ಕನ್ನಡ ವಿಶ್ವವಿದ್ಯಾಲಯದ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗವು ಕೈಗೊಂಡಿರುವ ನಿರಂತರ ಯೋಜನೆಗಳಲ್ಲಿ ಸ್ಥಳೀಯ ಚರಿತ್ರೆ ಮತ್ತು ಪುರಾತತ್ವ ಮಾಲೆಯು ಸಹ ಒಂದು. ಈ ಯೋಜನೆಯ ಅನ್ವಯ ಚಾರಿತ್ರಿಕ ಗ್ರಾಮವೊಂದನ್ನು ಆಯ್ಕೆ ಮಾಡಿಕೊಂಡು ಸ್ಥಳೀಯ ಚರಿತ್ರೆ, ಪುರಾತತ್ವ ಮತ್ತು ಸಂಸ್ಕೃತಿಯನ್ನು ಕುರಿತು ಹೊಸದಾಗಿ ಕ್ಷೇತ್ರಕಾರ್ಯ ಮಾಡಿಸಿ ಸಂಶೋಧನ ಲೇಖನಗಳನ್ನು ಸಿದ್ಧಪಡಿಸಲಾಗುವುದು. ಈ ಕುರಿತು ಅಲ್ಲಿಯೇ ವಿಚಾರ ಸಂಕಿರಣವನ್ನು ಏರ್ಪಡಿಸಲಾಗುತ್ತದೆ. ಹೀಗೆ ವಿಶ್ವವಿದ್ಯಾಲಯದ ಯೋಜನೆಗಳನ್ನು ಜನರ ಬಳಿಗೆ ಒಯ್ಯುವ ಕಾಯಕವನ್ನು ಮಾಡುವುದರ ಜೊತೆಗೆ ಅಜ್ಞಾತ ಗ್ರಾಮವೊಂದರ ಇತಿಹಾಸವನ್ನು ಬೆಳಕಿಗೆ ತರುವ ಪ್ರಯತ್ನ ಮಾಡಲಾಗುವುದು. ಇಂತಹ ಒಂದು ಪ್ರಯತ್ನದ ಫಲವೇ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ತೊಣ್ಣೂರನ್ನು ಕುರಿತ ಕೃತಿಯೊಂದು ಇಲ್ಲಿ ಮೊದಲ ಬಾರಿಗೆ ಪ್ರಕಟವಾಗುತ್ತಿದೆ.

ತೊಣ್ಣೂರು, ಶಾಸನಗಳಲ್ಲಿ ತೊಂಡನೂರು ಎಂದು ಉಲ್ಲೇಖಿಸಲ್ಪಟ್ಟಿದೆ. ಈ ಊರಿನ ಪರಿಸರದಲ್ಲಿ ನೀರಿನ ತಾಣಗಳು ಸಾಕಷ್ಟಿವೆ. ಬಹುಶಃ ಪ್ರಕೃತಿದತ್ತವಾದ ಈ ಕೊಡುಗೆಯೇ ಇಲ್ಲಿನ ಇತಿಹಾಸ ಮತ್ತು ಸಂಸ್ಕೃತಿಯನ್ನು ಶ್ರೀಮಂತಗೊಳಿಸಿರಬಹುದು. ಬೆಟ್ಟಗಳ ನಡುವೆ ಹರಿಯುವ ಹಳ್ಳವೊಂದಕ್ಕೆ ಬೃಹತ್ ಏರಿಯನ್ನು ಕಟ್ಟುವ ಮೂಲಕ ಬಹು ದೊಡ್ಡ ಕೆರೆಯೊಂದನ್ನು ನಿರ್ಮಿಸಲಾಗಿದೆ. ಈ ಭಾಗದ ಆರ್ಥಿಕ, ಸಾಮಾಜಿಕ, ಧಾರ್ಮಿಕ ಮತ್ತು ಸಾಂಸ್ಕೃತಿಕ ಬದುಕಿನ ಜೀವನಾಡಿಯಾಗಿರುವ ಈ ಕೆರೆ ಊರಿನ ಹೆಸರಿನೊಂದಿಗೆ ಬೆರೆತು ಇತ್ತೀಚೆಗೆ ಕೆರೆ ತೊಣ್ಣೂರು ಎಂಬ ಸ್ಥಳನಾಮದ ಹುಟ್ಟಿಗೆ ಕಾರಣವಾಗಿದೆ.

ತೊಣ್ಣೂರಿನ ಪರಿಸರದಲ್ಲಿ ಪ್ರಾಗೈತಿಹಾಸಿಕ ಕುರುಹುಗಳು ಕಂಡುಬರುತ್ತವೆ. ಇದು ಅಲ್ಲಿನ ಭೌಗೋಳಿಕ ಲಕ್ಷಣದ ಪ್ರಾಮುಖ್ಯತೆಯನ್ನು ಎತ್ತಿ ಹಿಡಿಯುತ್ತದೆ. ಇಲ್ಲಿನ ಬೆಟ್ಟವು ಈಶಾನ್ಯ-ನೈರುತ್ಯ ದಿಕ್ಕಿನಲ್ಲಿ ಸಾಗಿದ್ದು, ನಡುವೆ ಹಳ್ಳವೊಂದು ಹರಿದು ಕಾವೇರಿ ನದಿಯನ್ನು ಸೇರುತ್ತದೆ. ಮೇಲುಕೋಟೆ ಪ್ರದೇಶದಿಂದ ದಕ್ಷಿಣಾಭಿಮುಖವಾಗಿ ಹರಿಯುವ ಈ ಹಳ್ಳ ತೊಣ್ಣೂರಿನ ಉತ್ತರ ಭಾಗದಲ್ಲಿ ಎರಡು ಬೆಟ್ಟಗಳ ನಡುವೆ ಹರಿದು ಆಗ್ನೇಯ ದಿಕ್ಕಿಗೆ ಸಾಗುತ್ತದೆ. ಈ ಹಳ್ಳವನ್ನು ಜನಪದರು ಹೆಬ್ಬಳ್ಳ ಎಂದು, ಶಿಷ್ಟ ಪರಂಪರೆಯಲ್ಲಿ ಯಾದವ ನದಿ ಅಥವಾ ನಾರಾಯಣ ತೊರೆ ಎಂದು ಕರೆಯಲಾಗಿದೆ. ಈ ಹಳ್ಳದ ಹುಟ್ಟು ಮೇಲುಕೋಟೆ ಪ್ರದೇಶದಲ್ಲಾಗುವುದರಿಂದ ಬಹುಶಃ ಯಾದವ ನದಿ ಅಥವಾ ನಾರಾಯಣ ತೊರೆ ಎಂದು ಕರೆದಿರಬಹುದು. ತೊಣ್ಣೂರು ಕೆರೆಯ ಹಿಂಬದಿಯಲ್ಲಿರುವ ಸಣಬ ಗ್ರಾಮದಲ್ಲಿ ಬೃಹತ್ ಶಿಲಾಯುಗ ಕಾಲದ ವಿಶಿಷ್ಟವಾದ ಸಮಾಧಿಗಳನ್ನು ಡಾ.ಎನ್.ಎಸ್.ರಂಗರಾಜುರವರು ಬೆಳಕಿಗೆ ತಂದಿದ್ದಾರೆ. ಅದೇ ರೀತಿ ಸಮೀಪದಲ್ಲಿರುವ ಕುಂತಿ ಬೆಟ್ಟದಲ್ಲೂ ಪ್ರಾಗೈತಿಹಾಸಿಕ ಕುರುಹುಗಳನ್ನು ಡಾ.ಎಂ.