ಕಣ್ಣಕಟ್ಟಿ ಕನ್ನಡಿಯ ತೋರುವಂತೆ

ಕನ್ನಡ ಸಾಂಸ್ಕೃತಿಕ ಇತಿಹಾಸದಲ್ಲಿ ಇಪ್ಪತ್ತನೆಯ ಶತಮಾನ ಒಂದು ಸುವರ್ಣ ಘಟ್ಟ. ಭಾಷೆ, ಛಂದಸ್ಸು, ಸಾಹಿತ್ಯ, ಲಲಿತಕಲೆ, ಶಾಸ್ತ್ರಸಾಹಿತ್ಯ ಇವೇ ಮುಂತಾದ ಪ್ರಕಾರಗಳಲ್ಲಿ ಕನ್ನಡವು ಪಡೆದಂಥ ಸಿದ್ಧಿ ಹಿಂದಿಲ್ಲ ಮುಂದಿಲ್ಲ. ಇದರ ಜತೆಗೆ ಬೇರೆ ಬೇರೆ ಭಾಷಾ ಸಾಹಿತ್ಯಗಳಿಂದ ಆದ ಆದಾನ – ಪ್ರದಾನಗಳು ಕನ್ನಡ ಸಂಸ್ಕೃತಿಗೆ ಕೋಡು ಮೂಡಿಸಿತು. ನಮ್ಮ ತಳಹದಿ ತಿಳಿಯಲು ಮೂಲದ ಬೇರುಗಳಿಗೆ ಹೋಗುವುದು ಸರಿಯಷ್ಟೇ. ಕನ್ನಡ ಸಂಸ್ಕೃತಿಯ ತಳಹದಿ ಅದರ ಆಕೃತಿ ಮತ್ತು ಆಶಯಗಳನ್ನು ನಾವು ತಿಳಿಯಬೇಕಾದರೆ ತಮಿಳು, ಮಲಯಾಳಂ, ತೆಲುಗು, ತುಳು ಜತೆಜತೆಗೆ ಮರಾಠಿ, ಭಾಷಾ ಸಾಹಿತ್ಯಗಳನ್ನು ಅರಿಯುವುದು ಅಗತ್ಯವಿದೆ. ಇಷ್ಟು ಮಾತ್ರವಲ್ಲ, ದ್ರಾವಿಡ ಸಂಸ್ಕೃತಿಯ ಉಪಭಾಷೆಗಳ ಅಧ್ಯಯನದ ಅಗತ್ಯವೂ ಇದೆ. ಇಪ್ಪತ್ತನೆಯ ಶತಮಾನವು ಹೀಗೇ ಹಲವು ಪ್ರಕಾರಗಳ, ಹಲವು ನೆಲೆಗಳ, ಹಲವು ತಾತ್ತ್ವಿಕ ಸಂಗತಿಗಳತ್ತ ಮುಖಕೊಟ್ಟು ನಿಂತಿತು. ಕನ್ನಸವು ಕನ್ನಡಿಯಾಗಬೇಕಾದರೆ ಕನ್ನಡ ಮಾತ್ರವಲ್ಲ, ತದಿತರ ಭಾಷಾಸಾಹಿತ್ಯಗಳ ಮೂಲಬೇರುಗಳನ್ನು ತಿಳಿಯುವುದು ಅಗತ್ಯವೆಂಬ ಅಂಶಕ್ಕೆ ಒತ್ತು ನೀಡಿದೆ.

ಈಗ ನಾವು ದಕ್ಷಿಣಭಾರತದ ಸಾಂಸ್ಕೃತಿಕ ಇತಿಹಾಸದ ಪುನಾರಚನೆಯ ನೆಲೆಯಲ್ಲಿ ನಿಂತಿದ್ದೇವೆ. ಇದು ಅರ್ಥಾತ್ ದ್ರಾವಿಡ ಸಂಸ್ಕೃತಿಯ ಅಧ್ಯಯನವೂ ಆಗಿದೆ. ನಾವು ‘ದ್ರಾವಿಡ’

ಎಂಬ ಪರಿಭಾಷೆಯನ್ನು ಜನಾಂಗೀಯ ನೆಲೆಯಲ್ಲಿ ನೋಡಬೇಕಿಲ್ಲ. ಅದು ಆರ್ಯ ಮತ್ತು ದ್ರಾವಿಡ ಎಂಬ ಪೂರ್ವಕಲ್ಪಿತ ನೆಲೆಯಲ್ಲಿ ಹೇಗೋ ಹಿಂದೆ ನಿಂತಿದ್ದಿತು. ಈಗ ನಾವು ಅದರಿಂದ ಬಿಡುಗಡೆ ಪಡೆದಿದ್ದೇವೆ. ದ್ರಾವಿಡ ಸಂಸ್ಕೃತಿ ಎಂಬುದನ್ನು ನಾವು ವಿಶಾಲಾರ್ಥದಲ್ಲಿ ಆಧುನಿಕಾರ್ಥವಾಗಿ ಬಳಸುತ್ತಿದ್ದೇವೆ. ದ್ರಾವಿಡ ಸಂಸ್ಕೃತಿ ಎಂಬುದು ಎಲ್ಲ ಬಗೆಯ ದಕ್ಷಿಣ ಭಾರತದ ಮೂಲ ರೂಪಿಕೆಗಳನ್ನು ಹೊಂದಿದೆ. ದ್ರಾವಿಡ ಎಂಬುದನ್ನು ತಮಿಳು ಎಂದು ರಾಜಕೀಯ ನೆಲೆಯಲ್ಲಿ ವಿವರಿಸಿಕೊಳ್ಳುವ ಯತ್ನಗಳು ಹಿಂದೆ ನಡೆದುವು. ನಮ್ಮ ಹೊಸ ತಿಳುವಳಿಕೆಯ ಬೆಳಕಿನಲ್ಲಿ ಕೇವಲ ತಮಿಳು ಭಾಷಾ ಸಾಹಿತ್ಯಕ್ಕೆ ಮಾತ್ರ ಸಂಬಂಧಿಸದೆ ಅದು ವ್ಯಾಪಕಾರ್ಥದಲ್ಲಿ ಕನ್ನಡವೂ ಸೇರಿಕೊಂಡಂತೆ ತೆಲುಗು, ತುಳು, ಮಲಯಾಳಂ ಮತ್ತು ತದಿತರ ಉಪಭಾಷೆಗಳಿಗೂ ಉಪಭಾಷೆಯ ಸಂಸ್ಕೃತಿಗೂ ಸೇರಿದೆ. ದುರದೃಷ್ಟವಶಾತ್ ‘ದ್ರಾವಿಡ’ ಎಂಬುದು ನಮ್ಮ ಪ್ರಾರಂಭಿಕ ಸಂಸ್ಕೃತಿ ಅಧ್ಯಯನಗಳ ನೆಲೆಯಲ್ಲಿ ಕೇವಲ ಏಕಸಂಸ್ಕೃತಿ ಘಟಕವೆಂದೇ ತಿಳಿಯಲಾಗಿತ್ತು. ಎಂ.ಬಿ.ಎಮಿನೊ ಮತ್ತು ಟಿ.ಬರೋ ಅವರು ಸಿದ್ಧಪಡಿಸಿರುವ ‘ಡಿಇಡಿ’ ಕೋಶವು ಈ ಅಪಪ್ರಥೆಯನ್ನು ನಿರಾಕರಿಸಿತು. ಕಿಟೆಲ್ ನಿಘಂಟು ಕೂಡ ಇದನ್ನು ಉಚ್ಛಾಟಿಸಿದೆ. ಈ ಸಂದರ್ಭದಲ್ಲೆ ನಾವು ಒಂದು ನೆನಪನ್ನು ಮಾಡಿಕೊಳ್ಳಬಹುದು, ಹತ್ತೊಂಬತ್ತು ಮತ್ತು ಇಪ್ಪತ್ತನೆಯ ಶತಮಾನದಲ್ಲಿ ಸಂಸ್ಕೃತವೇ ಎಲ್ಲದಕ್ಕೂ ‘ತಾಯಿ’ ಎಂಬ ಗ್ರಹಿಕೆಯಲ್ಲಿ ತಿಳಿದಂತೆ; ತಮಿಳು ಭಾಷಾ ಸಾಹಿತ್ಯವೇ ಉಳಿದವೆಲ್ಲಕ್ಕೂ ಮೂಲ ಎಂಬ ಗ್ರಹಿಕೆ ಇತ್ತು.

ಬಿ.ಎಂ.ಶ್ರೀ, ಶಂಬಾ ಜೋಶಿ, ಗೋವಿಂದ ಪೈ, ಆರ್. ನರಸಿಂಹಾಚಾರ್ಯ ಮೊದಲಾದವರು ತಮ್ಮ ತಮ್ಮ ಬರಹಗಳಲ್ಲಿ ಇದಕ್ಕೆ ಪ್ರತಿಶೋಧಾತ್ಮಕವಾಗಿ ಕೆಲವೊಮ್ಮೆ ಪುನಾರಚನೆಯ ನೆಲೆಯಲ್ಲಿ ಮಗುದೊಮ್ಮೆ ವಿವರಿಸಿಕೊಂಡದ್ದುಂಟು. ನಾವೀಗ ‘ತಮಿಳು’ ಅರ್ಥಾತ್ ದ್ರಾವಿಡ ಎಂಬ ರಾಜಕೀಯ ಪರಿಭಾಷೆಯ ನೆಲೆಗಳಿಂದ ಹೊರಬಂದಿದ್ದೇವೆ. ಈ ಹೊತ್ತು ನಡೆಯುತ್ತಿರುವ ‘ದ್ರಾವಿಡ ಅಧ್ಯಯನ’ ಎಂಬುದು ವಿಶಾಲವೂ ವ್ಯಾಪಕವೂ ವಿಶಿಷ್ಟವೂ ಆದ ಚಹರೆಗಳನ್ನು ಹೊತ್ತಿದೆ. ಈ ಚಹರೆಗಳು ಭಾಷೆ ಮತ್ತು ಸಂಸ್ಕೃತಿಯ ಒಳಗಡೆ ವಿರೋಧಿ ನೆಲೆಗಳನ್ನು ಸೃಜಿಸುತ್ತಿಲ್ಲ. ಬದಲಾಗಿ ಅದು ಪರಸ್ಪರ ಕಂಡುಕೊಳ್ಳುವ, ಕೂಡಿಕೊಳ್ಳುವ, ತಿಳಿದುಕೊಳ್ಳುವ, ವಿಸ್ತರಣೆಗೊಳ್ಳುವ ಮಾದರಿಗಳನ್ನು ಹೊತ್ತಿದೆ. ಇದು ಒಂದು ಬಗೆಯಲ್ಲಿ ಶುಭಸಂಗತಿಯೇ ಹೌದು!! ದ್ರಾವಿಡ ಸಂಸ್ಕೃತಿ ಅಧ್ಯಯನವು ಒಂದು ರೀತಿಯಲ್ಲಿ ವಿಸ್ತರಣಾತ್ಮಕ ಅಧ್ಯಯನವೂ ಹೌದು, ಅದೇ ಹೊತ್ತಿಗೆ ಕಟ್ಟಿಕೊಂಡ ಕಲ್ಪಿತ ಚರಿತ್ರೆಗಳ ಮುರಿಯುವಿಕೆಯೂ ಹೌದು! ಕನ್ನಡ, ತಮಿಳು ಮತ್ತು ತೆಲುಗು ಸಾಹಿತ್ಯಗಳಲ್ಲಿರುವ ‘ದೇಸಿಕ್ರಮ’ಗಳ ತುಲನಾತ್ಮಕ ಅಭ್ಯಾಸ ಮಾಡಿದರೆ, ಈ ಮುರಿಯುವಿಕೆ ಸಾಹಿತ್ಯದ ನೆಲೆಯಲ್ಲಿ ಸದಾ ನಡೆದಿರುವುದನ್ನು ಕಾಣುತ್ತೇವೆ.

