ಇತಿಹಾಸ ಪ್ರಸಿದ್ಧವಾದ ಬಿಜಾಪುರ ಪಟ್ಟಣ ನೋಡಲು ದೇಶ-ವಿದೇಶಗಳಿಂದ ಜನ ಬರುತ್ತಾರೆ. ಅವರನ್ನು ಬೆರಗುಗೊಳಿಸುವ ಒಂದು ಭವ್ಯ ಕಟ್ಟಡ ಅಲ್ಲಿದೆ. ಅದು ಗೋಳಗುಮ್ಮಟ. ಸುಮಾರು ಇಪ್ಪತ್ತು ಮೈಲುಗಳ ಸುತ್ತಮುತ್ತಲಿಂದ ಕಾಣುವ ಭವ್ಯ ಕಟ್ಟಡ ಅದು. ಅದರ ನಾಲ್ಕೂ ಮೂಲೆಗಳಲ್ಲಿ ಏಳು ಅಂತಸ್ತಿನ ಗೋಪುರ ಇದೆ. ಅತಿ ದೊಡ್ಡದಾದ ಅದರ ಗುಮ್ಮಟ ವಿಶ್ವಖ್ಯಾತಿ ಪಡೆದಿದೆ. ಒಮ್ಮೆ ಕನ್ನಡದ ಹಿರಿಯ ವ್ಯಕ್ತಿಗಳೊಬ್ಬರು ಹೇಳಿದರು. “ಗೋಳಗುಮ್ಮಟ ಭವ್ಯವೂ ಸುಂದರವೂ ಆಗಿರುವುದು ನಿಜ. ಆದರೆ ಹಳಕಟ್ಟಿಯವರ ವ್ಯಕ್ತಿತ್ವ ಕನ್ನಡನುಡಿಯ ಭಕ್ತರಿಗೆ ಭವ್ಯತರವೂ ಮೆಚ್ಚಿಕೆಯದೂ ಆಗಿದೆ. ಬರಿಯ ಗೋಳಗುಮ್ಮಟ ನೋಡಿ ನನಗೆ ತೃಪ್ತಿಯಾಗಲಿಲ್ಲ; ಹಳಕಟ್ಟಿಯವರನ್ನು ಕಂಡಾಗಲೇ ನನಗೆ ತೃಪ್ತಿಯಾಯಿತು.” ಈ ಉದ್ಗಾರ ಹೊರಹೊಮ್ಮಿ ಬಂದುದು ’ಕನ್ನಡದ ಕಣ್ವ’ರೆನಿಸಿದ ಆಚಾರ್ಯ ಬಿ. ಎಂ.ಶ್ರೀ. ಅವರಿಂದ ಹಳಕಟ್ಟಿಯವರ ವ್ಯಕ್ತಿತ್ವಕ್ಕೆ ಇದಕ್ಕಿಂತ ಹೆಚ್ಚಿನ ಮಹೋಪಮೆ ಇನ್ನಾವುದು?

ಉಪ್ಪಲಬುರುಜಿಗೆ ಸಮೀಪದ ಒಂದು ಸಾಧಾರಣ ಮನೆಯಲ್ಲಿ ಈ ಅಸಾಧಾರಣ ವ್ಯಕ್ತಿ ಮನೆ ತುಂಬ ಹಳೆಯ ಗ್ರಂಥಗಳನ್ನು, ತಾಳೆಗರಿ ಕಡತಗಳನ್ನು ರಾಶಿ ರಾಶಿಯಾಗಿ ಹರಡಿಕೊಂಡು ತನ್ನ ಬದುಕಿನ ಬಹುಭಾಗವನ್ನು ವಚನಸಾಹಿತ್ಯದ ಸಂಶೋಧನೆ, ಪ್ರಕಟಣೆಯಲ್ಲೇ ಕಳೆದರು. ಆ ಕ್ಷೇತ್ರದಲ್ಲಿ ಅವರು ಸಲ್ಲಿಸಿದ ಅಮೂಲ್ಯ ಸೇವೆಗಾಗಿ ಕನ್ನಡ ಜನತೆ ಅವರನ್ನಿಂದು ’ವಚನ ಪಿತಾಮಹ’ ಎಂದು ಗೌರವದಿಂದ ಕರೆಯುತ್ತದೆ. ಕನ್ನಡಕ್ಕೆ ವಚನ ನಿಧಿಯನ್ನಿತ್ತ ಆ ಪುಣ್ಯಪುರುಷ ಕೇವಲ ಸಂಶೋಧಕರಾಗಿ ಬಾಳಲಿಲ್ಲ. ಇಪ್ಪತ್ತನೆಯ ಶತಮಾನದ ಶರಣರಾಗಿ ಯಾವ ಪ್ರತಿಫಲವನ್ನೂ ಅಪೇಕ್ಷಿಸದೆ ತಮ್ಮ ಕೆಲಸವನ್ನು ಶ್ರದ್ದೆಯಿಂದ ಮಾಡುತ್ತ ಜೀವನ ಕಳೆದರು.

ಬಾಲ್ಯ-ಬೆಳವಣಿಗೆ-ವಿದ್ಯಾಭ್ಯಾಸ

ಹಳಕಟ್ಟಿಯವರು ೧೮೮೦ ರ ಜುಲೈ ೨ ರಂದು ಧಾರವಾಡದಲ್ಲಿ ಜನಿಸಿದರು. ಇವರ ತಂದೆ ಗುರುಬಸಪ್ಪ ಹಳಕಟ್ಟಿ. ತಾಯಿ ಶ್ರೀಮತಿ ದಾನಮ್ಮ. ಗುರುಬಸಪ್ಪನವರು ’ಫಕೀರಪ್ಪ’ ಎಂಬ ತಮ್ಮ ತಂದೆಯ ಹೆಸರನ್ನು ಮಗನಿಗಿಟ್ಟರು. ಫ.ಗು. ಹಳಕಟ್ಟಿಯವರ ಬಾಲ್ಯ-ಬೆಳವಣಿಗೆ ಹಾಗೂ ಪ್ರಾಥಮಿಕ, ಮಾಧ್ಯಮಿಕ ಅಭ್ಯಾಸ ಧಾರವಾಡದಲ್ಲೇ ಆಯಿತು. ಹುಟ್ಟಿದ ಮೂರು ತಿಂಗಳಲ್ಲೇ ತಾಯಿ ತೀರಿದ್ದರಿಂದ ಹಳಕಟ್ಟಿಯವರಿಗೆ ಅಪಾರ ದುಃಖ. ತಂದೆ ಗುರುಬಸಪ್ಪನವರ ಪುತ್ರವಾತ್ಸಲ್ಯ ಅದನ್ನು ಮರೆಸಿತು.

ಕವಿಗಳ ವಿಷಯ ತಿಳಿಯಬೇಕು ಎಂಬ ಕುತೂಹಲದಿಂದ ಹಳಕಟ್ಟಿಯವರು ಪ್ರಶ್ನೆಗಳನ್ನು ಕೇಳುತ್ತಿದ್ದರು.

ಗುರುಬಸಪ್ಪನವರು ವಿದ್ಯಾ ಇಲಾಖೆಯ ಹಲವು ಸ್ಥಾನಗಳಲ್ಲಿ ದುಡಿದರು. ೧೯೧೨ರಲ್ಲಿ ಸೇವಾ ನಿವೃತ್ತರಾದರು. ಅವರು ಕನ್ನಡದಲ್ಲಿ ಹಲವು ಮಹಾತ್ಮರ ಜೀವನ ಚರಿತ್ರೆಗಳನ್ನು ಬರೆದಿದ್ದಾರೆ. ಕನ್ನಡದ ಅಂದಿನ ಹೆಸರಾಂತ ಪತ್ರಿಕೆಯಾಗಿದ್ದ ’ವಾಗ್ಭೂಷಣ’ದಲ್ಲಿ ಇವರ ಲೇಖನಗಳು ಪ್ರಕಟವಾಗಿವೆ. ಧಾರವಾಡದಲ್ಲಿ ಕನ್ನಡಕ್ಕಾಗಿ ದುಡಿಯುತ್ತಿರುವ ಕರ್ನಾಟಕ ವಿದ್ಯಾವರ್ಧಕ ಸಂಘದ ಸಂಸ್ಥಾಪಕರಲ್ಲಿ ಒಬ್ಬರು. ಗ್ರಂಥಕರ್ತ, ನಾಡು-ನುಡಿ ಭಕ್ತ, ಸಮಾಜಪ್ರೇಮಿ, ವಿದ್ಯಾಭಿಮಾನಿಯಾದ ತಂದೆಗೆ ಮಗನಾಗಿ ಜನಿಸಿ ಫ. ಗು. ಹಳಕಟ್ಟಿ ಪುಣ್ಯವನ್ನೇ ಮಾಡಿದ್ದರು. ಅವರ ಬಾಲ್ಯ ಮತ್ತು ಬೆಳವಣಿಗೆಯಲ್ಲಿ ಈ ಮೂಲಕ ಕೆಲವು ಉತ್ತಮ ಸಂಸ್ಕಾರಗಳು ಮೂಡಿಬಂದವು.

೧೮೯೬ ರ ಹೊತ್ತಿಗೆ ಫ. ಗು. ಹಳಕಟ್ಟಿ ಮೆಟ್ರಿಕ್ಯುಲೇಷನ್ ಮುಗಿಸಿದರು. ಆ ಕಾಲಕ್ಕಾಗಲೇ ಅವರಿಗೆ ಸಂಶೋಧನೆಯತ್ತ ಮನಸ್ಸು ಹರಿದಿತ್ತು. ಹೈಸ್ಕೂಲಿನ ಕನ್ನಡ ವಾಚನ ಪುಸ್ತಕಗಳಲ್ಲಿದ್ದ ಸೋಮೇರ್ಶವರ ಕವಿ, ಸರ್ವಜ್ಞ, ಷಡಕ್ಷರಿ, ಸರ್ಪಭೂಷಣರ ಪದ್ಯಗಳನ್ನು ಉಪಾಧ್ಯರು ಕಲಿಸುತ್ತಿದ್ದರು. ಆದರೆ ಆ ಕವಿಗಾಳರು, ಅವರು ಎಲ್ಲಿಯವರು ಎಂಬುದು ಅವರಿಗೂ ತಿಳಿದಿರಲಿಲ್ಲ. ಕವಿಗಳ ವಿಷಯ ತಿಳಿಯಬೇಕು ಎಂಬ ಕುತೂಹಲದಿಂದ ಹಳಕಟ್ಟಿಯವರು ಇಂಥ ಪ್ರಶ್ನೆಗಳನ್ನು ಕೇಳಿದರೆ ಅವರ ಉತ್ತರವನ್ನೇ ಕೊಡುತ್ತಿರಲಿಲ್ಲ. ಮೇಲಾಗಿ ಪುಸ್ತಕ ಗಳಲ್ಲಿಯೂ ಕೂಡ ಈ ಬಗೆಗೆ ಮಾಹಿತಿ ದೊರಕುತ್ತಿರಲಿಲ್ಲ. ಹಳಕಟ್ಟಿಯವರಿಗೆ ಮಹಾಕವಿಗಳ ಪದ್ಯಗಳನ್ನು ಓದುವ ಅಭಿರುಚಿಯಿದ್ದಂತೆ ಅವರ ಚರಿತ್ರೆಯನ್ನು ಕೇಳಿ ತಿಳಿಯುವ ಕುತೂಹಲವೂ ಇತ್ತು. ಹೀಗಾಗಿ ಚಾರಿತ್ರಿಕ ವಿಷಯ ಸಂಗ್ರಹದ ಹಂಬಲ ಅವರ ಓದು ಮುನ್ನಡೆದಂತೆಲ್ಲ ಹೆಚ್ಚುತ್ತ ಹೋಯಿತು. ಅವರ ಸಂಶೋದನಾಸಕ್ತಿ ಕಾಲೇಜು ವ್ಯಾಸಂಗದಲ್ಲಿ ಪ್ರಬುದ್ಧ ಮಟ್ಟಕ್ಕೇರಿತು. ಆಗಿನ ಅವರ ಓದು ವಿಶಿಷ್ಟವೂ ಆದರ್ಶವೂ ಆಗಿತ್ತು. “ನಾನು ಕೇಳಿದ ಮಹತ್ವದ ವ್ಯಾಖ್ಯಾನಗಳು, ಕಾಲೇಜಿನ ಪ್ರೊಫೆಸರರ ಉಪನ್ಯಾಸಗಳು, ನಾನು ಓದಿದಿ ಗ್ರಂಥಗಳು – ಇವುಗಳ ಟಿಪ್ಪಣಿಗಳನ್ನು ಬರೆದಿಡುವುದು ನನ್ನ ವಾಡಿಕೆಯಾಗಿತ್ತು. ನಾನು ಇತರರು ಬರೆದ ಸಹಾಯದ ಪುಸ್ತಕಗಳನ್ನು ಎಂದು ಕೊಳ್ಳಲಿಲ್ಲ. ಪರೀಕ್ಷಾ ಕಾಲದಲ್ಲಿ ಇವನ್ನು ಓದಿದ ಕೂಡಲೆ ಸಮಗ್ರ ಗ್ರಂಥದ ಪುನರಾವೃತ್ತಿ ಬಹು ತೀವ್ರವಾಗಿ ಆದಂತೆ ನನಗಾಗುತ್ತಿತ್ತು. ನನ್ನ ಸಂಶೋಧನಾ ಕಾರ್ಯದಲ್ಲಿ ಇಂತಹ ಟಿಪ್ಪಣಿಗಳು ಅಥವಾ ಸಾರಾಂಶಗಳು ಬಹಳ ಉಪಯುಕ್ತವಾಗುತ್ತ ಬಂದುವು” ಎಂದಿದ್ದಾರೆ. ಹಳಕಟ್ಟಿಯವರು ೧೯೦೧ರಲ್ಲಿ ಮುಂಬಯಿಯ ಸೈಂಟ್ ಕ್ಸೇವಿಯರ‍್ ಕಾಲೇಜಿನಿಂದ ಬಿ.ಎ. ಪದವೀಧರರಾದರು. ಆ ಪರೀಕ್ಷೆಗೆ ಅವರ ಐಚ್ಛಿಕ ವಿಷಯಗಳು ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರಗಳು. ಅತ್ತ ವೈಜ್ಞಾನಿಕ ಅಭ್ಯಾಸ, ಇತ್ತ ಸಂಶೋಧನೆಯ ಒಲವು ಇವೆರಡೂ ಹಳಕಟ್ಟಿಯವರ ಬುದ್ಧಿಕೌಶ, ಚಿಕಿತ್ಸಕ ಮನಸ್ಸು, ಸತ್ಯನಿಷ್ಠೆ ಹಾಗೂ ಪ್ರಾಮಾಣಿಕತೆ-ಮುಂತಾದ ಅಪೂರ್ವ ಗುಣಗಳಿಗೆ ಪೂರ್ವತರಬೇತು ನೀಡಿದವು. ೧೯೦೪ರಲ್ಲಿ ಎಲ್.ಎಲ್.ಬಿ. ಪರೀಕ್ಷೆಯಲ್ಲಿ ಪ್ರಥಮ ವರ್ಗದಲ್ಲಿ ಉತ್ತೀರ್ಣರಾದರು. ಮರುವರ್ಷವೇ ಬೆಳಗಾವಿಯಲ್ಲಿ ವಕೀಲಿ ವೃತ್ತಿಯನ್ನು ಆರಂಭಿಸಿದರು. ಮರುವರ್ಷ ಬಿಜಾಪುರಕ್ಕೆ ಹೋದರು. ಶರಣರ ಜನ್ಮಭೂಮಿಯಾದ ಆ ಜಿಲ್ಲೆಯಲ್ಲಿ ಆಗಲೇ ಅವರು ಕಲ್ಪಿಸಿಕೊಂಡ ಯೋಜನೆಗಳು, ವಚನ ಸಾಹಿತ್ಯದ ಪ್ರಚಾರ-ಪ್ರಕಟಣಾ ಕಾರ್ಯಗಳಿಂದಾಗಿ ಅವರಿಗೂ ಆ ಜಿಲ್ಲೆಗೂ ಸಾರಸ್ವತ ಸಂಬಂಧ ಗಾಢವಾಗಿ ಬೆಳೆಯಿತು. ಬಿಜಾಪುರ ನಗರದ ಶೈಕ್ಷಣಿಕ ಸಾಂಸ್ಕೃತಿಕ ಬೆಳವಣಿಗೆಯ ಕ್ಷೇತ್ರದಲ್ಲಿ ಹಳಕಟ್ಟಿಯವರ ಹೆಸರು ಬೆಳಗಿತು.

ಸಾರ್ವಜನಿಕ ಹಾಗೂ ಶೈಕ್ಷಣಿಕ ರಂಗ

ಹಳಕಟ್ಟಿಯವರು ಜನತೆಗೆ ಅತ್ಯಂತ ನಿಕಟವಾದ ಕ್ಷೇತ್ರದಲ್ಲಿ ನಿಂತು ಸಾರ್ವಜನಿಕ ಸೇವೆ ಮಾಡಲು ಬಯಸಿದರು. ಸಮಾಜದಲ್ಲಿ ಬೆರೆಯದೆ ಸುಧಾರಣೆಗೆ ಹೊರಡುವುದು ತಪ್ಪು ಎಂಬುದು ಅವರ ಭಾವನೆ. ಅವರು ಬಿಜಾಪುರ ನಗರಸಭೆಯ ಸದಸ್ಯರಾಗಿ ಸೇರಿ ಅದರ ಕಾರ್ಯನಿರ್ವಾಹಕ ಸಮಿತಿಯ ಅಧ್ಯಕ್ಷರಾಗಿ ದುಡಿದರು. ಆ ಪಟ್ಟಣದ ನೀರು ಪೂರೈಕೆ ಯೋಜನೆಯ ಕಾರ್ಯಾರಂಭಕ್ಕೆ ಕಾರಣರಾದರು. ಆ ಕಾಲದಲ್ಲಿ ಇಡೀ ಮುಂಬಯಿ ಪ್ರಾಂತದಲ್ಲಿ ಬಿಜಾಪುರವು ಶೈಕ್ಷಣಿಕವಾಗಿ ಹಿಂದುಳಿದ ಜಿಲ್ಲೆಯಾಗಿತ್ತು. ಜೊತೆಗೆ ಕನ್ನಡವನ್ನೂ ಕಡೆಗಣಿಸಲಾಗಿತ್ತು. ೧೯೨೮ರಲ್ಲಿ ಇವರು ಶಾಲಾ ಮಂಡಳದ ಸದಸ್ಯರಾದಾಗ ಬಿಜಾಪುರ ನಗರದಲ್ಲಿ ಆರು ಮರಾಠಿ ಬಾಲಕ ಶಾಲೆಗಳು, ಒಂದು ಮರಾಠಿ ಬಾಲಕಿಯರ ಶಾಲೆ ಇದ್ದವು. ಕನ್ನಡ ಶಾಲೆಗಳ ಸಂಖ್ಯೆ ಕೇವಲ ಮೂರು. ಹೆಣ್ಣುಮಕ್ಕಳಿಗಂತೂ ಕನ್ನಡ ಶಾಲೆಯೇ ಇಲ್ಲ. ಪ್ರಾಥಮಿಕ ದೆಸೆಯಲ್ಲಿಯೇ ಕನ್ನಡಕ್ಕೆ ಈ ಗತಿಯಾದರೆ ಕನ್ನಡದ ಬೆಳವಣಿಗೆ ಹೇಗೆ ಸಾಧ್ಯ? ಕನ್ನಡ ಮನೆಮಾತಾದ ಅಂತಹ ದೊಡ್ಡ ಪಟ್ಟಣದಲ್ಲಿ ಕನ್ನಡ ಶಾಲೆಗಳಿಲ್ಲದಿರುವುದು ಹಳಕಟ್ಟಿಯವರಿಗೆ ಅವಮಾನವೆನಿಸಿತು. ಅವರಲ್ಲಿ ಕನ್ನಡ ಪ್ರಜ್ಞೆ ಜಾಗೃತವಾಯಿತು. ಕನ್ನಡದಲ್ಲಿ ಅಪೂರ್ವ ಸಾಹಿತ್ಯವಿರುವುದನ್ನು ಅನೇಕ ಧಾರ್ಮಿಕ ಮತ್ತು ಮಹಾಕೃತಿಗಳ ಪ್ರಮಾಣ ಬಲದಿಂದ ಕನ್ನಡ ಜನತೆಗೆ ಮನವರಿಕೆ ಮಾಡಿಕೊಟ್ಟರು. ಹಳಕಟ್ಟಿಯವರ ಸತತ ಪ್ರಯತ್ನದಿಂದ ಮತ್ತು ಅವರ ವಿದ್ವತ್ಪ್ರಭಾವದಿಂದ ಐದು ವರ್ಷದ ಅವರ ಸದಸ್ಯತ್ವದ ಅವಧಿಯಲ್ಲಿ ಬಾಲಕರಿಗೆ ಎರಡು ಶಾಲೆಗಳು, ಬಾಲಕಿಯರಿಗೆ ಎರಡು ಶಾಲೆಗಳು ಆರಂಭವಾದವು. ಕನ್ನಡ ಮಕ್ಕಳು ಕನ್ನಡ ಶಾಲೆಗಳಿಗೆ ಹೋಗುವ ಕಾಲ ಕೂಡಿ ಬಂತು. ಅವರು ಅನ್ಯಭಾಷಾ ಪ್ರಭಾವವನ್ನು ವಿರೋಧಿಸಲಿಲ್ಲ. ಆದರೆ ನಮ್ಮವರ ನಿರಭಿಮಾನವನ್ನು ಎತ್ತಿ ತೋರಿದ್ದರು. ಕನ್ನಡಿಗರ ಉದ್ಧಾರ ಕನ್ನಡದಿಂದಲೇ ಸಾಧ್ಯವೆಂಬುದು ಅವರಿಗೆ ಮನದಟ್ಟಾಗಿತ್ತು.

ಹಳಕಟ್ಟಿಯವರು ಶಿಕ್ಷಣದ ಕೆಲಸವನ್ನು ಕೆಲವು ಹೊಸ ರೀತಿಗಳಲ್ಲಿ ಬೆಳೆಸಿದರು. ನಗರಸಭೆಯ ಶಾಲಾ ಮಂಡಳದ ಅಧ್ಯಕ್ಷರಾಗಿದ್ದಾಗ ಔದ್ಯೋಗಿಕ ಪ್ರೌಢಶಿಕ್ಷಣ, ಸಂಗೀತ ವರ್ಗ, ಬಾಲಚಮೂಗಳ ವರ್ಗ ಹಾಗೂ ಇತರ ವೃತ್ತಿಶಿಕ್ಷಣದ ವರ್ಗಗಳನ್ನು ಆರಂಭಿಸಿದರು. ವೀರಶೈವ ಸಮಾಜದ ಜ್ಞಾನಾಭ್ಯುದಯಕ್ಕೆಂದು ಈಗ ಬೃಹತ್ತಾಗಿ ಬೆಳೆದಿರುವ ’ಲಿಂಗಾಯತ ಶೈಕ್ಷಣಿಕ ಸಂಸ್ಥೆ’ (ಬಿ.ಎಲ್.ಡಿ.ಇ. ಸಂಘ) ಯನ್ನು ೧೯೧೦ರಲ್ಲಿ ಸ್ಥಾಪಿಸಿ ಮಹಾಕಾರ್ಯ ಮಾಡಿದರು. ಇಂದು ಆ ಸಂಸ್ಥೆ ಇಡೀ ಜಿಲ್ಲೆಯಲ್ಲಿಯೇ ಜ್ಞಾನದಾಸೋಹ ನಡೆಸುತ್ತಿದೆ. ೧೯೧೪ರಲ್ಲಿ ಅವರು ಶ್ರೀ ಸಿದ್ಧೇಶ್ವರ ಪ್ರೌಢಶಾಲೆಯನ್ನು ಸ್ಥಾಪಿಸಿದರು. ಅವರು ವಿಶ್ವವಿದ್ಯಾಲಯ ಮಟ್ಟದ ಶಿಕ್ಷಣದ ರೂಪರೇಷೆಯನ್ನು ಅರಿತಿದ್ದರೂ ಪ್ರಾಥಮಿಕ ಹಂತದ ಶಿಕ್ಷಣಕ್ಕೆ ಹೆಚ್ಚು ಮಹತ್ವ ಕೊಟ್ಟರು. ಮುಂಬಯಿ ವಿಶ್ವವಿದ್ಯಾಲಯ ಸೆನೆಟ್‌ನ ಸದಸ್ಯರಾಗಿಯೂ ಅವರು ಸೇವೆ ಸಲ್ಲಿಸಿದರು.

ಸಹಕಾರಿ ರಂಗ

ಹಳಕಟ್ಟಿಯವರು ಸಹಕಾರಿ ಸಂಘಗಳ ಗೌರವ ಸಂಘಟಕರಾಗಿ ಮೂರು ವರ್ಷ ಕೆಲಸ ಮಾಡಿದರು. ಒಕ್ಕಲುತನ ಸಹಕಾರಿ ಸಂಘ, ನೇಕಾರರ ಸಹಕಾರಿ ಸಂಘ ಹಾಗೂ ಹತ್ತಿಯ ಮಾರಾಟದ ಸಂಘಗಳ ಸ್ಥಾಪಕರಾಗಿ ಅವುಗಳ ಅಭಿವೃದ್ಧಿಗೆ ಕಾರಣರಾದರು.

