ಕರ್ನಾಟಕದಲ್ಲಿ ದೊರೆಯುವ ನಿರ್ದಿಷ್ಟವಾದ ಐತಿಹಾಸಿಕ ದಾಖಲೆಗಳಲ್ಲಿ ಮೌರ್ಯ ಅಶೋಕನ ಪ್ರಾಕೃತ ಲಿಪಿಗಳೇ ಮೊದಲಿನವು. ಅವುಗಳ ತರುವಾಯ ಶಾತಮಾಹನ, ಪಲ್ಲವ ಮತ್ತು ಕದಂಬ ರಾಜಮನೆತನಗಳಿಗೆ ಸೇರಿದ ಪ್ರಾಕೃತ ಶಾಸನಗಳು ಅಲ್ಲಲ್ಲಿ ತೋರಿಬಂದಿವೆ. ಕ್ರಿ.ಶ. ಪೂರ್ವ ಮೂರನೆಯ ಶತಮಾನದಿಂದ ಕ್ರಿ.ಶ. ನಾಲ್ಕನೆಯ ಶತಮಾನದವರೆಗಿನ ಸುಮಾರು ಏಳುನೂರು ವರ್ಷಗಳ ಕಾಲಾವಧಿಯಲ್ಲಿ ಇವು ಹುಟ್ಟಿವೆ. ಪ್ರದೇಶವ್ಯಾಪ್ತಿಯ ದೃಷ್ಟಿಯಿಂದ ಇವು ಉತ್ತರದಲ್ಲಿ ಕಲಬುರ್ಗಿ ಜಿಲ್ಲೆಯ ಸನ್ನತಿಯಿಂದ ಪ್ರಾರಂಭಿಸಿ (ಬೆಳಗಾವಿ ಸಮೀಪದ) ವಡಗಾವಿ, ಬನವಾಸಿ, ಮಳವಳ್ಳಿಗಳಲ್ಲೂ ತುಂಗಭದ್ರೆಯ ಎಡಬಲದ ಮಸ್ಕಿ, ಕೊಪ್ಪಳ, ನಿಟ್ಟೂರು ಮೊದಲಾದೆಡೆಗಳಲ್ಲಿಯೂ ದಕ್ಷಿಣ ಕರ್ನಾಟಕದ ಹಿರೇಮಗಳೂರಿನಲ್ಲಿಯೂ ದೊರೆತಿವೆ. ತುಂಗಭದ್ರೆಯ ಎಡಬಲದ ಪ್ರದೇಶದಲ್ಲಿಯೇ ಪ್ರಾಕೃತ ಶಾಸನಗಳ ಸಂಖ್ಯೆ ವಿಶೇಷವಾಗಿದ್ದು ದಕ್ಷಿಣ ಕರ್ನಾಟಕದಲ್ಲಿ ತೀರ ಕಡಿಮೆಯಾಗಿದೆ. ಕರ್ನಾಟಕದ ಮೇಲೆ ಆದ ಆರ್ಯಮೂಲ ಸಂಸ್ಕೃತಿಯ ಪ್ರಭಾವದ ದೃಷ್ಟಿಯಿಂದ ಈ ಸಂಗತಿ ಗಮನಾರ್ಹವಾಗಿದೆ. ಕರ್ನಾಟಕ ಸಂಸ್ಕೃತಿಯ ವಿಕಾಸದ ಈ ಹಂತದಲ್ಲಿ ತುಂಗಭದ್ರಾ ನದಿಯೂ ವಿಶಿಷ್ಟ ಪಾತ್ರವಹಿಸಿದೆಯೆಂದು ಇದರಿಂದ ಶ್ರುತ ಪಡುತ್ತದೆ.

ಈವರೆಗೆ ಒಟ್ಟು ಇಪ್ಪತ್ತೊಂದು ಕಡೆ ಪ್ರಾಕೃತ ಶಾಸನಗಳು ಕರ್ನಾಟಕದಲ್ಲಿ ಕಂಡುಬಂದಿವೆ. ಇತ್ತೀಚೆಗೆ ಅಶೋಕನ ಮತ್ತೆರಡು ಶಾಸನಗಳು ದೊರೆತಿದ್ದು, ಕರ್ನಾಟಕದಲ್ಲಿ ಅವನ ಶಾಸನಗಳ ಸಂಖ್ಯೆ ಹತ್ತಕ್ಕೇರಿದೆ. ಧರ್ಮದ ದೃಷ್ಟಿಯಿಂದ ಇವುಗಳಲ್ಲಿ ಸನ್ನತಿಯ ಬಿಡಿಬರಹಗಳು ಬೌದ್ಧ ಧರ್ಮಕ್ಕೆ ಸಂಬಂಧಿಸಿದ್ದರೆ, ಮಳವಳ್ಳಿಯ ಶಾಸನಗಳು ಶೈವಪರವಾಗಿವೆ. ಮಾಧವಪೂರ-ವಡಗಾವಿ, ಹಿರೇಮಗಳೂರು ಮತ್ತು ಹಿರೇಹಡಗಲಿಯ ಪಲ್ಲವ ಶಾಸನಗಳು ವೈದಿಕಮತಕ್ಕೆ ಸಂಬಂಧಿಸಿವೆ. ಇದರಿಂದ ಕನ್ನಡ ಜನಪದವು ವೈದಿಕ-ಅವೈದಿಕವಾದ ಎರಡೂ ಸಂಪ್ರದಾಯಗಳ ಪ್ರಭಾವ ವಲಯದಲ್ಲಿ ಅಂದು ಬಾಳುತ್ತಿದ್ದುದು ಸ್ಪಷ್ಟವಿದೆ. ಉತ್ತರದವರಾದ ಮೌರ್ಯರು ತಮ್ಮ ಆಡಳಿತವನ್ನು ನೇರವಾಗಿ ಕರ್ನಾಟಕದ ಮೇಲೆ ಹೇರಿದ್ದರಿಂದ ಅವರ ಕಾಲದಲ್ಲಿ ಕನ್ನಡ ಜನಪದರ ಮೇಲೆ ಆರ್ಯ ಸಂಸ್ಕೃತಿಯ ಪ್ರಭಾವ ಮುದ್ರೆ ದಟ್ಟವಾಗಿ ಮೂಡಿರಬೇಕೆಂದು ತೋರುತ್ತದೆ.

