ಕಾಡಿನಲ್ಲಿ ಕೃಷಿಕರು, ಭತ್ತದ ತೆನೆಯಲ್ಲಿ ಗಿಳಿಹಿಂಡುಹೊಲದಲ್ಲಿ ಗಿಡ ಬೆಳೆಸಿರಿ, ಕೃಷಿ ಅರಣ್ಯದಿಂದ ಅಭಿವೃದ್ಧಿ ಸಾಧಿಸಿರಿ ಎಂದು ಮಾತಾಡುತ್ತಿದ್ದೆ. ರೈತರೊಬ್ಬರು ತಕ್ಷಣ ಎದ್ದು ನಿಂತರು. ಹೊಲದಾಗ ಯಾವ ಗಿಡಾನೂ ಇರಬಾರ್‌ದ್ರಿ. ಅದ್ಕೆ ನಾನು ಎಲ್ಲಾ ಕಡಿದು ಹಾಕೇನ್ರೀ ಎಂದು ಹಸಿರು ಸಂಹಾರದ ಸಾಹಸ ಹೇಳಿದರು. ಉತ್ತರ ಕನ್ನಡದ ಬನವಾಸಿಯ ಅಂಡಗಿ ಹಳ್ಳಿಯ ಕೃಷಿಕರಿಗೆ ಕಾಡು ಗಿಳಿಗಳ ಮೇಲೆ ಸಿಟ್ಟು. ಹೊಲದ ಗಿಡದಲ್ಲಿ ಕುಳಿತ ಗಿಳಿಗಳು ಪಟ್ಟನೆ ಭತ್ತದ ಕದಿರನ್ನು ಹೊತ್ತು ಒಯ್ಯುತ್ತವೆ. ದಿನವಿಡೀ ಹೊಲದ ತೆನೆ ಗಿಳಿಪಾಲಾಗುತ್ತದೆ ಎಂಬ ನೋವು. ಡಬ್ಬಿ ಬಡಿಯುವುದು, ಪಟಾಕಿ ಸಿಡಿಸುವ ತಂತ್ರಗಳು ಫಲಕಾರಿಯಾಗದೇ ಕಟ್ಟಕಡೆಗೆ ಗಿಳಿಕೂಡುವ ಹೊಲದ ಮರಗಳನ್ನು ಕಡಿದಿದ್ದರು! ಗದ್ದೆಯ ಬದುವಿನಲ್ಲಿ ಮರ ಗಿಡಗಳಿದ್ದರೆ ಹಸುರು ಸೊಪ್ಪು, ಮೇವು, ಕೃಷಿ ಸಲಕರಣೆ, ಹಣ್ಣು ಹಂಪಲು ದೊರೆಯುತ್ತದೆಂದು ಎಷ್ಟು ಸಾರಿ ಹೇಳಿದರೂ ಕದಿರು ಗಿಳಿಗಳ ಪರಿಣಾಮಕ್ಕೆ ಬೇಸತ್ತವರು ಮರದ ಮಾತಾಡಿದರೆ ಉರಿಯುತ್ತಿದ್ದರು.ಪಾಪ! ಕಾಡಿನ ಈ ಪುಟ್ಟ ಪಕ್ಷಿಗಳು ಅದೇನು ಮಹಾ ಹಾನಿ ಮಾಡಬಹುದು? ಎಂದು ನಿರ್ಲಕ್ಷಿಸುವಂತಿಲ್ಲ. ದಿನವಿಡೀ ಪಕ್ಷಿ ಸೇನೆಗೆ ಕಾಳು ಕದಿಯುವ ಕೆಲಸ. ಗಿಳಿ ಸ್ವರ ಕೇಳಿದರೆ ತಮ್ಮ ಹೊಲದ ಬೆಳೆ ನೆನಪಾಗಿ ಬೆಚ್ಚುವ ಪ್ರಸಂಗ! ಬೆವರಿನ ಬೆಳೆ ಕಳಕೊಂಡಾಗ ಏಳುವ ಸಹಜ ನೋವು. ನೈಸರ್ಗಿಕ ಕಾಡನ್ನು ಮೇವು, ಉರವಲು, ಅತಿಕ್ರಮಣ, ಬೆಂಕಿ ಎಂದು ಬೋಳು ಮಾಡಿದ್ದೇವೆ. ವರ್ಷವಿಡೀ ಹಣ್ಣು ನೀಡುವ ವೃಕ್ಷಗಳು ಅಲ್ಲಿಲ್ಲ. ಬದುಕಿನ ಅನಿವಾರ್ಯಕ್ಕೆ ಭತ್ತದ ಕಾಳು ತಿನುವುದು ಅನಿವಾರ್ಯವಾಗಿದೆ. ನಿಸರ್ಗ ಸತ್ಯ ಗುರುತಿಸಿದೇ ಸುಲಭದಲ್ಲಿ ಆವು ಪುಟ್ಟ ಗಿಳಿಯ ಮೇಲೆ ದೊಡ್ಡ ಆಪಾದನೆ ಮಾಡುತ್ತೇವೆ.ಮಲೆನಾಡಿನಲ್ಲಿ ಈಗ ತೋಟಿಗರಿಗೆ ಕೋತಿಗಳ ಉಪಟಳ. ಅಡಿಕೆ, ಬಾಳೆ, ಏಲಕ್ಕಿ, ಚಿಕ್ಕು, ಮಾವು, ಹಲಸಿನ ಫಲಗಳು ಕೋತಿ ಪಾಲು. ತೋಟದ ಪಕ್ಕದ ಮಾವಿನ ಮರದಲ್ಲಿ ಯಾವತ್ತೂ ಕೋತಿಗಳು ಇರುತ್ತವೆ. ಮಹಾಮರದ ತುದಿಯೇರಿದ ಅವನ್ನು ಓಡಿಸುವುದು ಬಲು ಕಷ್ಟ. ನಾವು ತೋಟದಿಂದ ಈಚೆ ಮರಳಿದರೆ ಮತ್ತೆ ಕೆಳಗಿಳಿದು ಬೆಳೆ ತಿನ್ನುತ್ತವೆಂದು ಕೃಷಿಕರೊಬ್ಬರು ಮರ ಕಡಿಸುವ ಉಪಾಯ ಮಾಡಿದರು. ಇಷ್ಟು ಕಾಲ ಬಿಸಿಲು ತಡೆಯಾಗಿದ್ದ ಮಹಾಮರದ ಹಸಿರು ಗೋಡೆ ಕಳಚಿ ಬಿತ್ತು. ಅಡಿಕೆ ತೋಟಕ್ಕೆ ಪಶ್ಚಿಮದ ಬಿಸಿಲು ಮಹಾವ್ಶೆರಿ. ಕ್ರಮೇಣ ಅದು ಮರದ ಒಂದು ಪಾರ್ಶ್ವ ಸುಡುತ್ತದೆ. ಯಕಶ್ಚಿತ್ ಕೋತಿ ನಿಯಂತ್ರಣಕ್ಕೆಂದು ನೂರಾರು ವರ್ಷದ ಮರ ಕಡಿಸಿದ ಪರಿಣಾಮ ಮುಂದಿನ ಎರಡು ಮೂರು ವರ್ಷಗಳಲ್ಲಿ ತೋಟ ಒಣಗಿ, ನೂರಾರು ಅಡಿಕೆ ಮರಗಳು ಫಲರಹಿತವಾದವು!ಕಾಡಿನ ನಡುವೆ ಕೃಷಿ ವಿಸ್ತರಿಸಿ ಮನುಷ್ಯ ತನ್ನ ಸರಹದ್ದನ್ನು ಬೆಳೆಸಿದ ಬಳಿಕ ವನ್ಯ ಸಂಕುಲ ಸ್ಥಿತಿ ಕಷ್ಟವಾಗಿದೆ. ವಾಸಸ್ಥಾನ ನಾಶ, ಆಹಾರ ಕೊರತೆ ಎದ್ದಿದೆ. ಕೃಷಿ ಬೆಳೆಯೇ ಕಾಡು ಪ್ರಾಣಿಗಳ ಕಾಯಂ ಆಹಾರ ಎನ್ನುವಂತೆ ಬೆಳೆ ನಾಶದ ಪರಿಣಾಮ ಹೇಳುತ್ತಿದೆ. ಆನೆದಾಳಿ, ಕಾಡು ಹಂದಿ, ನರಿ, ಜಿಂಕೆ, ಮೊಲಗಳು ಬರುವುದು ಮಾಮೂಲಿಯಾಗಿದೆ. ಕಬ್ಬಿನ ಹೊಲದ ಸುತ್ತ ಕಾಡುಪ್ರಾಣಿ ನಿಯಂತ್ರಣಕ್ಕೆ ಕೃಷಿಕರೊಬ್ಬರು ವಿದ್ಯುತ್ ಬೇಲಿ ಮಾಡಿದ್ದರು. ತಂತಿ ಮೈಗೆ ತಾಗಿಸಿಕೊಳ್ಳದೇ ಒಳನುಸುಳುವ ಕೋತಿಗಳು ಕಬ್ಬು ಮುರಿಯುತ್ತಿದ್ದವು. ಎರಡು ವಿದ್ಯುತ್ ತಂತಿಗಳ ನಡುವೆ ಜಾಗರೂಕತೆಯಿಂದ ಕಬ್ಬನ್ನು ಹೊರಕ್ಕೆ ಎಸೆಯುತ್ತಿದ್ದವು! ವಿದ್ಯುತ್ ಶಾಕ್ ಹೊಡೆಯುತ್ತದೆಂಬ ಜ್ಞಾನ ಈಗ ಆನೆ, ಕೋತಿಗಳಿಗೂ ತಿಳಿದಿದೆ. ಕೃಷಿಯನ್ನು ಗೆಲ್ಲುವ ಪೈಪೋಟಿಯಲ್ಲಿ ಈಗೀಗ ವಿಷಪ್ರಾಶನ ನಡೆದಿದೆ. ನವಿಲು ಸಾವಿನ ವರದಿಗಳಿವೆ. ವನ್ಯ ಪ್ರಾಣಿ ಸಂರಕ್ಷಣೆ ಅರಣ್ಯ ಇಲಾಖೆಯ ಕೆಲಸ ಎಂಬ ಭಾವನೆ ಹಳ್ಳಿಗರಲ್ಲಿದೆ. ಕ್ರಿ,ಶ. 1918-20ರ ಹೊತ್ತಿಗೆ ಮುಂಬೈ ಕಾಯ್ದೆ ಕೌನ್ಸಿಲ್‌ನಲ್ಲಿ ಕಾಡು ಹಂದಿಗಳಿಂದ ಬೆಳೆಹಾನಿ ಬಗೆಗೆ ಮಹತ್ವದ ಚರ್ಚೆ ನಡೆದಿದೆ.  ಹಂದಿಗಳ ಕುರಿತಾಗಿ ಐದು ಪುಟಗಳ ಪತ್ರಿಕಾ ಪ್ರಕಟಣೆಯನ್ನು ಆಗ ಸರಕಾರ ನೀಡಿತ್ತು. ಕಾಡಿನ ಹುಲಿ, ಚಿರತೆಗಳನ್ನು ಬೇಟೆಯಾಡಿದ ಕಾರಣ ಹಂದಿಗಳ ಸಂಖ್ಯೆ ಹೆಚ್ಚಿೆಯೆಂದು ಆಗ ಗುರುತಿಸಲಾಗಿತ್ತು. ಕೃಷಿ ಬೆಳೆ ಒಳಿತಿಗಾಗಿ ಕಾಡು ಪ್ರಾಣಿ ಕೊಲ್ಲಲು ಪರವಾನಗಿ ನೀಡಲಾಯಿತು. ಈಗ ವನ್ಯಸಂಕುಲ ಆಪತ್ತಿನಲ್ಲಿದೆ, ವನ್ಯಜೀವಿ ಸಂರಕ್ಷಣಾ ಕಾನೂನು ಬಿಗಿಯಾಗಿದೆ. ಇನ್ನೊಂದೆಡೆ ಏರಿದ ಜನಸಂಖ್ಯೆ ಪರಿಣಾಮ ಕಾಡು ಕರಗಿದೆ.  ಜೀವ ಸಂಕುಲ ಆಪತ್ತಿನಲ್ಲಿದೆ. ನಮ್ಮ ಹೊಲದ ಫಲ ಹಸಿದ ಪ್ರಾಣಿಗಳ ಪಾಲಾದರೆ ಅವುಗಳ ಜೀವ ತೆಗೆಯುವ ಕೆಲಸವು ಸುಗ್ಗಿಯ ಮುಂಚೆ ಸದ್ದಿಲ್ಲದೇ ನಡೆಯುತ್ತಿದೆ.ವನ್ಯಜೀವಿಗಳಿಲ್ಲದಿದ್ದರೆ ತಮ್ಮ ಕೃಷಿ ಚೆನ್ನಾಗಿ ನಡೆಯುತ್ತದೆಂದು ಅನೇಕರು ಲೆಕ್ಕ ಹಾಕುತ್ತಾರೆ.  ಗಿಳಿ ಇಲ್ಲದಿದ್ದರೆ ಭತ್ತದ ತೆನೆ ಉಳಿಯುತ್ತದೆ.  ಹಂದಿ ಇಲ್ಲದಿದ್ದರೆ ಬೆಳೆದ ಕಬ್ಬು ನಮಗೆ ದೊರೆಯುತ್ತದೆ.  ಕೋತಿಗಳ ನಾಶವಾದರೆ ಬಾಳೆ ಕೃಷಿ ಅನುಕೂಲ ಎಂದು ಹೇಳುತ್ತಾರೆ.  ಗಮನಿಸಿ ನೋಡಿ, ಈ ಕೃಷಿ ಉತ್ಪನ್ನವೇ ಪ್ರಾಣಿಗಳ ಮುಖ್ಯ ಅಹಾರವಲ್ಲ.  ಕಾಡಿನಲ್ಲಿನ ಅವರ ಆಹಾರವನ್ನು ನಾವು ಕಬಳಿಸಿದ ಬಳಿಕ ಅವು ನಮ್ಮ ಬೆಳೆಗೆ ಬಂದಿವೆ!


ಕೃಷಿ ಬೆಳೆಗೆ ಎಲೆಮರೆಯ ಸೇವಕರುಕಾಡು ಬೀಜಗಳಿಗೆ ದೂರ ಕಣಿವೆ ಪಯಣಕ್ಕೆ ರೆಕ್ಕೆಗಳಿಲ್ಲ, ಇವಕ್ಕೆ  ವನ್ಯಜೀವಿಗಳು ಅಗ್ಗದ ವಾಹನ.  ಯಾವುದೋ ಮೂಲೆಯ ಮರದ ಹಣ್ಣು ತಿಂದ ಪಾರಿವಾಳ, ಕಾಗೆ, ಕೋಗಿಲೆ, ಗಿಳಿ, ಮುಂಗಟ್ಟೆ, ಕುಟ್ರಹಕ್ಕಿಗಳು ಅಲ್ಲಿಂದ 30-40 ಕಿಲೋ ಮೀಟರ್ ಆಚೆಯಲ್ಲಿ ಹಿಕ್ಕೆ ಹಾಕುವಾಗ ಬೀಜಕ್ಕೆ ಹೊಸ ನೆಲೆ. ಪಕ್ಷಿಗಳ ಹೊಟ್ಟೆಯಲ್ಲಿ ಬೀಜೋಪಚಾರ ಪಡೆದ ಅವು ಮೊಳಕೆಯೊಡೆದು ಮರವಾಗುತ್ತವೆ. ಒಂದೊಂದು ಬೀಜಗಳೂ ಪ್ರಾಣಿ ಪಕ್ಷಿಗಳ ನೆರವಿನಿಂದ ಪುನರುತ್ಪತ್ತಿಯಾಗುತ್ತ ಕಾಡು ಬೆಳೆಯುತ್ತದೆ. ಕೃಷಿ ಬೆಳೆಯಲ್ಲಿ ಹಾನಿಕಾರಕ ಕೀಟ ನಿಯಂತ್ರಣಕ್ಕೆ ಪಕ್ಷಿಗಳ ಕೊಡುಗೆ ದೊಡ್ಡದು. ಮೈನಾ ಹಕ್ಕಿಗಳು ಸಂತಾನಾಭಿವೃದ್ಧಿ ಹಾಗೂ ಮರಿಗಳ ಪಾಲನೆ ಕಾಲಕ್ಕೆ ದಿನವೊಂದಕ್ಕೆ 200-800 ಕೀಟ ತಿನ್ನುತ್ತವೆ!. ಕೊಲರ್ಯಾಡೋ ಎಂಬ ಒಂದು ಜೊತೆ ದುಂಬಿ ವರ್ಷಕ್ಕೆ ಆರು ಕೋಟಿ ಮರಿ ಉತ್ಪಾದಿಸುತ್ತದೆ. ವರ್ಷದಲ್ಲಿ ತನ್ನ ಸಂಕುಲದ 13 ತಲೆಮಾರು ಬೆಳೆಸುತ್ತದೆ.  ಕೆಲವೇ ಕೆಲವು ಗಂಟೆಗಳಲ್ಲಿ ನೂರಾರು ಎಕರೆ ಬೆಳೆಯನ್ನು ತಿನ್ನಬಹುದಾದ ಮಿಡತೆಗಳ ಬಗೆಗೆ ಕೇಳಿರಬಹುದು.  ಇಂದು ಇಡೀ ಪಕ್ಷಿ ಸಂಕುಲಗಳಲ್ಲಿ ಶೇಕಡಾ 85ರಷ್ಟು ಕೀಟ ಭಕ್ಷಕಗಳಾಗಿ ಕೀಟ ನಿಯಂತ್ರಣದಲ್ಲಿ ಮಹತ್ವದ ಪಾತ್ರವಹಿಸಿವೆ.  ಕಾಡುಕೋಳಿ ಗೆದ್ದಲು ನಿಯಂತ್ರಣ ಮಾಡುತ್ತದೆ. ನೊಣ ಹಿಡುಕ, ಬುಶ್‌ಚಾಟ್, ಚಂದ್ರ ಮುಕುಟ, ಕಾಜಾಣ, ಕಳಿಂಗ, ಮರಕುಟಿಗ ಹೀಗೆ ನಿತ್ಯ ನಾವು ನೋಡುವ ಪಕ್ಷಿಗಳು ಕೀಟ ನಿಯಂತ್ರಣದಲ್ಲಿ ತೊಡಗಿವೆ. ಒಂದು ಗುಬ್ಬಚ್ಚಿ ದಿನಕ್ಕೆ 220-260 ಬಾರಿ ತನ್ನ ಗೂಡಿಂದ ಹೊರಗಡೆ ಹಾರುತ್ತದೆ, ಮರಳಿ ಬರುವಾಗ ತನ್ನ ಮರಿಗೆಂದು ತರುವ ಆಹಾರಗಳಲ್ಲಿ ಕಂಬಳಿ ಹುಳುಗಳೂ ಇರುತ್ತವೆ! ನಮಗಿಂತ 20 ಪಟ್ಟು ಸೂಕ್ಷ್ಮವಾಗಿ ಪರಿಸರವನ್ನು ಓಡುವ ಶಕ್ತಿ ಪುಟ್ಟ ಪಕ್ಷಿಗಳಿಗಿದೆ. ಹೀಗಾಗಿ ನಮ್ಮ ಹೊಲದ ಮೂಲೆಯಲ್ಲಿ  ಕೀಟಗಳ ಸಂಖ್ಯೆಯನ್ನು ದೂರದಿಂದಲೇ ಗುರುತಿಸಿ ತಮ್ಮ ಆಹಾರ ಸಂಪಾದಿಸುತ್ತವೆ. ನವ್ಮು ಕೃಷಿ ಬೆಳೆ ನಮಗೆ ಉಳಿಸುತ್ತವೆ.ಪಕ್ಷಿಗಳ ಮಲ ಒಳ್ಳೆಯ ಗೊಬ್ಬರ. ಇದರಲ್ಲಿ ಯೂರಿಯಾ, ರಂಜಕ ಅಧಿಕ ಪ್ರಮಾಣದಲ್ಲಿವೆ. ಮೀನು ತಿನ್ನುವ ಮಿಂಚುಳ್ಳಿ, ಬೆಳ್ಳಕ್ಕಿ, ಕೊಕ್ಕರೆ, ಹೆಜ್ಜಾರ್ಲೆಗಳ ಹಿಕ್ಕೆಯಂತೂ ಅಧಿಕ ಫಲವತ್ತಾದ ಗೊಬ್ಬರ. ಮಾಂಸಾಹಾರಿ ಪಕ್ಷಿಗಳು ಇಲಿಗಳ ನಿಯಂತ್ರಣಕ್ಕೆ  ಸಹಾಯಕವಾಗಿವೆ.  ಒಂದು ಜೊತೆ ಇಲಿಗಳು ವರ್ಷದಲ್ಲಿ 880 ಇಲಿಗಳಾಗಿ ಬೆಳೆಯಬಲ್ಲ ತಾಕತ್ತು ಪಡೆದಿವೆ. ಇವನ್ನು ಗೂಬೆ, ಕೇರೆ ಹಾವು, ಬೆಕ್ಕು ನಿಯಂತ್ರಿಸುವ ಕೆಲಸ ಮಾಡುತ್ತಿವೆ.
