ಕರ್ನಾಟಕ ರಾಜ್ಯದಲ್ಲಿ ಚಿಕ್ಕಮಗಳೂರು ಜಿಲ್ಲೆ ಒಂದು ವಿಶಿಷ್ಟವಾದ ಜಿಲ್ಲೆ. ಈ ಜಿಲ್ಲೆ ಅಸ್ತಿತ್ವಕ್ಕೆ ಬಂದು ಒಂದು ಶತಮಾನದಷ್ಟು ಕಾಲ ಗತಿಸಿದ್ದು, ಇದು ನೆಲ, ಜಲ ಮತ್ತು ಪ್ರಕೃತಿ ಸಂಪತ್ತಿನಿಂದ ಪ್ರಸಿದ್ಧಿ ಪಡೆದಿದೆ. ಈ ಜಿಲ್ಲೆಯು, ಮಲೆನಾಡು, ಅರೆಮಲೆನಾಡು, ಹಾಗೂ ಬಯಲುಸೀಮೆಗಳನ್ನೊಳಗೊಂಡ ವೈವಿದ್ಯತೆಯೊಂದಿಗೆ ಏಕತೆಯನ್ನು ಮೈದುಂಬಿಸಿಕೊಂಡಿರುವ ಈ ಜಿಲ್ಲೆಯಲ್ಲಿ, ಹೊಯ್ಸಳ ಸಾಮ್ರಾಜ್ಯದ ಸ್ಥಾಪಕ “ಸಳ” ಹುಟ್ಟಿದ ಸ್ಥಳ “ಅಂಗಡಿಗ್ರಾಮ”, ಜಗದ್ವಿಖ್ಯಾತ ಶೃಂಗೇರಿ “ಶಾರದಾಪೀಠ”, ವಿವಿಧ ಜಾತಿಯ ಪ್ರಾಣಿಗಳನ್ನೊಳಗೊಂಡ ಅಭಯಾರಣ್ಯಗಳು, ನಿತ್ಯಹರಿದ್ವರ್ಣಕಾಡುಗಳಿಂದ ಕೂಡಿದ ಪರ್ವತ ಶ್ರೇಣಿಗಳು ಹಾಗೂ ಅನೇಕ ಜಲಪಾತಗಳು ಮತ್ತು ಕಾಫಿ, ಟೀ, ಏಲಕ್ಕಿ, ಮೆಣಸು, ಅಡಿಕೆ,ಬಾಳೆ, ತೆಂಗುಗಳನ್ನು ಬೆಳೆಯುವ ನಾಡಾಗಿದೆ.

ಸಾಹಿತ್ಯಕವಾಗಿಯೂ ಈ ನಾಡು ಹೆಚ್ಚು ಪ್ರಸಿದ್ಧಿ ಪಡೆದಿದೆ. ಶ್ರೇಷ್ಟಕವಿಗಳಾದ ಲಕ್ಷ್ಮೀಶನ ದೇವನೂರು, ಡಾ|| ಎ.ಆರ್. ಕೃಷ್ಣಶಾಸ್ತ್ರಿಗಳ ಅಂಬಳೆ ಹಾಗೂ ಜ್ಞಾನಪೀಠ ಪ್ರಶಸ್ತಿ ವಿಜೇತ ರಾಷ್ಟ್ರಕವಿ ಕುವೆಂಪುರವರ ಜನ್ಮಸ್ಥಳ ಹಿರೇಕೊಡಿಗೆ ಇದೇ ಜಿಲ್ಲೆಯಲ್ಲಿರುವುದು ಮತ್ತೊಂದು ಹೆಮ್ಮೆಯ ವಿಷಯ.

ಚಿಕ್ಕಮಗಳೂರು ಜಿಲ್ಲಾ ಸ್ಥಳ ನಿರ್ದೇಶನ ಮತ್ತು ಗಡಿಗಳು

ಚಿಕ್ಕಮಗಳೂರು ಜಿಲ್ಲೆಗೆ ಕರ್ನಾಟಕ ರಾಜ್ಯದಲ್ಲಿಯೇ ವಿಶಿಷ್ಟ ಸ್ಥಾನವಿದೆ. ಜಿಲ್ಲೆಯ ಹೆಚ್ಚು ಭಾಗ ದಟ್ಟ ಅರಣ್ಯಗಳಿಂದ ಹಾಗೂ ಬೆಟ್ಟಗುಡ್ಡಗಳಿಂದ ಕೂಡಿದ ಮಲೆನಾಡು ಪ್ರದೇಶ ಹಾಗೂ ಬಯಲುಸೀಮೆ ಪ್ರದೇಶಗಳನ್ನು ಒಳಗೊಂಡಿದೆ.