ಹೀಗೆ ಆರ್ಯಸಂಸ್ಕೃತಿಯ ಪ್ರಭಾವದ ನೇರ ಪ್ರಮಾಣಗಳಾದ ಈ ಪ್ರಾಕೃತ ಶಾಸನಗಳಲ್ಲಕಿಲ ಸ್ಥೂಲವಾಗಿ ಎರಡು ಭಾಗ ಮಾಡಬಹುದು. ಒಂದು, ಕ್ರಿಸ್ತ ಪೂರ್ವದ ಹಂತ: ಎರಡನೆಯದು, ಕ್ರಿಸ್ತಶಕದ ಆರಂಭದ ಹಂತ. ಮೊದಲೆನಯ ಹಂತದಲ್ಲಿ ಅಶೋಕನ ಹತ್ತು ಧರ್ಮಲಿಪಿಗಳೂ ಮಾಧವಪೂರ-ವಡಗಾವಿ ಶಾಸನವೂ ಸಮಾವೇಶಗೊಳ್ಳುತ್ತವೆ. ಎರಡನೆಯ ಹಂತದಲ್ಲಿ ಸನ್ನತಿ, ಮಳವಳ್ಳಿ, ಬನವಾಸಿ, ಹೀರೆಹಡಗಲಿ ಮುಂತಾದ ಶಾಸನಗಳು ಸಮಾವೇಶಗೊಳ್ಳುತ್ತವೆ. ಮೊದಲನೆಯ ಹಂತದ ಶಾಸನಗಳಲ್ಲಿ ಕನ್ನಡ ಭಾಷೆಯ ಅಂಶಗಳು ಇಲ್ಲವೆಂದೇ ಹೇಳಬಹುದಾದ ಸ್ಥಿತಿಯಿದ್ದರೆ, ಎರಡನೆಯ ಹಂತದಲ್ಲಿ ಖಚಿತವಾಗಿಯೂ ಕನ್ನಡ ಭಾಷೆಯ ಅಸ್ತಿತ್ವವನ್ನು ಸಿದ್ಧಪಡಿಸುವ ಅಂಶಗಳು ಕಂಡುಬರುತ್ತವೆ. ಇದರಿಂದ ವ್ಯಕ್ತವಾಗುವ ಒಂದು ಅಂಶವೆಂದರೆ, ಕ್ರಿ.ಶ. ಎರಡನೆಯ ಶತಮಾನದ ಹೊತ್ತಿಗಾಗಲೇ ಕರ್ನಾಟಕದ ದ್ರಾವಿಡ ಮೂಲದ ಜನಾಂಗ ಮತ್ತು ಉತ್ತರದಿಂದ ಬಂದ ಆರ್ಯಮೂಲದ ವಲಸೆಗಾರರಲ್ಲಿ ಸಾಂಸ್ಕೃತಿಕ ಸಾಮರಸ್ಯ ಏರ್ಪಟ್ಟಿತ್ತೆಂಬುದು.

ಒಂದು ಜನಪದ ಸ್ವರೂಪದ ನಿರ್ಮಾಣಕ್ಕೆ ಅದರ ಭೌಗೋಲಿಕ ವ್ಯಾಪ್ತತೆ ಮತ್ತು ಅದಕ್ಕಿಂತ ಹೆಚ್ಚಾಗಿ ಅದರ ಭಾಷೆ ಮುಖ್ಯ ಪಾತ್ರ ವಹಿಸುತ್ತವೆ. ಈ ನಿಟ್ಟಿನಿಂದ ನೋಡಿದಾಗ, ತಮಿಳಿನಿಂದ ಕನ್ನಡವು ಬೇರೆಯಾಗಿ ಸ್ವತಂತ್ರ ಅಸ್ತಿತ್ವ ಸಂಪಾದನೆ ಮಾಡಿದ ಕಾಲಾವಧಿಯ, ಬಹುಮುಖ್ಯವಾದದ್ದೆನಿಸುತ್ತದೆ.

ಭಾಷೆಯೊಂದನ್ನು ಒಡೆದು ಉಪಭಾಷೆಗಳನ್ನು ನಿರ್ಮಿಸುವಲ್ಲಿ ರಾಜಕೀಯ ಆಡಳಿತವೂ ಒಂದು ಶಕ್ತಿಯಾಗಿ ಕಾರ್ಯನಿರ್ವಹಿಸುತ್ತದೆ. ಅದೂ ಬೇರೊಂದು ಮೂಲದ ಜನಾಂಗದ ಆಡಳಿತುವ ಬಹುಮುಖ್ಯವಾದ ಪಾತ್ರವಹಿಸಬಲ್ಲದು. ಆ ಪೂರ್ವದಲ್ಲಿಯೆ ನಿರ್ಮಾಣಗೊಂಡಿದ್ದ ಉಪಭಾಷಾ ವೈಶಿಷ್ಟ್ಯಗಳು ಮತ್ತೂ ಹೆಚ್ಚುವಂತೆ ಮಾಡಿ ಪ್ರತ್ಯೇಕ ಭಾಷೆಯ ಅಸ್ತಿತ್ವಕ್ಕೆ ಅದು ಕಾರಣವಾಗಲೂಬಹುದು. ಮೌರ್ಯ ಆಡಳಿತಕ್ಕೆ ಅಂದು ಕರ್ನಾಟಕದ ಬಹು ಭಾಗಗಳು ಅಶೋಕನ ಶಾಸನಗಳಲ್ಲಿಯೇ ಸ್ಪಷ್ಟ ಆಧಾರಗಳಿವೆ.

[1] ಜತೆಗೆ ಅಶೋಕನ ಪ್ರೋತ್ಸಾಹದಿಂದಾಗಿ ಬೌದ್ಧ ಮತದ ಪ್ರಸಾರವೂ ಕರ್ನಾಕದಲ್ಲಿ ನಡೆದಿರಬೇಕೆಂದು ತಿಳಿಯಬಹುದಾಗಿದೆ. ಕನ್ನಡವು ಸ್ವತಂತ್ರ ಭಾಷೆಯಾಗಿ ಮಾರ್ಪಡುವಲ್ಲಿ ಮೌರ್ಯರು ಆಡಳಿತವು ಅಪಾರ ಪ್ರಭಾವ ಬೀರಿರಬೇಕೆಂದು ಊಹಿಸಬಹುದಾಗಿದೆ.

ಹೀಗೆ ಕನ್ನಡವು ಶಾತವಾಹನರ ಕಾಲಾವಧಿಗಿಂತ ಪೂರ್ವದಲ್ಲಿಯೇ ಸ್ವತಂತ್ರಗೊಂಡಿರುವ ಸಾಧ್ಯತೆ ಇದೆ. ಪ್ರೊ || ತೀ. ನಂ. ಶ್ರೀ. ಅವರು ಕ್ರಿ.ಶ. ಪೂ. ಅಯ್ದನೆಯ ಶತಮಾನದಲ್ಲಿ ಅದು ಸ್ವತಂತ್ರಗೊಂಡಿರಬೇಕೆಂದು ಊಹೆಯನ್ನು ಮುಂದೆ ಮಾಡಿದ್ದಾರೆ. [2] ಆದರೆ ನಂಬಲರ್ಹವಾದ ಆಧಾರಗಳು ದೊರೆಯುತ್ತಿರುವುದು ಶಾತವಾಹನರ ಕಾಲದಲ್ಲಿಯೆ ಎಂಬುದನ್ನು ನೆನಪಿಡಬೇಕು. ಅಂಥ ಆಧಾರಗಳನ್ನು ಕುರಿತು ಈಗ ನೋಡಬಹುದು.

