ಕುಟುಂಬ ಪದ್ಧತಿ:

ಪಿತೃಪ್ರಧಾನ ಕುಟುಂಬ ವ್ಯವಸ್ಥೆಯನ್ನೇ ಅನುವಂಶಿಕ ಪರಂಪರೆಯೆಂದು ಅನುಸರಿಸುತ್ತಿರುವ ಬುಡ್ಗಜಂಗಮರು ಗಂಡು ಸಂತತಿಯಿಂದಲೇ ಕುಲಪರಂಪರೆಯನ್ನು ಮುಂದುವರೆಸುತ್ತಾರೆ. ಯಾವುದೇ ಆಸ್ತಿ ಇಲ್ಲವೆಂದರೂ ಇದ್ದ ಬಿದ್ದ ಆಸ್ತಿಗಳಿಗೆ ಉಪಭೋಗ ಮತ್ತು ಅಧಿಕಾರವನ್ನು ಗಂಡುಮಕ್ಕಳಿಗೆ ಬಿಟ್ಟು ಕೊಡುತ್ತಾರೆ. ಹೆಣ್ಣುಮಕ್ಕಳಿಗೆ ಇಂತಹ ಯಾವುದೇ ಆಸ್ತಿಯ ಹಕ್ಕು, ಅಧಿಕಾರವನ್ನು ಬಿಟ್ಟುಕೊಡುವುದಿಲ್ಲ. ಕುಟುಂಬದ ಎಲ್ಲ ಆಗುಹೋಗುಗಳನ್ನು ತಂದೆಯೇ ನೋಡಿಕೊಳ್ಳುತ್ತಾನೆ. ಅವನದೇ ಅಂತಿಮ ತೀರ್ಮಾನ. ಕುಟುಂಬದ ಎಲ್ಲ ಸದಸ್ಯರು ಅವನ ಮಾತಿನಂತೆಯೇ ನಡೆಯಬೇಕೆನ್ನುತ್ತಾರೆ. ಆದರೆ ಕೆಲವು ಸಂದರ್ಭಗಳಲ್ಲಿ ಮಾತ್ರ ಹೆಣ್ಣಿಗೂ ಸಲಹೆ ಕೊಡುವ ಅವಕಾಶ ಕೊಟ್ಟಿದ್ದಾರೆ. ಅದು ಕುಟುಂಬಕ್ಕೆ ಸೀಮಿತವಾಗಿ ಎನ್ನುತ್ತಾರೆ.

[1] ಹೆಣ್ಣನ್ನು ಮನುಷ್ಯಳಂತೆ ಕಾಣುವ ಗೌರವ ಇನ್ನೂ ಬರಬೇಕಿದೆ ಎನ್ನುತ್ತಾರೆ ಈ ಜನಾಂಗದ ಹಿರಿಯ ಹೆಣ್ಣು ಮಗಳು.[2]

ರಕ್ತಸಂಬಂಧದಲ್ಲಿಯೇ ಸಾಮಾಜಿಕ ಸಂಬಂಧವನ್ನು ಗಟ್ಟಿಗೊಳಿಸಿಕೊಂಡಿದ್ದಾರೆ. ವೈವಾಹಿಕ ಸಂಬಂಧಗಳು, ಸಾಮಾಜಿಕ ನಿರ್ಬಂಧಗಳನ್ನು ಕಟ್ಟು ನಿಟ್ಟಾಗಿ ಅನುಸರಿಸುತ್ತಾರೆ. ತಮ್ಮೊಳಗಿನ ಬೆಡಗುಗಳ ಆಧಾರದ ಮೇಲೆ ಸಂಬಂಧವನ್ನು ಬೆಳೆಸುತ್ತಾರೆ. ವೇಷಹಾಕಿ ಕಲಾಪ್ರದರ್ಶನಕ್ಕೆ ಹೋಗುವ ಗಂಡಸರು ನಂತರದ ಸಮಯದಲ್ಲಿ ಕೌಟುಂಬಿಕ ಕೆಲಸಗಳಲ್ಲಿ ಹೆಂಗಸರಿಗೆ ನೀರು, ಕಟ್ಟಿಗೆ ತರುವಲ್ಲಿ ಸಹಾಯ ಮಾಡುತ್ತಾರೆ. ಸಣ್ಣ ಹುಡುಗಿಯರಿಗೆ ದಮ್ಮಡಿ, ಗುಮ್ಮಟೆ ಬಾರಿಸುವುದನ್ನು, ಹಾಡುವುದನ್ನು, ಕತೆ ಹೇಳುವುದನ್ನು ಕಲಿಸುತ್ತಾರೆ. ರಾತ್ರಿ ಸಮಯದಲ್ಲಿ ಹೆಣ್ಣು ಮಕ್ಕಳಿಗೆ ತತ್ವದ ಪದ, ಜನಪದ ಹಾಡು, ಸರ್ವಜ್ಞನ ತ್ರಿಪದಿ, ದಾಸರ ಕೀರ್ತನೆ, ಶರಣರ ವಚನಗಳನ್ನು ಹೇಳಿ ಕಲಿಸುತ್ತಾರೆ. ಇವರು ಹಳ್ಳಿಯ-ಓಣಿ-ಕೇರಿ ತಿರುಗಿ ಹಾಡು ಹೇಳಿ, ಭಿಕ್ಷೆ ಪಡೆಯುತ್ತಾರೆ. ಉಳಿದೆಲ್ಲಾ ಹಾಡುಗಳನ್ನು ಹಾಡುವ ಈ ಬುಡ್ಗಜಂಗಮ ಹೆಣ್ಣುಮಕ್ಕಳು ಗ್ರಾಮೀಣ ಭಾಗದ ಗಾನಕೋಗಿಲೆಗಳಿದ್ದಂತೆ. ಇತ್ತೀಚೆಗಿನ ಯುವ ಪೀಳಿಗೆಯ ಹೆಣ್ಣು ಮಕ್ಕಳು ಮಾತ್ರ ದರೋಜಿ ಈರಮ್ಮನ ಹಾಡುಗಳನ್ನು ಹಾಡುವುದಿಲ್ಲ. ಹಾಡುವ, ಭಿಕ್ಷೆ ಬೇಡುವ ಪರಂಪರೆಯ ಕೊಂಡಿಯನ್ನೇ ಕಳಚಿಕೊಳ್ಳುವ ಹಂತದಲ್ಲಿದ್ದಾರೆಂಬುದು ಅವರ ಬದುಕಿನ ಬಹುದೊಡ್ಡ ಬದಲಾವಣೆ ಎನ್ನಬೇಕು.

ಈ ಜನಾಂಗದ ಹೆಣ್ಣುಮಕ್ಕಳ ಕಾರ್ಯಚಟುವಟಕೆಗಳು ಕುಟುಂಬಕಷ್ಟೇ ಸೀಮಿತವಾಗಿದ್ದರೂ ಕೂಡಾ ಜೀವನ ಸಾಗಿಸಲು ಅಗತ್ಯವಿರುವ ಅಲ್ಪಮಟ್ಟಿನ ಆದಾಯವನ್ನು ಸಂಪಾದಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಹೆತ್ತಕರುಳಿನ ಕುಡಿಗಳನ್ನು ಸಾಕಿ ಸಲಹುತ್ತ ಹಳ್ಳಿಗಳೆಲ್ಲ ಸುತ್ತಾಡಿ ಭಿಕ್ಷೆ-ಬೇಡಿ ಅನ್ನ-ಬಟ್ಟೆ ಸಂಗ್ರಹಿಸುತ್ತಾರೆ. ಈ ಕೆಲಸವನ್ನು ಬುಡ್ಗಜಂಗಮ ಜನಾಂಗದ ಗಂಡಸರು ಕಲಾಪ್ರದರ್ಶನಕ್ಕೆ ಹೋಗುವುದಕ್ಕೂ ಮೊದಲೇ ಮಾಡಿ ಮುಗಿಸುತ್ತಾರೆ. ಬಗಲಿಗೆ ನಾಲ್ಕು ಖಾನೆ ಇರುವ ಒಂದು ಜೋಳಿಗೆ, ಕೈಯಲ್ಲಿ ಒಂದು ದಮ್ಮಡಿ, ಹಾಗೂ ಕೊರಳಿಂದ ಮುಂದೆ ಜೋತು ಬಿಟ್ಟ ಕೈಪೇಟಿ, ಇನ್ನೊಂದು ಕೈಯಲ್ಲಿ ಓಣಿಯ ನಾಯಿ ಬೆದರಿಸಲು ಒಂದು ಕೋಲು ಹಿಡಿದು ಭಿಕ್ಷೆಗೆ ಹೋಗುತ್ತಾರೆ. ಗೌರಿ ಹುಣ್ಣಿಮೆಯ ಸಂದರ್ಭದಲ್ಲಿ ಜೊತೆಗೆ ಗಂಗಮ್ಮ-ಗೌರಮ್ಮನ ಮೂತಿ ಹೊತ್ತೊಯ್ದು ಮಾರುತ್ತಾರೆ. ಉಳಿದ ಸಂದರ್ಭದಲ್ಲಿ ಹಾಡು ಹೇಳಿ ಊರಾಡುತ್ತಾರೆ. ಹಾಡು, ಕಥೆ, ಸರ್ವಜ್ಞನ ತ್ರಿಪದಿಗಳನ್ನು ಹೇಳಿ, ಆಹಾರ, ಕಾಳುಕಡಿ, ಉಟ್ಟುಬಿಟ್ಟ ಬಟ್ಟೆ ಹಾಗೂ ಹಣದ ರೂಪದಲ್ಲಿ ಭಿಕ್ಷೆಯನ್ನು ಪಡೆಯುತ್ತಾರೆ. ಜನರನ್ನು ಮಾತಿನಲ್ಲಿಯೇ ಮರಳು ಮಾಡುವ ಕಲೆ ಈ ಬುಡ್ಗಜಂಗಮ ಹೆಂಗಸರಿಗಿರುವುದರಿಂದ ಪರಿಚಯ ಆದವರ ಹತ್ತಿರ ಹೆಚ್ಚು ಭಿಕ್ಷೆ ಪಡೆಯುತ್ತಾರೆ. ಬಹಳ ಹೊತ್ತಾದರೆ ಅಲ್ಲಿಯೇ ಊಟ ಮಾಡಿ ಹೋಗುತ್ತಾರೆ. ಇಲ್ಲವಾದರೆ ತಮ್ಮ ಡೇರಿಗೆ ಹೋಗಿ ಎಲ್ಲರೂ ಹಂಚಿಕೊಂಡು ತಿನ್ನುತ್ತಾರೆ.

ಬುಡ್ಗಜಂಗಮರಲ್ಲಿ ಪುರುಷರಂತೆ ಸ್ತ್ರೀಯರು ಯಾಕೆ ಹಗಲಹೊತ್ತು ಮುಖಕ್ಕೆ ಬಣ್ಣ ಬಳಿದು ವೇಷ ಹಾಕುವುದಿಲ್ಲ ಎಂಬ ಪ್ರಶ್ನೆ ಎಲ್ಲರಲ್ಲಿ ಬರುವುದು ಸಹಜ. ಈ ಜನಾಂಗದ ಹೆಂಗಸರು ಬಣ್ಣ ಬಳಿಯಬಾರದೆಂಬುದು ಅವರ ಕುಲದ ಚೌಕಟ್ಟು. ಆದರೆ ಹಿಮ್ಮೇಳದಲ್ಲಿ ಮಾತ್ರ ಭಾಗವಹಿಸಬಹುದು. ಪಾತ್ರ ಧರಿಸುವಂತಿಲ್ಲ ಎನ್ನುತ್ತಾರೆ. ಆಕಸ್ಮಿಕವಾಗಿ ಪಾತ್ರ ಮಾಡಿದರೆ ಅವರು “ಬಸವಿಕುಲ” ಎಂದು ಹೇಳುತ್ತಾರೆ. ಮತ್ತು ಅಂತಹವರನ್ನು ತಮ್ಮ ಕುಲದಿಂದ ಹೊರಗಿಡುತ್ತಾರೆ. ಭಕ್ಷೆಯಿಂದ ಬಂದನಂತರ ಆಡು, ದನ-ಕರುಗಳನ್ನು ಮೇಯಿಸುವ ಕೆಲಸವೂ ಹೆಂಗಸರಿಂದಾಗಿರುತ್ತದೆ.

