ಬಸದಿಯ ಹಾಡುಗಳು:

ನಮ್ಮೂರ ಬಸ್ತೀಗಿ ಒಂಬತ್ತು ಬಾಗಿಲು
ತುಂಬ ಕುಂತಾರ ಜೈನರು| ನನ ಕಂದ
ಜೈ ಎಂದು ಪೂಜಿ ಮುಗಸ್ಯಾರು|

ಆರು ಬಸ್ತಿಯ ಕಂಡೆ ತೂಗೋ ದೀವಿಗೆ ಕಂಡೆ
ಆರೂ ಬಸ್ತ್ಯೋಳಗೂ ಜಿನಪೂಜೆ ಆಗಂತ
ಚಂದವ ಕಂಡೆ ಕನಸೀಲಿ

ಬಸ್ತೀಗಿ ಹೋಗವ್ನ ಬಲಕೇನ ಹೊಳದಾವ
ಏಸೇಳಿ ಗೋಪ ಎದಿ ಮ್ಯಾಲ | ನನತಮ್ಮ
ಬಸ್ತೀಗೆ ಹೋಗವನ್ನ ಸಡಗರ

ನೋಂಪಿಯ ಹಾಡುಗಳು:-

ಬಸ್ತಿ ಬಾಗಲ ಮುಂದ ಮಂದ್ಯಾಕ ಮಕ್ಕಳ್ಯಾಕ
ನಂದಿಕೋಲ್ಯಾಕ ನವಿಲ್ಯಾಕ| ನನ್ನ ಅಣ್ಣಯ್ಯ
ನಂದೀಸ್ವರ ನೋಂಪಿ ಮುಗಸ್ಯಾರ|

ಕುಂಕುಮ ನೋಂಪಿ ಮುಗಿಸಾಳ| ಶಚಿದೇವಿ
ತನ್ನ ಬಳಗಕ ಬಾಗಿನ ಕೊಡತಾಳ |

ಮಗಳ ಚಲುವಿಕಿ:-

ಹೊಂಬುಜದ ತೇರೇಗಿ ಹೊಂದಿ ನಿಂತವಳ್ಯಾರ
ಚಂದಳ ಗೊಂಬಿ ನನ ಮಗಳ| ನಿತಗೊಂಡ
ಚಂದಪಗ ಲಾಯ ಬಿಡಸ್ಯಾಳ

ಯಾತ್ರೆ:-

ಬೆಳಗುಳವೆಂಬುವದು ಅರವತ್ತೋಂದ್ಹರದಾರಿ
ಬರತೀರೆ ಕಾಲSS ನಡಿಕೇಲಿSS ಸ್ವಾಮಿSS ಜಯ ಜಯಾ

ಬೆಳಗುಳದ ಹಾದೀ ಬೆಳತನಕ ನಡದೇನು
ಎಷ್ಟ ನಡದರ ದಣಿವಿಲ್ಲ| ಬೆಳ್ಗೋಳ ಸ್ವಾಮಿ
ಹಾವ ಮುಟ್ಟಿದರ ವಿಷವಿಲ್ಲ.

ಹೀಗೆ ಮದುವೆಯಲ್ಲಿ ಬಾಸಿಂಗ ಕಟ್ಟುವ ಹಾಡು, ಹರಕೆ ಒಪ್ಪಿಸುವ ಹಾಡು, ನೇಮೀಸ್ವರ ಸ್ವಾಮಿ ದೀಕ್ಷೆಗೆ ಹೋಗುವ ಹಾಡು, ಪದ್ಮಾವತಿ ಯಕ್ಷಿಯ ಆರತಿಯ ಹಾಡು, ಪದ್ಮಾವತಿ ದೇವಿಯ ಬಳೆ ಇಡುವ ಹಾಡು, ಹೀಗೆ ಹಲವಾರು ಸಂದರ್ಭಗಳ ನೂರಾರು ಹಾಡುಗಳನ್ನು ಜೈನಮಹಿಳೆಯರು ಹಾಡುತ್ತಾರೆ. ಅಧ್ಯಯನಕ್ಕಾಗಿ ಕೆಲವು ಹಾಡುಗಳ ಪಲ್ಲವಿ ಮತ್ತು ಒಂದೊಂದು ನುಡಿಗಳನ್ನು ಇಲ್ಲಿ ಮಾದರಿಗಾಗಿ ಕೊಟ್ಟಿದ್ದೇನೆ:

ಜಿನದತ್ತರಾಯನ ಜೋಗುಳದ ಹಾಡು

ಧರಣೇಂದ್ರನರಸಿ, ವರಪುತ್ರ ಜೋ ಜೋ
ತರುಣಿ ಸುಶಾಂತನ ರೂಪನೆ ಜೋ ಜೋ
ಧರಣಿಪ ಸಾಕಾರ ತನಯನೇ ಜೋ ಜೋ
ತರುಣಿ ಪಂಪಲದೇವಿ ಸಹಜಾತ ಜೋ ಜೋ, ಜೋ ಜೋ ||೧||

