Categories
ಕನ್ನಡ ವ್ಯಕ್ತಿ ಪರಿಚಯ

ವ್ಯಕ್ತಿ ಪರಿಚಯ – ಚೆನ್ನವೀರಕಣವಿ

ಜನನ ಧಾರವಾಡ ಜಿಲ್ಲೆಯ ಹೊಂಬಳ್ಳಿ ಗ್ರಾಮದಲ್ಲಿ ಜೂನ್ ೧೯೨೮ ರಲ್ಲಿ ಹುಟ್ಟಿದರು. ತಂದೆ-ಸಕ್ಕರೆಪ್ಪ(ಪ್ರಾಥಮಿಕ ಶಾಲಾ ಶಿಕ್ಷಕ) ತಾಯಿ ಪಾರ್ವತೆವ್ವ. ಧಾರವಾಡದಲ್ಲಿ ವಿದ್ಯಾಭ್ಯಾಸ ಪ್ರಾರಂಬಿಸಿದ ಇವರು ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ ಪದವಿ ಪಡೆದರು. ಅದೇ ವಿಶ್ವವಿದ್ಯಾಲಯ ಪ್ರಸಾರಾಂಗದ ಪ್ರಕಟಣಾ ವಿಭಾಗದ ನಿರ್ದೇಶಕರಾಗಿದ್ದರು. ಕಣವಿಯವರು ಸಾಹಿತ್ಯ ಕ್ಷೇತ್ರಕ್ಕೆ ಕಾಲಿಡುತ್ತಿದ್ದ ವೇಳೆಗಾಗಲೇ ನವೋದಯ ಮಧ್ಯಂತರ ಸ್ಥಿತಿ ತಲುಪಿತ್ತು. ಬೇಂದ್ರೆ, ಕುವೆಂಪು, ಪು.ತಿ.ನ, ಮತ್ತು ಮಧುರಚನ್ನರಂತಹ ನವೋದಯ ಕವಿಗಳ ಕಾವ್ಯ ಹೊಸದಾಗಿ ಕಾವ್ಯರಚನೆಗೆ ತೊಡಗುವವರನ್ನು ಗಾಡವಾಗಿ ಪ್ರಭಾವಿಸುತ್ತಿದ್ದ ಕಾಲವದು. ಇದಕ್ಕೆ ಕಣವಿಯವರು ಹೊರತಾಗಿರಲಿಲ್ಲ. ಅವರ ಸಾಹಿತ್ಯ ಪ್ರಕಾರಗಳು ಪ್ರಭಾವ ಬೀರಿದವು.

