Categories
e-ದಿನ

ಜನವರಿ-23

ದಿನಾಚರಣೆಗಳು:

ಭಾರತೀಯ ಸ್ವಾತಂತ್ರ್ಯ ಹೋರಾಟಕ್ಕೆ ಕ್ರಾಂತಿಕಾರಕ ಸ್ಪರ್ಶ ನೀಡಿ ವಿಶ್ವದಾದ್ಯಂತ  ಬ್ರಿಟಿಷ್ ಆಡಳಿತದ ವಿರುದ್ಧ ಬಲ ಸಂಘಟಿಸಲು ಶ್ರಮಿಸಿದ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜಯಂತಿಯನ್ನು ಭಾರತದಲ್ಲಿ ಇಂದು ಆಚರಿಸಲಾಗುತ್ತಿದೆ.  ಮೊದ ಮೊದಲು ಒರಿಸ್ಸಾ, ತ್ರಿಪುರ ಮತ್ತು ಪಶ್ಚಿಮ ಬಂಗಾಳಗಳಲ್ಲಿ  ವಿಶೇಷವಾಗಿ ಆಚರಿಸಲ್ಪಡುತ್ತಿದ್ದ ನೇತಾಜಿಯವರ ಹುಟ್ಟುಹಬ್ಬ ಕ್ರಮೇಣವಾಗಿ ದೇಶದ ಎಲ್ಲೆಡೆಗಳಲ್ಲಿ ವಿಶಿಷ್ಟ ವೈವಿಧ್ಯತೆಗಳಿಂದ ಆಚರಣೆಗೊಳ್ಳುತ್ತಿದೆ.

1950-53 ಅವಧಿಯಲ್ಲಿ ಉತ್ತರ ಕೊರಿಯ ಮತ್ತು ದಕ್ಷಿಣ ಕೊರಿಯಾ ನಡುವಣ ಕೊರಿಯನ್ ಯುದ್ಧದಲ್ಲಿ ಖೈದಿಗಳಾಗಿದ್ದ 22,000 ಮಾಜಿ ಕಮ್ಮ್ಯೂನಿಸ್ಟ್ ಸೈನಿಕರು ಸ್ವತಂತ್ರ್ಯರಾಗಿ ತೈವಾನಿಗೆ ಹಿಂದಿರುಗಿದ ಸಂಕೇತವಾಗಿ  ಈ ದಿನವನ್ನು ‘ವರ್ಲ್ಡ್ ಫ್ರೀಡಮ್ ಡೇ’ ಎಂದು ಆಚರಿಸಲಾಗುತ್ತಿದೆ.

ಪ್ರಮುಖಘಟನಾವಳಿಗಳು:

393: ರೋಮನ್ ಚಕ್ರವರ್ತಿಯಾದ ಮೊದಲನೇ ಥಿಯೋಡಿಯಸ್ ತನ್ನ ಎಂಟು ವರ್ಷದ ಮಗ ಹೊನೋರಿಯಸ್ ಅನ್ನು  ಸಹ ಚಕ್ರವರ್ತಿಯೆಂದು ಘೋಷಿಸಿದ.

1368: ಚೀನಾದಲ್ಲಿ ಹೊಂಗ್ವು ಚಕ್ರವರ್ತಿಯಾಗಿ ಝೂ ಯುವಾನ್ ಜಂಗ್ ಪಟ್ಟಕ್ಕೆ ಬಂದ.  ಇದರಿಂದಾಗಿ ಚೀನಾವನ್ನು ಮೂರು ಶತಮಾನಗಳ ಕಾಲ ಆಳಿದ  ಮಿಂಗ್ ರಾಜವಂಶದ ಆಳ್ವಿಕೆ ಪ್ರಾರಂಭಗೊಂಡಿತು.

1556: ಚರಿತ್ರೆಯಲ್ಲೇ ಅತ್ಯಂತ ಭೀಕರವಾದ ಭೂಕಂಪ ಚೀನಾದ ಶಾಂಕ್ಸಿ ಎಂಬಲ್ಲಿ ಉಂಟಾಗಿ, ಸುಮಾರು 8,30,000 ಜನರು ನಿಧನರಾದರು.

