ಈ ಪ್ರಬಂಧದಲ್ಲಿ ಅನುಬಂಧಗಳನ್ನು ಎರಡು ಭಾಗಗಳಲ್ಲಿ ನೀಡಲಾಗಿದೆ. ಮೊದಲನೆಯ ಭಾಗದಲ್ಲಿ ಸರ್ಕಾರವು ಡಾ. ಡಿ.ಎಂ. ನಂಜುಂಡಪ್ಪ ಸಮಿತಿ ವರದಿಯಲ್ಲಿನ ಎಂಟು ವರ್ಷದ ವಿಶೇಷ ಅಭಿವೃದ್ಧಿ ಯೋಜನೆಯ ಬಾಬ್ತು ಅನುದಾನ ಹಂಚಿಕೆ ಸೂತ್ರಕ್ಕೆ ಸಂಬಂಧಿಸಿದಂತೆ ಮಾಡಿದ್ದ ತಪ್ಪನ್ನು ಸರಿಪಡಿಸುವಂತೆ ನಾವು ನಡೆಸಿದ ಪ್ರಯತ್ನದ ವಿವರಗಳಿಗೆ ಸಂಬಂಧಿಸಿದ ದಾಖಲೆಗಳನ್ನು ನೀಡಲಾಗಿದೆ. ಅವು ಲೇಖನ, ಪತ್ರ, ಮನವಿ, ಸರ್ಕಾರಿ ಆದೇಶಗಳು ಮತ್ತು ಪತ್ರಿಕಾ ವರದಿಗಳು ಮುಂತಾದವುಗಳ ರೂಪದಲ್ಲಿವೆ. ಎರಡನೆಯ ಭಾಗದಲ್ಲಿ ಅನುಬಂಧ ಕೋಷ್ಟಕಗಳಿವೆ. ಅವು ಅನೇಕ ದೃಷ್ಟಿಯಿಂದ ಕುತೂಹಲಕಾರಿಯಾಗಿವೆ, ಮಾಹಿತಿ ಪ್ರಧಾನವಾಗಿವೆ ಮತ್ತು ದಾರಿ ತೋರುವ ಕೈಮರಗಳಾಗಿವೆ. ಈ ಪ್ರಬಂಧಕ್ಕಾಗಿಯೇ ಇಲ್ಲಿನ ಕೊಷ್ಟಕಗಳನ್ನು ಸಿದ್ಧಪಡಿಸಲಾಗಿದೆ. ಹೈ.ಕ.ಪ್ರ.ಅಭಿವೃದ್ಧಿ ಬಗ್ಗೆ ಆಸಕ್ತಿ ಇರುವವರಿಗೆ ಮತ್ತು ಅದರ ಬಗ್ಗೆ ಕಾಳಜಿಯಿರುವವರಿಗೆ ಇವು ಅತ್ಯಂತ ಉಪಯುಕ್ತ ಮಾಹಿತಿಯನ್ನು, ಒಳನೋಟವನ್ನು, ಸೂಕ್ಷ್ಮ ದಿಟಗಳನ್ನು ತೆರೆದು ತೋರಿಸುತ್ತವೆ. ಈ ಅನುಬಂಧ ಕೋಷ್ಟಕಗಳಲ್ಲಿನ ಪ್ರತಿಯೊಂದು ಕೋಷ್ಟಕಕ್ಕೂ ವಿವರಣೆಯನ್ನು ಅಲ್ಲಿಯೇ ನೀಡಲಾಗಿದೆ. ಈ ಕೋಷ್ಟಕಗಳು ಚಾರಿತ್ರಿಕವಾಗಿ ಮತ್ತು ಸಮಕಾಲೀನವಾಗಿ ಹೈ.ಕ.ಪ್ರ.ದಲ್ಲಿನ ಅಭಿವೃದ್ಧಿ ಸ್ವರೂಪದ ಬಗ್ಗೆ ಬೆಳಕು ಚೆಲ್ಲುತ್ತದೆ.

ಈ ಎಲ್ಲ ವಿವಿರಗಳನ್ನು ನೀಡುವುದಕ್ಕೆ ಮತ್ತೊಂದು ಸೀಮಿತವಾದ ಉದ್ಧೇಶವೂ ಇದೆ. ಕನ್ನಡದಲ್ಲಿ ಸಮಾಜವಿಜ್ಞಾನದಲ್ಲಿ ಅಧ್ಯಯನ ಪ್ರಬಂಧವನ್ನು ಹೇಗೆ ಸಿದ್ಧಪಡಿಸಬೇಕು ಎಂಬುದಕ್ಕೆ ಮಾದರಿಯೆನ್ನುವಂತೆ ಪ್ರಸ್ತುತ ಪ್ರಬಂಧವನ್ನು ಸಿದ್ಧಪಡಿಸಲಾಗಿದೆ. ಇದು ಕೇವಲ ಒಣ ಅಧ್ಯಯನ ಪ್ರಬಂಧವಲ್ಲ. ಇದನ್ನು ಒಂದು ವಿಚಾರ ಪ್ರಣಾಲಿಕೆಯು ಚೌಕಟ್ಟಿನಲ್ಲಿ ಕಟ್ಟಲಾಗಿದೆ. ಅದಕ್ಕಾಗಿಯೇ ಇಲ್ಲಿ ಶಿಷ್ಟ – ಪರಿಶಿಷ್ಟ ಎಂಬ ಸಾಂಸ್ಕೃತಿಕ ಅಧ್ಯಯನಗಳಲ್ಲಿ ಕಂಡು ಬರುವ ಪರಿಭಾವನೆಗಳನ್ನು ಇಲ್ಲಿ ಉದ್ಧೇಶ ಪೂರ್ವಕವಾಗಿ ಬಳಸಲಾಗಿದೆ. ಇಲ್ಲಿ ಮಾಹಿತಿಯನ್ನು ಕೇವಲ ಮಾಹಿತಿಯಾಗಿ ಬಳಸಿಲ್ಲ. ಒಂದು ನಿರ್ದಿಷ್ಟ ತಥ್ಯಗಳನ್ನು ಪಡೆದುಕೊಳ್ಳಲಿಕ್ಕಾಗಿ ಅವುಗಳನ್ನು ಇಲ್ಲಿ ಬಳಸಲಾಗಿದೆ. ಈ ಪ್ರದೇಶದ ಅಭಿವೃದ್ಧಿಯು ಹೇಗೆ ದಾರಿ ತಪ್ಪಿದೆ ಎಂಬುದನ್ನು ತಿಳಿಸುವುದು ಇಲ್ಲಿನ ಕಾಳಜಿಯಾಗಿದೆ. ಅಭಿವೃದ್ಧಿಯ ನಿಜ ನಾಡಿ ಮಿಡಿತ ಯಾವುದು ಎಂಬುದನ್ನು ಹಿಡಿದಿಡುವುದಕ್ಕಾಗಿ ಇಲ್ಲಿ ಪ್ರಯತ್ನಿಸಲಾಗಿದೆ. ಇಲ್ಲಿ ಲೇಖಕ ತನ್ನ ಎಲ್ಲ ಉದ್ಧೇಶಗಳನ್ನು ಯಶಸ್ವಿಯಾಗಿ ಪೂರೈಸಿಕೊಂಡಿದ್ದಾನೆ ಎಂಬುದು ಅನುಮಾನ. ಅದನ್ನು ಇದರ ವಿಮರ್ಶಕರು ಹೇಳಬೇಕು. ಇಲ್ಲಿನ ಪ್ರಬಂಧದದ ಮಿತಿಗಳ ಬಗ್ಗೆ ನನಗೆ ಅರಿವಿದೆ. ಇದು ಒಂದು ಪ್ರಯತ್ನ. ಇದರ ದಾರಿ ಹಿಡಿದು ನಾವು ಮುಂದುವರಿಯಬಹುದಾಗಿದೆ.

ಇಲ್ಲಿನ ಅನುಬಂಧಗಳು ಇಡೀ ಕರ್ನಾಟಕಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡುತ್ತವೆ. ಆದರೆ ಅವುಗಳನ್ನು ಜಿಲ್ಲಾವಾರು ರಚಿಸಿರುವುದರಿಂದ ಅವು ಪ್ರಾದೇಶಿಕ ಚಿತ್ರವನ್ನು ನೀಡುತ್ತವೆ. ಈ ಕೋಷ್ಟಕಗಳು ಸಾಕ್ಷರತೆ, ಆರೋಗ್ಯ, ವರಮಾನ, ಜನಸಂಖ್ಯಾ ಬೆಳವಣಿಗೆ ಮತ್ತು ಲಿಂಗ ಸಂಬಂಧಗಳ ಬಗ್ಗೆ ಮಾಹಿತಿ ನೀಡುತ್ತವೆ. ಈ ಮಾಹಿತಿಯನ್ನು ಪ್ರಾದೇಶಿಕ ನೆಲೆಯಲ್ಲಿ ವರ್ಗೀಕರಿಸಿಕೊಂಡು ನೋಡುವುದಕ್ಕೆ ಅನುಕೂಲವಾಗಲೆಂದು ಕೋಷ್ಟಕಗಳಲ್ಲಿ ವಿಭಾಗವಾರು ಮಾಹಿತಿ ನೀಡಲಾಗಿದೆ.

