲಿ ಅದನ್ನು ಮೇಲಿನ ಮೇಲಿಟ್ಟು ಮರೆತಿದ್ದರು. ಮರುದಿನ ಅವರು ಆ ವರ್ಗದ ವಿದ್ಯಾರ್ಥಿಗಳಿಗೆ ಕಳುವಿನ ಕೆಟ್ಟ ಪರಿಣಾಮದ ಬಗ್ಗೆ, ಅನೇಕ ಉದಾಹರಣೆ ಕೊಟ್ಟು ಮನಸ್ಸಿಗೆ ತಟ್ಟುವಂತೆ ಪಾಠ ನಡೆಸಿದರು. ಆಗ ಕಳುವು ಮಾಡಿದ ವಿದ್ಯಾರ್ಥಿ ಅಳುತ್ತಾ ತಾನಾಗಿ ಅವರ ಬಳಿ ಬಂದು, ಚಾಕುವನ್ನು ಅವರ ಮೇಜಿನ ಮೇಲಿಟ್ಟು ಕ್ಷಮೆ ಬೇಡಿದನಂತೆ!

ಮುಖ್ಯಾಧ್ಯಾಪಕರಾಗಿ ಹೋದಲೆಲ್ಲ ಗಳಗನಾಥರು ತುಂಬಾ ಸುಧಾರಣೆಗಳನ್ನು ಮಾಡಿದರು. ಅನಂತರ ಗುತ್ತಲ ಗ್ರಾಮದ ಶಾಲೆಗೆ ಬಂದರು. ಬಂದ ಕೆಲವು ತಿಂಗಳುಗಳಲ್ಲಿ ಶಾಲೆಯ ವಾತಾವರಣವನ್ನೇ ಬದಲು ಮಾಡಿಬಿಟ್ಟರು. ಊರಿನ ಓರ್ವ ಗೃಹಸ್ಥರು, “ನಾನು ಸುಮಾರು ೨೫ ವರ್ಷಗಳಿಂದ ಈ ಶಾಲೆಯ ಸಮಿತಿಯಲ್ಲಿದ್ದರೂ ಈಗಿನಷ್ಟು ಎಲ್ಲ ವಿಧಗಳಲ್ಲಿ ಒಳ್ಳೆ ಸ್ಥಿತಿಯಲ್ಲಿ ಎಂದೂ ನೋಡಲಿಲ್ಲ” ಎಂದು ಹೊಗಳಿ ಸರ್ಕಾರಕ್ಕೆ ತಿಳಿಸಿದರು. ಶಿಕ್ಷಣ ಖಾತೆಯ ಅಧಿಕಾರಿಗಳೂ ಅದೇ ಅಭಿಪ್ರಾಯ ಹೊಂದಿದ್ದರು.

ಗುತ್ತಲ ಗ್ರಾಮದ ಬಳಿಯಲ್ಲಿ ಹೊಳೆ, ಹಳ್ಳ ಯಾವುದೂ ಇಲ್ಲ. ಜನರಿಗೆ ನೀರಿನ ತೊಂದರೆ. ಆಗ ಗಳಗನಾಥರು ಶಾಲೆಯ ಬದಿಯಲ್ಲಿಯೇ ವಿದ್ಯಾರ್ಥಿಗಳ ಸಹಾಯದಿಂದ ಒಂದು ದೊಡ್ಡ ಬಾವಿಯನ್ನು ತೋಡಿಸಿದರು. ವಿದ್ಯಾರ್ಥಿಗಳ ಶ್ರಮದಾನ ಮೊದಲ ಉದಾಹರಣೆಯಲ್ಲವೆ ಇದು? ಇಂದಿಗೂ ಆ ಊರಿನಲ್ಲಿ ಅದು ಗಳಗನಾಥರ ಬಾವಿ ಎಂದೇ ಹೆಸರಾಗಿದೆ.

ತಮ್ಮ ನೆಚ್ಚಿನ ಶಿಕ್ಷಕ ವೃತ್ತಿಯಲ್ಲಿ ಅವರು ಹೀಗೆ ಏರುತ್ತ ನಡೆದಾಗ ಅದಕ್ಕೆ ಒಮ್ಮೆಲೆ ರಾಜೀನಾಮೆ ಇತ್ತರು. ಎಲ್ಲರಿಗೂ ಆಶ್ಚರ್ಯ! ಸರ್ಕಾರೀ ಕಟ್ಟು ನಿಟ್ಟಿನಲ್ಲಿ ಮಾಸ್ತರಿಕೆ ಮಾಡುವುದಕ್ಕಿಂತ ಸ್ವತಂತ್ರವಾದ ಒಂದು ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಬೇಕು ಎಂದು ಅವರ ಉದ್ದೇಶವಿದ್ದಿತು. ರಾಜೀನಾಮೆಯಿತ್ತ ಮೇಲೆ “ಆನಂದವನ”ಕ್ಕೆ ಬಂದರು.

ಗುರುಕುಲ, “ಸದ್ಭೋಧ ಚಂದ್ರಿಕೆ

ಅದೊಂದು ಅಗ್ರಹಾರ. ಶೇಷಾಚಲರೆಂದು ಸಾಧುಗಳ ಆಶ್ರಮವದು. ಅವರು ದೀನದಲಿತರ ಉದ್ಧಾರಕ್ಕಾಗಿ ಅವತಾರ ತಾಳಿದವರು. ಗಳಗನಾಥರು ಅವರ ಶಿಷ್ಯರಾದರು. ತಮ್ಮ ಗುರುಗಳೆದುರು ಶಿಕ್ಷಣ ಸಂಸ್ಥೆಯ ವಿಚಾರವನ್ನು ಇಟ್ಟು ಒಪ್ಪಿಗೆ ಪಡೆದರು.

ಅದೊಂದು ಪ್ರಾಚೀನ ಕಾಲದ ಗುರುಕುಲ. ಇಂಗ್ಲಿಷ್ ಕಲಿಸಲೆಂದು ಗಳಗನಾಥರು ಅದನ್ನು ಆರಂಭಿಸಲಿಲ್ಲ. ಬದಲಾಗಿ, ಮಕ್ಕಳಿಗೆ ಸಂಸ್ಕೃತ, ಕಾವ್ಯ, ಶಾಸ್ತ್ರ, ವೇದ ಮುಂತಾದವುಗಳನ್ನು ಕಲಿಸುವ ಪಾಠಶಾಲೆಯನ್ನು ಆರಂಭಿಸಿದರು. ಪಂಡಿತರನ್ನು ಕಲೆಹಾಕಿದರ ನೂರು ಜನ ವಿದ್ಯಾರ್ಥಿಗಳು ಮುಂದೆ ಬಂದರು. ಎಲ್ಲರಿಗೂ ಊಟ ವಸತಿಯ ಉಚಿತ ಸೌಕರ್ಯ.

ಎಲ್ಲವೂ ಉಚಿತವೆಂದಾದರೆ, ಅದರ ವೆಚ್ಚಕ್ಕೆ ಹಣ ಬೇಕಲ್ಲ? ಅದಕ್ಕಾಗಿ ಗಳಗನಾಥರು ಪತ್ರಿಕೆಯೊಂದನ್ನು ಆರಂಭಿಸಿದರು. ಅದರ ಮುದ್ರಣಕ್ಕಾಗಿ, ಮುದ್ರಣದ ಯಂತ್ರ ಒಂದನ್ನು ತಂದರು. ಇದರಿಂದಾಗಿ ಅಗ್ರಹಾರವು ಸದಾ ಚಟುವಟಿಕೆಯಿಂದ ಕೂಡಿರುತ್ತಿತ್ತು. ಎಲ್ಲದರಲ್ಲಿಯೂ ನಿಯಮಿತ ತನ, ಸುವ್ಯವಸ್ಥೆಗಳು ಎದ್ದು ತೋರುತ್ತಿದ್ದವು.

ಉತ್ತರ ಕರ್ನಾಟಕದಲ್ಲಿ ಮೊಟ್ಟ ಮೊದಲಿನ ಮಾಸ ಪತ್ರಿಕೆ ೧೮೬೧ ರಲ್ಲಿ ಹೊರಟಿತು. ಅದಕ್ಕೆ ಆಗಿನ ಕಾಲದಲ ಪತ್ರಿಕೆಗಳು ಹೆಚ್ಚು ಕಾಲ ಬಾಳುತ್ತಿರಲಿಲ್ಲ. ಗಳಗನಾಥರು ಪತ್ರಿಕೆಯನ್ನು ಪ್ರಾರಂಭಿಸಿದಾಗ ಇಡೀ ಕರ್ನಾಟಕದಲ್ಲಿ ಏಳೆಂಟು ಮಾಸಪತ್ರಿಕೆಗಳು ಮಾತ್ರ ಜೀವಂತವಾಗಿದ್ದವು.

ಗಳಗನಾಥರ ಪತ್ರಿಕೆಯ ಹೆಸರು “ಸದ್ಧೋಧ ಚಂದ್ರಿಕೆ”. ಪ್ರಾರಂಭದಲ್ಲಿ ೮೦೦ ಜನ ಚಂದಾದಾರರಿದ್ದರು. ಈ ಸಂಖ್ಯೆ ಹೆಚ್ಚಾಗದೆ ಬೇರೆ ದಾರಿಯಿರಲಿಲ್ಲ. ಆಗ ಗಳಗನಾಥರು ಧಾರವಾಡಕ್ಕೆ ಬಂದರು. ಚಂದಾದಾರರ ಸಂಖ್ಯೆಯನ್ನು ಇಮ್ಮಡಿಗೊಳಿಸಬೇಕೆಂದು ಸಂಕಲ್ಪ ಮಾಡಿದರು. ಆಗ ಕೆಲಸ ಭರದಿಂದ ನಡೆದಿದ್ದಾಗ “ಮಗಳಿಗೆ ಖಾಯಿಲೆಯಾಗಿದೆ, ಕೂಡಲೇ ಹೊಟುಬರಬೇಕು” ಎಂದು ಆನಂದವನದಿಂದ ತಂತಿ ಬಂದಿತು. ಒಬ್ಬಳೇ ಮಗಳು! ಶೇಷಾಚಲ ಗುರುಗಳ ಆಶೀರ್ವಾದದಿಂದ ಅಪೂರ್ವವಾಗಿ ಜನಿಸಿದವಳು. ಮನಸ್ಸು ಊರ ಕಡೆಗೆ ಎಳೆಯಿತು. ಆದರೇನು?  ಕೈಯಲ್ಲಿ ತೆಗೆದುಕೊಂಡ ಕೆಲವೂ ಅವರಿಗೆ ಅಷ್ಟೇ ಮಹತ್ವದ್ದು. ಹೇಗೂ ಶ್ರೀ ಗುರುಗಳು ಅಲ್ಲಿಯೇ ಇದ್ದಾರಲ್ಲವೇ ಎಂಬುದಾಗಿ ಅವರ ಮೇಲೆ ಭಾರ ಹಾಕಿ ಧಾರವಾಡದಲ್ಲಿಯೇ ಉಳಿದರು. ದೊಡ್ಡ ಸಂಖ್ಯೆಯಲ್ಲಿ ಚಂದಾದಾರರನ್ನು ಸಂಪಾದಿಸಿಕೊಂಡೇ ಹಿಂತಿರುಗಿದರು. ಕೈಗೊಂಡ ಕೆಲಸವನ್ನು ಅವರು ಎಂದಿಗೂ ಅರ್ಧಕ್ಕೆ ಬಿಡುವವರಲ್ಲ.

ಆದರೆ ಅಷ್ಟಕ್ಕೆ ಪತ್ರಿಕೆಯ ಆರ್ಥಿಕ ಸ್ಥಿತಿ ಸುಧಾರಿಸಲಿಲ್ಲ. ಏಕೆಂದರೆ ಹೆಚ್ಚು ಜನಕ್ಕೆ ಉಪಯೋಗವಾಗಲೆಂದು ಗಳಗನಾಥರು ಅದರ ಚಂದಾಹಣವನ್ನು ಕಡಿಮೆ ಇರಿಸಿದ್ದರು. ದುಡ್ಡು ಮಾಡುವುದಕ್ಕಾಗಿ ಅಲ್ಲ, ಧರ್ಮ ಪ್ರಸಾರಕ್ಕೆಂದು, ಜನರಿಗೆ ಸದ್ಬೋಧನೆ ಯಾಗಬೇಕೆಂದು ಅವರು ಪತ್ರಿಕೆ ಹೊರಡಿಸುತ್ತಿದ್ದರು. ಹೀಗಾಗಿ ಅವರು ಆಗಾಗ ಸಾಲ ಮಾಡಬೇಕಾಗುತ್ತಿತ್ತು. ಒಂದು ಸಲ ಅವರು ತಮ್ಮ ವಿದ್ಯಾಗುರುಗಳಾಗಿದ್ದ ಕರಂದೀಕರರಲ್ಲಿಗೆ ಹೋದರು. ಗಳಗನಾಥರೆಂದರೆ ಅವರಿಗೆ ತುಂಬಾ ಪ್ರೀತಿ.

ಕರಂದೀಕರರು: ಏನು ಬಂದೆ?

ಗಳಗನಾಥರು: ಕಾಗದದ ಪಾರ್ಸಲ್‌ ಬಂದಿದೆ. ಅದನ್ನು ಬಿಡಿಸಿಕೊಳ್ಳಲು ೪೦೦ ರೂಪಾಯಿ ಕೈಗಡಬೇಕಾಗಿತ್ತು.

ಕರಂದೀಕರರು: ಏನು ನೋಡಿ ನಿನಗೆ ಅಷ್ಟು ಹಣ ಕೊಡಬೇಕು?

ಗಳಗನಾಥರು: ಪ್ರತ್ಯಕ್ಷ ನಿಮ್ಮ ಮುಂದೆ ನಿಂತಿರುವ ಗಳಗನಾಥನನ್ನು ನೋಡಿ.

ಕರಂದೀಕರರು: ನೀನು ಇಂಥ ಕಷ್ಟಕ್ಕೆ ನನ್ನನ್ನು ಹಾಕಬೇಡ. ಏನಾದರೂ ಅಡವು ಇಟ್ಟರೆ ಕೊಡಬಹುದು.

ಗಳಗನಾಥರು: ನನ್ನ ಮನೆಯಲ್ಲಿ ಬೆಳ್ಳಿ, ಬಂಗಾರ ಏನೂ ಇಲ್ಲವಂಬುದು ನಿಮಗೆ ಗೊತ್ತಿದೆ. ಇನ್ನು ಹೊಲವನ್ನು ಒತ್ತೆ ಹಾಕಬಹುದು. ಆದರೆ ನನ್ನ ವಚನಕ್ಕಿಂತ, ಆಭರಣ, ಹೊಲ, ಮನೆಗಳಂತಹ ಕ್ಷುದ್ರ ಜಡಪದಾರ್ಥಗಳು, ಸಾಮಾನ್ಯ ಧನಿಕರಂತೆ ತಮಗೂ ಮುಖ್ಯವಾಗಿ ತೋರಿದುದು ವ್ಯಸನವಾಗುತ್ತದೆ!

ಕರಂದೀಕರರು ಮರುಮಾತಿಲ್ಲದೆ ಒಳಗಿನಿಂದ ಹಣವನ್ನು ತಂದು ಕೊಟ್ಟರು.

ಮುಂದಿನ ೩-೪ ವರ್ಷಗಳಲ್ಲಿ “ಚಂದ್ರಿಕೆ”ಯ ಭಾಗ್ಯ ತೆರೆಯಿತು. ಏಳು ಸಾವಿರ ಜನ ಚಂದಾದಾರರಾದರು! ವಿದೇಶಕ್ಕೂ ಅದರ ಪ್ರತಿಗಳು ಹೋಗುತ್ತಿದ್ದವು- ಆಗಿನ ಕಾಲಕ್ಕೆ. ಕನ್ನಡ ವಾಚಕರ ಸಂಖ್ಯೆಯೇ ಕಡಿಮೆ ಇದ್ದಾಗ ಇದೆಂಥ ಪವಾಡ! ಅದಕ್ಕೆ ಗಳಗನಾಥರ ಸರಸ ಬರವಣಿಗೆಯೇ ಕಾರಣ.

ಕಾದಂಬರಿಗಳು

ಈ ಪತ್ರಿಕೆಯಲ್ಲಿ ಗಳಗನಾಥರು ಒಂದೊಂದಾಗಿ ತಮ್ಮ ಕಾದಂಬರಿಗಳನ್ನು ಪ್ರಕಟ ಮಾಡತೊಡಗಿದರು. ಅವೆಲ್ಲ ಐತಿಹಾಸಿಕ ಕಥಾನಕಗಳು. ರಜಪೂತ, ಮರಾಠ ವೀರರ ಮತ್ತು ಉಜ್ವಲ ಸ್ವಭಾವದ ರಮಣಿಯರ ಕಥೆಗಳು. ಗಳಗನಾಥರು ಈ ಕಥಾವಸ್ತುಗಳನ್ನು ಹರಿನಾರಾಯಣ ಆಪ್ಟೆ ಎಂಬ ಮರಾಠಿ ಲೇಖಕರಿಂದ ಆಯ್ದುಕೊಂಡು ಅನುವಾದಿಸಿದರು. “ಕುಮುದಿನಿ” ಯಂತಹ ಸ್ವತಂತ್ರ ಕಾದಂಬರಿಯನ್ನೂ ಬರೆದರು.

ಕುಮುದಿನಿಯ ಕಥೆ ಕನ್ನಡಿಗರದ್ದೇ, ಅದರ ಇನ್ನೊಂದು ಹೆಸರು “ಬಾಲಕ್ಕೆ ಬಡಿದಾಟ”, ಆನೆಯಂತಹ ವಿಜಯನಗರ ಸಾಮ್ರಾಜ್ಯವೇ ಹೋಯಿತು. ಇನ್ನು ಚಂದ್ರಗಿರಿಯಂಥ ಅದರ ಚಿಕ್ಕ ಸಂಸ್ಥಾನದಲ್ಲಿ ಪಟ್ಟದ ಸಲುವಾಗಿ ಬಡಿದಾಟ ನಡೆಯಿತು. ಎಚ್ಚಮನಾಯಕನೆಂಬ ತರುಣ ಸರದಾರನು ರಾಜವಂಶೀಯನಾದ ಚಿಕ್ಕ ರಾಯನ ಪಕ್ಷವನ್ನು ವಹಿಸಿ ಹೋರಾಡುವವನಾಗಿದ್ದನು. ಅವನ ಹೆಂಡತಿಯೇ ಕುಮುದಿನಿ. ಅವರ ಲಗ್ನದ ಕಾಲಕ್ಕೆ ವೈರಿಗಳ ಕಡೆಯ ಒಬ್ಬನು ಉಡುಗೊರೆ ಕೊಡುವ ನೆವದಿಂದ ಅಲ್ಲಿಗೆ ಬಂದ. ಎಚ್ಚಮನಾಯಕನ ಮೇಲೆ ತನ್ನ ಕಠಾರಿಯನ್ನು ಎತ್ತಿದ. ಕುಮುದಿನಿಯು ಅದನ್ನು ಚಾಣಾಕ್ಷತನದಿಂದ ಕಂಡು ಹಿಡಿದಳು. ವೈರಿಯನ್ನು ನಿವಾರಿಸಿದಳು. ಪತಿಯ ಪ್ರಾಣವನ್ನು ಉಳಿಸಿದಳು.

