Categories
e-ದಿನ

ಫೆಬ್ರವರಿ-17

ಪ್ರಮುಖಘಟನಾವಳಿಗಳು:

364: ರೋಮನ್ ದೊರೆ ಜೋವಿಯನ್ನನು ಕಾನ್ಸ್ಟಾಂಟಿನೋಪಾಲ್ ಇಂದ ಹಿಂದಿರುಗುವ ಮಾರ್ಗ ಮಧ್ಯೆ, ತಾನಿಳಿದುಕೊಂಡಿದ್ದ ವಿಶ್ರಾಂತಿ ಶಿಬಿರದಲ್ಲಿ ಸಂದೇಹಾಸ್ಪದ ರೀತಿಯಲ್ಲಿ ಸತ್ತು ಬಿದ್ದಿದ್ದ.

1600: ರೋಮ್ ಸಾಮ್ರಾಜ್ಯದ ಕ್ಯಾಂಪೊ ಡಿ’ಫಿಯೋರಿ ಎಂಬಲ್ಲಿ ತತ್ವಜ್ಞಾನಿ ಜಿಯಾರ್ಡನೋ ಬ್ರೂನೋ ಅವರನ್ನು ನಾಸ್ತಿಕವಾದಿಯೆಂದು ಜೀವಂತವಾಗಿ ದಹಿಸಲಾಯಿತು.

1753: ಸ್ವೀಡನ್ ದೇಶದಲ್ಲಿ ಫೆಬ್ರವರಿ 17ರ ಮಾರನೆಯ ದಿನವೇ ಮಾರ್ಚ್ 1ರ ಬೆಳಗಾಯಿತು! ಕಾರಣವಿಷ್ಟೇ. ಅದು ಫೆಬ್ರವರಿ 17ರಂದು ಜೂಲಿಯನ್ ಕ್ಯಾಲೆಂಡರ್ ಬಳಕೆಯನ್ನು ನಿಲ್ಲಿಸಿ ಮಾರನೆಯ ದಿನದಿಂದ ಗ್ರೆಗ್ರೋರಿಯನ್ ಕ್ಯಾಲೆಂಡರ್ ಪದ್ಧತಿಯನ್ನು ಅಳವಡಿಸಿಕೊಂಡಿತು.

1801: ಚುನಾವಣೆಯಲ್ಲಿ ಥಾಮಸ್ ಜೆಫರ್ ಸನ್ ಮತ್ತು ಆರನ್ ಬರ್ ಇಬ್ಬರಿಗೂ ಒಂದೇ ಸಮನಾದ ಮತಗಳು ಬಂದು ‘ಟೈ’ ನಿರ್ಮಾಣವಾದ ಗೊಂದಲವು ನಿವಾರಣೆಗೊಂಡಿತು. ಜೆಫರ್ ಸನ್ ಅವರನ್ನು ಅಮೆರಿಕದ ಅಧ್ಯಕ್ಷರನ್ನಾಗಿ ಮತ್ತು ಆರನ್ ಬರ್ ಅವರನ್ನು ಅಮೆರಿಕದ ಪ್ರತಿನಿಧಿ ಸಭೆಯ ಉಪಾಧ್ಯಕ್ಷರನ್ನಾಗಿಯೂ ನೆಮಿಸುವುದರ ಮೂಲಕ ಈ ಸಮಸ್ಯೆಯನ್ನು ಪರಿಹರಿಸಲಾಯಿತು.

1863: ಯುದ್ಧ ಗಾಯಾಳುಗಳಿಗೆ ಪರಿಹಾರ ನೀಡುವುದಕ್ಕಾಗಿ ಜಿನೀವಾದ ಕೆಲವೊಂದು ಪ್ರಜೆಗಳು ಒಂದು ಗೂಡಿ ‘ಇಂಟರ್ ನ್ಯಾಷನಲ್ ಕಮಿಟಿ ಫಾರ್ ರಿಲೀಫ್ ಟು ದಿ ವೂಂಡೆಡ್’ ಸ್ಥಾಪಿಸಿದರು. ಇದು ಮುಂದೆ ‘ಇಂಟರ್ ನ್ಯಾಷನಲ್ ಕಮಿಟಿ ಆಫ್ ದಿ ರೆಡ್ ಕ್ರಾಸ್’ ಎಂಬ ಹೆಸರಿನಿಂದ ಪ್ರಸಿದ್ಧಗೊಂಡಿತು.