ಜೋ ಜೋ ಕ್ಷತ್ರಿಯಕುಲಕೆ ನೀ ರನ್ನ
ಜೋ ಜೋ ಸದ್ಗುಣಭರಿತ ಸಂಪನ್ನ
ಜೋ ಜೋ ಜಿನ ಧರ್ಮಪಾಲ ಮೋಹನ
ಜೋ ಜೋ ಎಂದು ನಾರಿಯರು ತೂಗಿರೇ
ಮುನ್ನ ಜೋ ಜೋ ||೨||

ಮನಸಿಜ ಸಮರೂಪ ಸುಗುಣನೆ ಲಾಲೀ
ದಿನಕರ ಕೋಟಿ ವಂಶ ಲಲಾಮನೆ ಲಾಲೀ
ಜಿನದತ್ತ ನಾಮವ ಧರಿಸಿದ ಶಿಶು ಲಾಲೀ
ವನಧೀ ಶಶಾಂಕ ಸಜ್ಜನರಿಗೆ ಲಾಲೀ ಜೋ ಜೋ ||೩||

ದೇವಿ ಪದ್ಮಾವತಿ ನಿಮ್ಮ ರಕ್ಷಿಸಲಿ
ದೇವೇಂದ್ರ ನೈಶ್ವರ್ಯ ನಿಮ್ಮದಾಗಿರಲಿ
ದೇವಾಧಿ ದೇವವಂದಿತನಯದಲಿ
ಕೋವೀರನಾಗಿರು ಸಕಲರಾಯರಲಿ ಜೋ ಜೋ |೪||

ಶೋಬಾನದ ಹಾಡು:-

ಬಟ್ಟಲೊಳಗಿನ ಪುಟ್ಟ ಮಣೀ ಬಾಸಿಂಗ
ಆಗ್ಯಾರು ಕೊಟ್ಟು ಕಳುಹ್ಯಾರೆ| ಹುಮಚದ
ಅಕ್ಕ ಪದ್ಮಮ್ಮ ಕಳುಹ್ಯಾರೆ|| ಸೋಬಾನವ

ಅಕ್ಕ ಪದ್ಮಮ್ಮ ಏನೆಂದು ಕಳುಹ್ಯಾರೆ
ಮೂರೇ ದಿನ ಮುಡಿದು ಮೆರಿಲೆಂದು| ಆರಂಭದಿನಕೆ
ಚಿನ್ನದ ಕಂಭಕ್ಕೆ ರಥನೇರಿ|| ಸೋಬಾನವ

ಹರಿವಾಣದೊಳಗಿರುವ ಹಳದಿ ಮಣಿ ಬಾಸಿಂಗ
ಈಗ್ಯಾರು ಕೊಟ್ಟು ಕಳವ್ಯಾರೆ | ಹುಮ್ಮಚದ
ತಾಯಿ ಪದ್ಮಮ್ಮ ಕಳುವ್ಯಾರೆ || ಸೋಬಾನವ

ಮತ್ತೊಂದು ಜೋಗುಳದ ಹಾಡಿನ ಮಾದರಿ:-

ಜೋ ಜೋ ಅನ್ನೀರಿ ಜೋ ಜಿನರಾಯಾ
ಜೋ ಜೋ ಅನ್ನಿರಿ ಜೋತಿ ಬಗವನ್ನಾ |
ಜೋ ಜೋ ಅನ್ನಿರಿ ಕಂದರ್ಪ ಜೀನಾ….. ಜೋ ಜೋ ||೧||

ಅವ್ವಾರಿವ್ವಾರು ಹನ್ನೆರಡ್ಹಲಗಿ
ಲೆಕ್ಕನೆ ತೀಡೀದರಿಪ್ಪನಆಲ್ಕು….
ತೀರ್ಥಂಕರ ಮುನೀಶ್ವರ ಪಾದಕ್ಕೂ…ಜೋ ಲಜೋ ||೨||

ಬಡವವರಿಲ್ಲೆಂಬ ದಿನವನೇ ನೋಡಿ
ಬಡವವರಿಲ್ಲೆಂಬ ಘಳಿಗೆಯ ಕೇಳಿ
ಈಗ ಹುಟ್ಟೀದ ನೇಮಿ ಕುಮಾರನು….. ಜೋ ಜೋ ||೩||

ಜೋ ಜೋ ಅನ್ನೀರಿ ಮುಕುತಿ ಉಳ್ಳೊಡೆಯ
ಜೋ ಜೋ ಅನ್ನಿರಿ ತ್ರಿಭುವನ ಸ್ವಾಮೀ
ಜೋ ಜೋ ಅನ್ನಿರಿ ಆದಿ ಬಗವನ್ನಾ…. ಜೋ ಜೋ ||೪||

ಒಂದು ಮೋಜಿನ ಹಾಡು, ಮದುವೆಯಲ್ಲಿ ಹಾಡುವಂತಹದ್ದು:

ಸೂಳೇರ ಕೇರೇಗಿ ಹೋಗಿದ್ದು ಭಾವ
ಸುಳ್ಳೇನು ಭಾವ ಬದ್ದೇನು ಭಾವ?
ಹಾರೀಗಿ ಬಸ್ತಿಗಿ ಹೋಗ್ಯಾನ ಭಾವ

ಹಾಲಿನಭಿಷೇಕ ಮಾಡಾನೆ ಭಾವ
ದೀಪನಾದರೂ ಹಚ್ಚಾನೆ ಭಾವ
ಕೈಯನಾದರೂ ಮುಗಿಯನನೆ ಭಾವ
ಸತ್ಯ ನುಡಿ ಭಾವ………..

