ಕರ್ನಾಟಕದ ಹಾಸನ ಜಿಲ್ಲೆಯಲ್ಲಿರುವ ಶ್ರವಣ ಬೆಳಗೊಳ ಜೈನರ ಪವಿತ್ರ ಯಾತ್ರಾಸ್ಥಳ. ಇಲ್ಲಿ ಸಣ್ಣ ಬೆಟ್ಟ ಒಂದರ ಮೇಲೆ ಎತ್ತರವಾದ, ಭವ್ಯವಾದ ಶಿಲಾ ವಿಗ್ರಹ ಒಂದಿದೆ. ಅದರ ಸನ್ನಿಧಿಯಲ್ಲಿ ನಿಂತು ನೋಡುವಾಗ ಅದಕ್ಕೆ ಹಿನ್ನಲೆಯಾಗಿ ಆಕಾಶ ಕಾಣುತ್ತದೆ. ನೋಡುವವರಿಗೆ ಎನಿಸುತ್ತದೆ: ಈ ವಿಗ್ರಹಕ್ಕೆ ಈ ಹಿನ್ನೆಲೆಯೇ ಸರಿ. ಆಕಾಶದಂತೆ ಇದು ಉನ್ನತ, ಆಕಾಶದಂತೆ ಇದು ಸಮಾನವಿಲ್ಲದ್ದು. ವಿಗ್ರಹದ ಮುಖದ ಪ್ರಶಾಂತತೆ ಅನುಪಮವಾದದ್ದು.

ಒಂದೇ ಕಲ್ಲಿನಿಂದ ಕಡೆದ ಗೊಮ್ಮಟೇಶ್ವರನ ವಿಗ್ರಹ ಇದು. ಇದರ ಎತ್ತರ ಐವತ್ತೇಳು ಅಡಿ. ಈಜಿಪ್ಟ್ ದೇಶ ಒಂದನ್ನು ಬಿಟ್ಟರೆ ಪ್ರಪಂಚದಲ್ಲಿ ಎಲ್ಲಿಯೂ ಇಷ್ಟು ಎತ್ತರವಾದ ಶಿಲಾವಿಗ್ರಹ ಇಲ್ಲ. ಇದನ್ನು ೯೮೧ ರಲ್ಲಿ ರಾಚಮಲ್ಲನೆಂಬ ಗಂಗರ ಅರಸನ ಮಂತ್ರಿಯಾದ ಚಾವುಂಡರಾಯನು ಕಡೆಸಿದನು. ಬಾಹುಬಲಿ ಎನ್ನುವುದು ಗೊಮ್ಮಟೇಶ್ವರನ ಮತ್ತೊಂದು ಹೆಸರು.

ಬಾಹುಬಲಿ ಜೈನರ ಪುರಾಣಪುರುಷ. ಆತನ ಚಾರಿತ್ರ್ಯ ಸಮಸ್ತ ಭಾರತೀಯ ಸಂಸ್ಕೃತಿಯ ಅಂತಃಸತ್ವದ ನಿದರ್ಶನವೆಂದು ಹೇಳಬಹುದು. ಯದ್ಧದಲ್ಲಿ ಅಣ್ಣನಿಂದ ಎಲ್ಲವನ್ನೂ ಗೆದ್ದು ಚಕ್ರವರ್ತಿಯಾಗುವ ಅವಕಾಶ ಸಿಕ್ಕರೂ ಅವನೆಲ್ಲಾ ಪುನಃ ಅಣ್ಣನಿಗೇ ಹಿಂದಿರುಗಿಸಿದ ತ್ಯಾಗಜೀವಿ. ಸ್ವಾರ್ಥ, ಅಸೂಯೆ, ದರ್ಪ, ಕೋಪಗಳನ್ನು ನಿಗ್ರಹಿಸುವುದಕ್ಕೆ ಬಾಹುಬಲಿ ಆದರ್ಶ. ಇಂತಹ ಪುಣ್ಯಪುರುಷನ ಚರಿತ್ರೆ ಹೀಗೆ ಆರಂಭವಾಗುತ್ತದೆ.

ವೃಷಭನಾಥ

ಜೈನಧರ್ಮದಲ್ಲಿ ಇಪ್ಪತ್ತನಾಲ್ಕು ಜನ ತೀರ್ಥಂಕರರು. ತೀರ್ಥಂಕರರೆಂದರೆ ಅವತಾರ ಪುರುಷರು; ದೇಶದ ಜನತೆಯಲ್ಲಿ ಅಧರ್ಮ, ಅನ್ಯಾಯ ತಲೆಯೆತ್ತಿದಾಗ ಎಲ್ಲರನ್ನೂ ತಮ್ಮ ನಡೆನುಡಿಗಳಿಂದ, ಹಿತಬೋಧನೆಯಿಂದ ಉದ್ಧಾರ ಮಾಡಲು ಜನ್ಮವೆತ್ತಿದವರು ಇವರು. ಇವರು ತೀರ್ಥಂಕರರಾಗುವ ಮೊದಲು ನಾನಾ ಜನ್ಮಗಳನ್ನೆತ್ತಿ ಕಟ್ಟಕಡೆಯ ಜನ್ಮದಲ್ಲಿ ತೀರ್ಥಂಕರಾಗಿ ಮೋಕ್ಷಕ್ಕೆ ಹೋಗುವರು. ಅಂಥ ಇಪ್ಪತ್ತನಾಲ್ಕು ಜನ ತೀರ್ಥಂಕರರಲ್ಲಿ ಮೊಟ್ಟ ಮೊದಲನೆಯ ತೀರ್ಥಂಕರ ವೃಷಭನಾಥ. ಈತನೇ ಬಾಹುಬಲಿಯ ತಂದೆ.

ವೃಷಭನಾಥ ತೀರ್ಥಂಕರನಾಗುವ ಮೊದಲು ರಾಜನಾಗಿದ್ದ. ಅಯೋಧ್ಯೆ ಆತನ ರಾಜಧಾನಿ. ಅವನಿಗೆ ಇಬ್ಬರು ರಾಣಿಯರಿದ್ದರು. ಹಿರಿಯ ರಾಣಿ ಯಶಸ್ವತಿದೇವಿ, ಕಿರಿಯ ರಾಣಿ ಸುನಂದಾದೇವಿ. ಈತನ ಆಳ್ವಿಕೆಯಲ್ಲಿ ರಾಜ್ಯದ ಎಲ್ಲಡೆಯೂ ಶಾಂತಿ, ಸಮಾಧಾನ, ನೆಮ್ಮದಿ ಕಾಣುತ್ತಿತ್ತು. ಪ್ರಜೆಗಳ ಸುಖಕ್ಕೆ ಯಾವ ಕೊರತೆಯೂ ಇರಲಿಲ್ಲ.

ಕಾಲಕ್ರಮದಲ್ಲಿ ಹಿರಿಯ ರಾಣಿ ಯಶಸ್ವತಿದೇವಿಗೆ ನೂರು ಜನ ಗಂಡುಮಕ್ಕಳಾದರು. ಅವರಲ್ಲಿ ಹಿರಿಯವನು ಭರತ. ನಂತರ ಸುಂದರಿ ಎಂಬ ಒಂದೇ ಒಂದು ಹೆಣ್ಣುಮಗು. ಕಿರಿಯ ರಾಣಿ ಸುನಂದಾದೇವಿಗೆ ಒಂದು ಗಂಡುಮಗು, ಆ ಮಗುವೇ ಬಾಹುಬಲಿ; ಮತ್ತೊಂದು ಹೆಣ್ಣುಮಗು, ಆ ಮಗುವಿಗೆ ಬ್ರಾಹ್ಮೀ ಎಂದು ಹೆಸರು.

ನೂರಾರು ಮುದ್ದು ಮಕ್ಕಳನ್ನು ಪಡೆದ ರಾಜರಾಣಿಯರ ಆನಂದಕ್ಕಂತೂ ಪಾರವೇ ಇಲ್ಲ. ಎಲ್ಲ ಮಕ್ಕಳ ನಾಮಕರಣದ ಉತ್ಸವ ತುಂಬಾ ವಿಜೃಂಭಣೆಯಿಂದ ನಡೆಯಿತು. ರಾಜ್ಯದಲ್ಲೆಲ್ಲಾ ಮನೆಗಳನ್ನು ತಳಿರುತೋರಣಗಳಿಂದ ಸಿಂಗರಿಸಿದರು. ಸಾಲು ಸಾಲು ಬೆಳಗುವ ದೀಪಗಳಿಂದ ಬೀದಿ ಬೀದಿಗಳನ್ನು ಅಲಂಕರಿಸಿದರು. ಬಡಬಗ್ಗರಿಗೆಲ್ಲಾ ಅನ್ನದಾನ ವಸ್ತ್ರದಾನ ನಡೆದವು. ರಾಜ್ಯದಲ್ಲಿ ಎಲ್ಲ ಕಡೆಗಳಲ್ಲಿಯೂ ನೃತ್ಯ, ನಾಟಕ ಮುಂತಾದವು ಜನರ ಮನಸ್ಸನ್ನು ಸಂತೋಷಗೊಳಿಸಿದವು. ರಾಜ ಸಂಗೀತಗಾರರಿಗೆ, ವಿದ್ವಾಂಸರಿಗೆ, ಕಲಾವಿದರಿಗೆ ಎಲ್ಲರಿಗೂ ಬಿರುದುಬಾವಲಿಗಳನ್ನಿತ್ತು ಸನ್ಮಾನ ಮಾಡಿದ. ಎಲ್ಲರಿಗೂ ಸಂತೋಷ, ಸಂಭ್ರಮ, ಎಲ್ಲರದೂ ರಾಜಕುಮಾರ ಕುಮಾರಿಯರಿಗೆ ಒಳ್ಳೆಯದಾಗಲಿ ಎಂಬ ಹಾರೈಕೆ.

ಮೂರು ನಾಲ್ಕು ವರ್ಷಗಳು ಉರುಳಿದವು. ಇನ್ನು ಮಕ್ಕಳಿಗೆ ವಿದ್ಯಾಭ್ಯಾಸ ಪ್ರಾರಂಭಿಸಬೇಕು. ಒಬ್ಬರಲ್ಲ, ಇಬ್ಬರಲ್ಲ, ನೂರಕ್ಕೂ ಹೆಚ್ಚು ಮಕ್ಕಳು. ಅವರಿಗೆ ಕಲಿಸುವುದು ಸುಲಭವೇ? ಸ್ವತಃ ರಾಜನೇ ಎಲ್ಲರಿಗೂ ವಿದ್ಯೆ ಹೇಳಿಕೊಟ್ಟ. ಭರತನಿಗೆ ಭರತಶಾಸ್ತ್ರ, ಅರ್ಥಶಾಸ್ತ್ರ, ಬಾಹುಬಲಿಗೆ ಆಯುರ್ವೇದ, ಧನುರ್ವೇದ, ಹಸ್ತಿತಂತ್ರ, ಅಶ್ವತಂತ್ರ ಮುಂತಾದ ವಿದ್ಯೆಗಳನ್ನು ಕಲಿಸಿದ. ಉಳಿದ ಗಂಡು ಮಕ್ಕಳಿಗೂ ಅವರವರ ಇಷ್ಟ, ಅವರವರ ಸಾಮರ್ಥ್ಯ ಇವುಗಳಿಗೆ ಸರಿಯಾಗಿ ವಿದ್ಯೆಗಳನ್ನು ಹೇಳಿಕೊಟ್ಟ. ಬ್ರಾಹ್ಮೀ, ಸುಂದರಿಯರಿಗೆ ಲಿಪಿಶಾಸ್ತ್ರ ಮತ್ತು ಗಣಿತವನ್ನು ಕಲಿಸಿದ. ಎಲ್ಲ ಮಕ್ಕಳೂ ತುಂಬಾ ಶ್ರದ್ಧೆಯಿಂದ ಪಾಠ ಕಲಿತು ಬುದ್ಧಿವಂತರಾದರು.

ಭರತ ಬಾಲಕನಾಗಿದ್ದಾಗಲೇ ಅವನಲ್ಲಿ ಮುಂದೆ ಚಕ್ರವರ್ತಿಯಾಗುವ ಲಕ್ಷನಗಳೆಲ್ಲಾ ಕಾಣುತ್ತಿದ್ದವು.

ಅವನು ಹೆಸರಿಗೆ ತಕ್ಕಂತೆ ಬಾಹುಬಲಿಯೇ. ಮಲ್ಲ ಯುದ್ಧದಲ್ಲಿ ಎತ್ತಿದ ಕೈ. ಯುದ್ಧಮಾಡುವುದೆಂದರೆ ಅವನಿಗೆ ತುಂಬಾ ಆಸಕ್ತಿ. ತನ್ನ ಜೊತೆಯವರೊಡನೆ ಯುದ್ಧದಲ್ಲಿ, ಕುಸ್ತಿಯಲ್ಲಿ ತಾನೇ ಗೆಲ್ಲುತ್ತಿದ್ದ. ಸದಾ ಆನೆಯ ಮರಿಗಳೊಡನೆ ಆಟವಾಡುವುದರಲ್ಲಿ ಮೈಮರೆಯುತ್ತಿದ್ದ. ತುಂಬಾ ಧೈರ್ಯಶಾಲಿ. ಯಾವುದಕ್ಕೂ ಹೆದರುತ್ತಿರಲಿಲ್ಲ.

