ನರಕಕ್ ಇಳ್ಸಿ ನಾಲ್ಗೆ ಸೀಳ್ಸಿ ಬಾಯ್ಯೊಲ್ಯಾಕಿದ್ರೂನೆ

ಮೂಗ್ನಲ್ ಕನ್ನಡ ಪದವಾಡ್ತೀನಿ

ನನ್ ಮನಸ್ ನೀ ಕಾಣೆ.

ಇವು ‘ರತ್ನನ ಪದಗಳು ಬರೆದವರು ಜಿ.ಪಿ.ರಾಜರತ್ನಂ. ಹುಟ್ಟಿದ್ದು ೧೯೦೮ ರಲ್ಲಿ ಬೆಂಗಳೂರು ಜಿಲ್ಲೆಯ ರಾಮನಗರದಲ್ಲಿ. ಕನ್ನಡದಲ್ಲಿ ಎಂ.ಎ ಪದವಿಯನ್ನು ಚಿನ್ನದಪದಕದೊಂದಿಗೆ ಪಡೆದು ನಂತರ ಉದ್ಯೋಗಕ್ಕಾಗಿ ಅಲೆದಾಟ, ಶಿಶುವಿಹಾರ, ಪ್ರಾಥಮಿಕ ಶಾಲೆ, ಮತ್ತು ಮಾಧ್ಯಮಿಕ ಶಾಲೆಗಳಲ್ಲಿ ಉಪಾಧ್ಯಾಯ ವೃತ್ತಿ, ಕೊನೆಗೆ ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಉಪನ್ಯಾಸಕರಾಗಿ ೧೯೬೪ ರಲ್ಲಿ ನಿವೃತ್ತಿ.ಮರಣ ೧೯೭೯ ರಲ್ಲಿ. ಜಿ.ಪಿ. ರಾಜರತ್ನಂ ರವರಿಗೆ ಮಕ್ಕಳೆಂದರೆ ಗಾಡವಾದ ಪ್ರೀತಿ ಅವರನ್ನು ಮಕ್ಕಳ ಸಾಹಿತ್ಯದತ್ತ ಕರೆದೊಯುತು. ಶಿಶುವಿಹಾರದ ಮಾಸ್ತರಿಕೆಯ ನೆನಪುಗಳಿಂದ ‘ತುತ್ತೂರಿ, ‘ಕಡಲೆ ಪುರಿ, ‘ಗುಲಗಂಜಿ,-ಇಂಥ ಜನಪ್ರಿಯ ಕವಿತೆಗಳನ್ನು ರಚಿಸಿದರು. ಕಾರಂತರು ಪುತ್ತೂರಿನ ಬಾಲವನದಲ್ಲಿ ನಡೆಸುತ್ತಿದ್ದ ‘ಮಕ್ಕಳ ಮೇಳ,ದ ಅನುಭವಗಳಿಂದ ಈ ಶಿಶುಸಾಹಿತ್ಯ ರಚನೆ ಮತ್ತಷ್ಟು ಹೆಚ್ಚಿತು. ಸುಮಾರು ೭೦ ಕೃತಿಗಳನ್ನು ಮಕ್ಕಳಿಗಾಗಿ ಬರೆದರು; ಕನ್ನಡದಲ್ಲಿ ಪಂಜೆಯವರಿಂದ ಆರಂಭವಾದ ಶಿಶುಸಾಹಿತ್ಯ ಪ್ರಕಾರವನ್ನು ರಾಜರತ್ನಂ ಪೋಷಿಸಿ ಬೆಳೆಸಿದರು.