1571: ಲಂಡನ್ನಿನಲ್ಲಿ ರಾಯಲ್ ಎಕ್ಸ್ಚೇಂಜ್ ವಾಣಿಜ್ಯ ಕೇಂದ್ರವು  ಪ್ರಾರಂಭಗೊಂಡಿತು. ಇದನ್ನು ಥಾಮಸ್ ಗ್ರೇಷಂ ಎಂಬ ವರ್ತಕರೊಬ್ಬರು ರಿಚರ್ಡ್ ಕ್ಲಫ್ ಎಂಬುವರ ಸಲಹೆಯ ಮೇರೆಗೆ ಸ್ಥಾಪಿಸಿದರು.  ತ್ರಾಪಿಜ್ಯ(trapezoidal)ದಂತಹ ಆಕೃತಿಯಲ್ಲಿ ಇದರ ವಿನ್ಯಾಸವಿದ್ದು,  ಬ್ರಿಟನ್ನಿನ ಪ್ರಥಮ ವಿಶಿಷ್ಟ ವಾಣಿಜ್ಯ ಕಟ್ಟಡವೆಂಬ ಕೀರ್ತಿಗೆ ಪಾತ್ರವಾಗಿದ್ದ, ಈ ಕಟ್ಟಡ  ಎರಡು ಸಲ ಬೆಂಕಿ ಆಕಸ್ಮಿಕಕ್ಕೆ ಸಿಲುಕಿ ಭಸ್ಮವಾಗಿತ್ತು.  ಈಗಿರುವ ಈ ಕಟ್ಟಡವನ್ನು  1840ರ ವರ್ಷದಲ್ಲಿ ವಿಲಿಯಂ ಟೈಟ್ ಅವರ ವಿನ್ಯಾಸದಲ್ಲಿ ನಿರ್ಮಿಸಲಾಗಿದೆ.  150 ವರ್ಷಗಳ ಕಾಲ ಲಾಯ್ಡ್ ಇನ್ಷೂರೆನ್ಸ್ ಸಂಸ್ಥೆಗೆ ತಾಣವಾಗಿದ್ದ ಈ ಸ್ಥಳ ಇಂದಿನ ದಿನಗಳಲ್ಲಿ ಪ್ರತಿಷ್ಟಿತ ಕಚೇರಿಗಳು, ಮಾರಾಟ ಮಳಿಗೆಗಳು ಮತ್ತು ಹೋಟೆಲುಗಳಿಗೆ ಆಶ್ರಯ ನೀಡಿದೆ.

1656: ಫ್ರೆಂಚ್ ದಾರ್ಶನಿಕ ಬ್ಲೈಸ್ ಪಾಸ್ಕಲ್ ಅವರು ತಮ್ಮ ಪ್ರಸಿದ್ಧ ಹದಿನೆಂಟು ಪತ್ರಗಳ ಸರಣಿಯಾದ ‘ಲೆಟರ್ಸ್ ಪ್ರಾವಿನ್ಸಿಯೇಲ್ಸ್’ನ  ಮೊದಲನೆಯ ಪತ್ರವನ್ನು ಪ್ರಕಟಿಸಿದರು.  ಇದನ್ನು ಅವರು ತಮ್ಮ ಮಿತ್ರ ಆಂಟೋಯಿನ್ ಆರ್ನಾಲ್ಡ್ ಅವರಿಗೆ ಬೆಂಬಲವಾಗಿ, ಅವರನ್ನು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕಾಗಿ ಶಿಕ್ಷೆಗೆ ಗುರಿಪಡಿಸಲು ಹೊರಟ ‘ಫ್ಯಾಕಲ್ಟಿ ಡಿ ಥಿಯಾಲಜಿ’ ಅಧಿಕಾರ ವರ್ಗಕ್ಕೆ   ಬರೆದರು.

1846: ಟುನಿಶಿಯಾದಲ್ಲಿ ಗುಲಾಮಗಿರಿ ಪದ್ಧತಿಯನ್ನು ರದ್ದುಗೊಳಿಸಲಾಯಿತು

1849: ಅಮೆರಿಕದಲ್ಲಿ ಪ್ರಥಮ ಮಹಿಳಾ ವೈದ್ಯರೆಂಬ ಕೀರ್ತಿಗೆ ಭಾಜನರಾದ ಎಲಿಜಬೆತ್ ಬ್ಲ್ಯಾಕ್ ವೆಲ್ ಅವರಿಗೆ  ಜಿನೀವಾ ಮೆಡಿಕಲ್ ಕಾಲೇಜು ಸ್ನಾತಕೋತ್ತರ ‘ಎಂ.ಡಿ’ ವೈದ್ಯಕೀಯ ಪದವಿ ನೀಡಿ ಗೌರವಿಸಿತು.

1873:  ಅಮೆರಿಕದ ಮೊಂಟಾನದಲ್ಲಿ ಯು.ಎಸ್. ಅಶ್ವದಳದವರು ಬಹುತೇಕ ಹೆಂಗಸರು ಮತ್ತು ಮಕ್ಕಳನ್ನು ಒಳಗೊಂಡ ಸ್ಥಳೀಯ ಅಮೆರಿಕನ್ನರನ್ನು ಕೊಂದುಹಾಕಿದರು.  ಇದು ‘ಮರಿಯಾಸ್ ಮಾರಣಹೋಮ’(Marias Massacre) ಎಂದು ಚರಿತ್ರೆಯಲ್ಲಿ ದಾಖಲಾಗಿದೆ.

1909: ತಾನು ಅಪಾಯದಲ್ಲಿದ್ದೇನೆ ಎಂಬ  ರೇಡಿಯೋ ಸಂದೇಶಗಳ ಸಂಜ್ಞೆಗಳು ಮೊದಲು ‘CQD’ ಎಂಬ ಹೆಸರಿನಲ್ಲಿ ಬಳಕೆಯಲ್ಲಿದ್ದವು. ಈಗ ಹೆಚ್ಚು ‘SOS’ ಸಂಜ್ಞೆ ಬಳಕೆಯಲ್ಲಿದೆ.   ಈ ‘CQD’ ಸಂಜ್ಞೆಯನ್ನು  ಮತ್ತೊಂದು ಹಡಗಿಗೆ ಡಿಕ್ಕಿ ಹೊಡೆದು ಅಪಾಯದಲ್ಲಿದ್ದ  ಆರ್.ಎಂ.ಎಸ್. ರಿಪಬ್ಲಿಕ್ ಹಡಗು ಮೊದಲಬಾರಿಗೆ ಬಳಸಿತು.