ಮಕ್ಕಳ ಏಳಿಗೆ ಕಂಡು ತಂದೆ ತಾಯಿಯರಿಗೆ ಸಂತೋಷವೋ ಸಂತೋಷ!

ಒಂದು ದಿನ ದೇವೆಂದ್ರ, ವೃಷಭನಾಥನ ಒಡ್ಡೊಲಗದಲ್ಲಿ ನೀಲಾಂಜನೆ ಎಂಬ ಅಪ್ಸರೆಯ ನೃತ್ಯವನ್ನು ಏರ್ಪಡಿಸಿದ. ಅಪೂರ್ವ ಸುಂದರ ನೃತ್ಯ. ಸಭೆಯ ತುಂಬಾ ತುಂಬಿದ್ದ ಸಭಿಕರೆಲ್ಲಾ ನರ್ತನ ನೋಡುವುದರಲ್ಲಿ ಮೈಮರೆತಿದ್ದಾರೆ.

ನರ್ತನ ನಡೆಯುತ್ತಿರಬೇಕಾದರೆ ಮದ್ಯದಲ್ಲಿಯೇ ನರ್ತಕಿಯ ಆಯಸ್ಸು ಮುಗಿಯಿತು.

ಇನ್ನೇನು ನರ್ತಕಿ ಕೆಳಕ್ಕೆ ಬೀಳಬೇಕು, ಅಷ್ಟರಲ್ಲಿ ದೇವೆಂದ್ರ, ರಾಜನಿಗೆ ರಸಭಂಗವಾಗಬಾರದೆಂದು ತನ್ನ ಮಾಯೆಯಿಂದ ನರ್ತನ ಮುಂದುವರೆಯುವಂತೆ ಮಾಡಿದ.

ಸಭೆಯಲ್ಲಿದ್ದ ಯಾರೊಬ್ಬರಿಗೂ ನಡೆದ ಸಂಗತಿ ತಿಳಿಯಲಿಲ್ಲ. ಆದರೆ ರಾಜನಿಗೆ ಮಾತ್ರ ಈ ಮಾರ್ಪಾಡು ಅರಿವಾಗದಿರಲಿಲ್ಲ.

ಆ ಕ್ಷಣ ಆತನ ಮನದಲ್ಲಿ ಜೀವನದ ಬಗ್ಗೆ ಜಿಗುಪ್ಸೆ ಮೂಡಿತು. ‘ಮನುಷ್ಯನ ಬಾಳು ಇಷ್ಟೇ ಅಲ್ಲವೇ? ಜಗತ್ತಿನಲ್ಲಿ ಯಾವುದೂ ಶಾಶ್ವತವಲ್ಲ. ಎಲ್ಲವೂ ಅನಿತ್ಯ. ಜೀವನ ನೀರ ಮೇಲಿನ ಗುಳ್ಳೆಯಂತೆ. ಎಲ್ಲ ನೋಡಲು ಸುಂದರ ಕಾಮನಬಿಲ್ಲಿನಂತೆ. ಆದರೆ ಕಾಮನಬಿಲ್ಲು ತೋರಿ ಇದ್ದಕ್ಕಿದ್ದಂತೆ ಮರೆಯಾಗುವ ಹಾಗೆಯೇ ಮನುಷ್ಯನ ಬಾಳೂ. ಯಾವುದೂ ಎಂದೆಂದಿಗೂ ಇರುವುದಿಲ್ಲ’ ಎನಿಸಿತು. ಈ ತನ್ನ ರಾಜ್ಯ, ರಾಣಿ, ಮಕ್ಕಳು ಎಲ್ಲವನ್ನೂ ತ್ಯಾಗ ಮಾಡಿ ತಪಸ್ಸಿಗೆ ತೆರಳು ನಿರ್ಧಾರ ಮಾಡಿದ.

ಹೀಗೆ ಅನಿರೀಕ್ಷಿತವಾಗಿ ನಡೆದ ಒಂದು ಸಣ್ಣ ಘಟನೆಯಿಂದಲೇ ವೃಷಭನಾಥನ ಮನಸ್ಸು ಪರಿವರ್ತನೆಯಾಯಿತು.

ಮಕ್ಕಳ ಆಡಳಿತ

ರಾಜ ಸಾಮ್ರಾಜ್ಯವನ್ನು ಬಿಟ್ಟು ಹೊರಟರೆ, ಅವನ ಹೊಣೆಯನ್ನು ಇತರರು ಹೊರಬೇಕಲ್ಲವೇ? ವೃಷಭನಾಥನ ಹಿರಿಯ ಮಗನಾದ ಭರತನನ್ನು ಅಯೋಧ್ಯಾನಗರದ ರಾಜನನ್ನಾಗಿ ಮಾಡಿ. ಬಾಹುಬಲಿ ಪೌದನಪುರದಲ್ಲಿ ರಾಜ್ಯಭಾರ ಮಾಡಿಕೊಂಡಿರಬೇಕೆಂದು ತೀರ್ಮಾನಿಸಿದ. ಉಳಿದೆಲ್ಲ ಮಕ್ಕಳಿಗೂ ಸಣ್ಣ ಸಣ್ಣ ರಾಜ್ಯಗಳನ್ನು ಹಂಚಿದ. ‘ನ್ಯಾಯವಾಗಿ, ಧರ್ಮಕ್ಕೆ ಅನುಗುಣವಾಗಿ ರಾಜ್ಯಭಾರ ಮಾಡಿ ಪ್ರಜೆಗಳನ್ನು ಪ್ರೀತಿಯಿಂದ ನೋಡಿಕೊಳ್ಳಿ. ಒಳ್ಳೆಯ ಹೆಸರನ್ನು ಪಡೆಯಿರಿ’ ಎಂದು ಉಪದೇಶಿಸಿದ. ಅವರನ್ನು ಹರಸಿ ತಾನು ಎಲ್ಲವನ್ನೂ ತ್ಯಾಗಮಾಡಿ ತಪಸ್ಸಿಗೆ ಹೊರಟುಹೋದ. ಮಕ್ಕಳೆಲ್ಲರೂ ತಮ್ಮ ತಮ್ಮ ರಾಜ್ಯಗಳ ಹೊಣೆಯನ್ನು ಹೊತ್ತರು. ವೃಷಭನಾಥನಿಂದ ಶಿಕ್ಷಣ ಪಡೆದವರಲ್ಲವೇ? ಚೆನ್ನಾಗಿ ಆಡಳಿತ ನಡೆಸಿದರು. ವೈಭವದಿಂದ ರಾಜ್ಯವಾಳಿದರು. ಪ್ರಜೆಗಳೆಲ್ಲ ಸುಖ, ಹೀಗೆ ಹಲವು ವರ್ಷಗಳು ಉರುಳಿದವು.

ಒಂದು ದಿನ ಭರತ ತನ್ನ ಒಡ್ಡೊಲಗದಲ್ಲಿ ಸಭೆ ನಡೆಸುತ್ತಿದ್ದಾನೆ. ಒಂದು ಸಂತೋಷದ ಸುದ್ದಿ ಬಂದಿತು ಅವನ ತಂದೆ ವೃಷಭನಾಥನಿಗೆ ಕೇವಲ ಜ್ಞಾನ ದೊರೆಯಿತು ಎಂದು. (ಕೇವಲ ಜ್ಞಾನವೆಂದರೆ ಶ್ರೇಷ್ಠವಾದ ಜ್ಞಾನ. ಎಲ್ಲವನ್ನೂ ಕಂಡು ತಿಳಿಯುವ ಜ್ಞಾನ) ಅಷ್ಟರಲ್ಲೇ ದೂತನೊಬ್ಬ ಓಡಿಬಂದು ಇನ್ನೊಂದು ಸಂತೋಷದ ಸುದ್ದಿಯನ್ನು ಹೇಳಿದ – ರಾಜನ ಆಯುಧಶಾಲೆಯಲ್ಲಿ ‘ಚಕ್ರರತ್ನ’ ಹುಟ್ಟಿದೆ! ರಾಜನಿಗೆ ಸಂತೋಷ, ಆಶ್ಚರ್ಯ.

ಆ ಚಕ್ರರತ್ನ ಅಸಾಮಾನ್ಯವಾದುದು. ಅದರ ಅಲೌಕಿಕ ಶಕ್ತಿಯಿಂದ ಎಷ್ಟೇ ಪ್ರಬಲ ಶತ್ರುವನ್ನಾದರೂ ಸುಲಭವಾಗಿ ಜಯಿಸಬಹುದು. ಭರತ ಮುಂದೆ ಚಕ್ರವರ್ತಿಯಾಗುವ ಶುಭ ಸೂಚನೆಯಿದು.

ಚಕ್ರರತ್ನದೊಡನೆ, ‘ಛತ್ರರತ್ನ’ – ಎಷ್ಟೇ ಬಿರುಸಾದ ಮಳೆ, ಉಗ್ರವಾದ ಬಿಸಿಲು, ಕ್ರೂರವಾದ ಬಿರುಗಾಳಿ ಇದ್ದರೂ ಸೈನ್ಯವನ್ನು ರಕ್ಷಿಸಲು; ‘ಛರ್ಮರತ್ನ’ – ದಿಗ್ವಿಜಯದ ಹಾದಿಯಲ್ಲಿ ದಾಟಲಸಾಧ್ಯವಾದ ನದಿ, ಸಮುದ್ರಗಳನ್ನು ಇಡೀ ಸೈನ್ಯ ಸುಲಭವಾಗಿ ದಾಟಲು ಸಹಾಯ ಮಾಡಲು; ಜೊತೆಗೆ ‘ದಂಡರತ್ನ್’ – ದಾರಿಗೆ ಅಡ್ಡವಾಗಿ ಬಂದ ಬೆಟ್ಟ, ಗುಡ್ಡ, ಕಾಡುಗಳನ್ನು ಕಡಿದು ದಾರಿ ಮಾಡಲು; ಅಲ್ಲದೆ ‘ಕಾಕಿಣೀರತ್ನ್’ ತನ್ನ ಪ್ರಜ್ವಲಿಸುವ ಕಾಂತಿಯಿಂದ ಎಂಥ ಕತ್ತಲೆಯನ್ನೇ ಆಗಲಿ ಹೊಡೆದೋಡಿಸುವ ಶಕ್ತಿಯುಳ್ಳದ್ದು; ಇಷ್ಟೇ ಅಲ್ಲದೆ ‘ಅಶ್ವರತ್ನ’ ‘ಗಜರತ್ನ’ ಮುಂತಾದ ಹದಿನಾಲ್ಕು ರತ್ನಗಳೂ ನವನಿಧಿಗಳೂ ಭರತನಿಗೆ ಲಭ್ಯವಾದವು. ಅವನ ಭಾಗ್ಯವೇ ಭಾಗ್ಯ.

ಚಕ್ರರತ್ನ ಹುಟ್ಟಿದ ಸುದ್ದಿ ಕಿವಿಗೆ ಬೀಳುತ್ತಿರಬೇಕಾದರೆ ಆಗಲೇ ರಾಜನಿಗೆ ಪುತ್ರ ಜನನವಾದ ಸುದ್ದಿಯೂ ಬಂದಿತು. ಒಂದಾಂದ ಮೇಲೋಂದರಂತೆ ಒಟ್ಟಿಗೆ ಮೂರು ಶುಭವಾರ್ತೆಗಳನ್ನು ಕೇಳಿದ ಭರತನ ಸಂತೋಷಕ್ಕೆ ಎಲ್ಲೆ ಎಲ್ಲಿ? ಎಲ್ಲೆಲ್ಲೂ ಮಂಗಳವಾದ್ಯಗಳು ಮೊಳಗಿದವು. ಪ್ರಜೆಗಳೆಲ್ಲ ಸಂಭ್ರಮದಿಂದ ಉತ್ಸವಗಳನ್ನು ಆಚರಿಸಿದರು.

ಸಂತಸದ ಮುಗಿಲು ಮುಟ್ಟಿದ ಭರತ ಮೊದಲು ಕೇವಲಜ್ಞಾನ ಪಡೆದ ತಂದೆಯನ್ನು ಕಾಣಲು ಹೊರಟ. ಜನರೆಲ್ಲ ವೃಷಭಸ್ವಾಮಿಯನ್ನು ಪೂಜಿಸಲು ಕಿಕ್ಕಿರಿದು ನೆರೆದಿದ್ದರು. ವೃಷಭನಾಥನ ಮಕ್ಕಳೆಲ್ಲರೂ ಬಂದು ತಂದೆಯನ್ನು ಭಕ್ತಿಯಿಂದ ಪೂಜಿಸಿ ಸ್ತುತಿಸಿದರು. ಅನಂತರ ಸ್ವಾಮಿಯ ಧರ್ಮೋಪದೇಶವನ್ನು ಕೇಳಿ ಕೃತಾರ್ಥರಾಗಿ ಹಿಂದಿರುಗಿದರು.