ಜನಹಿತಕಾರಿಯಾದ ಯಾವುದೇ ಕ್ಷೇತ್ರದಲ್ಲೂ ಕೂಡ ಅವರು ಹುಮ್ಮಸ್ಸಿನಿಂದ ಕೆಲಸ ಮಾಡುತ್ತಿದ್ದರು. ಬಿಜಾಪುರ ಜಿಲ್ಲಾ ಗ್ರಾಮೀಣ ಅಭಿವೃದ್ಧಿ ಮಂಡಳದ ಕಾರ್ಯದರ್ಶಿಯಾಗಿ ಇವರು ರೈತರ ಕಲ್ಯಾಣಕ್ಕೆ ಶ್ರಮಿಸಿದರು. ಕ್ಷಾಮಗಳು ಉಂಟಾಗದಂತೆ ಕ್ರಮ ಕೈಗೊಳ್ಳುವ ಯೋಜನೆಯಲ್ಲಿ ರೈತರಿಗಾಗಿ, ದೇಶಕ್ಕಾಗಿ ದುಡಿದರು. ಹಳಕಟ್ಟಿಯವರು ಆಗ ಬೇರೆ ಬೇರೆ ಹಳ್ಳಿಗಳಿಗೆ ಹೋಗಬೇಕಾಗುತ್ತಿತ್ತು. ಆ ಅವಧಿಯಲ್ಲಿ ತಮ್ಮ ವಿಭಾಗದ ಕಾರ್ಯದೊಡನೆ ಮಠಮಾನ್ಯಗಳಲ್ಲಿ ದೊರಕುವ ಪ್ರಾಚೀನ ಹಸ್ತಪ್ರತಿಗಳನ್ನು ಸಂಗ್ರಹಿಸುತ್ತ ಬಂದರು.

ರಾಜಕೀಯ ರಂಗ

ಹಳಕಟ್ಟಿಯವರು ೧೯೧೭ರಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ಕಾರ್ಯದರ್ಶಿಗಳಾದರು. ೧೯೨೦ರಲ್ಲಿ ಮುಂಬಯಿ ವಿಧಾನಪರಿಷತ್ತಿಗೆ ಚುನಾಯಿತರಾಗಿ ೧೯೨೪ರ ವರೆಗೆ ಸದಸ್ಯರಾಗಿದ್ದರು. ಆ ಕಾಲದಲ್ಲಿ ಕನ್ನಡವನ್ನು ಆಡುವ ಜನರು ಬೇರೆ ಬೇರೆ ಪ್ರಾಂತಗಳಲ್ಲಿ ಮತ್ತು ಸಂಸ್ಥಾನಗಳಲ್ಲಿ ಹಂಚಿಹೋಗಿದ್ದರು. ಅವರೆಲ್ಲ ಒಂದು ರಾಜ್ಯಕ್ಕೆ ಬರಬೇಕೆಂದು ಕನ್ನಡನಾಡಿನ ಏಕೀಕರಣಕ್ಕಾಗಿ ಕೆಲಸ ಮಾಡಿದವರಲ್ಲಿ ಹಳಕಟ್ಟಿಯವರೂ ಒಬ್ಬರು.

ಅದೇ ವರ್ಷ ಬಿಜಾಪುರದಲ್ಲಿ ’ನವಕರ್ನಾಟಕ’ ಎಂಬ ವಾರಪತ್ರಿಕೆಯನ್ನು ಅವರು ಆರಂಭಿಸಿದರು. ಅದರ ಮೊದಲನೆಯ ಸಂಚಿಕೆಯ (ಅಕ್ಟೋಬರ‍್ ೬, ೧೯೨೭) ಸಂಪಾದಕೀಯ ಟಿಪ್ಪಣಿಯಲ್ಲಿ, ’ಇದರಲ್ಲಿ ರಾಜಕೀಯ, ಸಾಮಾಜಿಕ, ಔದ್ಯೋಗಿಕ, ಶೈಕ್ಷಣಿಕ ಮುಂತಾದ ಕ್ಷೇತ್ರಗಳಲ್ಲಿ ಕರ್ನಾಟಕವು ಹೇಗೆ ಮುಮದುವರಿಯಬೇಕು? ಅದರ ಸಾಂಸ್ಕೃತಿಕ ಹೆಚ್ಚಳವು ಹೇಗೆ ಸಾಧ್ಯ? ಎಂಬುದನ್ನು ವಾಚಕರಿಗೆ ತಿಳಿಸುವುದರ ಮೂಲಕ ನವ ಕರ್ನಾಟಕವನ್ನು ಸಿದ್ಧಗೊಳಿಸುವುದೇ ಈ ಪತ್ರಿಕೆಯ ಮುಖ್ಯ ಉದ್ದೇಶವಾಗಿದೆ’ ಎಂದರು. ರಾಜಕೀಯ ಸಂಘಟನೆ ಮಾತ್ರದಿಂದಲ್ಲದೆ ಎಲ್ಲ ರಂಗಗಳಲ್ಲೂ ಪ್ರಗತಿಪರ ದೃಷ್ಟಿಯಿಂದ ಮುನ್ನಡೆದಾಗ ಮಾತ್ರ ಸಮೃದ್ಧ ಕರ್ನಾಟಕವೊಂದನ್ನು ಕಟ್ಟಲು ಸಾಧ್ಯವೆಂಬ ಅಂಶವನ್ನು ಅವರ ಈ ಹೇಳಿಕೆ ಸ್ಪಷ್ಟಪಡಿಸುತ್ತದೆ.

ನವಕರ್ನಾಟಕ ಕನ್ನಡಿಗರಲ್ಲಿ ಐಕ್ಯಭಾವವನ್ನು ಹೆಚ್ಚಿಸಲು ಕಾರಣವಾಯಿತು. ಕನ್ನಡ ಸಾಹಿತ್ಯ ಪರಿಷತ್ತು ಕನ್ನಡಿಗರಿಗಾಗಿ, ಕನ್ನಡ ಭಾಷೆ-ಸಾಹಿತ್ಯಗಳಿಗಾಗಿ ಸುಮಾರು ಅರವತ್ತು ವರ್ಷಗಳಿಂದ ಕೆಲಸ ಮಾಡುತ್ತಿದೆ. ಹಳಕಟ್ಟಿಯವರು ಅದರ ಸಂಸ್ಥಾಪಕರಲ್ಲಿ ಒಬ್ಬರು. ಈ ಹಿರಿಯರಿಗೆ ಕನ್ನಡ ಜನತೆ ಬಳ್ಳಾರಿಯಲ್ಲಿ ಜರುಗಿದ ೧೨ ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಪದವಿಯನ್ನಿತ್ತು ತನ್ನ ಕೃತಜ್ಞತೆ ಸಲ್ಲಿಸಿತು. ನ್ಯಾಯಾಲಯಗಳಲ್ಲಿ ಮತ್ತು ಕಚೇರಿಗಳಲ್ಲಿ ಕನ್ನಡ ಬಳಕೆಗೆ ಬರಬೇಕೆಂದೂ ಮರಾಠಿ ಪ್ರಭಾವಿತ ಕನ್ನಡ ಪ್ರದೇಶಗಳಲ್ಲಿ ಕನ್ನಡ ಶಾಲೆಗಳನ್ನು ಸ್ಥಾಪಿಸಬೇಕೆಂದೂ ಹಳಕಟ್ಟಿಯವರು ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನದಿಂದ ಒತ್ತಿ ಹೇಳಿದರು.

ವೀರಶೈವ ಸಮಾಜ ಸಂಘಟಕರು

ಕನ್ನಡ ನಾಡು-ನುಡಿಗಳ ಹಿತರಕ್ಷಕರಾಗಿದ್ದಂತೆ ಹಳಕಟ್ಟಿಯವರು ತಾವು ಹುಟ್ಟಿದ ವೀರಶೈವ ಸಮಾಜದ ನೂತನ ಶಿಲ್ಪಿಗಳೂ ಆದರು. ಆ ಕಾಲದಲ್ಲಿ ಹಳಕಟ್ಟಿಯವರ ನೂತನ ವಿಚಾರಗಳು ಕ್ರಾಂತಿಯುನ್ನುಂಟು ಮಾಡಿದವು. ವೀರಶೈವ ಸಮಾಜದಲ್ಲಿ ಒಳಭೇದಗಳು, ನ್ಯಾಯಾಲಯದವರೆಗೆ ಜಗಳ, ವ್ಯವಹಾರಗಳು-ಇವುಗಳಿಂದ ಕೆಡುಕಾಗುತ್ತಿದ್ದ ಕಾಲ ಅದು. ಇವರೆಲ್ಲರನ್ನೂ ಒಂದೇ ತತ್ವದ ಕೆಳಗೆ ತರುವ ವೀರಶೈವ ಧರ್ಮಸೂತ್ರ ಯಾವುದು? ಅದನ್ನು ಹಳಕಟ್ಟಿಯರು ಆ ಕಾಲಕ್ಕೆ ಅಭ್ಯಾಸ ಮಾಡತೊಡಗಿದರು. ೧೨ನೆಯ ಶತಮಾನದ ಕಲ್ಯಾಣ ಶರಣರ ವಚನಗಳನ್ನು ಬಿಟ್ಟರೆ ಅವರಿಗೆ ಬೇರೆಡೆ ಇಂತಹ ರಚನಾತ್ಮಕ ಸಾಹಿತ್ಯ ಕಾಣಲಿಲ್ಲ. ಅದಕ್ಕೆ ಅವರ ಅಸಂಖ್ಯಾತ ವಚನಗಳನ್ನು ಸಂಗ್ರಹಿಸಲೂ ವಚನಶಾಸ್ತ್ರದ ತಳಹದಿಯ ಮೇಲೆ ವೀರಶೈವ ಹೊಸ ಸಮಾಜವನ್ನು ಕಟ್ಟಲೂ ಕಂಕಣಬದ್ಧರಾದರು. ಈ ಕ್ಷೇತ್ರದಲ್ಲಿ ಕಾಲಿಟ್ಟ ಅವರು ತಮ್ಮ ಆಯುಷ್ಯವೆಲ್ಲವನ್ನು ವಚನಸಾಹಿತ್ಯದ ಸಮಗ್ರ ಸಂಶೋಧನೆಯಲ್ಲಿ ಕಳೆದರು. ಅವರ ಸಾಹಸಕಾರ್ಯದಿಂದ ಸಮಾಜ ಕಣ್ಣು ತೆರೆಯಿತು. ವಚನಕಾರರು ಎಲ್ಲರಿಗೆ ಮಾರ್ಗದರ್ಶಕರಾಗಬಲ್ಲರು ಎಂಬುದು ಸ್ಪಷ್ಟವಾಯಿತು. ಇದಕ್ಕೆ ಹಳಕಟ್ಟಿಯವರು ಮಾಡಿದ ತ್ಯಾಗ ಅಪೂರ್ವ. ಉರಿಯುಂಡ ಕರ್ಪೂರದಂತೆ ಅವರ ದೇಹಾತ್ಮಗಳು ವಚನಸಾಹಿತ್ಯದಲ್ಲಿ ಒಂದಾದವು. ಕನ್ನಡಿಗರಿಗೆ ಅಂತಹ ಉಜ್ವಲ ಸಾಹಿತ್ಯದ ಕಾಣಿಕೆಯನ್ನಿತ್ತ ಆ ಮಹಾವ್ಯಕ್ತಿಯೂ ಕೂಡ ಸಮಾಜದ ಉದಾಸೀನತೆ ಯಿಂದಾಗಿ ಬಾಳಿನಲ್ಲಿ ತುಂಬ ಕಷ್ಟಗಳನ್ನೆದುರಿಸಬೇಕಾಯಿತು.

