ಕನ್ನಡ ವಿಶ್ವವಿದ್ಯಾಲಯದ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗವು ಜಗಲೂರಿನ ಸರ್ಕಾರಿ ಪದವಿಪೂರ್ವ ವಿದ್ಯಾಲಯದ ಸಹಯೋಗದೊಂದಿಗೆ ಹಮ್ಮಿಕೂಂಡ ವಿಚಾರ ಸಂಕಿರಣದಲ್ಲಿ ಮಂಡಿಸಲಾದ ಲೇಖನಗಳ ಸಂಗ್ರಹವಿದು. ನಮ್ಮ ವಿಭಾಗವು ಹಮ್ಮಿಕೊಳ್ಳುತ್ತಿರುವ ಸ್ಥಳೀಯ ಚರಿತ್ರೆ ಮತ್ತು ಪುರಾತತ್ವ ಮಾಲೆ ವಿಚಾರ ಸಂಕಿರಣಗಳ ಉದ್ದೇಶ ಸ್ಥಳೀಯ ಚರಿತ್ರೆಗೆ ಆದ್ಯತೆಯನ್ನು ನೀಡುವುದಾಗಿದೆ. ಈಗಾಗಲೇ ಸಿದ್ಧಮಾದರಿಯಲ್ಲಿರುವ ಚರಿತ್ರೆಗೆ ಬದಲು ಸ್ಥಳೀಯ, ಪ್ರಾದೇಶಿಕ ಹಾಗು ಅಲಕ್ಷಿತ ಚರಿತ್ರೆಯನ್ನು ಸ್ಥಳೀಯರ ಸಮ್ಮುಖದಲ್ಲಿ ಮಂಡಿಸಿ, ಮಥನಗೊಳಿಸಿದ ಬಳಿಕ ಅಂತಹ ಲೇಖನಗಳನ್ನು ಗ್ರಂಥರೂಪದಲ್ಲಿ ತರುವ ವಿಶಿಷ್ಟ ಪ್ರಯತ್ನವನ್ನು ವಿಭಾಗವು ಹಮ್ಮಿಕೊಳ್ಳುತ್ತಾ ಬಂದಿದೆ. ಈ ಮಾಲೆಯ ಮುಖ್ಯ ಉದ್ದೇಶ ಕರ್ನಾಟಕದ ಯಾವುದಾದರೂ ಸಾಂಸ್ಕೃತಿಕ ಸ್ಥಳವೊಂದನ್ನು ಆಯ್ಕೆ ಮಾಡಿಕೊಂಡು ಸ್ಥಳೀಯ ಹಾಗೂ ನುರಿತ ವಿದ್ವಾಂಸರ ನೆರವಿನಿಂದ ವಿವಿಧ ವಿಷಯಗಳ ಮೇಲೆ ಪ್ರಬಂಧಗಳನ್ನು ಸ್ಥಳೀಯರ ಸಮ್ಮುಖದಲ್ಲಿ ಮಂಡಿಸಿ ಮಥನಗೊಂಡ ಬಳಿಕ ಗ್ರಂಥರೂಪದಲ್ಲಿ ನೀಡುವ ಮಹತ್ತರ ಜವಾಬ್ದಾರಿಯನ್ನು ವಿಶ್ವವಿದ್ಯಾಲಯ ನಮ್ಮ ವಿಭಾಗಕ್ಕೆ ನೀಡಿದೆ. ಈ ಹಿನ್ನೆಲೆಯಲ್ಲಿ ಕುರುಗೋಡು, ಹಾನಗಲ್ಲು ಗ್ರಂಥಗಳು ಹೊರಬಂದಿದ್ದು ಉಳಿದ ಗ್ರಂಥಗಳು ಸಿದ್ಧತೆಯಲ್ಲಿವೆ.

