‘ಜನಪದ ನುಡಿಗಟ್ಟುಗಳ ಕೋಶ’ ಎಂಬ ಈ ಕೃತಿ ವೈಜ್ಞಾನಿಕ ಅಡಿಪಾಯದ ಮೇಲೆ ಪಡಿಮೂಡಿದೆ ಎಂಬುದು ನನ್ನ ದೃಢವಾದ ನಂಬಿಕೆ. ಏಕೆಂದರೆ ಪ್ರತಿಯೊಂದು ನುಡಿಗಟ್ಟಿನ ಅರ್ಥ. ನಿಷ್ಪತ್ತಿ ಹಾಗೂ ಅದರ ಸಾಂದರ್ಭಿಕ ಹುಟ್ಟಿನ ವಿವರವನ್ನು ದಾಖಲಿಸುತ್ತಲೇ ಹೆಚ್ಚು ಸ್ಫಟಿಕ ಸ್ಪಷ್ಟಗೊಳಿಸುವಂತೆ ಕೊನೆಯಲ್ಲಿ ಒಂದು ಪ್ರಯೋಗವನ್ನೂ ನೀಡಿದ್ದೇನೆ. ಈ ಪ್ರಯೋಗದಲ್ಲಿ ಜನಪದ ಸಂಸ್ಕೃತಿಯ ಜೇಂಗೊಡವೇ ತೊಟ್ಟಿಕ್ಕಿದಂತೆ ಜನಪದ ಗಾದೆಗಳು, ಒಗಟುಗಳು, ಬೈಗುಳಗಳು ತುಂಬ ಸಹಜಸುಂದರವಾಗಿ ಹೊರಹೊಮ್ಮಿರುವುದರಿಂದ ಓದುಗರು ಮಂತ್ರಮುಗ್ಧರಾಗಿ ಪುಳಕಿತರಾಗಿ ಪರವಶರಾಗಿಬಿಡುವಂಥ ಸಾಧ್ಯತೆ ಉಂಟು. ಒಟ್ಟಿನಲ್ಲಿ ಈ ಕೃತಿಯ ಓದು ನೀರಸವಾಗಿರದೆ ರಸಭರಿತವಾಗಿದೆ ಎಂಬ ಧನ್ಯತಾಭಾವ ಓದುಗರಲ್ಲಿ ಮೂಡದಿರದು ಎಂದು ಭಾವಿಸಿದ್ದೇನೆ.

