ಒಂದು ಜನಪದ ಕತೆ ಈ ಸಣ್ಣಾಟದ ವಸ್ತು. ಬಸವಂತ ಅಣ್ಣ ಬಲವಂತ ತಮ್ಮ. ಇಬ್ಬರೂ ಬಹಳ ಅನ್ಯೋನ್ಯವಾಗಿರುವ ಸೋದರರು. ಒಮ್ಮೆ ಅಣ್ಣ ಬಸವಂತನು ವ್ಯಾಪಾರಕ್ಕಾಗಿ ಪರಊರಿಗೆ ಹೋಗುವನು. ಇತ್ತ ಅವನ ಹೆಂಡತಿ ತಾರಾ ಮೈದುನ ಬಲವಂತನ ರೂಪಕ್ಕೆ ಮರುಳಾಗಿ ಅವನ ಮೇಲೆ ಮನಸ್ಸು ಮಾಡುವಳು. ನೇರವಾಗಿ ಕೇಳುವ ಧೈರ್ಯ ಅವಳಿಗಿಲ್ಲ. ಮಲ್ಲಮ್ಮನೆಂಬ ಮುದುಕಿಗೆ ಆಸೆ ಆಮಿಷ ಒಡ್ಡಿ ಬಲವಂತನನ್ನು ಕೈವಶಮಾಡಿಕೊಡಲು ಒಪ್ಪಿಸುವಳು. ಮಲ್ಲಮ್ಮ ಬಲವಂತನಿಗೆ ತಾರಾಳ ಅಪೇಕ್ಷೆ ತಿಳಿಸಿದಾಗ ಅವನು ನಿರಾಕರಿಸುತ್ತಾನೆ. ಅತ್ತಿಗೆಯೆಂದರೆ ತಾಯಿಗೆ ಸಮಾನವೆಂದು ತಿಳಿಸಿ ಬೈದು ಕಳಿಸುವನು. ಅವಮಾನಿತಳಾದ ತಾರಾ ಮಲ್ಲಮ್ಮನ ನೆರವಿನಿಂದ ಸೇಡು ತೀರಿಸಿಕೊಳ್ಳಲು ಮುಂದಾಗುತ್ತಾಳೆ. ಊರ ಹೊರಗಿನ ಮಠದಲ್ಲಿದ್ದ ಗಾಂಜಾ ಸಿದ್ಧಪ್ಪನ ಹತ್ತಿರಹೋಗಿ ಮಂತ್ರಿಸಿದ ಗಂಡಗಾರಿ ಮುಳ್ಳನ್ನು ಪಡೆದುಕೊಂಡು ಬಂದು ಬಲವಂತ ಮಲಗಿದ್ದಾಗ ಅವನ ನೆತ್ತಿಯ ಮೇಲೆ ಆ ಮುಳ್ಳು ಚುಚ್ಚಿದಳು. ಬಲವಂತ ನಾಯಿಯಾಗಿ ಮಾರ್ಪಾಡಾದ. ತಾರಾ ಆ ನಾಯಿಯನ್ನು ಮನೆಬಿಟ್ಟು ಹೊರಹಾಕಿದಾಗ ಅದನ್ನು ಬೇಡರ ತಿಮ್ಮನು ಸಾಕಿಕೊಂಡಿರುತ್ತಾನೆ. ಒಮ್ಮೆ ಅರಮನೆಯಲ್ಲಿ ಕಳ್ಳತನವಾಗುತ್ತದೆ. ಕಳ್ಳರನ್ನು ಹಿಡಿದವರಿಗೆ ತನ್ನ ಮಗಳನ್ನು ಕೊಡುವುದಾಗಿ ರಾಜನು ಡಂಗುರ ಸಾರಿಸುತ್ತಾನೆ. ಬೇಡರ ತಿಮ್ಮ ತನ್ನ ನಾಯಿಯೊಂದಿಗೆ ಕಳ್ಳರನ್ನು ಹಿಡಿಯಲು ಶಪಥಮಾಡುತ್ತಾನೆ. ನಾಯಿ ಕಳ್ಳರನ್ನು ಹಿಡಿದುಕೊಡುತ್ತದೆ. ಮಾತಿನ ಪ್ರಕಾರ ರಾಜನು ತನ್ನ ಮಗಳು ಪೊಲಾವತಿಯನ್ನು ನಾಯಿಯೊಂದಿಗೆ ಮದುವೆ ಮಾಡಿ ಕೊಡುತ್ತಾನೆ. ಪೊಲಾವತಿಗೆ ನಾಯಿಯೊಂದಿಗೆ ದಾಂಪತ್ಯ ಜೀವನ ಅನಿವಾರ‌್ಯವಾಗುತ್ತದೆ. ಒಂದು ದಿನ ಅವಳು ತನ್ನ ಪತಿ ನಾಯಿಯೊಂದಿಗೆ ಸರಸವಾಡುತ್ತಿದ್ದಾಗ ನಾಯಿಯ ನೆತ್ತಿಯಲ್ಲಿರುವ ಮುಳ್ಳನ್ನು ನೋಡಿ ಅದನ್ನು ಕಿತ್ತು ಹಾಕಿದಳು. ನಾಯಿ ಮಾಯವಾಗಿ ಬಲವಂತ ಮುಂದೆ ನಿಂತುದನ್ನು ಕಂಡು ಅವಳಿಗೆ ಆಶ್ಚರ್ಯ ಮತ್ತು ಸಂತೋಷವೆನಿಸಿತು. ರಾಜನಿಗೆ ಎಲ್ಲ ಸಮಾಚಾರ ಗೊತ್ತಾಯಿತು. ಬಲವಂತನನ್ನು ನಾಯಿಯಾಗಿಸಿದ್ದ ಮಲ್ಲಮ್ಮ ತಾರಾ ಶಿಕ್ಷಗೆ ಗುರಿಯಾದರು. ವ್ಯಾಪಾರದಿಂದ ಮರಳಿ ಬಂದು ಮನೆಯಲ್ಲಿ ಪ್ರೀತಿಯ ತಮ್ಮನನ್ನು ಕಾಣದೆ ಚಡಪಡಿಸುತ್ತಿದ್ದ ಬಸವಂತನಿಗೆ ತಮ್ಮನ ದರ್ಶನವಾಯಿತು. ರಾಜನು ಬಲವಂತನಿಗೆ ಅರ್ಧರಾಜ್ಯವನ್ನು ನೀಡಿದನು. ಅಣ್ಣ ತಮ್ಮಂದಿರಿಬ್ಬರೂ ಸುಖವಾಗಿದ್ದರು.