ಅಲ್ಲಿಂದ ಬಂದ ಕೂಡಲೇ ಭರತ ತನ್ನ ಮಗನ ನಾಮಕರಣ ಉತ್ಸವವನ್ನು ವಿಜೃಂಭಣೆಯಿಂದ ನಡೆಸಿದ ಅನಂತರ ಅಸಾಮಾನ್ಯ, ಅದ್ವಿತೀಯ ಪ್ರಭೆಯಿಂದ ಕೂಡಿದ ಚಕ್ರರತ್ನವನ್ನು ಭಕ್ತಿಯಿಂದ ಪೂಜಿಸಿದ.

 

‘ನಾನೆಂದಿಗೂ ಅವನ ಅಡಿಯಾಳಾಗಲಾರೆ. ಅಗತ್ಯವಾದರೆ ಯುದ್ದಕ್ಕೂ ಸಿದ್ದ’

ಭರತ ದಿಗ್ವಿಜಯಕ್ಕೆ ಹೊರಟ

 

ಎಲ್ಲ ಸಂಭ್ರಮಗಳು ಮುಗಿದವು. ಇನ್ನು ಭರತ ದಿಗ್ವಿಜಯಕ್ಕೆ ಹೊರಡಲು ತೀರ್ಮಾನಿಸಿದ. ಮೊದಲೇ ಪರಾಕ್ರಮಶಾಲಿ. ಈಗ ಛತ್ರರತ್ನ, ಛರ್ಮರತ್ನ, ಕಾಕಿಣೀರತ್ನ, ದಂಡರತ್ನ, ಅಶ್ವರತ್ನ, ಗಜರತ್ನ ಮೊದಲಾದ ರತ್ನಗಳಲ್ಲದೆ ಚಕ್ರರತ್ನದ ಭಾಗ್ಯ. ಭರತನನ್ನು ಎದುರಿಸಬಲ್ಲವರಾರು? ವಿಜಯ ಅವನ ಅಂಗೈಯಲ್ಲೆ. ಅದಕ್ಕಾಗಿ ಸಕಲ ಸಿದ್ದತೆಗಳು ನಡೆದವು. ರಾಜನ ಚತುರಂಗಬಲವೆಲ್ಲ ಸಿದ್ಧವಾಯಿತು. ದಿಗ್ವಿಜಯಕ್ಕೆ ಹೊರಡು ಮೊದಲು ಭರತ ದೇವರಿಗೆ ಪೂಜೆ ಸಲ್ಲಿಸಿ ಪ್ರಸಾದ ಸ್ವೀಕರಿಸಿದ. ಎಲ್ಲೆಲ್ಲೂ ರಣಕಹಳೆ ಮೊಳಗಿತು.

ರಾಜ ತನ್ನ ದಿವ್ಯ ರಥವನ್ನೇರಿ ಸಕಲ ಸೈನ್ಯದೊಡನೆ ದಿಗ್ವಿಜಯಕ್ಕೆ ಹೊರಟ. ಸಾಗರೆದಂತಹ ಸೈನ್ಯ ಇಡೀ ಭೂಮಂಡಲವನ್ನೆ ಆಕ್ರಮಿಸಿದಂತೆ ಕಾಣುತ್ತಿತ್ತು. ಎಲ್ಲರ ಮುಖಗಳಲ್ಲಿಯೂ ಉತ್ಸಾಹ.

ಎಲ್ಲರಿಗೂ ದಾರಿ ತೋರಿಸುತ್ತಾ ಮುಂದೆ ಮುಂದೆ ಸಾಗಿತು ಚಕ್ರರತ್ನ. ಎಲ್ಲರೂ ಅದರ ಹಿಂದೆ ನಡೆದರು. ಸೈನ್ಯವು ಮೊದಲು ಪೂರ್ವಾಭಿಮುಖವಾಗಿ ಹೊರಟಿತು.

ಭರತನ ಪ್ರಯಾಣ ವಿಜಯಗಳ ಮಾಲೆಯಾಯಿತು. ಮಗಧ, ವಿಜಯಾರ್ಧಕುಮಾರ, ಕೃತಮಳ ಮುಂತಾದ ಬಲಶಾಲಿಗಳಾದ ಅರಸರೆಲ್ಲ ಸೋತು ಶರಣಾತರಾದರು, ಭರತನಿಗೆ ಸೋಲೆಂಬುದೇ ಇಲ್ಲ. ಎದುರಾದ ರಾಜರೆಲ್ಲ ಸೋಲೊಪ್ಪಿಕೊಂಡು ಶರಣಾತರಾಗಿ, ಮುತ್ತು, ರತ್ನ, ವಜ್ರ ಮುಂತಾದ ಕಪ್ಪಕಾಣಿಕೆಗಳನ್ನು ಕೊಟ್ಟು ರಾಜನನ್ನು ದಿಗ್ವಿಜಯಿಸಿದರು. ಸೈನ್ಯವೆಲ್ಲ ಜಯಘೋಷ ಮಾಡುತ್ತಾ ಮುಂದೆ ಪುರದ ಸಾಗಿತು. ಇಡೀ ಭೂಮಂಡಲದ ರಾಜರನ್ನೆಲ್ಲ ಗೆದ್ದ ಭರತ ‘ಚಕ್ರವರ್ತಿ’ ಎನಿಸಿಕೊಂಡ. ಹೀಗೆ ಚಕ್ರರತ್ನದ ಸಹಾಯದಿಂದ ಭರತನ ದಿಗ್ವಿಜಯ ಮುಗಿಯುತ್ತಾ ಬಂದಿತು. ಸೈನ್ಯವೆಲ್ಲಾ ಜಯಭೇರಿ ಹೊಡೆಯುತ್ತ ವಿಜಯಘೋಷ ಮಾಡುತ್ತಾ ಅಯೋಧ್ಯೆಯ ಕಡೆಗೆ ನಡೆಯಿತು.

ಭರತನಿಗೆ ಎನಿಸಿತು: ‘ನನ್ನಂತಹ ಬಲಶಾಲಿ ಹಿಂದೆ ಯಾರೂ ಇರಲಿಲ್ಲ. ಇಂದು ಇಲ್ಲ, ಮುಂದೆ ಬರುವುದಿಲ್ಲ. ನನಗೆ ಯಾರು ಎದುರು? ಇಡೀ ಭೂಮಂಡಲದ ಚಕ್ರವರ್ತಿ ನಾನು’. ಆ ಯೋಚನೆಯ ಹಿಂದೆಯೇ ಮತ್ತೊಂದು ಯೋಚನೆ ಬಂದಿತು: ‘ನನ್ನ ಹೆಸರು ಎಂದೆಂದಿಗೂ ಜನರ ನೆನಪಿನಲ್ಲಿ ಉಳಿಯುವಂತೆ ವೃಷಭಾಚಲ ಬೆಟ್ಟದ ಮೇಲೆ ಕತ್ತಿಸಬೇಕು.’ ನನ್ನಂತಹ ರಾಜರು ಇರಲಿಲ್ಲ ಎಂಬುದು ಎಂದೆಂದಿಗೂ ಜನರಿಗೆ ತಿಳಿಯಬೇಕು.’

ದಾರಿಯಲ್ಲಿ ವೃಷಭಾಚಲ ಎದುರಾಯಿತು. ಭರತ ತನ್ನ ಕಥೆ ಕೆತ್ತಿಸಲು ನೋಡಿದರೆ, ಅಷ್ಟು ವಿಶಾಲವಾದ ಭವ್ಯವಾದ ಮಹಾಗಿರಿಯಲ್ಲಿ ಸ್ವಲ್ಪವೂ ಸ್ಥಳವೇ ಇಲ್ಲ!

ಭರತನಿಗಿಂತ ಮೊದಲು ಎಷ್ಟೋ ಸಾವಿರ ಜನ ಚಕ್ರವರ್ತಿಗಳಾಗಿ ಹೋಗಿದ್ದರು. ಅವರೆಲ್ಲ ತಮ್ಮ ಸಮಾನರಿಲ್ಲ ಎಂದು, ತಮ್ಮ ಕಥೆಯನ್ನು ಬೆಟ್ಟದ ಮೇಲೆ ಬಿತ್ತಿರಿಸಿದ್ದರು. ಅವರೆಲ್ಲ ಕೆತ್ತಿಸಿದ ದಿಗ್ವಿಜಯದ ಚರಿತ್ರೆಯಿಂದ ಇಡೀ ಬೆಟ್ಟವೆಲ್ಲ ತುಂಬಿಹೋಗಿತ್ತು.

ತನ್ನಷ್ಟು ಬಲಶಾಲಿ, ಪರಾಕ್ರಮಿ ಬೇರಾರೂ ತನ್ನಂಥ ಶ್ರೇಷ್ಠ ಚಕ್ರವರ್ತಿ ಹಿಂದೆ ಇರಲಿಲ್ಲ ಮುಂದೆ ಬರುವುದಿಲ್ಲ ಎಂದುಕೊಂಡಿದ್ದ ಭರತ. ಈಗ ನೋಡಿದರೆ ಹಾಗೆಯೇ ಮೆರೆದ ಚಕ್ರವರ್ತಿಗಳು ಎಷ್ಟೋ ಮಂದಿ ಆಗಿಹೋಗಿದ್ದರು! ಅವರ ಟೊಳ್ಳು ಹೆಮ್ಮೆಗೆ ಸಾಕ್ಷಿಯಾಗಿ ನಿಂತಿತ್ತು ಬೆಟ್ಟ. ತಾನು ಹೆಮ್ಮೆ, ಅಹಂಕಾರ ಪಟ್ಟಿದ್ದಕ್ಕೆ ಭರತನಿಗೆ ತುಂಬಾ ನಾಚಿಕೆಯಾಯಿತು.

ಆದರೂ ತನ್ನ ಕಥೆಯನ್ನು ಬರೆಸಲೇಬೇಕೆಂಬ ಛಲ ಭರತನಲ್ಲಿ ಮೂಡಿತು. ಅದಕ್ಕಾಗಿ ತನ್ನಲ್ಲಿದ್ದ ದಂಡರತ್ನದ ಸಹಾಯದಿಂದ ಮೊದಲೇ ಇದ್ದ ಬರಹದಲ್ಲಿ ಸ್ವಲ್ಪವನ್ನು ಅಳಿಸಿ ಆ ಸ್ಥಳದಲ್ಲಿ ತನ್ನ ದಿಗ್ವಿಜಯದ ಮಹಿಮೆಯನ್ನು ಕಾಕಿಣೀರತ್ನದಿಂದ ಕೆತ್ತಿಸಿದ.

ಅದಾದನಂತರ, ಅಲ್ಲಿಂದ ಮುಂದೆ ತಂದೆ ವೃಷಭನಾಥನಲ್ಲಿಗೆ ಹೋದ. ಆತನನ್ನು ಭಕ್ತಿಯಿಂದ ಪೂಜಿಸಿ ಆಶೀರ್ವಾದ ಪಡೆದ. ವಿಜಯೋತ್ಸಾಹದಿಂದ ರಾಜಧಾನಿಗೆ ಹಿಂತಿರುಗಿದ.

 

ಇದೇಕೆ ಹೀಗೆ?

ಭರತನ ಪ್ರಜೆಗಳಿಗೆ ಸಂತೋಷ, ಸಂಭ್ರಮ. ದಿಗ್ವಿಜಯದಿಂದ ಬರುತ್ತಿದ್ದ ಚಕ್ರವರ್ತಿಯನ್ನು ಸ್ವಾಗತಿಸಲು ಪುರಜನರೆಲ್ಲ ಸಕಲ ಸಿದ್ಧತೆಯೊಡನೆ ಕಾದು ನಿಂತರು. ಎಲ್ಲೆಲ್ಲೂ ಮಂಗಳವಾದ್ಯಗಳು ಮೊಳಗುತ್ತಿದ್ದವು.

ಭರತನ ಸಾಗರಸದೃಶ ಸೈನ್ಯ ರಾಜಧಾನಿಯ ಬಳಿಗೆ ಬಂದಿತು. ಸೈನ್ಯದ ಮುಂದೆ ಜಾಜ್ವಲ್ಯಮಾನವಾದ ಚಕ್ರರತ್ನ.

ಇನ್ನೇನು ಎಲ್ಲರೂ ಪುರಪ್ರವೇಶ ಮಾಡಬೇಕು, ಅಷ್ಟರಲ್ಲಿ, ದಿಗ್ವಿಜಯದ ಮೊದಲಿನಿಂದ ಕೊನೆಯವರೆಗೂ ಮುಂದೆ ಮುಂದೆ ಸಾಗುತ್ತಿದ್ದ ಚಕ್ರರತ್ನ  ಛಕ್ಕನೆ ನಿಂತಿತು!

