ಘಟನೆಗಳು:

ಪ್ರಥಮ ಆಂಗ್ಲೋ-ಸಿಖ್ ಯುದ್ಧವಾದ ಸೋಬ್ರಾನ್ ಕದನದಲ್ಲಿ ಬ್ರಿಟಿಷ್ ಪಡೆ ಸಿಖ್ಖರಿಗೆ ಸೋಲುಣಿಸಿತು.
ಅಮೆರಿಕದಲ್ಲಿ ವರ್ಲ್ಡ್ಸ್ ವುಮೆನ್ ಕ್ರಿಶ್ಚಿಯನ್ ಅಸೋಸಿಯೇಶನ್ ಪ್ರಾರಂಭಗೊಂಡಿತು.
ನವದೆಹಲಿಯಲ್ಲಿ ‘ಇಂಡಿಯಾ ಗೇಟ್’ಗೆ ಕನ್ನಾಟನ್ ಡ್ಯೂಕ್ ಅವರು ಶಂಕುಸ್ಥಾಪನೆ ಮಾಡಿದರು.
ಅಮೆರಿಕದ ಟೆಕ್ಸಾಸ್ ಬಳಿಯ ಲುಬ್ಬಾಕ್ ಎಂಬಲ್ಲಿ ಟೆಕ್ಸಾಸ್ ತಂತ್ರಜ್ಞಾನ ವಿಶ್ವವಿದ್ಯಾಲಯವು ಟೆಕ್ಸಾಸ್ ಟೆಕ್ನಲಾಜಿಕಲ್ ಕಾಲೇಜ್ ಎಂಬ ಹೆಸರಿನಿಂದ ಆರಂಭಗೊಂಡಿತು.
ಜೆ. ಆರ್. ಡಿ. ಟಾಟಾ ಅವರಿಗೆ ‘ಪೈಲೆಟ್ ನಂಬರ್ ಒನ್’ ಗೌರವವನ್ನು ನೀಡಲಾಯಿತು. ಭಾರತ ಮತ್ತು ಬರ್ಮಾದ ಏರೋಕ್ಲಬ್ ಪರವಾಗಿ ಸರ್ ವಿಕ್ಟರ್ ಸಸೂನ್ ಸಹಿ ಮಾಡಿದ ಈ ದಾಖಲೆಯನ್ನು ಫೆಡರೇಷನ್ ಏರೋನಾಟಿಕ್ ಇಂಟರ್ ನ್ಯಾಷನಲ್ ನೀಡಿತು. ಜೆ. ಆರ್. ಡಿ. ಟಾಟಾ ಅವರ ಸಹೋದರಿ ಸ್ಲಿಲಾ (ಮುಂದೆ ಲೇಡಿ ದಿನ್ಶಾ ಪೆಟಿಟ್) ಅವರೂ ಭಾರತದಲ್ಲಿ ವಿಮಾನಯಾನದ ಲೈಸೆನ್ಸ್ ಪಡೆದ ಮೊತ್ತ ಮೊದಲ ಮಹಿಳೆಯಾಗಿದ್ದಾರೆ. ಅವರ ಕಿರಿಯ ಸಹೋದರಿ ರೋಡಾಬೆಹ್ ಸಾಹನಿ ಭಾರತದಲ್ಲಿ ವಿಮಾನಯಾನ ಲೈಸೆನ್ಸ್ ಪಡೆದ ಎರಡನೇ ಮಹಿಳೆಯಾಗಿದ್ದಾರೆ.
ಸಂಗೀತ ಕ್ಷೇತ್ರದಲ್ಲಿ ಮೊದಲ ‘ಗೋಲ್ಡ್ ರೆಕಾರ್ಡ್’ ಅಥವಾ ‘ಗೋಲ್ಡ್ ಡಿಸ್ಕ್’ ಅನ್ನು ‘ಚಟ್ಟನೂಗ ಛೂ ಛೂ’ಗಾಗಿ ಗ್ಲೆನ್ ಮಿಲ್ಲರ್ ಅವರಿಗೆ ನೀಡಲಾಯಿತು
ವಿಜಯ್ ಹಜಾರೆ ನೇತೃತ್ವದ ಭಾರತೀಯ ಕ್ರಿಕೆಟ್ ತಂಡ ಮದ್ರಾಸಿನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ, 8 ರನ್ನುಗಳಿಂದ ಇಂಗ್ಲೆಂಡ್ ತಂಡವನ್ನು ಸೋಲಿಸುವ ಮೂಲಕ ತನ್ನ ಮೊತ್ತ ಮೊದಲ ಟೆಸ್ಟ್ ವಿಜಯವನ್ನು ದಾಖಲಿಸಿತು. 55 ರನ್ನುಗಳಿಗೆ 8 ವಿಕೆಟ್ ಪಡೆದ ವಿನೂ ಮಂಕಡ್ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿದರು,
ರಾಸ್ ಅಲ್ ಖೈಮಾಹ್ ಪ್ರಾಂತ್ಯವು ಯುನೈಟೆಡ್ ಅರಾಬ್ ಎಮಿರೇಟ್ಸ್’ನ ಏಳನೇ ಎಮಿರೇಟ್ ಆಗಿ ಜೊತೆಗೂಡಿಕೊಂಡಿತು.