ಇತ್ತ ವೈರಿಗಳು ಚಿಕ್ಕರಾಯನನ್ನೂ ಅವನ ಪರಿವಾರವನ್ನೂ ಸೆರೆಮನೆಯಲ್ಲಿ ಇರಿಸಿದ್ದರು. ಎಚ್ಚಮನಾಯಕನ ಪಕ್ಷಕ್ಕೆ ಬಹಿರಂಗವಾಗಿ ಬಂದು ಕೂಡಿಕೊಳ್ಳಲು ಸರದಾರರು ಅಂಜುತ್ತಿದ್ದರು. ರಾಜವಂಶೀಯರು ಯಾರಾಯದೂ ಒಬ್ಬರು ತಮ್ಮ ಬಳಿಯಲ್ಲಿ ಇದ್ದಿದ್ದರೆ? ಹಾಗೆಂದು ಗಂಡ-ಹೆಂಡತಿ ಚಿಂತಿಸಿದರು. ಕುಮುದಿನಿ ಕಿಟಕಿಯ ಹೊರಗೆ ನೋಡುತ್ತಿದ್ದಳು. ಅವಳು ಒಬ್ಬ ಅಗಸರವನು ಬಟ್ಟೆ ಒಗೆಯುತ್ತಿದ್ದದನು ಕಂಡಳು; ಕೂಡಲೇ ಅವಳಿಗೆ ಒಂದು ಉಪಾಯ ಹೊಳೆಯಿತು. ಅವನು ರಾಜ ಪರಿವಾರದ ಬಟ್ಟೆಗಳನ್ನು ಒಗೆಯುವವನಾಗಿದ್ದ. ಕುಮುದಿನಿಯು ಅವನಿಗೆ ಸೊಸೆಯಾದಳು!, “ಈಕೆ ಯಾರು?” ಎಂದು ಕೇಳಿದ ಕಾವಲುಗಾರರಿಗೆ, “ಇವಳು ನನ್ನ ಸೊಸೆ.” ಎಂದು ಅಗಸರವನು ಹೇಳುತ್ತ ನಡೆದನು. ದಿನವೂ ಕಾರಾಗೃಹಕ್ಕೆ ಹೋಗಿ, ಮೈಲಿಗೆಯ ಬಟ್ಟೆಗಳ ದೊಡ್ಡ ಗಂಟನ್ನು ಹೊತ್ತುಕೊಂಡು ಬರತೊಡಗಿದಳು. ಅವಳ ರೂಪ-ಲಾವಣ್ಯವನ್ನು ನೋಡಿ ಕಾವಲುಗಾರರು ಪರೀಕ್ಷೆ ಮಾಡದೆಯೇ ಬಿಟ್ಟುಬಿಡುತ್ತಿದ್ದರು. ಒಂದು ದಿನ ಹತ್ತು ವರ್ಷದ ರಾಜಕುಮಾರನನ್ನು ಆ ಬಟ್ಟೆಯ ಗಂಟಿನಲ್ಲಿ ಅಡಗಿಸಿ, ತನ್ನ ಬಿಡಾರಕ್ಕೆ ತಂದು ಬಿಟ್ಟಳು!

ಇದರಿಂದ ರಾಜಪಕ್ಷದವರ ಉತ್ಸಾಹ ಉಕ್ಕಿತೆಂದು ಬೇರೆ ಹೇಳಬೇಕೆ? ಇತರ ರಾಜಪರಿವಾರದವರನ್ನೂ ಪಾರುಮಾಡಬೇಕೆಂದು ಎಚ್ಚಮನಾಯಕನ ಕಡೆಯವರು ನೆಲಮಾಳಿಗೆಯನ್ನು ತೋಡಿದ್ದರು. ಆದರೆ ದುರ್ದೈವ ಎನ್ನಬೇಕು. ಅದು ವೈರಿಗಳಿಗೆ ಗೊತ್ತಾಗಿ ಹೋಯಿತು.

ಮೊದಲೇ ಸಿಟ್ಟಿಗೆದ್ದಿದ್ದ ಅವರು, ರಾಜಪರಿವಾರವನ್ನು ಸೆರೆಮನೆಯಲ್ಲಿಯೇ ಸಂಹರಿಸಲು ನಿರ್ಧರಿಸಿದರು. ಆ ಕೆಲಸಕ್ಕೆ ನಿಯಮಿತನಾದವನು ಚಿನ್ನ ಓಬಲನೆಂಬ ಕ್ರೂರನು. ಅವನು ಪ್ರತ್ಯಕ್ಷ ಯಮನೆಂದೇ ಹೇಳಬೇಕು. ತನ್ನ ಬಿಚ್ಚುಗತ್ತಿಯನ್ನು ಹೆಗಲಿಗೇರಿಸಿಕೊಂಡೇ ಸೆರೆಮನೆಯನ್ನು ಪ್ರವೇಶಿಸಿದನು.

 

"ನಾನು ಗಳಗನಾಥ" ಎಂದು ಪರಿಚಯ ಹೇಳಿಕೊಂಡರು

ಆಗ ರಾಜನು ತನ್ನ ದುರವಸ್ಥೆಯನ್ನು ನೆನೆಯುತ್ತ ಒಂದು ಚಾಪೆಯ ಮೇಲೆ ಕುಳಿತುಕೊಂಡಿದ್ದನು. ಅವನ ರಾಣಿಯು ತುಸು ಅಂತರದಲ್ಲಿ ಕಸದಿಂದ ತುಂಬಿದ ನೆಲದ ಮೇಲೆ ಕುಳಿತಿದ್ದಳು. ಬಳಿಯಲ್ಲಿ ಎರಡು ವರ್ಷದ ಬಾಲಿಕೆ ನಾಗಲಾಂಬಿಕೆ ಆಡುತ್ತಿದ್ದಳು.ತನ್ನ ಮುದ್ದು ಮಾತುಗಳಿಂದ, ಅತ್ತಿತ್ತ ಹರಿದಾಡುತ್ತ ತುಸುವಾದರೂ ಅವರ ಚಿಂತೆಯನ್ನು ದೂರಮಾಡುತ್ತಲಿದ್ದಳು.

ಖಡ್ಗ ಪಾಣಿಯಾದ ಚನ್ನ ಓಬಲನನ್ನು ಕಂಡಕೂಡಲೆ ನಾಗಲಾಂಬಿಕೆಯು ಚಿಟ್ಟನೆ ಚೀರಿ ಅಜ್ಜಿಯ ಬಳಿಗೆ ಓಡಿದಳು. ಚಿನ್ನ ಓಬಲನು, “ಚಿಕ್ಕರಾಯ, ನಿನ್ನನ್ನು ಸುಕುಟುಂಬರಾಗಿ ಕೊಲ್ಲಬೇಕೆಂದು ರಾಜಾಜ್ಞೆಯಾಗಿದೆ” ಎಂದನು. ಆಗ ರಾಣಿಯು, “ನನಗೆ ವೈಧ್ಯವ್ಯ ದುಃಖ ಬರುವುದು ಬೇಡ” ಎಂದು ಪತಿಯ ಕೈಯಿಂದಲೇ ಮರಣ ಹೊಂದಲು ನಿಶ್ಚಯಿಸಿದಳು. ಪರಿವಾರದವರು ಕಣ್ಣೀರು ಸುರಿಸತೊಡಗಿದರು. ಚಿನ್ನ ಓಬಲನಿಗೆ ಕರುಣೆ ಬರುವದಂತಿರಲಿ, ಅವನು ಅವಸರಪಡಿಸತೊಡಗಿದನು.

ರಾಣಿಯು ಹಣೆ ತುಂಬ ಕುಂಕುಮ ಹಚ್ಚಿಕೊಂಡು ಸೆರಗನ್ನು ಅಡ್ಡಗಟ್ಟಿಕೊಂಡು, ರಾಜನ ಪಾದಗಳಿಗೆ ಎರಗಿ ಕುಳಿತಳು. ಚಿಕ್ಕರಾಯನು ಚಿನ್ನ ಓಬಲಿನಿಂದ ಖಡ್ಗ ಕಸಿದುಕೊಂಡು, “ಹಾಯ್! ಏನು ನನ್ನ ದುರ್ಧೈವ! ನನ್ನ ಕೈ ಹಿಡಿದು, ಇಷ್ಟು ದಿನ ನನ್ನನ್ನೇ ಆಶ್ರಯಿಸಿ ಬಾಳಿದ ಈ ಸತೀಮಣಿಯನ್ನು ನಾನೇ ಕೈಯಾರೆ ಕೊಲ್ಲುವ ಹೊತ್ತು ಬಂತೇ?” ಎಂದು ಹಲುಬಿದನು.

“ಸತಿಗೆ ಪತಿಯ ಚರಣಗಳು ಕಾಶಿಗಿಂತ ದೊಡ್ಡ ಕ್ಷೇತ್ರ. ಅಲ್ಲಿ ಪ್ರಾಣ ನೀಗುವವಳೇ ಧನ್ಯಳು.” ಎಂದು ರಾಣಿಯು ಉಚ್ಚರಿಸುತ್ತಿದ್ದಾಗ, ಚಿಕ್ಕರಾಯನು ಒಂದೇ ಹೊಡೆತದಿಂದ ಅವಳ ಶಿರಸ್ಸನ್ನು ಕೆಳಗುರುಳಿಸಿದನು. ಹೆಂಡತಿಯ ರಕ್ತ ನೋಡಿ ಆವೇಶಗೊಂಡವನಾಗಿ ರಾಜನು ತನ್ನ ನಡುವಿನ ಮಗಳು, ಮಗ ಇವರನ್ನು ಆಹುತಿ ತೆಗೆದಕೊಂಡನು. ಆಮೇಲೆ ತನ್ನ ಹಿರಿಯ ಮಗನ ಕೈಯಲ್ಲಿ ಖಡ್ಗವನ್ನು ಕೊಟ್ಟನು. ಸೊಸೆಯ ಸಂಹಾರವನ್ನು ನೋಡುತ್ತ ನಿಂತನು! ಅವಳ ರುಂಡವೂ ನೆಲಕ್ಕೆ ಬಿದ್ದಿತು. ಉಳಿದವಳೆಂದರೆ ಚಿಕ್ಕ ಬಾಲಿಕೆಯಾದ ನಾಗಲಾಂಬಿಕೆ. ಮಗುವಿನ ಮೇಲೆ ಶಸ್ತ್ರವನ್ನೆತ್ತಲಾಗದೇ ಕರಕರ ಹಲ್ಲು ಕಡಿಯುತ್ತ, “ದುಷ್ಟ! ಓಬಲಾ! ಈ ಹಸುಗೂಸನ್ನು ಮಾತ್ರ ನಿನ್ನ ಪಾಲಿಗೆ ಬಿಟ್ಟಿದ್ದೇನೆ” ಎಂದನು. ಆಮೇಲೆ ಅರಸನೂ, ಹಿರಿಯ ಮಗನೂ ಸದರಿಯಂತೆ, ಉದ್ದವಾದ ಆ ಖಡ್ಗದ ಮೇಲೆ ಓಡಿ ಬಿದ್ದು ಪ್ರಾಣವನ್ನು ನೀಗಿದರು.

ರಕ್ತದಲ್ಲಿ ಮುಳುಗಿದ ಆ ಕೂಸು ಮಾತ್ರ ಹೌಹಾರಿ ಅಳಲಿಕ್ಕೂ ಬಾಯಿಯಿಲ್ಲದೆ ಅಂತಕ ಸ್ವರೂಪನಾದ ಓಬಲನೆದುರು ಕಣ್ಣು ಬಿಡುತ್ತ ಕುಳಿತ್ತಿದ್ದಳು. ಚಿನ್ನ ಓಬಲನು ಅದನ್ನು ಎಗ್ಗಿಲದೆ ತುಂಡರಿಸಿ, ಅರಸು ಮನೆತನದವರಾರೂ ಅಲ್ಲಿ ಉಳಿಯಲಿಲ್ಲವೆಂದು ಖಾತ್ರಿಪಡಿಸಿಕೊಂಡು ಹೊರಬಿದ್ದನು.

ಗಳಗನಾಥರು ಈ ಪ್ರಕರಣಕ್ಕೆ “ಅಂತಕನ ಕೋಲಾಹಲ” ಎಂಬ ಹೆಸರನ್ನು ಕೊಟ್ಟಿದ್ದಾರೆ. ಇದು ಯಮನ ಕೋಲಾಹಲವಲ್ಲದೆ ಇನ್ನೇನು? ಇದರ ಪೂರ್ಣ ವರ್ಣನೆಯನ್ನು ಓದಿಯೇ ವಿಟ್ಲ ಗ್ರಾಮದ ವಾಚಕರು ಮೂರ್ಛೆ ಹೋದುದು.

ಗಳಗನಾಥರು ಇದೇ ರೀತಿ ವೀರರಸದ ಸನ್ನಿವೇಶಗಳನ್ನೂ ಬಹು ಸೊಗಸಾಗಿ ತಮ್ಮ ಕಾದಂಬರಿಗಳಲ್ಲಿ ಕೊಟ್ಟಿದ್ದಾರೆ. ಅವನ್ನು ಓದಿದರೆ ಉತ್ಸಾಹ ತುಂಬಿ ಹರಿಯುವುದು. ಇಂತಹ ಕಾದಂಬರಿಗಳ ಪ್ರಕಟಣೆಯಿಂದಾಗಿ “ಚಂದ್ರಿಕೆ”ಯ ಚಂದಾದಾರರು ಏಳು ಸಾವಿರಕ್ಕೇರಿದುದರಲ್ಲಿ ಏನಾಶ್ವರ್ಯ? ಪತ್ರಿಕೆಯ ಪ್ರತಿ ತಿಂಗಳ ಸಂಚಿಕೆಗಳನ್ನು ಸವಾರಿ ಚಕ್ಕಡಿಯಲ್ಲಿ ತುಂಬಿಕೊಂಡು, ಆರು ಮೈಲಿನ ಮೇಲಿರುವ ತಾಲ್ಲೂಕು ಸ್ಥಳವಾದ ಹಾವೇರಿಯಲ್ಲಿ ಅಂಚೆಗೆ ಹಾಕುತ್ತಿದ್ದರಂತೆ.

ಹಾವೇರಿಯಲ್ಲಿ

ಹೀಗಿರುತ್ತ ಗಳಗನಾಥರ ಜೀವನದಲ್ಲಿ ದೊಡ್ಡ ಆಘಾತನ ಒದಗಿತು. ಅದುವೇ ಶ್ರೀ ಶೇಷಾಚಲ ಸಾಧುಗಳ ಮರಣ. ಗಳಗನಾಥರಿಗೆ ಗುರುಗಳೇ ಸರ್ವಸ್ವ. ಸಾಧುವರ್ಯರ ಮರಣದಿಂದ ಅವರು ತುಂಬಾ ದುಃಖಪಟ್ಟರು. ಆ ಮುಂದೆ ಗಳಗನಾಥರಿಗೆ ಆನಂದವನದಲ್ಲಿ ಇರುವುದೇ ಸಾಧ್ಯವಾಗಲಿಲ್ಲ. ಹಾವೇರಿಗೆ ಬಂದು ನೆಲೆಸಿದರು (೧೯೧೯). ಸಂಸ್ಕೃತ ಪಾಠಶಾಲೆಯನ್ನು ಪುನಃ ಮುಮದುವರಿಸಿದರು. “ಸದ್ಗುರು” ಎಂಬ ಹೊಸ ಪತ್ರಿಕೆಯನ್ನು ಹೊರಡಿಸಲಾರಂಭಿಸಿದರು. ಅದಕ್ಕಾಗಿ ಮುದ್ರಣಯಂತ್ರವೂ ಬಂದು. ಎಲ್ಲವೂ ಆನಂದವನದಲ್ಲಿ ಇದ್ದಂತೆಯೇ ಪ್ರತಿ ಸೃಷ್ಟಿಯಾಯಿತು! ಗಳಗನಾಥರ ಕಾರ್ಯಶಕ್ತಿಯು ಅದ್ಬುತವಾಗಿದ್ದಿತು.

ಪಾಠಶಾಲೆ ಮತ್ತು ಪತ್ರಿಕೆ ಇವನ್ನು ನಡೆಸಿಕೊಂಡು ಹೋಗಲು ಮತ್ತೆ ಕಾದಂಬರಿಗಳನ್ನು ಬರೆಯತೊಡಗಿದರು. ಕೆಲವೇ ವರ್ಷಗಳಲ್ಲಿ ಐವತ್ತು ಸಾವಿರ ರೂಪಾಯಿ ಬೆಲೆಯ ಪುಸ್ತಕಗಳು ಮಾರಾಟವಾದುವು. ತಮ್ಮ ಇಬ್ಬರ ಹೆಣ್ಣು ಮಕ್ಕಳ ಮದುವೆಯನ್ನು ಮುಗಿಸಿದ್ದರು. ಅವರು ಸದಾಚಾರಿಗಳಾಗಿ ಬಾಳಬೇಕು ಎಂಬ ದೃಷ್ಟಿಯಿಂದ “ದಾಂಪತ್ಯ”, “ಭಗವತೀ ಕಾತ್ಯಾಯಿನೀ” ಮೊದಲಾದ ಪುಸ್ತಕಗಳನ್ನು ಬರೆದರು. ವೈಭವದ ಗ್ರಂಥೋದ್ಯಮವದು.

ಮಾಧವ ಕರುಣಾ ವಿಲಾಸ

ವಿಜಯನಗರ ರಾಜ್ಯ ಸ್ಥಾಪನೆಯ (೧೪ನೇ ಶತಮಾನ) ಕಾರ್ಯದಲ್ಲಿ ಹಕ್ಕ-ಬುಕ್ಕರಿಗೆ ನೆರವಾವರೆಂದರೆ ಶ್ರೀ ವಿದ್ಯಾರಣ್ಯರು (ಮಾಧವಾಚಾರ್ಯರು). ಅದಕ್ಕಾಗಿ ಬಂಗಾರದ ಮಳೆಯನ್ನೇ ಬರಿಸಿದರಲ್ಲವೇ! ಅವರು ಬಲು ದೊಡ್ಡ ವಿದ್ವಾಂಸರೂ ಆಗಿದ್ದರು. ಆ ಮಹಾನ್ ತಪಸ್ವಿಯ ವಿಷಯಗಳಲ್ಲಿ ಗಳಗನಾಥರಿಗೆ ತುಂಬಾ ಗೌರವು. ಅವರನ್ನು ವಿಜಯನಗರ ರಾಜ್ಯ ಸ್ಥಾಪನೆಯನ್ನೂ ಕುರಿತ ಕಾದಂಬರಿಯನ್ನೂ ಬರೆಯಬೇಕೆಂದು ಗಳಗನಾಥರು ಬಹುಕಾಲದಿಂದ ಅಪೇಕ್ಷಿಸಿದ್ದರು. ಅದೀಗ ಕೈಗೂಡಿತು. (೧೯೨೩). ಆ ಕಾದಂಬರಿಯ ಹೆಸರು “ಮಾಧವ ಕರುಣಾ ವಿಲಾಸ”. ಆರು ನೂರು ಪುಟಗಳನ್ನು ಮೀರಿದ ದೊಡ್ಡ ಕೃತಿಯಿದು. ಅದರಲ್ಲಿ ಮಾಧವಾಚಾರ್ಯರ ಚರಿತ್ರೆ ಅಲ್ಲದೆ ಅವರ ಉಪದೇಶ ಸಾರವಿದೆ; ಅದರಿಂದ ಕನ್ನಡಿಗರಲ್ಲಿ ಆದ ವಿಲಕ್ಷಣ ಜಾಗೃತಿಯ ಮತ್ತು ಹಕ್ಕ-ಬುಕ್ಕ ಮೊದಲಾದವರ ಶೌರ್ಯ ಸಾಹಸಗಳ ವರ್ಣನೆಯಿದೆ. ಅದು ಕನ್ನಡಿಗರ ಮಹಾಭಾರತವೇ ಸರಿ.

ಈ ಕೃತಿಯಿಂದ ಗಳಗನಾಥರ ಕೀರ್ತಿಯು ಎಲ್ಲೆಡೆಗೆ ಹಬ್ಬಿತು. ಈ ಕೃತಿಗೆ ಅನೇಕ ಸಂಸ್ಥೆಗಳು ಪಾರಿತೋಷಕವಿತ್ತು ಗೌರವಿಸಿದವು.

ಗಳಗನಾಥರ ಕಾದಂಬರಿಗಳು ಹೀಗೆ ಅತ್ಯಂತ ಜನಪ್ರಿಯವಾಗಿದ್ದರೂ ಸ್ವತಃ ಅವರಿಗೆ ಧಾರ್ಮಿಕ ಕೃತಿಗಳನ್ನು ಬರೆಯುವುದರಲ್ಲಿ ಮಾತ್ರ ನಿಜವಾದ ಆಸಕ್ತಿ ಇದ್ದಿತು. “ಮಾಧವ ಕರುಣಾವಿಲಾಸ”ದಲ್ಲಿ ಅರ್ಧದಷ್ಟು ಧಾರ್ಮಿಕ ವಿಚಾರಗಳೇ ಇವೆ. ಅದರು ಸನಾತನ ಧರ್ಮದ ಕಟ್ಟಾಭಿಮಾನಿಗಳು. ಅದನ್ನು ಎತ್ತಿ ಹಿಡಿಯಬೇಕೆಂದೇ ತಾವು ಲೇಖನಿ ಹಿಡಿಯಬಯಸಿದರು. ಮೊದಲಿಗೆ ಭಾಗವತ ಪುರಾಣವನ್ನು ತಿಳಿಯಾದ ಶೈಲಿಯಲ್ಲಿ ಬರೆದು ಕನ್ನಡ ಓದುಗರಿಗೆ ಒಳ್ಳೆಯ ಕೊಡುಗೆ ನೀಡಿದರು. ಅನಂತರ ಶೈವ ಪುರಾಣವನ್ನು ಬರೆದರು. ಹಿಂದಿ ಭಾಷೆಯಲ್ಲಿ ತುಳಸೀದಾಸರೆಂಬುವರು ಬಹು ದೊಡ್ಡ ಸಂತರು, ಕವಿಗಳು. ರಾಮಾಯಣದ ಕಥೆಯನ್ನು ಅವರು ಹಿಂದಿಯಲ್ಲಿ ಸುಂದರವಾಗಿ ನಿರೂಪಿಸಿದ್ದಾರೆ. ಅದನ್ನು ಕನ್ನಡದಲ್ಲಿ ಮೊದಲು ರೂಪಾಂತರಿಸಿದವರು ಗಳಗನಾಥರು.