ಹೈ.ಕ.ಪ್ರ.ದ ಅಭಿವೃದ್ಧಿಯ ಒಂದು ಸ್ಥೂಲ ಚಿತ್ರವನ್ನು ಈ ಕೋಷ್ಟಕಗಳು ನೀಡುತ್ತವೆ. ಅಭಿವೃದ್ಧಿಯ ಲಿಂಗಸಂಬಂಧಿ ನೆಲೆಗಳನ್ನು ಅರಿತುಕೊಳ್ಳಲು ಅನುಕೂಲವಾಗುವಂತೆ ಸಾಧ್ಯವಿರುವೆಡೆಯಲ್ಲಿ ಮಾಹಿತಿಯನ್ನು ಲಿಂಗವಾರು ನೀಡಲಾಗಿದೆ. ಪ್ರತಿಯೊಂದು ಕೋಷ್ಟಕಕ್ಕೆ ಆಕರವನ್ನು ನೀಡಲಾಗಿದೆ. ಇದರಿಂದಾಗಿ ಮಾಹಿತಿಯ ಖಚಿತತೆಯನ್ನು ಪರೀಕ್ಷಿಸುವುದು ಸುಲಭವಾಗುತ್ತದೆ.

ಈ ಅನುಬಂಧಗಳಲ್ಲಿನ ಕೋಷ್ಟಕಗಳನ್ನು ಮತ್ತು ಅವುಗಳು ನೀಡುವ ಅಂಕಿ – ಅಂಶಗಳನ್ನು ಆಧಾರವಾಗಿಟ್ಟುಕೊಂಡು ಹೈ.ಕ.ಪ್ರ.ದಲ್ಲಿ ಅಭಿವೃದ್ಧಿಯು ಜನರನ್ನು ಎಷ್ಟರ ಮಟ್ಟಿಗೆ ಒಳಗೊಂಡಿದೆ ಮತ್ತು ಎಷ್ಟರ ಮಟ್ಟಿಗೆ ಜನರನ್ನು ಒಳಗೊಂಡಿಲ್ಲ ಎಂಬುದನ್ನು ತಿಳಿದುಕೊಳ್ಳಬಹುದು. ಈ ಎಲ್ಲ ಸೂಚಿಗಳಲ್ಲೂ ಹೈ.ಕ.ಪ್ರ.ದ, ಅಂದರೆ ಗುಲಬರ್ಗಾ ವಿಭಾಗದ ಜಿಲ್ಲೆಗಳು ಕೊನೆಯ ಸ್ಥಾನದಲ್ಲಿರುವುದು ಕಂಡು ಬರುತ್ತದೆ. ಈ ಜಿಲ್ಲೆಗಳು ರಾಜ್ಯದಲ್ಲಿ ವರಮಾನದ ದೃಷ್ಟಿಯಿಂದ ಮತ್ತು ಮಾನವ ಅಭಿವೃದ್ಧಿ ಸೂಚಿಗಳ ದೃಷ್ಟಿಯಿಂದ – ಎರಡೂ ನೆಲೆಗಳಲ್ಲಿ ಹಿಂದಿಳಿದಿರುವುದು ಆಂತಂಕಕಾರಿ ಸಂಗತಿಯಾಗಿದೆ.

ಇಲ್ಲಿ ಮೂಲ ಪ್ರಬಂಧಕ್ಕೆ ಪೂರಕವಾಗಿ ಅನುಬಂಧ ಕೋಷ್ಟಕಗಳನ್ನು ನೀಡಲಾಗಿದೆ. ಈ ಕೋಷ್ಟಕಗಳು ಅಧ್ಯಯನದ ಭಾಗಗಳೂ ಹೌದು ಮತ್ತು ಈ ಬಗೆಯ ಅಧ್ಯಯನ ಕೈಗೊಳ್ಳುವವರಿಗೆ ಒಂದು ಮಾದರಿಯೂ ಆಗಿವೆ. ಅನೇಕ ಪ್ರಮುಖ ಸಂಗತಿಗಳನ್ನು ಇಲ್ಲಿ ಚರ್ಚಿಸಲಾಗಿದೆ. ಇದನ್ನು ಸೂಕ್ಷ್ಮವಾಗಿ ಪರಿಶೀಲಿಸುವ ಅಗತ್ಯವಿದೆ. ಮೊದಲನೆಯ ಕೋಷ್ಟಕವು ಅಕ್ಷರಸ್ಥರು ಮತ್ತು ಅನಕ್ಷರಸ್ಥರನ್ನು ಆಧಾರವಾಗಿಟ್ಟುಕೊಂಡು ಅಭಿವೃದ್ಧಿ ಸಂಬಂಧ ಒಳಗಣದವರು – ಹೊರಗಣದವರು ಎಂಬ ಸಂಗತಿಗಳನ್ನು ಅನುಬಂಧ ಕೋಷ್ಟಕ – 1ರಲ್ಲಿ ಚರ್ಚಿಸಲಾಗಿದೆ. ಎರಡನೆಯ ಕೋಷ್ಟಕದಲ್ಲಿ ವರಮಾನಕ್ಕೆ ಸಂಬಂಧಿಸಿದ ಪ್ರಾದೇಶಿಕ ನೆಲೆಗಳನ್ನು ಅನಾವರಣ ಮಾಡಲಾಗಿದೆ. ನಮ್ಮ ಮುಖ್ಯ ಮಂತ್ರಿಗಳ ಎರಡು ಮಕ್ಕಳ ನೀತಿಯ ಬಗೆಗಿನ ಸಂಗತಿಯ ಮೇಲೆ ಬೆಳಕು ಚೆಲ್ಲುವಂತಹ ಜನಸಂಖ್ಯೆಯ ಪ್ರಾದೇಶಿಕ ಸ್ವರೂಪವನ್ನು ಕುರಿತಂತೆ ಚರ್ಚಿಸಲಾಗಿದೆ. ಈ ಮೂರು ಕೊಷ್ಟಕಗಳಿಗೆ ಅಲ್ಲಿಯೇ ವಿಶ್ಲೇಷಣೆ ನೀಡಲಾಗಿದೆ. ಡಾ. ಡಿ.ಎಂ. ನಂಜುಂಡಪ್ಪ ಸಮಿತಿ ವರದಿಯ ಅನುಷ್ಟಾನದಲ್ಲಿನ ಪರಿಣಾಮಗಳನ್ನು ಸೂಕ್ಷ್ಮವಾಗಿ ಹಿಡಿದಿಡಲು ಪ್ರಯತ್ನಿಸಲಾಗಿದೆ.

