ಕರ್ನಾಟಕದ ಆಧುನಿಕ ಚರಿತ್ರೆಯಲ್ಲಿ ಕರ್ನಾಟಕ ಏಕೀಕರಣ ಒಂದು ಮಹತ್ವಪೂರ್ಣ ಐತಿಹಾಸಿಕ ಘಟನೆ. ಹಾಗೆಯೇ ಕನ್ನಡ ವಿಶ್ವವಿದ್ಯಾಲಯದ ಸ್ಥಾಪನೆಯೂ ಮತ್ತೊಂದು ಮಹತ್ವದ ಘಟನೆ. ಕನ್ನಡ-ಕನ್ನಡಿಗ-ಕರ್ನಾಟಕ ಸಂಸ್ಕೃತಿಯ ಕಲ್ಪನೆಯಡಿಯಲ್ಲಿ ಅಸ್ತಿತ್ವಕ್ಕೆ ಬಂದ ಕನ್ನಡ ವಿಶ್ವವಿದ್ಯಾಲಯದ ಹರವು ವಿಸ್ತಾರವಾದದ್ದು. ಈ ಕಾರಣದಿಂದ ಕನ್ನಡ ವಿಶ್ವವಿದ್ಯಾಲಯದ ಆಶಯ ಮತ್ತು ಗುರಿ ಇತರ ವಿಶ್ವವಿದ್ಯಾಲಯಗಳಿಗಿಂತ ಭಿನ್ನ ಹಾಗೂ ಪ್ರಗತಿಪರ. ಕನ್ನಡದ ಸಾಮರ್ಥ್ಯವನ್ನು ಎಚ್ಚರಿಸುವ ಕಾಯಕವನ್ನು ಉದ್ದಕ್ಕೂ ಅದು ನೋಂಪಿಯಿಂದ ಮಾಡಿಕೊಂಡು ಬಂದಿದೆ. ಕರ್ನಾಟಕತ್ವದ ‘ವಿಕಾಸ’ ಈ ವಿಶ್ವವಿದ್ಯಾಲಯದ ಮಹತ್ತರ ಆಶಯವಾಗಿದೆ.

ಕನ್ನಡ ಅಧ್ಯಯನ ಮೂಲತಃ ಶುದ್ಧ ಜ್ಞಾನದ, ಕಾಲ ದೇಶ, ಜೀವನ ತತ್ವದ ಪರವಾಗಿರುವುದರ ಜೊತೆಗೆ ಅಧ್ಯಯನವನ್ನು ಒಂದು ವಾಗ್ವಾದದ ಭೂಮಿಕೆ ಎಂದು ನಾವು ಭಾವಿಸಬೇಕಾಗಿದೆ. ಕನ್ನಡ ಬದುಕಿನ ಚಿಂತನೆಯ ಭಾಗವೆಂದೇ ಅದನ್ನು ರೂಪಿಸಿ ವಿವರಿಸಬೇಕಾಗಿದೆ. ಅಂದರೆ: ದೇಸಿ ಬೇರುಗಳ ಗುರುತಿಸುವಿಕೆ ಕನ್ನಡ ಅಧ್ಯಯನದ ಮುಖ್ಯ ಭಿತ್ತಿಯಾಗಬೇಕಾಗಿದೆ. ಕನ್ನಡ ಸಂಸ್ಕೃತಿಯು ಬಹುತ್ವದ ನೆಲೆಗಳನ್ನು ಆಧರಿಸಿ ರೂಪುಗೊಂಡಿದೆ. ಸಮಾಜಮುಖಿ ಚಿಂತನೆಗಳ ವ್ಯಾಪಕ ಅಧ್ಯಯನ ಬದುಕಿನ ಸಂಕೀರ್ಣ ಲಕ್ಷಣಗಳ ಸ್ವರೂಪವನ್ನು ಇದು ಪರಿಚಯಿಸುತ್ತದೆ. ನಾವು ಇದನ್ನು ಎಲ್ಲ ವಲಯಗಳಲ್ಲಿ ಕನ್ನಡದ ಅನುಷ್ಠಾನದ ಮೂಲಕ ಉಳಿಸಿ, ಬೆಳೆಸಬೇಕಾಗಿದೆ. ಆಗ ಕನ್ನಡ ಸಂಸ್ಕೃತಿಯು ವಿಶ್ವಪ್ರಜ್ಞೆಯಾಗಿ ರೂಪುಗೊಳ್ಳಲು ಸಾಧ್ಯವಾಗುತ್ತದೆ. ‘ಕನ್ನಡದ್ದೇ ಮಾದರಿ’ಯು ಶೋಧ ಇಂದಿನ ಮತ್ತು ಬರುವ ದಿನಗಳ ತೀವ್ರ ಅಗತ್ಯವಾಗಿದೆ.