1912: ಮಾದಕ ವಸ್ತುಗಳ ನಿಯಂತ್ರಣ ಯತ್ನವಾದ ‘ಇಂಟರ್ನ್ಯಾಷನಲ್ ಓಪಿಯಮ್ ಕನ್ವೆನ್ಷನ್’ ನೆದರ್ಲ್ಯಾಂಡಿನ ಹೇಗ್ ನಗರದಲ್ಲಿ ಆರಂಭಗೊಂಡಿತು.

1950: ಇಸ್ರೇಲಿನ ರಾಷ್ಟ್ರೀಯ ನಿರ್ಣಾಯಕ ಮಂಡಲಿಯಾದ ‘ಕ್ನೆಸೆಟ್’, ಜೆರುಸಲೇಮ್ ಅನ್ನು ತನ್ನ ರಾಷ್ಟ್ರದ ರಾಜಧಾನಿಯನ್ನಾಗಿಸಿಕೊಳ್ಳುವ ನಿರ್ಣಯವನ್ನು ಅಂಗೀಕರಿಸಿತು.

1957: ಅಮೆರಿಕದ  ವಾಲ್ಟರ್ ಫ್ರೆಡ್ರಿಕ್ ಮಾರಿಸನ್ ಅವರು ತಮ್ಮ ನಿರ್ಮಿತಿಯಾದ ‘ಹಾರುವ ತಟ್ಟೆ’ಯ ಹಕ್ಕನ್ನು ವಾಮ್-ಓ ಟಾಯ್ ಸಂಸ್ಥೆಗೆ ಮಾರಿದರು.  ಆ ಸಂಸ್ಥೆ ಮುಂದೆ ಇದನ್ನು ‘ಫ್ರಿಸ್ಬೀ’ ಎಂದು ಹೆಸರಿಸಿತು.

1960: ಅಮೆರಿಕದ ಸಮುದ್ರಾದಾಳಕ್ಕೆ ಜಿಗಿಯುವ ವ್ಯವಸ್ಥೆಯಾದ ‘Bathyscaphe USS Trieste’ ಪೆಸಿಫಿಕ್ ಸಾಗರದಲ್ಲಿ 10,911 ಮೀಟರ್ (35,797 ಅಡಿ) ಆಳಕ್ಕೆ ಜಿಗಿದ ದಾಖಲೆ ನಿರ್ಮಿಸಿತು.

1973: ಅಮೆರಿಕದ ಅಧ್ಯಕ್ಷರಾದ ರಿಚರ್ಡ್ ನಿಕ್ಸನ್ ಅವರು ವಿಯೆಟ್ನಾಂ ಜೊತೆಗೆ ಶಾಂತಿ ಒಪ್ಪಂದ ಏರ್ಪಟ್ಟಿರುವುದಾಗಿ ಘೋಷಿಸಿದರು.

1977: ಭಾರತದಲ್ಲಿ ಜನತಾ ಪಕ್ಷದ ಉದಯವಾಯಿತು. ಆಳುವ ಪಕ್ಷವಾದ ಕಾಂಗ್ರೆಸ್ ಮತ್ತು ಅದು ಹೇರಿದ  ತುರ್ತು ಪರಿಸ್ಥಿತಿಯ ವಿರುದ್ಧ ವಿರೋಧ ಪಕ್ಷಗಳು ಒಟ್ಟಾಗಿ ಜನತಾ ಪಕ್ಷವನ್ನು ಹುಟ್ಟು ಹಾಕಿದವು. ಕಾಂಗ್ರೆಸ್ (ಸಂಸ್ಥಾ), ಜನಸಂಘ, ಭಾರತೀಯ ಲೋಕದಳ ಮತ್ತು ಸಂಯುಕ್ತ ಸಮಾಜವಾದಿ ಪಕ್ಷಗಳು ಈ ಜನತಾ ಪಕ್ಷದಲ್ಲಿ ವಿಲೀನಗೊಂಡವು.

1931: ಲಾರ್ಡ್ ಇರ್ವಿನ್ ಮೊತ್ತ ಮೊದಲ ಬಾರಿಗೆ ನವದೆಹಲಿಯ ‘ವೈಸ್ ರಾಯ್ ಹೌಸ್’ ನಲ್ಲಿ ವಾಸ್ತವ್ಯ ಹೂಡಿದರು. ಈ ಕಟ್ಟಡ ಈಗ ‘ರಾಷ್ಟ್ರಪತಿ ಭವನ’ ಆಗಿದೆ. ಎಡ್ವಿನ್ ಲ್ಯುಟಿಯೆನ್ಸ್ ಅವರು ವಿನ್ಯಾಸಗೊಳಿಸಿದ ಈ ಕಟ್ಟಡದ ನಿರ್ಮಾಣವು  1913ರಲ್ಲಿ ಆರಂಭಗೊಂಡಿತು. 18,580 ಚದರ ಅಡಿಗಳಷ್ಟು ವ್ಯಾಪ್ತಿಯಲ್ಲಿ ನಿರ್ಮಾಣಗೊಂಡಿರುವ ಈ ಕಟ್ಟಡಕ್ಕೆ ಸಂದ  ಒಟ್ಟು ವೆಚ್ಚ 1.40 ಕೋಟಿ ರೂಪಾಯಿಗಳು. ಲ್ಯೂಟಿಯನ್ಸ್ ಅವರಿಗೆ ಸಂದ ಶುಲ್ಕ 5000 ಪೌಂಡುಗಳು.

