ಗಾಳಿ, ನೀರು ಆಹಾರ ಮಾನವನ ಮೂಲಭೂತ ಅಗತ್ಯಗಳಾಗಿವೆ. ಈ ತ್ರಿತಯಗಳಿಲ್ಲದ ಮನುಷ್ಯನ ಬದುಕು ಊಹಿಸಲು ಸಾಧ್ಯವಿಲ್ಲ. ಇಂತಹ ಅತ್ಯಮೂಲ್ಯ ಅಗತ್ಯ ವಸ್ತುಗಳನ್ನು ನಿಸರ್ಗದಿಂದ ಉಚಿತವಾಗಿ ಪಡೆಯಲಾಗುತ್ತಿತ್ತು. ಆದರೆ ಶತಮಾನಗಳು ಉರುಳಿದಂತೆ ಜನಸಂಖ್ಯೆ ಹೆಚ್ಚಿದಂತೆಲ್ಲಾ ಆಧುನಿಕರಣ, ಕೈಗಾರಿಕರಣ ಮತ್ತು ಖಾಸಗೀಕರಣಗಳ ಸರಣಿಯಲ್ಲಿ ಸಿಲುಕಿ ಪ್ರಕೃತಿಯಿಂದ ಉಚಿತವಾಗಿ ಪಡೆಯುತ್ತಿದ್ದ ಕೊಡುಗೆಗಳು ಮಾರುಕಟ್ಟೆಯ ಸರಕಾಗಿ ಪರಿವರ್ತನೆಗೊಳ್ಳುತ್ತಿವೆ. ಈಗಾಗಲೇ ಆಹಾರ ಮಾರುಕಟ್ಟೆಯ ವಸ್ತುವಾಗಿ ಜನರು ಹಣ ಕೊಟ್ಟು ಕೊಂಡು ತಿನ್ನುತ್ತಿದ್ದಾರೆ. ಸುರಕ್ಷಿತ ಕುಡಿಯುವ ನೀರು ಸಹ ಆಹಾರದ ಹಾದಿಯಲ್ಲೇ ಹರಿಯುತ್ತದೆ. ಇನ್ನು ಶುದ್ಧ ಗಾಳಿಯನ್ನು ಪಾಲಿಥಿನ್ ಚೀಲಗಳಲ್ಲಿ ಕೊಂಡು ಉಸಿರಾಡುವ ಕಾಲ ದೂರವಿಲ್ಲ.

ಕುಡಿಯುವ ನೀರು, ನೈಮರ್ಲ್ಯ, ವಸತಿ, ವಿದ್ಯುತ್ ಮತ್ತು ಶಿಕ್ಷಣ ಮುಂತಾದ ಮೂಲಭೂತ ಸೌಲಭ್ಯವನ್ನು ಒದಗಿಸುವಲ್ಲಿ ಗ್ರಾಮೀಣ ಮತ್ತು ನಗರಗಳ ಮಧ್ಯೆ ತಾರತಮ್ಯ ತೋರಲಾಗುತ್ತಿದೆ.

