ಕನ್ನಡ ವಿಶ್ವವಿದ್ಯಾಲಯದ ಬುಡಕಟ್ಟು ಅಧ್ಯಯನ ವಿಭಾಗ ಹಮ್ಮಿಕೊಂಡ ‘ಬುಡಕಟ್ಟು ಕಾವ್ಯ ಮಾಲೆ’ ಯಡಿ ತುಳು ಸಿರಿ ಪಾಡ್ದನ ಕಾವ್ಯ ಪ್ರಕಟವಾಗುತ್ತಿದೆ. ಕನ್ನಡ ವಿಶ್ವವಿದ್ಯಾಲಯ ಕರ್ನಾಟಕ ಸಂಸ್ಕೃತಿ ಶೋಧ-ಅನಾವರಣಕ್ಕೆ ರೂಪುಗೊಂಡಿರುವ ವಿಶ್ವವಿದ್ಯಾಲಯ, ಹೀಗಾಗಿ ಕರಾವಳಿ ಕರ್ನಾಟಕದ ಶ್ರೀಮಂತ ಮೌಖಿಕ ಪರಂಪರೆಯನ್ನು ಹೊಂದಿರುವ ತುಳು ಭಾಷೆಯ ಪಾಡ್ದನ ಕಾವ್ಯವೊಂದನ್ನು ಸಂಗ್ರಹಿಸಿ ಪ್ರಕಟಿಸು ಪ್ರಯತ್ನ ಮಾಡಿದೆ. ಇದನ್ನು ಬುಡಕಟ್ಟು ಕಾವ್ಯ ಎಂದು ಕರೆಯಬೇಕೋ ಬೇಡವೋ ಇದು ಬೇರೆ ಪ್ರಶ್ನೆ. ಆದರೆ ಕರಾವಳಿ ಕರ್ನಾಟಕದ ವಿಶಿಷ್ಟ ಬುಡಕಟ್ಟು ಸಮುದಾಯದ ಮಹಿಳೆಯೊಬ್ಬರು ಕಟ್ಟಿ ಹಾಡಿದ ಕಾವ್ಯ ಇದು. ಕರಾವಳಿ ಬುಡಕಟ್ಟು ಸಮುದಾಯದ ನಡುವೆ ಇನ್ನೂ ಜೀವಂತವಾಗಿರುವ ಮಾತೃರೂಪೀ ಸಂಸ್ಕೃತಿಯನ್ನೇ ಜೀವ ದ್ರವ್ಯವಾಗಿಸಿಕೊಂಡ ಕಾವ್ಯ ಇದು. ಮಾತೃರೂಪೀ ಸಂಸ್ಕೃತಿಯ ಪ್ರಧಾನ ಲಕ್ಷಣವಾಗಿರುವ ಹೆಣ್ಣಿನ ಅನನ್ಯತೆಯ ಹುಡುಕಾಟವನ್ನು ಈ ಕಾವ್ಯದುದ್ದಕ್ಕೂ ಗುರುತಿಸಬಹುದು.