1997: ಮ್ಯಾಡಲೀನ್ ಆಲ್ ಬ್ರೈಟ್ ಅವರು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ(ಯುನೈಟೆಡ್ ಸ್ಟೇಟ್ಸ್ ಸೆಕ್ರೆಟರಿ ಆಫ್ ಸ್ಟೇಟ್) ಆದ   ಪ್ರಥಮ ಮಹಿಳೆಯಾದರು.

1998: ನೆಟ್ ಸ್ಕೇಪ್ (Netscape)  ಸಂಸ್ಥೆಯು ಮೊಸಿಲ್ಲಾ (Mozilla) ಎಂಬ  ಅಂತರಜಾಲ ಸಂವಹನ ವವ್ಯಸ್ಥೆ (ಬ್ರೌಸರ್) ಅನ್ನು ಯಾರು ಬೇಕಾದರೂ ಉನ್ನತೀಕರಣಗೊಳಿಸಲು ಆಸ್ಪದವೀಯುವ ‘ಓಪನ್ ಸೋರ್ಸ್’ ನೆಲೆಯಲ್ಲಿ ಬಿಡುಗಡೆ ಮಾಡಿತು.

2002: ಪಾಕಿಸ್ತಾನದ ಕರಾಚಿಯಲ್ಲಿ ಅಮೆರಿಕದ ಪತ್ರಕರ್ತ ಡೇನಿಯಲ್ ಪರ್ಲ್ ಅವರನ್ನು ಅಪಹರಿಸಿ ನಂತರ ಕೊಲೆಗೈಯಲಾಯಿತು.

2006:  ಕಲಾತ್ಮಕ ಮತ್ತು ವಾಣಿಜ್ಯ ಚಲನಚಿತ್ರಗಳೆರಡರಲ್ಲೂ ಹೆಸರು ಮಾಡಿರುವ ಭಾರತೀಯ ಚಿತ್ರನಟಿ ಶಬನಾ ಅಜ್ಮಿ ಅವರು ವರ್ಲ್ಡ್ ಎಕನಾಮಿಕ್ ಫೋರಮ್ ನೀಡುವ ಕ್ರಿಸ್ಟಲ್ ಗೌರವಕ್ಕೆ ಪಾತ್ರರಾದರು.

2007: 2005-06ನೇ ಸಾಲಿನ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳನ್ನು ಬಾಗಲಕೋಟೆಯ ಜಿಲ್ಲಾ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿದ್ದ ಸಮಾರಂಭದಲ್ಲಿ ವಿತರಿಸಲಾಯಿತು.   ಈ ಸಂದರ್ಭದಲ್ಲಿ ಹಿರಿಯ ನಟಿ ಜಯಂತಿ ಅವರಿಗೆ ರಾಜ್ ಕುಮಾರ್ ಪ್ರಶಸ್ತಿ, ವಿ. ರವಿಚಂದ್ರನ್ ಅವರಿಗೆ ಪುಟ್ಟಣ್ಣ ಕಣಗಾಲ್ ಪ್ರಶಸ್ತಿ, ಛಾಯಾಗ್ರಾಹಕ ಎಸ್. ರಾಮಚಂದ್ರ ಅವರಿಗೆ ಜೀವಮಾನದ ಸಾಧನೆ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು.

2009: ಚಲನಚಿತ್ರಗಳಲ್ಲಿ ಧೂಮಪಾನ ದೃಶ್ಯಗಳನ್ನು ನಿಷೇಧಿಸಿ ಕೇಂದ್ರ ಸರ್ಕಾರ 2006 ವರ್ಷದಲ್ಲಿ  ಹೊರಡಿಸಿದ ಅಧಿಸೂಚನೆಯನ್ನು ದೆಹಲಿ ಉಚ್ಛ ನ್ಯಾಯಾಲಯವು ರದ್ದುಪಡಿಸಿತು.