ಕೌಟುಂಬಿಕ ಜೀವನ

ಹಳಕಟ್ಟಿಯವರ ತಂದೆಯವರು ಸಾಮಾನ್ಯ ನೌಕರಿಯಲ್ಲಿದ್ದರೂ ಸುಸಂಸ್ಕೃತ ಜೀವಿಗಳಾಗಿದ್ದರು. ಚಿಕ್ಕಂದಿನಲ್ಲೇ ತಾಯಿಯನ್ನು ಕಳೆದುಕೊಂಡ ಹಳಕಟ್ಟಿಯವರಿಗೆ ತಂದೆಯ ಪ್ರೀತಿವಾತ್ಸಲ್ಯಗಳು ಆ ಕೊರತೆಯನ್ನು ತುಂಬಿದವು. ಇವರ ಮಾವ ತಮ್ಮಣ್ಣಪ್ಪ ಚಿಕ್ಕೋಡಿ ಕನ್ನಡದಲ್ಲಿ ವಿದ್ವಾಂಸರಾಗಿದ್ದರು. ಇವರ ಸಂಪರ್ಕದಿಂದ ಹಳಕಟ್ಟಿಯವರು ಬಾಲ್ಯದಿಂದ ಸಾಹಿತ್ಯದ ಪರಿಚಯ ಮಾಡಿಕೊಂಡರು. ಇವರ ಪತ್ನಿ ಶ್ರೀಮತಿ ಭಾಗೀರಥಿಬಾಯಿ ಕೌಟುಂಬಿಕ ಜೀವನದಲ್ಲಿ ಕಷ್ಟನಷ್ಟಗಳನ್ನು ಎದುರಿಸುತ್ತ ಪತಿಯ ಸಂಶೋಧನೆಗೆ ಬೆಂಬಲ ನೀಡಿದರು. ಹಳಕಟ್ಟಿಯವರಿಗೆ ಚಂದ್ರಶೇಖರ, ಗುರುಪುತ್ರ ಮತ್ತು ಶಿವಶಂಕರ ಎಂಬ ಮೂವರು ಮಕ್ಕಳು. ಹಿರಿಯ ಮಗ ಚಂದ್ರಶೇಖರ ಮುಂಬಯಿಯ ’ವಿಕ್ಟೋರಿಯಾ ಟೆಕ್ನಿಕಲ್ ಸಂಸ್ಥೆ’ಯ ಉನ್ನತ ಪದವೀಧರರೂ ಮೇಧಾವಿಗಳೂ ಆಗಿದ್ದರು. ಮ್ಯಾಂಚೆಸ್ಟರ‍್ ನಲ್ಲಿ ಐದು ವರ್ಷ ತಾಂತ್ರಿಕ ಶಿಕ್ಷಣ ಪಡೆದು ದೆಹಲಿಯಲ್ಲಿ ಒಂದು ಉನ್ನತ ಹುದ್ದೆಯಲ್ಲಿದ್ದರು. ಅವರಿಗೆ ಆ ಕಾಲಕ್ಕೆ ದೊರಕುತ್ತಿದ್ದ ಮಾಸಿಕ ವೇತನ ಹನ್ನೆರಡುನೂರು ರೂಪಾಯಿಗಳು. ಇವರು ಮನೆತನದ ಆರ್ಥಿಕ ತೊಂದರೆಗಳನ್ನು ನಿವಾರಿಸಲು ತಂದೆಗೆ ಅನುಕೂಲರಾಗಿದ್ದರು. ಆದರೆ ೧೯೫೦ ರಲ್ಲಿ ಆತ ಚಿಕ್ಕವಯಸ್ಸಿನಲ್ಲಿ ತೀರಿಕೊಂಡರು. ಹಳಕಟ್ಟಿಯವರಿಗೆ ಸಿಡಿಲು ಬಡಿದಂತಾಯಿತು. ಚಂದ್ರಶೇಖರರ ಮರಣದ ಹಿಂದಿನ ವರ್ಷವೇ ಹಳಕಟ್ಟಿಯರು ರೈಲು ಪ್ರವಾಸ ಮಾಡುವಾಗ ಜಾರಿ ಬಿದ್ದುದರಿಂದ ಹಿಮ್ಮಡಿಯ ಎಲುಬು ಮುರಿದಿತ್ತು. ಅದಕ್ಕೆ ಒಂದು ವರ್ಷ ಕಾಲ ಅವರು ಹಾಸಿಗೆ ಹಿಡಿಯಬೇಕಾಯಿತು. ಅಂತಹ ಕಷ್ಟಕಾಲದಲ್ಲಿ ಮಗನೂ ತೀರಿಕೊಂಡ. ಒಂದಾದಮೇಲೊಂದು ಇಂತಹ ಕಷ್ಟಗಳು ಎರಗಿದವು. ಆದರೂ ಹಳಕಟ್ಟಿಯವರು ಧೃತಿಗುಂದಲಿಲ್ಲ. ಅವರದು ಶರಣ ಮನಸ್ಸು. ’ಕೂಡಲ ಸಂಗಮದೇವ ತನಗೆ ಬೇಕೆಂದು ಎತ್ತಿಕೊಂಡ’ ಎಂದು ಬಸವಣ್ಣನವರು ತಮ್ಮ ಮಗ ತೀರಿದಾಗ ಹೇಳಿದ ವಚನವನ್ನೇ ಆಧುನಿಕ ಶರಣರಾದ ಹಳಕಟ್ಟಿ ಸ್ಮರಿಸಿ ಸಮಾಧಾನ ಮಾಡಿಕೊಂಡರು. ಅವರು ತಮ್ಮ ’ಶಿವಾನುಭವ’ ಪತ್ರಿಕೆ ಬೆಳ್ಳಿ ಸಂಚಿಕೆಯಲ್ಲಿ ಸಾಕಷ್ಟು ವೈಯಕ್ತಿಕ ವಿಷಯಗಳನ್ನು ಪ್ರಸ್ತಾವಿಸಿದ್ದಾರೆ. ಆದರೆ ಅವೆಲ್ಲವೂ ಸಾಹಿತ್ಯಾಭಿವೃದ್ಧಿ ಮತ್ತು ಸಮಾಜದ ಸ್ಥಿತಿಗಳನ್ನು ಕುರಿತ ಚಿಂತನೆಗಳೇ ಆಗಿವೆ. ಆ ಕಾಲಕ್ಕೆ ಅವರಿಗುಂಟಾದ ಮಾನಸಿಕ ಕಳವಳವನ್ನಾಗಲಿ, ಧರ್ಮಪತ್ನಿಯ ಅಸ್ವಾಸ್ಥ್ಯವನ್ನಾಗಲಿ, ಹಣದ ತಾಪತ್ರಯವನ್ನಾಗಲಿ ಯಾವುದನ್ನೂ ಅವರು ದೊಡ್ಡದು ಮಾಡಿ ಹೇಳಿಲ್ಲ. ಹಳಕಟ್ಟಿಯವರ ಕಷ್ಟಸಹಿಷ್ಣುತೆಗೆ ಇದೊಂದು ನಿದರ್ಶನ. ಸಾಹಿತಿಗಳು, ಸಂಶೋಧಕರು ಎಷ್ಟೇ ಕಷ್ಟ ಒದಗಿದರೂ ತಮ್ಮ ಧ್ಯೇಯದತ್ತ ಮುನ್ನಡೆಯಬೇಕು. ಆತ್ಮ ಗೌರವನ್ನು ಕಾಪಾಡಿಕೊಳ್ಳಬೇಕು. ನಿಸ್ವಾರ್ಥವಾಗಿ ಸೇವೆ ಸಲ್ಲಿಸಬೇಕು. ಇವು ಅವರ ಉನ್ನತ ವಿಚಾರಗಳಾಗಿದ್ದವು.

ಹಳಕಟ್ಟಿಯವರಿಗೆ ಒಮ್ಮೆ ಆರ್ಥಿಕವಾಗಿ ತೀರ ಕಷ್ಟ ಪರಿಸ್ಥಿತಿ ಬಂದೊದಗಿತು. ಸುದ್ದಿ ತಿಳಿದ ಒಬಲೇಶ್ವರದ ಪೂಜ್ಯ ಗುರುಪಾದ ಸ್ವಾಮಿಗಳು ಮಠದ ಗಾಡಿಯಲ್ಲಿ ಜೋಳ, ಗೋಧಿ, ಹಾಗೂ ಶಿವಾನುಭವ ಪತ್ರಿಕೆಗೆ ನೆರವಾಗಲೆಂದು ೩೫೦ ರೂಪಾಯಿ ಕೊಟ್ಟು ಕಳಿಸಿದರು. ಜೊತೆಗೆ, ’ಸಾಹಿತ್ಯ ಸಂಶೋಧಕನ ಮನಸ್ಸು ನೆಮ್ಮದಿಯಿಂದ ಇರಬೇಕು. ಆದರ್ಶ ಸಂಶೋಧನ ಜೀವನ ಯಾವಾಗಲೂ ಕರುಣೆಯ ಕಥೆಯೇ. ಸಮಾಜ ತಪ್ಪು ಮಾಡಬಹುದು. ಆದರೆ ಸಮಾಜದ ಗುರುಗಳಾದ ನಾವು ತಪ್ಪು ಮಾಡಬಹುದೇ? ಅದಕ್ಕೆ ಇವನ್ನು ಸ್ವೀಕರಿಸಬೇಕು’ ಎಂಬುದಾಗಿ ಒಂದು ಪತ್ರ ಬರೆದರು. ಹಳಕಟ್ಟಿಯವರು ತಮಗೆ ನೆರವಾದ ಇಂತಹ ಅನೇಕ ಮಹಾ ವ್ಯಕ್ತಿಗಳನ್ನು, ಉದಾರ ಹೃದಯಿಗಳನ್ನು ಅಂತಃಕರಣಪೂರ್ವಕವಾಗಿ ಸ್ಮರಿಸಿದ್ದಾರೆ.

ವಕೀಲವೃತ್ತಿಗೆ ತಿಲಾಂಜಲಿ

ಹಳಕಟ್ಟಿಯವರ ಜೀವನ ಕ್ಷೇತ್ರ ತುಂಬ ವ್ಯಾಪಕವಾಗಿತ್ತು. ಅನೇಕ ಸಹಕಾರಿ ಸಂಘಗಳ ಅಧ್ಯಕ್ಷರಾಗಿ, ಜಿಲ್ಲಾ ರೈತರ ಸಂಘದ ಕಾರ್ಯದರ್ಶಿಯಾಗಿ, ವೀರಶೈವ ಮತ್ತು ವಿದ್ಯಾವರ್ಧಕ ಸಂಸ್ಥೆಗಳ ಸ್ಥಾಪಕರಾಗಿ, ಮುಂಬಯಿ ಪ್ರಾಂತದ ಕೌನ್ಸಿಲಿನ ಸಭಾಸದರಾಗಿ ದುಡಿದರು. ಇವು ಅವರ ಸಾರ್ವಜನಿಕ ಸೇವಾಕ್ಷೇತ್ರಗಳಾಗಿದ್ದವು. ಇವನ್ನವರು ಒಂದೊಂದಾಗಿ ತ್ಯಜಿಸುತ್ತ ಬಂದರು. ಸರ್ಕಾರ ಅವರನ್ನು ’ಪಬ್ಲಿಕ್ ಪ್ರಾಸಿಕ್ಯೂಟರ‍್’ (ಸರ್ಕಾರದ ವಕೀಲರು) ಎಂದು ನೇಮಿಸಿತ್ತು; ಅವರ ವರಮಾನಕ್ಕೆ ಇದೇ ಮುಖ್ಯ ಆಧಾರ. ಈ ಕೆಲಸವನ್ನು ಅವರು ಬಿಟ್ಟರು. ವೀರಶೈವ ವಾಙ್ಮಯದ ಪರಿಶೋಧನೆ ಅವರ ಜೀವನದ ತಪಸ್ಸಾಗಿತ್ತು. ಅದರ ಗುರಿ ಮುಟ್ಟಲು ಜೀವನದಲ್ಲಿ ಏನೆಲ್ಲವನ್ನು ತ್ಯಾಗ ಮಾಡಲು ಅವರ ಸಾಧಕ ಮನಸ್ಸು ಸಿದ್ಧವಾಗಿತ್ತು. ’ವಚನ ಸಾಹಿತ್ಯದ ಕೆಲಸವನ್ನು ಹೆಚ್ಚು ಉತ್ಸಾಹದಿಂದ ಮುಂದುವರಿಸಬೇಕಾಗಿತ್ತು. ಆ ಮಹತ್ವದ ಸಾಹಿತ್ಯದ ಪ್ರಕಟಣೆಗಾಗಿ ನನ್ನ ಸಂಪೂರ್ಣ ಲಕ್ಷ್ಯ ಪೂರೈಸುವ ಸಲುವಾಗಿ ನಾನು ನನ್ನ ವಕೀಲವೃತ್ತಿಯನ್ನು ತ್ಯಜಿಸಿದೆ’ ಎಂದಿದ್ದಾರೆ. ಸಾಹಿತ್ಯಕ್ಕಾಗಿ ಸರ್ವಾರ್ಪಣ ಮಾಡುವ ಈ ಮಹಾನುಭಾವ ಸ್ವಂತದ ಹಾನಿಯನ್ನು ಗಣನೆಗೆ ತರದೆ ಆದಾಯವಿಲ್ಲದ ಸಂಶೋಧನೆಯಂತಹ ಕೆಲಸಕ್ಕೆ ಕೈಹಾಕಿದರು. ಎಷ್ಟೋ ಅಡೆತಡೆಗಳು ಬಂದರೂ ಛಲದಿಂದ ಮುನ್ನುಗ್ಗಿದರು. ಸ್ವಂತದ ಮನೆಯನ್ನು ಮಾರಿದರು. ಒಂದು ಅಚ್ಚುಕೂಟಕೊಂಡರು. ಕೊನೆತನಕ ಬಾಡಿಗೆ ಮನೆಯಲ್ಲೇ ಜೀವನ ಕಳೆದರು. ಶರಣಸಾಹಿತ್ಯವನ್ನು ಪ್ರಕಟಿಸಲು ಮುಂದಾಗಿ ಬಡತನವನ್ನು ಬರಮಾಡಿಕೊಂಡರೂ ಲೆಕ್ಕಿಸಲಿಲ್ಲ. ಪುರಾತನರ ವಚನ ಸಂಪತ್ತು ಅವರಿಗೆ ಆತ್ಮೈಶ್ವರ್ಯವನ್ನು ತಂದುಕೊಟ್ಟಿತು. ಆ ಸಂಪತ್ತನ್ನು ಕನ್ನಡಿಗರಿಗೆಲ್ಲ ನೀಡಿ ಅವರೇ ಶ್ರೀಮಂತರಾದರು. ಅವರನ್ನರಿಯದ ಜನರೇ ಬಡವರಾದರು.

