ಸಾವಿರಾರು ವರ್ಷಗಳ ಸುದೀರ್ಘ ಮತ್ತು ಉಜ್ವಲ ಸಾಂಸ್ಕೃತಿಕ ಪರಂಪರೆಯನ್ನು ಹೊಂದಿರುವ ಕನಾಟಕದ ಆಧುನಿಕ ಇತಿಹಾಸದಲ್ಲಿ ಕರ್ನಾಟಕದ ಏಕೀಕರಣ ಒಂದು ಐತಿಹಾಸಿಕವೂ ಮತ್ತು ಮಹತ್ವಪೂರ್ಣವೂ ಆದ ವಿಶಿಷ್ಟ ಘಟನೆ. ಹಾಗೆಯೇ ಕನ್ನಡ ವಿಶ್ವವಿದ್ಯಾಲಯದ ಸ್ಥಾಪನೆ ಮತ್ತೊಂದು ಮಹತ್ವದ ಐತಿಹಾಸಿಕ ಘಟನೆ. ಕರ್ನಾಟಕದ ಇತರೆ ವಿಶ್ವವಿದ್ಯಾಲಯಗಳು ಕೇವಲ ಕೆಲವು ಜಿಲ್ಲೆಗಳಿಗೆ ಮಾತ್ರ ಪರಿಮಿತಗೊಂಡಿದ್ದರೆ ಕನ್ನಡ ವಿಶ್ವವಿದ್ಯಾಲಯದ ವ್ಯಾಪ್ತಿ ಅಖಂಡ ಕರ್ನಾಟಕ ಮಾತ್ರವಲ್ಲದೆ ಕನ್ನಡಿಗ ಮತ್ತು ಕನ್ನಡ ಸಂಸ್ಕೃತಿ ನೆಲೆಸಿರುವ ಎಲ್ಲ ದೇಶ ಮತ್ತು ವಿದೇಶಗಳನ್ನೂ ಒಳಗೊಂಡಿದೆ. ಈ ಕಾರಣದಿಂದ ನಮ್ಮ ವಿಶ್ವವಿದ್ಯಾಲಯದ ದಾರಿ ಮತ್ತು ಗುರಿ ಎರಡೂ ವಿಭಿನ್ನವೂ ಮತ್ತು ವೈಶಿಷ್ಟ್ಯಪೂರ್ಣವೂ ಆಗಿವೆ.

ಕನ್ನಡ ವಿಶ್ವವಿದ್ಯಾಲಯ ಕನ್ನಡ ನಾಡು, ನುಡಿ, ಸಂಸ್ಕೃತಿ ಮತ್ತು ಜನಜೀವನದ ಸರ್ವಮುಖಗಳ ವಿಶಿಷ್ಟವಾದ ಅಂತರಂಗ ಮತ್ತು ಬಹಿರಂಗ ಸಂಪತ್ತನ್ನು ಕುರಿತು ಅಧ್ಯಯನ ಮಾಡುವ, ಸಂಶೋಧಿಸುವ ಮತ್ತು ಅದರ ಅಧ್ಯಯನದ ಫಲಿತಗಳನ್ನು ಜಗತ್ತಿನಾದ್ಯಂತ ಪ್ರಸಾರ ಮಾಡಿ ಕರ್ನಾಟಕದ ಬಗೆಗಿನ ಅರಿವನ್ನು ಜನಸಮುದಾಯದಲ್ಲಿ ವಿಸ್ತರಿಸುವ ಹಾಗೂ ಅನಂತಮುಖಿಯಾದ ವಿಶ್ವಜ್ಞಾನವನ್ನು ಕನ್ನಡ ಜ್ಞಾನವನ್ನಾಗಿ ಪರಿವರ್ತಿಸಿ ಅದು ಕನ್ನಡಿಗರೆಲ್ಲರಿಗೆ ದಕ್ಕುವಂತೆ ಮಾಡುವ ಮೂಲಭೂತ ಆಶೈದ ಪ್ರತಿನಿಧಿಯಾಗಿ ಸ್ಥಾಪಿತಗೊಂಡಿದೆ. ಬೋಧನೆಗಿಂತ ಸಂಶೋಧನೆ, ಸೃಷ್ಟಿಗಿಂತ ವಿಶ್ವಂಭರ ದೃಷ್ಟಿ, ಶಿಥಿಲ ವಿವರಣೆಗಿಂತ ಅತುಳ ಸಾಧ್ಯತೆಗಳನ್ನೊಳಗೊಂಡ ಅನನ್ಯ ಅಭಿವ್ಯಕ್ತಿ, ನಾಡಿನ ಕೋಟಿ ಕೋಟಿ ಶ್ರೀ ಸಾಮಾನ್ಯರ ವಿವಿಧ ಪ್ರತಿಭಾಶಕ್ತಿ ಮತ್ತು ಸಾಮರ್ಥ್ಯಗಳ ಸದ್ಬಳಕೆಯ ಮೂಲಕ ಅವರ ಅಂತಃಪ್ರಜ್ಞೆಯನ್ನು ಎಚ್ಚರಿಸುವ, ವಿಕಸಿಸುವ ಶ್ರದ್ಧಾನ್ವಿತ ಕಾಯಕ ಇದರ ದಾರಿಯಾಗಿದೆ.

