ಪಾರ್ವತಿ : ಇದು ಯಾರಾದ್ರೂ ಒಪ್ಪೋ ಮಾತೇನ್ರಿ?

ಕೇಬಿ : ನಾನೊಪ್ಪಿಕೊಂಡಿದ್ದೇನೆ, ಸಾಲದೊ?

ಶಿವಣ್ಣ : ಈ ರೀತಿ ಕನಸು ಕಂಡವರನ್ನೆಲ್ಲಾ ಹಿಡಿದರೆ ಇಡೀ ದೇಶ ಜೇಲಾಗುತ್ತೆ.

ಕೇಬಿ : ಮಿಸ್ಟರ್ ಶಿವರಾಂ, ಜೀವನದಲ್ಲಿ ನಾನು ಎರಡನ್ನ ಪಾಲಿಸ್ತೀನಿ. ಒಂದು ನಾ ನಗೋದಿಲ್ಲ. ಇನ್ನೊಂದು ನಾನು ವಿಚಾರ ಮಾಡೋದಿಲ್ಲ. ನಾನು ಯಾವಾಗಲೂ ಹವಸರದಲ್ಲಿರುತ್ತೇನೆ. ಅದೇ ನನ್ನ ಸುದೈವ. ಯಾಕಂತಿಯೊ? ವಿಚಾರ ಮಾಡೋದಕ್ಕೆ ಟೈಮೇ ಸಿಕ್ಕಲ್ಲ. ಹಿಡೀ ದೇಶ ಜೇಲಲ್ಲಿಡೋದೊ, ಇಲ್ಲಾ ಹಿಡೀ ದೇಶಾನ್ನ ಜೇಲ್ ಮಾಡೋದೊ- ಅದನ್ನೆಲ್ಲಾ ವಿಚಾರ ಮಾಡೋಕೆ ದೊಡ್ಡೋರಿದ್ದಾರೆ. ನಿನ್ನ ಬುದ್ದಿವಂತಿಕೆಯೆಲ್ಲಾ ಮೂರ್ಖತನ ಅಂತ ಒಪ್ಪಿಕೊ.

ಪೊಲೀಸ್ : (ಪಾರ್ವತಿಗೆ) ಚಂದೊಳ್ಳಿ ಉಡುಗೀರಂದ್ರೆ ನಮ್ಮ ಸಾಬ್ರಿಗೆ ತುಂಬ ಕುಸಿ. ನೀ ಓಗಿ ಸಾಬರಿಗೇಳು-ಹೇನೋ ತಪ್ಪಾಗೋಗದೆ ಸಾಮಿ ಇನ್ನೊಂದಪ ಇಂಗ್ಮಾಡಕಿಲ್ಲ. ಬುಟ್ಟುಡಿ ಅನ್ನು. ಬೇಕಾರ ರಾತ್ರಿ ಟೇಸನ್ನಿಗೂ ಬತ್ತಿನನ್ನು, ಒಂಟೋಗ್ತಾರೆ.

ಪಾರ್ವತಿ : ಅಯ್ಯಯ್ಯೊ! ಏನಿದೆಲ್ಲ! ಕೇಳೋರ್ಯಾರೂ ಇಲ್ಲವೆ? (ಹೊರಗಡೆ ಓಡಿ ಹೋಗಿ) ರೀ ರಾಮಕ್ಕ ನಿಮ್ಮ ಯಜಮಾನಿದ್ದರೆ ಕರಕೊಂಬನ್ನಿಯಮ್ಮ, ಯಾರೋ ರೌಡಿಗಳು ಮನೇಗೆ ಬಂದಿದಾರೆ. ದಯವಿಟ್ಟು ಬನ್ನಿ, ರೀ ಸರೋಜಾ…..

ಬನ್ನೀ …… ಯಾರಾದರೂ ಕಾಪಾಡ್ರಿ….
(ಅಳುತ್ತ ಒಳಬರುವಳು)

ಪೊಲೀಸ್ : ಸಾರ್, ನನ್ನನ್ನ ಬೆಡ್ ರೂಮಿಗೆಳೀತಿದಾಳೆ.

ಕೇಬಿ : ಹೀಗಲಾದರೂ ಒಪ್ಪಿಕೊಳ್ತಿಯಲ್ಲ?

ಶಿವಣ್ಣ : ಏನೊಪ್ಪಿಕೊಳ್ಲಿ?

ಕೇಬಿ : ನಾಯೇಳಿದ್ದನ್ನ,

ಶಿವಣ್ಣ : ಏನು ಹೇಳಿದಿರಿ?

ಕೇಬಿ : ನೀನು ಕೊಲೆಗಾರ!

