Categories
e-ದಿನ

ಜನವರಿ-27

ದಿನಾಚರಣೆ:
ಅಂತರರಾಷ್ಟ್ರೀಯ ಹೋಲೋಕಾಸ್ಟ್ ಸ್ಮರಣಾ ದಿನಾಚರಣೆ
ಹೋಲೋಕಾಸ್ಟ್ ಎಂಬುದು ನಾಜಿ ಆಡಳಿತದಲ್ಲಿ ಹಲವು ದಶಲಕ್ಷಗಟ್ಟಲೆ ಜನ ಕೊಲ್ಲಲ್ಪಟ್ಟ ಘಟನೆಯಾಗಿದೆ. ಸುಮಾರು ಆರು ದಶಲಕ್ಷ ಜ್ಯೂಯಿಷ್ ಜನ, ಎರಡು ಮಿಲಿಯನ್ ರೊಮಾನಿ ಜನ, ಎರಡೂವರೆ ಲಕ್ಷ ಮಾನಸಿಕ ರೋಗಿಗಳು ಮತ್ತು ಅಂಗವಿಕಲರು, ಒಂಬತ್ತು ಸಾವಿರ ಸಲಿಂಗರತಿ ವ್ಯಕ್ತಿಗಳು ನಾಜಿ ಆಡಳಿತದಲ್ಲಿ ಕೊಲೆಗೀಡಾದರು. ಈ ಭೀಕರ ದುರಂತದಲ್ಲಿ ಮಡಿದವರ ಗೌರವಾರ್ಥವಾಗಿ ಅಂತರರಾಷ್ಟ್ರೀಯ ಹೋಲೋಕಾಸ್ಟ್ ಸ್ಮರಣಾ ದಿನವನ್ನು ಹಲವಾರು ಐರೋಪ್ಯ ದೇಶಗಳಲ್ಲಿ ಆಚರಿಸಲಾಗುತ್ತಿದೆ. 1945ರ ವರ್ಷದ ಜನವರಿ 27ರಂದು ನಾಜಿಗಳ ದೊಡ್ಡ ಶಿಬಿರವಾಗಿದ್ದ ಆಸ್ಕಿವಿಟ್ಜ್-ಬಿರ್ಕೆನಾವ್ ಅನ್ನು ಸೋವಿಯತ್ ಪಡೆಗಳು ನಾಜಿಗಳಿಂದ ಮುಕ್ತಿಗೊಳಿಸಿದವು.

ಪ್ರಮುಖಘಟನಾವಳಿಗಳು:

1785: ಅಮೆರಿಕದ ಪ್ರಥಮ ವಿಶ್ವವಿದ್ಯಾಲಯವಾದ  ‘ಯೂನಿವರ್ಸಿಟಿ ಆಫ್ ಜಾರ್ಜಿಯ’ ಸ್ಥಾಪನೆಗೊಂಡಿತು.

1880: ಥಾಮಸ್ ಆಲ್ವಾ ಎಡಿಸನ್ ಅವರು ವಿದ್ಯುತ್ ಬಲ್ಬಿಗೆ (ಇನ್ಕಾನ್ ಡಿಸೆಂಟ್ ಲ್ಯಾಂಪಿಗೆ) ಪೇಟೆಂಟ್ ಪಡೆದುಕೊಂಡರು.

1950: ಚಾರ್ಲ್ಸ್ ಫಿಜರ್ ಮತ್ತು ಕಂಪೆನಿಯು (Charles Pfzer and Company) ಹೊಸ ಆಂಟಿಬಯೋಟಿಕ್ ಟೆರ್ರಾಮೈಸಿನನ್ನು ಉತ್ಪಾದಿಸಿರುವುದಾಗಿ ಸೈನ್ಸ್ ಮ್ಯಾಗಜಿನ್ ಪ್ರಕಟಿಸಿತು. ನ್ಯೂಮೋನಿಯಾ (pneumonia), ಡೀಸೆಂಟ್ರಿ ಮತ್ತು ಇತರ ಸೋಂಕುಗಳಿಗೆ ಇದು ಪರಿಣಾಮಕಾರಿಯಾಗಿತ್ತು.