ಮಕ್ಕಳು ಸಣ್ಣವರಿರುವಾಗಲೇ ಅನುವಂಶಿಕ ವೃತ್ತಿ ತರಬೇತಿ ಆರಂಭಿಸುತ್ತಾರೆ. ಗಂಡು ಮಕ್ಕಳು ಗಂಡಸರೊಂದಿಗೆ ಕಲಾಪ್ರದರ್ಶನಕ್ಕೆ ಹೋಗುತ್ತಾರೆ. ಹೆಣ್ಣು ಮಕ್ಕಳು ತಾಯಿಯೊಂದಿಗೆ ಭಿಕ್ಷೆ ಬೇಡಲು ಹೋಗುತ್ತಾರೆ. ಗಂಡುಮಕ್ಕಳು ಮದುವೆಯ ನಂತರ ಪ್ರತ್ಯೇಕ ಡೇರಿ ಹಾಕಿ ಜೀವನ ಸಾಗಿಸುತ್ತಾರೆ. ಯಾಕೆ? ಎಂದು ಕೇಳಿದರೆ, ಮಗ-ಸೊಸೆಯ ಹಾಸಿಗೆಯನ್ನು ಅತ್ತೆ-ಮಾವ ದಾಟಬಾರದು.[3] ಕಾರಣ ನಂಬಿಕೆಯಿಂದಲೂ ಒಟ್ಟಾರೆ ಬುಡ್ಗಜಂಗಮರಲ್ಲಿ ವಿಭಕ್ತ ಕುಟುಂಬಗಳೇ ಹೆಚ್ಚು. ಆದರೆ ಊರಾಡಲು[4] ಹೋಗುವಾಗ ಎಲ್ಲರೂ ಸೇರಿಯೇ ಹೋಗುವುದು ವಿಶೇಷ. ಕುಟುಂಬದಲ್ಲಿ ಸಂಪಾದನೆ-ಶ್ರಮದಲ್ಲಿ ಮಹಿಳೆ ಸಮನಾಗಿದ್ದರೂ ಸ್ಥಾನಮಾನದಲ್ಲಿ ಮಾತ್ರ ಸಮತೆ ಕಂಡುಬರುವುದಿಲ್ಲ. ಈ ಜನಾಂಗದಲ್ಲಿ ಬಹುಪತ್ನಿತ್ವ ಪದ್ಧತಿ ಅಲ್ಲಲ್ಲಿ ಕಂಡು ಬರುತ್ತದೆ. ಮೊದಲನೆಯ ಹೆಂಡತಿಗೆ ಮಕ್ಕಳಾಗದಿದ್ದಲ್ಲಿ, ಆಕೆ ಗುಣಮುಖವಾಗದ ರೋಗದಿಂದ ಬಳಲುತ್ತಿದ್ದರೆ, ಮೊದಲನೆಯ ಹೆಂಡತಿಯ ಅನುಮತಿ ಪಡೆದು ಹಿರಿಯರ ಸಮ್ಮುಖದಲ್ಲಿಯೆ ಮೂರು-ನಾಲ್ಕು ಹೆಣ್ಣನ್ನು ಮದುವೆಯಾದವರೂ ಇದ್ದಾರೆ. ಆದರೆ ಇತ್ತೀಚೆಗೆ ಇವು ವಿರಳ ಎನ್ನಬಹುದು. “ಮಕ್ಕಳಿರಲೆವ್ವ ಮನೆತುಂಬ” ಎಂಬನಾಣ್ಣುಡಿ ಬಹುರೂಪಿಗಳಿಗೆ ಒಪ್ಪುವಂತಹ ಮಾತು. ಹೆಚ್ಚು ಮಕ್ಕಳಿದ್ದಷ್ಟು ವೇಷಗಾರಿಕೆ, ಭಿಕ್ಷೆಬೇಡುವುದಕ್ಕೆ ಹೆಚ್ಚು ಅನುಕೂಲ ಎಂದು ಹೇಳುತ್ತಾರೆ. ವಯಸ್ಸಾದ ತಂದೆ-ತಾಯಿಯನ್ನು ಮಕ್ಕಳು ಸಾಕಿ ಸಲಹುತ್ತಾರೆ. ಎಲ್ಲಾ ಸಂದರ್ಭದಲ್ಲೂ ಸಿಂಧಿ-ಸೆರೆ, ಬಿಡಿ-ಸಿಗರೇಟು, ಗಾಂಜಾ ಸೇವನೆ ಸಾಮಾನ್ಯ.

ಮದುವೆ:

ಸಾಮಾಜಿಕ ಒಪ್ಪಿತ ಸಂಸ್ಥೆಯಾದ ಮದುವೆ ಬುಡ್ಗಜಂಗಮ ಜನಾಂಗದ ಕುಟುಂಬಕ್ಕೆ ಆಧಾರಸ್ತಂಬ. ಕುಟುಂಬದ ವಂಶಾಭಿವೃದ್ಧಿ, ಲೈಂಗಿಕಸುಖ, ಸಂತೋಷ ಮಾತ್ರ ಮದುವೆ ಎಂದು ಹೇಳಿದರೂ ಪವಿತ್ರಬಂಧನ, ಪ್ರೀತಿ, ಸ್ನೇಹ, ವಿಶ್ವಾಸವನ್ನು ಬೆಳೆಸುವ-ಬೆಸೆಯುವ ಸಂಬಂಧವಾಗಿದೆ. ಇನ್ನುಳಿದ ಜನಸಮೂಹಗಳಿಗಿಂತಲೂ ಈ ಅಲೆಮಾರಿ ಜನಪದ ವೃಂದಗಳಲ್ಲಿ ಮದುವೆ, ಅದಕ್ಕೆ ಸಂಬಂಧಿಸಿದ ಆಚರಣೆಗಳು ಇರುತ್ತವೆ.

ಬುಡ್ಗಜಂಗಮರು ರಕ್ತಸಂಬಂಧದಲ್ಲಿಯೇ ಹೆಣ್ಣು-ಗಂಡು ಹುಡುಕಿ ಸಂಬಂಧ ಬೆಳೆಸುವರು. ಸಂಬಂಧದಲ್ಲಿ ಹೆಣ್ಣು ಮಗು ಹುಟ್ಟಿದ ನಂತರ ಆ ಮಗು ಬೆಳೆಯುತ್ತಿದ್ದಂತೆಯೇ ಅದರ ಬಾಯಲ್ಲಿ ಸಕ್ಕರೆ ಹಾಕಿ ಇದು ನಮ್ಮ ಮನೆ ಸೊಸೆ ಎಂದು ಹೇಳಿ, ಮಗುವಿನ ತಂದೆ-ತಾಯಿ, ಸಂಬಂಧಿಕರಿಗೆ ಸಿಂಧಿ-ಸರಾಯಿ ಕುಡಿಸಿ ಬರುತ್ತಾರೆ. ಇದೊಂದು ರೀತಿಯಲ್ಲಿ “ಕನ್ಯಾ ನಿಶ್ಚಯ” ಆದಂತೆ. ಆ ಹೆಣ್ಣು ಮಗು ವಯಸ್ಸಿಗೆ ಬರುವವರೆಗೂ ಅದಕ್ಕೆ ವರ್ಷಕ್ಕೊಮ್ಮೆ ಬಟ್ಟೆ ತಂದು ಕೊಡುತ್ತಾ, ಅವಳ ತಂದೆ ತಾಯಿಗೆ ಸಿಂದಿ-ಸೆರೆ ಕುಡಿಸುತ್ತಾ ನಿರಂತರವಾಗಿ ಸಂಬಂಧ ಉಳಿಸಿಕೊಂಡು ಹೋಗಬೇಕೆಂಬ ವಾಡಿಕೆಯಿದೆ. ಕರುಳಬಳ್ಳಿಯ ಸಂಬಂಧ ಹೊರತು ಪಡಿಸಿ ಸಂಬಂಧ ಬೆಳೆಸ ಬಯಸಿದಾಗ ಊರಾಡಲು ಹೋದಾಗ ಪರಸ್ಪರ ಪರಿಚಯಿಸಿ ಹೆಣ್ಣು ಕೇಳುತ್ತಾರೆ. ಯಾಕೆಂದರೆ ಈ ಜನಾಂಗದಲ್ಲಿ ಗಂಡಿನವರೇ ಹೆಣ್ಣು ಹುಡುಕುತ್ತ ಹೋಗುವ ಪದ್ಧತಿ ಇದೆ. “ಬೆಡಗು” ಗುರುತಿಸಿಕೊಂಡು ಕನ್ಯೆ ತಂದುಕೊಳ್ಳುತ್ತಾರೆ. ಒಂದೇ ಬೆಡಗಿನಲ್ಲಿ ಮದುವೆ ನಡೆಯುವುದಿಲ್ಲ. ಅದು ಸಹೋದರ ಸಂಬಂಧವಾಗುತ್ತದೆ. ಇವರಲ್ಲಿ ವರ ಬಹುರೂಪಿಕಲೆಯಲ್ಲಿ, ಮಾತಿನಲ್ಲಿ ನಿಪುಣ ಒಳ್ಳೆಯ ಗುಣ ಇದ್ದರೆ ಸಾಕು, ಅವನು ಶ್ರೇಷ್ಠ ವರ; ಹುಡುಗಿಯಾದವಳು ಊರಾಡಿ ಭೀಕ್ಷೆ ತರುವಂತಿದ್ದರೆ ಸಾಕು. ಒಳ್ಳೆಯ ಬದುಕು ಮಾಡುವ ಹೆಣ್ಣು ಎನ್ನುತ್ತಾರೆ. ಮನೆ ಬಿಟ್ಟು ಹೊರಗೆ ಹೋಗದ ಪರೀಕ್ಷೆ ಕೂಡಾ ಇವರಲ್ಲಿ ವಿಶೇಷವೆ ಎನ್ನಬೇಕು. ಹೊಸಬೀಗಸ್ತನ ಇದ್ದಾಗ ಒಂದೆರಡೂರಿನ ಕ್ಯಾಂಪ್‌ಮುಗಿಯುವವರೆಗೆ ಹುಡುಗನ ಗುಣ, ನಡತೆಯನ್ನು ಪರೀಕ್ಷಿಸುತ್ತಾರೆ. ಅವರಿಗೆಲ್ಲ ಒಪ್ಪಿತವಾದರೆ, ಕುಲಬಾಂಧವರನ್ನೆಲ್ಲ ಸೇರಿಸಿ ಹೆಣ್ಣು ಕೊಡಲು ಒಪ್ಪಿಕೊಳ್ಳುತ್ತಾರೆ. ಅಂದೇ “ವೀಳ್ಯೆದೆಲೆ” ಕಾರ್ಯ ಮುಗಿಸಿ ಬಿಡುತ್ತಾರೆ. ಕನ್ಯೆಗೆ ಬಳೆ ಇಡಿಸಿ ಉಡಿ ತುಂಬುವರು. “ಹೆಣ್ಣು ಕೊಟ್ಟ” ಎಂದು ಒಬ್ಬರು “ಹೌದು” ಎಂದು ಹೆಣ್ಣಿನ ಕಡೆಯವ ಹೇಳುತ್ತಾನೆ. “ಆ ಹೆಣ್ಣನ್ನು ಮನೆಯ ಮಗಳಂತೆ ನೋಡಿಕೊಳ್ಳುತ್ತೇವೆ” ಎಂದು ಗಂಡಿನ ಕಡೆಯವರು ಒಪ್ಪಿಗೆ ಕೊಡುತ್ತಾರೆ. ನಂತರ ಹೆಣ್ಣು-ಗಂಡಿನ ಪಕ್ಷದವರು ಹಿರಿಯರಿಗೆ ಚಾಜತಲಾ ೨೫ ಹಾಗೂ ೨೧ ರೂಪಾಯಿ ಹಣ ಕೊಟ್ಟು ಹೆಂಡ ತರಿಸಿ ಊಟದ ವ್ಯವಸ್ಥೆ ಮಾಡುತ್ತಾರೆ.