ಕರ್ನಾಟಕದಲ್ಲಿ ಈವರೆಗೆ ದೊರೆತಿರುವ ಪ್ರಾಕೃತ ಶಾಸನಗಳು ಮುಂದಿನಂತೆ ಇವೆ:

೧. ಗವೀಮಠ[3] ಮೌರ್ಯ ಅಶೋಕ ಕ್ರಿ.ಶ. ಪೂ. ೩ ನೇ ಶ.
೨. ಪಾಲ್ಕಿಗುಂಡು3 ” ”
೩. ಮಸ್ಕಿ[4] ” ”
೪. ಬ್ರಹ್ಮಗಿರಿ4
೫. ಸಿದ್ಧಾಪುರ4
೬. ಜಟಿಂಗರಾಮೇಶ್ವರ4
೭. ನಿಟ್ಟೂರು-೧[5] ” ”
೮. ನಿಟ್ಟೂರು-೨5 ” ”
೯. ಮಾಧವಪೂರ ವಡಗಾವಿ[6] ಕ್ರಿ.ಶ. ಪೂ. ೧ ನೇ ಶ.
೧೦. ಬನವಾಸಿ[7] ಶಾತವಾಹನ ಕ್ರಿ.ಶ. ೨ನೇ ಶ.
೧೧. ಬನವಾಸಿ[8] (ಚುಟು) ಕ್ರಿ.ಶ. ೨ನೇ ಶ.
೧೨. ಮಳವಳ್ಳಿ[9]
೧೩. ಸನ್ನತಿ[10]
೧೪. ಹಂಪಿ[11]
೧೫. ಹಿರೇಮಗಳೂರು[12] ಕ್ರಿ.ಶ. ೩ನೇ ಶ.
೧೬. ಬೆಳ್ವಾಡಗಿ[13]
೧೭. ಹಿರೇಹಡಗಲಿ[14] ಪಲ್ಲವ (ಶಿವಸ್ಕಂದವರ್ಮ) ಕ್ರಿ.ಶ. ೩ನೇ ಶ.
೧೮. ಚಂದ್ರವಳ್ಳಿ[15] ಕದಂಬ (ಮಯೂರವರ್ಮ) ಕ್ರಿ.ಶ. ೪ನೇ. ಶ.
೧೯. ಮಳವಳ್ಳಿ[16] ”
೨೦. ಹುರುಸುಗುಂದಿ[17] ?
೨೧. ಕುರಗೋಡ[18] ಕ್ರಿ.ಶ. ೪ನೇ ಶ.?

ಇವಲ್ಲದೆ, ಇತ್ತೀಚೆಗೆ ಪತ್ರಿಕೆಗಳಲ್ಲಿ ಚಿತ್ರದುರ್ಗದ ಸಮೀಪದ ಗುಹೆಗಳಲ್ಲಿ ಬ್ರಾಹ್ಮೀಲಿಪಿಯ ಶಾಸನಗಳಿರುವುದರ ಬಗೆಗೆ ವರದಿಗಳು ಪ್ರಕಟವಾಗಿವೆ. ಅವು ಬ್ರಾಹ್ಮೀಶಾಸನಗಳೆಂದು ಖಚಿತವಾದರೆ ಕರ್ನಾಟಕದ ಪ್ರಾಕೃತ ಶಾಸನಗಳ ಸಂಖ್ಯೆ ಸುಮಾರು ೨೫ ರಷ್ಟು ಆಗುತ್ತದೆ.

ಅಶೋಕನ ಶಾಸನಗಳ ಭಾಷೆಯನ್ನು ವಿದ್ವಾಂಸರು ‘ಮಗಧನ್‌’ (Magadhan) ಎಂದು ಕರೆದಿದ್ದಾರೆ.[19] ಈ ಮಾಗಧ ಎಂಬುದು ಮುಂದಿನ ಕಾಲಾವಧಿಯ ಪ್ರಾಕೃತಗಳಾದ ‘ಮಾಗಧಿ’ ಅಥವಾ ‘ಅರ್ಧಮಾಗಧಿ’ ಭಾಷೆಗಳಲ್ಲ. ಅವೇ ಬೇರೆ; ಇದೇ ಬೇರೆ. ಜತೆಗೆ ಇದರಲ್ಲಿ ಪ್ರಾಂತಿಕ ವ್ಯತ್ಯಾಸಗಳೂ ಇವೆ.

ಕೊಪ್ಪಳದ ಗವೀಮಠ ಮತ್ತು ಪಾಲ್ಕಿಗುಂಡು ಶಾಸನಗಳಲ್ಲಿ ನಕಾರ ಮೂರ್ಧನ್ಯೀಕರಣ ವಿಶೇಷವಾಗಿದೆ. ದೇವಾಣಂಪಿಯೇ, ಮಾಣುಸೇಹಿ, ಣೋ ಮುಂತಾದ ಉದಾಹರಣೆಗಳನ್ನು ನೋಡಬಹುದು. ಈ ಮೂರ್ಧನ್ಯೀಕರಣವು ಮುಂದಿನ ಕಾಲದ ಮಹಾರಾಷ್ಟ್ರೀ ಪ್ರಾಕೃತದ ವೈಶಿಷ್ಟ್ಯಗಳಲ್ಲಿ ಒಂದೆನಿಸಿತು. ಮೊದ ಮೊದಲಿನ ಪ್ರಾಕೃತ ಶಾಸನಗಳಲ್ಲಿ ಪದ ಮಧ್ಯ ಸ್ಪರ್ಶಗಳು ಶೂನ್ಯಗೊಳ್ಳುವುದು. ಕಡಿಮೆ ಕ್ರಿ.ಶ. ದ ಪ್ರಾರಂಭದಲ್ಲಿ ಈ ಪ್ರಕ್ರಿಯೆ ಪಶ್ಚಿಮ ಭಾರತದ (ಈಗಿನ ಮಹಾರಾಷ್ಟ್ರ, ಗುಜರಾತ) ಪ್ರಾಕೃತ ಶಾಸನಗಳಲ್ಲಿ ಕಾಣಿಸಿಕೊಳ್ಳತೊಡಗುತ್ತದೆ.[20] ಕ್ರಿ.ಶ. ನಾಲ್ಕನೆಯ ಶತಮಾನಕ್ಕೆ ಸೇರಿದ ಚಂದ್ರವಳ್ಳಿಯ ಶಾಸನದಲ್ಲಿ ‘ವಿನಿಮ್ಮಿಅಂ’ ಎಂಬ ಪ್ರಯೋಗವಿದೆ. ಇಲ್ಲಿ ಪದ ಮಧ್ಯ ಸ್ಪರ್ಶತಕಾರವು ಶೂನ್ಯಗೊಂಡಿರುವುದನ್ನು ಕಾಣಬಹುದು. ಬಿ.ಎಲ್‌. ರೈಸರು ಮಳಮಳ್ಳಿಯ ಶಾಸನಗಳಲ್ಲಿ ಮಹಾರಾಷ್ಟ್ರೀ ಪ್ರಾಕೃತದ ಛಾಯೆ ಇದೆಯೆಂದು ಹೇಳಿದ್ದಾರೆ. ಸನ್ನತಿಯ ಶಾಸನಗಳಲ್ಲಿ ‘ಸಿಂಹ’ (<ಸಂ. ಸಿಂಹ) ಎಂಬ ಪ್ರಯೋಗ ಕಂಡುಬರುತ್ತಿದ್ದು ಅದು ಪಾಲೀ ರೂಪಕ್ಕೆ ಸಮಾನವಾಗಿದೆ. ಈ ರೀತಿ ಮಹಾರಾಷ್ಟ್ರೀ ಪ್ರಾಕೃತದ ಅಂಶಗಳ ಜತೆಯಲ್ಲಿ ಪಾಲಿರೂಪವೂ ಕಂಡುಬರುತ್ತಿರುವುದು, ಕರ್ನಾಟಕದಲ್ಲಿದ್ದ ಆರ್ಯಮೂಲ ಜನಾಂಗಗಳ ವೈವಿಧ್ಯಕ್ಕೆ ಸಂಕೇತವೆಂದು ಭಾವಿಸಬಹುದು.