ಮನುಷ್ಯ ಚರಿತ್ರೆಯನ್ನು ನಿರ್ಮಿಸುತ್ತಿಲ್ಲ. ಅವನು ಅದನ್ನು ನಿರ್ಮಿಸಲಾರ. ಚರಿತ್ರೆಯ ನಿರ್ಮಾಣ ಸಂಸ್ಕೃತಿಗೆ ಸೇರಿದ್ದು. ಚರಿತ್ರೆ ಕಲ್ಪಿತ ಕಟ್ಟಡವಲ್ಲ ಎಂಬುದು ಇದಕ್ಕಾಗಿಯೇ. ಭಾಷೆಯ ಚರಿತ್ರೆ, ಮನುಷ್ಯ ಚರಿತ್ರೆ, ಸಾಹಿತ್ಯ ಚರಿತ್ರೆ ಎಂಬುದು ಹಲವು ಎಳೆಗಳ ಕೂಡಾಟವೂ ಹೌದು, ಮುರಿದಾಟವೂ ಹೌದು. ಕೆಡವದೆ ಹೊಸದನ್ನು ಕಟ್ಟುವುದು ಅಸಾಧ್ಯವಷ್ಟೆ. ‘ದ್ರಾವಿಡ’ ಎಂಬ ಪರಿಕಲ್ಪನೆಯು ಹೀಗೆ ಮುರಿದುಕಟ್ಟಿರುವ ಹೊಸ ಕಟ್ಟಡವೇ ಆಗಿದೆ. ಒಂದು ಸಾಂಸ್ಕೃತಿಕ ಇತಿಹಾಸವು ಕಾಲಕಾಲಕ್ಕೆ ಪರಿಕಲ್ಪನೆಗಳನ್ನು ತನ್ನ ಅಗತ್ಯಕ್ಕೆ ತಕ್ಕಂತೆ, ಸಮಾಜಕ್ಕೆ ತಕ್ಕಂತೆ, ಮುರಿದುಕಟ್ಟುವ ಕ್ರಿಯೆಯಲ್ಲಿ ಸದಾ ತೊಡಗುತ್ತದೆ. ತಮಿಳಿನ ನಾಯನ್ಮಾರರು, ಆಳ್ವಾರರು, ತೆಲುಗಿನ ತತ್ತ್ವಪದಕಾರರು, ಕನ್ನಡದ ವಚನಕಾರರು ಹೀಗೆ ಇವರೆಲ್ಲ ಮುರಿದುಕಟ್ಟುವ ಕ್ರಿಯೆಯಲ್ಲಿ ತೊಡಗಿದವರೇ. ಹೀಗೆ ಮುರಿಯುವ ಸ್ವಾತಂತ್ರ್ಯ ಮಾರ್ಗಕ್ಕಿಲ್ಲ. ಆದರೆ, ಮುರಿದು ಕಟ್ಟುವ ಸ್ವಾತಂತ್ರ್ಯ ದೇಸಿ ಕ್ರಮಕ್ಕುಂಟು. ಈ ದೇಸಿಯು ಅವಧೂತ, ಸಿದ್ಧ, ಭೈರವ, ಗೋರಕ್ಷ ಈ ಬಗೆಯ ಸಾಂಸ್ಕೃತಿಕ ಶಕ್ತಿವಲಯದ ರಚನೆಯನ್ನು ಮಾಡುತ್ತದೆ. ಈ ರಚನೆಗಳು ಪುನಾರಚನೆಗಳಾಗಿ, ಕಲ್ಪಿತ ಚರಿತೆಗಳನ್ನು ಮುರಿಯುವ ಹಂಬಲದಲ್ಲಿ ತೊಡಗುತ್ತವೆ.

ನಾವೀಗ ಇಪ್ಪತ್ತೊಂದನೆಯ ಶತಮಾನದಲ್ಲಿ ಇದ್ದೇವೆ. ನಮ್ಮ ಅಧ್ಯಯನಗಳು ಕೇವಲ ಪ್ರದರ್ಶನಾತ್ಮಕವಾಗದೆ, ನಮ್ಮ ಒಡಲುರಿಗೆ ಬೇಕಾದ ಆಹಾರವನ್ನು, ರಕ್ತವನ್ನು ಕೂಡಿಕಟ್ಟುವ ಅಧ್ಯಯನಗಳಿಂದಲೇ ಪರಿಚಯಗೊಳಿಸಿಕೊಳ್ಳಬೇಕಾಗಿದೆ. ಇಷ್ಟು ಮಾತ್ರವಲ್ಲ. ಏಕರೂಪೀ ಘಟಕಗಳ ಮಾದರಿಯನ್ನು ಮುರಿದು ಬಹುರೂಪೀ ಮಾದರಿಗಳಲ್ಲಿ ಮುನ್ನಡೆಯಬೇಕಾಗಿದೆ. ಆಗ ಭಾಷೆ, ಸಾಹಿತ್ಯ, ಲಲಿತಕಲೆ, ಮಾನವಶಾಸ್ತ್ರ, ವಂಶಶಾಸ್ತ್ರ, ಖಗೋಳ, ಭೋಗೋಳಗಳು ಬೇರೆ ಬೇರೆ ಎನ್ನಿಸದೆ ಅವು ಒಂದರೊಳಗೊಂದು ಸೇರಿಕೊಂಡು ದೀಪಗಳಾಗಿ, ಕನ್ನಡಿಗಳಾಗಿ ಸಂಸ್ಕೃತಿಯನ್ನು ಪೋಷಿಸುತ್ತವೆ; ನಮಗೆ ದಾರಿಗಳಾಗುತ್ತವೆ.

ಕನ್ನಡ, ತಮಿಳು, ಮಲಯಾಳಂ, ತೆಲುಗು, ತುಳು ಮತ್ತು ದ್ರಾವಿಡದ ಇತರೆ ಉಪಭಾಷೆಗಳು ಕೇವಲ ಚಾರಿತ್ರಿಕ ಗತಿಯನ್ನು ಮಾತ್ರ ಅನುಸರಿಸದೆ, ಅವು ಒಂದರೊಳಗೊಂದು ಅನಾದಿಕಾಲದಿಂದ ಮಾಡಿಕೊಂಡ ಕೊಡುಕೊಳ್ಳುವಿಕೆಗಳ ಚೈತನ್ಯದಲ್ಲಿ ಮುಳುಗಿದ್ದವು. ಅವು ನಿಜಾರ್ಥದಲ್ಲಿ ಪೋಷ್ಯ ಭಾವವನ್ನು ಹೊತ್ತಿದ್ದುವು. ನಾವೀಗ ಕಟ್ಟಿಕೊಳ್ಳಲು ಬಯಸುತ್ತಿರುವ ಸಾಂಸ್ಕೃತಿಕ ಜಗತ್ತು ಈ ಮಾದರಿಯ ಮುಂದುವರಿಕೆಯೇ ಆಗಬೇಕಾಗಿದೆ. ನಾವು ನಿನ್ನೆಗಳನ್ನು ತಿಳಿಯದೆ ಇಂದಿನ ಗತಿಯನ್ನೂ ನಾಳಿನ ದಾರಿಯನ್ನೂ ಹೇಗೆ ತಿಳಿಯಬಲ್ಲೆವು? ಹೊಸ ದಾರಿಗಳ ನಿರ್ಮಾಣಕ್ಕೆ ಹೊಸ ಪರಿಕ್ರಮಗಳು ಬೇಕು. ಆದರೆ, ಹಳೆಯ ಉಪಕರಣಗಳಿಗೆ ಹೊಸ ಆಶಯವನ್ನು ತಂದುಕೊಳ್ಳುವುದೂ ಅಗತ್ಯವಿದೆ. ಬಸವಣ್ಣ ತನ್ನೊಂದು ವಚನದಲ್ಲಿ ಈ ಆಶಯವನ್ನು ‘ಕಣ್ಣಕಟ್ಟಿ ಕನ್ನಡಿಯ ತೋರುವಂತೆ’ ಎಂದು ವಿಡಂಬಿಸಿದ್ದಾನೆ. ಈ ಮಾತು ವ್ಯಕ್ತಿಗೆ ಹೇಗೆ ಅನ್ವಯವೋ ಸಮಾಜಕ್ಕೂ ಸಮಾಜ ರೂಪಿಸಿರುವ ಭಾಷೆಗೂ ಆ ಭಾಷೆಯ ಮೂಲಕ ರೂಪುಗೊಳ್ಳುತ್ತಿರುವ ತಾತ್ತ್ವಿಕವಿಶ್ವಕ್ಕೂ ಅನ್ವಯವೇ. ಪ್ರತಿಯೊಬ್ಬರು ಭಾಷೆ ಮತ್ತು ಸಂಸ್ಕೃತಿಯ ಕನ್ನಡಿಯಲ್ಲಿ ತಮ್ಮನ್ನು ತಾವು ನೋಡಿಕೊಂಡೇ ಮುಂದುವರಿಯುತ್ತಾರೆ. ಕನ್ನಡಿಯಲ್ಲದೆ ಮುಖವಿಲ್ಲ, ಮನಸ್ಸಿಲ್ಲ, ಭಾಷೆಯಿಲ್ಲ, ಸಂಸ್ಕೃತಿಯೂ ಇಲ್ಲ. ಇಂಥ ಕನ್ನಡಿಗಳು ಕಣ್ಣ ಕಟ್ಟಿಕೊಂಡ ಆಶಯಗಳಾಗಿ ಇರಕೂಡದು ಅಷ್ಟೇ. ಆದರೆ, ಅವು ಅವರ ಜಗತ್ತನ್ನು ವಿಸ್ತರಣೆಗೊಳಿಸುತ್ತ ಹೋಗಬೇಕು.