ಸಾಲದ ಹೊರೆ

ಪುಸ್ತಕ ಬರೆದು, ಮಾರಾಟ ಮಾಡಿದ್ದರ ಹಣವೇನೋ ತುಂಬಾ ಬರುತ್ತಿದ್ದಿತು. ಆದರೆ ಲಾಭಾಂಶ ಇರುತ್ತಿರಲಿಲ್ಲ. ಜನರಲ್ಲಿ ಉತ್ತಮ ವಿಚಾರಗಳು ಹರಡಬೇಕು ಎಂಬುದು ಅವರ ಉದ್ದೇಶವಿತ್ತಲ್ಲದೆ, ದುಡ್ಡು ಮಾಡುವುದಲ್ಲ ಎಂಬುದನ್ನು ನೋಡಿದ್ದೇವೆ. ಹೀಗಾಗಿ ಸಾಲವೂ ಸಾಕಷ್ಟು ಇದ್ದಿತು. ಪತ್ರಿಕೆಗಳನ್ನು ನಡೆಸುತ್ತಿದ್ದರಷ್ಟೆ. ಅವುಗಳಿಗಾಗಿ ಹಣವು ಪುಸ್ತಕ ಮಾರಾಟದಿಂದಲೇ ಬರಬೇಕಾಗಿದ್ದಿತು.

ಗಳಗನಾಥರು ವೆಚ್ಚದ ವಿಷಯದಲ್ಲಿ ಲೆಕ್ಕಾಚಾರ ಹಾಕುವವರಲ್ಲ. ಅದರಿಂದಾಗಿ ಸಾಲವು ಹನುಮಂತನ ಬಾಲದಂತೆ ಬೆಳೆಯತೊಡಗಿತು. ದೊಡ್ಡ ದೊಡ್ಡ ಧಾರ್ಮಿಕ ಪುಸ್ತಕಗಳನ್ನು ಬೇರೆ ಮುದ್ರಿಸಿ ಪ್ರಕಟಿಸಿದ್ದರಷ್ಟೆ. ಕಾದಂಬರಿಗಳಷ್ಟು ಅವು ಬೇಗ ಮಾರಾಟವಾಗುವವಲ್ಲ.

ಆಗ ಗಳಗನಾಥರಿಗೆ ಇದ್ದುದ್ದು ಒಂದೇ ಉಪಾಯ. ಪುಸ್ತಕ ಬರೆಯುವುದನ್ನು ಕೆಲಕಾಲ ನಿಲ್ಲಿಸಿದರು. ತಮ್ಮಲ್ಲಿಯ ಪುಸ್ತಕಗಳ ಗಂಟನ್ನು ಹೊತ್ತು ಕೊಂಡು ಊರು ಬಿಟ್ಟು ಹೊರಟರು.- ಅವನ್ನು ಮಾರಾಟ ಮಾಡಲೆಂದು! ಗಳಗನಾಥರಂತಹ ಹಿರಿಯ ಲೇಖಕರೇ ಸ್ವಂತದ ಪುಸ್ತಕ ಮಾರಾಟ ಮಾಡಬೇಕಾದ ಪ್ರಸಂಗ. ಅದೂ ತಮ್ಮ ಇಳಿವಯಸ್ಸಿನಲ್ಲಿ, ಅರವತ್ತನೆಯ ವರ್ಷದ ಹೊಸ್ತಿಲಲ್ಲಿದ್ದಾಗ!

ಆ ವೇಳೆಗೆ (೧೯೨೮) ಗಳಗನಾಥರ ಕೃತಿಗಳು ಸಮಸ್ತ ಕರ್ನಾಟಕದಲ್ಲಿ ಸುಪರಿಚಿತವಾಗಿದ್ದವು. “ಯಾರು ಈ ಗಳಗನಾಥರು?” ಎಂಬ ಕುತೂಹಲವು ಜನರಲ್ಲಿ ಇದ್ದಿತು. ಅವರೇ ಸ್ವತಃ ಪುಸ್ತಕ ಹೊತ್ತುಕೊಂಡು ಬಂದ ಮೇಲೆ ಕೇಳುವುದೇನು?

ಅವರ ಬರವಣಿಗೆಯು ತೇಜಸ್ಸಿನಿಂದ ಕೂಡಿದುದು. ಅದನ್ನೋದಿದವರಿಗೆ ಅವರ ವ್ಯಕ್ತಿತ್ವವು ಭವ್ಯ ಎಂದೆನಿಸುವುದು. ಗಳಗನಾಥರು ನೋಡಲಿಕ್ಕೆ ವಿಶೇಷ ವ್ಯಕ್ತಿಯಲ್ಲ. ಅವರದು ಎತ್ತರದ ನಿಲುವೇನಲ್ಲ. ಅವರ ರೂಪ, ನಡೆ-ನುಡಿಗಳು ಬಲು ಸೌಮ್ಯ. ಅವರು ಧೋತರವನ್ನುಟ್ಟು ಬಗಲಗಸಿಯ ಅಂಗಿ ಹಾಕುತ್ತಿದ್ದರು. ಅದರ ಮೇಲೆ ಕಿರಿಯಂಚಿನ ಉತ್ತರೀಯ. ತಲೆಗೊಂದು ರುಮಾಲು ಇದು ಅವರ ವೇಷ-ಭೂಷಣ. ಅವರ ಬಣ್ಣ ತಿಳಿಗಪ್ಪು, ಮುಖದಲ್ಲಿ ನೆರೆಗೂದಲಿನ ಹುಬ್ಬು ಮೀಸೆ. ಇಂಥ ವ್ಯಕ್ತಿ ಗುರುತಿಲ್ಲದವರ ಎದುರು ಹೋಗಿ ನಿಂತರ ಅವರನ್ನು ಆದರದಿಂದ ಕಾಣಬೇಕೆಂಬ ಭಾವನೆ ಒಮ್ಮೆಲೆ ಮೂಡುತ್ತಿದ್ದಿಲ್ಲ. ಅಚರು ಅಷ್ಟೊಂದು ಸಾಮಾನ್ಯವಾಗಿ ತೋರುತ್ತಿದ್ದರು.

ಆದರೆ, “ನಾನು ಗಳಗನಾಥ. ನಿಮ್ಮನ್ನು ಕಾಣಲು ಕನ್ನಡ ಪುಸ್ತಕ ತೋರಿಸಲು ಬಂದಿದ್ದೇನೆ” ಎಂದು ಹೇಳುವುದೊಂದೇ ತಡ, ಗಳಗನಾಥರಿಗೆ ಕೂಡಲೇ ಆದರ ಆತಿಥ್ಯ ಸಲ್ಲುತ್ತಿದ್ದಿತು! ಅವರು ಮಾತಿನಲ್ಲಿ ವಿನಯಶೀಲರು; ಅತಿ ಸರಳರು. ಅಷ್ಟೇ ಸ್ಪಷ್ಟವಾದಿಗಳು. ಸಂಭಾಷಣೆಯಲ್ಲಿ ಅವರ ಧಾರ್ಮಿಕ ನಿಷ್ಠೆ ಹಾಗೂಸ ಕನ್ನಡದ ಮೇಲಿನ ಪ್ರೀತಿಗಳು ಎದ್ದು ತೋರುತ್ತಿದ್ದವು.

ಸಂಚಾರದಲ್ಲಿ ಅವರು ಒಮ್ಮೆ ಬೆಂಗಳೂರಿಗೆ ಬಂದರು. ಅಲ್ಲಿ ಇದ್ದ ಏಳೆಂಟು ತಿಂಗಳ ಅವಧಿಯಲ್ಲಿ ಗಳಗನಾಥರಿಗೆ ತುಂಬಾ ಗೌರವ ಸಂದಿತು. ಆಗಿನ ಅನೇಕ ಸಾಹಿತಿಗಳು ಅವರನ್ನು ಬರಮಾಡಿಕೊಂಡರು. ಕನ್ನಡ ಸಾಹಿತ್ಯ ಪರಿಷತ್ತು  ದೊಡ್ಡ ಮೊತ್ತದ ಸಂಭಾವನೆಯನ್ನು ಸಲ್ಲಿಸಿತು. ಬೆಂಗಳೂರಿನಲ್ಲಿ ಇದ್ದಾಗ ಅವರು ಮತ್ತೆ ಕಾದಂಬರಿಗಳನ್ನು ಬರೆಯತೊಡಗಿದರು. ಮೂರು ಕಾದಂಬರಿಗಳು ಅಲ್ಲಿಯೇ ಪ್ರಕಟವಾದವು.

ಹೃದಯವನ್ನು ತಿದ್ದುವ ಕಾದಂಬರಿಗಳು

ಆಮೇಲೆ (೧೯೨೮ ರಿಂದಾಚೆ) ಅವರು ಕಾದಂಬರಿಗಳನ್ನು ಬರೆದದ್ದು ಕಡಿಮೆ. ಆದರೆ ಇಪ್ಪತ್ತು ವರ್ಷಗಳ ಕಾಲ ಅವರು ಬಹು ದೊಡ್ಡ ಕಾದಂಬರಿಕಾರರು ಎಂದು  ಕೀರ್ತಿ ಪಡೆದರು. ಅವರ ಕಾದಂಬರಿಗಳೆಂದರೆ, ಕೇವಲ ನರಂಜನೆಗೆಂದು ಓದಿ ಒಗೆಯುವವವಾಗಿರಲಿಲ್ಲ. ಅವು ಐತಿಹಾಸಿಕ ಕಾದಂಬರಿಗಳಾದ್ದರಿಂದ ನಮ್ಮ ದೇಶದ ವೈಭವವನ್ನು ಸಾರಿ ಹೇಳುತ್ತವೆ. ರಜಪೂತ, ಮಹಾರಾಷ್ಟ್ರ ಮತ್ತು ಕರ್ನಾಟಕದ ವೀರರ ಚರಿತ್ರಗಳವು. ಇವರೆಲ್ಲ ಆಗಿನ ತಮ್ಮ ಧರ್ಮ ಮತ್ತು ಸ್ವಾತಂತ್ಯ್ರಕ್ಕಾಗಿ, ದಬ್ಬಾಳಿಕೆಯ ವಿರುದ್ಧ ಹೋರಾಡಿದವರು.