2009: ಪಾಕಿಸ್ಥಾನದ ದಕ್ಷಿಣ ಸಿಂಧ್ ಪ್ರಾಂತ್ಯದಲ್ಲಿ ಪ್ರಾಚೀನ ಮೊಹೆಂಜೊದಾರೊಕ್ಕಿಂತಲೂ ಹಳೆಯದಾದ, ಸುಮಾರು 5,500 ವರ್ಷಗಳ ಇತಿಹಾಸವಿರುವ ನಾಗರಿಕತೆಯ ಕುರುಹು ಪತ್ತೆಯಾಯಿತು. 22 ಪುರಾತತ್ವಶಾಸ್ತ್ರಜ್ಞರನ್ನು ಒಳಗೊಂಡ ತಂಡವೊಂದು ಸಿಂಧ್ ಪ್ರಾಂತ್ಯದ ಸುಕ್ಕರ್ ಜಿಲ್ಲೆಯ ‘ಲಖಿಯಾ ಜೊ ದರೊ’ ಎಂಬಲ್ಲಿ  ಕೈಗೊಂಡ ಉತ್ಖನನದ ವೇಳೆ ಅಮೂಲ್ಯ ಹರಳುಗಳು, ಗೃಹೋಪಯೋಗಿ ಮಡಕೆಗಳು, ತಾಮ್ರ ಮತ್ತು ಇತರ ಲೋಹಗಳು ಪತ್ತೆಯಾದವು. ‘ಇದು ಮೊಹೆಂಜೊದಾರೊ ನಾಗರಿಕತೆಗಿಂತ ಹಳೆಯದು ಎಂದು ನಾವು ಸದ್ಯ ಹೇಳಬಲ್ಲೆವು’ ಎಂದು ಈ ಉತ್ಖನನ ಯೋಜನೆಯ ನಿರ್ದೇಶಕ ಗುಲಾಂ ಮುಸ್ತಫಾ ‘ಡಾನ್’ ಪತ್ರಿಕೆಗೆ ತಿಳಿಸಿದರು.

ಪ್ರಮುಖಜನನ/ಮರಣ:

1809: ಭಾರತದ ಸ್ವಾತಂತ್ರ್ಯಕ್ಕಾಗಿ ತನ್ನ ಸಂಗಡಿಗರೊಂದಿಗೆ ಹೋರಾಡಿದ ಸುರೇಂದ್ರ ಸೈ ಅವರು ಒದಿಶಾದ ಸಂಬಾಲ್ಪುರದ ಬಳಿಯ ಖಿಂಡ ಎಂಬಲ್ಲಿ ಜನಿಸಿದರು.  ಇವರು ತಮ್ಮ ಅನೇಕ ಸಂಗಡಿಗರ ಜೊತೆಗೂಡಿ ಪಶ್ಚಿಮ ಒದಿಶಾದ  ಅನೇಕ ಪ್ರಾಂತ್ಯಗಳು ಬ್ರಿಟಿಷರಿಗೆ ದಕ್ಕದ ಹಾಗೆ  ಹೋರಾಟ ನಡೆಸಿದ್ದರು.  ಬ್ರಿಟಿಷ್ ಬಂಧನಕ್ಕೆ ಸಿಲುಕಿ ಹಿಂಸೆಗೊಳಗಾದ ಇವರು 1884ರ ಮೇ 23ರಂದು ಅಸಿರ್ ಘರ್ ಸೆರೆಮನೆಯಲ್ಲಿ ಕೊನೆಯುಸಿರೆಳೆದರು.

1814: ಭಾರತೀಯ ಪುರಾತತ್ವ ಸಂಶೋಧನಾ ಪಿತಾಮಹರೆಂದು ಪ್ರಸಿದ್ಧರಾಗಿರುವ  ಕನ್ನಿಂಗ್ ಹ್ಯಾಮ್ ಅವರು ಲಂಡನ್ನಿನಲ್ಲಿ ಜನಿಸಿದರು. ಅಲೆಗ್ಸಾಂಡರ್ ಭಾರತದ ಪ್ರಾಚೀನ ಸಂಸ್ಕೃತಿಗಳಲ್ಲಿ ಒಂದಾದ ಹರಪ್ಪದ ಕುರುಹುಗಳನ್ನು ಪತ್ತೆ ಮಾಡಿ ಭಾರತೀಯ ಪುರಾತತ್ವ ಶೋಧನೆಗೆ ಹೊಸ ಮಾರ್ಗವನ್ನು ನಿರ್ಮಿಸಿಕೊಟ್ಟರು. ವೃತ್ತಿಯಲ್ಲಿ ಬ್ರಿಟಿಷ್ ಸೇನೆಯ ಇಂಜಿನಿಯರ್  ಆಗಿದ್ದರೂ ಇತಿಹಾಸದ ಬಗ್ಗೆ ಅತೀವ ಆಸಕ್ತಿ ಹೊಂದಿದ್ದ ಅವರು,   1862ರಲ್ಲಿ ಭಾರತ ಸರ್ಕಾರದ ಪುರಾತತ್ವ ಸಂಶೋಧನಾ ಇಲಾಖೆಯನ್ನು ಸ್ಥಾಪಿಸಿ, ಅದರ ಸರ್ವೇಯರ್ ಆಗಿ,  ನಂತರ ಡೈರೆಕ್ಟರ್ ಜನರಲ್ ಆಗಿ ಕಾರ್ಯನಿರ್ವಹಿಸಿದರು.

1876: ಜರ್ಮನಿಯ ವಿಜ್ಞಾನಿ ಓಟ್ಟೋ ಡೀಲ್ಸ್ ಹ್ಯಾಂಬರ್ಗಿನಲ್ಲಿ ಜನಿಸಿದರು.  ಸಿಂಥೆಟಿಕ್ ರಬ್ಬರ್ ಮತ್ತು ಪ್ಲಾಸ್ಟಿಕ್ ಕುರಿತಾದ ಇವರ ಉಪಯುಕ್ತ  ಸಂಶೋಧನೆಗಾಗಿ 1950ರಲ್ಲಿ ರಸಾಯನ ಶಾಸ್ತ್ರಜ್ಞರಿಗೆ ನೀಡುವ ನೊಬೆಲ್ ಪುರಸ್ಕಾರ ನೀಡಲಾಯಿತು.