ಎಲ್ಲರಿಗೂ ಆಶ್ಚರ್ಯವೇ ಆಶ್ಚರ್ಯ. ಇಂದಿನವರೆಗೂ ಜಗತ್ತಿನ ಎಲ್ಲ ರಾಜಾಧಿರಾಜರನ್ನು ತಲ್ಲಣಿಸುವಂತೆ ಮಾಡಿದ ಚಕ್ರ! ಅಸಮಾನ ವೀರರನ್ನೆಲ್ಲಾ ಸುಲಭವಾಗಿ ಸೋಲಿಸಿದ ಚಕ್ರ! ಹೀಗೆ ಹಠಾತ್ತನೆ ನಿಂತುಬಿಟ್ಟಿತಲ್ಲ! ಎಲ್ಲರಿಗೂ ದಿಗ್ಭ್ರಮೆ. ಭರತನಿಗಂತೂ ಕಳವಳ, ಚಿಂತೆ. ತಾನು ಗೆಲ್ಲದ ಶತ್ರು ಒಬ್ಬನಿದ್ದಾನೆ ಎಂದು ಈಗ ಸ್ಪಷ್ಟವಾಯಿತು. ‘ಇಡೀ ಪ್ರಪಂಚವನ್ನೇ ಗೆದ್ದಿದ್ದರೂ ಇನ್ನೂ ನನಗೆ ವೈರಿ ಯಾರು?’ ಎಂದು ಚಿಂತಿಸುವಂತಾಯಿತು. ಸೋಲೇ ಅರಿಯದಿದ್ದ ಚಕ್ರವರ್ತಿಗೆ ಆಶ್ಚರ್ಯವಾಯಿತು.

ಭರತ ರಾಜ್ಯದ ಹೊರಗಿನ ಶತ್ರುಗಳನ್ನೆಲ್ಲ ಗೆದ್ದಿದ್ದ. ಆದರೂ ಚಕ್ರ ಊರ ಹೊರಗೆ ನಿಂತಿತೆಂದರೆ, ಹೊರಗಿನ ಶತ್ರು ಯಾರೂ ಇಲ್ಲ ಎಂದಾಯಿತಲ್ಲ!

ಕೂಡಲೆ ಭರತ ಪುರೋಹಿತರನ್ನು ಕರೆಸಿ, ‘ಜಗತ್ತಿನ ಎಲ್ಲಾ ಶತ್ರುಗಳನ್ನು ಜಯಿಸಿದ್ದರೂ ಈ ಚಕ್ರರತ್ನ ಬಾಗಿಲಲ್ಲೇ ನಿಲ್ಲಲು ಕಾರಣವೇನು? ನನ್ನ ರಾಜ್ಯದಲ್ಲೇ ನನಗೆ ಶತ್ರು ಯಾರು?’ ಎಂದು ಕೇಳಿದ.

ಅದಕ್ಕೆ ಪುರೋಹಿತರು ಯೋಚಿಸಿ ಉತ್ತರಿಸಿದರು: ‘ಮಹಾರಾಜಾ, ಚಕ್ರರತ್ನದ ಸಹಾಯದಿಂದ ಎಂಥ ವೈರಿಯನ್ನಾದರೂ ಸೋಲಿಸಬಹುದು. ನಿನಗೆ ಹೊರಗಿನ ಶತ್ರುಗಳಾರೂ ಉಳಿದಿಲ್ಲ. ಇದ್ದರೆ ಅವರು ನಿನ್ನ ಸ್ವಂತ ತಮ್ಮಂದಿರು ಮಾತ್ರ. ಅವರು ಭರತನಿಗೆ ಹೇಗೋ ಹಾಗೇ ತಂದೆಯಿಂದ ನಮಗೆ ಬಂದದ್ದು ಈ ರಾಜ್ಯ. ನಮ್ಮ ನಮ್ಮ ರಾಜ್ಯದಲ್ಲಿ ನಾವಿದ್ಧೇವೆ. ಭರತನಿಗೇಕೆ ಶರಣಾಗಬೇಕು ಎಂದು ಬಿಗುಮಾನದಿಂದಿದ್ದಾರೆ. ಅದರಲ್ಲೂ ಬಾಹುಬಲಿ ಮಹಾ ಸ್ವಾಭಿಮಾನಿ. ಭರತ ದೇಶಕ್ಕೆ ಚಕ್ರವರ್ತಿಯಾದರೆ ನನಗೇನು ಎಂಬ ಗರ್ವದಿಂದಿದ್ದಾನೆ’ ಎಂದರು.

ಅದನ್ನು ಕೇಳಿದ ಭರತನಿಗೆ ಸಹಿಸಲಾರದ ಕೋಪ ಬಂದಿತು. ‘ಅವರೆಲ್ಲಾ ಬಂದು ನನಗೆ ಶರಣಾಗತರಾದರೆ ಸಮ. ಇಲ್ಲದಿದ್ದರೆ ಯುದ್ದದಲ್ಲೇ ನನ್ನ ಪರಾಕ್ರಮ ತೋರಿಸುತ್ತೇನೆ’ ಎಂದು ಗರ್ಜಿಸಿದ. ತಕ್ಷಣ, ‘ಎಲ್ಲರೂ ತನಗೆ ಶರಣಾಗತರಾಗಬೇಕು, ತಪ್ಪಿದರೆ ಯುದ್ಧಕ್ಕೆ ಸಿದ್ಧರಾಗಬೇಕು’ ಎಂಬ ರಾಜಶಾಸನವನ್ನು  ಬರೆಸಿ ತನ್ನೆಲ್ಲ ತಮ್ಮಂದಿರ ಬಳಿಗೆ ಕಳುಹಿಸಿದ.

ಭರತನ ನೂರು ಮಂದಿ ತಮ್ಮಂದಿರಿಗೂ ರಾಜನ ಅಪ್ಪಣೆ ತಲುಪಿತು. ತೊಂಬತ್ತೊಂಬತ್ತು ಜನ ತಮ್ಮಂದಿರು ರಾಜಶಾಸನವನ್ನು ನೋಡಿ ‘ತಂದೆ ಸಮಾನ ಎಂದು ಬೇಕಾದರೆ ಹಿರಿಯಣ್ಣನಿಗೆ ವಂದಿಸಬಹುದು. ಆದರೆ ಚಕ್ರವರ್ತಿ ಎಂದು ಅವನಿಗೆ ಅಡಿಯಾಳಾಗಲಾರೆವು’ ಎಂದುಕೊಂಡರು. ಆದರೆ, ಕೇವಲ ರಾಜ್ಯದ ಆಸೆಗಾಗಿ ಅಣ್ಣನೊಡನೆ ಏಕೆ ಕಾದಾಡಬೇಕು‘ ಎನಿಸಿತು. ಅವರಿಗೆ ಜೀವನದಲ್ಲೇ ವೈರಾಗ್ಯ ಮೂಡಿತು. ಎಲ್ಲವನ್ನೂ ತ್ಯಾಗ ಮಾಡಿ, ತಂದೆಯೊಡನೆ ತಪಸ್ಸು ಮಾಡಲು ಹೊರಟು ಹೋದರು.

ಸುದ್ದಿ ಭರತನಿಗೆ ತಲುಪಿತು. ಅವನಿಗೆ ಬಹಳ ಆಶ್ವರ್ಯವಾಯಿತು. ತಮ್ಮಂದಿರ ಅಭಿಮಾನವನ್ನೂ ಹಿರಿಯ ಗುಣವನ್ನೂ ಮನದಲ್ಲೇ ಮೆಚ್ಚಿದ. ಜೊತೆಗೆ ಒಂದು ಆತಂಕದ ಯೋಚನೆಯೂ ಮೂಡಿತು – “ಈ ತಮ್ಮಂದಿರೇ ಹೀಗೆ ಮಾಡಿದರೆ ಇನ್ನು ಮಹಾ ಅಭಿಮಾನಿಯೂ ಬಲಶಾಲಿಯೂ ಆದ ಬಾಹುಬಲಿ ನನಗೆ ಶರಣಾಗುವನೇ, ಅವನು ಯುದ್ಧಕ್ಕೆ ಖಂಡಿತ ಬರಬಹುದು” ಎನಿಸಿತು.

ಭರತನ ನಿರೀಕ್ಷೆ ಸುಳ್ಳಾಗಲಿಲ್ಲ.! ಪೌದನಪುರಕ್ಕೆ ಹೋದ ದೂತ ಬಾಹುಬಲಿಯನ್ನು ನೋಡಿದ. ಅವನು ಭರತನಿಗಿಂತಲೂ ಮಿಗಿಲಾದ ಅಪೂರ್ವ ತೇಜಸ್ವಿನಿಂದ ಕೂಡಿದ ಬಾಹುಬಲಿಯನ್ನು ಕಂಡ. ತುಂಬಾ ಆಶ್ಚರ್ಯ, ಆನಂದದಿಂದ ನಮಸ್ಕರಿಸಿ, ಆತನಿಗೆ ಭರತನ ಸಂದೇಶವನ್ನು ತಿಳಿಸಿದ.

‘ಈ ರಾಜ್ಯ ನನಗೆ ಬೇಡ. ತಪಸ್ಸಿಗೆ ಹೋಗುತ್ತೇನೆ’

ಆವರೆಗೆ ಅಣ್ಣ ಭರತ ಚಕ್ರವರ್ತಿಯ ಪರಾಕ್ರಮವನ್ನು ಕೇಳಿ ಬಾಹುಬಲಿ ಬಹು ಸಂತೋಷದಿಂದಿದ್ದ. ಆದರೆ ದೂತನು ತಂದ ರಾಜಾಜ್ಞೆಯನ್ನು ಕಂಡು ಕೋಪದಿಂದ ಕೆಂಡವಾದ.

ದೂತನಿಗೆ ಹೇಳಿದ: ‘ಭರತದೇಶ ಇಡೀ ಭೂಮಂಡಲಕ್ಕೆ ಚಕ್ರವರ್ತಿಯಾದರೂ ನಮಗಲ್ಲ. ತಂದೆಯಿಂದ ಪಡೆದ ರಾಜ್ಯದಲ್ಲಿ ನಾನಿರಲು ಅವನದೇನು ಹಂಗು? ನಾನೆಂದಿಗೂ ಅವನ ಅಡಿಯಾಳಾಗಲಾರೆ. ಅಗತ್ಯವಾದರೆ ಯುದ್ಧಕ್ಕೂ ಸಿದ್ಧ.’

ದೂತ ಬಾಹುಬಲಿಯ ಉತ್ತರವನ್ನು ಭರತನಿಗೆ ನಿವೇದಿಸಿದ.

ತನ್ನ ಸೈನ್ಯವೆಲ್ಲಾ ಯುದ್ಧಕ್ಕೆ ಸಿದ್ಧವಾಗಬೇಕೆಂದು ಭರತ ಆಜ್ಞೆ ಹೊರಡಿಸಿದ. ರಾಜನ ಚತುರಂಗಬಲವೆಲ್ಲಾ ಪೌದನಪುರದತ್ತ ಹೊರಟಿತು. ಮುಂದೆ ಚಕ್ರರತ್ನ, ಸೈನ್ಯ ಸಾಗಿದಾಗ ಧೂಳಿನಿಂದ ಇಡೀ ಆಕಾಶವೇ ಮುಚ್ಚಿಹೋಯಿತು.

ಭರತನು ಬರುವ ಸುದ್ದಿ ಪೌದನಪುರವನ್ನು ತಲುಪಿತು. ಬಾಹುಬಲಿ ತನ್ನ ಸೈನ್ಯದೊಡನೆ ಯುದ್ಧಕ್ಕೆ ಸಿದ್ದನಾಗಿ ನಿಂತ. ಎರಡು ಕಡೆಯ ಸೈನ್ಯಗಳೂ ಒಂದನ್ನೊಂದು ನಾಶಮಾಡಲು ತುದಿಗಾಲಲ್ಲಿ ನಿಂತಂತೆ ಕಾಣುತ್ತಿತ್ತು.

ಇನ್ನೇನು ಯುದ್ಧ ಪ್ರಾರಂಭವಾಗಬೇಕು. ಅಷ್ಟರಲ್ಲಿ ಬಹು ಮೇಧಾವಿಗಳೂ ಮುಂದಾಲೋಚನೆಯುಳ್ಳವರೂ ಆದ ಎರಡು ಕಡೆಯ ಮಂತ್ರಿಗಳೂ ಒಟ್ಟಿಗೆ ಸೇರಿ ಸಮಾಲೊಚನೆ ಮಾಡಿದರು. ಭರತ ಬಾಹುಬಲಿಗಳಿಬ್ಬರೂ ಅಸಮಾನ ವೀರರು. ಯುದ್ಧವಾದರೆ ಎರಡೂ ಪಕ್ಷಗಳ ಸೈನ್ಯ ಸಂಪೂರ್ಣ ನಾಶವಾಗದೆ ಹೋದರೆ ಜಯ ಯಾರಿಗೂ ದೊರೆಯದು. ಅದರ ಬದಲು ಅಣ್ಣ ತಮ್ಮಂದಿರಲ್ಲೇ ಧರ್ಮಯುದ್ಧ ನಡೆದರೆ ಮುಂದಾಗುವ ದೊಡ್ಡ ದುರಂತ ತಪ್ಪುವುದು. ಇವರಿಬ್ಬರಲ್ಲೇ ಜಯಾಪಜಯ ನಿರ್ಣಯವಾದರೆ ಎಲ್ಲರಿಗೂ ಹಿತ ಎಂಬ ತೀರ್ಮಾನಕ್ಕೆ ಬಂದರು.