ಜಗಲೂರು ತಾಲೂಕಿನ ಸ್ಥಳೀಯ ಚರಿತ್ರೆ ಕುರಿತು ಇದುವರೆಗೆ ಯಾವುದೇ ಸಂಶೋಧನ ಕೃತಿಗಳು ಹೊರಬಂದಿರುವುದಿಲ್ಲ. ಈ ಹಿನ್ನೆಲೆಯಲ್ಲಿ ಪ್ರಾಗಿತಿಹಾಸ ಕಾಲದಿಂದ ಆಧುನಿಕ ಕಾಲದವರೆಗೆ ಚಾರಿತ್ರಿಕ, ಸಾಂಸ್ಕೃತಿಕ ಶ್ರೀಮಂತವಾದ ಈ ಸ್ಥಳವನ್ನು ಆಯ್ಕೆ ಮಾಡಿಕೊಳ್ಳಲಾಯಿತು.

ಜಗಲೂರು ಎಂದಾಕ್ಷಣ ನೆನಪಾಗುವ ಸ್ಥಳಗಳೆಂದರೆ ಕಲ್ಲೇದೇವಪುರ, ಅಸಗೋಡು, ಬಿಳಿಚೋಡು, ಕಣಕುಪ್ಪೆ, ಚದುರಗೊಳ ಮುಂತಾದವು. ಅಸಗೋಡನ್ನು ಶಾಸನಗಳು ಅಸನಗೋಡು ಎಂದು ಕರೆದಿವೆ. ಇದು ಪ್ರಾಚೀನ ಅಶೋಕ ಪಟ್ಟಣವೆಂದೇ ಹೆಸರಾಗಿದ್ದಿತೆಂಬ ಅಭಿಪ್ರಾಯವೂ ಇದೆ. ಅಲ್ಲಿನ ಶಂಭುಲಿಂಗ, ಕಡಲೆ ಬಸವೇಶ್ವರ ದೇವಾಲಯಗಳು ಪ್ರಾಚೀನತೆಗೆ ಹಿಡಿದ ಸಾಕ್ಷ್ಯಗಳಾಗಿವೆ. ಕಲ್ಲೇದೇವಪುರವು ಶಾಸನದಲ್ಲಿ ಹೇಳುವಂತೆ ಜಮದಗ್ನಿ ಋಷಿ ಈಶ್ವರರ ಆಶ್ರಮವಾಗಿದ್ದಿತು. ಅಲ್ಲದೆ ಅಲ್ಲಿನ ಕಲಿದೇವರು, ಕಲ್ಲೇಶ್ವರ ಪ್ರಾಚೀನ ದೈವವಾಗಿದ್ದು ಪ್ರಮುಖ ಪ್ರಾಚೀನ ಶಿಕ್ಷಣ ಕೇಂದ್ರವೂ ಆಗಿದ್ದಿತು. ಇಲ್ಲಿನ ಶಾಸನದಲ್ಲಿ ಬಸವ ಎಂಬ ಹೆಸರು ಉಲ್ಲೇಖವಾಗಿರುವುದು ಚರ್ಚಾರ್ಹ ಸಂಗತಿ. ಈ ತಾಲೂಕಿನಲ್ಲಿ ಹರಿಯುವ ಜನಗಿಹಳ್ಳವು ಪ್ರಾಚೀನ ಎಡೆಗಳ ಅವಾಸಸ್ಥಾನವೇ ಹೌದು. ಈ ಹಳ್ಳವನ್ನು ಚಿನ್ನಹಗರಿಯೆಂದು ಕರೆಯಲಾಗುತ್ತಿದ್ದು, ಶಾಸನಗಳಲ್ಲಿ ಹನೆಯತೊರೆಯೆಂದು ಕರೆಯಲಾಗಿದೆ.