ಐ.ಬಿ.ಎಮ್ ಸಂಸ್ಥೆಯ ‘ಡೀಪ್ ಬ್ಲೂ’ ಎಂಬ ಸೂಪರ್ ಕಂಪ್ಯೂಟರು ಪ್ರಸಿದ್ಧ ಚೆಸ್ ಚಾಂಪಿಯನ್ ಗ್ಯಾರಿ ಕಾಸ್ಪರೋವ್ ಅವರನ್ನು ಮೊದಲ ಬಾರಿಗೆ ಸೋಲಿಸಿತು.
ಲಖನೌ ನಗರದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ವಿಶ್ವ ವಿದ್ಯಾಲಯದ ಕುಲಪತಿಗಳಾಗಿ ಕನ್ನಡಿಗ ಇಸ್ರೋದ ಮಾಜಿ ಅಧ್ಯಕ್ಷ ಪ್ರೊ. ಯು.ಆರ್. ರಾವ್ ನೇಮಕಗೊಂಡರು.
ವಿಜಾಪುರದಲ್ಲಿರುವ ರಾಷ್ಟ್ರದ ಎರಡನೇ ಅತಿ ಎತ್ತರದ ಶಿವನ ಮೂರ್ತಿಯ ಪ್ರತಿಷ್ಠಾಪನೆಯನ್ನು ನೆರವೇರಿತು. ಈ ಮೂರ್ತಿ 85 ಅಡಿ ಎತ್ತರವಿದೆ. ಮುರ್ಡೇಶ್ವರಲ್ಲಿ ಇರುವ 120 ಅಡಿಯ ಶಿವನ ಮೂರ್ತಿ ಭಾರತದ ಅತೀ ಎತ್ತರದ ಶಿವನ ಮೂರ್ತಿ ಎನಿಸಿದೆ.
ದೇಶದ ಯಾವುದೇ ಭಾಗಕ್ಕೆ ಮಾಡುವ ಸ್ಥಿರ ದೂರವಾಣಿ ಮತ್ತು ಮೊಬೈಲ್ ಕರೆಗಳ ದರಗಳು ಮಾರ್ಚ್ 1ರಿಂದ ಕೇವಲ 1 ರೂಪಾಯಿ ಆಯಿತು. ಹೊಸ ಒನ್ ಇಂಡಿಯಾ ಯೋಜನೆಯ ಅಡಿ ದೇಶಾದ್ಯಂತ ಎಸ್ ಟಿ ಡಿ ಕರೆಗಳ ದವನ್ನು ರ 1 ರೂಪಾಯಿ ಎಂದು ಸರ್ಕಾರಿ ಸ್ವಾಮ್ಯದ ಭಾರತ ಸಂಚಾರ ನಿಗಮ ನಿಯಮಿತ (BSNL) ಮತ್ತು ಮಹಾನಗರ ಟೆಲಿಫೋನ್ ನಿಗಮ ನಿಯಮಿತ (MTNL) ಸಂಸ್ಥೆಗಳು ಜಂಟಿಯಾಗಿ ಪ್ರಕಟಿಸಿದವು.
ಬೆಂಗಳೂರು ಆನಂದರಾವ್ ವೃತ್ತದ ಮೇಲು ಸೇತುವೆಯು ಇಂದು ಮುಖ್ಯಮಂತ್ರಿಗಳಿಂದ ಉದ್ಘಾಟನೆಗೊಂಡಿತು.
