Categories
e-ದಿನ

ಫೆಬ್ರವರಿ-20

ದಿನಾಚರಣೆಗಳು:
ವಿಶ್ವ ಸಾಮಾಜಿಕ ನ್ಯಾಯ ದಿನಾಚರಣೆ
ವಿಶ್ವದಲ್ಲಿನ ಜನಸಮುದಾಯಗಳಲ್ಲಿನ ಅಸಮಾನತೆಯ ಸ್ವರೂಪಗಳಾದ ಬಡತನ, ಪ್ರತ್ಯೇಕೀಕರಣ, ನಿರುದ್ಯೋಗ ಮುಂತದಾವುಗಳನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳುವ ಸಲುವಾಗಿ ಫೆಬ್ರುವರಿ 20 ದಿನವನ್ನು ‘ವಿಶ್ವ ಸಾಮಾಜಿಕ ನ್ಯಾಯ ದಿನಾಚರಣೆ’ಯನ್ನಾಗಿ ಆಚರಿಸಲು ವಿಶ್ವಸಂಸ್ಥೆಯ ಸಾಮಾನ್ಯ ಅಧಿವೇಶನದಲ್ಲಿ ತೀರ್ಮಾನ ಕೈಗೊಳ್ಳಲಾಯಿತು.

ಪ್ರಮುಖಘಟನಾವಳಿಗಳು:

1792: ಅಮೆರಿಕದಲ್ಲಿ ‘ಯುನೈಟೆಡ್ ಸ್ಟೇಟ್ಸ್ ಪೋಸ್ಟ್ ಆಫೀಸ್ ಇಲಾಖೆ’ ಸ್ಥಾಪನೆಗಾಗಿ ಅಧ್ಯಕ್ಷ ಜಾರ್ಜ್ ವಾಷಿಂಗ್ಟನ್ ಅವರು ‘ಪೋಸ್ಟಲ್ ಸರ್ವೀಸ್ ಕಾಯಿದೆ’ಗೆ ಸಹಿ ಹಾಕಿದರು.

1835: ಭೂಕಂಪದಲ್ಲಿ ಚಿಲಿ ದೇಶದ ಕಾನ್ಸೆಪ್ಸಿಯಾನ್ ನಾಶಗೊಂಡಿತು.

1869: ಸಿಸಿರ್ ಕುಮಾರ್ ಘೋಷ್ ಅವರು ಕೋಲ್ಕತ್ತಾದಲ್ಲಿ ‘ಅಮೃತಬಜಾರ್ ಪತ್ರಿಕಾ’ ಆರಂಭಿಸಿದರು.

1872: ನ್ಯೂಯಾರ್ಕ್ ನಗರದಲ್ಲಿ ಮೆಟ್ರೋಪಾಲಿಟನ್ ಮ್ಯೂಸಿಯಮ್ ಆಫ್ ಆರ್ಟ್ ಆರಂಭಗೊಂಡಿತು.

1947: ಬ್ರಿಟಿಷ್ ಪ್ರಧಾನಿ ಕ್ಲೆಮೆಂಟ್ ಅಟ್ಲೀ ಅವರು ‘ಜವಾಬ್ದಾರಿಯುತ ಭಾರತೀಯರ ಕೈಗಳಿಗೆ’ ಅಧಿಕಾರ ಹಸ್ತಾಂತರಿಸುವುದಾಗಿ ಪ್ರಕಟಿಸಿದರು.

1962: ಅಮೆರಿಕದ ಜಾನ್ ಗ್ಲೆನ್ ಅವರು ಫ್ರೆಂಡ್ ಶಿಪ್-7 ಬಾಹ್ಯಾಕಾಶ ವಾಹನದಲ್ಲಿ ಕೇವಲ 4 ಗಂಟೆ 55 ನಿಮಿಷಗಳಲ್ಲಿ ಭೂಮಿಗೆ 3 ಪ್ರದಕ್ಷಿಣೆ ಹಾಕಿದರು.

