Categories
ಅಂಕಣಗಳು

ಡಾಟಾ ಸೈನ್ಸ್ – ಒಂದು ಕಿರು ಪರಿಚಯ

ನಮ್ಮ ಬಳಗಕ್ಕೆ ಹೊಸ ಬರಹಗಾರರನ್ನು ಸ್ವಾಗತಿಸುವ ಉದ್ದೇಶದೊಡನೆ ಮೊತ್ತಮೊದಲ ‘ಕಣಜ ಬರಹಗಾರರ ಕಮ್ಮಟ’ವನ್ನು ಚಿಕ್ಕಬಳ್ಳಾಪುರ ಜಿಲ್ಲೆಯ ಕೈವಾರದಲ್ಲಿ ೨೦೧೬ರ ಆಗಸ್ಟ್ ೬ ಹಾಗೂ ೭ರಂದು ಆಯೋಜಿಸಲಾಗಿತ್ತು. ಇಪ್ಪತ್ತೊಂದು ಶಿಬಿರಾರ್ಥಿಗಳು ಭಾಗವಹಿಸಿದ ಈ ಕಾರ್ಯಕ್ರಮದಲ್ಲಿ ಹಿರಿಯ ಲೇಖಕರು ಬರವಣಿಗೆಯ ಕುರಿತು ಅನೇಕ ಅಂಶಗಳನ್ನು ಹಂಚಿಕೊಂಡರು.

ಹಲವು ಚಟುವಟಿಕೆಗಳಲ್ಲಿ ಭಾಗವಹಿಸುವ ಮೂಲಕ ತಾವು ಕಲಿತದ್ದನ್ನು ಕಾರ್ಯಗತಗೊಳಿಸುವ ಅವಕಾಶವನ್ನೂ ಶಿಬಿರಾರ್ಥಿಗಳಿಗೆ ನೀಡಲಾಗಿತ್ತು. ಇಂತಹ ಚಟುವಟಿಕೆಯೊಂದರಲ್ಲಿ ಶಿಬಿರಾರ್ಥಿ ಶ್ರೀ ರವೀಶ್‌ ಕುಮಾರ್‌ ಬಿ. ಅವರು ಬರೆದ ಲೇಖನ ಇಲ್ಲಿದೆ.

ಅಕ್ಕಿ ಹತ್ತು ಕೇಜಿ, ಸಕ್ಕರೆ ಎರಡು ಕೇಜಿ, ತೊಗರಿ ಬೇಳೆ ಅರ್ಧ ಕೇಜಿ… ಹೀಗೆ ಬೆಳೆಯುವ ದಿನಸಿ ಪಟ್ಟಿ ಬಹುತೇಕ ಮನೆಗಳಲ್ಲಿ ಚಿರಪರಿಚಿತ. ಇದೇ ಮುಂದೆ ಸೂಪರ್‌ ಮಾರ್ಕೆಟ್‌ ಒಂದರ ಆಯವ್ಯಯ ಪತ್ರದ ಮೇಲೆ ಪರೋಕ್ಷ ಪರಿಣಾಮ ಬೀಳುತ್ತದೆ ಎಂದರೆ ನಂಬುತ್ತೀರಾ?

ಇದು ಹೇಗೆ ಸಾಧ್ಯ ಎಂಬುದನ್ನು ತಿಳಿಸುವ ವಿಜ್ಞಾನವೇ ‘ಡಾಟಾ ಸಯನ್ಸ್‌’. ನಿಮ್ಮ ದಿನಸಿ ಚೀಟಿ ‘ಡಾಟಾ’ದ ಒಂದು ಕಿರು ಪರಿಕಲ್ಪನೆ ಮಾತ್ರ. ಆದರೆ ಡಾಟಾ ಸಯನ್ಸ್‌ ಇಷ್ಟಕ್ಕೇ ಸೀಮಿತವಾಗಿಲ್ಲ. ಅಂಕಿಗಳು, ಪಠ್ಯ, ಚಿತ್ರ, ಆಡಿಯೋ, ವಿಡಿಯೋ – ಹೀಗೆ ಎಲ್ಲವೂ ಡಾಟಾದ ಪರಿಧಿಗೆ ಒಳಪಡುತ್ತದೆ. ಹಾಗೆಯೇ ಡಾಟಾವನ್ನು ಆಧರಿಸಿ ನಿರ್ಧಾರಗಳನ್ನು ಕೈಗೊಳ್ಳುವ ಎಲ್ಲಾ ಕ್ಷೇತ್ರಗಳನ್ನು ಡಾಟಾ ಸಯನ್ಸ್‌ ಒಳಗೊಳ್ಳುತ್ತದೆ.

