ಅಮೆರಿಕಾದ ‘ಲೈಫ್’ ಪತ್ರಿಕೆಗಾಗಿ ಕೆಲಸ ಮಾಡಲು ೧೯೪೬ರಲ್ಲಿ ಭಾರತಕ್ಕೆ ಬಂದ ಮಾರ್ಗರೆಟ್ ಬರ್ಕ್‌ವೈಟ್ ಮೂಲತಃ ಒಬ್ಬ ಫೋಟೋ ಜರ್ನಲಿಸ್ಟ್. ಬರ್ಕ್‌ವೈಟ್ ಭಾರತಕ್ಕೆ ಬಂದ ಸಂದರ್ಭದಲ್ಲಿ ಭಾರತ ಸ್ವತಂತ್ರವಾಗುವ ದಿನಗಳು ಸಮೀಪಿಸುತ್ತಿದ್ದವು. ಆದರೆ ಅವಿಭಾಜಿತವಾಗಿಯೇ ಸ್ವಾತಂತ್ರ್ಯವನ್ನು ಪಡೆಯುವ ಭಾರತದ ಕನಸು ನುಚ್ಚುನೂರಾಗಿತ್ತು. ಜನಸಾಮಾನ್ಯರ ಬದುಕು ಕೋಮುದಳ್ಳುರಿಯಲ್ಲಿ ಬೇಯುತ್ತಿತ್ತು. ಈ ಸಂದರ್ಭದ ಅನೇಕ ಸಂಗತಿಗಳನ್ನು ತೀರ ಹತ್ತಿರದಿಂದ ಕಂಡ ಬರ್ಕ್‌ವೈಟ್ ಅದನ್ನು half way to freedom ಎಂಬ ತನ್ನ ಗ್ರಂಥದಲ್ಲಿ ಛಾಯಾಚಿತ್ರಗಳೊಂದಿಗೆ ದಾಖಲಿಸಿದ್ದಾಳೆ. ಕೋಮುಗಲಭೆಗಳು, ಬರಗಾಲಕ್ಕೆ ತುತ್ತಾದ ಜನರ ಬವಣೆಗಳು, ಚರ್ಮ ಹದ ಮಾಡುವ ಕಾರ್ಖಾನೆಗಳಲ್ಲಿ ದುಡಿಯುವ ಬಾಲ ಕಾರ್ಮಿಕರು, ಲೇವಾದೇವಿಗಾರರು, ರಾಜ ಮಹಾರಾಜರು ಹಾಗೂ ಕೈಗಾರಿಕೋದ್ಯಮಿಗಳ ವ್ಯಕ್ತಿತ್ವ ಧೋರಣೆಗಳು, ಆರ್.ಎಸ್.ಎಸ್. ಚಟುವಟಿಕೆಗಳು, ಗಾಂಧೀಜಿ, ಭಾರತದ ಸಾಂಸ್ಕೃತಿಕ ಪದ್ಧತಿಗಳು, ಮುಂತಾದ ಅನೇಕ ಸಂಗತಿಗಳು ಬರ್ಕ್‌ವೈಟ್ ಪುಸ್ತಕದಲ್ಲಿವೆ. ತಾನು ಕಂಡ ಭಾರತವನ್ನು ಯಾವುದೇ ಪೂರ್ವಾಗ್ರಹ, ಅತಿರೇಕಗಳಿಲ್ಲದೆ ಚಿತ್ರಿಸಿರುವುದು ಬರ್ಕ್‌ವೈಟ್ ವೈಶಿಷ್ಟ್ಯ ಅಂದಿನ ಭಾರತದ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ಬದುಕಿನ ಅನೇಕ ಸೂಕ್ಷ್ಮ ವಿವರಗಳು ಇಲ್ಲಿ ಮಾತ್ರವೇ ಸಿಗುತ್ತವೆ. ಸ್ವತಃ ಬರ್ಕ್‌ವೈಟ್‌ಳೇ ತೆಗೆದಿರುವ ಇಲ್ಲಿನ ಅಪೂರ್ವ ಛಾಯಾಚಿತ್ರಗಳೂ ಕೂಡ ಬರ್ಕ್‌ವೈಟ್ ಬರಹಕ್ಕೆ ಪೂರಕವಾಗಿದ್ದು ಅಂದಿನ ಭಾರತದ ಬದುಕಿನ ದಾಖಲೆಗಳಾಗಿವೆ. ಭಾರತೀಯ ಬದುಕಿನ ಬಗ್ಗೆ ಬರ್ಕ್‌ವೈಟ್‌ಗಿದ್ದ ಕಾಳಜಿ, ಕುತೂಹಲ ನಮ್ಮ ಮನ ತಟ್ಟುತ್ತದೆ. ಈ ಪುಸ್ತಕ ಪ್ರಕಟವಾಗಿ ಅರ್ಧ ಶತಮಾನ ಕಳೆದಿದೆ. ಅಟೆನ್ ಬರೊ ಅವರ ‘ಗಾಂಧಿ’ ಚಲನಚಿತ್ರದಲ್ಲಿರುವ ಫೋಟೋ ಜರ್ನಲಿಸ್ಟ್ ಪಾತ್ರಕ್ಕೆ ಈ ಬರ್ಕ್‌ವೈಟ್‌ಳೇ ಆಧಾರ.

