ಶ್ರೀಮನ್ನಿರಾಳ ನಿರಂಜನ ನಿರಾಮಯ ನಿರಾಮಯಾತೀತ ಪರಮಪದಾನಂದ,
ಪರಮಾರ್ಥ ಪರಮೇಶ ಪರಾತ್ಪರ ಪರಬ್ರಹ್ಮ,
ಸಕಲಾಗಮ ಪರಮ ತೇಜೋಮಯ ಅಗಣಿತ ಅಗೋಚರ ಅಪ್ರಮೇಯ,
ಅಖಂಡ ಶಿಖಾಮಣಿ ಪರಿಪೂರ್ಣ ಚೈತನ್ಯವಪ್ಪ,
ಸಕಲ ನಿಃಕಲಾತೀತವಾಗಿಪ್ಪ
ಅಖಂಡ ಜ್ಯೋತಿರ್ಮಯ ಲಿಂಗ ತಾನೆ ತನ್ನ ಲೀಲಾ ವಿನೋದಕ್ಕೆ

ಅಪ್ರಮಾಣ ಕೂಡಲ ಸಂಗಯ್ಯನಾಗಿ ಬಿಜಯಂಗೆಯ್ದುದು.
ಅಪ್ರಮಾಣ ದೇವರು ಅಂತರಂಗ ಬಹಿರಂಗ ಸರ್ವಾಂಗವೆಲ್ಲವನಿಂಬುಗೊಂಡು,
ಸ್ಥೂಲ ಸೂಕ್ಷ್ಮ ಕಾರಣ ನಡೆ ನುಡಿ ಚೈತನ್ಯವೆಲ್ಲ ತಾನೆ ಯಂತ್ರವಾಹಕನಾಗಿ
ಆಡಿಸುತ್ತಿರ್ದನು ನೋಡಾ, ನಮ್ಮ ಅಪ್ರಮಾಣ ಕೂಡಲಸಂಗಮದೇವನು.


ಸಕಲಾಗಮ ಶಿಖಾಮಣಿಯನು,
ಅಪ್ರಮಾಣ ಕೂಡಲ ಸಂಗಯ್ಯನ ನಿರೂಪದಿಂದ
ಪರ ಮೊದಲಾಗಿ, ಬ್ರಹ್ಮ ಕಡೆಯೂ ಸೃಷ್ಟಿ ಮಾರ್ಗವ ನಿರೂಪಿಸಿಹನು,
ಚಿತ್ತೈಸುವದು ಶರಣ ಜನಂಗಳು.
ಪರಾಪರವಾಗಿಹ ಪರಬ್ರಹ್ಮ ಲೋಕಾದಿ ಲೋಕಗಳ ಸೃಜಿಸಬೇಕೆಂದ