1951: ಅಮೆರಿಕದ ಆಪರೇಷನ್ ರೇಂಜರ್ ಎಂಬ ಹೆಸರಿನ  ಪರಮಾಣು ಪರೀಕ್ಷೆ  ಲಾಸ್ ವೇಗಾಸ್ ಬಳಿಯ ನೇವಡ ಎಂಬಲ್ಲಿ ಆರಂಭಗೊಂಡಿತು.

1955: 1954ರ ವರ್ಷದಿಂದ ಅನ್ವಯವಾಗುವಂತೆ,  1955ರ ವರ್ಷದಿಂದ ಆರಂಭಿಸಲಾದ  ಭಾರತದ ಸರ್ವೋಚ್ಚ ನಾಗರಿಕ ಪ್ರಶಸ್ತಿಯಾದ ‘ಭಾರತರತ್ನ’ವನ್ನು  ಪ್ರದಾನ ಮಾಡಲಾಯಿತು. ಈ ಭಾರತರತ್ನ ಪ್ರಶಸ್ತಿಯನ್ನು  ಪ್ರಪ್ರಥಮವಾಗಿ ಸ್ವೀಕರಿಸಿದ ಮಹನೀಯರೆಂದರೆ ಪ್ರಥಮ ಹಾಗೂ ಕೊನೆಯ ಭಾರತೀಯ ಗೌರ್ನರ್ ಜನರಲ್  ಸಿ. ರಾಜಗೋಪಾಲಚಾರಿ,  ನೊಬೆಲ್ ಪ್ರಶಸ್ತಿ ಪುರಸ್ಕೃತ ವಿಜ್ಞಾನಿ ಸರ್. ಸಿ. ವಿ. ರಾಮನ್  ಮತ್ತು  ಮಹಾನ್ ದಾರ್ಶನಿಕರೂ ಹಾಗೂ  ಭಾರತದ ಪ್ರಥಮ ಉಪರಾಷ್ಟ್ರಪತಿಗಳೂ  ಆದ  ಡಾ. ಸರ್ವೇಪಲ್ಲಿ ರಾಧಾಕೃಷ್ಣನ್.  ರಾಷ್ಟ್ರಪತಿ ಬಾಬು ರಾಜೇಂದ್ರ ಪ್ರಸಾದ್ ಅವರು ಈ ಮಹನೀಯರುಗಳಿಗೆ ಪ್ರಶಸ್ತಿ ನೀಡಿ ಗೌರವಿಸಿದರು.

1967: ನಾಸಾದ ಕೆನಡಿ ಸ್ಪೇಸ್ ಸೆಂಟರಿನಲ್ಲಿ,  ಅಪೋಲೋ 1 ಬಾಹ್ಯಾಕಾಶ ನೌಕೆಯಲ್ಲಿ ಉಂಟಾದ ಅಗ್ನಿ ಆಕಸ್ಮಿಕದಲ್ಲಿ ಅಮೆರಿಕದ ಗಗನಯಾತ್ರಿಗಳಾದ  ಗಸ್ ಗ್ರಿಸ್ಸೋಮ್, ಎಡ್ವರ್ಡ್ ಎಚ್. ವೈಟ್ ಮತ್ತು ರೋಗರ್ ಬಿ. ಚಾಫೀ  ಸಾವಿಗೀಡಾದರು.

1967: ಯುನೈಟೆಡ್ ಸ್ಟೇಟ್ಸ್, ಯುನೈಟೆಡ್ ಕಿಂಗ್ಡಂ ಮತ್ತು ರಷ್ಯಾದಿಂದ  ಬಾಹ್ಯಾಕಾಶದಲ್ಲಿ ಅಣ್ವಸ್ತ್ರ ಉಪಯೋಗಿಸದಿರುವ ಒಡಂಬಡಿಕೆಯಾದ  ‘ಔಟರ್ ಸ್ಪೇಸ್ ಟ್ರೀಟಿ’ಗೆ ವಾಷಿಂಗ್ಟನ್ ನಗರದಲ್ಲಿ ಸಹಿಮಾಡಿದವು.  ಚಂದ್ರ ಮತ್ತು ಇತರ ಬಾಹ್ಯಾಕಾಶ  ತಾಣಗಳನ್ನು ಯಾವುದೇ ಅಣ್ವಸ್ತ್ರಗಳ ಬಳಕೆಗೆ ಉಪಯೋಗಿಸದೆ ಕೇವಲ ಶಾಂತಿಯುತವಾಗಿ ಬಳಸುವುದು  ಈ ಒಡಂಬಡಿಕೆಯ ತಿರುಳಾಗಿದೆ.