ಕ್ರಿ.ಶ. ಮೂರು-ನಾಲ್ಕನೆಯ ಶತಮಾನಕ್ಕೆ ಸೇರುವ ಹಿರೇಹಡಗಲಿಯ ಪಲ್ಲವ ಶಾಸನದ ಪ್ರಾಕೃತವು ಬಹುಪಾಲು ಕೃತ್ರಿಮವಾಗಿದೆಯೆಂದು ವಿದ್ವಾಂಸರು. ಹೇಳಿದ್ದಾರೆ.[21] ಈ ಶಾಸನ ಹಾಗೂ ಮಳವಳ್ಳಿಯ ಕದಂಬ ಶಾಸನಗಳ ಅಂತ್ಯದಲ್ಲಿ ಸಂಸ್ಕೃತವಾಕ್ಯಗಳಿವೆ. ಇದು ಪ್ರಾಕೃತವು ಹಿಂದೆ ಬೀಳುತ್ತಿದ್ದುದರ ಸ್ಪಷ್ಟ ಸೂಚನೆಯಾಗಿವೆ.

ಅಶೋಕನ ಶಾಸನಗಳಲ್ಲಿ ಚೋಳ, ಪಾಂಡ್ಯ ಮತ್ತು ಕೇರಳಗಳ ಸ್ಪಷ್ಟ ನಿರ್ದೇಶನವಿದೆ. ಆದರೆ ಅವುಗಳಲ್ಲಿ ಕರ್ನಾಟಕದ ಭಾಗಗಳನ್ನು ಸ್ಪಷ್ಟವಾಗಿ ನಿರ್ದೇಶಿಸಿಲ್ಲ. ‘ಸತಿಯಪುತ್ರ’ವೊಂದನ್ನು ಮಾತ್ರ, ನಿರ್ದೇಶಿಸಲಾಗಿದೆ.[22] ಈ ‘ಸತಿಯಪುತ್ರ’ ವೆಂದರೆ ಇಂದಿನ ದಕ್ಷಿಣ ಕನ್ನಡದ ಪ್ರದೇಶವೆಂದು ಊಹಿಸಲಾಗಿದೆ. ಇದು ಕೂಡ ದ್ರಾವಿಡಮೂಲದ ಪದವಲ್ಲ. ಅಶೋಕನ ಬ್ರಹ್ಮಗಿರಿ ಶಾಸನದಲ್ಲಿ ಬಂದಿರುವ ‘ಇಸಿಲ’ ಎಂಬ ಪಟ್ಟಣದ ಹೆಸರು ಮಾತ್ರ ಕನ್ನಡ ಮೂಲದ್ದೆಂದು ಡಾ || ಡಿ.ಎಲ್‌.ಎನ್‌. ಅಭಿಪ್ರಾಯಪಟ್ಟಿದ್ದಾರೆ. ‘ಇಸಿಲ’ ಎಂಬುದು ‘ಎಸಿಲ್’ ಎಂಬ ಕನ್ನಡ ಶಬ್ದದ ಪ್ರಾಕೃತ ರೂಪವೆಂದೂ ಅದರ ತಮಿಳು ಜ್ಞಾತಿಪದ ‘ಎಯಿಲ್’ ಎಂದೂ ಅವರು ತಿಳಿಸುತ್ತಾರೆ[23] ಆದರೆ ಇದು ಕನ್ನಡ ಭಾಷೆಯ ಯಾವ ಹಂತದಲ್ಲೂ ಪ್ರಯೋಗದಲ್ಲಿದ್ದುದು ಕಂಡುಬಂದಿಲ್ಲ.

ಅಶೋಕ ಲಿಪಿಗಳ ತರುವಾಯ ಕ್ರಿ.ಶ. ಪೂ. ಒಂದನೆಯ ಶತಮಾನದ ಮಾಧವಪೂರ-ವಡಗಾವಿ ಶಾಸನದಲ್ಲಿ (ಸ-) ಣಾಟಪತಿಸ ಎಂಬ ಪ್ರಯೋಗ ಕಂಡುಬರುತ್ತದೆ. ಇಲ್ಲಿ ‘ಣಾಟಪತಿ’ ಎಂಬ ಪ್ರಾತಿಪದಿಕಕ್ಕೆ-ಸ ಎಂಬ ಷಷ್ಠೀವಿಭಕ್ತಿ ಪ್ರತ್ಯಯ ಸೇರಿದೆ. ಪ್ರಾಕೃತ ಶಾಸನಗಳಲ್ಲಿ ನಕಾರಕ್ಕೆ ಬದಲು ಣಕಾರವಿರುವುದು ಅಪರೂಪವೇನಲ್ಲ. ಆದುದರಿಂದ ಇದು ‘ನಾಟಪತಿ’ ಎಂಬ ಅರಿಸಮಾಸವೆಂದು ಹೇಳಬಹುದು. ಇಲ್ಲಿಯ ‘ನಾಟ’ ಎಂಬ ಪೂರ್ವಪದವು ಇಂದು ಕನ್ನಡದಲ್ಲಿ ಪ್ರಚುರವಾಗಿರುವ ‘ನಾಡು’ ಎಂಬುದರ ಪ್ರಾಚೀನರೂಪ. ಪುನ್ನಾಟ, ಕರ್ನಾಟಕ (ಅಥವಾ ಪುಣ್ಣಾಟ, ಕರ್ಣಾಟ) ಎಂಬ ಸಮಾಸಗಳಲ್ಲಿಯೂ ಈ ರೂಪವಿರುವುದನ್ನು ಕಾಣಬಹುದು. ತಮಿಳಿನಲ್ಲಿಯೂ ‘ನಾಟ್ಟು’ ‘ನಾಟ್ಟಾನ್’ ಮುಂತಾದ ಪ್ರಯೋಗಗಳಿವೆ. ಆದುದರಿಂದ ವಡಗಾವಿ ಶಾಸನದ ಈ ಪದವನ್ನು ಈವರೆಗೆ ತಿಳಿದು ಬಂದಿರುವಂತೆ ಕನ್ನಡ ಭಾಷೆಯ ಅಸ್ತಿತ್ವವನ್ನು ಸಿದ್ಧಪಡಿಸುವ ಸ್ಪಷ್ಟವದ ಪ್ರಥಮಾಧಾರವೆನ್ನಬಹುದು.