ನೆನಹು ಮಾತ್ರದಲ್ಲಿಯೇ ಆ ಪರಾಪರವಾಗಿಹ ಪರಬ್ರಹ್ಮದಲ್ಲಿ
ಪರ ಉತ್ಪತ್ಯವಾಯಿತ್ತು. ಆ ಪರದಲ್ಲಿ ಶಿವನುತ್ಪತ್ಯವಾದನು,
ಆ ಶಿವನಲ್ಲಿ ಶಕ್ತಿ ಉತ್ಪತ್ಯವಾದಳು.
ಆ ಶಕ್ತಿಯಲ್ಲಿ ಬಿಂದು ಉತ್ಪತ್ಯವಾಯಿತ್ತು.
ಆ ಬಿಂದುವಿನಲ್ಲಿ ನಾದ ಉತ್ಪತ್ಯವಾಯತ್ತು.
ಆ ನಾದದಲ್ಲಿ ಸದಾಶಿವನುತ್ಪತ್ಯವಾದನು.
ಆ ಸದಾಶಿವನ ಗೌಪ್ಯವಕ್ತ್ರದಲ್ಲಿ ಆತ್ಮನುತ್ಪತ್ಯವಾದನು.
ಆ ಸದಾಶಿವನ ಈಶಾನ್ಯ ವಕ್ತ್ರದಲ್ಲಿ ಆಕಾಶ ಉತ್ಪತ್ಯವಾಯಿತ್ತು.
ಆ ಸದಾಶಿವನ ತತ್ಪುರುಷ ವಕ್ತ್ರದಲ್ಲಿ ವಾಯು ಉತ್ಪತ್ಯವಾಯಿತ್ತು.
ಆ ಸದಾಶಿವನ ಅಘೋರ ಮುಖದಲ್ಲಿ ಅಗ್ನಿ ಉತ್ಪತ್ಯವಾಯಿತ್ತು.
ಆ ಸದಾಶಿವನ ವಾಮದೇವವಕ್ತ್ರದಲ್ಲಿ ಅಪ್ಪು ಉತ್ಪತ್ಯವಾಯಿತ್ತು.
ಆ ಸದಾಶಿವನ ಸದ್ಯೋಜಾತ ವಕ್ತ್ರದಲ್ಲಿ ಪೃಥ್ವಿ ಉತ್ಪತ್ಯವಾಯಿತ್ತು.
ಆ ಸದಾಶಿವನ ಹೃದಯದಲ್ಲಿ ಚಂದ್ರನುತ್ಪತ್ತಿಯಾದನು.
ಆ ಸದಾಶಿವನ ಚಕ್ಷುವಿನಲ್ಲಿ ಸೂರ್ಯನುತ್ಪತ್ತಿಯಾದನು.
ಆ ಸದಾಶಿವನ ಆಕಾಶಕ್ಕೆ ಅಧಿದೇವತೆಯಾಗಿಹನು.
ಶ್ರೀ ಮಾಹೇಶ್ವರನಲ್ಲಿ ರುದ್ರನುತ್ಪತ್ತಿಯಾಗಿ ಅಗ್ನಿಗಧಿದೇವತೆಯಾಗಿಹನು.
ಆ ರುದ್ರನಲ್ಲಿ ವಿಷ್ಣು ಉತ್ಪತ್ತಿಯಾಗಿ ಅಪ್ಪುವಿಗಧಿದೇವತೆಯಾಗಿಹನು.
ಆ ವಿಷ್ಣುವಿನಲ್ಲಿ ಬ್ರಹ್ಮನುತ್ಪತ್ತಿಯಾಗಿ ಪೃಥ್ವಿಗಧಿದೇವತೆಯಾಗಿಹನು.
ಆ ಬ್ರಹ್ಮನಲ್ಲಿ ಸರ್ವಜಗಂಗಳು ಉತ್ಪತ್ಯವಾಯಿತ್ತು ನೋಡಾ,
ಅಪ್ರಮಾಣ ಕೂಡಲಸಂಗಮದೇವನು.


ಇನ್ನು ಪಿಂಡ ಉತ್ಪತ್ಯವದೆಂತೆಂದಡೆ :

ಆ ಪೃಥ್ವಿಯಲ್ಲಿ ಅನ್ನ ಉತ್ಪನ್ನವಾಯಿತ್ತು;
ಆ ಅನ್ನದಲ್ಲಿ ರಸ ಉತ್ಪತ್ತಿಯಾಯಿತ್ತು;
ಆ ರಸದಲ್ಲಿ ರುಧಿರ ಉತ್ಪತ್ತಿವಾಯಿತ್ತು;
ಆ ರುಧಿರದಲ್ಲಿ ಮಾಂಸ ಉತ್ಪತ್ಯವಾಯಿತ್ತು;
ಆ ಮಾಂಸದಲ್ಲಿ ಮೇಧಸ್ಸು ಉತ್ಪತ್ಯವಾಯಿತ್ತು;
ಆ ಮೇದಸ್ಸುವಿನಲ್ಲಿ ಅಸ್ಥಿ ಉತ್ಪತ್ಯವಾಯಿತ್ತು
ಆ ಅಸ್ಥಿಯಲ್ಲಿ ಮಜ್ಜೆ, ಉತ್ಪತ್ಯವಾಯಿತ್ತು
ಆ ಮಜ್ಜೆಯಲ್ಲಿ ಶುಕ್ಲ ಉತ್ಪತ್ಯವಾಯಿತ್ತು ನೋಡಾ
ಅಪ್ರಮಾಣ ಕೂಡಲಸಂಗಮದೇವ.


