Categories
e-ದಿನ

ಜನವರಿ-22

ಪ್ರಮುಖಘಟನಾವಳಿಗಳು:

613: ಕಾನ್ಸ್ಟಾಂಟಿನೋಪಾಲ್ನಲ್ಲಿ ಚಕ್ರವರ್ತಿ ಹೆರಾಕ್ಲಿಶಿಯಸ್ ಎಂಟು ತಿಂಗಳ ತನ್ನ ಮಗು ಕಾನ್ಸ್ಟಾಂಟಿಗೆ ಸಹ-ಚಕ್ರವರ್ತಿ ಎಂದು  ಕಿರೀಟಧಾರಣೆ ಮಾಡಿಸಿದ.

1760: ವಾಂಡಿವಾಶ್ ಕದನದಲ್ಲಿ ಫ್ರೆಂಚರನ್ನು ಸೋಲಿಸಿದ ಬ್ರಿಟಿಷರು,  ದಕ್ಷಿಣಭಾರತದಾದ್ಯಂತ ತಮ್ಮ ಪೂರ್ಣ ಪ್ರಭುತ್ವವನ್ನು  ಸಾಧಿಸಿದರು.

1840: ಎರಡನೇ ಆಂಗ್ಲ ಸಿಖ್ ಕದನದಲ್ಲಿ ಒಂಬತ್ತು ತಿಂಗಳ ನಿರಂತರ ಹೋರಾಟದಲ್ಲಿ ಕೊನೆಯ ಸಿಕ್ ಹೋರಾಟಗಾರರು ಸೋಲನುಭವಿಸುವುದರೊಂದಿಗೆ ಮುಲ್ತಾನ್ ಬ್ರಿಟಿಷರ ವಶವಾಯಿತು.

1905: ರಷ್ಯಾದ  ಸೈಂಟ್ ಪೀಟರ್ಸ್ ಬರ್ಗಿನಲ್ಲಿ  ಫಾದರ್ ಜಿಯೋರ್ಜಿ  ಗ್ಯಾಪನ್ ಎಂಬಾತನ ನೇತೃತ್ವದಲ್ಲಿ ಸರ್ವಾಧಿಕಾರಿ ಎರಡನೇ ತ್ಸಾರ್ ನಿಕಲಸನಿಗೆ ಮನವಿ ಅರ್ಪಿಸಲು ‘ವಿಂಟರ್ ಪ್ಯಾಲೇಸಿಗೆ’ ಮೆರವಣಿಗೆ ಹೊರಟಿದ್ದ ಕಾರ್ಮಿಕರು ಮತ್ತು ಅವರ ಕುಟುಂಬದವರ  ಮೇಲೆ ಇಂಪೀರಿಯಲ್ ಗಾರ್ಡ್ ಸೈನಿಕರು ಗುಂಡಿನ ಮಳೆ ಸುರಿಸಲಾಗಿ ನೂರಕ್ಕೂ ಹೆಚ್ಚು ಜನರು ಮೃತರಾದರು.  ಕೆಲವೊಂದು ವರದಿಗಳು, ಸತ್ತವರು ಮತ್ತು ಗಾಯಗೊಂಡವರ  ಸಂಖ್ಯೆ 1000ದಿಂದ  4000 ಎಂದೂ ಹೇಳಿದೆ.  ಹೀಗೆ ರಕ್ತಪಾತವಾದ ಈ ಘಟನೆ ‘ಬ್ಲಡಿ ಸಂಡೆ’ ಎಂಬ ಹೆಸರಿನಿಂದ  ಚರಿತ್ರೆಯಲ್ಲಿ ದಾಖಲಾಗಿದ್ದು,  ರಷ್ಯಾದ 1917ರ ಕ್ರಾಂತಿಗೆ ಒಂದು ಮಹತ್ವದ ಕಾರಣವಾಗಿ ಪರಿಣಮಿಸಿತು.