1893: ರಾಳ್ಲಪಲ್ಲಿ ಅನಂತ ಕೃಷ್ಣಶರ್ಮರು ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಒಂದು ಸಣ್ಣ ಗ್ರಾಮವಾದ ರಾಳ್ಲಪಲ್ಲಿಯಲ್ಲಿ  ಜನಿಸಿ, ವಿದ್ಯಾಭ್ಯಾಸದ ನಿಮಿತ್ತ ಮೈಸೂರು ಸೇರಿದರು. ವ್ಯಾಕರಣ ಅಲಂಕಾರ ಶಾಸ್ತ್ರಗಳಲ್ಲಿ ಪಾಂಡಿತ್ಯ ಗಳಿಸುವುದರ ಜೊತೆಗೆ ಸಂಗೀತದಲ್ಲಿಯೂ ಅತ್ಯುತ್ತಮ ಮಟ್ಟದ ಜ್ಞಾನ ಸಂಪಾದಿಸಿಕೊಂಡರು. ಮೈಸೂರು ವಿಶ್ವವಿದ್ಯಾಲಯದಲ್ಲಿ ತೆಲುಗು   ಪ್ರಾಧ್ಯಾಪಕರಾಗಿ  ವೃತ್ತಿಯಲ್ಲಿದ್ದ ಶ್ರೀಯುತರು, ರಾಜ್ಯ ಸಂಗೀತ ನಾಟಕ ಅಕಾಡೆಮಿ ಪುರಸ್ಕಾರ, ಗೌರವ ಡಾಕ್ಟರೇಟ್‌ ಮುಂತಾದ ಅನೇಕ ಸನ್ಮಾನಗಳಿಗೆ ಭಾಜನರಾಗಿದ್ದರು. 11-03-1979ರಂದು ತಿರುಪತಿ ತಿರುಮಲ ದೇವಸ್ಥಾನದ ‘ಸಂಗೀತ ಸಾಹಿತ್ಯ ಆಸ್ಥಾನ ವಿದ್ವಾನ್‌’ ಗೌರವ ಪಡೆದ ಒಂದೆರಡು ಘಂಟೆಗಳಲ್ಲೇ ನಿಧನರಾದರು.

1894: ಪ್ರಸಿದ್ಧ ಬರಹಗಾರ್ತಿ ಜ್ಯೋತಿರ್ಮಯಿ ದೇವಿ ಜಯಪುರದಲ್ಲಿ ಜನಿಸಿದರು.  ಬಂಗಾಳದಲ್ಲಿ ನೆಲೆಸಿದ ಇವರು ಸಣ್ಣಕತೆಗಳಿಗೆ ಪ್ರಸಿದ್ಧರಾಗಿದ್ದು, ಜಯಪುರ ಮತ್ತು ಬಾಂಗ್ಲಾದೇಶದ ಭಾಗಗಳಲ್ಲಿ ಕಳೆದ ತಮ್ಮ ಬಾಲ್ಯದ ಜೀವನವನ್ನು ಮನಮುಟ್ಟುವಂತೆ ಚಿತ್ರಿಸಿದ್ದಾರೆ.

1897: ಮಹಾನ್ ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು ಕಟಕ್ ನಗರದಲ್ಲಿ ಜನಿಸಿದರು.  1920 ಮತ್ತು  1930ರ ದಶಕದಲ್ಲಿ ಯುವ ಕ್ರಾಂತಿಕಾರಿ ಕಾಂಗ್ರೆಸ್ ನಾಯಕರಾಗಿದ್ದ ಇವರು,  1938-39ರ ಅವಧಿಯಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸಿನ  ಅಧ್ಯಕ್ಷರಾಗಿದ್ದರು. ತಮ್ಮ ಕ್ರಾಂತಿಕಾರಿ ಮನೋಭಾವಕ್ಕೆ ಅನುಗುಣವಾಗಿ ದೇಶದಿಂದ ಹೊರಹೋಗಿ ಬ್ರಿಟಿಷರ ವಿರುದ್ಧ ವಿರುದ್ಧ ಬಲ ಸಂಘಟಿಸಲು ಶ್ರಮಿಸಿದ ಅವರು, ತೈವಾನಿನಲ್ಲಿ ವಿಮಾನ ಅಪಘಾತದಲ್ಲಿ ನಿಧನರಾದರು ಎನ್ನಲಾಗಿದೆ.

1907: ಜಪಾನಿನ ನೊಬೆಲ್ ಪ್ರಶಸ್ತಿ ಪುರಸ್ಕೃತ ವಿಜ್ಞಾನಿ ಹೈಡೆಕಿ ಯುಕಾವ ಅವರು ಟೋಕಿಯೋದಲ್ಲಿ ಜನಿಸಿದರು.  1949ರ ವರ್ಷದಲ್ಲಿ ಭೌತಶಾಸ್ತ್ರದ ಮಹತ್ವದ ಸಾಧನೆಗಳಿಗಾಗಿ ಅವರಿಗೆ ನೊಬೆಲ್ ಪುರಸ್ಕಾರ ಸಂದಿತು.