ಹೊಲಕ್ಕೆ ಹಂದಿ ಬಂದರೆ ಭತ್ತದ ಬೆಳೆ ಈ ವರ್ಷ ಚೆನ್ನಾಗಿದೆ ಎಂದರ್ಥ. ಆನೆ ಹೊಲಕ್ಕೆ ಬಂದರೆ ಗಣಪತಿಯೇ ಬಂದಂತೆ ಎಂದು ಗೌಳಿ ವನವಾಸಿಗರು ಹೇಳುವುದನ್ನು ಕೇಳಿದ್ದೇನೆ. ಜಮೀನಿನಲ್ಲಿ ಆನೆಯ ಹೆಜ್ಜೆ ಮೂಡಿದ ಜಾಗಕ್ಕೆ ಪೂಜೆ ಸಲ್ಲಸುವ ಪದ್ಧತಿಗಳಿವೆ. ಪರಂಪರೆಯ ಪುಟ ತೆಗೆದರೆ ಕೃಷಿ ಬೆಳೆಯ ಮಧ್ಯೆ ವನ್ಯ ಸಂಕುಲವನ್ನು ಭಾವನಾತ್ಮಕವಾಗಿ, ಪೂಜನೀಯವಾಗಿ ಕಂಡ ಚಿತ್ರಗಳಿವೆ. ಭತ್ತದ ಹೊಲದಲ್ಲಿ ಗೂಟ ನೆಟ್ಟರೆ ಅದರಲ್ಲಿ ರಾತ್ರಿ ಗೂಬೆ ಕೂಡುತ್ತದೆಂಬ ತಿಳಿವಳಿಕೆಯಿದೆ. ಇಲಿಗಳ ನಿಯಂತ್ರಣಕ್ಕೆ ಇದು ಸಹಾಯಕ. ಕೇರೆ ಹಾವುಗಳು ಇಲಿ ನಿಯಂತ್ರಣಕ್ಕೆ ಉಪಯುಕ್ತ. ಗದ್ದೆ ಬಯಲಿಗೆ ಈ ಹಾವು ಹಿಡಿಯಲು ಬಂದವರನ್ನು ಓಡಿಸಿದ ಹಳೆಯ ನೆನಪುಗಳಿವೆ. ಜೀವ ವೈವಿಧ್ಯ ಸಮೃದ್ಧವಾಗಿರುವ ನೆಲೆಯಲ್ಲಿ ಕೃಷಿ ರೋಗ ನಿಯಂತ್ರಣವಾದ ಉದಾಹರಣೆಗಳಿವೆ. ನಮ್ಮ ಮನೆಯ ಗುಬ್ಬಿ ಕಣ್ಮರೆಯಾದ ಬಳಿಕವೇ ಶೇಂಗಾ ಹೊಲದಲ್ಲಿ ಕಂಬಳಿ ಹುಳುಗಳ ಬಾಧೆ ಹೆಚ್ಚಿದೆ. ನಮ್ಮ ಹೊಲಕ್ಕೆ ವನ್ಯಜೀವಿಗಳು ಬರುತ್ತವೆಂದರೆ ಕಾಡು ಖಾಲಿಯಾಗುತ್ತಿದೆ ಎಂಬ ಮುನ್ಸೂಚನೆಯನ್ನು ನಾವು ಗ್ರಹಿಸಬೇಕು. ಅವುಗಳಿಂದಾಗುವ ಉಪಕಾರವನ್ನೂ ಗುರುತಿಸಬೇಕು. ಈ ಪ್ರಕೃತಿಯ ವಕ್ತಾರರನ್ನು ಖಳನಾಯಕರಂತೆ ನೋಡುವುದು ಬಿಟ್ಟು, ಇವುಗಳ ಒಡನಾಟದಲ್ಲಿ ಕಾಡು-ಕೃಷಿ ಕಲಿಯಬಹುದು. ಭೂಮಿಯ ಈ ಬಂಧುಗಳಿಗೆಂದು ಕೃಷಿ ನೆಲದಲ್ಲಿ ತದ್ರೂಪಿ ಕಾಡು ಒಂದಿಷ್ಟಾದರೂ ಬೆಳೆಸಬೇಕು. ರೈತ ಮಕ್ಕಳಿಗೆ ಹೆಜ್ಜೇನು ಪತ್ರಬಟಾಬಂುಲಿನ ಬಣ್ಣದ ಸ್ವರ್ಗದಂತೆ ಮುಂಡಗೋಡದ ಟಿಬೇಟಿಯನ್ ಕಾಲೋನಿಯ ಭವ್ಯ ನಿರ್ಮಾಣವಿದೆ. ಇಲ್ಲಿನ ಮಂದಿರದ ಗ್ರೈನೇಟ್ ಹಾಸಿನಲ್ಲಿ ಕಣ್ಣಾಡಿಸಿದರೆ ಈಗ ಹೆಜ್ಜೇನಿನ ಶವಯಾತ್ರೆ ಕಾಣುತ್ತದೆ. ಕಟ್ಟಡದ ಗೋಡೆ, ಪಟ್ಟಿಗಳಲ್ಲಿ ನೇತು ಬಿದ್ದ ಗೂಡುಗಳಿಂದ ಆಗಾಗ ದುಂಬಿ ಕೆಳಕ್ಕುದುರುತ್ತವೆ. ಕಸಗುಡಿಸಿ ಪೊರಕೆ ಇಡುವುದರೊಳಗೆ ಮತ್ತಿಷ್ಟು ಜೇನು ಸಾವಿನ ಸಾಲು. ನೆಲಚಕ್ರದಂತೆ ತಿರುಗಿ ತಿರುಗಿ ಕಣ್ಣೆದುರು ಅಸುನೀಗುವ ಮುಂಚೆ ಇವು ನಮ್ಮ ಕೃಷಿ ಬೆಳೆಗೆ ನೀಡಿದ ಪರಾಗಸ್ಪರ್ಶದ ನೆರವಿನ ಲೆಕ್ಕ ನೆನಪಿಸುತ್ತವೆ. ಪ್ರತಿವರ್ಷ 40-50 ಜೇನು ಗೂಡುಗಳು ಇಲ್ಲಿನ ಟಿಬೇಟ್ ನಿರಾಶ್ರಿತರ ಕಾಲೋನಿಗಳಲ್ಲಿ ಆಶ್ರಯ ಪಡೆಯುತ್ತವೆ. ಲಾಮಾಗಳ ಧ್ಯಾನಕ್ಕೆ ಸಾಥ್ ನೀಡುವಂತೆ ಹೆಜ್ಜೇನಿನ ಝೇಂಕಾರ ಓಂಕಾರದ ಪರಿಷ್ಕೃತ ಧ್ವನಿಯಂತೆ ಕೇಳುತ್ತದೆ. ಬಯಲು ಹೊಲಗಳ ಮಧ್ಯೆ ಎದ್ದ ಭವ್ಯ ಕಟ್ಟಡಗಳೆಂದರೆ ಈ ಕೃಷ್ಣ ಕುವರಿಯರಿಗೆ ಯಾಕೋ ಅಚ್ಚುಮೆಚ್ಚು.  ಗಗನಚುಂಬಿ ಕಟ್ಟಡಗಳ ಚಾವಣಿ ಏರಿ ಸುತ್ತಲಿನ ಹೊಲಗಳತ್ತ ಒಮ್ಮೆ ಕಣ್ಣಾಡಿಸಬೇಕು.  ಅರಶಿನಗೇರಿ, ಕೊಪ್ಪ, ಇಂದೂರು, ಉಗ್ಗನಕೇರಿ, ಬಸಾಪುರ, ಎರಬೈಲು ಮುಂತಾದ ಊರಿನ ಭೂಮಿ ಕಾಣುತ್ತವೆ. ಮಳೆ ಆಶ್ರಿತವಾಗಿ ಗೋವಿನ ಜೋಳ, ಜೋಳ, ಭತ್ತ, ಹತ್ತಿ ಬೆಳೆಗಳಿವೆ. ಅಲ್ಲೊಂದು ಇಲ್ಲೊಂದು ಮನೆಗಳ ಪಕ್ಕ ತೆಂಗಿನಮರ, ಕೆರೆಯಂಚಿನ ತಂಪಿನಲ್ಲಿ ಒಂದಿಷ್ಟು ಮುಟ್ಟಿದರೆ ಮುನಿ, ಕಳೆಗಿಡ, ಹುಲ್ಲು ಹೂವುಗಳು ಮಕರಂದ, ಪರಾಗ ಹಿಡಿದು ಈ ಜೇನಿನ ಸಖ್ಯ ಬೇಡುತ್ತವೆ. ಮೀಸೆಯಲ್ಲಿ ವಾಸನೆ ಗ್ರಹಿಸುವ ಐದು ಸಹಸ್ರಗ್ರಂಥಿಗಳು, ಸಂಯುಕ್ತ ನೇತ್ರಗಳಲ್ಲಿನ ಹತ್ತು ಸಹಸ್ರ ಸೂಕ್ಷ್ಮ ಮಸೂರ ವಿನ್ಯಾಸದ ಅದ್ಭುತ ಶಕ್ತಿಯ ಜೇನು ದುಂಬಿಯ ಪರಿಶ್ರಮ ನಮಗೆ ಗೊತ್ತೇ ಇದೆ. ಇವು ಸುಲಭಕ್ಕೆ ಹೂವು ಪತ್ತೆ ಹಚ್ಚಿ  10-20 ಕಿಲೋ ಮೀಟರ್ ಸುತ್ತಳತೆಯಲ್ಲಿ ಹಾರಾಡುತ್ತವೆ. ಹೊಲದ ಹೂವು ಜೇನಿನ ಸಂಗದಲ್ಲಿ ಫಲ ಾಗ್ಯ ಪಡೆಯುತ್ತವೆ. ಮಳೆ ಕಡಿಮೆಯಾದಂತೆ ಇತ್ತೀಚಿನ ದಶಕಗಳಲ್ಲಿ ಹತ್ತಿಯ ಪ್ರೀತಿ ಹೆಚ್ಚಿದೆ. ವರ್ಷದಿಂದ ವರ್ಷಕ್ಕೆ ವೈಟ್ ಡೈಮಂಡ್ ಸಾಮ್ರಾಜ್ಯ ವ್ಯಾಪಿಸಿದೆ. ಕಾಡಿನ ದಟ್ಟಣೆ, ವೈವಿಧ್ಯ ಕಡಿಮೆಯಾದ ಈ ಘಳಿಗೆಯಲ್ಲಿ ಹತ್ತಿ ಹೂವುಗಳ ಪರಾಗ, ಪುಷ್ಪರಸದ ಭರ್ಜರಿ ಅಂಗಡಿಗೆ ಜೇನು ದೊಡ್ಡ ಗಿರಾಕಿ.  ಹತ್ತಿಯ ಹತ್ತೆಂಟು ಕುತ್ತು ಬಿಡಿಸಿದರೆ ಮಾತ್ರ ಬೆಳೆ ಬಚಾವು.  ಜಿಗಿನೊಣ, ಕಾಯಿಕೊರಕ, ಮುರುಟು ರೋಗ ಎಂದು ಪ್ರತಿ ಹಂತವೂ ರೋಗ ರಂಗಸ್ಥಳ.  ಬೆಳೆ ಗೆಲ್ಲಲು ಇಲ್ಲಿ ಮಳೆ ಸ್ನಾನದ ಹಾಗೇ ರಾಸಾಯನಿಕಗಳ ಸಿಂಚನ.  ಎಕರೆಗೆ 20-25 ಸಾವಿರ ಆದಾಯದ ಕನಸು ಕಂಡವರ ಕೈಯಲ್ಲಿ ರಾಸಾಯನಿಕ ಅಸ್ತ್ರ. ಅವಾಂಟ್, ಎಡ್‌ಮಿಟ್, ಎಂಡೋಸಲ್ಫಾನ್, ಸೂಪರ್ ಕಿಲ್ಲರ್, ಮೊನೊಸಿಲ್, ಎಂಡೋಸಿಲ್, ಪಿನಾಲ್‌ಪಾಸ್‌ಗಳೆಂಬ ಬಜಾರಿನ ಹೊಸ ಹೊಸ ಭರವಸೆ ನಂಬಿದ ರಕ್ಕಸ ನೃತ್ಯ.  ಹೊಲಗಳ ತುಂಬ ಕೀಟನಾಶಕ ಕೋಟೆ.  ಹೊಲದ ಅಂಚಿನ ರಸ್ತೆಯಲ್ಲಿ ಪಯಣಿಸಿದರೂ ರಾಸಾಯನಿಕದ ಘಾಟು. ಶತ್ರು  ಹುಟ್ಟಡಗಿಸುವ ಅಸ್ತ್ರ ಮಿತ್ರ ಕೀಟಗಳ ಬದುಕು ದುಸ್ತರಗೊಳಿಸಿದೆ.  ಜೇನಿನ ಸಾವು ಇಲ್ಲಿನ ಒಂದು ಪುಟ್ಟ ಸಾಕ್ಷ್ಯ. ಇಲ್ಲಿನ ಹೊಲದಂಚಿನ ಬೂರಗದ ಮರಕ್ಕೆ ಹತ್ತಾರು ಜೇನು ಗೂಡು ಕಟ್ಟುತ್ತವೆ. ಆದರೆ ಇಲ್ಲಿನ ಜೇನು ತೆಗೆಯುವ ಕಾಯಕ ಯಾರೂ ಮಾಡುವದಿಲ್ಲ. ಕಳೆದ ಆರು ವರ್ಷದ ಹಿಂದೆ ಮರದ ೇನು ತೆಗೆದು ರುಚಿ ನೋಡಿದರೆ ಅಸಹ್ಯ ವಾಸನೆ! ಇಲ್ಲಿನ ಜೇನು ತುಪ್ಪ ತಿನ್ನುವದಕ್ಕೆ ಅಸಾಧ್ಯ. ಹೀಗಾಗಲು ಹೇಗೆ ಸಾಧ್ಯ? ಜೇನು ಬಲ್ಲವರು ಬೆರಗಿನಿಂದ ಕೇಳುತ್ತಾರೆ.
ಇಂದು ಕಾಡುಜೇನು ದಿವಾಳಿ, ನಾಳೆ ನಮ್ಮ ಪಾಳಿ!ಪುಟ್ಟ ಜೇನಿಗೆ ಪರಾಗ, ಪುಷ್ಟರಸ ಒದಗಿಸುವ ವೈವಿಧ್ಯಮಯ ಬೆಳೆಗಳು ನಮ್ಮ ಕೃಷಿಯಲ್ಲಿವೆ.  ತೆಂಗು, ಉದ್ದು, ನೆಲಗಡಲೆ, ಕಬ್ಬು, ಭತ್ತ, ಹುರಳಿ, ಅವರೆ, ಹೆಸರು, ಅಲಸಂದೆ, ರಾಗಿ ಹೂವರಳಿಸಿ ಪರಾಗ ನೀಡುತ್ತವೆ. ಅಡಿಕೆ, ಮಾವು, ಹುಣಸೆ, ಎಳ್ಳು, ಬೆಂಡೆ, ಕಲ್ಲಂಗಡಿ, ಗೋಡಂಬಿ, ಸಪೋಟ, ಸೀಬೆ, ಹತ್ತಿ ಪರಾಗದ ಜತೆಗೆ ಪುಷ್ಟರಸವನ್ನೂ ಒದಗಿಸುತ್ತವೆ. ಇದರಿಂದ ಜೇನಿಗೂ ಲಾಭ, ಪರಾಗಸ್ಪಶದಿಂದ ಇಳುವರಿಯೂ ಹೆಚ್ಚುತ್ತದೆ. ಈಗ ಕೀಟನಾಶಕಗಳ ವಿಪರೀತ ಬಳಕೆಯಿಂದ ಪುಟ್ಟ ಜೇನಿನ ಬದುಕು ಅಪಾಯದಲ್ಲಿದೆ.  ಇದು ನಮ್ಮ ಕೃಷಿ ಉತ್ಪನ್ನದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಇಂದು ಕೃಷಿ ವಲಯದ ಸುತ್ತ  ಕಾಡಿರುವ ಪ್ರದೇಶಗಳಲ್ಲಿ  ಒಂದಿಷ್ಟು ಜೇನು ಉಳಿಯಬಹುದು. ಅಲ್ಲಿನ ನಂದಿ, ನೇರಳೆ, ಬೈನೆ, ಅಂಟುವಾಳ, ಹೊಂಗೆ, ಮತ್ತಿ, ಹೊನ್ನೆ, ಸಾಗಡೆ, ಸೀಗೆಬಳ್ಳಿ, ತೆಂಗಾರೆ ಬಳ್ಳಿ, ಕುಂಟುನೇರಳೆ, ದೂಪ, ತಾರೆ, ಬೀಟೆ ಮುಂತಾದ ಮರಗಳು ಇವನ್ನು ಸಲಹುವ ಕೆಲಸ ಮಾಡುತ್ತಿವೆ. ಇಂತಹ ಕಾಡು ಮರಗಳನ್ನು ನಾಶಮಾಡಿ ಇಂದು ನೆಡುತೋಪು ವಿಸ್ತರಣೆಯಾಗುತ್ತಿದೆ. ಇಲ್ಲಿ ಕೃಷಿಯಲ್ಲೂ ಒಂದೇ ಬೆಳೆ, ಕಾಡಿನಲ್ಲೂ ಒಂದೇ ಸಸ್ಯದ ನೆಲೆಯಾದರೆ ಕೃಷಿ ನೆರವಿಗೆ ನಿಲ್ಲುವ ಇಂತಹ ಕೀಟಗಳು ಕಣ್ಮರೆಯಾಗುತ್ತವೆ. ನಮ್ಮ ಪರಿಸರದಲ್ಲಿನ ಸಹಜ ಸಸ್ಯಗಳನ್ನು ಕೃಷಿ ನೆಲ ಹಾಗೂ ಸುತ್ತಲಿನ ಪ್ರದೇಶದಲ್ಲಿ ಸಂರಕ್ಷಿಸುವ ಕೆಲಸ ನಡೆಯಬೇಕು.