ಕನ್ನಡ ನಾಡನ್ನು ಕನ್ನಡ ವಿಶ್ವವಿದ್ಯಾಲಯದಲ್ಲಿ ನೋಡು, ಕನ್ನಡ ವಿಶ್ವವಿದ್ಯಾಲಯವನ್ನು ನೋಡಿದಲ್ಲದೆ ಕನ್ನಡ ನಾಡಿನ ಯಾತ್ರೆ ಸಂಪೂರ್ಣವಾಗದು, ಸಾರ್ಥಕವಾಗದು ಎಂಬಂತೆ ರೂಪುಗೊಳ್ಳುತ್ತಿರುವ ಮತ್ತು ರೂಪುಗೊಳ್ಳಬೇಕಾದ ಮಹಾಸಂಸ್ಥೆ ಇದು. ಕನ್ನಡಪ್ರಜ್ಞೆ ತನ್ನ ಸತ್ವ ಮತ್ತು ಸ್ವತ್ವದೊಡನೆ ವಿಶ್ವಪ್ರಜ್ಞೆಯಾಗಿ ಅರಳಿ ನಳನಳಿಸಬೇಕು; ವಿಶ್ವಪ್ರಜ್ಞೆ ಕನ್ನಡ ದೇಶೀ ಪ್ರಜ್ಞೆಯೊಳಗೆ ಪ್ರವೇಶಿಸಿ, ಪ್ರವಹಿಸಿ, ಸಮನ್ವಯಗೊಂಡು, ಸಂಲಗ್ನಗೊಂಡು, ಸಮರಸಗೊಂಡು ಸಾಕ್ಷಾತ್ಕಾರಗೊಳ್ಳಬೇಕು ಎಂಬುದೇ ಇದರ ಗುರಿ. ಈ ಗುರಿಯ ಮೂಲಕ ಕನ್ನಡ ಕರ್ನಾಟಕತ್ವದ ಉಸಿರಾಗಿ, ವಿಶ್ವಪ್ರಜ್ಞೆಯ ಹಸಿರಾಗಿ, ಕನ್ನಡಮಾನವ ವಿಶ್ವಮಾನವನಾಗಿ ಬೆಳೆಯಲು ಸಾಧನವಾಗಬೇಕು. ಕನ್ನಡಿಗರೆಲ್ಲರ ಸಾಮೂಹಿಕ ಶ್ರಮ ಮತ್ತು ಪ್ರತಿಭೆಗಳ ಸಮಷ್ಟಿ ಪ್ರಕ್ರಿಯೆಯಿಂದ ಬೆಳಕಿನ ಮಹಾಪಥವನ್ನು ಕ್ರಮಿಸುವುದು ನಮ್ಮ ವಿಶ್ವವಿದ್ಯಾಲಯದ ಮಹತ್ತರ ಆಶಯ.

ನಾಗಾಲೋಟದಿಂದ ಕ್ರಮಿಸುತ್ತಿರುವ ಜಗತ್ತಿನ ವ್ಯಾಪಕ ಜ್ಞಾನ, ತಂತ್ರಜ್ಞಾನ ಮತ್ತು ವಿಜ್ಞಾನಗಳ ಶೋಧನೆ ಮತ್ತು ಚಿಂತನೆಗಳನ್ನು ಕನ್ನಡದಲ್ಲಿ ಸತ್ವಪೂರ್ಣವಾಗಿ ದಾಖಲಿಸಿ ಕನ್ನಡ ಓದುಗರ ಜ್ಞಾನವನ್ನು ವಿಸ್ತರಿಸಿ ಅವರಲ್ಲಿ ಪುಸ್ತಕ ಸಂಸ್ಕೃತಿಯನ್ನು ಪ್ರಸರಿಸುವ ವಿಶೇಷ ಹೊಣೆಯನ್ನು ಹೊತ್ತು ನಮ್ಮ ವಿಶ್ವವಿದ್ಯಾಲಯದ ಪ್ರಸಾರಾಂಗ ಅಸ್ತಿತ್ವಕ್ಕೆ ಬಂದಿದೆ. ಶ್ರವ್ಯ, ದೃಶ್ಯ ಮತ್ತು ವಾಚನ ಸಾಮಗ್ರಿಗಳ ಸಮರ್ಪಕ ಉತ್ಪಾದನೆ ಮತ್ತು ವಿತರಣಾ ಪ್ರಕ್ರಿಯೆಗಳ ಮೂಲಕ ಇದು ಈ ಗುರಿಯನ್ನು ತಲುಪಲು ಶಕ್ತಿಮೀರಿ ಪ್ರಯತ್ನಿಸುತ್ತಿದೆ. ಈಗಾಗಲೇ ೬೦೦ಕ್ಕೂ ಹೆಚ್ಚು ವೈವಿಧ್ಯಮಯ ಮತ್ತು ವೈಶಿಷ್ಟ್ಯಮಯ ಕೃತಿಗಳ ಮೂಲಕ ಕನ್ನಡ ಗ್ರಂಥಲೋಕದ ಅಂತರಂಗ ಮತ್ತು ಬಹಿರಂಗ ಸೌಂದರ್ಯಗಳನ್ನು ಉಜ್ವಲಿಸಿರುವ ಇದು ತನ್ನ ಮುಂದಿನ ಗುರಿಯ ಕಡೆಗೆ ಆಶಾದಾಯಕವಾಗಿ ಚಲಿಸುತ್ತಿದೆ.

ಯಾವುದೊ ಅಜ್ಞಾತ ಮೂಲೆಯಲ್ಲಿ ನೀರಿನ ಜಿನುಗು ಕಾಣಿಸಿಕೊಂಡು ಝರಿಯಾಗಿ, ತೊರೆಯಾಗಿ, ನದಿಯಾಗಿ ಹರಿದು ಅಂತಿಮವಾಗಿ ಸಮುದ್ರ ಗಮನ ಮಾಡಿ ವಿಸ್ತಾರ ಸ್ವರೂಪವನ್ನು ಪಡೆದುಕೊಂಡು ಜಗದ ಗಮನವನ್ನು ಸೆಳೆಯುವಂತೆ ಒಂದು ಭಾಷೆ ಯಾವುದೋ ಕ್ಷಣದಲ್ಲಿ ಸ್ತರದಲ್ಲಿ ರೂಪದಲ್ಲಿ ಚಿಮ್ಮಿ ಹೊಮ್ಮಿ ಬರುಬರುತ್ತ ಜೀವನದ ಸಮಗ್ರಾಭಿವ್ಯಕ್ತಿಯಾಗಿ ರೂಪುಗೊಳ್ಳುತ್ತದೆ. ತಿಳುವಳಿಕೆಯ ‌ಸ್ತರ, ಅನುಭವ ಸ್ತರ, ವಿಷಯದ ಸ್ತರ, ಚಿಂತನೆಯ ಸ್ತರಗಳು ಒಂದುಗೂಡುತ್ತಾ ಹೋದಂತೆ ಮತ್ತ ಬದುಕಿನ ಸೂಕ್ಷ್ಮತೆ, ಚಲನಶೀಲತೆ, ಸಂಕೀರ್ಣತೆ ಮತ್ತು ವ್ಯಾಪಕತೆ ಅಧಿಕವಾಗುತ್ತ ಹೋದಂತೆ ಭಾಷೆ ಅದಕ್ಕನುಗುಣವಾಗಿ ನಾನಾ ಅವತಾರಗಳನ್ನು ತಳೆಯುತ್ತ ಹೋಗುತ್ತದೆ. ಈ ಪ್ರಕ್ರಿಯೆಯಲ್ಲಿ ಹೊಸ ಹೊಸ ಪರಿಕಲ್ಪನೆಗಳು ಅನುಭವಗಳು, ಆವಿಷ್ಕಾರಗಳು ಹುಟ್ಟುಕೊಂಡಂತೆಲ್ಲ ಅವುಗಳನ್ನು ಸಮರ್ಥವಾಗಿ ಅಭಿವ್ಯಕ್ತಿಸಲು ಅಗತ್ಯವಾದ ವ್ಯಾಪಕತೆಯನ್ನು ಸೂಕ್ಷ್ಮತೆಯನ್ನು ಶಕ್ತಿಯನ್ನು ಅಸ್ತಿತ್ವದಲ್ಲಿರುವ ಭಾಷಾ ರೂಪಗಳು ಪಡೆದಿಲ್ಲವೆಂಬುದು ಸುವಿದಿತವಾಗುತ್ತ ಹೋಗುತ್ತದೆ. ಆಗ ಈಹೊಸ ಪರಿಕಲ್ಪನೆಗಳಿಗೆ ರೂಪು ಕೊಡಲು ಇತರ ಭಾಷಾ ರೂಪಗಳನ್ನು ಅನಾಮತ್ತಾಗಿ ಆಮದು ಮಾಡಿಕೊಳ್ಳಬೇಕಾಗುತ್ತದೆ. ಅವುಗಳ ರೂಪ ಸ್ವರೂಪಗಳನ್ನು ಮಾರ್ಪಡಿಸಬೇಕಾಗುತ್ತದೆ. ಹಲವು ಪದಗಳನ್ನು ಒಂದೆಡೆ ಕಸಿ ಮಾಡಬೇಕಾಗುತ್ತದೆ. ಅಥವಾ ಇರುವ ಸಮಾಸ ಪದಗಳ ಸ್ವರೂಪದಲ್ಲಿ ಹೊಸ ಸಂಧಿ ಸಮಾಸಗಳನ್ನು ಸೃಷ್ಟಿಸಬೇಕಾಗುತ್ತದೆ. ಹೀಗೆ ಸೃಷ್ಟಿಸುವಾಗ ವ್ಯಾಕರಣ ಅಥವಾ ಭಾಷಾಶಾಸ್ತ್ರದ ನಿಯಮಗಳನ್ನು ಕೆಲವೊಮ್ಮೆ ಅನುಸರಿಸಬಹುದು ಅಥವಾ ಬಹುವೇಳೆ ಸಹಜ ಸ್ವರೂಪದವುಗಳೆಂಬಂತೆ ಗೋಚರಿಸಬಹುದು, ಕೆಲವು ವೇಳೆ ವಿಕೃತ ಮಿಶ್ರಣವೆಂಬಂತೆ ಭಾಸವಾಗಲೂಬಹುದು. ಹೀಗೆ ಹೊಸ ಪರಿಕಲ್ಪನೆಯೊಂದನ್ನು ಸಮರ್ಥವಾಗಿ, ಸಂಕ್ಷಿಪ್ತವಾಗಿ ಅಭಿವ್ಯಕ್ತಿಸುವ ತಹತಹದಲ್ಲಿ ಭಾಷೆಯ ಸಾಂಪ್ರದಾಯಿಕ ಮಡಿವಂತಿಕೆಯನ್ನು ಈ ಹೊಸ ರೂಪಗಳ ಸೃಷ್ಟಿಕರ್ತ ಉದ್ದೇಶಪೂರ್ವಕವಾಗಿಯೋ ಅಥವಾ ಅನುದ್ದೇಶಪೂರ್ವಕವಾಗಿಯೋ ನಿರಾಕರಿಸುತ್ತ ಹೋಗಬಹುದು. ಈ ಹಾದಿಯಲ್ಲಿ ಅಥವಾ ಅನುದ್ದೇಶಪೂರ್ವಕವಾಗಿಯೋ ನಿರಾಕರಿಸುತ್ತ ಹೋಗಬಹುದು. ಈ ಹಾದಿಯಲ್ಲಿ ಭಾಷಾಶುದ್ಧತೆಯನ್ನು ಕಾಯ್ದುಕೊಳ್ಳುವ ಹಂಬಲಕ್ಕಿಂತ ತನ್ನ ಒಳಗಿನ ಅನಿಸಿಕೆಗೆ ಸಾಧ್ಯವಾದಷ್ಟು ಮಟ್ಟಿಗೆ ಅರ್ಥವನ್ನು ಸಾಕ್ಷಾತ್‌ಕರಿಸಿಕೊಡುವ ಉದ್ದೇಶವೇ ಮೇಲುಗೈ ಆಗಿರುತ್ತದೆ. ಈ ಹಿನ್ನೆಲೆಯಲ್ಲಿ ಹೊಸ ಭಾವನೆ, ಕಲ್ಪನೆ, ಚಿಂತನೆ, ವಸ್ತುಸಾಮಗ್ರಿಗಳು ವಿಪುಲ ಪ್ರಮಾಣದಲ್ಲಿ ನಮ್ಮ ಅನುಭವ ಲೋಕವನ್ನು ಹೊಕ್ಕು ನಿರ್ದಿಷ್ಟ ಭಾಷಾರೂಪವನ್ನು ಪಡೆಯಲು ತಹತಹಿಸುವಾಗ ಹೊಸ ಶಬ್ದ ರೂಪುಗಳು ಅನಾಮತ್ತಾಗಿ ಅಥವಾ ಖಚಿತ ಆಲೋಚನೆಯ ಫಲವಾಗಿ ರೂಪದಳೆಯುತ್ತ ಹೋಗುತ್ತವೆ. ನಮ್ಮ ಸಂಪರ್ಕಕ್ಕೆ ಬರುವ ಹತ್ತಾರು ಭಾಷೆಗಳು ದಿನಪತ್ರಿಕೆಗಳು, ಆಕಾಶವಾಣಿ, ದೂರದರ್ಶನ ಹಾಗೂ ಇತರ ಸಂವಹನ ಮಾಧ್ಯಮಗಳು ನೂರಾರುಹೊಸ ವಿಷಯಗಳನ್ನು ನಮ್ಮ ಮೆದುಳಿಗೆ ಮನಸ್ಸಿಗೆ ತುಂಬುತ್ತಿರುವ ಸನ್ನಿವೇಶದಲ್ಲಿ ಸೃಜನಶೀಲ ಹಾಗೂ ಅನುಭವಶೀಲ ಮನಸ್ಸು ಇವುಗಳೆಲ್ಲದರ ಪರಿಭಾವನೆಯಿಂದ ಹೊಸ ಹೊಸ ಶಬ್ದಗಳನ್ನು ಟಂಕಿಸುತ್ತ ಚಲಾವಣೆಗೆ ಕಳಹಿಸಿ ಬಿಡುತ್ತದೆ. ಇವುಗಳಲ್ಲಿ ಕೆಲವು ಜನಮನ್ನಣೆಯ ಮುದ್ರೆಯನ್ನು ಪಡೆದು ಸರ್ವಸಾಧಾರಣವಾಗಿ ಬಳಕೆಯಾಗಬಹುದು ಅಥವಾ ಕ್ವಚಿತ್ ಪ್ರಯೋಗಗಳಾಗಿ ಬಳಕೆಗೆ ಬಾರದೆಯೇ ಉಳಿದು ಹೋಗಿಬಿಡಬಹುದು. ಏನೇ ಆದರೂ ಆಧುನಿಕ ಜಗತ್ತಿನ ಸಂಕೀರ್ಣ ಚಿಂತನಾನುಭವಗಳು ಒಂದು ಭಾಷೆಯ ಬೆಳವಣಿಗೆಯಲ್ಲಿ ಮತ್ತು ಅದರ ಸೃಜನಶೀಲತೆಯನ್ನು, ಸರ್ವಗ್ರಾಹಿತ್ವವನ್ನು ಹೆಚ್ಚಿಸಲು ಸಹಾಯಕವಾಗುತ್ತವೆ. ಪ್ರತಿಯೊಂದು ಭಾಷೆಯ ಬದುಕಿನುದ್ದಕ್ಕೂ ಇಂತಹ ಪ್ರಯೋಗಗಳು ನಡೆಯುತ್ತಾ ಹೋಗುತ್ತವೆ. ಕನ್ನಡ ಭಾಷೆಯೂ ಇದಕ್ಕೆ ಹೊರತಲ್ಲ.