ಕ್ರಿ.ಶ. ಎರಡನೆಯ ಶತಮಾನದ ಮಳವಳ್ಳಿಯ ಶಾಸನದಲ್ಲಿ ಅದೇ ಮಳವಳ್ಳಿಯನ್ನು ‘ಮಟ್ಟಪಟ್ಟಿ’ ಎಂದು ಕರೆದಿದೆ. ಇಲ್ಲಿಯ ಉತ್ತರ ಪದ ‘ಪಟ್ಟಿ’[24] ಎಂಬುದು ‘ಗ್ರಾಮ’ ಎಂಬ ಅರ್ಥದ್ದು. ಇದಕ್ಕೆ ತಮಿಳು, ತೆಲಗು, ಮಲೆಯಾಳಗಳಲ್ಲಿ ಮತ್ತು ಅನಂತರದ ಕನ್ನಡದಲ್ಲಿ ಇದೇ ಅರ್ಥವಿದೆ. ಸರಿಸುಮಾರು ಇದೇ ಅವಧಿಗೆ ಸೇರಿದ ಸನ್ನತಿಯ ಶಾಸನಗಳಲ್ಲಿ ಒಂದು ‘ಸಂಬಲೀವಊರ ವಾಸಿನೋ ಆಪಕುಟಿಸ’[25] ಎಂಬ ಪಾಠವನ್ನೀಯುತ್ತದೆ. ಇಲ್ಲಿ ‘ಸಂಬಲೀವಊರ’ ಎಂಬುದರ ಅಂತ್ಯದಲ್ಲಿ ‘ಊರ್’ ಎಂಬ ಕನ್ನಡ ಆಕೃತಿಮಾ ಇದ್ದುದು ಸ್ಪಷ್ಟ. ‘ಸಂಬಲೀವಊರ’ ಎಂಬುದನ್ನು ‘ಸಬಲ+ಈವ+ಊರ’ ಎಂದು ವಿಭಾಗಿಸಬಹುದೇನೋ? ಸನ್ನತಿಯ ಇನ್ನೊಂದು ಶಾಸನದಲ್ಲಿ ‘ಮೂಡಾಣ ಮಹಾಗಾಮಿ’ ಎಂಬ ಪ್ರಯೋಗ ಕಂಡುಬರುತ್ತದೆ.[26] ಇಲ್ಲಿಯ ‘ಮೂಡಾಣ’ ಎಂಬುದು ‘ಮೂಡಣ’ ಎಂಬ ದಿಗ್ವಾಚಿಯ ಪುರಾತನರೂಪವಾಗಿರುವಂತೆ ಕಾಣುತ್ತದೆ.

ಇದಾದ ಮೇಲೆ ಕ್ರಿ.ಶ. ಸುಮಾರು ಮೂರನೆಯ ಶತಮಾನದ ಹಿರೇಹಡಗಲಿಯ ಶಾಸನದಲ್ಲಿ ‘ಕೋಟ್ಟಸಮ’ (=ಕೋಟ್ಟಶರ್ಮ) ಎಂಬ ವ್ಯಕ್ತಿಯ ಹೆಸರಿದೆ. ಜತೆಗೆ ಆಪಿಟ್ಟಿ ಎಂಬ ಗ್ರಾಮವಾಚಕವೂ ಇದೆ. ‘ಕೋಟ್ಟಸಮ’ ದಲ್ಲಿಯ ‘ಕೋಟ್ಟ’ ಎಂಬುದು ದ್ರಾವಿಡಮೂಲದ್ದಿರುವಂತೆ ಕಾಣುತ್ತದೆ. ತಮಿಳಿನ ಕೋಟ್ಟೈ, ಕನ್ನಡದ ಕೋಟ್ಟೆ (>ಕೋಂಟೆ>ಕೋಟೆ) ಮಲೆಯಾಳಿಯ ‘ಕೋಟ್ಟ’ ಇವು ಇದರ ಜ್ಞಾತಿ ರೂಪಗಳು. ಆದುದರಿಂದ ಇಲ್ಲಿಯ ಪ್ರಯೋಗವು ಕನ್ನಡದಿಂದ ಸ್ವೀಕರಿಸಿದ್ದೆಂದು ಹೇಳಬಹುದು. ಆದರೆ ಹೀಗೆ ಹೇಳುವುದಕ್ಕೆ ಒಂದು ಆತಂಕವಿದೆ. ಕ್ರಿ.ಶ. ಪೂ. ೩ನೆಯ ಅಶೋಕನ ಸಾರನಾಥ ಶಾಸನದಲ್ಲಿ ‘ಕೋಟ’ ಎಂದು ಈ ಪದ ಪ್ರಯೋಗ ಕಂಡುಬರುತ್ತದೆ.[27] ಎಂದರೆ ದ್ರಾವಿಡಮೂಲದ ಈ ಪದ ಅಷ್ಟು ಹಿಂದೆಯ ಪ್ರಾಕೃತದಲ್ಲಿ ಸೇರಿಹೋಗಿತ್ತೆಂದು ಭಾವಿಸಬೇಕಾಗುತ್ತದೆ. ಈ ಕಾರಣಕ್ಕಾಗಿ ಹಿರೇಹಡಗಲಿಯ ಶಾಸನದ ‘ಕೋಟ್ಟ’ – ಎಂಬ ಪ್ರಯೋಗವು ಅಂದಿನ ಕನ್ನಡದಿಂದ ಪ್ರಾಕೃತಕ್ಕೆ ಸೇರಿದ್ದೆಂದು ಹೇಳಲು ಅನುಮಾನಪಡಬೇಕಾಗುತ್ತದೆ. ಆದರೂ ಇಲ್ಲಿಯ ‘ಟ್ಟ’ ಕಾರದ್ವಿತ್ವವು ಕನ್ನಡದ ಪ್ರಭಾವವಾಗಿರುವ ಸಾಧ್ಯತೆ ಇದೆ.

ಕ್ರಿ.ಶ. ನಾಲ್ಕನೆಯ ಶತಮಾನಕ್ಕೆ ಸೇರಿದ ಚಂದ್ರವಳ್ಳಿ ಶಾಸನದಲ್ಲಿ ‘ಪುನಾಟ’ (ಅಥವಾ ಪುಣಡ) ಎಂಬ ಉಲ್ಲೇಖವಿದೆ. ಇದು ‘ಪುನ್ನಾಟ’ ಎಂಬುದರ ಪ್ರಾಕೃತ ರೂಪ. ಡಾ || ಡಿ. ಎಲ್‌. ಎನ್‌. ಇದನ್ನು ‘ಪುನಲ್‌+ನಾಟ’ ಎಂದು ಬಿಡಿಸಿದ್ದಾರೆ. [28] ಇದರ ಉತ್ತರಪದವಾದ ‘ನಾಟ’ ಎಂಬ ರೂಪವು ಕನ್ನಡ ಮೂಲದ್ದೆಂಬ ಬಗೆಗೆ ಭಿನ್ನಾಭಿಪ್ರಾಯವಿರಲಾರದು. ಕ್ರಿ.ಶ. ೬ನೆಯ ಶತಮಾನದ ಸಂಸ್ಕೃತ ಶಾಸನವೊಂದು ‘ಪುಂರಾಷ್ಟ್ರ’ ಎಂದು ಪುನ್ನಾಟವನ್ನು ಹೆಸರಿಸಿದೆ.[29] ಇಂದಿನ ಮೈಸೂರು ಜಿಲ್ಲೆಯಲ್ಲಿ ಪ್ರಾಚೀನ ಕಾಲದಲ್ಲಿದ್ದ ಚಿಕ್ಕರಾಜ್ಯವೇ ಈ ‘ಪುನ್ನಾಟ’. ಕ್ರಿ.ಶ. ಎರಡನೆಯ ಶತಮಾನದ ಗ್ರೀಕ್‌ ಭೂಗೋಲಜ್ಞ ಟಾಲೆಮಿ ಕೂಡ ಇದನ್ನು ಹೆಸರಿಸಿದ್ದಾನೆ.[30]