(ಇಲ್ಲಿ ಒಬ್ಬಾತ ತನ್ನ ಭಾವ ಸೂಳೆಯ ಮನೆಗೆ ಹೋಗಿ ಬಂದಿದ್ದಾನೆ ಎಂದು ಸಂದೇಹ ಪಟ್ಟು, ಅವನನ್ನು ಬಸದಿಗೆ ಹೋಗಿ ದೇವರ ಮುಂದೆ ಪ್ರಮಾಣ ಮಾಡು ಎಂದು ಕೇಳುತ್ತಾನೆ. ಸೂಳೆಯ ಮನೆಗೆ ಹೋಗಿಲ್ಲದ ಭಾವ ಬಸದಿಗೆ ಹೋಗಿ ಜಿನದೇವರಿಗೆ ಹಾಲಿನಭಿಷೇಕವನ್ನು ಮಾಡಿ ಅಪರಾಧದಿಂದ ಮುಕ್ತನಾಗುತ್ತಾನೆ.)

ಜನಪದ ಎನ್ನುವದು ಜಾತಿಯನ್ನು ಮೀರಿದ್ದುದಾಗಿದೆ. ಆದ್ದರಿಂದ ಎಲ್ಲ ಜನಾಂಗಗಳು ತಮ್ಮ ಅಭಿವ್ಯಕ್ತಿಯನ್ನು ಹಾಡಿನ ಮೂಲಕ, ಕಥೆಗಳ ಮೂಲಕ, ತಮಾಷೆಯ ಒಗಟುಗಳ ಮೂಲಕ ಅಭಿವ್ಯಕ್ತಿ ಮಾಡುತ್ತವೆ. ಇದಕ್ಕೆ ಜೈನ ಮಹಿಳೆ ಕೂಡಾ ಹೊರತಾದವಳಲ್ಲ. ಈ ಹಿನ್ನೆಲೆಯಲ್ಲಿ ಜೈನ ಮಹಿಳೆ ಹೇಳಿದ ಒಂದು ಜಾನಪದ ಕಥೆಯನ್ನು ಕೊಡಲಾಗಿದೆ.

ಗುಳಕಾಯಜ್ಜಿ ಕಥೆ

ಚಾಮುಂಡರಾಯ ಎಲ್ಲ ಕಟ್ಟಸ್ಥ, ಸ್ವಾಮಿ ಸ್ಥಾಪನೆ ಮಾಡದ್ದ, ನಾನಿಷ್ಟೆಲ್ಲ ಮಾಡ್ದೆ ಅಂತ ಅಹಂಕಾಋ ಪಟ್ಕೊಂಡ. ಪೂಜೆ ಮಾಡಿದ್ರೂ ಅಭಿಷೇಕ ತಳೀಗಿಳಲಿಲ್ಲ. ಯಾರ್ಯಾರಭಿಷೇಕ ಮಾಡಿದ್ರೂ ತಳೀಗಿಳಿಲಿಲ್ಲ, ಹಾಲೂ, ನೀರು. ಆಗ ಈ ಗುಳಕಾಯಜ್ಜಿ ಗುಳಕಾಯ್ನಲ್ಲಿ ಹಾಲು ಮೊಸರು ತುಂಕೊಂಡು ಹೋಯ್ತಂತೆ. ನಾನಬ್ಸೇಕ ಮಾಡ್ತೀನಿ ಅಂತ ಹೋಯ್ತಂತೆ ಅಜ್ಜಮ್ಮ. ಅಯ್ಯೋ, ಇಷ್ಟ ಜನಾ ಎಲ್ಲ ಮಾಡಿದ್ರೂ ಆಗ್ಲಿಲ್ಲ, ಮಾಡ್ಕೋ ಅಂತ ಬೊಂಬುಗಿಂಬು ಎಲ್ಲ ಹಾಕ್ಸೆ ಬಿಡ್ತಾನೆ. ಆಮೇಲೆ ಅಬ್ಸೇಕ ಮಾಡ್ತೈತೆ; ಅದೆಲ್ಲ ತಳೀಕಿಳಿದ ಬಿಡ್ತೈತಿ. ಇಲ್ಲೊಂದು ಹಾಲ್ಮತಿ ಘಟ್ಟ ಅಂತ ಐತೆ. ಅಲ್ಲಿಗೆ ಹೋಗಿ ನಿತ್ಕತೈತೆ. ಅಲ್ಲೇ ಕಟ್ಟೆ ಕಟ್ಸುದ್ರು. ಅದೇ ಗಂಜಿ ಗಟ್ಟೆ. ಹಾಲಿ ಇನ್ನೊಂದ್ಕಡೆ ಹೋಗಿ ನಿತ್ಕಂತು. ಅದನ್ನು ಹಾಲ್ಬಾವಿ ಅಂತ ಭಾವಿ ಕಟ್ಸಿದ್ರು.

