‘ದಲಿತರು’, ‘ಭಾಷೆ’ ಮತ್ತು ಸಮಾಜ’ ವಿಷಯವನ್ನು ಕೇಳಿದ ತಕ್ಷಣ ಕೆಲವರು ‘ಸಮಾಜ, ದಲಿತರು ಮತ್ತು ಭಾಷೆ’ ಎಂತಲೂ, ಮತ್ತೇ ಕೆಲವರು ‘ಭಾಷೆ, ಸಮಾಜ ಮತ್ತು ದಲಿತರು’ ಎಂದು ಓದಿಕೊಳ್ಳಬಹುದಲ್ಲ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸುವುದುಂಟು. ಏಕೆಂದರೆ ಭಾಷೆ ಬಿಟ್ಟು ಸಮಾಜವಿಲ್ಲ. ಸಮಾಜ ಬಿಟ್ಟು ದಲಿತರಿಲ್ಲ. ಈ ಹಿನ್ನೆಲೆಯಿಂದ ದಲಿತರು, ಭಾಷೆ ಮತ್ತು ‘ಸಮಾಜ’ ಇವು ಪರಸ್ಪರ ಸಂಬಂಧ ಹೊಂದಿರುವಂತಹದು.

ಪ್ರಸ್ತುತ ಕೃತಿಯಲ್ಲಿ ೪೧ ಲೇಖನಗಳಿವೆ. ಈ ಎಲ್ಲ ಲೇಖನಗಳನ್ನು ಗಮನಿಸಿ, ಯಾರು ದಲಿತರು ಸಂಸ್ಕೃತ ಭಾಷೆಯ ದ್ವೇಷಿಗಳೆಂದು ತಿಳಿಯಬಾರದು. ಹಾಗೆಯೇ ಇಂಗ್ಲಿಶ್‌ ಭಾಷೆಯ ಪ್ರಿಯರು ಎಂದು ಸಹ ತಿಳಿಯಬಾರದು. ಏಕೆಂದರೆ ಇಂದು ಭಾಷೆ ಕೇವಲ ಸಂವಹನ ಮಾಧ್ಯಮವಾಗಿ ಉಳಿದಿಲ್ಲ ಎನಿಸುತ್ತದೆ. ಅದು ಜೀವನವನ್ನು ನಿರ್ವಹಿಸುವ ಸಾಧನವೂ ಆಗಿದೆ. ಚಾರಿತ್ರಿಕವಾಗಿ ಕನ್ನಡ ಭಾಷೆಯನ್ನು ಅಧ್ಯಯನ ಮಾಡಿದಾಗ ಅದು ಸಾಮಾಜಿಕ ತಾರತಮ್ಯವನ್ನು ಸೃಷ್ಟಿ ಮಾಡಿದಿಯೇ? ತಾರತಮ್ಯ ಮಾಡುವುದು ಭಾಷೆಯಲ್ಲ. ಅದನ್ನು ಬಳಸುವ ಸಾಮಾಜಿಕರು ಎಂದೆನಿಸುತ್ತದೆ. ಜಾಗತಿಕ ಸಂದರ್ಭದಲ್ಲಿ ದಲಿತರ ಭವಿಷ್ಯವನ್ನು ರೂಪಿಸುವ ಭಾಷೆ ಯಾವುದು? ಯಾವುದೆ ಒಂದು ಭಾಷೆ ಒಂದು ಸಮುದಾಯದ ಭವಿಷ್ಯವನ್ನು ರೂಪಿಸಬಲ್ಲುದೇ? ದಲಿತರು ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡಿದರೆ ಕೆಲವರಿಗೆ ಸಂಸ್ಕೃತಿಯ ಅನನ್ಯತೆ ಪ್ರಶ್ನೆ ಎದುರಾಗುತ್ತದೆ ಅಲ್ಲವೆ? ದಲಿತರು ಕನ್ನಡದ ಭಕ್ಷಕರಲ್ಲ, ರಕ್ಷಕರು ಎಂಬ ಮಾತನ್ನು ಕೆಲವರು ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಕೆ ಮಾಡುತ್ತಲೆ ಬಂದಿದ್ದಾರೆ. ಈ ಅಂಶವನ್ನು ಗಮನಿಸಿದಾಗ ದಲಿತರು ರಕ್ಷಿಸುವ ಭಾಷೆಯಿಂದ ದಲಿತರಿಗೆ ಪ್ರಯೋಜನವಾಗುತ್ತಿದಿಯೇ? ಆಗುತ್ತಿದೆ ಎಂದರೆ ಪರ್ಯಾಯ ಭಾಷೆ ಬಗೆಗೆ ಚರ್ಚೆ ಆರಂಭವಾದುದು ಹೇಗೆ? ಇಂಗ್ಲಿಶ್‌ ಭಾಷೆಯ ಕಲಿಕೆಯ ಚರ್ಚೆಯನ್ನು ಗಮನಿಸಿದರೆ ಭಾಷೆಯೊಂದು ಆರ್ಥಿಕತೆಯಿಂದ ನಿಯಂತ್ರಿಸಲ್ಪಟ್ಟಿದೆ ಎಂದೆನಿಸುತ್ತದೆ ಅಲ್ಲವೆ? ಈ ವಾದವನ್ನು ಒಪ್ಪಿಕೊಂಡರೆ ದಲಿತರ ಆರ್ಥಿಕತೆಯ ಮಟ್ಟ ಹೆಚ್ಚು ಭಾಷೆಯನ್ನು ಕಲಿಯುವುದಕ್ಕೆ ಅಡ್ಡಿವುಂಟುಮಾಡುತ್ತಿದೆ ಎಂಬ ಅಭಿಪ್ರಾಯಕ್ಕೆ ಬರಬೇಕಾಗುತ್ತದೆ ಅಲ್ಲವೆ? ದಲಿತ ಮಕ್ಕಳಿಗೆ ಕನ್ನಡ ಶಿಕ್ಷಣ ವಲಯದಲ್ಲಿ ಸಂವಹನಕ್ಕೆ ಅಡ್ಡಿವುಂಟಾಗುತ್ತಿದೆಯೇ? ಇದಕ್ಕೆ ಪರಿಹಾರವಾಗಿ ನಮ್ಮ ಶಿಕ್ಷಣ ಪಠ್ಯ ಕ್ರಮದಲ್ಲಿ ದಲಿತರ ಪರಿಸರ ಭಾಷೆಯ ಬಳಕೆ ಅಗತ್ಯವಿದೆಯೆ? ಶಿಕ್ಷಣ ವಲಯಕ್ಕೆ ಸೀಮಿತವಾಗಿರುವ ಭಾಷೆಯ ವಿಚಾರ, ಸಾಮಾಜಿಕ ನೆಲೆಗೆ ದಾಟಿದ್ದು ಹೇಗೆ? ಇದರ ಹಿಂದಿರುವ ಭಾಷಾ ರಾಜಕಾರಣವೇನು? ಶಿಕ್ಷಣ, ಮಾಧ್ಯಮ ಮತ್ತು ಸಾಮಾಜಿಕ ಸಂವಹನದಲ್ಲಿ ಕನ್ನಡ ದಲಿತರನ್ನು ಬಂಧಿತರನ್ನಾಗಿ ಮಾಡಿದಿಯೇ? ಕರ್ನಾಟಕದಲ್ಲಿರುವ ದಲಿತರು ಕನ್ನಡ ನಾಡು, ನುಡಿ, ಜಲ ಸಂರಕ್ಷಣೆಗೆ ಮಾತ್ರ ಒಂದಾಗಿ ದುಡಿಯಬೇಕೆ? ಅವುಗಳ ಬಳಕೆ ಪ್ರಶ್ನೆ ಬಂದಾಗ ಮತ್ತೋಬ್ಬರ ಆದೇಶದಂತೆ ನಡೆದುಕೊಳ್ಳಬೇಕೇ? ಅಂತಿಮವಾಗಿ ಒಂದು ಭಾಷೆಯನ್ನು ಉಳಿಸುವವರು ಸಾಮಾಜಿಕರೋ ಅಥವಾ ಸಂಘಟನೆಗಳೋ !

ಕರ್ನಾಟಕದಲ್ಲಿ ಚಲನಚಿತ್ರ, ಪತ್ರಿಕೆ, ದೂರದರ್ಶನ, ಮುಂತಾದ ಸಂವಹನ ಮಾಧ್ಯಮಗಳಲ್ಲಿ ಹೆಚ್ಚು ದಲಿತರು ಕೆಲಸ ಮಾಡುತ್ತಿಲ್ಲ ಎಂಬ ಅಭಿಪ್ರಾಯವಿದೆ. ಇದರ ಅರ್ಥ ದಲಿತರಿಗೆ ಈ ಸಂವಹನ ಮಾಧ್ಯಮಗಳಲ್ಲಿ ಕಾರ್ಯ ನಿರ್ವಹಿಸಲು ಸಾಧ್ಯವಿಲ್ಲವೇ? ಅಥವಾ ದಲಿತರು ಆಡುವ ಕನ್ನಡ, ಕನ್ನಡ ಆಲ್ಲವೇ ? ಇಲ್ಲಿಯವರೆಗೆ ಕರ್ನಾಟಕದಲ್ಲಿ ಪತ್ರಿಕೆ ಮಾಧ್ಯಮದಲ್ಲಿ ಪ್ರಧಾನ ಪಾತ್ರಗಳಲ್ಲಿ ದಲಿತರು ಕಾರ್ಯನಿರ್ವಹಿಸಿಲ್ಲ ಎಂಬ ವಿಚಾರದ ಹಿಂದಿರುವ ಭಾಷಾ ರಾಜಕಾರಣವೇನು ? ಚಲನಚಿತ್ರದಂತಹ ಮಾಧ್ಯಮದಲ್ಲಿ ದಲಿತರ ಲೋಪ ಏನನ್ನು ಹೇಳುತ್ತಿದೆ. ದೂರದರ್ಶನದಂತಹ ಮಾಧ್ಯಮದಲ್ಲಿ ದಲಿತರೊಬ್ಬರು ಸಮಾಚಾರ ಪ್ರಸ್ತುತ ಪಡಿಸುವವರು (ನ್ಯೂಸ್ ರೀಡರ್) ಕಾರ್ಯನಿರ್ವಹಿಸಿಲ್ಲ ಎಂದರೆ ಆಶ್ಚರ್ಯವಾಗುತ್ತದೆ ಅಲ್ಲವೇ ? ಇದಕ್ಕೆ ಕಾರಣಗಳೇನು ? ಹಾಗಾದರೆ ಸಂವಹನ ಮಾಧ್ಯಮ ನೆಲೆಯಲ್ಲಿರುವ ಲೇಖನಗಳಿಂದ ಉತ್ತರಗಳನ್ನು, ಪರಿಹಾರಗಳನ್ನು ಕಂಡುಕೊಳ್ಳುವ ಪ್ರಯತ್ನ ಮಾಡಲಾಗಿದೆ.