ಪ್ರಥಮ ಘಟ್ಟದ ಈ ಸಣ್ಣಾಟದ ಕರ್ತೃ ಯಾರೆಂಬುದು ಖಚಿತವಾಗಿ ತಿಳಿದಿಲ್ಲ. ಈ ಸಣ್ಣಾಟ ಬೇರೆ ಬೇರೆ ಜಿಲ್ಲೆಗಳಲ್ಲಿದ್ದು ಅಲ್ಲಲ್ಲಿಯ ಪಠ್ಯಗಳನ್ನು ಹೊಂದಿದೆ. ಒಂದು ಜನಪ್ರಿಯ ವಸ್ತು ಹೇಗೆ ಏಕಕಾಲಕ್ಕೆ ಭಿನ್ನ ಭಿನ್ನವಾದ ಪಠ್ಯಗಳಾಗಿ ಆಕಾರ ಪಡೆದುಕೊಳ್ಳುತ್ತದೆಂಬುದಕ್ಕೆ ಇದು ಉದಾಹರಣೆಯಾಗಿದೆ. ಇಲ್ಲಿ ಆಯ್ಕೆ ಮಾಡಿಕೊಂಡಿರುವ ಪಠ್ಯ ಬೆಳಗಾಂವ ಜಿಲ್ಲೆಯ ಸೌದತ್ತಿ ತಾಲೂಕಿನದು.

 

ದೃಶ್ಯ : 1

ತಾರಾ ಚೆಂದ ಚೆಂದ ಸೀರೆ ಉಟ್ಟಕೊಂಡು ಒನಪು ವೈಯಾರದಿಂದ ರಂಗದ ಮೇಲೆ ಬರುತ್ತಾಳೆ. ರಂಗದ ಇನ್ನೊಂದು ಬದಿಯಿಂದ ಮಲ್ಲಮ್ಮಳು ಬರುವಳು. ತಾರಾ ಮತ್ತು ಮಲ್ಲಮ್ಮ ಪರಸ್ಪರರು ತಮ್ಮ ಪರಿಚಯ ಮಾಡಿಕೊಳ್ಳುವರು. ತಾರಾ ಊರ ಸಾವುಕಾರ ಬಸವಂತನ ಹೆಂಡತಿ. ಬಲವಂತನ ಅತ್ತಿಗೆ. ಮಲ್ಲಮ್ಮ ಊರಿನ ಹಿರಿಯಜ್ಜಿ. ಆಕೆಗೆ ಪುಟಾಣಿ ಮಲ್ಲಮ್ಮಳೆಂದು ಕರೆಯುತ್ತಿದ್ದರು. ತಾರಾ ತಾನು ಗಾಯನ ಮತ್ತು ನೃತ್ಯ ಮಾಡಲಿಕ್ಕೆ ಇಲ್ಲಿಗೆ ಬಂದಿದ್ದೇನೆಂದು ತಾನು ಬಂದ ವಿಷಯ ಹೇಳುವಳು.