ಅಭಿಷೇಕ ಯಾವಾಗ ಅಯ್ತೋ ಇಲ್ವೋ, ಅಜ್ಜಿ ಮಾಯವಾಗಿ ಬಿಡ್ತೈತೆ. ಎಲ್ಲೊಯ್ತು ಅಂತ ಹುಡುಕ್ತವೆ. ಅದಕ್ಕೇನಾದ್ರೂ ಮರ್ಯಾದೆ ಮಾಡ್ಬೇಕೂ, ಅಬ್ಸೇಕ ಆಯ್ತಲ್ಲಾ ಅಂತ ಹುಡುಕ್ತಾರೆ. ಆ ಬಾಗಿಲು ಪಕ್ದಲ್ಲಿ ಕಲ್ಲು ಪಟ್ರೇಲಿ ಸೇರ್ಕಬಿಟ್ಟೈತೆ. ಅರ್ಧ ಒಳಿಕ್ಕೋಗೈತೆ, ಅರ್ಧ ಈಚಿಗೈತೆ, ಆವಾಗ ಹಿಡ್ಕೊಂಡು ನಿಂಗೇನ್ಕೋಡಬೇಕು ಅಂತ ಕೇಳ್ತಾರೆ. ನಂಗೇನೂ ಬ್ಯಾಡ, ನನ್ನ ರೂಪ್ಮಾಡಿ ಸ್ವಾಮಿ ಎದ್ರು ನಿಲ್ಲಿಸಿ ಬಿಡಿ ಅಂತ ಹೇಳ್ತೈತೆ. ಆ ಬ್ರಹ್ಮದೇವರ ಕೆಳ್ಗೆ ಗುಳಕಾಯಜ್ಜಿ ಐತಲ್ಲಾ, ಆ ರೂಪ ಮಾಡಿ ಅಲ್ಲಿ ನಿಲ್ಲಿಸ್ತಾರೆ.

(ಮೇಲೆ ಹೇಳಿದ ಹಾಡುಗಳನ್ನು ಮತ್ತು ಜನಪದ ಕತೆಯನ್ನು ನಾನು ಡಾ ಎಸ್‌.ಪಿ ಪದ್ಮ ಪ್ರಸಾದ ಅವರ ಜೈನ ಜನಪದ ಸಾಹಿತ್ಯ ಸಂಪಾದನೆ ಮತ್ತು ಅಧ್ಯಯನ ಎಂಬ ಪಿಎಚ್‌.ಡಿ ಮಹಾ ಪ್ರಬಂಧದಿಂದ ಎತ್ತಿಕೊಂಡಿದ್ದೇನೆ. ಅವರಿಗೆ ನಾನು ಋಣಿಯಾಗಿದ್ದೇನೆ.)

೨ ಆಧುನಿಕ ಕಥನ ಸಾಹಿತ್ಯ:

