ಈ ಸಲ ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಪೀಠದ ೨೩ನೆಯ ಅಖಿಲ ಕರ್ನಾಟಕದ ಜಾನಪದ ಸಮ್ಮೇಲನ ಮುಂಡರಗಿಯ ಕೆ. ಆರ್. ಬೆಲ್ಲದ ಮಹಾವಿದ್ಯಾಲಯದ ಆಶ್ರಯದಲ್ಲಿ ೧೯೯೬ರ ಫೆಬ್ರವರಿ ೧೮ ಮತ್ತು ೧೯ ರಂದು ಅದ್ಧೂರಿಯಿಂದ ಜರುಗಿತು. ೧೯೭೩ರಲ್ಲಿ ಪ್ರಾರಂಭಗೊಂಡು ಶಿವರಾಮ ಕಾರಂತ, ಜಯದೇವಿತಾಯಿ ಲಿಗಾಡೆ, ದೇ. ಜವರೇಗೌಡ, ಆರ್. ಸಿ. ಹಿರೇಮಠ, ಹಾ. ಮಾ. ನಾಯಕ ಮುಂತಾದ ಹಿರಿಯ ವಿದ್ವಾಂಸರ ಅಧ್ಯಕ್ಷತೆಯಲ್ಲಿ ಮುಂದುವರಿದುಕೊಂಡು ಬಂದ ಈ ಸಮ್ಮೇಲನ, ಒಂದು ರಾಷ್ಟ್ರೀಯ ದಾಖಲೆಯಾಗಿದೆ.

ರಾಜ್ಯಮಟ್ಟದಲ್ಲಾಗಲೀ, ರಾಷ್ಟ್ರಮಟ್ಟದಲ್ಲಾಗಲೀ ಯಾವುದೇ ವಿಶ್ವವಿದ್ಯಾಲಯ ಅಥವಾ ಸಂಸ್ಥೆಗಳು ಹೀಗೆ ನಿರಂತರವಾಗಿ ಜಾನಪದ ಸಮ್ಮೇಲನ ಜರುಗಿಸುತ್ತ ಬಂದಿಲ್ಲವೆಂಬುದು ಕನ್ನಡ ಅಧ್ಯಯನ ಪೀಠಕ್ಕೆ ಚಿನ್ನದ ಕಿರೀಟ. ಈ ಸಲದ ೨೩ನೆಯ ಸಮ್ಮೇಲನಕ್ಕೆ ಅವಕಾಶ ಕಲ್ಪಿಸಿಕೊಟ್ಟುದು ಮುಂಡರಗಿಯ ಕೆ. ಆರ್. ಬೆಲ್ಲದ ಮಹಾವಿದ್ಯಾಲಯ. ಈ ಸಮ್ಮೇಲನಕ್ಕೆ ಆಯ್ಕೆ ಮಾಡಿಕೊಂಡ ವಿಷಯ “ಜನಪದ ನಂಬಿಕೆಗಳು.” ಇದರ ಸರ್ವಾಧ್ಯಕ್ಷತೆಯನ್ನು ವಹಿಸಿದವರು ಹಿರಿಯ ಜಾನಪದ ತಜ್ಞ ಎಂ. ಜಿ. ಬಿರಾದಾರ ಅವರು.

ಕನ್ನಡ ಅಧ್ಯಯನ ಪೀಠದ ಅಧ್ಯಕ್ಷ ಎಂ. ಬಿ. ನೇಗಿನಹಾಳ, ಮುಂಡರಗಿ ಕಾಲೇಜಿನ ಪ್ರಾಚಾರ್ಯ ಎಂ. ಬಿ. ಹಿರೇಮಠ ಅವರ ನೇತೃತ್ವದಲ್ಲಿ ಎಂ. ಎಂ. ಕಲಬುರ್ಗಿ, ವಿಲ್ಯಂ ಮಾಡ್ತ, ಮೊದಲಾದ ಹಿರಿಯ ಪ್ರಾಧ್ಯಾಪಕರ ಮಾರ್ಗದರ್ಶನದಲ್ಲಿ, ಕಾರ್ಯಾಧ್ಯಕ್ಷ ಬಿ. ಪಿ. ಪಾಟೀಲ, ಕಾರ್ಯದರ್ಶಿಗಳಾದ ಶಾಂತಾ ಸಣ್ಣೆಲ್ಲಪ್ಪನವರ, ಚೆನ್ನಕ್ಕ ಪಾವಟೆ ಮತ್ತು ಉಭಯ ಸಂಸ್ಥೆಗಳ ಅಧ್ಯಾಪಕ ವರ್ಗದವರ ಶ್ರಮದಲ್ಲಿ ಈ ಸಮ್ಮೇಲನ ಅಚ್ಚುಕಟ್ಟಾಗಿ ರೂಪಗೊಂಡಿದ್ದಿತು.