ಗಳಗನಾಥರ ಕಾದಂಬರಿಗಳಲ್ಲಿ ಬರುವ ರಮಣಿಯರಂತೂ ವೀರನಾರಿಯರು; ಪತಿಭಕ್ತಿಯುಳ್ಳವರು ಒಬ್ಬೊಬ್ಬರು ಅದೆಂತಹ ಕಷ್ಟಗಳನ್ನು ಸಹಿಸಿದ್ದಾರೆ! ಇಂದಿಗೂ ಅವರ ಚರಿತ್ರೆಗಳು ಸ್ಫೂರ್ತಿದಾಯಕವಾಗಿವೆ.

ಗಳಗನಾಥರ ಕಾದಂಬರಿಯಲ್ಲಿ ಓರ್ವ ಸದ್ಗುರು ತಪ್ಪದೆ ಬರುತ್ತಾನೆ. ಗುರುವಿನ ಕರುಣೆ, ಸನ್ಮಾರ್ಗ ಬೋಧನೆಯು ಎಂತಹವರಿಗೂ ಬೇಕಾಗುತ್ತದೆ. ಅದಿಲ್ಲದೆ ಯಾರೂ ಮುಂದೆ ಬರಲಾರರು; ಕಷ್ಟಗಳಿಂದ ಪಾರಾಗಲಾರರು. ಸ್ವತಃ ಗಳಗನಾಥರ ಜೀವನದಲ್ಲಿ ಅಂಥ ಒಬ್ಬ ಗುರು-ಶೇಷಾಚಲ ಸಾಧುಗಳು- ಇದ್ದರಲ್ಲವೆ?

ಅಂತೂ ಅವರ ಕಾದಂಬರಿಗಳಲ್ಲಿ ದೇಶಭಕ್ತಿ, ಸ್ವಧರ್ಮನಿಷ್ಠೆ, ಒಳ್ಳೆಯ ನಡತೆ- ಇವನ್ನು ವಿಶೇಷವಾಗಿ ಕಾಣುತ್ತೇವೆ. “ಕನ್ನಡಿಗರಲ್ಲಿ ವಾಚನಾಭಿರುಚಿಯು ಹೆಚ್ಚಬೇಕು. ಅವರ ಮನಸ್ಸಿನಲ್ಲಿ ಉದಾತ್ತ ಭಾವನೆಗಳು ಮೂಡಬೇಕು” ಎಂಬುದು ಅವರ ಕಾದಂಬರಿ ಲೇಖನದ ಉದ್ದೇಶ. ಅದನ್ನು ಅವರು ಬಹುಮಟ್ಟಿಗೆ ಸಾಧಿಸಿದರು. ಅವನ್ನು ಓದಿ ಯಾವ ಕಾಲಕ್ಕೂ ನಮ್ಮ ಆಚಾರ-ವಿಚಾರಗಳನ್ನು ತಿದ್ದಿಕೊಳ್ಳಬಹುದಾಗಿದೆ.

ಎಂಟಾಣೆಯ ಪುಸ್ತಕ!

ಆ ಮುಂದೆ ಗಳಗನಾಥರು ಕಾದಂಬರಿ ಬರೆಯುವುದನ್ನು ಬಿಟ್ಟು ಬಿಟ್ಟರು. ಸಾಲದ ಹೊರೆ ಹೆಚ್ಚುತ್ತಲೇ ಇದ್ದಿತು. ಅದನ್ನು ಇಳಿಸಲೆಂದು ತಮ್ಮ ಪುಸ್ತಕಗಳ ಹೊರೆಯನ್ನು ಹೊತ್ತುಕೊಂಡು ಮೇಲಿಂದ ಮೇಲೆ ಸಂಚಾರ ಕೈಗೊಂಡರು. ಎಲ್ಲರೂ ಕೊಳ್ಳುತ್ತಿದ್ದರೇನೋ ನಿಜ. ಒಮ್ಮೊಮ್ಮೆ ಕೆಲವರು ಬೇಡವೆಂದುದೂ ಇದೆ. ಅಂತಹ ಒಂದು ಮೋಜಿನ ಪ್ರಸಂಗವಿದು:

ಗಳಗನಾಥರು ಒಮ್ಮೆ ಹೈದರಾಬಾದಿಗೆ ಹೋಗಿದ್ದರು. ಅದು ಈಗ ಆಂಧ್ರಪ್ರದೇಶದ್ಲಿ ಇದ್ದರೂ ಅಲ್ಲಿ ನೂರಾರು ಜನ ಕನ್ನಡಿಗರಿದ್ದಾರೆ. ಒಬ್ಬ ಕನ್ನಡಿಗ ಡಾಕ್ಟರರಲ್ಲಿಗೆ ಗಳಗನಾಥರು ಹೋದರು. ಡಾಕ್ಟರರು ಅವರನ್ನು ಹಚ್ಚಿಕೊಳ್ಳಲಿಲ್ಲ. ತುಂಬಾ ಗಡಿಬಿಡಿಯೋ ಏನೋ ಎಂಬಂತಿದ್ದರು. ಗಳಗನಾಥರು “ನಾನು ಗಳಗನಾಥ” ಎಂದು ಪರಿಚಯ ತಿಳಿಸಿ, ತಮ್ಮ ವಿಷಯವನ್ನು ಸ್ವಲ್ಪದರಲ್ಲಿ ಹೇಳಿ, ಪುಸ್ತಕ ಕೊಳ್ಳಲು ವಿನಂತಿಸಿದರು.

ಡಾಕ್ಟರರು: ಓ.. ನೀವೇ ಗಳಗನಾಥರೇನು? ನಿಮ್ಮ ಹೆಸರು ಕಿವಿಗೆ ಬಿದ್ದಿತ್ತು. ನಮಸ್ಕಾರ, ನಮ್ಮ ಮನೆಯಲ್ಲಿ ಯಾರಿಗೂ ಕನ್ನಡ ಓದಲಿಕ್ಕೆ ಬರುವುದಿಲ್ಲ. ಬೇರೆ ಕನ್ನಡಿಗರ ಕಡೆಗೆ ಹೋಗಿರಿ. ಅಲ್ಪಸ್ವಲ್ಪ ಸಹಾಯ ಸಿಕ್ಕೀತು.

ಗಳಗನಾಥರು: ನೀವೂ ಕನ್ನಡಿಗರೆಂದು ನಿಮ್ಮ ಕಡೆಗೆ ಬಂದಿದ್ದೇನೆ. ಇದು ಸರಸ್ವತಿಯ ಸೇವೆ. ಕೆಲವು ಪುಸ್ತಕಗಳನ್ನಾದರೂ ಕೊಳ್ಳಿರಿ. ನೀವು ಕೊಟ್ಟ ಹಣ ವ್ಯರ್ಥಹೋಗದು.

ಡಾಕ್ಟರರು: ತೆಗೆದುಕೊಳ್ಳಿ, ಇದರ ಬೆಲೆಗೆ ಯಾವ ಪುಸ್ತಕ ಬರುವುದೋ ಅದನ್ನು ಇಟ್ಟು ಹೋಗಿರಿ.

ಡಾಕ್ಟರ್ ಮಹಾಶಯರು ಕೊಟ್ಟಿದ್ದು ಕೇವಲ ಎಂಟಾಣೆ! ಗಳಗನಾಥರು ಅಷ್ಟೇ ಬೆಲೆಯ ಒಂದು ಚಿಕ್ಕ ಪುಸ್ತಕವನ್ನು ಅವರ ಮೇಜಿನ ಮೇಲೆ ಇಟ್ಟು ಹೋದರು.

ಆದರೆ ಅಂದೇ ರಾತ್ರಿ, ಡಾಕ್ಟರರ ಕಾರು ಗಳಗನಾಥರು ಇಳಿದುಕೊಂಡಿದ್ದ ಮನೆಯ ಮುಂದೆ ಬಂದು ನಿಂತಿತು! ಡಾಕ್ಟರರ ಸಂಗಡ ಅವರ ಹೆಂಡತಿ ಇದ್ದಳು. ಆಕೆ ಬಾಲ್ಯದಿಂದಲೂ ಗಳಗನಾಥರ ಕಾದಂಬರಿಗಳನ್ನು ಓದಿದ್ದಳು. ತನ್ನ ಗಂಡ ಆ ದಿನ ಮನೆಗೆ ತಂದಿದ್ದ ಚಿಕ್ಕ ಪುಸ್ತಕವನ್ನು ಕಂಡು, ನಿಜ ಸಂಗತಿಯನ್ನು ಅರಿತುಕೊಂಡಳು. ಗಳಗನಾಥರಿದ್ದಲ್ಲಿಗೆ ಬಂದು, ಪತಿಯ ಪರವಾಗಿ ಕ್ಷಮೆ ಕೇಳಿದಳು.

 

"ದೇವರ ಮುಂದೆಯೂ ಭೇದಭಾವ ಮಾಡಿದಿರಿ"

ಮರುದಿನ ಡಾಕ್ಟರರ ಮನೆಯಲ್ಲಿ ಗಳಗನಾಥರಿಗೆ ಸೊಗಸಾದ ಊಟ! ಆಮೇಲೆ ಅವರಿಬ್ಬರೂ ಗಳಗನಾಥರ ಎಲ್ಲ ಪುಸ್ತಕಗಳನ್ನು ಕೊಂಡು, ಇನ್ನೂರು ರೂಪಾಯಿಗಳಿಗೆ ಮೇಲ್ಪಟ್ಟು ಹಣವನ್ನು ಅವರ ಕೈಯಲ್ಲಿ ಇರಿಸಿದರು.

ಇನ್ನು ಕೆಲವರಿಗೆ, ಗಳಗನಾಥರ ಪುಸ್ತಕ ಕೊಳ್ಳಬೇಕೆಂದು ಮನಸ್ಸು ಇದ್ದರೂ ಬಳಿಯಲ್ಲಿ ಹಣ ಇರುತ್ತಿರಲಿಲ್ಲ. ಗಳಗನಾಥರು ಹಾಗೆ ಅಪೇಕ್ಷೆ ಪಟ್ಟವರಿಗೆ ಪುಸ್ತಕ ಕೊಟ್ಟು ಬಿಟ್ಟು, “ಸಾಧ್ಯವಾದರೆ ಹಣ ಕೊಡಬಹುದು” ಎಂದು ಹೇಳುತ್ತಿದ್ದರು.