ಅಣ್ಣ – ತಮ್ಮಂದಿರಲ್ಲೆ ಯುದ್ಧ

ಮಂತ್ರಿಗಳಿಬ್ಬರೂ ಮೊದಲು ಭರತ ಚಕ್ರವರ್ತಿಯ ಬಳಿಗೆ ಹೋದರು. ಯುದ್ಧದಿಂದಾಗುವ ಅನಾಹುತವನ್ನು ವರ್ಣಿಸಿದರು. ‘ನೀವಿಬ್ಬರೇ ಧರ್ಮಯುದ್ಧ ಮಾಡಿ ಇಷ್ಟೆಲ್ಲ ಅನಾಹುತವಾಗುವುದನ್ನು ತಪ್ಪಿಸಿ’ ಎಂದು ಬೇಡಿದರು. ಭರತನಿಗೆ ಅಸಮಾಧಾನ – ತನ್ನ ಮಹಾ ಸೈನ್ಯದ ಶಕ್ತಿಪ್ರದರ್ಶನಕ್ಕೆ ಅವಕಾಶ ತಪ್ಪಿಹೋಗುವುದಲ್ಲ ಎಂದು, ಆದರೂ ಅದನ್ನು ತೋರಿಸದೆ ಮಂತ್ರಿಗಳ ಮಾತಿಗೆ ಒಪ್ಪಿದ.

ಮಂತ್ರಿಗಳು ಬಾಹುಬಲಿಯ ಬಳಿಗೆ ಹೋದರು. ಅದೇ ಪ್ರಾರ್ಥನೆಯನ್ನು ಮಾಡಿದರು. ಬಾಹುಬಲಿ, ‘ಭರತದೇಶನು ತನ್ನ ಚತುರಂಗಬಲವನ್ನು ಪ್ರಪಂಚದಲ್ಲಿ ಯಾರೂ ಸೋಲಿಸಲಾರರು ಎಂಬ ಜಂಬದಿಂದಿದ್ದಾನೆ. ಮೊದಲು ಅವನ ಸೈನ್ಯವನ್ನು ಸೋಲಿಸಿ ಅನಂತರ ಬೇಕಾದರೆ ಧರ್ಮಯುದ್ಧ’ ಎಂದುಬಿಟ್ಟ. ಮಂತ್ರಿಗಳು ಬಿಡಲಿಲ್ಲ. ಎರಡು ಪ್ರಬಲ ಸೈನ್ಯಗಳಿಗೆ ಯುದ್ಧವಾದರೆ ಸಾವಿರಾರು ಮಂದಿಗೆ ಒದಗುವ ಸಾವು ಇಲ್ಲವೆ ನೋವು, ದುಃಖ ಎಲ್ಲವನ್ನು ವರ್ಣಿಸಿದರು. ‘ಧರ್ಮಯುದ್ಧದಿಂದ ಯಾವ ಸಾವೂ ನೋವು ಇಲ್ಲದೇ ಜಯಾಪಜಯ ನಿರ್ಣಯವಾಗುವುದು. ಭರತೇಶನೂ ಒಪ್ಪಿದ್ದಾನೆ. ನೀನೂ ಒಪ್ಪಬೇಕು’ ಎಂದು ವಿನಂತಿ ಮಾಡಿಕೊಂಡರು. ಹಿರಿಯರ ಮಾತನ್ನು ಮೀರಲಾರದೆ ಬಾಹುಬಲಿ ಧರ್ಮಯುದ್ಧಕ್ಕೆ ಸಿದ್ಧನಾದ.

ಭರತ ಬಾಹುಬಲಿ ಒಬ್ಬರಿಗಿಂತ ಒಬ್ಬರು ಮಹಾಪರಕ್ರಮಿಗಳು, ವೀರಾಧಿವೀರರು. ಅವರಿಬ್ಬರ ಯುದ್ಧವೆಂದರೆ ಸಾಮಾನ್ಯವೇ?

ಭರತನಿಗೆ ‘ಇಡೀ ಜಗತ್ತನ್ನೇ ಗೆದ್ದ ನನಗೆ ಬಾಹುಬಲಿಯನ್ನು ಸೋಲಿಸುವುದು ಏನು ಕಷ್ಟ?’ ಎಂಬ ವಿಶ್ವಾಸ. ಬಾಹುಬಲಿಗೆ, ‘ನನ್ನನ್ನು ಗೆಲ್ಲುವುದು ಎಲ್ಲ ರಾಜರನ್ನು ಗೆದ್ದಂತಲ್ಲ’ ಎಂಬ ಹೆಮ್ಮೆ.

ರಣಕಹಳೆ ಮೊಳಗಿತು. ಇಬ್ಬರಿಗೂ ಪರಸ್ಪರ ಯುದ್ಧ ಪ್ರಾರಂಭವಾಯಿತು.

ಧರ್ಮಯುದ್ಧದಲ್ಲಿ ಮೊದಲು ದೃಷ್ಟಿಯಿಂದ, ಒಬ್ಬರನ್ನೊಬ್ಬರು ಎವೆಯಿಕ್ಕದೆ ಕಣ್ಣುಗಡ್ಡೆ ಆಡಿಸದೆ ಒಂದೇ ಸಮನೆ ನೋಡುತ್ತಿರಬೇಕು. ಯಾರ ಕಣ್ಣುಗುಡ್ಡೆ ಮೊದಲು ಚಲಿಸಿದರೆ ಅವರು ಸೋತಂತೆ.

ಭರತ-ಬಾಹುಬಲಿಗಳಿಬ್ಬರೂ ತಮ್ಮ ತಮ್ಮ ನೋಟದಲ್ಲೇ ಒಬ್ಬರನೊಬ್ಬರು ಹೀರಿಬಿಡುವರೇನೋ ಎಂಬಂತೆ ಕಾಣುತ್ತಿತ್ತು. ಒಬ್ಬರ ದೃಷ್ಟಿ ಮತ್ತೊಬ್ಬರನ್ನು ಸುಟ್ಟು ಬಿಡಬಹುದೇನೋ ಎಂದು ತೋರುತ್ತಿತ್ತು. ಕೊನೆಗೆ ಬಾಹುಬಲಿಗೆ ಗೆಲುವಾಯಿತು.

ಎರಡನೆಯದು ಜಲಯುದ್ಧ ಇದರಲ್ಲಿ ಒಬ್ಬರನೊಬ್ಬರು ತಮ್ಮ ಬೊಗಸೆಯಿಂದ ನೀರನ್ನು ಎರಚುವುದು. ಭರತ – ಬಾಹುಬಲಿಗಳಿಬ್ಬರೂ ಮದವೇರಿದ ಆನೆಗಳಂತೆ ಸರೋವರವನ್ನು ಹೊಕ್ಕರು. ಬಾಹುಬಲಿ ಭರತನಿಗಿಂತ ಎತ್ತರ. ಸೋತ ಸಿಟ್ಟಿನಿಂದ ಭರತ ಎಷ್ಟೇ ಜೋರಾಗಿ ಬೀಸಿ ಬೀಸಿ ನೀರನ್ನು ಎರಚಿದರೂ ಅದು ಬಾಹುಬಲಿಯ ಎದೆಯ ಮಟ್ಟಕಷ್ಟೇ ಹೋಗುತ್ತಿತ್ತು. ಅಂತೆಯೇ ಬಾಹುಬಲಿ ಜೋರಾಗಿ ಚಿಮ್ಮಿದ ನೀರೆಲ್ಲಾ ಭರತನ ಮುಖಕ್ಕೆ, ತಲೆಗೆ ಅಪ್ಪಳಿಸಿ ಅವನ ಕೋಪದ ಕೆಂಡವನ್ನು ಸುಡುವುದೋ ಎಂಬಂತೆ ತೋರುತ್ತಿತ್ತು. ಅವನ ಹೊಡೆತದ ರಭಸವನ್ನು ತಾಳಲಾರದೆ ಭರತೇಶ ಸೋಲಬೇಕಾಯಿತು. ಸೋತ ಭರತನ ಕೋಪ ಮತ್ತೂ ಏರಿತು.

ಇನ್ನು ಉಳಿದಿದ್ದು ಮಲ್ಲಯುದ್ಧ ಇದಲ್ಲಾದರೂ ಬಾಹುಬಲಿಯನ್ನು ಸೋಲಿಸಲೇಬೇಕೆಂಬ ಛಲ ಭರತನಲ್ಲಿ ಬುಸುಗುಟ್ಟುತ್ತಿತ್ತು.

ಮಲ್ಲಯುದ್ದ ಪ್ರಾರಂಭವಾಯಿತು. ಇಬ್ಬರೂ ಮಲ್ಲಯುದ್ದ ಪ್ರವೀಣರು. ಇಬ್ಬರಿಗೂ ಛಲ. ಯಾರೊಬ್ಬರೂ ಸೋಲುವಂತೆ ತೋರಲೇ ಇಲ್ಲ. ಕೊನೆಗೆ ಒಮ್ಮೆ ಬಾಹುಬಲಿ ಭರತನನ್ನು ಮೇಲಕ್ಕೆ ಎತ್ತಿದ. ನೋಡುತ್ತಿದ್ದವರು ನಡುಗಿದರು – ಇನ್ನೇನು ಬಾಹುಬಲಿ ಭರತನನ್ನು ನೆಲಕ್ಕೆ ಅಪ್ಪಳಿಸಬಿಡುವನೇನೋ, ಎಂದು.

ಬಾಹುಬಲಿ ಅಣ್ಣನನ್ನು ಮೆಲ್ಲನೆ ಕೆಳಗಿಸಿದ. ನೆಲ ತಾಕಿದ ಭರತನಿಗೆ ತನ್ನ ಸ್ಥಿತಿಯನ್ನು ಕಂಡು ಕೋಪದಿಂದ ಮೈ ಥರಥರ ನಡುಗಿತು.

ತಾನು, ಇಡೀ ಜಗತ್ತನೇ ಗೆದ್ದು ಚಕ್ರವರ್ತಿಯಾದ ಭರತ ಎರಡು ಸೈನ್ಯಗಳು ನೋಡುತ್ತಿರುವಂತೆ ತನ್ನ ತಮ್ಮನಿಗೆ ಸೋತೆನಲ್ಲವೇ! ಈ ಸೋಲಿನ ಅವಮಾನ ಸಹಿಸಲು ಅಸಾಧ್ಯವಾಯಿತು. ತಕ್ಷಣ ಭರತನು ತನ್ನ ಚಕ್ರರತ್ನಕ್ಕೆ, ‘ಬಾಹುಬಲಿಯನ್ನು ಕೊಂದು ಬಾ’ ಎಂದು ಆಜ್ಞಾಪಿಸಿದ.

ಪ್ರಜ್ವಲಿಸುತ್ತಿದ್ದ ಚಕ್ರ ಬಾಹುಬಲಿಯೆಡೆಗೆ ವೇಗವಾಗಿ ಸಾಗಿತು.

ನೋಡುತ್ತಿದ್ದ ಎರಡು ಸೈನ್ಯಗಳವರೂ ಪೌರರೂ ನಡುಗಿದರು. ‘ಭರತ ಎಂಥ ಕೆಲಸ ಮಾಡಿದ! ಇದು ಧರ್ಮಯುದ್ಧವೆ? ತಾನು ಸೋತನಂತರ ಚಕ್ರವನ್ನು ತಮ್ಮನ ಮೇಲೆ ಪ್ರಯೋಗಿಸಬಹುದೇ? ಇನ್ನೇನು ಆ ಚಕ್ರ ಬಾಹುಬಲಿಯನ್ನು ಕೊಂದೇಬಿಡುವುದು, ಎಂತಹ ಅನ್ಯಾಯ!’ ಎಂದು ಭಯದಿಂದ ಉಸಿರನ್ನೂ ಬಿಡಲಾರದ ಬಿಟ್ಟ ಕಣ್ಣುಗಳು ಬಿಟ್ಟಂತೆ ದಿಟ್ಟಿಸಿದರು.

ಚಕ್ರ ಬಾಹುಬಲಿಯನ್ನು ಸಮೀಪಿಸಿತು. ಅವನ ಸುತ್ತ ಒಂದು ಪ್ರದಕ್ಷಿಣೆ ಬಂದಿತು. ಅವನ ಬಲಗಡೆ ನಿಂತುಬಿಟ್ಟಿತು.

ಜನರೆಲ್ಲ ಸಂತೋಷದಿಂದ ಜಯಘೋಷ ಮಾಡಿದರು. ದೇವತೆಗಳು ಹೂಮಳೆ ಕರೆದರು.

ತಲೆಬಾಗಿಸಿ ನಿಂತ ಭರತ.

ಬಾಹುಬಲಿ ಭರತನನ್ನು ನೋಡಿದ. ವೃಷಭನಾಥನ ಮಗ, ಚಕ್ರರತ್ನದ ಪ್ರಭು, ಹಲವು ರಾಜರನ್ನು ಗೆದ್ದು ಚಕ್ರವರ್ತಿ ಎನಿಸಿಕೊಂಡವನು. ಈಗ ಅಪಮಾನದಿಂದ ನಾಚಿ ಎರಡು ಸೈನ್ಯಗಳ ಎದುರಿನಲ್ಲಿ ತಲೆಬಾಗಿಸಿ ನಿಂತಿದ್ದಾನೆ! ಆತನ ಸ್ಥಿತಿಯನ್ನು ಕಂಡು ಬಾಹುಬಲಿಗೆ ಮುರುಕ ಮೂಡಿತು. ಅಣ್ಣನ ಮೇಲಿದ್ದ ಕೋಪವೆಲ್ಲ ಕರಗಿ ನೀರಾಯಿತು.