ಕನ್ನಡ ಸಂಸ್ಕೃತಿಯ ಭಾಗವಾಗಿರುವ ಕನ್ನಡ ಅಧ್ಯಯನವು ಕಾಲದಿಂದ ಕಾಲಕ್ಕೆ ಹೊಸ ತಿಳಿವಳಿಕೆಯನ್ನು ತನ್ನ ತೆಕ್ಕೆಗೆ ಜೋಡಿಸಿಕೊಳ್ಳುತ್ತ ಬಂದಿದೆ. ಹೀಗಾಗಿ ವಿದೇಶಿ ಮತ್ತು ದೇಶಿ ವಿದ್ವಾಂಸರು ತೊಡಗಿಸಿಕೊಂಡ ಈ ವಿದ್ವತ್‌ಕ್ಷೇತ್ರದಲ್ಲಿ ಮುಂದಿನ ವಿದ್ವಾಂಸರು ಕಾಲದಿಂದ ಕಾಲಕ್ಕೆ ಹೊಸಬೆಳೆಯನ್ನು ತೆಗೆಯುತ್ತ ಬಂದಿದ್ದಾರೆ. ಕನ್ನಡ ಅಧ್ಯಯನ ಪಳೆಯುಳಿಕೆಯ ಶಾಸ್ತ್ರವಾಗದೆ, ಬದಲಾಗುತ್ತಿರುವ ಕಾಲಮಾನದಲ್ಲಿ ಎದುರಾಗುತ್ತಿರುವ ಆಹ್ವಾನಕ್ಕೆ ತಕ್ಕಂತೆ ತನ್ನಗತಿಯನ್ನು ಬದಲಾಯಿಸಿಕೊಳ್ಳುತ್ತ ಬಂದಿರುವುದು ಗಮನಿಸತಕ್ಕ ಅಂಶ. ಸಾಂಪ್ರದಾಯಿಕ ಚಿಂತನೆಗಳು ಆಧುನೀಕರಣದ ಈ ಕಾಲಘಟ್ಟದಲ್ಲಿ ಸಕಾಲಿಕಗೊಳ್ಳುವುದು ಅನಿವಾರ್ಯವಾಗಿದೆ. ಮಾಹಿತಿ ತಂತ್ರಜ್ಞಾನಪ್ರವಾಹವೇ ನಮ್ಮ ಅಂಗೈಯೊಳಗೆ ಅನಿವಾರ್ಯವಾಗಿದೆ. ಮಾಹಿತಿ ತಂತ್ರಜ್ಞಾನಪ್ರವಾಹವೇ ನಮ್ಮ ಅಂಗೈಯೊಳಗೆ ಚುಳುಕಾಗುವ ಈ ಸಂದರ್ಭದಲ್ಲಿ ಕನ್ನಡದ ಚಹರೆ ಮತ್ತು ಕನ್ನಡ ಭಾಷೆಯ ಚಲನಶೀಲತೆಯನ್ನು ಶೋಧಿಸಲಿಕ್ಕೆ ಭಾಷಾ ಆಧುನೀಕರಣ ಮತ್ತು ಪ್ರಮಾಣೀಕರಣದ ಪ್ರಕ್ರಿಯೆಗಳ ನೆಲೆಯಲ್ಲಿ ಅಧ್ಯಯನದ ಹೊಸ ಸಾಧ್ಯತೆಗಳನ್ನು ಅನುಲಕ್ಷಿಸಿ, ಭಾಷಾನೀತಿ, ಭಾಷಾಯೋಜನೆ ರೂಪಿಸುವುದು ಅನಿವಾರ್ಯ ಹಾಗೂ ಅವಶ್ಯವಾಗಿದೆ. ಆಗ ಅಧ್ಯಯನದ ಸ್ವರೂಪ ಹಾಗೂ ಬಳಕೆಯ ವಿಧಾನದಲ್ಲಿ ಪರಿವರ್ತನೆ ಸಾಧ್ಯವಾಗುತ್ತದೆ.