ಮಲೆನಾಡಿನ ಜೊಯಿಡಾ, ಯಲ್ಲಾಪುರ, ಶಿರಸಿ, ಸಿದ್ದಾಪುರ ಪ್ರದೇಶದ ಕಾಡುಗಳಲ್ಲಿ ಹೆಜ್ಜೇನು ಮರಗಳಿವೆ. ಇವನ್ನು ಸತ್ನಾಲ್ ಮರ, ಪಡೆಮರ, ಜರ್ಬಂಧಿ ಮರ, ಎರ್ನಾಲ್ ಮರಗಳೆಂದು ಸ್ಥಳೀಯರು ಗುರುತಿಸುತ್ತಾರೆ. ಪ್ರಮುಖವಾಗಿ ದೈತ್ಯಾಕಾರದಲ್ಲಿ ಗಗನಚುಂಬಿಯಾಗಿ ಬೆಳೆಯುವ ಟೆಟ್ರಾಮೆಲಸ್ ನ್ಯೂಡಿಪ್ರ್ಲೇರಾ ವೃಕ್ಷವನ್ನು ಜೇನುಮರವೆನ್ನುವದು ವಾಡಿಕೆ.  ಈ ಮರಗಳಿಗೆ ಪ್ರತಿವರ್ಷ ಬೇಸಿಗೆಯಲ್ಲಿ ದೊಡ್ಡ ಸಂಖ್ಯೆಯಲ್ಲಿ ಜೇನುಗೂಡು ಕಟ್ಟುತ್ತವೆ. ಕಾಡಿನ ಇನ್ನುಳಿದ ಮರಗಳಿಗಿಂತ ಅತಿ ಎತ್ತರವಾಗಿರುವ ಇದು ಜೇನಿನ ಅಕ್ಕರೆಯ ವಾಚ್‌ಟವರ್! ಹಿಂದೆ ಕಾಡು, ನದಿದಂಡೆ, ದೇವರ ಕಾಡುಗಳಲ್ಲಿದ್ದ ಮರಗಳು ಈಗ ಬಯಲಿಗೆ ಬಂದು ಒಂಟಿಯಾಗಿ ನಿಂತಿವೆ. ಒಂದಾದ ನಂತರ ಒಂದರಂತೆ ಹೂವರಳಿಸುವ ಸಸ್ಯ ಸಂಕುಲಗಳು ಕಡಿಮೆಯಾಗಿವೆ. ಸಿದ್ದಾಪುರ ಕಾನಸೂರಿನ ಕರಮನೆ, ಯಲ್ಲಾಪುರದ ಹೆಮ್ಮಾಡಿ, ಶಿರಸಿಯ ಮುಷ್ಕಿಯ ದೊಣ್ಣೆಕಾನು ಪ್ರದೇಶದಲ್ಲಿನ ಒಂದೊಂದು ಮರಗಳಲ್ಲಿ ಪ್ರತಿವರ್ಷ ತಲಾ 300-500 ಹೆಜ್ಜೇನು ಗೂಡುಗಳಿದ್ದ ದಾಖಲೆಯಿದೆ! ಕಳೆದ 2002ರಲ್ಲಿ ಈ ಪ್ರದೇಶಗಳ 45 ಹೆಜ್ಜೇನು ಮರಗಳ ಚಿತ್ರ ತೆಗೆಯಲು ಖುದ್ದು ಓಡಾಡಿದ್ದೇನೆ. ಕಾಡು ಬದಲಾಗಿದೆ, ಜೇನು ಬರುವ ಪ್ರಮಾಣವೂ ಕಡಿಮೆಯಾಗಿದೆ ಎಂದು ಜನ ಮಾತಾಡಿದರು. ನಮ್ಮ ಪರಿಸರದ ಆಗುಹೋಗುಗಳ ವರ್ತಮಾನಗಳ ಚಿತ್ರಗಳನ್ನು ಜೇನು ಮರಗಳಲ್ಲಿ ಅಳೆಯಲು, ಕಾಣಲು ಸಾಧ್ಯವಿದೆ. ಯಲ್ಲಾಪುರ ತಾಲೂಕಿನ ಕಾಳಿ ಕಣಿವೆ ಮೂಲೆಯಿಂದ ಬೇಡ್ತಿ ಕೊಳ್ಳದ ಕಾಡುಗಳಲ್ಲಿನ ಜೇನುಮರಗಳ ಪಟ್ಟಿ ಕುತೂಹಲಕರವಾಗಿದೆ. ಇಲ್ಲಿ ಪ್ರತಿ 6-8 ಕಿಲೋ ಮೀಟರ್‌ಗೆ ಒಂದು ಪಡೆಮರಗಳಿವೆ! ಇವು ಸುತ್ತಲಿನ ಕಾಡಿನ ಕತೆ ಹೇಳುವ ಹಸಿರು ಶಾಸನದಂತಿವೆ. ಆದರೆ ಈಗ ಕಾಡಷ್ಟೇ ಅಲ್ಲ, ರೈತರೂ ಬದಲಾಗಿದ್ದಾರೆ. ಹಣದ ಬೆಳೆಯ ಹಿಂದೆ ಸಾಗುವ ಅನಿವಾರ್ಯತೆಯಲ್ಲಿ ಹೊಲ ಬೆಳೆ ಆಯ್ಕೆ, ನಿರ್ವಹಣೆಯ ಸ್ವರೂಪ ಬದಲಾಗಿದೆ. ಬಣ್ಣ, ಸುವಾಸನೆಯ ನೈಸರ್ಗಿಕ ಬೆರಗು ಚೆಲ್ಲಿ ಪುಟ್ಟ ಕೀಟಗಳನ್ನು ಲಾಗಾಯ್ತಿನಿಂದ ಸೆಳೆಯುವ ಹೂ ಮುಖದಲ್ಲೂ ರಾಸಾಯನಿಕದ ಕೋಟೆ ಎದ್ದಿದೆ. ಪರಿಣಾಮ ಮಧುರ ಜೇನಿಗೆ ಮೃತ್ಯುಪಾಶ ಒದಗಿದೆ!ಪುಟ್ಟ ಕೀಟಗಳು ಪರಾಗಸ್ಪರ್ಶದ ಕ್ರಿಯೆಗೆ ನೀಡುವ ಅಮೂಲ್ಯ ಸಹಾಯ ನಮಗಿನ್ನೂ ಅರ್ಥವಾದಂತಿಲ್ಲ. ಇಂದು ನಮ್ಮ ಅಡುಗೆ ಮನೆಯ ಖಾದ್ಯ ತೈಲವಾದ ಪಾಮ್ ಆಯಿಲ್ ಹಿಂದೆ ವಿವಿಲ್ (Elaeidotis Kamerunicus Fst) ಎಂಬ ದುಂಬಿಯ ನೆರವಿದೆ. ಎಣ್ಣೆ ತಾಳೆ ದಕ್ಷಿಣ ಆಪ್ರಿಕಾದ ಕಾಡು ಮರ. ಇಲ್ಲಿನ ಮೂಲನಿವಾಸಿಗಳು ಫಲದಿಂದ ಎಣ್ಣೆ ತೆಗೆಯುತ್ತಿದ್ದರು. ಮಹತ್ವ ಗಮನಿಸಿದ ಮಲೇಶಿಯಾದ ಜನ ಆಫ್ರಿಕಾ ಕಾಡಿನ ಸಸ್ಯ ಪಡೆದು 1979ರಲ್ಲಿ ಕೃಷಿ ಆರಂಭಿಸಿದರು. ಮರ ಬೆಳೆದು ಹೂ ಗೊನೆಗಳು ಬಂದವು. ಆದರೆ ಇಳುವರಿ ಇರಲಿಲ್ಲ. ಪರಿಣಾಮದ ಅಧ್ಯಯನಕ್ಕೆ ಪುನಃ ಆಫ್ರಿಕಾ ಕಾಡಿನ ತಾಳೆ ಮರ ಏರಿದರು. ಪರಾಗಸ್ಪರ್ಶ ಕ್ರಿಯೆ ಗಮನಿಸಿದರು. ಸ್ಥಳೀಯ ವಿವಿಲ್ ದುಂಬಿ ನೆರವಾಗುತ್ತಿರುವದು ಗಮನಕ್ಕೆ ಬಂದಿತು. 1981ರಲ್ಲಿ ಪ್ರಥಮ ಬಾರಿಗೆ ವಿವಿಲ್ ದುಂಬಿಯನ್ನು ಮಲೇಶಿಯಾಕ್ಕೆ ತಂದರು. ಇಂದು ವಿಶ್ವದ ಪ್ರತಿಶತ 58ರಷ್ಟು ಪ್ರಮಾಣದ ಖಾದ್ಯತೈಲವನ್ನು ಮಲೇಶಿಯಾ ಉತ್ಪಾದಿಸುತ್ತಿದೆ. ಇದರಲ್ಲಿ ಶೇಕಡಾ 78 ಭಾಗ ಭಾರತ ಸೇರಿದಂತೆ ವಿವಿಧ ದೇಶಗಳಿಗೆ ರಫ್ತಾಗುತ್ತಿದೆ. ನಮ್ಮ ಅಡುಗೆಯ ಆಧಾರವಾಗಿದೆ. ಅಷ್ಟೇಕೆ, ನಮ್ಮ ಶಿವಮೊಗ್ಗ ಪ್ರಾಂತ್ಯದಲ್ಲಿ ತಾಳೆ ಕೃಷಿ ಆರಂಭವಾಗಾಗ ಇಳುವರಿ ಸಮಸ್ಯೆ ಗೋಚರಿಸಿತು. ದೂರದ ಆಫ್ರಿಕಾದ ವಿವಿಲ್ ತಂದು ಮರಕ್ಕೆ ಬಿಟ್ಟ ಬಳಿಕ ಶೇಕಡಾ 20-30ರಷ್ಟು ಇಳುವರಿ ಹೆಚ್ಚಿದೆ. ಕ್ರಿ.ಶ 1840ರಲ್ಲಿ ಅಮೆರಿಕ ಸಂಯುಕ್ತ ಸಂಸ್ಥಾನದ ಐವಾ ಹಾಗೂ ಮಿಸೌರಿ ರಾಜ್ಯಗಳ ನಡುವೆ ಅಮೆರಿಕ ಸರ್ವೋಚ್ಚ ನ್ಯಾಯಾಲಯದಲ್ಲಿ ಸತತ 12 ವರ್ಷ ಕಾಲ ಅಲ್ಲಿನ ಜೇನು ಮರಗಳ ಹಕ್ಕಿಗಾಗಿ ವ್ಯಾಜ್ಯ ನಡೆದಿದೆ. ಇದು ಹನಿ ವಾರ್ ಎಂದೇ ಪ್ರಸಿದ್ಧವಾಗಿದೆ. ಈಗ ಟಿಬೆಟಿಯನ್ ಕಾಲೋನಿಯ ಜೇನಿನ ಸ್ಥಿತಿ ಗಮನಿಸಿದರೆ ಜೇನಿನ ವಿರುದ್ಧ ಇನ್ನೂ ದೊಡ್ಡ ಕದನ ನಡೆದಂತೆ ಕಾಣುತ್ತಿದೆ. ನಮ್ಮ ಸಾವಿನ ಬಳಿಕ ವೆನಿಲ್ಲಾ ಹೂವಿನಂತೆ ಕೃಷಿ ಬೆಳೆಯ ಪರಾಗಸ್ಪರ್ಶಕ್ಕೆ ನೀವೇ ಶ್ರಮಿಸುತ್ತೀರಾ? ಹೆಜ್ಜೇನಿನ ಹೆಣದ ಮಗ್ಗುಲಲ್ಲಿ ಹುದುಗಿದ ಮರಣ ಪತ್ರದಲ್ಲಿ ಮೈನಡುಗಿಸುವ ಸಾಲುಗಳಿವೆ. ರೈತ ಆತ್ಮಹತ್ಯೆ ನಿತ್ಯ ಗಮನಿಸಿದವರಿಗೆ ಪುಟ್ಟ ಕೀಟದ ಸಾವು ತೀರಾ ತೀರಾ ಚಿಕ್ಕದ್ದು! ಆದರೆ ಪರಿಸರ ಪೊಲೀಸರ ಪಂಚನಾಮೆ ನಡೆದರೆ ರೈತ ಸಾವಿಗೂ, ಹೆಜ್ಜೇನಿನ ಜೀವಯಾನಕ್ಕೂ ಸಂಬಂಧದ ಸ್ಪಷ್ಟ ಸುಳಿವು ಸಿಗಬಹುದು.
ಮರ ಬೆಳೆಸಲು ಮರಾಠಿ ಪಾಠ ಕೃಷಿ ಅರಣ್ಯದಲ್ಲಿ ಗಡಿನಾಡಿನ ಮರಾಠಿ ರೈತ ಅನುಭವಗಳು ಕನ್ನಡ ನೆಲಕ್ಕೆ ತುರ್ತಾಗಿ ಬೇಕಾಗಿದೆ. ಕೃಷಿಯಲ್ಲಿ ಪರಸ್ಪರ ಕೊಡುಕೊಳ್ಳುವ ಸಂಗತಿಗಳು ತುಂಬಾ ಇವೆ. ನಮಗೀಗ ಮರಾಠಿ ಎಂದರೆ ಪಕ್ಕನೆ  ನಡುರಾತ್ರಿಯಲ್ಲೂ ಕನ್ನಡ ಹೋರಾಟ ಮಾತ್ರ ನೆನಪಾಗುತ್ತದೆ! ಇಲ್ಲಿ ಸಣ್ಣ ಕೃಷಿಕರ ಅಭ್ಯದಯದ ದೊಡ್ಡ ಪಾಠಗಳನ್ನು ನಾವು ಕಲಿಯಬಹುದಾಗಿದೆ.ಹೊಲದಲ್ಲಿ ಮರ ಬೆಳೆಸಿ ಭೂಮಿ ಉಳಿಸುವ ಕೃಷಿ ಅರಣ್ಯಗಳ ಬಗೆಗೆ ಮಹಾರಾಷ್ಟ್ರ ಕೊಲ್ಲಾಪುರದ ಆಜರಾ, ಕೋವಾಡ್, ಗಡೀಂಗ್ಲಜ್, ನೇಸರಿ ಪ್ರದೇಶದ ಹಳ್ಳಿಗಳಲ್ಲಿ ಒಂದು ಅನನ್ಯ ಪ್ರಾತ್ಯಕ್ಷಿಕೆಯಿದೆ. ಅಡವಿಯ ತವರಾದ ಪಶ್ಚಿಮ ಘಟ್ಟದ ಗುಡ್ಡಗಳು ಇಲ್ಲಿನ ಕೃಷಿ ಭೂಮಿ. ಒಂದು ಕಾಲಕ್ಕೆ ನೈಸರ್ಗಿಕ ಸಹಜ ಕಾಡಿರುವ ನೆಲೆ, ಈಗ ಭತ್ತ, ಜೋಳ, ರಾಗಿ ಮುಂತಾದ ಬೆಳೆ. ಇಲ್ಲಿನ ಹೊಲದ ಮೇಲೆ ನಿಂತು ಒಂದು ವೈಮಾನಿಕ ಚಿತ್ರ ಪಡೆದರೆ ಈಗ ಇದೊಂದು ಕಾಡು ಎಂದು ತಕ್ಷಣ ಹೇಳಬಹುದು. ಕೃಷಿ ನೆಲದಲ್ಲಿ ಎಕರೆಗೆ ಕನಿಷ್ಟ 50-60 ಗಿಡ ಮರಗಳ ಸಮೃದ್ಧಿ. ಬದುವಿನ ಉದ್ದಕ್ಕೂ ಹಸುರು ಸಾಲು. ಸಾವಿರ ಸಾವಿರ ಎಕರೆ ವಿಸ್ತಾರಕ್ಕೂ ಹಬ್ಬಿದ ಮರ ಬೆಳೆ. ಹೊಲದ ನೆರಳಲ್ಲಿ ನಿಂತ ಬೆಳೆಗಳು ಮರ ಉಳಿಸಿ ಕೃಷಿ ಬೆಳೆಸುವ ಸಾಧ್ಯತೆ ಸಾರುತ್ತವೆ. ನಂದಿ, ಹುನಾಲು, ಮತ್ತಿ, ಇಪ್ಪೆ, ಬೂರಲು, ಬಿದಿರು, ಶಮೆ ಬಿದಿರು, ನೀಲಗಿರಿ, ಗೇರು, ಅತ್ತಿ, ಬಿಳಿಮತ್ತಿ ಮರಗಳು ವಿಶೇಷ. ಹೆಮ್ಮರಗಳಿಲ್ಲ, ಅಬ್ಬಬ್ಬಾ ಎಂದರೆ 30-40 ವರ್ಷ ಪ್ರಾಯದ ಮರಗಳು ಹೆಚ್ಚು.  ಇವುಗಳ ಸೊಪ್ಪು, ಟೊಂಗೆಗಳು ಗೊಬ್ಬರ, ಉರುವಲಿಗಾಗಿ ಬಳಕೆ. ನೈಸರ್ಗಿಕ ಹುಲ್ಲು ಧಾರಾಳ. ಕೃಷಿ ಮೇವು ಜತೆಗಿರುವದರಿಂದ ಎಮ್ಮೆ ಸಾಕಣೆ ಉಪ ವೃತ್ತಿ. ಮೇವಿನ ದಾಸ್ತಾನು ಮಾಡುವುದು, ಮರಗಳನ್ನು ಪೋಷಿಸುವುದನ್ನು ಸೂಕ್ಷ್ಮವಾಗಿ ಗಮನಿಸಿದರೆ ಪ್ರತಿ ಹೊಲವೂ ಕೃಷಿ ಪಾಠ ಶಾಲೆ.  4-5 ಎಕರೆ ಹಿಡುವಳಿಯವರೇ ಅಧಿಕ. ಇರುವ ನೆಲದ ಸತ್ವ ರಕ್ಷಣೆಗೆ ಇಳಿಜಾರಿಗೆ ಅಡ್ಡ ಬದು ನಿರ್ಮಿಸಿ ಮರ ಉಳಿಸುವ ಉಪಾಯ ಪ್ರಕೃತಿಯೇ ಕಲಿಸಿದೆ. ವಾರ್ಷಿಕ 1900-2300 ಮಿಲಿ ಮೀಟರ್ ಮಳೆ ಸುರಿಯುವ ಗುಡ್ಡಗಾಡಿನಲ್ಲಿ ಮಣ್ಣು ಸವಕಳಿ ಸಹಜ. ನೇಗಿಲು ಉಳುಮೆಗೆ ತೊಂದರೆಯೆಂದು ಹೊಲದ ನಡುವಿನ ಗಿಡಗಳನ್ನು ಕಡಿಯುವ್ಯದು, ಬದುವಿನ ಮರಗಳನ್ನು ಹಾಗೇ ಉಳಿಸುವ ಪರಿಪಾಠ. ಏರಿದ ಜನಸಂಖ್ಯೆ, ಕೈಗಾರಿಕೆಗಳು ಈಗ ನಾಲ್ಕು ದಶಕಗಳ ಹಿಂದೆ ಇಲ್ಲಿನ ಹೆಮ್ಮರಗಳನ್ನು ನುಂಗಿದ್ದವು. ಗುಡ್ಡಗಾಡಿನ ಭೂಮಿ ಕೃಷಿಗೆ ನೀಡುವಾಗ ಸರಕಾರ ಮರ ತನ್ನ ಸಂಪತ್ತು ಎಂದು ಕಡಿದು ಮಾರಾಟ ಮಾಡಿತು! ಈಗ ಕೃಷಿಕರ ಸಂರಕ್ಷಣೆಯಿಂದ ಎದ್ದ ಹೊಸ ಗಿಡಗಳಿವು. ಇಲ್ಲಿ ಬಹುತೇಕ ಕೃಷಿರು ಚಿಕ್ಕ ಹಿಡುವಳಿದಾರರು. ಟ್ರ್ಯಾಕ್ಟರ್‌ಗಿಂತ ಎತ್ತುಗಳ ಬಳಕೆ ಜಾಸ್ತಿ. ಕೃಷಿ ನೆಚ್ಚಿಕೊಂಡ ತಲೆಮಾರಿಗೆ ಗಿಡ ಗೆಳೆತನ. ಸಾಂಪ್ರದಾಯಿಕ ಕೃಷಿ ನೆಲದಲ್ಲಿ  ಆಹಾರ ಬೆಳೆಗಿಂತ ಕಾಡು ಇಲ್ಲಿನ ಪ್ರಮುಖ ಆದ್ಯತೆಯೇ ಎಂಬಷ್ಟು  ಅನುಮಾನ. ಹೊಲದಿಂದ ಹಳ್ಳಿ ಒಂದೆರಡು ಕಿಲೋ ಮೀಟರ್ ದೂರ. ಆದರೂ ನಿತ್ಯ ನೆಲದ ಸೆಳೆತ ಜಾಸ್ತಿ. ಮಳೆಯಾಶ್ರಿತ ಕೃಷಿಯ ಇಲ್ಲಿ ಮಳೆಗಾಲದ ಬೆಳೆ ತೆಗೆದ ಬಳಿಕ ಎಲ್ಲೆಡೆಯಂತೆ ಕೃಷಿ ಭೂಮಿ ಬೋಳು ಬಯಲಾಗಿ ಖಾಲಿಯಾಗುವದಿಲ್ಲ! ಗೇರು, ಮಾವು ಬೇಸಿಗೆ ಹೆಚ್ಚುವರಿ ಆದಾಯ. ನೀಲಗಿರಿ, ಶಮೆ ಬಿದಿರುಗಳಂತೂ ಬಹು ಬೇಡಿಕೆ ಉತ್ಪನ್ನ. ಸುಲಭ ನಿರ್ವಹಣೆಯಲ್ಲಿ ಗಿಡ ಬೆಳೆದ ಲಾಭ ಗುರುತಿಸಿ ಉಪಯುಕ್ತ ಗಿಡಗಳನ್ನು ಹೆಚ್ಚು ಹೆಚ್ಚು ಬೆಳೆಸಲು ಗಮನ.  