ಇದೇ ಶತಮಾನದ ಮಳವಳ್ಳಿಯ ಕದಂಬ ಶಾಸನದಲ್ಲಿ ವೆಟ್ಟಕ್ಕಿ, ವೇಗೂರಂ, ಮರಿಯಸಾ, ಕೊಂಗಿನಗರಂ, ಮಟ್ಟಪಟ್ಟಿ, ಸೋಮಪಟ್ಟಿ, ಎಕ್ಕಟ್ವಾ (ದ್ದಾ) ಹಾರ, ಕುನ್ದತಪುಕ, ಕೋಣತಪುಕ, ಕುನ್ದಮುಚ್ಚುಂಡಿ, ಅಪರಮುಚ್ಚುಂಡಿ, ಕಪ್ಪೆನ್ನಲಾ, ಕರಿಪೆ ನ್ದೂಲ ಎಂಬ ಊರ ಹೆಸರುಗಳಿವೆ. ಈ ಊರ ಹೆಸರುಗಳಲ್ಲಿ ಬಹಳಷ್ಟು ಕನ್ನಡ ಭಾಷೆಯ ಅಂಶಗಳಿವೆ. ನೆಟ್ಟಕ್ಕಿ, ವೇಗೂರಂ, ಮಟ್ಟಪಟ್ಟಿ ಮುಂತಾದವು ಕನ್ನಡ ಮೂಲದವೆಂಬ ಸಂಗತಿ ಎದ್ದು ಕಾಣುತ್ತದೆ. ‘ವೇಗೂರಂ’ ಎಂಬುದರ ಕೊನೆಯಲ್ಲಿ ಯೂ ‘ಊರ್‌’ ಆಕೃತಿಮಾ ಇರುವುದನ್ನು ಕಾಣಬಹುದು. ವೆಟಕ್ಕಿ ಮತ್ತು ವೇಗೂರಗಳ ಆದಿಯಲ್ಲಿ ವಕಾರವಿರುವುದನ್ನು ಕಾಣಬಹುದು. ಅಂದು ಕನ್ನಡ ಶಬ್ದಗಳ ಆದಿಯಲ್ಲಿ ವಕಾರವು ಪ್ರಬಲವಾಗಿದ್ದುದರ ಸಂಕೇತ ಇವು. ಕುನ್ದ ಮುಚ್ಚುಂಡಿ, ಅಪರಮುಚ್ಚುಂಡಿ ಎಂಬ ಗ್ರಾಮವಾಚಕಗಳಲ್ಲಿ ‘ಮುಚ್ಚುಂಡಿ’ ಎಂಬುದುನ ಉಭಯ ಸಾಮಾನ್ಯ ರೂಪವಿರುವುದನ್ನು ಗಮನಿಸಿದಿರೆ[31] ಇಲ್ಲಿ ‘ಕುನ್ದ’ ಎಂಬುದು ವಿಶೇಷಣ ರೂಪದಲ್ಲಿ ಪ್ರಯೋಗವಾಗಿರುವುದನ್ನು ಕಾಣಬಹುದು. ‘ಕುನ್ದತಪುಕಂ’ ಎಂಬುದರಲ್ಲಿಯೂ ಇದು ಕಂಡುಬರುತ್ತದೆ. ಆದುದರಿಂದ ಇಲ್ಲಿಯ ‘ಕುನ್ದ’ ಎಂಬುದು ಸ್ವತಂತ್ರವಾದ ಆಕೃತಿಮಾ ಎಂದು ಹೇಳಬಹುದು. ತಮಿಳಿನ ‘ಕುನ್ರು’ (ಗುಡ್ಡ, ಬೆಟ್ಟ ಎಂಬ ಅರ್ಥದಲ್ಲಿ) ಎಂಬುದು ಇದರ ಸಮಾನರ್ಥಕ ಶಬ್ದ. ಇಲ್ಲಿ ತಮಿಳಿನಲ್ಲಿಯ ವರ್ತ್ಸ್ಯತಕಾರಕ್ಕೆ ಬದಲಾಗಿ ಕನ್ನಡದಲ್ಲಿ ‘ದಂತ್ಯ’ ವಿರುವುದು ಸ್ಪಷ್ಟ. ಇದೇ ರೀತಿ ಹಲ್ಮಿಡಿ ಶಾಸನ ದ ‘ಪತ್ತೆ-ಪತ್ತೊನ್ದಿ’ ಎಂಬ ಪ್ರಯೋಗಗಳಲ್ಲಿಯೂ ವರ್ತ್ಸ್ಯ ತಕಾರವು ದಂತ್ಯವಾಗಿ ಪರಿವರ್ತಿಸಿರುವುದನ್ನು ಕಾಣಬಹುದು. ಇದರಿಂದ ಮೂಲದ್ರಾವಿಡದ ಈ ಧ್ವನಿಯು ಕ್ರಿ.ಶ. ನಾಲ್ಕನೆಯ ಶತಮಾನಕ್ಕಾಗಲೇ ಕನ್ನಡದಲ್ಲಿ ದಂತ್ಯವಾಗಿ ಪರಿವರ್ತಿಸಿತ್ತೆಂದು ಸಿದ್ಧವಾಗುತ್ತದೆ. ಇದೇ ಕಾರಣಕ್ಕಾಗಿ, ವರ್ತ್ಸ್ಯ ತಕಾರವು ಬದಲಾವಣೆಗೊಳ್ಳ ತೊಡಗಿದ್ದು ಕ್ರಿ.ಶ. ೭-೮ ನೆಯ ಶತಮಾನಗಳ ತರುವಾಯದಲ್ಲಿ ಎಂದು ಹೇಳುವ ಡಾ || ಭ. ಕೃಷ್ಣ ಮೂರ್ತಿಯವರ ಅಭಿಪ್ರಾಯವು[32] ಅಸಮರ್ಥನೀಯವೆನಿಸುತ್ತದೆ.