ನಮ್ಮೆದುರು ನುಗ್ಗಿ ಬರುತ್ತಿರುವ ಜಾಗತೀಕರಣಕ್ಕೆ ಪ್ರತಿರೋಧವಾಗಿ ನಮ್ಮ ದೇಶೀಯ ಜ್ಞಾನಪರಂಪರೆಯನ್ನ ಮರುಶೋಧಿಸಿ ಆ ಮೂಲಕ ಕುಸಿಯುತ್ತಿರುವ ನಮ್ಮ ಬೇರುಗಳನ್ನು ಬಲಗೊಳಿಸಿಕೊಳ್ಳಬೇಕಾಗಿದೆ. ಭಾಷೆ, ಸಾಹಿತ್ಯ, ವ್ಯಾಕರಣ, ಛಂದಸ್ಸು, ಚರಿತ್ರೆ, ಕೃಷಿ, ವೈದ್ಯ, ಪರಿಸರ ಮುಂತಾದ ಅಧ್ಯಯನ ವಿಷಯಗಳನ್ನು ಹೊಸ ಆಲೋಚನೆಯ ನೆಲೆಯಲ್ಲಿ ವಿಶ್ಲೇಷಿಸಬೇಕಾಗಿದೆ. ಆಧುನಿಕ ವಿಜ್ಞಾನ, ತಂತ್ರಜ್ಞಾನವೇ ‘ಜ್ಞಾನ’ ಎಂದು ರೂಪಿಸಿರುವ ಇಂದಿನ ಆಲೋಚನೆಗೆ ಪ್ರತಿಯಾಗಿ ಈ ಜ್ಞಾನಶಾಖೆಗಳಲ್ಲಿ ಹುದುಗಿರುವ ದೇಶಿ ಪರಂಪರೆಯ ಜ್ಞಾನದ ಹುಡುಕಾಟ ನಡೆಯಬೇಕಾಗಿದೆ. ಅಂತಹ ಪ್ರಯತ್ನಗಳಿಗೆ ಬೇಕಾದ ಮಾರ್ಗದರ್ಶಕ ಸೂತ್ರಗಳ ಹಾಗೂ ಆಕರ ಪರಿಕರಗಳ ನಿರ್ಮಾನದ ನೆಲೆ ತುಂಬ ಮುಖ್ಯವಾಗಿದೆ. ಕನ್ನಡ ವಿಶ್ವವಿದ್ಯಾಲಯವು ಕಳೆದ ಹದಿನಾರು ವರ್ಷಗಳಿಂದ ಈ ಕೆಲಸಗಳನ್ನು ಹಲವು ಯೋಜನೆಗಳ ಮೂಲಕ ರೂಪಿಸಿಕೊಂಡಿದೆ, ರೂಪಿಸಿಕೊಳ್ಳುತ್ತಿದೆ. ಇದೊಂದು ಚಲನಶೀಲ ಪ್ರಕ್ರಿಯೆಯಾಗಿದೆ. ಸಮಕಾಲೀನ ಭಾಷಿಕ, ಸಾಂಸ್ಕೃತಿಕ ಸಮಸ್ಯೆಗಳಿಗೆ ಮುಖಾಮುಖಿಯಾಗುತ್ತ ಕನ್ನಡ ನಾಡುನುಡಿಯನ್ನು ಹೊಸದಾಗಿ ಶೋಧಿಸುತ್ತಾ, ವಿವರಿಸುತ್ತಾ ಬಂದಿದೆ. ಅಂದರೆ: ಕನ್ನಡದ ಅರಿವನ ವಿಕೇಂದ್ರಿಕರಣವೇ ವರ್ತಮಾನದ ಹೊಸ ಬೆಳವಣಿಗೆ. ಇದು ಕನ್ನಡ ವಿಶ್ವವಿದ್ಯಾಲಯದ ಜೀವಧಾತುವಾಗಿದೆ.