ಬಾಹುಬಲಿಗೆ ಒಂದು ಯೋಚನೆ ಬಂದಿತು. ಭರತನೂ ತಾನೂ ಅಣ್ಣತಮ್ಮಂದಿರು, ಅನ್ಯೋನ್ಯವಾಗಿ ಬೆಳೆದವರು, ಬಾಳಿದವರು. ಆದರೆ ಈಗ ದ್ವಂದ್ವ ಯುದ್ಧ ಮಾಡಿದ್ದರಲ್ಲವೇ? ಭರತ ತನ್ನ ತಮ್ಮನ್ನು ಕೊಲ್ಲಲೂ ಮನಸ್ಸು ಮಾಡಿದವನಲ್ಲವೆ? ಇಷ್ಟಕ್ಕೂ ಕಾರಣವೇನು? ಕೇವಲ ರಾಜ್ಯದಾಸೆಗಾಗಿ ಅಣ್ಣತಮ್ಮಂದಿರೆಂಬ ಭಾವನೆಯನ್ನು ಮರೆತು ಒಬ್ಬನ್ನೊಬ್ಬರು ಕೊಲ್ಲಲೂ ಹಿಂಜರಿಯುವುದಿಲ್ಲ. ಆಸೆ ಎನ್ನುವುದು ಎಷ್ಟು ಕೆಟ್ಟದ್ದು ಎನಿಸಿತು. ಜೀವನದ ಬಗ್ಗೆ ಜುಗುಪ್ಸೆ ಮೂಡಿತು.

‘ರಾಜ್ಯ ನಿನಗೇ ಇರಲಿ’

‘ನನಗೆ ಈ ಪದವಿ, ಈ ಮೋಹ ಬೇಡ. ಎಲ್ಲವನ್ನೂ ಬಿಟ್ಟು ತಪಸ್ಸಿಗೆ ಹೊರಡುವುದೇ ಸರಿ’ ಎನಿಸಿತು.

ಬಾಹುಬಲಿ ಭರತನ ಕಾಲಿಗೆ ಬಿದ್ದು, ‘ಅಣ್ಣಾ, ನನ್ನನ್ನು ಕ್ಷಮಿಸು. ನಿನ್ನೊಡನೆ ಯುದ್ಧ ಮಾಡಿ ತಪ್ಪು ಮಾಡಿದೆ. ನಿನಗೆ ಅವಮಾನ ಮಾಡಿದೆ. ಈ ರಾಜ್ಯ ನನಗೆ ಬೇಡ, ನಿನ್ನಲ್ಲೇ ಇರಲಿ. ನನ್ನ ಪಾಪ ತೊಳೆದುಕೊಳ್ಳಲು ನಾನು ತಪಸ್ಸಿಗೆ ಹೋಗುತ್ತೇನೆ. ನನಗೆ ಅಪ್ಪಣೆ ಕೊಡು’ ಎಂದು ಬೇಡಿಕೊಂಡ.

ಭರತನಿಗೆ ಚಕ್ರವರ್ತಿ ಪದವಿಯ ಮೇಲಿನ ಮೋಹ, ಕೋಪ, ಛಲ ಎಲ್ಲ ಕರಗಿಹೋದವು.

ತಮ್ಮನ ಉದಾತ್ತ ಗುಣವನ್ನು ಕಂಡ ಭರತನಿಗೆ ಅವನು ತಪಸ್ಸಿಗೆ ತೆರಳುವನೆಂದು ಕೇಳಿ ಅತೀವ ಯಾತನೆಯಾಯಿತು. ಅವನು ಕಣ್ಣೀರು ಸುರಿಸುತ್ತಾ ಬಾಹುಬಲಿಯನ್ನು ಹಿಡಿದೆತ್ತಿ, ‘ತಮ್ಮಾ, ತಪ್ಪು ನನ್ನದು, ನನ್ನ ಅಹಂಕಾರದಿಂದ, ದುಡುಕಿನಿಂದ ಎಲ್ಲಾ ತಮ್ಮಂದಿರೂ ದೀಕ್ಷೆ ತೆಗೆದುಕೊಂಡರು. ನೀನೂ ದೂರವಾದರೆ ನನಗಿನ್ನಾರು? ನೀನೊಬ್ಬನೇ ನನಗುಳಿದಿರುವ ತಮ್ಮ, ನೀನೂ ತಪಸ್ಸಿಗೆ ಹೋದರೆ ನಾನು ಬದುಕುವುದಾದರೂ ಹೇಗೆ? ಈ ಸಾಮ್ರಾಜ್ಯದಿಂದ ನಾನು ಏನು ಮಾಡಲಿ? ದಯವಿಟ್ಟು ನನ್ನ ಬಿಟ್ಟು ನೀನು ಹೋಗಬೇಡ’ ಎಂದು ಕೈಹಿಡಿದು ಅಂಗಲಾಚಿ ಬೇಡಿಕೊಂಡ.

ಯಾರು ಎಷ್ಟೇ ಹೇಳಿದರೂ ಬೇಡಿದರೂ ಬಾಹುಬಲಿಯ ನಿರ್ಧಾರ ಚಲಿಸಲಿಲ್ಲ. ಎಲ್ಲವನ್ನೂ ತೊರೆದು ತಪಸ್ಸಿಗೆ ಹೊರಟೇಬಿಟ್ಟ.

ಬಾಹುಬಲಿಯು ವೃಷಭಸ್ವಾಮಿಯ ಹತ್ತಿರ ದೀಕ್ಷೆ ಪಡೆದು ಎಲ್ಲವನ್ನು ತೊರೆದು ಪೂರ್ಣ ನಗ್ನನಾಗಿ ಕಠೋರ ತಪಸ್ಸಿಗೆ ನಿಂತ. ಎಷ್ಟೋ ದಿನಗಳು ಉರುಳಿದವು. ನಿಂತ ಸ್ಥಳದಿಂದ ಕದಲಿಲ್ಲ. ಊಟ, ತಿಂಡಿ, ನಿದ್ರೆ ಯಾವುದೂ ಇಲ್ಲ. ಅವನ ಸುತ್ತಲೂ ದೊಡ್ಡ ದೊಡ್ಡ ಹುತ್ತಗಳು ಆತನ ಎತ್ತರಕ್ಕೂ ಬೆಳೆದವು. ಹಾವುಗಳು ಮೈಮೇಲೆಲ್ಲಾ ಹರಿದಾಡಿದವು. ಕಾಡುಬಳ್ಳಿಗಳು ಕೈಕಾಲಿಗೆಲ್ಲಾ ಸುತ್ತಿಕೊಂಡವು. ಪಕ್ಷಿಗಳು ಅವುಗಳಲ್ಲಿ ಗೂಡು ಕಟ್ಟಿಕೊಂಡವು. ತಲೆಗೂದಲೆಲ್ಲಾ ಗಂಟುಕಟ್ಟಿತು. ಬಾಹುಬಲಿ ಯಾವುದಕ್ಕೂ ಜಗ್ಗಲಿಲ್ಲ, ಬೆಚ್ಚಲಿಲ್ಲ, ಬೆದರಲಿಲ್ಲ. ಸಿಡಿಲು, ಮಿಂಚು, ಮಳೆ, ಬಿರುಗಾಳಿ ಎಲ್ಲಕ್ಕೂ ಮೈಯೊಡ್ಡಿ, ನಿಂತ ಸ್ಥಳದಲ್ಲಿ ನಿಶ್ಚಲವಾಗಿ ನಿಂತ. ದೃಢಮನಸ್ಸಿನಿಂದ ಕಠೋರ ತಪಸ್ಸುಮಾಡಿದ.

ವರ್ಷಗಳು ಉರುಳಿದವು, ಆದರೆ ಬಾಹುಬಲಿಗೆ ಕೇವಲಜ್ಞಾನ ದೊರೆಯಲಿಲ್ಲ.

‘ತಮ್ಮಾ, ಅಭಿಮಾನವನ್ನು ಬಿಡು’

ಇಷ್ಟು ಘೋರ ತಪಸ್ಸು ಮಾಡಿದರೂ ಬಾಹುಬಲಿಗೆ ಕೇವಲಜ್ಞಾನ ಏಕೆ ದೊರೆಯಲಿಲ್ಲವೆಂದು ಭರತನಿಗೆ ಆಶ್ಚರ್ಯವಾಯಿತು. ತಂದೆ ವೃಷಭನಾಥನನ್ನು ಕಂಡು ತನ್ನ ಸಮಸ್ಸೆಯನ್ನು ಅವನ ಮುಂದಿಟ್ಟ.

ವೃಷಭನಾಥ ಹೇಳಿದ : ‘ಬಾಹುಬಲಿ ಕಠೋರವಾದ ತಪಸ್ಸು ಮಾಡುತ್ತಿದ್ದಾನೆ, ನಿಜ. ಆದರೆ ಅವನು ಅಭಿಮಾನವನ್ನು ಇನ್ನೂ ಬಿಟ್ಟಿಲ್ಲ. ರಾಜ್ಯವನ್ನೆಲ್ಲ ಭರತನಿಗೆ ಕೊಟ್ಟೆ, ಆದರೆ ಈಗ ತಪಸ್ಸು ಮಾಡುತ್ತಿರುವ ನೆಲ, ಅವನಿಗೆ ಸೇರಿದ್ದು, ಅಣ್ಣನ ನೆಲದಲ್ಲಿ ನಿಂತಿದ್ದೇನೆ ಎಂಬ ಕೊರಗು ಅವನಿಗಿದೆ; ಈ ಅಭಿಮಾನ ಬಿಡದೆ ಅವನಿಗೆ ಕೇವಲಜ್ಞಾನ ದೊರೆಯುವುದು ಹೇಗೆ?’

ಭರತ ಬಾಹುಬಲಿಯ ಬಳಿಗೆ ಬಂದ. ಆತನ ಕಾಲಿಗೆ ನಮಸ್ಕರಿಸಿ, ‘ತಮ್ಮಾ, ನನ್ನ ರಾಜ್ಯದಲ್ಲಿ ನಿಂತಿದ್ದೇನೆಂಬ ಅಭಿಮಾನವನ್ನು ಬಿಡು. ಈ ರಾಜ್ಯ ನನ್ನದಲ್ಲ, ಗೆದ್ದ ನೀನೇ ನನಗೆ ಉದಾರವಾಗಿ ಕೊಟ್ಟದ್ದು. ಹಾಗೆ ನೋಡಿದರೆ ಈ ಭೂಮಿ ಯಾರಿಗೂ ಸೇರಿದ್ದಲ್ಲ. ಯಾರ ಸ್ವತ್ತೂ ಅಲ್ಲ. ನೀನು ಅಭಿಮಾನವನ್ನು ಬಿಟ್ಟು ತಪಸ್ಸು ಮಾಡು? ಎಂದು ಕೇಳಿಕೊಂಡ.

ಆಗ ಬಾಹುಬಲಿಯ ಮನದಲ್ಲಿದ್ದ ಚೂರು ಅಭಿಮಾನವೂ ಕರಗಿಹೋಯಿತು.

ಹಿಂದೆ ಅಣ್ಣನ ಅಹಂಕಾರವನ್ನು ತಮ್ಮ ಕಳೆದಿದ್ದ, ಈಗ ಅಣ್ಣನಿಂದ ತಮ್ಮನ ಮನಸ್ಸು ನಿರ್ಮಲವಾಯಿತು.

ಬಾಹುಬಲಿ ಅಭಿಮಾನವನ್ನು ಬಿಟ್ಟು ತಪಸ್ಸನ್ನು ಮುಂದುವರಿಸಿದ. ಅನಂತರ ಕೇವಲಜ್ಞಾನ ಉಂಟಾಯಿತು. ಎಲ್ಲೆಲ್ಲೂ ದೇವದುಂದುಭಿ ಮೊಳಗಿತು. ಜನರೆಲ್ಲ ಬಾಹುಬಲಿಯ ಮಹಿಮೆಯನ್ನು ಕೊಂಡಾಡಿದರು. ಎಲ್ಲರೂ ಆತನನ್ನು ಭಕ್ತಿಯಿಂದ ಪೂಜಿಸಿದರು. ಆತನ ಧರ್ಮೋಪದೇಶ ಕೇಳಿ ಕೃತಾರ್ಥರಾದರು.

ಬಾಹುಬಲಿ ದೇಶದೇಶಗಳನ್ನು ಸುತ್ತಿ ಜನರಿಗೆಲ್ಲ ಧರ್ಮಬೋಧೆ ಮಾಡಿದ. ಸಾರ್ಥಕ ಬಾಳಿನ ಮಾರ್ಗವನ್ನು ತೋರಿಸಿದ. ಇಂಥ ಆದರ್ಶಜೀವಿ ಕೊನೆಗೆ ತಂದೆಗಿಂತ ಮೊದಲು ಮುಕ್ತಿ ಪಡೆದ.