ಹಾಗಾದರೆ ಈ ಹೊಸ ವಿಜ್ಞಾನದ ಬೆಳವಣಿಗೆಗೆ ಕಾರಣಗಳೇನು? ಮಾಹಿತಿ ತಂತ್ರಜ್ಞಾನದ ಈ ಯುಗದಲ್ಲಿ ಶೇಖರಣೆಯಾಗುವ ಅಗಾಧ ಡಾಟಾವನ್ನು ವಿಶ್ಲೇಷಿಸುವ ಸಾಮರ್ಥ್ಯ ಈಗಾಗಲೇ ಮನುಷ್ಯನ ಮಿತಿಯನ್ನು ಮೀರಿದೆ. ಜೊತೆಗೆ ಡಾಟಾದ ಶೇಕಡಾ 80 ಭಾಗ ನಿರುಪಯುಕ್ತವಾಗಿರುತ್ತದೆ. ಹೀಗೆ ಹುಲ್ಲಿನ ರಾಶಿಯಿಂದ ಸೂಜಿ ಹುಡುಕುವ ಪ್ರಕ್ರಿಯೆಗೆ ಡಾಟಾ ಸಯನ್ಸೇ ಮೂಲ.

ದಿನಸಿ ಪಟ್ಟಿ ಹಿಡಿದು ನೀವು ನಿಮಗೆ ಬೇಕಾದ ವಸ್ತುಗಳನ್ನು ಕೊಳ್ಳುತ್ತೀರಿ. ನಂತರ ಸರದಿಯ ಸಾಲಿನಲ್ಲಿ ನಿಂತು ಬಿಲ್‌ ಮಾಡಿಸಿ ಹಣ ಪಾವತಿಯನ್ನು ಮಾಡುತ್ತೀರಿ. ಆಗ ನಿಮ್ಮ ಬಳಿ ಉಚಿತ ಕೂಪನ್ನುಗಳು ಇರುತ್ತದೆ. ಅದನ್ನು ಬಳಸಿ ಬಿಲ್‌ ಮಾಡುವ ಹುಡುಗ/ಹುಡುಗಿ ಬಿಲ್‌ನಲ್ಲಿ ರಿಯಾಯಿತಿ ಮಾಡಿ ನಿಮಗೆ ಸರಿಯಾದ ಚಿಲ್ಲರೆಯನ್ನು ನೀಡುತ್ತಾನೆ/ಳೆ. ಈ ಪ್ರಕ್ರಿಯೆ ಸುಲಭವೆನಿಸಿದರೂ ಇದರ ಹಿಂದೆ ಡಾಟಾ ಸಯನ್ಸ್‌ನ ಹಲವು ಅಂಶಗಳು ಕೆಲಸ ಮಾಡುತ್ತಿರುತ್ತವೆ. ಅದು ಹೇಗೆ? ನೀವು ಕೊಳ್ಳುವ ವಸ್ತುವಿನ ಮೇಲೆ ಬಾರ್‌ಕೋಡ್‌ ನಮೂದಾಗಿರುತ್ತದೆ. ಅದನ್ನು ಬಳಸಿ ಕೌಂಟರಿನಲ್ಲಿ ವಸ್ತುಗಳ ಬೆಲೆಯನ್ನು ಖಾತರಿ ಪಡಿಸಿ ನಿಮಗೆ ನೀಡಲಾಗುತ್ತದೆ. ಇನ್ನು ಕೂಪನ್‌ ಮೇಲಿರುವ ಸಂಖ್ಯೆಯನ್ನು ಬಿಲ್ಲಿಂಗ್‌ ಕಂಪ್ಯೂಟರ್‌ನಲ್ಲಿ ನಮೂದಿಸಿ ರಿಯಾಯಿತಿಯನ್ನು ನೀಡಲಾಗುತ್ತದೆ.