‘ಜನಪದ ನುಡಿಗಟ್ಟುಗಳ ಕೋಶ’ದಂಥ ಸಾಹಸಕಾರ್ಯಕ್ಕೆ ಕೈ ಹಾಕಲು ಮುಖ್ಯಕಾರಣವೆಂದರೆ : ಜಾನಪದ ಜೀವನದ ಹಲವಾರು ಮುಖಗಳ ಅಗಾಧ ಅನುಭವ ಸಾಂದ್ರತೆ ಹಾಗೂ ಸಂಶೋಧನಾಸಕ್ತಿಯ ತೀವ್ರತೆಯುಳ್ಳ ಜಾನಪದ ತಜ್ಞರು ಇಂಥ ಹಲವಾರು ನುಡಿಗಟ್ಟುಗಳ ಮೇಲೆ ಬೆಳಕು ಚೆಲ್ಲದಿದ್ದರೆ ಮುಂದಿನ ಪೀಳಿಗೆಗೆ ಇವು ಕಬ್ಬಿಣದ ಕಡಲೆಯಾಗಿಬಿಡುವ ಸಂಭವವುಂಟು ಎಂಬ ಅನಿಸಿಕೆ ಉದಾಹರಣೆಗೆ ‘ಅಕ್ಕಲಾಯವಾಗಿ ಸಿಕ್ಕು’ (ಬಿಟ್ಟಿಯಾಗಿ ಸಿಕ್ಕು), ‘ಮನೆ ಕಾಯವಾಗ’ (ಮನೆ ಹಾಳಾಗ) ಎಂಬ ನುಡಿಗಟ್ಟುಗಳ ನಿಷ್ಪತ್ತಿ ಸಾಕಷ್ಟು ಜನರ ತಲೆ ತಿಂದಿವೆ ಎಂಬುದು ಸತ್ಯ. ಇವುಗಳ ಬಗೆಗೆ ನಾನು ಡಾ.ಹಾ.ಮಾ.ನಾಯಕರ ಹತ್ತಿರ ಪ್ರಸ್ತಾಪಿಸಿದಾಗ ಅವರು ಸ್ವಲ್ಪ ಹೊತ್ತು ಯೋಚಿಸಿ, ಕೊನೆಗೆ ಮುಗುಳ್ನಗುತ್ತಾ ತಲೆ ಅಲ್ಲಾಡಿಸಿಬಿಟ್ಟರು. ಹಾಗೆಯೇ ಡಾ.ಎಂ.ಎಂ.ಕಲಬುರ್ಗಿಯವರೂ ಸಹ ಮೇಲಕ್ಕೂ ಕೆಳಕ್ಕೂ ತಲೆಗುಮುಕು ಹಾಕದೆ ಅಡ್ಡಡ್ಡ ತಲೆಯಾಡಿಸಿಬಿಟ್ಟರು. ಇಂಥ ಭಾಷಾಶಾಸ್ತ್ರಜ್ಞರೇ, ಸಂಶೋಧಕರೇ ಹೀಗೆ ತಲೆ ಅಲ್ಲಾಡಿಸಿಬಿಟ್ಟರೆ ಯುವಪೀಳಿಗೆಯ ವಿದ್ಯಾರ್ಥಿ ವಿದ್ಯಾರ್ಥಿನಿಯರು ಅರ್ಥೈಸಿಕೊಳ್ಳುವ ಬಗೆಯೆಂತು ಎಂಬ ಯೋಚನೆ ಬಲವಾಗಿ ಕಾಡತೊಡಗಿತು. ಆಗ ನಾನು ಅವುಗಳ ಮೇಲೆ ಎಡಬಿಡದೆ ಕಾವು ಕೂತೆ. ಕಾವುಗೊಂಡ ಭಾವಜೀವ ತಳೆಯುವಂತೆ, ನುಡಿಗಟ್ಟುಗಳ ಮೊಟ್ಟೆಯೊಡೆದು ನಿಜನಿಷ್ಪತ್ತಿಯ ‘ಹೂಮರಿ’ಗಳು ಹೊರಬರತೊಡಗಿದವು.