ಈ ಜಿಲ್ಲೆಯು ೧೨.೫೪ ಮತ್ತು ೧೩.೫೪ ಡಿಗ್ರಿಗಳ ಉತ್ತರ ಅಕ್ಷಾಂಶದ ಮಧ್ಯದಲ್ಲಿಯೂ ೭೫.೭ಡಿಗ್ರಿ ಮತ್ತು ೭೬.೨೨ ಡಿಗ್ರಿಗಳ ಪೂರ್ವ ರೇಖಾಂಶಗಳ ಮಧ್ಯದಲ್ಲಿಯೂ ಇದೆ. ಜಿಲ್ಲೆಯ ಅತಿ ಹೆಚ್ಚು ಉದ್ದ ಪೂರ್ವ ಪಶ್ಚಿಮ ೧೩೮.೪ ಕಿ.ಮೀ ಗಳು, ದಕ್ಷಿಣ ಉತ್ತರ ೮೮.೫ ಕಿ.ಮೀ ಗಳು, ಈ  ಜಿಲ್ಲೆಯೂ, ಪಶ್ಚಿಮಕ್ಕೆ ಹಾಸನ, ತುಮಕೂರು ಜಿಲ್ಲೆಗಳು, ದಕ್ಷಿಣಕ್ಕೆ ಹಾಸನ ಜಿಲ್ಲೆಯೂ, ಪಶ್ಚಿಮಕ್ಕೆ ಪಶ್ಚಿಮ ಘಟ್ಟಗಳೂ, ಉತ್ತರಕ್ಕೆ ಶಿವಮೊಗ್ಗ ಮತ್ತು ಚಿತ್ರದುರ್ಗ ಜಿಲ್ಲೆಗಳೂ ಇವೆ.

ವಿಸ್ತೀರ್ಣ ಮತ್ತು ಜನಸಂಖ್ಯೆ:-

ಈ ಜಿಲ್ಲೆಯ ಭೌಗೋಳಿಕ ವಿಸ್ತೀರ್ಣ ೭೧೯ ಕಿ.ಮೀ ಗಳು, ಜಿಲ್ಲೆಯ ಒಟ್ಟು ಜನಸಂಖ್ಯೆ ೧೧, ೪೦೯೦೫(೨೦೦೧ರ ಜನಗಣತಿ ಪ್ರಕಾರ). ಗಂಡಸರ ಸಂಖ್ಯೆ ೫,೭೪,೯೧೧, ಹೆಂಗಸರು-೫೬೫೯೯೪. ಇದು ನಮ್ಮ ರಾಜ್ಯದ ಜನಸಂಖ್ಯೆಯಾದ ೫೨೯ ಲಕ್ಷಗಳ ಶೇಕಡಾ ೨.೧೫೬ ರಷ್ಟಿದೆ. ಈ ಜಿಲ್ಲೆಯಲ್ಲಿ ೦೭ ತಾಲ್ಲೂಕುಗಳಿದ್ದು ೦೮ ಶೈಕ್ಷಣಿಕ ವಲಯಗಳಿವೆ.

ಜಲ ಸಂಪನ್ಮೂಲ:-

ಚಿಕ್ಕಮಗಳೂರು ಜಿಲ್ಲೆ ಅತಿ ಹೆಚ್ಚು ಮಲೆನಾಡು ಪ್ರದೇಶವಾದ ಪಶ್ಚಿಮ ಘಟ್ಟಗಳ ಪ್ರದೇಶ ಹಾಗೂ ಕಡಿಮೆ ಮಳೆ ಬೀಳುವ ಬಯಲುಸೀಮೆ ಎರಡನ್ನೂ ಹೊಂದಿರುವ ವಿಶಿಷ್ಠ ಜಿಲ್ಲೆ.