ಹಾಗೆಯೇ ಈ ಹಿಂದೆ ತಾಲೂಕು ಕೇಂದ್ರವಾಗಿದ್ದ ಕಣಕುಪ್ಪೆಯು ಚಿತ್ರದುರ್ಗ ಪಾಳೆಯಗಾರರ ನೆರವೀಡಾಗಿತ್ತು. ಇದಕ್ಕೆ ಅಲ್ಲಿರುವ ಕೋಟೆ ಕೊತ್ತ, ಕೆರೆ, ಬಾವಿ, ದೇವಾಲಯ ಮೊದಲಾದ ಕಟ್ಟಡಾವಶೇಷಗಳು ಇಂದಿಗೂ ಮಹತ್ವದ ಕುರುಹುಗಳಾಗಿವೆ. ೧೮೮೬ರಲ್ಲಿ ತಾಲೂಕು ಕೇಂದ್ರವನ್ನು ಕಣಕುಪ್ಪೆಯಿಂದ ಜಗಲೂರಿಗೆ ಸ್ಥಳಾಂತರಿಸಲಾಯಿತು. ಜಗಲೂರು ಎಂಬ ಹೆಸರು ಹೇಗೆ ಬಂತೆಂದು ಸ್ಥಳೀಯರನ್ನು ವಿಚಾರಿಸಿದರೆ ಇಲ್ಲಿದ್ದ ಜಗಲೂರಜ್ಜನಿಂದ ಬಂದಿದೆಯೆಂದು ಹೇಳುತ್ತಾರೆ. ಆದರೆ ೧೬ನೆಯ ಶತಮಾನದ ಹೊತ್ತಿಗೆ ಶಾಸನಗಳಲ್ಲಿ ಜಗಲೂರು ಸೀಮೆಯಾಗಿ, ಜಗಲೂರು ನಾಡಾಗಿ ಪ್ರಮುಖ ಆಡಳಿತ ಘಟಕವಾಗಿದ್ದುದು ಸ್ಪಷ್ಟವಾಗುತ್ತದೆ. ಸಾಂಸ್ಕೃತಿಕವಾಗಿಯೂ ಜಗಲೂರು ಪ್ರಸಿದ್ಧಿ ಹೊಂದಿದೆ. ಇಲ್ಲಿನ ಕಲ್ಲೇದೇವರಪುರದ ಕಲ್ಲೇಶ್ವರ ಜಾತ್ರೆ ಹಾಗೂ ಇದೇ ಸ್ಥಳದ ದನಗಳ ಜಾತ್ರೆ, ಮಡ್ರಳ್ಳಿಯ ಚೌಡೇಶ್ಚರಿ ಜಾತ್ರೆಗಳು ಪ್ರಮುಖ ಆಚರಣೆ, ಸಂಪ್ರದಾಯಗಳಿಂದ ಇಂದಿಗೂ ಜನಮಾನಸದಲ್ಲಿ ಉಳಿದುಕೊಂಡು ಬಂದಿವೆ.

ಇಂತಹ ಪ್ರಮುಖ ಸಂಗತಿಗಳನ್ನು ಗ್ರಂಥದ ಮೂಲಕ ದಾಖಲಿಸುವ ಪ್ರಯತ್ನವಾಗಿ ಸ್ಥಳೀಯ ಚರಿತ್ರೆ ಮತ್ತು ಪುರಾತತ್ವ ಮಾಲೆ ಜಗಲೂರು ಎಂಬ ವಿಚಾರ ಸಂಕಿರಣವನ್ನು ೨೦೦೮ ಏಪ್ರಿಲ್ ೨೬, ೨೭ ರಂದು ಹಮ್ಮಿಕೊಳ್ಳಲಾಗಿತ್ತು. ಈ ವಿಚಾರ ಸಂಕಿರಣ ನಡೆಯಲು ಕಾರಣಕರ್ತರು ಮಾನ್ಯ ಕುಲಪತಿಗಳಾದ ಡಾ. ಎ. ಮುರಿಗೆಪ್ಪ ಹಾಗೂ ಕುಲಸಚಿವರಾಗಿದ್ದ ಡಾ. ಹಿ.ಚಿ. ಬೋರಲಿಂಗಯ್ಯ ಅವರು. ಅವರಿಗೆ ಮೊದಲನೆಯದಾಗಿ ಕೃತಜ್ಞತೆಗಳು ಸಲ್ಲುತ್ತವೆ. ಈ ಕಾರ್ಯಕ್ರಮ ನಡೆಯಲು ವಿಭಾಗ ಪ್ರಾಧ್ಯಾಪಕರಾದ ಡಾ. ಸಿ. ಮಹದೇವ, ಡಾ. ಸಿ.ಎಸ್. ವಾಸುದೇವನ್, ಡಾ. ವಾಸುದೇವ ಬಡಿಗೇರ ಹಾಗೂ ಶ್ರೀ ರಮೇಶನಾಯಕ ಅವರಿಗೆ, ಈ ಪುಸ್ತಕ ಹೊರಬರಲು ನೆರವಾದ ಮಾನ್ಯ ಕುಲಸಚಿವರೂ, ಪ್ರಸಾರಾಂಗದ ನಿರ್ದೇಶಕರೂ ಆದ ಡಾ. ಮಂಜುನಾಥ ಬೇವಿನಕಟ್ಟಿ ಅವರಿಗೂ, ಶ್ರೀ ಬಿ. ಸುಜ್ಞಾನಮೂರ್ತಿ ಅವರಿಗೆ ಕೃತಜ್ಞತೆಗಳು.