ಈಗಾಗಲೇ ಹಳತಾದ ಪರಿಕಲ್ಪನೆಗಳನ್ನು ಮೂಲೆಯಲ್ಲಿಟ್ಟು, ಹೊಸ ಪರಿಕಲ್ಪನೆಗಳ, ಆಂತರಿಕ ವಿನ್ಯಾಸಗಳ ಮೂಲಕ ‘ದ್ರಾವಿಡವಿಶ್ವ’ ವನ್ನು ಅದರೊಳಗಿನ ನೂರಾರು, ಸಹಸ್ರಾರು ಅಗಮ್ಯ ಮುಖಗಳನ್ನು ಹುಡುಕುವ ಧೈರ್ಯಕ್ಕೆ ಕೈಯಿಕ್ಕಬೇಕಾಗಿದೆ. ಭಾರತೀಯ ಮಟ್ಟದಲ್ಲಿ ದ್ರಾವಿಡವು ಹಳೆಯ – ಪಳೆಯ ಮುಖವೇನೋ ಹೌದು. ಆದರೆ, ನಮಗದು ಕಾಂಡಪಟವಾಗಿ ಪರಿಣಮಿಸುತ್ತಿದೆ. ನಾವು ಈಗ ತೆರೆಯನ್ನು ಸರಿಸಿ ಕೂಡುವ ನೆಲೆಗೆ ನಮ್ಮನ್ನು ನಾವೇ ಒಯ್ದುಕೊಳ್ಳಬೇಕಾಗಿದೆ. ಹೊಸ ಅಧ್ಯಯನಗಳು ಆಗ ಪ್ರದರ್ಶನಾತ್ಮಕವಾಗದೆ, ನಮ್ಮ ಸಹಜೀವನದ ಭಾಗವೇ ಆಗುತ್ತವೆ.

ದ್ರಾವಿಡ ಅಧ್ಯಯನಗಳ ಇತಿಹಾಸಕ್ಕೆ ಎರಡು ನೂರಕ್ಕೂ ದೀರ್ಘಕಾಲದ ಇತಿಹಾಸವುಂಟು. ಈ ಇತಿಹಾಸ ಆರಂಭವಾಗುವುದು ವಸಾಹತುಶಾಹಿ ಕಾಲಘಟ್ಟದಲ್ಲೆಂಬುದು ಕುತೂಹಲಕರ ವಿಷಯ. ಭಾರತೀಯ ಪಂಡಿತರು ಸಂಸ್ಕೃತ ಆಕರಗಳ ಮೂಲಕ ದಕ್ಷಿಣ ಭಾರತ ಅಥವ ದಖ್ಖನ್ ಚರಿತ್ರೆಯ ಆಕೃತಿಯನ್ನು ಕಟ್ಟುತ್ತಿದ್ದರೆ, ಆಯಾಯ ದ್ರಾವಿಡ ಪ್ರದೇಶಗಳ ದೇಸೀ ಪಂಡಿತರು ತಮ್ಮ ತಮ್ಮ ಸ್ಥಳೀಯ ಚರಿತ್ರೆಯ ಮೂಲಕ ದ್ರಾವಿಡ ಇತಿಹಾಸದ ಆಕೃತಿಯನ್ನು ಕಟ್ಟುತ್ತಿದ್ದರು. ಈ ಅಂಶವು ಅಧ್ಯಯನಕ್ಕೆ ಹೊಸ ಬಾಗಿಲನ್ನು ತೆರೆಯುತ್ತಿತ್ತು. ಸ್ಥಳೀಯ ಲಭ್ಯವಿವರಗಳೆಂದರೆ: ಕರ್ನಾಟಕ, ತಮಿಳುನಾಡು, ಕೇರಳ, ಆಂಧ್ರ, ತುಳು ಮತ್ತು ದಕ್ಷಿಣ ಮಹಾರಾಷ್ಟ್ರಗಳು ತಮ್ಮ ಅಸ್ಮಿತತೆಯನ್ನು ಹುಡುಕಿಕೊಳ್ಳುತ್ತಿದ್ದ ಪರಿಯೂ ಇದೇ ಆಗಿತ್ತು. ದೇಸೀ ಎಂಬುದು ಅವರ ಮನೆಯ ಹಿತ್ತಿಲು ಮತ್ತು ಜಗುಲಿ: ಊರಿನ ತೋಪು, ಊರ ಮುಂದಿನ ಗುಡಿ. ಇವು ಒಂದು ದೇಸಿ ಸಂಸ್ಕೃತಿಯ ರೂಪಕಗಳೇ ಸರಿ. ದಖ್ಖನ್ – ದಕ್ಷಿಣ ಭಾರತದ ಒಟ್ಟು ನೈಸರ್ಗಿಕ – ಗ್ರಾಮೀಣರೂಪ ಇದಕ್ಕಿಂತ ಭಿನ್ನವಲ್ಲ. ಊರೊಳಗಣ ಜಗತ್ತನ್ನು ಗುಡಿ ಪ್ರತಿಮಿಸುತ್ತಿದ್ದುವು. ಸೀಮೆಯೊಳಗಣ ಜಗತ್ತನ್ನು ಊರ ಹೊರಗಿನ ‘ತೋಪು’ ನಿರ್ಧರಿಸುವುದನ್ನು ನಾವು ಪ್ರಮುಖವಾಗಿ ಇಲ್ಲಿ ಗಮನಿಸಬೇಕಾಗಿದೆ. ಒಂದು ದೇಸೀಜಗತ್ತು ತೋಪು, ಊರಗುಡಿ, ಹಿತ್ತಿಲು ಮತ್ತು ಜಗುಲಿಗಳನ್ನು ಬಿಟ್ಟು ಬದುಕುವುದಿಲ್ಲ. ಇವು ಸಾಂಸ್ಕೃತಿಕ ರೂಪಕಗಳೇ ಸರಿ. ಈ ರೂಪಕಗಳ ಜತೆ ಜನರು ಬದುಕುತ್ತಿದ್ದರು. ಅವರ ಆಸೆ – ಅಪೇಕ್ಷೆಗಳು, ನೋಟ – ಕಾಣ್ಕೆಗಳು, ನಡೆ – ನುಡಿಗಳು ಈ ನಾಲ್ಕು ರೂಪಕಗಳು ವ್ಯಂಜಿಸುತ್ತಿದ್ದುವು.

ದಕ್ಷಿಣ ಭಾರತದ ಅಧ್ಯಯನವನ್ನು ಮಾಡುವ ನಮ್ಮ ಚರಿತ್ರೆಕಾರರು, ಜನಾಂಗದ ವಿವರಗಳನ್ನು, ಆಚರಣೆಯ ವಿವರಗಳನ್ನು ಸಂಸ್ಕೃತಿ ಸಾಮಗ್ರಿಗಳನ್ನು ತಮ್ಮ ವ್ಯಾಖ್ಯಾನಕ್ಕೆ ಬಳಸಿಕೊಳ್ಳುತ್ತಾರೆ. ಅದೇ ನಮ್ಮ ಸಂಸ್ಕೃತಿಶಾಸ್ತ್ರಜ್ಞರು, ಕಥೆ, ಹಾಡು, ಆಚರಣೆ, ಮತೀಯ ವಿವರಗಳನ್ನು ಪಡೆದು ಆ ಮೂಲಕ ಸಂಸ್ಕೃತಿ ವ್ಯಾಖ್ಯಾನಕ್ಕೆ ತೊಡಗುತ್ತಾರೆ. ಸಮಾಜ ಶಾಸ್ತ್ರಜ್ಞರಾದರೊ ಚಳುವಳಿ, ಬದಲಾದ ಸಾಮಾಜಿಕ ಸ್ಥಿತಿಗತಿಗಳಿಗೆ ಕಾರಣವಾದ ಆರ್ಥಿಕ ಏರುಪೇರುಗಳನ್ನು ಹಿಡಿದು ತಮ್ಮ ವ್ಯಾಖ್ಯಾನಕ್ಕೆ ಬಳಸಿಕೊಳ್ಳುತ್ತಾರೆ. ಇದು ಎಲ್ಲ ಜ್ಞಾನ ಶಿಸ್ತುಗಳಿಗೆ ಸಂಬಂಧಿಸಿದ ಅಧ್ಯಯನ ಕ್ರಮಗಳಾಗಿವೆ.

ಆದರೆ, ಈ ಅಧ್ಯಯನ ಕ್ರಮಗಳು ಒಂದು ನಿರ್ದಿಷ್ಟ ಚೌಕಟ್ಟಿನ ಆಕೃತಿಯಲ್ಲೆ ಸುತ್ತಾಡುತ್ತವೆ. ಈ ಬಗೆಯ ಅಧ್ಯಯನ ಕ್ರಮಗಳು ನೀಡುವ ವಿವರಗಳು ಹೆಚ್ಚು ತಾರ್ಕಿಕವೂ ಚಾರಿತ್ರಿಕವೂ ಆದ ನೆಲೆಗಳ ಜತೆ ಸಂಬಂಧವನ್ನು ಹೊಂದಿರುತ್ತವೆ. ಈ ಬಗೆಯ ನಿರ್ದಿಷ್ಟ ಕ್ರಮಗಳು ಅಧ್ಯಯನದ ಹಿಂದೆ ವಸಾಹತುಶಾಹಿ ಹುಟ್ಟಿಸಿದ ಶೈಕ್ಷಣಿಕ ತರ್ಕಗಳು ಹೆಚ್ಚು ಕೆಲಸ ಮಾಡುತ್ತಿರುತ್ತವೆ. ಇವೆಲ್ಲವೂ ಆಯಾ ಶಾಸ್ತ್ರಗಳ ನಿಶ್ಚಿತ ಚೌಕಟ್ಟು ಹಾಗೂ ಬಂಧಗಳನ್ನು ಅವಲಂಬಿಸಿವೆ. ಈ ನಿಶ್ಚಿತ ಚೌಕಟ್ಟುಗಳು ಕೇವಲ ನಿಶ್ಚಿತ ಆಸಯವನ್ನು ಮಾತ್ರ ಹೊರತರಬಲ್ಲುವೆಂಬ ಅಂಶವನ್ನು ಈವರೆಗಿನ ಅಧ್ಯಯನಗಳು ಹೇಳುತ್ತಿವೆ. ಕೆಲವು ಅಧ್ಯಯನಗಳು ಇವಕ್ಕೆ ಅಪವಾದಗಳೆನಿಸಿವೆ.