ಬೆಳೆಯ ಕೊಯ್ಲು ಆದ ಮೇಲೆ ಕೆಳಗುದುರು ತೆನೆ, ಕಾಯಿ, ಕಾಳುಕಡಿಗಳಿಗೆ ‘ಹಕ್ಕಲು’ ಎನ್ನುತ್ತಾರೆ. ಕೆಲವು ಕಡೆ ‘ಹಂಕಲು’ ಎನ್ನುತ್ತಾರೆ ಎಂದು ಕೇಳಿದ್ದೇನೆ. ಅವುಗಳನ್ನು ಯಾರು ಬೇಕಾದರೂ – ಬಡವರು, ತಿರುಕರು, ಅಲೆಮಾರಿಗಳು – ಆಯ್ದುಕೊಳ್ಳಬಹುದು. ಜಮೀನಿನ ಒಡೆಯರಿಗೆ ಅವುಗಳ ಮೇಲೆ ಹಕ್ಕಿರುವುದಿಲ್ಲ. ಆದ್ದರಿಂದ ಪುಕಸಟ್ಟೆ ಸಿಕ್ಕುವಂಥವು. ಈ ಹಿನ್ನೆಲೆಯಲ್ಲಿ ‘ಅಕ್ಕಲಾಯವಾಗಿ ಸಿಕ್ಕು’ ಎಂಬ ನುಡಿಗಟ್ಟಿನ ನಿಜ ನಿಷ್ಪತ್ತಿ ‘ಹಕ್ಕಲು ಆಯುವಾಗ ಸಿಕ್ಕು’ ಎಂದು; ಅರ್ಥಾತ್ ಬಿಟ್ಟಿಯಾಗಿ ಸಿಕ್ಕು ಎಂದರ್ಥ. ಆದರೆ ‘ಮನೆ ಕಾಯುವಾಗ’ ಎಂಬ ನುಡಿಗಟ್ಟಿನ ನಿಷ್ಪತ್ತಿ ಬಡಪೆಟ್ಟಿಗೆ ಬಾಯಿಬಿಡುವಂಥದಲ್ಲ: ಮೂರು ಹಿಡಿದರೆ ಮಾತ್ರ ಬಾಯಿ ಬಿಡುವಂಥದು. ಸಾಮಾನ್ಯವಾಗಿ ಮಕ್ಕಳು ಕಾರ ಎಂಬುದನ್ನು ಕಾಯ ಎಂದೂ, ಸಾರು ಎಂಬುದನ್ನೂ ಸಾಯು ಎಂದೂ, ಗಾಳಿಪಟದ ಬಾಲಂಗೋಸಿಯನ್ನು ಬಾಯಂಗೋಸಿ ಎಂದೂ ಉಚ್ಚರಿಸುತ್ತವೆ. ‘ರ’ ಕಾರ ಮತ್ತು ‘ಲ’ ಕಾರಕ್ಕೆ ‘ಯ’ ಕಾರ ಬಂದಿರುವುದನ್ನು ಕಾಣುತ್ತೇವೆ. ಈ ಹಿನ್ನೆಲೆಯಲ್ಲಿ ‘ಕಾಯುವಾಗ’ ಎಂಬುದರ ಮೂಲರೂಪ ‘ಕಾಲವಾಗ’ ಎಂಬುದನ್ನು ಸುಲಭವಾಗಿ ಊಹಿಸಬಹುದು. ‘ಕಾಲುವಾಗು’ ಮೂಲರೂಪ ‘ಕಾಲುವಾಗ’ ಎಂಬುದನ್ನು ಸುಲಭವಾಗಿ ಊಹಿಸಬಹುದು. ‘ಕಾಲುವಾಗು’ ಮೂಲರೂಪ ‘ಕಾಲವಾಗ’ ಎಂಬುದನ್ನು ಸುಲಭವಾಗಿ ಊಹಿಸಬಹುದು. ‘ಕಾಲುವಾಗು’ ಮೂಲರೂಪ ‘ಕಾಲುವಾಗ’ ಎಂಬುದನ್ನು ಸುಲಭವಾಗಿ ಊಹಿಸಬಹುದು. ‘ಕಾಲವಾಗು’ ಎಂದರೆ ನಾಶವಾಗು, ಹಾಳಾಗು, ಮರಣಹೊಂದು ಎಂದರ್ಥ. ಆದ್ದರಿಂದ ‘ಮನೆ ಕಾಯವಾಗ’ ಎಂಬುದಕ್ಕೆ ಮನೆ ಹಾಳಾಗ ಎಂಬ ಅರ್ಥವನ್ನು ಸುಲಭವಾಗಿ ಗ್ರಹಿಸಬಹುದು – ‘ಕಾಲವಾಗು’ ಎಂಬ ಮೂಲರೂಪದಿಂದ.

ಈ ಕೃತಿಯಲ್ಲೇ ಇರುವ ‘ಇಬ್ಬಳ ಕೊಟ್ಟು ಇಕ್ಕಳ ಪೀಕಿಸು’ (ಒಂದು ಕೊಟ್ಟು ಎರಡು ಕೀಳು, ಸೂಜಿ ಹಾಕಿ ದಬ್ಬಳ ತೆಗಿ) ಎಂಬ ನುಡಿಗಟ್ಟಿನ ಅರ್ಥ ಹಾಗೂ ನಿಷ್ಪತ್ತಿಯ ಸಹಾಯದಿಂದ ವಚನಕಾರ ಕೀಲಾರದ ಭೀಮಣ್ಣನ (ಸಂಕೀರ್ಣ ವಚನ ಸಂಪುಟ – ೨)