ವಿಚಾರ ಸಂಕಿರಣದ ಸಹಯೋಗವನ್ನು ಜಗಲೂರಿನ ಸರ್ಕಾರಿ ಪದವಿಪೂರ್ವ ವಿದ್ಯಾಲಯದೊಂದಿಗೆ ಹಮ್ಮಿಕೊಳ್ಳಲಾಗಿತ್ತು. ಇದರ ಜವಾಬ್ದಾರಿಯನ್ನು ಪ್ರಾಂಶುಪಾಲರಾದ ಶ್ರೀ ಜಿ. ಕೇಶವರೆಡ್ಡಿ ಮತ್ತು ಶ್ರೀ ಬಿ.ಕೆ ಮಂಜುನಾಥ ಅವರು ವಹಿಸಿಕೊಂಡು ಯಶಸ್ವಿಗೊಳಿಸಿದ್ದಾರೆ. ಹಾಗೆಯೇ ಕಣಕುಪ್ಪೆಯ ಶ್ರೀಗಳಾದ ಪೂಜ್ಯ ಷ.ಬ್ರ.ಶ್ರೀ ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮಿಗಳ ವಿಚಾರ ಸಂಕಿರಣವನ್ನು ಉದ್ಘಾಟಿಸಿದ ಆಶೀರ್ವಚನ ನೀಡಿರುವುದು. ಅವರಿಗೆ ಹೃತ್ಪೂರ್ವಕ ಕೃತಜ್ಞತೆಗಳು. ಈ ವಿಚಾರ ಸಂಕಿರಣದಲ್ಲಿ ಸಂಶೋಧನ ಪ್ರಬಂಧಗಳ ಮಂಡನೆಯ ಜೊತೆಗೆ ಜಗಳೂರು ತಾಲೂಕಿನ ಅಭಿವೃದ್ಧಿ ಕುರುತ ಸಂವಾದವನ್ನು ಹಮ್ಮಿಕೊಳ್ಳಲಾಗಿತ್ತು. ಸಂವಾದವು ಜಗಲೂರಿನ ಜನತೆಗೆ ತಮ್ಮ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಳ್ಳಲು ಸಹಾಯಕವಾಯಿತೆಂದರೆ ತಪ್ಪಾಗಲಾರದು. ಅಲ್ಲದೆ ಜಗಲೂರು ತಾಲೂಕಿನ ಭೌಗೋಳಿಕ ಪರಿಸರ ಮತ್ತು ಪ್ರಾಗಿತಿಹಾಸ, ಇತಿಹಾಸ, ಸ್ಥಳನಾಮ, ದೇವಾಲಯ, ರಕ್ಷಣಾ ವಾಸ್ತುಶಿಲ್ಪ, ಆಡಳಿತ ವಿಭಾಗ ಮತ್ತು ಭೂಹಿಡುವಳಿ, ಕೆರೆ ನೀರಾವರಿ, ಅಸಗೋಡು ಮತ್ತು ಬಿಳಿಚೋಡು, ಕಲ್ಲೇದೇವರಪುರ, ಜೆ ಮಹಮದ್ ಇಮಾಂಸಾಬ್. ಕುಲಕಸುಬುಗಳು, ಆರ್ಥಿಕ ಅಭಿವೃದ್ಧಿಯಲ್ಲಿ ಶಿಕ್ಷಣದ ಪಾತ್ರ, ಅಭಿವೃದ್ಧಿ ಕುರಿತ ವಿಷಯಗಳನ್ನು ವಿವಿಧ ವಿದ್ವಾಂಸರು ವಿಚಾರ ಸಂಕಿರಣದಲ್ಲಿ ಮಂಡಿಸಿದರು. ಈ ಎಲ್ಲ ಮಂಡಿತ ಸಂಶೋಧನ ಪ್ರಬಂಧಗಳನ್ನು ಆಯಾ ಲೇಖಕರು ಶ್ರಮವಹಿಸಿ ಮರುರಚಿಸಿ ನೀಡಿದ್ದಾರೆ. ಇಲ್ಲಿನ ಪ್ರಬಂಧಗಳು ಜಗಲೂರು ತಾಲೂಕಿನ ಬಗೆಗೆ ಸಂಕ್ಷಿಪ್ತ ವಿವರಗಳನ್ನು ಒಳಗೊಂಡ ಸಂಶೋಧನೆಗಳೇ ಆಗಿವೆ. ಇವುಗಳನ್ನು ನೀಡಿದ ಎಲ್ಲ ಲೇಖಕರಿಗೆ ನನ್ನ ಅತ್ಯಂತ ಗೌರವದ ನೆನಕೆಗಳು ಸಲ್ಲುತ್ತವೆ. ಹಾಗೆಯೇ ಗೋಷ್ಟಿಗಳ ಅಧ್ಯಕ್ಷತೆಯನ್ನು ಡಾ. ಸಿ. ಮಹದೇವ, ಶ್ರೀ ಹುಸೇನ್ ಮಿಯಾ ಮತ್ತು ಡಾ. ದೇವರಕೊಂಡಾರೆಡ್ಡಿ ಅವರು ವಹಿಸಿಕೊಂಡು ಯಶಸ್ವಿಗೊಳಿಸಿರುವರು. ಇವರಿಗೆ ಹೃತ್ಪೂರ್ವಕ ಧನ್ಯವಾದಗಳು. ಈ ಕಾರ್ಯಕ್ರಮದ ಯಶಸ್ವಿಗೆ ಜಗಲೂರಿನ ಹಲವಾರು ಕಾರಣರಾಗಿದ್ದಾರೆ. ಜಿ.ನರೇಂದ್ರಬಾಬು, ಜಿ.ಕೆ. ರವಿಕುಮಾರ್, ಕೆ.ಎಂ. ಕರಿಬಸಪ್ಪ, ಡಿ.ಸಿ. ಮಲ್ಲಿಕಾರ್ಜುನಪ್ಪ ಮೊದಲಾದವರಿಗೆ ಧನ್ಯವಾದಗಳು ಸಲ್ಲುತ್ತವೆ. ವಿಚಾರ ಸಂಕಿರಣ ನಡೆಯಲು ಕಾರಣರಾದ ಜಗಲೂರು ನಗರದ ಸಮಸ್ತ ನಾಗರಿಕರಿಗೆ, ಈ ಪುಸ್ತಕ ಹೊರಬರಲು ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಸಹಕರಿಸಿದ ಸಮಸ್ತರನ್ನು ಹೃತ್ಪೂರ್ವಕವಾಗಿ ನೆನೆಯುತ್ತೇನೆ. ಡಿಟಿಪಿಯಲ್ಲಿ ನೆರವಾದ ಶರಣಪ್ಪ, ವಿಭಾಗದ ಶ್ರೀಮತಿ ದಿಲ್‍ಶಾದಬಾನು ಬೇಗಂ ಹಾಗೂ ಶ್ರೀ ರಮೇಶ ಅವರಿಗೆ ಧನ್ಯವಾದಗಳು ಸಲ್ಲುತ್ತವೆ.

ಡಾ. ಎಸ್.ವೈ ಸೋಮಶೇಖರ್

ದಾವಣಗೆರೆ ಜಿಲ್ಲೆ

ದಾವಣಗೆರೆ ಜಿಲ್ಲೆ

ಜಗಲೂರು ತಾಲೂಕು

ಜಗಲೂರು ತಾಲೂಕು