1974: ರಾಷ್ಟ್ರಪತಿ ವಿ.ವಿ. ಗಿರಿ ಅವರು  ನವದೆಹಲಿಯ ತೀನ್ ಮೂರ್ತಿ ಭವನದಲ್ಲಿ ರೂಪುಗೊಂಡ  ‘ನೆಹರೂ ಸ್ಮಾರಕ ಮ್ಯೂಸಿಯಂ’ ಅನ್ನು ರಾಷ್ಟ್ರಕ್ಕೆ ಸಮರ್ಪಿಸಿದರು.

1996: ಹೋಲೋಕಾಸ್ಟ್ ಎಂಬುದು ನಾಜಿ ಆಡಳಿತದಲ್ಲಿ ಹಲವು ದಶಲಕ್ಷಗಟ್ಟಲೆ ಜನ ಕೊಲ್ಲಲ್ಪಟ್ಟ  ಘಟನೆಯಾಗಿದೆ.  ಸುಮಾರು ಆರು ದಶಲಕ್ಷ ಜ್ಯೂಯಿಷ್ ಜನ, ಎರಡು ಮಿಲಿಯನ್ ರೊಮಾನಿ ಜನ,  ಎರಡೂವರೆ ಲಕ್ಷ  ಮಾನಸಿಕ ರೋಗಿಗಳು ಮತ್ತು ಅಂಗವಿಕಲರು, ಒಂಬತ್ತು ಸಾವಿರ  ಸಲಿಂಗರತಿ ವ್ಯಕ್ತಿಗಳು ನಾಜಿ ಆಡಳಿತದಲ್ಲಿ ಕೊಲೆಗೀಡಾದರು.  ಈ ದುರಂತದಲ್ಲಿ ಮಡಿದವರ ಗೌರವಾರ್ಥವಾಗಿ  ಅಂತರರಾಷ್ಟ್ರೀಯ ಹೋಲೋಕಾಸ್ಟ್ ಸ್ಮರಣಾ ದಿನವನ್ನು  ಹಲವಾರು ಐರೋಪ್ಯ ದೇಶಗಳಲ್ಲಿ ಆಚರಿಸಲಾಗುತ್ತಿದೆ.  1945ರ ವರ್ಷದ  ಜನವರಿ 27ರಂದು  ನಾಜಿಗಳ ದೊಡ್ಡ ಶಿಬಿರವಾಗಿದ್ದ ಆಸ್ಕಿವಿಟ್ಜ್-ಬಿರ್ಕೆನಾವ್ ಅನ್ನು ಸೋವಿಯತ್ ಪಡೆಗಳು  ನಾಜಿಗಳಿಂದ  ಮುಕ್ತಿಗೊಳಿಸಿದವು.  ಜರ್ಮನಿಯು ಪ್ರಥಮ ಬಾರಿಗೆ 1996ರ ವರ್ಷದಲ್ಲಿ ಈ ಆಚರಣೆಯನ್ನು ನಡೆಸಿತು.

2007: ಬಾಲಿವುಡ್ ನಟ ರಾಹುಲ್ ರಾಯ್ ಭಾರತದ ರಿಯಾಲಿಟಿ ಟಿವಿ ಶೋ ‘ಬಿಗ್ ಬಾಸ್’ ಆಗಿ ಆಯ್ಕೆಯಾದರು.

2007: ನಟ ಅಮಿತಾಭ್ ಬಚ್ಚನ್ ಅವರಿಗೆ ಫ್ರಾನ್ಸಿನ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಲೀಜನ್ ಡಿ ಆನರ್ ಅನ್ನು  ಫ್ರೆಂಚ್ ರಾಯಭಾರಿ ಕಚೇರಿಯಲ್ಲಿ ನಡೆದ ವರ್ಣರಂಜಿತ ಸಮಾರಂಭದಲ್ಲಿ ಪ್ರದಾನ ಮಾಡಲಾಯಿತು.