ಇನ್ನು ಸ್ತ್ರೀಯರುಗಳಿಂದ ಜನನವಾದ ಶಿಶುಗಳ ಭೇದವದೆಂತೆಂದಡೆ :

ಸ್ತ್ರೀಗೆ ಸ್ತ್ರೀಯರುಗ[ಳ] ಲಿಂ[ಗ] ಉತ್ಪತ್ತಿಯಾದ ತೃತೀಯ ದಿನಕ್ಕೆ
ಗರ್ಭವಾಗಿ ಹುಟ್ಟಿದ ಮಗನು ಚೋರನಹನು.
ಅಷ್ಟಮ ದಿನಕ್ಕೆ ದರಿದ್ರನಹನು; ನವದು ದಿನಕ್ಕೆ ಧನಿಕನಹನು.
ದಶ ದಿನಕ್ಕೆ ಕಾಮಿಯಹನು; ಏಕಾದಶ ದಿನಕ್ಕೆ ವ್ಯಾಧಿಪೀಡಿತನಹನು.
ದ್ವಾದಶ ದಿನಕ್ಕೆ ಪಂಡಿತನಹನು; ತ್ರಯೋದಶ ದಿನಕ್ಕೆ ವಿವೇಕಿಯಹನು.
ಚತುರ್ದಶ ದಿನಕ್ಕೆ ಯೋಗಿಯಹನು; ಪಂಚಾದಶ ದಿನಕ್ಕೆ ರಾಜನಹನು.
ಷೋಡಶ ದಿನಕ್ಕೆ ಶಿವಯೋಗಿಯಹನು ನೋಡಾ,
ಅಪ್ರಮಾಣ ಕೂಡಲಸಂಗಮದೇವ,


ಇನ್ನು ಸ್ತ್ರೀ ಪುರುಷರುಗಳ ಕೂಟದ ಸ್ವರ ಭೇದವದೆಂತೆಂದಡೆ :
ಸ್ತ್ರೀ ಪುರುಷರಿಬ್ಬರಿಗೆಯು ಸ್ತ್ರಿ ಪುರುಷರ ಕೂಟ ಸ್ವರ ಭೇದ,
ಶ್ರೀ [ಸ್ತ್ರೀ] ಅಪಾನವಾಯು ಇದಿರಾದಡೆ ಮಕ್ಕಳು ಇಬ್ಬರು ಹುಟ್ಟುವರು.
ಪುರುಷರಿಗೆ ಶಶಿ, ಸ್ತ್ರೀಗೆ ರವಿ ಸ್ವರ ನಡೆದಡೆ ಪುರಷ ಹುಟ್ಟುವನು.
ಸ್ತ್ರೀಗೆ ಶಶಿ ಸ್ವರ ಪುರಷಗೆ ರವಿಸ್ವರ ನಡೆದಡೆ ಸ್ತ್ರೀ ಹುಟ್ಟುವಳು.
ಸ್ತ್ರೀ ಪುರಷರಿಬ್ಬರಿಗೆಯು ಸ್ವರ ಚಂಚಲವಾದಡೆ ಗರ್ಭವಿಲ್ಲ.
ಪುರುಷಂಗಗ್ನಿ ಸ್ವರ ವಿಶೇಷವಾದರೆ ಬಂಜೆಯಹಳು ನೋಡಾ,
ಅಪ್ರಮಾಣ ಕೂಡಲಸಂಗಮದೇವ.


ಇನ್ನು ಕಾಲ ಭೇದ ಭೇದಂಗಳದೆಂತೆಂದಡೆ :

ಪ್ರಥಮ ಕಾಲದಲ್ಲಿ ಹುಟ್ಟಿದ ಮಗ ಕೋಪಿಯಹನು.
ದ್ವಿತೀಯ ಕಾಲದಲ್ಲಿ ಹುಟ್ಟಿದ ಮಗನು ಪಾಪಕರ್ಮಾಶ್ರಯವಾಗಿಹನು.
ತೃತೀಯ ಕಾಲದಲ್ಲಿ ಹುಟ್ಟಿದ ಮಗನು ಪಾಪಿಯಹನು.
ಅಸ್ತಮವಾದ ಆಱು ಘಳಿಗೆಗೆ ಹುಟ್ಟಿದ ಮಗನು ಜ್ಞಾನಿಯಹನು.
ಮಧ್ಯರಾತ್ರಿಹಲ್ಲಿ ಹುಟ್ಟಿದ ಮಗನು ಶಾಂತಿ ದಾಂತಿ ಸಮತೆ ಉಳ್ಳ ಪುರುಷನಹನು
ಬೆಳಗಾಗುವ ಜಾವದಲ್ಲಿ ಹುಟ್ಟಿದ ಮ[ಗ]ನು ಪರಮ ಯೋಗಿಯಹನು.
ನೋಡಾ ಅಪ್ರಮಾಣ ಕೂಡಲಸಂಗಮದೇವ.