ಈ ಅನುಬಂಧ ಕೋಷ್ಟಕಗಳಲ್ಲಿ ಅಭಿವೃದ್ಧಿಯು ಹೈ.ಕ.ಪ್ರ.ಜಿಲ್ಲೆಗಳಲ್ಲಿ ಜನರನ್ನು ಒಳಗೊಳ್ಳುತ್ತಿಲ್ಲವೆಂಬುದನ್ನು ಆಯ್ದ ಸೂಚಿಗಳ ಮೂಲಕ ತೋರಿಸಲಾಗಿದೆ. ಅವು ಯಾವುಗಳೆಂದರೆ ಸಾಕ್ಷರತೆ, ಜನಸಂಖ್ಯೆಯ ಬೆಳವಣಿಗೆ ಪ್ರಮಾಣ, 0 – 6 ವಯೋಮಾನದ ಮಕ್ಕಳ ಪ್ರಮಾಣ, ಮಾನವಅಭಿವೃದ್ಧಿ ಮತ್ತು ಲಿಂಗಸಂಬಂಧಿ ಅಭಿವೃದ್ಧಿ ಸೂಚ್ಯಂಕ ಮತ್ತು ಒಟ್ಟು ವರಮಾನ – ತಲಾ ವರಮಾನ. ಇಲ್ಲಿನ ಕೋಷ್ಟಕಗಳು ಸ್ವಯಂ ಅರ್ಥವಾಗುವಂತಿವೆ. ಅವುಗಳಿಗೆ ವಿವರಣೆಯ ಅಗತ್ಯವಿಲ್ಲ. ಈ ಎಲ್ಲ ಕೋಷ್ಟಕಗಳಲ್ಲಿ ಅಭಿವೃದ್ಧಿ ಸೂಚಿಗಳು ಹೈ.ಕ.ಪ್ರ.ಕ್ಕೆ (ಗುಲಬರ್ಗಾ ವಿಭಾಗಕ್ಕೆ) ವಿಮುಖವಾಗಿರುವುದನ್ನು ಗುರುತಿಸಬಹುದಾಗಿದೆ. ಈ ಪ್ರಬಂಧದಲ್ಲಿನ ವಿಶ್ಲೇಷಣೆಯನ್ನು ಹಾಗೂ ತೀರ್ಮಾನಗಳನ್ನು ಸಮರ್ಥಿಸುವ ರೀತಿಯಲ್ಲಿ ಇಲ್ಲಿನ ಕೋಷ್ಟಕಗಳು ಕೆಲಸಮಾಡುತ್ತವೆ. ಇಲ್ಲಿ ಒಟ್ಟು ಹದಿಮೂರು ಕೊಷ್ಟಕಗಳಿವೆ. ಈ ಕೋಷ್ಟಕಗಳಲ್ಲಿ ಕೆಲಸಮಾಡುತ್ತವೆ. ಇಲ್ಲಿ ಒಟ್ಟು ಹದಿಮೂರು ಕೊಷ್ಟಕಗಳಿವೆ. ಈ ಕೋಷ್ಟಕಗಳಲ್ಲಿ ಮಾಹಿತಿಯನ್ನು ಕರ್ನಾಟಕದ 27 ಜಿಲ್ಲೆಗಳಿಗೆ ಸಂಬಂಧಿಸಿದಂತೆ ನೀಡಲಾಗಿದೆ. ಅಭಿವೃದ್ಧಿಯ ಪ್ರಾದೇಶಿಕ ಆಯಾಮಗಳನ್ನು ಹಿಡಿದಿಡುವ ದೃಷ್ಟಿಯಿಂದ ಜಿಲ್ಲೆಗಳನ್ನು ವಿಭಾಗವಾರು ನೀಡಲಾಗಿದೆ. ಇಲ್ಲಿ ಮಾಹಿತಿಯನ್ನು ಇಡಿಯಾಗಿ ಮತ್ತು ಬಿಡಿಬಿಡಿಯಾಗಿ ನೀಡಲಾಗಿದೆ. ಇದರಿಂದ ವಿಶ್ಲೇಷಣೆಯು ಅರ್ಥಪೂರ್ಣವಾಗುತ್ತದೆ.

ಇಲ್ಲಿನ ಕೋಷ್ಟಕಗಳು ಮಾವನ ಅಭಿವೃದ್ಧಿ ಸೂಚ್ಯಂಕಗಳನ್ನು ಜಿಲ್ಲಾವಾರು 1991 ಮತ್ತು 2001 ಕಾಲಘಟ್ಟಗಳಿಗೆ ತೋರಿಸುತ್ತದೆ. ಅದೇ ರೀತಿಯಲ್ಲಿ 1991 ಮತ್ತು 2001 ಕಾಲಘಟ್ಟಗಳಿಗೆ ಸಂಬಂಧಿಸಿದಂತೆ ಜಿಲ್ಲಾವಾರು ಲಿಂಗ ಸಂಬಂಧಿ ಅಭಿವೃದ್ಧಿ ಸೂಚ್ಯಂಕಗಳನ್ನು ನೀಡಲಾಗಿದೆ.

ಇವೆರಡಕ್ಕೂ ಸಂಬಂಧಿಸಿದಂತೆ ಸೂಚ್ಯಂಕಗಳು ಒಳಗೊಳ್ಳುವ ಮೂರು ಸೂಚಿಗಳ ಮೌಲ್ಯಗಳನ್ನು ಇಲ್ಲಿ ನೀಡಲಾಗಿದೆ. ಮಾನವ ಅಭಿವೃದ್ಧಿ ಮತ್ತು ಲಿಂಗ ಸಂಬಂಧಿ ಅಭಿವೃದ್ಧಿ ಸೂಚ್ಯಂಕಗಳು ಮೂರು ಸೂಚಿಗಳನ್ನು ಒಳಗೊಂಡ ಸಂಯುಕ್ತ ಸೂಚ್ಯಂಕಗಳಾಗಿವೆ. ಅವುಗಳಾವುವೆಂದರೆ ಆರೋಗ್ಯ ಸೂಚ್ಯಂಕ, ಶೈಕ್ಷಣಿಕ ಸೂಚ್ಯಂಕ ಮತ್ತು ವರಮಾನ ಸೂಚ್ಯಂಕ. ಈ ಮೂರು ಸೂಚ್ಯಂಕಗಳ ಸರಾಸರಿ ಮೌಲ್ಯವೇ ಮಾನವ ಅಭಿವೃದ್ಧಿ ಸೂಚ್ಯಂಕ.

ಮಾನವ ಅಭಿವೃದ್ಧಿ ಮತ್ತು ಲಿಂಗಸಂಬಂಧಿ ಅಭಿವೃದ್ಧಿ ಸೂಚ್ಯಂಕಗಳ ನಡುವಿನ ಅಂತರವು ಲಿಂಗ ಸಂಬಂಧಿ ಅಸಮಾನತೆಯ ಮಾಪನವಾಗಿದೆ. ಉದಾಹರಣೆಗೆ ಕರ್ನಾಟಕದಲ್ಲಿನ 2001ರ ಮಾನವ ಅಭಿವೃದ್ಧಿ ಸೂಚ್ಯಂಕ 0.650 ಮತ್ತು ಲಿಂಗ ಸಂಬಂಧಿ ಅಭಿವೃದ್ಧಿ ಸೂಚ್ಯಂಕ 0.637. ಇವೆರಡರ ನಡುವಿನ ಅಂತರ 0.17. ಇದು ಕರ್ನಾಟಕದಲ್ಲಿನ ಅಭಿವೃದ್ಧಿ ಸಂಬಂಧಿ ಲಿಂಗ ಅಸಮಾನತೆ.

ಇದೇ ರೀತಿಯಲ್ಲಿ ಜಿಲ್ಲಾವಾರು ಮತ್ತು ಲಿಂಗವಾರು ಸಾಕ್ಷರತೆಯ ಮಾಹಿತಿಯನ್ನು 1991 ಮತ್ತು 2001 ಕಾಲಘಟಕ್ಕೆ ನೀಡಲಾಗಿದೆ. ಇಲ್ಲಿ ಸಾಕ್ಷರತೆಗೆ ಸಂಬಂಧಿಸಿದ ಲಿಂಗ ಅಸಮಾನತೆಗಳನ್ನು ಗುರುತಿಸಬಹುದಾಗಿದೆ. ಇದರ ಜೊತೆಗೆ 1981 – 1991 ಮತ್ತು 1991 – 2001 ಎರಡು ದಶಕಗಳಿಗೆ ಸಂಬಂಧಿಸಿದಂತೆ ಜನಸಂಖ್ಯಾ ಬೆಳವಣಿಗೆ ಪ್ರಮಾಣವನ್ನು ಇಲ್ಲಿನ ಕೋಷ್ಟಕಗಳು ಒದಗಿಸುತ್ತವೆ. ಜನಸಂಖ್ಯೆಗೆ ಸಂಬಂಧಿಸಿದಂತೆ ಇಲ್ಲದ ಸಮಸ್ಯೆಯನ್ನು ರಾಜ್ಯದಲ್ಲಿ ಹುಟ್ಟುಹಾಕಲಾಗುತ್ತಿದೆ. ಆದರೆ ವಿದ್ವಾಂಸರು ಇಂತಹ ಭಾವನಾತ್ಮಕ – ಪ್ರಚೋದನಾತ್ಮಕ ಸಂಗತಿಗಳನ್ನು ಕೂಲಂಕಷವಾಗಿ ವಿಶ್ಲೇಷಿಸಿ ಯಾವುದು ಸಮರ್ಥನೀಯ ಮತ್ತು ಯಾವುದು ಅಸಮರ್ಥನೀಯ ಎಂಬುದನ್ನು ಜನರ ಮುಂದಿಡಬೇಕಾಗುತ್ತದೆ. ಇಲ್ಲಿ ಯಾವುದು ನ್ಯಾಯ ಸಮ್ಮತ ಎಂಬುದನ್ನು ಜನರು ತೀರ್ಮಾನಿಸಬಹುದಾಗಿದೆ.