1998: ಅಮೆರಿಕದ ಸ್ಕೇಟರ್ ತಾರಾ ಲಿಪಿನ್ಸ್ಕಿ ಅವರು 1998ರ ಜಪಾನಿನ ಚಳಿಗಾಲದ ಒಲಿಂಪಿಕ್ಸ್ ಕ್ರೀಡೆಗಳಲ್ಲಿ ಚಿನ್ನದ ಪದಕ ಗೆದ್ದ ಅತ್ಯಂತ ಕಿರಿಯರೆನಿಸಿದರು.

2006: ಧಾರವಾಡದ ಹಿರಿಯ ಸಾಹಿತಿ ಡಾ. ಪಂಚಾಕ್ಷರಿ ಹಿರೇಮಠ ಅವರೂ ಸೇರಿದಂತೆ ವಿವಿಧ ಭಾಷೆಗಳ ಒಟ್ಟು 20 ಸಾಹಿತಿಗಳು ಕೇಂದ್ರ ಸಾಹಿತ್ಯ ಅಕಾಡೆಮಿಯ 2005ನೇ ಸಾಲಿನ ಅನುವಾದ ಪ್ರಶಸ್ತಿಗೆ ಪಾತ್ರರಾದರು. ಜ್ಞಾನಪೀಠ ಪ್ರಶಸ್ತಿ ಪುರಸ್ಕತ ಖ್ವಾರತ್-ಉಲ್-ಹೈದರ್ ಅವರ ‘ಪಥ್ ಝಡ್ ಕೀ ಆವಾಜ್’ ಕೃತಿಯ ಅನುವಾದವಾದ ‘ಋತುವಿನ ಸ್ವರಗಳು’ ಕೃತಿಗೆ ಪಂಚಾಕ್ಷರಿ ಹಿರೇಮಠ ಅವರಿಗೆ ಈ ಪ್ರಶಸ್ತಿ ಸಂದಿದೆ.

2008: ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕೇರಳದ ಖ್ಯಾತ ಸಾಹಿತಿ ಎಂ.ಟಿ.ವಾಸುದೇವನ್ ನಾಯರ್ ಅವರನ್ನು ಸೋಲಿಸುವ ಮೂಲಕ ಪಶ್ಚಿಮ ಬಂಗಾಳದ ಬರಹಗಾರ ಸುನಿಲ್ ಗಂಗೋಪಾಧ್ಯಾಯ ಅವರು ಗೆಲುವು ಸಾಧಿಸಿದರು.

2008: ವಿಶ್ವದ ಮೊದಲ ಬ್ರಾಡ್ಗೇಜ್ ಕೋಚ್ ರೆಸ್ಟೋರೆಂಟ್ ಎಂಬ ಹೆಗ್ಗಳಿಕೆ ಹೊಂದಿರುವ ಮಧ್ಯಪ್ರದೇಶ ಪ್ರವಾಸೋದ್ಯಮ ಇಲಾಖೆಯ ಆಧೀನದಲ್ಲಿರುವ ಭೂಪಾಲಿನ ‘ಶಾನ್-ಎ-ಭೂಪಾಲ್’ ರೈಲು, ಕೇಂದ್ರ ಸರ್ಕಾರದ ಪ್ರವಾಸೋದ್ಯಮ ಇಲಾಖೆ ಕೊಡುವ ಅತ್ಯಂತ ಅನ್ವೇಷಣಾತ್ಮಕ, ಅಪೂರ್ವ ಪ್ರವಾಸೋದ್ಯಮ ಯೋಜನಾ ಪ್ರಶಸ್ತಿ ಪಡೆದುಕೊಂಡಿತು.

