2010ರ ಆಗಸ್ಟಿನಲ್ಲಿ ಲಿಂಗನಮಕ್ಕಿ ಅಣೆಕಟ್ಟು ತುಂಬಿದಾಗ ಬಿಟ್ಟ ನೀರು ಜೋಗ ಜಲಪಾತದ ‘ಮುಂಗಾರು ಮಳೆ’ ಬಂಡೆಯ ಮುಳುಗಿಸಿ, ನೀರು ಬರಬಹುದೆಂಬ ನಿರೀಕ್ಷೆ ಇಲ್ಲದೆ ಅಲ್ಲಿ ಹೋದ ಪ್ರವಾಸಿಗರ ಒಂದು ತಂಡ ನೀರಿನ ರಭಸಕ್ಕೆ ಸಿಲುಕಿ ಕಂಗಾಲಾಗಿತ್ತು. ಕೊನೆಗೆ ಸಾಗರದ ಅಗ್ನಿ ಶಾಮಕ ದಳದ ಸಿಬ್ಬಂದಿ ಧಾವಿಸಿ ಹೋಗಿ ಅಲ್ಲಿ ಮರಣೋನ್ಮುಖರಾದ ಜನರನ್ನ ಉಳಿಸಿದ ನಂತರ ಒಣಗಿದ ಜೋಗದ ಜಲಪಾತ ಮುಂದಿನ ಒಂಬತ್ತು ತಿಂಗಳ ನಂತರ ಮತ್ತೆ ನೀರನ್ನು ಕಂಡದ್ದು ಮೊನ್ನೆ ಮಲೆನಾಡಿನಲ್ಲಿ ಮಳೆಗಾಲ ಪ್ರಾರಂಭವಾದ ನಂತರ.

ಹಿಂದೆಲ್ಲ ಜೋಗದ ಜಲಪಾತ ವರ್ಷದ ಹತ್ತು ತಿಂಗಳೂ ನೀರಿನಿಂದ ಕಂಗೊಳಿಸುತ್ತಿತ್ತು. ಮಾರ್ಚಿ- ಎಪ್ರಿಲ್ ನಲ್ಲಿಯೂ ಜಲಪಾತದಲ್ಲಿ ನೀರು ಇರುತ್ತಿತ್ತು. ಆದರೆ, ಈಗ ಅದು ಕೆಲವೇ ತಿಂಗಳ ಒಂದು ಕಾರ್ಯಕ್ರಮ. ಹಿಂದೆ ಮಳೆಗಾಲ ಮುಗಿದ ನಂತರ ಜೋಗದಲ್ಲಿ ನೀರು ಇರುತ್ತಿತ್ತು. ರಾಜ, ರೋರರ್, ರಾಕೆಟ್, ಲೇಡಿ (ಬಹಳ ಜನ ಹೇಳುವ ಹಾಗೆ ರಾಜ, ರಾಣಿ, ರಾಕೆಟ್ ಲೇಡಿ ಅಲ್ಲ) ಪೂರ್ಣ ಒಣಗುತ್ತಿರಲಿಲ್ಲ. ಯಾವುದು ಒಣಗಿದರೂ ರಾಜ ಮತ್ತು ರಾಣಿಯಲ್ಲಿ ನೀರು ಇದ್ದೇ ಇರುತ್ತಿತ್ತು. ಅಲ್ಲಿಯ ಬಿರುಸು ಬಂಡೆಯನ್ನು ಬಿಸಿಲಿನಿಂದ ಪಾರು ಮಾಡಲು ಈ ಎರಡು ಜಲಪಾತಗಳಲ್ಲಿ ನೀರಿನ ತುಂತುರು ಶ್ರಮಿಸುತ್ತಿತ್ತು.