ಕನ್ನಡ ಪುಸ್ತಕ ಪ್ರಾಧಿಕಾರವು 2007 ಮತ್ತು 2008ನೇ ಸಾಲಿನ ಅತ್ಯುತ್ತಮ ಪ್ರಕಾಶನ ಪ್ರಶಸ್ತಿಯನ್ನು ಪ್ರಕಟಿಸಿತು. ಧಾರವಾಡದ ‘ಮನೋಹರ ಗ್ರಂಥಮಾಲಾ’ ಮತ್ತು ಮೈಸೂರಿನ ‘ಕಾವ್ಯಾಲಯ’ ಪ್ರಕಾಶನ ಸಂಸ್ಥೆಗಳನ್ನು ಕ್ರಮವಾಗಿ ಈ ಪ್ರಶಸ್ತಿಗೆ ತಜ್ಞರ ಸಮಿತಿಯು ಆಯ್ಕೆ ಮಾಡಿತು.
ಅಲಹಾಬಾದಿನಲ್ಲಿ ಕುಂಭಮೇಳದ ಸಂದರ್ಭದ ಕಾಲ್ತುಳಿತದಲ್ಲಿ 36 ಜನ ಸಾವಿಗೀಡಾಗಿ 39 ಜನರಿಗೆ ಪೆಟ್ಟಾಯಿತು.

ಜನನ:
ಪ್ರಸಿದ್ಧ ಇಂಗ್ಲಿಷ್ ಪ್ರಬಂಧಕಾರ ಮತ್ತು ವಿಮರ್ಶಕ ಚಾರ್ಲ್ಸ್ ಲ್ಯಾಂಬ್ ಅವರು ಲಂಡನ್ನಿನ ಇನ್ನರ್ ಟೆಂಪಲ್ ಎಂಬಲ್ಲಿ ಜನಿಸಿದರು. ಅವರ ಪ್ರಬಂಧ ಸಂಗ್ರಹ ‘ಎಸ್ಸೇಸ್ ಆಫ್ ಎಲಿಯ’, ಮಕ್ಕಳಿಗಾಗಿ ರಚಿಸಿದ ‘ಟೇಲ್ಸ್ ಫ್ರಮ್ ಷೇಕ್ಸ್ ಪಿಯರ್’ ಹಾಗೂ ಅವರು ತಮ್ಮ ಸಹೋದರಿಯೊಂದಿಗೆ ಸೇರಿ ರಚಿಸಿದ ‘ಮೇರಿ ಲ್ಯಾಂಬ್’ ಅತ್ಯಂತ ಪ್ರಸಿದ್ಧವಾಗಿದೆ.
ಕನ್ನಡದ ಮಹಾನ್ ವಿದ್ವಾಂಸ, ಸಾಹಿತಿ, ಕನ್ನಡದ ಪ್ರಥಮ ವಿಜ್ಞಾನ ಬರಹಗಾರ ಎಂದು ಪ್ರಸಿದ್ಧಿ ಪಡೆದ, ಕನ್ನಡ ಸಾಹಿತ್ಯ ಪರಿಷತ್ತಿನ ನಿರ್ಮಾಣದಲ್ಲಿ ಪ್ರಧಾನ ಪಾತ್ರಧಾರಿಗಳಾದ ಬೆಳ್ಳಾವೆ ವೆಂಕಟನಾರಣಪ್ಪನವರು ಫೆಬ್ರವರಿ 10, 1872ರ ವರ್ಷದಲ್ಲಿ ತುಮಕೂರಿನ ಬಳಿಯ ಬೆಳ್ಳಾವೆಯಲ್ಲಿ ಜನಿಸಿದರು. 1937ರ ವರ್ಷದಲ್ಲಿ ಜಮಖಂಡಿಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ಮತ್ತು 1940ರ ವರ್ಷದಲ್ಲಿ ಮೈಸೂರು ಮಹಾರಾಜರಿಂದ ‘ರಾಜಸೇವಾಸಕ್ತ’ ಬಿರುದು ಇವರಿಗೆ ಸಂದಿತ್ತು.
ರಷ್ಯಾದ ಲೇಖಕ, ಕವಿ, ತರ್ಜುಮೆದಾರ ರಷ್ಯಾದ ಬೋರಿಸ್ ಪಾಸ್ಟರ್ ನಾಕ್ ಜನಿಸಿದರು. ಅವರಿಗೆ 1958ರ ವರ್ಷದ ನೊಬೆಲ್ ಸಾಹಿತ್ಯ ಪುರಸ್ಕಾರ ಸಂದಿತ್ತು.