ಜನಸಂಖ್ಯೆಯ ಬೆಳವಣಿಗೆಯ ರಾಜ್ಯದಲ್ಲಿ ಕಡಿಮೆಯಾಗುತ್ತಿರುವ ಪರಿಯನ್ನು ತೋರಿಸುವ ಸಲುವಾಗಿ ಇಲ್ಲಿ ಜಿಲ್ಲಾವಾರು ಜನಸಂಖ್ಯೆಯಲ್ಲಿನ 0 – 6 ವಯೋಮಾನದ ಮಕ್ಕಳ ಸಂಖ್ಯೆಯನ್ನು 1991 ಮತ್ತು 2001ರ ಕಾಲಘಟ್ಟಗಳಿಗೆ ನೀಡಲಾಗಿದೆ. ರಾಜ್ಯದಲ್ಲಿ 0 – 6 – ವಯೋಮಾನದ ಮಕ್ಕಳ ಸಂಖ್ಯೆಯು ಕಡಿಮೆಯಾಗುತ್ತಿದೆ. ಇದು ಒಟ್ಟು ಜನಸಂಖ್ಯೆಯ ಬೆಳವಣಿಗೆ ಪ್ರಮಾಣವು ಕಡಮೆಯಾಗುತ್ತಿರುವುದನ್ನು ಅಥವಾ ಅದು ಸ್ಥಿರವಾಗಿರುವ ಪರಿಯನ್ನು ತೋರಿಸುತ್ತದೆ. ರಾಜ್ಯದಲ್ಲಿ 1991ರಲ್ಲಿದ್ದ 0 – 6 ವಯೋಮಾನದ ಮಕ್ಕಳ ಸಂಖ್ಯೆ 78.78 ಲಕ್ಷ. ಇದು 2001ರಲ್ಲಿ 71.82 ಲಕ್ಷಕ್ಕೆ ಇಳಿದಿದೆ. ಜನಸಂಖ್ಯೆಯ ಬೆಳವಣಿಗೆ ಪ್ರಮಾಣವು ರಾಜ್ಯಮಟ್ಟಕ್ಕಿಂತ ಅಧಿಕವಿರುವ ಹೈ.ಕ.ಪ್ರ.ದಲ್ಲೂ 0 – 6 ವಯೋಮಾನದ ಮಕ್ಕಳ ಸಂಖ್ಯೆಯು ಕಡಿಮೆಯಾಗುತ್ತಿದೆ. ಅದು 1991 ರಲ್ಲಿ 16.24 ಲಕ್ಷವಿದ್ದುದು 2001ರಲ್ಲಿ 15.88 ಲಕ್ಷಕ್ಕಿಳಿದಿದೆ. ಇದು ಸಾಮಾನ್ಯ ಸಂಗತಿಯಲ್ಲ. ಇದೊಂದು ಆಶಾದಾಯಕ ಸೂಚನೆಯಾಗಿದೆ. ಚೀನಾದಲ್ಲಿ ಏನೋ ಕಂಡು ಬಂದಿದ್ದೇನೆಂದು ಇಲ್ಲದ ಸಮಸ್ಯೆಯನ್ನು ಇಲ್ಲಿ ಬಡಿದೆಬ್ಬಿಸುವ ಅಗತ್ಯವಿಲ್ಲ. ಇಂತಹ ವಿವಾಧಗಳು ಉದ್ಭವವಾದಾಗ ಸಮಸ್ಯೆಯ ಸರಿಯಾದ ಚಿತ್ರವನ್ನು ಜನರ ಮುಂದಿಡುವುದು ವಿದ್ವಾಂಸರ ಕರ್ತವ್ಯವಾಗಿದೆ. ಅದನ್ನು ಇಲ್ಲಿ ನಾನು ಮಾಡುತ್ತಿದ್ದೇನೆ. ಕೊನೆಯ ಕೋಷ್ಟಕದಲ್ಲಿ ಜಿಲ್ಲಾವಾರು 1990 – 200 ಮತ್ತು 2006 – 07 ಎರಡು ಕಾಲಘಟ್ಟಗಳಿಗೆ ಸಂಬಂಧಿಸಿದಂತೆ ತಲಾ ವರಮಾನದ ವಿವರಗಳನ್ನು ನಿಡಲಾಗಿದೆ. ಈ ಕೋಷ್ಟಕಗಳ ಆಧಾರದ ಮೇಲೆ ವರಮಾನ ಸಂಬಂಧಿ ವಿಶ್ಲೇಷಣೆ ಮಾಡಬಹುದಾಗಿದೆ.

ಅನುಬಂಧ ಭಾಗ1
 (ಪ್ರಜಾವಾಣಿಯಲ್ಲಿ ದಿನಾಂಕ 21 – 04 – 07 ರಲ್ಲಿ ಪ್ರಕಟವಾದ ಲೇಖನ)
ಪ್ರಾದೇಶಿಕ
ಅಸಮಾನತೆ : ಸರ್ಕಾರಿ ಸೂತ್ರದ ಶೂಲ.

ಡಾ. ಬಿ.ಶೇಷಾದ್ರಿ
ಡಾ. ಟಿ
.ಆರ್.ಚಂದ್ರಶೇಖರ

ಕರ್ನಾಟಕದಲ್ಲಿ ಪ್ರಾದೇಶಿಕ ಅಸಮಾನತೆ ನಿವಾರಿಸುವ ದಿಶೆಯಲ್ಲಿ ಡಾ. ಡಿ.ಎಂ. ನಂಜುಂಡಪ್ಪ ಸಮಿತಿಯು ( 2002) ಒಂದು ಸಾವಿರ ಪುಟಗಳಿಗೂ ಮೀರಿದ ಬೃಹತ್ ವರದಿಯ ಬಗ್ಗೆ ಕೇಳುವವರೇ ಇಲ್ಲವೆಂದು ಹೇಳಬಹುದು. ಅದರ ಅಂತಿಮ ವರದಿಯ ಸೂಕ್ಷ್ಮ ಎಳೆಗಳನ್ನು ಹಿಡಿದಿಡಲು ಎಲ್ಲರಿಗೂ ಸಾಧ್ಯವಾಗಿದೆಯೆಂದು ಹೇಳುವುದು ಕಷ್ಟ. ಉತ್ತರ ಕರ್ನಾಟಕದ ಜನರು ಹಾಗೂ ಜನಪ್ರತಿನಿಧಿಗಳು ವಿಶೇಷವಾಗಿ ಡಾ. ಡಿ.ಎಂ. ನಂಜುಂಡಪ್ಪ ಸಮಿತಿಯ ವರದಿಯ ಅನುಷ್ಟಾನವನ್ನು ತೀವ್ರ ಒತ್ತಾಯಿಸುತ್ತಿದ್ದಾರೆ. ಪ್ರಸ್ತುತ ಸರ್ಕಾರವು ಡಾ. ಡಿ.ಎಂ. ನಂಜುಂಡಪ್ಪ ಸಮಿತಿಯು ಅಭಿವೃದ್ಧಿ ಹೊಂದದ 114 ತಾಲ್ಲೂಕುಗಳ ಅಭಿವೃದ್ಧಿಗಾಗಿ ಎಂಟು ವರ್ಷಗಳ ವಿಶೇಷ ಅಭಿವೃದ್ಧಿ ಯೋಜನೆಯನ್ನು ಅನುಷ್ಟಾನಗೊಳಿಸಲು ದಿಟ್ಟ ಹೆಜ್ಜೆಯಿಟ್ಟಿದೆ. ಈ ದಿಶೆಯಲ್ಲಿ 2007 – 08ರ ಬಜೆಟ್ಟಿನಲ್ಲಿ ವಿಶೇಷ ಅಭಿವೃದ್ಧಿ ಯೋಜನೆ ಬಾಬ್ತು ಮೊದಲನೆಯ ವರ್ಷದ ಭಾಗವಾಗಿ ರೂ. 1571.50 ಕೋಟಿ ಹಣವನ್ನು ತೆಗೆದಿರಿಸಲಾಗಿದೆ. ಈ ವಿಶೇಷ ಅಭಿವೃದ್ಧಿ ಯೋಜನೆಯ ಅನುದಾನವನ್ನು ಅತ್ಯಂತ ಹಿಂದುಳಿದ (39) , ಅತಿ ಹಿಂದುಳಿದ (40) ಮತ್ತು ಹಿಂದುಳಿದ (35) ತಾಲ್ಲೂಕುಗಳ ನಡುವೆ 50:30:20ರ ಅನುಪಾತದಲ್ಲಿ ಹಂಚುವ ಸೂತ್ರವನ್ನು ಸರ್ಕಾರವು ಪ್ರಕಟಿಸಿದೆ. ಈ ಬಗ್ಗೆ ಬಜೆಟ್ ದಾಖಲೆಗಳ ಜೊತೆಯಲ್ಲಿ ‘ಪ್ರಾದೇಶಿಕ ಅಸಮಾನತೆ ನಿವಾರಣೆಗಾಗಿ ಎಂಟು ವರ್ಷದ ವಿಶೇಷ ಅಭಿವೃದ್ಧಿ ಯೋಜನೆ’ ಎಂಬ ಕೈಪಿಡಿಯನ್ನು ಹೊರತಂದಿದೆ. ಪ್ರದೇಶಿಕ ಅಸಮಾನತೆ ನಿವಾರಣೆಗೆ ಸರ್ಕಾರ ಕಟಿಬದ್ಧವಾಗಿದೆಯೆಂಬುದನ್ನು ತೋರಿಸುವುದಕ್ಕಾಗಿ ಸರ್ಕಾರವು ಇನ್ನಿಲ್ಲಂದಂತೆ ಪ್ರಯತ್ನಿಸುತ್ತಿದೆ.

