(ಭಾಗವತ ಪರದೆ ದಾಟಿ ಪ್ರೇಕ್ಷಕರಿಗೆ ಕಾಣಿಸಿಕೊಂಡು ಕೈಮುಗಿಯುವನು)
ಭಾಗವತ : ‘ಓಂ ಪ್ರಥಮದಲ್ಲಿ ಶಿವಲಿಂಗದೇವರಿಗೆ ಸಾವಿರ ಶರಣು ಹೇಳಿ, ಈ ಕಥೆಯನ್ನು ಮೊದಲು ಹೇಳಿದ ಚೀನಾ ದೇಶದ ಲು ಷುನ್ ಮಹಾಶಯನಿಗೆ ನೂರು ನಮಸ್ಕಾರವ ಮಾಡಿ ತುಕ್ರನ ಕಥೆ ಅಭಿನಯಿಸುತ್ತೇವೆ; ತಾಳ್ಮೆಯಿಂದ ನೋಡಬೇಕು. ತಾಳ್ಮೆ ಯಾಕೆ ಅಂದರೆ, ನಮ್ಮ ಕಥಾನಾಯಕ ನಾಟ್ಯಶಾಸ್ತ್ರದ ಯಾವ ನಾಯಕ ಮಾದರಿಗೂ ಸೇರಿದವನಲ್ಲ. ಯಾರಿಗೂ ಹೋಲಿಸೋದಕ್ಕೂ ಆಗೋದಿಲ್ಲ. ಹೋಗಲಿ ಇವನ ಯಾವುದಾದರೂ ಅವಯವಗಳನ್ನ ಇನ್ನೊಬ್ಬರ ಅವಯವಗಳಿಗೆ ಹೋಲಿಸೋಣ ಅಂದರೆ ಅಲ್ಲೂ ಕಮ್ಮಿ ಬರ್ತಾನೆ ಮಾರಾಯ. ಬೇಡ, ತುಕ್ರನೊಬ್ಬನನ್ನೇ ಪ್ರತ್ಯೇಕ ನೋಡೋಣ ಅಂದರೆ ಕೈ ಸಮ ಕಾಲಿಲ್ಲ. ಕಾಲಿನಳತೆ ಮೈ ಇಲ್ಲ. ಮೈಗೆ ಸರಿ ಮುಖ ಇಲ್ಲ. ಯಾರ್ಯಾರೋ ಬೇಡ ಅಂತ ಬಿಸಾಕಿ ಬಿಟ್ಟ ಅವಯವಗಳನ್ನ ಸೇರಿಸಿ ಅಂತೂ ಒಂದಾಕಾರ ಮಾಡಿದ ಹಾಗೆ ಇವನ ರೂಪ. ಇನ್ನಿವನ ನಾಮಾಂಕಿತ ತುಕ್ರ – ತುಕಾರಾಂ ಹೋಗಿ ತುಕ್ರ ಆಗಿರಬಹುದು. ತುಕಾರಾಂ ಅಂತ ಪೂರ್ತಿ ಹೆಸರು ಹೇಳೋವಷ್ಟು ಔದಾರ್ಯ ಇಡೀ ಶಿವಾಪುರದಲ್ಲಿ ಯಾರಿಗೂ ಇಲ್ಲ. ತುಕ್ರ ಅನ್ನೋದನ್ನ ಬೈಗಳದಂತೆ ಬಳಸೋದೇ ಜಾಸ್ತಿ. ಆದರೆ ಅದೂ ಒಂದು ಬಗೆಯ ಖ್ಯಾತಿ ಅಂತ ತುಕ್ರ ಯಾವಾಗ ಅಂದುಕೊಂಡನೋ ಜನ ಅದನ್ನೂ ಬಿಟ್ಟು ಬಿಟ್ಟರು. ಈ ಪುಣ್ಯಾತ್ಮನ ಹೆಸರು ಖಾನೆಸುಮಾರಿಯಲ್ಲಿಲ್ಲ. ಹೆಳವರ ಹಾಡಿನಲ್ಲಿಲ್ಲ. ನನಗೆ ತಿಳಿದ ಮಟ್ಟಿಗೆ ಅವನ ಬಗ್ಗೆ ಇರುವ ಈ ದೇಶದ ದಾಖಲೆಗಳಲ್ಲಿ ನಮ್ಮ ನಾಟಕವೇ ಮೊದಲನೆಯದು. ಈ ನಮ್ಮ ಕಥಾನಾಯಕ ಸರಕಾರಕ್ಕೆ ಸಮಸ್ಯೆ ಆದ ಕಥೆ ಒಂದಿದೆ. ಈಗಲಾದರೂ ನಿನ್ನ ಹೆಸರು ಸರಿಯಾಗಿ ಹೇಳಯ್ಯಾ ಅಂದರೆ-ಅಯ್ಯೋ ಕೋಟಿ ಕೋಟಿ ಜನ ನನ್ನಂಥವರಿದ್ದಾರೆ ಸ್ವಾಮಿ. ಅವರಲ್ಲಿ ಯಾರೋ ಒಬ್ಬ ಅಥವಾ ಎಲ್ಲರೂ ಅಂತ ಬರೆದುಕೊಳ್ಳಿ ಎಂದು-ಹೇಳಿದ್ನಂತೆ. ಇಂಥವನ ಬಗ್ಗೆ ಏನು ಹೇಳೋಣ? ‘ತುಕ್ರ ಒಂದು ಜನ ಅಂತೂ ಆಗಲಿಲ್ಲ ಮಾರಾಯ!’ ಅಂತ ಅವನ ಬಗ್ಗೆ ಸಹಾನುಭೂತಿ ಇರೋ ಜನಾನೇ ಹೇಳ್ತಾರೆ. ಅಂದ ಮೇಲೆ ಅವನು ಜನ ಅಂತೂ ಅಲ್ಲ. ದನವೋ? ಅದಲ್ಲ ಅಂತ ಅವನೇ ಹೇಳ್ತಾನೆ. ಹಾಗಿದ್ದರೆ ತುಕ್ರ ಒಂದು ಮರವೋ? ಮರಕ್ಕಾದರೆ ಒಂದು ಗಾಂಭೀರ್ಯ, ಒಂದು ಸೌಂದರ್ಯ ಅಂತಿರ್ತದೆ. ಇವನಿಗೇನಿದೆ? ಹಾಗಾದರೆ ತುಕ್ರ ಹುಲ್ಲೆನ್ನಬಹುದೋ? ಈ ಮಾತಿಗೆ ಯಾರ ತಕರಾರು ಇಲ್ಲವಾದ್ದರಿಂದ ಅದನ್ನೇ ಇಟ್ಟುಕೊಳ್ಳಬಹುದು.
(ತಕ್ಷಣ ತುಕ್ರ ಕಾಣಿಸಿಕೊಂಡು)
ತುಕ್ರ : ಬಂಡಿಗಾಲಿಯ ಅಡಿಯಲ್ಲಿ ಸಿಕ್ಕ ಹುಲ್ಲಿಗೆ ನಾಲಿಗೆ ಇಲ್ಲ ನಿಜ. ಆದರೆ ಅದೇನಾದರೂ ಮಾತಾಡಿದ್ದರೆ ನನ್ನ ಹಾಗೇ ಮಾತಾಡುತ್ತಿತ್ತು. ಅಥವಾ ನನಗಿಂತ ಚೆನ್ನಾಗಿ ಮಾತಾಡುತ್ತಿತ್ತು. ಅಥವಾ ನನ್ನ ಹಾಗೇ ಅರ್ಥವಿಲ್ಲದ ಆದರೆ ನೋವಿನಿಂದ ತುಂಬಿದ ಶಬ್ದಗಳನ್ನು ಒದರುತ್ತಿತ್ತು: ಅಲ್ಲವೇ? ಹುಲ್ಲು ಅಂದರೆ ಸಾಮಾನ್ಯ ಅಂಥ ತಿಳಿಯಬೇಡಿ ಸ್ವಾಮಿ – ಆದರ್ಶಮಯವಾದ ಹುಲ್ಲು ಗುಲಾಮನ ಸೊಂಟದಂತಿರಬೇಕು. ಯಾವಾಗಂದರೆ ಆವಾಗ, ಹ್ಯಾಗಂದರೆ ಹಾಗೆ, ಎಷ್ಟು ಬೇಗ ಮತ್ತು ನಿಧಾನವಾಗಿಯೆಂದರೆ ಅಷ್ಟು ಬೇಗ ಮತ್ತು ನಿಧಾನವಾಗಿ ಬಗ್ಗುವಂತಿರಬೇಕು. ತುಳಿದರೆ ಮಿದುವಾಗಿರಬೇಕು. ತಟ್ಟಿದರೆ ಯಾವ ಕಡೆಗೂ ತಿರಿಚಿಕೊಳ್ಳುವಂತಿರಬೇಕು. ಇದು ನಿಷ್ಠೆ, ಅಂಗಸಾಧನೆ ಮತ್ತು ಏಕಾಗ್ರತೆಯಿಂದ ಮಾತ್ರ ಸಾಧ್ಯ. ಯಾಕೆಲ್ಲಾ ಸುಮ್ಮನಾದಿರಿ? ನಿಮ್ಮನ್ನು ನಗಿಸಲೆ ಸ್ವಾಮಿ? ಒಮ್ಮೊಮ್ಮೆ ಈ ನೆಲ ಸಾವಿರಾರು ವರ್ಷಗಳಿಂದ ಕಂಡ ಕನಸು ನಾನೆಂದೋ, ಕನಸಿನಲ್ಲಿ ಈ ನೆಲ ಉಂಡ ನೋವು ನಾನೆಂದೋ, ಇಲ್ಲಾ ಈ ನೆಲಕ್ಕಾದ ಗಾಯ ನಾನೆಂದೋ ಅನ್ನಿಸೋದಿಲ್ಲವೆ? ಅನ್ನಿಸಿದಿದ್ದರೆ ಬೇಡ, – ನಗೆಯಾದರೂ ಬಂತಲ್ಲವೆ? ಅದೂ ಬರಲಿಲ್ಲವೆ? ಹೋಗಲಿ ಬಿಡಿ ನಾನೇ ನಗ್ತೇನೆ, ಆಯ್ತ? (ನಗುತ್ತ ಹಿಂದೆ ಹೋಗುವನು)
ಕಾಲಕೋಶ
ಮೇಳ : ಗೊತ್ತೆ ನಿಮಗೆ ಕೊನೆ ಓಣಿಯ
ಕೊನೆಯ ಮನೆಯ ತುಕ್ರ?
ಊರಜನರು ಕರೆಯುತ್ತಿದ್ದ–
ರವನ ಬಾರೋ ಬಕ್ರ.
ಕುರಿಕಂಡರೆ ಕೋಪ ಅವಗೆ
ಸ್ವಯಂ ಅವನೆ ಕುರಿ,
ಹಿರಿಕಿರಿಯರ ಶಾಪಗಳಿಗೆ
ಅವನೊಬ್ಬನೆ ಗುರಿ.
ಮೌನವನ್ನೆ ಮಾತು ಮಾಡಿ
ಆಡುತಾನೆ ಬೆರಿಕಿ,
ಅನುಮಾನದ ಹಲ್ಲುಗಿಂಜಿ
ನುಡಿಯುತಾನೆ ಕಟಕಿ.
ಈ ಧರಣಿಯ ತಪ್ಪುಗಳಿಗೆ
ಅವನೊಬ್ಬನೆ ಬದ್ಧ.
ಹೊಸವಿದ್ದರೆ ಹೇಳಿರೀಗ
ಅದಕು ಅವನು ಸಿದ್ಧ!
ಕನಸು ಬಿಸಿಲುಗುದುರೆಯೇರಿ
ರಾಜನಾಗುತ್ತಿದ್ದ!
ಎಚ್ಚರದಲಿ ಕೂಲಿ ಮಾಡಿ
ಆಳಾಗಿರುತಿದ್ದ.
ಎರಡು ಲೋಕಗಳನು ಹ್ಯಾಗು
ನಿಭಾಯಿಸಲು ಆಗದೆ
ಹೇಳುತಿದ್ದ : ದೇವರನ್ನು
ಎಂದೂ ಕ್ಷಮಿಸಲಾರೆ!