‘ಪರ್ಪಂಚ ಇರೋತನಕ ಕನ್ನಡ ಪದಗೊಳ್ ನುಗ್ಲಿ,-ಎಂದು ಭಾವನಾತ್ಮಕವಾಗಿ ಬರೆಯಬಲ್ಲ ರಾಜರತ್ನಂ ಬೌದ್ಧಿಕವಾಗಿ ಜಗತ್ತಿನ ಪ್ರಜೆ. ಕನ್ನಡವಲ್ಲದೆ ಇಂಗ್ಲಿಷ್, ಸಂಸ್ಕೃತ, ಪಾಳಿ, ಪ್ರಾಕೃತ, ಹಿಂದಿ, ತೆಲುಗು, ತಮಿಳು, ಭಾಷೆಗಳನ್ನು ಬಲ್ಲ ಅವರು ಆ ಜ್ಞಾನವನ್ನು ಹೀರಿಕೊಂಡು ಅದನ್ನು ಕನ್ನಡಿಗರೊಂದಿಗೆ ಹಂಚಿಕೊಂಡರು. ‘ರತ್ನನ ಪದಗಳು, ಅವರ ಶ್ರೇಷ್ಟ ಹಾಗೂ ಬಹುಜನಪ್ರಿಯ ಕೃತಿ. ಇದು ‘ರತ್ನ, ಎಂಬ ಯೆಂಡ್ಕುಡ್ಕನ ಪ್ರಪಂಚ ಆತನ ನೋವು, ನಲಿವು, ಶೋಷಣೆಗಳ ಬಗೆಗೆ ಆಕ್ರೋಷದ ಪ್ರತಿಭಟನೆಯ ದನಿ ಹಾಸ್ಯ ಪ್ರಜ್ಞೆ ಆರ್ಥಿಕ ವಿಶಮತೆಯ ನಿರೂಪಣೆಯಲ್ಲಿದೆ. ಗ್ರಾಂಥಿಕವಲ್ಲದ ರತ್ನನ ಭಾಷೆಗೆ ಅವರದೇ ಆದ ವಿಶಿಷ್ಟತೆ ಇದೆ ‘ನಾಗನ ಪದಗಳು, ಎಂಬ ಕೃತಿ ಇಂಥದೇ ಪ್ರತಿಭೆಯ ಫಲ. ಆದರೆ ಜೀವನ ದರ್ಶನ ಬೇರೆ, ಹಾಗೆ ನಂಜಿ ಮುನಿಯನಂಥ ಪಾತ್ರಸೃಷ್ಟಿ ರಾಜರತ್ನಂ ಮಾತ್ರ ಬರೆಯಬಹುದಾದ ಕೃತಿಗಳಿವು. ಗಂಡು ಗೊಡಲಿ, ಎಂಬ ನಾಟಕ ಇವರ ಮುಖ್ಯ ಕೃತಿ. ಇದು ಅನ್ಯಾಯ, ಅಧರ್ಮದ ವಿರುದ್ದ ಬಂಡೆದ್ದ ಪರಶುರಾಮನ ಧರ್ಮವೀರದ ಮೊರೆತ ಕೊನೆಗೆ ಆತನ ವೀರ ಕ್ರೋಧ ಹಣ್ಣಾಗಿ ಶಾಂತಕ್ಕೆ ತಿರುಗುವುದೂ ಸೂಚಿತವಾಗಿದೆ.

ಪುರುಷ ಸರಸ್ವತಿ ಎಂಬ ಕಾವ್ಯ ವಿಡಂಬನ ಕೃತಿ- ರಾಜರತ್ನಂ ಎಷ್ಟು ಗಂಬೀರ, ಗಹನ ವಿದ್ವಾಂಸರು, ಪ್ರಚಂಡ ಭಾಷಣಕಾರರೋ, ಅಷ್ಟೇ ಉನ್ನತ ಹಾಸ್ಯಗಾರರಾಗಿದ್ದರು. ‘ನಿರ್ಭಯೋಗ್ರಪಿ, ಎಂಬ ಹೆಸರಿನಲ್ಲಿ ಅವರ ಅನೇಕ ಲೇಖನಗಳು ಇಂಥ ವಿಡಂಬನ ವೈವಿಧ್ಯದ ಮೊನಚಿಗೆ ಉತ್ತಮ ನಿದರ್ಶನಗಳು.