1927: ಟೆಡ್ಡಿ ವೇಕ್ ಲ್ಯಾಮ್ ಅವರು ವಿಶ್ವದಲ್ಲೇ ಪ್ರಥಮ ಬಾರಿಗೆ ಫುಟ್ಬಾಲ್ ಪಂದ್ಯದ ವೀಕ್ಷಕ ವಿವರಣೆಯನ್ನು ಆಕಾಶವಾಣಿಯಲ್ಲಿ ನೀಡಿದರು.  ಈ ಪಂದ್ಯವು ಅರ್ಸೆನಲ್ ಎಫ್.ಸಿ   ಮತ್ತು  ಶೆಫೀಲ್ಡ್ ಯುನೈಟೆಡ್ ಹೈಬರಿ ತಂಡಗಳ ನಡುವೆ ನಡೆಯಿತು.

1946: ಅಮೆರಿಕದ ಪ್ರಸಿದ್ಧ ಬೇಹುಗಾರಿಕೆ ಸಂಸ್ಥೆ  ‘ಸೆಂಟ್ರಲ್ ಇಂಟೆಲಿಜೆನ್ಸ್ ಏಜೆನ್ಸಿ’ಗೆ ಮುನ್ನುಡಿಯಾದ ‘ಸೆಂಟ್ರಲ್ ಇಂಟೆಲಿಜೆನ್ಸ್ ಗ್ರೂಪ್’ ಸ್ಥಾಪನೆಗೊಂಡಿತು.  ವಿಶ್ವದೆಲ್ಲೆಡೆಯಿಂದ  ಭದ್ರತಾ ವ್ಯವಸ್ಥೆಯ ನಿಟ್ಟಿನಲ್ಲಿ ವಿಷಯಗಳನ್ನು ಸಂಗ್ರಹಿಸಿ, ಸಂಸ್ಕರಿಸಿ, ವಿಶ್ಲೇಷಿಸುವ ಕಾರ್ಯವನ್ನು ನಿರ್ವಹಿಸುವ ಪ್ರಸಿದ್ಧ ಸಂಸ್ಥೆ ಇದಾಗಿದೆ.

1968: ಅಮೆರಿಕದ ಬಾಹ್ಯಾಕಾಶ ಅನ್ವೇಷಣೆಗಳಿಗೆ ಸಹಾಯಕವಾಗಲು ನಿರ್ಮಿಸಿದ ಲೂನಾರ್ ಮಾಡ್ಯೂಲ್ ಅನ್ನು ಹೊತ್ತ ಅಪೋಲೋ 5 ಗಗನ ವಾಹನವು ಆಗಸಕ್ಕೆ ಚಿಮ್ಮಿತು.

1973: ಗರ್ಭಪಾತವು ಕಾನೂನು ಬಾಹಿರವಲ್ಲವೆಂದು ರೋ ವಿ. ವೇಡ್ ಮತ್ತು ಡೋ ವಿ. ಬೋಲ್ಟನ್  ಕಾನೂನು ವ್ಯಾಜ್ಯದಲ್ಲಿ  ಅಮೆರಿಕದ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನಿಂದಾಗಿ, ಅಮೇರಿಕಾದ ಎಲ್ಲಾ 50 ರಾಜ್ಯಗಳೂ ಸ್ವಯಂಪ್ರೇರಿತ ಗರ್ಭಪಾತವು  ನ್ಯಾಯಸಮ್ಮತವೆಂದು ಅಂಗೀಕರಿಸಿದಂತಾಯಿತು.

1984: ಆಪಲ್ ಇನ್ಕಾರ್ಪೋರೇಶನ್ ಸಂಸ್ಥೆಯು  ಬಳಕೆದಾರ ಸ್ನೇಹಮುಖೀ ವ್ಯವಸ್ಥೆಯಾದ ‘ಗ್ರಾಫಿಕಲ್ ಯೂಸರ್ ಇಂಟರ್ಫೇಸ್’ ಮತ್ತು ‘ಮೌಸ್’ ಉಳ್ಳ,  ತನ್ನ ಮೊದಲ ಕಂಪ್ಯೂಟರ್ ಆದ   ‘ಆಪಲ್ ಮೆಖಿನ್ತೋಶ್’  ಅನ್ನು ಸೂಪರ್ ಬೌಲ್ 18 ಚಾನೆಲ್ಲಿನ ಜಾಹೀರಾತಿನಲ್ಲಿ ಪರಿಚಯಿಸಿತು.   ‘ಗ್ರಾಫಿಕಲ್ ಯೂಸರ್ ಇಂಟರ್ಫೇಸ್’ ಜಾರಿಯಾಗುವುದಕ್ಕೆ ಮುಂಚಿನ ಕಂಪ್ಯೂಟರುಗಳನ್ನು ಉಪಯೋಗಿಸುವ ಬಳಕೆದಾರನಿಗೆ,  ಕಂಪ್ಯೂಟರ್ ಜೊತೆಗಿನ ನಿಯಮಿತ ಸಂವಾದ ವ್ಯವಸ್ಥೆಯ ಮೂಲ ಜ್ಞಾನ ಮತ್ತು ರೂಢಿ ಅತ್ಯಗತ್ಯವಾಗಿತ್ತು.  ‘ಗ್ರಾಫಿಕಲ್ ಯೂಸರ್ ಇಂಟರ್ಫೇಸ್’ ವ್ಯವಸ್ಥೆಯಲ್ಲಿ ಬಳಕೆದಾರ ತನ್ನ ಮುಂದೆ ಕಂಪ್ಯೂಟರ್ ಪರದೆಯಲ್ಲಿ ಕಾಣುವ ಯಾವುದೇ ವ್ಯವಸ್ಥೆಯನ್ನಾಗಲೀ  ಮೌಸ್ ಬಳಕೆ ಮತ್ತು ಸುಲಭ ಕೀ ಬೋರ್ಡ್ ಅಕ್ಷರಗಳನ್ನು ಸ್ಪರ್ಶಿಸುವುದರ ಮೂಲಕ  ಹಾಗೂ ಕೆಲವೊಮ್ಮೆ  ಪರದೆಯಲ್ಲೇ ಬೆರಳಾಡಿಸುವುದರ ಮೂಲಕ ಚಾಲ್ತಿಗೊಳಿಸುವುದು ಸುಲಭ ಸಾಧ್ಯವಾಗಿದೆ.

1999: ಒರಿಸ್ಸಾದ ಕಿಯೋನ್ ಝಾರ್ ಎಂಬಲ್ಲಿ ಕಾರಿನಲ್ಲಿ ನಿದ್ರಿಸುತ್ತಿದ್ದ ಆಸ್ಟ್ರೇಲಿಯನ್ ಮಿಷಿನರಿ  ಗ್ರಹಾಮ್ ಸ್ಟೈನ್ಸ್   ಮತ್ತು ಅವರ ಇಬ್ಬರು ಪುತ್ರರನ್ನು ದುಷ್ಕರ್ಮಿಗಳು ಸಜೀವವಾಗಿ ದಹನ ಮಾಡಿದರು.

2001: ಭಾರತೀಯ ನೌಕಾಪಡೆಗೆ ‘ಐ ಎನ್ ಎಸ್ ಮುಂಬೈ’ ಮತ್ತು ‘ಐ ಎನ್ ಎಸ್ ಕಿರ್ಕ್’ ಸಮರನೌಕೆಗಳನ್ನು ಸೇರ್ಪಡೆಗೋಳಿಸಲಾಯಿತು.

2006: ಶ್ರವಣಬೆಳಗೊಳದಲ್ಲಿ 12 ವರ್ಷಕ್ಕೊಮ್ಮೆ ನಡೆಯುವ ಇತಿಹಾಸ ಪ್ರಸಿದ್ಧ ಮಹಾಮಸ್ತಕಾಭಿಷೇಕ ಮಹೋತ್ಸವಕ್ಕೆ ರಾಷ್ಟ್ರಪತಿ ಡಾ. ಎಪಿಜೆ ಅಬ್ದುಲ್ ಕಲಾಂ ಅವರು ಚಾಲನೆ ನೀಡಿದರು.

2007: ಅಂತಾರಾಷ್ಟ್ರೀಯ ಖ್ಯಾತಿಯ ಗುಜರಾತಿನ ಗೀತ್ ಸೇಥಿ ಎಂಟು ವರ್ಷಗಳ ನಂತರ ಮತ್ತೊಮ್ಮೆ ಬಿಲಿಯರ್ಡ್ಸ್ ರಾಷ್ಟ್ರೀಯ ಚಾಂಪಿಯನ್ ಆದರು. ಕರ್ನಾಟಕದ ಸ್ನೂಕರ್ ಮತ್ತು ಬಿಲಿಯರ್ಡ್ಸ್ ಸಂಸ್ಥೆ ಆವರಣದಲ್ಲಿ ನಡೆದ ಫೈನಲ್ ಸುತ್ತಿನ ಮುಖಾಮುಖಿಯಲ್ಲಿ ಸೇಥಿ ಅವರು  ಪಂಕಜ್ ಅಡ್ವಾಣಿ ಅವರನ್ನು ಸೋಲಿಸಿದರು.

2007: ಗಗನಕ್ಕೇರಿಸಿದ್ದ ‘ಎಸ್ ಆರ್ ಇ-1 ಮರುಬಳಕೆ ಉಪಗ್ರಹ’ವನ್ನು ಸುರಕ್ಷಿತವಾಗಿ ಭೂಮಿಗೆ ವಾಪಸ್ಸು ತಂದುಕೊಳ್ಳುವುದರಲ್ಲಿ ಭಾರತದ ಬಾಹ್ಯಾಕಾಶ ಸಂಸ್ಥೆಯ ವಿಜ್ಞಾನಿಗಳು ಯಶಸ್ವಿಯಾದರು. ಅಮೆರಿಕ, ಚೀನಾ, ರಷ್ಯಾದ ನಂತರದಲ್ಲಿ ಇಂತಹ ಸಾಧನೆ ಮಾಡಿದ ಜಗತ್ತಿನ ನಾಲ್ಕನೇ ರಾಷ್ಟ್ರವಾಗಿ ಭಾರತ ಹೊರಹೊಮ್ಮಿತು.

2008: “ನೇತಾಜಿ ಸುಭಾಶ್ ಚಂದ್ರ ಬೋಸರು 1945ರ ಆಗಸ್ಟ್ 18ರಂದು ತೈಪೆಯಲ್ಲಿ ಸಂಭವಿಸಿದ ವಿಮಾನ ಅಪಘಾತದಲ್ಲಿ ಮೃತರಾದರು” ಎಂದು ನೇತಾಜಿ ಸಾವಿನ ಕುರಿತಂತೆ ಸರ್ಕಾರ ಸಂಗ್ರಹಿಸಿದ ಸಮಗ್ರ ದಾಖಲೆಗಳ ಅನುಸಾರ ಕೇಂದ್ರ ಗೃಹ ಸಚಿವಾಲಯ ನಿರ್ಧಾರಕ್ಕೆ ಬಂದಿರುವುಗಾಗಿ ಮಿಷನ್ ನೇತಾಜಿ ಸಂಸ್ಥೆಗೆ ನೀಡಲಾದ ಮಾಹಿತಿಯಲ್ಲಿ ಕೇಂದ್ರ ಸರ್ಕಾರ ತಿಳಿಸಿತು.

2009: ರಾಜ್ಯದಲ್ಲೇ ಮೊತ್ತ ಮೊದಲ ಬಾರಿಗೆ ಘಟಕ ಪ್ರದೇಶ ಮೌಲ್ಯ (ಯುಎವಿ) ತೆರಿಗೆ ಪದ್ಧತಿಯನ್ನು ಬಿ.ಬಿ.ಎಂ.ಪಿ. ವ್ಯಾಪ್ತಿಯಲ್ಲಿ ಜಾರಿಗೆ ತರಲು ಅನುವು ಮಾಡಿಕೊಡುವ ಕರ್ನಾಟಕ ಪೌರನಿಗಮಗಳ (ತಿದ್ದುಪಡಿ) ಮಸೂದೆಯನ್ನು ವಿಧಾನಸಭೆ ಧ್ವನಿಮತದಿಂದ ಆಂಗೀಕರಿಸಿತು. ಇದರೊಂದಿಗೆ ಬಿಬಿಎಂಪಿ ವ್ಯಾಪ್ತಿಯಲ್ಲಿ 2003ರಿಂದ ಜಾರಿಯಲ್ಲಿದ್ದ ಸಿವಿಎಸ್ (ಕ್ಯಾಪಿಟಲ್ ವ್ಯಾಲ್ಯೂ ಸ್ಕೀಮ್) ತೆರಿಗೆ ಪದ್ಧತಿಗೆ ಬದಲಾಗಿ ತೆರಿಗೆ ಪಾವತಿದಾರರು ಸ್ವಯಂಘೋಷಿತ ಪದ್ಧತಿಯ ಮೂಲಕ ತಾವೇ ತೆರಿಗೆಯನ್ನು ನಿರ್ಧರಿಸಿಕೊಳ್ಳಬಹುದಾದ ವ್ಯವಸ್ಥೆ ಜಾರಿಗೆ ಬಂದಿದೆ.

2009: 125 ಗಂಟೆ ನಿರಂತರ ಪಾಠ ಮಾಡುವ ಮೂಲಕ ಮಧ್ಯಪ್ರದೇಶದ ಸಿಯೋನಿ ಜಿಲ್ಲೆಯಲ್ಲಿನ ಜಮ್ಮುನ್ ಪಾಣಿ ಗ್ರಾಮದ ದಿಲೀಪ್ ಕುಮಾರ್ ಚಾಂದೆಲ್ ಎಂಬ ಅಧ್ಯಾಪಕರು  ವಿಶ್ವ ದಾಖಲೆ ನಿರ್ಮಿಸಿದರು.

ಪ್ರಮುಖಜನನ/ಮರಣ:

1561: ಮಹಾನ್ ತತ್ವಜಾನಿ, ಆಡಳಿತಗಾರ ಮತ್ತು ವೈಜ್ಞಾನಿಕ  ತಳಹದಿಯ ಚಿಂತಕ ಫ್ರಾನ್ಸಿಸ್ ಬೇಕನ್ ಲಂಡನ್ನಿನ ಸ್ಟ್ರಾಂಡ್ ಎಂಬಲ್ಲಿ ಜನಿಸಿದರು.

1570: ಇಂಗ್ಲಿಷ್ ಇತಿಹಾಸಜ್ಞ, ರಾಜಕಾರಣಿ, ಕಾಟನ್ ಲೈಬ್ರೆರಿ ಜನಕ ಸರ್ ರಾಬರ್ಟ್ ಕಾಟನ್ ಜನಿಸಿದರು.  ಇವರು ಸಂಗ್ರಹಿಸಿದ ವಿವಿಧ ವಸ್ತುಗಳ ಅಪೂರ್ವ ಬರವಣಿಗೆಗಳು ಕಾಟನ್ ಲೈಬ್ರೆರಿ ಎಂದು ಪ್ರಸಿದ್ಧಿ ಪಡೆದದ್ದಷ್ಟೇ ಅಲ್ಲದೆ  ಮುಂದೆ ಬ್ರಿಟಿಷ್ ಲೈಬ್ರೆರಿಯ  ಪ್ರಾರಂಭಕ್ಕೆ ಪ್ರೇರಕವಾದವು.