2008: ಈ ಸಾಲಿನ ಪದ್ಮಶ್ರೀ ವಿಜೇತರಲ್ಲಿ ಉತ್ತರ ಪ್ರದೇಶದ ಮಾವು ಬೆಳೆಗಾರ ಕಲೀಮುಲ್ಲಾ ಖಾನ್ ಸೇರಿರುವುದು ವಿಶೇಷವಾಗಿ ಗಮನ ಸೆಳೆದಿದೆ.  ಉತ್ತರ ಪ್ರದೇಶದ ಮಲಿಹಾಬಾದ್ ನಿವಾಸಿಯಾದ ಇವರು ಒಂದೇ ಮಾವಿನ ಮರದಿಂದ 300 ಕ್ಕೂ ಹೆಚ್ಚು ಹೊಸ ತಳಿಗಳನ್ನು ಉತ್ಪಾದಿಸಿದ ಮಹತ್ವದ ಸಾಧನೆ ಮಾಡಿದ್ದಾರೆ.

ಪ್ರಮುಖಜನನ/ಮರಣ:

98: ಟ್ರಜಾನ್ ತನ್ನ ಸಾಕು ತಂದೆ ನರ್ವಾ ಉತ್ತರಾಧಿಕಾರಿಯಾಗಿ ರೋಮನ್ ಚಕ್ರಾಧಿಪತಿಯಾದ.  ಈತನ  ಆಳ್ವಿಕೆಯಲ್ಲಿ ರೋಮನ್ ಸಾಮ್ರಾಜ್ಯವು ಗರಿಷ್ಟ ಮಟ್ಟದಲ್ಲಿ ವಿಸ್ತರಿಸಿತು.

1886: ಮಹಾನ್ ಭಾರತೀಯ ನ್ಯಾಯವಾದಿ ರಾಧಾಬಿನೋದ್ ಪಾಲ್ ಈಗಿನ ಬಾಂಗ್ಲಾದೇಶದ ಭಾಗವಾಗಿರುವ ಕುಷ್ಟಿಯಾ ಜಿಲ್ಲೆಯಲ್ಲಿ ಜನಿಸಿದರು. ಇವರು ವಿಶ್ವಸಂಸ್ಥೆಯ ಅಂತರ ರಾಷ್ಟ್ರೀಯ  ಕಾನೂನು ಆಯೋಗದ  ಸದಸ್ಯರಾಗಿದ್ದರು.  ಅಲ್ಲದೆ, ಎರಡನೇ ವಿಶ್ವಮಹಾಯುದ್ಧದ ಸಂದರ್ಭದಲ್ಲಿ ಜಪಾನಿಯರ ಅಪಾರಾಧಗಳ ವಿಚಾರಣೆಗಳನ್ನು ಕೈಗೊಂಡ  ಅಂತರರಾಷ್ಟ್ರೀಯ ಮಿಲಿಟರಿ ಟ್ರಿಬ್ಯೂನಲ್ಲಿನಲ್ಲಿ ಇದ್ದ  ಏಕೈಕ  ದಕ್ಷಿಣ ಏಷ್ಯಾದ ನ್ಯಾಯಾಧೀಶರಾಗಿದ್ದರು.  ಮತ್ತೊಂದು ವಿಶೇಷವೆಂದರೆ, ಈ ಸಂದರ್ಭದಲ್ಲಿ ತೀರ್ಪು ನೀಡಿದ  ಎಲ್ಲಾ ನ್ಯಾಯಾಧೀಶರಲ್ಲಿ, “ಎಲ್ಲರೂ ಅಪರಾಧ ಮಾಡಿದವರಲ್ಲ” ಎಂದು ತೀರ್ಪು ನೀಡಿದ ಏಕೈಕ ನ್ಯಾಯಾಧೀಶ ಇವರಾಗಿದ್ದರು.  ಇವರ ಹೆಸರಲ್ಲಿ ಯಾಸುಕುನಿ ಶ್ರೈನ್ ಮತ್ತು ಕ್ಯೋಟೋ ಯೋಜೆನ್ ಶ್ರೈನ್ ಮುಂತಾದವುಗಳನ್ನು ಜಪಾನಿನಲ್ಲಿ ನಿರ್ಮಿಸಲಾಗಿದೆ.