ಇನ್ನು ವರ್ಣ ಭೇದವೆಂತೆಂದಡೆ :

ಸ್ತ್ರೀ ಪುರಷರಿಬ್ಬರ ಸಂಯೋಗ ಕಾಲದಲ್ಲಿ.
ಪೃಥ್ವಿ ಸ್ವರವಾದರೆ ಹುಟ್ಟಿದ ಮಗ ಪೀತವರ್ಣನಹನು,
ಅಪ್ಪುವಿನ ಸ್ವರವಾದಡೆ ಶ್ವೇತ ವರ್ಣವಹನು.
ಅಗ್ನಿ ಸ್ವರವಾದಡೆ ರಕ್ತ ವರ್ಣವಹನು,
ವಾಯು ಸ್ವರವಾದಡೆ ಕೃಷ್ಣವರ್ಣವಹನು
ಆಕಾಶ ಸ್ವರವಾದಡೆ ಧೂಮ್ರವರ್ಣವಹನು ನೋಡಾ
ಅಪ್ರಮಾಣ ಕೂಡಲಸಂಗಮದೇವ.


ಇನ್ನು ಆಯುಷ್ಯ ಭೇದಂಗಳ ಭೇದವೆಂತೆಂದಡೆ :

ಸ್ತ್ರೀ ಪುರುಷರಿಗೆಯು ಸ್ವರ ಐದು ಘಳಿಗೆ ನಡೆದಡೆ, ಆಯುಷ್ಯ ನೂಱು ವರುಷ
ನಾಲ್ಕು ಗಳಿಗೆ ನಡೆದಡೆ ಆಯುಷ್ಯ ಎಂಬತ್ತು ವರುಷ
ಮೂರು ಗಳಿಗೆ ನಡೆದಡೆ ಆಯುಷ್ಯ ಅರವತ್ತು ವರುಷ
ಎರಡು ಗಳಿಗೆ ನಡೆದಡೆ ಆಯುಷ್ಯ ನಾಲ್ವತ್ತು ವರುಷ
ಒಂದು ಗಳಿಗೆ ನಡೆದಡೆ ಆಯುಷ್ಯ ಇಪ್ಪತ್ತು ವರುಷ.
ಕಾಲು ಗಳಿಗೆ ನಡೆದಡೆ ಆಯುಷ್ಯ ಐದು ವರುಷ.
ಇನ್ನು ಶುಕ್ಲ ಭೇದವನ್ನು ಕ್ರಮದಿಂದ ನೋಡಿ ಕಾಂಬುದು
ಅಪ್ರಮಾಣ ಕೂಡಲಸಂಗಮದೇವ.


ಇನ್ನು ಆ ಶುಕ್ಲ ಸ್ತ್ರೀ ಪುರುಷರ ಸಂಯೋಗದಿಂದ ಮಾರುತ ನೂಂಕಲು
ಹುಲ್ಲು ಮೇಲಣ ಹನಿಯ ಅರ್ಧ ಮಾತ್ರ ಸ್ತ್ರೀಯ ಶೋಣಿತದಲ್ಲಿ ಬಿದ್ದು
ಆ ಶುಕ್ಲ ಶೋಣಿತ ಬಲಿದು ಜೀವನಾಗಿ ಭೂತಂಗಳ ಕೂಡಿಕೊಂಡು
ಕರ್ಮವಶದಿಂದ ಪಿಂಡವಹುದು.