ಸತ್ಯ ನಿಷ್ಠರು

ಗಳಗನಾಥರದು ಸರಳ ಮನಸ್ಸು: ಆದರೆ ತುಂಬಾ ಸ್ವಾಭಿಮಾನಿ. ಒಮ್ಮೆ ಅವರು ಓರ್ವ ಸ್ವಾಮಿಗಳ ಪಾದಪೂಜೆ ಮಾಡಿಸಿದ್ದರು. ಆ ದಿನ ಸಂಜೆ ತಮ್ಮ ವಿದ್ಯಾರ್ಥಿಗಳನ್ನು ಕರೆದುಕೊಂಡು ಸ್ವಾಮಿಗಳಿದ್ದಲ್ಲಿ ಹೋಗುವಾಗ, ತಡವಾಯಿತು. ಅಷ್ಟರಲ್ಲಿ ಸ್ವಾಮಿಗಳು ಸಂಜೆಯ ಪೂಜೆ, ಆರತಿ ಮುಗಿಸಿದ್ದರು. “ದೇವರ ಪೂಜೆ ತಪ್ಪಿತಲ್ಲಾ” ಗಳಗನಾಥರು ತಮ್ಮ ತಪ್ಪಿಗಾಗಿ ಹಳಹಳಿಸಿದರು.

ಮರುದಿನ ಸಂಜೆ ಪೂಜೆಯ ಸಮಯಕ್ಕೆ ಸರಿಯಾಗಿ ಹೋದರು. ಆದರೆ ಸ್ವಾಮಿಗಳೇ ಆಗ ತಡಮಾಡಿದರು! ಏಕೆ ಗೊತ್ತೇ? ಆ ದಿನ ಒಬ್ಬ ದೊಡ್ಡ ಅಧಿಕಾರಿಯು ಪಾದ ಪೂಜೆ ಮಾಡಿಸಿದ್ದನು. ಅವನು ಬಂದಿರಲಿಲ್ಲವೆಂದು ಸ್ವಾಮಿಗಳು ಕಾಯ್ದು ನಿಂತಿದ್ದರು. ಗಳಗನಾಥರಿಗೆ ಅವಮಾನವೆನಿಸಿತು. “ಅವರಿಗಾಗಿ ದೇವರನ್ನು ಕಾಯಿಸಿದಿರಲ್ಲ? ದೇವರ ಮುಂದೆಯೂ  ಭೇದ-ಭಾವ ಮಾಡಿದಿರಿ!” ಎಂದು ಸ್ವಾಮಿಗಳನ್ನು ಕೇಳಿಬಿಟ್ಟರು.

ಸ್ವಾಮಿಗಳಿಗೂ ಸಿಟ್ಟು ಬಂತು. “ನೀವು ಪೀಠಕ್ಕೆ ಅವಮಾನ ಮಾಡುತ್ತಿದ್ದೀರಲ್ಲ? ನಿಮಗೆ ಶಾಪ ತಟ್ಟುವುದು” ಎಂದು ಒದರಾಡಿದರು.

ಆಗ ಗಳಗನಾಥರು, “ನನ್ನದು ತಪ್ಪಿದ್ದರಲ್ಲವೆ, ಶಾಪದ ಬಾಧೆ? ಅದನ್ನು ನಿವಾರಿಸಲು ನನ್ನ ಸದ್ಗುರು (ಶೇಷಾಚಲರು) ಸಮರ್ಥರಿರುವರು” ಎಂದು ಧೈರ್ಯವಾಯಿ ನುಡಿದರು.

ತಮ್ಮ ತಪ್ಪು ಇದ್ದುದಾದರೆ ಗಳಗನಾಥರು ಅದನ್ನು ಒಪ್ಪಿಕೊಳ್ಳಲು ಎಂದೂ ಹಿಂದೆ-ಮುಂದೆ ನೋಡುತ್ತಿರಲಿಲ್ಲ. ಒಂದು ಬಾರಿ, ಅವರು ಓರ್ವ ಕೀರ್ತನಕಾರರ ಕಾರ್ಯಕ್ರಮವನ್ನು ಏರ್ಪಡಿಸಿದ್ದರು. ಕೀರ್ತನಕಾರರು ಹೇಳುತ್ತಿದ್ದ ಒಂದು ಘಟನೆ ಸರಿಯಲ್ಲ ಎಂದು ಗಳಗನಾಥರಿಗೆ ಅನಿಸಿತು. ಹಾಗೆಂದು ಎದ್ದು ನಿಂತು ಅವರಿಗೆ ಹೇಳಿದರು. ಆಗ ಕೀರ್ತನಕಾರರು ಗಳಗನಾಥರಿಗೆ ಸೂಕ್ತವಾದ ಉತ್ತರ ಕೊಟ್ಟರು; ತಾವು ಹೇಳಿದ್ದು ಸರಿ ಎಂದು ಸಿದ್ಧಪಡಿಸಿದರು. ಆಗ ಗಳಗನಾಥರು ತಮ್ಮ ತಪ್ಪನ್ನು ಒಪ್ಪಿಕೊಂಡರು. ನೆರದಿದ್ದವರ ಸಮಕ್ಷಮವೇ ಕೀರ್ತನಕಾರರಿಗೆ ಸಾಷ್ಟಾಂಗ ನಮಸ್ಕಾರ ಹಾಕಿ ಕ್ಷಮೆಯನ್ನು ಕೇಳಿ ಬಿಟ್ಟರು!

ಅಷ್ಟೇಕೆ, ಗಳಗನಾಥರು ತಮ್ಮ ಮನೆಯಲ್ಲಿ ಪ್ರತಿದಿನ ಸಂಜೆ ಒಂದು ವಿಶಿಷ್ಟ ಕಾರ್ಯಕ್ರಮ ಇಟ್ಟುಕೊಂಡಿರುತ್ತಿದ್ದರು. ಅದೆಂದರೆ ಪ್ರತಿಯೊಬ್ಬರೂ ಆ ದಿನ ತಾವು ಮಾಡಿದ ತಪ್ಪುಗಳನ್ನು ದೇವರೆದುರಿಗೆ ನಿಂತು ಒಪ್ಪಿಸಬೇಕು. ಈ ತಪ್ಪೊಪ್ಪಿಗೆಯಿಂದ ನಾವು ಪುನಃ ಅಂಥ ತಪ್ಪನ್ನು ಮಾಡಲಾರೆವಲ್ಲವೇ?

ಅನುಕಂಪ

ಗಳಗನಾಥರು ಅತ್ಯಂತ ಉದಾರಿಗಳು. ಅಲ್ಲದೆ ಇನ್ನೊಬ್ಬರ ವಿಷಯದಲ್ಲಿ ಅವರಿಗೆ ಸಹಾನುಭೂತಿ ಬಹಳ. ಬೇರೆಯವರ ಕಷ್ಟ ಸುಖಗಳ ವಿಚಾರದಲ್ಲಿ ಅವರ ಮನಸ್ಸು ಬಲು ಬೇಗ ಕರಗುತ್ತಿತ್ತು. ಒಂದು ದಿನ ಬೆಳಗಿನಲ್ಲಿ ಅವರ ಮನೆಯ ಆಳು ದುಗಪ್ಪ ಹಿತ್ತಲಲ್ಲಿ ಕೆಲಸ ಮಾಡುತ್ತಿದ್ದ. ಹರಕು ಅಂಗಿ ಹಾಕಿಕೊಂಡಿದ್ದರಿಂದ ಚಳಿಯಲ್ಲಿ ತುಸು ನಡುಗುತ್ತಿರುವಂತೆ ಗಳಗನಾಥರಿಗೆ ಕಂಡಿತು. ಕೂಡಲೇ ಅವರು ತಮ್ಮ ಮೈಮೇಲಿನ ಬಗಲಗಸಿಯ ಅಂಗಿಯನ್ನು ತೆಗೆದು ಕೊಟ್ಟು ಬಿಟ್ಟರು.

ಓರ್ವ ಬಡ ಬ್ರಾಹ್ಮಣನು ಮಗಳ ಮದುವೆಯನ್ನು ಗೊತ್ತು ಮಾಡಿದ್ದ. ಒಂದು ಉತ್ತಮ ಸೀರೆಯನ್ನು ಅಂಗಡಿಯಲ್ಲಿ ನೋಡಿ ಇಟ್ಟಿದ್ದ. ಆದರೇನು? ಹಣ ಇರಲಿಲ್ಲ. ಗಳಗನಾಥರ ಮನೆಗೆ ಬಂದಾಗ ಅದನ್ನು ಸಹಜವಾಗಿ ಹೇಳಿದ. ಗಳಗನಾಥರು ಆಗಲೇ ತಮ್ಮ ಸಂದೂಕದಿಂದ ೮೦ ರೂಪಾಯಿ ತೆಗೆದುಕೊಟ್ಟರು. ಇಂತಹ ಅನೇಕ ಘಟನೆಗಳನ್ನು ಜನ ಇಂದಿಗೂ ನೆನಪುಮಾಡಿಕೊಂಡು ಹೇಳುವವರಿದ್ದಾರೆ.

ಪ್ರಾಣಿಗಳ ವಿಚಾರದಲ್ಲಿಯೂ ಅದೇ ಅನುಕಂಪ. ಗಳಗನಾಥರು ಮನೆಯಲ್ಲಿ ಹತ್ತಾರು ಆಕಳುಗಳನ್ನು ಸಾಕಿದ್ದರು. ಅದೊಂದು ಗೋಶಾಲೆಯೇ ಆಗಿದ್ದಿತು. ತಾವೇ ಪ್ರತಿನಿತ್ಯ ಅವುಗಳ ಯೋಗಕ್ಷೇಮ ನೋಡಿಕೊಳ್ಳುತಿದ್ದರು. ಒಂದು ಸಲ ಅವರು ಬೇರೊಂದು ಊರಿಗೆ ಹೋಗಿದ್ದರು. ಅಲ್ಲಿ ಮಲಗಿದ್ದಾಗ, ತಮ್ಮ ಮನೆಯಲ್ಲಿ ಗೋವುಗಳು ಉಪವಾಸದಿಂದ ನರಳುತ್ತಿರುವಂತೆ ಕನಸು ಕಂಡರು. ಆ ಊರಲ್ಲಿಯ ಕೆಲಸವನ್ನು ಬೇಗ ಮುಗಿಸಿ, ಮರಳಿ ಮನೆಗೆ ಬಂದಾಗ ಪರಿಸ್ಥಿತಿ ತುಸು ಹಾಗೆಯೇ ಕಂಡಿತು!