ಪಾರ್ವತಿ : ಅಯ್ಯಯ್ಯೋ ನಾ ತಡೀಲಾರೆ!….. ಏನು ನಡೀತ ಇದೆ! ನನ್ನ ತಲೆ ಸುತ್ತಿ ಬರ್ತ ಇದೆ! ಅಯ್ಯೋ…. (ಮೂರ್ಛೆ ಬೀಳುವಳುತಕ್ಷಣ ಅವಳ ಸಹಾಯಕ್ಕೆ ಓಡಿಹೋಗಬೇಕಾಂದಾಗ ಕೇಬಿ ಅಡ್ಡ ಬಂದು ಕೈತಿರುವಿ ಹಿಂಗಟ್ಟು ಕಟ್ಟಿ ಹಿಡಿಯುವನು.)

ಕೇಬಿ : ಸದ್ಯ, ಯೋ ಅ ಎಂಗಸಿನ್ನ ಒಳಾಕ ಚೆಲ್ಲಿಬಾ.
(ಪೊಲೀಸ್ ಪಾರ್ವತಿಯನ್ನು ನಡೆಸಿಕೊಂಡು ಹೊರಟಿರುವಂತೆ ಶಿವಣ್ಣ ಮುಂದೆ ನುಗ್ಗಲು ಪ್ರಯತ್ನಿಸುವನುಕೇಬಿ ತಕ್ಷಣ ಕೈಗೆ ಸಿಕ್ಕ ವಸ್ತುವಿನಿಂದ ಅವನ ತಲೆಗೊಂದು ಭಯಂಕರ ಏಟು ಹಾಕುವನು)

ನನ್ನ ಕೈ ತಪ್ಪಿಸಿ ಹೋಡಿವೋಗ್ತಿಯೋ ಲೋಫರ್.

ಶಿವಣ್ಣ : (ಕಣ್ಣು ತೆರೆದುಕೊಂಡು ಪರವಶನಾದಂತೆನಿಂತಲ್ಲೇ ಕುಸಿದು ಕೂರುತ್ತಾನೆಇನ್ನು ಮುಂದೆ ಇಡೀ ದೃಶ್ಯ ಮುಗಿಯುವ ತನಕ ಅದೇ ಭಂಗಿಯಲ್ಲಿರುತ್ತಾನೆ.) ನೀವ್ಯಾರು! ಇಲ್ಲಿಗ್ಯಾಕೆ ಬಂದಿರಿ? ನಾ ಎಲ್ಲಿದ್ದೀನಿ! ಇದೆಲ್ಲಾ ಏನು? ಅಕ್ಕಪಕ್ಕ ಯಾರು ಇಲ್ಲವೆ? ಯಾರಾದರೂ ಮನುಷ್ಯರಿದ್ದರೆ ಕಾಪಾಡಿ…..ಕಾಪಾಡಿ….. (ಅಷ್ಟರಲ್ಲಿ ಪೂರ್ತಿ ಡ್ರೆಸ್ಸು ಧರಿಸಿಲ್ಲದಆದರೆ ಈಗಲೂ ಧರಿಸಿಕೊಳ್ಳುತ್ತಿರುವ ಜಜ್ ಬರುವನುವಯಸ್ಸು ೫೫ರ ಮೇಲಾಗಿದೆಮಾತಿನಿಂದ ಇವನು ಉತ್ತರ ಕರ್ನಾಟಕದವನೆಂದು ಗೊತ್ತಾಗುತ್ತದೆಬಾಯಲ್ಲಾಗಲಿಹೃದಯದಲ್ಲಾಗಲಿ ಮೌಲ್ಯಗಳ ಅರಿವಿಲ್ಲದವನು.)

ಜಜ್ : ಛೇ ಹೋಗೋ ನಿನ ಮಂಜಾಳ ಹೋಗ್ಲಿ. ಆ ಹೆಂಗಸು – ಅವಳಪಾ ನನ್ನ ಕೀಪಾ, ನಾ ಕೆಟ್ಟದಾಗಿ, ಚರಂಡಿ ಹಾಂಗ ನಾರತೀನಂತ ಅಪಪ್ರಚಾರ ಮಾಡುತಾಳ. ಅಲ್ಲಲೇ ಕೇಬಿ, ನಾ ಹಾಂಗ ನಾರತೀನೇನೊ? ಇಡೀ ದೇಶದಾಗ ನನ್ನಷ್ಟು ಅತ್ತರ ಎಣ್ಣಿ ಯಾರೂ ಹಚ್ಚೂದಿಲ್ಲ, ಗೊತ್ತ? ನಾ ಸುಮಕಿರತೀನ? ಮೂಗ ಕೊಯ್ತೀನಿ ಅಂತ ಹೇಳಿದೆ, ಸಿಟ್ಟ ಬಂದಾಗ. ಆ ಮ್ಯಾಲ ಕೊಯ್ಲಿಲ್ಲ ಅಂತ ಇಟ್ಟಕ. ಆಕೀ ಮಾತ ಕೇಳಿ ಕೇಳಿ ಎಲ್ಲಿ ನಾರತೀನೇನೋ ಅಂತ ಸಂಶೆ ಬರಾಕ ಹತ್ತೇತಿ, ಅದಕ್ಕ ನಾ ಇವತ್ತಿಂದ ಹೆಸರ ಚೇಂಚ್ ಮಾಡಿಕೊಂಡ ಹೊಸ ಹೆಸರ ಇಟಕೋಬೇಕಂತೀನಿ.