ಜೂನ್ ಮಳೆ ಆರಂಭದ ಕಾಲಕ್ಕೆ ನಮ್ಮಲ್ಲಿನ ವಾರದ ಸಂತೆಗಳಿಗೆ ಬರಬೇಕು. ನೀಲಗಿರಿ, ಸಾಗವಾನಿ, ಬಿದಿರು, ಮಾವಿನ ಸಸಿಗಳ ಮಾರಾಟ ನಡೆಯುತ್ತದೆ. ಪ್ರೀತಿಯಿಂದ ಗಿಡ ಖರೀದಿಸಿ ರೈತರು ಬದುವಿನಲ್ಲಿ ಬೆಳೆಸುತ್ತಾರೆ ನೇಸರಿ ಹಳ್ಳಿಗ ವಿನೋದ್ ಪಾಟೀಲ್ ಹೇಳುತ್ತಾರೆ.  ಇತ್ತೀಚಿಗೆ ಇಲ್ಲಿನ ಕೃಷಿ ಅರಣ್ಯದಲ್ಲಿ ಮರ, ಹಣ್ಣು ಹಂಪಲಿನ ಆದಾಯಕ್ಕೆ ರೈತರ ಗಮನ ಹೆಚ್ಚುತ್ತಿದೆ. ನೈಸರ್ಗಿಕ ಗಿಡಗಳ ಪೋಷಣೆಯೂ ಸಾಧ್ಯವಾಗಿರುವುದರಿಂದ ಕೃಷಿ ಅರಣ್ಯ ಜೀವ ವೈವಿಧ್ಯದ ನೆಲೆಯಾಗಿ ರೂಪುಗೊಂಡಿದೆ. ಅಡಿಕೆ ತೋಟದಲ್ಲಿ ಅರಣ್ಯ ಮಾದರಿಮಲೆನಾಡಿನಲ್ಲಿ ಸಾಂಪ್ರದಾಯಿಕ ಅಡಿಕೆ ತೋಟಗಳು ಕಣಿವೆಯಲ್ಲಿವೆ. ಇಲ್ಲಿ ತೋಟಕ್ಕೆ ಮಳೆ ನೀರು ನುಗ್ಗದಂತೆ ವಿಶೇಷ ನೀರು ಕಾಲುವೆ ವ್ಯವಸ್ಥೆಯಿದೆ. ತೋಟದ ಸುತ್ತಲಿನ ಹೊರ ಅಗಳ ಹಾಗೂ ತೋಟದ ನಡುವೆ ಮರದಟ್ಟಣೆಯ ಹಸಿರು ಗೋಡೆಯೊಂದನ್ನು ಪೋಷಿಸಲಾಗುತ್ತದೆ. ಬಿರುಗಾಳಿ, ಬಿಸಿಲಿನ ಝಳದಿಂದ ತೋಟ ರಕ್ಷಣೆಯ ಕೆಲಸ ಇದರದು. ಇದಲ್ಲದೇ ಪಶ್ಚಿಮದ ಬಿಸಿಲು ತಾಗದಂತೆ ತೋಟದ ಅಂಚಿನಲ್ಲಿ ಮರಗಳನ್ನು  ಸಂರಕ್ಷಿಸಲಾಗುತ್ತದೆ. ಬೆಳೆ ವಿಶೇಷ ಗಮಸಿದರೆ ಕೃಷಿ ಅಡವಿ ಜ್ಞಾನದ ಮೂಲವಾಗಿರುವುದು ಸ್ಪಷ್ಟವಾಗುತ್ತದೆ. ಕಾಡಿನ ಎತ್ತರದ ಮರ, ಬಳ್ಳಿ, ಪೊದೆಗಳ ಸ್ವರೂಪವನ್ನು ಬೆಳೆ ರೂಪದಲ್ಲಿಯೂ ಕಾಣಬಹುದು. ಅಡಿಕೆ, ಬಾಳೆ, ಕಾಳುಮೆಣಸು, ಏಲಕ್ಕಿ, ಅರಿಶಿನ, ಜಾಯಿಕಾಯಿ, ಅಮಟೆ, ಬೇರು ಹಲಸು, ಹಲಸು, ಲಿಂಬೆ, ಸೂಜಿ ಮೆಣಸು, ಸುವರ್ಣಗಡ್ಡೆ, ಮರ ಗೆಣಸು, ಲವಂಗಗಳನ್ನು ಇಲ್ಲಿನ ತೋಟಗಳಲ್ಲಿ ಕಾಣಬಹುದು. ಮಳೆಗಾಲದಲ್ಲಿ ಸವತೆ, ಗೆಣಸಿನ ಬಳ್ಳಿಗಳನ್ನು ತೋಟದ ನೆಲಕ್ಕೆ ಹಬ್ಬಿಸುವ ವಿಧಾನವಿದೆ. ತೆಂಗಿನ ತೋಟದಲ್ಲಿ ಕಾಫಿ, ಅನಾನಸ್, ಕಾಳುಮೆಣಸು ಕಾಣಬಹುದು. ಇಲ್ಲಿ ಅಬ್ಬರದ ಮಳೆ ಸುರಿಯುತ್ತದೆ. ಬಹು ಅಂತಸ್ಸಿನಲ್ಲಿ ಸಸ್ಯದಟ್ಟಣೆ ಇದ್ದಾಗ ಭೂಸವಕಳಿ ತಡೆಯುವುದು ಸುಲಭವಾಗುತ್ತದೆ. ಕೃಷಿ ಮಣ್ಣಿನ ಸಂರಕ್ಷಣೆಗೆ ಅಡವಿ ಸಸ್ಯಗಳ ಸ್ವರೂಪ ಗಮಸಿಯೇ ಬೆಳೆ ಮಾದರಿ ರೂಪುಗೊಂಡಿದೆ.  ಭೂಮಿಯ ಸಮರ್ಥ ಬಳಕೆ ಇಲ್ಲಿ ಗಮಸಬೇಕಾದ ಸಂಗತಿ.  ಇದಲ್ಲದೇ ಅಡಿಕೆ, ತೆಂಗು, ಬಾಳೆ ಹೀಗೆ ಯಾವುದೋ ಒಂದು ಬೆಳೆ ನಂಬಿ ಕೃಷಿ ನಡೆಸಿದರೆ ಬೆಲೆ ಕುಸಿತದ ಪರಿಣಾಮ ಬದುಕು ಕಷ್ಟವಾಗುತ್ತದೆ. ಅಡಿಕೆಗೆ ಬೆಲೆ ಇಲ್ಲದಿದ್ದರೆ ಏಲಕ್ಕಿ, ಕಾಳು ಮೆಣಸು ಇಲ್ಲಿನ ಕೃಷಿಕರಿಗೆ ನೆರವಾಗುತ್ತವೆ. ನಮ್ಮ ಭೂಮಿಯಲ್ಲಿ ನಿಂತು ಸುತ್ತಲಿನ ಕಾಡು ನೋಡಬೇಕು. ಅಲ್ಲಿರುವ ನೈಸರ್ಗಿಕ ಮರ, ಗಿಡ, ಬಳ್ಳಿ, ಪೊದೆ, ಹುಲ್ಲು ನೆಲದ ಪಾಠ ಹೇಳುತ್ತವೆ. ಸದಾ ಪೈಪೋಟಿಯ ನಿಸರ್ಗ ರಂಗದಲ್ಲಿ ಒಂದಿಷ್ಟು ಹೆಮ್ಮರ, ಒಂದಿಷ್ಟು ಕೆಳ ಹಂತದ ಸಸಿಗಳು, ಇನ್ನೊಂದಿಷ್ಟು ಬಳ್ಳಿಗಳು ಬೆಳೆಯುವುದನ್ನು ಗಮನಿಸಬಹುದು. ಮಾನವ ಹಸ್ತಕ್ಷೇಪ ಕಡಿಮೆ ಇರುವ ನೆಲೆಯಲ್ಲಿ ಕಾಡು ಎಲ್ಲ ಹಂತದ ಸಸ್ಯಗಳಿಂದ ಸಮೃದ್ಧವಾಗಿರುತ್ತದೆ. ಅಂತಹ ಸ್ಥಳಗಳಲ್ಲಿ ಮಣ್ಣಿನ ಫಲವತ್ತತೆ ಹೆಚ್ಚುತ್ತ ಅಂತರ್ಜಲ ಸುಧಾರಣೆಯಾಗುತ್ತದೆ.
ವಿಚಿತ್ರವೆಂದರೆ ಬೆಳಗಾವಿಯಿಂದ ಕೇವಲ 15 ಕಿಲೋ ಮೀಟರ್ ದೂರದ ಮಹಾರಾಷ್ಟ್ರದ ಗುಡ್ಡಗಳಲ್ಲಿ ಕಾಣುವ ಚಿತ್ರಗಳು ನಮ್ಮ ಕನ್ನಡದ ನೆಲದ ಬಯಲು ಭೂಮಿಯಲ್ಲಿ ವ್ಯಕ್ತವಾಗಿಲ್ಲ. ಕರಿಜಾಲಿ, ಬೇವಿನ ಮರಗಳು ವಿರಳವಾಗಿರುವದನ್ನು ಬಿಟ್ಟರೆ ನಮ್ಮಲ್ಲಿ ಬೇರೆ ವಿಶೇಷಗಳಿಲ್ಲ.  ಅದರಲ್ಲಿಯೂ ನೀರಾವರಿ ಕ್ಷೇತ್ರಗಳಲ್ಲಂತೂ ಕಬ್ಬು, ಭತ್ತ ಬಿಟ್ಟರೆ ಬೇರೆ ಬೆಳೆಗೆ ಆಸ್ಪದವಿಲ್ಲ ಎಂದು ನಿರ್ಧಾರ ಮಾಡಿದ್ದೇವೆ!  ಮಳೆ ಆಶ್ರಿತ ಪ್ರದೇಶದ ಜನ ಹೊಲದಲ್ಲಿ ಮರ ಪ್ರೀತಿಸುವುದಕ್ಕೂ,  ನೀರಾವರಿ ಪ್ರದೇಶದ ನಿರ್ಧಾರಗಳಿಗೂ  ವ್ಯತ್ಯಾಸವಿದೆ.  ಒಂದು ಕಾಲದಲ್ಲಿ ಹಿರಿಯಜ್ಜನ ಕೃಷಿಯಂತೆ ಮರ ಉಳಿಸಿದವರೂ ಹೊಲಕ್ಕೆ ನೀರು ಬಂದ ಬಳಿಕ ಮರ ಕಡಿದ ಉದಾಹರಣೆಗಳಿವೆ. ನಮ್ಮ ರಾಯಚೂರಿನ ಸಿಂಧನೂರು ಪ್ರದೇಶಗಳು ನೀರಾವರಿಯಾದ ಬಳಿಕ ಅಲ್ಲಿನ ಬೇವಿನ ಮರಗಳು ದೊಡ್ಡ ಪ್ರಮಾಣದಲ್ಲಿ ಸಾವನ್ನಪ್ಪಿವೆ. ಅಳಿದುಳಿದ ಮರಗಳ ನೆರಳು ಭತ್ತದ ಇಳುವರಿಗೆ ಪರಿಣಾಮ ಬೀರುತ್ತದೆಂದು ಸ್ವತಃ ರೈತರೇ ನಾಶ ಮಾಡಿದ್ದಾರೆ. ನೀರು ಬಂದ ಬಳಿಕ ಮರ ಕಡಿದ ಚಿತ್ರಗಳು ಮಹಾರಾಷ್ಟ್ರದ ಈ ಪ್ರಾಂತ್ಯದಲ್ಲಿಯೂ ಇದೆ. ಇಲ್ಲಿ ಕಬ್ಬಿನ ಕೃಷಿಯ  ಹೆಚ್ಚಿನ ಜಾಗದಲ್ಲಿ ನೀಲಗಿರಿ ಬಿಟ್ಟರೆ ಬೇರೆ ಮರಗಳು ನಮಗೆ ಕಾಣುವುದಿಲ್ಲ.  ಕೃಷಿ ಅರಣ್ಯ ಅಭಿವೃದ್ಧಿಯನ್ನು ತಾಜಾ ವಿಜ್ಞಾನದ ಶೋಧವೆಂದು ಟೆಕ್ನಿಕಲ್ ಮಾಹಿತಿ ಹಂಚುವ ಶೂರ ವಿಜ್ಞಾನಿಗಳನ್ನು ಹಲವು ದಶಕಗಳಿಂದ ನೋಡುತ್ತಿದ್ದೇವೆ. ಆದರೆ ಕೃಷಿ ವಿಜ್ಞಾನ, ತಂತ್ರಜ್ಞಾನ, ನೀರಾವರಿ ಸುಧಾರಣೆ ಬಳಿಕ ಮರ ಪ್ರೀತಿಸುವ ಪರಿಸರ ಜ್ಞಾನ ಏಕೆ ಹಿಂದೆ ಸರಿಯುತ್ತಿದೆ? ಯೋಚಿಸಬೇಕಾಗಿದೆ. ನೆಲ ಜಲ ಸಂರಕ್ಷಣೆಯ ಪ್ರತಿ ಹಂತದಲ್ಲಿಯೂ ಮರ ಬೆಳೆಸುವ ಕಾರ್ಯಕ್ಕೆ ಮಹತ್ವ ನೀಡಲಾಗುತ್ತದೆ, ಜಲ ಸಂರಕ್ಷಣೆಯ ಸರಕಾರೀ ಯೋಜನೆಗಳಲ್ಲಿಯೂ ಗಿಡ ನೆಡಲು ಒತ್ತು ನೀಡಲಾಗುತ್ತದೆ. ಇಷ್ಟೆಲ್ಲ ಸರಕಾರಿ ಜಾಗೃತಿ ಇದ್ದಾಗ್ಯೂ ನೀರಾವರಿ ಕ್ಷೇತ್ರಗಳಲ್ಲಿ ಮಾತ್ರ ನೀರು ಮೂಲ ಹೆಚ್ಚಿಸುವ ಕಾಡು ಬೆಳೆಸುವ ಕಾಳಜಿ ಯಾವತ್ತೂ ವ್ಯಕ್ತವಾಗುವುದಿಲ್ಲ. ಇಂತಹ ನೆಲೆಯಲ್ಲಿ ಬೆಳೆಯುವ ಸಸ್ಯಗಳ ಬಗೆಗೆ ಮಾಹಿತಿ ಹಂಚುವ ಕೆಲಸ ಪರಿಣಾಮಕಾರಿಯಾಗಿಲ್ಲ.  ಬೆಳೆ ರೋಗಕ್ಕೆ ಇಂತಹ ರಾಸಾಯಕ ಸಿಂಪಡಿಸಬೇಕು, ಇಂತಹ ಗೊಬ್ಬರದಲ್ಲಿ ಪವಾಡವಿದೆ ಎಂದು ನೂರಾರು ಜಾಹೀರಾತು ಫಲಕಗಳು ಇಲ್ಲಿ ನಮಗೆ ಸಿಗುತ್ತವೆ. ಆದರೆ ಮರ ಬೆಳೆಸಲು ರೈತರಿಗೆ ಪ್ರೇರಣೆ ಮೂಡಿಸುವ ಒಂದು ಸಂದೇಶ ಕೂಡಾ ಕಾಣುವುದಿಲ್ಲ. ಅಷ್ಟಕ್ಕೂ ಮರ ಬೆಳೆಸಲು ಮಹಾರಾಷ್ಟ್ರದ ಈ ಪ್ರದೇಶಗಳಲ್ಲಿ ರೈತ ಜ್ಞಾನ ಹೆಚ್ಚು ಕೆಲಸ ಮಾಡಿದೆ. ಅದನ್ನು ಕಲಿತು ಹಂಚುವ ಕೆಲಸ ಮಾಡಬೇಕಾಗಿದೆ. ಅಲ್ಲಿಯೂ ಕೃಷಿ ತಂತ್ರಜ್ಞಾನ ಬಂದಲ್ಲಿ ಮರಗಳು ಉರುಳಿವೆ! ನಮ್ಮ ಕರ್ನಾಟಕದ ಮಲೆನಾಡಿನಲ್ಲಿ ರೈತರ ಹೊಲಗಳಲ್ಲಿನ ಮರಗಳು ಖಾಲಿಯಾಗಿವೆ; ನಾಟಾ ನೀಡುವ ಮರಗಳ ಕೊರತೆಯಾಗಿದೆ. ಮಹಾರಾಷ್ಟ್ರದ ಹೊಲದ ಮರಗಳು ಈಗ ಕರ್ನಾಟಕದ ಸಾಮಿಲ್‌ಗೆ ಬರಲು ಆರಂಭಿಸಿವೆ. ಮರಾಠಿ ಕೃಷಿ ಭೂಮಿಯ ಮರದ ವ್ಯವಹಾರ ನಾಟಾ ವರ್ತಕರ ಹೊಸ ಆಕರ್ಷಣೆಯಾಗಿದೆ.ಮರ ಕಡಿಯುವ ವಿದ್ಯೆಯನ್ನು ಬೇಗ ಕಲಿಯುವ ನಾವು ಅದನ್ನು ಬೆಳೆಸುವ ದಾರಿಯಲ್ಲಿ ಏಕೆ ಸಾಗುತ್ತಿಲ್ಲ? ನೀರು, ಮಣ್ಣಿಗೆ ಶಕ್ತಿ ನೀಡುವ ಮರಗಳನ್ನು ಮರೆತು ಕೃಷಿ ಅಭಿವೃದ್ಧಿ ಸರ್ವಥಾ ಸಾಧ್ಯವಿಲ್ಲ. ಮರ ಬೆಳೆಸಿ ಕೃಷಿ ಬೆಳೆಸುವ ವಿದ್ಯೆ ಕಲಿತ ನೆರೆಯ ಮರಾಠಿ ರೈತ ಅನುಭವಗಳು ಕನ್ನಡ ನೆಲಕ್ಕೆ ತುರ್ತಾಗಿ ಬೇಕಾಗಿದೆ. ಕೃಷಿಯಲ್ಲಿ ಪರಸ್ಪರ ಕೊಡುಕೊಳ್ಳುವ ಸಂಗತಿಗಳು ತುಂಬಾ ಇವೆ. ನಮಗೀಗ ಮರಾಠಿ ಎಂದರೆ ಪಕ್ಕನೆ ನಡು ರಾತ್ರಿಯಲ್ಲೂ ಕನ್ನಡ ಹೋರಾಟ ಮಾತ್ರ ನೆನಪಾಗುತ್ತದೆ! ಸಣ್ಣ ಕೃಷಿಕರ ಅಭ್ಯದಯದ ದೊಡ್ಡ ಪಾಠಗಳನ್ನು ಕೂಡಾ ನಾವು ಕಲಿಯುವುದಿದೆ.