ಎರಡನೆಯ ಭಾಗದ ರಚನೆ ನೆಲೆಯಲ್ಲಿ ಕರ್ನಾಟಕದಲ್ಲಿರುವ ಕೆಲವು ಭಾಗದ ದಲಿತರ ಕನ್ನಡದ ರಚನೆಯನ್ನು ಕುರಿತು ಚರ್ಚಿಸಲಾಗಿದೆ. ಕನ್ನಡ ಭಾಷೆಯನ್ನು ಚಾರಿತ್ರಿಕವಾಗಿ ಅಧ್ಯಯನ ಮಾಡಿದಾಗ ಕಾಲದಿಂದ ಕಾಲಕ್ಕೆ ಊರಿನಿಂದ ಊರಿಗೆ ಮತ್ತು ಸಮಾಜದಿಂದ ಸಮಾಜಕ್ಕೆ ಭಿನ್ನವಾಗಿರುವುದು ಕಂಡುಬರುತ್ತದೆ. ಕರ್ನಾಟಕದಲ್ಲಿರುವ ಹೊಲೆಯ ಮತ್ತು ಮಾದಿಗರ ಕನ್ನಡದ ರಚನೆಯನ್ನು ಕುರಿತು ಇಲ್ಲಿಯವರೆಗೆ ಸರ್ವೇಕ್ಷಣ ಕಾರ್ಯ ನಡೆದಿಲ್ಲ. ಈ ಹಿನ್ನೆಲೆಯಿಂದ ದಲಿತರ ಕನ್ನಡದ ವೈಶಿಷ್ಟ್ಯಗಳನ್ನು ಕುರಿತು ಚರ್ಚಿಸುವ ಅಗತ್ಯವಿದೆ. ಸಾಮಾಜಿಕವಾಗಿ ಬಳಕೆಯಾಗುತ್ತಿರುವ ಕನ್ನಡದ ವೈವಿಧ್ಯತೆಯನ್ನಾಧರಿಸಿ ಹೊಲೆಯ ಮತ್ತು ಮಾದಿಗರು ಬಳಸುವ ಕನ್ನಡವೆಂದು ನಿರ್ಧರಿಸಬಹುದಾಗಿದೆ. ಉದಾಹರಣೆಗೆ ‘ಹ’ ಕಾರ ಲೋಪ ಮೈಸೂರು, ಬಳ್ಳಾರಿ, ಗುಲ್ಬರ್ಗಾ, ಜಿಲ್ಲೆಯ ದಲಿತರ ಕನ್ನಡದಲ್ಲಿ ಕಾಣುತ್ತೇವೆ. ಆದರೆ ಮೈಸೂರು ಜಿಲ್ಲೆಯಲ್ಲಿನೆ ಕೆ.ಆರ್. ನಗರ ಪಿರಿಯಾಪಟ್ಟಣ ಮತ್ತು ಹುಣಸೂರಿನಲ್ಲಿ ಈ ಧ್ವನಿ ಲೋಪವಾಗಿಲ್ಲ. ಇದು ಈಗಾಗಲೇ ಭಾಷಾಶಾಸ್ತ್ರದಲ್ಲಿ ನಡೆದಿರುವ ಅಧ್ಯಯನಗಳಿಂದ ತಿಳಿದುಬರುತ್ತದೆ. ನಿಜಕ್ಕೂ ಈ ಬದಲಾವಣೆ ಈವೊಂದು ಸಾಮಾಜಿಕ ವರ್ಗಕ್ಕೆ ಸೀಮಿತವೇ ? ಒಂದು ವೇಳೆ ಬೇರೆ ಬೇರೆ ಸಾಮಾಜಿಕ ವರ್ಗಗಳಲ್ಲಿ ಕಾಣಿಸಿಕೊಂಡರೆ ಒಂದೇ ರೀತಿಯ ಬದಲಾವಣೆಯೇ ? ಅಥವಾ ಸ್ವತಂತ್ರವಾಗಿ ನಡೆದ ಬೇರೆ ಬೇರೆ ಬದಲಾವಣೆಗಳೇ? ಒಂದೇ ಬದಲಾವಣೆಯಾದರೆ ಇದು ಹೊಲೆಯ ಮತ್ತು ಮಾದಿಗರ ಕನ್ನಡದ ವೈಶಿಷ್ಟ್ಯ ಅಲ್ಲದೆ ಮತ್ತೇನು ? ಗುಲ್ಬರ್ಗಾ ದಲಿತರ ಕನ್ನಡ ಮೈಸೂರು ದಲಿತರ ಕನ್ನಡದಲ್ಲಿ ‘ಹ’ ಕಾರ ಹೇಗೆ ಒಂದೇ ರೀತಿ ಹರಿದು ಹೋಗಿದೆ ಪ್ರಾದೇಶಿಕವಾಗಿ ಚದುರಿರುವ ದಲಿತರು ಸಾಮಾಜಿಕವಾಗಿ ಒಂದೇ ರೀತಿ ಕಂಡರೂ ಅವರು ಬಳಸುವ ಕನ್ನಡ ಒಂದೇ ಆಗಿಲ್ಲ. ಪ್ರಾದೇಶಿಕವಾಗಿ ಬೇರೆ ಬೇರೆ ಆಗಿವೆ.