ಮುಮ್ಮೇಳ : ಹಿಮ್ಮೇಳ

ಚಂಚ ಚಂದಸೀರಿ ಉಟ್ಟ
ಚಂದ್ರಕಾಳಿಕುಬಸಾ ತೊಟ್ಟ
ಬಂದಾಳ ತಾರಾ ಓಣ್ಯಾಗ ॥
ಮಿರಿ ಮಿರಿಮಿಂಚತಾಳ
ಥಳಾ ಥಳಾಹೊಳಿತಾಳ
ಬಂದಾಳ ತಾರಾ ಊರಾಗ ॥

ತಾರಾ

ಯೇ ಯಮ್ಮಾ ಯಾರದಿ ಹೇಳ ನೀನ
ಇಲ್ಲಿ ತನಕಾ ಬಂದ ಕಾರಣವೇನ ॥
ಈ ಸಭಾದಾಗ ಏನ್ ಐತಿ ಅಂತಾದ
ನೀ ಯಾರು ನಿನ್ನ ಹೆಸರೇನು ಹೇಳುಯೆನಗ
ನಿನ್ನ ಕೂನಾ ಗುರ್ತಯೆನಗ ಹೇಳಬೇಕ ॥

ಮಲ್ಲಮ್ಮ

ಯೆನ್ನ ಮಗಳ ಕೇಳ ಚೆಂದವಾಗಿ ನನ್ನ ಹೆಸರ
ಕಟ್ಟಾನಿ ಬುತ್ತಿಯಿಟ್ಟಪುಟಾಣಿ ತಿನ್ನುವಂತ
ಪುಟಾಣಿ ಮಲ್ಲಮ್ಮ ಅಂತಾರ ॥
ಮಗಳ ನೀ ಯಾರ ನಿನ್ನ ಕೂನಾ ಗುರ್ತ ಹೇಳಬೇಕ ॥

ತಾರಾ

ಬಾಯಮ್ಮ ಮಲ್ಲಮ್ಮಹಿಡಿ ನನ್ನ ಕೂನಾ ಗುರ್ತ
ರಾಗದಲ್ಲಿ ರತ್ನಬೋಗದಲ್ಲಿ ನಿದ್ದಿ ಸ್ವರ್ಗದಾಗ
ನಿರಂಕಾರ ಮಾಡುವಂಥಾರತ್ನ ಸಾನಿಯ ಮಗಳು
ನನಗೆ ತಾರಾ ಅಂತಾರಬಸವಂತ ನನ್ನ ಕಾಂತಾ
ಬಲವಂತ ಮೈದುನ ಆಗತಾರ ॥

ಮಲ್ಲಮ್ಮ

ಆ ಕಪ್ಪತಗುಡ್ಡದಾಗಿನ
ಇರಬಸವೇಶ್ವರನ ಮಕ್ಕಳು
ಬಲವಂತ ಬಸವಂತ ನಿಮ್ಮವರೇನು
ತಂಗಿ ಕುಂತ ನಿಂತ ಜನಕ್ಕೆ
ಗೊತ್ತಾತ ನಿನ್ನ ಕೂನಾ ಗುರ್ತ
ತಂಗಿ ಇಲ್ಲಿತನಾ ಬಂದ ಕಾರಣವೇನು ॥

ತಾರಾ

ಯಮ್ಮಾ ನಾ ಬಂದೀನ ಗಾಯನಕ
ಗಾಯನ ಮಾಡಿ ಹೋಗಾಕ ॥
ನೆರದಾರ ಜನ ನನ್ನ ಗಾಯನ ಕೇಳಾಕ
ಯೆನ್ನ ಕಾಲಗೆಜ್ಜಿಯೆನ್ನ ಕಂಠದ ನಾದ
ಸರ್ವರಿಗೂ ತೋರಿಸಿ ಹೋಗಾಕ ॥

* * *

ದೃಶ್ಯ : 2

ಮುಂಬಯಿಂದ ಬಂದ ಸಿಪಾಯಿ ಊರ ಚಾವಡಿಗೆ ಹೋಗಿ ತಳವಾರನಿಗೆ ಭೇಟಿಯಾಗಿ ಬಸವಂತನ ಮನೆ ಹುಡಿಕಿ ಪತ್ರ ಕೊಡುತ್ತಾನೆ. ಮುಂಬೈಯಲ್ಲಿ ಮುತ್ತು, ರತ್ನದ ವ್ಯಾಪಾರ ದೊಡ್ಡ ಪ್ರಮಾಣದಲ್ಲಿತ್ತು. ಅಲ್ಲಿಗೆ ಹೋಗಲು ಬಸವಂತ ಸಿದ್ಧನಾಗುತ್ತಾನೆ. ಅದನ್ನು ತಿಳಿದ ತಾರಾ ವ್ಯಥೆ ಪಡುತ್ತಾಳೆ. ನಿಮ್ಮ ತಮ್ಮನಿಗೆ ಬುದ್ಧಿ ಹೇಳಿ ಹೋಗಿರೆಂದು ಹೇಳುವಳು. ಬಸವಂತ ತಮ್ಮನನ್ನು ಕರೆದು, ಮನೆ, ಹೊಲದ ಕಡೆಗೆ ಲಕ್ಷ್ಯವಿರಲೆಂದು ಹೇಳುವನು. ಬಲವಂತ ಅಣ್ಣಾ, ನನ್ನ ಮೇಲೆ ಯಾವುದೇ ರೀತಿಯ ಸಂಶಯ ತಾಳಬೇಡ. ಚಿಂತೆ ಬಿಟ್ಟು ವ್ಯಾಪಾರಕ್ಕೆ ಹೋಗಿ ಬನ್ನಿರೆಂದು ಬೀಳ್ಕೊಡುತ್ತಾನೆ.