ದಕ್ಷಿಣ ಭಾರತ ಅಧ್ಯಯನವನ್ನು ತೋಪು, ಹಿತ್ತಿಲು, ಊರಗುಡಿ ಮತ್ತು ಜಗುಲಿಗಳೆಂಬ ಸಾಂಸ್ಕೃತಿಕ ಮುಖ್ಯ ಪ್ರತೀಕಗಳ ಜತೆ ವ್ಯಾಖ್ಯಾನಿಸಿದರೆ ಹೇಗೆ? ಈ ಪ್ರಶ್ನೆಯು ನಮ್ಮ ಪ್ರತೀಕಗಳ ಮೂಲಕವೇ ನಮ್ಮ ಒಳಸಂಸ್ಕೃತಿಯ ನೇಯ್ಗೆಯನ್ನು ತಿಳಿಯಲು ಸಾಧ್ಯವೆಂಬ ಆಸೆ ನಮ್ಮ ಎದುರಿಗಿದೆ. ಈ ಹೊತ್ತಿನ ಜಾಗತೀಕರಣ ಈ ಹೊತ್ತಿನದಲ್ಲ, ಇದು ಬ್ರಿಟಿಷ್ ವಸಾಹತುಶಾಹಿ ಪ್ರಾರಂಭವಾದ ತಕ್ಷಣವೇ ಒಳಕ್ಕೆ ಬಂದಿದೆ. ಅದು ನಮ್ಮ ಹೆಗಲಿಗೆ ಏರಿ ನಾಲ್ಕು ಶತಮಾನಗಳು ಕಳೆದು ಹೋಗಿವೆ. ಈ ನಾಲ್ಕು ಶತಮಾನಗಳಲ್ಲಿ ಹಲವಾರು ಶಾಸ್ತ್ರವಿಧಾನಗಳು ಚಾಲ್ತಿಗೆ ಬಂದಿವೆ. ಅವು ಅಲ್ಲಲ್ಲೆ ಮುರುಟಿಕೊಂಡಿವೆ. ಈ ‘ಜಾಗತೀಕರಣ’ ವೆಂಬ ರಾಕ್ಷಸ ಗಿಡ ಕಂಡೂ ಕಾಣದಂತೆ, ಕೇಳಿಸಿಯೂ ಕೇಳದಂತೆ, ಸ್ಪರ್ಶಿಯೂ ಸ್ಪರ್ಶಿಸದಂತೆ ನಮ್ಮ ಹೆಗಲಿಗೆ ಏರಿಕೂತಿದೆ. ನಾವು ಇದನ್ನು ಕಿತ್ತುಹಾಕಬೇಕು. ಆದರೆ, ಕೀಳಬೇಕಾದ ‘ಪ್ರಮೇಯವಿಧಾನ’ ಗಳು ನಮ್ಮೊಡನೆ ಇಲ್ಲ, ಅವು ಇಂದು ನಾಶವಾಗಿವೆ. ಆದರೆ, ನಿನ್ನೆ ಇದ್ದ ಈ ಬಗೆಯ ಪ್ರತೀಕಗಳು ಪ್ರಾಚೀನ ಮತ್ತು ಮಧ್ಯಕಾಲೀನ ದಕ್ಷಿಣ ಭಾರತದ ತಾತ್ವಿಕ ಚರಿತ್ರೆ ತಿಳಿಯಲು ಹೊಸ ರೂಪಕಗಳ ಜತೆ, ಹೊಸ ಪ್ರತೀಕಗಳ ಜತೆ ನಾವು ಇಂದು ಕೈಗೂಡಿಸಬೇಕಾಗಿದೆ. ಇವು ಭಾಷಿಕವಾಗಿ ಸ್ಥಿರವಾಗಿದ್ದರೂ ಅವು ಒಳಗೆ ಚಲನೆಯ ನೆಲೆಯನ್ನು ಸದಾ ಪಡೆದಿವೆ. ‘ತೋಪು’ ಎಂಬುದು ಗ್ರಾಮವನ್ನು ವ್ಯಾಖ್ಯಾನಿಸಿಕೊಳ್ಳಲು ಇರುವ ಮುಖ್ಯ ರಹದಾರಿ ಎಂಬ ನಮ್ರ ತಿಳುವಳಿಕೆ ನನ್ನದು. ಒಂದು ಕಾವ್ಯ, ಒಂದು ಕತೆ, ಒಂದು ಕಾದಂಬರಿ ಈ ತೋಪಿನ ಪ್ರತೀಕದ ಮೂಲಕವೇ ಒಂದು ಪ್ರದೇಶದ ಸಾಂಸ್ಕೃತಿಕ ಸಂಗತಿಗಳನ್ನು ತೆರೆಯುತ್ತ ಹೋಗುತ್ತದೆ. ಚರಿತ್ರೆಯ ಪುನರ್‌ನಿರ್ಮಾಣ ಕ್ರಮವೆಂಬುದು ಹಿಗೆ ಚರಿತ್ರೆಯ ಸಂಗತಿಗಳ ಜತೆ ಸೇರುವಂಥದ್ದು.

ನಾವು ಇಂದು ಒಂದು ಬಗೆಯ ಅಧ್ಯಯನ ಕ್ರಮಗಳಿಗೆ ಒಳಗಾಗಿದ್ದೇವೆ. ಇದು ಪೂರ್ವಕಲ್ಪಿತ ಪ್ರವೇಶದಲ್ಲಿ ಹುದುಗಿಹೋಗಿರುವ ಕಥೆಯಾಗಿದೆ. ಈ ಕಥಾನಕದಿಂದ ನಾವು ಇಂದು ಹೊರಬರಬೇಕಾಗಿದೆ. ಆದರೆ, ಹೊರಬರುವುದು ಹೇಗೆಂಬುದೇ ಈಗಿರುವ ಪ್ರಶ್ನೆ. ಈ ಪ್ರಶ್ನೆಗೆ ನಾವು ಸ್ಪಷ್ಟ ಉತ್ತರ ಕಂಡುಕೊಳ್ಳದೆ ಇದ್ದರೆ, ಇತ್ತ ಜಾಗತೀಕರಣವೆಂಬ ರಾಕ್ಷಸನನ್ನು ಕಿತ್ತು ಒಗೆಯುವುದಾದರೂ ಹೇಗೆ ಹೇಳಿ!

ದಕ್ಷಿಣ ಭಾರತ, ದಖ್ಖನ್ ಪ್ರದೇಶ, ದ್ರಾವಿಡ ಪ್ರದೇಶ ಈ ಬಗೆಯ ಮಾತುಗಳು ಕೇವಲ ಅಧ್ಯಯನದ ಶಿಸ್ತುಗಳು ಮಾತ್ರವಲ್ಲ, ಒಟ್ಟು ಸಮುದಾಯದ, ಒಟ್ಟು ಸಮಾಜದ, ಒಟ್ಟು ಸಾಂಸ್ಕೃತಿಕ ಘಟಕಗಳ ಏರು – ಇಳುವುಗಳ ಪ್ರಶ್ನೆಗಾಗಿದೆ. ಇಷ್ಟು ಮಾತ್ರವಲ್ಲ, ಆತಂಕಗಳ ಆಚೆ ನಾವು ಸಾಗಬೇಕಾದ ಹಾದಿಯನ್ನು ಕುರಿತು ಇವು ಹೇಳುತ್ತಿವೆ. ಈ ಸಂಕಟವು ಆರ್ಥಿಕ, ರಾಜಕೀಯ, ಸಾಮಾಜಿಕ ವಿಪ್ಲವ ಹಾಗೂ ತಳ್ಳಾಟಗಳಲ್ಲಿ ನುಗ್ಗುನುಸಿಯಾಗಕೂಡದು ಅಷ್ಟೆ. ‘ದ್ರಾವಿಡ ಅಧ್ಯಯನ’ ಎಂಬ ಅಸ್ತಿತ್ವಗೊಳ್ಳುತ್ತಿರುವ ಪ್ರವೇಶದಲ್ಲಿ ನಾವು ಇದನ್ನು ಗಮನಿಸಬೇಕಾಗಿದೆ. ಇಂದಿನ ಗಡಿ – ಸೀಮೆಗಳ ಸಮಸ್ಯೆ, ಜಲವಿವಾದಗಳ ಸಮಸ್ಯೆ, ರಾಜಕೀಯ ಸಂಬಂಧಗಳ ಸಮಸ್ಯೆ – ಇವುಗಳು ಇಂದು ನಮ್ಮ ಹೆಗಲಿಗೇರಿ ಕುಳಿತಿರಬೇಕಾದರೆ ನಮ್ಮ ಅಧ್ಯಯನ ಕ್ರಮಗಳು, ಶಾಸ್ತ್ರವಿಧಾನಗಳು, ಕಾಣುವ ಕ್ರಮಗಳು ಬದಲಾಗಬೇಕು. ‘ದ್ರಾವಿಡ ಅಧ್ಯಯನ’ ಎಂಬುದು ಕಟ್ಟುವ, ಕೂಡುವ ದಿಕ್ಕನ್ನು ಕುರಿತು ಹೇಳುವತ್ತ ಸಾಗುವ ಹಂಬಲವು ನಮ್ಮ ಉದ್ದೇಶವಾಗಬೇಕು.

ಕನ್ನಡ ವಿಶ್ವವಿದ್ಯಾಲಯದ ದ್ರಾವಿಡ ಸಂಸ್ಕೃತಿ ಅಧ್ಯಯನ ವಿಭಾಗವು ೨೦೦೨ರ ಡಿಸೆಂಬರ್ ತಿಂಗಳಲ್ಲಿ ಅನಂತಪುರದ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಸಹಯೋಗದೊಡನೆ ದ್ರಾವಿಡ ವ್ಯಾಕರಣಗಳ ಕುರಿತು ರಾಷ್ಟ್ರೀಯ ವಿಚಾರ ಸಂಕಿರಣವನ್ನು ಏರ್ಪಡಿಸಿತ್ತು. ಈ ವಿಚಾರ ಸಂಕಿರಣಕ್ಕೆ ದಕ್ಷಿಣ ಭಾರತದ ಬೇರೆ ಬೇರೆ ಭಾಗಗಳಿಂದ ಭಾಷಾ ವಿದ್ವಾಂಸರು ಬಂದಿದ್ದರು. ನಾನು ಅವರ ಮಾತುಗಳನ್ನು ಕೇಳುತ್ತ ಕೇಳುತ್ತ – ಈ ಹೊತ್ತು ದಕ್ಷಿಣ ಭಾರತದ ಭಾಷಾಸಾಹಿತ್ಯಗಳ ಪರಸ್ಪರ ಅನುಸಂಧಾನದ ಪ್ರಮಾಣಗಳು ಪಡೆದಿರುವ ಅಂತರಗಳನ್ನು, ಅವು ದಿಕ್ಕೆಟ್ಟು ಕೂತಿರುವ ಬಗೆಗಳನ್ನು ಕುರಿತು ಚಿಂತಿಸುತ್ತಿದ್ದೆ. ಪ್ರಾಚೀನವೂ ಆದುನಿಕವೊ ಆದ ಕನ್ನಡದ ಕೃತಿಯೊಂದು ತೆಲುಗಿಗೂ, ತಮಿಳಿಗೂ, ಮಲೆಯಾಳಕ್ಕು ಇನ್ನು ಹೋಗದಿರುವ ಕೊರತೆ ಎಷ್ಟಿದೆಯೆಂಬುದನ್ನು ಅಲ್ಲಿ ನಾನು ಅನುಭವಿಸಿದೆ. ನಾವು ಕೇವಲ ಕನ್ನಡದ ನೆಲದಲ್ಲಿ ಕುಳಿತು ತಮಿಳು, ತೆಲುಗು, ಮಲಯಾಳಂ ಭಾಷೆಗಳನ್ನು, ಆಯಾ ಸಾಹಿತ್ಯ ಪರಿವಾರಗಳನ್ನು ಕುರಿತು ಚಿಂತಿಸುವುದಲ್ಲ. ನಾವು ಹಾಗೆ ಚಿಂತಿಸಿದರೆ ನಿಜಾರ್ಥದಲ್ಲಿ ಆ ಭಾಷಾಸಾಹಿತ್ಯಗಳು ನಮ್ಮ ಮನಸ್ಸನ್ನು ಪ್ರವೇಶಿಸಲಾರವು. ಈವರೆಗೂ ನಾವು ನಮ್ಮ ನೆಲದಲ್ಲೆ ಕುಳಿತು ಇನ್ನೊಂದು ಸಾಹಿತ್ಯ ಆಕೃತಿಯನ್ನು ಕುರಿತು ಚಿಂತಿಸುತ್ತಿದ್ದೇವೆ, ಪರಿಭಾವಿಸುತ್ತಿದ್ದೇವೆ. ಇದು ಎಷ್ಟು ಸರಿ?