ಕೇಬಿ : ಹೊಸ ಹೆಸರು? ಏನಂತ?

ಜಜ್ : ಇಂದಿರಾಗಾಂಧಿ! ಹೈಂಗೈತಿ?

ಜಜ್ : ಉಚ್ಚೀ ಕುಡೀಬೇಕಾಗತದ ಅಷ್ಟ. ನಾ ಒಂದ ಅಂದರ ಮಗಾ ತಾ ಒಂದ ಹೇಳತಾನ. ನಾ ಇಂದಿರಾಗಾಂಧಿ, ನೀ ಮೊರಾರ್ಜಿ ದೇಸಾಯಿ ಆದರ ಮಗನ ಕನ್‌ಪ್ಯೂಜನ್ ಆಗತದಷ್ಟ. ಆವಾಗ ಯಾರ ಜೋಡಿ ಯಾರ ಮಾತಾಡತಾರಂತ ಗೊತ್ತs ಆಗೋದಿಲ್ಲ. ಸುಮ್ಮನ ನೀ ಕೇಬಿ ಆಗು; ನಾ ಜಜ್ ಆಗತೀನಿ. ಮತ್ತೇನ ಕೇಸಪಾ ಕೇಬಿ? ಅವನೌನ ಜಳಕಾ ಮಾಡೋಣಂದರ ಪೋನ್ ಮಾಡಿದೆಲ್ಲೋ ಬೇಬರಿಸಿ, ಅದೇನ ಕೇಸ ಒದರು, ಕುರ್ಚಿಗಿರ್ಚಿ ಹಾಕೊ…. (ಕೇಬಿ ಕುರ್ಚಿ ಮುಂದೆ ಟೇಬಲ್ಲಿಡುವನುಜಜ್ ತನ್ನ ಜೇಬಿನಿಂದ ಸುತ್ತಿಗೆ ತೆಗೆದು ‘ಆರ್ಡರ್ ಆರ್ಡರ್ ಎಂದು ಕೂಗಿ ಸುತ್ತಿಗೆಯಿಂದ ಟೇಬಲ್‌ ಗುದ್ದುವನು.)

ಕೇಬಿ : ಯುವರ್ ಹಾನರ್…..

ಜಜ್ : ಮಂಗ್ಯಾನ ಮಗನ, ಮಿಲಾರ್ಡನ್ನಲೇ. ನಾ ಸುಪ್ರೀಂ ಕೋರ್ಟ್ ಜಜ್ಜಾಗಾವಿದ್ದೀನಿ. ಗೊತ್ತಾತೇನ?

ಕೇಬಿ : ಮಿಲಾರ್ಡ್, ಹಪರಾದಿ ಎಸರು ಪಿ. ಎನ್. ಶಿವರಾಮು -ಹಂತ.

ಜಜ್ : ಇವನs ಏನ ಶಿವರಾಮು ಅಂದರ?

ಕೇಬಿ : ಎಸ್ ಯುವರ್…..ಮಿಲಾರ್ಡ್,

ಜಜ್‌ : ಅಪರಾಧ ಒಪ್ಪಿಕೊಳ್ತಾನೋ ಹೆಂಗ?

ಕೇಬಿ : ಒಪ್ಪಿಕೊಳ್ತಾನೆ. ಆದರೆ ಕನಸಿನಲ್ಲಿ ಖೂನಿ ಮಾಡಿದಾನಂತೆ.

ಜಜ್ : ನಿನಾಪ್ಪನ, ಕನಸಿನಾಗs ಖೂನಿ ಖರೆ ಮಾಡಲಿ ರಕ್ತ ಬರತೈತಿಲ್ಲೊ?

ಕೇಬಿ : ಎಸ್. ಮಿಲಾರ್ಡ್.

ಜಜ್ : ಆಯ್ತು ಮತ್ತ, ರಕ್ತ ಬಂದದ್ದೆಲ್ಲಾ ಖೂನಿ ಅನಬೇಕಪ್ಪ. ಸುರು ಮಾಡು ಲಗು ಹೋಗಿ ಜಳಕಾ ಮಾಡತೀನಿ.