ವಾಸ್ತವಿಕವಾಗಿ ಈ ಕಾವ್ಯದ ದಾಖಲಾತಿ ಮೂರು ವರ್ಷಗಳ ಹಿಂದೆಯೇ ಆಗಿತ್ತು (೧೯೯೬) ಹೀಗಾಗಿ ಎಂದೋ ಪ್ರಕಟವಾಗಬೇಕಾಗಿದ್ದ ಈ ಕಾವ್ಯ ಪ್ರಸಾರಾಂಗದ ನನ್ನ ಕೆಲಸದ ಒತ್ತಡಗಳ ನಡುವೆ ಇಷ್ಟು ತಡವಾಗಿ ಹೊರಬಂದಿತು. ಈ ನಡುವೆ ಫಿನ್ಲೆಂಡಿನ ಖ್ಯಾತ ಜಾನಪದ ತಜ್ಞ ಡಾ. ಲಾರಿ ಹಾಂಕೊ ತಂಡದವರು ಸುಮಾರು ಎಂಟು ವರ್ಷಗಳ ದಾಖಲಾತಿ, ಪಠ್ಯೀಕರಣ ಪ್ರಕ್ರಿಯೆಯ ಬಳಿಕ ಮಾಚಾರ್‌ಗೋಪಾಲ ನಾಯಕ ಅವರು ಹಾಡಿ ಪ್ರದರ್ಶಿಸಿದ ಸಿರಿಕಾವ್ಯವನ್ನು ಇತ್ತೀಚೆಗೆ ಪ್ರಕಟಿಸಿದರು (ಮಾರ್ಚ್‌ ೧೯೯೯). ಸುಮಾರು ಹದಿನೈದೂವರೆ ಸಾವಿರ ಸಾಲುಗಳಿಗೆ ವಿಸ್ತರಿಸಿದ ಕಾವ್ಯದ ಸಂಪಾದನೆ ಅದರ ಹಿಂದಿದ್ದ ಬೌದ್ಧಿಕ ಹಾಗೂ ತಾಂತ್ರಿಕ ಶ್ರಮ, ಪರಿಣತಿ ಮುಂದಿನ ಜನಪದ ಸಂಪಾದಕರಿಗೆ ಒಂದು ಸವಾಲೂ ಹೌದು. ಇಲ್ಲಿನ ಸಂಪಾದಕ ಬಳಗ ಜನಪದ ಕಾವ್ಯವೊಂದರ ಸಂಪಾದನೆಗೆ ಒಂದು ವಿಧಾನಶಾಸ್ತ್ರವನ್ನೇ ರೂಪಿಸಿದಂತೆ ಕಾಣುತ್ತದೆ. ಪಶ್ಚಿಮದ ವಿದ್ವಾಂಸರು ದಾಖಲಾತಿ ಕೇಂದ್ರಗಳಲ್ಲಿ ದೊರೆವ ಪಠ್ಯಗಳನ್ನು ಬಳಸಿ ಕಾವ್ಯಗಳನ್ನು ಸಂಪಾದಿಸುತ್ತಿದ್ದಾರೆ. ಆದರೆ ಮೌಖಿಕ ಪರಂಪರೆ ಇನ್ನೂ ಜೀವಂತವಾಗಿರುವ ಭಾರತೀಯ ಸಂದರ್ಭದಲ್ಲಿ ಬಹುಮುಖೀ ದಾಖಲಾತಿಯ ಮೂಲಕ ಬೃಹತ್‌ ಪಠ್ಯವನ್ನು ದಾಖಲಿಸುವುದು ಸಾಧ್ಯ. ಆ ಹಿನ್ನೆಲೆಯಲ್ಲಿ ನಮ್ಮ ಜಾನಪದ ಸಂಗ್ರಹ ಹಾಗೂ ಪಠ್ಯೀಕರಣ ಪ್ರಕ್ರಿಯೆಗೆ ಹೊಸ ಆಯಾಮ ನೀಡಬೇಕಾಗಿದೆ. ಅಂತಹ ಕೆಲಸ ಲಾರಿ ಹಾಂಕೊ ಹಾಗೂ ಅವರ ಸಂಗಡಿಗರಿಂದ ನಡೆದಿದೆ. ಹೊಡೆಬಡಿಯ ಸಂಗ್ರಹ, ಲಿಪೀಕರಣ-ಆ ಮೂಲಕ ಮೌಖಿಕ ಪರಂಪರೆಗೆ ಅಕ್ಷರ ರೂಪ ನೀಡಿದೊಡನೆ ಸಂಪಾದನ ಕೆಲಸ ಮುಗಿಯುವುದಿಲ್ಲ. ಪ್ರದರ್ಶನದ ಸಂದರ್ಭದಲ್ಲಿ ಕಾವ್ಯವನ್ನು ಕಟ್ಟಿ ಹಾಡುವ ಗಾಯಕ/ಕಿಯ ಜತೆಗೆ ದಾಖಲುಗಾರ ಹಲವಾರು ಕೂರುಗಳಲ್ಲಿ, ನಡೆಗಳಲ್ಲಿ ಸಂವಹನಿಸಬೇಕು. ಆಗಲೇ ಕಾವ್ಯದ ಅರ್ಥಪ್ರಕಟಣ ಸಾಧ್ಯ. ನಮಗಿಂದು ಶಾಬ್ದಿಕರೂಪದ ಪಠ್ಯಕ್ಕಿಂತ ಪಠ್ಯದ ಎಲ್ಲ ಸಾಮಾಜಿಕ-ಸಾಂಸ್ಕೃತಿಕ ಸನ್ನಿವೇಶಗಳ ಸಮಗ್ರ ದಾಖಲಾತಿ ಆ ಮೂಲಕ ಬೃಹತ್‌ ಪಠ್ಯದ ರೂಪಣೆ ಬೇಕಾಗಿದೆ. ಆದರೆ ಈ ನಿಟ್ಟಿನಲ್ಲಿ ನಾನಿಲ್ಲಿ ಸಂಪಾದಿಸಿದ ಸಿರಿಕಾವ್ಯ ಬಹುಮುಖೀ ದಾಖಲಾತಿ ಪ್ರಕ್ರಿಯೆಗೆ ಒಳಗಾಗಿ ರಚಿತವಾಗಿಲ್ಲ. ಹೀಗಾಗಿ ಕೆಲಸದ ಪರಿಮಿತಿ ನನಗೆ ತಿಳಿದಿದೆ. ಶ್ರವ್ಯಮಾಧ್ಯಮದಲ್ಲಿ ಮೂರು ಕೂರುಗಳಲ್ಲಿ ಈ ಸುದೀರ್ಘ ಕಾವ್ಯವನ್ನು ದಾಖಲಿಸಿಕೊಳ್ಳಲಾಗಿದೆ. ಆದರೆ ಪಾಡ್ದನ ಸಂಯೋಜನ ಪ್ರಕ್ರಿಯೆಯನ್ನು ಕುರಿತಂತೆ ವಿವರವಾಗಿ ಚರ್ಚಿಸಿ ದಾಖಲಿಸಿಕೊಂಡಿದ್ದೇನೆ. ಪಾಡ್ದನದ ಕಥನಕ್ರಿಯೆಯ ಬಗೆಗೆ ರಾಮಕ್ಕ ತುಂಬ ಸೂಕ್ಷ್ಮವಾಗಿ ಪ್ರತಿಕ್ರಿಯಿಸಬಲ್ಲರು. ಅದನ್ನು ದಾಖಲಿಸಿಕೊಂಡಿದ್ದೇನೆ. ಆ ಮೂಲಕ ಒಂದು ಮೌಖಿಕ ಸಾಹಿತ್ಯ ವಿಮರ್ಶೆಯನ್ನು ಕಟ್ಟಲು ಸೂಕ್ಷ್ಮ ನೆಲೆಯನ್ನು ಕಂಡುಕೊಂಡಿದ್ದೇನೆ. ಪ್ರೊ. ಲಾರಿಹಾಂಕೊ ಬಳಗದವರು ಸಿರಿಯ ಆಚರಣೆಯಲ್ಲಿ ಪಾಲುದಾರ ‘ಕುಮಾರ’ ನ ಪುರುಷ ಪಠ್ಯವನ್ನು ಒದಗಿಸಿದರೆ, ನನ್ನದು ನಾಟಿಗದ್ದೆಯಲ್ಲಿ ಉತ್ಪನ್ನಗೊಂಡು ಪರಿಚಲನವಾಗುವ ಮಹಿಳಾಪಠ್ಯ. ಹೀಗೆ ಈ ಎರಡು ಪಠ್ಯಗಳ ತೌಲನಿಕ ಅಧ್ಯಯನ ಅನೇಕ ಕುತೂಹಲಕರ ಅಂಶಗಳನ್ನು ಬೆಳಕಿಗೆ ತರಬಹುದು.