1915: ಸೈಂಟ್ ಲೂಸಿಯಾದ ಬರ್ಬಾಡಿಯನ್ ಅರ್ಥಶಾಸ್ತ್ರಜ್ಞರಾದ ವಿಲಿಯಂ ಅರ್ಥರ್ ಲೂಯಿಸ್ ಜನಿಸಿದರು.  ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಬಂಡವಾಳ ಮತ್ತು ಕೂಲಿಯ ಕುರಿತಾಗಿ ಮಹತ್ವದ ಅಧ್ಯಯನ ಕೈಗೊಂಡು ಸಂಶೋಧನಾತ್ಮಕ ಕೊಡುಗೆಗಳನ್ನು ನೀಡಿದ ಇವರಿಗೆ 1979ರ ವರ್ಷದಲ್ಲಿ ಅರ್ಥಶಾಸ್ತ್ರದ ನೊಬೆಲ್ ಪುರಸ್ಕಾರ ಸಂದಿತು.

1918: ನೊಬೆಲ್ ಪುರಸ್ಕೃತ  ಜೈವಿಕ ವಿಜ್ಞಾನಿ ಮತ್ತು  ವೈದ್ಯೆ ಗೆರ್ಟ್ರೂಡ್ ಬಿ. ಎಲಿಯಾನ್ ನ್ಯೂಯಾರ್ಕ್ ನಗರದಲ್ಲಿ ಜನಿಸಿದರು.  ಈಕೆ ಹಲವಾರು ನವೀನ ವಿಧಾನಗಳಲ್ಲಿ ಹೊಸ ಹೊಸ ಔಷಧಗಳನ್ನು ಕಂಡುಹಿಡಿದಿದ್ದು, ಇವುಗಳಲ್ಲಿ  ಏಡ್ಸ್ ರೋಗಕ್ಕೆ  ಸಲ್ಲುವ ‘AZT’, ಆರ್ಗನ್ ಟ್ರಾನ್ಸ್ ಪ್ಲಾಂಟ್ಗಳಲ್ಲಿ  ಉಪಯೋಗಿಸುವ ‘ಅಜತಿಯೋಪ್ರೈನ್’, ‘ಇಮ್ಯುನೋ ಸಪ್ರೆಸಿವ್ ಡ್ರಗ್ಸ್’ ಮುಂತಾದವು ಪ್ರಮುಖವಾಗಿವೆ.  ಇವರಿಗೆ 1988ರ ವರ್ಷದಲ್ಲಿ, ಔಷದ ಕ್ಷೇತ್ರದಲ್ಲಿನ ಮಹತ್ವದ ಸಾಧನೆಗಾಗಿ ನೊಬೆಲ್ ಪುರಸ್ಕಾರ ಸಂದಿದೆ.

1920: ‘ಹಾರುವ ತಟ್ಟೆಗಳು’ ಅಥವಾ  ಫ್ಲಯಿಂಗ್ ಡಿಸ್ಕ್ ಸೃಷ್ಟಿಕರ್ತ ವಾಲ್ಟರ್ ಫ್ರೆಡ್ರಿಕ್ ಮಾರಿಸನ್ ಅಮೆರಿಕದ ಉಟಾಹ್ ಬಳಿಯ ರಿಚ್ ಫೀಲ್ಡ್ ಎಂಬಲ್ಲಿ ಜನಿಸಿದರು.   ಮುಂದೆ ಅವರು ತಮ್ಮ ‘ಹಾರುವ ತಟ್ಟೆ’ಯ ಹಕ್ಕನ್ನು ವಾಮ್-ಓ ಟಾಯ್ ಸಂಸ್ಥೆಗೆ ಮಾರಿದರು.  ಆ ಸಂಸ್ಥೆ ಅದನ್ನು  ‘ಫ್ರಿಸ್ಬೀ’ ಎಂದು ಪ್ರಸಿದ್ಧಿಪಡಿಸಿತು.

1927: ಶಿವಸೇನಾ ರಾಜಕೀಯ ಪಕ್ಷ ಸ್ಥಾಪಕರಾದ ಬಾಳ್ ಕೇಶವ್ ಠಾಕ್ರೆ ಅವರು ಪುಣೆಯಲ್ಲಿ ಜನಿಸಿದರು.  ಠಾಕ್ರೆ ಅವರು ವ್ಯಂಗ್ಯಚಿತ್ರಕಾರರಾಗಿ ಮತ್ತು  ಪತ್ರಕರ್ತರಾಗಿ, ಪತ್ರಿಕೋದ್ಯಮಿಯಾಗಿ ತಮ್ಮ ಪ್ರಾರಂಭಿಕ ವೃತ್ತಿ ಜೀವನವನ್ನು ನಡೆಸಿ ಮುಂದೆ ಶಿವಸೇನಾ ಪಕ್ಷವನ್ನು ಸ್ಥಾಪಿಸಿದರು.   2012ರ ವರ್ಷದಲ್ಲಿ ನಿಧನರಾದ ಅವರು ತಮ್ಮ ಕೊನೆಯ ದಿನಗಳವರೆವಿಗೂ ‘ಮಾರ್ಮಿಕ್’ ಪತ್ರಿಕೆಗೆ ವ್ಯಂಗ್ಯಚಿತ್ರಗಳನ್ನೂ ಮತ್ತು ‘ಸಾಮ್ನಾ’ ಪತ್ರಿಕೆಗೆ ಲೇಖನಗಳನ್ನೂ ಬರೆಯುತ್ತಿದ್ದರು.