ಇದಾದ ನಂತರ ತಮ್ಮ ಆರ್ಥಿಕ ಸಂಪಾದನೆಯ ದಿನಗಳನ್ನು ನೋಡಿಕೊಂಡು ಮದುವೆಯ ದಿನ ನಿರ್ಧರಿಸುತ್ತಾರೆ. ಈ ಸಂದರ್ಭದಲ್ಲಿ ಹೆಣ್ಣಿನವರ ಅಭಿಪ್ರಾಯಗಳಿಗೆ ಬಹಳಷ್ಟು ಬೆಲೆ ಕೊಡುತ್ತಾರೆ. ಬುಡ್ಗಜಂಗಮದಲ್ಲಿ ಈ ಮೊದಲು ವಾರದ ಮದುವೆಗಳು ನಡೆಯುತ್ತಿದ್ದವಂತೆ ಆದರೆ ಈಗ ಒಂದು ದಿನಕ್ಕೆ ಬಂದು ನಿಂತಿವೆ. ಅದರ ಆಚರಣೆಯ ಸ್ವರೂಪ ಇಂತಿದೆ:

ಡೇರೆಯ ಮುಂದೆ ಹಂದರ ಹಾಕುತ್ತಾರೆ. ಇದಕ್ಕೂ ಮೊದಲು ಡೇರೆಯ ಬಲಭಾಗದಲ್ಲಿ “ಹಾಲಗಂಬ”[5]ವನ್ನು ಮುತ್ತೈದೆಯರೊಂದಿಗೆ ನೆಡುತ್ತಾರೆ. ಹಂದರತಪ್ಲ, ಬಸರಿತಪ್ಲ, ತೆಂಗಿನ ಗರಿಗಳಿಂದ ಹಂದರ ಹಾಕಿ, ಅಲ್ಲಲ್ಲಿ ಮಾವಿನ ತಳಿರಿಂದ ಶೃಂಗರಿಸುತ್ತಾರೆ. ಆಗ ಕೆಲವರು ತತ್ವದ ಪದಗಳನ್ನು ಭಜನಾ ಶೈಲಿಯಲ್ಲಿ ಹೇಳುತ್ತಿರುತ್ತಾರೆ. ಆದರೆ ಯಾವುದೇ ಬಾಜಾ-ಭಜಂತ್ರಿ ಇವರ ಮದುವೆಯಲ್ಲಿ ಇಲ್ಲದಿರುವುದು ವಿಶೇಷ. ಎರಡೂ ಕಡೆಯ ಮುತ್ತೈದೆಯರು ಆರತಿಯ ಕಳಸ ತಯಾರಿಸಿರುತ್ತಾರೆ. ಇನ್ನೊಂದೆಡೆ ಮದುವೆಯ ಅಡುಗೆ ತಯಾರಿಸಲು ಒಲೆಯನ್ನು ತೋಡಿ ಗುಂಡಿಟ್ಟು, ಅದರ ಹಿಂದೆ ಅಥವಾ ಮುಂದೆ ಗಣಪತಿಯನ್ನಿಟ್ಟು ಪೂಜಿಸಿ ಆರತಿ ಬೆಳಗುತ್ತಾರೆ. ಅಲ್ಲಿ ತಯಾರಾದ ಮದುವೆಯೂಟ ಮೊದಲು ಗಣಪತಿಗೆ ಎಡೆ ಮಾಡಿ ಅರ್ಪಿಸುವರು. ಅಲೆಮಾರಿ ಜನಸಮೂಹಗಳು ಸಾಮಾನ್ಯವಾಗಿ ಹೆಣ್ಣು ದೇವತೆಯ ಆರಾಧಕರು. ಆದರೆ ಬುಡ್ಗಜಂಗಮರು ಗಣಪತಿಯನ್ನು ಪೂಜಿಸುತ್ತಿರುವುದು ಆಶ್ಚರ್ಯ ಯಾಕೆ ಅಂತಾ ಕೇಳಿದರೆ, ಆತ ವಿಘ್ನನಿವಾರಕ ಎನ್ನುತ್ತಾರೆ. ಇದರೊಟ್ಟಿಗೆ ಮುತ್ತೈದೆಯರಿಗೆ ಹಸಿರು ಬಳೆ ಹಾಕಿಸಿದ ಮೇಲೆ, ಉಳಿದವರೆಲ್ಲರಿಗೂ ಬಳೆ ತೊಡಿಸುತ್ತಾರೆ.

ಇವೆಲ್ಲ ಮುಂಜಾನೆ ಮುಗಿಯುತ್ತಿದ್ದಂತೆಯೇ ನಡೆದು, ಹೊತ್ತೇರಿದಂತೆ ಬಂಧು ಬಳಗದವರೆಲ್ಲ ಬೀಗರ ಮನೆಗೆ ಹೋಗುತ್ತಾರೆ. ಹೀಗೆ ಹೋಗುವಾಗ ಪರಿಯಾಣ (ಇಂದು ಮೊರ)ದಲ್ಲಿ ಮುತ್ತೈದೆಯರು ಎಲ್ಲಿ, ಅಡಿಕೆ, ಉತ್ಪತ್ತಿ, ಅರಿಷಿಣಬೊಟ್ಟು ೧೧ರಂತೆ ಹಾಕಿಕೊಂಡು ಜೊತೆಗೆ ೧೧, ಅಥವಾ ೨೫[6] ರೂ.ತೆರವು, ಸೀರೆ, ಕುಪ್ಪಸ ಇಟ್ಟುಕೊಂಡು ಭಜನೆ ಮಾಡುತ್ತಾ ಹೋಗುತ್ತಾರೆ. ಅಲ್ಲಿ “ಉಡಿ ತುಂಬುತ್ತಾರೆ. ಇದಕ್ಕೆ “ಉಡಿತುಂಬುವ ಜಂಬರ” ಎಂದು ಕರೆಯುತ್ತಾರೆ. ನಂತರ ಮದುಮಕ್ಕಳ ಕೈಗೆ ಅರಿಷಿಣಬೊಟ್ಟು ಕಟ್ಟುತ್ತಾರೆ. ಅನಂತರ ಅವರವರ ಚಪ್ಪರ/ ಡೇರೆಯಲ್ಲಿ ಅಲಂಕರಿಸುತ್ತಾರೆ. ಮದುಮಗ ಧೋತರ, ನಿಲುವಂಗಿ, ಜರದ ರುಮಾಲು, ಮೇಲೊಂದು ಕೋಟು; ಕನ್ಯೆ ಸೀರೆ, ರವಿಕೆ ತೊಟ್ಟು ಮುಸುಕಿನೊಂದಿಗೆ ಹಸಿಕಟ್ಟೆಯಲ್ಲಿಗೆ ಬರುತ್ತಾಳೆ. ಮದುಮಗನ ಕೈಯಲ್ಲಿ ಲಿಂಬೆಹಣ್ಣು ಸಿಕ್ಕಿಸಿದ ಖಡ್ಗವನ್ನು, ವಧುವಿನ ಕೈಯಲ್ಲಿ ಲಿಂಬೆಹಣ್ಣನ್ನು ಕೊಡವರು.

ಇದಾದ ನಂತರ ಹಸಿ ಕಟ್ಟೆಯಲ್ಲಿ ಕರಿಕಂಬಳಿಯ ಮೇಲೆ ಶಸಿ ಹೊಯ್ಯುತ್ತಾರೆ. ಇವರ ಕುಲದ ಹಿರಿಯರಾದ ಗಣಾಚಾರಿ, “ಮಹಾಂತಗಾರ” ಮತ್ತು ಕೆಲವು ಮುತ್ತೈದೆಯರು ಆಗಿರುತ್ತಾರೆ. ಇಲ್ಲಿ ಗಂಡಿನ ಕಡೆಯವರು ಭಜನೆಯೊಂದಿಗೆ ತಾಳಿ, ಬೆಳ್ಳಿಯ ಕಡಗ, ಕಾಲುಂಗುರ, ಅಕ್ಷತೆ ತಂದು ಇಡುವರು. ಮದುಮಗನನ್ನು ಕಳಸದೊಂದಿಗೆ ಭಜನೆ ಮಾಡುತ್ತ ಶಸಿಕಟ್ಟೆಗೆ ಬೀಗರಾದವರು ಹೊತ್ತುಕೊಂಡು ತರುವರು. ನಂತರ ಮದುಮಗಳನ್ನು ಕರೆತಂದು ಎಡಗಡೆ ಕೂಡಿಸುವರು. ನೆರೆದ ಹಿರಿಕ ಕುಲಬಾಂಧವರಿಗೆಲ್ಲ ತಾಂಬೂಲ ಹಂಚುವರು. ಐದು ಜನ ಮುತ್ತೈದೆಯರು ತಾಳಿ ಮುಟ್ಟಿದ ತರುವಾಯ ತಾಳಿ ಕಟ್ಟಿಸುವರು. ತಾವು ಉಳಿದ ಊರಿನಲ್ಲಿ ಸ್ವಾಮಿಗಳಿದ್ದರೆ ತಾಳಿ ಕಟ್ಟಿಸಲು ಆಮಂತ್ರಿಸುವರು. ಇಲ್ಲವಾದರೆ ರುದ್ರಾಕ್ಷಿ, ಗಣಾಚಾರಿ ಬೆಡಗಿನ ಹಿರಿಯ ತಾಳಿಕಟ್ಟಿಸುವನು. ನಂತರ ಅಕ್ಷತೆ ಹಾಕುವರು. ಮುತ್ತೈದೆಯರು ಉಡಿ ತುಂಬವರು. ಸೆರಗಿಗೆ ಗಂಟು ಹಾಕುವರು. ಬಂದವರೆಲ್ಲ ಊಟ ಮಾಡುವರು.

ಅಕ್ಕಿ ಕಾಳು ಹಾಕಿದ ನಂತರ ಮದುಮಕ್ಕಳು ಹೆಣ್ಣಿನ ಡೇರೆಯಲ್ಲಿಗೆ ಕಳಸ ಹಿಡಿದು ಬರುತ್ತಾರೆ. ಒಳಹೊಗುವಾಗ ಬಣ್ಣ ಬಣ್ಣದ ನೀರು, ಅನ್ನದುಂಡೆಯನ್ನು ನಿವಾಳಿಸಿ ಒಗೆಯುವುವರು. ಕಾಲಿಗೆ ಕೊಡ ನೀರು ಹಾಕಿ ನಮಿಸಿ, ಗಂಡು ಬಲಗಾಲನ್ನು ಹೆಣ್ಣು ಎಡಗಾಲನ್ನು ಒಳಗಿಟ್ಟು ಹೋಗುವರು. ಅಲ್ಲಿ ಮತ್ತೆ ಅಕ್ಷತೆ ಹಾಕಿ ಆರತಿ ಬೆಳಗುವರು. ಅಲ್ಲಿ ಅಡಕಿಯಾಟ, ಉಂಗುರದಾಟ ಹಚ್ಚಿ ಅವರಲ್ಲಿ ಆತ್ಮೀಯತೆ ಬರುವಂತೆ ಮಾಡುತ್ತಾರೆ. ಅಂದು ಅಳಿಯ ಮಾವನ ಮನೆಯಲ್ಲಿಯೇ ಇರುತ್ತಾನೆ. ಮರುದಿನ ಹೆಣ್ಣನ್ನು ಗಂಡನ ಮನೆ ತುಂಬಿಸಿಕೊಳ್ಳುತ್ತಾರೆ. ಬಂದ ಬೀಗರಿಗೆಲ್ಲ ಚೂಡಾ ಚಹಾದ ವ್ಯವಸ್ಥೆ ಮಾಡಿ ಹೆಣ್ಣಿನ ಮನೆ (ಡೇರೆ)ಯ ಮುಂದೆ ಒನಕೆಯನ್ನು ಅಡ್ಡಹಾಕಿ, ಅದರ ಮೇಲೆ ಮದುಮಕ್ಕಳನ್ನು ಕೂಡಿಸಿ ಅರಿಷಿಣ ಹಚ್ಚಿ, ಸ್ನಾನ ಮಾಡಿಸಿ, ಬೇರೆ ಬಟ್ಟೆ ತೊಡಿಸಿ, ಆರತಿ ಮಾಡಿ, ಉಡಿಯಕ್ಕಿ ಹಾಕಿ, ಕಳಸಹಿಡಿದು ಭಜನೆಯೊಂದಿಗೆ ಗಂಡಿನ ಡೇರೆಯತ್ತ ಕರೆದೊಯ್ಯುವರು. ಕುಲಬಾಂಧವರೆಲ್ಲರೂ ಈ ಮೊದಲೆ ಆಯೇರಿ (ಮುಯ್ಯ) ಮಾಡಿರುತ್ತಾರೆ. ಮದುಮಕ್ಕಳನ್ನು ಗಂಡಿನ ಡೇರಿಯತ್ತ ಕರೆತರುವ ಮೊದಲು ಹಂದರದ ಬಲಗಂಬದ ಹತ್ತಿರ ಸಗಣಿ ಸಾರಿಸಿದ ಗಡಿಗೆಯೊಂದನ್ನು ಇಟ್ಟು, ಅಕ್ಕಿ ತೊಳೆದ ನೀರನ್ನು ಅದರಲ್ಲಿ ತುಂಬಿರುತ್ತಾರೆ. ಅದಕ್ಕೆ ಕುಂಕುಮ, ಅರಿಷಿಣ ಹಚ್ಚಿ, ಹಂಗನೂಲು ಸುತ್ತಿ, ಕಂಕಣ ಕಟ್ಟಿ ಪೂಜಿಸುತ್ತಾರೆ. ಇದಕ್ಕೆ “ಕಲಕುಂಬ” (ಕುಂಭ) ಎನ್ನುತ್ತಾರೆ. ಇದು ಬುಡ್ಗಜಂಗಮರಿಗೆ ಕುಲದೇವತೆ ಎಂಬ ಭಾವನೆ. ಡೇರೆಯೊಳಗೆ ಹೋಗುವ ಮೊದಲು ಬಣ್ಣದ ನೀರಿನ ಅಥವಾ ಅನ್ನದುಂಡೆಯನ್ನು ನಿವಾಳಿಸಿ ಒಗೆದು ಆರತಿ ಎತ್ತಿ ಕರೆದುಕೊಳ್ಳುವರು.