ಪದವಿ- ಪ್ರಶಸ್ತಿಗಳು

ಹಳಕಟ್ಟಿಯವರಿಗೆ ಭಾರತ ಸರ್ಕಾರವು ’ರಾವ್ ಬಹದ್ದೂರ‍್’ ಎಂಬ ಪ್ರಶಸ್ತಿ ನೀಡಿ ಅವರು ಮಾಡಿದ ಸಾರ್ವಜನಿಕ ಸೇವೆಯನ್ನು ಪ್ರಶಂಸಿಸಿತು. ಕನ್ನಡದ ಅಕ್ಷಯನಿಧಿಯಾದ ವಚನಸಾಹಿತ್ಯವನ್ನು ಬೆಳಕಿಗೆ ತಂದ ಆ ಜ್ಞಾನಯೋಗಿಗೆ ಕರ್ನಾಟಕ ವಿಶ್ವವಿದ್ಯಾಲಯವು ೧೯೫೬ರಲ್ಲಿ ಗೌರವ ಡಿ. ಲಿಟ್. ಪದವಿಯನ್ನು ನೀಡಿತು. ಕನ್ನಡ ಜನತೆ ಬಳ್ಳಾರಿಯಲ್ಲಿ ಜರುಗಿದ ಹನ್ನೆರಡನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನವನ್ನಿತ್ತು ಗೌರವಿಸಿತು. ಅವರು ವಿಶಾಲ ಹೃದಯದ ಕನ್ನಡಿಗರಾಗಿ ವೀರಶೈವ ಸಮಾಜವನ್ನು ಆಧುನಿಕ ದೃಷ್ಟಿಯಲ್ಲಿ ಮುನ್ನಡೆಸಲು ಯತ್ನಿಸಿದರು. ಧಾರವಾಡದಲ್ಲಿ ಕೂಡಿದ ಹನ್ನೊಂದನೆಯ ಅಖಿಲ ಭಾರತ ವೀರಶೈವ ಮಹಾಸಭೆಯ ಅಧ್ಯಕ್ಷರಾಗಿ ಹಳಕಟ್ಟಿಯವರು ಆ ಸಮಾಜದಲ್ಲಿ ಐಕಮತ್ಯ ಉಂಟಾಗುವಂತೆ ಪ್ರಯತ್ನಿಸಿದರು. ಹಳಕಟ್ಟಿಯವರ ವಿಶಾಲ ತತ್ವಗಳು ಬರಬರುತ್ತ ಜನತೆಗೆ ಅರ್ಥವಾಗತೊಡಗಿದವು. ವೀರಶೈವ ಸಮಾಜದ ಪ್ರಮುಖರು, ಮಠಾಧಿಕಾರಿಗಳು ಅವರನ್ನು ಅಭಿಮಾನ-ಗೌರವಗಳಿಂದ ಕಾಣತೊಡಗಿದರು. ರಾಣಿಬೆನ್ನೂರ್, ಸಿಂದಗಿ, ಬಂಥನಾಳ, ನವಲಗುಂದ, ಧಾರವಾಡ ನಗರಗಳಲ್ಲಿ ಅವರ ಸನ್ಮಾನ ಸಮಾರಂಭಗಳು ಜರುಗಿದವು. ಹಳಕಟ್ಟಿಯವರು ಯಾವುದೇ ಫಲ, ಪದವಿಗಳನ್ನು ಬಯಸಿ ವಾಙ್ಮಯಸೇವೆ ಮಾಡಲಿಲ್ಲ. ನಿಷ್ಠೆಯಿಂದ, ನಿಷ್ಕಾಮ ಭಕ್ತಿಯಿಂದ ಅವರು ಶರಣ ಸಾಹಿತ್ಯವನ್ನು ಪ್ರಕಟಿಸಿದರು.

ವಚನ ಪಿತಾಮಹ

ವ್ಯಕ್ತಿತ್ವ

ಹಳಕಟ್ಟಿಯವರು ತೆಳುದೇಹ, ಗೌರವರ್ಣದ, ಪ್ರಶಾಂತ ಮುಖಮುದ್ರೆಯ, ದೇಶೀ ಉಡುಪಿನ ಸರಳ ವ್ಯಕ್ತಿ. ಮಾತಿನಲ್ಲಿ ಮೃದು. ಮನದಲ್ಲಿ ಸಂಪನ್ನರು. ಸುಶೀಲರು. ಸುವಿಚಾರಿಗಳು. ಸತ್ಯ ಮತ್ತು ಪ್ರಾಮಾಣಿಕತೆ ಗಳಿಂದ ವಕೀಲಿವೃತ್ತಿ ನಡೆಸಿದ ಸನ್ಮಾರ್ಗಿಗಳು. ಉಜ್ವಲ ದೇಶಭಕ್ತಿ, ನಾಡು-ನುಡಿಗಳ ಪ್ರೀತಿ ಅವರ ಹೃದಯದಲ್ಲಿ ನೆಲಸಿತ್ತು. ವಚನ ವಾಙ್ಮಯದ ಉದ್ಧಾರಕ್ಕಾಗಿಯೇ ಅವರು ಜನ್ಮವೆತ್ತಿ ಬಂದರು. ಸದಾ ಆ ಸಾಹಿತ್ಯವನ್ನೇ ಕುರಿತು ಅವರ ಧ್ಯಾನವಿತ್ತು. ಹಳಕಟ್ಟಿಯವರಿಗೆ ಕರ್ನಾಟಕ ವಿಶ್ವ ವಿದ್ಯಾಲಯವು ’ಡಾಕ್ಟರ‍್ ಆಫ್ ಲೆಟರ‍್ಸ್’ ಪ್ರಶ್ತಿ ನೀಡಿದ ದಿನ ಅವರ ಗೌರವಾರ್ಥ ಧಾರವಾಡದಲ್ಲಿ ಸಭೆ ಏರ್ಪಟ್ಟಿತ್ತು. ರಾಜ್ಯಪಾಲರು, ಉಪಕುಲಪತಿಗಳು, ಸಾಹಿತಿಗಳು, ಅಧಿಕಾರಿಗಳು ಕಿಕ್ಕಿರಿದು ತುಂಬಿದ್ದ ಸಭೆಯಲ್ಲಿ ಹಳಕಟ್ಟಿಯವರು ಉಬ್ಬಲಿಲ್ಲ. ಉದ್ವೇಗ ಪಡಲಿಲ್ಲ. ಸಮಚಿತ್ತರಾಗಿದ್ದರು. ಅವರು ಅಂದಿನ ಕುಲಸಚಿವರಾದ ಎಸ್.ಎಸ್. ಒಡೆಯರ್ ಅವರನ್ನು ಒಂದೆಡೆ ಕರೆದು, “ನಿಮ್ಮ ತಂದೆಯವರು ಸಂಗ್ರಹಿಸುತ್ತಿದ್ದ ಅಂಬಿಗರ ಚೌಡಯ್ಯನವರ ವಚನಗಳ ವಷಯ ಎಲ್ಲಿಗೆ ಬಂತು?” ಎಂದು ಕೇಳಿದರಂತೆ. ಎಂತಹ ಗಳಿಗೆಯಲ್ಲೂ ಅವರಿಗೆ ಶರಣಸಾಹಿತ್ಯದ ಚಿಂತನೆಯೇ ಜೀವನದ ಉಸಿರಾಗಿತ್ತು ಎಂಬುದಕ್ಕೆ ಇದು ನಿದರ್ಶನ. ಲೋಕದಲ್ಲಿದ್ದೂ ಇಲ್ಲದಂತೆ ಅವರು ಕಾರ್ಯ ಮಾಡುತ್ತ ಬಂದರು. ಹಳಕಟ್ಟಿಯವರಿಗೆ ಇಡೀ ಆಯುಷ್ಯವೆಲ್ಲ ಅಮೃತದ ಗಳಿಗೆಯಾಗಿ ತೋರಿತು. ಅವರು ತಮ್ಮ ಪವಿತ್ರ ಕಾರ್ಯದಲ್ಲಿ ಹೊರಗಿನ ಲೋಕವನ್ನೇ ಮರೆಯುತ್ತಿದ್ದರು. ಬಿಜಾಪುರದಲ್ಲೇ ಇದ್ದು ಆ ನಗರದ ಭವ್ಯ ಐತಿಹಾಸಿಕ ಸ್ಥಳಗಳನ್ನು ಅವರು ಒಮ್ಮೆಯೂ ಪೂರ್ತಿ ನೋಡಲಿಲ್ಲ. ತಮ್ಮ ಕೆಲಸಕ್ಕೆ ಜೀವನವನ್ನೆಲ್ಲ ಮುಡಿಪಾಗಿಟ್ಟ ಅವರಿಗೆ ಐತಿಹಾಸಿಕ ಸ್ಥಳಗಳನ್ನು ನೋಡಲು ಕಾಲಾವಕಾಶವೇ ಆಗಲಿಲ್ಲ. ಪ್ರಸಿದ್ಧ ವ್ಯಾಖ್ಯಾನಕಾರರ ಸಭೆಗಳಿದ್ದಾಗ ಸ್ವಲ್ಪ ಹೊತ್ತು ಹೋಗಿ ಮತ್ತೆ ನೇರವಾಗಿ ಬಂದು ಸಂಶೋಧನೆಯಲ್ಲಿ ನಿರತರಾಗುತ್ತಿದ್ದರು. ಪಕ್ಷಪಾತವನ್ನು ಕಂಡರಿಯದ ಸುಮನಸ್ಸು, ಆಲೋಚನಾತ್ಮಕ ಸುಬುದ್ಧಿ, ಸಂಶೋಧನ ಸುಚಿತ್ತ, ಸ್ವಪ್ರಶಂಸೆಗೊಳಗಾಗದ ನಿರಹಂಕಾರಿತ್ವ-ಇವು ಹಳಕಟ್ಟಿಯವರ ಅಂತಃಕರಣ ಚತುಷ್ಟಯಗಳಾಗಿದ್ದವು. ೮೪ ವರ್ಷದ ತುಂಬು ಬಾಳನ್ನು ಬಾಳಿದ ಹಳಕಟ್ಟಿಯವರು ೧೯೬೪ರ ಜೂನ್ ೨೯ ರಂದು ಲಿಂಗೈಕ್ಯರಾದರು.

ವಚನ ಪಿತಾಮಹ

ಹಳಕಟ್ಟಿಯವರು ಶಿಕ್ಷಣ, ಸಹಕಾರ, ರಾಜಕೀಯ, ಸಾರ್ವಜನಿಕ ಸೇವೆ, ಕೃಷಿ, ಪತ್ರಿಕಾವ್ಯವಸಾಯ-ಇವೆಲ್ಲ ಕ್ಷೇತ್ರಗಳಿಗೆ ತಮ್ಮ ಸೇವೆ ಸಲ್ಲಿಸಿದರು. ಇದಕ್ಕಿಂತ ಹೆಚ್ಚಾಗಿ ಬೇರೆ ಶಾಶ್ವತವಾದ ಸೇವೆ ಕನ್ನಡದ ವಚನ ವಾಙ್ಮಯಕ್ಕೆ ಸಲ್ಲುವಂತಾದುದು ಕನ್ನಡಿಗರ ಪುಣ್ಯ. ಹಳ್ಳಿಯ ಮನೆ-ಮಠಗಳಲ್ಲಿ ಇದ್ದಲ್ಲಿಯೇ ಗೆದಲ್ಲು ತಿಂದು, ಹುಳುಹುಪ್ಪಡಿಗಳ ಬಾಯಲ್ಲಿ ಜೀರ್ಣವಾಗುತ್ತಿದ್ದ ಪುರಾತನರ ವಚನಗ್ರಂಥಗಳನ್ನು ಕಾಪಾಡಿ ಅವೆಲ್ಲವನ್ನು ಆಮೂಲಾಗ್ರವಾಗಿ ಸಂಶೋಧಿಸಿ, ಸಂಪಾದಿಸಿ, ಪ್ರಕಟಿಸಿ ಕನ್ನಡಿಗರಿಗೆ ಕೊಟ್ಟ ಕೀರ್ತಿ ಅವರದಾಗಿದೆ.