ಅತ್ಯಂತ ಕುತೂಹಲದ ಸಂಗತಿಯೆಂದರೆ ವಿಶೇಷ ಅಭಿವೃದ್ಧಿ ಯೋಜನೆಯ ಅನುದಾನದ ಹಂಚಿಕೆಗೆ ಸಮಿತಿಯ ಸೂತ್ರವನ್ನು ಕೈಬಿಟ್ಟು ಸರ್ಕಾರವು ತನ್ನದೇ ಸೂತ್ರವನ್ನು ರಚಿಸಿದೆ. ಈ ಬದಲಾವಣೆಯನ್ನು ಯಾವ ಕಾರಣಕ್ಕೆ ಮಾಡಲಾಗಿದೆ ಎಂಬುದರ ಬಗ್ಗೆ ಅದು ವಿವರಣೆ ನೀಡಿಲ್ಲ. ಪ್ರಸ್ತುತ ಲೇಖನದಲ್ಲಿ ಸಮಿತಿಯ ಸೂತ್ರವನ್ನು ಬಿಟ್ಟ ಸರ್ಕಾರಿ ಸೂತ್ರದ ಪ್ರಕಾರ ಅನುದಾನವನ್ನು ಹಂಚಿದರೆ ಗುಲಬರ್ಗಾ ವಿಭಾಗಕ್ಕೆ ಅನ್ಯಾಯವಾಗುತ್ತದೆ ಎಂಬುದನ್ನು ತೋರಿಸಲು ಪ್ರಯತ್ನಿಸಲಾಗಿದೆ ಹಾಗೂ ಸಮಿತಿಯ ಸೂತ್ರದಂತೆ ಅನುದಾನವನ್ನು ವಿತರಿಸುವಂತೆ ಒತ್ತಾಯ ಮಾಡಲಾಗಿದೆ.

ಸಮಿತಿಯ ಸೂತ್ರ

ಡಾ. ಡಿ.ಎಂ.ನಂಜುಂಡಪ್ಪ ಸಮಿತಿಯು ತಾಲ್ಲೂಕುಗಳ ಅಭಿವೃದ್ಧಿ ಮಟ್ಟವನ್ನು ಗುರುತಿಸಲು ಸಮಗ್ರ ಸಂಯುಕ್ತ ಅಭಿವೃದ್ಧಿ ಸೂಚ್ಯಂಕವೆಂಬ ಮಾಪನವನ್ನು ಬಳಸಿದೆ. ಈ ಸೂಚ್ಯಂಕಕ್ಕೆ ರಾಜ್ಯದ ಅಭಿವೃದ್ಧಿಯ ಸರಾಸರಿ ಮಟ್ಟವನ್ನು ಪೂರ್ಣಾಂಕ ಎಂದು ಪರಿಗಣಿಸಿದೆ. ಯಾವ ತಾಲ್ಲೂಕುಗಳ ಸಮಗ್ರ ಸಂಯುಕ್ತ ಅಭಿವೃದ್ಧಿ ಸೂಚ್ಯಂಕವು ರಾಜ್ಯ ಸರಾಸರಿ ಪೂರ್ಣಾಂಕಕ್ಕೆ ಸಮನಾಗಿ ಅಥವಾ ಅದಕ್ಕಿಂತ ಅಧಿಕವಾಗಿರುತ್ತದೋ ಅವು ಸಾಪೇಕ್ಷವಾಗಿ ಅಭಿವೃದ್ಧಿ ಹೊಂದಿದ ತಾಲ್ಲೂಕುಗಳೆಂದು ಮತ್ತು ಯಾವ ತಾಲ್ಲೂಕುಗಳ ಸೂಚ್ಯಂಕವು ಪೂರ್ಣಾಂಕಕ್ಕಿಂತ ಕಡಿಮೆಯಿರುತ್ತದೊ ಅವು ದುಸ್ಥಿತಿಯನ್ನು ಅನುಭವಿಸುತ್ತಿರುವ ತಾಲ್ಲೂಕುಗಳಿಂದ ಪರಿಗಣಿಸಲಾಗಿದೆ. ಅದರ ಪ್ರಕಾರ ಸಾಪೇಕ್ಷವಾಗಿ ಅಭಿವೃದ್ಧಿ ಹೊಂದಿದ ತಾಲ್ಲೂಕುಗಳ ಸಂಖ್ಯೆ 61 ಮತ್ತು ಅಭಿವೃದ್ಧಿ ಹೊಂದದ ತಾಲ್ಲೂಕುಗಳ ಸಂಖ್ಯೆ 114. ದುಸ್ಥಿತಿಯ ಅಳ ಮತ್ತು ಹರವುಗಳನ್ನು ಗಮನದಲ್ಲಿಟ್ಟುಕೊಂಡು ದುಸ್ಥಿತಿಯನ್ನು ಅನುಭವಿಸುತ್ತಿರುವ ತಾಲ್ಲೂಕುಗಳನ್ನು ‘ಅತ್ಯಂತ ಹಿಂದುಳಿದ’ (39) , ಅತಿ ಹಿಂದುಳಿದ ‘ (40) ಮತ್ತು ‘ಹಿಂದುಳಿದ’ (35) ತಾಲ್ಲೂಕುಗಳೆಂದು ಸಮಿತಿಯು ವರ್ಗಿಕರಿಸಿದೆ.

ವಿಶೇಷ ಅಭಿವೃದ್ಧಿ ಯೋಜನೆಯ ಅನುದಾನದ ಹಂಚಿಕೆಗೆ ಸಮಿತಿಯು ಪ್ರಾದೇಶಿಕವಾದ ಸೂತ್ರವನ್ನು ರೂಪಿಸಿದೆ. ಅದು ‘ಸಂಚಯಿತ ದುಸ್ಥಿತಿ ಸೂಚ್ಯಂಕ’ವನ್ನು ಆಧಿರಿಸಿದೆ. ಈ ಸೂ‌ಚ್ಯಂಕದ ಪ್ರಕಾರ ಅನುದಾನದಲ್ಲಿ ಗುಲಬರ್ಗಾ ವಿಭಾಗಕ್ಕೆ ಶೇ 40, ಬೆಳಗಾವಿ ವಿಭಾಗಕ್ಕೆ ಶೆ. 20 ,ಬೆಂಗಳೂರು ವಿಭಾಗಕ್ಕೆ ಶೇ. 25 ಮತ್ತು ಮೈಸೂರು ವಿಭಾಗಕ್ಕೆ ಶೇ. 15 ಪಾಲು ದೊರೆಯುತ್ತದೆ. ಈ ಪ್ರಕಾರ ಪ್ರಸ್ತುತ ಬಜೆಟ್ಟಿನ ರೂ. 1571.50 ಕೋಟಿ ಅನುದಾನದಲ್ಲಿ ಗುಲಬರ್ಗಾ ವಿಭಾಗಕ್ಕೆ ರೂ. 628.60 ಕೋಟಿ, ಬೆಳಗಾವಿ ವಿಭಾಗಕ್ಕೆ ರೂ. 314.30 ಕೋಟಿ, ಬೆಂಗಳೂರು ವಿಭಾಗಕ್ಕೆ ರೂ. 392.82 ಕೋಟಿ ಮತ್ತು ಮೈಸೂರು ವಿಭಾಗಕ್ಕೆ 235.73 ಕೋಟಿ ದೊರೆಯಬೇಕು. ವಿಷಾದದ ಸಂಗತಿಯೆಂದರೆ ಸರ್ಕಾರದ ಸೂತ್ರದ ಪ್ರಕಾರ ಅನುದಾನವನ್ನು ಹಂಚಿದರೆ ಗುಲಬರ್ಗಾ ವಿಭಾಗಕ್ಕೆ ರೂ. 128.62 ಕೋಟಿ ಕಡಿಮೆ ದೊರೆಯುತ್ತದೆ. ಇದು ಅತಂತಕ್ಕೆ ಕಾರಣವಾಗಿದೆ.