ಮಹಾತ್ಮ ಗಾಂಧಿ ವಿದ್ಯುದಾಗಾರಕ್ಕೆ ನೀರನ್ನು ಉಣಿಸಲೆಂದು 1945ರಲ್ಲಿ ಕಟ್ಟಿ ಮುಗಿಸಿದ ಹಿರೇ ಭಾಸ್ಕರ ಅಣೆಕಟ್ಟಿನ ನಿರ್ಮಾಣದ ನಂತರ ಜೋಗ ಜಲಪಾತಕ್ಕೆ ನೀರಿನ ಅಭಾವ ಆಗಿರಲಿಲ್ಲ. ಆಗ ಜಲಪಾತಕ್ಕೆ ಇಷ್ಟು ನೀರನ್ನು ನೀಡಲಾಗುವುದು ಎಂದು ಅಂದಿನ ಅಂದಿನ ಮೈಸೂರು ಸರ್ಕಾರ, ಮುಂಬೈ ಸರ್ಕಾರದೊಂದಿಗೆ ಒಂದು ಒಪ್ಪಂದ ಮಾಡಿ ಕೊಂಡಿತ್ತಂತೆ. ಏಕೆಂದರೆ ಜೋಗ ಜಲಪಾತ ಏನಿದೆ ಅದು ದುಮಕುತ್ತಿದ್ದುದು ಅಂದಿನ ಮುಂಬೈ ಪ್ರಾಂತ್ಯದಲ್ಲಿ. ಶರಾವತಿ ನದಿ ಎರಡೂ ರಾಜ್ಯಗಳ ಗಡಿಯಾಗಿತ್ತು ಆಗ. ಈಗಲೂ ಅದು ಉತ್ತರಕನ್ನಡ ಜಿಲ್ಲೆ ಹಾಗೂ ಶಿವಮೊಗ್ಗ ಜಿಲ್ಲೆಯ ಗಡಿ.

ಆದರೆ, 1964ರಲ್ಲಿ ಏನು; ಲಿಂಗನಮಕ್ಕಿ ಜಲಾಶಯದ ಕೆಲಸ ಮುಗಿದು ಶರಾವತಿ ಜಲ ವಿದ್ಯುತ್ ಯೋಜನೆ ಪ್ರಾರಂಭವಾಯಿತು, ಆಗ ಹಿಂದಿನ ಹಿರೇ ಭಾಸ್ಕರ ಅಣೆಕಟ್ಟು ಲಿಂಗನಮಕ್ಕಿ ಅಣೆಕಟ್ಟಿನಲ್ಲಿ ಮುಳುಗಿ ಹೋಯಿತು. ಆದರೂ, ನಮ್ಮ ಎಂಜಿನಿಯರುಗಳು ಲೆಕ್ಕ ಬಿಡಲಿಲ್ಲ. ಲಿಂಗನಮಕ್ಕಿಯಿಂದ 200 ಕ್ಯುಸೆಕ್ ನೀರನ್ನು ಜಲಪಾತಕ್ಕೆ ಬಿಟ್ಟುಕೊಡಲು ಅವರು ಮುಂದಾಗಿದ್ದರು. ಈ ಲೆಕ್ಕದ ಪ್ರಕಾರವೇ ಅವರು ಲಿಂಗನಮಕ್ಕಿಯನ್ನು ನಿರ್ಮಿಸಿದ್ದು. ಮಹಾತ್ಮ ಗಾಂಧಿ ವಿದ್ಯುದಾಗಾರಕ್ಕೆ ಇಷ್ಟು ನೀರು, ಶರಾವತಿ ವಿದ್ಯುದಾಗಾರಕ್ಕೆ ಇಷ್ಟು ನೀರು, ಜೋಗದ ಜಲಪಾತಕ್ಕೆ ಇಷ್ಟು ನೀರು ಎಂದು ಅವರು ಲೆಕ್ಕ ಹಾಕಿದ್ದರು.

ಹೀಗಾಗಿ ಲಿಂಗನಮಕ್ಕಿಯಲ್ಲಿ 1,56,000 ಕ್ಯುಸೆಕ್ ನೀರನ್ನು ಸಂಗ್ರಹಿಸಿ ಇಡುವ ಯತ್ನ ಮಾಡಲಾಗಿತ್ತು. ಅಂತೆಯೇ ಜಲಪಾತಕ್ಕೆ 200 ಕ್ಯುಸೆಕ್ ನೀರನ್ನು ಬಿಡಲು ಕೂಡ ತೀರ್ಮಾನ ಮಾಡಲಾಗಿತ್ತು. ಆದರೆ, 1950ರ ವರೆಗೆ ವರ್ಷಕ್ಕೆ 320 ಇಂಚು ಬೀಳುತ್ತಿದ್ದ ಮಳೆ, 1970ರ ನಂತರ 90 ಇಂಚಿಗೆ ಇಳಿದರೆ, ಅವರೇನು ಮಾಡಬೇಕು? ದೇಶಕ್ಕೆ ವಿದ್ಯುತ್ ಮುಖ್ಯವಾಗಿ ಬೇಕಿದ್ದುದರಿಂದ ಜೋಗ ಜಲಪಾತದ ಹೊಟ್ಟೆಯನ್ನು ಕಟ್ಟಿ ವಿದ್ಯುದಾಗಾರಗಳಿಗೆ ನೀರುಣಿಸಲು ನಮ್ಮ ಆಡಳಿತ ವ್ಯವಸ್ಥೆ ಮುಂದಾಯಿತು.