ಪುಟ್ಟ ಜಾಗ, ಭೂಗತ ಆದಾಯ!ಕರಾವಳಿ ಅಂಗಳದಲ್ಲಿ ಕಾಡು ತೋಟದ  ಪಾಠ
ಇಂದು ಯಾವುದೇ ಊರಿನ ಊಟ ಮಾಡಿದರೂ ನಮಗೆ ಅದೇ ಈರುಳ್ಳಿ, ಮೂಲಂಗಿ, ಟೊಮೆಟೋ, ಎಲೆಕೋಸು, ಹೂಕೋಸು,  ಬಟಾಟೆಯ ಬಳಗವೇ ಕಾಣುತ್ತಿದೆ. ನಮ್ಮ ಬಳಕೆ ವೇಗಕ್ಕೆ ತಕ್ಕಂತೆ ಕೃಷಿ ಬೆಳೆಯಲ್ಲೂ ಇದೇ ಏಕತಾನತೆ ನರ್ತಿಸುತ್ತದೆ. ರೋಗ, ಕೀಟ ಹಾವಳಿ ಹೆಚ್ಚುತ್ತಿದೆ. ಬೆಲೆ ಕುಸಿತದ ಪರಿಣಾಮವಾಗಿ ಸಾಂಬರಿಗೆ ಹಾಕುವ ಟೊಮೆಟೊವನ್ನು ಸೀದಾ ರಸ್ತೆಗೆ ಚೆಲ್ಲುತ್ತಿದ್ದೇವೆ! ಹೆಮ್ಮರಗಳ ನೆರಳಿನ ಅಡಿಯಲ್ಲಿ ಕೃಷಿ ಸಾಧ್ಯತೆಯ ಪ್ರಶ್ನೆ ಬಂದಾಗೆಲ್ಲ ಕರಾವಳಿಯ ಮನೆಯಂಗಳದ ಕಾಡು ತೋಟ ಹೊಸ ಸಾಧ್ಯತೆ ಹೇಳುತ್ತದೆ. ಗುಡ್ಡದ ತುತ್ತ ತುದಿಯಲ್ಲಿ ನಿಂತು ಕರಾವಳಿ ಎಂದರೆ ತೆಂಗಿನ ತೋಟ ಎಂದು ಸರಳಕ್ಕೆ ಅರ್ಥ ಮಾಡಿಕೊಳ್ಳಬಹುದು. ಆದರೆ ಅಲ್ಲಿನ ಮನೆ ಮನೆಯ ತೆಂಗಿನ ನೆರಳು ನೋಡಿದರೆ ಇಂಚಿಂಚು ನೆಲವೂ ಸಸ್ಯ ವೈವಿಧ್ಯದ ಸೊಬಗು. ಹಲಸು, ಮಾವು, ನುಗ್ಗೆ,  ಗೇರು, ಬಿಂಬಳೆ, ಜಾಯಿಕಾಯಿ, ಬೇರು ಹಲಸು, ಅಮಟೆ, ಚಿಕ್ಕು, ನುಗ್ಗೆ, ಪಪಾಯ, ಸಾಂಬಾರ ಬೇವು ಮುಂತಾದ ಸಣ್ಣಪುಟ್ಟ ಮರಗಳ ಸಮ್ಮೇಳನ.  ದೊಡ್ಡ ಮರಗಳಿಗೆ ಕಾಳು ಮೆಣಸು, ವೀಳ್ಯದೆಲೆ ಬಳ್ಳಿಗಳೇರಿವೆ! ನೆರಳಿನ ಎಡೆಯಲ್ಲಿ ಒಂದಿಷ್ಟು ಗಡ್ಡೆ  ತರಕಾರಿ,  ಅಲ್ಲಿ ಕುಟುಂಬದ ಭೂಗತ ಕೃಷಿ. ಕರಾವಳಿ ಕೈತೋಟ ಮನೆ ಮನೆಗೆ ಪುಟ್ಟ ಸಸ್ಯಗಳಲ್ಲಿ ಸುಸ್ಥಿರ ಕೃಷಿಯ ಪಾಠ, ಭೂಗತ ಗಡ್ಡೆಗಳಲ್ಲಿ ಆದಾಯ ಪಡೆಯುವ ವಿಶೇಷ ಕಾಣಬಹುದು. ಪ್ರತಿ ಚದರ್ ಕಿಲೋ ಮೀಟರ್ ಪ್ರದೇಶದಲ್ಲಿ ಇಲ್ಲಿ ಈಗ 700-800 ಜನ ವಾಸಿಸುತ್ತಾರೆ. ಜನ ಸಾಂದ್ರತೆ ಜಾಸ್ತಿ, ತುಂಡು ಹೊಲ. ಬಯಲು ಸೀಮೆಯಲ್ಲಿ 40 ಎಕರೆ ಕೃಷಿ ಮಾಡುವವರೂ ತಮ್ಮದು ಸಣ್ಣ ಹೊಲ ಎನ್ನುತ್ತಾರೆ. ಆದರೆ ಕರಾವಳಿಯಲ್ಲಿ ನಿಕ್ಕಿ ಇರೋದು ಗುಂಟೆ, ಅರ್ಧ ಗುಂಟೆ! ವಸತಿಗೆ ಪುಟ್ಟ ಮನೆ ನಿರ್ಮಿಸಿದ ಬಳಿಕ ಉಳಿಯುವ ಜಾಗದಲ್ಲಿ ಒಂದೆರಡು ತೆಂಗು ನೆಡಲೂ ತಡಕಾಡಬೇಕು. ತಲೆ ಎತ್ತಿ ತಿರುಗಾಡಲೂ ಅಸಾಧ್ಯವಾದ ಇಕ್ಕಟ್ಟು ನೆಲೆ. ಆದರೆ ಇಂದು ಕೃಷಿ ಭೂ ಬಳಕೆ, ಆರ್ಥಿಕ ನಿರ್ವಹಣೆಯ ಮಾದರಿ ಪಾಠ ಹೇಳುವ ತಾಕತ್ತು ಈ ತುಂಡು ನೆಲದ ತಜ್ಞರದು! ಮನೆ ಸುತ್ತ ಬೇಲಿ ಅಂಚಿನಲ್ಲೆಲ್ಲ ಮರ ಗಿಡ ಬಳ್ಳಿಗಳು. ಅಲ್ಲಿರುವ ಮರದ ಒಣ ಎಲೆಯೇ ಗೊಬ್ಬರ, ಮಳೆ ನೀರು, ಸ್ನಾನದ ನೀರಿನ ಸಮರ್ಥ ಬಳಕೆ.  ಮನೆಗೆ ಸ್ವಾದಿಷ್ಟ ತರಕಾರಿ, ಆರೋಗ್ಯ ಉಪಕಾರಿ.ಮಳೆ ಸುರಿಯುತ್ತಲೆ 70ರ ಅಜ್ಜಿಯರೂ ಮೋಟು ಗುದ್ದಲಿ ಹಿಡಿದು ಕೃಷಿ ಉತ್ಸಾಹ ತೋರಿಸುತ್ತಾರೆ. ಅದು ಜನಮನದ ರಕ್ತಗುಣ. ಅರಿಶಿನ, ಅಂಬೆಕೊಂಬು, ಶುಂಠಿ ಎಂದು ಬೆಳೆ ನೆಲೆಗೆ ಶ್ರೀಗಣ. ಮಟ್ಟಕೆಸ, ಸಿಹಿ ಗೆಣಸು, ಮರಗೆಣಸು, ನೇಗಿಲ ಗೆಣಸು, ಕೆಂಪು  ಗೆಣಸು, ಬಿಳೆ ಗೆಣಸು, ಹೆಡಗೆ  ಗೆಣಸು, ಪಂಜರ ಗಡ್ಡೆ, ಕರಿ ಕೆಸ, ಬಾಂಬೆ ಕೆಸ, ಊರ ಕೆಸ, ಬಿಳಿ ಕೆಸ, ಚೀಪು ಹೀಗೆ ಪಟ್ಟಿ ಬೆಳೆಯುತ್ತದೆ. ಬಹುತೇಕ ತರಕಾರಿಗಳು ಸಂತೆಗಳಲ್ಲಿ ಕಾಣಸಿಗದ ಕಲಮುಗಳು. ಆಹಾರ ವೈವಿಧ್ಯಕ್ಕಾಗಿ ಪರಂಪರೆಯಿಂದ  ಸಂರಕ್ಷಿಸಿದ ಬೆಳೆ ವೈವಿಧ್ಯ ಇವು. ಇದನ್ನು ನಾಟಿ ತಳಿಯ ಗೆಲುವು ಎಂದೂ ಕರೆಯಬಹುದು. ಇಲ್ಲಿ  ಆಹಾರ, ಆದಾಯ ಎಲ್ಲವೂ ಅಡಗಿದೆ.
ಕಾಡು ಸಿಂಗಾರ, ಮಣ್ಣು ಬಂಗಾರ!ಅಧಿಕ ಫಸಲಿನ ಆಸೆಗೆ ಇಂದು ಹೊಲದ ಮಣ್ಣು ಮಾಲಿನ್ಯವಾಗುತ್ತಿದೆ. ಖನಿಜ ಸಾಮಗ್ರಿ, ಸಾವಯವ ವಸ್ತು, ನೀರು, ಗಾಳಿ ಮಣ್ಣಿನ ಪ್ರಧಾನ ಘಟಕಗಳು. ಸೂಕ್ಷ್ಮ ಜೀವಿಶಾಸ್ತ್ರಜ್ಞರ ಪ್ರಕಾರ ಮಣ್ಣು ಜೀವಂತ ವಸ್ತು. ಇದರಲ್ಲಿ ಪುಟ್ಟ ಸಸ್ಯ, ಕ್ರಿಮಿಕೀಟ, ಬ್ಯಾಕ್ಟೀರಿಯಾ, ಶಿಲೀಂದ್ರ, ಪಾಚಿ, ಇರುವೆ, ಎರೆಹುಳು, ಗೊಬ್ಬರದ ಹುಳು, ಬೇರುಹುಳು ಹೀಗೆ ಏನೆಲ್ಲ ಬದುಕಿವೆ! ಸಸ್ಯ, ಪ್ರಾಣಿಗಳ ಉಳಿಕೆಯನ್ನು ವಿಘಟಿಸುವ ಸೂಕ್ಷ್ಮಜೀವಿಗಳವು. ಇದರಿಂದ ಸಾವಯವ ಪದಾರ್ಥ ಮಣ್ಣಿನಲ್ಲಿ ಬೆರೆತು ನೀರಿನಲ್ಲಿ ಕರಗಿ ಸಸ್ಯಕ್ಕೆ ಪೂರೈಕೆಯಾಗುತ್ತದೆ. ಮರದಿಂದ ಬಿದ್ದ ಒಣ ಎಲೆ, ಕಸ, ಕಡ್ಡಿಗಳು ಹ್ಯೂಮಸ್ ಆಗಿ ಪರಿವರ್ತನೆಯಾಗುತ್ತ ಮಣ್ಣಿನ ಆರೋಗ್ಯ ಪೋಷಣೆಯ ಕೆಲಸ ನಡೆಯುತ್ತದೆ. ಇಂದು ಬೆಂಕಿ, ಜಾನುವಾರು ಮೇವು, ಮರ ಕಡಿತ, ಗಣಿಗಾರಿಕೆ ಸೇರಿದಂತೆ ವಿವಿಧ ಕಾರಣಗಳಿಂದ ಅಪಾರ ಪ್ರಮಾಣದ ಮೇಲ್ಮಣ್ಣು ಕೊಚ್ಚಿ ಹೋಗುತ್ತಿದೆ. ಅಧಿಕ ಮಳೆ ಸುರಿಯುವ ಗುಡ್ಡಗಾಡಿನ ಪ್ರದೇಶಗಳಲ್ಲಂತೂ ಮಣ್ಣು ಸವಕಳಿ ವೇಗ ಮಿತಿಮೀರಿದೆ.ಇಡೀ ಜಗತ್ತಿನಲ್ಲಿ ಪ್ರತಿ ನಿಮಿಷಕ್ಕೆ 10 ಹೆಕ್ಟೇರ್ ಕೃಷಿ ಭೂಮಿಯ ಮಣ್ಣು ಹಾನಿಯಾಗುತ್ತಿದೆ.  ಸರಿಸುಮಾರು ಪ್ರತಿ ಹಕ್ಟೇರ್‌ನಲ್ಲಿ 20 ಲಾರಿ ಲೋಡ್ ಮಣ್ಣು ಗಾಳಿ, ನೀರಿನ ಪ್ರಹಾರಕ್ಕೆ ಹಳ್ಳಕೊಳ್ಳ ಸೇರುತ್ತಿದೆ. ಅತಿಯಾದ ರಾಸಾಯನಿಕ ಪರಿಣಾಮಕ್ಕೆ ಕೃಷಿ ಮಣ್ಣು ಸೂಕ್ಷ್ಮಜೀವಿಗಳ ಚಟುವಟಿಕೆ ಅಸಾಧ್ಯವಾದಷ್ಟು ಹಾಳಾಗಿದೆ. ಜೀವಿಗಳ ಕ್ರಿಯೆ ಸ್ಥಗಿತವಾಗಿ ಸಸ್ಯ ಪೋಷಕಾಂಶಗಳು ಸರಿಯಾಗಿ ದೊರಕದೆ ಇಳುವರಿ ಕುಂಠಿತವಾಗುತ್ತದೆ. ಮಣ್ಣಿನಲ್ಲಿನ ಸೂಕ್ಷ್ಮಜೀವಿಗಳು ಆಮ್ಲಜನಕವನ್ನು ಉಪಯೋಗಿಸಿ ಮಣ್ಣಿಗೆ ಹಾಕಿದ ದೊಡ್ಡಿಗೊಬ್ಬರ, ಹಸಿರು ಎಲೆಗಳನ್ನು ವಿಘಟಿಸಿ, ವಿಭಜಿಸಿ ಇಂಗಾಲದ ಡೈಆಕ್ಸೈಡ್ ಉತ್ಪತ್ತಿ ಮಾಡುತ್ತವೆ. ಹೀಗೆ ಉತ್ಪತ್ತಿಯಾದ ಇಂಗಾಲದ ಡೈಆಕ್ಸೈಡ್‌ಡನ್ನು ದ್ಯುತಿ ಸಂಶ್ಲೇಷಣೆಯಲ್ಲಿ ಉಪಯೋಗಿಸುತ್ತವೆ. ಮಣ್ಣಿನ ಮಲಿನತೆಯಿಂದ ಜೈವಿಕ ಕ್ರಿಯೆ ಏರುಪೇರಾಗುತ್ತದೆ. ಸಸ್ಯಗಳ ಬೇರಿನ ಗಂಟುಗಳಲ್ಲಿರುವ ಬ್ಯಾಕ್ಟೀರಿಯಾಗಳಾದ ರೈಜೊಬಿಯಮ್, ನೈಟ್ರೋಸೊಮೋನಾಸ್, ನ್ಶೆಟ್ರೋಬ್ಯಾಕ್ಟೀರಿಯಾ, ಅಜೊಬ್ಯಾಕ್ಟರ್ ಮುಂತಾದವುಗಳ ರೂಪದಲ್ಲಿನ ಸಸಾರಜನಕವನ್ನು ಲವಣಗಳಾಗಿ ಪರಿವರ್ತಿಸಿ ಸಸ್ಯಗಳಿಗೆ ಪೂರೈಸುತ್ತವೆ. ಮ್ಯಾಂಗನೀಸ್, ಸತು, ಕಬ್ಬಿಣ ಪೂರೈಕೆಯಾಗುತ್ತದೆ.  ಈಗ ವಿಷವಸ್ತುಗಳು ಸೇರಿರುವುದರಿಂದ ಆಹಾರ ಸರಪಳಿ ಏರುಪೇರಾಗಿದೆ. ಅಧಿಕ ನೀರಾವರಿಯಿಂದ ಮಣ್ಣು ಕ್ಷಾರಯುಕ್ತವಾಗಿದೆ. ಹಾಗಾದರೆ ಸುಧಾರಣೆ ಹೇಗೆ? ನಾವು ಕೃಷಿ ಭೂಮಿ, ಸುತ್ತಲಿನ ಪ್ರದೇಶದಲ್ಲಿ ಸ್ಥಳೀಯ ಅರಣ್ಯ ಸಸ್ಯ ಬೆಳೆಸಿ ಕಾಡನ್ನು ಸಿಂಗಾರಗೊಳಿಸಿದರೆ ಮಣ್ಣು, ನೀರಿನ ಸಂರಕ್ಷಣೆಯಿಂದ ಹೊಲ ಬಂಗಾರವಾಗುತ್ತದೆ.