1903: ಮಹಾನ್ ವೈದ್ಯ ಜಾನ್ ಎಕ್ಕಲ್ಸ್ ಅವರು ಆಸ್ಟ್ರೇಲಿಯಾದ ಮೆಲ್ಬೋರ್ನ್ ನಗರದಲ್ಲಿ ಜನಿಸಿದರು.  ಆಸ್ಟ್ರೇಲಿಯಾ ಅಲ್ಲದೆ, ಸ್ವಿಡ್ಜರ್ಲ್ಯಾಂಡ್, ಮತ್ತು ಬ್ರಿಟನ್ನಿನ  ಪೌರತ್ವ ಹೊಂದಿದ್ದ ಇವರಿಗೆ ಸೈನಾಪ್ಸ್ ಕುರಿತಾದ ಮಹತ್ವದ ಕಾರ್ಯಕ್ಕೆ 1963ರಲ್ಲಿ  ವೈದ್ಯಕೀಯ ಕ್ಷೇತ್ರದ ನೊಬೆಲ್ ಪುರಸ್ಕಾರ ನೀಡಲಾಯಿತು.

1928: ಪ್ರಸಿದ್ಧ ಬ್ರಿಟಿಷ್ ನಟ, ಚಿತ್ರಕಥೆಗಾರ ಬ್ರಿಟಿಷ್ ನಟ ಮೈಖೇಲ್ ಕ್ರೆಗ್ ಪುಣೆಯಲ್ಲಿ ಜನಿಸಿದರು.  ರಂಗಭೂಮಿ, ಕಿರುತೆರೆ, ಮತ್ತು ಸಿನಿಮಾ ರಂಗಗಳಲ್ಲಿ ಅವರು ಪ್ರಸಿದ್ಧರಾಗಿದ್ದಾರೆ.

1936: ಅಮೆರಿಕದ ಪ್ರಸಿದ್ಧ ಭೌತಶಾಸ್ತ್ರಜ್ಞ ಸಾಮ್ಯುಯಲ್ ಸಿ. ಸಿ. ಟಿಂಗ್ ಅವರು ಮಿಚಿಗನ್ ಬಳಿಯ ಆನ್ ಹಾರ್ಬರ್ ಎಂಬಲ್ಲಿ ಜನಿಸಿದರು.  ಸಬ್ ಆಟೋಮೆಟಿಕ್ ಪಾರ್ಟಿಕಲ್ ಸಂಶೋಧನೆಗಾಗಿ ಇವರಿಗೆ 1976ರ ವರ್ಷದ ನೊಬೆಲ್ ಪುರಸ್ಕಾರ ಸಂದಿತು.  ಇವರು 2011ರಲ್ಲಿ ಇಂಟರ್ ನ್ಯಾಷನಲ್ ಸ್ಪೇಸ್ ಸ್ಟೇಶನ್ನಿನಲ್ಲಿ ಸ್ಥಾಪಿಸಲಾದ  1.5 ಬಿಲಿಯನ್ ಡಾಲರ್ ಮೌಲ್ಯದ ಆಲ್ಫಾ ಮ್ಯಾಗ್ನೆಟಿಕ್ ಸ್ಪೆಕ್ಟೋಮೀಟರ್ ಪ್ರಯೋಗದ  ಪ್ರಧಾನ ತನಿಕಾ ಅಧಿಕಾರಿಗಳಾಗಿದ್ದರು.

1944: ಉತ್ತರ ಐರ್ಲ್ಯಾಂಡಿನಲ್ಲಿ ಶಾಂತಿ ಸ್ಥಾಪನಾ ಕಾರ್ಯಕರ್ತೆಯಾಗಿ ಅನೇಕ ಮಹತ್ವದ ಸಂಸ್ಥೆಗಳನ್ನು ಸ್ಥಾಪಿಸಿ ಮಹತ್ವದ ಕೆಲಸ ಮಾಡಿರುವ  ಮೈರೀಡ್ ಕಾರಿಗಾನ್ ಮೆಗೈರ್ ಅವರು  ಬೆಲ್ಗ್ರೇಡ್ ನಗರದಲ್ಲಿ ಜನಿಸಿದರು.   ಇವರಿಗೆ 1976ರ ವರ್ಷದ ನೊಬೆಲ್ ಶಾಂತಿ ಪುರಸ್ಕಾರ ಸಂದಿತ್ತು.