ಎಸ್. ಕೃಷ್ಣಮೂರ್ತಿಯವರು ಶೋಧಿಸಿದ್ದಾರೆ. ಈ ಎರಡೂ ಸ್ಥಳಗಳು ತೊಣ್ಣೂರಿಗೆ ಸಮೀಪದಲ್ಲೇ ಇವೆ. ತೊಣ್ಣೂರು ಗ್ರಾಮಕ್ಕೆ ಸೇರಿದಂತಿರುವ ಹಾರುವರ ಕಟ್ಟೆಯ ಹಿಂಬದಿಯಲ್ಲಿ ನೆಟ್ಟಿದ್ದ ಕಲ್ಲಿನ ಹಲಗೆಗಳ ಮೇಲೆ ಸಾಲಾಗಿ ನಿಂತ ಮನುಷ್ಯಾಕೃತಿಗಳ ಗೆರೆಚಿತ್ರಗಳನ್ನು ಹಲವು ಸಾಲುಗಳಲ್ಲಿ ಕೊರೆಯಲಾಗಿತ್ತು. ಆದರೆ ಕೃಷಿ ವಿಸ್ತರಣೆಯ ಸಂದರ್ಭದಲ್ಲಿ ಈ ಕಲ್ಲುಗಳನ್ನು ಕಿತ್ತ ಪರಿಣಾಮವಾಗಿ ಇಂದು ಅವುಗಳ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಬಹುಶಃ ಈ ಅವಶೇಷಗಳು ಸಹ ಬೃಹತ್ ಶಿಲಾಯುಗ ಕಾಲಕ್ಕೆ ಸಂಬಂಧಿಸಿರಬಹುದು. ಹೀಗೆ ತೊಣ್ಣೂರು ಪರಿಸರದಲ್ಲಿ ಕ್ರಿ.ಪೂ. ೧೦೦೦ದಲ್ಲೇ ಮಾನವನ ವಸತಿ ನೆಲೆಗೊಂಡಿತೆಂಬುದು ಸುಸ್ಪಷ್ಟ. ತೊಣ್ಣೂರು ಪರಿಸರದಲ್ಲಿ ಆರಂಭಗೊಂಡ ಮಾನವನ ಬದುಕು, ಇತಿಹಾಸ ಕಾಲದಲ್ಲೂ ನಿರಂತರವಾಗಿ ಮುಂದುವರಿದಿರುವುದನ್ನು ಮನಗಾಣುತ್ತೇವೆ. ತೊಣ್ಣೂರು ಸಹ ತನ್ನದೇ ಆದ ಸ್ಥಳಪುರಾಣ ಮತ್ತು ಐತಿಹ್ಯಗಳನ್ನು ಹೊಂದಿದೆ. ಒಂದಕ್ಕಿಂತ ಹೆಚ್ಚು ಸ್ಥಳಪುರಾಣಗಳಿವೆ. ರಾಮಾನುಜರ ಆಗಮನ, ಅಲ್ಲಿ ನೆಲೆಸಿದ್ದ ಜೈನ ಸಮುದಾಯ, ಶ್ರೀ ವೈಷ್ಣವರ ಪ್ರಾಬಲ್ಯ ಹಾಗು ಅಲ್ಲಿನ ಧಾರ್ಮಿಕ ಸಂಘರ್ಷಗಳಿಗೆ ಸಂಬಂಧಿಸಿದಂತೆ ಇಲ್ಲಿನ ಐತಿಹ್ಯಗಳು ಬೆಳಕು ಚೆಲ್ಲುತ್ತವೆ. ಅದೇ ರೀತಿ ಧರ್ಮ ಮತ್ತು ರಾಜಕಾರಣದ ಸಂಬಂಧಗಳು ವ್ಯಕ್ತವಾಗುತ್ತವೆ.

ಮೊದಲಿಗೆ ತಲಕಾಡಿನ ಗಂಗರು ಪಲ್ಲವರ ಸಾಮಂತರಾಗಿದ್ದರು. ತೊಣ್ಣೂರು ಗಂಗವಾಡಿಯ ಕೇಂದ್ರಭಾಗದಲ್ಲಿರುವುದು ಗಮನಾರ್ಹ. ಗಂಗರ ಆಡಳಿತ ವಿಭಾಗಗಳಲ್ಲಿ ಗುರುತಿಸಿರುವ ತೊಂಡವಾಡಿ ಅಥವ ತೊಂಡನಾಡಿನ ಆಡಳಿತ ಕೇಂದ್ರವನ್ನು ತೊಂಡನೂರು ಎಂದು ಗುರುತಿಸಲಾಗಿದೆ. ಅಲ್ಲದೇ ಈ ಊರಿನ ಪರಿಸರದಲ್ಲಿ ಗಂಗರ ಶಾಸನಗಳು ಕಂಡುಬಂದಿವೆ. ಇತ್ತೀಚೆಗೆ ನಂಬಿನಾರಾಯಣ ದೇವಾಲಯದಲ್ಲಿ ನಡೆದ ಸಂರಕ್ಷಣೆಯ ಕೆಲಸದ ಸಂದರ್ಭದಲ್ಲಿ ಗಂಗರ ಕಾಲದ ವೀರಗಲ್ಲು ಶಾಸನವೊಂದು ದೊರೆತಿದೆ. ತಲಕಾಡಿನ ಗಂಗರ ಕಾಲಕ್ಕಾಗಲೇ ತೊಣ್ಣೂರು ವ್ಯವಸ್ಥಿತವಾಗಿ ನೆಲೆಗೊಂಡಿತ್ತೆಂಬುದಕ್ಕೆ ಸ್ಪಷ್ಟ ಆಧಾರ. ಈಗಿನ ತೊಣ್ಣೂರು ಗ್ರಾಮದ ದಕ್ಷಿಣಕ್ಕೆ ಅಂದರೆ ಹಾರುವರ ಕಟ್ಟೆಯ ದಕ್ಷಿಣಕ್ಕೆ ಪ್ರಾಚೀನ ತೊಣ್ಣೂರು ಗ್ರಾಮವಿತ್ತೆಂದು ಗ್ರಹಿಸಲು ಆಧಾರಗಳಿವೆ. ಮೆಟ್ಟಾರೆ ಎಂದು ಕರೆಯುವ (ಪಾಂಡವಪುರಕ್ಕೆ ಹೋಗುವ ರಸ್ತೆ) ಸ್ಥಳದಲ್ಲಿ ಹಿಂದೆ ಕಲ್ಲಿನ ಹಾಸಿನ ರಸ್ತೆ ಇತ್ತು. ಇದು ಕ್ರಮೇಣ ಮಣ್ಣಿನಲ್ಲಿ ಮುಚ್ಚಿಹೋಗಿದೆ. ಈ ರಸ್ತೆಯ ಅಂಚಿನಲ್ಲಿ ನೆಟ್ಟಿರುವ ವೀರಗಲ್ಲು, ಮಾಸ್ತಿಗಲ್ಲು ಮತ್ತು ಬಲಿದಾನದ ಸ್ಮಾರಕ ಶಿಲೆಗಳು ಕಂಡುಬರುತ್ತವೆ. ಸಾಮಾನ್ಯವಾಗಿ ಇಂತಹ ಸ್ಮಾರಕ ಶಿಲೆಗಳನ್ನು ಊರ ಮುಂಭಾಗದಲ್ಲಿ ಅಥವಾ ಶಿವಾಲಯದ ಮುಂಭಾಗದಲ್ಲಿ ನೆಡುವ ಪದ್ಧತಿ ಪ್ರಾಚೀನ ಕರ್ನಾಟಕದಲ್ಲಿ ರೂಢಿಯಲ್ಲಿತ್ತು. ಇದರಿಂದ ಈ ಸ್ಮಾರಕ ಶಿಲೆಗಳನ್ನು ನೆಟ್ಟಿರುವಲ್ಲಿ ಗ್ರಾಮನೆಲೆ ಇತ್ತೆಂಬುದು ಸ್ಪಷ್ಟವಾಗುತ್ತದೆ. ತೊಣ್ಣೂರಿನಲ್ಲಿ ದೊರೆಯುವ ಬಹುತೇಕ ವೀರಗಲ್ಲು, ಮಾಸ್ತಿಗಲ್ಲು ಮತ್ತು ಬಲಿದಾನದ ಕಲ್ಲುಗಳನ್ನು ಕಾಲಮಾನದ ದೃಷ್ಟಿಯಿಂದ ಹೊಯ್ಸಳರ ಪೂರ್ವಕಾಲಕ್ಕೆ ನಿರ್ದೇಶಿಸಬಹುದಾಗಿದೆ. ಏಕೆಂದರೆ ಈ ಸ್ಮಾರಕ ಶಿಲೆಗಳು ಕಣಶಿಲೆಯ ಒರಟು ರಚನೆಗಳಾಗಿವೆ.