2009: ಭಾಷಾ ವೈವಿಧ್ಯೆತೆಯಿಂದ ಕೂಡಿದ ಭಾರತದಲ್ಲಿ ಸುಮಾರು 196 ಆಡು ಭಾಷೆಗಳು ವಿನಾಶದ ಅಂಚಿನಲ್ಲಿವೆ, ಅಲ್ಲದೆ ಜಗತ್ತಿನಲ್ಲಿ ಅತಿ ಹೆಚ್ಚು ಭಾಷೆಗಳು ವಿನಾಶದ ಅಂಚಿನಲ್ಲಿರುವ ರಾಷ್ಟ್ರಗಳ ಪೈಕಿ ಭಾರತ ಪ್ರಥಮ ಸ್ಥಾನದಲ್ಲಿದೆ ಎಂದು ಯುನೆಸ್ಕೊ ವರದಿ ತಿಳಿಸಿತು. ನಂತರದ ಸ್ಥಾನದಲ್ಲಿ ಅಮೆರಿಕ (192) ಮತ್ತು ಇಂಡೋನೇಷ್ಯಾ (147) ಇವೆ. ಅಂತರರಾಷ್ಟ್ರೀಯ ಮಾತೃ ಭಾಷಾ ದಿನಾಚರಣೆ ಹಿನ್ನೆಲೆಯಲ್ಲಿ ವಿನಾಶದ ಅಂಚಿನಲ್ಲಿರುವ ಭಾಷೆಗಳ ಪಟ್ಟಿಯನ್ನು ಯುನೆಸ್ಕೊ ನ್ಯೂಯಾರ್ಕಿನಲ್ಲಿ ಬಿಡುಗಡೆ ಮಾಡಿತು. ಜಗತ್ತಿನಲ್ಲಿ ಸುಮಾರು ಆರು ಸಾವಿರ ಭಾಷೆಗಳಿದ್ದು ಅವುಗಳಲ್ಲಿ 2,500 ಭಾಷೆಗಳು ವಿನಾಶದ ಅಂಚಿನಲ್ಲಿವೆ. ಸುಮಾರು 200 ಭಾಷೆಗಳನ್ನು ಕೇವಲ 10 ಮಂದಿ ಹಾಗೂ 178 ಭಾಷೆಗಳನ್ನು 10ರಿಂದ 50 ಮಂದಿ ಮಾತ್ರ ಬಳಸುತ್ತಾರೆ. ಕಳೆದ ಮೂರು ಪೀಳಿಗೆಯ ಅಂತರದಲ್ಲಿ 200 ಬಾಷೆಗಳು ಸಂಪೂರ್ಣ ನಾಶವಾಗಿವೆ. 538 ಭಾಷೆಗಳು ಸಂಪೂರ್ಣ ನಾಶದ ಅಂಚಿನಲ್ಲಿದ್ದರೆ 632 ಭಾಷೆಗಳು ವಿನಾಶದ ಅಪಾಯದಲ್ಲಿವೆ.

2013: ಸೌರವ್ಯೂಹದ ಅತ್ಯಂತ ಪುಟ್ಟದಾದ ಎಕ್ಸ್ಟ್ರಾ ಸೋಲಾರ್ ಗ್ರಹ ‘ಕೆಪ್ಲರ್-37ಬಿ’ (extrasolar planet, Kepler-37b) ಅನ್ವೇಷಿಸಲ್ಪಟ್ಟಿತು.

ಪ್ರಮುಖಜನನ/ಮರಣ:

1844: ಕೆನಡಾದ ನೌಕಾಯಾತ್ರಿ ಜೊಶುವಾ ಸ್ಲೊಕಮ್ ಅವರು ನೊವಾಸ್ಕೋಟಿಯಾದ ಮೌಂಟ್ ಹ್ಯಾನ್ಲಿ ಎಂಬಲ್ಲಿ ಜನಿಸಿದರು. ಮಹಾನ್ ಸಾಹಸಿಯಾದ ಈತ ಏಕಾಂಗಿಯಾಗಿ ಜಗತ್ತಿನ ಸುತ್ತ ನಾವೆಯಲ್ಲಿ ಪಯಣಿಸಿದ ಮೊದಲ ವ್ಯಕ್ತಿ.

1901: ಅಮೆರಿಕದ ಪ್ರಸಿದ್ಧ ಕಟ್ಟಡ ವಿನ್ಯಾಸಕ ಲೂಯಿಸ್ ಕಾಹ್ನ್ ಜನಿಸಿದರು. ಅಮೆರಿಕದ ಸಾಲ್ಕ್ ಇನ್ಸ್ಟಿಟ್ಯೂಟ್, ಕಿಂಬೆಲ್ ಆರ್ಟ್ ಮ್ಯೂಸಿಯಂ ಮತ್ತು ಬಾಂಗ್ಲಾದೇಶದ ಪಾರ್ಲಿಮೆಂಟ್ ಭವನಗಳು ಇವರ ಪ್ರಸಿದ್ಧ ವಿನ್ಯಾಸಗಳಲ್ಲಿ ಸೇರಿವೆ.