ಕುನ್ದತಪುಕಂ, ಕೋಣತಪುಕಂ ಎಂಬೆರಡು ಸ್ಥಳವಾಚಗಳಲ್ಲಿ ‘ಪುಕಂ’ ಎಂಬ ಸಾಧಾರಣ ಅಂಶ ಕಂಡುಬರುತ್ತದೆ. ಮೇಲೆ ತೋರಿಸಿರುವಂತೆ ‘ಕುನ್ದ’ ಎಂಬುದು ಸ್ವತಂತ್ರವಾಗಿ ಪ್ರಯೋಗಗೊಳ್ಳುವ ಆಕೃತಿಮಾ ಆಗಿದೆ. ಇದರಿಂದ ‘ಕುನ್ದತ’ ‘ಕೋಣತ’ ಎಂಬುವುಗಳಲ್ಲಿಯ ‘ತ’ ಎಂಬುದು ಒಂದು ಪ್ರತ್ಯಯವೆಂಬುದು ಸ್ಪಷ್ಟಪಡುತ್ತದೆ. ಈ ‘ತ’ ಷಷ್ಟೀವಿಭಕ್ತಿಯ ಪ್ರತ್ಯಯವಾಗಿರುವ ಸಾಧ್ಯತೆ ಇದೆ. ತುಳುವಿನಲ್ಲಿ ಈಗ ತ ಷಷ್ಠೀ ವಿಭಕ್ತಿ ಪ್ರತ್ಯಯವಾಗಿದೆ.[33]

ವೇಗೂರಂ ಮತ್ತು ಕೊಂಗಿನಗರಂ ಎಂಬೆರಡು ಊರುಗಳಲ್ಲಿ (ಎರಡು ಸ್ವರಗಳ ಮಧ್ಯದಲ್ಲಿ ಮತ್ತು ಅನುನಾಸಿಕದ ಪರದಲ್ಲಿ) ಘೋಷಸ್ಪರ್ಶಧ್ವನಿ ಇರುವುದನ್ನು ಕಾಣಬಹುದು. ತಮಿಳಿನ ಪ್ರಾಚೀನ ಲೇಖನಗಳಲ್ಲಿ ಘೋಷಧ್ವನಿಗಳಿಗೆ ಪ್ರತ್ಯೇಕ ಸಂಜ್ಞೆಗಳಿರಲಿಲ್ಲವೆಂಬುದನ್ನು ಸ್ಮರಿಸಿದರೆ ಕನ್ನಡವು ಎರಡನೆಯ ಶತಮಾನಕ್ಕಾಗಲೇ ಸ್ವತಂತ್ರ ಅಸ್ತಿತ್ವ ಹೊಂದಿದ್ದುದು ಸ್ಪಷ್ಟವಾಗುತ್ತದೆ.

ಇನ್ನು ‘ಕರಿಪೆನ್ದೂಲ’ ಎಂಬುದರ ಅಂತ್ಯ ಲಕಾರ ರಕಾರದ ಪರಿವರ್ತನೆ ಆಗಿರುವ ಸಾಧ್ಯತೆ ಇದೆ. ಪ್ರಾಕೃತದಲ್ಲಿ ಇದು ಅಸಂಭವವೇನೂ ಇಲ್ಲ. ‘ಪುಳುಮಾಯಿ’ ಎಂಬ ಶತವಾಹನ ರಾಜನ ಹೆಸರು ದ್ರಾವಿಡಮೂಲದ್ದೆಂದು ವಿದ್ವಾಂಸರು ಸೂಚಿಸಿದ್ದಾರೆ. [34] ಕೆಲವು ನ್ಯಾಣಗಳ ಮೇಲೆ ತೋರುವ ‘ವಿಳಿವಾಯಕುರ’[35] ಎಂಬುದೂ ಅಂಥದೇ ಒಂದು ಹೆಸರು.

ಈ ಸಂದರ್ಭದಲ್ಲಿ ಗ್ರಾಂಥಿಕವಾದ ಕೆಲವು ಪ್ರಾಚೀನ ಉಲ್ಲೇಖಗಳನ್ನು ಗಮನಿಸಬಹುದು. ಕ್ರಿಸ್ತಪೂರ್ವ ಯುಗದ ಎರಡು ಅಥವಾ ಮೂರನೆಯ ಶತಮಾನದಲ್ಲಿ ರಚಿಸಲ್ಪಟ್ಟದೆಂದು ತಿಳಿಯಲಾಗುವ ಪಾಣಿನಿಯ ಅಷ್ಟಾಧ್ಯಾಯಿಯಲ್ಲಿ ಗೋತ್ರ ನಾಮಗಳ ಪೈಕಿ ‘ಕರ್ನಾಢಕ’ ಎಂಬುದೂ ಒಂದು.[36] ರಾಮಾಯಾಣದ ‘ಕಿಷ್ಕಿಂದೆ’ ಮಹಾಭಾರತದ ‘ವನವಾಸಿ’ಗಳು ಕರ್ನಾಟಕದ ಭಾಗಗಳೆಂಬುದನ್ನು ನಿರ್ವಿವಾದವಾಗಿ ಒಪ್ಪಲಾಗಿದೆ. ಆದರೆ ಮಹಾಭಾರದಲ್ಲಿಯ ‘ಕರ್ಣಾಟಕ’ ಎಂಬ ಉಲ್ಲೇಖಗಳಿಗೆ ಪ್ರತಿಯಾಗಿ ‘ಕುಂತಲ’ ಎಂಬ ಪಾಠವನ್ನು ಪುಣೆಯ ಭಂಡಾಂಕರ ಸಂಸ್ಥೆಯವರು ಅಂಗೀಕರಿಸಿರುವುದನ್ನು ಡಾ || ಮುಗಳಿ ಎತ್ತಿತೋರಿದ್ದಾರೆ. ರಾಮಾಯಣ-ಮಹಾಭಾರತಗಳ ರಚನಾ ಕಾಲವು ತೀರ ಅನಿರ್ದಿಷ್ಟವಾಗಿದೆ. ಈ ಮಾತು ಪ್ರಾಚೀನ ತಮಿಳು ಕೃತಿಗಳಾದ ‘ಶಿಲಪ್ಪದಿಗಾರಂ’ ದಂಥ ಕಾವ್ಯಗಳಿಗೂ ಅನ್ವಯಿಸುತ್ತದೆ. ರಾಮಾಯಣ-ಮಹಾಭಾರತದ ದೊಡ್ಡಗಾತ್ರ ಕ್ರಿ.ಶ. ೪ನೆಯ ಶತಮಾನದಷ್ಟೊತ್ತಿಗೆ ಸಿದ್ಧವಾಗಿತ್ತೆಂದು ಭಾವಿಸಲಾಗುತ್ತಿದೆ.