ಗಂಡ ವ್ಯಾಪಾರಕ್ಕೆ ಹೋದ ಕೂಡಲೇ ತಾರಾ, ಮೈದುನನ ಮೇಲೆ ಮನಸ್ಸು ಮಾಡುತ್ತಾಳೆ. ಬಲವಂತ, ಅತ್ತಿಗೆಯೆಂದರೆ ತಾಯಿಯ ಸಮಾನ ಇಂಥಹ ಆಲೋಚನೆ ನಿಮ್ಮಲ್ಲಿ ಬರಬಾರದೆಂದು ಕೈ ಮುಗಿದು ಕೇಳಿಕೊಳ್ಳುತ್ತಾನೆ.

ಸಿಪಾಯಿ

ಮುಂಬಯಿಂದ ಬಂದೀನಿ ಈ ಉರಿಗೆ
ಒತ್ತರದಿಂದ ಪತ್ರ ತಂದೀನಿ ಈ ಊರಿಗೆ ॥
ಊರಾಗ ಹುಡಿಕಿದರ ಚಾವಡಿ ಸಿಗಲಿಲ್ಲೊ
ಹಳಬ ತಳವಾರ ಕುಲಕರ್ಣಿ ಸಿಗವಲ್ಲರೊ ॥
ಬಸವಂತನ ಮನಿ ಯಾವಲ್ಲಿ ಹೇಳ್ರಿ ಯೆನಗ ॥

ಬಸವಂತ

ಹೋ ಹೋಮುಂಬಯಿಂದ ಶೆಟ್ಟಿ
ಸಾಹುಕಾರ ಕಳಿಸ್ಯಾನೊ ಪತ್ತರಾ ॥ಪ ॥
ಪತ್ರದ ಮಜಕೂರ ತಿಳದತೊ
ಮುಂಬಯಿದಾಗ ಮುತ್ತು ಮಾಣಿಕದ
ವ್ಯಾಪಾರ ಚುರುಕ ನಡೆದತೊ
ಈ ಪತ್ರ ಮುಟ್ಟಿದ ಕೂಡಲೆ
ತುರ್ತ ಬಾ ಅಂತ ಹೇಳಿ ಕಳಿಸ್ಯಾನೊ
ಶೆಟ್ಟಿ ಸಾಹುಕಾರ ಈಗಿಂದೀಗ ಜರೂರ
ಹೋಗಬೇಕೊ ಮುಂಬಯಿ ಶಹರಕ್ಕ
ಪ್ರಾಣಸಖಿ ಬರುವಂತಳಾಗು ಈ ಕಡಿ ॥

ತಾರಾ

ಪ್ರೀಯಾ ಕರೆಸೀದ ಕಾರಣವೇನು
ಹಂತಾ ಕೆಲಸ ಯಾವುದು ತಿಳಿಸಿ ಹೇಳು ॥ಪ ॥
ಇದ್ದ ಕೆಲಸ ನಾನು ಬಿಟ್ಟ ಬಂದೇನು
ನೀನಾದರು ಹೇಳು ನಿಮ್ಮ ಕೆಲಸನ
ಬಿಟ್ಟ ಪ್ರೇಮದಿಂದ ಹೇಳು ಕಾಂತಾ ॥

ಬಸವಂತ

ನನ್ನಮಾತ ಕೇಳ ಕಾಂತಿ ಗುಣವಂತಿ
ಮುಂಬೈದಾಗ ವ್ಯಾಪಾರ ಚುರುಕತಿ ॥ಪ ॥
ಶೆಟ್ಟಿ ಸಾಹುಕಾರನಪತ್ರ ಬಂದತಿ
ಮುತ್ತು ಮಾಣಿಕದವ್ಯಾಪಾರ ಜೋರೈತಿ
ನಾ ಹೋಗಿಬರುವೇನ ಗುಣವಂತಿ
ನನ್ನ ಬದುಕ ಬಾಳ ಐತಿಮೈಮರತ ನೀ ಕುಂತಿ
ಜೋಕಿಂದ ಇರಬೇಕಹೋಗಿ ಬರುವೆನ ವ್ಯಾಪಾರಕ ॥

