ಸನ್ಮಾನ್ಯ ಎಸ್‌.ಎಸ್‌. ಒಡೆಯರ್ ಅವರು ಕೊಟ್ಟ ವರದಿಯನ್ನು ಆಧರಿಸಿ ಕರ್ನಾಟಕ ಸರ್ಕಾರವು ೧೯೯೧ ನವೆಂಬರ್ ೧ ರಂದು ಕನ್ನಡ ವಿಶ್ವವಿದ್ಯಾಲಯವನ್ನು ಸ್ಥಾಪಿಸಿತಷ್ಟೆ. ಅದರ ಪ್ರಥಮ ಕುಲಪತಿಯಾದ ಮೇಲೆ ವಿಶ್ವವಿದ್ಯಾಲಯದ ಸ್ವರೂಪ, ಉದ್ದೇಶ, ಸಂರಚನೆಗಳ ಬಗೆಗಿನ ಕೆಲವು ಪ್ರಶ್ನೆಗಳನ್ನು ಮುಖಾಮುಖಿಯಾಗಿ ಎದುರಿಸಿ ಸ್ಪಷ್ಟಪಡಿಸಿಕೊಳ್ಳುವ ಅನಿವಾರ್ಯತೆ ನನಗೆ ಉಂಟಾಯಿತು. ಅದರ ಫಲವೇ ಈ ಪುಸ್ತಿಕೆ. ಇದನ್ನು ಬರೆಯುವ ಮುನ್ನ ಇದೇ ಮಾದರಿಯ ತಮಿಳು ಮತ್ತು ತೆಲುಗು ವಿಶ್ವವಿದ್ಯಾಲಯಗಳಿಗೆ ಭೇಟಿ ನೀಡಿ ಅವುಗಳ ಸಂರಚನೆಗಳ ಬಗ್ಗೆ ಅಧ್ಯಯನ ಮಾಡಿದ್ದೇನೆ. ಕನ್ನಡ ವಿಶ್ವವಿದ್ಯಾಲಯದ ಕಲ್ಪನೆಗೆ ಪರವಿರೋಧ ನಿಲುವು ತಳೆದಿದ್ದ ನಾಡಿನ ಗಣ್ಯ ವಿದ್ವಾಂಸರೊಂದಿಗೆ ಅನೇಕ ಸುತ್ತು ಚರ್ಚೆ ಮಾಡಿದ್ದೇನೆ.  ಇಂಥದೊಂದು ವಿಶಿಷ್ಟ ಸಂಸ್ಥೆಗೆ ಅಂತಿಮ ರೂಪ ಕೊಡುವುದು ಸಾಧ್ಯವಾಯಿತೆಂದು ಹೇಳಲಾರೆ; ನಾವಿನ್ನೂ ಆ ಪ್ರಕ್ರಿಯೆಯಲ್ಲಿ ಇದ್ದೇವೆ. ಕನ್ನಡದ ಅಗತ್ಯಕ್ಕೆ ತಕ್ಕಂತೆ ವಿಶ್ವವಿದ್ಯಾಲಯದ ಸ್ವರೂಪ ಹೊಸ ಹೊಸ ಆಯಾಮಗಳನ್ನು ಪಡೆಯುತ್ತ ಹೋಗಬೇಕು. ಆದರೆ ಪ್ರಾರಂಭದ ಪ್ರಯತ್ನಗಳು ಅದರ ಮುಂದಿನ ಸಾಧ್ಯತೆಗಳನ್ನು ಒಳಗೊಂಡಿರಬೇಕು.