ಆದರೂನು ದವಡೆ ಅಗಿದು
ಅನ್ನುತ್ತಿದ್ದ ತುಕ್ರ :
ಈ ನಶ್ವರ ಬದುಕನೊಮ್ಮೆ
ಮನ್ನಿಸಯ್ಯಾ ಈಶ್ವರಾ.
(ಜನ ಅಂದರೆ ಒಗ್ಗ, ಕುಳ್ಳೀರ, ಸಿಂಗ್ರ, ಮಲ್ಲ, ಗಣಪ, ಪಟೇಲ ಮತ್ತು ಶಾನುಭೋಗ ಸೇರಿದ್ದಾರೆ. ಎಲ್ಲ ಸೇರಿ ಕಾಲಕೋಶ ಹುಗಿಯುವ ತರಾತುರಿಯಲ್ಲಿದ್ದಾರೆ. ಪಟೇಲ, ಶಾನುಭೋಗ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ಇನ್ನೇನು ಎಲ್ಲ ತಯಾರಾಗಿದೆಯೆಂದಾಗ ಸಾನುಭೋಗ ಭಾಷಣ ಮಾಡಲು ನಿಲ್ಲುತ್ತಾನೆ. ಪಕ್ಕದಲ್ಲಿ ಪಟೇಲ ನಿಂತುಕೊಳ್ಳುತ್ತಾನೆ)
ಸಾನುಭೋಗ : ಎನ್ನಯ ಪ್ರೀತಿಯ ಬಾಂಧವರೇ, ನಮ್ಮ ಹಳ್ಳಿ ಇವತ್ತು ಎಂಥಾ ಸ್ಥಿತಿಗತಿಯಲ್ಲಿದೆ ಅಂತ ಕೂತು ವಿಚಾರ ಮಾಡಬೇಕಾಗಿದೆ. ನಮ್ಮ ಹಳ್ಳಿ ತಿಳಿದರೆ ದಿಳ್ಳಿ ತಿಳಿಯುತ್ತದೆ. ದಿಳ್ಳಿ ಈಗ ಇಂಡಿಯಾ ದೇಶದ ರಾಜಧಾನಿ ಎಂದು ನಾವು ತಿಳಿಯಬೇಕಾಗಿದೆ. ಅದಕ್ಕಿಂತ ಹೆಚ್ಚಾಗಿ ದಿಳ್ಳಿಯನ್ನು ಇಂಗ್ಲಿಷರು ಆಳುತ್ತಿದ್ದಾರೆ, ಅವರು ಪರಕೀಯರೆಂದು ತಿಳಿಯಬೇಕಾಗಿದೆ. ಪರದೇಶಿಗಳಿಗೆ ನಮ್ಮ ಜಾತಿ ಕುಲ ಸಂಸ್ಕೃತಿ ನಾಗರಿಕತೆ ಸಂಪ್ರದಾಯ ಪರಂಪರೆಗಳ ಬಗ್ಗೆ ಎಂದಾದರೂ ಒಂದು ಗೌರವ, ಒಂದು ಸನ್ಮಾನ, ಒಂದು ಸದ್ಭಾವನೆ ಮೂಡೋದು ಸಾಧ್ಯವೆ? ಅದು ಸಾಧ್ಯವಿಲ್ಲ ಅನ್ನೋದನ್ನೂ ನಾವೇ ತಿಳಿಯಬೇಕಾಗಿದೆ. ದೇಶದಲ್ಲಿ ಏನೇನು ಬದಲಾವಣೆಗಳು ಬರುತ್ತಿವೆ; ಹಾಡೋ ಮರ ಬಂದಿದೆ; ಚಾಡಿ ಹೇಳೋ ತಂತಿ ಬಂದಿದೆ; ಸಪ್ತ ಸಮುದ್ರಗಳ ಆಚೆಗಿನ ಪಾಪಗಳೆಲ್ಲ ಹಾ ಅನ್ನೋದರೊಳಗೆ ಇಲ್ಲಿಗೇ ಬರುತ್ತಿವೆ. ನಮ್ಮ ದೇಶ ಆಗಲೇ ಎಷ್ಟು ಅಧೋಗತಿಗೆ ಇಳಿದಿದೆ ಅಂದರೆ ಬೆಂಗಳೂರಲ್ಲಾಗಲೀ ಮಕ್ಕಳು ತಂದೆ ತಾಯಿಗಳಿಗೆ ಮಮ್ಮಿ ಡ್ಯಾಡಿ ಅನ್ನೋದಕ್ಕೆ ಸುರು ಮಾಡಿವೆ. ಪಾಶ್ಚಾತ್ಯ ಸಂಸ್ಕೃತಿಗೆ ಆಗಲೇ ರೋಗ ತಗುಲಿದೆ. ಅದನ್ನ ಯಾವ ಮದ್ದಿನಿಂದಲೂ ವಾಸಿ ಮಾಡೋದು ಸಾಧ್ಯವಿಲ್ಲ. ಅಂಥಾ ರೋಗ ನಮ್ಮ ಭವ್ಯ ಸಂಸ್ಕೃತಿಗೂ ತಗಲಬೇಕೋ?
