Categories
ಕನ್ನಡ ವ್ಯಕ್ತಿ ಪರಿಚಯ

ವ್ಯಕ್ತಿ ಪರಿಚಯ – ಡಾ|| ಜಿ.ಎಸ್.ಶಿವರುದ್ರಪ್ಪ

ಆಧುನಿಕ ಕನ್ನಡದ ಪ್ರಸಿದ್ಧ ಕವಿ, ವಿಮರ್ಶಕರಾದ ಜಿ.ಎಸ್.ಶಿವರುದ್ರಪ್ಪನವರು ಹುಟ್ಟಿದ್ದು ೧೯೨೬ ರಲ್ಲಿ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ. ಮೈಸೂರು ವಿಶ್ವವಿದ್ಯಾಲಯದಲ್ಲಿ ಎಂ.ಎ ಮತ್ತು ಪಿ.ಎಚ್.ಡಿ ಪದವಿಗಳನ್ನು ಪಡೆದ ಇವರು ವಿವಿಧ ಕಾಲೇಜುಗಳಲ್ಲಿ ಅಧ್ಯಾಪಕರಾಗಿದ್ದರು ಅನಂತರದಲ್ಲಿ (೧೯೬೬) ಬೆಂಗಳೂರು ವಿಶ್ವವಿದ್ಯಾಲಯ ಸೇರಿ, ೧೯೭೦ ರಿಂದ ಕನ್ನಡ ಅಧ್ಯಯನ ಕೇಂದ್ರದ ಮುಖ್ಯಸ್ಥರಾಗಿದ್ದರು ಎದೆ ತುಂಬಿ ಹಾಡಿದೆನು ಅಂದು ನಾನು,ಮನವಿಟ್ಟು ಕೇಳಿದಿರಿ ಅಲ್ಲಿ ನೀವು. ಇಂದು ನಾ ಹಾಡಿದರು ಅಂದಿನಂತೆಯೆ ಕುಳಿತು ಕೇಳುವಿರಿ ಸಾಕೆನಗೆ ಅದುವೆ ಬಹುಮಾನ.ಹಾಡು ಹಕ್ಕಿಗೆ ಬೇಕೆ ಬಿರುದು ಸನ್ಮಾನುಎಂದು ಹಾಡಿದ ಜಿ.ಎಸ್.ಎಸ್ ಮೊದಲಿಗೆ ಕವಿಯಾಗಿ ಪ್ರಸಿದ್ಧರಾದರು. ೧೨ ಕ್ಕೂ ಹೆಚ್ಚು ಕವನ ಸಂಕಲನಗಳು ಪ್ರಕಟಗೊಂಡಿವೆ, ಸಾಮಗಾನ, ಚೆಲುವು-ಒಲವು, ಕಾರ್ತಿಕ, ದೇವರಶಿಲ್ಪ, ದೀಪದ ಹೆಜ್ಜೆ, ಅನಾವರಣ, ಪ್ರೀತಿ ಇಲ್ಲದ ಮೇಲೆ, ತೀರ್ಥವಾಣಿ-ಕೆಲವು ಪ್ರಮುಖ ಸಂಕಲನಗಳು. ಜಿ.ಎಸ್.ಎಸ್ ಸುಮಾರು ೫೦ ವರ್ಷಗಳಿಂದ ಬರೆಯುತ್ತಿರುವ ಕವಿ (ಮೊದಲ ಕವನ ಸಂಕಲನ ಸಾಮಗಾನ ಪ್ರಕಟವಾದದ್ದು ೧೯೫೧ ರಲ್ಲಿ). ಇವರ ಕಾವ್ಯವನ್ನು ನವೋದಯ, ನವ್ಯ, ಬಂಡಾಯ-ದಲಿತ ಮಾರ್ಗಗಳು ಪ್ರಭಾವಿಸಿವೆ. ನವೋದಯ ಮತ್ತು ನವ್ಯ ಮಾರ್ಗಗಳ ಲಕ್ಷಣಗಳನ್ನು ಒಗ್ಗೂಡಿಸಲು ಯತ್ನಿಸಿದರು ಎಂಬ ಸರಳ ಅರ್ಥದಲ್ಲಿ ವಿಮರ್ಶಕರು ಇವರನ್ನು ಸಮನ್ವಯ ಕವಿ ಎಂದು ಕರೆದಿರುವುದಿದೆ. ಆದರೂ ಇವರದು ನಂಬುಗೆಯ ಹಾದಿ ಎಲ್ಲ ಪಂಥಗಳಿಂದಲೂ ದೂರವನ್ನು ಕಾಯುಟ್ಟುಕೊಂಡು ಬರೆದರು. ಬರೆಯುತ್ತಲೇ ಇದ್ದಾರೆ. ಕನ್ನಡ ಅಧ್ಯಯನ ಕೇಂದ್ರ(ಬೆಂಗಳೂರು ವಿಶ್ವವಿದ್ಯಾಲಯ) ದಲ್ಲಿ ಎರಡು ದಶಕಗಳ ಕಾಲ ಜಿ.ಎಸ್.ಎಸ್ ಪಾಠ ಹೇಳಿದರು. ಹಲವು ವಿಮರ್ಶಾ ಲೇಖನಗಳ ಚೌಕಟ್ಟುಗಳು ಆಕಾರ ಪಡೆದದ್ದು ಈ ತರಗತಿಗಳಲ್ಲಿಯೆ. ಪರಿಶೀಲನ, ಗತಿಬಿಂಬ, ನವೋದಯ, ಅನುರಣನ, ಪ್ರತಿಕ್ರಿಯೆ, ಬೆಡಗು- ಇವರ ವಿಮರ್ಶಾಗ್ರಂಥಗಳು. ಪ್ರಾಚೀನ, ಮಧ್ಯಕಾಲೀನ, ಹಾಗೂ ಆಧುನಿಕ ಸಾಹಿತ್ಯ ಕೃತಿಗಳ ಬಗೆಗೆ ಸಮರ್ಥ ಒಳನೋಟಗಳನ್ನು ನೀಡುತ್ತವೆ. ಸೌಂದರ್ಯ ಸಮೀಕ್ಷೆ, ಪಿ.ಎಚ್.ಡಿ ಪದವಿಗಾಗಿ ಬರೆದ ಮಹಾಪ್ರಬಂಧ. ತಾತ್ವಿಕವಾಗಿ ಕನ್ನಡ ಕಾವ್ಯವನ್ನು ವ್ಯಾಖ್ಯಾನಿಸುವ ಇವರ ಇನ್ನೆರಡು ಕೃತಿಗಳು ಕನ್ನಡ ಸಾಹಿತ್ಯ ಸಮೀಕ್ಷೆ, ಮತ್ತು ಕನ್ನಡ ಕವಿಗಳ ಕಾವ್ಯ ಕಲ್ಪನೆ. ಸಾಹಿತ್ಯ ಮೀಮಾಂಸೆಯ ಕ್ಷೇತ್ರದಲ್ಲಿ ಜಿ.ಎಸ್.ಎಸ್ ತೌಲನಿಕ ಅಧ್ಯಯನದ ಮಾದರಿಗಳನ್ನು ಬಳಸಿದರು. ಮಹಾಕಾವ್ಯ ಸಮೀಕ್ಷೆ, ವಿಮರ್ಶೆಯ ಪೂರ್ವ-ಪಶ್ಚಿಮ, ಕಾವ್ಯಾರ್ಥ ಚಿಂತನ, ಈ ಬಗೆಯ ಕೃತಿಗಳಾಗಿವೆ. ಕಾವ್ಯಾರ್ಥ ಚಿಂತನ ವು ಜಿ.ಎಸ್.ಎಸ್ ಅವರಿಗೆ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿಯನ್ನು ತಂದುಕೊಟ್ಟ ಕೃತಿ.

ಮಾಸ್ಕೋದಲ್ಲಿ ಇಪ್ಪತ್ತೆರಡು ದಿನ, ಗಂಗೆಯ ಶಿಖರಗಳಲ್ಲಿ, ಅಮೆರಿಕದಲ್ಲಿ ಕನ್ನಡಿಗ-ಪ್ರವಾಸ ಕಥನಗಳು. ಇವುಗಳ ಜೊತೆಗೆ, ಕರ್ಮಯೋಗಿ, ಎಂಬ ಜೀವನ ಚರಿತ್ರೆಯನ್ನು ಪ್ರವಾಸ ಕಥನಗಳು. ಎಂಬ ಜೀವನ ಚರಿತ್ರೆಯನ್ನು ಬರೆದಿದ್ದಾರೆ. ಚತುರಂಗ ಎಂಬ ಆತ್ಮಚರಿತ್ರೆಯನ್ನು ಬರೆದಿದ್ದಾರೆ. ಕರ್ಮಯೋಗಿ ಯು ೧೨ ನೇ ಶತಮಾನದ ವಚನಕಾರ ಸಿದ್ಧರಾಮನನ್ನು ಕುರಿತ ಜೀವನಚಿತ್ರ, ಚತುರಂಗ ವು ಜಿ.ಎಸ್.ಎಸ್ ಅವರ ಜೀವನದ ಮುಖ್ಯ ವಿವರಗಳನ್ನು ಕೊಡುವ ಆತ್ಮಕಥಾನಕ.