ಕನ್ನಡದಲ್ಲಿ ‘ಹ’ ಲೋಪ ಎಂಬ ವಿಚಾರಗಳನ್ನು ಕಳೆದ ದಶಕಗಳಿಂದ ಭಾಷಾಧ್ಯಯನದಲ್ಲಿ ಹೇಳುತ್ತಾ ಬಂದಿದ್ದೇವೆ, ಉದಾ:- ಹಾಳು-ಆಳು, ಹಾಸನ > ಆಸನ ಇತ್ಯಾದಿ. ಇದು ಅಶಿಕ್ಷಿತ ಹೊಲೆಯ ಮತ್ತು ಮಾದಿಗರ ಕನ್ನಡದ ವೈಶಿಷ್ಟ್ಯ. ಇದಕ್ಕೆ ವಿರುದ್ಧವಾಗಿ ಬ್ರಾಹ್ಮಣರ ಕನ್ನಡದಲ್ಲಿ ‘ಹ’ ಬಳಕೆ ಇದೆ ಎಂಬ ಅಧ್ಯಯನಗಳು ಆಗಿವೆ. ಅಂದರೆ ಯಾವ ಸಾಮಾಜಿಕ ಪ್ರಭೇದವನ್ನಿಟ್ಟುಕೊಂಡು ಹೊಲೆಮಾದಿಗೆ ಕನ್ನಡದ ವೈಶಿಷ್ಟ್ಯವನ್ನು ಹೇಳುತ್ತಿದ್ದೇವೆ. ಇದಕ್ಕೆ ಮಾನದಂಡವೇನು? ದಲಿತರಿಗೆ ‘ಹ’ದ ಉಚ್ಚಾರಣೆ ಭೌತಿಕವಾಗಿ ಶರೀರ ವೈಜ್ಞಾನಿಕವಾಗಿ ಸಾಧ್ಯವಿಲ್ಲ ಎಂಬ ನಿರ್ಣಯ ತಪ್ಪಲ್ಲವೆ? ‘ಹ’ ದ ಉಚ್ಚಾರಣೆ ಸರಿಯಿದೆ ಎಂಬ ಸಮುದಾಯದ ಭಾಷೆ ಯಾವುದು? ‘ಹ’ ಧ್ವನಿಯ ಮೂಲವೇನು? ಇದೇ ಮಾದರಿಯಲ್ಲಿ ಊಷ್ಮ ಧ್ವನಿಗಳ (ಸ, ಶ, ಷ) ಬಗೆಗೂ ಚರ್ಚೆ ಆಗಬೇಕಿದೆ. ಇಂತಹ ಲಕ್ಷಣಗಳನ್ನು ಕುರಿತು ಇಲ್ಲಿಯವರೆಗೆ ಭಾಷಾಧ್ಯಯನದಲ್ಲಿ ಹೇಗೆ ? ಎಂಬುದನ್ನು ಮಾತ್ರ ಅಧ್ಯಯನ ಮಾಡಲಾಗಿದೆ. ಏಕೆ ಎಂದು ಪ್ರಶ್ನೆ ಮಾಡಿದ್ದಂತಿಲ್ಲ. ಕರ್ನಾಟಕದಲ್ಲಿ ಹೊಲೆಮಾದಿಗರ ಕನ್ನಡದ ರಚನೆಗಳನ್ನು ಕುರಿತು ಕೆಲವು ಅಧ್ಯಯನಗಳು ಆಗಿವೆ. ಪ್ರಸ್ತುತ ಕೃತಿಯಲ್ಲಿ ಕಾರಣಗಳನ್ನು ಖಚಿತತೆಗಿಂತ ಸಾಧ್ಯತೆಯನ್ನು ಕುರಿತು ಚರ್ಚಿಸಲಾಗಿದೆ. ಅಂದರೆ ಇದರ ಅರ್ಥ ದಲಿತರ ಕನ್ನಡ ಅಧ್ಯಯನಕ್ಕೆ ಯೋಗ್ಯವಲ್ಲ ಎಂದರ್ಥವಲ್ಲ. ಅದರ ಅನಿವಾರ್ಯತೆ ಬಂದಿಲ್ಲ ಎನಿಸುತ್ತದೆ.

ಭಾಷೆಯ ವಿಚಾರದಲ್ಲಿ ಮಾತಿನಲ್ಲಿ ಕಾಣಿಸಿಕೊಳ್ಳುವ ರಚನೆಗಳನ್ನೆಲ್ಲ ಅಶುದ್ಧರೂಪಗಳೆಂದು, ಬರಹದಲ್ಲಿ ಕಾಣಿಸುವ ರಚನೆಗಳನ್ನೆಲ್ಲ ಶುದ್ಧರೂಪಗಳೆಂದು ಹೇಳುತ್ತಾ ಬಂದಿದ್ದೇವೆ. ಇದಕ್ಕೆ ಕಾರಣ ಶಾಲೆಯ ಪರಿಸರದಲ್ಲಿ ವಿದ್ಯಾರ್ಥಿಗಳಿಗೆ ಬರಹದಲ್ಲಿ ಎಂತಹ ಪ್ರಭೇದವನ್ನು ಬಳಸಬೇಕು ಎಂಬುದನ್ನು ತಿಳಿಸಲು ಈ ರೀತಿ ವರ್ಗೀಕರಣ ಹೇಳುತ್ತಾ ಬಂದಿದ್ದೇವೆ. ಆದರೆ ಶುದ್ಧ ಅಶುದ್ಧವೆಂಬ ಪದಗಳ ಹಿಂದಿರುವ ಅರ್ಥ ಇವುಗಳ ನಡುವಿನ ವ್ಯತ್ಯಾಸಕ್ಕೆ ಅನ್ವಯಿಸುವುದಿಲ್ಲ ಎಂಬುದನ್ನು ಗಮನಿಸಿದಂತೆ ಕಾಣುವುದಿಲ್ಲ ಎಂದು ಡಿ.ಎನ್. ಶಂಕರಭಟ್‌ರು ತಮ್ಮ ‘ಕನ್ನಡ ಬರಹವನ್ನು ಸರಿಪಡಿಸೋಣ’ ಕೃತಿಯಲ್ಲಿ ಅಭಿಪ್ರಾಯ ಪಟ್ಟಿದ್ದಾರೆ.