“ಕಲಕುಂಡ” ಕ್ಕೆ ಮದುಮಗಳ ಉಡಿಯಕ್ಕಿಯಿಂದ ಚಿತ್ರಾನ್ನದ ಮೂರು ಎಡೆಗಳನ್ನು ಮಾಡುವರು. ಇದರೊಂದಿಗೆ ಹಿಟ್ಟು-ಬದನೆಕಾಯಿ ಪಲ್ಲೆ ಮಾಡುವರು. ಒಂದೆಡೆ ಮುತ್ತೈದೆಯರಿಗೆ, ಇನ್ನೊಂದೆಡೆ ಮದುಮಕ್ಕಳಿಗೆ, ಮತ್ತೊಂದೆಡೆ ಬೀಗ-ಬೀಗರಿಗೆ, ಪರಸ್ಪರ ಒಬ್ಬರಿಗೊಬ್ಬರು ತುತ್ತು ಮಾಡುವರು. ಇದಕ್ಕೆ “ಅನ್ನ ಪರೀಕ್ಷೆ” ಎಂದು ಕರೆಯುವುದು ರೂಢಿ. ದೈವಕ್ಕೂ ಊಟದ ವ್ಯವಸ್ಥೆ ಮಾಡಿರುತ್ತಾರೆ. ಇದನ್ನು ಕೆಲವಡೆ ಉಡಿಯಕ್ಕಿಯೂಟ ಎಂದು ಕರೆಯುತ್ತಾರೆ. ಮೂರನೆಯ ದಿನ “ಕಲಕುಂಬ”ವನ್ನು ವಿಸರ್ಜಿಸುವದು. ಮುತ್ತೈದೆಯರು ಗಂಡಸಿನ ಹಂದರದಲ್ಲಿ ನೀಲಾಂಜನ ಆರಿಸಿ ಆರತಿಯ ಬಟ್ಟಲನ್ನು ಬೆಳಗಿ ತೊಳೆಯುತ್ತಾರೆ. ಕುಂಬದ ನೀರನ್ನು ತೆಗೆದುಕೊಂಡು ಹಸಿರಿರುವ ಬನ್ನಿ ಅಥವಾ ಬೇವಿನಗಿಡಕ್ಕೆ ಸುರಿಯುತ್ತಾರೆ. ಇದನ್ನು “ನಾಗೋಲಿ” ಕಾರ್ಯಕ್ರಮ ಎನ್ನುವರು. ನಂತರ ಹಂದರ ಇಳಿಸುತ್ತಾರೆ. ಕುಲದೇವತೆಯ ಹೆಸರಿನಲ್ಲಿ ಬ್ಯಾಟಿ(ಕುರಿ)ಯನ್ನು ಮದುಮಗನಿಂದಲೇ ಕೊಯ್ಯಿಸುತ್ತಾರೆ. ಇದರಿಂದ ಮದುಮಕ್ಕಳಿಗೆ ಬರುವ ಕಂಟಕಗಳು ದೂರಾಗುತ್ತವೆ ಎನ್ನುತ್ತಾರೆ. ಕುರಿಯ ಮಾಂಸವನ್ನು ಎರಡೂ ಪಕ್ಷದವರು ಸಮ ಹಂಚಿಕೊಂಡು ಅವರ ಮನೆಯಲ್ಲಿ ಇವರು, ಇವರ ಮನೆಯಲ್ಲಿ ಅವರು ಊಟ ಮಾಡುವರು. ಸಿಂದಿ-ಸೆರೆ ಸಾಮಾನ್ಯ ಇದನ್ನು “ನಾಗೋಲಿ ಊಟ” ಎಂದು ಕರೆಯುತ್ತಾರೆ. ಇದಾದ ಮರುದಿನ ಮದುಮಕ್ಕಳು ಮುತ್ತೈದೆಯರೊಂದಿಗೆ ಆರತಿ ಹಿಡಿದು ಭಜನೆ ಮಾಡುತ್ತ ಹತ್ತಿರದ ಕೆರೆ ಅಥವಾ ಭಾವಿಗೆ ಹೋಗಿ ಐದು ಚಪ್ಪಟೆಯಾಕಾರದ ಕಲ್ಲುಗಳನ್ನು ತೊಳೆದು, ಕುಂಕುಮ, ವಿಭೂತಿ ಹಚ್ಚಿ ಹಂಗನೂಲ ಸುತ್ತಿ, ಎಲೆ, ಅಡಕೆಯಿಟ್ಟು ಪೂಜಿಸಿ, ಕಾಯಿ ಒಡೆದು ಫಳಾರ ಹಾಕುತ್ತಾರೆ. ಅಲ್ಲಿಂದ ಬರುವಾಗ ತುಂಬಿದ ಕೊಡ ಮದುಮಗಳು ಹೊತ್ತು ಗಂಡನ ಡೇರಿಯಲ್ಲಿಗೆ ತಂದರೆ ಅಲ್ಲಿಗೆ “ಮದುವೆಯ ಶಾಸ್ತ್ರ” ಮುಗಿಯುತ್ತವೆ ಎನ್ನುತ್ತಾರೆ. ಮರುದಿನ ಮದುವೆ ನಡೆದ ಡೇರೆಯನ್ನು ಕಿತ್ತಿ ಮತ್ತೊಂದು ಕಡೆ ಹಾಕುತ್ತಾರೆ. ಇದನ್ನು ಹೆಣ್ಣಿನ ಸೋದರಮಾವನೇ ಹಾಕುವ ಪದ್ಧತಿ ಇದೆ. ಇದಕ್ಕಾಗಿ ಸೋದರಮಾವನಿಗೆ ಸಿಂದಿ-ಸರಾಯಿ, ಮಾಂಸದಡಿಗೆ ಮಾಡಿ ಉಣಿಸುವರು. ಅಂದು ಮಕ್ಕಳಿಗೆ ಮೊದಲ ರಾತ್ರಿಯಾಗಿರುವುದರಿಂದ ಕುಲಬಾಂಧವರಿಗೆಲ್ಲ ಸಿಂದಿ-ಸೆರೆಯ ವ್ಯವಸ್ಥೆ ಇರುತ್ತದೆ. ಮರುದಿನ ಆ ಜೋಪಡಿಯನ್ನು ಕಿತ್ತಿ ಮತ್ತೊಂದೆಡೆ ಹಾಕುವರು. ಅನಂತರ ಒಂದು ಮಗು ಆಗುವವರೆಗೆ ಅಥವಾ ಮೂರು ವರ್ಷದ ವರೆಗೆ ಮಾವನ ಪರಿಸರದಲ್ಲಿಯೇ ಅಳಿಯ ಇರಬೇಕು ಹೆಣ್ಣು ಮಕ್ಕಳು ಗಂಡನ ಮನೆಗೆ ಹೋಗುವಾಗ ತಂದೆ-ತಾಯಿ “ಬಳೋಲಿ” ಯಾಗಿ ಕುರಿ, ಕೊಳ್ಳಿ, ಆಕಳು ಏನಾದರೊಂದನ್ನು, ಇದರೊಂದಿಗೆ ದಮ್ಮಡಿ, ಕೈಪೇಟಿ, ಜೋಳಿಗೆ, ಶಾಸ್ತ್ರಗಳು ಮುಗಿದ ಹಾಗೆ ಎನ್ನುತ್ತಾರೆ.

ಉಡುಕಿ

ಬುಡ್ಗಜಂಗಮರಲ್ಲಿ ವಿಧವೆ, ವಿಧುರನಿಗೆ ಮರುಮದುವೆಯ ಅವಕಾಶ ಕಲ್ಪಿಸಿರುವುದು ಆರೋಗ್ಯಕರ ಸಂಪ್ರದಾಯ ಎನ್ನಬೇಕು. ಗಂಡ ಸತ್ತ ಹೆಂಡತಿಗೆ, ಹೆಂಡತಿ ಸತ್ತ ಗಂಡಸರಿಗೆ ಮಾಡುವ ಮರುಮದುವೆಗೆ “ಉಡುಕಿ” ಎನ್ನುತ್ತಾರೆ. ಪರಸ್ಪರರು ಒಪ್ಪಿಕೊಂಡ ಕುಲದ ಹಿರಿಯರೆಲ್ಲರೂ ಸೇರಿ “ಉಡುಕಿ” ಕಾರಣ ಮಾಡುತ್ತಾರೆ. ಹತ್ತಿರದ ಯಾವುದಾದರೂ ಗುಡಿಯ ಮುಂದೆ ಮದುವೆ ಮಾಡುತ್ತಾರೆ. ನಂತರ ಇವರನ್ನು ಉಡುಕಿಗಂಡ, ಉಡುಕಿಹೆಂಡತಿ ಎಂದು ಕರೆಯುತ್ತಾರೆ. ಇವರ ಮದುವೆಗೆ ಮುತ್ತೈದೆಯರು, ಮಕ್ಕಳು ಭಾಗವಹಿಸುವುದಿಲ್ಲ. ಇವರು ಕೂಡಾ ಯಾರದೇ ಮದುವೆಯಲ್ಲಿ ಭಾಗವಹಿಸುವದಿಲ್ಲ. ಯಾವುದೇ ಜಾಜ ಮಾಡುವುದಿಲ್ಲ. ಉಡುಕಿ ಮದುವೆಗೆ ಬಂದ ಬಾಂಧವರಿಗೆಲ್ಲ ಕುಡಿತ, ಉಟೋಪಚಾರವನ್ನು ಮದುವೆಯಾಗುವ ಗಂಡ ಭರಿಸುತ್ತಾನೆ. ಬುಡ್ಗಜಂಗಮರಲ್ಲಿ ಬಾಲ್ಯವಿವಾಹಗಳು ಕಂಡುಬರುತ್ತವೆ. ಆಧುನಿಕ ಜಗತ್ತಿಗೆ ಒಗ್ಗಿಕೊಳ್ಳುತ್ತಿರುವ ಇವರಲ್ಲಿ ಸಾಂಪ್ರದಾಯಿಕ ಮದುವೆಗಳು ಕಡಿಮೆಯಾಗುತ್ತಲಿವೆ.

ಜನನ

“ಬುಡ್ಗಜಂಗಮ” ಜನಾಂಗದಲ್ಲಿ ಮಗುವಿನ ಜನನದ ಕಾಲದಲ್ಲಿ ಮಂತ್ರಸಾನಿ (ಸೂಲಗಿತ್ತಿ)ಯ ಪಾತ್ರ ಮಹತ್ತರವಾದುದು. ಹೆರಿಗೆಯ ಎಲ್ಲ ಕೆಲಸ ಇವಳದೇ ಆಗಿರುತ್ತದೆ. ಹೆರಿಗೆಯ ಸಮಯದಲ್ಲಿ ಬಿದ್ದ “ಪ್ಲಸೆಂಟಾ” ಮುಂತಾದ ಸತ್ತೆಯನ್ನು ಇವರು “ಕೊಲ್ಲು” ಎನ್ನುತ್ತಾರೆ. ಈ ಕೊಲ್ಲನ್ನು ಮಣ್ಣಿನ ಕುಡಿಕೆಯೊಂದರಲ್ಲಿ ಹಾಕಿ ಬಾಣಂತಿತಲೆಯ ಪಕ್ಕದಲ್ಲಿ ಹೊಕ್ಕಳು ಹುರಿ ಇಡುತ್ತಾಳೆ. ಮಗುವಿಗೆ ಸ್ನಾನ ಮಾಡಿಸಿದ ನಂತರ ಕೊಲ್ಲನ್ನು ಬಿಡಾರ ವಂಕರ ಗುಡಿಸಲಿಗೆ ಅನಿಸಿಕೊಂಡೇ ಮುಂದೆ ಹೂಳುತ್ತಾರೆ.