ಈ ಜಿಲ್ಲೆಯ ಮಲೆನಾಡ ವಿಭಾಗಗಳಿಂದ ತುಂಗಾ, ಭದ್ರಾ, ಹೇಮಾವತಿ, ವೇದಾವತಿ, ಯಗಚಿ ಮುಂತಾದ ನದಿಗಳು ಹುಟ್ಟಿ ಹರಿಯುತ್ತಿವೆ. ಭದ್ರಾ ಮತ್ತು ತುಂಗಾ ನದಿಗಳು ಗಂಗಾಮೂಲ ಎಂಬಲ್ಲಿ ಹುಟ್ಟಿ ಜಿಲ್ಲೆಯಲ್ಲಿ ಹರಿದು ಶಿವಮೊಗ್ಗ ಜಿಲ್ಲೆಯನ್ನು ಸೇರಿ ಮುಂದೆ ತುಂಗಭದ್ರಾ ಎನಿಸಿಕೊಳ್ಳುತ್ತದೆ. ಇಲ್ಲಿಯೇ ಹುಟ್ಟುವ ನೇತ್ರಾವತಿ ನದಿ ಪಶ್ಚಿಮಕ್ಕೆ ಹರಿದು ದಕ್ಷಿಣ ಕನ್ನಡವನ್ನು ಸೇರುತ್ತದೆ. ಹೇಮಾವತಿ ನದಿ ಮೂಡಿಗೆರೆ ತಾಲ್ಲೂಕಿನ ಜಾವಳಿಯಲ್ಲಿ ಹುಟ್ಟಿ ಹಾಸನ ಜಿಲ್ಲೆಯನ್ನು ಸೇರುತ್ತದೆ. ಯಗಚಿ ನದಿಯು ಸೀತಾಳಯ್ಯನ ಗಿರಿಯಲ್ಲಿ ಹುಟ್ಟಿ ಬೇಲೂರು ತಾಲ್ಲೂಕಿನಲ್ಲಿ ಹರಿದು ಮುಂದೆ ಹೇಮಾವತಿ ನದಿಯೊಂದಿಗೆ ಸೇರುತ್ತದೆ.

ವೇದಾ ಮತ್ತು ಆವುತಿ ನದಿಗಳು ಬಾಬ ಬುಡನ್ ಗಿರಿಯ ತಪ್ಪಲಲ್ಲಿ ಹುಟ್ಟಿ ಕಡೂರು ತಾಲ್ಲೂಕಿನಲ್ಲಿ ಹರಿದು ಮುಂದೆ ಎರಡೂ ನದಿಗಳು ಸೇರಿ ವೇದಾವತಿ ನದಿ ಎಂಬ ಹೆಸರಿನಿಂದ ಚಿತ್ರದುರ್ಗ ಜಿಲ್ಲೆಯಲ್ಲಿ ಹರಿಯುತ್ತದೆ.

ಇತಿಹಾಸ ಪ್ರಸಿದ್ಧ ಅಯ್ಯನ ಕೆರೆ ಮತ್ತು ಮದಗದ ಕೆರೆಗಳು ಕಡೂರು ತಾಲ್ಲೂಕಿನಲ್ಲಿದ್ದು ಸಾವಿರರು ಏಕರೆಗೆ ನೀರುಣಿಸುತ್ತವೆ.

ಖನಿಜ ಸಂಪತ್ತು:-

ಈ ಜಿಲ್ಲೆಯಲ್ಲಿ ಕಬ್ಬಿಣದ ಅದಿರು ಹೆಚ್ಚಿನ ಪ್ರದೇಶದಲ್ಲಿ ದೊರೆಯುತ್ತದೆ. ಜೊತೆಗೆ ಮ್ಯಂಗನೀಸ್, ತಾಮ್ರ, ಸುಣ್ಣದಕಲ್ಲು ಮುಂತಾದ ಖನಿಜಗಳು ಈ  ಜಿಲ್ಲೆಯಲ್ಲಿ ಸಿಗುತ್ತದೆ. ಕುದುರೆಮುಖದಲ್ಲಿ ದೊರೆಯುವ ಕಬ್ಬಿಣದ ಅದಿರನ್ನು ಸಂಸ್ಕರಿಸಿ ಹೊರದೇಶಗಳಿಗೆ ರಫ್ತು ಮಾಡಲಾಗುತ್ತಿತ್ತು. ಕೆಮ್ಮಣ್ಣುಗುಂಡಿಯ ಕಬ್ಬಿಣದ ಅದಿರನ್ನು ಭದ್ರಾವತಿ ಕಬ್ಬಿಣದ ಕಾರ್ಖಾನೆಗೆ ರವಾನಿಸಲಾಗುತ್ತಿತ್ತು. ಆದರೆ ಈಗ ಈ ಎರಡೂ ಈ ಸ್ಥಳಗಳಿಂದ ಅದಿರನ್ನು ಹೊರತೆಗೆಯುವುದನ್ನು ಸ್ಥಗಿತಗೊಳಿಸಲಾಗಿದೆ.