1896: ಹಿಂದೀ ಸಾಹಿತ್ಯದ ಮಹತ್ವದ ಬರಹಗಾರರಾದ ಸೂರ್ಯಕಾಂತ ತ್ರಿಪಾಠಿ ಬಂಗಾಳದ ಮಿಡ್ನಾಪುರದಲ್ಲಿ ಜನಿಸಿದರು.  ‘ನಿರಾಲಾ’ ಎಂಬ ಕಾವ್ಯ ನಾಮದಲ್ಲಿ ಅವರ ಬರಹಗಳು ಪ್ರಸಿದ್ಧಿ ಪಡೆದಿವೆ.

1897: ಪ್ರಖ್ಯಾತ ಸಂಗೀತಕಾರ, ಸಂಗೀತ ಶಾಸ್ತ್ರಜ್ಞ ಮತ್ತು ಬರಹಗಾರ ದಿಲೀಪ್ ಕುಮಾರ್ ರಾಯ್ ಬಂಗಾಳದ ನಾಡಿಯಾ ಬಳಿಯ ಕೃಷ್ಣಾನಗರ್ ಎಂಬಲ್ಲಿ ಜನಿಸಿದರು.  1965ರ ವರ್ಷದಲ್ಲಿ ಕೇಂದ್ರ ಸಂಗೀತ ಮತ್ತು ನಾಟಕ ಅಕಾಡೆಮಿಯು ಇವರನ್ನು ಫೆಲೋಷಿಪ್ ಗೌರವ ನೀಡಿ  ಸನ್ಮಾನಿಸಿತು.

1908: ಸೋವಿಯತ್ ರಷ್ಯಾದ ಭೌತಶಾಸ್ತ್ರಜ್ಞ ಲೆವ್ ಲಂಡಾವು ಅವರು ಬಾಕು ಎಂಬಲ್ಲಿ ಜನಿಸಿದರು.  1962ರ ವರ್ಷದಲ್ಲಿ ಸೂಪರ್ ಫ್ಲೂಯಿಡಿಟಿ  ಕುರಿತಾಗಿ ಇವರು ನೀಡಿದ  ಮಹತ್ವದ ಸುಳಿವುಗಳಿಗಾಗಿ ನೊಬೆಲ್ ಭೌತಶಾಸ್ತ್ರದ ಪುರಸ್ಕಾರ ನೀಡಲಾಯಿತು.

1936: ಅಮೇರಿಕಾದ ಭೌತಶಾಸ್ತ್ರಜ್ಞ ಮತ್ತು  ರಸಾಯನ ಶಾಸ್ತ್ರಜ್ಞ ಅಲನ್ ಜೆ ಹೀಗರ್ ಲೋವಾ ಬಳಿಯ ಸಿಯೋಕ್ಸ್ ಸಿಟಿ ಎಂಬಲ್ಲಿ ಜನಿಸಿದರು.  ಕಂಡಕ್ಟಿವ್ ಪಾಲಿಮರ್ಸ್ ಕುರಿತಾದ ಸಂಶೋಧನೆಗಾಗಿ ಇವರಿಗೆ 2000ದ ವರ್ಷದಲ್ಲಿ ನೊಬೆಲ್ ರಸಾಯನ ಶಾಸ್ತ್ರದ ಪ್ರಶಸ್ತಿ ಸಂದಿತು.

1900: ಮೈಕ್ರೋಫೋನ್ ಸಹ ಸಂಶೋಧಕರಾದ ಡೇವಿಡ್ ಎಡ್ವರ್ಡ್ ಹ್ಯೂಸ್ ಅವರು ಲಂಡನ್ನಿನಲ್ಲಿ ನಿಧನರಾದರು.