ಆಧುನಿಕ ಪ್ರಭಾವೀ ಗದ್ಯಪ್ರಕಾರವಾದ ಕಾದಂಬರಿಯ ರಚನೆಯಲ್ಲಿ ಜೈನ ಮಹಿಳೆಯರು ಹಿಂದೆ ಬಿದ್ದಿಲ್ಲ. ಶಾಂತಾ ಶಶಿಕಿರಣ, ಗುಡಿಬಂಡೆ ಪೂರ್ಣಿಮಾ, ಧಾರಿಣಿ, ಎಸ್‌.ಪಿ. ಪೂಣಿಮಾ ಇವರೆಲ್ಲಾ ಕನ್ನಡದಲ್ಲಿ ಐತಿಹಾಸಿಕ ಕಾದಂಬರಿಗಳನ್ನು ರಚಿಸಿದ್ದಾರೆ. ಕಾದಂಬರಿಯನ್ನು ಬರೆದ ಈ ಮಹಿಳೆಯರು ಪಂಚಮ ಜೈನ ಸಮಾಜಕ್ಕೆ ಸೇರಿದವರು. ಇವರಲ್ಲಿ ಯಾರೂ ಒಕ್ಕಲುತನವನ್ನು ತಮ್ಮ ಆದಾಯದ ಮೂಲವನ್ನಾಗಿ ಮಾಡಿಕೊಂಡವರಿಲ್ಲ. ನಗರವಲಯದಲ್ಲಿ ವಾಸ, ಆರ್ಥಿಕವಾಗಿ ಉತ್ತಮ ಸ್ಥಿತಿಯಲ್ಲಿದ್ದ ಈ ಮಹಿಳೆಯರು ವರ್ತಮಾನಕ್ಕೆ ವಿಮುಖರಾಗಿ ಪುರಾಣದಲ್ಲಿಯ ವಸ್ತುವನ್ನು ಆಯ್ದುಕೊಂಡು ಒಂದಿಷ್ಟು ಕಾದಂಬರಿಗಳನ್ನು ಬರೆದಿದ್ದಾರೆ. ಚೇಳಿನಿ, ಚಕ್ರೇಶ್ವರಿ, ಅತ್ತಿಮಬ್ಬೆ, ಇಂತಹ ಐತಿಹಾಸಿಕ ಪಾತ್ರಗಳನ್ನು ಆಯ್ದುಕೊಂಡು ಅದೇ ಕಾಲಘಟ್ಟದಲ್ಲಿ ನಿಂತುಕೊಂಡು ಕತೆ ಹೇಳಿದಂತೆ ಹೇಳಿದ್ದಾರೆ. ವರ್ತಮಾನದ ಜೈನಮಹಿಳೆಯ ಬವಣೆಗಳು ನಮ್ಮ ಜೈನಾ ಮಹಿಳಾ ಕಾದಂಬರಿಕಾರ್ತಿಯರಿಗೆ ಯಾಕೆ ಪ್ರಸ್ತುತ ಎನಿಸಲಿಲ್ಲ? ಮಿರ್ಜಿ ಅಣ್ಣಾರಾಯ ಆ ಕಾಲದಲ್ಲೇ ಒಕ್ಕಲುತನ ಮಾಡುವ ಚತುರ್ಥ ಜೈನಸಮಾಜ ಹೇಗೆ ಮಹಿಳೆಯರನ್ನು ಶೋಷಣೆ ಮಾಡುತ್ತದೆ ಎನ್ನುವದನ್ನು ತಮ್ಮ ನಿಸರ್ಗ ಕಾದಂಬರಿಯಲ್ಲಿ ಚಿತ್ರಿಸಿದ್ದಾರೆ. ಆದರೆ ಈ ಮಹಿಳೆಯರು ಸ್ವತಃ ತಾವೇ ಶೋಷಣೆಗೆ ಒಳಗಾಗುತ್ತಿದ್ದರೂ ಕೂಡಾ ಅದರ ಬಗ್ಗೆ ಸೊಲ್ಲೆತ್ತದೆ, ಗತಕ್ಕೆ ಸೇರಿದ ನಾಗಶ್ರೀ, ಅತ್ತಿಮಬ್ಬೆ, ಚೇಳಿನಿ, ಚಕ್ರೇಶ್ವರಿಯರ ಬಗ್ಗೆ ಕಾದಂಬರಿಗಳನ್ನು ರಚಿಸಿದ್ದು ಯಾಕಾಗಿ? ಬಹುಶಃ ತಮ್ಮ ವೇಳೆ ಕಳೆಯಲು ಮತ್ತು ಮನೋರಂಜನೆಗಾಗಿ ಕಾದಂಬರಿಗಳನ್ನು ರಚಿಸಲು ಮುಂದಾಗಿರುವ ಇವರು ಜೈನಸಮಾಜದಲ್ಲಿಯ ಮಹಿಳಾ ಪಕ್ಷಪಾತ ಮತ್ತು ತಾರತಮ್ಯಗಳನ್ನು ಚಿತ್ರಿಸುವ ಧೈರ್ಯವನ್ನು ಹೊಂದಿಲ್ಲ.

ಇವರು ಐತಿಹಾಸಿಕ ವಸ್ತುವನ್ನೇ ಆಯ್ದುಕೊಂಡಿದ್ದಾರೆ ಕೂಡಾ. ಏಕೆಂದರೆ ಐತಿಹಾಸಿಕ ಮಹಿಳೆಯರ ಸ್ವಾತಂತ್ಯ್ರ ಮತ್ತು ಧೈರ್ಯ, ಸಾಹಸಗಳನ್ನು ಕಥನ ಮಾಡುವ ಮೂಲಕ ಇಂದಿನ ಜೈನಮಹಿಳೆಯರಿಗೆ ಒಂದು ಆದರ್ಶವನ್ನು ಮನಗಾಣಲು ಬರೆದಂತಿವೆ. ಜೈನ ಮಹಿಳಾ ಕಾದಂಬರಿಗಳು ವಿಷಮ ದಾಂಪತ್ಯ, ವಿಷಮ ಮಾತೃತ್ವ, ವಿಷಮ ಪಿತೃತ್ವದ ವಸ್ತುವನ್ನು ಆಯ್ದುಕೊಂಡಿವೆ ಎಂಬುದೇ ಕುತೂಹಲಕಾರಕವಾದ ಸಂಗತಿಯಾಗಿದೆ.