ಕೇಬಿ : (ಶಿವಣ್ಣನಿಗೆ) ಹೇನೇ ಮಾತಾಡಿದರೂ ಹೆಚ್ಚರದಿಂದ ಮಾತಾಡು. ಒಪ್ಪಿಕೊಂಡು ಮಾತಾಡು. ನಿನ್ನ ಎಸರು ಪಿ. ಎನ್. ಶಿವರಾಮು ತಾನೇ? ಎಸ್ಸಾರನ್ನು.

ಶಿವಣ್ಣ :  ………

ಜಜ್ : ಅವಗೇನ ಬೇಕೋ ಅದನ್ನೊದರು. ಮುಂದಿಂದ ನಾ ನೋಡತೀನಿ ಖರೇಕ್ಕ ಭಾರೀ ಕಿಮ್ಮತ್ತ ಕೊಡೊ ಮನಿಶಾ ನಾನು.

ಕೇಬಿ : ಎಸ್. ಬಿ. ಶಿವಣ್ಣ ಅಂತ ನನ್ನ ಹೆಸರು.

ಜಜ್ : ಹಾಂಗ ಹೇಳಿದರ ಅವ ನಿನ್ನ ಬಿಡೋದಿಲ್ಲ, ಸುಮ್ಮನ ಅವ ಹೇಳಿದಾಂಗ ಒದರಲೇ.

ಶಿವಣ್ಣ : ಎಸ್ಸಾರ್

ಕೇಬಿ : ಈ  ಯೆಂಗಸಿಗೂ ನಿಂಗೂ ಹೇನ್ಸಂಬಂದ?

ಶಿವಣ್ಣ : ಏನು ಇಲ್ಲ.

ಕೇಬಿ : ಏನು, ಭಾರತ ಮಾತೆಗೂ ನಿನಗೂ ಏನೂ ಸಂಬಂಧ ಇಲ್ಲವ? ಈ ದೇಶಕ್ಕೂ ನಿನಗೂ ಏನು ಸಂಬಂಧ ಇಲ್ಲವ?

ಶಿವಣ್ಣ : ಇದೆ.

ಕೇಬಿ : (ಪತ್ರಿಕೆ ತೋರಿಸುತ್ತ) ಆಂಗಿದ್ದರೆ ಈ ಯೆಂಗಸಿನ್ನಲ್ಲಿ ನೋಡಿದ್ದೆ?

ಶಿವಣ್ಣ : ಗುಡ್ಡ ಬೆಟ್ಟಗಳಲ್ಲಿ. ಹರಿಯೋ ನದಿಗಳಲ್ಲಿ, ನನ್ನವರ ಹಸಿವಿನಲ್ಲಿ, ನಿಮ್ಮ ನೀಲಿ ಕಣ್ಣುಗಳಲ್ಲಿ…..

ಜಜ್ : ಭಲೇ ಭಲೇ! ಏ ಕೇಬಿ, ಇವ ಕವಿ ಏನಲೆ?

ಕೇಬಿ : ಕವಿ ಆಗಿದ್ದರೆ ಅದು ಅವನ ಎರಡನೆ ಅಪರಾದ ಮಿಲಾರ್ಡ್.

ಜಜ್ : ಲೇ ಕೇಬಿ ಇನ್ನ ನೀ ಸುಮಕಿರೋ, ಹೇಳಪ. ಆ ಹೆಂಗಸನ್ನ ಯಾಕ ಕೊಂದಿ?

ಶಿವಣ್ಣ : ಕೊಂದಿಲ್ಲ. ನಾನವಳನ್ನ ನೋಡಿದ್ದು ಕನಸಿನಲ್ಲಿ.

ಜಜ್ : (ಉಳಿದವರು ಗಾಬರಿಯಾಗುವಂತೆ ನಕ್ಕು) ಕನಸಿನಾಗ? ಎಲೀ ಇವಳವ್ವನ, ನಿನ ಕನಸಿನಾಗ ಬಂದಿದ್ದಳ ಇವಳು? (ಪತ್ರಿಕೆಗೆ ಕೈಚಾಚಿ ಚಷ್ಮ ಹಾಕಿಕೊಂಡು ನೋಡುತ್ತ) ಲೇ ಕೇಬಿ. ಯಾರಲಾ ಇವಳು? ಇದ್ಯಾವುದೋ ರೆಡ್‌ಲೈಟ್ ಕೇಸಿದ್ಧಾಂಗೈತೆಲ್ಲ ಇದು!

ಕೇಬಿ : ಮಿಲಾರ್ಡ್ ಅವಳು ಭಾರತಾಂಬೆ! ಭಾರತಾಂಬೆ! ಜೈಹಿಂದ್!

ಜಜ್ : ಇನ್ನ ಬಾಯಿ ಮುಚ್ಚಿಕೋ. ಹೇಳಪ, ಈ ತಾಯೀನ್ನ ಕನಸಿನಾಗ ಹೆಂಗ ಕೊಂದಿ?