1901: ಅರವತ್ತನಾಲ್ಕು ವರ್ಷಗಳ ಸುದೀರ್ಘ ಆಳ್ವಿಕೆಯ ಬಳಿಕ ಯುನೈಟೆಡ್ ಕಿಂಗ್ಡಂನ  ರಾಣಿ ವಿಕ್ಟೋರಿಯಾ ತಮ್ಮ 82ನೇ ವಯಸ್ಸಿನಲ್ಲಿ ನಿಧನರಾದರು.

1922: ಡ್ಯಾನಿಶ್ ಶಿಕ್ಷಣ ತಜ್ಞ ಮತ್ತು ರಾಜಕಾರಣಿ ಫ್ರೆಡ್ರಿಕ್ ಬಜೇರ್ ನಿಧನರಾದರು.  ಇವರಿಗೆ 1908ರ ವರ್ಷದಲ್ಲಿ ನೊಬೆಲ್ ಶಾಂತಿ ಪುರಸ್ಕಾರ ಸಂದಿತು.  ಅನೇಕ ಶಾಂತಿ ಸಂಸ್ಥೆಗಳನ್ನು ಹುಟ್ಟುಹಾಕಿದ್ದ ಇವರು ಸ್ವೀಡನ್ ಮತ್ತು ನಾರ್ವೆ ನಡುವೆ ಶಾಂತಿ ಸಹಕಾರ ಏರ್ಪಡುವ  ಮಾತುಕತೆಗಳನ್ನು ಏರ್ಪಾಡು ಮಾಡಿದ್ದರು.

2006: ಹಿರಿಯ ಹಿಂದಿ ಭಾಷಾ ವಿದ್ವಾಂಸ ಡಾ. ಮಂಡಗದ್ದೆ ಕಟ್ಟೆ ಭಾರತಿ ರಮಣಾರ್ಯ ನಿಧನರಾದರು. ಅವರು ಬೆಂಗಳೂರು ವಿಶ್ವವಿದ್ಯಾಲಯದ ಹಿಂದಿ ವಿಭಾಗದ ಮುಖ್ಯಸ್ಥರಾಗಿದ್ದರು. ಹಿಂದಿಯ ತುಳಸಿ ರಾಮಾಯಣವನ್ನು ಮಕರಂದ ವ್ಯಾಖ್ಯೆ ಹೆಸರಿನಲ್ಲಿ ಕನ್ನಡಕ್ಕೆ ಅನುವಾದ ಮಾಡಿದ್ದರು. ಐದು ಭಾಷೆಗಳಲ್ಲಿ ಪಾಂಡಿತ್ಯ ಹೊಂದಿದ್ದ ಅವರು ಪೂರ್ಣಪ್ರಜ್ಞ ವಿದ್ಯಾಪೀಠದ ಸ್ಥಾಪಕ ಕಾರ್ಯದರ್ಶಿಯಾಗಿ 28 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು.

2014: ಪ್ರಸಿದ್ಧ ಚಿತ್ರನಟ ಅಕ್ಕಿನೇನಿ ನಾಗೇಶ್ವರರಾವ್ ಹೈದರಾಬಾದಿನಲ್ಲಿ ನಿಧನರಾದರು.  ಚಿತ್ರ ನಟರಾಗಿ, ನಿರ್ಮಾಪಕರಾಗಿ, ಸ್ಟುಡಿಯೋ ನಿರ್ಮಿಸಿದವರಾಗಿ ವಿವಿಧ ರೀತಿಯ ಸಾಧನೆ ಮಾಡಿದ್ದ ಇವರಿಗೆ ದಾದಾ ಸಾಹೇಬ್ ಫಾಲ್ಕೆ ಗೌರವ, ಪದ್ಮಭೂಷಣ, ಪದ್ಮವಿಭೂಷಣವೂ ಸೇರಿದಂತೆ ಅನೇಕ ಗೌರವಗಳು ಸಂದಿದ್ದವು.