ಕನ್ನಡ ಸಾಹಿತ್ಯದಲ್ಲಿ ಜೈನ ಸಾಹಿತ್ಯವು ವಿಶಿಷ್ಟ ನೆಲೆಯಲ್ಲಿ ನಿಂತಿದೆ. ಗುಣದಲ್ಲಿಯೂ ಗಾತ್ರದಲ್ಲಿಯೂ ಮಿಗಲಾದ ಕೃತಿಗಳನ್ನು ರಚಿಸಿದವರಲ್ಲಿ ಜೈನರೇ ಮೊದಲಿಗರು.ಪಂಪ ಪೊನ್ನ ರನ್ನ ಇವರು ರತ್ನತ್ರಯರೆಂದೂ ಜಿನಸಮಯದೀಪಕರೆಂದೂ ಪರಕೀರ್ತಿತರಾಗಿದ್ದಾರೆ. ಪೊನ್ನ ರನ್ನ ಜನನ್ರು ಕವಿಚಕ್ರವರ್ತಿಗಳೆಂದೂ ಖ್ಯಾತಿವೆತ್ತಿದ್ದಾರೆ. ಇವರೆಲ್ಲರೂ ತಮ್ಮ ಕೃತಿಗಳಲ್ಲಿ ಧರ್ಮವನ್ನು ಕಾವ್ಯಧರ್ಮವನ್ನೂ ಮೆರೆದಿದ್ದಾರೆ. ಚಂಪೂಕಾವ್ಯಗಳಲ್ಲದೆ ಗದ್ಯಅಲಂಕಾರ ಛಂದಸ್ಸು ವೈದ್ಯಗ್ರಂಥ ರಚನೆಯಲ್ಲಿಯೂ ಜೈನರೇ ಮೊದಲಿಗರಾಗಿದ್ದಾರೆ. ಒಂಭತ್ತನೆಯ ಶತಮಾನದಲ್ಲಿ ರಚಿತವಾದ ಶಿವಕೋಟಾಚಾರ್ಯನ ವಡ್ಡಾರಾಧನೆ ಗದ್ಯಕೃತಿಗಳಲ್ಲಿ ಮೊದಲನೆಯದಾಗಿದೆ. ಕ್ರಿ.ಶ. ೯೭೮ರಲ್ಲಿದ್ದ ಚಾವುಂಡರಾಯನ ತ್ರಿಷಷ್ಟಿ ಲಕ್ಷಣ ಮಹಾಪುರಾಣವು ಪ್ರಸಿದ್ಧವಾಗಿದೆ. ೧೦೪೯ರಲ್ಲಿ ರಚಿತವಾದ ಶ್ರೀಧರಾಂಕನ ಜಾತಕತಿಲಕವೆಂಬ ಜ್ಯೋತಿಷಗ್ರಂಥ, ೧೩೬೦ರಲ್ಲಿದ್ದ ಮಂಗರಾಜನ ಖಗೇಂದ್ರಮಣಿದರ್ಪಣ ಶಾಸ್ತ್ರಗ್ರಂಥಗಳಲ್ಲಿ ಹಿರಯ ಸ್ಥಾನವನ್ನು ಪಡೆದಿವೆ. ಮಲ್ಲಿಕಾರ್ಜುನನ ಸೂಕ್ತಿದುಧಾರ್ಣವವು ಸಂಕಲನ ಗ್ರಂಥಗಳಲ್ಲಿ ಅದ್ವಿತೀಯ ಸ್ಥಾನವನ್ನು ಪಡೆದಿದೆ. ಜೈನಧರ್ಮದ ಮೂಲತತ್ತ್ವಗಳನ್ನೊಳಗೊಂಡ ದ್ವಾದಶಾನುಪ್ರೇಕ್ಷೆಗಳ ನಿರೂಪಣೆಯನ್ನು ಮಾಡಿರುವ ಬಂಧುವರ್ಮನ ಜೀವಸಂಬೋಧನಂ ಜನಪ್ರಿಯಕೃತಿಯಾಗಿದ್ದು ಜಿನಧರ್ಮ ಕಾವ್ಯಧರ್ಮಗಳ ಸಮ್ಮಿಳತೆಯಿಂದ ಕೂಡಿದೆ. ಕ್ರಿ.ಶ. ೮೫೦ರಲ್ಲಿ ರಚಿತವಾದ ಶ್ರೀವಿಜಯ ಕವಿರಾಜಮಾರ್ಗ ಕೃತಿಯು ಐತಿಹಾಸಿಕ ಮಹತ್ವವನ್ನು ಪಡೆದಿದೆ. ೧೦೪೨ರಲ್ಲಿದ್ದ ೨ನೆಯ ನಾಗಮರ್ವನ ವರ್ಧಮಾನಪುರಾಣ, ಕಾವ್ಯಾವಲೋಕನ, ಅಭಿಧಾನ ವಸ್ತುಕೋಶ ಮೊದಲಾದವು ಕನ್ನಡ ಸಾಹಿತ್ಯದಲ್ಲಿಯೇ ಅಪೂರ್ವ ಕೃತಿಗಳಾಗಿವೆ. ಆದಿಕವಿ ಮಹಾಕವಿ ಎನಿಸಿಕೊಂಡಿರುವ ಪಂಪನ ಆದಿಪುರಾಣ, ವಿಕ್ರಮಾರ್ಜುನವಿಜಯಗಳ ಮುಂದಣ ವಿದ್ವಾಂಸಕರಿಗೆ ಕವಿಗಳಿಗೆ ಆದರ್ಶವಾಗಿ ನಿಂತಿವೆ.