ನಮ್ಮ ಬುದ್ಧಿ ಜೀವಿಗಳಿ ಕರ್ನಾಟಕದಲ್ಲಿ ಕನ್ನಡ ಉಳಿದಿದೆ ಎಂದರೆ ಅದು ಗ್ರಾಮೀಣ ಪ್ರದೇಶದ ದಲಿತರಿಂದ ಎಂದು ಆಗಾಗ ಹೇಳುತ್ತಲೆ ಬಂದಿದ್ದಾರೆ. ಅವರೇ ನಿಜವಾದ ಕನ್ನಡದ ರಕ್ಷಕರು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾ ಬಂದಿದ್ದಾರೆ. ಈ ರೀತಿಯಾಗಿ ಜವಾಬ್ದಾರಿಯೊಂದನ್ನು ಹೊತ್ತಿನಿಂತಿರುವ ದಲಿತ ಸಮುದಾಯ ಭಾಷೆಯ ಆಯ್ಕೆ ಪ್ರಶ್ನೆ ಬಂದಾಗ ತಮ್ಮ ಅಭಿಪ್ರಾಯವನ್ನು ಸ್ವತಂತ್ರವಾಗಿ ಅಭಿವ್ಯಕ್ತಿಸಲು ಸಾಧ್ಯವಿಲ್ಲದ ಸ್ಥಿತಿಯಲ್ಲಿದೆ ಎಂದೆನಿಸುತ್ತದೆ. ಈ ಕಾರಣದಿಂದ ದಲಿತರು ಬಳಸುವ ಭಾಷೆಯಲ್ಲಿ ಕಾಣಿಸಿಕೊಳ್ಳುತ್ತಿರುವ ಈ ವೈಶಿಷ್ಟ್ಯಗಳು ಕನ್ನಡದ ಭಾಷಾ ಸಂಪತ್ತು ಎಂಬುದಾಗಿ ಶೈಕ್ಷಣಿಕ ನೆಲೆಯಲ್ಲಿ ಪರಿಗಣಿಸುವ ಅಗತ್ಯವಿದೆ. ಒಂದು ನಿರ್ದಿಷ್ಟ ಸಾಮಾಜಿಕ ವರ್ಗದ ಭಾಷೆಯನ್ನು ಅಧ್ಯಯನ ಮಾಡುವುದು ಎಂದರೆ ಕನ್ನಡದ ಭಾಷಾ ಸಂಪತ್ತು ತಿಳಿಯುವುದು ಎಂದು ಅರ್ಥ. ಇದೇ ರೀತಿ ವ್ಯಾಕರಣದ ಮಟ್ಟದಲ್ಲೂ ಹಲವಾರು ವ್ಯತ್ಯಾಸಗಳನ್ನು ಗುರುತಿಸಿಕೊಂಡು ಚರ್ಚಿಸಲಾಗಿದೆ. ದಲಿತರು ಬಳಸುವ ಕನ್ನಡದ ಪದ ಸಂಪತ್ತನ್ನು ಶೈಕ್ಷಣಿಕ ನೆಲೆಯಲ್ಲಿ ಮಾನ್ಯತೆ ಮಾಡುವುದರ ಕಡೆಗೆ ನಮ್ಮ ಪ್ರಯತ್ನಗಳು ಸಾಗಬೇಕಿದೆ. ಉನ್ನತ ವರ್ಗದವರ ಭಾಷೆಯ ಶಿಷ್ಟ್ಯೀಕರಣದಲ್ಲಿ ದಲಿತರ ಕನ್ನಡದ ವೈಶಿಷ್ಟ್ಯಗಳು ಲೋಪವಾಗಿವೆ. ಅವುಗಳ ಅನನ್ಯತೆ ಉಳಿಸಿಕೊಳ್ಳಬೇಕಾದರೆ ಅವುಗಳಿಗೆ ಶೈಕ್ಷಣಿಕ ನೆಲೆಯಲ್ಲಿ ಪ್ರಾಧಾನ್ಯತೆ ನೀಡಬೇಕಾಗಿದೆ. ಆಗ ಮಾತ್ರ ‘ಭಾಷಾ ಅಸ್ಪೃಶ್ಯತೆಗೆ’ ಮಂಗಳ ಆಡುವ ಕಾಲ ಬಂದೀತು.

ಇಂಗ್ಲಿಶ್ ಪದದಲ್ಲಿ ‘ಷ್’ ಧ್ವನಿಯನ್ನು ಏಕೆ ಬಿಡಲಾಗಿದೆ ಎಂಬುದಕ್ಕೆ ವಿವರಣೆ ಇಲ್ಲಿದೆ.