ನಾನು ಸಿರಿ ಪಾಡ್ದನ ಸಂಪಾದನೆ ಮಾಡುತ್ತಿರುವ ಬಗ್ಗೆ ಮಾತನಾಡಿದಾಗಲೆಲ್ಲ ಅನೇಕರು “ಪ್ರೊ. ಅಮೃತ ಸೋಮೇಶ್ವರ, ಪ್ರೊ| ಲಾರಿ ಹಾಂಕೊ ಬಳಗದವರು ಈಗಾಗಲೇ ಸಿರಿ ಪಾಡ್ದನವನ್ನು ಪ್ರಕಟಿಸಿದ್ದಾರಲ್ಲ, ನಿಮ್ಮ ಕೆಲಸ ಮತ್ತೆ ಪುನರಾವೃತ್ತಿ ಆಗುವುದಿಲ್ಲವೇ?” ಎಂದು ಪ್ರಶ್ನಿಸಿದ್ದುಂಟು. ಅಕ್ಷರಕಾವ್ಯನಿಬದ್ಧವಾದ ಮನಸ್ಸು ಹೀಗೆ ಆಲೋಚಿಸುವುದು ಸಹಜ. ಆದರೆ ಭಿನ್ನಪಠ್ಯವೇ ಜಾನಪದದ ಜೀವಾಳ ಹಾಗೂ ಅದರ ಅನನ್ಯತೆ ಎನ್ನುವುದನ್ನು ಒಪ್ಪಿಕೊಂಡಾಗ ಇಂತಹ ಪ್ರಶ್ನೆಗಳಿಗೆ ಉತ್ತರಿಸಬೇಕಾದ ಅಗತ್ಯ ಬರುವುದಿಲ್ಲ. ಒಂದೊಂದು ಪಠ್ಯದ ನಿರ್ವಹಣೆಯಲ್ಲಿ ಗಾಯಕರು ಹೆಣೆಯುವ ಹೊಸ ಹೊಸ ಪ್ರಕರಣಗಳು, ಆಶಯಗಳು ಅವರು ಕಾವ್ಯದೊಳಗೇ ಪ್ರತಿಕ್ರಿಯಿಸುವ ಬಗೆ ಕಂಡಾಗ ದಂಗಾಗುತ್ತೇವೆ. ಪ್ರತಿಭೆ ಎನ್ನುವುದು ಅಕ್ಷರಿಗಳಿಗೆ ಮಾತ್ರ ಕಟ್ಟಿಟ್ಟುದಲ್ಲ. ನಮ್ಮ ಜನಪದ ಕವಿಗಳ ಮಹಾಕವಿ ಸದೃಶ ಪ್ರತಿಭೆ, ಹಾಗೂ ಅವರ ಕಾವ್ಯಪ್ರಯೋಗ ಪರಿಣತಿಯನ್ನು ತೀರಾ ಗಂಭೀರವಾಗಿ ಗಮನಿಸಬೇಕು. ಆ ಮೂಲಕ ಒಂದು ಜನಪದ ಕಾವ್ಯಮೀಮಾಂಸೆಯನ್ನು ಕಟ್ಟಬೇಕು.