ಜಿ.ಎಸ್.ಎಸ್ ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕರಾಗಿ ಮತ್ತು ಕರ್ನಾಟಕ ಸಾಹಿತ್ಯ ಅಕಾಡಮಿಯ ಅಧ್ಯಕ್ಷರಾಗಿ ಮಾಡಿದ ಸಾಹಿತ್ಯ ಸಂಬಂಧದ ಚಟುವಟಿಕೆಗಳು ಗಮನಾರ್ಹವಾದುವು. ಸಮಗ್ರ ಕನ್ನಡ ಸಾಹಿತ್ಯ ಚರಿತ್ರೆ(೬ ಸಂಪುಟ), ಸಾಮಾನ್ಯನಿಗೆ ಸಾಹಿತ್ಯಚರಿತ್ರೆ(೧೦ ಸಂಪುಟ) ಮತ್ತು ಸಾಹಿತ್ಯ ವಾರ್ಷಿಕ ದ ಯೋಜನೆಗಳನ್ನು ಜಿ.ಎಸ್.ಎಸ್ ಕಾರ್ಯಗತಗೊಳಿಸಿದರು. ಕನ್ನಡ ಸಾಹಿತ್ಯ ಚರಿತ್ರೆ ಮತ್ತು ಕನ್ನಡ ವಿಮರ್ಶೆಯ ಬೆಳವಣಿಗೆಗೆ ಕಾರಣರಾದರು. ಇವರು ಏರ್ಪಡಿಸಿದ ವಿಚಾರಸಂಕೀರ್ಣಗಳು ಸಮಕಾಲೀನ ಸಾಹಿತ್ಯಕ ವಾಗ್ವಾದಗಳಿಗೆ ಅನುವು ಮಾಡಿಕೊಟ್ಟವು. ಮಹಾತಾಳ್ಮೆಯ ಮತ್ತು ಅಷ್ಟೇ ಕ್ರಿಯಾಶಾಲಿಯಾದ ಈ ವ್ಯಕ್ತಿ ಬಿನ್ನ ಮನೋಧರ್ಮದವರನ್ನೆಲ್ಲ ಒಂದೆಡೆ ಸೇರಿಸುತ್ತಿದ್ದರು. ಮತ್ತು ಚರ್ಚೆಯಲ್ಲಿ ಮಂಡಿತವಾದ ಪ್ರಬಂಧಗಳನ್ನು ಪುಸ್ತಕ ರೂಪದಲ್ಲಿ ತಂದರು.

ಶ್ರೀಕುವೆಂಪು, ಪಂಪ; ಒಂದು ಅಧ್ಯಯನ: ಹೊಸಗನ್ನಡ ಕಾವ್ಯದ ಎರಡು ಮಾರ್ಗಗಳು; ಟಿ.ಎಸ್.ಎಲಿಯಟ್ ಮತ್ತು ಕನ್ನಡ ಸಾಹಿತ್ಯ, ರಾಷ್ರೀಯತೆ ಮತ್ತು ಆಧುನಿಕ ಕನ್ನಡ ಸಾಹಿತ್ಯ, ಕನ್ನಡ ಸಾಹಿತ್ಯದಲ್ಲಿ ಕಾಳಿದಾಸ, ಭಾರತೀಯ ಸಾಹಿತ್ಯ ಸಮೀಕ್ಷೆ (ಎರಡು ಬೃಹತ್‌ಸಂಪುಟಗಳು), ಸಾಲು ದೀಪಗಳು – ಇವು ಜಿ.ಎಸ್.ಎಸ್ ಪ್ರಯತ್ನದಿಂದ ಬಂದ ಹಲವು ಪುಸ್ತಕಗಳಲ್ಲಿ ಕೆಲವು.

ಇವರಿಗೆ ಸಲ್ಲಿಸಲಾಗಿರುವ ಗೌರವ-ಪ್ರಶಸ್ತಿಗಳು ಹೀಗಿವೆ:

೧೯೯೨ ರಲ್ಲಿ ದಾವಣಗೆರೆಯಲ್ಲಿ ನಡೆದ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ

ಕನ್ನಡ ರಾಜ್ಯೋತ್ಸವ ಪ್ರಶಸ್ತಿ

ಸೋವಿಯತ್ ಲ್ಯಾಂಡ್ ನೆಹರೂ ಪ್ರಶಸ್ತಿ

೧೯೮೪ ರಲ್ಲಿ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ

೧೯೯೭ ನೇ ಸಾಲಿನ ಪ್ರತಿಷ್ಠಿತ ಪಂಪ ಪ್ರಶಸ್ತಿ.