ತೊಣ್ಣೂರು ಆಯಕಟ್ಟಿನ ಸ್ಥಳದಲ್ಲಿದ್ದು, ಸಂಮೃದ್ಧವಾದ ನೈಸರ್ಗಿಕ ಸಂಪನ್ಮೂಲವನ್ನು ಹೊಂದಿದೆ. ಅಲ್ಲದೇ ಬೆಟ್ಟಗುಡ್ಡಗಳ ಪರಿಸರವು ಇರುವುದರಿಂದ ಆಗಾಗ್ಗೆ ಕಳ್ಳಕಾಕರ ಅಥವಾ ಯುದ್ಧದ ದಾಳಿಗಳು ಇಲ್ಲಿ ನಡೆದಿರುವ ಬಗ್ಗೆ ಸೂಚನೆಗಳು ದೊರೆಯುತ್ತವೆ. ಸಮೀಪದ ಚಂದ್ರೆ ಗ್ರಾಮದಲ್ಲಿ ಅಸಂಖ್ಯಾತ ವೀರಗಲ್ಲುಗಳಿವೆ. ಈ ಗ್ರಾಮದ ಪರಿಸರವು ಬೆಟ್ಟಗುಡ್ಡಗಳಿಂದ ಕೂಡಿದೆ. ಇದರಿಂದ ಸ್ಪಷ್ಟವಾಗುವುದೇನೆಂದರೆ ಬೆಟ್ಟಗುಡ್ಡದ ಪರಿಸರದಲ್ಲಿರುವ ಗ್ರಾಮಗಳಲ್ಲಿ ಆಗಾಗ್ಗೆ ಕಳ್ಳಕಾಕರ ಹಾವಳಿ ತೀವ್ರವಾಗಿತ್ತು ಎಂಬುದು. ಇಲ್ಲಿನ ಬಲಿದಾನದ ಸ್ಮಾರಕ ಶಿಲೆ ಅಪರೂಪದ್ದು. ಮೂವರು ಶೂಲಗಳ ಮೇಲೆ ಬಿದ್ದು ಬಲಿದಾನ ಮಾಡಿಕೊಂಡಿದ್ದಾರೆ. ಸ್ಥಳೀಯ ಸಾಂಸ್ಕೃತಿಕ ಚರಿತ್ರೆಯ ಅಧ್ಯಯನದ ಸಂದರ್ಭದಲ್ಲಿ ಇದು ಮಹತ್ವದ ಉದಾಹರಣೆ. ಆದರೆ ಇಂದು ಕೃಷಿ ಚಟುವಟಿಕೆಯ ಪರಿಣಾಮವಾಗಿ ಈ ಎಲ್ಲ ಸ್ಮಾರಕ ಅವಶೇಷಗಳು ಸ್ಥಳಾಂತರಗೊಳ್ಳುತ್ತಿವೆ. ಹೀಗೆ ಪ್ರಾಚೀನ ತೊಣ್ಣೂರು ತನ್ನ ಮೂಲ ನೆಲೆಯನ್ನು ಬಿಟ್ಟು, ಉತ್ತರ ದಿಕ್ಕಿಗೆ ಅರ್ಧಫರ್ಲಾಂಗ್ ಅಂತರದಲ್ಲಿರುವ ಈಗಿನ ತೊಣ್ಣೂರು ಗ್ರಾಮಕ್ಕೆ ಸ್ಥಳಾಂತರಗೊಂಡಿರುವುದು ಸುಸ್ಪಷ್ಟ. ಈ ಸ್ಥಳಾಂತರ ಬಹುಶಃ ತೊಣ್ಣೂರು ಅಗ್ರಹಾರದ ಅವನತಿ ನಂತರ ಆಗಿರಬಹುದೇ? ಈ ಕುರಿತು ಹೆಚ್ಚಿನ ಅಧ್ಯಯನ ನಡೆಯಬೇಕಿದೆ. ತೊಣ್ಣೂರು ಕ್ರಿ.ಶ.೧೮೩೧ರಿಂದ ೧೮೮೧ರವರೆಗಿನ ಕಮಿಷನರುಗಳ ಆಡಳಿತದ ಅವಧಿಯಲ್ಲಿ ತಾಲೂಕು ಕೇಂದ್ರವಾಗಿತ್ತೆಂದು ತಿಳಿದು ಬರುತ್ತದೆ.

ಹೊಯ್ಸಳರ ಅವನತಿಯ ಬೆನ್ನಲ್ಲೇ ತೊಣ್ಣೂರಿಗೆ ಇಸ್ಲಾಂ ಧರ್ಮದ ಆಗಮನವಾಯಿತು. ಅಗ್ರಹಾರದ ನೈರುತ್ಯ ಗಡಿಯಲ್ಲಿದ್ದ ನಖರೇಶ್ವರ ದೇವಾಲಯದ ಆವರಣದಲ್ಲಿ ಸೂಫಿ ಸಂತ ಸಮಾಧಿಯಾದನು. ಇದೆಲ್ಲ ಅಗ್ರಹಾರದ ಅವನತಿಯನ್ನು ಸೂಚಿಸುತ್ತವೆ. ಆರಂಭದಲ್ಲಿ ತೊಣ್ಣೂರು ಅನಾದಿ ಅಗ್ರಹಾರವಾಗಿದ್ದು, ಶೈವ ಪರಂಪರೆಗೆ ಸಂಬಂಧಿಸಿತ್ತೆಂದು ಗುರುತಿಸಲಾಗಿದೆ. ರಾಮಾನುಜರ ಆಗಮನದ ನಂತರ ತೊಣ್ಣೂರು ಅಗ್ರಹಾರ ಯಾದವ ನಾರಾಯಣ ಚರ್ತುವೇದಿ ಮಂಗಲ ಎಂದು ಕರೆಸಿಕೊಂಡು ಮಹತ್ವದ ಸ್ಥಾನ ಪಡೆದಂತೆ ಕಾಣುತ್ತದೆ. ರಾಮಾನುಜಾಚಾರ್ಯರು ಇಲ್ಲಿ ಬಹುಕಾಲ ನೆಲೆಸಿದ್ದರು. ನಂತರ ಮೇಲುಕೋಟೆಗೆ ಪ್ರಯಾಣಿಸಿದರು. ಹಾಗಾಗಿ ತೊಣ್ಣೂರು ಇಂದಿಗೂ ಶ್ರೀ ವೈಷ್ಣವರ ಪ್ರಮುಖ ಧಾರ್ಮಿಕ ಸ್ಥಳವೆನಿಸಿದೆ. ಇಲ್ಲಿನ ಐತಿಹ್ಯಗಳು ತೊಣ್ಣೂರು ಹೊಯ್ಸಳರ ಉಪರಾಜಧಾನಿಯಾಗಿತ್ತು, ವಿಷ್ಣುವರ್ಧನ ಇಲ್ಲಿ ಆಳುತ್ತಿದ್ದನು ಇತ್ಯಾದಿಯಾಗಿ ಹೊಯ್ಸಳರೊಂದಿಗಿನ ಸಂಬಂಧಗಳನ್ನು ಕುರಿತಿವೆ.