ಶ-ಷ : ವಾಸ್ತವವಾಗಿ ಈ ಎರಡೂ ಪ್ರತ್ಯೇಕ ಧ್ವನಿಗಳು. ಆದ್ದರಿಂದಲೇ ಬೇರೆ ಬೇರೆ ಲಿಪಿರೂಪಗಳನ್ನು ಪಡೆದವು. ಆದರೆ ಇಂದಿನ ಆಡುಮಾತಿನ ಕನ್ನಡದಲ್ಲಿ ಇವುಗಳ ಅಂತರ ಕ್ರಮೇಣ ಇಲ್ಲವಾಗುತ್ತಿದೆ. ಉಚ್ಚಾರಣೆಯ ವಿಚಾರದಲ್ಲಿ ನೂರಕ್ಕೆ ನೂರರಷ್ಟು ನಿಜವಾಗಿರುವ ಈ ಪ್ರಕ್ರಿಯೆ ಬರವಣಿಗೆಗೂ ಬರುವುದು ಸಹಜ. ಶೈಲಿ ಕೈಪಿಡಿಯ ಸಂದರ್ಭದಲ್ಲಿ ಹೇಳುವುದಾದರೆ, ಲಿಪ್ಯಂತರ ಮಾಡುವಾಗ, ಈಗಾಗಲೇ ಬಳಕೆಯಲ್ಲಿರುವ ಪದಗಳಲ್ಲಿ ಸಹಜ ರೂಪವನ್ನು ಉಳಿಸಿಕೊಂಡು, ಉಳಿದ ಕಡೆ ‘ಶ’ ಕಾರವೊಂದನ್ನೇ ಬಳಸುವುದು ಸೂಕ್ತ.

ಉದಾ : ಶೇಷನ್, ಏಷ್ಯಾ, ಕ್ರಾವೋಶಿಯಾ, ಮಾರ್ಶಲ್.

ಸಂಸ್ಕೃತದಿಂದ ಬಂದ ಅನೇಕ ಪದಗಳಲ್ಲಿ ಶ್, ಷ್ ಮತ್ತು ‘ಸ್’ ಎಂಬ ವ್ಯಂಜನಗಳ ಬಳಕೆ ಇರುತ್ತದೆ. ಆದರೆ ಈಗ ಕ್ರಮೇಣ ಕನ್ನಡ ಉಚ್ಚಾರಣೆಯಲ್ಲಿ ‘ಶ್’ ಮತ್ತು ‘ಷ’ ಗಳ ನಡುವಿನ ಅಂತರ ಕ್ಷೀಣವಾಗುತ್ತಿದೆ. ಆದ್ದರಿಂದ ಅಚ್ಚಗನ್ನಡ ಪದಗಳಲ್ಲಿ ಇವುಗಳ ಬಳಕೆ ‘ಶ್’ ಕಾರಕ್ಕೆ ಸೀಮಿತವಾಗುತ್ತದೆ. ಆದರೆ ಸಂಸ್ಕೃತದಿಂದ ಬಂದ ಪದಗಳಲ್ಲಿ ಇವೆರಡರ ನಡುವಿನ ಅಂತರಕ್ಕೆ ಗಮನಕೊಟ್ಟು ಮೂಲ ಪದವನ್ನು ಉಳಿಸಿಕೊಳ್ಳುವುದೇ ಸರಿ. (ಕನ್ನಡ ಶೈಲಿ ಕೈಪಿಡಿ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ ಮತ್ತು ಭಾರತೀಯ ಭಾಷೆಗಳ ಕೇಂದ್ರ ಸಂಸ್ಥೆ, ಮೈಸೂರು ಪು. ೩೯, ೫೫.)

ಇಂತಹದೊಂದು ಆಶಯುಳ್ಳ ವಿಚಾರ ಸಂಕಿರಣವನ್ನು ಆಯೋಜಿಸಲು ಕಾರಣರಾದ ಕನ್ನಡ ವಿಶ್ವವಿದ್ಯಾಲಯದ ಮಾನ್ಯ ಕುಲಪತಿಗಳಾದ ಡಾ. ಬಿ.ಎ.ವಿವೇಕ ರೈ ಅವರಿಗೆ ವಂದನೆಗಳನ್ನು ಸಲ್ಲಿಸುತ್ತೇನೆ. ವಿಚಾರ ಸಂಕಿರಣದ ಸ್ವರೂಪವನ್ನು ಕುರಿತು ಸೂಕ್ತ ಸಲಹೆ ನೀಡಿದ್ದ ಡಾ. ಕೆ.ವಿ. ನಾರಾಯಣ ಅವರಿಗೆ ಇದರ ಎಲ್ಲಾ ಶ್ರೇಯಸ್ಸು ಸಲ್ಲಬೇಕು.