ವಚನ ವಾಙ್ಮಯದ ಸಂಶೋಧನೆ

ಕಾಲೇಜು ವಿದ್ಯಾರ್ಥಿಯಾಗಿದ್ದಾಗಿನಿಂದಲೂ ಹಳಕಟ್ಟಿಯವರಿಗೆ ಹಳೆಯ ಗ್ರಂಥಗಳ ಕಡೆಗೆ ಹೆಚ್ಚಿನ ಒಲವು. ೧೯೦೨ರಲ್ಲಿ ಧಾರವಾಡದಲ್ಲಿ ಪ್ಲೇಗು ಬೇನೆ ಹಬ್ಬಿದಾಗ ಅವರು ಕೆಲಕಾಲ ತಮ್ಮ ಮಾವಂದಿರಾದ ತಮ್ಮಣ್ಣಪ್ಪ ಚಿಕ್ಕೋಡಿಯವರಿದ್ದ ಬನಹಟ್ಟಿಗೆ ಹೋದರು. ಅಲ್ಲಿಗೆ ನಿವೃತ್ತ ನ್ಯಾಯಾಧೀಶರಾದ ವೀರಭದ್ರಪ್ಪ ಹಾಲಭಾವಿಯವರು ಮೇಲಿಂದಮೇಲೆ ಬರುತ್ತಿದ್ದರು. ಹಳಕಟ್ಟಿಯವರ ಪರಿಚಯವಾದ ಮೇಲೆ ಅವರ ಅಭಿರುಚಿ ತಿಳಿದಿದ್ದ ಹಾಲಭಾವಿಯವರು ತಮ್ಮ ಆಪ್ತರು ವಾಸವಾಗಿದ್ದ ಗೋಡೆ ಗ್ರಾಮಕ್ಕೆ ಕರೆದುಕೊಂಡು ಹೋದರು. ಮತ್ತು ಅವರ ಕಡೆಗಿದ್ದ ಪುರಾತನ ಗ್ರಂಥಗಳನ್ನು ತೋರಿಸಿದರು. ಹಳಕಟ್ಟಿಯವರಿಗೆ ಆ ಗ್ರಂಥರಾಶಿಯಲ್ಲಿ ’ಪ್ರಭು ಲಿಂಗಲೀಲೆ’ ಮತ್ತು ’ಗಣಭಾಷ್ಯ ರತ್ನಮಾಲೆ’ ಎಂಬ ಎರಡು ಗ್ರಂಥಗಳು ಅತಿ ಮಹತ್ವದ್ದಾಗಿ ತೋರಿದವು. ಗುಬ್ಬಿ ಮಲ್ಲಣ್ಣನು ಬರೆದ ಗಣಭಾಷ್ಯ ರತ್ನಮಾಲೆ ಅವರನ್ನು ಬಹಳವಾಗಿ ಆಕರ್ಷಿಸಿತು. ಅವರು ಈವರೆಗೆ ಕಾವ್ಯಗಳನ್ನೋದಿದ್ದರು. ಆದರೆ ಗಣಭಾಷ್ಯ ರತ್ನಮಾಲೆಯಲ್ಲಿ ಗದ್ಯರೂಪದ ವಚನಗಳು ಪ್ರಪ್ರಥಮವಾಗಿ ಅವರ ಕಣ್ಣಿಗೆ ಬಿದ್ದವು. ಅಲ್ಲಿನ ವಿಚಾರಗಳು, ಶೈಲಿ ಹೊಸದಾಗಿ ತೋರಿತು. ಹಳಕಟ್ಟಿಯವರ ವಚನ ವಾಙ್ಮಯ ಸಂಶೋಧನೆಗೆ ಇದೇ ಗ್ರಂಥ ನಾಂದಿಯಾಯಿತು. ಅವರು ವಚನ ಸಾಹಿತ್ಯದ ಹೊತ್ತಿಗೆಗಳನ್ನು ಶೋಧಿಸತೊಡಗಿದರು.

ಪುರಾತನ ಗ್ರಂಥ ಸಂಗ್ರಹ

ಹಳಕಟ್ಟಿಯವರು ಬನಹಟ್ಟಿಯಲ್ಲಿದ್ದಾಗ ಅರವತ್ತೈದು ಪ್ರಾಚೀನ ಹಸ್ತಪ್ರತಿಗಳ ಅಧ್ಯಯನ ಮಾಡಿದರು. ಪ್ಲೇಗು ಬೇನೆ ತಗ್ಗಿದ ಮೇಲೆ ೧೯೦೩ರಲ್ಲಿ ಅವರು ಧಾರವಾಡಕ್ಕೆ ಬಂದ ಮೇಲೆ ಅಲ್ಲಿಯೂ ಗ್ರಂಥ ಸಂಗ್ರಹ ಕಾರ್ಯವನ್ನು ಮುಂದುವರಿಸಿದರು. ಶಿವಲಿಂಗಪ್ಪ ಮಂಚಾಲಿ ಎಂಬುವರ ಮನೆಯಲ್ಲಿ ಪುರಾತನ ಗ್ರಂಥಗಳ ಬಹು ದೊಡ್ಡ ರಾಶಿ ಅವರಿಗೆ ದೊರೆಯಿತು. ಸಟೀಕಾ ಪ್ರಭುದೇವರ ವಚನ, ಷಟ್‌ಸ್ಥಲತಿಕಲ, ಶಿವಾಧಿಕ್ಯ ಪುರಾಣ ಇವು ತಾಳೆಯಗರಿ ಮೇಲೆ ಬರೆದ ಗ್ರಂಥಗಳಾಗಿದ್ದವು. ಹಳಕಟ್ಟಿಯವರು ತಾಳೆಗರಿ ಗ್ರಂಥಗಳನ್ನು ನೋಡಿದ್ದು ಇದೇ ಮೊದಲ ಸಲ. ಅವುಗಳ ಮೇಲಿನ ಬರವಣಿಗೆ ವಿಶಿಷ್ಟವೂ ಮನೋಹರವೂ ಆಗಿತ್ತು. ಹಿಂದಿನವರ ಜ್ಞಾನನಿಧಿ ಇಂತಹ ಗರಿಗಳ ಮೇಲೆ ಉಳಿದು ಬಂದುದು ಅವರಿಗೆ ಆಶ್ಚರ್ಯವನ್ನುಂಟುಮಾಡಿತು. ಮುದ್ರಣ ಯಂತ್ರಗಳು, ಕಾಗದಗಳಿರುವ ಈ ಕಾಲದಲ್ಲಿ ಇವನ್ನು ಅಲ್ಲಿಂದ ಸಂಪಾದಿಸಿ, ಪ್ರಕಟಗೊಳಿಸಿ, ಪುರಾತನ ಸಾಹಿತ್ಯವನ್ನು ಆಧುನಿಕ ಜನತೆಗೆ ನೀಡಬೇಕೆಂಬ ಉತ್ಸಾಹ, ಅಭಿಮಾನಗಳು ಹಳಕಟ್ಟಿಯವರಲ್ಲಿ ಮನೆ ಮಾಡಿಕೊಂಡವು. ಅವರು ಗ್ರಂಥ ಸಂಗ್ರಹ ಕಾರ್ಯವನ್ನು ಎಡೆಬಿಡದೆ ಮುಂದುವರಿಸಿದರು. ಹಳಕಟ್ಟಿಯವರು ವಕೀಲ ವ್ಯವಸಾಯಕ್ಕಾಗಿ ಹಳ್ಳಿಗಳಿಗೆ ಹೋಗಬೇಕಾಗುತ್ತಿತ್ತು. ಅವರು ಹೋದಲೆಲ್ಲ ಭಕ್ತರ ಮನೆಗಳಲ್ಲಿ, ಮಠಗಳಲ್ಲಿ ಸಂಗ್ರಹಿಸಿಟ್ಟಿದ್ದ ಕೈಬರಹದ ಗ್ರಂಥಗಳನ್ನು ಶೇಖರಿಸತೊಡಗಿದರು. ಜನರಲ್ಲಿ ಅವುಗಳ ಬಗೆಗೆ ಅಜ್ಞಾನ ತುಂಬಿತ್ತು. ಕೆಲವು ’ಕಡತ’ಗಳನ್ನು ಜಗುಲಿಯ ಮೇಲಿಟ್ಟು ಪೂಜೆ ಮಾಡುತ್ತಿದ್ದರು. ಹಲವನ್ನು ಹಳೆಯ ಪೆಟ್ಟಿಗೆಗಳಲ್ಲಿಟ್ಟು ಭದ್ರವಾಗಿ ಬೀಗ ಹಾಕಿದ್ದರು. ಅವು ಒಳಗೊಳಗೇ ನೀರುಹಿಡಿದು, ನುಸಿತಿಂದು ಹಾಳಾಗತೊಡಗಿದ್ದವು. ಶಿವಶರಣರು ಬರೆದ ಈ ಪವಿತ್ರ ಸಾಹಿತ್ಯ ಹೀಗೆ ಹುಡಿಗೂಡಿ ಹೋಗುತ್ತಿರುವುದನ್ನು ಹಳಕಟ್ಟಿಯವರು ಕಣ್ಣಾರೆ ಕಂಡರು. ಮನದಲ್ಲಿ ಮರುಗಿದರು. ಜನ ಅವನ್ನು ಕೇಳಿದರೆ ಕೊಡುತ್ತಿರಲಿಲ್ಲ. ಅವನ್ನು ಮುಟ್ಟಲೂ ಕೂಡ ಅವರು ಹೆದರುತ್ತಿದ್ದರು. ಹಳಕಟ್ಟಿಯವರು ಇಂತಹ ಜನರಿಗೆ ಅವುಗಳಲ್ಲಿನ ವಿಷಯವನ್ನು ತಿಳಿಸಿಹೇಳಿದರು. ಅವರು ಮಹತ್ವವಾದವು ಗಳನ್ನುಹಣ ಕೊಟ್ಟು ಕೊಂಡರು. ೧೯೦೪ ರಿಂದ ೧೯೧೮ ರವರೆಗೆ ಈ ಸಂಗ್ರಹ ಕಾರ್ಯವನ್ನು ಅವರು ಮುಂದುವರಿಸಿದರು. ಹಾನಗಲ್ಲ ಶ್ರೀ ಕುಮಾರಸ್ವಾಮಿಗಳೂ ಹರ್ಡೇಕರ ಮಂಜಪ್ಪನವರೂ ಹಳಕಟ್ಟಿಯವರ ಕೆಲಸಕ್ಕೆ ನೆರವು ನೀಡಿದರು.

ತಾಳೆಗರಿ ಗ್ರಂಥ ಪ್ರದರ್ಶನ

ಹಳಕಟ್ಟಿಯವರು ಸಂಗ್ರಹಿಸಿದ ಸುಮಾರು ಒಂದು ಸಾವಿರ ತಾಡೋಲೆ ಮತ್ತು ಕೋರಿಕಾಗದದ ಪ್ರತಿಗಳನ್ನು ೧೯೨೮ರ ಜನವರಿ ತಿಂಗಳಲ್ಲಿ ಬಿಜಾಪುರ ನಗರದಲ್ಲಿ ಪ್ರದರ್ಶನಕ್ಕಿಟ್ಟರು. ಸಾರ್ವಜನಿಕರಿಗೆ ಅವುಗಳ ಸಂರಕ್ಷಣೆಯ ಮಹತ್ವ ಮತ್ತು ಅವುಗಳ ಪರಿಚಯವಾಗಲೆಂಬುದೇ ಪ್ರದರ್ಶನದ ಉದ್ದೇಶವಾಗಿತ್ತು. ಹನ್ನೆರಡನೆಯ ಶತಮಾನದ ಶರಣರ ವಚನಗಳು ಹೇಗೆ ಉಳಿದು ಬಂದಿವೆ ಯೆಂಬುದನ್ನು ಜನ ನೋಡಿ ವಿಸ್ಮಿತರಾದರು. ಪ್ರಾಚೀನ ಹಸ್ತಪ್ರತಿಗಳ ಸಾರ್ವಜನಿಕ ಪ್ರದರ್ಶನವೊಂದು ನಡೆದದ್ದು ಇಡೀ ಕರ್ನಾಟಕದಲ್ಲಿ ಹೊಸದಾಗಿತ್ತು. ಹಳಕಟ್ಟಿಯವರು ಸಾಹಿತ್ಯ ಪ್ರಚಾರ ಹಾಗೂ ಸಂಶೋಧನ ಪದ್ಧತಿಗಳಿಗೆ ಈ ಬಗೆಯ ಪ್ರಾಯೋಗಿಕ ಮಹತ್ವ ಕೊಟ್ಟವರಲ್ಲಿ ಮೊದಲಿಗರೂ ಅಗ್ರಗಣ್ಯರೂ ಎನಿಸಿದರು.

