ತುಂಬಾ ಪ್ರೀತಿಯಿಂದ ಕೇಳಿದ ತಕ್ಷಣ ಈ ಕಥನಗಳನ್ನು ಹಾಡಲು ಒಪ್ಪಿಕೊಂಡು ಎರಡು ದಿನಗಳ ದೀರ್ಘಕಾಲ ಹಾಡಿದ ಪಾಲಮ್ಮ ಮತ್ತು ಸಂಗಡಿಗರ ಶ್ರಮ ಬಹಳ ದೊಡ್ಡದು. ಇವರನ್ನ ಆದಿಯಲ್ಲಿ ನೆನೆಯುವುದು ನನ್ನ ಕರ್ತವ್ಯ.

ಈ ‘ಬುಡಕಟ್ಟು ಮಹಾಕಾವ್ಯಮಾಲೆ’ ಯೋಜನೆಯನ್ನು ಆರಂಭಿಸಿದವರು ಹಿಂದಿನ ಉಪಕುಲಪತಿಗಳಾದ ಡಾಃ ಚಂದ್ರಶೇಖರ ಕಂಬಾರರು. ಈ ಕನಸುಗಳು ಕವಿಯ ಮಹತ್ವಾಕಾಂಕ್ಷೆಯ ಯೋಜನೆ ಇದು. ಈ ಯೋಜನೆಯನ್ನು ಮುಂದುವರಿಸಲು ಈಗಿನ ಕುಲಪತಿಗಳಾದ ಡಾ. ಕಲಬುರ್ಗಿಯವರು ಆಸಕ್ತಿ ತೋರಿಸಿದ್ದಾರೆ. ಈ ಇಬ್ಬರಿಗೂ ನನ್ನ ನಮಸ್ಕಾರಗಳು.

ನಮ್ಮ ವಿಭಾಗ ಒಂದು ಕುಟುಂಬವಿದ್ದಂತೆ, ನಾವೆಲ್ಲ ಯೋಜನೆಗಳನ್ನ ಒಂದೇ ಮನೆಯವರಂತೆ ಪರಸ್ಪರ ಚರ್ಚಿಸಿ, ಸಹಕರಿಸಿ ಪೂರ್ಣಗೊಳಿಸುತ್ತೇವೆ. ಈ ಒಂದು ಸಾಮರಸ್ಯ ರೂಪಗೊಳ್ಳಲು ನಮ್ಮ ವಿಭಾಗದ ಮುಖ್ಯಸ್ಥರಾದ ಹಿರಿಯಣ್ಣನಂತಹ ಪ್ರೊ.ಹಿ.ಚಿ. ಬೋರಲಿಂಗಯ್ಯನವರು ಕಾರಣರಾಗಿದ್ದಾರೆ. ಅವರ ಮಾರ್ಗದರ್ಶನ ಮತ್ತು ಪ್ರೀತಿಗಳು ಅನನ್ಯವಾದವುಗಳು.

ನಮ್ಮ ವಿಭಾಗದ ಇನ್ನೊಬ್ಬ ಹಿರಿಯರು ಪ್ರಾಂಜಲ ಮನಸ್ಸಿನ ಡಾ. ಮೈತ್ರಿ ಅವರು. ಯಾವಾಗಲೂ ಅವರ ಪ್ರೀತಿಯ ಮಾರ್ಗದರ್ಶನ ನನಗೆ ಸಹಕಾರಿಯಾಗಿದೆ.

ಓದಲು ಹೇಳಿಕೊಟ್ಟು, ದೂರದಿಂದ ನನ್ನನ್ನು ಹಲವು ರೀತಿಯಲ್ಲಿ ಪ್ರಭಾವಿಸಿರುವವರು ಗುರುಗಳಾದ ಎಸ್.ಎಸ್. ಹಿರೇಮಠರು. ಅವರ ಪ್ರೀತಿ ಮತ್ತು ವಿಶ್ವಾಸಗಳು ಅಪಾರವಾದವುಗಳು.

ಹಲವಾರು ಕಷ್ಟಗಳ ಮಧ್ಯೆ ನನ್ನನ್ನು ಓದಿಸಿ, ನನ್ನ ಹಲವು ಕಿರಿಕಿರಿಗಳನ್ನು ಸಹಿಸಿಕೊಂಡು ಪ್ರೀತಿಸುತ್ತಿರುವ ನನ್ನ ಅಜ್ಜಿ, ತಂದೆ, ತಾಯಿ, ಚಿಕ್ಕಮ್ಮ ಮತ್ತು ನನ್ನ ಕುಟುಂಬವರ್ಗದವರನ್ನ ಪ್ರೀತಿಯಿಂದ ನೆನೆಯುತ್ತೇನೆ.

ನಮ್ಮ ವಿಭಾಗದ ಸಹೋದ್ಯೋಗಿಗಳಾದ ಡಾ. ಕೇಶವನ್ ಪ್ರಸಾದ್, ಚಲುವರಾಜು, ಗಂಗಾಧರ ದೈವಜ್ಞರ ಪ್ರೀತಿ ಮತ್ತು ಸಹಕಾರ ಮರೆಯಲಾರದಂತವುಗಳು. ಶಿವಕುಮಾರ್, ಗಣೇಶ್, ಹನುಮಂತರಾಯ ಮತ್ತು ಮಾರಪ್ಪ ಹಲವು ರೀತಿಯಲ್ಲಿ ಸಹಕರಿಸಿದ್ದಾರೆ.

