“ಒಳ್ಳೆಯ ಪುಸ್ತಕಗಳ ಸಂಗ್ರಹವೇ ಒಂದು ವಿಶ್ವವಿದ್ಯಾಲಯ ಎಂಬ ಥಾಮಸ್ ಕಾರ್ಲೈಲ್ ಉಕ್ತಿಯನ್ನು ಈ ವಿಶ್ವವಿದ್ಯಾಲಯ ನಂಬಿ ಆಚರಿಸುತ್ತ ಬಂದಿದೆ. ಬೋಧನಾಂಗ, ಸಂಶೋಧನಾಂಗ ಮತ್ತು ಪ್ರಸಾರಾಂಗಗಳು ಯಾವುದೇ ವಿಶ್ವವಿದ್ಯಾಲಯದ ಮೂರು ಅತ್ಯವಶ್ಯಕ ಅಂಗಗಳು. ಪುಸ್ತಕ ಪ್ರಕಟಣೆ ಮತ್ತು ಜ್ಞಾನ ವಿಸ್ತರಣೆ ಪ್ರಸಾರಾಂಗದ ಮುಖ್ಯ ಕಾರ್ಯಗಳು. ಈ ದಿಸೆಯಲ್ಲಿ ಕರ್ನಾಟಕ ವಿಶ್ವವಿದ್ಯಾಲಯ ಹಲವು ವರ್ಷಗಳಿಂದ ಕಾರ್ಯಪ್ರವೃತ್ತವಾಗಿದೆ. ಪ್ರತಿವರ್ಷವೂ ಅನೇಕ ಹೊಸ ಪುಸ್ತಕಗಳನ್ನು ಪ್ರಕಟಿಸುತ್ತ ಬಂದಿದೆ. ಇತ್ತೀಚೆಗೆ ಪ್ರಕಟಣೆಯ ಗತಿ ತ್ವರಿತಗೊಂಡಿರುವುದನ್ನು ನೋಡಿ ನನಗೆ ಅಪಾರ ಸಂತೋಷವುಂಟಾಗಿದೆ. ನಾನಾದರೋ ಪುಸ್ತಕವನ್ನು ಅಂತರಾಳದಿಂದ ಪ್ರೀತಿಸುತ್ತ ಬಂದವನು. ಪುಸ್ತಕಗಳ ಸುಗ್ಗಿಯನ್ನು ಕಂಡು ಹಿಗ್ಗುವವನು.