ತಾರಾ

ನೀವು ಎಂದ ಬರತೀರಿ ಕಾಂತಾ
ಹೋಗತೀರಿ ಬಾಳ ದಿನಾ॥ಪ ॥
ಹೆಂಗಸ ಜಾತಿಯ ನಾನು
ನಿಮ್ಮ ತಮ್ಮಗ್ಹೇಳರಿ ಧ್ಯಾನ ॥
ಮನೆಯೊಳಗಿನ ಸಾಮಾನ
ಎಷ್ಟೊ ಜೋಪಾನ ಮಾಡಲಿ ನಾನಾ
ಮೊದಲಿನಿಂದ ಸೇರುದಿಲ್ಲ ಮೈದುನ
ನನ್ನ ಕಂಡ ನೋಡತಾನ ಕೆಟ್ಟ ಕಣ್ಣ ॥
ಕರೆಸಿ ಹೇಳರಿ ಬುದ್ಧಿ ಧ್ಯಾನ
ಲಘು ಹೋಗಿ ಬರ‌್ರೀ ನೀವು
ಬಾಳ ದಿವಸ ನಿಂದ್ರ ಬ್ಯಾಡ್ರಿ
ಕೈ ಮುಗಿದು ಬೇಡಿಕೊಳ್ಳುವೆ ನಿಮಗ ॥

ಬಸವಂತ

ಬಾ ತಮ್ಮಾ ಬಲವಂತಕೇಳೊ ಎನ್ನ ಮಾತ
ನಾ ಹೋಗತೀನ ವ್ಯಾಪಾರಕ ॥ಪ ॥
ಮುತ್ತಿನ ವ್ಯಾಪಾರ ಮುಂಬೈದಾಗ ಬಾಳ ಐತಿ
ಹೋಗಿ ಬರುವೇನು ಅಲ್ಲಿತನಕಾ ॥
ಮಂದಿ ಸಲಿಗಿ ಹಿಡಿಬ್ಯಾಡ ವಿಪರೀತ
ಹೊಲ ಮನಿ ನೊಡಿಕೊತ ಇರ ತಮ್ಮಾ ॥
ಅತ್ತಿಗೆ ಮಾತ ಕೇಳತಾ ಮ್ಯಾಲಿಂದ ಮ್ಯಾಲ ಬುದ್ದಿ ಹೇಳತಾ
ಜ್ವಾಕಿಂದ ಇರತಮ್ಮಾ ಮನಿಯಾಗ ॥

ಬಲವಂತ

ಅಣ್ಣಾ ಮಾಡಬ್ಯಾಡ್ರಿ ಅನುಮಾನ
ಮನಿಯೊಳಗಿನ ಚಿಂತೀಯನಾ॥ಪ ॥
ಲಗು ಹೋಗಿ ಬರ‌್ರಿ ಮೂರ ದಿನಾ
ನಿಂದ್ರ ಬ್ಯಾಡ್ರಿ ಬಾಳ ದಿನಾ
ಊರಾಗ ಹಬ್ಬೇತಿ ಕಳ್ಳರ ವಾಯಿನ ॥
ಮನಿ ಮುಂದ ಹಗಲಿ ರಾತ್ರಿ ಇರುವೇನು ನಾನಾ
ತಾಯಂತಹ ಅತ್ತಿಗೆ ಮಾತ ಮೀರುದಿಲ್ಲ ನಾನಾ ॥
ಹೊಲಮನಿ ನೋಡಿಕೊತ ಇರುವೇನು ನಾನಾ ॥

ಬಸವಂತ

ಹೋಗಿ ಬರುವೇನು ತಾರಾಬಿಡು ಅನುಮಾನ
ತಮ್ಮನ ಜೋಪಾನ ॥
ಇರಲಿ ಕರುಣಾ ಅವನ ಮ್ಯಾಲ
ತಮ್ಮಗ ಬುದ್ದಿ ಹೇಳಬೇಕು
ಹರುಷದಿಂದ ಇರಬೇಕು
ಅಪ್ಪಣೆ ಕೊಡುಹೋಗಿ ಬರುವೇನು ವ್ಯಾಪಾರಕ ॥

ತಾರಾ

ಹಿರ‌್ಯಾ ಹ್ವಾದ ಚಿಂತಿ ಮಾಡ ಬ್ಯಾಡ್ರಿ ನೀವು
ನಾವು ನೀವು ಕೂಡಿ ನಡಿಸೋಣ ಮನಿತಾನ॥ಪ ॥
ಮನದಾಗಿನ ಮಾತಆಡಲಾರೇನು ನಾನಾ
ಹರುಷದಿಂದ ಇರೋಣಬಾಳ ದಿನಾ
ಸವಿ ಸುಖ ಉಣಿಸುವೆ ಬಲವಂತ ನಿನಗ
ಬಲವಂತ ಬರಬೇಕಯೆನ್ನ ಮಂಚಕ ॥