ಶಿವಣ್ಣ : ಕನಸಲ್ಲಿ ಆ ದಿನ ವಾಕಿಂಗ್ ಹೋಗಿದ್ದೆ. ಪಾರ್ಕಿನ ಹಸಿರಲ್ಲಿ ಅಡ್ಡಾಡಿ ಮನೆಗೆ ಬಂದೆ. ನೋಡಿದರೆ ನಾನು ಹೆಜ್ಜೆ ಊರಿದಲ್ಲೆಲ್ಲ ರಕ್ತದ ಕಲೆ ಇತ್ತು!

ಕೇಬಿ : ಮಿಲಾರ್ಡ್ ಇವ ಖೂನಿ ಅನ್ನೋದಕ್ಕೆ ಬೇರೆ ಸಾಕ್ಷಿ ಬೇಕೆ?

ಶಿವಣ್ಣ : ಕಾಲಿಗೆಲ್ಲೀ ರಕ್ತ  ಅಂಟಿಕೊಂಡಿತು ಅಂತ ಹೆಜ್ಜೆಗುಂಟ ವಾಪಸ್ ಹೋದೆ. ಪಾರ್ಕಿನ ತುಂಬ ಥರಾವರಿ  ಬಳ್ಳಿ. ಬಳ್ಳಿ ತುಂಬ ಥರಾವರಿ ಹೂವು-ಮುಂಜಾನೆ ಮಂಜಲ್ಲದ್ದಿ ಒದ್ದೆಯಾಗಿದ್ದವು. ಹಾಗೇ ನೋಡ್ತರಬೇಕಾದರೆ ಒಂದೊಂದು ಹೂನಲ್ಲೂ ಒಂದೊಂದು ಕಣ್ಣಿದ್ದವು! ಹೂ ಅರಳಿದ ಹಾಗೆ ಕಣ್ಣು ತೆರೆದವು, ಪೂರ್ತಿಯಲ್ಲ ಅರ್ಧ.

ಜಜ್ : ಭೇಶ್ ಭಲೆ ಕನಸಪ್ಪ ಇದು! ನಿನ್ನೆ ನನಗೂ ಒಂದುಕನಸು ಬಿದ್ದಿತ್ತು. ಅಂಧಾಂಗ ನಾ ಕನಸಿನಾಗ ಏನ ಮಾಡತಿದ್ದೆ? ಹಾ ನೆನಪಾಯ್ತು  ನಿದ್ದೀ, ಮಾಡತಿದ್ದೆ!

ಶಿವಣ್ಣ : ನಾನು ಗಾಬರಿ ಆಗಲಿಲ್ಲ; ಹಾಗೇ ನೋಡಿದೆ! – ಎಲ್ಲಾ ಕಣ್ಣಲ್ಲೂ ನೀರಿತ್ತು!

ಕೇಬಿ : ಇಬ್ಬನಿ ಹನಿ ಇರಬೇಕು.

ಶಿವಣ್ಣ : ನಾನೂ ಹಾಗೇ ಅಂದುಕೊಂಡೆ. ಆದರೆ ಖಂಡಿತ ಅದು ಕಣ್ಣೀರೇ!

ಕೇಬಿ : ಕಣ್ಣಲ್ಲಿ ಬರೋದು ಕಣ್ಣೀರೇ ಆಗಬೇಕಾದ್ದಿಲ್ಲ.

ಜಜ್ : (ಕೇಬಿಗೆ) ಆರ್ಡರ್ ಆರ್ಡರ್. ಬಾಯ್ಮುಚ್ಚಲೇ ಬೋಳೀ ಮಗನ. ಕಣ್ಣಾಗೇನ ಉಚ್ಚಿ ಬರತಾವ? ಪ್ರೊಸೀಡ್…

ಶಿವಣ್ಣ : ಆದ್ಯಾಕೆ ಈ ಹೂ ಅಳತಾ ಇವೆ ಅಂತ ವಿಚಾರ ಮಾಡಿದೆ.

ಕೇಬಿ : ಮಿಲಾರ್ಡ್ ಈತ ವಿಚಾರ ಮಾಡಿದ್ದರಿಂದ ಬುದ್ದಿಜೀವೀನೇ! ಬುದ್ದಿಜೀವಿ ಆದ್ದರಿಂದ ದೇಶದ್ರೋಹೀನ ಇರಬೇಕು.

ಜಜ್ : ಬಾಯ್ಮುಚ್ಚತೀಯ, ಇಲ್ಲಾ ಬಾಯಾಗ ಹೇಲಂತೀಯ? ಪ್ರೊಸೀಡ್..

ಶಿವಣ್ಣ : ಹೀಗೆ ವಿಚಾರ ಮಾಡ್ತ ಮುಂದೆ ಹೋಗ್ತಿರಬೇಕಾದರೆ ವಿಚಿತ್ರೋ ವಿಚಿತ್ರಸಿಳ್ಳು ಕೇಳಿಸ್ತು. ನನ್ನನ್ನ ಯಾರೋ ಬೇಟೆ ಆಡೋದಕ್ಕೆ ಹೊಂಚಿ‌‌ದಾರೆ ಅನ್ನಿಸ್ತು. ಆವಾಗ ಗಾಬರಿ ಆಯ್ತು.