ಅಮೆರಿಕದ ವೈದ್ಯ ಶಾಸ್ತ್ರಜ್ಞ ಜಾನ್ ಫ್ರಾಂಕ್ಲಿನ್ ಎಂಡರ್ಸ್ ಕನೆಕ್ಟಿಕಟ್ ಪ್ರದೇಶದ ವೆಸ್ಟ್ ಹಾರ್ಟ್ ಫೋರ್ಡ್ ಎಂಬಲ್ಲಿ ಜನಿಸಿದರು. ಆಧುನಿಕ ಕಾಲದ ‘ವ್ಯಾಕ್ಸಿನ್ನುಗಳ ತಂದೆ’(The Father of Modern Vaccines) ಎಂದು ಪ್ರಖ್ಯಾತರಾಗಿರುವ ಇವರಿಗೆ 1954ರ ವರ್ಷದ ನೊಬೆಲ್ ಸಾಹಿತ್ಯ ಪುರಸ್ಕಾರ ಸಂದಿತ್ತು.
ಭೌತವಿಜ್ಞಾನಿ ವಾಲ್ಟರ್ ಹೌಸರ್ ಬ್ರಟ್ಟೈನ್ ಅವರು ಚೀನಾದ ಜಿಯಾಮೆನ್ ಎಂಬಲ್ಲಿ ಜನಿಸಿದರು. ಮುಂದೆ ಅಮೆರಿಕದವರಾದ ಇವರಿಗೆ ಪಾಯಿಂಟ್-ಕಾಂಟಾಕ್ಟ್ ಟ್ರಾನ್ಸಿಸ್ಟರ್ ಸಂಶೋಧನೆಗಾಗಿ 1956 ವರ್ಷದ ನೊಬೆಲ್ ಭೌತಶಾಸ್ತ್ರದ ಪುರಸ್ಕಾರ ಸಂದಿತ್ತು.
ಹಲಸಂಗಿ ಗೆಳೆಯರ ಬಳಗದ ಕೊಂಡಿ; ‘ಗರತಿಯ ಹಾಡು’, ‘ಜೀವನ ಸಂಗೀತ’, ‘ಜನಪದ ಜೀವಾಳ’ ಮುಂತಾದ ಅಮೂಲ್ಯ ಸಂಗ್ರಹಕಾರ, ಕಥೆಗಾರ, ಭಾಷಾಂತರಕಾರ, ಭಾಷಣಕಾರ, ಪ್ರಕಾಶಕ, ಆಧ್ಯಾತ್ಮವಾದಿ ಸಿಂಪಿ ಲಿಂಗಣ್ಣ ಅವರು ಬಿಜಾಪುರ ಜಿಲ್ಲೆಯ ಚಡಚಣ ಎಂಬ ಗ್ರಾಮದಲ್ಲಿ ಜನಿಸಿದರು. 1993ರಲ್ಲಿ ನಿಧನರಾದ ಇವರಿಗೆ ಭಾರತ ಸರ್ಕಾರದ ಆದರ್ಶ ಶಿಕ್ಷಕ ಪ್ರಶಸ್ತಿ, ಕರ್ನಾಟಕ ರಾಜ್ಯ ಅಕಾಡೆಮಿ ಪ್ರಶಸ್ತಿ, ವಿಶ್ವವಿದ್ಯಾಲಯದ ಗೌರವ ಡಿಲಿಟ್, ಜಾನಪದ ಆಕಾಡೆಮಿ ಪ್ರಶಸ್ತಿ, ಜಾನಪದ ಸಮ್ಮೇಳನದ ಅಧ್ಯಕ್ಷತೆ, ಕನ್ನಡ ಸಾಹಿತ್ಯ ಸಮ್ಮೇಳದ ಅಧ್ಯಕ್ಷತೆ ಮುಂತಾದ ಅನೇಕ ಗೌರವಗಳು ಸಂದಿದ್ದವು.
ಬೆಲ್ಜಿಯಂ ದೇಶದ ಸಾಹಿತಿ ಡಾಮಿನಿಕ್ ಪಿಯರೆ ಬೆಲ್ಜಿಯಂ ದೇಶದ ದಿನಾಂಟ್ ಎಂಬಲ್ಲಿ ಜನಿಸಿದರು. ಅವರ ಸಾಹಿತ್ಯವು ವಿಶ್ವಮಹಾಯುದ್ಧದ ಸಂತ್ರಸ್ತರಿಗೆ ಶಕ್ತಿ ಭರವಸೆ ತುಂಬುವಂತದ್ದಾಗಿತ್ತು. 1958ರ ವರ್ಷದಲ್ಲಿ ಇವರಿಗೆ ನೊಬೆಲ್ ಶಾಂತಿ ಪುರಸ್ಕಾರ ಸಂದಿತ್ತು .