ಇಲ್ಲಿನ ಶಾಸನಗಳಲ್ಲಿ ಹೆಚ್ಚಿನವು ತಮಿಳು ಭಾಷೆಯಲ್ಲಿವೆ. ಕನ್ನಡದ ಶಾಸನಗಳು ಬೆರಳೆಣಿಕೆಯಷ್ಟಿವೆ. ಪ್ರಾಚೀನ ಶಾಸನವೆಂದರೆ ಗಂಗರ ಕಾಲದ ವೀರಗಲ್ಲು ಶಾಸನ. ಗಂಗರ ಕಾಲದ ವೀರಗಲ್ಲು ಶಾಸನವು ಹೊಯ್ಸಳಪೂರ್ವ ತೊಣ್ಣೂರಿನ ಚಾರಿತ್ರಿಕ ಮಹತ್ವವನ್ನು ಶ್ರುತಪಡಿಸುತ್ತದೆ. ನಂತರದ ಹೊಯ್ಸಳರ ಕಾಲದ ತಮಿಳು ಶಾಸನಗಳು, ತಮ್ಮ ಭಾಷಿಕ ಮತ್ತು ಧಾರ್ಮಿಕ ಪ್ರಭಾವವನ್ನು ತೊಣ್ಣೂರಿನಲ್ಲಿ ನೆಲೆಗೊಳಿಸಿಕೊಂಡದ್ದನ್ನು ಪರೋಕ್ಷವಾಗಿ ನಿರೂಪಿಸುತ್ತವೆ. ಇಲ್ಲಿನ ಶಾಸನಗಳು, ದೇವಾಲಯದಲ್ಲಿ ನಡೆಯುತ್ತಿದ್ದ ಪೂಜೆಪುರಸ್ಕಾರಗಳು ಹಾಗೂ ಅವುಗಳಿಗೆ ನೀಡಿದ ದಾನದತ್ತಿಗಳನ್ನು ಕುರಿತು ತಿಳಿಸುತ್ತವೆ. ಜೊತೆಗೆ ವಾಸ್ತು ನಿರ್ಮಾಣಗಳನ್ನು ಕುರಿತು ಮಾಹಿತಿ ನೀಡುತ್ತವೆ. ಮೈಸೂರು ಒಡೆಯರ ಕಾಲದ ಬಹುದೀರ್ಘವಾದ ತಾಮ್ರಶಾಸನ ಸಂಸ್ಕೃತ ಭಾಷೆಯಲ್ಲಿದೆ. ಈ ಶಾಸನವು, ತೊಣ್ಣೂರು ಅಗ್ರಹಾರದ ಜೀರ್ಣೋದ್ಧಾರಕ್ಕೆ ಕೈಗೊಂಡ ಒಡೆಯರ ಪ್ರಯತ್ನವನ್ನು ವಿವರವಾಗಿ ನೀಡುತ್ತದೆ. ಪ್ರಾಚೀನ ಕರ್ನಾಟಕದಲ್ಲಿನ ಅಗ್ರಹಾರಗಳ ಸ್ವರೂಪವನ್ನು ಅರ್ಥಮಾಡಿಕೊಳ್ಳಲು ಇದು ನೆರವಾಗುತ್ತದೆ. ಮೈಸೂರು ಒಡೆಯರು ಈ ಶಾಸನದಲ್ಲಿ ಹೊಯ್ಸಳರನ್ನು ಸ್ಮರಿಸುತ್ತಾರೆಯೇ ಹೊರತು ವಿಜಯನಗರದ ಅರಸರನ್ನು ಎಲ್ಲಿಯೂ ಪ್ರಸ್ತಾಪ ಮಾಡುವುದಿಲ್ಲ. ತೊಣ್ಣೂರಿನ ಶಾಸನಗಳು ಮುಖ್ಯವಾಗಿ ಸಾಂಸ್ಕೃತಿಕ ಅಧ್ಯಯನದ ಆಕರಗಳಾಗಿವೆ. ತೊಣ್ಣೂರಿನ ದೇವಾಲಯಗಳ ವಿಸ್ತೃತ ಭಾಗಗಳ ನಿರ್ಮಾಣದ ಕಾಲಮಾನವನ್ನು ನಿರ್ಧರಿಸಲು ಇಲ್ಲಿನ ಶಾಸನಗಳು ಸಹಾಯಕವಾಗಿವೆ. ಆದರೆ ಮೂಲದೇವಾಲಯಗಳ ನಿರ್ಮಾಣ ಮತ್ತು ಕೆಲವು ಪ್ರಮುಖ ವಿಷಯಗಳನ್ನು ಕುರಿತಂತೆ ಮಾಹಿತಿ ದೊರೆಯುವುದಿಲ್ಲ. ಉದಾಹರಣೆಗೆ ರಾಮಾನುಜಾಚಾರ್ಯರ ಆಗಮನ, ಕೆರೆಯ ನಿರ್ಮಾಣ ಮೊದಲಾದ ವಿಷಯಗಳನ್ನು ಕುರಿತು ಇನ್ನು ಜಿಜ್ಞಾಸೆ ನಡೆದಿದೆ. ಹಾಗೆಂದು ಎಲ್ಲಾ ಮಾಹಿತಿಗಳನ್ನು ಶಾಸನ ಸಾಹಿತ್ಯದಿಂದಲೇ ನಿರೀಕ್ಷಿಸಲಾಗದು. ಸಮಕಾಲೀನ ಸಾಹಿತ್ಯ ಕೃತಿಗಳು, ಮೌಖಿಕ ಆಕರಗಳು ಮತ್ತು ಇನ್ನಿತರ ಮೂಲಗಳಿಂದ ಪಡೆಯುವ ಪ್ರಯತ್ನವನ್ನು ಮಾಡಬಹುದು.