ಬಳಕೆ ಒತ್ತಡಕ್ಕೆ ನೆಲ ಸತ್ವಹೀನಹಿತ್ತಲ ಗಿಡವಾಗಿ, ಅಡುಗೆ ಮನೆಯ ರುಚಿ ರಹಸ್ಯವಾಗಿ ಉಳಿದು ಬಂದ ಈ ಕೃಷಿ ಜ್ಞಾನ ಎಲೆ ಮರೆಯಲ್ಲಿ ಉಳಿದಿದೆ. 10-15 ಜಾತಿ ಗಡ್ಡೆ ಪೋಷಿಸಿದ ಹಿರಿಯರು ಎಂದೂ ಕೃಷಿ ತಜ್ಞರಾಗಿ ವೇದಿಕೆ ಏರಿದವರಲ್ಲ. ಆದರೆ ಮಣ್ಣಿನ ಜತೆ ಬೆಳೆದವರು. ಕೆಸವಿನ ಗಡ್ಡೆಯನ್ನು ಗೋಮೂತ್ರದಲ್ಲಿ ಅದ್ದಿ ಹುಲ್ಲಿನಲ್ಲಿ ಗಂಟು ಕಟ್ಟಿ ಹುಲ್ಲಿನ ಮನೆಯ ನೆರಳಲ್ಲಿ ನೇತು ಹಾಕಿದರೆ ಚೆನ್ನಾಗಿ ಮೊಳಕೆ ಬರುತ್ತದೆಂಬ ಅನುಭವ ಜ್ಞಾನ. ಬೇಸಿಗೆ ಆರಂಭದಲ್ಲಿ ಗಡ್ಡೆ ಅಗೆದು ಅಡುಗೆಗೆ ಬಳಸುವಷ್ಟೇ ಜಾಗೃತಿಯನ್ನು ಮುಂದಿನ ಮಳೆಗಾಲದ ನಾಟಿಗೆ ಮುಂಜಾಗೃತೆಯಾಗಿ ಗಡ್ಡೆ ಉಳಿಸುವ ಪರಿಜ್ಞಾನವಿದೆ. ಮೀನು ಊಟಕ್ಕೆ ಮುರುಗಲು, ಉಪ್ಪಾಗೆ, ಜುಮ್ಮಿನ ಕಾಯಿ ಇದ್ದರೆ ಗಮ್ಮತ್ತು. ಈ ಕಾಡು ಸಸ್ಯ ಹಿತ್ತಲಲ್ಲಿ ಅಂಕುರಿಸಿದರೆ ಅಗತ್ಯ ಪೋಷಣೆ ನೀಡಿ ಫಲ ಪಡೆಯುವ ಪ್ರಾವೀಣ್ಯವಿದೆ. ಒಂದೆರಡು ತೇಗದ ಸಸಿ ನೆಟ್ಟು ಆರ್ಥಿಕ ಲಾಭದ  ಲೆಕ್ಕವೂ ಉಂಟು. ಶ್ರೀಮಂತರು, ಬಡವರು ಎಂಬ ಬೇಧವಿಲ್ಲದೇ ಗಿಡ ಬೆಳೆಸುವ ಪ್ರೀತಿ. ಕೇರಳದ ಮಲೆಯಾಳಿಗಳು ತಂದ ಯಾವುದೋ ಗಡ್ಡೆ ಒಂದೆರಡು ವರ್ಷಗಳಲ್ಲಿ ಇಲ್ಲಿನ ಎಲ್ಲರ ಮನೆಯ ಅಕ್ಕರೆಯ ಬೆಳೆಯಾಗಿ ಹಿತ್ತಲಲ್ಲಿ ನಗುತ್ತದೆ. ಮಿಕ್ಕಿ ಉಳಿದರೆ ಮಾರುಕಟ್ಟೆಯಲ್ಲಿ ಮೆರೆಯುತ್ತದೆ. ಬಿಳಿಗಿರಿ ರಂಗನ ಬೆಟ್ಟದ ಸೋಲಿಗರು ಸುಮಾರು 14 ಜಾತಿಯ ಗಡ್ಡೆಗಳನ್ನು ತರಕಾರಿಯಾಗಿ ಬಳಸುತ್ತಾರೆಂಬ ಮಾಹಿತಿಯಿದೆ. ಇವುಗಳಲ್ಲಿ ಹೆಚ್ಚಿನವು ಕಾಡು ಮೂಲದವು ಎಂಬುದು ಗಮನಿಸಬೇಕಾದ ಸಂಗತಿ. ಇವುಗಳಲ್ಲಿ ಹಲವು ಕೃಷಿಯತ್ತ ನಡೆದಿವೆ. ಬೇಸಿಗೆಯಲ್ಲಿ ಭೂಗತವಾಗಿದ್ದು ಮುಂಗಾರಿನ ಮಳೆಗೆ ಮೇಲೆದ್ದು ಫಲ ನೀಡುವ ಕಾನಕಲ್ಲಟೆ, ಮಾಡಹಾಗಲು(ಕಾಟು ಪೀರೆ) ಕರಾವಳಿ, ಮಲೆನಾಡಿನಲ್ಲಿ ಕೃಷಿ ಮಾನ್ಯತೆ ಪಡೆದಿದೆ. ಗಡ್ಡೆ ತರಕಾರಿಗಳಂತೂ ನೆಲದಿಂದ ಕಿತ್ತ ಬಳಿಕ ಯಾವ ವಿಶೇಷ ಶೈತ್ಯಾಗಾರದ ಅಗತ್ಯವಿಲ್ಲದೇ ಹಲವು ತಿಂಗಳ ಕಾಲ ಕೆಡದಂತೆ ಇಟ್ಟುಕೊಳ್ಳಬಹುದು. ಉಪ್ಪಿನಕಾಯಿ, ಸಂಡಿಗೆ, ಪಾೀಯ, ಪೌಡರ್, ಚಿಪ್ಸ್‌ನಂತಹ ಮೌಲ್ಯವರ್ಧಿತ ಉತ್ಪನ್ನ ತಯಾರಿಸಬಹುದು. ಕೊಂಕಣ ರೈಲಿನಲ್ಲಿ ದೊರಕುವ ಚಿಪ್ಸ್ ಕರಾವಳಿ ಬೇಲಿಯಂಚಿನಲ್ಲಿ ಬೆಳೆದ ಮರ ಗೆಣಸಿನದು !ಕೇರಳದಲ್ಲಿ ಗಡ್ಡೆ ತರಕಾರಿ ಅಭಿವೃದ್ಧಿ, ಸಂಶೋಧನೆಗೆ ಸಂಸ್ಥೆಯಿದೆ. ನಮ್ಮ ಕರ್ನಾಟಕದ ಕರಾವಳಿಯ ಮನೆ ಮನೆಗಳಲ್ಲಿ ಲಾಗಾಯ್ತಿನಿಂದಲೂ ಕೃಷಿ ನಡೆದಿದೆಯಾದರೂ ಈ ಬಗೆಗೆ ವಿಶೇಷ ಗಮನಹರಿದಿಲ್ಲ. ಬರಗಾಲದ ಆಹಾರ, ಸುಲಭದ ಬೆಳೆ, ಆರೋಗ್ಯ, ಆದಾಯ ನೀಡುವುದು ಇದರ ಆಕರ್ಷಣೆ. ಇಂದು ಯಾವುದೇ ಊರಿನ ಊಟ ಮಾಡಿದರೂ ನಮಗೆ ಅದೇ ಈರುಳ್ಳಿ, ಮೂಲಂಗಿ, ಟೊಮೆಟೋ, ಎಲೆಕೋಸು, ಹೂಕೋಸು, ಬಟಾಟೆಯ ಬಳಗವೇ ಕಾಣುತ್ತಿದೆ. ನಮ್ಮ ಬಳಕೆ ವೇಗಕ್ಕೆ ತಕ್ಕಂತೆ ಕೃಷಿ ಬೆಳೆಯಲ್ಲೂ ಇದೇ ಏಕತಾನತೆ ನರ್ತಿಸುತ್ತದೆ. ರೋಗ, ಕೀಟ ಹಾವಳಿ ಹೆಚ್ಚುತ್ತಿದೆ. ಬೆಲೆ ಕುಸಿತದ ಪರಿಣಾಮವಾಗಿ, ಸಾಂಬರಿಗೆ ಹಾಕುವ ಟೊಮೆಟೋವನ್ನು  ಸೀದಾ ರಸ್ತೆಗೆ ಚೆಲ್ಲುತ್ತಿದ್ದೇವೆ! ಹೆಮ್ಮರಗಳ ನೆರಳಿನ ಅಡಿಯಲ್ಲಿ ಕೃಷಿ ಸಾಧ್ಯತೆಯ ಪ್ರಶ್ನೆ ಬಂದಾಗೆಲ್ಲ ಕರಾವಳಿಯ ಮನೆಯಂಗಳದ ಕಾಡು ತೋಟ ಹೊಸ ಸಾಧ್ಯತೆ ಹೇಳುತ್ತದೆ. ಕೃಷಿ ಜ್ಞಾನ ಗುಡ್ಡಗಾಡಿನ ತೋಟಕ್ಕೆ ಫಲಶೃತಿ ತೋರಿಸುತ್ತದೆ.

ಅಡವಿ ಗಿಡದಲ್ಲಿ ಆರೋಗ್ಯ ಸೂತ್ರಆಹಾರ ಸುಸ್ಥಿರತೆಯ ಸರಳ ಅಸ್ತ್ರ
ಇಂದು ಯಾವುದೋ ಪ್ರದೇಶದ ಸಸ್ಯ ತಂದು ದುಬಾರಿ ವೆಚ್ಚದಲ್ಲಿ  ಕೃಷಿ ಮಾಡುವ ಸರ್ಕಸ್‌ಗೆ ಬದಲು ಸುಲಭದ ಕಾಡು ಗಿಡಗಳ ಕೃಷಿಯಲ್ಲಿ ಮಾರುಕಟ್ಟೆ ಸಾಧ್ಯತೆ ಹುಡುಕುವುದು ಭವಿಷ್ಯದ  ಹೆಜ್ಜೆಯಾಗಬೇಕಿದೆ. ಹಳ್ಳಿಗಾಡಿನ ಗಿಡ ಬಳಕೆಯ ಜ್ಞಾನದಲ್ಲಿ ಕೃಷಿ ವಿಜ್ಞಾನ ಕಲಿಯುವುದು ಸಾಕಷ್ಟಿದೆ. ಮಲೆನಾಡಿನ ಅಡವಿ ಆಹಾರದಲ್ಲಿ ಕೃಷಿ ಭವಿಷ್ಯದ ಸೂತ್ರಗಳಿವೆ.ಅಡುಗೆಗೆ ಹುಡುಕೋದು ಮಲೆನಾಡು, ಕರಾವಳಿ ಸೀಮೆಗಳಲ್ಲಿ ಹಳ್ಳಿಗಾಡಿನ ಮಹಿಳೆಯರು ಮಾಮೂಲಿಯಾಗಿ ಬಳಸುವ ಮಾತು ಇದು. ಬೆಳಗಿನ ಉಪಹಾರ ಮುಗಿಸಿ ಪಾತ್ರೆ ತೊಳೆದು ಪುನಃ ಅಡುಗೆ ಮನೆ ಸೇರಿಸಿದ ಬಳಿಕ ಮಧ್ಯಾಹ್ನದ ಅಡುಗೆ ತಯಾರಿ ಶುರು.ಕೈಯಲ್ಲಿ ಮೋಟು ಕತ್ತಿ ಹಿಡಿದು ತೋಟ, ಭತ್ತದ ಗದ್ದೆ, ಹತ್ತಿರದ ಕಾಡು, ಹಿತ್ತಲುಗಳಲ್ಲಿ ಓಡಾಟ. ಬಾಳೆ ಮರದ ದಿಂಡು (ತಿರುಳು), ಮಾವಿನಕಾಯಿ, ಒಂದೆಲಗ, ಬಿಲ್ವಪತ್ರೆ, ಕವಲು ಕುಡಿ, ಮುಟ್ಟಿದರೆ ಮುನಿ ಕುಡಿ, ಕೆಂದಿಗೆ ಬಳ್ಳಿಯ ಚಿಗುರು, ಮುರುಗಲು ಕಾಯಿ, ಮಾವಿನ ಸೊಪ್ಪು, ಕರಡಿ ಸೊಪ್ಪು, ಮಜ್ಜಿಗೆ ಹುಲ್ಲು, ದೂರ್ವೆ ಹೀಗೆ  ಯಾವುದಾದರೂ ಸಸ್ಯ ಸಂಗ್ರಹ. ಇದು ಇವರ ಸಾಂಪ್ರದಾಯಿಕ ಅಡವಿ ಆಹಾರ, ತರಕಾರಿ! ಕೃಷಿ ನೆಲದಲ್ಲಿ ಓಡಾಡಿ ಮನೆಗೆ ಮರಳುವಾಗ ಅನಾಯಾಸವಾಗಿ ಈ ಅಡುಗೆ ಪರಿಕರಗಳ ಸಂಗ್ರಹ. ಒಂದು ದಿನ ತಂದದ್ದು ಮರುದಿನ ಮತ್ತೆ ತರುವದು ತೀರ ಅಪರೂಪ. ರಭಸದ ಮಳೆ ಸುರಿದರೆ ಥಂಡಿ ಹವೆಗೆ ಕನ್ನೆಕುಡಿ ಗೊಜ್ಜು, ಕೆಸವಿನ ಸೊಪ್ಪಿನ ಗೊಜ್ಜು ತಯಾರಿಗೆ ಆದ್ಯತೆ. ಬೇಸಿಗೆ ಉರಿ ಬಿಸಿಲಲ್ಲಿ ದೇಹ ತಂಪಾಗಿಸುವ ಒಂದೆಲಗ ಬೇಕು. ಸುತ್ತಲಿನ ನೆಲದ ನೂರಾರು ಸಸ್ಯಗಳು ಆರೋಗ್ಯದ ಅಡುಗೆ ಆಧಾರವಾಗಿ ಇವರ ಕಣ್ಣಿಗೆ ಢಾಳಾಗಿ ಕಾಣುತ್ತದೆ.ಬಟಾಟೆ, ಮೂಲಂಗಿ, ಟೊಮೆಟೋದ ಮಾಮೂಲಿ ತರಕಾರಿ ಬಳಕೆ ಎಲ್ಲಡೆಯಿದೆ. ಇವುಗಳ ವಿಪರೀತ ಬೇಡಿಕೆಗೆ ತಕ್ಕಂತೆ ಕೃಷಿ ಕ್ಷೇತ್ರಗಳಲ್ಲಿ ಇದೇ ಬೆಳೆಯ ಏಕತಾನತೆ ಕಾಣುತ್ತದೆ. ಬದನೆ, ಬೆಂಡೆ, ತೊಂಡೆ, ಹಾಗಲ, ಸವತೆ ಎಂದು ಅದೇ ಹತ್ತಿಪ್ಪತ್ತು ತರಕಾರಿಗಳನ್ನು ಹೊಟ್ಟೆ ತುಂಬಿಸುವ ಸರಕಾಗಿ ಕಂಡಿದ್ದೇವೆ.  ಇದನ್ನು ಬಳಸಿ ತಯಾರಿಸುವ ಸಾಂಬಾರು, ಗೊಜ್ಜು, ಚಟ್ನಿ, ಪಲ್ಯಗಳು ರಾರಾಜಿಸುತ್ತವೆ. ನಮ್ಮ ಅರಣ್ಯ ಜೀವನದಲ್ಲಿ ಸುತ್ತಲಿನ ನೂರಾರು ಸಸ್ಯಗಳ ತೊಗಟೆ, ಬೇರು, ಚಿಗುರು, ಹೂವು, ಕಾಯಿ, ಹಣ್ಣು, ಬೀಜಗಳು ಬಳಕೆಯಲ್ಲಿ ಬೆಳೆದು ಬಂದಿವೆ. ಸಸ್ಯಗಳ ಬಳಕೆ ವಿಶೇಷ ಗಮನಿಸಿದಾಗ ಇದು ವನವಾಸಿ ಬದುಕು ಕಲಿಸಿದ ಪಾಠ ಎಂಬುದು ಅರಿವಿಗೆ ಬರುತ್ತದೆ. ನಿರಂತರ ಒಡನಾಟದಲ್ಲಿ ಕಾಡು ಸಸ್ಯಗಳ ಪರಿಚಯ ಕ್ರಮೇಣ ಆಹಾರ, ಅರೋಗ್ಯದ ಸುಲಭ, ಸುಸ್ಥಿರ ಅಸ್ತ್ರವಾಗಿದೆ. ಉತ್ತರ ಕನ್ನಡದ ಶಿರಸಿಯ ನಮ್ಮ ಮನೆಯ ಸನಿಹದ ಕಾಡಲ್ಲಿ ಒಂದು ಕಾರ್ಯಕ್ರಮ ಸಂಘಟಿಸಿದ್ದೆ. ಅಡವಿ ಸಸ್ಯಗಳ ಮೂಲಕ ಅಡುಗೆ ಪಾಠ ಹೇಳುವುದು ಕಾರ್ಯಕ್ರಮದ ಮುಖ್ಯ ಉದ್ದೇಶ.  ಕೇರಳದ ಪಾಣಾಜೆ ವೈದ್ಯ ಮನೆತನದ ಮೂಲಿಕಾ ವೈದ್ಯ ವೆಂಕಟ್ರಾಮ ದೈತೋಟ ಹಾಗೂ ಅವರ ಪತ್ನಿ ಜಯಲಕ್ಷ್ಮಿ ದೈತೋಟ ಇಲ್ಲಿ ಅಡವಿ ಆಹಾರದ ಆರೋಗ್ಯ ಪಾಠ ಹೇಳಿದರು. ನೂರಾರು ಅಡುಗೆ ವಿವರಗಳ ವಿನಿಮಯ, ಸಸ್ಯ ಪರಿಚಯ ನಡೆಯಿತು.  ಪ್ರತಿ ದಿನದ ಪಾನೀಯ, ತಿಂಡಿ, ಊಟಗಳಲ್ಲಿ ಕೇವಲ ಅಡವಿ ಸಸ್ಯಗಳ ಬಳಕೆ ಮಾತ್ರ  ಆದ್ಯತೆ! ಬಿದಿರಕ್ಕಿ ಊಟ, ಮಸೆಸೊಪ್ಪಿನ ಪಾನಕ, ದಾಲ್ಚಿನ್ನಿ ಎಲೆಯ ಇಡ್ಲಿ, ಬಿಳಿ ಹಾಲವಾಣ ಚಕ್ಕೆ ಕಷಾಯ ಸೇರಿದಂತೆ ಒಟ್ಟೂ 60ಕ್ಕೂ ಹೆಚ್ಚು ಅಡುಗೆ ವಿಶೇಷಗಳು  ಸಿದ್ದಗೊಂಡವು. ಕೀಟನಾಶಕ ಸಿಂಪರಣೆಯಿಲ್ಲದೇ ಬೆಳೆದ ನೈಸರ್ಗಿಕ  ಉತ್ಪನ್ನಗಳ ಸೇವನೆ ಎಲ್ಲರಿಗೂ ಏನೋ ವಿಶೇಷ ಅನುಭವ! ಹಸಿ ಸೊಪ್ಪುಗಳು ಚಟ್ನಿ, ತಂಬುಳಿಗಳ ತಯಾರಿಗೆ ಬಂದವು. ಇವು ನಮ್ಮ ಆರೋಗ್ಯದ ಹಸಿರು ಮಾತ್ರೆಗಳೆಂಬುದು ಅರ್ಥವಾಯಿತು. ಯಾವ ಹಣ ಖರ್ಚು ಮಾಡದೇ ಮಲೆನಾಡಿನ ಅಡುಗೆಗೆ ರುಚಿ ಹೆಚ್ಚಿಸಿದ ಇವು ಲಾಗಾಯ್ತಿನಿಂದ ಆರೋಗ್ಯದ ಸೂತ್ರಗಳಾಗಿದ್ದವು. ನಮ್ಮ ಹಿರಿಯಜ್ಜಿಯರು ನಿತ್ಯ ಅಡುಗೆ ತಯಾರಿಗೆ ಯಾವತ್ತೂ ಪೇಟೆ ತರಕಾರಿ ನಂಬಿದವರಲ್ಲ. ಚೀಲ ಹಿಡಿದು ಮಾರುಕಟ್ಟೆಗೆ ಓಡಿದವರಲ್ಲ. ಮನೆಯ ಸುತ್ತಲಿನ ಸಸ್ಯಗಳ ಒಂದಿಲ್ಲೊಂದು ಭಾಗ ಸಂಗ್ರಹಿಸಿ ಅಡುಗೆಗಳಲ್ಲಿ ಬಳಸುವ ಪ್ರಾವೀಣ್ಯ ಅವರಿಗೆ ಸಿದ್ಧಿಸಿದೆ. ಆಹಾರ ಸ್ವಾವಲಂಬನೆಗಳಲ್ಲಿ ಈ ಕ್ರಮ ಅತ್ಯಂತ ಮಹತ್ವವಾದವು. ಇಂದು ನಾವು ಪೇಟೆಯಿಂದ ಹಣ ತೆತ್ತು ಖರೀದಿಸುವ ತರಕಾರಿಗಳಲ್ಲಿ ಹಲವು ಕೊಳಚೆ ನೀರಿನಲ್ಲಿ ಬೆಳೆದವು. ಬೆಂಗಳೂರಿನ ಉದಾಹರಣೆ ಗಮನಿಸಿದರೆ ಇಲ್ಲಿನ ವೃಷಭಾವತಿಯ ನೀರು ದೊಡ್ಡ ಪ್ರಮಾಣದಲ್ಲಿ ತರಕಾರಿ ಕೃಷಿಗೆ ಬಳಕೆಯಾಗುತ್ತದೆ. ಅಪಾಯಕಾರಿ ಮಾಲಿನ್ಯಯುಕ್ತ ನೀರಿನಲ್ಲಿ ಬೆಳೆದ ಬೆಳೆ ತನ್ನ ಸಸ್ಯ ಗುಣದಲ್ಲಿ ಒಂದಿಷ್ಟು ವಿಷಗಳನ್ನು ಸಹಜವಾಗಿ ಸೇರಿಸಿಕೊಳ್ಳುತ್ತದೆ. ಇನ್ನು ರೋಗ, ಕೀಟ ನಿಯಂತ್ರಣಕ್ಕೆ ಬಳಸುವ ಕೀಟನಾಶಕಗಳಂತೂ ನಮ್ಮನ್ನು ಅಡುಗೆ ಮನೆಯಿಂದ ನೇರ ಆಸ್ಪತ್ರೆಗೆ ಸಾಗಿಸುವ ತಾಕತ್ತು ಹೊಂದಿವೆ! ತರಕಾರಿಯನ್ನು ಕೃಷಿ ಮೂಲದಿಂದ ಪಡೆಯುವ ಪ್ರಮಾಣ ಹೆಚ್ಚಿದಂತೆ ಒಂದೇ ಜಾತಿಯ ಬೆಳೆ ಕ್ಷೇತ್ರ ವರ್ಷದಿಂದ ವರ್ಷಕ್ಕೆ ದ್ವಿಗುಣಗೊಳುತ್ತಿದೆ.