ಇಮ್ಮನ ಹತ್ತಿಯ ಕಾಳ ಸುರಿದು ಪಶು ಮೇವುತ್ತಿರಲಾಗಿ
ಒಮ್ಮನವ ಮೇದು ಇಮ್ಮನ ಉಳಿಯಿತು
ಅದ ಸುಮ್ಮಾನದಲಿ ಕರೆಯ ಹೋಗಲಿಕೆ
ಅಂಡೆಯಲ್ಲಿ ಐಗುಳವ ಕರೆದು
ಕಂದಲಲ್ಲಿ ಸುರಿಯಲಾಗಿ ಮೂಗುಳವಾಯಿತ್ತು
ಆ ಮೂಗುಳದ ಒಲೆಯ ದೆಸೆಯಲ್ಲಿರಿಸಲಿಕೆ
ಕಾಸೂಡಕ್ಕೆ ಮುನ್ನವೆ ನಾಶವಾಯಿತ್ತು
ಇಂತೀ ಈಶ್ವರ ವಿಶ್ವಾಸದಲ್ಲಿ ಆತ್ಮ ನಿಶ್ಚಯಿಸಲಾಗಿ
ಕಾಲಕರ್ಮವಿರಹಿತ ತ್ರಿಪುರಾಂತಕಲಿಂಗದೊಳಗಾದವನ ಇರವು

ಎಂಬ ವಚನದಲ್ಲಿ ಬರುವ ಐಗುಳ ಮತ್ತು ಮೂಗುಳ ಎಂಬ ಶಬ್ದಗಳ ಅರ್ಥ ಮತ್ತು ನಿಷ್ಪತ್ತಿಯನ್ನು ಗ್ರಹಿಸಲು ಸಹಾಯಕವಾಗುತ್ತದೆ ಎಂದು ಸಂತಸಗೊಂಡೆ. ಏಕೆಂದರೆ ಪ್ರಸಿದ್ಧ ಸಂಶೋಧಕರು. ಪ್ರಕಾಂಡ ಪಂಡಿತರು ಸಂಪಾದನ ಸಮಿತಿಯಲ್ಲಿದ್ದರೂ ಐಗುಳ ಮತ್ತು ಮೂಗುಳ ಶಬ್ದಗಳಿಗೆ ಶಬ್ದಕೋಶದಲ್ಲಿ ಅರ್ಥ ಕೊಟ್ಟಿಲ್ಲ.

ಇಬ್ಬಳ ಎಂಬುದು ಇಬ್ಬಳ್ಳ < ಇರ್‌ಬಳ್ಲ (< ಎರಡು ಬಳ್ಳ)ದಿಂದ ಬಂದದ್ದು. ಬಳ್ಳ ಎಂದರೆ ನಾಲ್ಕು ಸೇರು, ಇಬ್ಬಳ್ಳ ಎಂದರೆ ಎಂಟು ಸೇರು. ಇಬ್ಬಳ್ಳ ಎಂಬುದೇ ಜನರ ಬಾಯಲ್ಲಿ ಇಬ್ಬಳ ಆಗಿದೆ. ಅಂದರೆ ಇಬ್ಬಳ ಎಂದರೆ ಎಂಟು ಸೇರಿನ ಅಳತೆ ಪ್ರಮಾಣವುಳ್ಳ ಧಾನ್ಯ ಅಳೆಯುವ ಸಾಧನ. ಎರಡು ಇಬ್ಬಳ ಹಾಕಿದರೆ ಒಂದು ಕೊಳಗ: ಅಂದರೆ ಹದಿನಾರು ಸೇರಿನ ಅಳತೆಯ ಸಾಧನ –

ಒಂದು ಕೊಳಗ > ಒರ್ ಕೊಳಗ > ಒಕ್ಕೊಳಗ > ಒಕ್ಕಳ = ೧೬ ಸೇರು
ಎರಡು ಕೊಳಗ > ಇರ್ ಕೊಳಗ > ಇಕ್ಕೊಳಗ > ಇಕ್ಕಳ = ೩೨ ಸೇರು
ಮೂರು ಕೊಳಗ > ಮೂರ್ ಕೊಳಗ > ಮೂಗೊಳಗ > ಮೂಗಳ = ೪೮ಸೇರು
ನಾಲ್ಕು ಕೊಳಗ > ನಾಲ್ಗೊಳಗ > ನಾಗೊಳಗ > ನಾಗಳ = ೬೪ ಸೇರು
ಐದು ಕೊಳಗ > ಐಕೊಳಗ > ಐಗೊಳಗ > ಐಗಳ = ೮೦ ಸೇರು