ಈಗಿದ್ದಂತೆ ಕನ್ನಡ ವಿಶ್ವವಿದ್ಯಾಲಯದಲ್ಲಿ ಏನು ನಡೆಯುತ್ತಿದೆ ಎಂಬ ಬಗ್ಗೆ ಎಲ್ಲರಲ್ಲಿ ಕುತೂಹಲ ಇದೆ. ನಾವೇನು ಮಾಡುತ್ತಿದ್ದೇವೆಂದು ಹೇಳುವುದಕ್ಕಿಂತ ಕೊನೇ ಪಕ್ಷ ನಮ್ಮ ಕನಸುಗಳನ್ನಾದರೂ ವಿವರಿಸುವ, ಹಂಚಿಕೊಳ್ಳುವ  ಅಗತ್ಯವಿದೆಯೆನ್ನಿಸಿ ಇದನ್ನು ತಮ್ಮ ಎದುರಿಗೆ ಇಡುತ್ತಿದ್ದೇನೆ. ಇದು ಇಡೀ ದೇಶದಲ್ಲಿಯೇ ವಿಭಿನ್ನವಾದ, ವಿಶಿಷ್ಟವಾದ, ಅತ್ಯಂತ ಅರ್ಥಪೂರ್ಣವಾದ ವಿಶ್ವವಿದ್ಯಾಲಯವಾಗಬೇಕೆಂಬುದು ನಮ್ಮಾಸೆ. ಈ ಕನಸುಗಳಿಗೆ, ವಿಚಾರಗಳಿಗೆ, ನಿಲುವುಗಳಿಗೆ ಅಂತಿಮರೂಪ ಕೊಡುವ ಮುನ್ನ ಮೊದಲೇ ಹೇಳಿರುವಂತೆ ನಾಡಿನ ಗಣ್ಯ ವಿದ್ವಾಂಸರ ಅಭಿಪ್ರಾಯಗಳನ್ನು ಮುಕ್ತವಾಗಿ ಪಡೆದಿದ್ದೇನೆ. ಅವರೆಲ್ಲರಿಗೆ, ಮುಖ್ಯವಾಗಿ ಸನ್ಮಾನ್ಯರಾದ ಕೆ.ವಿ. ಸುಬ್ಬಣ್ಣ, ಡಾ. ಎಚ್ಚೆನ್‌, ಕೀರ್ತಿನಾಥ ಕುರ್ತಕೋಟಿ, ಡಾ. ಜಿ.ಎಸ್‌. ಶಿವರುದ್ರಪ್ಪ, ಡಾ. ಎಂ. ಚಿದಾನಂದಮೂರ್ತಿ, ಡಾ. ಹಾಮಾನಾ, ಯು.ಆರ್. ಅನಂತಮೂರ್ತಿ, ಡಾ. ಡಿ.ಆರ್. ನಾಗರಾಜ್‌, ದಿ. ಎ.ಕೆ. ರಾಮಾನುಜನ್‌, ಎಲ್‌.ಎಸ್‌. ಶೇಷಗಿರಿರಾವ್‌, ಪ್ರೊ. ಷೇಕ್‌ ಅಲಿ ಮತ್ತು ನನ್ನ ಸಹೋದ್ಯೋಗಿಗಳಿಗೆ ಕೃತಜ್ಞತೆಗಳನ್ನ ಹೇಳಲೇಬೇಕು.

ಇದು ಕನ್ನಡಿಗರೆಲ್ಲರ ವಿಶ್ವವಿದ್ಯಾಲಯ. ಎಲ್ಲರ ಕನಸು ಮತ್ತು ಜವಾಬ್ದಾರಿಗಳಿಂದ ಬೆಳೆಯಬೇಕಾದ ವಿಶ್ವವಿದ್ಯಾಲಯ. ಆದ್ದರಿಂದಲೇ ಇದು ಮುಗಿದ ಪುಸ್ತಕವಲ್ಲ. ಕನ್ನಡದ ಸಮಸ್ತದೈವ ಬರೆಯಬೇಕಾದ ಪುಸ್ತಕವಿದು. ಮುನ್ನುಡಿ ಬರೆದಿದ್ದೇನೆ. ಈಗ ತಮ್ಮಿಂದ ಸೃಜನಶೀಲವಾದ, ಕ್ರಿಯಾತ್ಮಕವಾದ ವಿಮರ್ಶೆ, ಟೀಕೆ, ಟಿಪ್ಪಣಿಗಳು ಬರಬೇಕು.

ಚಂದ್ರಶೇಖರ ಕಂಬಾರ