ಅಂತು ವಿಶ್ವ ವಿಖ್ಯಾತ ಜೋಗ ಜಲಪಾತ ಬರಿದೋ ಬರಿದು, ತೆರವೋ ತೆರವು. ಆದರೂ, ಜಲಪಾತ ಮೈದುಂಬಿ ದುಮುಕುತ್ತದೆ. ಯಾವಾಗ? ಕಾರ್ಗಲ್, ಜೋಗದ ಸುತ್ತ ಮುತ್ತಲಿನ ಹದಿನೈದು- ಹದಿನೆಂಟು ಕಿ.ಮೀ. ಸುತ್ತ ಬಿದ್ದ ಮಳೆ ಜಲಪಾತಕ್ಕೆ ಹರಿದು ಬಂದಾಗ!

ಹೊಸನಗರ, ಸಾಗರ ತಾಲೂಕುಗಳಲ್ಲಿ ಬೀಳುವ ಮಳೆಯ ನೀರು ನೇರವಾಗಿ ಬಂದು ಲಿಂಗನಮಕ್ಕಿ ಅಣೆಕಟ್ಟಿನಲ್ಲಿ ಸಂಗ್ರಹವಾಗುತ್ತದೆ. ಶರಾವತಿ ಈ ನೀರಿನ ಒಂದು ಹನಿಯೂ ಜಲಪಾತಕ್ಕೆ ಹೋಗದ ಹಾಗೆ ನೋಡಿ ಕೊಳ್ಳುತ್ತದೆ. ಅಂತೆಯೇ ಲಿಂಗನಮಕ್ಕಿಯ ನಂತರ ಮತ್ತೊಂದು ಸಣ್ಣ ಜಲಾಶಯವಿದೆ, ಅದು ಕಾರ್ಗಲ್ಲಿನ ಜಲಾಶಯ. ಲಿಂಗನಮಕ್ಕಿಯ ನಂತರ ಬೀಳುವ ಮಳೆ ಈ ಜಲಾಶಯದಲ್ಲಿ ಸಂಗ್ರಹವಾಗುತ್ತದೆ.

ಹಾಗಾಗಿ, ಕಾರ್ಗಲ್ ಆಣೆಕಟ್ಟಿನ ನಂತರ ಶರಾವತಿ ನದಿಗೆ ಹರಿದು ಬರುವ ನೀರು ಮಾತ್ರ ಜೋಗದಲ್ಲಿ ಜಲಪಾತವಾಗಿ ದುಮುಕುತ್ತದೆ. ಜೋಗ ಜಲಪಾತದಲ್ಲಿ ಎಷ್ಟು ನೀರು ದುಮುಕಬೇಕೋ ಅಷ್ಟೇ ಮಳೆ ಇಲ್ಲಿ ಬೀಳುವುದೊಂದು ವಿಶೇಷ. ಜಲಪಾತದಲ್ಲಿ ನೀರು ಹೆಚ್ಚಾದರೆ ಕಣಿವೆಯಲ್ಲಿ ಮಂಜು ತುಂಬಿಕೊಂಡು ಗಂಟೆಗಟ್ಟಲೆ ಕಾದರೂ ಜಲಪಾತದ ದರ್ಶನವಾಗುವುದಿಲ್ಲ. ಕಂಡರೂ ದಪ್ಪ ಪರದೆಯ ಹಿಂದೆ ಅಸ್ಪಷ್ಟವಾಗಿ ಜಲಪಾತ ಕಣ್ಣಿಗೆ ಬಿದ್ದು ಆಟವಾಡುತ್ತದೆ. ಈ ಪ್ರದೇಶದಲ್ಲಿ ಮಳೆ ಇಲ್ಲ, ಅಂದರೆ ನೀರು ಬೀಳುವ ಜಾಗದಲ್ಲಿ ಬರೀ ಬಂಡೆಗಳು ಕಣ್ಣಿಗೆ ರಾಚುತ್ತವೆ.