ಪದ್ಮರಾಜ ಪಂಡಿತರು ೧೯ ಮತ್ತು ೨೦ನೆಯ, ಎರಡು ಶತಮಾನಗಳ ಹೊನ್ನ ಕೊಂಡಿಯಂತೆ ಅಗಾಧಮಟ್ಟದಲ್ಲಿ ಸಾರಸ್ವತ ಸೇವೆ ಮಾಡಿದ ಅಪರೂಪದವರು. ತಮ್ಮ ಬಹುಮುಖಿ ಪ್ರತಿಭೆಯೊಂದಿಗೆ, ಬಹುಭಾಷೆಗಳ ಜ್ಞಾನದೊಂದಿಗೆ ಅವರು ಗ್ರಂಥಸಂಪಾದನ ಕ್ಷೇತ್ರದಲ್ಲಿ ಮಾಡಿರುವ ಸಾಧನೆಗೆ ಸಾಟಿಯಿಲ್ಲ. ನಾನಾ ಶಾಸ್ತ್ರವಿಷಯಗಳಿಗೆ ಸಂಬಂಧಿಸಿದ ಅಪ್ರಕಟಿತ ಗ್ರಂಥಗಳನ್ನು ಸಂಪಾದಿಸಿದರು, ಮುದ್ರಿಸಿದರು, ಪ್ರಕಾಶನಗೊಳಿಸಿದರು. ಪದ್ಮರಾಜ ಪಂಡಿತರ ಧೈರ್ಯ, ಸಾಹಸ ವಿದ್ವತ್ತು, ಮುನ್ನೋಟ, ಲೋಕಜ್ಞಾನ-ಕಂಡರೆ ಆಶ್ವರ್ಯವಾಗುತ್ತದೆ. ತಮ್ಮ ಕಾಲಕ್ಕಿಂತ ಅವರು ನೂರು ವರ್ಷ ಮುಂದಿದ್ದರು. ಕನ್ನಡ ಭಾಷಾ ಸಾಹಿತ್ಯಕ್ಕೂ ಕರ್ನಾಟಕದ ಜ್ಞಾನ ಭಂಡಾರಕ್ಕೂ ಅವರ ಕೊಡುಗೆ ಅಮೂಲ್ಯವಾದುದು. ಅವರ ಗ್ರಂಥಗಳು ಇಂದಿಗೂ ಉಪಾದೇಯವಾಗಿವೆ, ಆಕರಸ್ವರೂಪಿಯಾಗಿವೆ.

ನಾಡೋಜ ಪ್ರೊ. ಹಂಪನಾ ನಮ್ಮ ನಡುವೆ ಇರುವ ಬಹುಮಹತ್ವದ ಹಿರಿಯ ಸಾಹಿತಿ. ಅವರು ಸವ್ಯಸಾಚಿ. ಸೃಜನ ಸಾಹಿತ್ಯ ಮತ್ತು ಸಂಶೋಧನೆ-ಉಭಯ ಕ್ಷೇತ್ರಗಳಲ್ಲಿ ಅವರ ಸಾಧನೆ ಸಮದಂಡಿಯಾಗಿದೆ. ಇಂಗ್ಲಿಷ್ ಮತ್ತು ಕನ್ನಡದಲ್ಲಿ ಮೌಲಿಕವಾದ ಕೃತಿಗಳನ್ನು ರಚಿಸಿ ಅಂತರರಾಷ್ಟ್ರೀಯ ಮನ್ನಣೆಗಳಿಸಿರುವ ಹೆಮ್ಮೆಯ ಲೇಖರು. ಈ ಎರಡೂ ಭಾಷೆಗಳಲ್ಲಿ ಅಸ್ಖಲಿತ ವಾಗ್ಮಿಯಾಗಿ ಭಾರತ ಹಾಗೂ ವಿದೇಶಗಳ ಅನೇಕ ವಿಶ್ವವಿದ್ಯಾಲಯಗಳಲ್ಲಿ ವಿದ್ವತ್‌ಪೂರ್ಣ ಉಪನ್ಯಾಸಗಳನ್ನು ನೀಡಿದ್ದಾರೆ. ಕನ್ನಡ ವಿಶ್ವವಿದ್ಯಾಲಯ ಸ್ಥಾಪನೆಗೆ ಒತ್ತಾಸೆಯಾಗಿನಿಂತ ಹಿರಿಯರಲ್ಲಿ ಅವರೂ ಒಬ್ಬರು. ಪದ್ಮರಾಜ ಪಂಡಿತರ ಬದುಕು ಮತ್ತು ಬರೆಹ ಕುರಿತು ಎರಡು ಮೂರು ದಶಕಗಳಿಂದ ಕ್ಷೇತ್ರಕಾರ್ಯ ಮತ್ತು ಆಳವಾದ ಅಧ್ಯಯನ ಮಾಡಿ ಅಪೂರ್ವ ಮಾಹಿತಿಯನ್ನು ಹುಡುಕಿತೆಗೆದಿದ್ದಾರೆ. ಇಂಗ್ಲಿಷಿನಲ್ಲಿ ಈಗಾಗಲೇ ಪದ್ಮರಾಜ ಪಂಡಿತರನ್ನು ಕುರಿತು ಪುಸ್ತಕ ಬರೆದು ಹೊರಗಿನವರಿಗೂ ಪರಿಚಯಿಸಿದ್ದಾರೆ. ಕನ್ನಡ ವಿಶ್ವವಿದ್ಯಾಲಯದವತಿಯಿಂದ ಪ್ರಕಟಿಸಲು ಪದ್ಮರಾಜ ಪಂಡಿತರ ಗ್ರಂಥಗಳನ್ನು ಸಂಪಾದಿಸಿಕೊಟ್ಟಿದ್ದಾರೆ. ಹಲವು ಸಂಪುಟಗಳಷ್ಟು ಈ ಬೃಹತ್ ಸಂಗ್ರಹವಿದೆ. ಇದೀಗ ಮೊದಲನೆಯ ಸಂಪುಟ ಪದ್ಮರಾಜ ಪಂಡಿತ ವಾಙ್ಮಯ ಮಾಲೆಯಲ್ಲಿ ಪ್ರಕಟವಾಗುತ್ತಿದೆ. ಉಳಿದ ಸಂಪುಟಗಳನ್ನು ಕ್ರಮೇಣ ಹೊರತರಲಾಗುವುದು. ಬಹು ಮೌಲಿಕವಾದ ಪ್ರಸ್ತಾವನೆ ಸಹಿತ ಈ ಸಂಪುಟವನ್ನು ನಮ್ಮ ಕೋರಿಕೆಯ ಮೇರೆಗೆ ಸಿದ್ಧಪಡಿಸಿ ಕೊಟ್ಟಿರುವ ನಾಡೋಜ ಪ್ರೊ. ಹಂಪನಾ ಅವರಿಗೆ ಕೃತಜ್ಞತೆ ತಿಳಿಸಲು ಸಂತೋಷವಾಗುತ್ತದೆ.

ಪುಸ್ತಕವನ್ನು ಸುಂದವಾಗಿ ಪ್ರಕಟಿಸಿದ ಪ್ರಸಾರಾಂಗರ ನಿರ್ದೇಶಕರಾದ ಡಾ || ಎ.ಮೋಹನ ಕುಂಟಾರ್ ಹಾಗೂ ಸಹಾಯಕ ನಿರ್ದೇಶಕರಾದ ಶ್ರೀ ಸುಜ್ಞಾನ ಮೂರ್ತಿ ಅವರಿಗೆ ಕೃತಜ್ಞತೆಗಳು.

ಪ್ರೊ. . ಮುರಿಗಪ್ಪ
ಕುಲಪತಿಗಳು

೧೧-೦೧-೨೦೧೦
ಕನ್ನಡ ವಿಶ್ವವಿದ್ಯಾಲಯ
ಹಂಪಿ