ಮಲ್ಲ : ಬ್ಯಾಡಿ ಸ್ವಾಮಿ.
ಸಾನುಭೋಗ : ಅದಕ್ಕೇ ಅದನ್ನ ಭದ್ರವಾಗಿ ಈ ಕೊಳವೆಯಲ್ಲಿಟ್ಟು ಹೂಳತೀವಿ. ಆ ಪಶ್ಚಿಮದ ರೋಗಗಳೆಲ್ಲಾ ನಮ್ಮ ಸೀಮೆ ದಾಟಿ ಹೋದ ಮೇಲೆ ಇದನ್ನ ತೆಗೀತೀವಿ.
ಸಿಂಗ್ರ : ವೂಳದೇ ವೋದರೆ ಹೇನಾಗುತ್ತೆ ಸ್ವಾಮಿ?
ಪಟೇಲ : ಹಂಗೇ ಬಿಟ್ಟರೆ ಮುಂದೊಂದು ದಿನ ಹೆಂಡತೀನ್ನ ಹ್ಯಾಗೆ ಹೊಡೀಬೇಕು ಅನ್ನೋದನ್ನ ಕೂಡ ಸ್ಕೂಲಲ್ಲಿ ಕಲಿಸಿಕೊಡಬೇಕಾಗುತ್ತೆ.
ಒಗ್ಗ : ಅದರಲ್ಲೇನದೆ ಅಂತ ಒಂಚೂರು ಏಳಿ ಬಿಡಿ ಸ್ವಾಮಿ.
ಸಾನುಭೋಗ : ಬಂಧುಗಳೇ ಇದು ಕಾಲಕೋಶ. ಇದರಲ್ಲಿ ಪಟೇಲರ ವಂಶದ ಚರಿತ್ರೆ ಹೆಳವಪ್ಪ ಹ್ಯಾಗೆ ಹೇಳಿದನೋ ಹಾಗೇ ಇದೆ. ಪಟೇಲರ ವಂಶದಲ್ಲಿ ಯಾರ್ಯಾರು ಆಳ್ವಿಕೆ ಮಾಡಿದರು, ಹ್ಯಾಗೆ ಬಾಳಿದರು, ಹ್ಯಾಗೆ ಬದುಕಿದರು-
ತುಕ್ರ : (ನಡುವೆ ಬಾಯಿ ಹಾಕಿ) ಹ್ಯಾಗೆ ಹೆಂಡಂದಿರನ್ನ ಹೊಡೆದರು ………………….
ಸಾನುಭೋಗ : (ಆತಂಕಗೊಂಡು ಮತ್ತೆ ಮುಂದುವರಿಸುವನು) ಪಟೇಲ ವಂಶದ ಸಾಧನೆಗಳು, ಸಿದ್ಧಿಗಳು, ವಿಕ್ರಮಗಳು, ಯುದ್ಧಗಳು ಇವೆಲ್ಲಾ ಇದರಲ್ಲಿವೆ. ಇದನ್ನ ಇಲ್ಲಿ ಹೂಳ ತೀವಿ. ಮುಂದೊಂದು ದಿನ ನಮ್ಮ ಪೀಳಿಗೆಗೆ ಇದು ಸಿಕ್ಕರೆ ಅಂದುಕೊಳ್ಳುತ್ತವೆ : ಎಲ ಎಲಾ ನಮ್ಮ ಹಿರೀಕರು ಹೀಗೆ ಬದುಕಿದರೋ?