ಇದಕ್ಕೆ ಶ್ರುತಿ-

ಆಯುಃ ಕರ್ಮ ಚ ವಿತ್ತಂ ಚ ವಿದ್ಯಾ ನಿಧನಮೇವ ಚ |
ಪಂಚೈತಾನಿ ಲಭ್ಯಂತೇ ಗರ್ಭಸ್ತಸ್ಯೈವ ದೇಹಿನಃ || ಇಂತೆಂದುದಾಗಿ,
ಈ ಪಂಚಾಕ್ಷರವ ನಿಟಿಲತಟದಲ್ಲಿ ಬರೆವನು.
ಆ ಶುಕ್ಲ ಶೋಣಿತಂಗಳು ಕೂಡಿ ಬೀಜವಹುದು.
ಪುರುಷವೀರ್ಯ ಘನವಾದಡೆ ಗಂಡುಮಗ ಹುಟ್ಟುವನು.
ಸ್ತ್ರೀ ವೀರ್ಯ ಘನವಾದಡೆ ಹೆಣ್ಣುಮಗಳು ಹುಟ್ಟುವಳು.
ಸಮವಾದಡೆ ನಪುಂಸಕ ಹುಟ್ಟುವದು
ಮಾತಾಪಿತರ ಮಲತ್ರಯದಲ್ಲಿ ಪಿಂಡರೂಪವಹುದು ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೧೦
ಮರುದಿನಕ್ಕೆ ಹಾಲಿಗೆ ಹೆಪ್ಪ ಕೊಟ್ಟಂತೆ ಕದಡಿಕೊಂಡಿಹುದು
ಐದು ದಿನಕ್ಕೆ ಹೊನ್ನೆ ಮೊಗ್ಗೆಯ ಪ್ರಮಾಣ ಮಾಗಿ ಕೆಂಪಾಗಿಹುದು ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೧೧
ಹದಿನೈದು ದಿನಕ್ಕೆ ಬುದ್ಬುದಾಕಾರವಾಗಿಹುದು
ಏಕಮಾಸಕ್ಕೆ ಕುಕ್ಕುಟಾಂಡ ಸ್ವರೂಪವಾಗಿ ಶಿರಸವಹುದು
ದ್ವಿಮಾಸಕ್ಕೆ ಬಾಹು ಹುಟ್ಟುವದು
ತ್ರಿಮಾಸಕ್ಕೆ ಉದರ ಹುಟ್ಟುವದು
ಚತುರ್ಮಾಸಕ್ಕೆ ಸರ್ವಾಂಗ ಹುಟ್ಟುವದು ನೋಡಾ.
ಅಪ್ರಮಾಣ ಕೂಡಲಸಂಗಮದೇವ.

೧೨
ಪಂಚ ಮಾಸಕ್ಕೆ ರೋಮಂಗಳು ಹುಟ್ಟುವವು
ಷಟ್‌ಮಾಸಕ್ಕೆ ಅಸ್ಥಿಗಳು ಹುಟ್ಟುವವು
ಸಪ್ತಮಾಸಕ್ಕೆ ಜೀವಕಳೆ ಸಂಪೂರ್ಣವಹಂದು
ಅಷ್ಟಮಾಸಕ್ಕೆ ಪೂರ್ವ ಜನ್ಮನರಿವನು

ಶ್ರುತಿ-

ಮೃತಸ್ಯಾಹಂ ಪುನರ್ಜಾತೋ ಜಾತಸ್ಯಾಹಂ ಪುರರ್ಮೃತಃ |
ನಾನಾ ಯೋನಿ ಸಹಸ್ರಾಣಿ ಕೃತ್ವಾಚೈವಂತು ಮಾಯಯಾ || ಎಂದುದಾಗಿ,
ಅಪ್ರಮಾಣ ಕೂಡಲಸಂಗಮದೇವ.

೧೩
ಈಶ್ವರನು ಮಾಯಾವಶವ ತೋಱಿ ಬೋಧಿಸಲೊಡನೆ
ನವಮಾಸ ತುಂಬಿ ಎಪ್ಪತ್ತೆರಡುಸಾವಿರದಾಱುನೂಱು ಶ್ವಾಸಂಗಳು,
ಮೂಱು ಮಂಡಲಗಳು, ಆ ಆಧಾರಂಗಳಾಱು
ಮೂವತ್ತೆರಡು ಲಕ್ಷಣಂಗಳು, ಐವತ್ತೆರಡಕ್ಷರಂಗಳು,
ಅಱುವತ್ತುನಾಲ್ಕು ಕಲಾಜ್ಞಾನಂಗಳು, ತೊಂಬತ್ತಾಱು ತತ್ವಂಗಳು ಕೂಡಿ,
ದೇಹವಾಗಿ ಪ್ರಸೂತಿಕಾಲ ವಾಯುವಶದಿಂದ
ಜನನಿಯ ಜಠರದಿಂ ಪೊಱಮಡುವನು
ಪೊಱಮಡುವುದರೊಳಗಾಗಿ ಆದಿಮಾಯೆ ಎಂಬ ಗಾಳಿ ಬೀಸಿ
ಒಲವೆ ಒಡಲಾಗಿ ನೆನೆದುದೆಲ್ಲವ ಮಱೆದುದು,
ಮುನ್ನ ಮಾಡಿದ ಕರ್ಮಫಲದಿಂದ ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೧೪
ಸುಕರ್ಮದಿಂದ ದೇವತಾಯೋನಿಯಲ್ಲಿ ಜನಿಸುವನು,
ಕರ್ಮದಿಂದ ಎಂಬತ್ತುನಾಲ್ಕುಲಕ್ಷ ಜೀವರಾಶಿಗಳ
ಕ್ರೂರಯೋನಿಯಲ್ಲಿ ಜನಿಸುವನು,
ಸುಕರ್ಮ ದುಷ್ಕರ್ಮ ಎರಡರ ಮಿಶ್ರಣದಿಂದ
ಮನುಜಯೋನಿಯಲ್ಲಿ ಜ[ನಿ]ಸುವನು,
ಇಂತಪ್ಪ ಸುಕರ್ಮ ದುಷ್ಕರ್ಮಗಳನು ಪೂರ್ವಕರ್ಮವಶದಿಂದ ಬಹನು
ನೋಡಾ, ಅಪ್ರಮಾಣ ಕೂಡಲಸಂಗಮದೇವ.

