ಜೀಕೆ ಮಾಸ್ತರರ ಜೀವನದಲ್ಲಿ ಅದೂ ಆ ವಯಸ್ಸಿನಲ್ಲಿ ಇಂಥದೊಂದು ಘಟನೆ ನಡೆಯುವುದು ಅಸಂಭವ ಮಾತ್ರವಲ್ಲ; ಅವರನ್ನು ಬಲ್ಲ ಯಾರೂ ಇಂದೊಂದು ಘಟನೆಯನ್ನು ಅವರ ಸುತ್ತ ಊಹಿಸುವುದೂ ಸಾಧ್ಯವಿಲ್ಲ. ಕಟ್ಟುನಿಟ್ಟು ಶಿಸ್ತು ಸಂಯಮಗಳಿಗೆ ಆ ಮನುಷ್ಯ ಎಷ್ಟು ಹೆಸರಾಗಿದ್ದರೆಂದರೆ – ಹುಡುಗರು ತಂತಮ್ಮಲ್ಲಿ ಮಾತಾಡಿಕೊಳ್ಳುವಾಗ ಅವರನ್ನು ‘ಕಟ್ಟುನಿಟ್ಟೆಂದೇ’ ಕರೆಯುತ್ತಿದ್ದರು. ಅವರ ಪೂರ್ತಿ ಹೆಸರು ಗುಂಜಾಳ ಕರಿಬಸವಯ್ಯ ಎಂದು. ಆದರೆ ಇದ್ಯಾರಿಗೂ ತಿಳಿಯದು. ಜೀಕೆ ಮಾಸ್ತರರೆಂದೇ ಅವರನ್ನು ಎಲ್ಲರೂ ತಿಳಿದಿದ್ದರು. ಮತ್ತು ಹಾಗೇ ಕರೆಯುತ್ತಿದ್ದರು.

ಆ ಏರಿಯಾದಲ್ಲಿ ಅವರಷ್ಟು ಗೌರವಾರ್ಹ ವ್ಯಕ್ತಿ ಸಿಕ್ಕುವುದು ಕಷ್ಟ. ಅವರು ರಾಜಕಾರಣಿಯಲ್ಲ, ಭಾಷಣಕಾರರಲ್ಲ, ಅವರಿದ್ದ ಊರೇನು ರಾಜಧಾನಿಯಲ್ಲ, ಬರೀ ಒಂದು ತಾಲೂಕು ಸ್ಥಳವಷ್ಟೆ. ಅಲ್ಲಿದ್ದ ಮುನ್ಸಿಪಲ್ ಹೈಸ್ಕೂಲಿನಲ್ಲಿ ಮಾಸ್ತರರಾಗಿದ್ದವರು ಬಹಳ ನಿಷ್ಠೆಯಿಂದ ದುಡಿದು ಅಲ್ಲೊಂದು ಜೂನಿಯರ್ ಕಾಲೇಜಾಗುವಂತೆ ಮಾಡಿ, ಅದನ್ನು ಪೂರ್ಣ ಪ್ರಮಾಣದ ಕಾಲೇಜಾಗುವಂತೆ ಮಾಡಿದ್ದರು. ಇಷ್ಟಕ್ಕೂ ಅದೆಲ್ಲ ಅವರೊಬ್ಬರ ಪ್ರಯತ್ನದಿಂದಲೇ ಆಯಿತೆಂದೂ ಅಲ್ಲ. ಆದರೆ ದುಡಿಯುವ ಎಲ್ಲರೂ ಹಿಂದಿನ ಪ್ರೇರಶಕ್ತಿಯಾಗಿ ಹುರಿದುಂಬಿಸಿ ಕಾರ್ಯ ಮಾಡಿಸಿದ್ದು ಮಾತ್ರ ಅವರೇ. ಅದು ಆದಾಗ ತಾವೇ ಅದರ ಪ್ರಿನ್ಸಿಪಾಲರಾಗಬೇಕೆಂದೂ ಕನಸು ಕಂಡವರಲ್ಲ. ಆದರೆ ಮುನ್ಸಿಪಾಲ್ಟಿಯಲ್ಲಿರುವ ಬಹುಪಾಲು ಸದಸ್ಯರು ಅವರ ಹಳೆಯ ಶಿಷ್ಯರೇ. ಆದ್ದರಿಂದ, ಮತ್ತು ಅದೇ ಬಗೆಯ ಗೌರವ ಭಾವನೆ ಆ ಭಾಗದ ಜನರಲ್ಲಿರುವುದರಿಂದ ಅವರನ್ನೇ ಸರ್ವಾನುಮತದಿಂದ ಪ್ರಿನ್ಸಿಪಾಲರನ್ನಾಗಿ ಮಾಡಿದ್ದರು. ಮತ್ತು ಇವರೂ ಅವರ ನಿರೀಕ್ಷೆಯಂತೆಯೇ ಕಾಲೇಜನ್ನು ನಡೆಸಿದ್ದರು. ಅವರಿಗೆ ಯಾವ ಕೆಲಸ ಕೊಟ್ಟರೂ ಸೈ, ಅದು ಚೊಕ್ಕಟವಾಗಿ, ಒಂದು ಚಿಕ್ಕಾಸು ಕೂಡ ಎಪರಾತಪರ ಆಗದಂತೆ, ಮಾಡಿದವರಿಗೆ ಮಾಡಿಸಿದವರಿಗೆ ಹೆಸರು ಬರುವಂತೆ ಕಾರ್ಯರೂಪಕ್ಕೆ ಬರುತ್ತಿತ್ತು.

ಅವರ ಕೆಲಸ ಮತ್ತು ಕೀರ್ತಿಗನುಗುಣವಾಗಿ ಅವರ ವ್ಯಕ್ತಿತ್ವವಿತ್ತು. ಎತ್ತರ ಗಂಭೀರಾಕೃತಿ, ತೇಜಸ್ಸಿನಿಂದ ತುಂಬಿದ ಮುಖ, ಸಣ್ಣ ಕಣ್ಣುಗಳು, ಮುಖಕ್ಕೆ ತುಸು ದೊಡ್ಡದೇ ಎನಿಸುವ ಮೂಗು, ಸ್ಪಷ್ಟವಾದ ಅದರೆ ಅಂತ್ಯದಲ್ಲಿ ಒತ್ತಿಕೊಂಡ ತುಟಿಗಳು… ಯಾರೊಬ್ಬರೂ ಇವರನ್ನು ಒಮ್ಮೆ ಕಂಡರೂ ಸಾಕು ಮರೆಯಲು ಸಾಧ್ಯವಾಗುತ್ತಿರಲಿಲ್ಲ,- ಅಂಥ ವ್ಯಕ್ತಿತ್ವ.

ಅವರ ವ್ಯಕ್ತಿತ್ವಕ್ಕೆ ಒಪ್ಪಿತ್ತು ಅವರ ಉಡುಪು. ಉತ್ತರ ಕರ್ನಾಟಕದ ಕಾಲೇಜಿನ ಪ್ರಿನ್ಸಿಪಾಲರಿರಲಿ, ಅಧ್ಯಾಪಕರು ಕೂಡ ಸೂಟು ಧರಿಸದೆ ಹೊರಗೆ ಕಾಲಿಡಬಾರದು. ಜೀಕೆ ಒಬ್ಬರೇ ಇದಕ್ಕೆ ಅಪವಾದ. ಸ್ಪಚ್ಛವಾದ ಗರಿಗರಿ ಧೋತ್ರ ಉಟ್ಟು, ಮ್ಯಾಲೊಂದು ಬಿಳಿ ಶರ್ಟು, ಅದರ ಮ್ಯಾಲೊಂದು ಕೋಟು ಹಾಕಿಕೊಂಡು ಬಕ್ಕತಲೆ ಹಾಗೇ ಬಿಡುತ್ತಿದ್ದರು. ಇದು