ಜಜ್ : ಎಲಾ ಕೇಬಿ, ನನ್ನ ಮಗನ, ಪಾಪ ಇವನ ಕನಸಿನಾಗೂ ನುಗ್ಗಿದ್ದೇನೋ?

ಕೇಬಿ : (ಹೆಮ್ಮೆಯಿಂದ) ಅದಕ್ಕೇ ನನಗೆ ವಿಷಯ ತಿಳಿಯೋದು ಮಿಲಾರ್ಡ್. ಮುಂದೆ ಹೇಳು.

ಶಿವಣ್ಣ : ಏನು ಮಾಡೋದು? ಓಡಿ ಬಿಡಲೇ-ಅಂತ ಆ ಕಡೆ ಈ ಕಡೆ ನೋಡಿದೆ. ಇನ್ನೇನು ಹೆಜ್ಜೆ ಇಡಬೇಕು-ಅಷ್ಟರಲ್ಲಿ ಯಾರೋ ನನ್ನ ಭುಜ ತಟ್ಟಿದರು. ತಿರುಗಿ ನೋಡಿದೆ, ಒಬ್ಬ ಬಿಳೀ ಮುದುಕಾ ನಗತಾ ನಿಂತಿದ್ದ.

ಜಜ್ : ಮುದುಕ ನಿಂತಿದ್ದ?

ಶಿವಣ್ಣ : ಹೌದು.

ಜಜ್ : ಹೆಂಗಿದ್ದ?

ಶಿವಣ್ಣ : ಸೊಂಟದ ಸುತ್ತ ಚಿಂದಿ ಬಟ್ಟೆ ಸುತ್ತದ್ದ. ಚಷ್ಮ ಇದ್ದಂಗಿತ್ತು. ಇಷ್ಟು ನೆನಪಿದೆ.

ಕೇಬಿ : ತಲೆ ಮೇಲೆ ಗಾಂಧೀಟೋಪಿ ಇತ್ತ?

ಶಿವಣ್ಣ : ನನ್ನ ತಲೆ ಮೇಲಿತ್ತು.

ಕೇಬಿ : ಮಿಲಾರ್ಡ್ ಗಾಂಧೀಟೋಪಿ ಹಾಕೋದು ಕಾನೂನು ಪ್ರಕಾರ ದೇಶದ್ರೋಹ.

ಜಜ್ : ಸುಮ್‌ಕಿರೋ ಮಂಗ್ಯಾನ ಮಗನ, ಏನಲೇ ನಿನ್ನ ಕನಸಿನಾಗ ಮಹಾತ್ಮಗಾಂಧೀ ಬಂದಿದ್ದನ?

ಶಿವಣ್ಣ : ಗಾಂಧಿ ಥರ ಇ‌‌ದ್ದ!

ಜಜ್ : ಗಾಂಧೀ ಪಿಕ್ಚರ್ ಬಂದಿತ್ತಲ್ಲ. ಆ ಗಾಂಧೀ ಹಾಂಗಿದ್ದನ? ಇಲ್ಲಾ ಹಳೀ ಪೋಟೋದಾಗಿನ ಗಾಂಧೀ ಹಾಂಗಿದ್ದನ? ಖರೇ ಹೇಳು. ನಿನ್ನ ಕನಸಿನಾಗ ಯಾವ ಗಾಂಧಿ ಬಂದಿದ್ದ? ಯಾಕಂದರ ಈಗೀಗ ಭಾಳ ಮಂದಿ ಗಾಂಧೀ ಆಗ್ಯಾರ.

ಶಿವಣ್ಣ : ಚರಿತ್ರೆ ಪುಸ್ತಕದಲ್ಲಿರೋ ಪೋಟೋ ಥರ ಇದ್ದರು.

ಜಜ್ : ಕತ್ತೀಮಗನ, ಮಹತ್ಮಾಗಾಂಧೀ ಅಂದರ ಅವನs. ಆರ್ಡರ್ ಆರ್ಡರ್. ಇನ್ನ ಮುಂದ ಮುದುಕ ಮುದುಕ ಅನ್ನಬೇಕಾದಲ್ಲಿ ಗಾಂಧೀ ಗಾಂಧೀ ಅನ್ನು. ಅಪ್ಪಿ ತಪ್ಪಿ ಮುದುಕ ಅಂದರ ಸಜೀವ ಶಿಕ್ಷಾ ಕೊಡತೀನಿ. ಹುಷಾರ್! ಮುಂದ ಹೇಳು.