ಸರ್ಕಾರದ ಸೂತ್ರ

ಸರ್ಕಾರದ ಸೂತ್ರದ ಪ್ರಕಾರ ಒಟ್ಟು ಅನುದಾನ ರೂ. 1571.50 ಕೋಟಿಯಲ್ಲಿ ಶೇ. 50 ರಷ್ಟು ಅಂದರೆ ರೂ. 785.75 ಕೋಟಿ ಅತ್ಯಂತ ಹಿಂದುಳಿದ ತಾಲ್ಲೂಕುಗಳಿಗೆ, ರೂ.471.45 ಕೋಟಿ (ಶೇ. 30) ಅತಿ ಹಿಂದುಳಿದ ತಾಲ್ಲೂಕುಗಳಿಗೆ ಮತ್ತು ರೂ. 314.30 ಕೋಟಿ (ಶೇ. 20) ಹಿಂದುಳಿದ ತಾಲ್ಲೂಕುಗಳಿಗೆ ದೊರೆಯುತ್ತದೆ. ಈ ಸೂತ್ರದ ಮುಖ್ಯ ಸಮಸ್ಯೆಯೆಂದರೆ ಇದಕ್ಕೆ ಪ್ರಾದೇಶಿಕ ಆಯಾಮವೇ ಇಲ್ಲವಾಗಿದೆ. ಈ ಸೂತ್ರದ ಪ್ರಕಾರ ವಿಭಾಗವಾರು ಅನುದಾನ ಹಂಚಿಕೆ ಮಾಡಿದರೆ ಗುಲಬರ್ಗಾ ವಿಭಾಗಕ್ಕೆ ದೊರೆಯುವ ಮೊತ್ತ ರೂ. 499.98 ಕೋಟಿ. ಇದು ಸಮಿತಿಯ ಸೂತ್ರದ ಪ್ರಕಾರ ದೊರೆಕಬಹುದಾದ ಮೊತ್ತಕ್ಕಿಂತ ರೂ. 128.62 ಕೋಟಿ ಕಡಿಮೆಯಾಗಿದೆ. ಆದರೆ ಬೆಂಗಳೂರು ವಿಭಾಗಕ್ಕೆ ಸರ್ಕಾರಿ ಸೂತ್ರದ ಪ್ರಕಾರ ದೊರೆಯುವ ಮೊತ್ತ ರೂ. 455.66 ಕೋಟಿ. ಆದರೆ ಸಮಿತಿಯ ಸೂತ್ರವನ್ನು ಪಾಲಿಸಿದರೆ ಅದಕ್ಕೆ ದೊರೆಯುವ ಮೊತ್ತ ರೂ. 392.87 ಕೋಟಿ. ಅದೇ ರೀತಿ ಮೈಸೂರು ವಿಭಾಗಕ್ಕೆ ಸರ್ಕಾರಿ ಸೂತ್ರದ ಪ್ರಕಾರ ದೊರೆಯುವ ಮೊತ್ತ ರೂ. 247.96 ಕೋಟಿ. ಸಮಿತಿಯ ಸೂತ್ರದ ಪ್ರಕಾರ ಅದಕ್ಕೆ ಸಿಗುವ ಮೊತ್ತ ರೂ 235.73 ಕೋಟಿ. ಬೆಳಗಾವಿ ವಿಭಾಗಕ್ಕೆ ಸರ್ಕಾರಿ ಸೂತ್ರದ ಪ್ರಕಾರ ರೂ. 367.70 ಕೋಟಿ ದೊರಕಿದರೆ ಸಮಿತಿ ಸೂತ್ರದ ಪ್ರಕಾರ ದೊರೆಯಬಹುದಾಗಿದ್ದ ಮೊತ್ತ ರೂ. 314.30 ಕೋಟಿ. ಗುಲಬರ್ಗಾ ವಿಭಾಗಕ್ಕೆ ಆದ ನಷ್ಟವನ್ನು ಉಳಿದ ಮೂರು ವಿಭಾಗಗಳು ಹೆಚ್ಚುವರಿಯಾಗಿ ಪಡೆದುಕೊಳ್ಳುತ್ತವೆ.

ಸರ್ಕಾರಿ ಸೂತ್ರವು ನೋಡುವುದಕ್ಕೆ ಹಿಂದುಳಿದ ಪ್ರದೇಶಗಳಿಗೆ ಹೆಚ್ಚು ಅನುದಾನ ಒದಗಿಸುವ ರೂಪದಲ್ಲಿರುವಂತೆ ಕಂಡು ಬರುತ್ತದೆ. ಏಕೆಂದರೆ ಅನುದಾನದಲ್ಲಿ ಶೇ. 50ರಷ್ಟನ್ನು ಅತ್ಯಂತ ಹಿಂದುಳಿದ ತಾಲ್ಲೂಕುಗಳಿಗೆ ನೀಡುವ ಕ್ರಮ ಅಲ್ಲಿದೆ. ಆದರೆ ವಸ್ತುಸ್ಥಿತಿಯ ಅದಕ್ಕಿಂತ ಭಿನ್ನವಾಗಿದೆ. ರಾಜ್ಯದ ಅತ್ಯಂತ ಹಿಂದುಳಿದ ತಾಲ್ಲೂಕುಗಳಲ್ಲಿ ಗುಲಬರ್ಗಾ ವಿಭಾಗದ ಪಾಲು ಶೇ.53.85. ರಾಜ್ಯದಲ್ಲಿ ಸಾಪೇಕ್ಷವಾಗಿ ಅಭಿವೃದ್ಧಿ ಹೊಂದಿದ ತಾಲ್ಲೂಕುಗಳಲ್ಲಿ ಅದರ ಪಾಲು ಕೇವಲ ಶೇ. 4.92. ಸಮಿತಿಯ ಸೂತ್ರದ ಪ್ರಕಾರ ಗುಲಬರ್ಗಾ ವಿಭಾಗಕ್ಕೆ ಅನುದಾನದಲ್ಲಿ ಶೇ.40 ಪಾಲು ದೊರೆಯಬೇಕು. ಆದರೆ ಪ್ರಸ್ತುತ ಸರ್ಕಾರ ರೂಪಿಸಿರುವ 50:30:20 ಸೂತ್ರದ ಪ್ರಕಾರ ಅದಕ್ಕೆ ಒಟ್ಟು ಅನುದಾನ ರೂ. 1571.50 ಕೋಟಿಯಲ್ಲಿ ದೊರೆಯುವ ಪ್ರಮಾಣ ಶೇ. 31.82. ಈ ವಿಭಾಗಕ್ಕೆ ಉಂಟಾಗುವ ನಷ್ಟ ಶೇ. 8.18.

ರಾಜ್ಯ ಸರ್ಕಾರವು ಯಾವುದೇ ಕಾರ್ಯಕ್ರಮ – ಯೋಜನೆ – ಆಂದೋಳಗಳನ್ನು ರೂಪಿಸಿದಾಗ ಅವುಗಳ ಪ್ರಾದೇಶಿಕ ಸ್ವರೂಪವನ್ನು ಕಡ್ಡಾಯವಾಗಿ ಪರಿಶೀಲಿಸಬೇಕಾಗುತ್ತದೆ. ಕೇವಲ ವಿಶೇಷ ಯೋಜನೆಯೆಂದು ಜಪ ಮಾಡಿದರೆ ಉಪಯೋಗವಿಲ್ಲ. ಉದಾಹರಣೆಗೆ 2007 – 08ನೆಯ ಸಾಲಿನ ಬಜೆಟ್ಟಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಡಿಯಲ್ಲಿ ಪ್ರಕಟಿಸಿರುವ 50 – 60 ಕಾರ್ಯಕ್ರಮಗಳಲ್ಲಿ ಗುಲಬರ್ಗಾ ವಿಭಾಗದ ಪಾಲೆಷ್ಟೆಂಬುದನ್ನು ಸರ್ಕಾರವು ಪರಿಶೀಲಿಸಿದೆಯೇ? ಅವುಗಳಲ್ಲಿ ಗುಲಬರ್ಗಾ ವಿಭಾಗದ ಪಾಲು ಕನಿಷ್ಟಮಟ್ಟದಲ್ಲಿದೆ. ಸರ್ಕಾರವು ಇಡುವ ಪ್ರತಿಯೊಂದು ಹೆಜ್ಜೆಯನ್ನು ಪ್ರಾದೇಶಿಕ ಮಾನದಂಡದಿಂದ ತುಲನೆ ಮಾಡಬೇಕು. ಈ ರೀತಿಯಲ್ಲಿ ಇಡೀ ಸರ್ಕಾರದ ಕಾರ್ಯಯೋಜನೆಯು ಪ್ರಾದೇಶಿಕ ಅಸಮಾನತೆ ನಿವಾರಣೆ ಕಡೆಗೆ ಮುಖ ಮಾಡಿಕೊಂಡಾಗ ಮಾತ್ರ ಅದನ್ನು ನಿವಾರಣೆ ಮಾಡಬಹುದು. ಸರ್ಕಾರದ ಮುಕ್ಕಾಲು ಮೂರು ಮೀಸೆ ಪಾಲು ಕಾರ್ಯಕ್ರಮಗಳು ಬೆಂಗಳೂರಿಗೆ ಅಭಿಮುಖಿಯಾಗಿ ಉಳಿದ ಭಾಗ ಮಾತ್ರ ಉತ್ತರಾಭಿಮುಖಿಯಾದರೆ ಸಮಸ್ಯೆಯ ನಿವಾರಣೆ ಸಾಧ್ಯವಿಲ್ಲ.