1864: ಎಚ್. ಎಲ್. ಹನ್ಲಿ ಎಂಬುದೊಂದು ಜಲಾಂತರ್ಗಾಮಿ ನೌಕೆ (ಸಬ್ಮೆರಿನ್). ಇದಕ್ಕೆ ಆ ಹೆಸರು ಬಂದದ್ದು ಅದನ್ನು ನಿರ್ಮಿಸಿದ ಎಚ್.ಎಲ್. ಹನ್ಲಿ ಎಂಬಾತನಿಂದ. ಇದು ಅಮೆರಿಕದ ಆಂತರಿಕ ಕ್ರಾಂತಿಯಲ್ಲಿ (American Civl War) ಕನ್ಫೆಡರೇಟ್ ಸ್ಟೇಟ್ಸ್ ಪಡೆಯಿಂದ ಚಲಿತಗೊಂಡು ಯು.ಎಸ್.ಎಸ್. ಹೌಸಟಾನಿಕ್ ಎಂಬ ಅಮೆರಿಕದ ದೊಡ್ಡ ಯುದ್ಧ ಹಡಗನ್ನು ಮುಳುಗಿಸಿತು. ಹೀಗೆ ಯುದ್ಧದಲ್ಲಿ ಪಾಲ್ಗೊಂಡು ಯುದ್ಧ ಹಡಗನ್ನು ಮುಳುಗಿಸಿದ ಪ್ರಥಮ ಸಬ್ ಮೆರಿನ್ ಎಂಬ ದಾಖಲೆ ಎಚ್.ಎಲ್. ಹನ್ಲಿ ಜಲಾಂತರ್ಗಮಿಯದಾಗಿದೆ.

1904: ಪ್ರಸಿದ್ಧ ‘ಮೆಡಾಮಾ ಬಟರ್ ಫ್ಲೈ’ ಒಪೇರಾ ಮಿಲನ್ ನಗರದ ಲಾ ಸ್ಕಾಲಾ ಎಂಬಲ್ಲಿ ತನ್ನ ಪ್ರಾರಂಭಿಕ ಪ್ರದರ್ಶನವನ್ನು ನೀಡಿತು.

1933: ಅಮೆರಿಕದ ಥಾಮಸ್ ಜೆ.ಸಿ. ಮಾರ್ಟಿನ್ ಅವರು ‘ನ್ಯೂಸ್ ವೀಕ್’ ವಾರಪತ್ರಿಕೆಯ ಪ್ರಕಟಣೆಯನ್ನು ಪ್ರಾರಂಭಿಸಿದರು.

1980: ಕ್ರಿಸ್ತೋಫ್ ವೀಲಿಕಿ ಮತ್ತು ಲೆಜೆಕ್ ಕಿಚಿ ಅವರು ಪ್ರಥಮ ಬಾರಿಗೆ ಚಳಿಗಾಲದಲ್ಲಿ ಮೌಂಟ್ ಎವರೆಸ್ಟ್ ಆರೋಹಣ ಮಾಡಿದ ಕೀರ್ತಿಗೆ ಪಾತ್ರರಾದರು.

1996: ಫಿಲೆಡೆಲ್ಫಿಯಾದಲ್ಲಿ ವಿಶ್ವ ಚೆಸ್ ಚಾಂಪಿಯನ್ ಗ್ಯಾರಿ ಕಾಸ್ಪರೋವ್ ಅವರು ಡೀಪ್ ಬ್ಲೂ ಸೂಪರ್ ಕಂಪ್ಯೂಟರ್ ಅನ್ನು ಚೆಸ್ ಪಂದ್ಯದಲ್ಲಿ ಸೋಲಿಸಿದರು.

ಪ್ರಮುಖಜನನ/ಮರಣ:

1781: ಸ್ಟೆತೋಸ್ಕೊಪ್ ಕಂಡು ಹಿಡಿದ ವೈದ್ಯರಾದ ರೆನೆ ಲೇನ್ನೆಕ್ ಅವರು ಫ್ರಾನ್ಸಿನ ಕ್ವಿಂಪರ್ ಎಂಬಲ್ಲಿ ಜನಿಸಿದರು.