1901: ಭಾರತೀಯ ನ್ಯಾಯವಾದಿ ಮತ್ತು ಬ್ರಿಟಿಷ್ ಭಾರತದಲ್ಲಿ ಮದ್ರಾಸ್ ಪ್ರೆಸಿಡೆನ್ಸಿ ಮುಖ್ಯಮಂತ್ರಿಗಳಾಗಿದ್ದ ರಾಮಕೃಷ್ಣ ರಂಗ ರಾವ್ ಬೊಬ್ಬಿಲಿ ಎಂಬಲ್ಲಿ ಜನಿಸಿದರು. 1930ರ ವರ್ಷದಲ್ಲಿ ಜಸ್ಟಿಸ್ ಪಾರ್ಟಿ ಎಂಬ ರಾಜಕೀಯ ಪಕ್ಷವನ್ನು ಸ್ಥಾಪಿಸಿದ್ದ ಇವರು ಮುಂದೆ ಸ್ವತಂತ್ರ ಭಾರತದಲ್ಲಿ ಸಂವಿಧಾನ ರಚನಾ ಸಮಿತಿಯಲ್ಲೂ ಕಾರ್ಯ ನಿರ್ವಹಿಸಿದ್ದರು.

1931: ಡಾ. ಜಿ. ಎಸ್. ಸಿದ್ಧಲಿಂಗಯ್ಯನವರು ತುಮಕೂರು ಜಿಲ್ಲೆಯ ಬೆಳ್ಳಾವೆಯಲ್ಲಿ ಜನಿಸಿದರು. ಜಿ.ಎಸ್. ಸಿದ್ಧಲಿಂಗಯ್ಯನವರು ಕನ್ನಡ ನಾಡಿನ ಶಿಕ್ಷಕರಾಗಿ, ವಿದ್ವಾಂಸರಾಗಿ, ಬರಹಗಾರರಾಗಿ, ಭಾಷಣಕಾರರಾಗಿ, ಕನ್ನಡ ಸಾಹಿತ್ಯ ಪರಿಷತ್ತಿನಂತ ಸಂಸ್ಥೆಗಳ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದವರು. ಸಾಹಿತ್ಯ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿರುವ ಇವರಿಗೆ ಸಾಹಿತ್ಯ ಅಕಾಡೆಮಿ ವಿಶೇಷ ಪ್ರಶಸ್ತಿ, ಬಸವ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಮುಂತಾದ ಹಲಾವರು ಗೌರವಗಳು ಸಂದಿವೆ.

1932: ಹೆಗ್ಗೋಡು ಅಂದರೆ ಸುಬ್ಬಣ್ಣ, ಸುಬ್ಬಣ್ಣ ಎಂದರೆ ಹೆಗ್ಗೋಡು ಎಂಬಷ್ಟರವರೆಗೆ ನಂಟು. ಸುಮಾರು ಐದು ದಶಕಗಳ ಕಾಲ ಅವರು 16 ಜುಲೈ 2005ರಲ್ಲಿ ನಿಧನರಾಗುವವರೆಗೆ ಈ ಪುಟ್ಟ ಗ್ರಾಮದಲ್ಲಿ ನಡೆಸಿದ ನಾಟಕ, ಸಿನಿಮಾ ಮತ್ತು ಸಾಹಿತ್ಯ ಚಟುವಟಿಕೆಗಳ ಕ್ರಾಂತಿಯಿಂದ ಅದು ಜಗತ್ತಿನ ಕಲಾ ಭೂಪಟದಲ್ಲಿ ಗುರುತು ಹಿಡಿಯುವಷ್ಟು ಮಹತ್ವದ ಕಲಾ ಕೇಂದ್ರವಾಗಿ ಬೆಳೆದಿದೆ. ಸುಮಾರು 600 ಜನಗಳಿದ್ದ ಈ ಚಿಕ್ಕ ಗ್ರಾಮ ಅತ್ಯಂತ ಪ್ರಬುದ್ಧ ಅಭಿರುಚಿ, ರಸಿಕತೆಗೆ ಹೆಸರಾಗಿದೆ. ಈ ದೊಡ್ಡ ಬದಲಾವಣೆಯನ್ನು ತಂದವರು ಮ್ಯಾಗ್ಸೇಸೆ ಪ್ರಶಸ್ತಿ ವಿಜೇತ ಕೆ.ವಿ. ಸುಬ್ಬಣ್ಣ.