ತುಕ್ರ : (ಬಾಯಿ ಹಾಕಿ) ಎಲ, ಎಲಾ, ನಮ್ಮ ಹಿರೀಕರು ಹೆಂಡಂದಿರನ್ನು ಹಿಂಗೆ ಹೊಡೆದರೋ-ಅಬ್ಬ!
ಸಾನುಭೋಗ : -ಅಂತ ಆಶ್ಚರ್ಯಪಟ್ಟು ಚಪ್ಪಾಳೆ ತಟ್ಟುತ್ತವೆ.
ಪಟೇಲ : ಯಾಕೋ ತುಕ್ರ ನಡುವೇ ಬಾಯಿ ಹಾಕ್ತಿ?
ತುಕ್ರ : ಏನಿಲ್ಲ ಸ್ವಾಮೀ, ನೆಲದಲ್ಲಿ ಹುಗೀತೀರಲ್ಲ, ಅದೇನೂಂತ ನನಗೂ ಒಸಿ ಹೇಳಿಬಿಡಿ.
ಸಾನುಭೋಗ : ಹೇಳಲಿಲ್ಲವೆ ಕಾಲಕೋಶ ಅಂತ.
ತುಕ್ರ : ಕಾಲಕೋಶ ಅಂದರೆ?
ಪಟೇಲ : ನಿಮ್ಮಜ್ಜೀ ಪಿಂಡ
ತುಕ್ರ : ಅದನ್ನೇ ಹೂಳತಿದೀರಾ?
ಸಾನುಭೋಗ : ಯಾವೋನಯ್ಯಾ ಇವನು? ಯೋ ತುಕ್ರ ಇದು ನಮ್ಮ ಊರಿನ ಮಹಾನ್ ಪಟೇಲ ವಂಶದ, ಮಹಾನ್ ವ್ಯಕ್ತಿಗಳ, ಮಹಾನ್ ಸಾಧನೆಗಳ, ಮಹಾನ್ ವಿಕ್ರಮಗಳ ದಾಖಲೆ. ಇದನ್ನ ಲೋಹದಲ್ಲಿ ಬರೆಸಿ ಇಲ್ಲಿ ಹೂಳತಿದ್ದೀವಿ.
ತುಕ್ರ : ಸರಿ ಸ್ವಾಮೀ, ನನ್ನೆಸರೂ ಅದರಲ್ಲಿದೆಯಾ?
ಸಾನುಭೋಗ : ಯೊ ನೀನ್ಯಾವನೋ ದೊಡ್ಡ ಮನುಷ್ಯನೇ ಇರಬೇಕಯ್ಯಾ.
ತುಕ್ರ : ಅದಕ್ಕೇ ಕೇಳಿದೆ : ಕಾಲಕೋಶದಲ್ಲಿ ನನ್ನೆಸರೂ ಇದೆಯ ಅಂತ.
ಸಾನುಭೋಗ : ಅಯ್ಯಾ ದೊಡ್ಡ ಮನುಷ್ಯ ಇದು ಅಗೋ ಅಲ್ಲಿದಾರಲ್ಲ ಜಸವಂತರಾವ್ ಪಟೇಲಂತ, ಅವರ ಕುಲ, ಗೋತ್ರ, ಸಾಧನೆ, ಸೇವೆ ಇವೆಲ್ಲಾ ಇರುವಂಥ ದಾಖಲೆ, ಇದಕ್ಕೂ ನಿನಗೂ ಏನಯ್ಯಾ ಸಂಬಂಧ?
ತುಕ್ರ : ಏನು ಸಂಬಂಧ ಅಂದರೆ? ನಾನೂ ಪಟೇಲ ವಂಶದವನೇರೀ. ತುಕಾರಾಂ ಪಟೇಲಂತ ನನ್ನೆಸರು. ಅಗೋ ಆ ಜಸವಂತ್ ರಾವ್ ಪಟೇಲಿದ್ದಾನಲ್ಲಾ-ನನ್ನ ಚಿಕ್ಕದೊಡ್ಡಪ್ಪನ ಮಗ………….