ಇಲ್ಲಿನ ದೇವಾಲಯಗಳು ತೊಣ್ಣೂರಿನ ಪ್ರಮುಖ ಆಕರ್ಷಣೆಯಾಗಿವೆ. ಇಂದಿಗೂ ಪೂಜೆಪುರಸ್ಕಾರಗಳು ನಡೆಯುತ್ತಿವೆ. ಹೊಯ್ಸಳರ ಕಾಲದಲ್ಲಿ ನಿರ್ಮಾಣಗೊಂಡ ಈ ದೇವಾಲಯಗಳು ಹೆಚ್ಚು ತಮಿಳು ವಾಸ್ತು ಪರಂಪರೆಯಲ್ಲೇ ಮೈದಳೆದಿವೆ. ಸಾಮಾನ್ಯವಾಗಿ ಹೊಯ್ಸಳರ ದೇವಾಲಯಗಳು ನಕ್ಷತ್ರಾಕಾರದ ಜಗತಿಯ ಮೇಲೆ ಬಳಪದ ಕಲ್ಲಿನಲ್ಲಿ ನಿರ್ಮಾಣಗೊಂಡಿವೆ. ಹಾಗು ಸೂಕ್ಷ್ಮ ಅಲಂಕರಣದಿಂದ ಕೂಡಿರುತ್ತವೆ. ಆದರೆ ಪ್ರಸ್ತುತ ತೊಣ್ಣೂರಿನ ದೇವಾಲಯಗಳು ಹೊಯ್ಸಳರ ಕಾಲದ ರಚನೆಗಳಾದರೂ ಕಣಶಿಲೆಯ ನಿರ್ಮಾಣಗಳಾಗಿವೆ. ಚೋಳ ಮತ್ತು ಹೊಯ್ಸಳ ಶೈಲಿಯ ವಾಸ್ತು ಲಕ್ಷಣಗಳಿಂದ ಕೂಡಿವೆ. ತೊಣ್ಣೂರಿನ ದೇವಾಲಯಗಳ ನಿರ್ಮಾಣದಲ್ಲಿ ಹೊಯ್ಸಳ-ದ್ರಾವಿಡ ಮತ್ತು ಚೋಳ-ದ್ರಾವಿಡ ಶೈಲಿಗಳನ್ನು ಗುರುತಿಸಲಾಗಿದೆ. ತೊಣ್ಣೂರು ಪರಿಸರದಲ್ಲಿ ಕಣಶಿಲೆ ಯಥೇಚ್ಛವಾಗಿ ದೊರೆಯುತ್ತದೆ. ಆ ಕಾಲಕ್ಕೆ ತಮಿಳುನಾಡಿನ ಶಿಲ್ಪಿಗಳು ದೇವಾಲಯಗಳನ್ನು ಹೆಚ್ಚಾಗಿ ಕಣಶಿಲೆಯಲ್ಲೇ ನಿರ್ಮಿಸುವ ಅನುಭವವನ್ನು ಪಡೆದಿದ್ದರು. ದೇವಾಲಯಗಳ ತಾಳಿಕೆ-ಬಾಳಿಕೆ ಮತ್ತು ಪೂಜಾ ಕೈಂಕರ್ಯಗಳ ಹಿನ್ನೆಲೆಯಲ್ಲಿ ಕಣಶಿಲೆಯನ್ನು ಬಳಸಿರಬಹುದು. ಗಾತ್ರ ಮತ್ತು ಭವ್ಯತೆಯ ದೃಷ್ಟಿಯಿಂದಲೂ ಕಠಿಣ ಹಾಗೂ ಒರಟಾದ ಕಣಶಿಲೆಯನ್ನು ದೇವಾಲಯಗಳ ನಿರ್ಮಾಣಕ್ಕೆ ಬಳಸಿರುವ ಸಾಧ್ಯತೆ ಇದೆ. ಅಲ್ಲದೆ ಈ ಪ್ರದೇಶವು ದೀರ್ಘಕಾಲ ಚೋಳರ ವಶದಲ್ಲಿದ್ದ ಪರಿಣಾಮವಾಗಿ ಒಮ್ಮೆಲೇ ಚೋಳ ವಾಸ್ತುಶೈಲಿ ಮತ್ತು ಸಾಮಗ್ರಿಯನ್ನು ನಿರಾಕರಿಸುವುದು ಅಸಾಧ್ಯವಾಗಿರಬಹುದು. ಆ ಕಾಲಕ್ಕೆ ಪ್ರಸಿದ್ಧ ವೈಷ್ಣವ ದೇವಾಲಯಗಳೆಲ್ಲ ಕಣಶಿಲೆಯಲ್ಲೆ ನಿರ್ಮಾಣಗೊಂಡಿದ್ದುದು ಗಮನಾರ್ಹ.  ಈ ಮೇಲಿನ ಕಾರಣಗಳಿಂದ ಕಣಶಿಲೆಯನ್ನು ದೇವಾಲಯಗಳ ನಿರ್ಮಾಣದಲ್ಲಿ ಬಳಸಿರಬಹುದು. ನಂಬಿನಾರಾಯಣ ದೇವಾಲಯದ ನವರಂಗದಲ್ಲಿ ಹೊಯ್ಸಳ ಶೈಲಿಯ ನಾಲ್ಕು ಕಂಬಗಳನ್ನು ಅಳವಡಿಸಿದ್ದಾರೆ. ಬಹುಶಃ ಇದು, ದೇವಾಲಯವು ಹೊಯ್ಸಳರ ಕಾಲದ ನಿರ್ಮಾಣವೆಂಬ ಸಂದೇಶವನ್ನು ಕೊಡುವುದಾಗಿದೆ.

ಪ್ರಸ್ತುತ ತೊಣ್ಣೂರಿನ ದೇವಾಲಯಗಳು ರಾಜ್ಯ ಮತ್ತು ಕೇಂದ್ರ ಪುರಾತತ್ವ ಇಲಾಖೆಗಳ  ಸಂರಕ್ಷಣೆಯಲ್ಲಿವೆ. ನಂಬಿನಾರಾಯಣ ದೇವಾಲಯವು ಭಾರತೀಯ ಪುರಾತತ್ವ ಸರ್ವೇಕ್ಷಣೆಯ ಸಂರಕ್ಷಣೆಯಲ್ಲಿದೆ. ಕೃಷ್ಣ ದೇವಾಲಯದ ಹೊರ ಪ್ರಾಕಾರದ ಗೋಡೆ ಬಿದ್ದು ಹೋಗಿದ್ದ ಸಂದರ್ಭದಲ್ಲಿ ರಾಜ್ಯ ಪುರಾತತ್ವ ಇಲಾಖೆ ಜೀರ್ಣೋದ್ಧಾರ ಮಾಡಿತು. ಇತ್ತೀಚೆಗೆ ಕೈಲಾಸೇಶ್ವರ ದೇವಾಲಯದ ಜೀರ್ಣೋದ್ಧಾರ ಕಾರ್ಯವನ್ನು ಕೈಗೊಳ್ಳುವ ಮೂಲಕ ತೊಣ್ಣೂರಿನ ಸ್ಮಾರಕಗಳ ಸಂರಕ್ಷಣೆಗೆ ಮುಂದಾಗಿದೆ. ಇನ್ನು ಗುಡ್ಡದ ಮೇಲಿರುವ ನರಸಿಂಹ ದೇವಾಲಯವು ಸಹ ಜೀರ್ಣೋದ್ಧಾರಗೊಂಡು, ಒಳಭಾಗವನ್ನು ನವೀಕರಿಸಲಾಗಿದೆ. ಇಲ್ಲಿರುವ ದರ್ಗವು ವಕ್ಫ್ ಮಂಡಳಿಯ ಆಶ್ರಯದಲ್ಲಿದ್ದು ಸುಸ್ಥಿತಿಯಲ್ಲಿದೆ. ಹೀಗೆ ತೊಣ್ಣೂರಿನ ಸ್ಮಾರಕಗಳು ಪುರಾತತ್ವ ಇಲಾಖೆಗಳ ಆಸಕ್ತಿಯಿಂದಾಗಿ  ಸುಸ್ಥಿತಿಯಲ್ಲಿವೆ.