ಆದರೆ, ಕಾರ್ಗಲ್, ಜೋಗದ ಸುತ್ತ ಬೀಳುವ ಮಳೆ ತಂದು ತೋರಿಸುವ ಈ ಜೋಗ ಸುಂದರ. ಆಗ ರಾಜಾ ಸದೃಢನಾಗಿ ಕಾಣಿಸುತ್ತಾನೆ. ರೋರರ್ ಬಂಡೆಯೊಂದರ ನಡುವಿನಿಂದ ಬಂದು ಅಬ್ಬರಿಸುತ್ತ ರಾಜನಿಗೆ ತೆಕ್ಕೆ ಬೀಳುತ್ತಾನೆ. ರಾಕೆಟ್ ಬಾಣದಾಕಾರದಲ್ಲಿ ಚಿಮ್ಮುತ್ತಾನೆ. ರಾಣಿ ಬಾಗಿ ಬಳುಕಿ ಬಂಡೆಗಳ ಮೇಲಿನಿಂದ ಇಳಿಯುತ್ತಾಳೆ. ಒಂದು ವೇಳೆ ಲಿಂಗನಮಕ್ಕಿ ತುಂಬಿದರೆ, ಅಣೆಕಟ್ಟೆಯ ಅಷ್ಟೂ ಬಾಗಿಲುಗಳನ್ನು ತೆರೆದಾಗ ನಾಲ್ಕೂ ಜಲಪಾತಗಳು ಒಂದಾಗಿ ದುಮುಕುತ್ತವೆ. ಒಂದು ವೈವಿಧ್ಯತೆ ಇಲ್ಲ. ಒಂದು ಸೊಬಗಿಲ್ಲ. ಲಾಸ್ಯ, ಬಳಕು, ಬಾಗು ಯಾವುದೂ ಇಲ್ಲ.

ಜನ ಕೂಡ ಈಗ ಈ ಸಮಯ ನೋಡಿಯೇ ಜೋಗಕ್ಕೆ ಬರುತ್ತಿದ್ದಾರೆ. ಮಲೆನಾಡಿನಲ್ಲಿ ಮಳೆ ಅಂದರೆ ಜೋಗಕ್ಕೆ ಜನ. ಎಲ್ಲಿ ನೋಡಿದರಲ್ಲಿ ಜನ. ವಾಹನಗಳು. ಜೋಗ ಜಲಪಾತದ ಮುಂದಿನ ಜಾಗ ಮೊದಲೇ ಇಕ್ಕಟ್ಟಿನದು. ಈಗಂತೂ ಅಲ್ಲಿ ಜನವೋ ಜನ. ಜೋಗವನ್ನೇ ನೆಪ ಮಾಡಿಕೊಂಡು ಕುಣಿಯುವವರು, ಕುಡಿಯುವವರು, ಕೇಕೆ ಹಾಕುವವರು, ಮಳೆಯಲ್ಲಿ ನೆನೆಯುವವರು. ಮುಂಗಾರು ಮಳೆ ಚಲನಚಿತ್ರದ ನಾಯಕ- ನಾಯಕಿಯರು ಹತ್ತಿ ಕುಳಿತ ಬಂಡೆಯನ್ನು ತಾವೂ ಹತ್ತ ಬೇಕೆನ್ನುವವರು, ಹೀಗೆ ಹತ್ತಿ ಇಲ್ಲದ ಅಪಾಯವನ್ನು ತಂದು ಕೊಳ್ಳುವವರು, ಊಟ- ತಿಂಡಿಯ ವ್ಯವಸ್ಥೆ ಇಲ್ಲದೆ ಪರದಾಡುವವರು, ಹೀಗೆ ಬಗೆ- ಬಗೆಯ ಜನ.

ಆದರೂ ಜೋಗದ ಪ್ರವಾಸ ಒಂದು ಆವಿಸ್ಮರಣೀಯ ಅನುಭವ. ಹಾಗಾಗೇ ಮೂಗೂರ ಮಲ್ಲಪ್ಪ ಹಿಂದೆಯೇ ಹೇಳಿದ್ದಾನೆ;

“ಮಾನವನಾಗಿ ಹುಟ್ಟಿದ ಮೇಲೆ ಏನೇನ್ ಕಂಡಿ

ಸಾಯೋತನಕ ಸಂಸಾರದೊಳಗೆ ಗಂಡಾ ಗುಂಡಿ

ಹೇರಿಕೊಂಡು ಹೋಗೋದಿಲ್ಲ ಸತ್ತಾಗ್ ಬಂಡಿ

ಇರೋದ್ರೊಳಗೆ ಒಮ್ಮೆ ನೋಡು ಜೋಗಾದ ಗುಂಡಿ”