-೯-೧೯೩೬ ರಂದು ಮೈಸೂರಿನಲ್ಲಿ ಜನಿಸಿದ ಲಕ್ಷ್ಮೀನಾರಾಯಣ ಅವರ ಗುರುಗಳು ಮೈಸೂರು ಆಸ್ಥಾನದ ಮೃದಂಗ ವಿದ್ವಾಂಸರಾಗಿದ್ದ ಎಂ.ಆರ್. ರಾಜಪ್ಪನವರು. ಇವರಿಗೆ ಮೋರ್ಚಿಂಗ್‌ ವಾದನದಲ್ಲೂ ಪರಿಣತಿ ಇದೆ. ಹಾಗೆಯೇ ಎಂ.ಎಲ್. ಶಿವಯ್ಯ ಮತ್ತು ಟಿ. ಪುಟ್ಟಸ್ವಾಮಯ್ಯ ಅವರಿಗೆ ಗಾಯನದಲ್ಲೂ ಶಿಕ್ಷಣ ಪಡೆದಿದ್ದಾರೆ.

ಇವರು ದಕ್ಷಿಣ ಭಾರತದ ಎಲ್ಲಾ ರಾಜ್ಯಗಳ ಪ್ರಮುಖ ಸಭೆ-ಸಂಸ್ಥೆಗಳಿಂದಲೂ ಉತ್ಸವಾದಿಗಳಲ್ಲೂ ಭಾಗವಹಿಸಿ ನೂರಾರು ಹಿರಿಯ ಕಿರಿಯ ವಿದ್ವಾಂಸರುಗಳಿಗೆ ಪಕ್ಕವಾದ್ಯ ಸಹಕಾರ ನೀಡಿದ್ದಾರೆ. ಮೈಸೂರು ಅರಮನೆ ದರ್ಬಾರ್ ಸಭಾಂಗಣದಲ್ಲಿಯೂ ಅನೇಕ ವಿದ್ವಾಂಸರಿಗೆ ಮೃದಂಗ ವಾದನದ ಸಹಕಾರ ಕೊಟ್ಟಿದ್ದಾರೆ. ಆಕಾಶವಾಣಿಯ ಕಲಾವಿದರೂ ಆಗಿರುವ ಇವರು ಮಲೇಷಿಯಾ, ಥೈಲ್ಯಾಂಡ್‌, ಪೂರ್ವ ಏಷ್ಯ, ಸಿಲೋನ್‌, ಮನಿಲಾ, ಹಾಂಗ್‌ಕಾಂಗ್‌, ಸಿಂಗಪುರ, ಬ್ಯಾಂಕಾಕ್‌ ಮುಂತಾದ ದೇಶಗಳಲ್ಲಿ ಪ್ರವಾಸ ಮಾಡಿ ಅನೇಕ ಕಾರ್ಯಕ್ರಮಗಳಿಗೆ ಮೃದಂಗ ನುಡಿಸಿದ್ದಾರೆ.

ಬೆಂಗಳೂರು ಗಾಯನ ಸಮಾಜ ವೈಣಿಕ ಪ್ರವೀಣ ಆರ್.ಎಸ್‌. ಕೇಶವಮೂರ್ತಿ ಸ್ಮಾರಕ ಟ್ರಸ್ಟ್‌ ಮುಂತಾದ ಸಂಸ್ಥೆಗಳಿಂದ ಸನ್ಮಾನ್ಯರಾಗಿರುವ ಶ್ರೀಯುತರು ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದ ‘ಆಸ್ಥಾನ ವಿದ್ವಾನ್‌’ ಗೌರವ ಪಡೆದಿದ್ದಾರೆ. ೧೯೯೯-೨೦೦೦ರ ಸಾಲಿನ ರಾಜ್ಯ ಸಂಗೀತ-ನೃತ್ಯ ಅಕಾಡೆಮಿಯಿಂದ ‘ಕರ್ನಾಟಕ ಕಲಾಶ್ರೀ’ ಪ್ರಶಸ್ತಿಯೂ ಲಭಿಸಿದೆ. ಶ್ರೀಯುತರು ಉತ್ತಮ ಶಿಕ್ಷಕರಾಗಿ ಹಲವಾರು ಶಿಷ್ಯರಿಗೆ ತರಬೇತಿ ನೀಡುತ್ತಿದ್ದಾರೆ.