1937: ಜರ್ಮನಿಯ ಜೈವಿಕ ವಿಜ್ಞಾನಿ ರಾಬರ್ಟ್ ಹ್ಯೂಬರ್ ಮ್ಯೂನಿಚ್ ನಗರದಲ್ಲಿ ಜನಿಸಿದರು. ಕ್ಯಾನೋಬ್ಯಾಕ್ಟೀರಿಯಾ ಮತ್ತು ಕ್ರಿಸ್ಟಲೋಗ್ರಫಿ ಕುರಿತಾದ ಸಂಶೋಧನೆ ನಡೆಸಿರುವ ಇವರಿಗೆ 1988 ವರ್ಷದಲ್ಲಿ ನೊಬೆಲ್ ರಸಾಯನ ಶಾಸ್ತ್ರದ ಪ್ರಶಸ್ತಿ ಸಂದಿತ್ತು.

1954: ಕನ್ನಡ ಸಾಹಿತ್ಯ ಲೋಕದ ಸಾಂಸ್ಕೃತಿಕ ವಿಮರ್ಶಕರೆಂದೇ ಪ್ರಖ್ಯಾತರಾದ ಡಿ.ಆರ್. ನಾಗರಾಜ್ ದೊಡ್ಡಬಳ್ಳಾಪುರದಲ್ಲಿ ಜನಿಸಿದರು. ವಿಮರ್ಶಾ ಕ್ಷೇತ್ರದಲ್ಲಿ ತಮ್ಮದೇ ಆದ ವಿಶಿಷ್ಟ ಛಾಪನ್ನು ಮೂಡಿಸುವುದರ ಜೊತೆಗೆ ಉತ್ತಮ ವಾಗ್ಮಿಗಳಾಗಿದ್ದ ಇವರು ದೇಶ ವಿದೇಶಗಳ ವಿಶ್ವವಿದ್ಯಾಲಯಗಳಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿಯೂ ಕರ್ತವ್ಯ ನಿರ್ವಹಿಸಿದ್ದರು. ಕೇವಲ ತಮ್ಮ 44ನೇ ವಯಸ್ಸಿನಲ್ಲಿ ನಿಧನರಾದ ಇವರಿಗೆ ಆರ್ಯಭಟ ಪ್ರಶಸ್ತಿ, ಶಿವರಾಮ ಕಾರಂತ ಪ್ರಶಸ್ತಿ, ವರ್ಧಮಾನ ಪ್ರಶಸ್ತಿಗಳೇ ಅಲ್ಲದೆ ಮರಣೋತ್ತರವಾಗಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಕೂಡಾ ಅರ್ಪಿತಗೊಂಡಿತು.

1967:  ಅಮೆರಿಕದ ನಟ ಮತ್ತು ಕಾರ್ಯಕರ್ತ ಅಂಡ್ರ್ಯೂ ಶ್ಯೂ ಜನಿಸಿದರು. ಇವರು ‘ಡೂ ಸಂತಿಂಗ್’ ಎಂಬ ಸಂಘಟನೆ ಸ್ಥಾಪಿಸಿದರು.

1907: ಫ್ರೆಂಚ್ ರಸಾಯನ ಶಾಸ್ತ್ರಜ್ಞ ಹೆನ್ರಿ ಮೊಯ್ಸಾನ್ ಪ್ಯಾರಿಸ್ ನಗರದಲ್ಲಿ ನಿಧನರಾದರು. ಇವರಿಗೆ ಫ್ಲೌರಿನ್ ಕುರಿತಾದ ಸಂಶೋಧನೆಗೆ 1906 ವರ್ಷದ ನೊಬೆಲ್ ರಸಾಯನ ಶಾಸ್ತ್ರದ ಪ್ರಶಸ್ತಿ ಸಂದಿತ್ತು.