ಇನ್ನು ಸೂಪರ್‌ ಮಾರ್ಕೆಟ್‌ ಈ ವ್ಯವಹಾರದ ಎಲ್ಲಾ ವಿವರಗಳನ್ನು ತನ್ನ ಡಾಟಾಬೇಸ್‌ನಲ್ಲಿ ದಾಖಲಿಸಿಕೊಳ್ಳುತ್ತದೆ. ನೀವು ಕೊಂಡ ವಸ್ತು ಸೂಪರ್‌ ಮಾರ್ಕೆಟ್‌ನಲ್ಲಿ ಕೊನೆಯದಾಗಿದ್ದರೆ, ಡಾಟಾಬೇಸ್‌ ಪ್ರಬಂಧಕರಿಗೆ ಸೂಚನೆಯನ್ನು ನೀಡುತ್ತದೆ. ಹಾಗೆಯೇ ಸೂಪರ್‌ ಮಾರ್ಕೆಟ್‌ಗೆ ಕೊಂಡಿಯಾಗಿರುವ ಗ್ರಾಹಕ ಮಳಿಗೆಗೆ ಸೂಚನೆಯನ್ನು ನೀಡುತ್ತದೆ. ಇನ್ನೊಂದು ಬದಿಯಲ್ಲಿ ಗ್ರಾಹಕ ನೀಡಿದ ಕೂಪನ್ನುಗಳ ಮೌಲ್ಯದ ಹಣವನ್ನು ಪಡೆಯಲು ಕೂಪನ್‌ ನೀಡಿದ ಸಂಸ್ಥೆಯನ್ನು ಸಂಪರ್ಕಿಸಬೇಕು. ಇದು ಮತ್ತೊಂದು ಚಟುವಟಿಕೆ ಚಕ್ರವನ್ನು ಶುರು ಮಾಡುತ್ತದೆ. ಹೀಗೆ ಸಾವಿರಾರು ಗ್ರಾಹಕರು ಕೊಳ್ಳುವ ಪ್ರಕ್ರಿಯೆಯಲ್ಲಿ ತೊಡಗಿದಾಗ ಡಾಟಾದ ಅಗಾಧ ರಾಶಿಯೇ ಸೃಷ್ಟಿಯಾಗುತ್ತದೆ. ಈಗ ಸೂಪರ್‌ ಮಾರ್ಕೆಟ್‌ ತಿಂಗಳ ಕೊನೆಯಲ್ಲಿ ಯಾವ ವಸ್ತುವಿನ ಯಾವ ಬ್ರಾಂಡ್‌ನ ವಸ್ತುಗಳನ್ನು ಖರೀದಿಸಬೇಕು ಎಂಬುದನ್ನು ನಿರ್ಧರಿಸಬೇಕು ಎಂಬುವುದನ್ನು ಗಣಿತ ಪಂಡಿತರಿಗೆ ನೀಡಿದರೆ ಅದು ಕಷ್ಟ ಸಾಧ್ಯ. ಹಾಗೇ ಅವರಿಗೆ ಬೇಕಾದ ಸಮಯವೂ ಅಧಿಕ. ಇಲ್ಲಿ ನಮಗೆ ಡಾಟಾ ಸಯನ್ಸ್‌ ನೆರವಿಗೆ ಬರುತ್ತದೆ.

ಡಾಟಾ ಸಂಗ್ರಹಣೆ, ವಿಶ್ಲೇಷಣೆ, ನಿರ್ಧಾರ – ಹೀಗೆ ಅನುಕ್ರಮದಲ್ಲಿ ಪ್ರಕ್ರಿಯೆ ಸಾಗುತ್ತದೆ. ಡಾಟಾದ ವಿಶ್ಲೇಷಣೆಯನ್ನು ಡಾಟಾ ಸಯನ್ಸ್‌ ತಂತ್ರಾಂಶವು ಮಾಡಿ ಮನುಷ್ಯರು ಸುಲಭವಾಗಿ ಗ್ರಹಿಸಬಹುದಾದ ಮಾದರಿ(ಉದಾ: ಚಾರ್ಟುಗಳು)ಯಲ್ಲಿ ಪ್ರಸ್ತುತ ಪಡಿಸುತ್ತದೆ. ಇದನ್ನು ನೋಡಿ ಸಂಬಂಧಿತ ವ್ಯಕ್ತಿಗಳು ನಿರ್ಧಾರಗಳನ್ನು ತೆಗೆದುಕೊಳ್ಳಲು ಸುಲಭವಾಗುತ್ತದೆ. ಇನ್ನು ಮುಂದೆ ಹೋಗಿ ಇವು ಗ್ರಾಹಕರ ಭವಿಷ್ಯದ ಕೊಳ್ಳುವ ಕ್ರಿಯೆಯನ್ನು ಎಳೆಎಳೆಯಾಗಿ ಬಿಡಿಸುತ್ತದೆ.

ಇಂದು ಡಾಟಾ ಸಯನ್ಸ್‌ ಹಲವಾರು ಕ್ಷೇತ್ರಗಳಲ್ಲಿ ಕಾಲಿಟ್ಟಿದೆ. ವೈದ್ಯಕೀಯ, ಕ್ರೀಡೆ, ಸರಕಾರದ ನಿರ್ಧಾರಗಳು ಇಲ್ಲಿ ನೀಡಬಹುದಾದ ನಿದರ್ಶನಗಳು. ಡಾಟಾ ಸಯನ್ಸ್‌ ಇಂದಿನ ದಿನಗಳಿಗೆ ಕನ್ನಡಿಯಾಗಿ ಭವಿಷ್ಯಕ್ಕೆ ಮಾಯಾಕನ್ನಡಿಯಾಗಿ ಮನುಕುಲದ ಏಳಿಗೆಗ ದೀವಿಗೆಯಾಗುತ್ತಿದೆ.

[ಕಣಜದಲ್ಲಿ ಪ್ರಕಟವಾಗುವ ಅಂಕಣ ಬರಹಗಳಲ್ಲಿ ವ್ಯಕ್ತವಾಗುವ ಅಭಿಪ್ರಾಯಗಳು ಆಯಾ ಅಂಕಣಕಾರರದು]