ಹುಟ್ಟಿದ ಮಗುವಿನ ಅಂಗಾಂಗಳೆಲ್ಲ ಚೆನ್ನಾಗಿದ್ದರೆ ಅದನ್ನು “ದೊರಕೊಲ್ಲು” ಎನ್ನುತ್ತಾರೆ. ಅಂಗಾಂಗಗಳು ಸರಿ ಇಲ್ಲದಿದ್ದರೆ ಅದನ್ನು “ದೊಂಗಕೊಲ್ಲು” ಎನ್ನುವರು. ಹೆರಿಗೆಯಾದ ನಂತರ ಸುತ್ತ ಮುತ್ತಲಿನ ಡೇರೆಯ ಹೆಂಗಸರು ಒಂದೊಂದು ಹಂಡೆ ನೀರು ಕಾಯಿಸಿಕೊಂಡು ಬರುತ್ತಾರೆ. “ಕೊಲ್ಲು” ಹೂಳಿರುವ ಸ್ಥಳದಲ್ಲಿ ಕಲ್ಲೊಂದನ್ನು ಹಾಕಿ ಬಾಣಂತಿಗೆ ಅದರ ಮೇಲೆ ಕೂಡಿಸಿ ಅರೆದ ಬೇವಿನ ತಪ್ಪಲು, ಅರಿಷಣ ಪುಡಿ ಮೈತುಂಬಹಚ್ಚಿ ಸ್ನಾನ ಮಾಡಿಸುತ್ತಾರೆ. ಅನಂತರ ಬಾಣಂತಿ ಸೂರ್ಯನಮಸ್ಕಾರ ಮಾಡಿ ಡೇರೆಯೊಳಗೆ ಬರುವಳು.

ನಾಮಕರಣ

ಮಗು ಜನಿಸಿದ ಮೂರನೆಯ ದಿನವೇ ನಾಮಕರಣದಿನ. ಹುಟ್ಟಿದ ಕೂಸು ಗಂಡಾಗಿದ್ದರೆ ಅಂದು ಬೇಟೆಯಾಡುವುದು ಕಡ್ಡಾಯ. ಹಾಗೂ ಕುಲಾಚಾರದಂತೆ ದೈವಕ್ಕೆ ಐವತ್ತು ರೂಪಾಯಿ, ಹೆಣ್ಣಾಗಿದ್ದರೆ ಇಪ್ಪತ್ತೈದು ರೂಪಾಯಿ “ಚಾರ್ಜ” ಕೊಡಬೇಕು. ಬಾಣಂತಿಗೆ ಅಂದು ಸರಾಯಿ ಕುಡಿಸಿ, ತಾವು ಕುಡಿದು ಹೆಸರಿಟ್ಟು ಮಾಂಸದಡಿಗೆ ಊಟ ಮಾಡುವರು.

ಮರಣ

ಬುಡ್ಗಜಂಗಮರ ಸಮುದಾಯದಲ್ಲಿ ಯಾರಾದರೂ ಸತ್ತರೆಂಬ ಸುದ್ದಿ ತಿಳಿದ ತಕ್ಷಣವೇ ಎಲ್ಲರೂ ತಮ್ಮ ವೃತ್ತಿಯನ್ನು ತೊರೆದು ಅಲ್ಲಿ ಸೇರುತ್ತಾರೆ. ಮದುವೆಯಾದ ಗಂಡಸು ಸತ್ತರೆ ಹೆಂಡತಿಯ ಎಡಗೈಯಿಂದ ಎಣ್ಣೆಯನ್ನು ಹಚ್ಚಿಸಿ ಶವಕ್ಕೆ ಸ್ನಾನ ಮಾಡಿಸುತ್ತಾರೆ. ನಂತರ ಡೇರೆಯ ಮುಂದೆ ಕಂಬವೊಂದಕ್ಕೆ ಆನಿಸಿ ಪದ್ಮಾಸನದಲ್ಲಿ ಕೂಡಿಸುತ್ತಾರೆ. ಕೈಯಲ್ಲಿ ವಿಭೂತಿ ಉಂಡೆಯನ್ನು, ಬಾಯಲ್ಲಿ ರುದ್ರಾಕ್ಷಿಯನ್ನು ಇಟ್ಟು ಮಗ್ಗುಲಲ್ಲಿ ದೀಪ ಹಚ್ಚಿ ಊದುಬತ್ತಿ ಹಚ್ಚುವರು.

ಈ ಜನಾಂಗದಲ್ಲಿ ಸತ್ತ ಸುದ್ದಿಯನ್ನು ಮುಖಾಮುಖಿಯಾಗಿ ಹಾಗೆಯೇ ಹೇಳುವಂತಿಲ್ಲ. ಮತ್ತೊಂದು ಕುಲದವರ ಮೂಲಕ ಹೇಳಿಸುವಂತಿಲ್ಲ. ಹಾಗೆ (ಮಾಡಿದರೆ) ದೈವಕ್ಕೆ ದಂಡ ಕಟ್ಟಬೇಕಾಗುತ್ತದೆ. ಸತ್ತ ಸುದ್ದಿಯನ್ನು ಸರಾಯಿ ಅಂಗಡಿಯಲ್ಲೊ, ಜಾತ್ರೆ-ಸಂತೆಯಲ್ಲೊ ಕರೆದೊಯ್ದು ಹೇಳಬೇಕೆಂಬ ಪದ್ದತಿ ಇದೆ. ಬುಡ್ಗಜಂಗಮರಲ್ಲಿ ಶವವನ್ನು ಹೂಳುವ ಪದ್ಧತಿ ಇದೆ. ಆ ಊರಿನ ಜಂಗಮರ ಸ್ಮಶಾನದಲ್ಲಿಯೇ ಹೂಳುತ್ತಾರೆ. ಕುಣಿಯನ್ನು ತಮ್ಮ ಜನಾಂಗದವರೇ ತೋಡಿಕೊಳ್ಳುತ್ತಾರೆ. ಶವವನ್ನು ಹಳೆ ಕೌದಿ/ಗೋಣಿ ಚೀಲದಲ್ಲಿ ಹಾಕಿ ಒಯ್ಯುತ್ತಾರೆ. ನಾಲ್ಕು ಮೂಲೆ ಹಿಡಿಯಲು ಬರುವಂತೆ ಅದನ್ನು ಹೊಲಿಯುತ್ತಾರೆ. ಇದಕ್ಕೆ “ಗಳ” ಎನ್ನುವರು. ಎಲ್ಲರೂ ಬಂದರೆಂದು ತಿಳಿದ ಮೇಲೆ ಶವಯಾತ್ರೆ ಹೊರಡುತ್ತದೆ. ಹೆಂಡತಿ ಸತ್ತಿದ್ದರೆ ಗಂಡ ಶವದ ಮುಂದೆ, ಗಂಡ ಸತ್ತಿದ್ದರೆ ಹಿರಿಯ ಮಗ ಮುಂದೆ ನಡೆಯುತ್ತಾರೆ. ವಿಧವೆ ಸತ್ತರೆ ಸಣ್ಣಮಗ ಮುಂದೆ ನಡೆಯಬೇಕು.

ಶವಯಾತ್ರೆಯಲ್ಲಿ ಕುಲಸ್ತನೊಬ್ಬ ಜಾಗಟೆ, ಗಂಟೆ ಬಾರಿಸುತ್ತ, ಶಂಖ ಊದುತ್ತಿದ್ದರೆ ಉಳಿದವರು ಹರಹರಾ ಶಿವ ಶಿವಾ ಮಹಾದೇವ ಎನ್ನುತ್ತಾ ಶವದ ಮುಂದೆ ನಡೆಯುತ್ತಾರೆ. ಸುಡಗಾಡು ಹತ್ತಿರ ಬಂದಾಗ ಶವವನ್ನು ಇಳಿಸುತ್ತಾರೆ. ಇದನ್ನು, “ದಿಂಪುಡುಕಳ್ಯಾ” ಎನ್ನುತ್ತಾರೆ. ಅಲ್ಲಿ ಗಂಡ-ಹೆಂಡತಿ, ಮಕ್ಕಳು, ಬಂಧುಗಳು ಹೆಣದ ಬಾಯಿಯಲ್ಲಿ ನೀರು ಬಿಡುತ್ತಾರೆ. ನಂತರ ಮತ್ತೆ ಶವಯಾತ್ರೆ ಆರಂಭಿಸುತ್ತಾರೆ. ಸ್ಮಶಾನ ಬಂದ ನಂತರ ಬಂಧು ಬಳಗದವರೆಲ್ಲರೂ ಕುಣಿಯ ಸುತ್ತ ಮೂರು ಸುತ್ತು ಹಾಕಿ ಕುಣಿಯಲ್ಲಿ ಅವರೆ ಹೂ, ತಪ್ಪಲು ಒಗೆಯುವರು. ನಂತರ ಉಪ್ಪು ಹಾಕುತ್ತಾರೆ. ಶವದ ಮೇಲಿನ ಬಟ್ಟೆ, ಹಾರ ತೆಗೆದು ಉತ್ತರಾಭಿಮುಖವಾಗಿ ಹೆಣವನ್ನು ಕುಣಿಯಲ್ಲಿ ಕೂಡಿಸಿ, ಹಿತ್ತಾಳೆ ತಂಬಿಗೆಯ ನೀರಲ್ಲಿ ವಿಭೂತಿ ಕಲಿಸಿ ಶವದ ಮೇಲೆ ಚಿಮುಕಿಸುವರು. ಎಲ್ಲರೂ ಅಂತಿಮ ದರ್ಶನ ಪಡೆದ ಮೇಲೆ, ಹಿರಿಯ ಮಗ ಮೊದಲು ಹಿಡಿಮಣ್ಣು ಹಾಕಿದ ಮೇಲೆ ಎಲ್ಲರೂ ಮಣ್ಣು ದಬ್ಬುವರು. ಮಣ್ಣನ್ನು ದಿಬ್ಬಮಾಡಿ ಮೇಲೆ ಒಂದು ಕಲ್ಲು ನೆಡುವರು. ಕುಲಗುರು ಮತ್ತೆ ಶಂಕ ಊದಿ, ಜಾಗಟೆ-ಗಂಟೆ ಬಾರಿಸಿ ಹರಹರಾ-ಶಿವಶಿವಾ ಮಹಾದೇವ ಎಂದು ಹರಕೆ ಕೊಡುತ್ತಾನೆ. ಆಗ ಆ ಕುಲಗುರು ಅವನ ಹಣೆಗೆ ಭಸ್ಮ ಹಚ್ಚಿ ಹರಸುತ್ತಾನೆ. ಹೀಗೆಯೇ ಎಲ್ಲರೂ ಆಶೀರ್ವಾದ ಪಡೆಯುತ್ತಾರೆ.

ಗಂಡ ಸತ್ತರೆ ವಿಧವೆ ಹೆಂಡತಿಯ ತಾಳೆಯನ್ನು ಗೋರಿಗೆ ಮುಟ್ಟಿ ಹರಿಯುತ್ತಾರೆ. ಅಲ್ಲಿಯೇ ಬಳೆ ಒಡೆಯುವರು. ಅವಳ ಮುಖ ಕಾಣದಂತೆ ಸೆರಗಿನಿಂದ ಮುಚ್ಚಿಕೊಂಡು ಡೇರೆಗೆ ಕರೆತರುತ್ತಾರೆ. ಸತ್ತವಳು ಹೆಂಡತಿಯಾಗಿದ್ದರೆ ಗಂಡನ ಉಡದಾರ ಹರಿದು ಹಾಕುತ್ತಾರೆ. ಗಂಡಸಿಗೆ ಹರೆ ಇರುವಾಗಲೇ ಹೆಂಡತಿ ಸತ್ತರೆ, ಸೆರಗಿನಲ್ಲಿ ಒಂದು ರೂಪಾಯಿ ನಾಲ್ಕಾಣೆ ಕಟ್ಟುವರು. ಇದು “ಉಡುಕಿ” ಮಾಡಿಕೊಳ್ಳಲು ಸೂಚನೆ. ನಂತರ ಎಲ್ಲರೂ ಹತ್ತಿರದ ನದಿ-ಕೆರೆ, ನಳದಲ್ಲಿ ನೀರುಮುಟ್ಟಿ ಹಿಂದಿರುಗಿ ನೋಡದೆ ಬರುತ್ತಾರೆ. ಬರುವಾಗಲೇ ಸರಾಯಿ ಅಂಗಡಿಗೆ ಹೋಗಿ ಕುಡಿದು ಬರುತ್ತಾರೆ. ಸತ್ತ ವ್ಯಕ್ತಿಯ ಹಿರಿಯ ಮಗನಿಗೂ ಸರಾಯಿ ಕುಡಿಸುತ್ತಾರೆ. ಇದನ್ನು “ಇಸಬಾಯಿ ತೊಳೆಸುವುದು” ಎನ್ನುತ್ತಾರೆ.