೧೫
ಸ್ಥೂಲ ಕಾಯ ಶರೀರ ಶುಕ್ಲ ಶೋಣಿತದಿಂದ ಎರಡಕ್ಕೆಯು ಎರಡು ಕಾಲು,
ಬ್ರಹ್ಮಗ್ರಂಥಿಯೊಳು ವಿಷ್ಣುಗ್ರಂಥಿಯೊಳು, ರುದ್ರಗ್ರಂಥಿಯೊಳು,
ಮೂಱೇಳು ಇಪ್ಪತ್ತೊಂದು ಗ್ರಂಥಿಯನುಳ್ಳ ಕಂಕಾಳದಂಡವು.
ಆ ಕಂಕಾಳ ದಂಡದ ದ್ವಾರದಲ್ಲಿ ಷೋಡಶ ಕಳೆಯನುಳ್ಳ ವೀಣಾದಂಡವು
ಮೂಱುಗಣೆ, ಮೂಱುಗಣೆ, ಮೂಱುಗಣೆ ಮಾಂಸವು.
ಮೂವತ್ತೆರಡು ಪಕ್ಕದ ಎಲವು
ನಾಲ್ಕು ಗೇಣು ಗಾತ್ರವು, ಎಂಟು ಗೇಣು ಉದ್ದವು.
ಆದಿ ನಾಲ್ಕು ಬಾಗಿಲನುಳ್ಳದಾಗಿ,
ರಸ, ರುಧಿರ, ಮಾಂಸ, ಮೇಧಸ್ಸು, ಅಸ್ಥಿ, ಮಜ್ಜೆ, ಶುಕ್ಲವೆಂಬ
ಸಪ್ತಧಾತುಗಳಿಂದ ದೇಹವಾಗಿ ಬೆಳೆಯಿತ್ತು ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೧೬
ದೇಹವಾಗಿ ಬೆಳೆದು, ಆಧ್ಯಾತ್ಮಿಕ, ಆದಿದೈವಿಕ, ಆದಿಭೌತಿಕವೆಂಬ
ತಾಪತ್ರಯಂಗಳಿಂದ ನೊಂದು ಬೆಂದು
ಪುಣ್ಯ ಪಾಪ ವಶದಿಂದ ಜೀವನಾಗಿ,
ಆಂಡಜ, ಸ್ವೇದಜ, ಉದ್ಭಿಜ, ಜರಾಯುಜವೆಂಬ
ಚೌರಾಶಿ ಲಕ್ಷ ಜೀವಜಂತುಗಳ ಯೋನಿಯಲ್ಲಿ ಬಂದು,
ಹುಟ್ಟದ ಯೋನಿಯಿಲ್ಲ ಮೆಟ್ಟದ ಭೂಮಿಯಿಲ್ಲ
ಉಣ್ಣದ ಆಹಾರವಿಲ್ಲ, ಕಾಣದ ಸುಖದುಃಖವಿಲ್ಲ.