ಬಲವಂತ

ಚೀ ಚೀ ತಾಯವ್ವ ಎಂಥಾ ಬುದ್ಧಿ ಬಂದಿತ್ತ ನಿನಗ
ಚೀ ತಾಯವ್ವ ಬಿಡು ನಿನ್ನ ಹುಚ್ಚತನ॥ಪ ॥
ತಾಯವ್ವ ಮಾಡತೀನ ನಿನಗ ಶರಣ
ಅಣ್ಣನ ಹೆಂಡತಿ ತಾಯಿಗೆ ಸಮಾನ ॥
ಆಗದೊ ಯೆನೆಗೆ ನೋಡಬ್ಯಾಡ್ರಿ ಮನಸ್ಸ
ಯವ್ವಾ ನೀ ತಿನಿಸೀದಿನೀ ಉಣಿಸೀದಿ
ಪ್ರೀತಿಯಿಂದ ಹಾಲು ತುಪ್ಪಹಾಕಿ ಸಾಕಿ ಸಲುಹಿದಿ
ಚಿಕ್ಕಂದಿರತ ತಂದೆ ತಾಯಿ ಗುರ್ತಯಿಲ್ಲ ನನಗೆ
ಈಟಿರತ ಮಾಡೀದಿನೀ ನನ್ನ ಜೋಪಾನ
ಒಡಹುಟ್ಟಿದ ಅಣ್ಣ ಬಿಟ್ಟ ಹೋಗ್ಯಾನ
ತಾಯವ್ವ ಮಾಡುವೆ ನಿಮಗೆ ಶರಣ
ಬಿಟ್ಟ ಬಿಡ್ರಿ ಯವ್ವಾ ನಿಮ್ಮ ಕೆಟ್ಟ ಕಲ್ಪನಾ ॥

 * * *

 

ದೃಶ್ಯ : 3 : 4

ತಾರಾ ಊರಿನ ಹಿರಿಯಳಾದ ಮಲ್ಲಮ್ಮನ ಮನೆಗೆ ಹೋಗಿ ಬಲವಂತನ ರೂಪ, ವೈಯಾರವನ್ನು ಹೇಳಿ, ಅವನು ನನಗೆ ಒಲಿಯುವಂತೆ ಮಾಡಬೇಕೆಂದು ಹೇಳುತ್ತಾಳೆ. ಅದಕ್ಕೆ ಮಲ್ಲಮ್ಮ ಒಪ್ಪಿಗೆ ಸೂಚಿಸುವುದಿಲ್ಲ. ನಿನ್ನ ಗಂಡ ಬಸವಂತನಿದ್ದಾನೆ. ಅವನ ಜೊತೆಗೆ ಬಾಳೆ ಮಾಡೆಂದು ಬುದ್ಧಿ ಹೇಳುತ್ತಾಳೆ. ಮೈದುನನೆಂದರೆ ಮಗನಂಗ ಸಲುಹಬೇಕು. ಅವನ ಮೇಲೆ ಮನಸ್ಸು ಮಾಡಿ ಪಾಪಕ್ಕೆ ಹೋಗಬೇಡ ಎಂದು ಅವಳಿಗೆ ತಿಳಿಹೇಳುವಳು. ಬಲವಂತನನ್ನು ತಂದುಕೊಡದಿದ್ದರೆ, ತಾನು ಸಾಯುತ್ತೇನೆಂದು ತಾರಾ ಮಲ್ಲಮ್ಮಳಿಗೆ ಬೆದರಿಕೆ ಹಾಕುತ್ತಾಳೆ. ಮಲ್ಲಮ್ಮ ತಂತ್ರವೊಂದನ್ನು ಹುಡುಕಿದಳು. ನೀನು ಮುಖ ಮರೆಯಾಗಿಸಿ ಮುಸುಕು ಹಾಕಿಕೊಂಡು ಕೂಡಬೇಕೆಂದು ತಾರಾಳಿಗೆ ಹೇಳಿದಳು. ಮನಸ್ಸಿಲ್ಲದ ಮನಸ್ಸಿನಿಂದ ಮಲ್ಲಮ್ಮ ಈ ಕೆಲಸಕ್ಕೆ ಒಪ್ಪುತ್ತಾಳೆ.

 

ದೃಶ್ಯ : 3

ತಾರಾ

ಆದಿಯೇನಮಲ್ಲಮ್ಮಾಮನಿಯಾಗ
ಬಾ ಯಮ್ಮಾ ತಾರಾ ಬಂದಾಳ ಹೊರಗ ॥
ಒಂದ ವಚನಾ ಕೊಡತನ ನಾ ನೀನಗ
ಚಿತ್ತ ಕೊಟ್ಟ ಕೇಳಬೇಕ ನನ್ನ ವಚನಾ
ಹಾಕತೀನ ಕೊಳ್ಳಾಗ ದಾಗೀನ
ವಚನ ಕೊಡತೀನ ಬಾರಮ್ಮ ನೀ ಹೊರಗ ॥