ವಿವಿಧ ಮಾಧ್ಯಮಗಳು ದಿನನಿತ್ಯವೂ ತನ್ನ ಸೃಜನಶೀಲ ಹಾಗೂ ಪ್ರಯೋಗಶೀಲ ಸಾಮರ್ಥ್ಯಕ್ಕನುಗುಣವಾಗಿ ಇಂತಹ ಹೊಸ ರೂಪಗಳನ್ನು ಸೃಷ್ಟಿಸುತ್ತಿರುವಾಗ ಇವುಗಳನ್ನು ತೆರೆದ ಮನಸ್ಸಿನಿಂದ ಗ್ರಹಿಸುವ, ವಿಶ್ಲೇಷಿಸುವ ಅವುಗಳ ಗುಣಾವಗುಣಗಳನ್ನು ಹಾಗೂ ಸಾಧುತ್ವ, ಆಸಾಧುತ್ವಗಳನ್ನು ತಿಕ್ಕಿ ನೋಡುವ ಕೆಲಸವನ್ನು ಭಾಷಾ ವಿಜ್ಞಾನಿಗಳು ಮಾಡುತ್ತಲೇ ಹೋಗುತ್ತಾರೆ. ಇಂತಹ ಹೊಸ ಪದಗಳನ್ನು ಕಲಿತವರು ಮಾತ್ರ ಮಾಡುತ್ತಾರೆಂದಲ್ಲ, ಕಲಿಯದವರೂ ಸಹ ಅಚಾನಕ್ ಆಗಿ ಮತ್ತು ಅನಿರೀಕ್ಷಿತವಾಗಿ ಅಥವಾ ಅನುಕರಣೆಯೀಂದಾಗಿ ಇಂತಹ ಪದಗಳನ್ನು ಸೃಷ್ಟಿಸಿಬಿಡುತ್ತಾರೆ. ಇಂತಹ ಪ್ರಯೋಗ ಮತ್ತು ಪರೀಕ್ಷೆಗಳಿಂದಾಗಿಯೇ, ಸ್ವೀಕರಣ ಹಾಗೂ ಆಸ್ವೀಕರಣಗಳಿಂದಾಗಿಯೇ ಒಂದು ಭಾಷೆ ತನ್ನ ಸರ್ವಂಭರತ್ವವನ್ನು ವೃದ್ಧಿಸಿಕೊಳ್ಳುತ್ತ ಹೋಗುತ್ತದೆ. ಈ ಪ್ರಕ್ರಿಯಲ್ಲಿ ಕನ್ನಡ ವಿಶ್ವವಿದ್ಯಾಲಯದ ಭಾಷಾಭಿವೃದ್ಧಿ ವಿಭಾಗ ಸಹಜವಾಗಿಯೇ ಆಸಕ್ತಿಯನ್ನು ತಳಿದಿದೆ. ಇದರ ಫಲವೇ ‘ದಿನದಿನ ೨’.