ಶಿವಣ್ಣ : ಮುದುಕ ಅಂದರ ಗಾಂಧೀ ಹೇಳಿದರು: ಈ ದೇಶದಲ್ಲಿ ದಶಾವತಾರವಾದ ಕಾರಣ ಬೇಕೆ? ಹಾಗಿದ್ದರೆ ಅಲ್ಲಿಗೆ ಹೋಗು ಅಂತ ಎದುರಿಗೆ ಬೆರಳು ತೋರಿದರು. ಎದುರಿಗೊಂದು ಅರಮನೆ, ಝಗಮಗಾಂತ ಹೊಳೀತಿತ್ತು. ಆದರೆ ಹೊರಗಡೆ ಒಬ್ಬರೂ ಇರಲಿಲ್ಲ. ಸೀದಾ ಒಳಗ್ಹೋದೆ. ಒಳಗೂ ಜನ ಇರಲಿಲ್ಲ. ಅಲ್ಲೊಂದು ಸಿಂಹಾಸನ. ಅದರ ಮೇಲೊಂದು ಮುದಿಕೀ ಹೆಣ ಕೂತಿತ್ತು. ಆಕೆ ಭುಜದ ಮೇಲೆ ಒಂದು ಕಾಗೆ ಕೂತು ಕುಕ್ಕಿ ಕುಕ್ಕಿ ಅವಳ ಕಣ್ಣಿನ ಪಿಸುರು ತಿಂತಿತ್ತು!

ಜಜ್ : ಇದೊಳ್ಳೇ ಹಿಚ್‌ಕಾಕ್ ಪಿಚ್ಚರಧಾಂಗೈತಲ್ಲೊ! ನೀ ಪತ್ತೇದಾರಿ ಕಾದಂಬರಿ ಭಾಳ ಓದತೀಯೇನು?

ಶಿವಣ್ಣ : ಇಲ್ಲ ಸ್ವಾಮಿ,

ಜಜ್ : ನೀ ಮುದುಕೀ ಹೆಣದ ಮುಂದ ನಿಂತಿದ್ದೆಲ್ಲ. ಆಗ ಗಾಂಧೀ ಏನ ಮಾಡತಿದ್ದ? ಗೆಣಸ ಕೆರೀತಿದ್ದನೇನು?

ಶಿವಣ್ಣ : ಅವರು ಯಾವಾಗಲೋ ಮೌನವಾಗಿದ್ದರು ಸ್ವಾಮಿ.

ಜಜ್ : ಗಾಂಧೀಗೆ ಮಾಯಾಮಾಟದ ವಿದ್ಯೆ ಗೊತ್ತಿತ್ತ? ಮುಂದಹೇಳು.

ಶಿವಣ್ಣ : ಆ ಮುದುಕೀ ಹೆಣ ಅಂತ ಹೇಳಿದೆ-ಅದು ನನ್ನ ಕಂಡ ಕೂಡಲೇ ಚಪ್ಪಾಳಿತಟ್ಟಿ ನಗೋದಕ್ಕೆ ಸುರುಮಾಡಿತು. ನಗುತಾ ನಗುತಾ ಹೇಳಿತು; ನನ್ನ ಆತ್ಮಕ್ಕೆ ಒಂದೂ ಬಿಳಿ ಕೂದಲಿಲ್ಲ. ನಾನೀಗ ಮತ್ತೆ ಇಪ್ಪತ್ತರ ಯುವತಿ. ನಿನಗೆ ಬೇಕಿದ್ದರೆ ಮತ್ತೆ ಪಶುವಿನ ಮಾಂಸವಾಗಬಲ್ಲೆ. ಪಾಪ ಮಾಡಿದವರು ಪಾಪದ ಬಗ್ಗೆ ಹೇಸಿಕೊಳ್ಳುವಷ್ಟು ಹಾಡು ಹೇಳಬಲ್ಲೆ, ಬಾ…ರಾಜಾ ಬಾ”…. ಅಂತಂದ್ಲು.

ಜಜ್ : ಯಾರು? ಆ ಮುದಿಕೀನ?

ಶಿವಣ್ಣ : ಹೌದು ಸ್ವಾಮಿ.

ಜಜ್ : ನೀನೇನ್ ಮಾಡದಿ? ಕರದ ಕೂಡ್ಲೆ ಹೋಗಿಬಿಟ್ಟೆಯಾ?

ಶಿವಣ್ಣ : ಸಾಧ್ಯವೇ ಸ್ವಾಮಿ? ಅವಳೋ ಭಯಕಂರ ಹೆಣ. ನನಗೋ ಭಯ, ಕಿರಚಬೇಕಂದರೆ ಧ್ವನಿ ಇಲ್ಲ. ಓಡಬೇಕೆಂದರೆ ಕಾಲೇಳಲಿಲ್ಲ. ಮುದುಕಿ ಕೂತಲ್ಲಿಂದಲೇ ಕೈಚಾಚಿ ನನ್ನ ಕತ್ತು ಹಿಸುಕಿದಳು!