ಅವರ ಹೈಸ್ಕೂಲಿನಲ್ಲಿದ್ದಾಗಿನ ಉಡುಪು ನಿಜ. ಆದರೆ ಪ್ರಿನ್ಸಿಪಾಲರಾದ ಮೇಲೆ ಅವರ ಹೆಸರು ಹ್ಯಾಗೋ ಹಾಗೇ ಉಡುಪೂ ಉಳಿದುಕೊಂಡಿತ್ತು. ಹುಡುಗರೇನಾದರೂ ಸೂಟು ಬೇಕೆಂದು ತಮ್ಮ ಮನೆಗಳಲ್ಲಿ ಪೀಡಿಸಿದರೆ ‘ಜೀಕೆ ಮಾಸ್ತರನ್ನ ನೋಡಬಾರದ? ಹೆಂಗದಾರ’ ಎಂದು ಮನೆಯವರು ಗದರುತ್ತಿದ್ದರು. ಅವರ ವಿಷಯದಲ್ಲಂತೂ ಅದು ನಿಜವಾಗಿತ್ತು. ಅವರು ಧರಿಸುತ್ತಿದ್ದ ಆ ಉಡುಪು ಅವರ ಉನ್ನತಾಕೃತಿಗೆ, ಅವರ ಬಟ್ಟದಲೆಗೆ ಮತ್ತು ಅವರ ನಿರುಮ್ಮಳ ಆತ್ಮ ವಿಶ್ವಾಸದ ಚಲನವಲನಗಳಿಗೆ ಸಮರ್ಪಕವಾಗಿ ಹೊಂದಿಕೊಂಡಿತ್ತು.

ಜೀಕೆ ಮಾಸ್ತರ ಮಾತಾಡುವುದು ಕಮ್ಮಿ. ಬೇರೆ ಜನ ಮಾತಾಡಿ ತಮ್ಮ ವಿದ್ವತ್ತು ತೋರಿ ಸುತ್ತಲಿದ್ದವರ ಮೇಲೆ ಪ್ರಭಾವ ಬೀರಿದರೆ ಇವರು ಸುಮ್ಮನೆ ಕೂತೇ ಆ ಕೆಲಸ ಮಾಡುತ್ತಿದ್ದರು. ಮಾತಾಡಿದರೆ ವಿನಾಯಿತಿ, ಭಿಡೆ – ಇವ್ಯಾವ ಹಂಗಿಲ್ಲದೆ, ಸ್ಪಷ್ಟವಾಗಿ, ಸಂದೇಹಕ್ಕೆ ಎಡೆ ಇಲ್ಲದಂತೆ ತಮ್ಮ ಅಭಿಪ್ರಾಯ ತಿಳಿಸುತ್ತಿದ್ದರು. ಬೇರೆಯವರನ್ನು ತನ್ನ ಅಭಿಪ್ರಾಯಕ್ಕೆ ಮಣಿಯುವಂತೆ ಮಾಡಲು ಮಾತು ಕೃತಿಗಳಲ್ಲಿ ಎಷ್ಟು ಆತ್ಮವಿಶ್ವಾಸವಿರಬೇಕೆಂಬುದನ್ನು ಅವರು ಬಲ್ಲವರಾಗಿದ್ದರು. ಅವರ ವ್ಯಕ್ತಿತ್ವದಲ್ಲೇ ಒಂದು ಅಸಲುತನ ಇತ್ತು. ಮತ್ತು ಅದು ತಾವು ಶಿಸ್ತು ಸಂಯಮಗಳಲ್ಲಿ, ಹಳೆಯ ಆಚರಣೆಗಳಲ್ಲಿ ನಂಬಿಕೆಯಿಟ್ಟು ನಡೆದುದರಿಂದ ಬಂದುದೆಂದು ಭಾವಿಸಿದ್ದರು. ಅವರು ಆಗಾಗ ತಮ್ಮ ನಗಾರಿ ದನಿಯಲ್ಲಿ ಹೇಳುತ್ತ ಬಂದಿರುವಂತೆ ಅವರ ಸದಾಕಾಲದ ದೊಡ್ಡ ಚಿಂತೆಯೆಂದರೆ ಜಗತ್ತು ಬರಬರುತ್ತ ಭೃಷ್ಟವಾಗುತ್ತ ಬಂದಿದೆಯೆಂಬುದೇ ಆಗಿತ್ತು. ಆದ್ದರಿಂದಲೇ ತಮ್ಮ ಸುತ್ತಮುತ್ತ ಯಾವೆಂಥ ಘಟನೆ ನಡೆದರೂ ಅವರಿಗೆ ಆಶ್ಚರ್ಯವಾಗುತ್ತಿರಲಿಲ್ಲ. ಬದಲಾಗಿ ಅದು ಕೇವಲ ಭ್ರಷ್ಟ ಜೀವನದ ಕರ್ಮವಿಪಾಕವೆಂದೂ ಅದನ್ನು ಅನುಭವಿಸಿಯೇ ಕಳೆಯಬೇಕೆಂದೂ ಅಪ್ಪಣೆ ಕೊಡುತ್ತಿದ್ದರು. ಮತ್ತು ಜಗತ್ತು ಇನ್ನೂ ಭೃಷ್ಟವಾಗದಂತೆ ತಡೆಯುವುದೇ ಅಧ್ಯಾಪಕರಾದ ತಮ್ಮ ಪವಿತ್ರ ಕರ್ತವ್ಯವೆಂದು ನಂಬಿದ್ದರು.

ಮತ್ತು ಈ ಕಾರಣಕ್ಕಾಗೇ ಆಧುನಿಕ ವಿದ್ಯಾರ್ಥಿಗಳನ್ನವರು ತಿರಸ್ಕಾರದಿಂದ ಕಾಣುತ್ತಿದ್ದರು. ಇದಕ್ಕೆ ಅವರ ಆಂತರಿಕ ಹೆಮ್ಮೆ ಎಷ್ಟು ಕಾರಣವೋ ಅಷ್ಟೇ ಹಿಂದಿನ ಕಾಲದ ಜೀವನ ಪದ್ಧತಿಯಲ್ಲಿಯ ನಂಬಿಕೆಯೂ ಕಾರಣವಾಗಿತ್ತು. ಹಿಂದಿನವರು ಪ್ರಯೋಗ ಮಾಡಿ ಮಾಡಿ ಜೀವನದ ಉತ್ತಮ ನಡೆಯೆಂದರೆ ಯಾವುದು? – ಕೆಟ್ಟದ್ದು ಯಾವುದು? – ಎಂದೆಲ್ಲ ತೀರ್ಮಾನಿಸಿಬಿಟ್ಟಿದ್ದಾರೆ. ನಮಗೀಗ ಉಳಿದಿರುವುದೆಂದರೆ ಅವರು ಹೇಳಿದ ಉತ್ತಮಾಂಶಗಳನ್ನು ಆಚರಣೆಗೆ ತರುವುದಷ್ಟೆ. ಮತ್ತು ಇದೇ ಕಾರಣಕ್ಕಾಗಿ ಅವರು ಚಾತುರ್ವರ್ಣದ ಸಮರ್ಥಕರಾಗಿದ್ದರು. ಗಾಂಧೀಜಿ ಅಸ್ಪೃಶ್ಯತೆಯ ಬಗ್ಗೆ ತದ್ವಿರುದ್ಧ ಹೇಳಿದ್ದಾರೆಂದರೆ ‘ಗಾಂಧೀಜಿಗೇನು ಗೊತ್ತು ತಲೆ’ ಎಂದೂ ಹೇಳಿಯಾರು. ಸರಕಾರ ಹರಿಜನ ಗಿರಿಜನರಿಗೆ, ಹಿಂದುಳಿದ ವರ್ಗದವರಿಗೆ ಕೆಲವು ಸವಲತ್ತುಗಳನ್ನು ಘೋಷಿಸಿ ಕಾರ್ಯರೂಪಕ್ಕೆ ತಂದಿದ್ದ ಕಾಲ ಅದು. ಆಗಂತೂ ಜೀಕೆ ಸಿಕ್ಕಸಿಕ್ಕವರ ಎದುರಿಗೆ ಸರಕಾರವನ್ನು ಗೇಲಿ ಮಾಡಿದ್ದರು. ‘ಇದು ಬಿಡರೀ ಹೊಲ್ಯಾರ ಸರಕಾರ’ ಎಂದೂ ಅಂದಿದ್ದರು. ಅಂತೇ ಆ ಜಾತಿಯ ವಿದ್ಯಾರ್ಥಿಗಳ ಬಗ್ಗೆ ಅವಹೇಳನಕರ ಮಾತುಗಳನ್ನು ಅವರೆದುರಿನಲ್ಲೇ ಆಡಲೂ ಹಿಂಜರಿಯುತ್ತಿರಲಿಲ್ಲ. ಅಂದರೆ ಅವರ ಅಭಿಪ್ರಾಯವಿಷ್ಟೆ: ವಿದ್ಯೆ ಅವರಿಗಲ್ಲ,- ಎಂದು. ಸುದೈವದಿಂದ ಹರಿಜನ-ಗಿರಿಜನ ವಿದ್ಯಾರ್ಥಿಗಳನ್ನು ಕಾಲೇಜಿನಿಂದ ಹೊರ ಹಾಕಿರಲಿಲ್ಲ. ಸರಕಾರೀ ಆದೇಶದಂತೆ ಅವರಿಗೆ ಸಿಕ್ಕಬೇಕಾದ್ದನ್ನು ಧಾರಳವಾಗಿಯೇ ಕೊಡಿಸಿದ್ದರು. ಈ ವಿಚಾರದಲ್ಲಿ ಮನುಷ್ಯ ಚುಕ್ತ ಇದ್ದರು.

ಇನ್ನು ಜೀಕೆ ಪಾಠ ಮಾಡುವ ಕ್ರಮವೂ ಅವರದೇ. ನಗಾರಿ ಬಾರಿಸಿದಂಥ ದನಿಯಲ್ಲಿ ಅವರು ಕಾಳಿದಾಸನ ಮೇಘದೂತ ಹೇಳತೊಡಗಿದರೆ ಹುಡುಗರು ಕಾಲಾಂತರಗೊಂಡು ಕಾವ್ಯದ ವಿವರಗಳನ್ನು ಕಣ್ಣೆದರೇ ಕಾಣುತ್ತಿದ್ದರು. ಆದರೆ ಮೃದು ಭಾವನೆಗಳಿಗೆ ಉದಾ: ಶೃಂಗಾರ, ವಿರಹ, ಕರುಣೆ – ಮುಂತಾದವುಗಳಿಗೆ ಅವರ ದನಿ ಒಪ್ಪುತ್ತಿರಲಿಲ್ಲ. ಆಗೆಲ್ಲ ಹುಡುಗರಿಗೆ ಕಸಿವಿಸಿಯಾಗುತ್ತಿತ್ತು. ಆದರೆ ವಿದ್ಯಾರ್ಥಿಗಳ ಕಸಿವಿಸಿಯನ್ನು ಮುಚ್ಚುಮರೆಯಿಲ್ಲದೆ ಧಿಕ್ಕರಿಸಿ, ಅದೇ ನಗಾರಿ ದನಿಯಲ್ಲೇ ಅಂಥದನ್ನೂ ಹೇಳುತ್ತಿದ್ದರು. ಹುಡುಗರೂ ಮನಸ್ಸು ಕಲ್ಲುಮಾಡಿ ಕೇಳುತ್ತಿದ್ದರು.