ಮೇಲಿನ ಒಕ್ಕಳ (ಒಕ್ಕೊಳ) ಇಕ್ಕಳ (ಇಕ್ಕುಳ) ಮೂಗಳ (ಮೂಗುಳ) ನಾಗಳ (ನಾಗುಳ) ಐಗಳ (ಐಗುಳ) ಎಂಬ ಶಬ್ದಗಳು ಇವತ್ತಿಗೂ ನಮ್ಮ ಹಳ್ಳಿಗಾಡಿನ ರೈತಕುಟುಂಬಗಳಲ್ಲಿ ಪ್ರಚಲಿತವಾಗಿರುವಂಥವು. ಹನ್ನೆರಡನೇ ಶತಮಾನದ ಹಾಲುಮತದ ಪಶುಪಾಲ ವೃತ್ತಿಯ ಕೀಲಾರದ ಭೀಮಣ್ಣ ಸಹಜವಾಗಿಯೇ ಐಗುಳ ಮತ್ತು ಮೂಗುಳ ಶಬ್ದಗಳನ್ನು ಬಳಸಿದ್ದಾನೆ. ಅವುಗಳ ಬೇರು ಬಿಳಲು ಸಂಪಾದಕರಿಗೆ ಅಂದವರಿದಿಲ್ಲ ಎಂಬುದು ಪದಕೋಶದಿಂದ ಅವುಗಳು ಗಡಿಪಾರಾಗಿರುವುದರಿಂದಲೇ ಗೊತ್ತಾಗುತ್ತದೆ. ಕೆಲವು ಪ್ರದೇಶಗಳಲ್ಲಿ ಕೊಳಗಕ್ಕೆ ಹದಿನಾರು ಸೇರು ಅಲ್ಲ ಎಂಟು ಸೇರು ಎಂದು ಕೇಳಿದ್ದೇನೆ. ಆದರೆ ನನ್ನ ಊರಿನಲ್ಲಿ (ಎಣ್ಣೆಗೆರೆ, ಮಾಗಡಿ ತಾಲ್ಲೂಕು, ಬೆಂಗಳೂರು ಜಿಲ್ಲೆ) ಕೊಳಗಕ್ಕೆ ಹದಿನಾರು ಸೇರು. ಈ ವ್ಯತ್ಯಾಸಕ್ಕೆ ಕಾರಣವೆಂದರೆ ಆಯಾ ಪ್ರದೇಶದ ಅಥವಾ ಊರಿನ ಹಿರಿಯರು ಮಾಡಿದ ಕಟ್ಟುಕಟ್ಟಳೆಯಂತೆ ಸೇರುಗಳ ಸಂಖ್ಯೆ ನಿರ್ಧಾರವಾಗುತ್ತದೆ. “ತಾಯಿ ಮಾಡಿದ ಹೊಟ್ಟೆ ಊರು ಮಾಡಿದ ಕೊಳಗ” ಎಂಬ ಜನಪದ ಗಾದೆ ಇದರ ಮೇಲೆ ಬೆಳಕು ಚೆಲ್ಲುತ್ತದೆ.

ಈ ಕೃತಿಯ ಬಗೆಗೆ ಮುನ್ನುಡಿಯಲ್ಲಿ ಮೆಚ್ಚುಗೆಯ ಮಾತಾಡಿರುವ ಕನ್ನಡ ವಿಶ್ವವಿದ್ಯಾಲಯ, ಹಂಪಿಯ ಕುಲಪತಿಗಳಾದ ಡಾ.ಬಿ.ಎ.ವಿವೇಕ ರೈ ಅವರಿಗೆ, ಶೀಘ್ರವಾಗಿ ಕೃತಿ ಬರಲು ಹೆಚ್ಚು ಮುತುವರ್ಜಿ ವಹಿಸಿದ ಪ್ರಸಾರಾಂಗದ ನಿರ್ದೇಶಕರಾದ ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ ಅವರಿಗೆ ಹಾಗೂ ಸಿಬ್ಬಂದಿ ವರ್ಗದವರಿಗೆ ನನ್ನ ಕೃತಜ್ಞತೆಗಳು ಸಲ್ಲುತ್ತವೆ.

– ಸುಧಾಕರ