ಬೆಂಗಳೂರು ವಿಶ್ವವಿದ್ಯಾಲಯ ಪ್ರಸಾರಾಂಗ ಮತ್ತು ಕನ್ನಡ ವಿಶ್ವವಿದ್ಯಾಲಯ ಪ್ರಸಾರಾಂಗಗಳ ಜತೆಯಲ್ಲಿ ಕನ್ನಡ ವಿಶ್ವವಿದ್ಯಾಲಯದ ದಲಿತ ಸಂಸ್ಕೃತಿ ಅಧ್ಯಯನ ಪೀಠ ಸೇರಿಕೊಂಡು ‘ದಲಿತರು, ಭಾಷೆ ಮತ್ತು ಸಮಾಜ’ ವಿಚಾರ ಸಂಕಿರಣವನ್ನು ಜನವರಿ ೧೨ ಮತ್ತು ೧೩, ೨೦೦೬ ರಂದು ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ನಡೆಸಲಾಯಿತು. ಪ್ರಸ್ತುತ ವಿಚಾರ ಸಂಕಿರಣ ಯಶಸ್ವಿಯಾಗಿ ನಡೆಯಲಿಕ್ಕೆ ಕಾರಣರು; ಈ ನಾಡಿನ ವಿದ್ವಾಂಸರು ಆದ ಡಾ. ಬಸವರಾಜ ಕಲ್ಗುಡಿ ಅವರಿಗೆ ವಂದನೆಗಳನ್ನು ಸಲ್ಲಿಸುತ್ತೇನೆ. ಶ್ರೀಯುತರು ಈಗ ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಹಾಗೆಯೇ ನಮ್ಮ ವಿಶ್ವವಿದ್ಯಾಲಯದ ಪ್ರಸಾರಾಂಗ ನಿರ್ದೇಶಕರಾದ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಅವರಿಗೆ ವಂದನೆಗಳನ್ನು ಸಲ್ಲಿಸುತ್ತೇನೆ. ಕಾರಣ ಈ ವಿಚಾರ ಸಂಕಿರಣದಲ್ಲಿ ದಲಿತ ಅಧ್ಯಯನ ಪೀಠದಿಂದ ಮೂರು ಮಹತ್ವವಾದ ಕೃತಿಗಳನ್ನು (ದಲಿತರು ಮತ್ತು ಪರ್ಯಾಯ ರಾಜಾಕರಣ, ದಲಿತರು ಮತ್ತು ಚರಿತ್ರೆ ಮತ್ತು ದಲಿತ ಅಧ್ಯಯನ) ಪ್ರಕಟಿಸಿದ್ದಾರೆ. ವಿಚಾರ ಸಂಕಿರಣ ನಡೆಯಲು ಆಡಳಿತಾತ್ಮಕವಾಗಿ ಅನುಮೋದನೆ ನೀಡಿದ ಹಿಂದಿನ ಕನ್ನಡ ವಿಶ್ವವಿದ್ಯಾಲಯ ಮಾನ್ಯ ಕುಲಸಚಿವರಾದ ಡಾ. ಕರೀಗೌಡ ಬೀಚನಹಳ್ಳಿ ಅವರಿಗೆ, ಇಂದಿನ ಮಾನ್ಯ ಕುಲಸಚಿವರಾದ ಶ್ರೀ ಎ.ಶಂಕರ್ ಅವರಿಗೆ ವಂದನೆಗಳು. ದಲಿತ ಅಧ್ಯಯನ ಪೀಠದ ಕಾರ್ಯಕ್ರಮಗಳ ಬಗ್ಗೆ ದೂರವಾಣಿ ಮೂಲಕ ಕೇಳಿ ಚರ್ಚಿಸಿ, ಸಲಹೆ ಸೂಚನೆ ನೀಡಿದ ದಲಿತ ಅಧ್ಯಯನ ಪೀಠದ ಸಲಹಾ ಮಂಡಳಿ ಸದಸ್ಯರುಗಳಾದ ಶ್ರೀ ಎಚ್. ದಂಡಪ್ಪ ಮತ್ತು ಡಾ. ಮಾಧವ ಪೆರಾಜೆ ಅವರಿಗೆ ವಂದನೆಗಳು. ವಿಚಾರ ಸಂಕಿರಣದಲ್ಲಿ ಮಂಡಿತವಾದ ಪ್ರಬಂಧಗಳನ್ನು ಧ್ವನಿ ಮುದ್ರಿಸಲಾಗಿತ್ತು. ಅದನ್ನು ಲಿಪ್ಯಂತರ ಮಾಡಿ ಅಚ್ಚುಕಟ್ಟಾಗಿ ಬರವಣಿಗೆಗೆ ಮಾಡಿಕೊಟ್ಟು ನನ್ನ ಕೆಲಸದ ಭಾರವನ್ನು ಕಡಿಮೆ ಮಾಡಿಕೊಟ್ಟ ಪ್ರಸಾರಾಂಗದ ದಾಸ್ತಾನು ಮಳಿಗೆಯ ಸಹಾಯಕ ನಿರ್ದೇಶಕರಾದ ಮಿತಿಭಾಷಿ ಗೆಳೆಯ ಶ್ರೀ ಸಿ. ಪೂವಯ್ಯ ಅವರಿಗೆ ವಂದನೆಗಳು. ನನ್ನ ಅನೇಕ ಅನುಮಾನಗಳಿಗೆ ಪರಿಹಾರಗಳನ್ನು ನೀಡುತ್ತ, ಶೈಕ್ಷಣಿಕವಾಗಿ ಪ್ರೋತ್ಸಾಹಿಸುತ್ತಿರುವ ನಮ್ಮ ವಿಭಾಗದ ಪ್ರಾಧ್ಯಾಪಕರಾದ ಡಾ. ಡಿ.ಪಾಂಡುರಂಗಬಾಬು ಅವರಿಗೆ ವಂದನೆಗಳು. ವಿಭಾಗದ ಸಹ್ಯೋದ್ಯೋಗಿ ಮಿತ್ರರಾದ ಡಾ. ಅಶೋಕಕುಮಾರ ರಂಜೇರ ಮತ್ತು ಡಾ. ಸಾಂಬಮೂರ್ತಿ ಅವರಿಗೂ ವಂದನೆಗಳು. ಗೆಳೆಯರಾದ ಡಾ. ಹರಿಶ್ಚಂದ್ರ ದಿಗ್ಸಂಗಿಕರ್, ಡಾ. ಹೆಬ್ಬಾಲೆ ಕೆ. ನಾಗೇಶ್ ಮತ್ತು ಡಾ. ನರೇಂದ್ರಕುಮಾರ್ ಅವರಿಗೆ, ಲೇಖನಗಳನ್ನು ತಿದ್ದುಪಡಿ ಮಾಡಲು ಸಹಕರಿಸಿದ ನಮ್ಮ ವಿಭಾಗದ ಸಂಶೋಧನಾ ವಿದ್ಯಾರ್ಥಿಗಳಾದ ಭೀಮನ ಮೇಟಿ, ಎಚ್. ಲಿಂಗಣ್ಣ, ಗುಡುದೂರು ಅನ್ನಪೂರ್ಣ ಮತ್ತು ಎಂ.ಸೋಮಕ್ಕ ಅವರಿಗೆ ವಂದನೆಗಳು.