ಹಳಕಟ್ಟಿಯವರು ತಾಡೋಲೆಯ ಗ್ರಂಥಗಳನ್ನು ಓದುವಾಗ ಆಯಾ ಗರಿಗಳನ್ನು ಮೊದಲು ತೊಳೆಯುತ್ತಿದ್ದರು. ಅಲ್ಲಿನ ವಿಷಯವನ್ನು ನೋಡಿ ಒಟ್ಟು ಕಡತದಲ್ಲಿ ಬಂದಿರುವ ಬೇರೆ ಬೇರೆ ರಚನೆಗಳನ್ನು ಟಿಪ್ಪಣಿ ಮಾಡಿಕೊಳ್ಳುತ್ತಿದ್ದರು. ಹೀಗೆ ವಿಷಯಕ್ಕನುಗುಣವಾಗಿ ಅವರು ಸಂಗ್ರಹಿಸಿದ ಎಲ್ಲ ಸಾಹಿತ್ಯವನ್ನು ಮೂವತ್ತೊಂದು ವರ್ಗಗಳಲ್ಲಿ ವಿಂಗಡಿಸಲಾಗಿತ್ತು. ವಚನಗಳು ಅವರಿಗೆ ಮೊದಲು ಬಿಡಿಬಿಡಿಯಾಗಿಯೇ ದೊರಕಿದವು. ವಚನಗಳ ಮುದ್ರಿಕೆಯನ್ನು ಅನುಸರಿಸಿ ಉಳಿದ ಪ್ರತಿಗಳಲ್ಲಿನ ಎಲ್ಲ ವಚನಗಳನ್ನು ನಕಲು ಮಾಡಿಕೊಂಡರು. ಇದರಿಂದ ಆಯಾ ವಚನಕಾರರ ವಚನಗಳ ಸ್ವತಂತ್ರ ಗ್ರಂಥಗಳು ನಿರ್ಮಾಣವಾದವು. ಹಸ್ತಪ್ರತಿ ಮಾಡಿದವರು ವಚನಗಳನ್ನು ಸರಿಯಾಗಿ ಜೋಡಿಸಿರಲಿಲ್ಲ. ಹಳಕಟ್ಟಿಯವರು ವೀರಶೈವ ತತ್ವಕ್ಕನುಗುಣವಾಗಿ ವಚನಗಳನ್ನು ವಿಭಾಗ ಮಾಡಿ ಮುದ್ರಿಸಿದರು. ವ್ಯಾಪಕವಾದ ವಚನ ವಾಙ್ಮಯವನ್ನು ಓದಿದ ಹಳಕಟ್ಟಿಯವರಿಗೆ ವಚನಗಳಿಗೊಂದು ತಾತ್ವಿಕ ಸ್ವರೂಪವಿರುವುದು ತಿಳಿಯಿತು. ಅವರು ವಚನಗಳನ್ನು ’ಶಾಸ್ತ್ರ’ವೆಂದು ಪರಿಗಣಿಸಿ ಓದಲು ಆರಂಭಿಸಿದರು. ಅದುವೇ ಮುಂದೆ ವೀರಶೈವ ಸಂಸ್ಕೃತಿಯ ಕೈಪಿಡಿಯಂತಿರುವ ಅವರ ’ವಚನಶಾಸ್ತ್ರಸಾರ’ ಗ್ರಂಥದ ನಿರ್ಮಾಣಕ್ಕೆ ತಳಹದಿಯಾಯಿತು.

‘ವಚನಶಾಸ್ತ್ರಸಾರ’ದ ಪ್ರಕಟಣೆ’

ವಚನಶಾಸ್ತ್ರಸಾರವು ಅವರ ಹದಿನೆಂಟು ವರ್ಷಗಳ ಅಖಂಡ ವಾಙ್ಮಯ ತಪಸ್ಸಿನ ಫಲ. ಇದನ್ನು ಬರೆಯುವಲ್ಲಿ ಅವರ ಮನಸ್ಸು ಕೂಡ ಶಿವಶರಣರ ಹೃದಯದಂತೆ ವಿಶ್ವ ವಿಶಾಲವಾಗಿದೆ. ಕರ್ನಾಟಕದ ಶಿವಶರಣರ ಅನುಭಾವ ಮಾರ್ಗಕ್ಕೆ ಹಳಕಟ್ಟಿಯವರ ಗ್ರಂಥ ಸುಸಂಬದ್ಧವಾದ, ಸಶಾಸ್ತ್ರೀಯವಾದ ಆಧುನಿಕ ವಿಚಾರ ಪದ್ಧತಿಯ ಚೌಕಟ್ಟನ್ನು ನಿರ್ಮಿಸಿದೆ. ವಚನಗಳನ್ನು ಬಿಡಿಬಿಡಿಯಾಗಿಯೇ ಓದುತ್ತಿದ್ದ ಅಂದಿನ ಜನತೆಗೆ ಅದೂ ಒಂದು ಶಾಸ್ತ್ರವಾಗಿದೆ ಎಂದು ಶ್ರುತಪಡಿಸಿದವರು ಹಳಕಟ್ಟಿಯವರು. ಹಳಕಟ್ಟಿಯವರು ವೀರಶೈವ ಶರಣರ ವಚನ ವಾಙ್ಮಯಕ್ಕೆ ಪ್ರಮಾಣ ಭೂತವಾದ ವಚನಶಾಸ್ತ್ರಸಾರ ವನ್ನು ಬರೆದರು. ಇವರ ಗ್ರಂಥ ಪ್ರಕಟಣೆಯಿಂದ ಕನ್ನಡಿಗರಿಗೆ ಶರಣರ ಉಜ್ವಲ ವಿಚಾರಗಳು ಗೊತ್ತಾದವು. ಅನುಭವದ ಪ್ರಾಮಾಣಿಕತೆ ಯಲ್ಲಿ, ಸಾಮಾಜಿಕ ಪ್ರಜ್ಞೆಯಲ್ಲಿ, ದ್ವೈತಾದ್ವೈತ ಕಲಹ ನಿರಸನದಲ್ಲಿ, ಉಚ್ಚ-ನೀಚಭಾವ ನಿರ್ಭೇದದಲ್ಲಿ, ವಿಶ್ವಬಂಧುತ್ವದಲ್ಲಿ, ಶ್ರಮ ಗೌರವತ್ವದಲ್ಲಿ, ಪ್ರಜಾಸತ್ತಾತ್ಮಕವಾದ ಆತ್ಮ ಕಲ್ಯಾಣ ಮಾರ್ಗದಲ್ಲಿ ಶರಣರ ವಿಚಾರಗಳು ಅತ್ಯುನ್ನತವೂ ಅತ್ಯಾಧುನಿಕವೂ ಆಗಿರುವುವೆಂಬುದು ಪ್ರತ್ಯಕ್ಷ ಗೋಚರವಾಯಿತು.

ಹಳಕಟ್ಟಿಯವರು ಈ ಗ್ರಂಥವನ್ನು ೧೯೨೧ ರಲ್ಲಿ ಬರೆದು ಅಚ್ಚಿಗೆ ಅಣಿಮಾಡಿದರು. ಅಂದು ಅಚ್ಚುಕೂಟ ಕಾರ್ಯಕ್ಕೆ ಹೆಸರಾದ ಒಂದು ಅಚ್ಚುಕೂಟಕ್ಕೆ ಇದರ ಹಸ್ತಪ್ರತಿಯನ್ನೂ ಮುದ್ರಣಕ್ಕೆ ಮುಂಗಡವಾಗಿ ೫೦೦ ರೂ. ಹಣವನ್ನೂ ಕಳಿಸಿದರು. ಅಚ್ಚುಕೂಟವನ್ನು ಭಾರತದಾಚೆ ಹುಟ್ಟಿ ಬೆಳೆದ ಒಂದು ಧರ್ಮದವರು ನಡೆಸುತ್ತಿದ್ದರು. ಅವರು ಹಳಕಟ್ಟಿಯವರ ಹಸ್ತಪ್ರತಿಯನ್ನು ಓದಿ, ತಮ್ಮ ಮುದ್ರಣಾಲಯದಲ್ಲಿ ಮುದ್ರಣ ಮಾಡಲು ನಿರಾಕರಿಸಿದರು. ಪ್ರತಿಯನ್ನೂ ಹಣವನ್ನೂ ಹಿಂದಿರುಗಿಸಿದರು. ಅವರು ಹಳಕಟ್ಟಿಯವರಿಗೆ ಹೀಗೆ ಕಾರಣ ತಿಳಿಸಿದರು: “ನೀವು ಬರೆದ ವಚನಶಾಸ್ತ್ರಸಾರದಲ್ಲಿ ಬರುವ ಪರಮಾತ್ಮನ ಸಂಬಂಧಿಯಾದ ವಿಚಾರಗಳು ನಮ್ಮ ಧರ್ಮದ ತತ್ವವನ್ನು ಹೋಲುತ್ತವೆ. ಇದನ್ನು ಪ್ರಕಟಿಸುವುದರಿಂದ ನಮ್ಮ ಮಿಷನ್ನಿನ ಉದ್ದೇಶಕ್ಕೆ ಭಂಗ ಬರುತ್ತದೆ.” ಹಳಕಟ್ಟಿಯವರಿಗೆ ಇದನ್ನೋದಿ ಅಸಮಾಧಾನವಾಯಿತಾದರೂ ಶರಣರ ವಿಚಾರಗಳು ವಿಶ್ವವ್ಯಾಪಕವಾಗಿರುವುದನ್ನು ತಿಳಿದು ಹೆಮ್ಮೆ ಉಂಟಾಯಿತು. ಅವರು ಅದನ್ನು ಬೆಳಗಾವಿಯಲ್ಲಿ ಅಚ್ಚುಮಾಡಿಸಿ ೧೯೨೩ರಲ್ಲಿ ಬೆಳಕಿಗೆ ತಂದರು. ವಚನಶಾಸ್ತ್ರಸಾರವು ಅನಂತರದ ವಚನಾಭ್ಯಾಸಿಗಳಿಗೆ ಕೈಪಿಡಿಯಾಯಿತು. ಹಳಕಟ್ಟಿಯವರ ಈ ಗ್ರಂಥದಿಂದ ವಚನ ವಾಙ್ಮಯದತ್ತ ಅನ್ಯಮತೀಯರೂ ತಮ್ಮ ಒಲವು ಸೂಚಿಸಿದರು. ಅಷ್ಟೇ ಅಲ್ಲ, ಇನ್ನೂ ಹಲವು ಹಿರಿಯ ವಿದ್ವಾಂಸರು ವಚನಸಾಹಿತ್ಯದ ಅಭ್ಯಾಸ ಮಾಡಿ ಪುಸ್ತಕಗಳನ್ನು ಬರೆಯಲು ಹಳಕಟ್ಟಿಯವರ ಸಾಹಿತ್ಯರಚನೆ ದಿಕ್ಸೂಚಿಯಾಯಿತು. ವಚನ ಶಾಸ್ತ್ರ ಸಾರವು ಧಾರ್ಮಿಕ ದೃಷ್ಟಿಯಿಂದಲ್ಲದೆ ಸಂಶೋಧನೆಯ ಕ್ಷೇತ್ರದಲ್ಲಿಯೂ ಅತಿ ಮಹತ್ವದ್ದೆಂದು ಪರಿಗಣಿಸಲ್ಪಟ್ಟಿತು. ಹಳಕಟ್ಟಿಯವರ ಗ್ರಂಥದಲ್ಲಿ ೨೩೦ ವಚನಕಾರರ ವಚನಗಳ ಉಲ್ಲೇಖವಿತ್ತು. ಅದರಲ್ಲಿ ಅವರು ೧೩೦ ವಚನಕಾರರ ವಚನಗಳನ್ನು ಪ್ರಪ್ರಥಮವಾಗಿ ಉದಾಹರಿಸಿದ್ದರು! ವಚನಶಾಸ್ತ್ರವು ಹೀಗೆ ಹಲವಾರು ದೃಷ್ಟಿಗಳಿಂದ ಆಧಾರಗ್ರಂಥವಾಗಿರುವುದು ಇದರಿಂದ ಸ್ಪಷ್ಟವಾಗುತ್ತದೆ.