ರೋಗನಿಯಂತ್ರಣಕ್ಕೆ ವಿಷ ಸಿಂಪಡಿಸುವ ವರ್ತುಲದಲ್ಲಿ ಕೃಷಿ ವಲಯ ನಿಂತಿದೆ. ಆಹಾರದಿಂದ ಆರೋಗ್ಯ ಎಂಬ ಅರಿವು ಮರೆತು ನಿತ್ಯ ಹೊಟ್ಟೆ ತುಂಬಿಸುವ ಕೆಲಸಕ್ಕೆ ನಾವು ಊಟ ಮಾಡುವಂತಾಗಿದೆ. ಬದುಕಿದ್ದಕ್ಕೆ ಏನೋ ತಿಂದು ಚರ್ಮದ ಚೀಲ ಭರ್ತಿ ಮಾಡುವ ಚಾಳಿ ನಮ್ಮದು. ಸಂತೆಗೆ ಹೋಗಿ ತರಕಾರಿ ಖರೀದಿಸುವ ಪರಿಪಾಠ ಜಾಸ್ತಿಯಾದಂತೆ ಆಸ್ಪತ್ರೆಗೆ ಹೋಗಿ ಮಾತ್ರೆ ಸೇವಿಸುವ ಪ್ರಮೇಯಗಳೂ ನಮಗರಿವಿಲ್ಲದಂತೆ ಹೆಚ್ಚಿವೆ. ನಮ್ಮ ಆಹಾರ ಪರಂಪರೆಯ ದಾರಿಯಲ್ಲಿ ಮಲೆನಾಡಿನ ಮಹಿಳೆಯರ ಅಡುಗೆಗೆ ಹುಡುಕುವ ಜ್ಞಾನ ಇಂದಿನ ಆಧುನಿಕ ಯುಗದಲ್ಲಿ ಕಲ್ಪಿಸಲೂ ಅಸಾಧ್ಯವಾಗಿ ಕಾಣುತ್ತಿದೆ. ಪೇಟೆ ತರಕಾರಿ ಖರೀದಿಸದೆ ಅಡವಿ ಆಹಾರದಲ್ಲಿ ಅಡುಗೆ ಸಾಧ್ಯತೆಯ ಮಹಾವಿದ್ಯೆಯಲ್ಲಿ ನುರಿತವರು ಈಗ ನೇಪಥ್ಯಕ್ಕೆ ಸರಿದಿದ್ದಾರೆ!  ಇನ್ನೊಂದೆಡೆ ಈಗ ಮಲೆನಾಡು ಬದಲಾಗಿದೆ. ಕೃಷಿ, ಕಾಡಿಗಿಂತ ಪೇಟೆ ತರಕಾರಿ ಹತ್ತಿರ ಎಂಬ ಸ್ಥಿತಿಯಿದೆ. ಸಾವಿರಾರು ಸಸ್ಯ  ವಿಶೇಷಗಳ ನೆಲೆ ಕಳೆದ ಮೂರು ದಶಕಗಳ ಈಚೆಗೆ ಏಕಜಾತಿ ಸಸ್ಯಗಳ ನೆಡುತೋಪಾಗಿ ರೂಪಾಂತರವಾಗಿದೆ. ಅನಾಯಾಸವಾಗಿ ಅಡುಗೆ ಮನೆ ಸೇರಿ ಇಲ್ಲಿನ ಅಡುಗೆಗೆ ಅನನ್ಯತೆ ತಂದ ಸಸ್ಯ ಸಂಕುಲಗಳು ಕ್ರಮೇಣ ಮಾಯವಾಗುತ್ತಿವೆ. ಸಸ್ಯ ನಾಶದ ಜತೆಗೆ ಇದನ್ನು ಅಡುಗೆಗೆ ಬಳಸಿಬಲ್ಲ ಜ್ಞಾನ ಕೂಡಾ ಕೈಜಾರುತ್ತಿದೆ. ಉರುವಲು, ಉದ್ಯಮ, ಮನೆ ನಿರ್ಮಾಣಗಳಿಗಾಗಿ ಅರಣ್ಯ ಬಳಕೆಯ ಒತ್ತಡ ಸಾಕಷ್ಟಿದೆ. ಈಗ ಪುನಃ ಪರಂಪರೆಯ ಪ್ರೀತಿಯೆಂದು ಅಡವಿ ಅಹಾರಕ್ಕೆ ಆದ್ಯತೆ ನೀಡಿದರೆ ನಮ್ಮ ಅಳಿದುಳಿದ ಅರಣ್ಯ ಉಳಿಸುವದು ಹೇಗೆ? ಎಂಬ ಸಹಜ ಪ್ರಶ್ನೆ ಏಳಬಹುದು. ನಮ್ಮ ನೆಲದ ಸಸ್ಯಗಳ ನಿಜವಾದ ಅರಿವು ನಮಗೆ ಇಂತಹ ಅಹಾರ ಬಳಕೆಯಿಂದ ದೊರಕಿದೆ.  ಕೃಷಿಯಲ್ಲಿ ಕಾಡು ಮೂಲದ ಸಸ್ಯಗಳು ಗೆದ್ದ ಉದಾಹರಣೆಯಿದೆ.  ನಮ್ಮ ಅಡವಿ ಅಹಾರ ಬಳಕೆಯ ಪ್ರೀತಿಯಲ್ಲಿ ನೆಲದ ನೈಸರ್ಗಿಕ ಕಾಡಿನ ಸಂರಕ್ಷಣೆಯ ಸತ್ವವಿದೆ. ನಮಗೆ ಬೇಕಾದುದನ್ನು ಉಳಿಸಿ ಬೆಳೆಸಿಕೊಳ್ಳಬೇಕು ಎಂಬ ಅರಿವು ಕೃಷಿ ಭೂಮಿಯಲ್ಲಿ ಗಿಡ ಬೆಳೆಸುವ ಸಾಧ್ಯತೆಯಾಗುತ್ತದೆ. ಇಂದು ಮುರುಗಲು, ಉಪ್ಪಾಗೆ, ರಾಮಪತ್ರೆ, ಕಾಳು ಮೆಣಸು, ಮಾಡಹಾಗಲು, ದಾಲ್ಚಿನ್ನಿ ಹೀಗೆ ಹಲವು ಸಸ್ಯಗಳು ಕೃಷಿ ಸಾಧ್ಯತೆ ತೋರಿಸಿವೆ. ಇನ್ನೂ ಹಲವು ಸಸ್ಯ ಬೆಳೆಸಿ ಬಳಸಲು ಅವಕಾಶವಿರುವಾಗ ಜನಸಾಮಾನ್ಯರ ಅಕ್ಕರೆಯ ಗಿಡ ಗುರುತಿಸಿ  ಬೆಳೆಸುವ ಕಾರ್ಯ ಜರೂರಿದೆ. ಇಂದು ಹಳ್ಳಿಗಾಡಿನ ಕೆಲವೇ ಕೆಲವು ಮನೆಗಳಲ್ಲಿ ಬಳಕೆಯಲ್ಲಿರುವ ಸಸ್ಯಗಳು ಸುತ್ತಲಿನ ಪ್ರದೇಶದಲ್ಲಿ ಜನಪ್ರಿಯತೆ ಪಡೆದಾಗ ಅದನ್ನು ಬೆಳೆಸುವದಕ್ಕೂ ಚಾಲನೆ ದೊರೆಯಬೇಕು. ಆಗ ನಮ್ಮ ಹಾಗೂ ಕಾಡಿನ ಆರೋಗ್ಯ ವೃದ್ಧಿಯಾಗುತ್ತದೆ.  ಕೃಷಿಗೆ ನೆರೆಯ ಕಾಡು ಮೂಲದಿಂದ ಹೊಸ ಬೆಳೆ ನೀಡುವ ಸಾಧ್ಯತೆ ಪರಿಸರ ಸ್ನೇಹಿ ಕೃಷಿಯ ಅತ್ಯುತ್ತಮ ಉದಾಹರಣೆಯಾಗುತ್ತದೆ.  ಇಂದು ಯಾವುದೋ ಪ್ರದೇಶದ ಸಸ್ಯ ತಂದು ದುಬಾರಿ ವೆಚ್ಚದಲ್ಲಿ ಕೃಷಿ ಮಾಡುವ ಸರ್ಕಸ್‌ಗೆ ಬದಲು ಸುಲಭದ ಕಾಡು ಗಿಡಗಳ ಕೃಷಿಯಲ್ಲಿ  ಮಾರುಕಟ್ಟೆ ಸಾಧ್ಯತೆ ಹುಡುಕುವುದು ನಮ್ಮ ಭವಿಷ್ಯದ ಹೆಜ್ಜೆಯಾಗಬೇಕಿದೆ. ಹಳ್ಳಿಗಾಡಿನ ಗಿಡ ಬಳಕೆಯ ಜ್ಞಾನದಲ್ಲಿ ಕೃಷಿ ವಿಜ್ಞಾನ ಕಲಿಯುವುದು ಸಾಕಷ್ಟಿದೆ.
ಮಲೆನಾಡಿಗೆ ತದ್ರೂಪಿ ಕಾಡು ಏಕೆ ?
ಇಂದು ಮಲೆನಾಡು ನೋಡಬೇಕು. ಕೃಷಿಕರು ಅಡಿಕೆ ಬೆಳೆಯುತ್ತಾರೆ, ಅರಣ್ಯ ಇಲಾಖೆ ಅಕೇಸಿಯಾ ಬೆಳೆಯುತ್ತಿದೆ ಎನ್ನುವ ಹಂತ ತಲುಪಿದೆ. ಸಸ್ಯ ವೈವಿಧ್ಯವೇ ವಿಶೇಷವಾದ ಪ್ರದೇಶ ಮಳೆಕಾಡನ್ನು ಕಳೆದುಕೊಂಡಿದೆ.  ಆದರೆ ಇಲ್ಲಿನ ಜನಜೀವನ ಕಾಡಿನ ಮಹತ್ವ ಮನಗಂಡಿದೆ. ಕಾಡು ಕೃಷಿ ಭೂಮಿ ಪರಸ್ಪರ ತೀರ ಹತ್ತಿರದಲ್ಲಿವೆ. ಅರಣ್ಯನಾಶ ಹೆಚ್ಚಿದ ಕಳೆದ ಎರಡು ದಶಕಗಳ ಈಚೆಗೆ ಕೃಷಿ ಸಮಸ್ಯೆಗಳೂ ಉಲ್ಬಣಗೊಂಡಿವೆ. ಮರ ಬೆಳೆಯುವ ಮಲೆನಾಡು ಪ್ರಕೃತಿಯ ವರ, ಇದೀಗ ಮರಳುಗಾಡು ಆಗುವ ಹಂತ ತಲುಪಿದೆ. ಬಳಕೆಯ ಒತ್ತಡ ನಿಯಂತ್ರಣವಾಗಬೇಕು. ದಿನಂಪ್ರತಿ ವನ್ಯಜೀವಿ ಹಾಗೂ ಮಾನವ ಸಂಘರ್ಷ ನಡೆದಿದೆ. ಬೇಸಿಗೆಯ ತಾಪಮಾನ ಬಯಲುಸೀಮೆ ನೆನಪಿಸುತ್ತಿದೆ. ಮರ ಬೆಳೆಸುವ ಕೆಲಸ  ಕೇವಲ ಅರಣ್ಯ ಭೂಮಿಯಲ್ಲಿ ಮಾತ್ರ ನಡೆದರೆ ಸಾಲದು, ಅದು ತೋಟಗಾರಿಕೆಯಲ್ಲೂ ನಡೆಯಬೇಕು. ಅನಲಾಗ್ ಎಂಬ ಈ ಕಾಡು ತೋಟ ಖಾಸಗಿ ತೋಟ ಜನಜೀವನ, ಕೃಷಿ, ಪರಿಸರ ಸಂರಕ್ಷಣೆಯ  ಒಂದು ವಿಕೇಂದ್ರೀಕೃತ ದಾರಿ, ಕಾಡಿನಿಂದ ಹೊರಕ್ಕೆ ಕಾಡು ಪೋಷಿಸುವ ಕ್ರಮ.  ಇದೇನು ಹೊಸ ಮಾದರಿಯಲ್ಲ, ಮಲೆನಾಡಗರ ಮರ ಬೆಳೆಸುವ ಜ್ಞಾನವನ್ನೇ ಅವಲಂಬಿಸಿದ ಹಸಿರೀಕರಣದ ಹೆಜ್ಜೆ. ಕಾಡಿಗೂ ಹತ್ತಿರದ ನಮ್ಮ ತೋಟಕ್ಕೂ ಜೀವದಾರಿ (Physical Corridar)ಯಿದೆ.  ರಾಷ್ಟ್ರೀಯ ಉದ್ಯಾನ, ಅಭಯಾರಣ್ಯ ಸೇರಿದಂತೆ ಕಾಡಿನ ಪಕ್ಕ ಕೃಷಿಯಿರುವ ಎಲ್ಲೆಡೆ ಇದನ್ನು ಗುರುತಿಸಬಹುದು. ಹಗಲು ರಾತ್ರಿ ಇಲ್ಲಿ ಸಂಚರಿಸುವಹಾವು, ಕಪ್ಪೆ, ಪಕ್ಷಿ, ಪ್ರಾಣಿ, ಜೇನುಗಳಿವೆ.  ಪರಾಗಸ್ಪರ್ಶ, ಫಲವತ್ತಾದ ಹಿಕ್ಕೆ ವಿಸರ್ಜನೆ, ಬೀಜ ಬಿತ್ತನೆ ಕಾರ್ಯಕ್ಕೆ ಜೀವ ಲೋಕದ ನೆರವಿದೆ.  ನಮ್ಮ ನೆಲದ ಕಾಡಿನ (Indigenous forest) ಆವಾಸಿಗಳಾದ ಇವು ಇಡೀ ಪರಿಸರದ ಅಮೂಲ್ಯ ಅವಿಭಾಜ್ಯ ಅಂಶಗಳು.  ಕಾಡು ತೋಟ ಮಾದರಿ ಸ್ಥಳೀಯ ಕಾಡಿಗೂ, ತೋಟಕ್ಕೂ ಸಾಮ್ಯತೆಯ ಸಂಬಂಧ ಕಲ್ಪಿಸುವ ಪರಿಸರಸ್ನೇಹಿ ಕ್ರಮವಾಗಿದೆ. ಮಲೆನಾಡಿನಲ್ಲಿ ಕಾಡು ನೋಡಿ ಕೃಷಿ ಮಾಡುವ ಪರಿಪಾಠ ಪರಂಪರೆಯಿಂದ ಬೆಳೆದಿದೆ. ವಿವಿಧ ಹಂತದ ಸಸಿ ಬೆಳೆಯುವದನ್ನು ಇಲ್ಲಿನ ಅಡಿಕೆ ತೋಟ, ಕರಾವಳಿ ಕೈತೋಟಗಳಲ್ಲಿ ಗುರುತಿಸಬಹುದು. ಔಷಧ ಸಸ್ಯಗಳನ್ನು ತೋಟಗಳಲ್ಲಿ ಪೋಷಿಸುವ ಅವಕಾಶವಿದೆ. ನೆರಳಿನಲ್ಲಿ ಬೆಳೆಯುವ ಗಿಡ, ಗಡ್ಡೆಗೆಣಸು, ಬಳ್ಳಿ ಕೃಷಿ ಜ್ಞಾನವಿದೆ.  ಮರ ಆದರಿತ ತರಕಾರಿಗಳಾದ ಅಮಟೆ, ನುಗ್ಗೆ, ಹಲಸು, ಬೇರು ಹಲಸು, ಬಿಂಬಳೆ, ಜಾಯಿಕಾಯಿ ಮುಂತಾದ 100ಕ್ಕೂ ಹೆಚ್ಚು ಸಸ್ಯಗಳು ಅಡಿಕೆ, ತೆಂಗು, ಕಾಫಿ ಮುಂತಾದ ತೋಟಗಳಲ್ಲಿವೆ. ಇಂತಹ ಅಮೂಲ್ಯ ಕೃಷಿ ಜ್ಞಾನ ಇಡೀ ಜಗತ್ತಿನಲ್ಲೇ ವಿಶೇಷವಾಗಿದೆ. ಇವುಗಳನ್ನು ಬಳಸಿ ತಯಾರಿಸುವ  ಅಡುಗೆಗಳಂತೂ ನೆಲದ ಅನನ್ಯ ಮಾದರಿಯಾಗಿದೆ. ಮಹಿಳೆಯರ ಮಹಾ ಜ್ಞಾನವಾಗಿದೆ. ಮಲೆನಾಡಿನ ಭೂವಿನ್ಯಾಸ ಲಾಗಾಯ್ತಿನಿಂದಲೂ ಇಲ್ಲಿನ ಮಳೆಗೆ ಪೂರಕವಾಗಿದೆ. ಕಡಿದಾದ ಕಣಿವೆಯಲ್ಲಿನ ಸಸ್ಯದಟ್ಟನೆಯಿಂದ ಫಲವತ್ತಾದ ಮಣ್ಣುಕೊಚ್ಚಿ ಹೋಗದಂತೆ ನಿಸರ್ಗ ಹಸುರು ತಡೆ ರೂಪಿಸಿದ್ದು ನೋಡುತ್ತೇವೆ. ಕಣಿವೆಯಲ್ಲಿ ಶೇಕಡಾ 70-80ರಷ್ಟು ಅರಣ್ಯ ದಟ್ಟನೆ ಇರಬೇಕು. ನೆಲ ಹಂತದ ಹುಲ್ಲಿನಿಂದ ಆರಂಭಿಸಿ ಬಳ್ಳಿ, ಪೊದೆ, ಗಿಡ, ಮರಗಳಿಂದ ಕಾಡು ತುಂಬಿರಬೇಕು. ಕಾಡಿನ ದಟ್ಟನೆ ಮಾತ್ರ ಇಲ್ಲಿನ ನೆಲ, ಜಲ ಸಂರಕ್ಷಣೆಯ ಪರಿಣಾಮಕಾರಿ ಕ್ರಮವಾಗುತ್ತದೆ. ಇದರಿಂದ ಪರಿಸರ ಸಮತೋಲನ ಸಾಧ್ಯ. ಆದರೆ ಈಗ ಜನಸಂಖ್ಯೆ ತೀವ್ರ ಹೆಚ್ಚಿದೆ. ಕೃಷಿ ನೆಲೆಗಳು ಬೆಳೆದಿವೆ. ಅತಿಕ್ರಮಣ ಸಮಸ್ಯೆಯಿದೆ.  ಕೃಷಿ ಅಗತ್ಯಗಳಿಗೆ ಪಕ್ಕದ ಕಾಡಿಗೆ ಹೋಗುವ ಬದಲು ಇಂತಹ ಕೃಷಿ ನೆಲೆಯಲ್ಲಿ ಮರ ವೈವಿಧ್ಯ ಪೋಷಣೆ ತುರ್ತು ಅಗತ್ಯವಾಗಿದೆ. ಕೃಷಿ ಸುಸ್ಥಿರತೆಯ ದಾರಿಯಾಗಿದೆ.