ಇಷ್ಟಾದರೂ ವಿದ್ಯಾರ್ಥಿಗಳಲ್ಲಿ ಜೀಕೆ ಜನಪ್ರಿಯರಾಗಿದ್ದರು. ಮನುಷ್ಯ ಒಂದು ತಿಂದವನಲ್ಲ, ಭ್ರಷ್ಟನಲ್ಲ, ಕೆಟ್ಟದ್ದು ಮಾಡಿದವನಲ್ಲ, ತನ್ನ ಕರ್ತವ್ಯಕ್ಕೆ ಎರಡು ಬಗೆದವನಲ್ಲ, ಊರಿನ ಉಸಾಬರಿಗೆ ಹೋದವನಲ್ಲ, ಜೊತೆಗೆ ಕಾಲೇಜು ಕಟ್ಟಿದವರು. ಅವರು ಊರಿನ ರಸ್ತೆಯಲ್ಲಿ ಬೆಳಗಿನ ಹೊತ್ತು ಕಾಣಿಸಿದರೆ ಈಗ ಗಂಟೆ ಹತ್ತುವರೆಯೆಂದು ಕಂಡವರು ತಂತಮ್ಮ ವಾಚು ಸರಿಪಡಿಸಿಕೊಳ್ಳಬೇಕು – ಹಾಗಿದ್ದರು. ಹುಡುಗರೊಂದಿಗೆ ವ್ಯವಹರಿಸುವಾಗಲೂ ತಮ್ಮ ಘಣತೆಗೆ ಕುಂದು ತಂದುಕೊಳ್ಳುತ್ತಿರಲಿಲ್ಲ. ‘ಕೂತ್ಕೊಳ್ರಿ’ ಎಂದು ಹೇಳುವ ತನಕ ಒಬ್ಬ ಅಧ್ಯಾಪಕನೂ ಅವರೆದರು ಕೂರುತ್ತಿರಲಿಲ್ಲ, ಎಂದರೆ ಎಂಥ ಆಸಾಮಿ ಅಂಥ ನೀವೇ ಊಹಿಸಿಕೊಳ್ಳಬಹುದು. ಇನ್ನೇನು, ಅವರ ಮನಸ್ಸಿನ ಗುಪ್ತ ಮೂಲೆಗಳಲ್ಲಿ ಕೆಲವು ಚಿಲ್ಲರೆ ಬೇಸರಗಳಿದ್ದದ್ದು ನಿಜ. ಆದರೆ ಅವನ್ನು ಬೇರೆಯವರಿಂದ ಮಾತ್ರವಲ್ಲದೆ ತಮ್ಮಿಂದಲೂ ಮರೆಮಾಚಿಕೊಳ್ಳುವಂಥ ಶಕ್ತಿ ಅವರಲ್ಲಿತ್ತು.

ಜೀಕೆ ಮಾಸ್ತರರ ಖಾಸಗೀ ಬದುಕೂ ಅಷ್ಟೆ. ಅವರ ಶ್ರೀಮತಿ ಗಿರಿಜಮ್ಮನ ವಯಸ್ಸು ಹತ್ತಿರ ಹತ್ತಿರ ಐವತ್ತಿದ್ದೀತು. ದಂಪತಿಗಳಿಬ್ಬರೂ ಶಿವಭಕ್ತರು. ವರ್ಷಕ್ಕೊಮ್ಮೆ ಸಾವಳಗಿ ಶಿವಲಿಂಗೇಶ್ವರ ಮಠಕ್ಕೆ ಹೋಗಿ ಬರುತ್ತಿದ್ದರು. ಮೊದ ಮೊದಲು ವ್ರತಾಚರಣೆಗಳ ಬಗ್ಗೆ ಇಬ್ಬರಿಗೂ ಗೀಳಿತ್ತು. ಜೀಕೆ ವ್ರತಾಚರಣೆ, ಹ್ಯಾಗೆಂದು ನೀವೂ ಊಹಿಸಬಹುದು. ಒಂದು ಕೂದಲೆಳೆಯಷ್ಟು ಕಮ್ಮಿಯಾಗಬಾರದು, ಮಾತ್ರವಲ್ಲ ಹೆಚ್ಚೂ ಆಗಬಾರದು. ದೇವರು ಕೂಡ ಹೆದರಿ ಉಸಿರು ಬಿಗಿ ಹಿಡಿದು ವ್ರತ ಮುಗಿಯುವ ತನಕ ಹೇಳಿದಲ್ಲಿ ಬಿದ್ದಿರಬೇಕಿತ್ತು – ಆ ರೀತಿ ಮಾಡುತ್ತಿದ್ದರು. ಮುಂದೆ ಇಂಥ ಧಾರ್ಮಿಕತೆಯಲ್ಲಿ ಗಿರಿಜಮ್ಮನ ನಂಬಿಕೆ ಕಡಿಮೆ ಆದದ್ದು ಅವರ ಒಬ್ಬನೇ ಮಗ ವ್ರತಾಚರಣೆಗೇ ಆಹುತಿಯಾದನೆಂದು ನಂಬಿದಾಗ.