ನಮ್ಮ ವಿಶ್ವವಿದ್ಯಾಲಯದಿಂದ ಪ್ರಕಟವಾಗುವ ‘ನಮ್ಮ ಕನ್ನಡ’ ನಿಯತಕಾಲಿಕೆಯಲ್ಲಿ ವಿವಿಧ ಮೂಲಗಳಿಂದ ಸಂಗ್ರಹಿಸಲಾದ ಇಂತಹ ಕುತೂಲಹಕರ ಪದಗಳನ್ನು ಸಂಗ್ರಹಿಸಿ ಅದರ ವಿಶ್ಲೇಷಣೆಯನ್ನು ಮಾಡಲಾಗುತ್ತಿದೆ. ದಿನದಿನವೂ ಹುಟ್ಟಿಕೊಳ್ಳುವ ಭಾಷೆಯ ನೂತನತೆಯನ್ನು ಆವಿಷ್ಕಾರಗಳನ್ನು ಪರಿಶೀಲಿಸಿ ನಮ್ಮ ಭಾಷಾಕೋಶವನ್ನು ಬೆಳೆಸುವ ಮತ್ತು ಅವುಗಳಿಗೆ ಭಾಷಾಶಾಸ್ತ್ರೀಯ ಆಲೋಚನೆಗಳ ಚೌಕಟ್ಟನ್ನು ಹಾಕುವ ಪರಿ ಇದು. ಭಾಷಾಭಿವೃದ್ಧಿ ವಿಭಾಗದ ಡಾ. ಸಾಂಬಮೂರ್ತಿ ಅವರು ಸಂಪಾದಿಸಿರುವ ಈ ಕೃತಿ ಒಂದು ಜೀವಂತ ಭಾಷೆಯ ಬೆಳವಣಿಗೆಯಲ್ಲಿ ಮತ್ತು ತ್ರಿವಿಕ್ರಮತ್ವದಲ್ಲಿ ಆಸಕ್ತಿ ಇರುವ ಎಲ್ಲರೂ ಕುತೂಹಲದಿಂದ ಗಮನಸಬೇಕಾದ ಕೃತಿ. ಅಷ್ಟೇ ಅಲ್ಲ, ಭಾಷೆಗೆ ಸಂಬಂಧಿಸಿದ ಹೊಸ ಚರ್ಚೆಗಳಿಗೆ ಅವಕಾಶ ಮಾಡಿಕೊಡುವ ಕೃತಿಯೂ ಇದಾಗಿದೆ. ಭಾಷಾಭಿವೃದ್ಧಿ ವಿಭಾಗದ ಡಾ. ಸಾಂಬಮೂರ್ತಿ ಅವರು ಸಂಪಾದಿಸಿರುವ ಈ ಕೃತಿ ಒಂದು ಜೀವಂತ ಭಾಷೆಯ ಬೆಳವಣಿಗೆಯಲ್ಲಿ ಮತ್ತು ತ್ರಿವಿಕ್ರಮತ್ವದಲ್ಲಿ ಆಸಕ್ತಿ ಇರುವ ಎಲ್ಲರೂ ಕುತೂಹಲದಿಂದ ಗಮನಸಬೇಕಾದ ಕೃತಿ. ಅಷ್ಟೇ ಅಲ್ಲ, ಭಾಷೆಗೆ ಸಂಬಂಧಿಸಿದ ಹೊಸ  ಚರ್ಚೆಗಳಿಗೆ ಅವಕಾಶ ಮಾಡಿಕೊಡುವ ಕೃತಿಯೂ ಇದಾಗಿದೆ. ಭಾಷಾಭಿವೃದ್ಧಿ ವಿಭಾಗದ ಮುಖ್ಯಸ್ಥರೂ ಸ್ವತಃ ಖ್ಯಾತ ಭಾಷಾವಿಜ್ಞಾನಿಗಳೂ ಆಗಿರುವ ಡಾ.ಕೆ.ವಿ. ನಾರಾಯಣ ಅವರ ಮಾರ್ಗದರ್ಶನದಲ್ಲಿ ರಚಿತವಾದ ಈ ಕೃತಿಯನ್ನು ಕನ್ನಡ ಭಾಷಾ ಪ್ರೇಮಿಗಳು ಆಸಕ್ತಿಯಿಂದ ಬರಮಾಡಿಕೊಳ್ಳುವರೆಂಬ ನಂಬಿಕೆ ನನ್ನದು. ಇಂತಹದೊಂದು ಕೃತಿಯನ್ನು ಸಂಪಾದಿಸಿಕೊಟ್ಟ ಡಾ. ಸಾಂಬಮೂರ್ತಿ ಅವರು ಅಭಿನಂದನೆಗೆ ಅರ್ಹರು.

ಡಾ. ಎಚ್.ಜೆ. ಲಕ್ಕಪ್ಪಗೌಡ
ಕುಲಪತಿಗಳು