ದಿನಕರ್ಮ

ಮೂರನೆಯ ದಿನ ಮಾಡುವ ಕರ್ಮವೇ ದಿನಕರ್ಮ (ಮುರುಗೂಳು) ಪುಂಡಿಪಲ್ಯ, ಗುನುಗುಪಲ್ಯ ಮೊದಲಾದ ಹಸಿರುಪಲ್ಯ ಹರಿದು ತಂದು ವ್ಯಕ್ತಿ ಸತ್ತ ಸ್ಥಳದಲ್ಲಿ ಹಾಕುವರು. ಎಡಗೈಯಿಂದ ಕೋಳಿ ಪುಚ್ಚ ಕಿತ್ತಿ ಕೊಯ್ಯುವರು. ಯಾರಿಗೂ ಕಾಣದಂತೆ ಸತ್ತವರ ಸಂಬಂಧಿಕರು ಒಲೆ ಹೂಡಿ ಅಡುಗೆ ಮಾಡುತ್ತಾರೆ. ಇದರ ಜೊತೆಗೆ ಸತ್ತ ವ್ಯಕ್ತಿ ಇಷ್ಟಪಡುತ್ತಿದ್ದ ತಿಂಡಿ-ತಿನಿಸುಗಳನ್ನು ತಯಾರಿಸಿ ಬುಟ್ಟಿಯಲ್ಲಿ ಕಟ್ಟಿಕೊಂಡು ತಮ್ಮ ಕುಲಸ್ತನ ವಾದ್ಯವಾದನದೊಂದಿಗೆ ಸ್ಮಶಾನಕ್ಕೆ ಹೋಗುತ್ತಾರೆ. ಮೊದಲು ಹೆಣ ಇಳಿಸಿದ ಸ್ಥಳದಲ್ಲಿ ಸ್ವಲ್ಪ ನಿಂತು ಮತ್ತೆ ಮುಂದೆ ಹೋಗಿ ಗೋರಿಯ ಸುತ್ತು ಹಾಕಿ ಸ್ವಲ್ಪ ಕುಣಿ ತೆಗೆದು ತಂದ ಆಹಾರ ಪದಾರ್ಥವನ್ನೆಲ್ಲ ಎಡಗೈಯಿಂದ ನೀಡುವರು. ನಂತರ ಸ್ವಲ್ಪ ದೂರ ಹೋಗಿ ಕುಳಿತುಕೊಳ್ಳುತ್ತಾರೆ. ಹಕ್ಕಿಯೊಂದು ತಿಂದು ಹೋಗುವುದನ್ನು ಕಾಯುತ್ತಾರೆ. ಕಾಗೆಬಂದು ಮುಟ್ಟಿದರೆ ಒಳ್ಳೆಯದು ಅವರಿಗೆ ಸ್ವರ್ಗ ಸಿಗುತ್ತದೆ ಎಂದು ಹೇಳುತ್ತಾರೆ. ನಂತರ ವಿಧವೆಗೆ ಹೊಸ ಸೀರೆ ಉಡಿಸಿ ಡೇರೆಗೆ ಬರುತ್ತಾರೆ. ಬಿಡಾರವನ್ನು ಸಾರಿಸಿ ದೀಪ ಹಚ್ಚಿಡುತ್ತಾರೆ. ಇದೇ ಸಂದರ್ಭದಲ್ಲಿ ಹೆಣ್ಣು ಹೊತ್ತವರ ಭಾರ ಇಳಿಸುವ ಕಾರ್ಯಕ್ರಮವನ್ನು ಮಾಡಿ ಮುಗಿಸುತ್ತಾರೆ. ಅವರನ್ನು ಕರೆದು ಕರಕಿಯಿಂದ ಕೊಬ್ಬರಿ ಎಣ್ಣೆಯನ್ನು ಭುಜದ ಮೇಲಿಂದ ಕೆಳಕ್ಕೆ ಮೂರು ಸಲ ಹಚ್ಚಿದರೆ ಭಾರ ಇಳಿದಂತೆ ಅವರು ಅಲ್ಲಿಯೇ ಸ್ನಾನ ಮಾಡಿ ಊಟ ಮಾಡಿ ಹೋಗುತ್ತಾರೆ. ಐದನೇ ದಿನದ ಕಾರ್ಯವನ್ನು ಬಿಡಾರದಲ್ಲಿಯೇ ಮಾಡಿ ಎಲ್ಲರಿಗೂ ಸಸ್ಯಾಹಾರ ಊಟ ಮಾಡಿಸುತ್ತಾರೆ.

ಬುಡ್ಗಜಂಗಮರಲ್ಲಿ ಮಕ್ಕಳು, ಹರೆಯದ ಹೆಣ್ಣು, ಗಂಡು ಸತ್ತರೆ ಮಲಗಿಸಿ ಮಣ್ಣು ಕೊಡುವ ಪದ್ಧತಿ ಇದೆ. ಗರ್ಭಿಣಿ-ತೊನ್ನ ರೋಗದವರು ಸತ್ತರೆ ಕಿಚ್ಚು ಕೊಡುತ್ತಾರೆ.

ದೇವರು-ಧರ್ಮ-ಆಚರಣೆ

ಬುಡ್ಗಜಂಗಮರು ತಮ್ಮ ಸುಖಮಯ ಜೀವನಕ್ಕೆ ದೇವರು-ಧರ್ಮ-ನಂಬಿಕೊಂಡಿರುವ ಆಚರಣೆಗಳೇ ಕಾರಣ ಎಂದು ನಂಬಿದವರು ದೇವರು-ಧರ್ಮದ ಹೆಸರಿನಲ್ಲಿ ವ್ರತ, ನಿಯಮಗಳನ್ನು ಚಾಚೂ ತಪ್ಪದೇ ಆಚರಿಸಿ, ಹರಕೆಯ ರೂಪದಲ್ಲಿ ಪ್ರಾಣಿಬಲಿ ಕೊಟ್ಟು ದೇವರನ್ನು ಸಾಕ್ಷಾತ್ಕಾರಗೊಳಿಸಿಕೊಂಡು ಬಾಳಿ ಬದುಕಿದವರು.

ಈ ಜನಸಮುದಾಯ ನಂಬಿ ಆರಾಧಿಸುವ ದೇವತೆಗಳೆಂದರೆ ದುರಗಮ್ಮ, ಜಂಬಲಮ್ಮ, ಹುಲಿಗೆಮ್ಮ, ಸುಂಕಲಮ್ಮ, ಕೂಗಮ್ಮ, ಕೆಂಚಮ್ಮ ಮುಂತಾದ ಶಕ್ತಿ ದೇವತೆಗಳು, ಎರಡು/ಮೂರು ವರ್ಷಕ್ಕೊಮ್ಮೆ ಪ್ರಾಣಿ ಬಲಿ ನೀಡುವುದರಿಂದ ತಮ್ಮ ಸಂಕಷ್ಟಗಳು ದೂರಾದವೆಂದು ಹೇಳುತ್ತಾರೆ. ನಿಸರ್ಗ ಆರಾಧನೆಯನ್ನೇ ಹೆಚ್ಚು ನೆಚ್ಚಿದವರು. “ಜಂಬಲಮ್ಮ” ಎಂದು ಕರೆಯುವ “ಬನ್ನಿ” ಗಿಡವನ್ನು ತಮ್ಮ ಕುಲದೇವತೆ ಎನ್ನುವರು. ಶ್ರೀಶೈಲ ಮಲ್ಲಿಕಾರ್ಜುನ ಇವರ ಕುಲಗುರು, ಧರ್ಮದ ಗುರು, ಮನೆದೇವತೆ. ಕೆಲವರು ಸೋಮವಾರ-ಮಲ್ಲಿಕಾರ್ಜುನ ವಾರವೆಂದು ಕೆಲವು ಹೆಂಗಸರು-ಗಂಡಸರು ಉಪವಾಸ ಮಾಡುತ್ತಾರೆ. ತಮ್ಮ ಜನಾಂಗದಲ್ಲಿ ಮದುವೆ, ಮರಣ, ನ್ಯಾಯನಿರ್ಣಯ ಮುಂತಾದ ಸಂದರ್ಭದಲ್ಲೆಲ್ಲ ಬಂದ ಕಾಣಿಕೆ, ದಂಡದ ಹಣದ ಸ್ವಲ್ಪ ಭಾಗವನ್ನು ಈಗಲೂ ಪಂಚರಲ್ಲಿ ಯಾರಾದರೊಬ್ಬರು ಶ್ರೀಶೈಲಪೀಠಕ್ಕೆ ಕೊಟ್ಟು ಬರುತ್ತಾರೆ. ಬುಡ್ಗಜಂಗಮರು ಅಲೆಮಾರಿಗಳಾಗಿರುವುದರಿಂದ ಆಯಾ ಪ್ರದೇಶದ ಪ್ರಭಾವೀ ದೇವತೆಗಳನ್ನು ಆರಾಧಿಸುವದು ಕಂಡುಬರುತ್ತದೆ. ಅಚನೂರ ಹನುಮಪ್ಪ, ಧರ್ಮಸ್ಥಳದ ಮಂಜುನಾಥ, ಮುನಿರಾಬಾದ ಹುಲಿಗೆಮ್ಮ, ಬಳ್ಳಾರಿ ದುರಗಮ್ಮ, ಬಗಂದುರಿ, ಸವದತ್ತಿ ಯಲ್ಲಮ್ಮ, ಕಲಘಟಗಿ-ತಾಳಿಕೋಟಿ ದ್ಯಾಮವ್ವ ಹಾಗೂ ಮುಸ್ಲಿಂ ಪರಂಪರೆಯ ಯಂಕಂಚಿಯ ದಾವಲಮಲ್ಲಿಕ್‌, ಗೊರವಡಿಯ ಇಸ್ಮಾಯಿಲ್‌ಖಾದರಿ, ಗುಲಬುರ್ಗಾದ ಬಂದೇನವಾದ ದರ್ಗಾ, ಬೀಳಗಿ ದರ್ಗಾಕ್ಕೂ ಭಕ್ತಿಯಿಂದ ನಡೆದುಕೊಳ್ಳುತ್ತಾರೆ. ತಾವು ನಂಬಿದ ದೇವರುಗಳ ಭಾವಚಿತ್ರ ಮೂರ್ತಿಗಳನ್ನು ಡೇರೆಯಲ್ಲಿ ಹಾಕಿ ಪ್ರತಿ ವಾರ ಪೂಜಿಸುತ್ತಾರೆ. ಗಂಡು ದೇವತೆಗಳಿಗೆ ವಿಭೂತಿ-ಕುಂಕುಮ ಹಚ್ಚಿದರೆ, ಹೆಣ್ಣುದೇವತೆಗಳಿಗೆ ಭಂಡಾರ ಹಚ್ಚುತ್ತಾರೆ. ಮನೆಯ ಮಂದಿರೆಯಲ್ಲರೂ ಬೆಳಿಗ್ಗೆ ಹಣೆಗೆ ವಿಭೂತಿ ಧರಿಸುವುದನ್ನು ನೋಡಿದರೆ, ಇವರ ಮೇಲೆ ವೀರಶೈವ-ಲಿಂಗಾಯತ ಪರಿಣಾಮ ಹೆಚ್ಚು ಇದ್ದಂತೆ ಕಂಡು ಬರುತ್ತದೆ.