೧೯ರ ಮುಂಜಾನೆಯ ಎಳೆಬಿಸಿಲು, ಕರಡಿಮಜಲು, ಡೊಳ್ಳು, ನಗಾರಿ ಕಹಳೆಗಳ ಮಂಗಳ ಘೋಷ, ಬಣ್ಣ ಬಣ್ಣದ ಸೀರೆಯ ನೀರೆಯರ ಸಡಗರ ಧೋತರ ರುಮಾಲುಗಳ ಯುವಕರ ಠೀವಿ, ರಂಗುರಂಗಿನ ಅಲಂಕಾರ ಹೊತ್ತು ಸಿದ್ಧವಾದ ರ್ಟ್ರಾಕ್ಟರುಗಳು. ಮೊದಲ ರ್ಟ್ರಾಕ್ಟರಿನಲ್ಲಿ ಕರ್ನಾಟಕ ಸರ್ಕಾರದ ಸಹಕಾರ ಸಚಿವ ಶ್ರೀ ಎಸ್. ಎಸ್. ಪಾಟೀಲ, ಸಮ್ಮೇಲನದ ಸರ್ವಾಧ್ಯಕ್ಷ ಎಂ. ಜಿ. ಬಿರಾದಾರ, ಕನ್ನಡ ಅಧ್ಯಯನ ಪೀಠದ ಅಧ್ಯಕ್ಷ ಎಂ. ಬಿ. ನೇಗಿನಹಾಳ, ಕೆ. ಆರ್. ಬೆಲ್ಲದ ಕಾಲೇಜಿನ ಪ್ರಾಚಾರ್ಯ ಎ. ಬಿ. ಹಿರೇಮಠ ಅವರು ರುಮಾಲು ಸುತ್ತಿ ಹಣೆಗೆ ವಿಭೂತಿ ಧರಿಸಿ ಠಾಕುಠೀಕಾಗಿ ಕುಳಿತ ದೃಶ್ಯ, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನೋಪಾದಿಯಲ್ಲಿ ಸೇರಿದ ಸಾವಿರ ಸಾವಿರ ಜನಸಮೂಹ, ಉತ್ಸಾಹದ ಕೇಕೆ ಮಹಾವಿದ್ಯಾಲಯದ ಪ್ರಾಧ್ಯಾಪಕರು, ವಿದ್ಯಾರ್ಥಿಗಳು, ನಾಗರಿಕರು, ನೆರೆಯ ಗ್ರಾಮಗಳು ಆಸಕ್ತರು ಈ ಅಭೂತಪೂರ್ವ ಮೆರವಣಿಗೆಯಲ್ಲಿ ಭಾಗವಹಿಸಿದ ದೃಶ್ಯ ಕಣ್ಮನ ಸೆಳೆಯುವಂತಿತ್ತು. ಭವ್ಯ ಸಭಾಮಂಟಪ, ಸುಸಜ್ಜಿತ ಆಸನ, ಸುಂದರ ವೇದಿಕೆ, ಚಟುವಟಿಕೆಯಿಂದ ಓಡಾಡುತ್ತಿದ್ದ ಕಾರ್ಯಕರ್ತರು, ಜಾನಪದ ವಿದ್ವಾಂಸರು, ಕಲಾವಿದರು, ಗಣ್ಯ ನಾಗರಿಕರು, ಅಧಿಕಾರಿಗಳು, ಆಸಕ್ತ ಗ್ರಾಮೀಣರು ಮೊದಲಾದವರಿಂದ ಸಭಾಮಂಟಪ ತುಂಬಿ ತುಳುಕುತ್ತಲಿದ್ದಿತು.