ನಿತ್ಯ ಹರಿದ್ವರ್ಣ ಕಾಡುಗಳು:-

ಜಿಲ್ಲೆಯ ಮಲೆನಾಡು ಭಾಗವಾದ ಪಶ್ಚಿಮ ಘಟ್ಟ ಪ್ರದೇಶಗಳು ದಟ್ಟವಾದ ನಿತ್ಯ ಹರಿದ್ವರ್ಣ ಅರಣ್ಯಗಳಿಂದ ಕೂಡಿವೆ. ಇಲ್ಲಿ ತೇಗ, ನಂದಿ, ಬೀಟೆ, ಹೊನ್ನೆ ಮುಂತಾದ ಮರಗಳು ಶ್ರೀಗಂಧದ ಮರಗಳು ದೊರೆಯುತ್ತವೆ. ಈ ಭಾಗದ ಗಗನಚುಂಬಿತ ಮರಗಳು, ಬಿದಿರು ಪೊದೆಗಳನ್ನು ನೋಡುವುದೇ ಒಂದು ಆನಂದ. ಇದರೊಂದಿಗೆ ಈ ಕಾಡುಗಳಲ್ಲಿ ಅನೇಕ ಔಷಧೀಯ ಗುಣವುಳ್ಳ ಗಿಡಗಳು ಇವೆ.

ವನ್ಯ ಪ್ರಾಣಿಗಳು:-

ಈ ಜಿಲ್ಲೆಯ ಪಶ್ಚಿಮ ಘಟ್ಟ ಅರಣ್ಯ ಪ್ರದೇಶಗಳು ವಿಶ್ವದಲ್ಲಿಯೇ ಜೀವ ವೈವಿಧ್ಯತೆಯಲ್ಲಿ ಅತಿ ಸೂಕ್ಷ್ಮ ಪ್ರದೇಶವೆಂದು ಗುರುತಿಸಲ್ಪಟ್ಟಿದೆ. ಇಲ್ಲಿನ ಅರಣ್ಯಗಳು ಅನೇಕ ಪ್ರಾಣಿ ಪಕ್ಷಿಗಳಿಗೆ ಆಶ್ರಯ ತಾಣಗಳಾಗಿವೆ. ಇಲ್ಲಿ ಆನೆ, ಹುಲಿ, ಚಿರತೆ, ಕಾಡೆಮ್ಮೆ, ಜಿಂಕೆ, ತೋಳ, ನರಿ, ಕಾಡುಹಂದಿಗಳು, ನಾನಾ ವಿಧದ ಮಂಗಗಳು, ನವಿಲುಗಳು, ವಿವಿಧ ಜಾತಿಯ ಪಕ್ಷಿಗಳು ಇವೆ.

ಈ ಜಿಲ್ಲೆಯಲ್ಲಿನ ಪ್ರಸಿದ್ಧ ಅರಣ್ಯಧಾಮಗಳೆಂದರೆ ಭದ್ರಾ ಅಭಯಾರಣ್ಯ ಮತ್ತು ಮುತ್ತೋಡಿ ಅಭಯಾರಣ್ಯಗಳು ಇವುಗಳೊಂದಿಗೆ ಕುದುರೆಮುಖದಲ್ಲಿ ರಾಷ್ಟ್ರೀಯ ಉದ್ಯಾನವನವನ್ನು ಸ್ಥಾಪಿಸಲಾಗಿದೆ.