ಕ್ರಿ.ಶ. ಎರಡನೆಯ ಶತಮಾನದ ಬೌದ್ಧಗ್ರಂಥ ಲಲಿತ ವಿಸ್ತರದ ‘ಕನಾರಿ’ ಎಂಬ ಲಿಪಿಯ ಹೆಸರು, ಶೂದ್ರಕ ಕವಿಯ ಮೃಚ್ಛಕಟಕದಲ್ಲಿ ಬಂದಿರುವ ‘ಕಣ್ಣಾಡಕಲಹ ಪ್ರಯೋಗ’, ಹಾಲರಾಜನ ಗಾಥಾಸಪ್ತಶತಿಯಲ್ಲಿ ಬಂದಿರುವ ‘ತೀರ್’ ಮುಂತಾದ ಶಬ್ದಗಳು- ಇವೇ ಮೊದಲಾದುವನ್ನು ಗಮನಕ್ಕೆ ತೆಗೆದುಕೊಂಡರೆ ‘ಕರ್ನಾಟಕ’ ಎಂಬ ಜನಪದವು ಕ್ರಿ.ಶ. ಪೂರ್ವ ಮೂರು ಅಥವಾ ಎರಡನೆಯ ಶತಮಾನದ ಅವಧಿಯಲ್ಲಿ ಅಸ್ತಿತ್ವದಲ್ಲಿತ್ತು ಎಂದು ತಿಳಿಯುತ್ತದೆ. ಅದರ ಸ್ವತಂತ್ರ ಅಸ್ತಿತ್ವ ನಿರ್ಮಾಣದಲ್ಲಿ ಪ್ರಾಕೃತವು ಸಾಕಷ್ಟು ಪ್ರಭಾವ ಬೀರಿದೆ. ಅನೇಕರಿಗೆ ಅದೂ ಒಂದು ಪ್ರಾಕೃತವೇ ಎಂಬ ಭ್ರಮೆ ಉಂಟಾಗುವಂತಾಗಿದೆ. ಕನಿಷ್ಟಪಕ್ಷ ಕೆಲವರಾದರೂ ಆ ರೀತಿ ಭಾವಿಸುತ್ತಿದ್ದರೆಂಬುದಕ್ಕೆ ಶಾಸನಾಧಾರ ಕೂಡ ಇದೆ.[37] ಆದ್ದರಿಂದ ಕನ್ನಡವು ತಮಿಳಿನಿಂದ ಪ್ರತ್ಯೇಕಗೊಂಡದ್ದು ಪ್ರಾಕೃತ ಶಾಸನಗಳ ಅವಧಿಯಲ್ಲಿಯ-ಎಂದರೆ ಮೊದಲ ಹಂತದಲ್ಲಿಯೇ ಎಂದು ಹೇಳಬಹುದು.

 

[1] Carpus Inscription Indicarum: Vol. I, II Rock Edict.

[2]ಸಮಗ್ರ ಕನ್ನಡ ಸಾಹಿತ್ಯ ಚರಿತ್ರೆ, ಸಂ. ೧, ಬೆಂಗಳೂರು ವಿ.ವಿ. ಪ್ರಕಟಣೆ, ಪು.೧೮: ಡಾ | | ಸೂರ್ಯನಾಥ ಕಾಮತರ ಉಲ್ಲೇಖ.

[3] Hyderabad Archaeological Senses-X

[4] CII. Vol, I. Ashokan Inscriptions.

[5]ಕರ್ನಾಟಕ ಭಾರತಿ, ೧೦-೧.

[6] Twelve Years of Kannada Research in Bombay State, ೧೯೩೯೫೧, pp.vi-vii,

[7]ಇದು ಶಾತವಾಹನ ಶಾಸನವೆಂದು ತಿಳಿದು ಬರುತ್ತದೆ-ಎಚ್‌. ಆರ್‌. ರಘುನಾಥ ಭಟ್‌, ಕರ್ನಾಟಕ ಶಾಸನ ಕಲೆ, ೧೯೭೭, ಪು.೮.

[8] SII, XX, No. 1.

[9] EC, vii, ಶಿಕಾರಿಪುರ ೨೬೩ (ರೈಸ ಆವೃತ್ತಿ)

[10] I. ARISE, 1966-67, Appendix ‘B’, No. 203-225, 228-233; II. ಕ.ಭಾ. ೧-೧, ಪು. ೬-೭; III. ಡಾ | | ಕೆ.ವಿ. ರಮೇಶ್‌. ಕರ್ನಾಟಕ ಶಾಸನ ಸಮೀಕ್ಷೆ. ಪು. ೨೯.

[11] Indian Archaeology-A Survey, 1975-76, p.62 and Plate LXII.

[12] MAR, 1945, No. 7, p. 110

[13] EI, xxxvii, pp. 131-38.

[14] Lueders’ List of Brahmi Inscription, No. 1200.

[15] MAR, 1929, p 50.

[16] EC, vii, ಶಿಕಾರಿಪುರ ೨೬೪.

[17]‘ಸಂಯುಕ್ತ ಕರ್ನಾಟಕ (ಹುಬ್ಬಳ್ಳಿ), ೩೦-೧೧-೧೯೭೫, ಪು. ೧-೩.

[18] All India Oriental Conference, 28th Session, 1976, Dharwad. P.222.

[19] CII, I, Introduction, p. 56.

[20] M.A. Mehendale, Historical Grammar of Inscriptional Prakrits, Introduction, pp. xxix and 61.

[21] R. Pischel, Comparative Grammar of Prakrita. Languages. Para 10.

[22]ಅಡಿ ಟಿಪ್ಪಣೆ ೧ ನೋಡಿ.

[23] Karnataka Through the ages. Pp. 109-110.

[24]ಲೂಡರ್ಸ ಇದನ್ನು ‘ಮಳಪಳ’ ಎಂದು ಓದಿದ್ದಾರೆ – ನೋಡಿ : LLBI, No 1195 & 1196. ಆದರೆ ‘ಸೋಮಪಟ್ಟ’ ಎಂಬಲ್ಲಿ ಮಾತ್ರ ‘ಪಟ್ಟಿ’ ಎಂದೇ ಓದಿದ್ದಾರೆ. ಪಳಿ(ಳ್ಳಿ) ಎಂಬುದೂ ಗ್ರಾಮವಾಚಕವೇ.

[25]ಅ.ಟಿ. ೧೦-I ರಲ್ಲಿ ೨೧೦ ರ ಶಾಸನ.

[26]ಅದೇ, ನಂ. ೨೨೩ರ ಶಾಸನ.

[27] CII. I. p. 162-10th line of the Edict.

[28]ಅ.ಟಿ. ೨೩. ಈ ಶಾಸನ ಪಾಠ ಸಂಶಯಾಸ್ಪದವಾಗಿದೆ.

[29] MAR. 1917 p.33-ಮಾಂಬಳ್ಳಿ ತಾಮ್ರಶಾಸನ.

[30] Sources of Karnataka History-I, p.4.

[31]ಶಿರಾಕರಿಪೂರ ತಾಲ್ಲೂಕಿನ ತಾಳಗುಂದ ಹೋಬಳಿಯಲ್ಲಿ ಈಗ ಇರುವ ‘ಮಾಯಿ ತಮ್ಮನ ಮುಚಡಿ’ ಮತ್ತು ‘ಅಗ್ರಹಾರ ಮುಚಡಿ’ ಎಂಬ ಊರುಗಳೇ ಪ್ರಸ್ತುತ ಶಾಸನದ ‘ಮುಚ್ಚುಂಡಿ’ ಗಳಾಗಿರುವ ಸಾಧ್ಯತೆ ಇದೆ.

[32] Telugu Verbhal Bases. p. 71.

[33] M. Mariappa Bhat, Tulu-English Dictionary, p. 116

[34] R.S. Mugali, Heritage of Karnataka, pp. 40-50

[35] Walter Eliot, Coins of Southern India. B-No. 39, p. 152

[36]ಪಾಣಿನಿಯ ಅಷ್ಟಾಧ್ಯಾಯಿ-II, IV ಸೂತ್ರ ೬೩.

[37] Karnataka Inscriptions, Vol. I, No. 2699 A.D.