(ಕಾಲಕೋಶ ಹುಗಿಯುವ ತರಾತುರಿಯಲ್ಲಿದ್ದ ಜನಕ್ಕೆ ಇದು ಕೇಳಿಸಿ ಗಾಬರಿಯಾಗುತ್ತಾರೆ. ತಮ್ಮ ತಮ್ಮಲ್ಲೇ ಆದರೆ ಪಟೇಲ, ಸಾನುಭೋಗರಿಗೆ ಕೇಳಿಸದಂತೆ ಮಾತಾಡಿಕೊಳ್ಳುತ್ತಾರೆ)
ಸಿಂಗ್ರ : ಔದಾ?
ಕುಳ್ಳೀರ : ಚಹರೆ ಏನೋ ಅಂಗೇ ಅದೆ. ತಲೆಯಲ್ಲಿ ಹುರುಕು ಕಜ್ಜಿ ಇದೆ ಅಷ್ಟೆ. ಮಿಕ್ಕನಾದಂತೆ ಹಿದ್ದರೂ ಹಿರಬಹುದೋ ಹೇನೋಪ್ಪ.
ಮಾರ : ಅಂಗಂತ ಎಳವನಾಗಲಿ, ಪಟೇಲರಾಗಲಿ ಒಮ್ಮೆಯೂ ಏಳಲೇ ಹಿಲ್ಲವೆ!
ತುಕ್ರ : ಹೇಳಿದರೆ ಆಸ್ತಿ ಮೇಲೆ ಕೈ ಇಟ್ಟಏನು ಅಂತ.
(ಇದು ಕೇಳಿಸಿ ಪಟೇಲ ತುಕ್ರನ ಕಡೆ ಬರುತ್ತಾನೆ.)
ಪಟೇಲ : ಲೇ ತುಕ್ರ, ಹಂದಿ, ನಾಯಿ………….
ತುಕ್ರ : ನನ್ನನ್ನಾ ನೀವು ಕರೆದಿದ್ದು? ಕ್ಷಮಿಸಿ ನಾನು ಎರಡೂ ಅಲ್ಲ-ಮನುಷ್ಯ.
ಪಟೇಲ : ಎಲಾ ಸೂಳೇಮಗನೆ-
ತುಕ್ರ : ಕ್ಷಮಿಸಿ ನನಗೆ ತಂದೆ ಅಂತ ಒಬ್ಬ ಇದ್ದ. ಇರಲಿ ಅಂತ ಆಗಾಗ ನನ್ನೆಸರಿಗೆ ಅವನ ಹೆಸರನ್ನ ಅಂಟಿಸಿಕೊಳ್ತೇನೆ.
ಪಟೇಲ : ಆ ಹೆಸರು ಹೇಳು ನೋಡೋಣ.
ತುಕ್ರ : ತುಕಾರಾಂ ಸೀತಾರಾಂ ಪಟೇಲ……..
(ಥಟ್ಟನೆ ಪಟೇಲ ಅವನ ಕೆನ್ನೆಗೆ ಬಾರಿಸುತ್ತಾನೆ)
ಪಟೇಲ : ಹಲ್ಕಾ ನನ್ನ ಮಗನೆ, ನನ್ನ ಮನೆತನಕ್ಕೆ ಹುಟ್ಟಿದೋನು ಅಂತ ಹೇಳಿಕೊಳ್ಳೋದಕ್ಕೆ ಎಷ್ಟೋ ಕೊಬ್ಬು ನಿನಗೆ? ಇನ್ನೊಮ್ಮೆ ಬೊಗಳ್ತೀಯ? ಇನ್ನೊಮ್ಮೆ ನಮ್ಮ ವಂಶದಲ್ಲಿ ಹುಟ್ಟಿದೋನು ಅಂತ ಹೇಳಿಕೊಳ್ತೀಯಾ?
(ಹಿಗ್ಗಾಮುಗ್ಗಾ ಹೊಡೆಯುವನು, ಏಟು ತಿಂದು ತುಕ್ರ ರಂಗದ ಒಂದು ಬದಿಗೆ ಬರುವನು. ಕಾಲಕೋಶ ಹೂಳುವ ಕೆಲಸ, ಮುಂದುವರಿದಿದೆ.)