ಮಾನ್ಯ ಸಚಿವರಾದ ಶ್ರೀ ಎಸ್. ಎಸ್. ಪಾಟೀಲ ಅವರು ದೀಪ ಬೆಳಗುವುದರ ಮೂಲಕ ಸಮ್ಮೇಳನವನ್ನು ಉದ್ಘಾಟಿಸುತ್ತ ೧೯ನೆಯ ಜಾನಪದ ಸಮ್ಮೇಲದಲ್ಲಿ ಮಂಡಿತವಾಗಿದ್ದ ಪ್ರಬಂಧಗಳ ಸಂಕಲನವಾದ ‘ಜಾನಪದ ಸಾಹಿತ್ಯ ದರ್ಶನ’ ಗ್ರಂಥವನ್ನು ಬಿಡುಗಡೆ ಮಾಡಿದರು. ಅಧ್ಯಕ್ಷತೆಯನ್ನು ವಹಿಸಿದ್ದ ಎಂ. ಬಿ. ಬಿರಾದಾರ ಅವರು ಕರ್ನಾಟಕದಲ್ಲಿ ನಡೆದ ಜಾನಪದ ಅಧ್ಯಯನದ ಗೆಲುವು ಸೋಲುಗಳನ್ನು, ಕನ್ನಡ ವಿಭಾಗಗಳಿಗೆ ಅದರಿಂದಾದ ಲಾಭ ಹಾನಿಗಳನ್ನು, ಭವಿಷ್ಯದಲ್ಲಿ ಅದು ತುಳಿಯಬೇಕಾದ ಸರಿಯಾದ ದಾರಿಯನ್ನು, ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಡಂಗುರ ಹೊಡೆದಂತೆ ವ್ಯಕ್ತಪಡಿಸಿದರು.

೧೮ ಮತ್ತು ೧೯ ಎರಡೂ ದಿನ ಸಂಜೆ ರಂಗುರಂಗಿನ ರಂಗದರ್ಶನ ಕಾರ್ಯಕ್ರಮ ಜರುಗಿದವು. ತೊಗಲು ಗೊಂಬೆ, ಗೊಂದಲಿಗರ ಮೇಳ, ಬಯಲಾಟ, ಕರಡಿಮಜಲು, ಕೋಲಾಟ, ಹೆಜ್ಜೆಮೇಳ ಮೊದಲಾದ ವೈವಿಧ್ಯಮಯ ಕಲಾ ಪ್ರದರ್ಶನಗಳು ಜರುಗಿದವು. ಜೊತೆಗೆ ಈ ವರೆಗೆ ಎಲ್ಲೂ ಕಂಡು ಬಾರದ ಚಾಪಕೊಡ್ಲಿಯ ನೃತ್ಯ ಮುಂಡರಗಿ ಜನತೆಯನ್ನು ಮಂತ್ರಮುಗ್ಧರನ್ನಾಗಿಸಿತು.

ಸಮ್ಮೇಳನದಲ್ಲಿ ಒಟ್ಟು ಹದಿಮೂರು ಪ್ರಬಂಧಗಳು ಬೇರೆ ಬೇರೆ ವಿದ್ವಾಂಸರಿಂದ ಮಂಡಿಸಲ್ಪಟ್ಟವು. ಅವನ್ನೆಲ್ಲ ಈ ಸಂಪುಟದಲ್ಲಿ ಅಳವಡಿಸಲಾಗಿದೆ. ಹಿಂದಿನ ಜಾನಪದ ಸಾಹಿತ್ಯ ದರ್ಶನ ಸಂಪುಟಗಳ ಪ್ರಸ್ತುತ ನಂಬಿಕೆಗಳನ್ನು ಕುರಿತಾದ ೨೩ನೆಯ ಸಂಪುಟ ಕೂಡ ಕರ್ನಾಟಕದ ಸಂಸ್ಕೃತ ಮತ್ತು ಜಾನಪದದಲ್ಲಿ ಆಸಕ್ತಿಯುಳ್ಳ ಎಲ್ಲರಿಗೂ ಪ್ರಿಯವೆನಿಸುವುದೆಂಬುದು ನಮ್ಮ ಹಾರೈಕೆ.