ಅಧ್ಯಯನಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ಚರ್ಚಿಸಿ ಉಪಕರಿಸಿದವರು ಡಾ. ಪುಟ್ಟಯ್ಯ, ಡಾ. ಪೆರಾಜೆ, ಮೊಗಳ್ಳಿ ಗಣೇಶ್, ಡಾ. ರಹಮತ್ ತರೀಕೆರೆ, ಪ್ರೊ. ಲಕ್ಷ್ಮಣ್ ತೆಲಗಾವಿಯವರು.

ನನ್ನ ತಿಳುವಳಿಕೆಯ ಒಂದು ಭಾಗವೇ ಆಗಿರುವ ನನ್ನ ಗೆಳೆಯರಾದ ಗಿರಿ, ನಿಂಗಣ್ಣ, ವೆಂಕಟೇಶಮೂರ್ತಿ, ಚಂದ್ರು, ದಿನಿ, ಮಾರುತಿ, ಮಲ್ಲಿ, ಪಟೇಲ್ರು, ಮ್ಯಾಗೆರೆಯವರು, ಗುರುಪ್ರಸಾದ್, ನಾಗೇಶ್ ಇವರುಗಳು ಹಲವು ರೀತಿಯಲ್ಲಿ ಸಹಕರಿಸಿದ್ದಾರೆ.

ಚಳ್ಳಕೆರೆಗೆ ಹೋದಾಗೆಲ್ಲ ಆದರದಿಂದ ಉಪಚರಿಸುವ ಮತ್ತು ಇಲ್ಲಿನ ಕಥೆಗಳನ್ನು ಹೇಳಿ ಉಪಯುಕ್ತ ಮಾಹಿತಿಗಳನ್ನು ನೀಡಿದ ತಿಪ್ಪೇಸ್ವಾಮಿ ಮೇಷ್ಟ್ರು ಮತ್ತು ವೀರಭದ್ರ ನಾಯಕರಿಗೆ ಕೃತಜ್ಞತೆಗಳು.

ಕುಲಸಚಿವರಾದ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್ ಮತ್ತು ಪ್ರಸಾರಾಂಗದ ಪ್ರೊ. ಎ.ವಿ. ನಾವಡರಿಗೆ, ಕಥನಗಳನ್ನು ಕಂಪ್ಯೂಟರ್‌ಗೆ ತುರುಕಿದ ಗಣೇಶ್ ಕಂಪ್ಯೂಟರ್ಸ್‌ನ ವೇಣು ಮತ್ತು ಸಾವಿತ್ರಿ ಅವರಿಗೆ, ಕಥನಗಳನ್ನು ಪುಟಗಳಿಗೆ ಅಳವಡಿಸಿದ ವಿಜಯೇಂದ್ರ ಎಸ್.ಕೆ. ಅವರಿಗೆ, ಚಿತ್ರಗಳನ್ನು ಬರೆದ ಮಕಾಳಿಯವರಿಗೆ, ನನ್ನ ಕೃತಜ್ಞತೆಗಳು ಸಲ್ಲುತ್ತವೆ.

ಕನ್ನಡ ವಿಶ್ವವಿದ್ಯಾಲಯದ ನನ್ನೆಲ್ಲ ಗೆಳೆಯರನ್ನು ಪ್ರೀತಿಯಿಂದ ನೆನೆಯುತ್ತೇನೆ.

ಇನ್ನು ಮನೆಯಲ್ಲಿ ನಾನು ಬರೆಯಲು ಅವಕಾಶ ಮಾಡಿಕೊಟ್ಟ ನನ್ನ ಮಗ ಸಿದ್ಧಾರ್ಥ ಮತ್ತು ಹಸ್ತಪ್ರತಿಯನ್ನು ಅಂದವಾಗಿ ಬರೆದುಕೊಟ್ಟ ನನ್ನ ಪತ್ನಿ ಭಾಗ್ಯಳನ್ನು ಅತ್ಯಂತ ಪ್ರೀತಿಯಿಂದ ನೆನೆಯುತ್ತೇನೆ.

ಪ್ರಭಾಕರ ಎ.ಎಸ್.

 

01_84_MDK-KUH

“ಕುರುಡು ಹಿಂಸೆಯನ್ನು ತನ್ನ ಅಲಂಕಾರಮಯ ಅಭಿವ್ಯಕ್ತಿಯನ್ನಾಗಿಸಿಕೊಂಡ ಜಗತ್ತಿನ ಕಾಯಿಲೆಯ ಜೊತೆಗೆ ನಾವು ಸ್ಪರ್ಧಿಸುವವರಲ್ಲ. ಬದಲಿಗೆ ನಮ್ಮ ಜೀವಗಳ ಆಳದಲ್ಲಿ, ಮತ್ತು ಹೊರಜಗತ್ತಿನ ಜ್ಞಾನದಲ್ಲಿ ನೆಲೆಸಿರುವ ಶುದ್ಧ ಹಕ್ಕುಗಳನ್ನು ಮುಂದಿಡುತ್ತೇವೆ.”

– ವೋಲೆ ಷೋಯೆಂಕಾ