ಶ್ರುತಿ-

ನಾನಾ ಯೋನಿ ಸಹಸ್ರಾಣಿ ಗತ್ವಾಚೈವಂತು ಮಾಯಯಾ |
ಆಹಾರಂ ವಿವಿಧಂ ಭುಕ್ತ್ವಾ ಪೀತ್ವಾ ಚ ವಿವಿಧಸ್ತನಾನ್ || ಎಂದುದಾಗಿ,
ಅಪ್ರಮಾಣ ಕೂಡಲಸಂಗಮದೇವ.

೧೭
ಇಂತಪ್ಪ ನಾನಾ ಯೋನಿ ಸುಖ ದುಃಖಂಗಳನುಂಡು, ಎಂತಕ್ಕೆ ನರನಾಗಿ ಬಂದು,
ಪೂರ್ವ ಜನ್ಮ ಸುಕೃತ ಫಲದಿಂದ ಮಹಾಪುರುಷನಾಗಿರ್ದು.
ನರಗೋತ್ತಮಂ ಮಾಡಿ, ಸ್ವರ್ಗಾದಿ ಭೋಗಂಗಳನು,
ಮೇಲಣ ಮುಕ್ತಿಯ ಪಥವನು ಪಡೆದ ತೆಱನಾವುದೆಂದು ವಿಚಾರಿಸಿ.
ಸಕಲ ವೇದಾಗಮ ಶಾಸ್ತ್ರ ಪುರಾಣಂಗಳ ಹೇಳದವರಿಂದಲು ಹೇಳಿದ
ಕಲಿತವರಿಂದಲು ಕೇಳಿ ಅಱಿದು ಮತ್ತಂ,
ತೊಂಬತ್ತಾಱು ತತ್ತ್ವವನು, ತೊಂಬತ್ತಾಱು ತತ್ವದೊಳು,
ಮೂವತ್ತಾಱು ತತ್ವಭೇದವನು, ಎಪ್ಪತ್ತೆರಡು ಸಾವಿರ ನಾಡಿಯನು,
ಎಪ್ಪತ್ತೆರಡು ಸಾವಿರ ನಾಡಿಯೊಳು ಮೂವತ್ತೆರಡು ನಾಡಿಯ ಭೇದವನು
ಮೂವತ್ತೆರಡು ನಾಡಿಯೊಳು ಚತುರ್ದಶ ನಾಡಿಯ ಭೇದವನು
ಚತುರ್ದಶ ನಾಡಿಯೊಳು, ತ್ರಿನಾಡಿಯ ಭೇದವನು;
ಚತುರ್ದಶವಾಯುವಿನೊಳು ಚತುರ್ದಶ ವಾಯುವನು.
ಪಂಚವಾಯುವಿನೊಳು, ಪಂಚವಾಯುವಿನ ಭೇದವನು ;
ಪಂಚವಾಯುವಿನೊಳು, ದ್ವಿವಾಯುವಿನ ಭೇದವನು;
ಷಡ್ವಿಧಕ್ರಮವನು; ಅಂತಃಕರಣ ಚತುಷ್ಟಯ [ವ] ನು
ಮಂಡಲತ್ರಯ ಭೇದವನು, ಕೇಳಿ ಅಱಿಯನು ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೧೮
ಇಂತು ನಾಡಿ ಧಾರಣೆ ಅದೆಂತೆಂದಡೆ :

ಎಪ್ಪತ್ತೆರಡು ಸಾವಿರ ನಾಡಿಗಳೊಳು, ಮೂವತ್ತೆರಡು ನಾಡಿ ಮುಖ್ಯವಾಗಿಹುದು
ಆ ಮೂವತ್ತೆರಡು ನಾಡಿಗಳೊಳು ಚತುರ್ದಶನಾಡಿಯು ಪ್ರಧಾನ ನಾಡಿಗಳಾಗಿಹುದು.
ಆ ಚತುರ್ದಶ ನಾಡಿಗಳೊಳು ಮೂಱುನಾಡಿಯು ಮುಖ್ಯವಾಗಿಹುದು.
ಆ ಮೂಱುನಾಡಿಗಳೊಳು ಒಂದು ನಾಡಿಯು ಮುಖ್ಯವಾಗಿಹುದು.
ಆ ಒಂದು ನಾಡಿಯನು ಯೋಗಿಗಳು ಬ್ರಹ್ಮನಾಡಿಯೆಂದು ಹೇಳುವರು.
ನೋಡಾ, ಅಪ್ರಮಾಣ ಕೂಡಲಸಂಗಮದೇವ.