ಈ ಹಿನ್ನಲೆಯಲ್ಲಿ ನಮ್ಮ ನಮ್ಮಲ್ಲೆ ಸೋದರ ಭಾಷೆಗಳ ಜತೆಗಿರುವ ನಮ್ಮ ಸಂಬಂಧಗಳನ್ನು ಕುರಿತು ಆಳವಾಗಿ, ಸೂಕ್ಷ್ಮವಾಗಿ ಈಗ ಚಿಂತಿಸಬೇಕಾಗಿದೆ. ನಾವು ಅನುವಾದಗೊಂಡ ಕೃತಿಯೊಂದನ್ನು ನಮ್ಮ ನೆಲದಲ್ಲೆ ಪರಿಭಾವಿಸುತ್ತೇವೆಯಷ್ಟೆ. ಆದರೆ, ಆ ಕೃತಿ ಇನ್ನೊಂದು ರಾಜ್ಯದ ಭೌಗೋಳಿಕ, ಸಾಂಸ್ಕೃತಿಕ, ಸಾಮಾಜಿಕ, ನಿತ್ಯವ್ಯಾಪಾರಕ್ಕೆ ಸೇರಿದ್ದು. ಆದ್ದರಿಂದ, ಕೇವಲ ನನ್ನ ಭಾಷೆಯ ನುಡಿಗಟ್ಟಿನಲ್ಲೆ ಆ ಭಾಷಾ ಸಂಸ್ಕೃತಿಯ ಸಾಹಿತ್ಯಿಕ – ಸಾಂಸ್ಕೃತಿಕ ಪದರವನ್ನು ತಿಳಿಯುವುದು ಅಸಾಧ್ಯದ ಮಾತು. ಹೀಗಾಗಿ, ಭಾಷೆ – ಭಾಷೆಯೊಂದರ ಜತೆಗಿನ ಸಹಸಂಬಂಧಗಳು ಹೇಗಿರಬೇಕು? ಅವು ಯಾವ ಬಗೆಯ ಕ್ರಮಗಳನ್ನು ವಹಿಸಬೇಕು? ಸಾಂಸ್ಥಿಕವೊ ಸಾಂಘಿಕವೊ ಆದ ನೆಲೆಗಳಲ್ಲಿ ಪ್ರವೇಶಿಸುವ, ಅನುಸಂಧಾನಿಸುವ ಬಗೆಗಳು ಯಾವುವು? ಈ ಬಗೆಯ ಪ್ರಶ್ನೆಗಳನ್ನು ನಾವು ಅತಿ ತುರ್ತಾಗಿ ಈಗ ಕೇಳಿಕೊಳ್ಳಬೇಕಾಗಿದೆ. ಈಗಾಗಲೆ ನಾವು ಕೇಳಬೇಕಾದ ಪ್ರಶ್ನೆಗಳಿಗಿಂತ, ನಮಗೆ ನಾವೇ ಕೊಟ್ಟುಕೊಂಡ ಉತ್ತರಗಳು ಹುಸಿಗಳಾಗಿ ಅದೇ ನಮ್ಮ ಸತ್ಯಸಾಕ್ಷಾತ್ಕಾರಗಳಾಗಿ ಕಾಣಿಸಿಕೊಂಡು ಬಿಟ್ಟಿವೆ. ನಾವು ಆ ದಾರಿಯಲ್ಲಿ ಬಹುದೂರ ನಡೆದು ಬಂದಿದ್ದೇವೆ. ಇನ್ನು ಈ ಬಗೆಯ ಮಾರ್ಗಕ್ರಮಗಳು ಸಾಕೆಂದು ಅನ್ನಿಸುವುದಿಲ್ಲವೆ?

ಈ ಮಾತನ್ನು ಇನ್ನೂ ಕೆಲವು ಬಗೆಗಳಲ್ಲಿ ವಿವರಿಸಿಕೊಳ್ಳಬೇಕೆಂದು ನನಗೆ ತೋರುತ್ತದೆ. ದಕ್ಷಿಣ ಭಾರತೀಯ ಭಾಷಾ – ಸಾಹಿತ್ಯಗಳ ಜತೆಗಿನ ಸಂಬಂಧಗಳನ್ನು ನಾವು ಕೇವಲ ರಾಜಕೀಯಾತ್ಮಕ ಪರಿಭಾಷೆಯಲ್ಲೆ ನೋಡುತ್ತಿದ್ದೇವೆ. ಕಳೆದ ೨೦ನೇ ಶತಮಾನದಲ್ಲಿ ರಾಜಕೀಯ ಪರಿಭಾಷೆಯಲ್ಲೆ ಮಾತಾಡಿಕೊಂಡೆವು. ಇನ್ನು ನಾವು ರಾಜಕೀಯ ಪರಿಭಾಷೆಯಿಂದ ಹೊರಬಂದು ಸಾಂಸ್ಕೃತಿಕ ಪರಿಭಾಷೆಯಲ್ಲಿ ಮಾತಾಡಿಕೊಳ್ಳಬೇಕಾದ ಅಗತ್ಯವಿದೆ. ರಾಜಕೀಯವು ಸಾಂಸ್ಕೃತಿಕ ಪರಿಭಾಷೆಯ ಒಂದು ಕವಲಾಗಿ ಇಟ್ಟುಕೊಳ್ಳಬೇಕೇ ಹೊರತು; ಅದೇ ಮುಖ್ಯವೂ ನಮ್ಮನ್ನು ನಿಯಂತ್ರಿಸುವ ಮೌಲ್ಯವು ಆಗಕೂಡದೆಂಬ ವಿಚಾರ ಇಂದು ಅಗತ್ಯ. ನನ್ನ ಈ ಮಾತು ಅನುವಾದದ ಬಗೆಗಳನ್ನು ಕೇವಲ ‘ಅನುವಾದ’ ಮಾಡುತ್ತಿವೆ. ಅವು ಒಂದು ಹಂತದಲ್ಲಿ ನಮಗೆ ಉಪಯುಕ್ತ ಮಾತ್ರ. ನಾವು ಕೇವಲಾನುವಾದದಿಂದ ಇನ್ನು ಬಹುದೂರ ಕ್ರಮಿಸಬೇಕಾಗಿದೆ. ಈ ಕ್ರಮಿಸುವ ಹಾದಿ ಯಾವುದಾಗಬೇಕು? ಈ ಹೊತ್ತಿನ ರಾಜಕೀಯ ವಿದ್ವೇಷಗಳು ಸಾಮಾಜಿಕ ವಿಘಟನೆಗಳು ನಮ್ಮ ನಮ್ಮ ರಾಜ್ಯಗಳಲ್ಲೆ ಮಿಶ್ರಣಗೊಳಿಸಿಕೊಳ್ಳುತ್ತಿರುವ ಆಶಯಗಳನ್ನು ರೂಪಿಸುತ್ತಿವೆ. ನಮ್ಮ ಜನ ಮತ್ತು ನಮ್ಮ ಭಾಷೆ ನಮ್ಮ – ನಮ್ಮ ಪರಿಧಿಯಲ್ಲೆ ಕ್ರಮಗೊಳ್ಳುವ ಸ್ಥಿತಿಯಲ್ಲಿ ಬೆಳೆಯುತ್ತಿವೆಯೆಂದು ಅನ್ನಿಸುತ್ತಿದೆ. ರಾಜ್ಯರಾಜ್ಯಗಳ ನಡುವಣ ಅಂತರಗಳು ಎಷ್ಟು ಹೆಚ್ಚುತ್ತಿವೆಯೋ ಅಷ್ಟೇ ಮಟ್ಟಿಗೆ ಜಾಗತೀಕರಣವೆಂಬ ಅಲೆಯು ‘ವಿಶ್ವಗ್ರಾಮ’ ಗಳಾಗಿ ರೂಪಾಂತರಗೊಳ್ಳುತ್ತಿರುವ, ಪರಿವರ್ತಿಸುತ್ತಿರುವ ಹುನ್ನಾರವನ್ನು ಆರ್ಥಿಕ ನೆಲೆಯಿಂದ ಕಂಡು – ಕಾಣದಂತೆ ರೂಪಗೊಳ್ಳುತ್ತಿದೆ. ನಾವು ಈ ‘ಸತ್ಯ’ಗಳನ್ನು ತಿಳಿಯುವ ಬಗೆ ಯಾವುದು? ಅಥವ ಈ ‘ಸತ್ಯ’ ಗಳನ್ನು ಆಕೃತಿಗಳಾಗಿ ಪಡೆಯುತ್ತಿರುವ ಬಗೆ ಯಾವುದು? ಅಂತಿಮವಾಗಿ ಸಾಹಿತ್ಯಿಕ ರೂಪಕಗಳು ಈ ಸತ್ಯಗಳನ್ನು ಬೆಳಗಿಸುತ್ತಿವೆಯೆಂದೇ ನನಗೆ ತೋರುತ್ತದೆ.