ಬರ್ಕ್‌ವೈಟ್‌ಳ ಈ ಪುಸ್ತಕವನ್ನು ಲಂಕೇಶ್ ಬಹುವಾಗಿ ಮೆಚ್ಚಿಕೊಂಡಿದ್ದರು. ಅವರ ಬಳಿಯಿದ್ದ ಪ್ರತಿಯನ್ನು ನನಗೆ ಕೊಡುತ್ತಾ ಇದನ್ನು ಕನ್ನಡಕ್ಕೆ ಅನುವಾದಿಸಿದರೆ ಚೆನ್ನಾಗಿರುತ್ತದೆ ಎಂದು ಸೂಚಿಸಿದರು. ಅನುವಾದದ ಕೆಲಸ ಮುಗಿಸಿ ಹಸ್ತಪ್ರತಿಯನ್ನು ಒಪ್ಪಿಸಿದಾಗ ಲಂಕೇಶ್ ಅವರಿಗೆ ತೀವ್ರ ಅನಾರೋಗ್ಯ ಆದರೂ ಪುಸ್ತಕದ ಬಗ್ಗೆ ಚರ್ಚೆ ಮಾಡಿದ್ದರು. ಈ ಪುಸ್ತಕದ ಒಟ್ಟು ದನಿಗೆ ಹೊಂದುವಂತೆ ‘ಅರೆಬರೆ ಸ್ವಾತಂತ್ರ್ಯ’ ಎಂಬ ಶೀರ್ಷಿಕೆ ಕೊಟ್ಟರೂ ಚೆನ್ನಾಗಿರುತ್ತದೆ. ಆ ಬಗ್ಗೆ ಮುನ್ನುಡಿಯಲ್ಲಿ ಪ್ರಸ್ತಾಪಿಸುತ್ತೇನೆ ಎಂದು ತಿಳಿಸಿದ್ದರು. ಆದರೆ, ನಾನು ಹಸ್ತಪ್ರತಿ ತಲುಪಿಸಿದ ಹದಿನೈದು ದಿನಗಳಲ್ಲಿ ಲಂಕೇಶ್ ನಿಧನರಾಗಿದ್ದು ಅತ್ಯಂತ ದುಃಖದ ಸಂಗತಿ. ಇಂತಹ ಒಂದು ಒಳ್ಳೆಯ ಪುಸ್ತಕದ ಬಗ್ಗೆ ನನ್ನ ಗಮನ ಸೆಳೆದ ಅವರನ್ನು ಕೃತಜ್ಞತೆಯಿಂದ ಸ್ಮರಿಸುತ್ತೇನೆ.

ಲಂಕೇಶ್ ಅವರ ಆಸೆ ಈಗ ಪುಸ್ತಕದ ಪ್ರಾಧಿಕಾರದ ಮೂಲಕ ಈಡೇರುತ್ತಿದೆ. ಉತ್ತಮ ಪುಸ್ತಕಗಳ ಪ್ರಕಟಣೆಯ ಬಗ್ಗೆ ತುಂಬ ಕಾಳಜಿ ಹೊಂದಿರುವ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರೂ ಮತ್ತು ನನ್ನ ಪೂಜ್ಯ ಗುರುಗಳು ಆದ ಡಾ.ಹೆಚ್.ಜೆ. ಲಕ್ಕಪ್ಪಗೌಡ ಅವರು ಈ ಪುಸ್ತಕದ ಪ್ರಕಟಣೆ ಕೈಗೊಂಡಿರುವುದಕ್ಕಾಗಿ ನನ್ನ ಕೃತಜ್ಞತಾಪೂರ್ವಕ ವಂದನೆಗಳು. ಪ್ರಕಟಣೆಗೆ ಮೊದಲು ಹಸ್ತಪ್ರತಿಯನ್ನು ಪರಿಶೀಲಿಸಿ ಸೂಕ್ತ ಸಲಹೆಗಳನ್ನು ನೀಡಿದ ಶಿಕ್ಷಣ ತಜ್ಞ ಶ್ರೀ ಎಸ್. ಮಂಚಯ್ಯ, ಪ್ರೊ. ಇಕ್ಬಾಲ್ ಅಹ್ಮದ್ ಹಾಗೂ ಪ್ರೊ. ಎಂ.ಆರ್. ವಿಶ್ವನಾಥರೆಡ್ಡಿ ಅವರುಗಳಿಗೂ ನನ್ನ ವಂದನೆಗಳು ಸಲ್ಲುತ್ತವೆ.

ಡಾ. ಕೆ. ಆರ್. ಸಂಧ್ಯಾರೆಡ್ಡಿ
೨೦. ೦೨. ೨೦೦೧