ವೃತ್ತಿ ರಂಗಭೂಮಿ ಕಲಾವಿದ ಎಚ್.ಟಿ. ಅರಸ್ ಅವರು ರಾಯಚೂರು ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ಹನುಮಸಾಗರದ ಜನಿಸಿದರು. ಏಣಗಿ ಬಾಳಪ್ಪನವರ ಕಲಾವೈಭವ ನಾಟ್ಯಸಂಘ ಸೇರಿದಂತೆ ಹಲವಾರು ನಾಟಕ ಕಂಪೆನಿಗಳಲ್ಲಿ ದುಡಿದಿರುವ ಇವರು ಅನೇಕ ಚಲನಚಿತ್ರಗಳಲ್ಲೂ ನಟಿಸಿದ್ದು, ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಮುಂತಾದ ಅನೇಕ ಗೌರವಗಳಿಗೆ ಪಾತ್ರರಾಗಿದ್ದಾರೆ.
ಅಮೆರಿಕದ ಈಜುಗಾರ ಮಾರ್ಕ್ ಸ್ಪಿಟ್ಜ್ ಕ್ಯಾಲಿಫೋರ್ನಿಯಾದ ಮಾಡೆಸ್ಟೋ ಎಂಬಲ್ಲಿ ಜನಿಸಿದರು. ಇವರು 1972ರ ಮ್ಯೂನಿಚ್ ಬೇಸಿಗೆ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ತಾವು ಭಾಗವಹಿಸಿದ ಎಲ್ಲಾ 7 ಸ್ಪರ್ಧೆಗಳಲ್ಲೂ ಸ್ವರ್ಣಪದಕಗಳನ್ನು ಗೆದ್ದುಕೊಂಡಿದ್ದರು.

ನಿಧನ:
ಇಟಲಿಯ ಕ್ರಾಂತಿಕಾರ ಹೋರಾಟಗಾರ, ಪತ್ರಕರ್ತ, ‘ವಿವಿಧತೆಯಲ್ಲಿ ಏಕತೆ’ ಎಂಬುದನ್ನ(varietate unitas) ಮೊದಲಿಗೆ ಬಳಕೆಗೆ ತಂದ ಟಿಯೋಡೊರೊ ಮೊನೆಟಾ ಅವರು ನಿಧನರಾದರು. ಇವರಿಗೆ ನೊಬೆಲ್ ಶಾಂತಿ ಪುರಸ್ಕಾರ ಸಂದಿತ್ತು.
ಜರ್ಮನಿಯ ನೊಬೆಲ್ ಪುರಸ್ಕೃತ ಭೌತವಿಜ್ಞಾನಿ ವಿಲ್ಹೆಲ್ಮ್ ರೋಂಟ್ಗೆನ್ ಜರ್ಮನಿಯ ಮ್ಯೂನಿಚ್ ನಗರಗದಲ್ಲಿ ನಿಧನರಾದರು. ಎಕ್ಸ್-ರೇ ಅಥವಾ ಎಲೆಕ್ಟ್ರೋ ಮ್ಯಾಗ್ನೆಟಿಕ್ ರೇಡಿಯೇಶನ್ ಕಂಡುಹಿಡಿದ ಇವರಿಗೆ 1901ವರ್ಷದ ನೊಬೆಲ್ ಪುರಸ್ಕಾರ ಸಂದಿತ್ತು.
ಹೆಸರಾಂತ ಪರಿಸರ ತಜ್ಞ ಕೃಷ್ಣ ನಾರಾಯಣ್ ಅವರು ಬೆಂಗಳೂರಿನಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿ ಕಾಲದಲ್ಲಿ ಸಂಭವಿಸಿದ ಅಪಘಾತದಲ್ಲಿ ಅಕಾಲಿಕವಾಗಿ ಸಾವನ್ನಪ್ಪಿದರು. ಕೆಎನ್ ಎಂದೇ ಪರಿಚಿತರಾಗಿದ್ದ ಅವರು ಬೆಂಗಳೂರು ಮೂಲದ ‘ವೈಲ್ಡ್ ಲೈಫ್ ಪ್ರಿಸರ್ವೇಶನ್ ಗ್ರೂಪ್’ (WLPG) ಸಹ ಸಂಸ್ಥಾಪಕರಾಗಿದ್ದರು. ಪರಿಸರ ತಜ್ಞ ಉಲ್ಲಾಸ ಕಾರಂತ ಮತ್ತಿತರರ ಜೊತೆಗೆ ವನ್ಯಜೀವಿ ಸಂರಕ್ಷಣೆಯ ಕಾರ್ಯ ನಿರ್ವಹಿಸುತ್ತಿದ್ದರು.