ಬೌದ್ದ ಧರ್ಮ ಸಾಹಿತ್ಯದ ಪ್ರಚಾರಕ್ಕೆ ಪಾಳಿ ಭಾಷೆಯನ್ನು ಅಧ್ಯಯನ ಮಾಡಿ ‘ಚೀನಾದ ಬೌದ್ದಯಾತ್ರಿಕರು, ‘ಧರ್ಮದಾನಿ ಬುದ್ದ, ಬುದ್ದನ ಜಾತಕ ಕಥೆಗಳು ಎಂಬ ಕೃತಿಗಳನ್ನು ರಚಿಸಿದರು. ಜೈನ ಶಾಸ್ತ್ರದ ಅಧ್ಯಯನ ಮಾಡಿ ಮಹಾವೀರನ ಮಾತುಕಥೆ ಗೋಮಟೇಶ್ವರ ಭಗವಾನ್ ಪಾರ್ಶ್ವನಾಥ ಜೈನ ಅರವತ್ತು ಮೂವರು, ಮೊದಲಾದ ಕೃತಿಗಳನ್ನು ಬರೆದರು.

ರಾಜರತ್ನಂ ಬರೆದುದಕ್ಕಿಂತ ಇತರರಿಂದ ಬರೆಸಿದುದು ತಾವು ಬೆಳೆದುದಕ್ಕಿಂತ ಇತರರನ್ನು ಬೆಳೆಸಿದುದು ಹೆಚ್ಚು. ತಮ್ಮನ್ನು ಸಾಹಿತ್ಯ ಪರಿಚಾರಿಕ ಎಂದು ಕರೆದುಕೊಂಡರು. ಬಿ.ಎಂ.ಶ್ರೀ, ಪಂಜೆ, ಮಾಸ್ತಿ, ಕೈಲಾಸಂ, ಮುಂತಾದವರ ಕೃತಿಗಳನ್ನು ಪರಿಚಯಿಸಿ ಪ್ರಕಟಿಸಿದರು. ತಮ್ಮ ವಿದ್ಯಾರ್ಥಿಗಳ ಸಾಹಿತ್ಯ ಪ್ರವೃತ್ತಿಯನ್ನು ಪ್ರೋತ್ಸಾಹಿಸಿ, ಬರವಣಿಗೆಯಲ್ಲಿ ತೊಡಗಿಸಿದರು ಅನೇಕ ಉಪನ್ಯಾಸಗಳನ್ನು ಏರ್ಪಡಿಸಿ ಸಾಹಿತ್ಯ ಧರ್ಮಗಳ ಕುರಿತು ಉಪನ್ಯಾಸನೀಡಿದರು. ಗಾಂದಿ ತತ್ವಗಳಿಂದ ಪ್ರಭಾವಿತರಾಗಿ ಗಾಂದಿ ವಿಚಾರಗಳ ಬಗ್ಗೆಯೂ ಬರೆದರು.

ಹೀಗೆ ಇಂಥ ಹಲವು ಕಾರಣಗಳಿಂದಾಗಿ ಕನ್ನಡ ಸಾಹಿತ್ಯದಲ್ಲಿ ಅವರದು ವಿಶಿಷ್ಟ ಹೆಸರು. ಇವರಿಗೆ ಸಂದ ಗೌರವ ಪ್ರಶಸ್ತಿಗಳು ೧೯೬೯ ರಲ್ಲಿ ರಾಜ್ಯ ಸಾಹಿತ್ಯ ಅಕಾಡೆಮಿ ೧೯೭೦ ರಲ್ಲಿ ರಾಜ್ಯೋತ್ಸವ ಪ್ರಶಸ್ತಿ ೧೯೬೯ ರ ಧರ್ಮಸ್ಥಳ ಸಾಹಿತ್ಯ ಸಮ್ಮೇಳನದಲ್ಲಿ ಮಕ್ಕಳ ಸಾಹಿತ್ಯಸಮ್ಮೇಳನದ ಅಧ್ಯಕ್ಷತೆ, ಸುಮಾರು ೩೦ ಕೃತಿಗಳನ್ನು ಪ್ರಕಟಿಸಿ,ಸೆಂಟ್ರಲ್ ಕಾಲೇಜಿನ ಕರ್ನಾಟಕ ಸಂಘಕ್ಕೆ ಜೀವಕಳೆ ತುಂಬಿದರು.