ಮುಂಡರಗಿಯ ಸಮ್ಮೇಲನವನ್ನು ಹಮ್ಮಿಕೊಳ್ಳುವಲ್ಲಿ ಪರಮಪೂಜ್ಯ ಶ್ರೀ ಜಗದ್ಗುರು ಅನ್ನದಾನೀಶ್ವರ ಮಹಾಸ್ವಾಮಿಗಳು ಸಂಸ್ಥಾನಮಠ ಮುಂಡಗರಿ, ಅವರ ಮಾರ್ಗದರ್ಶನ ಮತ್ತು ಅವರು ನೀಡಿದ ಉದಾರಾಶ್ರಯ ಅವಿಸ್ಮರಣೀಯ. ಅದೇ ರೀತಿ ನಮ್ಮ ಸಹಕಾರ ಸಚಿವರಾದ ಮಾನ್ಯ ಶ್ರೀ ಎಸ್. ಎಸ್. ಪಾಟೀಲ ಅವರ ಸಹಾಯ ಸಹಕಾರಗಳು ಇಲ್ಲದೇ ಹೋಗಿದ್ದಲ್ಲಿ ಅಷ್ಟೊಂದು ಅದ್ಧೂರಿಯಾಗಿ ಸಮ್ಮೇಳನ ನಡೆಯುತ್ತಿರಲಿಲ್ಲ. ನಮ್ಮ ಕುಲಪತಿಗಳಾಗಿದ್ದ ಎಸ್. ರಾಮೇಗೌಡ ಮತ್ತು ಕುಲಸಚಿವರಾಗಿದ್ದ ಶ್ರೀ ರಜನೀಶ್ ಗೋಯಲ್ ಅವರ ಸಹಕಾರ ಹಸ್ತವನ್ನು ನಾವು ಎಂದೂ ಮರೆಯುವಂತಿಲ್ಲ. ಮುಂಡರಗಿಯ ಕೆ.ಆರ್. ಬೆಲ್ಲದ ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ. ಎ.ಬಿ. ಹಿರೇಮಠ, ಶ್ರೀ ಅನ್ನದಾನೀಶ್ವರ ಪದವಿಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ. ಶ್ರೀ ಪಾಟೀಲ ಮತ್ತು ಅವರ ಎಲ್ಲ ಸಹೋದ್ಯೋಗಿಗಳು ಮುಂಡರಗಿಯ ಹಲವಾರು ಗಣ್ಯ ಮಹನೀಯರು ಇವರೆಲ್ಲ ಸಮ್ಮೇಳನದ ಯಶಸ್ವಿಗಾಗಿ ಹಗಲಿರುಳು ದುಡಿದಿದ್ದಾರೆ. ಮುಂಡಗರಿ ಪರಿಸರದ ಹಲವಾರು ಜಾನಪದ ಕಲಾಕಾರರು ಸಮ್ಮೇಳನದ ಯಶಸ್ವಿಗೆ ಸಾಕಷ್ಟು ಶ್ರಮವಹಿಸಿದ್ದಾರೆ. ನಮ್ಮ ಕೋರಿಕೆಯಂತ ೧೩ ಜನ ಖ್ಯಾತ ವಿದ್ವಾಂಸರು ಪ್ರಬಂಧಗಳನ್ನು ಮಂಡಿಸಿದ್ದಾರೆ. ಮುಖ್ಯವಾಗಿ ಪ್ರಸಿದ್ಧ ಜಾನಪದ ತಜ್ಞರಾದ ಮ. ಗು. ಬಿರಾದಾರ ಸರ್ವಾಧ್ಯಕ್ಷರಾಗಿ ಬಂದು ಸಮ್ಮೇಳನ ಕಳೆ ಕಟ್ಟಲು ಕಾರಣರಾಗಿದ್ದಾರೆ. ಈ ಎಲ್ಲರಿಗೂ ನಮ್ಮ ಹಾರ್ದಿಕ ಕೃತಜ್ಞತೆಗಳು.

ಬಿ.ಪಿ. ಪಾಟೀಲ
ಸಂಪಾದಕರು
ಧಾರವಾಡ