ವಿಶ್ವವಿದ್ಯಾಲಯವು ಜ್ಞಾನದ ಒಂದು ಹೂದೋಟ. ಈ ಹೂದೋಟದಲ್ಲಿ ಅರಳುವ ಜ್ಞಾನಪುಷ್ಪಗಳ ಪರಿಮಳವನ್ನು ಜನತೆಗೆ ಹರಡುವ ಗುರುತವಾದ ಉದ್ದೇಶ ವಿಶ್ವವಿದ್ಯಾಲಯದ್ದಾಗಿದೆ. ಮಾನವ ಬದುಕನ್ನು ಸರ್ವತೋಮುಖವಾಗಿ ಅಭಿವೃದ್ಧಿ ಪಡಿಸುವಲ್ಲಿ ಪುಸ್ತಕಗಳ ಪಾತ್ರ ಅದ್ವಿತೀಯವಾದದ್ದು. ಸಾಹಿತ್ಯ, ಕಲೆ, ಸಮಾಜ, ಸಂಸ್ಕೃತಿ, ವಿಜ್ಞಾನಗಳ ಸೌರಭ ಹಾಗೂ ವರ್ಣವೈವಿಧ್ಯವನ್ನು ವಿಶ್ವವಿದ್ಯಾಲಯ ಪ್ರಸಾರಾಂಗದ ಪ್ರಕಟಣೆಗಳ ಮೂಲಕ ಜನತೆಗೆ ಮುಟ್ಟಿಸುತ್ತಲಿದೆ. ಈ ಪ್ರಕಟಣೆಗಳು ವಿದ್ವಾಂಸರಿಗಾಗಿ ಮಾತ್ರವಲ್ಲ, ಓದುಬರಹ ಬಲ್ಲ ಸಾಮಾನ್ಯ ಜನರಿಗೂ ಜ್ಞಾನವನ್ನೂ ಹೊಸ ಹೊಸ ಶೋಧಗಳನ್ನೂ ಪರಿಚಯಿಸುವ ಉದ್ದೇಶ ಹೊಂದಿವೆ. ಅವು ಪ್ರಾಚೀನ ವಿವೇಕದ ಜೊತೆಗೆ ಆಧುನಿಕ ವಿಜ್ಞಾನವನ್ನು ಮೇಳೈಸುವುದಕ್ಕೆ, ಮಾನವ ಬದುಕನ್ನು ಸುಂದರವಾಗಿಸುವುದಕ್ಕೆ, ಸಂಸ್ಕೃತಿಯ ಮೌಲ್ಯಗಳನ್ನು ಹರಡಿ ವ್ಯಕ್ತಿ ಬದುಕನ್ನು ಸಂಪನ್ನಗೊಳಿಸುವುದಕ್ಕೆ, ವಿಚಾರಜ್ಯೋತಿಯನ್ನು ಹರಡುವುದಕ್ಕೆ ತುಂಬ ನೆರವು ನೀಡುತ್ತವೆ ಎಂದು ಭಾವಿಸಿದ್ದೇನೆ. ಈ ದೃಷ್ಟಿಯಲ್ಲಿ ಪ್ರಸಾರಾಂಗದ ಪ್ರಕಟಣೆಗಳಿಗೆ ಜ್ಞಾನಪ್ರಪಂಚದಲ್ಲಿ ಅನುಪಮ ಸ್ಥಾನವಿದೆ. ಅವುಗಳಿಂದ ಪುಸ್ತಕ ಪ್ರೇಮಿಗಳು ಸತತ ಸಂತೋಷವನ್ನೂ ವಿಚಾರಪ್ರಭೆಯನ್ನೂ ಪಡೆಯುತ್ತಾರೆ ಎಂದು ತಿಳಿದಿದ್ದೇನೆ.

ಈ ಉದ್ದೇಶವನ್ನು ಸಾರ್ಥಕಗೊಳಿಸುವ ಕೃತಿಗಳಲ್ಲಿ ಕರ್ನಾಟಕದ ಚರಿತ್ರೆ ಮತ್ತು ಸಂಸ್ಕೃತಿಗಳಿಗೆ ಸಂಬಂಧಪಟ್ಟವು ತುಂಬ ಪ್ರಮುಖವೆನಿಸುತ್ತವೆ. ಅಂಥ ಒಂದು ಕೃತಿ ಚಿತ್ರದುರ್ಗ ಜಿಲ್ಲೆಯ ಪಾಳೆಯಗಾರನನ್ನು ಕುರಿತ “ಗೊಲ್ಲ ಸಿರುಮನ ಚರಿತೆ”. ಈ ಪ್ರಾಚೀನ ಕೃತಿಯನ್ನು ಕಷ್ಟಪಟ್ಟು ಶೋಧಿಸಿ, ಸಂಸ್ಕರಿಸಿ, ಪ್ರಕಟಣೆಗೆ ಸಿದ್ಧಗೊಳಿಸಿಕೊಟ್ಟ ಡಾ.ಎಂ.ಎಂ.ಕಲಬುರ್ಗಿಯವರಿಗೆ ವಿಶ್ವವಿದ್ಯಾಲಯ ಋಣಿಯಾಗಿದೆ.

ಎಸ್. ರಾಮೇಗೌಡ
ಕುಲಪತಿಗಳು, ಕರ್ನಾಟಕ ವಿಶ್ವವಿದ್ಯಾಲಯ
ಧಾರವಾಡ, ೨೫ ಜೂನ್ ೧೯೯೪