ಇನ್ನು ತೊಣ್ಣೂರಿನ ದೇವಾಲಯಗಳಲ್ಲಿ ಕಂಡುಬರುವ ಹೆಚ್ಚಿನ ಶಿಲ್ಪಗಳನ್ನು ತಮಿಳು ಸಂಪ್ರದಾಯದ ಶಿಲ್ಪಿಗಳು ರಚಿಸಿದ್ದಾರೆ. ಈ ಶಿಲ್ಪಗಳು ಲಕ್ಷಣದಲ್ಲಿ ಗಿಡ್ಡಗಿದ್ದು ಒರಟಾಗಿವೆ. ಆದರೆ ನಂಬಿನಾರಾಯಣನ ಮೂರ್ತಿಯು ಹೊಯ್ಸಳ ಶೈಲಿಯಲ್ಲಿದೆ.  ಕೃಷ್ಣ ದೇವಾಲಯದ ಶಿಲ್ಪಗಳಂತೂ ಸಂಪೂರ್ಣವಾಗಿ ತಮಿಳು ಪರಂಪರೆಯವು. ಇನ್ನು ಕೈಲಾಸೇಶ್ವರ  ದೇವಾಲಯದ ನಂದಿ ಹೊಯ್ಸಳ ಶೈಲಿಯದು. ವಿಜಯನಗರ ಕಾಲದಲ್ಲೂ ಮೂರ್ತಿಶಿಲ್ಪಗಳು ರಚನೆಗೊಂಡಿವೆ. ಹೀಗಾಗಿ ತೊಣ್ಣೂರಿನಲ್ಲಿ ಹೊಯ್ಸಳ ಮತ್ತು ವಿಜಯನಗರ ಶೈಲಿಯ ಬಿಡಿ ಮತ್ತು ಉಬ್ಬುಶಿಲ್ಪಗಳನ್ನು ಗುರುತಿಸಬಹುದಾಗಿದೆ. ಇಲ್ಲಿನ ಕೈಲಾಸೇಶ್ವರ ಗುಡಿಗೆ ಸೇರಿದ ಪಾರ್ವತಿ ದೇವಿಯ ಶಿಲ್ಪ, ಶ್ರೀರಂಗಪಟ್ಟಣದ ಗಂಗಾಧರೇಶ್ವರ  ದೇವಾಲಯಕ್ಕೆ ಸ್ಥಳಾಂತರವಾಗಿರುವುದಾಗಿ ಸ್ಥಳೀಯರು ತಿಳಿಸುತ್ತಾರೆ. ಗ್ರಾಮೀಣ ಭಾಗದ ಮೂರ್ತಿಶಿಲ್ಪಗಳು ನಗರಗಳೆಡೆಗೆ ಸ್ಥಳಾಂತರಗೊಳ್ಳುವುದು ಸಾಮಾನ್ಯ ಸಂಗತಿ. ಸಮೀಪದ ತಿರುಮಲಸಾಗರಛತ್ರ ಗ್ರಾಮಕ್ಕೆ ಸೇರಿದ ವೆಂಕಟರಮಣಸ್ವಾಮಿ ಇಂದು ಮೈಸೂರಿನ ಒಂಟಿಕೊಪ್ಪಲಿನಲ್ಲಿ ನೆಲೆಗೊಂಡಿದೆ. ಇಲ್ಲಿ ದೇವರ ಜೊತೆಗೆ ದೇವಾಲಯವು ಸಹ ಸ್ಥಳಾಂತರಗೊಂಡಿದೆ. ಹಿಂದೆ ದೇವರು ಮತ್ತು ದೇವಾಲಯಗಳ ಸ್ಥಳಾಂತರಕ್ಕೆ ಸ್ಥಳೀಯರಿಂದ ಯಾವುದೇ ವಿರೋಧವಿರಲಿಲ್ಲ. ಆದರೆ ಇಂದು ಗ್ರಾಮೀಣ ಭಾಗಗಳಲ್ಲಿ ಜನರು ಪ್ರಾಚೀನ ಸ್ಮಾರಕಗಳ ಬಗ್ಗೆ ಅಭಿಮಾನದ ಎಚ್ಚರವನ್ನು ಹೊಂದಿದ್ದಾರೆ. ತಮ್ಮ ಊರಿನ ಯಾವುದೇ ಶಿಲ್ಪಾವಶೇಷಗಳನ್ನು ಕದಲಿಸಲು ಸಮ್ಮತಿಸುವುದಿಲ್ಲ. ಅವುಗಳಿಂದಲೇ ಮಳೆ-ಬೆಳೆ ಎಂದು ನಂಬಿ ಬದುಕುತ್ತಿದ್ದಾರೆ. ಈ ಸ್ಥಳಾಂತರಗಳು ಸ್ಥಳೀಯ ಇತಿಹಾಸವನ್ನು ಮರೆಮಾಚುತ್ತವೆ. ಕಣ್ಮರೆಯಾದ ಸ್ಮಾರಕಗಳು ಐತಿಹ್ಯದ ವಸ್ತುಗಳಾಗಿ ಪರಿಣಮಿಸಿವೆ. ಗ್ರಾಮೀಣ ಪ್ರದೇಶದಲ್ಲಿ ದೇವಾಲಯಗಳು, ಮೂರ್ತಿಶಿಲ್ಪಗಳು, ಕೆರೆಕಟ್ಟೆಗಳು ಮತ್ತು ಕೋಟೆಕೊತ್ತಲಗಳು ನಶಿಸುತ್ತಿವೆ. ಕೃಷಿ ವಿಸ್ತರಣೆ, ಬಡತನ, ಮೌಢ್ಯ ಮತ್ತು ನಿಧಿಗಳ್ಳರ ಕೃತ್ಯಗಳಿಗೆ ಒಳಗಾಗಿ ಎಷ್ಟೋ ಸ್ಮಾರಕ ಅವಶೇಷಗಳು ಕಣ್ಮರೆಯಾಗಿವೆ. ಪ್ರಾಚ್ಯಾವಶೇಷಗಳ ಸಂರಕ್ಷಣೆ ಮತ್ತು ಮಹತ್ವವನ್ನು ಜನಸಾಮಾನ್ಯರಿಗೆ ತಿಳಿಸುವ ಪ್ರಯತ್ನಗಳು ನಡೆಯುತ್ತಿರುವುದು ಸಂತಸದ ಸಂಗತಿ.

ಪ್ರಾಚೀನ ಕಾಲದ ಕೆರೆಕಟ್ಟೆಗಳು ಇಂದಿಗೂ ಗ್ರಾಮೀಣ ಭಾಗದಲ್ಲಿ ಜೀವನಾಡಿಗಳಾಗಿವೆ. ತೊಣ್ಣೂರಿನಲ್ಲಿ ಕೆರೆಗಳು, ಸಣ್ಣಕಟ್ಟೆಗಳು, ಬಾವಿ, ಕೊಳ ಮೊದಲಾದ ನೀರಿನ ತಾಣಗಳು ಚಾರಿತ್ರಿಕ ಮಹತ್ವವನ್ನು ಪಡೆದಿವೆ. ಅಗ್ರಹಾರಗಳ ನಿರ್ಮಾಣ ಅಲ್ಲಿ ದೊರೆಯುವ ಜಲ ಸಂಪನ್ಮೂಲವನ್ನು ಆಧರಿಸುತ್ತಿತ್ತು. ನೀರಿನ ಸೌಲಭ್ಯ ಹೊಂದಿದ ಪರಿಣಾಮವಾಗಿ ತೊಣ್ಣೂರಿನಲ್ಲಿ ಅಗ್ರಹಾರ ಸ್ಥಾಪಿತಗೊಂಡು ಗುಡಿಗುಂಡಾರಗಳು ನಿರ್ಮಾಣಗೊಂಡವು. ಇಲ್ಲಿನ ಕೆರೆ (ಮೋತಿತಲಾಬ್)ನಿರ್ಮಾಣದ ಕಾಲವನ್ನು ಕುರಿತಂತೆ ಸಾಕಷ್ಟು ಜಿಜ್ಞಾಸೆಗಳು ನಡೆದಿವೆ. ಊರಿನ ಸುತ್ತಮುತ್ತ ಸಣ್ಣಕೆರೆಗಳನ್ನು ಕಾಣಬಹುದು. ಇವು ದೈನಂದಿನ ಚಟುವಟಿಕೆಗಳಿಗೆ ಬಳಕೆಗೊಳ್ಳುತ್ತಿದ್ದವು. ಇತ್ತೀಚಿನ ದಿನಗಳಲ್ಲಿ ಕೆರೆಗಳ ಒತ್ತುವರಿಯಿಂದ ಅವುಗಳ ಅಸ್ತಿತ್ವಕ್ಕೆ ಧಕ್ಕೆ ಬಂದಿದೆ. ಇದರಿಂದಾಗಿ ಬರಗಾಲ ಇನ್ನೂ ತೀವ್ರಗೊಳ್ಳಲು ಕಾರಣವಾಗಿದೆ. ಸಕಲ ಜೀವರಾಶಿಗಳಿಗೆ ಕೆರೆಗಳು ಆಶ್ರಯತಾಣಗಳಾಗಿದ್ದು, ಕೆರೆ ಮತ್ತು ಅದರ ಪರಿಸರವನ್ನು ಸಂರಕ್ಷಿಸುವ ಅಗತ್ಯ ನಮ್ಮ ಮುಂದಿದ್ದು, ಸರ್ಕಾರ ಕಾರ್ಯೋನ್ಮುಖ ವಾಗಬೇಕಿದೆ. ತೊಣ್ಣೂರಿನ ಹಾರುವರ ಕಟ್ಟೆಯು ಊರಿನ ಮುಂಭಾಗದಲ್ಲಿದ್ದು, ಇಂದು ಅದನ್ನು ಮುಚ್ಚಿ ಆಸ್ಪತ್ರೆ ನಿರ್ಮಿಸಿದ್ದಾರೆ. ಇದು ಮೊದಲಿಗೆ ಊರಿನ ಜನ ಮತ್ತು ಪ್ರಾಣಿಗಳ ಶೌಚಕ್ಕೆ ಬಳಕೆಗೊಳ್ಳುತ್ತಿತ್ತು. ಪ್ರಾಚೀನ ನೀರಾವರಿ ತಂತ್ರಜ್ಞಾನವನ್ನು ಅರಿಯಲು ತೊಣ್ಣೂರು ಕೆರೆ ಪ್ರಶಸ್ತವಾಗಿದೆ.