ಅದು ಹಿಂದಿನ ಮಾತು. ಇವರ ಮಗ ವೀರಭದ್ರಯ್ಯ ಆಗ ಹನ್ನೊಂದು ವರ್ಷದ ಬಾಲಕ. ಕರೀಹುಡುಗ ತುಂಬಿಕೊಂಡು ಚೆನ್ನಾಗೇ ಓಡಾಡಿಕೊಂಡಿದ್ದ. ಒಮ್ಮೆ ಅವ ಹೊಟ್ಟೆನೋವೆಂದು ಮಲಗಿದ. ಆ ದಿನವೇ ಇವರ ಕಟ್ಟುನಿಟ್ಟಿನ ವ್ರತ ಇತ್ತು. ದಂಪತಿಗಳು ಭಾರೀ ಮಡಿ ಮೈಲಿಗೆಯವರು, ಒಬ್ಬರನ್ನು ಮುಟ್ಟಬಾರದು, ಮಾತಾಡಬಾರದು. ಮಗನ ಹೊಟ್ಟೆನೋವಿನ ವಿಷಯ ತಿಳಿದ ಜೀಕೆ ವಿಚಲಿತರಾಗಲಿಲ್ಲ. ಪೂಜೆಯಿಂದೇಳಲೂ ಇಲ್ಲ. ಆದರೆ ಗಿರಿಜಮ್ಮ ತಡೆಯದೆ ಮಗನ ಬಳಿ ಕದ್ದುಹೋಗಿ ಡಾಕ್ಟರ ಬಳಿ ಹೋಗೆಂದು ಸನ್ನೆ ಮಾಡಿ ಸೂಚಿಸಿ ಬಂದಳು. ಮಗ ಹೋಗಲಿಲ್ಲ. ನೋವು ತಡೆಯದೆ ಬಿದ್ದು ಒದ್ದಾಡಿ ಗೋಳಾಡತೊಡಗಿದ. ಇವನು ಬೇಕಂತಲೇ ಹೀಗೆ ಮಾಡುತ್ತಿದ್ದಾನೆಂದು ಜೀಕೆ ಕೊಪಕೊಂಡರು ಕೂಡ. ಮತ್ತು ಇನ್ನಷ್ಟು ಗಟ್ಟಿ ಮನಸ್ಸು ಮಾಡಿ, ತಮ್ಮ ಏಕಾಗ್ರ ಹರಿಗಡಿಯದಂತೆ ಪೂಜೆಗೆ ತೊಡಗಿದರು. ಅವರು ಕೂತಿದ್ದ ಭದ್ರ ಭಂಗಿ, ಉಕ್ಕಿನ ಮುಖಭಾವಗಳನ್ನು ನೋಡಿ ಹೆದರಿದ ಗಿರಿಜಮ್ಮನೂ ಏಳಲಿಲ್ಲ. ಇವರ ಮನೆ ಊರು ಬಿಟ್ಟು ತುಸು ದೂರದಲ್ಲಿರುವುದರಿಂದಲೋ, ಇವರ ದುರ್ದೈವವೋ ಆಸುಪಾಸು ಯಾರೂ ಸಾಯಲೂ ಇಲ್ಲ. ಬಹಳ ಹೊತ್ತಿನ ತರುವಾಯ ಯಾರೋ ಅಧ್ಯಾಪಕರು ಬಂದು ಹುಡುಗನನ್ನು ಆಸ್ಪತ್ರೆಗೇನೋ ಒಯ್ದರು. ಆದರೆ ತಿರುಗಿ ತಂದದ್ದು ಅವನ ಹೆಣವನ್ನು.