ಸರ್ಕಾರ ಅಥವಾ ಸಂಘ ಸಂಸ್ಥೆಗಳ ನೆರವಿಲ್ಲದೆ ಹಳಕಟ್ಟಿಯವರು ವಚನಶಾಸ್ತ್ರಸಾರವನ್ನು ಕನ್ನಡಿಗರಿಗೆ ಕೊಟ್ಟರು. ವರ್ಷಗಟ್ಟಲೆ ಸ್ಥಳದಿಂದ ಸ್ಥಳಕ್ಕೆ ಅಲೆದು ವಚನಗಳನ್ನು ಸಂಗ್ರಹಿಸುವುದು, ಹಳೆಯ ಹಸ್ತಪ್ರತಿಗಳನ್ನು ಓದಿ ಅವನ್ನು ಸರಿಯಾಗಿ ವಿಂಗಡಿಸಿ ಅಚ್ಚಿಗೆ ಸಿದ್ಧಮಾಡುವುದು, ಅಚ್ಚು ಮಾಡಿಸುವುದು – ಇಷ್ಟೆಲ್ಲ ಒಬ್ಬ ವ್ಯಕ್ತಿಯ ಪ್ರಯತ್ನ ಎಂಬುದು ಆಶ್ಚರ್ಯಕರ. ಹಳಕಟ್ಟಿಯವರ ಖ್ಯಾತಿ ಇದರಿಂದ ಕರ್ನಾಟಕದ ತುಂಬ ಹಬ್ಬಿತು. ಅವರು ಇದೇ ಗ್ರಂಥದ ಇನ್ನೆರಡು ಸಂಪುಟಗಳನ್ನು ಕ್ರಮವಾಗಿ ೧೯೩೧ ಮತ್ತು ೧೯೩೯ ರಲ್ಲಿ ಪ್ರಕಟಿಸಿದರು.

‘ಶಿವಾನುಭವ’’ ಪತ್ರಿಕೆಯ ಸಾಧನೆ

ಶಿವಾನುಭವ ಪತ್ರಿಕೆ ವೀರಶೈವ ಸಂಶೋಧನ ಸಾಮಗ್ರಿಗಳ ಖಣಿ. ಹಳಕಟ್ಟಿಯವರು ತಮ್ಮ ಸ್ವಂತದ ’ಹಿತಚಿಂತಕ ಮುದ್ರಣಾಲಯ’ದಲ್ಲಿ ೧೯೨೬ ರಿಂದ  ಈ ಪತ್ರಿಕೆಯನ್ನು ಆರಂಭಿಸಿದರು. ಸಂಶೋಧನೆಗೆ ಪ್ರಥಮ ಪ್ರಾಶಸ್ತ್ಯವಿತ್ತುದರಿಂದ ಇದನ್ನು ವಿದ್ವಾಂಸರೇ ಓದುತ್ತಿದ್ದರು. ೧೯೫೧ ರಲ್ಲಿ ಇದು ಬೆಳ್ಳಿ ಹಬ್ಬವನ್ನಾಚರಿಸಿತು. ಚಂದಾದಾರರ ಸಂಖ್ಯೆ ಒಮ್ಮೆಯೂ ೩೦೦ ಕ್ಕೆ ಮೇಲೇರಲಿಲ್ಲ. ಯುದ್ಧಕಾಲದ ಕಷ್ಟದ ದಿನಗಳಲ್ಲಿ ಆರ್ಥಿಕ ಆಪತ್ತುಗಳು ಒದಗಿದಾಗಲೂ ಅದನ್ನವರು ನಿಷ್ಠೆಯಿಂದ ನಡೆಸಿಕೊಂಡು ಬಂದರು.

ಹಳಕಟ್ಟಿಯವರ ಗ್ರಂಥಗಳು

ಹಳಕಟ್ಟಿಯವರು ಸ್ವತಂತ್ರವಾಗಿ ಬರೆದ ಮತ್ತು ಸಂಪಾದಿಸಿ ಪ್ರಕಟಿಸಿದ ಗ್ರಂಥಗಳ ಸಂಖ್ಯೆ ೧೬೫ ಕ್ಕೆ ಮಿಕ್ಕಿದೆ. ಅವರು ಒಟ್ಟಾರೆ ೨೫೦೦೦ ಪುಟಗಳಷ್ಟು ವಿಸ್ತಾರವಾದ ವಚನ ವಾಙ್ಮಯವನ್ನು ಪ್ರಕಾಶನಗೊಳಿಸಿದ್ದಾರೆ. ಹಳಕಟ್ಟಿಯವರ ಬದುಕು-ಬರಹಗಳಲ್ಲಿ ಒಂದೇ ಭಾವವಿತ್ತು. ಒಂದೇ ಜೀವವಿತ್ತು. ಅವರೊಂದು ಮಹಾನ್ ಶಕ್ತಿಯಾಗಿದ್ದರು. ಹಿಡಿದು ಬಿಡೆನೆಂಬ ಛಲ ಈ ಆಧುನಿಕ ಶರಣರದಾಗಿತ್ತು. ಒಂದು ಸಂಸ್ಥೆ ಹತ್ತು ಯೋಜನೆಗಳಲ್ಲಿ ಪೂರೈಸಬಹುದಾದುದನ್ನು ಹಳಕಟ್ಟಿಯವರು ಒಬ್ಬರೇ ಮಾಡಿದರು. ವಚನ ವಾಙ್ಮಯದ ಸುಗಂಧ ಅವರಿಂದ ಹರಡಿತು.

ಕನ್ನಡ ಶರಣರು

ಕಲ್ಯಾಣದ ಶಿವಶರಣದಿಂದ ಆರಂಭವಾದ ವೀರಶೈವ ಕನ್ನಡ ವಾಙ್ಮಯ ೧೩-೧೪ ನೆಯ ಶತಮಾನಗಳಲ್ಲಿ ನಸುಕುಮಸುಕಾಯಿತು. ವಿಜಯನಗರ ಸಾಮ್ರಾಜ್ಯದ ಪ್ರೌಢ ದೇವರಾಯನ ಕಾಲದಲ್ಲಿ ’ನೂರೊಂದು ವಿರಕ್ತರ’ ಸಂಘಟನೆಯಿಂದ ವಚನ ವಾಙ್ಮಯದ ಹೊಂಬೆಳಗು ಮೂಡಿದರೂ ಮತ್ತೆ ಆ ಸಾಮ್ರಾಜ್ಯ ಸೂರ್ಯ ಅಸ್ತಂಗತನಾದ ಮೇಲೆ ಗುಪ್ತನಿಧಿಯಾಗಿಯೇ ಉಳಿಯಿತು. ಬ್ರಿಟಿಷರ ಆಡಳಿತದಲ್ಲಿ ದೇಶಭಾಷೆಗಳಲ್ಲಿ ಉಸಿರುಕಟ್ಟಿದ್ದಾಗ ಸಾಹಿತ್ಯ ಪ್ರಾಚೀನ ಹಸ್ತಪ್ರತಿಗಳ್ಲಿ, ತಾಡೋಲೆಗಳಲ್ಲಿ, ಮನೆ-ಮಠಗಳಲ್ಲಿ ಮೂಲೆ ಹಿಡಿದಿದ್ದಿತು. ಉದಾರ ಮತಿಗಳೂ ವಾಙ್ಮಯಪ್ರೇಮಿಗಳೂ ಆದ ಕೆಲವು ಕ್ರೈಸ್ತ ಪಾದ್ರಿಗಳು ನಮ್ಮ ಸಾಹಿತ್ಯವನ್ನು ಸಂಶೋಧಿಸ ತೊಡಗಿದವರಾದರೂ ಸಂಸ್ಕಾರ ಬಲವಿಲ್ಲದ ಅವರಿಗೆ ಶರಣರ ದಾರ್ಶನಿಕವಾಣಿ ಅರ್ಥವಾಗಲಿಲ್ಲ. ಈ ವಾಙ್ಮಯದ ಅಕ್ಷಯ ನಿಧಿಯನ್ನು ಅಗಿದು ತೆಗೆದ ಮೊತ್ತ ಮೊದಲ ಅಂಜನಸಿದ್ಧರು ಕವಿಚರಿತೆಗಾರರಾದ ಆರ‍್. ನರಸಿಂಹಾಚಾರ್ಯರು. ಅವರು ವಚನ ವಾಙ್ಮಯದ ಪರಿಶೋಧಕರಾದರು. ಅನಂತರ ವಚನಸಾಹಿತ್ಯದ ಪುನರುದ್ಧಾರಕ್ಕಾಗಿಯೇ ತ್ರಿಕರಣಗಳನ್ನರ್ಪಿಸಿದ ಕನ್ನಡ ಶರಣರು ಹಳಕಟ್ಟಿಯವರು.

ವಚನ ವಾಙ್ಮಯದ ಬಗೆಗೆ ಸ್ವತಂತ್ರ ಗ್ರಂಥಗಳನ್ನು ಮೊದಲು ರಚಿಸಿದ ಕೀರ್ತಿ ಹಳಕಟ್ಟಿಯವರಿಗೆ ಸಲ್ಲುತ್ತದೆ. ಆಧುನಿಕ ಪದ್ಧತಿಯಲ್ಲಿ ಪರಿಷ್ಕರಣ ಕಾರ್ಯವನ್ನು ವಚನ ಸಂಪಾದನೆಯಲ್ಲಿ ಅನುಸರಿಸಿದವರೂ ಅವರೇ. ಬೇರೆಬೇರೆ ಶರಣರ ಹೆಸರಿನಲ್ಲಿ ಅವರು ಬರೆದ ವಚನ ಗ್ರಂಥಗಳನ್ನು ಸ್ವತಂತ್ರವಾಗಿ ಪ್ರಕಟಿಸಿದವರಲ್ಲಿ ಹಳಕಟ್ಟಿಯವರೇ ಮೊದಲಿಗರು. ಅಂಬಿಗರ ಚೌಡಯ್ಯ, ಚೆನ್ನಬಸವಣ್ಣ, ದೇವರ ದಾಸಿಮಯ್ಯ, ಪ್ರಭುದೇವ, ಬಸವೇಶ್ವರ, ಅಕ್ಕಮಹಾದೇವಿಯವರ ವಚನಗಳನ್ನು ಇವರು ೧೯೨೬ ರಿಂದ ಮುದ್ರಿಸಲು ಆರಂಭಿಸಿದರು. ಬಸವೇಶ್ವರ ವಚನಗಳನ್ನು ಆಂಗ್ಲ ಭಾಷೆಗೆ ಅನುವಾದಿಸಿ ಜಗತ್ತಿಗೆ ವಚನ ಸಾಹಿತ್ಯದ ಕೀರ್ತಿ ಪಸರಿಸುವಂತೆ ಮಾಡಿದ ಕನ್ನಡಿಗರಲ್ಲಿ ಹಳಕಟ್ಟಿಯವರೇ ಆದ್ಯರು. ೧೯೨೨ ರಲ್ಲಿ ಅವರು ಬಸವಣ್ಣನವರ ಮುಖ್ಯವಾದ ವಚನಗಳನ್ನು ಭಾಷಾಂತರಿಸಿ ’ಇಂಡಿಯನ್ ಆಂಟಿಕ್ವರಿ’ ಪತ್ರಿಕೆಯಲ್ಲಿ ಪ್ರಕಟಿಸಿದರು.

ಕನ್ನಡದ ದಾರ್ಶನಿಕ ಉದ್ಗ್ರಂಥಗಳಲ್ಲಿ ಒಂದಾದ ’ಶೂನ್ಯ ಸಂಪಾದನೆ’ಯ ಖ್ಯಾತಿ ಹರಡಿದ್ದು ಹಳಕಟ್ಟಿಯವರಿಂದ. ೧೯೩೦ ರಲ್ಲಿ ಅದನ್ನವರು ಮೊಟ್ಟ ಮೊದಲು ಪ್ರಕಟಿಸಿದರು. ವಚನಗಳನ್ನು ಗಾಯನರೂಪದಲ್ಲಿ ಅಳವಡಿಸಿದ್ದು, ಶಿವಶರಣರ ಚರಿತ್ರೆಗಳನ್ನು ಬರೆದದ್ದು, ವೀರಶೈವ ರಾಜಕೀಯ ಮನೆತನಗಳ ಇತಿಹಾಸ ರಚಿಸಿದ್ದು, ಶಿವಾನುಭವ ಶಬ್ದಕೋಶ ನಿರ್ಮಿಸಿದದು, ಶರಣರ ಆತ್ಮ ಚರಿತ್ರೆಗಳಂತಿರುವ ಹರಿಹರನ ೪೦ ರಗಳೆಗಳನ್ನು ಎಂಟು ಭಾಗಗಳಾಗಿ ಪ್ರಕಟಿಸಿದ್ದು, ’ಕೃಷಿಜ್ಞಾನ ಪ್ರದೀಪಿಕೆ’ ಯಂತಹ ವೀರಶೈವ ಲೋಕೋಪಯೋಗಿ ಶಾಸ್ತ್ರಗ್ರಂಥವನ್ನು ಪರಿಚಯಿಸಿದ್ದು, ಅಬ್ಬಲೂರ ಏಕಾಂತರಾಮಯ್ಯ, ಚೌಡದಾನಪುರದ ಅಂಬಿಗರ ಚೌಡಯ್ಯ, ಶಿರವಾಳದ ರೇವಣಸಿದ್ಧೇಶ್ವರ.