ಮಲ್ಲಮ್ಮ

ಬಾ ತಂಗಿತಾರಾ ಮನಿಯೊಳಗ
ಮನಿಯೊಳಗಯಾರು ಇಲ್ಲವ್ವ ಈಗ
ಮನಸ್ಸಿನ ಮಾತಾ ಬಿಚ್ಚಿ ಹೇಳವ್ವ ನೀನಾ ॥
ಸಾಧ್ಯ ಆದರಮಾಡಿ ಕೊಡುವೇನುನಿನಗ
ಲಗು ಹೇಳ ತಾರಾ ನಿನ್ನ ಮಾತಾ
ಕೊಡ ತಂಗಿ ಕೈಯಾಗ ನೀ ವಚನ ॥

***

ದೃಶ್ಯ : 4

ತಾರಾ

ಯಮ್ಮಾ ಏನ ಹೇಳಲಿ ಮಾತಾ
ಸೊಗಸಿಲ್ಲ ಯೆನ್ನ ಜೀವಕ್ಕ ॥
ಒಂದ ದಿನಾ ನಮ್ಮ ಮನೆಗೆ ಬರಬೇಕ
ತೊಳ ಮುತ್ತಿನ ಮಾಣಿಕದವನ
ಏನ ಹೇಳಲಿ ಯಮ್ಮಾಅವನ ಚೆಲುವಿಕೆ
ಯೆನ್ನ ಮನಿಗಿ ತಂದ ಕೊಡಬೇಕ ನೀ ಅವನ ॥

ಮಲ್ಲಮ್ಮ

ತಾರಾ ಊರಾಗ ದೊಡ್ಡ ಮನಿತಾನ ನಿಮ್ಮದು
ನಿಮ್ಮ ಮನಿಗೆ ನೂರೆಂಟು ಜನ ಬರ‌್ತಾರ ಹೋಗ್ತಾರ
ಯಾರನಂತ ಯಾವನಂತ ಹುಡಕಲಿ ನಾನಾ
ಅವನ ಕೂನಾ ಗುರ್ತ ಹೇಳಿದರೆ ಹೋಗಿ ಬರುವೇನು ॥

ತಾರಾ

ಯಮ್ಮಾ ಕೇಳಬೇಕಯಮ್ಮಾ ಮಾಡಬೇಕ॥ಪ ॥
ಅಂಚಿಧಡಿ ದೋತರದವನತಂದ ಕೊಡಬೇಕ ನನಗ
ತಿದ್ದಿ ತೀಡಿ ಮಾಡಿದಂಗಕಣ್ಣು ಹುಬ್ಬ ಕೆನ್ನಿ ಗದ್ದ
ಎಷ್ಟು ಹೇಳಲಿ ಯಮ್ಮಾಅವನ ಚೆಲುವಿಕೆ
ಅವನ ಯಮ್ಮ ಬಲವಂತಅವನ ಮ್ಯಾಲ ನನ್ನ ಮನಸ್ಸಾ
ತಂದ ಕೊಡಬೇಕಈಗಿಂದೀಗ ಬಲವಂತನ ॥

ಮಲ್ಲಮ್ಮ

ಏನ್ ಮೆತ್ತಾನ ಮಳ್ಳಿಯಂಗಮಾತನಾಡಿದಿನೀನಾ
ಈಗ ತಿಳಿದೀತ ನಿನ್ನ ಮನಸ್ಸಿನ್ಯಾಗೀನ ಗುಣಾ॥ಪ ॥
ಮಾರಿ ಮ್ಯಾಲ ಹೊಡದೀನಮನಿಗ್ಹೋಗ ಸುಮ್ಮನ ॥
ಇದ ಬರಾನ ಬರಬ್ಯಾಡನನ್ನ ಮನಿಗಿ ನೀನಾ
ಇದ ಅನ್ನಾನ ಅನ್ನಬ್ಯಾಡ ಈ ಮಾತಾ
ಬಲವಂತ ನಿನ್ನ ಮೈದುನಮಗನಂಗ ನೀ ಸಲುಹ
ಅವನ ಮ್ಯಾಲ ಮನಸ್ಸ ಮಾಡಿ ಹೋಗಬ್ಯಾಡ ಪಾಪಕ್ಕ ॥

ತಾರಾ

ಕರೆದುಕೊಂಡ ಬರಬೇಕಮಲ್ಲಮ್ಮ ಬಲವಂತನ
ಅವನ ರೂಪಾ ನೋಡಿಜೀವಕ್ಕಿಲ್ಲ ಸಮಾಧಾನ
ಹುಣ್ಣಿಮೆ ಚಂದ್ರನಂಗಐತೆವ್ವ ಅವನ ರೂಪ
ಕಮಲಮುಖ ಹರಳಿನಂಗಐತೆವ್ವ ಅವನ ಕಳಾ
ಕವಳಿ ಹಣ್ಣಿನಂಗಅದಾವ ಅವನ ಕಣ್ಣ
ಬಾಳ ಡೌಲ ಅದಾನವ್ವಊರಾಗ ಬಲವಂತ
ಯಾವ ಪುಣ್ಣೇದ ತಾಯಿಹಡೆದಾಳೊ ಬಲವಂತನ ॥