ಆಮೇಲೆ ಆಕೆ ಆಳಾಗಲೇ ಇಲ್ಲ. ಕರ್ಮವಿಪಾಕದ ಹೆಸರಿನಲ್ಲಿ ಮಗನ ಸಾವನ್ನು ಅವಳ ಮನಸ್ಸಿನಿಂದ ತೆಗೆಯಲಿಕ್ಕೆ ಇವರೆಷ್ಟು ಯತ್ನಿಸಿದರೂ ಸಾಧ್ಯವಾಗಲಿಲ್ಲ. ಮಾನಸಿಕ ಸ್ವಾಸ್ಥ್ಯವಿಲ್ಲದೆ ಆಕೆ ಒಂದಿಲ್ಲೊಂದು ರೋಗಕ್ಕೆ ತುತ್ತಾಗುತ್ತಿದ್ದಳು. ಇವರು ಮಾತ್ರ ಆಗಾಗ ವ್ರತಗಳನ್ನು ಆಚರಿಸುತ್ತಲೇ ಬಂದರು. ಅದೇ ಕರ್ಮವಿಪಾಕದ ಹೆಸರಿನಲ್ಲಿ ಮಗನ ದುಃಖದಿಂದ ಮುಕ್ತರೂ ಆಗಿದ್ದರು. ಮಕ್ಕಳಿರಲಿಲ್ಲವೆಂಬ ಚಿಂತೆ ಇವರಿಗಿತ್ತು ನಿಜ. ಆದರೆ ಕಾಲೇಜಿನ ವಿಪರೀತ ಜವಾಬ್ದಾರಿಗಳಲ್ಲಿ ಅದನ್ನು ಮರೆತರು.

ಮೊದಲೆಲ್ಲ ಹುಡುಗರು ಚೆನ್ನಾಗಿದ್ದರು. ಗುರುಹಿರಿಯರ ಬಗ್ಗೆ ಭಯ ಭಕ್ತಿ ಇಟ್ಟುಕೊಂಡಿದ್ದರು. ಆದರೆ ಈಗೀಗ ಕಾಲೇಜಿನ ಹವಾಮಾನ ಬದಲಾಗಿತ್ತು. ಹುಡುಗರು ಮುಂಚಿನಂತಿರಲಿಲ್ಲ. ಹದ್ದು ಮೀರಿ ಸ್ವಾತಂತ್ರ್ಯ ಬೇಡುತ್ತಿದ್ದರು. ಪಡೆಯುತ್ತಿದ್ದರು. ಒಮ್ಮೊಮ್ಮೆ ಇದೆಲ್ಲ ಇನ್ನು ಸಾಕು; ಶಿವಾ ಎನ್ನುತ್ತ ಮನೆಯಲ್ಲಿದ್ದರಾಯ್ತೆಂದೂ ಅಂದುಕೊಳ್ಳುತ್ತಿದ್ದರು. ಮತ್ತೊಮ್ಮೆ ‘ಇನ್ನೇನು ರಿಟೈರಾಗಬೇಕಲ್ಲ. ಅಲ್ಲೀ ತನಕ ಕಾಲೇಜನ್ನು ಕಟ್ಟುನಿಟ್ಟು ಶಿಸ್ತುಸಂಯಮಗಳಿಂದ ನಡೆಸೋದು. ತಾನು ಬಿಟ್ಟ ಮೇಲೆ ಇದ್ದೇ ಇದೆ. ‘ತಾಬಲ ಶಿವ ಬಲ’ ಹೀಗೂ ಅಂದುಕೊಳ್ಳುತ್ತಿದ್ದರು. ಈ ಸಂದರ್ಭದಲ್ಲಿಯೇ ಆ ಘಟನೆ ನಡೆಯಿತು.