ಆಡಳಿತ ಸೂತ್ರ ಹಿಡಿದಿರುವ ಶ್ರೀಮಂತರು, ಮೇಲ್ಮಧ್ಯಮ ಜಾತಿಗಳು, ನಗರವಾಸಿ ಅಧಿಕಾರಿಗಳು ಸದಾ ತಮ್ಮ ಒಳಿತಿಗಾಗಿ ಚಿಂತಿಸುವವರಾಗಿರುತ್ತಾರೆ. ನಗರ ಪ್ರದೇಶಗಳಿಗೆ ಮೂಲಭೂತ ಸೌಲಭ್ಯ ಒದಗಿಸುವಲ್ಲಿ ಕಾಲ ಕಾಲಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಆದರೆ ಗ್ರಾಮೀಣ ಬಡ ಜನತೆಗೆ ಇಂತಹ ಸೌಲಭ್ಯ ಒದಗಿಸುವಲ್ಲಿ ನಿರ್ಲಕ್ಷ ತೋರಲಾಗುತ್ತಿವೆ. ಇತ್ತೀಚಿಗೆ ಗ್ರಾಮೀಣ ಕುಡಿಯುವ ನೀರಿನ ಬಗ್ಗೆ ಒಂದಿಷ್ಟು ಕ್ರಮ ಕೈಗೊಂಡಿದ್ದರೂ, ನೈರ್ಮಲ್ಯದ ಬಗ್ಗೆ ದಿವ್ಯ ನಿರ್ಲಕ್ಷವಿದೆ. ಬಸವನ ಹಿಂದೆ ಬಾಲದಂತೆ ಕುಡಿಯುವ ನೀರು ನೈರ್ಮಲ್ಯ ಸೌಲಭ್ಯಗಳನ್ನು ಒದಗಿಸಿದಾದ್ದರೂ ನೀರು ಕುಡಿಯಲು ಸುರಕ್ಷಿತವಾಗಿಲ್ಲ, ದುರಸ್ಥಿಗೊಂಡ ನೀರಿನ ಮೂಲಗಳ ರಿಪೇರಿ ಕೆಲಸಗಳ ದೀರ್ಘಾವಧಿ ವಿಳಂಬ, ಆಗಾಗ ಕೈಕೋಡುವ ವಿದ್ಯುತ್ ಸರಬರಾಜು, ಶೌಚಾಲಯಗಳ ಬಳಕೆಗೆ ನೀರಿನ ಕೊರತೆ ಒಂದೆಡೆಯಾದರೆ, ಜನತೆಗೆ ಕುಡಿಯುವ ನೀರು+ನೈರ್ಮಲ್ಯ = ಆರೋಗ್ಯದ ಮಹತ್ವ ಮತ್ತು ಒದಗಿಸಲಾಗಿರುವ ಸೌಲಭ್ಯಗಳನ್ನು ಸಂಬಾಳಿಸಿಕೊಂಡು ಹೋಗುವಲ್ಲಿ ಜನರಿಗೆ ತಿಳುವಳಿಕೆ ಇಲ್ಲದಿರುವುದು ಮುಂತಾದ ಹಲಾವರು ಕಾರಣಗಳಿಂದಾಗಿ ಗ್ರಾಮೀಣ ಪ್ರದೇಶದಲ್ಲಿ ಜನತೆ ಕೈ ಪಂಪು, ಕೊಳವೆ ಬಾವಿ, ನಲ್ಲಿ, ಕೆರೆ, ಕಾಲುವೆಗಳಲ್ಲಿನ ಅಸುರಕ್ಷಿತ ನೀರು ಕುಡಿಯುತ್ತಿದ್ದಾರೆ ಮತ್ತು ಹೊಲ, ಗದ್ದೆ, ರಸ್ತೆಗಳ ಬದಿಯಲ್ಲಿ ಮಲಮೂತ್ರ ವಿಸರ್ಜನೆ ಮಾಡುತ್ತಿದ್ದಾರೆ. ಇಂತಹ ಪರಿಸರದಲ್ಲಿ ಬದುಕುತ್ತಿರುವ ಜನತೆ ಅನೇಕ ರೋಗ ರುಜಿನಗಳಿಗೆ ತುತ್ತಾಗುತ್ತಿದ್ದಾರೆ.

ಈ ಕಿರುಹೊತ್ತಿಗೆಯು ಕೃಷ್ಣನಗರ ಗ್ರಾಮ ಪಂಚಾಯ್ತಿಯ ವ್ಯಾಪ್ತಿಯಲ್ಲಿನ ಹಳ್ಳಿಗಳ ಕುಡಿಯುವ ನೀರು ಮತ್ತು ನೈರ್ಮಲ್ಯ ಸ್ಥಿತಿಗತಿಗಳ ಕುರಿತು ನಡೆಸಲಾದ ಅಧ್ಯಯನವಾಗಿದೆ. ಜನರನ್ನು ಕೇಂದ್ರಿಕೃತಗೊಳಿಸುವ ಮತ್ತು ಸ್ವಾಲಂಬನೆ ಹೊಂದಿರುವ ಗ್ರಾಮ ಪಂಚಾಯ್ತಿಗಳು ಗ್ರಾಮೀಣ ಅಭಿವೃದ್ಧಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವಲ್ಲಿ ಕುಡಿಯುವ ನೀರು ಮತ್ತು ನೈರ್ಮಲ್ಯ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವಲ್ಲಿ ಜನತೆಗೆ ತಿಳುವಳಿಕೆಯನ್ನು ಉಂಟುಮಾಡುವಲ್ಲಿ ತೀವ್ರ ಪ್ರಯತ್ನ ನಡೆಸುವುದು ಅಗತ್ಯವಾಗಿದೆಯೆಂದು ಒತ್ತಿ ಹೇಳಲಾಗಿದೆ.