ಅತಿ ಪರಾಕ್ರಮಿಯೂ ಸ್ವಾಮಿಮಾನಿಯೂ ಆದ ಬಾಹುಬಲಿ ಅಣ್ಣನ ಅಹಂಕಾರವನ್ನು ಮುರಿದು, ತಾನೇ ಚಕ್ರವರ್ತಿಯಾಗಿ ಮೆರೆಯಬಹುದಾಗಿತ್ತು. ರಾಜ್ಯವನ್ನು ಆತನಿಗೇ ಹಿಂತಿರುಗಿಸಿದ. ತನ್ನ ದಾರಿಯನ್ನು ತಾನೇ ಕಂಡುಕೊಂಡ. ಭವ್ಯ ಜೀವಿಯಾದ. ಜನತೆಯ ಮನದ ಅಂಧಕಾರವನ್ನು ತನ್ನ ಜ್ಞಾನದ ಬೆಳಕಿನಿಂದ ಬೆಳಗಿದ. ಜಗತ್ತೇ ಕೊಂಡಾಡುವ ಮಹಾಮಹಿಮನಾದ.

ಇಂಥ ಸೋದರನ ಕೀರ್ತಿ ಚಿರಸ್ಥಾಯಿಯಾಗಿ ನಿಲ್ಲಬೇಕೆಂದು ಭರತ ಚಕ್ರವರ್ತಿ ಬಾಹುಬಲಿಯ ರೂಪನ್ನೇ ಹೋಲುವ ಒಂದು ಭವ್ಯ ಮೂರ್ತಿಯನ್ನು ಪೌದನಪುರದಲ್ಲಿ ವಿಜೃಂಭಣೆಯಿಂದ ನಡೆಯಿತು. ಪ್ರಜೆಗಳೆಲ್ಲ ಆ ದಿವ್ಯ ದರ್ಶನವನ್ನು ಕಂಡು ಕೃತಾರ್ಥರಾದರು.

ಆ ಮೂರ್ತಿ ಇಂದು ಸಮುದ್ರದ ಪಾಲಾಗಿದೆಯಂತೆ. ಅದರ ಬದಲು ನಾವೀಗ ಕಾಣುವುದು ಶ್ರವಣಬೆಳಗೋಳ, ವೇಣೂರು, ಕಾರ್ಕಳ, ಶ್ರವಣಗುಡ್ಡ ಮತ್ತು ಬಸ್ತಿಹಳ್ಳಿಗಳಲ್ಲಿರುವ ಬಾಹುಬಲಿಯ ಮೂರ್ತಿಗಳನ್ನು ಎಲ್ಲಕ್ಕೂ ಎತ್ತರವಾದದ್ದು, ಮುಖ್ಯವಾದದ್ದು ಶ್ರವಣಬೆಳಗೋಳದಲ್ಲಿರುವ ಭವ್ಯ ಬಾಹುಬಲಿ ವಿಗ್ರಹ. ಈ ವಿಗ್ರಹದ ಸ್ಥಾಪನೆಯ ಕಥೆಯೂ ಸ್ವಾರಸ್ಯವಾಗಿದೆ.

‘ವಿಗ್ರಹವನ್ನು ನೋಡಬೇಕು’

ತಲವನಪುರದ ಗಂಗರಾಜ ರಾಚಮಲ್ಲ. ಚಾವುಂಡರಾಯ ಆತನ ಮುಖ್ಯಮಂತ್ರಿ. ತುಂಬಾ ಮೇಧಾವಿ, ಧೈರ್ಯಶಾಲಿ, ಪರಾಕ್ರಮಿ ಅಲ್ಲದೆ ದೈವಭಕ್ತ. ಆತನಿಗೆ ‘ವೀರಮಾರ್ತಾಂಡ’, ‘ಸಮರ ಪರಶುರಾಮ’ ಮುಂತಾದ ಬಿರುದುಗಳಿದ್ದವು.

ಕಾಳಲದೇವಿ ಆತನ ತಾಯಿ, ತಂದೆ ಮಹಾಬಲಯ್ಯ.

ಒಂದು ಬಾರಿ ಕಾಳಲದೇವಿ ಭರತ-ಬಾಹುಬಲಿ ಚರಿತೆಯನ್ನು ಮುನಿಗಳಿಂದ ಕೇಳಿದಳು. ಅದರಲ್ಲಿ ಭರತ ಚಕ್ರವರ್ತಿ ಬಹು ಹಿಂದೆ ಕೆತ್ತಿಸಿದ ಬಾಹುಬಲಿಸ್ವಾಮಿಯ ಪಚ್ಚೆಯ ವಿಗ್ರಹ ಪೌದಾನಪುರದಲ್ಲಿ ಇನ್ನೂ ಇರಬೇಕೆಂದು ತಿಳಿಯಿತು. ಅವಳಿಗೆ ಆ ಮೂರ್ತಿಯನ್ನು ನೋಡಲೇಬೇಕೆಂಬ ಆಸೆಯಾಯಿತು. ಅದನ್ನು ನೋಡುವವರೆಗೂ ಒಂದು ತೊಟ್ಟು ಹಾಲೂ ಕುಡಿಯುವುದಿಲ್ಲವೆಂದು ಪ್ರತಿಜ್ಞೆ ಮಾಡಿದಳು.

‘ಈ ರಾಜ್ಯ ನನ್ನದಲ್ಲ, ಗೆದ್ದ ನೀನೇ ನನಗೆ ಉದಾರವಾಗಿ ಕೊಟ್ಟದ್ದು’

ಭರತೇಶ ಆ ವಿಗ್ರಹ ಮಾಡಿಸಿ ಎಷ್ಟೋ ಸಾವಿರ ವರ್ಷಗಳಾಗಿಹೋಗಿವೆ. ಈಗ ಆ ಪೌದನಪುರವಾಗಲೀ ವಿಗ್ರಹವಾಗಲಿ ಇಲ್ಲ. ಇದ್ದರೂ ಅದನ್ನು ಕಂಡವರೇ ಇಲ್ಲ. ಎಲ್ಲ ಸಮುದ್ರದಲ್ಲಿ ಮುಳುಗಿರಬೇಕು ಅಥವಾ ಮನುಷ್ಯರು ಹೋಗಲಸಾಧ್ಯವಾದ ದಟ್ಟವಾದ ಕಾಡು, ಕ್ರೂರ ಮೃಗಗಳಿಂದ ತುಂಬಿರಬೇಕು ಎಂದು ಎಲ್ಲರೂ ಹೇಳುತ್ತಾರೆ. ಆ ವಿಗ್ರಹವನ್ನು ಪಡೆಯುವುದು ಹೇಗೆ? ಚಾವುಂಡರಾಯನಿಗೆ ಚಿಂತೆಯಾಯಿತು. ಆದರೆ ಕಾಳಲದೇವಿ ಕೇಳಲಿಲ್ಲ. ಎಷ್ಟೇ ಕಷ್ಟವಾದರೂ ಸರಿ, ಬಾಹುಬಲಿಸ್ವಾಮಿಯ ದರ್ಶನ ಮಾಡಲೇಬೇಕೆಂದು ಹಠಹಿಡಿದಳು.

ಕೊನೆಗೆ ಚಾವುಂಡರಾಯ ತಾಯಿಯ ಆಸೆಯನ್ನು ನೆರವೇರಿಸಲು ಮಿತಪರಿವಾರದೊಡನೆ ತಾಯಿಯನ್ನು ಕರೆದುಕೊಂಡು ಪೌದನಪುರವನ್ನು ಹುಡುಕಲು  ಹೊರಟ. ಎಷ್ಟು ನಡೆದರೂ ದಾರಿ ಸವೆಯಲಿಲ್ಲ. ಪೌದರಪುರ ಸಿಕ್ಕಲೆ ಇಲ್ಲ.

ಕೊನೆಗೆ ದಾರಿಯಲ್ಲಿ ಅವರಿಗೆ ಚಂದ್ರಗಿರಿ ಎಂಬ ಬೆಟ್ಟ ಕಂಡಿತು. ದಣಿವನ್ನು ನಿವಾರಿಸಿಕೊಳ್ಳಲು ಎಲ್ಲರೂ ಅದರ ತಡಿಯಲ್ಲಿ ತಂಗಿದರು.

ಅಂದು ರಾತ್ರಿ ಚಾವುಂಡರಾಯನಿಗೆ ಒಂದು ಕನಸಾಯಿತು.

ಕೂಷ್ಮಾಂಡಿನಿದೇವಿ (ಯಕ್ಷ ದೇವರು) ಕಾಣಿಸಿಕೊಂಡು, ‘ಭರತೇಶನಿಂದ ನಿರ್ಮಿತವಾದ ಬಾಹುಬಲಿಸ್ವಾಮಿಯು ಮೂರ್ತಿ ಎಷ್ಟೇ ಕಷ್ಟಪಟ್ಟರೂ ಮಾನವರಿಗೆ ಗೋಚರಿಸುವುದಿಲ್ಲ. ಪೌದನಪುರವೂ ಸಿಕ್ಕುವುದಿಲ್ಲ. ಅದರ ಬದಲು ಇಲ್ಲೇ ಈ ಬೆಟ್ಟದಲ್ಲೇ ನಿಂತು ಎದುರಿಗೆ ಕಾಣುತ್ತಿರುವ ಇಂದ್ರಗಿರಿ ಬೆಟ್ಟದ ಕೋಡಿಗೆ ಗುರಿಯಿಟ್ಟು ಬಂಗಾರದ ಬಾಣ ಬಿಟ್ಟರೆ ಬಾಹುಬಲಿ ಸ್ವಾಮಿಯನ್ನು ಕಾಣಬಹುದು’ ಎಂದು ಹೇಳಿದಳು.

ತಕ್ಷಣ ಚಾವುಂಡರಾಯ ಬಿಲ್ಲುಬಾಣ ತೆಗೆದುಕೊಂಡು ದೇವರು ಹೇಳಿದಂತೆ ಇಂದ್ರಗಿರಿಯ ಕೋಡುಗಲ್ಲಿಗೆ ನೇರವಾಗಿ ಗುರಿಯಿಟ್ಟು ಬಾಣ ಬಿಟ್ಟ. ಆ ಬಂಡೆ ಭಯಂಕರ ಶಬ್ಧಮಾಡುತ್ತಾ ಎರಡು ಭಾಗವಾಯಿತು. ಅದರ ಮಧ್ಯೆ ಬಾಹುಬಲಿ ಸ್ವಾಮಿಯ ಭವ್ಯ ವಿಗ್ರಹ ಕಾಣಿಸಿತು.

ಎಂತಹ ಚೆಲುವಾದ ಮೂರ್ತಿ!

ಆ ಕ್ಷಣ ಚಾವುಂಡರಾಯನಿಗೆ ಎಚ್ಚರವಾಯಿತು. ಕಣ್ಣುಬಿಟ್ಟರೆ ಎದುರಿಗೆ ಏನು ಇಲ್ಲ. ಕಣ್ಣುಜ್ಜಿಕೊಂಡು ಮತ್ತೆಮತ್ತೆ ನೋಡಿದ, ಸುತ್ತ ನೋಡಿದ. ಉಹುಂ ಏನೂ ಇಲ್ಲ. ದೇವರೂ ಇಲ್ಲ, ವಿಗ್ರಹವೂ ಇಲ್ಲ. ಕಂಡದ್ದೆಲ್ಲಾ ಕನಸು. ಚಾವುಂಡರಾಯನಿಗೆ ತುಂಬಾ ದುಃಖವಾಯಿತು. ‘ಕನಸೇ ನಿಜವಾಗಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು’ ಎಂದು ಅಂದುಕೊಂಡ.

ಬೆಳಿಗ್ಗೆ ತಾಯಿಗೆ ಎಲ್ಲವನ್ನೂ ತಿಳಿಸಿದ. ಎಲ್ಲರೂ ಇಂದ್ರಗಿರಿಯ ಕಡೆ ನೋಡಿದರು. ಕನಸಿನಲ್ಲಿ ಕಂಡಂಥ ದೊಡ್ಡ ಕೋಡುಗಲ್ಲು ಅಲ್ಲೆ ಕಾಣುತ್ತಿತ್ತು. ಚಾವುಂಡರಾಯ, ‘ಈಗ ಬಾಣ ಬಿಟ್ಟರೆ ತಕ್ಷಣ ದೇವರು ಕಾಣುವಂತಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಆದರೆ ಅದು ಹೇಗೆ ಸಾಧ್ಯ’?

ಆ ಬಂಡೆಯಲ್ಲೇ ಬಾಹುಬಲಿಸ್ವಾಮಿಯ ಮೂರ್ತಿಯನ್ನು ಕೆತ್ತಿಸಲು ದೇವರು ಆ ರೀತಿ ತನ್ನ ಕನಸಿನಲ್ಲಿ ಸೂಚನೆ ಕೊಟ್ಟಿದ್ದು ಎಂದು ಅರ್ಥವಾಯಿತು.