ಲೈಂಗಿಕ ಹಕ್ಕಿನ ಪ್ರತಿಪಾದನೆಯನ್ನು ನೇರವಾಗಿ ಬರೆಯದೆ ಜನ್ನ ಕವಿಯ ಅಮೃತಮತಿಯ ಕಥಾನಾಯಕಿಯನ್ನು ಆಯ್ದುಕೊಳ್ಳುವ ಮೂಲಕ ಇವರು ತೋರಿಸಿದ್ದಾರೆ ಎನಿಸುತ್ತದೆ. ಇತಿಹಾಸ ಗತಕಾಲದ ಘಟನೆಯಲ್ಲ. ಅದು ಕಟ್ಟಿಲ್ಪಡುವದೇ ವರ್ತಮಾನಕ್ಕಾಗಿ ಅದು ಸಮಕಾಲೀನ ಅವಶ್ಯಕತೆಗಳಿಗಾಗಿ ರಚನೆಯಾಗುತ್ತದೆ. ಅದಕ್ಕಾಗಿ ಮತ್ತೆ ಮತ್ತೆ ಐತಿಹಾಸಿಕ ಮಹಿಳೆಯರ ಬಗ್ಗೆ ಕಾದಂಬರಿಗಳು ರಚನೆಯಾಗಿವೆ. ಆದ್ದರಿಂದ ಜೈನ ಮಹಿಳೆಯರ ಈ ಕಾದಂಬರಿಗಳನ್ನು ಆಧುನಿಕ ಆಶಯದ ಅರ್ಥದಲ್ಲಿ ಮಂಡಿಸುವ ರೀತಿಯಲ್ಲಿ ನಾವು ಓದಬೇಕು ಎನಿಸುತ್ತದೆ.

ಜೈನ ಚತುರ್ಥ ಮಹಿಳೆಯರಲ್ಲಿ ಯಾವೊಬ್ಬ ಮಹಿಳೆಯೂ ಕಥೆ, ಕಾದಂಬರಿಯನ್ನು ರಚಿಸಿಲ್ಲ. ಬೆಂಗಳೂರು, ಮೈಸೂರು ಮತ್ತು ಕೋಲಾರ (ಗುಡಿಬಂಡೆ) ಜಿಲ್ಲೆಗಳಿಂದ ಮಾತ್ರ ಕೆಲವು ಕಾಲದಲ್ಲಿ ಈ ಮಹಿಳಾಗುಂಪು ಕಾದಂಬರಿಗಳನ್ನು ರಚಿಸಿತು. ಒಂದು ನಿರ್ದಿಷ್ಟ ಉದ್ದೇಶಕ್ಕಾಗಿ ವಸ್ತುವನ್ನು ಕೊಟ್ಟು ಇವರಿಂದ ಈ ಬಗೆಯ ಕಾದಂಬರಿಗಳನ್ನು ಬರೆಸಲಾಯಿತು. ಈಗ ಯಾರೂ ಕಾದಂಬರಿ ಮಾತು ಸಣ್ಣ ಕಥೆಗಳನ್ನು ಬರೆಯುತ್ತಿಲ್ಲ. ಸಾಹಿತ್ಯವಲಯದಲ್ಲಿ ಜೈನಮಹಿಳೆಯರು ಇಲ್ಲವಾಗಿದ್ದಾರೆ. ಕಾವ್ಯದಲ್ಲಿ ಶ್ರೀಮತಿ ರೂಪಾ ಹಾಸನ ಮಾತ್ರ ಗಮನಾರ್ಹ ಪ್ರಗತಿಯನ್ನು ಮಾಡುತ್ತಿದ್ದಾರೆ. ಸಂಶೋಧನೆಯಲ್ಲಿ ಡಾ.ಪ್ರೀತಿ ಶುಭಚಂದ್ರ ಅವರು ಮೈಸೂರಿನಲ್ಲಿ ಇದ್ದು ಕೆಲಸ ಮಾಡುತ್ತಿದ್ದಾರೆ. ಗುಡಿಬಂಡೆ ಪೂರ್ಣಿಮಾ ಮತ್ತು ಕಮಲಾ ಹಂಪನಾ ಅವರು ಮೊದಲಿನಿಂದಲೂ ಬರೆಯುತ್ತ ಜೈನಮಹಿಳೆಯರ ಪ್ರತಿನಿಧಿಗಳಾಗಿದ್ದಾರೆ. ಇನ್ನುಳಿದಂತೆ ಕನ್ನಡಸಾಹಿತ್ಯದಲ್ಲಿ ಜೈನಮಹಿಳೆಯರು ಇಲ್ಲ ಎಂದೇ ಹೇಳಬೇಕಾಗುತ್ತದೆ.

ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಪಂಪ, ರನ್ನ, ಜನ್ನ, ಹೀಗೆ ಸಾಲು ಸಾಲು ಜೈನ ಮಹಾ ಕವಿಗಳನ್ನು ನಾವು ಕಂಡಿದ್ದೇವೆ. ಆದರೆ ಆಗಲೂ ಯಾರೇ ಒಬ್ಬ ಜೈನ ಮಹಿಳಾ ಲೇಖಕಿ ಇಲ್ಲದೆ ಇರುವದು ಏನನ್ನು ತೋರಿಸುತ್ತದೆ? ಕವಯಿತ್ರಿ ಕಂತಿಯನ್ನು ಮತ್ತೆ ಮತ್ತೆ ಹೆಸರಿಸುತ್ತೇವೆ. ಏಕೆಂದರೆ ಹಳೆಗನ್ನಡ ಸಾಹಿತ್ಯದಲ್ಲಿ ಅವಳು ಮಾತ್ರ ಜೈನ ಕವಯಿತ್ರಿಯಾಗಿದ್ದಾಳೆ.

ಉಪ ಸಂಹಾರ:

ಇಂತಹ ಒಂದು ಅಧ್ಯಯನದಿಂದ ಜೈನಮಹಿಳೆಯರ ಬಗ್ಗೆ ಎಲ್ಲವನ್ನೂ ನಾನು ತಿಳಿಸಲು ಸಾಧ್ಯವಾಯಿತು ಎಂದೇನೂ ನಾನು ಭಾವಿಸುವುದಿಲ್ಲ. ಏಕೆಂದರೆ ಬದುಕು ಬಹಳ ಸಂಕೀರ್ಣವಾದುದು. ಆದರೂ ಈ ಅಧ್ಯಯನದ ಅವಧಿಯಲ್ಲಿ ಅನೇಕ ಕುತೂಹಲಕಾರಕ ಸಂಗತಿಗಳು, ಮಾಹಿತಿಗಳು ನನಗೆ ಸಿಕ್ಕವು. ಇಂದು ಜೈನ ಸಮಾಜ ಹೇಗೋ ಹಾಗೆಯೇ ಜೈನ ಮಹಿಳೆಯೂ ಕೂಡಾ ವಿಚಿತ್ರವಾದ ಅಸಹಾಯಕ ಸ್ಥಿತಿಯಲ್ಲಿದ್ದಾಳೆ. ತಮ್ಮ ಸ್ವಂತ ಹೊಲ ಇಲ್ಲದೇ ಇನ್ನೊಬ್ಬರ ಹೊಲಕ್ಕೆ ಕೂಲಿ ಹೋಗುವ ಜೈನ ಮಹಿಳೆಯರನ್ನು ಸ್ವಂತ ಹೊಲ ಇರುವ ಮಹಿಳೆಯರು ಕೀಳಾಗಿ ನೋಡುತ್ತಾರೆ. ಸ್ವಂತ ಹೊಲ ಇದ್ದ ಮಹಿಳೆಯರಲ್ಲಿ ತಮ್ಮದೇ ಹೊಲದಲ್ಲಿ ದುಡಿಯುವವರನ್ನು, ಹೊಲ ಇದ್ದೂ ತಮ್ಮ ಹೊಲದಲ್ಲಿ ದುಡಿಯದೇ ಬೇರೆಯವರಿಂದ ಕೆಲಸ ಮಾಡಿಸುವವರು. ಹಾಗೆ ಕೆಲಸ ಮಾಡುವವರನ್ನು ಕೀಳಾಗಿ ನೋಡುತ್ತಾರೆ. ನೌಕರಿ ಮಾಡುವ ಗಂಡಸರ ಹೆಂಡತಿಯರಾಗಿ ಮಕ್ಕಳಿಗಾಗಿ ನಗರವಲಯದಲ್ಲಿ ವಾಸಿಸುವವರು ತಾವು ಸುಧಾರಿಸಿದವರು ಎಂದು ಕೊಂಡಿದ್ದಾರೆ. ನಗರವಲಯದಲ್ಲಿ ವ್ಯಾಪಾರ ಮಾಡುವವರು ತಮ್ಮ ಹಣದಿಂದಾಗಿ ಶ್ರೀಮಂತಿಕೆಯನ್ನು ತೋರಿಸುತ್ತಾ ನೌಕರಿ ಮಾಡುವವರಿಗಿಂತ ತಾವು ಹೆಚ್ಚು ಎಂದು ಕೊಳ್ಳುತ್ತಾರೆ.