ಮಲ್ಲಮ್ಮ

ಕೆಡಬ್ಯಾಡ ತಾರಾಕೆಟ್ಟ ಹೋಗಬ್ಯಾಡ
ಬಲವಂತ ನಿನ್ನ ಮೈದುನಮಗನಂಗ ತಿಳಿಬೇಕ ॥ಪ ॥
ನಿನ್ನ ಗಂಡ ಬಸವಂತಅದಾನ ರೂಪವಂತ
ನಿನ್ನ ಗಂಡ ಬಸವಂತಅದಾನ ಗುಣವಂತ
ಅವನ ಜೋಡಿ ಬಾಳೆ ಮಾಡಬರತತೀ ಪುಣ್ಯವ
ಮೈದುನ ಮ್ಯಾಲ ಮನಸ್ಸ ಮಾಡಿ ಹೋಗಬ್ಯಾಡ ನರಕಕ್ಕ

ತಾರಾ

ಬಾಳ ನಂಬೀನ ಮಲ್ಲಮ್ಮನ
ಕೈಕೊಡಬ್ಯಾಡ ನೀನಾ॥ಪ ॥
ತಾಯಿಯಂಥಾನಿನ್ನ ಮುಂದ
ಬಿಚ್ಚಿ ಹೇಳತೀನಹೊಟ್ಯಾಗಿಂದ
ಬ್ಯಾಸರ ಮಾಡಬ್ಯಾಡನಡು ನೀರಾಗ ಕೈಕೊಡಬ್ಯಾಡ
ಈ ಸಂಸಾರದಾಗ ಏನ ಐತಿಮೂರ ದಿನದ ಸಂತಿ
ಈ ಕೆಲಸ ನೀಮಾಡದಿದ್ದರ
ಹೋಗತತಿ ನನ್ನ ಪ್ರಾಣ ॥
ಕತ್ತಿತಗೊಂಡಕುತ್ತಿಗಿ ಹಾಕ್ಕೊಂಡ
ಬಿಡ್ತೇನಿ ಯಮ್ಮಾನಾನು ಪ್ರಾಣ ॥

ಮಲ್ಲಮ್ಮ

ತಾರಾ ನನ್ನ ಜೀವಕ್ಕಉರಲ ತಂದಿ
ಬಲವಂತಗೇಳಿಕೊಡತನ ಸೂಚನ ॥ಪ ॥
ಏನಾರ ನೆವಾ ಹೇಳಿಕರಕೊಂಡ ಬರ‌್ತನ
ಯಾರಿಗೂ ಕಾಣದಂಗಮಾರಿ ಮುಸುಕ ಹಾಕೊಂಡ
ಗಪ್ಪಗಾರಿನ್ಯಾಗಕೂಡ್ರಬೇಕ ನೀನಾ
ಯಾರೊ ಏನೋ ಅಂತಬಲವಂತ ಮಾತಾಡತಾನ ॥

ತಾರಾ

ಒಳ್ಳೆದು ಮಲ್ಲಮ್ಮಹೋಗಿ ಬಾ ನೀನಾ
ನೀ ಹೇಳಿದಂಗ ಮಾಡತನನಾ ಒಂದ ಬೇತಾ
ಲಗು ಬಗಿ ಹೋಗಿ ಬಾಜೀವಕ್ಕಿಲ್ಲ ಸಮಾಧಾನ
ಮನಿ ಮಾರಾ ಧ್ಯಾಸಯಿಲ್ಲದಗದಾ ಮಾಡಾಕ ಮನಸ್ಸಿಲ್ಲ
ನಿಂತರು ಅವನದ ಧ್ಯಾನಕುಂತರು ಅವನದ ಧ್ಯಾನ
ಬಿಳ್ತಾವ ಯಮ್ಮಾ ನನಗಬಲವಂತನ ಕನಸ ॥

ಮಲ್ಲಮ್ಮ

ವಚನ ಕೊಟ್ಟ ಹಾನಿಗಿ ಬಿದ್ದೇನ ನಾನಾ
ಹೋಗುವೆ ನಾ ಈಗ ಪಾಪಕ್ಕೆ ॥ಪ ॥
ಸುಂದರ ಪುರುಷನಹೆಂಗ ಕರಿಯಲಿ ನಾನಾ
ಅರಿಯದ ಬಾಲಕನಹೆಂಗ ಕರಿಯಲಿ ನಾನಾ
ತಾರಾ ದುಂಬಾಲ ಬಿದ್ದ ಬಿಟ್ಟಾಳ ಯೆನಗ
ಆಕಿಗಿ ವಚನಾ ಕೊಟ್ಟ ಬಿಟ್ಟೇನಿ ನಾನಾ ॥
ಒಲ್ಲದ ಮನಸ್ಸಿನಿಂದಪಾಲಿಸಬೇಕ ವಚನ
ಅಲ್ಲದ ಕೆಲಸಕ್ಕೆಹೊಂಟ ಬಿಟ್ಟೇನಿ ನಾನಾ ॥

* * *