ಬಸದಿ, ಮಂದಿರ ಮತ್ತು ದರ್ಗಗಳನ್ನು ಒಳಗೊಂಡಿದ್ದ ತೊಣ್ಣೂರು ಹಿಂದೆ ಮತಪಂಥಗಳ ಸಂಘರ್ಷದ ಅನುಭವಗಳನ್ನು ಪಡೆದುಕೊಂಡಿದೆ ಎನ್ನಬಹುದು. ಆದರೆ ಇಂದು ಧಾರ್ಮಿಕ ಸಹಬಾಳ್ವೆಯ ಆದರ್ಶ ಗ್ರಾಮ. ಊರಿನಲ್ಲಿ ಹಿಂದೂ-ಮುಸ್ಲೀಮರು ಸಹೋದರರಂತೆ ಬಾಳುತ್ತಿದ್ದಾರೆ. ಇಲ್ಲಿ ನಡೆಯುವ ಜಾತ್ರೆಗಳಲ್ಲಿ ಮುಸ್ಲೀಮರು ಭಾಗವಹಿಸುತ್ತಾರೆ. ಆದೇ ರೀತಿ ಉರುಸ್ ಕಾರ್ಯಕ್ರಮದಲ್ಲಿ ಹಿಂದುಗಳು ಭಾಗವಹಿಸುತ್ತಾರೆ. ಉಳಿದಂತೆ ಎಲ್ಲ ಜಾತಿಯವರು ಇದ್ದು, ತಮ್ಮ ತಮ್ಮ ವೃತ್ತಿಯಲ್ಲಿ ತೊಡಗಿದ್ದಾರೆ. ಊರಿನಲ್ಲಿರುವ ಎಲ್ಲಾ ಕುಟುಂಬಗಳು ಸಣ್ಣ ಹಿಡುವಳಿದಾರರಾಗಿದ್ದು, ಸಮಾನ ನೆಲೆಯಲ್ಲಿ ಬದುಕುತ್ತಿದ್ದಾರೆ. ಹಾಗಾಗಿ ಶೋಷಣೆ, ಜೀತ, ಬಹಿಷ್ಕಾರ ಮತ್ತು ಅಸ್ಪೃಶ್ಯತಾಚರಣೆಯಂತಹ ಯಾವುದೇ ಸಾಮಾಜಿಕ ಅನಿಷ್ಟಗಳು ಇಲ್ಲಿಲ್ಲ.

ದೇವಾಲಯಗಳು, ಕೆರೆಕಟ್ಟೆಗಳು ಮತ್ತಿತರ ಪ್ರಾಚ್ಯಾವಶೇಷಗಳನ್ನು ಹೊಂದಿರುವ ತೊಣ್ಣೂರು ಶ್ರೀಮಂತವಾದ ಜನಪದ ಸಾಹಿತ್ಯವನ್ನು ತನ್ನಲ್ಲಿ ತುಂಬಿಕೊಂಡಿದೆ. ಮೂಲತಃ  ಶಿಷ್ಟಪರಂಪರೆಯ ತೊಣ್ಣೂರು ಇಂದು ಕೃಷಿಕರು ಮತ್ತು ಕುಶಲಕರ್ಮಿಗಳಿಂದ ತುಂಬಿದ್ದು, ಜನಪದ ಸಾಹಿತ್ಯದ ವಿವಿಧ ಪ್ರಕಾರಗಳ ಸೃಷ್ಟಿಗೆ ಕಾರಣವಾಗಿದೆ. ಜನಪದಗೀತೆ, ದೇವತೆಗಳನ್ನು ಕುರಿತ ಹಾಡುಗಳು, ಕೃಷಿಗೆ ಸಂಬಂಧಿಸಿದ ಹಾಡುಗಳು, ಮದುವೆ ಹಾಡುಗಳು, ತತ್ವಪದಗಳು ಮತ್ತು ಕಥನಗೀತೆಗಳು ಮುಖ್ಯವಾಗಿವೆ. ಇವುಗಳಲ್ಲಿ ಕರಿಬಂಟನ ಕಥೆ ಮುಖ್ಯವಾದದ್ದು. ಈ ಕಥೆಯ ವಸ್ತು ಮತ್ತು ಪರಿಸರ ತೊಣ್ಣೂರಿಗೆ ಸಂಬಂಧಿಸಿದೆ. ಹಾಗಾಗಿ ಕರಿಬಂಟನ ಕಥೆಯು ಕರ್ನಾಟಕದ ಜನಪದ ಸಾಹಿತ್ಯಕ್ಕೆ ಮಹತ್ವದ ಕೊಡುಗೆಯಾಗಿದ್ದು, ಅದನ್ನು ನೀಡಿದ ಕೀರ್ತಿ ತೊಣ್ಣೂರಿಗೆ ಸಲ್ಲುತ್ತದೆ. ತೊಣ್ಣೂರಿನ ಈ ಕಥೆ ಕರ್ನಾಟಕವಲ್ಲದೆ ನೆರೆಯ ರಾಜ್ಯಗಳಲ್ಲೂ ಪ್ರಸಿದ್ದಿ ಪಡೆದಿದೆ.