1929: ಜರ್ಮನಿಯಲ್ಲಿ ಜನಿಸಿ, ಕೆನಡಾದ ನಿವಾಸಿಯಾದ ಜಾನ್ ಪೊಲಾನೈ ಬರ್ಲಿನ್ ನಗರದಲ್ಲಿ ಜನಿಸಿದರು.  ಕೆಮಿಕಲ್ ಕಿನೆಟಿಕ್ಸ್ ಕುರಿತಾದ ಸಂಶೋಧನೆಗಾಗಿ ಅವರಿಗೆ ರಸಾಯನ ಶಾಸ್ತ್ರದ  1986ರಲ್ಲಿ ನೊಬೆಲ್ ಪುರಸ್ಕಾರ ಸಂದಿತ್ತು.

1930: ಕವಿ ಮತ್ತು ನಾಟಕಕಾರ ಡೆರೆಕ್ ವಾಲ್ಕಾಟ್ ಅವರು ಸೈಂಟ್ ಲೂಸಿಯಾದ ಕ್ಯಾಸ್ಟ್ರೀಸ್ ಎಂಬಲ್ಲಿ ಜನಿಸಿದರು.  ಅವರು ತಮ್ಮ  ‘ಒಮೆರೋಸ್’ ಕವಿತಾ ಸಂಕಲನ ಮತ್ತು ಹಲವಾರು ನಾಟಕಗಳ ಕೃತಿಯಿಂದ ಪ್ರಸಿದ್ಧರಾಗಿದ್ದು, 1992ರ ನೊಬೆಲ್ ಪ್ರಶಸ್ತಿಯೇ ಅಲ್ಲದೆ ವಿಶ್ವದ ಅನೇಕ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.

1953: ಕನ್ನಡದ ಪ್ರಸಿದ್ಧ ರಂಗಕರ್ಮಿ ಮತ್ತು ಚಲನಚಿತ್ರ ನಿರ್ದೇಶಕರಾದ ತಲಕಾಡು ಶ್ರೀನಿವಾಸಯ್ಯ ನಾಗಾಭರಣ ಬೆಂಗಳೂರಿನಲ್ಲಿ ಜನಿಸಿದರು.  ಮೂರು ಬಾರಿ ರಾಷ್ಟ್ರೀಯ ಭಾವೈಕ್ಯತೆಗಾಗಿ ನೀಡುವ ನರ್ಗಿಸ್ ದತ್ ಚಲನಚಿತ್ರ ಪ್ರಶಸ್ತಿಯ ಜೊತೆಗೆ ಇನ್ನೂ ಅನೇಕ ರಾಷ್ಟ್ರಮಟ್ಟದ ಚಲನಚಿತ್ರ ಪಶಸ್ತಿಗಳು, ಇಪ್ಪತ್ತಕ್ಕೂ ಹೆಚ್ಚು ರಾಜ್ಯ ಪ್ರಶಸ್ತಿಗಳು ಮತ್ತು ಆರು ಬಾರಿ ಪನೋರಮಾಗೆ ಆಯ್ಕೆಗೊಂಡ ಸಾಧನೆಗಳಲ್ಲಿ ಇವರ  ನಿರ್ದೇಶನದ ಚಿತ್ರಗಳು ಭಾಗಿಯಾಗಿವೆ.   ಅವರು ಚಲನಚಿತ್ರ ಅಕಾಡೆಮಿಯ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು.

2007:  ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಕಲಾವಿದ ಎಂ.ಎಸ್. ಚಂದ್ರಶೇಖರ್  ಬೆಂಗಳೂರಿನಲ್ಲಿ ನಿಧನರಾದರು.  ಮೂಲತಃ ಮೈಸೂರಿನವರಾದ ಚಂದ್ರಶೇಖರ್ ಅವರು ಅಜಂತಾ ಗುಹೆಗಳಲ್ಲಿನ ಚಿತ್ರಕಲೆಗಳ ಪ್ರತಿಮಾಡುವಲ್ಲಿ ಖ್ಯಾತಿ ಗಳಿಸಿದ್ದರು.

2009: ಪ್ರಸಿದ್ಧ ರಂಗ ನಿರ್ದೇಶಕ ಹಾಗೂ ಹಾಸ್ಯ ಕಲಾವಿದ ಬಾಲಕೃಷ್ಣ ಪೈ (78) ಯಾನೆ ಕುಳ್ಳಪ್ಪು ಕುಂದಾಪುರದಲ್ಲಿ ನಿಧನರಾದರು. ರಾಜ್ಯನಾಟಕ ಆಕಾಡೆಮಿ, ಕೊಂಕಣಿ ನಾಟಕ ಆಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದ ಬಾಲಕೃಷ್ಣ ಪೈ ತಮ್ಮ ಕುಳ್ಳನೆ ದೇಹಕಾಯದಿಂದಾಗಿ ಕುಳ್ಳಪ್ಪು ಎಂದೇ ಜನಾನುರಾಗಿಯಾಗಿಯಾಗಿದ್ದರು.