1945:ಕವಿ, ಕಥೆಗಾರ, ಕಾದಂಬರಿಕಾರ ಮತ್ತು ಚಲನಚಿತ್ರ ಗೀತರಚನಕಾರ  ಎಂ.ಎನ್ ವ್ಯಾಸರಾವ್ ಅವರು ಮೈಸೂರಿನಲ್ಲಿ ಜನಿಸಿದರು. ‘ಮಳೆಯಲ್ಲಿ ನೆನೆದ ಮರಗಳು’ ಎಂಬ  ಕಥಾ ಸಂಕಲನಕ್ಕೆ ಸಾಹಿತ್ಯ ಅಕಾಡೆಮಿ ಬಹುಮಾನ; ಹಲವಾರು ವಿಚಾರ ಸಂಕೀರ್ಣ, ಕವಿ ಸಮ್ಮೇಳನಗಳಲ್ಲಿ ಪ್ರಮುಖ ಪಾತ್ರ; ಸಾಹಿತ್ಯ, ಸಿನಿಮಾಗಳಿಗೆ ಸಂಬಂಧಿತ ಹಲವಾರು ಪ್ರಶಸ್ತಿ ಗೌರವಗಳು ಎಂ. ಎನ್. ವ್ಯಾಸರಾಯರನ್ನು ಅರಸಿ ಬಂದಿವೆ.

1731: ಪ್ರಸಿದ್ಧ ವಾದ್ಯ ತಯಾರಕ ಹಾಗೂ ಪಿಯಾನೋ ವಾದ್ಯವನ್ನು ಕಂಡುಹಿಡಿದ  ಬಾರ್ಟೋಲೋಮಿಯೋ ಕ್ರಿಸ್ಟೋಫೋರಿ  ಇಟಲಿಯಲ್ಲಿ ಜನಿಸಿದರು.

1880: ಪ್ರಖ್ಯಾತ ಹ್ಯಾಲಿಫ್ಯಾಕ್ಸ್ ಟೌನ್ ಹಾಲ್,  ರಾಯಲ್ ಒಪೇರಾ ಹೌಸ್ ಮುಂತಾದ ಪ್ರಸಿದ್ಧ ಕಟ್ಟಡಗಳನ್ನೂ ಒಳಗೊಂಡಂತೆ,  ಶ್ರೇಷ್ಠ ಕಟ್ಟಡ ವಿನ್ಯಾಸಗಳಿಗೆ  ಪ್ರಸಿದ್ಧರಾಗಿದ್ದ  ಎಡ್ವರ್ಡ್ ಮಿಡಲ್ಟನ್ ಬ್ಯಾರಿ ಇಂಗ್ಲೆಂಡಿನಲ್ಲಿ ನಿಧನರಾದರು.

2006: ಖ್ಯಾತ ಸಂಗೀತ ನಿರ್ದೇಶಕ ಮತ್ತು ಗಾಯಕ  ಸರ್ದಾರ್ ಮಲ್ಲಿಕ್ ಮುಂಬೈನಲ್ಲಿ ನಿಧನರಾದರು. ಇವರು ಉಸ್ತಾದ್ ಅಲ್ಲಾ ಉದ್ದೀನ್ ಖಾನ್ ಅವರ ಬಳಿ ಸಂಗೀತ ಕಲಿತದ್ದಲ್ಲದೆ,  ಪ್ರಖ್ಯಾತ ನೃತ್ಯ ಕಲಾವಿದ ರವಿಶಂಕರ್ ಅವರ ಬಳಿಯೂ ನೃತ್ಯ ಸಂಗೀತ ಸಾಧನೆ ಮಾಡಿದ್ದರು.  ಪ್ರಾರಂಭದ ದಿನಗಳಲ್ಲಿ ಹಿನ್ನೆಲೆ ಗಾಯಕರಾಗಿಯೂ  ಹಾಡುತ್ತಿದ್ದ ಇವರು  ನಂತರದ ದಿನಗಳಲ್ಲಿ  ಸಂಗೀತ ನಿರ್ದೇಶನಕ್ಕೆ ಮೀಸಲಾದರು.    ರೇಣುಕಾ, ರಾಸ್, ಸ್ಟೇಜ್, ಲೈಲಾ ಮಜ್ನು, ತೋಕಾರ್ ಮುಂತಾದ ಪ್ರಸಿದ್ಧ ಚಿತ್ರಗಳಲ್ಲಿ ಹರಿದಿದ್ದ ಅವರ ಸಂಗೀತ,  ಮಾಧುರ್ಯ ಗುಣದಿಂದ  ಪ್ರಸಿದ್ಧಿಗೊಂಡಿತ್ತು.