ತೊಣ್ಣೂರು ಶಿಷ್ಟದೇವತೆಗಳ ಕೇಂದ್ರವಾಗಿದ್ದಂತೆ, ಗ್ರಾಮದೇವತೆಗಳ ಆಗರವೂ ಆಗಿದೆ. ಮಾರಮ್ಮ, ಪಟ್ಲಮ್ಮ, ಕಾಳಮ್ಮ, ಬನ್ನಂತಮ್ಮ, ಮುನಿಯಪ್ಪ, ಗವಿರಂಗಪ್ಪ ಗ್ರಾಮದೇವತೆಗಳ ಆರಾಧನೆಯನ್ನು ನಡೆಸಿಕೊಂಡು ಬರುತ್ತಿದೆ. ಈ ಜನಪದ ದೈವಗಳು ಕೃಷಿ ಮತ್ತು ಕುಶಲಕರ್ಮಿ ಸಮುದಾಯಗಳ ಬದುಕಿನಲ್ಲಿ ಹಾಸುಹೊಕ್ಕಾಗಿವೆ. ಗ್ರಾಮದೇವತೆಗಳಿಗೆ ಸಲ್ಲುವ ಪೂಜೆ ಪುರಸ್ಕಾರಗಳು ಅದರ ಹಿಂದಿರುವ ಗ್ರಾಮೀಣ ಜನರ ನಂಬಿಕೆ ಮತ್ತು ಆಚರಣೆಗಳು ಗತ ಬದುಕನ್ನು ಅರ್ಥಮಾಡಿಕೊಳ್ಳಲು ಸಹಾಯಕವಾಗುತ್ತವೆ. ಬೃಹತ್ ಶಿಲಾ ಸಂಸ್ಕೃತಿಯಲ್ಲಿ ಸಮಾಧಿ ಪೂಜೆ ರೂಢಿಯಲ್ಲಿತ್ತು. ಇಂದಿಗೂ ತೊಣ್ಣೂರಿನಲ್ಲಿ ಶಿವರಾತ್ರಿಯಂದು ಕೆಲವು ಮನೆತನಗಳು ಸಮಾಧಿ ಪೂಜೆಯನ್ನು ಮಾಡುತ್ತವೆ. ಕೃಷಿಯ ಆರಂಭದಲ್ಲಿ ಮತ್ತು ಅಂತ್ಯದಲ್ಲಿ ಭೂಮಿಗೆ ಪೂಜೆ ಸಲ್ಲಿಸುತ್ತಾರೆ. ಧಾನ್ಯಗಳ ರಾಶಿಯ ಮೇಲೆ ಗೆರೆಯನ್ನು ಎಳೆಯುವ ಮೂಲಕ ಮಂಡಲವನ್ನು ರಚಿಸುತ್ತಾರೆ. ಇತರೆ ವೃತ್ತಿಯವರು ಸಹ ತಮ್ಮ ಕಸುಬುಗಳಿಗೆ ಸಂಬಂಧಿಸಿದಂತೆ ಆಚರಣೆಗಳನ್ನು ನಡೆಸುತ್ತಾರೆ. ಈ ನಂಬಿಕೆ ಮತ್ತು ಆಚರಣೆಗಳು ಪ್ರಸ್ತುತ ಸಂಸ್ಕೃತಿ ಅಧ್ಯಯನದ ಸಂದರ್ಭದಲ್ಲಿ ಮಹತ್ವ ಪಡೆದುಕೊಳ್ಳುತ್ತವೆ. ಸ್ಥಳದಿಂದ ಸ್ಥಳಕ್ಕೆ ಹಾಗು ಕಾಲದಿಂದ ಕಾಲಕ್ಕೆ ನಂಬಿಕೆ ಮತ್ತು ಆಚರಣೆಗಳು ವ್ಯತ್ಯಾಸಗೊಂಡರೂ ಮೂಲದ್ರವ್ಯ ಒಂದೇ ಆಗಿರುತ್ತದೆ. ಪ್ರಸ್ತುತ ತೊಣ್ಣೂರು ಕೃತಿ ಮಹತ್ವದ ಲೇಖನಗಳ ಸಂಗ್ರಹವನ್ನು ಒಳಗೊಂಡಿದೆ. ಲೇಖಕರು ತಮ್ಮ ಬೌದ್ದಿಕ ಪರಿಶ್ರಮದಿಂದ ಸಂಶೋಧಿಸಿ ಸಿದ್ಧಪಡಿಸಿದ ಲೇಖನಗಳು ನಾಡಿನ ಅಕ್ಷರಲೋಕವನ್ನು ಶ್ರೀಮಂತಗೊಳಿಸಿವೆ. ಇತಿಹಾಸ ಮತ್ತು ಸಂಸ್ಕೃತಿಯನ್ನು ಹೊಂದಿದ ತೊಣ್ಣೂರಿನಂತಹ ಸಾವಿರಾರು ಊರುಗಳು ಕರ್ನಾಟಕದಲ್ಲಿವೆ. ಅವುಗಳೆಲ್ಲದರ ಚರಿತ್ರೆ ದಾಖಲಾಗಬೇಕಿದೆ. ಇದರ ಈಡೇರಿಕೆಗಾಗಿ ಸ್ಥಳೀಯರು ಮತ್ತು ಸಂಬಂಧಪಟ್ಟ ಬೌದ್ದಿಕ ವಲಯ ಶ್ರಮಿಸಬೇಕು. ಇಲ್ಲದಿದ್ದಲ್ಲಿ ಸ್ಥಳಿಯ ಚರಿತ್ರೆಯನ್ನು ಕಟ್ಟಿಕೊಳ್ಳುವುದು ಕಷ್ಟಕರ. ಈ ಪ್ರಾಥಮಿಕ ಹಂತದ ಕೆಲಸ ಪೂರ್ಣಗೊಂಡಲ್ಲಿ ಸ್ಥಾಪಿತ ಚರಿತ್ರೆಯ ಲೋಪದೋಷಗಳನ್ನು ನಿವಾರಿಸಿಕೊಳ್ಳಬಹುದು. ಕನ್ನಡ ವಿಶ್ವವಿದ್ಯಾಲಯವು ಸ್ಥಳೀಯ ಚರಿತ್ರೆ, ಪುರಾತತ್ವ ಮತ್ತು ಸಂಸ್ಕೃತಿಯ ಅಧ್ಯಯನ ಹಾಗು ಪ್ರಕಟಣೆಗೆ ಹೆಚ್ಚಿನ ಉತ್ತೇಜನ ನೀಡುತ್ತಿದೆ. ಇದು ಸ್ವಾಗತಾರ್ಹ. ಪ್ರಸ್ತುತ ತೊಣ್ಣೂರು ಕೃತಿಯಲ್ಲಿರುವ ಸಂಶೋಧನ ಲೇಖನಗಳು ಬಿಡಿಬಿಡಿಯಾಗಿದ್ದರೂ ಒಂದೇ ನೆಲದ ಸಂಬಂಧಗಳನ್ನು ಪ್ರಕಟಪಡಿಸುತ್ತವೆ.

ತೊಣ್ಣೂರನ್ನು ಕುರಿತು ಪ್ರಕಟಗೊಂಡ ಮೊದಲ ಕೃತಿ ಇದಾಗಿದ್ದು ವಿದ್ಯಾರ್ಥಿಗಳು, ಸಂಶೋಧಕರು, ಪ್ರವಾಸಿಗರು ಮತ್ತು ಜನಸಾಮಾನ್ಯರಿಗೆ ಉಪಯುಕ್ತವಾಗುವುದೆಂದು ಭಾವಿಸಿದ್ದೇನೆ. ಇದು ಈಡೇರಿದಲ್ಲಿ ನಮ್ಮೆಲ್ಲರ ಶ್ರಮ ಸಾರ್ಥಕವಾದಂತೆ. ಹಾಗು ವಿಶ್ವವಿದ್ಯಾಲಯ ಮತ್ತು ಅಧ್ಯಯನ ವಿಭಾಗದ ಪ್ರಯತ್ನಗಳು ಊರ್ಜಿತಗೊಳ್ಳುತ್ತವೆ.