ಪ್ರೊ. ಸಿ.ಜಿ.ಕೆ ಮತ್ತು ಪ್ರೊ. ಬಿ.ಕೆ. ಚಂದ್ರಶೇಖರ್ ಅವರುಗಳ ಲೇಖನಗಳನ್ನು ಶ್ರೀ ಮಾವಳ್ಳಿ ಶಂಕರ್ ಅವರು ಸಂಪಾದಿಸಿರುವ ‘ಇಂಗ್ಲಿಶ್ ಕಲಿಕೆ ಮತ್ತು ಸಾಮಾಜಿಕ ನ್ಯಾಯ’ ಕೃತಿಯಿಂದ ಆರಿಸಿಕೊಳ್ಳಲಾಗಿದೆ. ಮಾನ್ಯ ಪ್ರೊ .ಬಿ.ಕೆ.ಚಂದ್ರಶೇಖರ್ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಒಪ್ಪಿಗೆ ತೆಗೆದುಕೊಳ್ಳಲಾಗಿದೆ. ಪೀಠದ ಕಾರ್ಯಕ್ರಮಗಳ ಬಗ್ಗೆ ವಿಚಾರಿಸಿ ತಮ್ಮ ಅಭಿ‌ಪ್ರಾಯಗಳನ್ನು ವ್ಯಕ್ತಪಡಿಸಿ ಸಲಹೆ ನೀಡಿದ ಡಾ. ನಟರಾಜ್ ಹುಳಿಯಾರ್ ಮತ್ತು ಡಾ. ಮೊಗಳ್ಳಿ ಗಣೇಶ ಅವರಿಗೆ ವಂದನೆಗಳು. ಶಾಸನ ವಿಭಾಗದ ಮುಖ್ಯಸ್ಥರಾದ ಡಾ. ಕಲವೀರ ಮನ್ವಾಚಾರ್ ಅವರಿಗೂ ವಂದನೆಗಳು.

ಸಕಾಲಕ್ಕೆ ಲೇಖನಗಳನ್ನು ಕಳುಹಿಸಿ; ಪ್ರಕಟಣೆಗೆ ಸಹಕರಿಸಿದ ಎಲ್ಲ ಚಿಂತಕರಿಗೂ ಕೃತಜ್ಞತೆಯನ್ನು ಸಲ್ಲಿಸುತ್ತೇನೆ. ನನ್ನ ಅಧ್ಯಯನಕ್ಕೆ ಪ್ರೋತ್ಸಾಹ ಮತ್ತು ಮಾರ್ಗದರ್ಶನ ಮಾಡುತ್ತಿರುವ ಗುರುಗಳಾದ ಡಾ. ಸಿ.ಎಸ್. ರಾಮಚಂದ್ರ ಅವರಿಗೆ ವಂದನೆಗಳು. ಪುಸ್ತಕ ಸುಂದರವಾಗಿ ಪ್ರಕಟಗೊಳ್ಳಲು ಸಹಕರಿಸಿದ ಪ್ರಸಾರಾಂಗದ ಸಹಾಯಕ ನಿರ್ದೇಶಕರಾದ ಶ್ರೀ ಬಿ. ಸುಜ್ಞಾನಮೂರ್ತಿ, ಕಲಾವಿದ ಶ್ರೀ ಕೆ.ಕೆ. ಮಕಾಳಿ ಅವರಿಗೆ ವಂದನೆಗಳು. ಅಕ್ಷರ ಸಂಯೋಜನೆಯನ್ನು ಅಚ್ಚುಕಟ್ಟಾಗಿ ಮಾಡಿಕೊಟ್ಟ ವಿದ್ಯಾರಣ್ಯ ಗಣಕ ಕೇಂದ್ರದಲ್ಲಿ ಕೆಲಸ ಮಾಡುತ್ತಿರುವ ಶ್ರೀ ಜೆ.ಬಸವರಾಜ ಅವರಿಗೆ ವಂದನೆಗಳನ್ನು ಸಲ್ಲಿಸುತ್ತೇನೆ.