೧೯
ಆ ಒಂದು ನಾಡಿಯು ಮೂಲಾಧಾರವೆ ಮೊದಲಾಗಿ
ಬ್ರಹ್ಮರಂಧ್ರ ಕಡೆಯಾಗಿ ನಿಲುವಿನ ಹಾಂಗೆ ಎಂಬ
ಕೆಳಗು ಮೇಲು ಬಂಧಿಸಿಕೊಂಡಿಹುದು
ಅಪ್ರಮಾಣ ಕೂಡಲಸಂಗಮದೇವ.

೨೦
ಕಾಲು ಕೈ ನಡುಗಳೆಲ್ಲವನು,
ತಾವರೆಯ ನೂಲಿನಹಾಂಗೆ ಎಂಬತ್ತುನಾಲ್ಕು ಸಾವಿರ
ಸಂದುಗಳ ಬಂಧಿಸಿಕೊಂಡಿಹುದು. ಕಾಣಾ,
ಅಪ್ರಮಾಣ ಕೂಡಲಸಂಗಮದೇವ.

೨೧
ಸೂರ್ಯನ ಕಿರಣಂಗಳ ಹಾಂಗೆ
ಸರ್ವಾಂಗವೆಲ್ಲವ ಭೇದಿಸಿಕೊಂಡಿಹುದು, ಕಾಣಾ,
ಅಪ್ರಮಾಣ ಕೂಡಲಸಂಗಮದೇವ.

೨೨
ಆಧಾರ ಚಕ್ರಂಗಳಾಱನು ಹಾಯಿದು
ಬ್ರಹ್ಮ ರಂಧ್ರವ ಮುಟ್ಟಿ, ನಾದ ಬಿಂದುಗಳಿಗೆ
ಆಶ್ರಯವಾಗಿಹುದು ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೨೩
ಅಗ್ನಿ ಮಂಡಲ ಆದಿತ್ಯ ಚಂದ್ರಮಂಡಲವೆಂಬ
ಮಂಡಲತ್ರಯಂಗಳ ಹಾಯಿದು,
ಬ್ರಹ್ಮಚಕ್ರ ಶಿಖಾಚಕ್ರವ ಹಾಯಿದು,
ಆ ಪಶ್ಚಿಮ ಚಕ್ರವ ಮುಟ್ಟಿ
ಏಕ ನಾಡಿಯಾಗಿಹುದು ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೨೪
ನಾಡಿಗಳ ಬೆರೆಸಿ ಹೋಗಿ ಹೊಕ್ಕು
ಮಹಾಜ್ಯೋತಿ ಪ್ರಕಾಶವ ಕಾಬುವದು
ಅಱಿವು ಕಾಣಾ,
ಅಪ್ರಮಾಣ ಕೂಡಲಸಂಗಮದೇವ.

೨೫
ತಿಲದೊಳಗಣ ತೈಲದಂತೆ
ಕ್ಷೀರದೊಳಗಣ ಘೃತದಂತೆ
ಪುಷ್ಪದೊಳಗಣ ಪರಿಮಳದಂತೆ
ಎಪ್ಪತ್ತೆರಡು ಸಾವಿರ ನಾಡಿಗಳೆಲ್ಲವನು
ಶಿವನು ಶಿವನ ಬೆರೆಸಿ ಅಡಗಿ ನಿಂದ ನಿಲವ ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೨೬
ಇನ್ನು ವಾಯುಧಾರಣೆ ಅದೆಂತೆಂದಡೆ;

ಚತುರ್ದಶವಾಯುಗಳೊಳಗೆ ಪಂಚವಾಯುವೆ ಮುಖ್ಯವಾಗಿಹುದು,
ಆ ಪಂಚವಾಯುವಿನೊಳಗೆ ದ್ವಿವಾಯುವೆ ಮುಖ್ಯವಾಗಿಹುದು,
ಆ ದ್ವಿವಾಯುವಿನೊಳಗೆ ಏಕವಾಯುವೆ ಮುಖ್ಯವಾಗಿಹುದು,
ಆ ಏಕವಾಯುವೆ ಚತುರ್ದಶವಾಯುವಾಗಿ ಚರಿಸುತ್ತಿಹುದು ನೋಡಾ,
ಅಪ್ರಮಾಣ ಕೂಡಲಸಂಗಮದೇವ.