ಕಣವಿಯವರ ಭಾವಜೀವಿ ಎಂಬ ಆತ್ಮಕಥನಾತ್ಮಕವಾದ ದೀರ್ಘಕವಿತೆಯ ಮೇಲೆ ಮಧುರಚನ್ನರ ನನ್ನ ನಲ್ಲ, ಕವಿತೆಯ ಪ್ರಭಾವವಿರುವುದು ಕಂಡುಬರುತ್ತದೆ. ಹಾಗೆಯೇ ಕಣವಿಯವರ ಪ್ರಕೃತಿಗೀತೆಗಳಲ್ಲಿ ವಿಶೇಷವಾಗಿ ಬೇಂದ್ರೆ, ಕುವೆಂಪುರವರ ಪ್ರಭಾವವನ್ನು ಗುರುತಿಸಬಹುದು. ಇದು ಬೆಳೆಯುವ ಯುವ ಕವಿಯೊಬ್ಬನಿಗೆ ಸಹಜವೂ ಹೌದು, ನಂತರ ಕಣವಿಯವರು ಇದರಿಂದ ಮೇಲೇರಿ ಸಾಹಿತ್ಯ ಸೃಷ್ಟಿಮಾಡಿದರು. ಕಣವಿಯವರು ಹಲವು ಕವನ ಸಂಕಲನಗಳನ್ನು ಹೊರತಂದಿದ್ದಾರೆ- ಕಾವ್ಯಾಕ್ಷಿ, ಆಕಾಶಬುಟ್ಟಿ, ದೀಪದಾರಿ, ಭಾವಜೀವಿ, ಮಧುಚಂದ್ರ, ನೆಲಮುಗಿಲು, ಮಣ್ಣಿನ ಮೆರವಣಿಗೆ, ಜೀವಧ್ವನಿ, ಕಾರ್ತಿಕಮೋಡ, ಹಕ್ಕಿ ಪುಚ್ಚ(ಮಕ್ಕಳ ಕವಿತೆಗಳು). ಆಕಾಶಬುಟ್ಟಿ-ಸಂಕಲನದಲ್ಲಿ ಸಮಾಜದ ದೋಷಗಳನ್ನು ಕವಿ ಕಟುವಾ ಟೀಕೆಗೆ ಗುರಿಮಾಡುತ್ತಾರೆ. ಮಣ್ಣಿನ ಮೆರವಣಿಗೆ, ಶಿಶುಕಂಡ ಕನಸು, ಕಾಲನಿಲ್ಲುವುದಿಲ್ಲ, ದಂತಹ ಕವಿತೆಗಳಲ್ಲಿ ಅವರ ಮಹತ್ವದ ಪ್ರತಿಭೆ ಪ್ರಯೋಗವಾಗಿದೆ. ತಮ್ಮ ವೈಯಕ್ತಿಕ ಕಾವ್ಯ ಮತ್ತು ಬದುಕಿನ ನಿಲುವನ್ನು ಕವಿ ವ್ಯಕ್ತಪಡಿಸಿದ್ದಾರೆ.

ಮಾಡಿ ಉಂಡಿದ್ದೇವೆ ನಮನಮಗೆ ಸೇರಿದ ಅಡಿಗೆ

ಇರಬಹುದು ಇದರಲ್ಲಿ ಕೆಲಭಾಗ ಜೀವನ ಸತ್ವ ಕಡಿಮೆ

ಇದ್ದಶಕ್ತಿಯಲ್ಲಿ ತುಸು ದೂರ ನಡೆದಿದ್ದೇವೆ

ರೂಡಿಯಾಗಿದೆ ಒಬ್ಬೊಬ್ಬರಿಗೂ ಒಂದೊಂದು ಬಗೆಯ ನಡಿಗೆ

ಮುಖ್ಯ ಬೇಕಾದ್ದು ಜೀವನ ಗತಿ, ಹೊಸ ನೆತ್ತರಿನ ಕೊಡುಗೆ

(ಕವಿತೆ-ಕಾಲನಿಲ್ಲುವುದಿಲ್ಲ) ಗದ್ಯಕೃತಿಗಳು:- ಸಾಹಿತ್ಯ ಚಿಂತನ, ಕಾವ್ಯಾನುಸಂದಾನ, ಸಮೂಹಿತ, ಮಧುರಚನ್ನ, ಸಮತೋಲನ, ಪ್ರಮುಖವಾದವು. ಸಂಪಾದಿತ ಕೃತಿಗಳಲ್ಲಿ ಪ್ರಮುಖವಾದವು- ನವಿಲೂರಿನ ಮನೆಯಿಂದ, ಜೀವನ ಸಿದ್ದಿ, ನವ್ಯದ್ವನಿ, ನೈವೇದ್ಯ, ಆಧುನಿಕ ಕನ್ನಡ ಕಾವ್ಯ ಗೀತರಚನೆ-ವಿಶ್ವಭಾರತಿಗೆ ಕನ್ನಡದಾರತಿ, ಹೂವು ಹೊರಳುವುವು. ಇವರಿಗೆ ಸಂದ ಪ್ರಶಸ್ತಿಗಳು- ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಚೆಂಬೆಳಕು ಅಬಿನಂದನ ಗ್ರಂಥ, ಹಾಗೂ ೧೯೯೬ ರ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ಪ್ರಮುಖವಾದವು.