ಆದರೆ ಆ ಬಂಡೆಯ ಬಳಿಗೆ ಹೋಗುವುದಾದರೂ ಹೇಗೆ? ಸುತ್ತಲೂ ದಟ್ಟವಾದ ಕಾಡು. ಎಲ್ಲ ಹಳ್ಳ – ಕೊಳ್ಳ, ಕಲ್ಲು – ಮುಳ್ಳುಗಳಿಂದ ತುಂಬಿದೆ. ಎಲ್ಲ ದಾಟುವುದಾದರೂ ಹೇಗೆ? ಅಸಾಧ್ಯ ಎನಿಸಿತು. ಆದರೆ ಚಾವುಂಡರಾಯ ಹೆದರಲಿಲ್ಲ. ತಾಯಿಯ ಆಸೆಯನ್ನು ನೆರವೇರಿಸಬೇಕೆಂಬ ಛಲ ಮೂಡಿತು. ಎಷ್ಟೇ ಕಷ್ಟವಾದರೂ ಸರಿ, ಬಾಹುಬಲಿಯ ವಿಗ್ರಹವನ್ನು ಕೆತ್ತಿಸಲೇಬೇಕೆಂದು ನಿರ್ಧಾರ ಮಾಡಿದ.

ಜನರೆಲ್ಲ ಸಹಾಯ ಮಾಡಲು ಮುಂದೆ ಬಂದರು. ಕೆಲಸ ಪ್ರಾರಂಭವಾಯಿತು. ಹಳ್ಳ-ಕೊಳ್ಳ ಮುಚ್ಚಿ, ಕಲ್ಲು – ಮುಳ್ಳು ಕಡಿದು ತುಂಬಾ ಕಷ್ಟಪಟ್ಟು ಇಂದ್ರಗಿರಿ ಬೆಟ್ಟದ ಕೋಡುಗಲ್ಲಿನವರೆಗೂ ಹೋಗುವಂತೆ ದಾರಿ ಸಿದ್ಧವಾಯಿತು.

ಇನ್ನು ಆ ಬಂಡೆಯಲ್ಲಿ ಮೂರ್ತಿ ಮಾಡಿಸಬೇಕು. ಚಾವುಂಡರಾಯ ದೇಶದ ನಾನಾ ಕಡೆಗಳಿಂದ ನೂರಾರು ಶಿಲ್ಪಿಗಳನ್ನು ಕರೆಸಿದ. ಎಲ್ಲರೂ ಆ ಬಂಡೆಗೆ ಭಕ್ತಿಯಿಂದ ಪೂಜೆ ಸಲ್ಲಿಸಿದರು. ಒಂದು ಮಂಗಲ ಮಹೂರ್ತದಲ್ಲಿ ಕೆತ್ತನೆ ಕೆಲಸ ಪ್ರಾರಂಭವಾಯಿತು. ಎಲ್ಲರೂ ಹಗಲೂ ರಾತ್ರಿ ತುಂಬಾ ಶ್ರದ್ಧೆಯಿಂದ ಕೆಲಸ ಮಾಡಿದರು. ಆ ಕಾಡಿನ ಕಗ್ಗತ್ತಿನಲ್ಲಿ ಕೆತ್ತುವುದು ಸುಲಭವೇ? ಅಂತೂ ಜನಬಲದೊಡನೆ ದೈವಬಲವೂ ಸೇರಿ ಚಾವುಂಡರಾಯನ ಕನಸಿನಲ್ಲಿ ಕಂಡಂಥ ಮೂರ್ತಿ ಸಿದ್ಧವಾಯಿತು.

ಐವತ್ತೇಳು ಅಡಿ ಎತ್ತರದ ಭವ್ಯ ಸುಂದರ ಗಂಭೀರ ಮೂರ್ತಿ, ಮಂದಸ್ಮಿತ ಮುಖ, ವಿಶಾಲವಾದ ಬಾಹುಗಳು. ಕೈಕಾಲುಗಳಿಗೆ ಹೂ ಬಿಟ್ಟ ಮಾಧವೀ ಲತೆ ಹಬ್ಬಿದೆ. ಪಾದದ ಸುತ್ತಲೂ ಎತ್ತರವಾದ ಹುತ್ತಗಳು. ಹುತ್ತದಿಂದ ಹೊರಬರುತ್ತಿರುವ ಹಾವುಗಳು. ಅನುಪಮ ಮೂರ್ತಿ ಆಕಾರ ತಳೆದು ನಿಂತಿತು.

ಅಷ್ಟು ಚೆಲುವಾದ ಮೂರ್ತಿ ಮಾಡಿಸಿದ ಚಾವುಂಡರಾಯನ ಹೆಮ್ಮೆಯಂತೂ ಹೇಳತೀರದು. ಕಾಳಲದೇವಿಗೆ ತನ್ನ ಆಸೆ ನೆರವೇರಿತಲ್ಲಾ ಎಂದು ತುಂಬಾ ಸಂತೋಷವಾಯಿತು. ಎಲ್ಲರಿಗೂ ಎಷ್ಟು ನೋಡಿದರೂ ತೃಪ್ತಿಇಲ್ಲ. ಜನರೆಲ್ಲ ಸಂತೋಷದಿಂದ ಕುಣಿದಾಡಿದರು. ಚಾವುಂಡರಾಯನ ಕನಸು ನನಸಾಯಿತು. ಕನಸಿನಲ್ಲಿ ಕಂಡ ಬಾಹುಬಲಿಯೇ ಈಗ ಕಣ್ಣೆದುರಿಗೇ ನಿಂತ.

ಆ ಬಾಹುಬಲಿಯ ವಿಗ್ರಹವನ್ನು ನೋಡಲು ಲಕ್ಷಾಂತರ ಜನ ಬಂದು ಸೇರಿದರು. ಎಲ್ಲರೂ ಆ ಅದ್ಭುತವನ್ನು ನೋಡಿ ಮನಸಾರೆ ಹೊಗಳಿದರು. ಚಾವುಂಡರಾಯನಿಗೆ ಯಾರೂ ಎಂದೂ ಮಾಡದ ಸಾಹಸ ಕೆಲಸವನ್ನು ತಾನೇ ಮಾಡಿದೆ ಎಂಬ ವರ್ಗವೂ ಉಂಟಾಯಿತು.

ಇದೇನು!

ಚಾವುಂಡರಾಯ ಈ ಸುಂದರ, ಭವ್ಯ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡಿ ಮೊದಲನೆಯ ಮಹಮಸ್ತಕಾಭಿಷೇಕವನ್ನು ಮಾಡಿದ. ಅದಕ್ಕೆ ಸಂಬಂಧಿಸಿದಂತೆ ಒಂದು ಸೊಗಸಾದ ಕಥೆ ಇದೆ.

ಮಸ್ತಕಾಭಿಷೇಕಕ್ಕೆ ನೂರಾರು ಕೊಡಗಳಲ್ಲಿ ಹಾಲನ್ನು ತಂದಿರಿಸಿದರು. ಅಭಿಷೇಕ ಪ್ರಾರಂಭವಾಯಿತು. ಕೊಡವಾದ ನಂತರ ಕೊಡದಲ್ಲಿ ಹಾಲನ್ನು ಸುರಿದಂತೆ ತಲೆ ನೆನೆಯಿತು, ಮುಖ ನೆನೆಯಿತು, ಕುತ್ತಿಗೆ ನೆನೆಯಿತು, ಎದು ನೆನೆಯಿತು, ಆದರೆ –

ಎಷ್ಟೇ ಹಾಲನ್ನು ಸುರಿದರೂ ವಿಗ್ರಹ ಪೂರ್ತಿ ನೆನೆಯಲ್ಲೇ ಇಲ್ಲ. ಹಾಲನ್ನು ಸುರಿದೇ ಸುರಿದರು. ಆದರೆ ಎಲ್ಲ ಹೊಕ್ಕುಳಲ್ಲಿ ಇಂಗಿಹೋಯಿತು.

ಚಾವುಂಡರಾಯನೂ ಅವನ ಪರಿವಾರದವರೂ ಬೆರಗಾದರು. ಅವನ ಮನಸ್ಸಿಗೆ ತುಂಬ ಆತಂಕವಾಯಿತು. ಏಕೆ ಹೀಗಾಯಿತು? ಯಾರಿಗೂ ಹೊಳೆಯಲಿಲ್ಲ.

ಮುದುಕಿಯೊಬ್ಬಳು ಬಹುಕಷ್ಟದಿಂದ ಬೆಟ್ಟವನ್ನೇರಿ ಬಂದಳು. ಅವಳ ಕೈಯಲ್ಲಿ ಪುಟ್ಟ ಬೆಳ್ಳಿಯ ಬಟ್ಟಲು, ಅದರ ತುಂಬ ಶುದ್ಧವಾದ ಹಸುವಿನ ಹಾಲು.

ಅವಳನ್ನು ಕಂಡು ಜನ ನಕ್ಕರು. ನೂರಾರು ಕೊಡಗಳ ಹಾಲು ಮೂರ್ತಿಯ ಹೊಕ್ಕುಳನ್ನು ದಾಟಲಿಲ್ಲ. ಈ ಪುಟ್ಟ ಬಟ್ಟಲು ಹಾಲಿನಿಂದ ಪ್ರಯೋಜನವೇನು?

ಚಾವುಂಡರಾಯ ನೋಡಿದ. ‘ಸರಿ, ಮುದುಕಿಯ ಹಾಲಿನ ಅಭಿಷೇಕವೂ ಆಗಲಿ’ ಎಂದ.

ಅಷ್ಟು ಹಾಲೇ ಧಾರಾಕಾರವಾಗಿ ಸ್ವಾಮಿಯ ನೆತ್ತಿಯಿಂದ ಇಳಿಯಿತು. ಹೊಕ್ಕುಳನ್ನು ದಾಟಿ ಹರಿದು ಪಾದಗಳನ್ನು ಹುಟ್ಟಿತು.

ಜನ ಬೆರಗಾದರು, ಜಯಘೋಷ ಮಾಡಿದರು.

ಚಾವುಂಡರಾಯನ ಮನಸ್ಸಿನ ಕಣ್ಣು ಈಗ ತೆರೆಯಿತು. ಈ ಭವ್ಯ ವಿಗ್ರಹವನ್ನು ಮಾಡಿಸಿ ನಿಲ್ಲಿಸಿದವನು ನಾನಲ್ಲವೆ ಎಂದು ಹೆಮ್ಮೆ ಪಟ್ಟಿದ್ದ. ಈಗ ಅವನಿಗೆ ಅರ್ಥವಾಯಿತು ತನ್ನ ಮೂಲಕ ಈ ಕೆಲಸವಾಯಿತು, ಅಷ್ಟೆ. ಬಾಹುಬಲಿಯ ಕೃಪೆ ಇಲ್ಲದಿದ್ದರೆ ಸಾಧ್ಯವಾಗುತ್ತಿರಲಿಲ್ಲ. ಆತನ ಕೃಪೆಯಿಂದ ಮುದುಕಿ ತಂದ ಹಾಲು ಇಡೀ ವಿಗ್ರಹಕ್ಕೇ ಅಭಿಷೇಕವಾಯಿತು. ಅವನ ಕೃಪೆ ಇಲ್ಲದೆ ತಾನು ವಿಗ್ರಹ ನೆನೆಯುವಷ್ಟು ಹಾಲನ್ನು ಒದಗಿಸಲಾರ. ಇನ್ನು ಈ ವಿಗ್ರಹದ ನಿರ್ಮಾಣ, ಪ್ರತಿಷ್ಠಾಪನೆ ತನ್ನಿಂದ ಆಗುತ್ತಿತ್ತೆ?

ಬಾಹುಬಲಿಯನ್ನು ‘ಗೊಮ್ಮಟೇಶ್ವರ’ ಎಂದು ಮತ್ತೊಂದು ಹೆಸರಿನಿಂದಲೂ ಕರೆಯುತ್ತಾರೆ. ಅದಕ್ಕೆ ಕಾರಣ ಚಾವುಂಡರಾಯ. ಅವನಿಗೆ ‘ಗೊಮ್ಮಟ’ ಎಂದೂ ಹೆಸರಿದ್ದಿತಂತೆ. ಅವನು ಕೆತ್ತಿಸಿದ್ದರಿಂದ ಬಾಹುಬಲಿಗೆ ಗೊಮ್ಮಟೇಶ್ವರನಿಗೆ ಮಹಾಮಸ್ತಕಾಭಿಷೇಕ ನಡೆಯುತ್ತದೆ. ಇದನ್ನು ನೋಡಲು ದೇಶದ ಮೂಲೆಮೂಲೆಗಳಿಂದ ಜನರು ಬರುತ್ತಾರೆ.

ಈ ಮಹಾಮೂರ್ತಿಯ ಪ್ರತಿಷ್ಠೆಯಾಗಿ ಸುಮಾರು ಒಂದು ಸಾವಿರ ವರ್ಷಗಳು ಕಳೆದಿವೆ. ಈ ಭವ್ಯ ಮಂಗಳಮೂರ್ತಿ, ಆಕಾಶವೇ ಹಿನ್ನೆಲೆಯಾಗಿರಲು, ಬೆಟ್ಟದ ಮೇಲೆ ನಿಂತಿದೆ – ಮನುಷ್ಯ ಸ್ವಾರ್ಥ, ಆಸೆ, ಅಭಿಮಾನಗಳನ್ನು ಬಿಟ್ಟರೆ ಎಷ್ಟು ಎತ್ತರಕ್ಕೆ ಏರಬಲ್ಲ ಎಂಬುದನ್ನು ಪೀಳಿಗೆ ಪೀಳಿಗೆಗಳಿಗೆ ನೆನಪು ಮಾಡಿಕೊಡುತ್ತದೆ.