ಬಲಿಸಂಪ್ರದಾಯ ಆಚರಣೆಗೆ ಸಂಬಂಧಿಸಿದಂತೆ ಬುಡ್ಗಜಂಗಮರು ತಾವು ನೆಲೆ-ನಿಂತ ಭಾಗದಲ್ಲಿಯ ದೇವತೆಯ ಜಾತ್ರೆಯಲ್ಲಿ ಪಾಲ್ಗೊಳ್ಳುತ್ತಾರೆ. ಉದಾಹರಣೆಗಾಗಿ ಸಂಗನಾಳ ದುರಗಮ್ಮ, ಕುದುರೆ ಹುಸೇನಟಾಕಾ ಪೋತಿ, ಗದುಗಿನ ದಂಡಿನ ದುರಗಮ್ಮನಂತಹ-ಜಾತ್ರೆಗಳಿಗೆ ಹೋಗುತ್ತಾರೆ. ಉಳಿದವರಂತೆ ತಾವು ದೇವಿಗೆ ಉಡಿ ತುಂಬಿಸಿ, ಕಾಯಿ ಕರ್ಪೂರ ಕೊಟ್ಟು, ಕುಂಕುಮ ಭಂಡಾರ ಪಡೆಯುತ್ತಾರೆ. ನಂತರ ತಮ್ಮ ಡೇರಿಯಲ್ಲಿ ಕರಿಕಂಬಳಿಯೊಂದನ್ನು ಹಾಸಿ ಅದು ತಾಯಿಯ ಗದ್ದುಗೆಯೆಂದು, ಅಕ್ಕಿ, ಅಡಿಕೆ, ಅರಿಷಿಣ, ಕೊಂಬು, ಎಲಿ, ಹಸಿರು ಜಂಪರಖಣ, ಹಂಗನೂಲ, ಹೂ, ಕುಂಕುಮ, ಭಂಡಾರವನ್ನಿಟ್ಟು ಅಲ್ಲಿ ದೇವಿಗೆ ಉಡಿ ತುಂಬವರು. ಸುತ್ತಲೂ ಬೇವಿನತಪ್ಪಲು ಟೊಂಗೆ ಚುಚ್ಚಿ ನಡುವೆ “ಪೋತರಾಜ”ನನ್ನು ನಿಲ್ಲಿಸುವರು. ಹರಕೆಗೆ ತಂದ ಕುರಿ/ಕೋಳಿಯನ್ನು ಬಲಿ ಕೊಡುವರು. ಕುರಿ/ಕೋಳಿಯ ರುಂಡ ಕತ್ತರಿಸಿ ಬಲಗಾಲನ್ನು ಕೊಯ್ದು ಬಾಯಲ್ಲಿಟ್ಟು ದೇವಿಯ ಮುಂದಿಡುವರು. ಹರಿಯುವ ರಕ್ತವನ್ನು ದೇವಿಯ ಸುತ್ತ ಸಿಂಪಡಿಸುವರು. ನಂತರ ಬಲಿಕೊಟ್ಟ ಪ್ರಾಣಿಯ ಮಾಂಸವನ್ನು ಒಂದೆಡೆ ಅಡುಗೆ ಮಾಡಿ, ಬಂಧು-ಬಳಗ ಎಲ್ಲರೂ ಸೇರಿ ದೇವಿಗೆ ಎಡೆ ಹಿಡಿದು ಊಟ ಮಾಡುವರು. ಮರುದಿನ ತಲೆ, ಕಾಲಿನ ಅಡಿಗೆಮಾಡಿ ಊಟ ಮಾಡುವರು. ಇದನ್ನು “ಬ್ಯಾಟಿ ಮಾಡುವುದು” ಎಂದು ಕರೆಯುವರು. ಮೋಹರಂ ಹಾಗೂ ಉರುಸುಗಳಿಗೂ ಬುಡ್ಗಜಂಗಮರು ಹೋಗಿ ಪ್ರಾಣಿಬಲಿ ಕೊಟ್ಟು ಹರಕೆ ತೀರಿಸಿ ಬರುತ್ತಾರೆ. ಕುದುರೆಮೋತಿಯ “ಹುಸೇನಟಾಕಾ” ಯಂಕಂಚಿಯ “ದಾವಲಮಲ್ಲಿಕ್‌” ರಿಗೆ ಹೆಚ್ಚು ನಡೆದುಕೊಳ್ಳುತ್ತಾರೆ. ಭಿಕ್ಷೆಬೇಡಿ ಬದುಕುವವರಾದರೂ ಧಾರ್ಮಿಕ ಆಚರಣೆ, ಹಬ್ಬ-ಹರಿದಿನಗಳನ್ನು ಮಾತ್ರ ಸಂಭ್ರಮದಿಂದಲೇ ಮಾಡುವರು. ಇವೆಲ್ಲ ಎರಡು/ಮೂರು ವರ್ಷದ ಜಾತ್ರೆಗಳಾಗಿರುವುದರಿಂದ ಸಂಪಾದನೆಗೆ ಅನುಕೂಲವಾಗಿರುತ್ತದೆ.

ಬುಡ್ಗಜಂಗಮರಿಗೆ ತಮ್ಮದೇ ಆದ ಪ್ರತ್ಯೇಕ ದೇವರು-ಆಚರಣೆಗಳಿಲ್ಲ. ಎಲ್ಲದರಲ್ಲೂ ಹಿಂದೂ-ಮುಸ್ಲಿಂ ಧಾರ್ಮಿಕ ಪರಂಪರೆಯನ್ನೇ ಅನುಸರಿಸಿದ್ದಾರೆ. ಈ ಧಾರ್ಮಿಕ ಆಚರಣೆಗಳು ಅಲೆಮಾರಿ ಜನಪದ ಸಮುದಾಯಗಳು ಸಾಂಘಿಕವಾಗಿ ಬದುಕುವಂತೆ ಮಾಡಿವೆ. ಆಧುನಿಕ ಯುಗದಲ್ಲಿ ಇವರ ಧಾರ್ಮಿಕ ಆಚರಣೆ, ಸಂಪ್ರದಾಯಗಳು ಅಸಂಬದ್ಧ ಎನಿಸಿದರೂ ಅವೇ ಅವರ ಪಾಲಿಗೆ, ಬದುಕಿಗೆ ಮಿಣುಕು ದೀಪಗಳಾಗಿವೆ.

ಪ್ರತಿಯೊಬ್ಬರ ಟೆಂಟಿನಲ್ಲಿ ತಾವು ಆರಾಧಿಸುವ ದೇವಾನುದೇವತೆಗಳ ಭಾವಚಿತ್ರಗಳನ್ನು ಜೋತು ಹಾಕಿರುತ್ತಾರೆ. ಅವನ್ನೇ ನಂಬಿ ಬದುಕುತ್ತಿದ್ದಾರೆ.

ನ್ಯಾಯ ಪಂಚಾಯತಿ

ಬುಡ್ಗಜಂಗಮರು ಕಡು ಬಡವರು ಮತ್ತು ಅಲೆಮಾರಿ ಜನಾಂಗವಾಗಿರುವುದರಿಂದ ಆದಾಯ ತುಂಬಾನೆ ಕಡಿಮೆ. ಹಳ್ಳಿ ಹಳ್ಳಿಗೆ ತಿರುಗಿ ಬದುಕು ಸಾಗಿಸುತ್ತಿರುವ ಇವರಲ್ಲಿ ಕುಟುಂಬದ ಒಳ-ಹೊರಗೆ ಒಂದಿಲ್ಲ ಒಂದು ಜಗಳ ನಡದೇ ನಡೆಯುತ್ತವೆ. ಆದರೆ ಇದುವರೆಗೆ ಈ ಜನಸಮುದಾಯಗಳಲ್ಲಿ ಕೊಲೆ, ಸುಲಿಗೆ ನಡೆದಿಲ್ಲ. ಕೋರ್ಟು ಕಟ್ಟೆ ಹತ್ತಿದ ನಿದರ್ಶನಗಳು ದೊರೆತಿಲ್ಲ. ಇವರ ಕುಲಪಂಚಾಯತಿಯ ನ್ಯಾಯಪೀಠದಲ್ಲಿ ನಡೆಯುವ ನ್ಯಾಯ ನಿರ್ಣಯಗಳೇ ಅಂತಿಮ. ಅದೇ ಅವರ ಪಾಲಿನ ಹೈಕೋರ್ಟು-ಸುಪ್ರಿಮ್‌ಕೋರ್ಟ್‌ಆಗಿದೆ. ಇವರ ನ್ಯಾಯಪೀಠದಲ್ಲಿ ಜನಾಂಗದ ಹಿರಿಯರು ಪಂಚರಾಗಿರುತ್ತಾರೆ. ಕುಲದೈವದ ಹಿರಿಯರು ತಾವು ನೆಲೆಸಿರುವ ಸ್ಥಳದಲ್ಲಿಯೇ ಎಲ್ಲರನ್ನು ಕರೆದು ಬಯಲ ಪ್ರದೇಶದಲ್ಲಿ ದುಂಡಾಗಿ ಕುಳಿತು ನ್ಯಾಯದ ಕಟ್ಟೆ ನಡೆಯಿಸುತ್ತಾರೆ.

ಬುಡ್ಗಜಂಗಮ ಜನಾಂಗಗಳು ನ್ಯಾಯದ ಕಟ್ಟೆ ಮಾಡುವ ಕೆಲವು ಮುಖ್ಯ ಕೇಂದ್ರಗಳಿವೆ. ಸಂಕೋನಟ್ಟಿ (ಅಥಣಿ ತಾ||) ಬಿಜಾಪೂರ, ಸೋಲ್ಲಾಪೂರ, ಸಿಕಂದರ ಟಾಕಳಿಕೆ, ಜೇವರ್ಗಿ, ಕುದರಿಮೋತಿ, (ಯಲಬುರ್ಗಾ ತಾ||), ಯಡ್ರಾಮಿ, ಗುಲಬರ್ಗಾ, ಬಳ್ಳಾರಿ, ಹೊಸಪೇಟೆ, ಬೀದರ, ರಾಯಚೂರ, ನಿಡಗುಂದಿ ಮೊದಲಾದ ಪ್ರಮುಖ ಸ್ಥಳಗಳಲ್ಲಿ ನ್ಯಾಯ ಪಂಚಾಯತಿ ನಡೆಯಿಸುತ್ತಾರೆ. ಈ ಯಾವುದೇ ಒಂದು ಸ್ಥಳದಲ್ಲಿ ಎಲ್ಲಾ ಊರುಗಳಿಂದ ಬಂದು ಸೇರುತ್ತಾರೆ. ಉದಾ:  ಕುದರಿಮೋತಿಯಲ್ಲಿ ಎರಡು ವರ್ಷಕ್ಕೊಮ್ಮೆ ೧೦ ಸಾವಿರಕ್ಕೂ ಹೆಚ್ಚು ಜನ ಸೇರುತ್ತಾರೆ. ನ್ಯಾಯ ಪಂಚಾಯತಿಗೆ ೧೦೦ಕ್ಕೂ ಹೆಚ್ಚು ಜನರು ಇಲ್ಲಿ ಕೂಡುತ್ತಾರೆ. ನ್ಯಾಯ ನಿರ್ಣಯಿಸುವ ಹಿರೀಕರು ಮಾತ್ರ ಇಡೀ ಬುಡ್ಗಜಂಗಮ ಜನಾಂಗಕ್ಕೆ ಬೇಕಾದ ಒಳ್ಳೆಯ ವ್ಯಕ್ತಿಗಳಾಗಿರುತ್ತಾರೆ. ಜಾಣ ಮಾತುಗಾರರೂ ಆಗಿರುತ್ತಾರೆ. ನ್ಯಾಯ ನಡೆಯುವ ಮೊದಲು ಎರಡೂ ಪಾರ್ಟಿಯ ೫೦೦ ರಿಂದ ೫೦೦೦ ರೂಪಾಯಿಗಳೆಂದು ನಿರ್ಧರಿಸುತ್ತಾರೆ. ಕಡ್ಡಿ ಕಟ್ಟಿಸಿದ ಹಣವನ್ನು ವಾಲಿಕಾರನಾದ “ಯಡವಲಿ” ಕುಲದವನಲ್ಲಿ ಯಾರಾದವರೂ ಒಬ್ಬನ ಕೈಯಲ್ಲಿ ಹಣ ಕೊಡುವರು. “ಯಡವಲಿ”ಗೆ” “ಮಹಾಂತಗಾಡ” ಎಂದೂ ಕರೆಯುತ್ತಾರೆ. ನ್ಯಾಯ ಯಾರ ಕಡೆ ಆಗುತ್ತದೆಯೋ ಅವರಿಗೆ ಪಡೆದ “ಕಡ್ಡಿ” ಹಣವನ್ನು ಮರಳಿಸುತ್ತಾರೆ. ನ್ಯಾಯ ನಿರ್ಣಯದ ಹಂಡದ ಹಣವನ್ನು ಕುಲದೈವದ ಹಿರಿಯರಿಗೆ “ಗಡ್ಡದ ಚಾಜ” ಎಂದು ೫ ರಿಂದ ೧೦ ರೂ.ಗಳನ್ನು ಹಂಚುವರು. ಬುಡ್ಗಜಂಗಮ ಜನರು ಮರಳಿ ತಮ್ಮ ಊರಿಗೆ ಹೋದ ನಂತರ ಅಲ್ಲಿಯ “ಗಡ್ಡ (ಡ್ಡಿ)” ಜನರಿಗೆ ಹಂಚಬೇಕು. ಹಂಚದಿದ್ದರೆ ಅವರಿಗೆ ಮತ್ತೆ ದಂಡ ಹಾಕುವರು.