ಜಜ್ : ಆಮ್ಯಾಲೆ?

ಶಿವಣ್ಣ : ಕೊನೆಗೆ ನನ್ನ ಕೈಗೆ ಹ್ಯಾಗೋ ಅವಳ ಕತ್ತು ಸಿಕ್ಕಿತು. ಹಿಡಿದು ದೂಕಿದೆ. ಜೋಲಿತಪ್ಪಿ ಬಿದ್ದಳು. ತಕ್ಷಣ ಎಚ್ಚರಾಯ್ತು.

ಕೇಬಿ : ಇದೆಲ್ಲ ಸುಳ್ಳು ಮಿಲಾರ್ಡ್. ಅವಳು ಇವನ ಕತ್ತಿಗೆ ಕೈಹಾಕಿದ್ದು ಸುಳ್ಳು.

ಜಜ್ : ಲೇ ಕೇಬಿ, ಯಾಕ ಗಂಟಲಾ ಹರಕೋತಿಯೋ ಜಜ್‌ಮೆಂಟಾಗಲೇ ಬರದಾಗೇತಿ, ಯಾಕ ಗದ್ದಲಾ ಹಾಕತಿ?

ಕೇಬಿ : ಜಜ್ಮ್‌ಮೆಂಟಾಗಲೇ ಬರದಾಗಿದೆಯೆ?

ಜಜ್ : ನಾ ಬರದಿಲ್ಲವೋ-ಮ್ಯಾಲಿನವರು ಬರದು ಸೈಕ್ಲೋಸ್ಟೆಯಿಲ್‌ ಮಾಡಿ ಸಾವಿರ ಕಾಪಿ ಕಳಿಸ್ಯಾರ. ಸೈಹಾಕಿ ಓದೋದಷ್ಟ ನನ್ನ ಕೆಲಸ. ಘನಶಾಣ್ಯಾ ಮಗ ನಾನು ಮತ್ತ! ಅಷ್ಟೂ ಕಾಪಿಗೆ ಆಗಲೇ ಸೈಹಾಕಿ ಬಿಟ್ಟೀನಿ.

ಕೇಬಿ : ಮಿಲಾರ್ಡ್ ಈ ಕೇಸಿನ ಬಗ್ಗೆ ಏನ ಜಜ್‌ಮೆಂಟ್ ಬರದೀರಿ?

ಜಜ್ : ಕೇಳು; ಈ ಸೂಳೀಮಗ, ಹೆಸರು ಪಿ.ಎನ್.ಶಿವರಾಮ ದೇಶದ್ರೋಹಿ ಇದ್ದಾನ. ಇವಗ ಆಜನ್ಮ ಪರ್ಯಂತ ಕಠಿಣ ಸಜಾ ಸಿಗತಕ್ಕದ್ದು. ಇವಗ ಹಿಂಗ್ಯಾಕ ಶಿಕ್ಷಾ ಕೊಟ್ಟಿರಿ ಅಂತ ಯಾರಾದರೂ ಕೇಳಿದರ ಅವರ ಮುಕಳ್ಯಾಗ ಗೂಟಾ ಬಡೀ ತಕ್ಕದ್ದು. ಸಾಕೇನ?
(ಅಷ್ಟರಲ್ಲಿ ಪಾರ್ವತಿ ಒಳಗಡೆಯಿಂದ ಕಿಟಾರನೆ ಕಿರುಚುವಳುಪೊಲೀಸು ತಪ್ಪಿತಸ್ಥನಂತೆ ಹೊರಬರುವನು,)

ಜಜ್ : ಭಾರತಾಂಬಿ ಇಲ್ಲಿಗೇ ಬಂದಳೇನ?

ಪೊಲೀಸ್ : ಅಲ್ಲ. ಇವನ ಹೆಂಡತಿ.

ಜಜ್ : ಯಾಕ ಒದರಿದಳು?

ಪೊಲೀಸ್ : ಅವಳನ್ನ ಮಾತಿನಲ್ಲಿ ಮೆಲ್ಲಗೆ ಪಾರ್ಕಿಗೆ ಕರೆದುಕೊಂಡು ಹೋಗಿದ್ದೆ. ಪಾರ್ಕಿನಲ್ಲಿ ಥರಾವರಿ ಹೂ ತೋರಿಸಿದೆ. ತೋರಿಸ್ತ ತೋರಿಸ್ತ ಅವಳು ಹಿಡಿದುಕೊಂಡಿರೋ ಹೂವನ್ನ ಅದುಮಿದೆ. ಅದು ಹರಿದ್ಹೋಗಿ ಒದರಿದಳು. ಅಷ್ಟೇ ಸ್ವಾಮಿ.