ಈ ಕಾವ್ಯಕ್ಕೆ ನಾನಿಟ್ಟ ಹೆಸರಿನ ಬಗ್ಗೆ ಎರಡು ಮಾತು. ‘ರಾಮಕ್ಕ ಮುಗ್ಗೇರ್ತಿ ಕಟ್ಟಿನ ಸಿರಿ ಪಾಡ್ದನ’-ಅಂದರೆ ರಾಮಕ್ಕ ಮುಗ್ಗೇರ್ತಿ ಕಟ್ಟಿದ ಸಿರಿ ಪಾಡ್ದನ. ಇಲ್ಲಿ ನಾನು ಕಾವ್ಯದ ಕರ್ತೃತ್ವವನ್ನು ರಾಮಕ್ಕ ಮುಗ್ಗೇರ್ತಿಯವರಿಗೆ ಕಟ್ಟಿದ್ದೇನೆ. ಜನಪದ ಕಾವ್ಯ ನಿರೂಪಕರನ್ನು ಇತ್ತೀಚಿನವರೆಗೂ ಜನಪದ ಗಾಯಕರೆಂದೂ ಅವರು ಹಿರಿಯರ ಪರಂಪರೆಯಿಂದ ದತ್ತವಾದ ಕಾವ್ಯವನ್ನು ತಮ್ಮ ಸ್ಮರಣಶಕ್ತಿಯಿಂದ ಆಯಾ ಸಂದರ್ಭದಲ್ಲಿ ಹಾಡುವುದಾಗಿ ಹೇಳಿಕೊಂಡು ಬರಲಾಗುತ್ತಿತ್ತು. ಆದರೆ ವಾಸ್ತವವಾಗಿ ಮೌಖಿಕಕಾವ್ಯ ಜನಪದ ಕಲಾವಿದರ ಸ್ಮೃತಿಕೋಶದಲ್ಲಿ ಘನೀಭೂತ ರೂಪದಲ್ಲಿರುವುದಿಲ್ಲ. ಅದು ಅವರಲ್ಲಿ ಮಾನಸಿಕ ಪಠ್ಯದ ರೂಪದಲ್ಲಿ ಸೂತ್ರಾತ್ಮಕ ಅಭಿವ್ಯಕ್ತಿಗಳು, ನುಡಿ ಗಟ್ಟುಗಳನ್ನು ಒಳಗೊಂಡಂತೆ ಹರಳುಗಟ್ಟಿರುತ್ತವೆ. ಪ್ರದರ್ಶನದ ಸಂದರ್ಭದಲ್ಲಿ ಇವು ಪರಂಪರೆಯ ಅನುಭವದ ಬೆಳಕಿನಲ್ಲಿ ಮರುಸೃಷ್ಟಿಗೊಂಡು ಕಾವ್ಯಾಭಿವ್ಯಕ್ತಿ ಪಡೆಯುತ್ತವೆ. ಹೀಗಾಗಿ ಜನಪದ ಗಾಯಕರನ್ನು ಬರಿಯ ನಿರೂಪಣಕಾರರೆಂದು ತಿಳಿಯದೆ ಶಿಷ್ಟಕವಿಗಳ ಸೃಜನಶೀಲತೆಗೆ ನಾವು ಏನು ಬೆಲೆಕೊಡುತ್ತೇವೆಯೋ ಅದೇ ಮನ್ನಣೆಯನ್ನು ಇವರಿಗೂ ನೀಡಬೇಕಾಗಿದೆ. ಅಕ್ಷರಕಾವ್ಯ ರಚನೆಯ ಸೂತ್ರಕ್ಕೆ ಒಗ್ಗಿದ ಮನಸ್ಸು ಜನಪದ ಗಾಯಕರಿಗೆ, ಕವಿಗಳಿಗೆ ಈ ಗೌರವದ ಪಟ್ಟಿ ನೀಡುವುದಕ್ಕೆ ಒಪ್ಪುತ್ತಿಲ್ಲ. ಆದರೆ ನಾನು ರಾಮಕ್ಕ ಮುಗ್ಗೇರ್ತಿಯನ್ನು ಸಿರಿ ಪಾಡ್ದನದ ರಚಕಿ ಅಥವಾ ಕವಿಯೆಂದೇ ಗುರುತಿಸಿ ಈ ಪಠ್ಯದ ಕರ್ತೃತ್ವವನ್ನು ಅವರ ಹೆಸರಲ್ಲೇ ದಾಖಲಿಸಿದ್ದೇನೆ. ಈ ಪಾಡ್ದನ ಕಾವ್ಯದ ದಾಖಲಾತಿ, ಪಠ್ಯೀಕರಣದ ಹಿನ್ನೆಲೆಯಲ್ಲಿ ನನಗೆ ಹಲವು ಕೈಗಳ ನೆರವು ದೊರೆತಿದೆ. ದಾಖಲಾತಿಗಾಗಿ ನಾನು ಕಟೀಲಿಗೆ ಹೋದಾಗಲೆಲ್ಲ ಕಟೀಲು ದುರ್ಗಾಪರಮೇಶ್ವರಿ ದೇಗುಲದ ಅತಿಥಿಗೃಹದಲ್ಲಿ ತಂಗಲು ಏರ್ಪಾಟು ಮಾಡಿಕೊಟ್ಟು ‘ಸಿರಿಪ್ರಪಂಚ’ದ ಬಗ್ಗೆ ಸವಿಸ್ತಾರವಾದ ಚರ್ಚೆಯಲ್ಲಿ ನನ್ನೊಂದಿಗೆ ಭಾಗಿಯಾದ ತುಳುವ ಸಾಂಸ್ಕೃತಿಕ ಲೋಕದ ‘ಇರೆ ಮದೆತ ಕಾಯಿ’ ಯಂತಿರುವ ಪು. ಶ್ರೀನಿವಾಸ ಭಟ್ಟರಿಗೆ ನನ್ನ ಕೃತಜ್ಞತೆಗಳು. ಶ್ರೀಮತಿ ರಾಮಕ್ಕ ಮುಗ್ಗೇರ್ತಿಯವರ ಮನೆಯಂಗಳದಲ್ಲಿ ಬೆಳಗ್ಗಿಂದ ಸಂಜೆಯತನಕ ಪಾಡ್ದನ ದಾಖಲು ಮಾಡಿಕೊಳ್ಳುತ್ತಿದ್ದ ಸಂದರ್ಭದಲ್ಲಿ ತನ್ನ ಹುಟ್ಟಿನ ಜಾತಿಯಿಂದಾಗಿ ನನ್ನನ್ನು ಹೇಗೆ ಉಪಚರಿಸಲಿ ಎಂದು ಸಂಕೋಚ ಪಡುತ್ತಾ ತನ್ನೆಲ್ಲ ‘ಶಬರಿಭಕ್ತಿ’ಯನ್ನು ನನ್ನಲ್ಲಿ ತೋರಿ ಉಪಚರಿಸಿದ ಶ್ರೀಮತಿ ರಾಮಕ್ಕ ಹಾಗೂ ಅವರ ಕುಟುಂಬದ ಸದಸ್ಯರಿಗೆ ಅದರಲ್ಲೂ ವಿಶೇಷವಾಗಿ ಅವರ ಬಂಧು ಕೃಷ್ಣ ಮುಗ್ಗೇರರಿಗೆ ನನ್ನ ಹೃದಯಪೂರ್ವಕ ವಂದನೆಗಳನ್ನು ಹೇಳಲೇಬೇಕು. ದಾಖಲಾತಿ ಸಂದರ್ಭದಲ್ಲಿ ನೆರೆಯ ಗ್ರಾಮದ ಎಕ್ಕಾರಿನ ಉತ್ಸಾಹಿ ಜಾನಪದಾಸಕ್ತ ಶ್ರೀನಿವಾಸ ಕಾಮತ್‌, ಕಿನ್ನಿಗೋಳಿಯ ‘ಯುಗಪುರುಷ’ ಪತ್ರಿಕೆಯ ಸಂಪಾದಕ ಶ್ರೀಭುವನಾಭಿರಾಮ ಉಡುಪ, ಯಕ್ಷಗಾನ ಛಾಂದಸಿಂಗ, ಅಧ್ಯಾಪಕ ಶ್ರೀ ನಾರಾಯಣ ಶೆಟ್ಟಿ ಇವರೆಲ್ಲ ನನ್ನ ನೆರವಿಗೆ ಬಂದಿದ್ದಾರೆ. ಅವರಿಗೆ ವಂದನೆಗಳು. ಈ ಕಾವ್ಯವನ್ನು ಕ್ಯಾಸೆಟ್‌ಗಳಿಂದ ಲಿಪೀಕರಣಗೊಳಿಸುವ ಶ್ರಮಪೂರ್ವಕವಾದ ಕೆಲಸವನ್ನು ನಿರ್ವಹಿಸಿಕೊಟ್ಟವರು ಉಡುಪಿಯ ಶ್ರೀ ತೋನ್ಸೆ ಕೃಷ್ಣಭಟ್ಟರು. ಜಾನಪದ ಕ್ಷೇಮಮಾಹಿತಿ ಸಂಪನ್ನರಾದ ಅವರು ನನ್ನ ಕೆಲಸವನ್ನು ಹಗುರಗೊಳಿಸಿದರು. ಕ್ಯಾಸೆಟ್‌ಗಳಿಂದ ಹಾಡನ್ನು ಮತ್ತೆ ಮತ್ತೆ ಕೇಳುತ್ತಾ ರಾಮಕ್ಕ ಉಸಿರ್ದಾಣಗಳನ್ನು ಗುರುತಿಸಿಕೊಳ್ಳುತ್ತಾ ಹಾಡಿನ ಹರಿವನ್ನು ಸಾಲುಗಳಾಗಿ ವಿಭಾಗಿಸುವುದು ನನಗೆ ಸಾಧ್ಯವಾಯಿತು.

ಈ ಕಾವ್ಯಕ್ಕಾಗಿ ಖ್ಯಾತ ಗಂಜೀಫಾ ಕಲಾವಿದ ರಘಪತಿ ಭಟ್ಟರು ಆಕರ್ಷಕವಾದ ರೇಖಾಚಿತ್ರಗಳನ್ನು ಬಿಡಿಸಿಕೊಟ್ಟು ಪುಸ್ತಕದ ಅಂದವೇರಿಸಿಕೊಟ್ಟಿದ್ದಾರೆ. ಅವರಿಗೆ ನನ್ನ ನೆನಪುಗಳು.

ಕನ್ನಡ ವಿಶ್ವವಿದ್ಯಾಲಯದ ‘ಬುಡಕಟ್ಟು ಕಾವ್ಯಮಾಲೆ’ ಹೊರತರುತ್ತಿರುವ ಐದನೆಯ ಕಾವ್ಯ ಸಿರಿ ಪಾಡ್ದನ ಈ ಮಾಲೆ ವಿಶ್ವವಿದ್ಯಾಲಯದ ಬುಡಕಟ್ಟು ವಿಭಾಗದ ಉತ್ಪನ್ನ. ಈ ಯೋಜನೆಯ ರೂಪಕರು ವಿಭಾಗದ ಮುಖ್ಯಸ್ಥರಾದ ಪ್ರೊ. ಹಿ.ಚಿ. ಬೋರಲಿಂಗಯ್ಯನವರು. ಅವರ ನಿರಂತರ ಪ್ರೋತ್ಸಾಹದಿಂದ ಇದು ಸಾಕಾರಗೊಳ್ಳುವುದಕ್ಕೆ ಸಾಧ್ಯವಾಯಿತು. ವಿಶ್ವವಿದ್ಯಾಲಯದ ಪ್ರಸಾರಾಂಗದ ಕೆಲಸ ಕಾರ್ಯಗಳ ನಡುವೆ ಈ ಕಾವ್ಯ ಸಂಪಾದನ-ಪ್ರಕಟಣ ಕಾರ್ಯ ನಿಧಾನವಾಗುತ್ತಿರುವುದನ್ನು ಗಮನಿಸಿ ಆಗಿಂದಾಗ್ಗೆ ನನ್ನನ್ನು ಕರೆದು ಪ್ರೇರೇಪಿಸಿ ಕೆಲಸದ ಪ್ರಗತಿಯ ಬಗೆಗೆ ಆಸಕ್ತಿ ತೋರಿದವರು ಕುಲಪತಿ ಡಾ.ಎಂ.ಎಂ.ಕಲಬುರ್ಗಿಯವರು. ಅವರಿಗೆ ನನ್ನ ಕೃತಜ್ಞತೆಗಳು. ಈ ಬುಡಕಟ್ಟು ಕಾವ್ಯಮಾಲೆಯ ಯೋಜನೆಗೆ ಪ್ರೇರಕರಾದವರು ನಮ್ಮ ವಿಶ್ವವಿದ್ಯಾಲಯದ ಮಾಜಿ ಕುಲಪತಿ ಡಾ.ಚಂದ್ರಶೇಖರ ಕಂಬಾರ ಅವರಿಗೆ ಕೃತಜ್ಞತೆ ಹೇಳಲೇಬೇಕು. ಆಡಳಿತಾತ್ಮಕವಾಗಿ ಈ ಕಾವ್ಯ ಪ್ರಕಟಣೆಯಲ್ಲಿ ಸಹಕರಿಸಿದ ಕುಲಸಚಿವ ಪ್ರೊ. ಮಲ್ಲೇಪುರಂ ಜಿ.ವೆಂಕಟೇಶ ಅವರಿಗೆ ವಂದನೆಗಳು.