ನ್ಯಾಯ ಹೀಗೆಯೇ ಇರಬೇಕೆಂಬುದಕ್ಕೆ ಇವರಲ್ಲಿ ಯಾವುದೇ ಗ್ರಂಥ ಇರುವುದಿಲ್ಲ. ಇವರದೊಂದು ಅಲಿಖಿತ ಸಂವಿಧಾನ. ನ್ಯಾಯ-ಅನ್ಯಾಯವನ್ನು ಸರಿಯಾಗಿ ನಿರ್ಣಯಿಸುವರು. ಇವರಲ್ಲಿ ಬಾಲ್ಯ ವಿವಾಹಗಳೇ ಹೆಚ್ಚು ಇರುವುದರಿಂದ ಏನಾದರೂ ಸಮಸ್ಯೆ ಬಂದಲ್ಲಿ ಸರಿ ಪಡಿಸಿ ಎರಡೂ ಕುಟುಂಬದವರಿಗೂ ದಂಪತಿಗಳಿಗೂ ಬುದ್ದಿ ಹೇಳುತ್ತಾರೆ. ಆ ಹುಡುಗಿ ಮತ್ತೆ ಬಂದಾಗ ಯಾರಾದರೂ ಕರೆದುಕೊಂಡರೆ ಅವರಿಗೆ ದೈವದವರು ದಂಡ ಹಾಕುತ್ತಾರೆ. ತಂದೆ ನ್ಯಾಯದಲ್ಲಿ ತಪ್ಪಾಯಿತೆಂದು ಶರಣಾಗಬೇಕು. ಒಂದು ವೇಳೆ ತಪ್ಪು ಗಂಡಿನವರ ಕಡೆಯದಾಗಿದ್ದರೆ ದಂಡ ಅವರಿಗೆ ವಿಧಿಸುತ್ತಾರೆ. ನಂತರ ಆ ಹುಡುಗ-ಹುಡುಗಿಗೆ ಮದುವೆಯ ಸಿದ್ಧತೆ ಮಾಡುವರು. ಒಂದು ವೇಳೆ ಮದುವೆಯಾದ ಹೆಣ್ಣು ಬೇರೆ ಪುರುಷನ ಜೊತೆ ಅನೈತಿಕ ಸಂಬಂಧ ಇರಿಸಿಕೊಂಡದ್ದು ಕಂಡು ಬಂದರೆ ಇಬ್ಬರಿಗೂ ಛೀಮಾರಿ ಹಾಕಿ ಆ ವ್ಯಕ್ತಿಗೆ “ಕಡ್ಡಿ” ಹಾಕಿ ಹಣ ಸಮಾಜಕ್ಕೆ ಪಡೆಯುತ್ತಾರೆ. ಅವನೊಂದಿಗೆ ಬಾಳಲು ಆ ಹೆಣ್ಣನ್ನು ಬಿಟ್ಟು ಬಿಡುತ್ತಾರೆ. ಮಕ್ಕಳಿದ್ದರೆ ಮೊದಲಿನ ಗಂಡನ ಪಾಲಿಗೆ ಒಪ್ಪಿಸುತ್ತಾರೆ. ಇನ್ನು ಬೇರೆ ಜಾತಿಯ ಪುರುಷನೊಂದಿಗೆ ಸಂಬಂಧ ಇರಿಸಿಕೊಂಡಿದ್ದು ಕಂಡು ಬಂದರೆ “ಬುಡ್ಗಜಂಗಮ” ಸಮಾಜದಿಂದಲೇ ಬಹಿಷ್ಕಾರ ಹಾಕುತ್ತಾರೆ. ಆ ಹೆಣ್ಣಿನ ತಂದೆ-ತಾಯಿಯಿಂದ ಸಮಾಜದವರು ದಂಡ ವಸೂಲಿ ಮಾಡುತ್ತಾರೆ. ಒಂದು ವೇಳೆ ಬಹಳ ದಿನಗಳ ತರುವಾಯ ಹೆಣ್ಣು ಮಗಳು ಮರಳಿ ಬಂದರೆ ಎರಡು ಪಟ್ಟು ದಂಡ ಹಾಕಿ ತಪ್ಪಾಯಿತೆಂದು ಹೇಳಿಸಿ, ಕುಲದಲ್ಲಿ ಕರೆದು ಕೊಳ್ಳುತ್ತಾರೆ. ಗಂಡು ಏನಾದರೂ ಬುಡ್ಗಜಂಗಮ ಕುಲ ಬಿಟ್ಟು ಬೇರೆ ಹೆಣ್ಣನ್ನು ವರಿಸಿದರೆ ಅವನನ್ನು ಕುಲದಿಂದಲೇ ಬಹಿಷ್ಕಾರ ಹಾಕುತ್ತಾರೆ. ಪಂಚಾಯಿತಿಯಲ್ಲಿ ದಂಡ ಹಾಕಿ ಆ ಹೆಣ್ಣಿನ ಸಂಪರ್ಕ ಸಂಪೂರ್ಣ ಬಿಡುವಂತೆ ಎಚ್ಚರಿಸಿ ಕುಲದಲ್ಲಿ ಕರೆದುಕೊಳ್ಳುತ್ತಾರೆ. ಮದುವೆಯಾದ ಗಂಡು-ಹೆಣ್ಣಿನಲ್ಲಿ ಕೂಡಿ ಬಾಳದಷ್ಟು ಬಿರುಕು ಬಂದಾಗ ವಿಚ್ಛೇದನ ಪಡೆಯುತ್ತಾರೆ. ಗಂಡ ಕಟ್ಟಿದ ತಾಳಿ, ನತ್ತು ಬಿಚ್ಚಿ ಕೊಡಬೇಕಾಗುತ್ತದೆ. ಗಂಡು ಹೆಣ್ಣನ್ನು ಬಿಡಬೇಕಾದರೆ ಹೆಣ್ಣಿನ ಮೇಲಿನ ಅಪರಾಧವನ್ನು ನ್ಯಾಯ ಪಂಚಾಯಿತಿಯಲ್ಲಿ ತಿಳಿಸಬೇಕು. ಅದು ಸರಿ ಎನಿಸಿದರೆ ಗಂಡಿನ ಕಡೆಯಿಂದ ೨೫ ಪೈಸೆ ದಕ್ಷಿಣೆ ಇಟ್ಟುಕೊಂಡು ಆ ಹೆಣ್ಣಿನ ತಾಳಿ, ನತ್ತು ಪಡೆದು ಆಕೆಯನ್ನು ಬಿಟ್ಟುಬಿಡುತ್ತಾರೆ.

ಈ ರೀತಿಯಾಗಿರುವ ಬುಡ್ಗಜಂಗಮರ ನ್ಯಾಯ ಪಂಚಾಯಿತಿ ವಿಧಾನವನ್ನು ನೋಡಿದರೆ ಇಂದಿನ ಜಾಗತೀಕರಣ, ಕಂಪ್ಯೂಟರ್ ಯುಗಕ್ಕೆ ಹೋಲಿಸಿ ನೋಡಿದರೆ ಕೆಲವು ಬದಲಾವಣೆಗಳು ಅಗತ್ಯ ಎಂದೆನಿಸುತ್ತದೆ. ಕುಲದ ಒಳಗೆ-ಹೊರಗೆ ಹುಡುಗ-ಹುಡುಗಿ ಪ್ರೀತಿಸಿದರೆ ಒಪ್ಪಿ ಮದುವೆ ಮಾಡುವ, ಒಲ್ಲದ ಮದುವೆಗಳನ್ನು ಬಿಟ್ಟು ಬಿಡುವ, ವಿವಾಹ ವಿಚ್ಛೇದನ ಸರಳಗೊಳಿಸುವ, ದಂಡದಲ್ಲಿ ವಿನಾಯಿತಿ ಕೊಡುವ ಅಗತ್ಯ ಇದೆ. ಸಿಂದಿ-ಸೆರೆ ಸಂಸ್ಕೃತಿಗೆ ವಿದಾಯ ಹೇಳಬೇಕು. ಈ ನಿಟ್ಟಿನಲ್ಲಿ ಸಮಾಜದ ಮುಖಂಡರು ಚಿಂತಿಸಬೇಕಿದೆ. ನ್ಯಾಯಪೀಠಗಳು ಆಯಾ ಜನಾಂಗ ನೆಲೆ ನಿಂತಲ್ಲಿಯೇ ನಡೆಯುವಂತಾಗಬೇಕು. ಸ್ತ್ರೀಯ ವಿಷಯದಲ್ಲಿ ಕರುಣೆ, ಕನಿಕರ ತೋರಿ ನ್ಯಾಯ ನೀಡುವಂತಾಗಬೇಕು.

ಸಾಮಾಜಿಕ ವ್ಯವಹಾರಗಳಲ್ಲಿ ಪುರುಷರೇ ಪ್ರಮುಖ ಪಾತ್ರವಹಿಸುತ್ತಾರೆ. ಹೆಂಗಸರು ಮತ್ತು ಮಕ್ಕಳಿಗೆ ಭಾಗವಹಿಸಲು ಅವಕಾಶವನ್ನು ಬುಡ್ಗಜಂಗಮ ಸಮಾಜ ನೀಡಿರುವುದಿಲ್ಲ. ಕುಲಸಭೆ-ನ್ಯಾಯ ನಿರ್ಣಯಗಳು ನಡೆದ ಸಂದರ್ಭದಲ್ಲಿ ಇತರೆ ಯಾವುದೇ ವಿಚಾರವಿನಿಮಯಗಳ ಸಮಯದಲ್ಲಿ ಅದನ್ನು ದೂರದಲ್ಲಿ ನಿಂತು ಮಹಿಳೆಯರು ಮತ್ತು ಮಕ್ಕಳು ನೋಡಬಹುದೇ ವಿನಾ, ಭಾಗವಹಿಸಿ ಮಾತನಾಡುವುದಾಗಲಿ, ಅದರಲ್ಲೂ ಹೆಣ್ಣುಮಕ್ಕಳು ಸಾಕ್ಷಿ ಹೇಳುವುದಕ್ಕೆ ಅವಕಾಶ ಇಲ್ಲ. ಸಮಾಜದ ಮುಖಂಡಳಾಗಿ ಯಾವುದೇ ಸಭೆ-ಸಮಾರಂಭಗಳಲ್ಲಿ ಮಹಿಳೆ ಭಾಗವಹಿಸಬಾರೆಂಬ ನಿರ್ಬಂಧವು ಬುಡ್ಗಜಂಗಮ ಸಮಾಜದಲ್ಲಿದೆ.

ಬುಡ್ಗಜಂಗಮ ಸಮಾಜವು ಮಹಿಳೆಯನ್ನು ಗೌರವಿಸುವ ರೀತಿ ಸರಿಯಿಲ್ಲ. ಇದು ಬದಲಾಗಬೇಕಾದರೆ, ಆಧುನಿಕ ಪರಿಸರಕ್ಕೆ ಬುಡ್ಗಜಂಗಮ ಕುಟುಂಬ ಒಗ್ಗಿಕೊಂಡಲ್ಲಿ ತಂತಾನೆ ಸಮಾಜದ ನಿಯಮಾವಳಿಗಳು ಸಡಿಲಿಕೆಗೊಳ್ಳುತ್ತವೆ. ಇದರಿಂದ ಮಹಿಳೆಯ ಬದುಕು ಬದಲಾಗಬಹುದು.[1]      ಶ್ರೀ ಪ್ರತಾಪೆ ಬಹುರೂಪಿ. ಬೆಳಗಾವಿ

[2]      ಸುಭದ್ರಮ್ಮ-ಬುಡ್ಗಜಂಗಮ-ಸಾ||ಗಬ್ಬೂರ

[3]      ಹೀಗೆ ದಾಟಿದರೆ ಮಗ-ಸೊಸೆಯ ಜೀವನದಲ್ಲಿ ಕೇಡಾಗುತ್ತದೆ ಎಂಬ ನಂಬಿಕೆ ಇದೆ ಎನ್ನುತ್ತಾರೆ. ಶ್ರೀಮತಿ: ಮಲ್ಲಮ್ಮ ಬುಡ್ಗಜಂಗಮ-ಗಬ್ಬೂರ.

[4]      ಊರಾಡುವುದು=ಎಂದರೆ ವೇಷ. ರೂಪ ಧರಿಸಿ ಕಲಾ ಪ್ರದರ್ಶನಕ್ಕೆ ಹೋಗುವುದು ಎಂದರ್ಥ.

[5]        ಹಾಲುಗಂಬ-ಹಾಲುಬರುವ ಗಿಡ ಅಂದರೆ, ಬಸರಿ, ಅತ್ತಿ ಗಿಡದ ಕಂಬವನ್ನು ಗಿಂಡಿ ಹಾಲು ಹಾಕಿ ನೆಡುವುದೇ ಹಾಲುಗಂಬ ಹಾಲು ಉಕ್ಕಿದಂತೆ ಅವರ ಬದುಕು ಸಮೃದ್ಧಗೊಳ್ಳಲೆಂಬ ನಂಬಿಕೆ.

[6]        ಈ ತೆರವು ೧೧೧ ರೂಪಾಯಿಯಿಂದ ೨೧೧, ೫೧೧ ಅಥವಾ ೫೨೫ ಆಗಿದ್ದು, ಚಾಜಕ್ಕೆ ಹೋಗುವಾಗ ಮೇಲಿನ ಹಣ ಮಾತ್ರ ಒಯ್ಯುತ್ತಾರೆ. ಅಯ್ಯೋ ೧೧ ರೂಪಾಯಿನಾ ಎಂದು ಹಾಸ್ಯ ಮಾಡುತ್ತಾರೆ. ನಂತರ ಉಳಿದದ್ದು ಒಪ್ಪಿಸುತ್ತಾರೆ.