ಈ ಹಿನ್ನೆಲೆಯಲ್ಲಿ ನಮ್ಮ ನಮ್ರ ಒತ್ತಾಯವೆಂದರೆ ಪ್ರಾದೇಶಿಕ ಅಸಮಾನತೆಯ ನಿವಾರಣೆಗಾಗಿ ರೂಪಿಸಿರುವ ವಿಶೇಷ ಅಭಿವೃದ್ಧಿ ಯೋಜನೆಯ ಬಾಬ್ತು ಅನುದಾನ ರೂ. 1571.50 ಕೋಟಿಯನ್ನು ಹಂಚಲು ಡಾ. ಡಿ.ಎಂ.ನಂಜುಂಡಪ್ಪ ಸಮಿತಿಯು ಸೂಚಿಸಿದ ಸೂತ್ರವನ್ನು ಅನುಸರಿಸಬೇಕು ಮತ್ತು 50:30:20 ಅನುಪಾತದ ಸರ್ಕಾರಿ ಸೂತ್ರವನ್ನು ಮೊದಲು ಕೈಬಿಡಬೇಕು. ಏಕೆಂದರೆ ಈ ಸೂತ್ರದಿಂದ ರಾಜ್ಯದ ಅತ್ಯಂತ ಹಿಂದುಳಿದ ಪ್ರದೇಶವಾದ ಗುಲಬರ್ಗಾ ವಿಭಾಗಕ್ಕೆ ಅನ್ಯಾಯವಾಗುತ್ತದೆ. ಈ ಅನ್ಯಾಯವನ್ನು ಸರಿಪಡಿಸಲು ಮೊದಲು ಸರ್ಕಾರಿ ಸೂತ್ರವನ್ನು ಕೈಬಿಡಬೇಕು. ಸಮಿತಿಯು ರೂಪಿಸಿರುವ ಪ್ರಾದೇಶಿಕ ಸೂತ್ರವನ್ನು ಅಳವಡಿಸಿಕೊಳ್ಳಬೇಕು.

ಅನುಬಂಧ2
ಗುಲಬರ್ಗಾದ
ಚೇಂಬರ್ಸ್‌ಆಫ್ ಕಾಮರ್ಸ್‌‌ನಲ್ಲಿ ವಿಶೇಷ ಉಪನ್ಯಾಸ (26 – 05 – 07) . ಪ್ರಜಾವಾಣಿ ವರದಿ.

01_335_JOA-KUH

ಅನುಬಂಧ3
ಪ್ರಜಾವಾಣಿ
ದಿನ ಪತ್ರಿಕೆಯ ಸಂಪಾದಕೀಯ (020607)
ತಾರತಮ್ಯ
ಸಲ್ಲದು

ಡಾ. ಡಿ.ಎಂ.ನಂಜುಂಡಪ್ಪ ಸಮಿತಿಯ ಶಿಫಾರಸ್ಸುಗಳನ್ನು ಜಾರಿಗೆ ತರಲು ಮುಂದಾಗಿರುವ ರಾಜ್ಯ ಸರ್ಕಾರ ಅನುದಾನ ಹಂಚಿಕೆ ವಿಷಯದಲ್ಲಿ ಸಮಿತಿಯ ಸೂತ್ರವನ್ನು ಕೈಬಿಟ್ಟಿರುವುದರಿಂದ ಗುಲಬರ್ಗಾ ವಿಭಾಗಕ್ಕೆ ಅನ್ಯಾಯವಾಗಿದೆ ಎಂದು ಶಾಸಕ ಬಿ.ಆರ್.ಪಾಟೀಲ ಹೇಳಿದ್ದಾರೆ. ಪ್ರಾದೇಶಿಕ ಅಸಮಾನತೆಯನ್ನು ನಿವಾರಿಸುವ ಪ್ರಯತ್ನಗಳು ಇನ್ನೊಂದು ಬಗೆಯ ತಾರತಮ್ಯಕ್ಕೆ ಕಾರಣವಾಗಬಾರದು. ಡಾ. ಡಿ.ಎಂ.ನಂಜುಂಡಪ್ಪ ಸಮಿತಿ ರಾಜ್ಯದ ಹಿಂದುಳಿದ ಪ್ರದೇಶಗಳನ್ನು ಅಧ್ಯಯನ ಮಾಡಿ 114 ತಾಲ್ಲೂಕುಗಳನ್ನು ಅತ್ಯಂತ ಹಿಂದುಳಿದ, ಅತಿ ಹಿಂದುಳಿದ ಮತ್ತು ಹಿಂದುಳಿದ ತಾಲ್ಲೂಕುಗಳೆಂದು ವರ್ಗೀಕರಿಸಿದೆ. ಈ ತಾಲ್ಲೂಕುಗಳ ಅಭಿವೃದ್ಧಿಗೆ ಸರ್ಕಾರ ನೀಡುವ ವಿಶೇಷ ಅನುದಾನವನ್ನು ಹೇಗೆ ಹಂಚಿಕೆ ಮಾಡಬೇಕು ಎನ್ನುವುದನ್ನು ವೈಜ್ಞಾನಿಕವಾಗಿ ನಿರ್ಧರಿಸಿದೆ. ಸರ್ಕಾರವು ಸಮಿತಿಯ ಹಂಚಿಕೆ ಸೂತ್ರವನ್ನು ಕೈಬಿಟ್ಟು 50:30:20 ರ ಅನುಪಾತದಲ್ಲಿ ಮೂರು ವರ್ಗಗಳ ತಾಲ್ಲೂಕುಗಳ ಹಂಚಿಕೆ ಮಾಡುವ ಸೂತ್ರವನ್ನು ಪ್ರಕಟಿಸಿದೆ. ಈ ಸೂತ್ರದಿಂದಾಗಿ ಗುಲಬರ್ಗಾ ವಿಭಾಗಕ್ಕೆ ನಿಗದಿಯಾದ ಅನುದಾನ ಕಡಿಮೆಯಾಗುವುದಾದರೆ ಅದನ್ನು ಒಪ್ಪಲಾಗದು. ಅತ್ಯಂತ ಹಿಂದುಳಿದ ಪ್ರದೇಶದ ಜನರ ಅಸಮಾಧಾನಗಳನ್ನು ಉಪೇಕ್ಷಿಸಬಾರದು. ಡಾ. ಡಿ.ಎಂ.ನಂಜುಂಡಪ್ಪ ಸಮಿತಿ ತನ್ನ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿ ಐದು ವರ್ಷಗಳು ಕಳೆದಿವೆ. ಹಿಂದಿನ ಸರ್ಕಾರಗಳು ವರದಿಯನ್ನು ಜಾರಿಗೊಳಿಸುವ ಬದ್ಧತೆಯನ್ನು ವ್ಯಕ್ತಪಡಿಸಿದವೇ ವಿನಾ ಅನುಷ್ಟಾನಕ್ಕೆ ಮುಂದಾಗಲಿಲ್ಲ. ಜೆಡಿಎಸ್ – ಬಿಜೆಪಿ ಸಮ್ಮಿಶ್ರ ಸರ್ಕಾರ ಪ್ರಸ್ತುತ ವರ್ಷ ರೂ.1571.50 ಕೋಟಿಗಳನ್ನು ಬಜೆಟ್ಟಿನಲ್ಲಿ ತೆಗೆದಿರಿಸಿದೆ. ಪ್ರಾದೇಶಿಕ ಅಸಮಾನತೆ ನಿವಾರಣೆ ವಿಷಯದಲ್ಲಿ ಸರ್ಕಾರದ ಕಾಳಜಿ ಮೆಚ್ಚುವಂತಹದ್ದಾದರೂ ಅನುದಾನ ಹಂಚಿಕೆಗೆ ಸರ್ಕಾರ ತನ್ನದೇ ಆದ ಸೂತ್ರಗಳನ್ನು ರೂಪಿಸಿದ್ದು ಸಮರ್ಥನೀಯ ಅಲ್ಲ. ಹಂಚಿಕೆ ಸೂತ್ರದ ಬದಲಾವಣೆಯ ಅಗತ್ಯವಿತ್ತು ಎನ್ನುವುದಾದರೆ ಅದಕ್ಕೆ ಕಾರಣವಾದ ಸಂಗತಿಗಳನ್ನು ಬಹಿರಂಗಗೊಳಿಸಬೇಕು. ಸರ್ಕಾರ ತಾರತಮ್ಯ ನೀತಿ ಅನುಸರಿಸುತ್ತಿದೆ ಎನ್ನುವ ಭಾವನೆ ಬೆಳೆಯಲು ಅವಕಾಶ ಕೊಡಬಾರದು. ಹಿಂದುಳಿದ ಪ್ರದೇಶಗಳ ಚುನಾಯಿತ ಪ್ರತಿನಿಧಿಗಳ ಜತೆ ಸಮಾಲೋಚಿಸಿ ಆಗಿರುವ ಲೋಪಗಳನ್ನು ಸರಿಪಡಿಸಬೇಕು.