ಹೀಗೆ ಮಹಿಳೆಯರಲ್ಲಿಯೇ ಮೇಲುಕೀಳಿನ ತಾರತಮ್ಯ ಕಣ್ಣಿಗೆ ಕಾಣಿಸುವಷ್ಟಿದೆ. ಆದರೆ ಎಲ್ಲ ಮಹಿಳೆಯರೂ ಪುರುಷ ಜಗತ್ತಿನಿಂದ ಶೋಷಣೆಗೆ ಒಳಗಾಗಿದ್ದಾರೆ ಎಂದು ಈ ಅಧ್ಯಯನ ಹೇಳುತ್ತದೆ. ಇಂದು ನಿಧಾನವಾಗಿ ಜೈನ ಮಹಿಳಾ ಸಾಕ್ಷರತೆಯ ಪ್ರಮಾಣವು ಹೆಚ್ಚಾಗುತ್ತ ಸಾಗಿದೆ. ಇದೊಂದು ಶುಭ ಸೂಚಕವಾಗಿದೆ. ಜೈನಮಠಗಳು ಈಗ ಹೆಚ್ಚು ಹೆಚ್ಚು ಸಮಾಜಮುಖಿಯಾಗಿ ಕೆಲಸ ಮಾಡುತ್ತಿವೆ. ಅದರಲ್ಲಿ ಶ್ರವಣಬೆಳಗೊಳದ ಮಠವು ಮೊದಲ ಸ್ಥಾನದಲ್ಲಿದೆ. ಮಹಾ ಮಸ್ತಕಾಭಿಷೇಕದ ಸಂದರ್ಭದಲ್ಲಿ ಆ ಮಠವು ಜೈನಾ ಮಹಿಳಾ ಸಾಹಿತ್ಯ ಸಮ್ಮೇಳನವನ್ನು ಏರ್ಪಡಿಸಿದ್ದು ಅದರ ಮಹಿಳಾ ಕಾಳಜಿಯನ್ನು ಎತ್ತಿ ತೋರಿಸುತ್ತದೆ. ಈ ಜಾಗತೀಕರಣದ ಹಿನ್ನೆಲೆಯಲ್ಲಿ ಇಂದು ಆಧುನಿಕ ಶಿಕ್ಷಣವನ್ನು ಪಡೆಯುತ್ತಿರುವ ಜೈನ ನವ ಮಹಿಳಾ ಪೀಳಿಗೆಯನ್ನು ಜೈನತ್ವಕ್ಕೆ ಎಳೆದು ತರುವದರಲ್ಲಿ ಎಲ್ಲರೂ ಚಿಂತಿಸತೊಡಗಿದ್ದಾರೆ. ಜೀನ್ಸ್‌ಪ್ಯಾಂಟು, ಟೀ ಶರ್ಟ್ಸಗಳನ್ನು ತೊಟ್ಟಿರುವ ಈ ಆಧುನಿಕ ಮಹಿಳಾ ಗುಂಪು ಜೈನ ಸಮಾಜದ ದಿಕ್ಕು ಬದಲಿಸಲು ಸನ್ನದ್ಧವಾಗಿದೆಯೇ? ಕಾದು ನೋಡಬೇಕು.

ಗ್ರಂಥಋಣ

೧) ಜೈನ ಜನಪದ ಸಾಹಿತ್ಯ ಲೇ-ಡಾ.ಎಸ್‌.ಪಿ. ಪದ್ಮಪ್ರಸಾದ, ಸಹನಾ ಪ್ರಕಾಶನ, ಶಿವಮೊಗ್ಗ, ೧೯೮೭.

೨) ಜೈನಧರ್ಮ: ಲೇ. ಮಿರ್ಜಿ ಅಣ್ಣಾರಾಯ, ಶಾಂತಿಸದನ, ಶೇಡಬಾಳ, ೧೯೫೨.

೩) ಆಧುನಿಕ ಕನ್ನಡ ಕಥನ ಸಾಹಿತ್ಯದಲ್ಲಿ ಜೈನ ಸಂವೇದನೆ. ಲೇ: ಡಾ. ಬಾಳಾಸಾಹೇಬ ಲೋಕಾಪುರ, ಬ್ಯಾಲದಕೆರೆ ಪ್ರಕಾಶನ, ಬ್ಯಾಲದಕೆರೆ, ತಾ: ನಾಗತಿಹಳ್ಳಿ, ಜಿ: ಮಂಡ್ಯ, ೧೯೯೭.

೪) ಚಂದ್ರ ಕೊಡೆ, ಲೇ. ಡಾ. ಹಂಪ ನಾಗರಾಜಯ್ಯ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ೧೯೯೭.

೫) ಆತ್ಮಾನುಶಾಸನ(ಕನ್ನಡ) ಲೆ. ಸ್ವಾಮಿ ಗುಣಭದ್ರಾಚಾರ್ಯ, ರಿದ್ಧಿ ಎಂಟರ್ ಪ್ರೈಸಿಸ್‌, ಮುಂಬೈ, ೧೯೯೬.

೬) ರತ್ನಕರಂಡಕ ಶ್ರಾವಕಾಚಾರ (ಕನ್ನಡ) ಅನುಃ ಮಿರ್ಜಿ ಅಣ್ಣಾರಾಯ, ಜೈನಸಂಸ್ಕೃತಿ ಸಂರಕ್ಷಕ ಸಂಘ, ಸೊಲ್ಲಾಪುರ, ೧೯೮೧.

೭) ಕರ್ನಾಟಕದ ಸೂಫಿಗಳು ಲೇ. ಡಾ. ರಹಮತ್‌ತರೀಕೆರೆ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ.

* * *