2006: ಕನ್ನಡದ ಪ್ರಸಿದ್ಧ ಬರಹಗಾರ್ತಿ ಟಿ. ಸುನಂದಮ್ಮ ಬೆಂಗಳೂರಿನಲ್ಲಿ ನಿಧನರಾದರು.  ‘ಕೊರವಂಜಿ’ ಹಾಸ್ಯಪತ್ರಿಕೆಯ ಮೂಲಕ  ಹೆಸರಾದ ಇವರ ‘ಸಮಗ್ರ ಹಾಸ್ಯ ಕೃತಿ’ 1993ರಲ್ಲಿ ಪ್ರಕಟವಾಗಿತ್ತು. ‘ಭಂಜದ ಚೀಲ’, ‘ಬಣ್ಣದ ಚಿಟ್ಟೆ’ ಹಾಗೂ ‘ಪೆಪ್ಪರ್ ಮೆಂಟ್’ ಇವರ ಇನ್ನಿತರ ಕೆಲವು ಕೃತಿಗಳು. ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪುರಸ್ಕಾರ, ದಾನಚಿಂತಾಮಣಿ ಮುಂತಾದ ಅನೇಕ ಗೌರವಗಳಿಗೆ   ಭಾಜನರಾಗಿದ್ದ ಇವರು  ‘ಕರ್ನಾಟಕ ಲೇಖಕಿಯರ ಸಂಘ’ ಮೂಡುವುದಕ್ಕೆ ಕಾರಣಕರ್ತರಾಗಿ ನಿರಂತರ ಕ್ರಿಯಾಶೀಲರಾಗಿದ್ದರು.

2009: ದೇಶದ ಎಂಟನೇ ರಾಷ್ಟ್ರಪತಿಗಳಾಗಿದ್ದ ಆರ್. ವೆಂಕಟರಾಮನ್ ನವದೆಹಲಿಯಲ್ಲಿ ನಿಧನರಾದರು.  ತಮಿಳು ನಾಡಿನ ರಾಜಕೀಯದಲ್ಲಿ ಮತ್ತು ರಾಷ್ಟ್ರದ ರಾಜಕಾರಣದಲ್ಲಿ ವಿವಿಧ ಹುದ್ಧೆಗಳನ್ನು ನಿರ್ವಹಿಸಿ  ಎಂಟನೇ ರಾಷ್ಟ್ರಪತಿಗಳ ಸ್ಥಾನವನ್ನು ಅಲಂಕರಿಸಿದ್ದ ವೆಂಕಟರಾಮನ್  ಅನೇಕ ಮಹತ್ವದ ಕೃತಿಗಳನ್ನೂ ರಚಿಸಿದ್ದಾರೆ.

2015: ಅಮೇರಿಕಾದ ಭೌತಶಾಸ್ತ್ರಜ್ಞ ಚಾರ್ಲ್ಸ್ ಹಾರ್ಡ್ ಟೌನ್ಸ್ ಕ್ಯಾಲಿಫೋರ್ನಿಯಾದ ಓಕ್ ಲ್ಯಾಂಡ್ ಎಂಬಲ್ಲಿ ನಿಧನರಾದರು.  ಕ್ವಾಂಟಮ್ ಎಲೆಕ್ಟ್ರಾನಿಕ್ಸ್ ಸಾಧನಗಳಲ್ಲಿ ಮಹತ್ವದ ಸಾಧನೆ ಮಾಡಿರುವ ಇವರಿಗೆ 1964ರ ವರ್ಷದಲ್ಲಿ ಭೌತಶಾಸ್ತ್ರದ ನೊಬೆಲ್ ಪುರಸ್ಕಾರ ಸಂದಿತ್ತು.