ಇಂತಹ ಉತ್ತಮ ಕೃತಿಗಳಂತೆಯೇ ಅಬಂಧುವರ್ಮನು ರಚಿಸಿರುವ ಮೂರಉ ಕೃತಿಗಳಲ್ಲಿ ಜೀವಸಂಬೋಧನಂ ಮತ್ತು ಹರಿವಂಶಾಭ್ಯುದಯಂ ಇವುಗಳನ್ನು ಇಲ್ಲಿ ಅಳವಡಿಸಲಾಗಿದೆ. ಜೀವ ಸಂಬೋಧನ ಗ್ರಂಥವು ಈ ಮೊದಲಿಗೆ ಗದ್ಯಾನುವಾದದೊಡನೆ ೧೯೯೬ರಲ್ಲಿ ಶ್ರೀ ಹೊಂಬುಜ ಕ್ಷೇತ್ರದ ಶ್ರೀ ಸಿದ್ಧಾಂತಕೀರ್ತಿ ಗ್ರಂಥಮಾಲೆಯಲ್ಲಿ ಪ್ರಕಟವಾಗಿದ್ದಿತು. ಹರಿವಂಶಾಭ್ಯುದಯವು ಮೈಸೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಸಂಸ್ಥೆಯಿಂದ ೧೯೭೪ರಲ್ಲಿ ಹೊರಬಂದಿದ್ದಿತು. ಈ ಎರಡು ಸಂಸ್ಥೆಗಳಿಗೂ ನನ್ನ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ನಾವೇ ಸಂಪಾದಿಸಿದ ಮೂರನೆಯದಾದ ಸತಿಧರ್ಮಸಾರವು ಗದ್ಯಾನುವಾದದೊಡನೆ ಮೈಸೂರು ರವಿಪ್ರಕಾಶನದಿಂದ ೧೯೭೬ರಲ್ಲಿ ಪ್ರಕಾಶಿರವಾಗಿದ್ದು ಎರಡನೆಯ ಆವೃತ್ತಿಯಾಗಿ ಮಲೆಯೂರಿನ ಶ್ರೀ ಶ್ರೀ ಅತಿಶಯ ಸಿದ್ಧಕ್ಷೇತ್ರದ ಕನಕಗಿರಿ ಪ್ರಕಾಶದಿಂದ ೧೯೯೮ರಲ್ಲಿ ಹೊರಬಂದಿದೆ.

ಪ್ರಕೃತದಲ್ಲಿ ಜೀವಸಂಬೋಧನೆ ಮತ್ತು ಹರಿವಂಶಾಭ್ಯುದಯ ಗ್ರಂಥಗಳನ್ನು ಒಂದೇ ಸಂಪುಟದಲ್ಲಿ ಹಂಪೆಯ ಕನ್ನಡ ವಿಶ್ವವಿದ್ಯಾಲಯವು ಪ್ರಕಟಿಸುತ್ತಿದೆ. ಇವುಗಳ ಸಂಪಾದನಾಕಾರ್ಯವನ್ನು ನನಗೆ ವಹಿಸಿದ ಕನ್ನಡ ವಿಶ್ವವಿದ್ಯಾಲಯದ ಅಭಿವೃದ್ಧಿಗೆ ಶ್ರಮಿಸುತ್ತಿರುವ ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಬಿ.ಎ. ವಿವೇಕರೈ ಅವರಿಗೂ ಇಂತಹ ಹಲವಾರು ಯೋಜನೆಗಳನ್ನು ಕಾರ್ಯರೂಪಕ್ಕೆ ತರುವಲ್ಲಿ ಅತ್ಯಂತ ಕಾಳಜಿಯಿಂದ ದುಡಿಯುತ್ತಿರುವ ಪ್ರಸಾರಾಂಗದ ನಿರ್ದೇಶಕರಾದ ಪ್ರೊ. ಮಲ್ಲೆಪುರಂಜಿ. ವೆಂಕಟೇಶ ಅವರಿಗೂ ನನ್ನ ಅತ್ಯಂತ ಗೌರವಪೂರ್ವಕ ಕೃತಜ್ಞತೆಗಳು ಸಲ್ಲುತ್ತವೆ. ಈ ಸಂಪುಟಗಳ ಉನ್ನತ ಸಲಹಾಸಮಿತಿಯ ಸದಸ್ಯರಿಗೂ ಕುಲ ಸಚಿವರಿಗೂ ನನ್ನ ವಿಶೇಷ ವಂದನೆಗಳು.

ಅಂದವಾಗಿ ಮುದ್ರಣ ಮಾಡಿರುವ ಶ್ರೀ ರಾಜೇಂದ್ರ ಪ್ರಿಂಟರ್ಸ ಆಂಡ್ ಪಬ್ಲಿಷರ್ಸ್‌ನ ಮಾಲೀಕರಾದ ಶ್ರೀಯುತ ಡಿ.ಎನ್. ಲೋಕಪ್ಪ ಮತ್ತು ಸಿಬ್ಬಂದಿಯವರಿಗೆ ನನ್ನ ನಮಸ್ಕಾರಗಳು.

ಬಿ.ಎಸ್. ಸಣ್ಣಯ್ಯ
ಮೈಸೂರು
೨೯.೩.೨೦೦೬