ಮಾರ : ಅಯ್ಯಾ ತುಕ್ರ, ನೀನು ಪಟೇಲರ ವಂಶದವನೇ ಹಿರಬಹುದು. ಅಂಗಂತ ಜಸವಂತರಾವ್ ಪಟೇಲರ ಹೆದರುಗೇನೇ ಏಳಬಹುದೇನಯ್ಯಾ?
ತುಕ್ರ : ನಿಜ ಏಳೋದಕ್ಕೆ ಅವರಿವರೇ ಆಗಬೇಕಂತೇನು?
ಬೋರ : ಯಾರಿಲ್ಲದಾಗ ನಿನಗೆ ನೀನೇ ಏಳಿಕೊಳ್ಳಬೇಕಾದ್ದನ್ನ ಎಲ್ಲರೆದುರಲ್ಲಿ ಏಳಿದ್ದು ತಪ್ಪು ಕಣಯ್ಯಾ.
ಮಲ್ಲ : ನಿನ್ನ ಪರವಾಗಿ ಯಾರೂ ಮಾತಾಡಲಿಲ್ಲವಲ್ಲಯ್ಯಾ.
ತುಕ್ರ : ಸತ್ಯದ ಪರ ಯಾರು ಮಾತಾಡುತ್ತಾರೆ?
(ಪಟೇಲನಿಗಿದು ಕೇಳಿಸಿ ಮತ್ತೆ ಓಡಿ ಬಂದು ತುಕ್ರನನ್ನು ಹಿಡಿದುಕೊಳ್ಳುತ್ತಾನೆ)
ಪಟೇಲ : ಎಲಾ ಬಡ್ಡೀಮಗನೆ-
(ಒದೆಯುವನು)
ತುಕ್ರ : ನಾನು ಹೇಳಿದೆನಲ್ಲ-ನಿಮ್ಮ ಕಾಲಕೋಶಕ್ಕೂ ನನಗೂ ಸಂಬಂಧ ಇಲ್ಲ ಅಂತ. ಕಾಲಕೋಶದಲ್ಲಿ ದಯವಿಟ್ಟು ನನ್ನೆಸರು ಸೇರಿಸಬೇಡಿ; ಆಯ್ತು? ನನ್ನ ಪಾಡಿಗೆ ನನ್ನ ಬುಟ್ಟು ಬುಡಿ.
ಪಟೇಲ : (ಒದೆಯುತ್ತ) ಹಾಗೆಂದರೆ ಹ್ಯಾಗಯ್ಯಾ, ನೀನಿಲ್ಲದೆ ಕಾಲಕೋಶ ಪೂರ್ಣವಾಗುತ್ತಾ? ನಾವು ಕಾಲಕೋಶ ಹೂಳೋದು ಅದರ ತಪ್ಪಿನ ಸಮೇತ. ಅದಕ್ಕೆ ನಿನ್ನ ಸಹಾಯ ಬೇಕೇಬೇಕು.
(ತುಕ್ರನನ್ನು ಎಳೆದೊಯ್ದು ನೆಲಕ್ಕೆ ಹಾಕಿ ತುಳಿಯುತ್ತ ಕಾಲಕೋಶ ಇಳಿಸತೊಡಗುವರು. ತುಕ್ರ ವೇದನೆಯಿಂದ ಕಿರುಚುವನು)
ತುಕ್ರ : ಏನಾಗ್ತಾ ಇದೆ ಲೋಕದಲ್ಲಿ? ನನ್ನ ಕಣ್ಣು ಬರೀ ರಾಕ್ಷಸರನ್ನೇ ತೋರಿಸುತ್ತಿದೆ. ಒದೆಯೋ ಕಾಲು, ನೆಲದ ಧೂಳು-ಇವುಗಳ ಮಧ್ಯೆ ನಾನಿದ್ದೇನೆ. ಅಕ್ಕ ಪಕ್ಕ ಮನುಷ್ಯರಾರೂ ಇಲ್ಲವೇ…… ಇಲ್ಲದಿದ್ದರಿಲ್ಲ ಬಿಡಿ, ನಾನೇ ಕೊನೆಯವನು ಅಂತಾಯ್ತು.
Leave A Comment