1844: ಅಮೆರಿಕದ ಉದ್ಯಮಿ ‘ಮಾಂಟ್ಗೋಮೇರಿ ವಾರ್ಡ್’ ಸ್ಥಾಪಕರಾದ ಆರನ್ ಮಾಂಟ್ಗೋಮೇರಿ ವಾರ್ಡ್ ಅವರು ನ್ಯೂ ಜೆರ್ಸಿಯ ಚಾಥಾಮ್ ಎಂಬಲ್ಲಿ ಜನಿಸಿದರು. ಮಾಂಟ್ಗೋಮೇರಿ ವಾರ್ಡ್ ಪ್ರಸಿದ್ಧ ಡಿಪಾರ್ಟ್ಮೆಂಟಲ್ ಸ್ಟೋರ್ ಮತ್ತು ಮೈಲ್ ಆರ್ಡರ್ ವಹಿವಾಟು ನಡೆಸುವ ಸಂಸ್ಥೆಯಾಗಿ ಪ್ರಸಿದ್ಧಿ ಪಡೆದಿತ್ತು.

1874: ಥಾಮಸ್ ಜಾನ್ ವಾಟ್ಸನ್ ಅವರು ಪ್ರಖ್ಯಾತ ಐ.ಬಿ.ಎಮ್ ಸಂಸ್ಥೆಯ ಚೇರ್ಮನ್ ಮತ್ತು ಮ್ಯಾನೇಜಿಂಗ್ ಡೈರೆಕ್ಟರ್ ಆಗಿ ಸೇವೆ ಸಲ್ಲಿಸಿ ಆ ಸಂಸ್ಥೆಯನ್ನು ಉತ್ತುಂಗಕ್ಕೆ ಕೊಂಡೊಯ್ದ ಮಹತ್ಸಾಧನೆಗಾಗಿ ಪ್ರಸಿದ್ಧರಾಗಿದ್ದಾರೆ. ಅವರು ನ್ಯೂಯಾರ್ಕ್ ಪ್ರಾಂತ್ಯದ ಕ್ಯಾಂಬೆಲ್ ಎಂಬಲ್ಲಿ ಜನಿಸಿದರು.

1888: ಪ್ರಸಿದ್ಧ ಜರ್ಮನ್ ಭೌತವಿಜ್ಞಾನಿ ಓಟ್ಟೋ ಸ್ಟರ್ನ್ ಅವರು ಈಗಿನ ಪೋಲೆಂಡ್ ಭಾಗವಾಗಿರುವ ಸೊಹ್ರಾವ್ ಎಂಬಲ್ಲಿ ಜನಿಸಿದರು. 1925ರಿಂದ 1945ರ ಅವಧಿಯಲ್ಲಿ ಇವರ ಹೆಸರು 82 ಬಾರಿ ನೊಬೆಲ್ ಭೌತಶಾಸ್ತ್ರಕ್ಕೆ ಪ್ರಸ್ತಾಪಗೊಂಡು, ಕಡೆಗೆ 1943ರ ವರ್ಷದಲ್ಲಿ ಅದು ಅವರನ್ನರಸಿಬಂದಿತು.

1899: ಬಂಗಾಳಿ ಕವಿ, ಕಥೆಗಾರ ಮತ್ತು ಪ್ರಬಂಧಕಾರರಾದ ಜಿಬನಾನಂದ ದಾಸ್ ಅವರು ಬ್ರಿಟಿಷ್ ಭಾರತದ ಬಂಗಾಳ ಪ್ರಾಂತ್ಯದ ಬರಿಸಾಲ್ ಎಂಬಲ್ಲಿ ಜನಿಸಿದರು. ತಮ್ಮ ಜೀವಿತಕಾಲದಲ್ಲಿ ಅಷ್ಟೊಂದು ಪ್ರಾಮುಖ್ಯತೆಯಲ್ಲಿಲ್ಲದಿದ್ದ ಇವರು ಮುಂದೆ, ರವೀಂದ್ರನಾಥ ಠಾಗೂರರ ಕಾಲದ ನಂತರದ ಮಹತ್ವದ ಕವಿ ಎಂಬ ಪ್ರಸಿದ್ಧಿಗೆ ಪಾತ್ರರಾಗಿದ್ದಾರೆ.

1955: ಚೀನಾದ ಸಾಹಿತಿ ಮೊ ಯಾನ್ ಅವರು ಶಾನ್ಡಾಂಗ್ ಬಳಿಯ ಗವೋಮಿ ಎಂಬಲ್ಲಿ ಜನಿಸಿದರು. ಅವರಿಗೆ ನೊಬೆಲ್ ಸಾಹಿತ್ಯ ಪುರಸ್ಕಾರ ಸಂದಿದೆ.

1987: ಪ್ರಸಿದ್ಧ ಭಾರತೀಯ ವ್ಯಂಗ್ಯಚಿತ್ರಕಾರ ಅಸೀಮ್ ತ್ರಿವೇದಿ ಜನನ. ಇವರು ಭ್ರಷ್ಟಾಚಾರ ವಿರೋದಿ ವ್ಯಂಗ್ಯಚಿತ್ರಗಳಿಗೆ ಪ್ರಸಿದ್ಧಿ ಪಡೆದಿದ್ದಾರೆ. ಭಾರತದಲ್ಲಿ ಇಂಟರ್ನೆಟ್ ಸೆನ್ಸಾರ್ಷಿಪ್ ವಿರುದ್ಧ ಅವರು ‘ಸೇವ್ ಯುವರ್ ವಾಯ್ಸ್’ ಎಂಬ ಆಂದೋಲನವನ್ನು ಹುಟ್ಟುಹಾಕಿದ್ದಾರೆ. ಅವರಿಗೆ ‘ಕರೇಜ್ ಇನ್ ಎಡಿಟೋರಿಯಲ್ ಕಾರ್ಟೂನಿಂಗ್’ ಎಂಬ ಅಂತರರಾಷ್ಟ್ರೀಯ ವ್ಯಂಗ್ಯಚಿತ್ರಕಾರರ ಸಂಘಟನೆಯ ಪ್ರಶಸ್ತಿ ಸಂದಿದೆ.

1968: ಹಿಂದೂಸ್ಥಾನಿ ಸಂಗೀತದಲ್ಲಿ ಸಾರಂಗಿ ವಾದನ, ತಬಲ ವಾದನ ಹಾಗೂ ಗಾಯನ – ಈ ಮೂರು ಪ್ರಕಾರಗಳಲ್ಲೂ ಪ್ರಭುತ್ವ ಪಡೆದಿರುವ ಉಸ್ತಾದ್ ಫಯಾಜ್ ಖಾನರು ಧಾರವಾಡದಲ್ಲಿ ಜನಿಸಿದರು.

1970: ಉಕ್ರೇನ್ ಮೂಲದ ಸಾಹಿತಿ ಷಾಮುಯೆಲ್ ಯೋಸೆಫ್ ಅವರು ಇಸ್ರೇಲಿನ ಜೆರುಸಲೇಮ್ ನಗರದಲ್ಲಿ ನಿಧನರಾದರು. ಆಧುನಿಕ ಹಿಬ್ರೂ ಕಾಲ್ಪನಿಕ ಕಥೆಗಳಲ್ಲಿ ಪ್ರಸಿದ್ಧರಾದ ಇವರಿಗೆ 1966ರ ವರ್ಷದ ನೊಬೆಲ್ ಸಾಹಿತ್ಯಕ ಪುರಸ್ಕಾರ ಸಂದಿತ್ತು.

1986: ಪ್ರಖ್ಯಾತ ತತ್ವಶಾಸ್ತ್ರಜ್ಞ, ಉಪನ್ಯಾಸಕ ಮತ್ತು ಬರಹಗಾರ ಜಿಡ್ಡು ಕೃಷ್ಣಮೂರ್ತಿ ಅವರು ಕ್ಯಾಲಿಫೋರ್ನಿಯಾದ ಓಜೈ ಎಂಬಲ್ಲಿ ನಿಧನರಾದರು. ಮಾನಸಿಕವಾಗಿ ಕ್ರಾಂತಿ, ಮನಸ್ಸಿನ ಪ್ರಕೃತಿ, ಧ್ಯಾನ, ಪ್ರಶ್ನಿಸಿಕೊಳ್ಳುವಿಕೆ, ಮನುಷ್ಯರ ನಡುವಿನ ಸಂಬಂಧಗಳು ಮತ್ತು ಸಮಾಜದಲ್ಲಿ ಆಮೂಲಾಗ್ರ ಬದಲಾವಣೆ ಮುಂತಾದ ವಿಚಾರಗಳಲ್ಲಿ ಅವರ ಚಿಂತನೆಗಳು ವಿಶ್ವದೆಲ್ಲೆಡೆ ಪ್ರಸಿದ್ಧಿ ಪಡೆದಿವೆ.