“ನಾನು ಊರಲಿಲ್ಲದಾಗ ನೀವು ಉಪವಾಸ ಬಿದ್ದಿದ್ದೀರಾ? ಅವಕ್ಕೆ ಸೊಪ್ಪು ಸೊದೆ ಸಹಿತ ಸರಿಯಾಗಿ ಹಾಕಲಿಲ್ಲ” ಎಂದು ಮನೆ ಜನರನ್ನು ತರಾಟೆಗೆ ತೆಗೆದುಕೊಂಡರು. “ಮೂಕ ಪ್ರಾಣಿಗಳವು, ಬಾಯಿಬಿಟ್ಟು ಹೇಳಲು ಸಾಧ್ಯವೇ?” ಎಂದು ಮಿಡುಕಿದರು. ತಮ್ಮ ಮನೆಯ ಸಮೀಪದಲ್ಲಿ ಯಾರೋ ತುಸು ಕಬ್ಬು ಬೆಳೆದಿದ್ದರು. ಅದನ್ನೇ ಖರೀದಿಗೆ ಹಿಡಿದರು. ಆ ಬೆಳೆಯನ್ನು ಕೊಯ್ಯಿಸಿ, ಮನೆಯಲ್ಲಿಯ ಎಲ್ಲ ದನಕರುಗಳಿಗೆ ಹೊಟ್ಟೆ ತುಂಬ ತಿನ್ನಿಸಿ ತೃಪ್ತರಾದರು.

ಅವರ ಮನೆಯು ಅತಿಥಿಗಳಿಂದ ಸದಾ ತುಂಬಿರುತ್ತಿತ್ತು. ಯಾರಾದರೂ ದಾರಿಯಲ್ಲಿ ಸಿಕ್ಕಿದರೆ, “ಏಕೆ, ಹಾಗೆ ಹೊರಟಿರಿ?” ಎಂದು ಅವರನ್ನು ಮನೆಗೆ ಕರೆತಂದು ಊಟ ವಿಶ್ರಾಂತಿಗಳನ್ನು ಒದಗಿಸಿದರೇ ಗಳಗನಾಥರಿಗೆ ಸಮಾಧಾನ. “ಅತಿಥಿಗಳು ದೇವರ ಸಮಾನ. ಅತಿಥಿಗಳ ರೂಪದಲ್ಲಿ ದೇವರು ಯಾವಾಗ ಮನೆಗೆ ಬರುವನೋ ಹೇಳ ಬರುವಂತಿಲ್ಲ!” ಎಂದು ಅವರು ನಂಬಿದ್ದರು.

ಕನ್ನಡಿಗರಿಗೆ ಪ್ರಶ್ನೆ

ಗಳಗನಾಥರಿಗೆ ೬೦ ವರ್ಷ ತುಂಬಿದ್ದಿತು. ಆಗಿನ ಅವರ ಒಂದು ದೊಡ್ಡ ಹಂಬಲವೆಂದರೆ, ೧೮ ಪರ್ವಗಳ ಸಮಗ್ರ ಮಹಾಭಾರತವನ್ನು ಕನ್ನಡದಲ್ಲಿ ವಿವರಿಸುವುದು. ಸಾವಿರಾರು ಪುಟಗಳ ಬರವಣಿಗೆಯದು! ಆದರೇನು, ಗಳಗನಾಥರು ಏಕನಿಷ್ಠೆಯಿಂದ ಕುಳಿತು, ಹಲವು ವರ್ಷಗಳಲ್ಲಿ ಮುಗಿಸಿಬಿಟ್ಟರು. ಅವರ “ಆದಿಪರ್ವ”ವನ್ನು ಮುದ್ರಿಸಿದರು. ಅದರ ಮಾರಾಟದಿಂದಲೂ, ದಾನಿಗಳ ಸಹಾಯದಿಂದಲೂ ಮುಂದಿನ ಪರ್ವಗಳನ್ನು ಮುದ್ರಿಸಬೇಕೆಂದರೆ, ಹಣದ ಅನುಕೂಲತೆ ಒದಗಲಿಲ್ಲ. ಆಗ ಅವರು ಕನ್ನಡಿಗರೆದುರು ತಮ್ಮ ಅಳಲನ್ನು ತೋಡಿಕೊಂಡರು;

“ಈಗ ಮೂವತ್ತು ವರ್ಷಗಳಿಂದ ಕನ್ನಡಿಗರ ಸೇವೆಗಾಗಿ ಹಾಗೂ ಸಂಸ್ಕೃತ ವಿದ್ಯಾಧಾನಕ್ಕಾಗಿ ೬೦-೭೦ ಸಾವಿರ ರೂ. ಸಾಲ ಮಾಡಿದೆ. ಅದನ್ನು ತೀರಿಸುವಾಗ “ಮೊದಲು ನಾನು ಸಾಲ ಮಾಡಿ ಪುಸ್ತಕ ಛಾಪಿಸಬೇಕು. ಆಮೇಲೆ ನನ್ನ ಪ್ರಿಯ ಕನ್ನಡಿಗರು ನನ್ನ ಪುಸ್ತಕ ಕೊಂಡು ಅದನ್ನು ತೀರಿಸಬೇಕು”- ಹೀಗೆ ಯೋಚಿಸಿದೆ. ಇನ್ನು ಮುಂದೆಯೂ ಕನ್ನಡಿಗರ ಸೇವೆ ಮಾಡುವೆ. ಆದರೆ ದುಡ್ಡಿಗಾಗಿ ಮಂದಿಗೆ ಬಾಯಿ ತೆರೆಯುವುದು ಇಲ್ಲಿಗೆ ಸಾಕು. ನಾನು ಸೇವೆ ಮಾಡುತ್ತ, ಮಾಡುತ್ತಾ ಸಾಲಗಾರನಾಗಿಯೇ ಇರುವುದು ನಾನು ಸೇವಿಸಿದ ಪ್ರಿಯ ಕನ್ನಡಿಗರಿಗೆ ಭೂಷಣವೇ?

ಮಹಾಭಾರತವನ್ನು ಅವರು ಸರಳವಾಗಿ, ಸಾಮಾನ್ಯ ಜನರಿಗೂ ಅದರ ಕಥೆ ರುಚಿಸುವಂತೆ ಬರೆದಿದ್ದರು. ಅದರಲ್ಲಿಯ ಧರ್ಮ ರಹಸ್ಯಗಳನ್ನು ಚೆನ್ನಾಗಿ ವಿವರಿಸಿದ್ದರು. ಅಂತೆಯೇ ಅದನ್ನು “ಮಹಾಭಾರತಾಮೃತ” ಎಂದು ಕರೆದರು. ಮುಂದಿನ “ವನಪರ್ವ”ವನ್ನು ತುಂಬಾ ಒದ್ದಾಡಿ ಮುದ್ರಿಸಿ ಹೊರತಂದರು ಆಮೇಲಿನ ಪರ್ವಗಳನ್ನು ಮುದ್ರಿಸಲಿಕ್ಕೆ ತುಂಬಾ ಹಣ ಬೇಕಾಗಿದ್ದಿತು. ಆದರೆ ಪರಿಸ್ಥಿತಿ ಅನುಕೂಲವಿರಲಿಲ್ಲ.

ನನ್ನ ಪುಸ್ತಕಗಳು ಇರುವವರೆಗೆ“-

ಆಗ ಅವರಿಗೆ ೭೦ ವರ್ಷ. ಅನಂತರ ಅವರು ಬದುಕಿ ಇದ್ದುದು ಕೆಲವೇ ವರ್ಷ ಮಾತ್ರ. ಕ್ಯಾನ್ಸರ್‌ ರೋಗ ಅವರ ದೇಹದಲ್ಲಿ ಹರಡಿಕೊಂಡಿದ್ದಿತು. ಹಾಗಿದ್ದರೂ ಅವರದು ಬಿಡುವಿಲ್ಲದ ದುಡಿಮೆ. ಪುಸ್ತಕ ಬರೆಯುವುದು, ಮುದ್ರಿಸುವುದು, ಮಾರಾಟ ಮಾಡುವುದು – ಈ ಕೆಲಸಗಳಲ್ಲಿ ಅವರು ಒಂದೇ ಸಮನೆ ತೊಡಗಿರುತ್ತಿದ್ದರು. ಮನಸ್ಸಿನಲ್ಲಿ ಇನ್ನೂ ಹೆಚ್ಚೆಚ್ಚು ಕೆಲಸ ಮಾಡುವ ಹುಮ್ಮಸ್ಸು ಅವರದು. ಆದರೆ ಮುಪ್ಪಿನಿಂದ ಸೊಪ್ಪಾಗಿದ್ದ ದೇಹಕ್ಕೆ ಆ ಶಕ್ತಿ ಇರಲಿಲ್ಲ. ಕ್ಯಾನ್ಸರ್ ರೋಗಭಾಧೆಯು ಹೆಚ್ಚಾಯಿತು.

ಮರಣದ ಸಮಯಕ್ಕೆ (೧೯೪೨) ಆಸ್ಪತ್ರೆಯಲ್ಲಿ ನೆರದಿದ್ದವರಿಗೆಲ್ಲ ಅವರು ಕೊಟ್ಟ ಸಂದೇಶ ಹೀಗಿದೆ:

“ನನ್ನ ಮರಣಕ್ಕಾಗಿ ಶೋಕಿಸಬೇಡಿ. ನನ್ನ ಪುಸ್ತಕಗಳು ಇರುವವರೆಗೆ ನಾನು ಬದುಕಿ ಇದ್ದೇನೆಂದು ತಿಳಿಯಿರಿ”.

ಆ ಮಾತು ನಿಜವೇ. ಅವರದು ಉದಾತ್ತ ವಿಚಾರಗಳಿಂದ ಕೂಡಿದ ಬರಹ. ಅದಕ್ಕೆಲ್ಲಿದೆ ಸಾವು? ಗಳಗನಾಥರು ಅಜೀವ ಕನ್ನಡದ ಸೇವೆಗೈದರು. ತಮ್ಮ ಸರಸ ಕಾದಂಬರಿಗಳ ಮೂಲಕ ಅಸಂಖ್ಯ ಓದುಗರನ್ನು ಸೃಷ್ಟಿಸಿದರು. ತಮ್ಮ ಧಾರ್ಮಿಕ ಬರಹ ಹಾಗೂ ಸದಾಚಾರ ವೃತ್ತಿಯಿಂದ ಸಾವಿರಾರು ಜನರಿಗೆ ಮಾರ್ಗದರ್ಶಿಯಾದರು. ಅವರು ಕನ್ನಡದ ಪುಣ್ಯ ಪುರುಷರು!