ಘಟ್ಟದಲ್ಲಿ ಹಳ್ಳಿ ಹಳ್ಳಿಗೆ ರಸ್ತೆ, ವಿದ್ಯುತ್, ನಿವೇಶನ ಮುಂತಾದ ಮೂಲಭೂತ ಅಗತ್ಯ ಕಲ್ಪಿಸುವ ಕೆಲಸಕ್ಕೆ ಅನಿವಾರ್ಯವಾಗಿ ಕಾಡನ್ನೇ ಬಳಸಿದ್ದೇವೆ. ನಮ್ಮ ನಾಲ್ಕು ಎಕರೆ ಭೂಮಿಗೆ ತಲುಪುವ ರಸ್ತೆ, ವಿದ್ಯತ್ ತಂತಿ ಮಾರ್ಗಗಳು ಸುಮಾರು 40 ಎಕರೆ ಕಾಡು ಬಳಸಿವೆ! ಕಾಡಿನ ಛಿದ್ರೀಕರಣಕ್ಕೆ ಕಾರಣವಾಗಿವೆ. ವ್ಯಾವಹಾರಿಕವಾಗಿ ನಾವು ನಮ್ಮ ತೋಟದ ಯಜಮಾನರಾದರೂ ನಮ್ಮ ಇಡೀ ಕಣಿವೆ ಪರಿಸರ ಅರ್ಥಮಾಡಿಕೊಳ್ಳಬೇಕು. ಪ್ರತಿ ಹೆಜ್ಜೆಯಲ್ಲಿ ನಮಗೆ ಕಾಡಿನ ಸಹಕಾರ ಬೇಕು. ನಮಗೆ ಒಳ್ಳೆಯ ಗಾಳಿ, ನೀರು, ನೆರಳು, ಫಲವತ್ತಾದ ಮಣ್ಣು, ಕೃಷಿ ಬೆಳೆಯ ಪರಾಗಸ್ಪರ್ಶ, ಜಾನುವಾರು ಮೇವು, ಔಷದಿ,  ಆಹಾರ ಮೂಲಗಳಿಗೂ ಕಾಡು ಅತ್ಯಗತ್ಯ ಎಂಬುದು ತಿಳಿದಿದೆ. ನಾವು ಈ ಪ್ರಕೃತಿ ನಡುವೆ ಸದ್ಯದ ನಿವಾಸಿಗಳೇ ಹೊರತೂ  ಕಾಯಂ ವಾಸಿಗಳಲ್ಲ. ಕಾಡಿನ ಆವಾಸಿಗಳಾದ ವನ್ಯಜೀವಿಗಳ ನೆಲೆ ಉಳಿಸುವದು ನಮ್ಮ ಆದ್ಯ ಕೆಲಸ. ಕಾಡು ತೋಟ ಇಂತಹ ಅನನ್ಯ  ನಿಸರ್ಗ ಸಂಧಾನ.ತರಗೆಲೆ, ಕಸಕಡ್ಡಿ, ಒಣಟೊಂಗೆ, ಮರದ ತೊಗಟೆ ಹೀಗೆ ಮರ ಬೆಳೆಯುತ್ತಲೇ ನಿರಂತರವಾಗಿ ಭೂಮಿಗೆ ಸಾವಯವ ವಸ್ತು ಪೂರೈಕೆ ಚಕ್ರ ಆರಂಭವಾಗುತ್ತದೆ.  ಕೃಷಿ ಗೊಬ್ಬರವೆಂದು ನೂರಾರು ಹೊರೆ ಹಸುರು ಸೊಪ್ಪನ್ನು ಕಾಡಿನಲ್ಲಿ ಕಡಿಯುವದು, ತರಗೆಲೆ ಬಾಚಿ ತರುವದು, ಹುಲ್ಲು ಕಡಿಯುವದು ಹೀಗೆ ಹಲವು ಕಾರ್ಯಗಳನ್ನು ಲಾಗಾಯ್ತಿನಿಂದ ಸುತ್ತಲಿನ ಸೊಪ್ಪಿನ ಬೆಟ್ಟ, ಗೋಮಾಳ, ನದಿದಂಡೆ, ರಕ್ಷಿತ ಕಾಡುಗಳಲ್ಲಿ ನಡೆಸಿದ್ದೇವೆ. ಈಗ ಕಾಡಿನ ಕೊರತೆ, ಕೂಲಿ ಸಮಸ್ಯೆ ಮಲೆನಾಡನ್ನು ಕಾಡುತ್ತಿದೆ. ಬೆಳೆ, ಬೆಲೆ ಕುಸಿತ ಕೃಷಿಕರನ್ನು ಕಂಗೆಡೆಸಿದೆ. ಕೃಷಿ ನಿರ್ವಹಣೆಯಲ್ಲಿ ಕೂಲಿ ಅಗತ್ಯಗಳನ್ನು ಕಡಿಮೆಗೊಳಿಸುವದು ಜಾಣತನ. ಮರಗಿಡ ಬೆಳೆಸಿ ತೋಟದ ಮಣ್ಣಿನ ಸತ್ವ ಹೆಚ್ಚಿಸುವ ಮೂಲಕ ಇದನ್ನು ನಿರ್ವಹಿಸಬಹುದು.ನಮ್ಮ ಕಾಡುಗಳಲ್ಲಿ ಪರಿಸರಕ್ಕೆ ಸ್ಪಂದಿಸಿ ಶೀಘ್ರ ಬೆಳೆಯುವ ಸಸ್ಯಗಳಿವೆ. ಹೆಬ್ಬೇವು, ಬನಾಟೆ, ಚಂದಕಲು, ಬೇಲಿ ಸಂಪಿಗೆ, ಸಾಲುಧೂಪ, ಬಿದಿರು, ದೂಳೆಲೆ ಹೀಗೆ ಪಟ್ಟಿಮಾಡಬಹುದು. ಇವು ಬೆಳೆದ ನೆಲಕ್ಕೆ  ಸತ್ವಾಂಶಗಳನ್ನು ನೀಡುತ್ತವೆ. ಇವುಗಳ ಎಲೆ ನೆಲಕ್ಕುದುರುತ್ತಿದ್ದಂತೆ ಸೂಕ್ಷ್ಮಾಣು ಚಟುವಟಿಕೆಗೆ ಹೊಸ ಶಕ್ತಿಸಾಧ್ಯ. ಆರ್ಥಿಕವಾಗಿಯೂ  ನೆರವಾಗಬಲ್ಲ ತೇಗ, ಗಾಳಿ, ಸಿಲ್ವರ್ ಓಕ್ ಮುಂತಾದವನ್ನೂ ಈ ಪಟ್ಟಿಯಲ್ಲಿ ಗುರುತಿಸಬಹುದು. ಇವುಗಳನ್ನು ಬೆಳೆಯುವ ಕ್ರಮ ಈಗಾಗಲೇ ಕೃಷಿಕರಿಗಿದೆ.ರಾಮಪತ್ರೆ, ಅಪ್ಪೆಮಿಡಿ, ಉಪ್ಪಾಗೆ, ಮುರುಗಲು, ಹಲಸು, ಹೆಬ್ಬಲಸು, ದಾಲ್ಚಿನ್ನಿ, ಕಾಳು ಮೆಣಸು, ವಾಟೆಕಾಯಿ, ನೆಲ್ಲಿ, ಎಕನಾಯಕ, ನೋನಿ, ಹೇತಾರಿ, ಗುಳಮಾವು, ತೇಗ, ಸುರಗಿ, ಬೆತ್ತ, ವಾಟೆ ಬಿದಿರು, ಬೈನೆ, ಶ್ರೀತಾಳೆ ಮುಂತಾದ ಹಲವು ಮಹತ್ವದ ಸಸ್ಯಗಳು ಮಲೆನಾಡಿನಲ್ಲಿವೆ. ಇವುಗಳ ಬಳಕೆ ಜ್ಞಾನ ಇಲ್ಲಿನ ಜನಪದರಲ್ಲಿವೆ. ನೈಸರ್ಗಿಕ ಬಣ್ಣಕ್ಕೆ ಬೇಡಿಕೆಯಿದೆ. ನೀಲಿಗಿಡ, ಅರಿಶಿನಬಳ್ಳಿ ಸೇರಿದಂತೆ ಬಣ್ಣದ ಉದ್ಯಮಕ್ಕೆ ನೆರವಾಗುವ ಸಸ್ಯ ಜಾತಿಗಳು ಧಾರಾಳವಾಗಿವೆ. ಮರಗಳನ್ನು ಸುಲಭದಲ್ಲಿ ಬೆಳೆಯುವ ಅವಕಾಶವಿದೆ. ನೂರಾರು ವರ್ಷ ಬಾಳಬಹುದಾದ ಮರಗಳು ಭೂಮಿಯ ಜೀವಂತ ಮಣ್ಣಿನ ಮುಖ್ಯ ಸೆಲೆಯಾಗಿವೆ, ಗೊಬ್ಬರ ಉತ್ಪಾದನೆಯ ಸ್ವಯಂಚಾಲಿತ ಯಂತ್ರವಾಗಿವೆ.ಸ್ಥಳೀಯ ಸಸ್ಯ ಕಣ್ಮರೆ ವಿದೇಶಿ ಸಸ್ಯ ಆಗಮನಕ್ಕೆ ಪ್ರೇರಣೆಯಾಗಿದೆ. ನೈಸರ್ಗಿಕ ಕಾಡಿನ ಜತೆಗೆ ಬೆಳೆದ ಜೀವ ಸಂಕುಲಗಳಿಗೂ, ಅಲ್ಲಿನ ಕಾಡಿಗೂ ಕೋಟ್ಯಾಂತರ ವರ್ಷಗಳ ಜೀವ ಸಂಬಂಧವಿದೆ.  ಒಂದು ವಲಯದ ಸಸ್ಯವೇ ವಿದೇಶಿಮಯವಾದರೆ ಅದು ಅಲ್ಲಿನ ಪಕ್ಷಿ, ಕೀಟಗಳ ಜೀವಲೋಕದ ಮೇಲೆ ಪ್ರಭಾವ ಬೀರುತ್ತದೆ. ಕೃಷಿ ಬೆಳೆಗೂ ವಿಪರೀತ ಕೀಟನಾಶಕ ಪರಿಣಾಮ ಪುಟ್ಟ ಜೇನು ಕಣ್ಮರೆಯಾದರೆ ಕೃಷಿ ಉತ್ಪಾದನೆಯಲ್ಲಿ ವ್ಯತಿರಿಕ್ತ ಪರಿಣಾಮವಾಗುತ್ತದೆ. ನಮ್ಮ ಒಂದು ಎಕರೆ ತೋಟದಲ್ಲಿ ವಿವಿಧ ಉಪಯೋಗಕ್ಕೆ ಹೆಚ್ಚು  ಹೆಚ್ಚು ಸಸ್ಯ ಇರಬೇಕು. ಅಲ್ಲಿ ದೊಡ್ಡ ಮರದಿಂದ ನೆಲಹಂತದವರೆಗೂ ಸಸ್ಯಗಳೂ ಬೇಕು. ತೋಟದ ಮುಖ್ಯ ಬೆಳೆಯಾಗಿ ಈಗಾಗಲೇ ಅಡಿಕೆ, ತೆಂಗು, ರಬ್ಬರ್, ಕಾಫಿ, ಮಾವು, ಗೇರು, ಚಿಕ್ಕು ಬೆಳೆಯಿದೆ. ಈ ಹಳೆಯ ತೋಟ ಹಾಗೂ ಹೊಸ ತೋಟ ನಿರ್ಮಾಣ ಸಂದರ್ಭದಲ್ಲಿ ಯಾವ ಯಾವ ಸಸ್ಯ ಏಲ್ಲಿ ಬೆಳೆಸಬಹುದು ಎಂದು ಯೋಜಿಸಬಹುದು.ಕಾಡನ್ನು ನಾಟಾ ಹೊರತಾಗಿಯೂ ಅದರ ಮಹತ್ವ ಗುರುತಿಸುವದು ನಮಗೆ ತಿಳಿದಿದೆ. ಭೂತನಕಾನು, ದೇವರಕಾಡು, ನಾಗರಬನ ಎಂದು  ಪವಿತ್ರ ಭಾವನೆಯಿಂದ ನೆಲದ ಕಾಡು ಉಳಿಸುವ ಕೆಲಸ ನಡೆದಿದೆ. ಒಂದು ಕಾಲದಲ್ಲಿ ಅರಣ್ಯದಲ್ಲಿದ್ದ ಸಸ್ಯಗಳು ಇಂತಹ ನೆಲೆಗಳಲ್ಲಿ ಮಾತ್ರ ಉಳಿದುಕೊಂಡಿದೆ.ಕೀಟನಾಶಕ, ರಾಸಾಯಕ ಸಿಂಪರಣೆಯಿಲ್ಲದೇ ಇಲ್ಲಿ ಬೆಳೆಯಬಹುದಾದ ಹಣ್ಣು ಹಂಪಲು, ಅಂಟು, ಔಷಧ, ಸಾಂಬಾರವಸ್ತು, ಹೂವು, ನಾಟಾ ಮುಂತಾದ ಉತ್ಪನ್ನಗಳು ನಿರಂತರ ಆಧಾಯ ನೀಡುತ್ತವೆ. ಇಂದು ಸಾವಯವ ಮಾರುಕಟ್ಟೆ ವಿಸ್ತರಣೆಯಾಗುತ್ತಿದೆ. ಆಹಾರದಿಂದ ಆರೋಗ್ಯ ಕಲ್ಪನೆ ಅರಿವಾಗಿದೆ. ಅನಲಾಗ್ ಮಾದರಿ ತೋಟ ಸಾವಯವ ಕೃಷಿಯ ಸುಸ್ಥಿರ ಮಾರ್ಗವಾಗುತ್ತದೆ.
ತದ್ರೂಪಿ ಕಾಡು ಮಾದರಿ ಹೋಲುವ ಕರ್ನಾಟಕದ ತೋಟಗಳುಎ.ಪಿ. ಚಂದ್ರಶೇಖರಇಂದ್ರಪ್ರಸ್ಥ ಜೀವಧಾರಕ ಸಸ್ಯಕೂಟ, ಕಳಲವಾಡಿ ಗ್ರಾಮ, ಉದ್ಬೂರು ಅಂಚೆ, ಮೈಸೂರು-8           ಫೋನ್: 0821- 2597936, 94488 88633
ಬಸವರಾಜು/ ಎಂ.ಕೆ.ರೇಣುಕಾರ್ಯ      ಭದ್ರಾ ಫಾರ್ಮ್, ಮೆಳ್ಳೆಕಟ್ಟೆ, ಅಣಜಿ ಅಂಚೆ, ದಾವಣಗೆರೆ ಜಿಲ್ಲೆ ಫೋನ್: 08192- 221947/ 94483 23796
ನಂದೀಶ ಬಿ.ಎನ್ ಚುರ್ಚಿಗುಂಡಿ- 577 214, ಶಿಕಾರಿಪುರ ತಾಲ್ಲೂಕು,ಶಿವಮೊಗ್ಗ ಜಿಲ್ಲೆ ಫೋನ್: 08187-743212, 98455 53078
ಕೈಲಾಸಮೂರ್ತಿ ದೊಡ್ಡ ಇಂದುವಾಡಿ, ಕೊಳ್ಳೇಗಾಲ ತಾಲ್ಲೂಕು, ಚಾಮರಾಜನಗರ ಜಿಲ್ಲೆ  ಫೋನ್: 9880185757
ಸಂಜೀವ್ ಕುಲಕರ್ಣಿ              ದಡ್ಡಿ ಕಮಲಾಪುರ, ಗೋವಾ ರಸ್ತೆ, ಧಾರವಾಡ ಫೋನ್:9448143100
ಡಾ. ಎಲ್. ಸಿ. ಸೋನ್ಸ್                      ಮೂಡಬಿದ್ರೆ, ದಕ್ಷಿಣ ಕನ್ನಡ ಫೋನ್: 08258 236261
ತಿಂಬಕ್ಟು                                   ಚಿನ್ನಕೊತ್ತಪಲ್ಲಿ, ಪೆನಗೊಂಡ ತಾಲ್ಲೂಕು, ಆಂಧ್ರ ಪ್ರದೇಶ
ನರ್ಸರಿ ಗಿಡ ಮತ್ತು ಕಾಡು ಬೀಜಗಳಿಗಾಗಿ                    ರೆಯೇಶ ಶಿವನಾಪುರ                           ದೇವನಹಳ್ಳಿ, ಬೆಂಗಳೂರು ಗ್ರಾಮಾಂತರ, ಫೋನ್: 98455 29324
ಬೈಫ್ ಗ್ರಾಮೀಣಾಭಿವೃದ್ಧಿ ಸಂಸ್ಥೆ            ಶಾರದನಗರ, ತಿಪಟೂರು ಫೋನ್: 08134- 251337
ತದ್ರೂಪಿ ಕಾಡಿನ ಹಚ್ಚಿನ ಮಾಹಿತಿಗಾಗಿAnalog Forestry Training Centre and Botanic Gardens, Mirahawatta
Established by RRI chairman and Analog Forestry progenitor Dr. Ranil Senanayake in 1983, this 15 acre property of once degraded land is now, due to the application of Analog Forestry, covered by a highly productive and diverse forest ecosystem. The site also contains soil conservation and land management trial plots, hundreds of rare plant species and even rare fauna including the hog deer and jungle fowl. Through this centre, RRI seeks to develop models for ecological restoration that can be applied throughout the country and beyond. The centre is currently open to tourists, researchers, and students interested in sustainable agriculture and forest restoration.

RRI37C WAKUNUGODA ROADGALLE, SRI LANKAPh: +94 91 2232585Ranil Senanayake <r_senanayake@yahoo.com>Charith Senanayake <charith@earthrestoration.org
International Analog Forestry NetworkMilo W. Bekins Faries, ChairpersonInternational Analog Forestry NetworkApartado postal 75,Quepos, 6350, Costa Ricainfo@analogforestrynetwork.orgmwbekins@racsa.co.cr
Websiteswww.analogforestrynetwork.orgwww.forestgardencertification.comwww.earthrestoration.org