ಈ ಕಾವ್ಯ ಕನ್ನಡದ ಅನುವಾದದೊಂದಿಗೆ ಪ್ರಕಟವಾಗಬೇಕಿತ್ತು. ದ್ರಾವಿಡ ಭಾಷೆಗಳ ಜನಪದ ಕಾವ್ಯಗಳ ಅನನ್ಯತೆ, ತಾತ್ವಿಕತೆಯನ್ನು ಅರ್ಥಮಾಡಿಕೊಳ್ಳುವ ದೃಷ್ಟಿಯಿಂದ ಇತರ ಭಾಷೆಗಳ ಜನಪದ ಕಾವ್ಯಗಳು ಕನ್ನಡದಲ್ಲಿ ಬರಬೇಕು. ನಮ್ಮವು ಇತರ ದ್ರಾವಿಡ ಭಾಷೆಗಳಲ್ಲಿ ಮರುರೂಪಧಾರಣೆ ಮಾಡಬೇಕು. ಆ ಬಳಿಕ ಮುಂದಿನ ಹಂತವಾಗಿ ಅವು ಇಂಗ್ಲಿಷ್‌ನಲ್ಲಿ ಬರಬೇಕು. ಈ ನೆಲೆಯಿಂದ ಕಾವ್ಯದ ಕನ್ನಡಾನುವಾದವನ್ನು ನೀಡಲಾಗದ ಬಗೆಗೆ ನನ್ನಲ್ಲಿ ಕೊರಗು ಇದೆ. ಬೇಗನೇ ಈ ಕಾವ್ಯದ ಕನ್ನಡ ಅವತರಣಿಕೆಯನ್ನು ತರುವ ಹಂಬಲವಿದೆ.

ಆಡುಮಾತಿನ ತುಳುಕಾವ್ಯವನ್ನು ಕನ್ನಡ ಲಿಪಿಯ ಚೌಕಟ್ಟಿಗೆ ಕೂರಿಸುವ ಶ್ರಮಪೂರ್ಣ ಕಾರ್ಯವನ್ನು ನಿರ್ವಹಿಸಿ ಸುಂದರವಾಗಿ ಮುದ್ರಿಸಿಕೊಟ್ಟ ಮಣಿಪಾಲ ಪವರ್ ಪ್ರೆಸ್‌ನ ಆಡಳಿತಾಧಿಕಾರಿ ಶ್ರೀ ಬಿ. ನರಹರಿ ಹಾಗೂ ಸಿಬ್ಬಂದಿ ವರ್ಗದವರಿಗೆ ನನ್ನ ನೆನೆಕೆಗಳು ಸಲ್ಲುತ್ತವೆ.

ಪ್ರೊ..ವಿ.ನಾವಡ
ವಿದ್ಯಾರಣ್ಯ
೧-೭-೧೯೯೯