ನನ್ನ ಬರಹ ಪುಸ್ತಕ ರೂಪ ತಾಳುವ ವಿವಿಧ ಹಂತಗಳಲ್ಲಿ ಕಾರಣೀಭೂತರಾದ ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಬಿ. ಎ. ವಿವೇಕ ರೈ ಅವರಿಗೆ, ಕುಲಸಚಿವರಾದ ಡಾ. ಕರೀಗೌಡ ಬೀಚನಹಳ್ಳಿ ಮತ್ತು ಪ್ರಸಾರಾಂಗದ ನಿರ್ದೇಶಕರಾದ ಡಾ. ಹಿ.ಚಿ. ಬೋರಲಿಂಗಯ್ಯ ಇವರುಗಳಿಗೆ ನನ್ನ ಕೃತಜ್ಞತೆಗಳು. ಅಬಿವೃದ್ಧಿ ಅಧ್ಯಯನ ವಿಭಾಗದ ಮುಖ್ಯಸ್ಥರಾದ ಪ್ರೊ. ಚಂದ್ರಪೂಜಾರಿ ಇವರಿಗೆ ಹಾಗೂ ಸಹೋದ್ಯೋಗಿಗಳಾದ ಡಾ. ಟಿ.ಆರ್. ಚಂದ್ರಶೇಖರ ಮತ್ತು ಎ. ಶ್ರೀಧರ, ಡಾ. ಎಚ್.ಡಿ. ಪ್ರಶಾಂತ ಇವರಿಗೆ ನನ್ನ ವಂದನೆಗಳು.

ನನ್ನ ಪುಸ್ತಕ ಪ್ರಕಟವಾಗುವುದನ್ನು ಕಾಣಲು ನನಗಿಂತಲೂ ಹೆಚ್ಚು ಕಾತುರಳಾಗಿರುವ ಗೆಳತಿ ಡಾ. ಶೈಲಜಾ ಹಿರೇಮಠ ಇವರಿಗೆ ನನ್ನ ವಿಶೇಷ ವಂದನೆಗಳು.

ನನ್ನ ಬೌದ್ಧಿಕತೆಯನ್ನು ಬರವಣಿಗೆಯತ್ತ ಹರಿಸಿ ತಮ್ಮ ಪತ್ರಿಕೆಯಲ್ಲಿ ಲೇಖನವೊಂದನ್ನು ಪ್ರಕಟಿಸುವುದರ ಮೂಲಕ ನನ್ನ ಬರವಣಿಗೆಗೆ ಪ್ರೋತ್ಸಾಹಿಸಿದ ಡಾ. ಎಚ್.ಎಸ್. ಶ್ರೀಮತಿ ಇವರಿಗೆ ಕೃತಜ್ಞತೆಗಳು.

ಕ್ಷೇತ್ರಕಾರ್ಯದಲ್ಲಿ ಸಹಾಯ ಹಸ್ತ ನೀಡಿದ ಡಾ. ಜೆ. ಕೃಷ್ಣ, ಡಾ. ಯರ್ರಿಸ್ವಾಮಿ ಮತ್ತು ಇತರರಿಗೆ ಆಭಾರಿಯಾಗಿರುತ್ತೇನೆ.

ಮುದ್ರಣ ವಿನ್ಯಾಸದಲ್ಲಿ ನೆರವಾದ ಪ್ರಸಾರಾಂಗದ ಸಹಾಯಕ ನಿರ್ದೇಶಕರಾದ ಶ್ರೀ ಸುಜ್ಞಾನಮೂರ್ತಿಯವರಿಗೆ, ಮುಖಪುಟ ವಿನ್ಯಾಸ ಮಾಡಿದ ಶ್ರೀ ಕೆ.ಕೆ. ಮಕಾಳಿ ಹಾಗೂ ಸುಂದರವಾಗಿ ಅಕ್ಷರ ಸಂಯೋಜಿಸಿದ ವಿದ್ಯಾರಣ್ಯ ಗಣಕ ಕೇಂದ್ರದ ಶ್ರೀನಿವಾಸ ಕೆ. ಕಲಾಲ್ ಅವರಿಗೆ ವಂದನೆಗಳನ್ನು ಸಲ್ಲಿಸುತ್ತೇನೆ.

ಸಿದ್ಧ ಗಂಗಮ್ಮ