1916: ಸ್ವೀಡನ್ ದೇಶದ ಪತ್ರಕರ್ತ ಮತ್ತು ರಾಜಕಾರಣಿ ಕ್ಲಾಸ್ ಪಾಂಟಸ್ ಅರ್ನಾಲ್ಡ್ ಸನ್ ನಿಧನರಾದರು. ‘ಸ್ವೀಡಿಷ್ ಪೀಸ್ ಅಂಡ್ ಆರ್ಬಿಟ್ರೇಷನ್ ಸೊಸೈಟಿ’ ಸ್ಥಾಪಿಸಿದ ಇವರಿಗೆ 1908ರ ವರ್ಷದಲ್ಲಿ ನೊಬೆಲ್ ಶಾಂತಿ ಪುರಸ್ಕಾರ ಸಂದಿತ್ತು.

1972: ಜರ್ಮನ್-ಅಮೇರಿಕನ್ ಮಹಿಳಾ ಭೌತವಿಜ್ಞಾನಿ ಮಾರಿಯಾ ಗೋಪರ್ಟ್ ಮೇಯರ್ ಕ್ಯಾಲಿಫೋರ್ನಿಯಾದ ಸ್ಯಾನ್ ಡೀಗೋ ಎಂಬಲ್ಲಿ ನಿಧನರಾದರು. ಪ್ರಥಮ ಭೌತಶಾಸ್ತ್ರದ ನೊಬೆಲ್ ಪುರಸ್ಕೃತೆ ಮೇಡಂ ಕ್ಯೂರಿ ನಂತರದಲ್ಲಿ ಇವರು ಭೌತಶಾಸ್ತ್ರದ ಎರಡನೇ ಮಹಿಳಾ ನೊಬೆಲ್ ಪುರಸ್ಕೃತೆ ಎನಿಸಿದ್ದಾರೆ. ಇವರು ಶೆಲ್ ಮಾಡೆಲ್ ಫಾರ್ ಆಟೋಮಿಕ್ ನ್ಯೂಕ್ಲಿಯಸ್ ಸಂಶೋಧನೆಗೆ ಪ್ರಸಿದ್ಧರಾಗಿದ್ದಾರೆ.

1976: ಫ್ರೆಂಚ್ ನ್ಯಾಯವಾದಿ ಮತ್ತು ನ್ಯಾಯಮೂರ್ತಿಗಳಾದ ರೆನೆ ಕ್ಯಾಸಿನ್ ಪ್ಯಾರಿಸ್ ನಗರದಲ್ಲಿ ನಿಧನರಾದರು. ವಿಶ್ವ ಸಂಸ್ಥೆಯಲ್ಲಿ ‘ಯೂನಿವರ್ಸಲ್ ಡಿಕ್ಲೆರೇಷನ್ ಆಫ್ ಹ್ಯೂಮನ್ ರೈಟ್ಸ್’ ರಚಿಸಿದ ಇವರಿಗೆ 1968 ವರ್ಷದಲ್ಲಿ ನೊಬೆಲ್ ಶಾಂತಿ ಪುರಸ್ಕಾರ ಸಂದಿತು.

2015: ಮರಾಠಿಯಲ್ಲಿ ‘ಶಿವಾಜಿ ಕೌನ್ ಹೋತಾ’ ಕೃತಿಯಿಂದ ಖ್ಯಾತರಾದ ಭಾರತೀಯ ಸಾಹಿತಿ ಗೋವಿಂದ್ ಪನ್ಸಾರೆ ಅವರು ತಮ್ಮ ಪತ್ನಿ ಸಮೇತ ಮುಂಬೈನಲ್ಲಿ ಹಂತಕರ ಗುಂಡಿಗೆ ಬಲಿಯಾದರು. ಅವರ ‘ಶಿವಾಜಿ ಕೌನ್ ಹೋತಾ’ ಕೃತಿ ವಿವಿಧ ಭಾಷೆಗಳ ಅನುವಾದಗಳು ಸೇರಿ ಸುಮಾರು ಒಂದೂವರೆ ಲಕ್ಷ ಮಾರಾಟವಾಗಿದ್ದವು. ಕಮ್ಯೂನಿಸ್ಟ್ ಮನೋಭಾವದವರಾದ ಇವರು ಈ ಕೃತಿಯೇ ಅಲ್ಲದೆ ಇನ್ನೂ 20 ಕೃತಿಗಳನ್ನು ರಚಿಸಿದ್ದರು.