ಅನುಬಂಧ4
ಬೆಂಗಳೂರಿನ
ಶಾಸಕರ ಭವನದಲ್ಲಿ ಗುಲಬರ್ಗಾ ವಿಭಾಗದ ಶಾಸಕರ ಸಭೆ (12.0707)
ದಿ
ಹಿಂದೂ ಪತ್ರಿಕೆ ವರದಿ (13.0707)

02_335_JOA-KUH

 

ಪ್ರಜಾವಾಣಿ ಪತ್ರಿಕೆ (13.0707)

03_335_JOA-KUH

ಅನುಬಂಧ5

ಡಾ. ಡಿ.ಎಂ. ನಂಜುಂಡಪ್ಪ ಸಮಿತಿಯ ವರದಿಯ ಎಂಟು ವರ್ಷಗಳ ವಿಶೇಷ ಅಭಿವೃದ್ಧಿ ಯೋಜನೆಯ ಅನುದಾನ ಹಂಚಿಕೆ ಸಮಸ್ಯೆಯ ಚರ್ಚೆಗೆ ಸರ್ಕಾರದ ಯೋಜನಾ ಇಲಾಖೆಯು ನಮಗೆ ನೀಡಿದ ಆಹ್ವಾನ ಪತ್ರ.
 (05 – 09 – 07)

04_335_JOA-KUH

ಅನುಬಂಧ6

ಡಾ. ಡಿ.ಎಂ.ನಂಜುಂಡಪ್ಪ ಸಮಿತಿ ವರದಿಯ ಅನುದಾನ ಹಂಚಿಕೆಗೆ ನೀಡಿದ್ದ ಸೂತ್ರವನ್ನು ಬದಲಾಯಿಸಿ ಸರ್ಕಾರವು ತನ್ನದೇ ಸೂತ್ರವನ್ನು ಅಳವಡಿಸಿ ಕೊಂಡಿದ್ದರಿಂದ ಉಂಟಾದ ಗುಲಬರ್ಗಾ ವಿಭಾಗದ ಅನುದಾನ ಕಡಿತದ ಬಗ್ಗೆ ರಾಜ್ಯದ ಸನ್ಮಾನ್ಯ ರಾಜ್ಯಪಾಲರಿಗೆ ಅನ್ಯಾಯ ಸರಿಪಡಿಸುವಂತೆ ನೀಡಿದ ಮನವಿ (010108) .

—-

01 – 01 – 08

Shri Rameshwar Thakur
Hon’ble Governor of Karnataka
Raj Bhavan, Bangalore 560001

Respected Sir,

Sub : Formula for the allocation of development funds in the Budget : 2008 – 09 for 8 – year Special Development Plan recommended by the Hith Power Committee for the Redressal of Regional Imbalances

Ref : 1. Karnataka Budged : 2007 – 08

  1. Final Report of the High Power Committee (2002)

* * *

With reference of the subject cited, we wish to state that the state government in its 2007 – 08 budget, has allocated a sum of Rs 1571.50 crore for the first year of the 8 – year Special Development Plan for redressal of regional imbalances. The allocation formula adopted by the government was 50:30:20 for the Most Backward Taluks (39) , More Backward Taluks (40) and Backward Taluks (35) respectively. But the formula suggested by the High Power committee (Dr.D.M.Nanjundappa Committee) is in the ratio of 40:20:15 for Gulbarga division, Belgaum division, Bangalore division and Mysore division respectively. The Committee’s allocation reflects the degree of deprivation measured by the Cumulative Deprivation Index (CDI) developed by it. The principal objective of this formula was to initiate and accelerate the process of convergence, so that in the course of eight years the Most Backward, More Backward and Backward taluks would be able to reach the state average level of development measured by the Comprehensive Composite Development Index (CCDI) .

But, it is disheartening to note that the formula adopted by the government to allocate the special development grant in its Budget for 2007 – 08 will not be able to reduce regional imbalances. On the contrary, it is likely to strengthen the forces of divergence. As per this formula, Gulbarga Division, the most backward region in the state, loses where as the other three division gain.

We did bring this discrepancy to the kind notice and perusal of the Hon’ble Minister for Planning and to the notice of the Chairman of the state Planning Board during the month of April, 2007. They did respond positively and invited us along with other three members of the High Power Committee for discussion on 13 – 09 – 07. We explained to them in detail the implication of their allocation for regional imbalances. They were convinced of the implications and said that they would constitute a core committee to deal with issue. But, it could not materialize since the state came under the President’s rule in November, 2007.

In this regard we submit herewith a comparative statement of allocation as per both the formulae – High Power Committee’s and Government’s – for your kind perusal. If your honour feels it necessary and grants us audience, we would like to present the differential implications of the two formulae for regional imbalances, in person. The other three members of the High Power Committee – Dr. Abdul Aziz, ISEC, Bangalore, Professor. Gopal Kadekodi, CMDR, Dharwad and Mr.Shanthappa, Director, Directorate of Economics and Statistics (Retd) – may kindly be invited.

We only entreat your honour to use the right formula for the allocation of special development grant while providing for it in the budget for 2008 – 09.

Looking forward to receiving favourable response from your esteemed end.

Thank You Sir,

your Faithfully

 (Dr. B. Seshedri)
Member, High Power Committee
for the Redressal of Regional Imbalances)

(T.R. Chandrasekhara)

Address for Correspondence
Dr. T.R. Chandrasekhara
Professor
Department of Development Studies
Kannada University, Hampi
Vidyaranya 583 276

Encl : A Comparative statement of allocation as per both the formulae – High Power Committee’s and Government’s

(see Appendix Table 2.4)

 

ಅನುಬಂಧ7

ನಮ್ಮ ಮನವಿಗೆ ಘನತೆವೆತ್ತ ರಾಜ್ಯಪಾಲರಿಂದ ಬಂದ ಉತ್ತರ
 (29 – 01 – 08)

05_335_JOA-KUH 

ಅನುಬಂಧ8

ಅನುದಾನ ಹಂಚಿಕೆ ಸೂತ್ರಕ್ಕೆ ಸಂಬಂಧಿಸಿದಂತೆ ಸರ್ಕಾರವು ತನ್ನ ಸೂತ್ರವನ್ನು ಕೈಬಿಟ್ಟು ಸಮಿತಿಯ ಸೂತ್ರವನ್ನು ಮರು ಅಳವಡಿಸಿಕೊಳ್ಳುವುದರ ಬಗ್ಗೆ ಹೊರಡಿಸಿದ ಆದೇಶ ಮತ್ತು ವಿಶೇಷ ಅಭಿವೃದ್ಧಿ ಯೋಜನೆ ಬಗ್ಗೆ ಮಾರ್ಗದರ್ಶನ ಬಗ್ಗೆ ನಮಗೆ ಯೋಜನಾ ಇಲಾಖೆ ಕಳುಹಿಸಿದ್ದ ಪತ್ರ

 (07 – 07 – 08)

06_335_JOA-KUH