ಅನುವಾದ ಎಂಬುದು ಅಂತಿಮವಾಗಿ ಸಾಂಸ್ಕೃತಿಕ ಪ್ರಕ್ರಿಯೆಯೇ. ನಾವು ಈ ನಿಟ್ಟಿನಲ್ಲಿ ಹೆಚ್ಚು ಗಮನ ಹರಿಸಿಲ್ಲ. ಆದ್ದರಿಂದ ನಾವೀಗ ಕೆಲವು ಬಿಡಿನೋಟಗಳೊಳಗೆ ಸಿಲುಕಿ ಬಿಟ್ಟಿದ್ದೇವೆ. ಇಂಥ ‘ಬಿಡಿನೋಟ’ಗಳು ಅನುವಾದಕ್ಕೆ ಸಾಂಸ್ಕೃತಿಕ ಗುರುತ್ವವನ್ನು ತಂದುಕೊಡುವುದಿಲ್ಲ. ಆದ್ದರಿಂದ ನಾವು ‘ಬಿಡಿ’ ಪ್ರಕ್ರಿಯೆಯಿಂದ ‘ಇಡಿ’ ಪ್ರಕ್ರಿಯೆಯ ಕಡೆಗೆ ಹೋಗಬೇಕಾಗಿದೆ. ಈ ಸಾಹಸವು ಅನುವಾದಕ್ಕೆ ಹೊಸನೆಲೆಯನ್ನೂ ಹೊಸ ಕಂಪನ್ನೂ ಹೊಸ ಬಗೆಯನ್ನೂ ತಂದುಕೊಡುತ್ತವೆಂಬ ವಿಶ್ವಾಸ ನನ್ನದು. ಈ ಸಾಂಸ್ಕೃತಿಕ ಅನುವಾದ ಎನ್ನುವ ವ್ಯಾಖ್ಯಾನದಲ್ಲಿ ಕೇವಲ ಸೃಜನಶೀಲ – ಸೃಜನೇತರ ಎಂಬ ಸಾಮಾನ್ಯೀಕೃತ ಪರಿಭಾಷೆಗಳಿಂದ ಹೊರಚಾಚಿ ನಾವು ನಿಲ್ಲಬೇಕಾಗಿದೆ. ಈ ಹೊತ್ತು ಸೃಜನಶೀಲ – ಸೃಜನೇತರ ಎಂಬ ಮಾತುಗಳೇ ಅರ್ಥಹೀನ. ಇಂಥ ಮಾತುಗಳು ನಮ್ಮ ಹಾದಿಗೆ ಮಂಜನ್ನು ಕವಿಸಬಹುದು. ನಾವು ಈ ಮಿಥ್ಯಾಪರಿಕಲ್ಪನೆಗಳಿಂದ ದೂರನಿಂತು ಯೋಚಿಸಬೇಕಾಗಿದೆ. ಹೀಗೆ ಹೊಸದಾರಿ ಹಿಡಿದಾಗ, ಹೆಜ್ಜೆಯೂ ಉಸಿರೂ ಹೊಸದೇ ಆಗುತ್ತದೆ, ಆಗುವುದು ಸಹಜವಾಗಿರುತ್ತದೆ. ಆಗ ‘ಅನುವಾದ’ ಎಂಬ ಮಾತು, ಹೊಸ ಬೆಳಕನ್ನು ಹಿಡಿದು ನಿಲ್ಲಲು ಸಾಧ್ಯವಾಗುತ್ತದೆ. ಅನುವಾದ ಎಂಬ ಪಠ್ಯೀಕೃತ ಮಾತು ನೆಲೆ ತಪ್ಪಿ, ಅದು ವಿಶಾಲಾರ್ಥದ ಸಾಂಸ್ಕೃತಿಕ ಭೋಗಭೂಮಿಗೆ ಬಂದು ನಿಲ್ಲಲು ಸಾಧ್ಯವಾಗುತ್ತದೆ. ಈ ಭೋಗಭೂಮಿಯಲ್ಲಿ ಜನ ಕಾಣಿಸುತ್ತಾರೆ. ಅಲ್ಲಿ ಮಣ್ಣು, ಹೂವು, ಹೀಚು, ಕಾಯಿ, ಕಾಂಡ, ಟಿಸಿಲು, ಟೊಂಗೆ, ಬೆಟ್ಟ, ಹೆಬ್ಬಂಡೆ ಹಾಗೂ ಸಮಸ್ತ ಮಾನವಜಾತಿ ಸೇರಿ ಎಲ್ಲ ಜೀವ ಒಂದಾಗಿ ನಿಲ್ಲುತ್ತವೆ. ಅಂತಿಮವಾಗಿ ಸಾಂಸ್ಕೃತಿಕ ಅನುವಾದ ಎಂಬುದು ಈ ಎಲ್ಲ ಜೀವಸಂಕುಲಗಳ ಸಖ್ಯಗಳ ಬಗೆಯೇ ಆಗಿದೆ. ನಾವು ಈ ಮಹಾಕಥನದ ವಿರಾಟ್ ರೂಪದಲ್ಲಿ ದ್ರಾವಿಡ ಅನುವಾದವನ್ನು ಪರಿಭಾವಿಸಬೇಕಾಗಿದೆ.

ದಕ್ಷಿಣ ಭಾರತದ ಭಾಷಾ – ಸಾಹಿತ್ಯ – ಸಂಸ್ಕೃತಿಗಳು ಪಾರಸ್ಪರಿಕ ಸಂಬಂಧದ ನೆಲೆಗಳನ್ನು ಪಡೆಯಬೇಕೆಂಬುದೇ ನನ್ನ ಒಟ್ಟು ಮಾತಿನ ಇರಾದೆ. ನಮ್ಮ ಜೀವಸಂಬಂಧಿ ಪಡಿಪಾಟಿಲುಗಳು ನಮ್ಮಲ್ಲಿ ಒಕ್ಕೂಟದ ನೆಲೆಯನ್ನು ನಿರೀಕ್ಷಿಸಬೇಕಿತ್ತು. ಭಾಷೆಗೆ ಸಂಬಂಧಿಸಿದಂತೆ ದಕ್ಷಿಣದಲ್ಲಿ ನಡೆದ ಚಳವಳಿಗಳು, ಸಾಮಾಜಿಕ ವಿನ್ಯಾಸಕ್ಕೆ ಸಂಬಂಧಿಸಿದಂತೆ ನಡೆದ ಚಳವಳಿಗಳು, ಅಂತಿಮವಾಗಿ ರಾಜಕೀಯ ಪ್ರಭುತ್ವದ ಸ್ವರೂಪವನ್ನು ಪಡೆದುವು. ಕಳದ ಶತಮಾನದ ಉದ್ದಕ್ಕೂ ನಡೆದ ಚಳವಳಿ, ಹೋರಾಟ, ಪ್ರಗತಿಮುಖಗಳು ವಿದ್ರೋಹದ ಚಟುವಟಿಕೆಗಳೇ ಆದುವು. ‘ರಾಜಕಾರಣ’ ಎಂಬುದು ಸಂಸ್ಕೃತಿ ಮತ್ತು ಭಾಷೆಯನ್ನು ‘ಮೇಲುನೆಲೆ’ಗೆ ಒಯ್ಯಬೇಕಿತ್ತು. ಆದರೆ, ಅದು ‘ಕೆಳನೆಲೆ’ಗೆ ಒಯ್ಯುವ ಸಾಧನವಾಗಿ ಬಳಕೆಯಾಗಿಬಿಟ್ಟಿದೆ. ಈ ಎಲ್ಲ ನಿಷ್ಠುರಗಳಿಂದ ನಾವು ದಿಕ್ಕೆಡುವಂತಿಲ್ಲ. ಜನ – ಜನರ ನಡುವೆ ಅನುರಾಗ, ಭಾಷೆ – ಭಾಷೆಯ ನಡುವೆ ಕೊಡುಕೊಳೆ, ಸಂಸ್ಕೃತಿ – ಸಂಸ್ಕೃತಿಗಳೊಳಗೆ ಜೀವಸಖ್ಯ ಇವು ಈಗ ಆಗಬೇಕಾಗಿದೆ. ದಕ್ಷಿಣಕ್ಕೂ ಉತ್ತರತಕ್ಕೂ ಇರುವ ಸಾಂಸ್ಕೃತಿಕ ಅಂತರ ಎರಡು ಸಾವಿರವರ್ಷಕ್ಕೂ ಮಿಕ್ಕಿದ್ದು. ಆದರೆ, ದಕ್ಷಿಣದ ಸೋದರ ರಾಜ್ಯಗಳ ಜತೆಗಿರುವ ಅಂತರ ಕಾಲಸಂಬಧಿಯಾದದ್ದು. ನಾವು ಈ ಕಾಲವನ್ನು ಮೀರಬಹುದು. ಹಾಗೆ ಮೀರುವದು ನಮ್ಮ ಧ್ಯೇಯವೂ ಆಗಬೇಕು. ಇದು ಸಾಹಿತ್ಯಿಕ – ಸಾಂಸ್ಕೃತಿಕ ಮೇಲು ಮೇಲಿನ ಅಥವ ಹೊರತೋರಿಕೆಯ ಆದಾನ – ಪ್ರದಾನಗಳಂತಹ ಸೀಮಿತ ರಾಜಕಾರಣದಿಂದ ಸಾಧ್ಯವಾಗುವುದಿಲ್ಲ. ಅದರ ಬದಲು ಆಳವೂ ಸೂಕ್ಷ್ಮವೂ ಜೀವಸಖ್ಯವೂ ಆದ ಆಂತರಿಕ ಸಂಬಂಧಗಳಿಂದ ಮಾತ್ರ ಸಾಧ್ಯವಾಗಬೇಕಾಗಿದೆ. ಸಹಸ್ರಮಾನದ ಹೊಸಿಲಲ್ಲಿ ನಿಂತಿರುವ ನಾವು ಇಂಥ ಆಂತರಿಕ ಸಂಬಂಧಗಳನ್ನು ಕಲೆಗಳ ಮೂಲಕ, ಸಾಹಿತ್ಯಿಕ – ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ, ಒದಗಿಸಿಕೊಳ್ಳಬೇಕಾಗಿದೆ, ಬೆಳೆಸಿಕೊಳ್ಳಬೇಕಾಗಿದೆ. ಇದು ನಮ್ಮ ಹಿರೀಕರು ಇಟ್ಟುಕೊಂಡ ಆದರ್ಶ. ನಾವು ಗಡಿ – ಸೀಮೆಗಳ ಅಂತರಗಳನ್ನು ಮೀರಿಯೂ ಬೆಳೆಯಬೇಕೆನ್ನುವುದು ನಮ್ಮ ಪೂರ್ವಿಕರ ಸದಾಶಯ. ಈ ಅಂಶವನ್ನು ಇನ್ನೊಂದು ಬಗೆಯಿಂದ ನೋಡಬಹುದೆ?

ಭಾಷೆ ಮತ್ತು ಸಂಸ್ಕೃತಿ ಕುರಿತ ಆಧುನಿಕ ಸಂವಾದಕ್ಕೆ ಹತ್ತಿರಹತ್ತಿರ ಇನ್ನೂರು ವರ್ಷಗಳು ಕಳೆದುವು. ಈ ನಡುವೆ ಆರ್ಯ – ದ್ರಾವಿಡ ಎಂಬ ಜಾನಾಂಗಿಕ ಪರಿಕಲ್ಪನೆಗಳು, ದೇಸಿಮಾರ್ಗ ಎಂಬಂತಹ ಸಾಹಿತ್ಯಿಕ ಪರಿಕಲ್ಪನೆಗಳು, ಇಂಡಿಯಾ – ಭಾರತ – ಆರ್ಯಾವರ್ತ, ಸಿಂಧೂ – ಹಿಂದೂದೇಶ ಎಂಬಂತಹ ರಾಷ್ಟ್ರನಾಮದ ಪರಿಕಲ್ಪನೆಗಳು ಬಂದುವು. ಅವು ಯಾವು ಯಾವುದೋ ಕಾರಣಕ್ಕೆ ಇನ್ನೂ ನಮ್ಮೊಳಗೆ ಗುದ್ದಾಟಗಳನ್ನು ನಡೆಸುತ್ತಲೇ ಇವೆ. ವಿದ್ವಾಂಸರು, ಬಲ್ಲಿದರು, ತಿಳಿದವರು, ಸಾಮಾನ್ಯರು, ಜನಸಾಮಾನ್ಯರು ಹೀಗೆ ಎಲ್ಲರೂ ‘ಸಂವಾದ’ಗಳ ಮೂಲಕವೊ ‘ವಾಗ್ವಾದ’ ಗಳ ಮೂಲಕವೊ ಈ ಸಂಗತಿಗಳನ್ನು ಬೆಳೆಸುತ್ತಿದ್ದಾರೆ. ಈ ಬೆಳಸುವಿಕೆಗೆ ಮೂಲ, ಭಾಷೆ ಮತ್ತು ಸಂಸ್ಕೃತಿ ಎಂಬಂತಹ ‘ಲೋಕಕಲ್ಪನೆ’ ಗಳೇ ಕಾರಣವಾಗಿವೆ.

ಭಾಷೆ ಎಂಬುದು ಒಂದು ಮಾದ್ಯಮವೆಂಬ ತಿಳಿವಳಿಕೆ ಆಧುನಿಕದ್ದು. ಆದರೆ, ಇದು ಅಂತರಂಗದ ಒಳತಿಳಿವಿನ ಸಾಧನ ಎಂದು ಪ್ರಾಚೀನರು ತಿಳಿದಿದ್ದರು. ಭಾಷೆ ಒಂದೆಡೆ ಸತ್ಯವನ್ನು ಲೋಕಸತ್ಯವನ್ನೂ ಮಿಥ್ಯವನ್ನೂ ಸೂಚಿಸುವ ಸಂಕೇತವೆಂಬ ಪರಿಕಲ್ಪನೆ ಇದೆ. ಆದರೆ, ‘ಭಾಷೆ’ ಎಂಬುದನ್ನು ಏಕಾಕಾರವೆಂದು ತಿಳಿದಾಗ ಮಾತ್ರ ಇಂಥ ಅನಾಹುತಕ್ಕೆ ದಾರಿಯಾಗುತ್ತದೆ. ಆದರೆ, ಭಾಷೆಯು ಸಂಸ್ಕೃತಿಯ ಒಡಲೊಳಗೆ ಮಿಡಿಯುವ ಸಾಧನ ಎಂದಾಗ ಈ ಅನಾಹುತದಿಂದ ನಾವು ಪಾರಾಗಬಲ್ಲೆವು. ‘ಸಂಸ್ಕೃತಿ’ ಎಂಬುದು ಭಾಷೆಯ ಮೂಲಕ, ಭಾವದ ಮೂಲಕ, ನಡೆವಳಿಗಳ ಮೂಲಕ ಮೈದೋರುವ ಒಂದು ಆಶಯ. ಈ ಆಶಯವು ಭಾಷೆಯ ಬೇರನ್ನು ತನ್ನ ಅಂತರಂಗದಲ್ಲಿ ಇರಿಸಿಕೊಂಡಿರುತ್ತದೆ. ಭಾಷೆ ಮತ್ತು ಸಂಸ್ಕೃತಿಗಳಿಗೆ ಒಂದು ಬಿಟ್ಟು ಬಿಡಲಾರದ ಸಂಬಂಧಗಳಿವೆಯೆಂಬ ಸತ್ಯವನ್ನು ತಿಳಿದೇ ನೂರಾರು ವರ್ಷಗಳು ಸಂದವು. ಭಾಷೆ ಒಂಟಿಯಾದಾಗ ಅದು ‘ಪ್ರಾಣಘಾತುಕ’, ‘ಉರಿವ ನಾಲಗೆ’, ‘ಉಲಿವ ಉಯ್ಯಾಲೆ’ ಆಗುತ್ತದೆ. ಆದರೆ ಭಾಷೆಯು ಸಂಸ್ಕೃತಿಯ ಮೈಯಲ್ಲಿ ಕೂತು ಅರಳಿಕೊಂಡಾಗ ‘ಮಾತೆಂಬುದು ಜ್ಯೋತಿರ್ಲಿಂಗ’, ‘ನಡೆಯಲ್ಲಿ ನುಡಿ ತುಂಬಿ ನುಡಿಯಲ್ಲಿ ನಡೆ ತುಂಬಿ ; ನಡೆ – ನುಡಿಯೆರಡನು ಪರಿಪೂರ್ಣ ತುಂಬಿ’ ಆಗುತ್ತದೆ ಈ ಸತ್ಯ ಸರ್ವಕಾಲಿಕವಾದುದು.

ನಾನು ಈ ಮೇಲಿನ ಮಾತುಗಳನ್ನು ಆಡಲು ಸದ್ಯದ ಸಾಮಾಜಿಕ ಹಾಗೂ ರಾಜಕೀಯ ಕಾರಣಗಳೇ ಮೂಲಕಾರಣಗಳಾಗಿವೆ. ಈ ಕಾರಣಗಳ ಹಿನ್ನಲೆಯಲ್ಲಿ ಭಾಷೆ ಮತ್ತು ಸಂಸ್ಕೃತಿ, ಕುರಿತು ಚರ್ಚಿಸಲು ತೊಡಗಿದ್ದೇನೆ. ನಾವು ಈ ಹೊತ್ತು ಇವೆರಡನ್ನು ‘ಲೋಕಕಲ್ಪನೆ’ ಗಳೆಂದೇ ತಿಳಿಯಬೇಕು. ಆಗ ಕೆಲವು ಸತ್ಯಗಳೂ ರಹಸ್ಯಗಳೂ ನಮ್ಮ ಪಾಲಾಗುತ್ತವೆ. ಆ ರಹಸ್ಯವು ನಮ್ಮ ಅಂತರಂಗದ ಪಿಸುಮಾತುಗಳಾಗುವುದು ಇಂದಿನ ಅಗತ್ಯಗಳಲ್ಲಿ ಒಂದೆಂದು ನಾನು ತಿಳಿಯುತ್ತೇನೆ.

ನಮಗೆ ಸ್ವಾತಂತ್ರ್ಯ ಬಂದು ಐವತ್ತೈದು ವರ್ಷಗಳು ತುಂಬಿದುವು. ದಕ್ಷಿಣ ಮತ್ತು ಉತ್ತರ ಭಾರತಗಳೆಂಬ ರಾಜಕೀಯ ವಿಭಾಗ ಕ್ರಮವಾಗಲಿ, ಭಾಷಿಕ ರಾಜ್ಯರಾಜ್ಯಗಳ ಭಾಷಿಕ ಗಡಿಕ್ರಮಗಳಾಗಲಿ ನಾವು ಪಡೆದ ಸ್ವಾತಂತ್ರ್ಯಕ್ಕೆ ಒಂದು ವಿಶಾಲಾರ್ಥವನ್ನು ಈವರೆಗೂ ಪಡೆಯಲಾಗಿಲ್ಲ. ಈ ಎಲ್ಲ ಕ್ರಮಗಳು ಕೇವಲ ರಾಜಕೀಯ ವಿನ್ಯಾಸವನ್ನು ಪಡೆದಿವೆಯೇ ಹೊರತು ಸಾಂಸ್ಕೃತಿಕ ಆಪ್ತಬಾಂಧವ್ಯವನ್ನು ಇನ್ನೂವರಗೂ ಪಡೆದಿಲ್ಲ. ಒಂದು ನೆಲೆಯಲ್ಲಿ ನೋಡಿದರೆ ಇಂದಿನ ಭಾರತದ ಮನಃಸ್ಥಿತಿಯೇ ಆತಂಕಕಾರಿಯಾಗಿದೆ. ಈ ಆತಂಕಗಳು ನಮ್ಮನ್ನು ಎಲ್ಲಿಗೆ ಕೊಂಡೊಯ್ಯಬಲ್ಲುದೋ ತಿಳಿಯದಾಗಿದೆ. ನಾವು ಈ ಸಮಸ್ಯೆಯನ್ನು ಅರ್ಥಮಾಡಿಕೊಳ್ಳಬೇಕಾದರೆ ‘ಭಾಷೆ’ ಎಂಬ ಸಂಸ್ಕೃತಿ ಸಂಪತ್ತನ್ನು ಮನುಷ್ಯ ಸಮಾಜದ ಬೇರಿನಿಂದ ಹೊರತೆಗೆದು ಏಕರೂಪಿಗೊಳಿಸಿದ್ದು. ಭಾಷೆ ‘ಪ್ರಾಣಘಾತುಕ’ ಆಗುವುದು ಇಲ್ಲೇ. ಅದು ರಾಜಕಾರಣದ ಕೈಯಲ್ಲಿ ‘ಉಲಿವ ಉಯ್ಯಾಲೆ’ ಆಗುವುದು ಅನಿವಾರ್ಯ ಮತ್ತು ಸಂಭವನೀಯ! ನಾವು ಯಾವಾಗ ‘ಭಾಷೆ’ ಯನ್ನು ಮಿಥ್ಯಾ ಸಾಧನವಾಗಿ ಬಳಸಿಕೊಳ್ಳುತ್ತೇವೊ ಆಗ ನೆಲ – ಜಲ – ಸಂಪತ್ತು – ಸಂಬಂಧಗಳು ರಾಜಕಾರಣದ ನೆಲೆಯನ್ನು ಮುಟ್ಟಿಬಿಡುತ್ತವೆ. ‘ಹೆಜಮನಿ’ ಪ್ರಾರಂಭವಾಗುವುದೇ ಇಂಥ ಕಡೆಗಳಲ್ಲೇ. ಇಂದು ರಾಷ್ಟ್ರ ರಾಜಕಾರಣ ತನಗೆ ಗೊತ್ತಿದ್ದೂ ಗೊತ್ತಿಲ್ಲದೆಯೋ ಇಂಥ ‘ರಾಜಕಾರಣ’ದ ನೇಣಿನಲ್ಲಿ ಬಂಧಿಯಾಗಿದೆ.

ನಾವು ಇಪ್ಪತ್ತೊಂದನೆಯ ಶತಮಾನದಲ್ಲಿ ನಿಂತಿದ್ದೇವೆಯಷ್ಟೆ. ದಕ್ಷಿಣ – ಉತ್ತರ ಎಂಬಂತಹ ವಿಭಾಗೀಯ ಕ್ರಮಗಳು ಕೇವಲ ಹೊರಸತ್ಯಗಳಾಗಿವೆಯೇ ಹೊರತು ಅವು ಒಳಸತ್ಯಗಳಲ್ಲ ಎಂಬಂತಹ ನಿಲುವುಗಳನ್ನು ಪ್ರತಿಯೊಬ್ಬರು ತಾಳಬೇಕಾಗಿದೆ. ಸಂಸ್ಕೃತಿಯ ಒಳಮುದ್ದಾಟಗಳನ್ನು ಮರೆತು ನಡೆಯುತ್ತಿರುವ ಅಪಾಯದಲ್ಲೆ ‘ಭಾಷೆ’ಯ ಮೇಲಾಟದ ಪ್ರಶ್ನೆ ಹುದುಗಿಕೊಂಡಿದೆಯೆಂದು ನಾನು ತಿಳಿಯುತ್ತೇನೆ. ಸಾಂಸ್ಕೃತಿಕ ಭಿನ್ನತೆಗಳಲ್ಲೂ ಒಂದು ಬಗೆಯ ಸಾಂಸ್ಕೃತಿಕ ಅನನ್ಯತೆಗಳೂ ಒಡಗೂಡಿ ನೆಲೆನಿಂತಿರುತ್ತವೆ. ಈ ನೆಲೆಗೆ ವಾಹಕವಾಗಿ ‘ಭಾಷೆ’ ಸಂಚರಿಸುತ್ತಿದೆ. ಕನ್ನಡ – ತಮಿಳು ತೆಲುಗು – ಕನ್ನಡ ಎಂಬುವು ಭಾಷಿಕ ಮೇಲಾಟವಾದಾಗ ಸಾಂಸ್ಕೃತಿಕ ಏರುಪೇರುಗಳು ಪ್ರಾರಂಭವಾಗುತ್ತವೆ. ಅದು ಮುಂದೆ ನೆಲ – ಜಲ – ಸಂಬಂಧಗಳನ್ನು ಹಳಸು ಮಾಡಿಬಿಡುತ್ತವೆ. ಒಳಗಿನ ಕಾಲಾಗ್ನಿ ಸಮಾಜದ ಬಡಬಾಗ್ನಿಯಾಗಿ ಸುಟ್ಟು ಹಾಕಲು ಯತ್ನಿಸುತ್ತದೆ. ಇದು’ಭಾಷೆ’ಯನ್ನು ರಾಜಕಾರಣ ಗೊಳಿಸಿದಾಗ ಆಗುವ ಅನಾಹುತ. ಇಂಥ ಅನಾಹುತಗಳು ಸ್ವಾತಂತ್ರ್ಯಪೂರ್ವದಲ್ಲೂ ನಡೆದಿವೆ. ಸ್ವಾತಂತ್ರ್ಯೋತ್ತರ ಭಾರತದ ನಂತರವೂ ನಡೆಯುತ್ತಿದೆ. ರಾಜಕಾರಣವು ಇಂಥ ‘ನಿತ್ಯ ನರಕ’ದಲ್ಲಿ ತನ್ನ ‘ಏಕರೂಪೀ ಆಶಯ’ವನ್ನು ಸಾಂಕೇತಿಕಗೊಳಿಸುತ್ತಿದೆ. ರಾಜ ಕಾರಣವು ವೈಯಕ್ತಿಕ ನೆಲೆಯಲ್ಲಿ ಸಂಚರಿಸಿದಾಗ ‘ಸಾಮೂಹಿಕ ನಾಶ’ ಆಗುವ ಬಗೆಯನ್ನು ಕಳೆದ ಶತಮಾನದ ಕೊನೆಯ ದಶಕಗಳಲ್ಲಿ ಆದ ‘ಕಾವೇರಿ ವಿವಾದ’ವು ನಮ್ಮ ಕಣ್ಣು ಮುಂದೆ ಸಾಕ್ಷಿಯಾಗಿ ಇನ್ನೂ ನಿಂತಿದೆ. ಇಂದೂ ಕೂಡ ಅದೊಂದು ರಾಜಕಾರಣದ ಪ್ರಶ್ನೆಯಾಗಿದೆಯೇ ಹೊರತು ಮನುಷ್ಯ – ಮನುಷ್ಯರ ನಡುವಿನ ಪ್ರಶ್ನೆಯಾಗಿಲ್ಲ. ಒಂದು ತಂತ್ರವು ಹೇಗೆ ಹಲವು ರೂಪಗಳನ್ನು ಧರಿಸಿ ನಿಲ್ಲಬಲ್ಲುದೆಂಬುದಕ್ಕೆ ಇದೊಂದು ದೊಡ್ಡ ಉದಾಹರಣೆ. ಗ್ರಾಮ, ಪಟ್ಟಣ, ನಗರ ರಾಜ್ಯ ಎಂಬುದು ಸಾಮಾಜಿಕ ಅನುಕೂಲದ ನೆಲೆಯೇ ಹೊರತು; ಅವು ಸಾಂಸ್ಕೃತಿಕ ಅನನ್ಯತೆಯನ್ನು ರೂಪಿಸುವ ಆಶಯವೇನಲ್ಲ. ಈ ಅಂಶವನ್ನು ರಾಷ್ಟ್ರ ಚಿಂತನೆಯ ಪ್ರತಿಯೊಬ್ಬ ನೇತಾರನೂ ತಿಳಿಯುವ ಅಗತ್ಯವಿದೆ. ಇಲ್ಲದೆ ಹೋದರೆ, ಇಂದಿನ ಉದಾರೀಕರಣ, ಜಾಗತೀಕರಣ ಮತ್ತು ಖಾಸಗೀಕರಣವೆಂಬ ಭೂತಗಳು ನಮ್ಮ ರಾಜ್ಯಗಳ ನಡುವಣ ಸಾಂಸ್ಕೃತಿಕ ಬಂಧುತ್ವವನ್ನು ಸಂಪೂರ್ಣ ನಿರ್ನಾಮಗೊಳಿಸಬಲ್ಲುವು. ಜೀವನಕ್ಕೆ ಏಕಾಂತವೂ ಬೇಕು. ಲೋಕಾಂತವೂ ಬೇಕು. ಇವು ಒಂದಕ್ಕೊಂದು ಪೂರಕ. ತಮಿಳು – ಕನ್ನಡ, ಕನ್ನಡ – ತೆಲುಗು, ಕನ್ನಡ – ತುಳು, ಮಲೆಯಾಳಂ – ಕನ್ನಡ ಎಂಬುದು ಕೇವಲ ಭಾಷಿಕ ಮನೋರಾಜ್ಯಗಳಲ್ಲೆ ನೋಡ ಬೇಕಿಲ್ಲ. ಹಾಗೆ ನೋಡಿದಾಗ ರಾಜ್ಯ – ರಾಜ್ಯಗಳ ಬಿಕ್ಕಟ್ಟು ಇನ್ನಷ್ಟು ಹದಗೆಡುತ್ತದೆ. ಇಂಥ ಬಿಕ್ಕಟ್ಟು ಮತ್ತು ಇಕ್ಕಟ್ಟುಗಳಿಂದ ನಾವು ಸದ್ಯವೇ ಪಾರಾಗಬೇಕಾಗಿದೆ.

‘ದ್ರಾವಿಡಶಾಸ್ತ್ರ’ ಎಂಬ ಹೆಸರಿನಲ್ಲಿ ಸಂಕಲನಗೊಳ್ಳುತ್ತಿರುವ ಇಲ್ಲಿಯ ಲೇಖನಗಳು ತಾತ್ತ್ವಿಕ ಸೂತ್ರವನ್ನು ಕಟ್ಟುವ ಹಂಬಲವನ್ನು ಹೊತ್ತಿವೆ. ಈ ಪ್ರಕಟಣೆಯು ಸಾಂಸ್ಕೃತಿಕ ಬಂಧುತ್ವದ ಹೆಜ್ಜೆಗುರುತಾಗಿದೆ. ಇಲ್ಲಿರುವ ಲೇಖನಗಳು ಇಪ್ಪತ್ತೊಂದನೇ ಶತಮಾನದ ಮೊದಲಲ್ಲಿ ಹಳೆಯ – ಪಳೆಯ ಮುಖಗಳನ್ನು ಪಕ್ಕಕ್ಕಿಟ್ಟು ಹೊಸ ಆಶಯಗಳನ್ನು ರೂಪಿಸುವ ಉದ್ದೇಶವನ್ನು ಹೊಂದಿವೆ. ಇಂಥ ಲೇಖನಗಳು ‘ದ್ರಾವಿಡ ವಿಶ್ವ’ವನ್ನು ಕಟ್ಟಲು ಬೇಕಾದ ಹೊರ – ಒಳ ಸಾಮರ್ಥ್ಯಗಳನ್ನು ನಮಗೆ ನೀಡಿವೆ.

ಈ ಪುಸ್ತಕವು ನಮ್ಮ ವಿಭಾಗದ ಮಾಲೆಯಾಗಿದೆ. ಪುಸ್ತಕ ಈ ರೂಪದಲ್ಲಿ ಹೊರಬರಲು ಮಾನ್ಯ ಕುಲಪತಿಗಳಾದ ಡಾ. ಎಚ್.ಜೆ.ಲಕ್ಕಪ್ಪಗೌಡ ಅವರು ಕಾರಣರಾಗಿದ್ದಾರೆ. ಪ್ರಸಾರಂಗದ ನಿರ್ದೇಶಕರಾದ ಡಾ.ಹಿ.ಚಿ.ಬೋರಲಿಂಗಯ್ಯ ಇವರ ಉತ್ಸಾಹ, ಪ್ರೇರಣೆಗಳೂ ನಮಗೆ ಸಹಕಾರಿಯಾಗಿವೆ. ಇವರಿಬ್ಬರಿಗೂ ಕೃತಜ್ಞತೆಗಳು ಸಲ್ಲುತ್ತವೆ. ಲೇಖನಗಳನ್ನು ಬಳಸಿಕೊಳ್ಳಲು ಅನುಮತಿಸಿದ ಎಲ್ಲ ಲೇಖಕರಿಗೂ ಮುಖಪುಟ ವಿನ್ಯಾಸ ಮಾಡಿದವರಿಗೂ ಮುದ್ರಿಸಿಕೊಟ್ಟ ಗೆಳೆಯರನ್ನು ಆದರದಿಂದ ಸ್ಮರಣೆ ಮಾಡಿಕೊಳ್ಳುತ್ತೇನೆ. ವಿಭಾಗದ ಸಹೋದ್ಯೋಗಿ ಮಿತ್ರರ ಸಹಕಾರ ನನ್ನ ಜತೆಗಿದೆ. ಅವರಿಗೂ ನನ್ನ ವಂದನೆಗಳು.

ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