ಬೇಡರ ವಿಧವೆ ಮಹಿಳೆ:

ಬೇಡರಲ್ಲಿ ಗಂಡ ಸತ್ತ ಮಹಿಳೆ ವಿಧವೆಯಾಗಿಯೇ ಇರುತ್ತಾಳೆ. ಬೇಡರು ಬಹುತೇಕ ಕೃಷಿಗೆ ಅವಲಂಬಿತರಾಗಿದ್ದಾರೆ. ಕೆಲವು ಬೇಡರು ಮಾತ್ರ ಬೇರೆ ಬೇರೆ ವ್ಯಾಪಾರ, ವಾಣಿಜ್ಯ ವ್ಯವಹಾರಗಳಲ್ಲಿ ತೊಡಗಿದ್ದಾರೆ. ಬೇಡರಲ್ಲಿ ವಿಧವೆ ಮಹಿಳೆಯನ್ನು ಒಳ್ಳೆಯ ಕೆಲಸ, ಕಾರ್ಯಗಳಿಗೆ ಬಳಸಿಕೊಳ್ಳುವುದಿಲ್ಲ. ಮದುವೆ ಆಚರಣೆ, ಹಬ್ಬ-ಹರಿದಿನ, ಶುಭಕಾರ್ಯಗಳನ್ನು ಮಾಡುವಾಗ ವಿಧವೆ ಹೆಣ್ಣು ಭಾಗವಹಿಸಬಹುದು. ಆದರೆ ಯಾವುದೇ ಮುತ್ತೈದೆಯರು ಆಚರಿಸುವಂತಹ ಕ್ರಿಯೆಗಳಲ್ಲಿ ಸೇರುವ ಹಾಗಿಲ್ಲ. ದೂರದಲ್ಲಿ ಕುಳಿತು ಅವರು ಮಾಡುವ ಆಚರಣೆಯನ್ನು ನೋಡುವ ಸ್ವಾತಂತ್ರ್ಯ ಪಡೆದಿದ್ದಾಳೆ. ಅನುಭವವಿರುವ ವಯಸ್ಸಾದ ವಿಧವೆಯರು ಕೆಲವು ಆಚರಣೆಗಳ ಬಗ್ಗೆ ಮಾರ್ಗದರ್ಶನ ನೀಡಲು ಸ್ವಾತಂತ್ರ್ಯವಿದೆ. ವಿಧವೆ ಹೆಣ್ಣು ಎಲ್ಲರೂ ವಾಸಮಾಡುವ ಊರಿನಲ್ಲಿಯೇ ತನ್ನ ಪೋಷಕವರ್ಗದ ಜೊತೆಯಲ್ಲಿಯೇ ವಾಸವಾಗಿರುತ್ತಾಳೆ. ಊರಿನಲ್ಲಿ ಯಾರಾದರೂ ಶುಭಕಾರ್ಯಗಳಿಗೆ ಊರಿಂದ ಊರಿಗೆ ಹೋಗುವಾಗ ಅವರ ಎದುರಿಗೆ ಹೋಗಬಾರದು. ಒಂದು ವೇಳೆ ಆ ವಿಧವೆ ಎದುರಿಗೆ ಬಂದರೆ ಅಪಶಕುನ ಅಂತ ತಿಳಿದು ವಾಪಸು ಮನೆಗೆ ಹೋಗಿ ಸ್ವಲ್ಪ ಹೊತ್ತು ಆದ ಮೇಲೆ ಪುನಃ ಬರುತ್ತಾರೆ. ಇಂತಹ ಸಂದರ್ಭದಲ್ಲಿ ವಿಧವೆಯಾದ ಹೆಂಗಸರು ಸಾಕಷ್ಟು ಮಾನಸಿಕ ಹಿಂಸೆ ಅನುಭವಿಸುತ್ತಾರೆ.

ಚಿಕ್ಕ ವಯಸ್ಸಿನ ವಿಧವೆಯರು, ಮಧ್ಯವಯಸ್ಸಿನ ವಿಧವೆಯರು, ಹಿರಿಯ ವಯಸ್ಸಿನ ವಿಧವೆಯರು ಅಂತ ವಿಧವೆಯರಲ್ಲಿ ಮೂರು ಭಾಗ ಮಾಡಬಹುದು. ಇವರೆಲ್ಲ ಏನೇನೋ ಕಾರಣದಿಂದ ವಿಧವೆಯರಾಗಿರುತ್ತಾರೆ. ಅಂದರೆ ಗಂಡನ ಆಕಸ್ಮಿಕ ಸಾವು, ಗಂಡ ಕಾಯಿಲೆಯಿಂದ ಮರಣ ಹೊಂದಿರುವುದು, ವಯಸ್ಸಾಗಿ ಮರಣ ಹೊಂದಿರುವುದು, ಹೀಗೆ ಬೇರೆ ಬೇರೆ ಕಾರಣಗಳಿಂದ ಗಂಡಂದಿರು ಮರಣ ಹೊಂದಿದ ಮೇಲೆ ಅವರ ಹೆಂಡತಿಯರು ವಿಧವೆಯರಾಗುತ್ತಾರೆ. ಮ್ಯಾಸಬೇಡ ಮತ್ತು ಊರಬೇಡರಲ್ಲಿ ವಿಧವೆಗೆ ಪುನರ್ ವಿವಾಹ ವ್ಯವಸ್ಥೆ ಇಲ್ಲ. ಆದರೆ ಪರಿವಾರದವರಲ್ಲಿ ವಿಧುರ ಮತ್ತು ವಿಧವೆಯರು ಸೇರಿಕೊಂಡು ಮದುವೆಯಾಗಿರುವ ಕೆಲವು ಘಟನೆಗಳು ಕಂಡುಬರುತ್ತವೆ. ನಂಜನಗೂಡಿನ ಸಾವಿತ್ರಮ್ಮ ಹುಣಸೂರಿನ ಲಕ್ಷ್ಮಣ ನಾಯಕ ವಿಧವೆ-ವಿಧುರರಾಗಿದ್ದಾರೆ. ಇವರಿಬ್ಬರೂ ಪುನಃ ಮದುವೆಯಾಗಿದ್ದಾರೆ. ಹಾಗೆಯೇ ಇನ್ನು ಬೇರೆ ಕಡೆಯ ಬೇಡರಲ್ಲಿನ ಕೆಲವು ವಿಧವೆಯರು ತಮಗೆ ಬೇಕಾದ ತಮ್ಮ ಸಮುದಾಯದ ಅಥವಾ ಬೇರೆ ಸಮುದಾಯದ ಪುರುಷರೊಂದಿಗೆ ಸಂಬಂಧ ಇಟ್ಟುಕೊಂಡಿರುವುದನ್ನು ಕಾಣಬಹುದು. ಈ ಕ್ರಿಯೆಗಳು ಸಾರ್ವತ್ರಿಕವಾಗಿಲ್ಲದೆ ಕೆಲವು ಭಾಗದಲ್ಲಿ ತುಂಬಾ ಗುಪ್ತವಾಗಿ ನಡೆಯುತ್ತವೆ. ಇಂತಹ ಘಟನೆಗಳನ್ನು ನೋಡಿದ ಸಮಾಜ ಗೊತ್ತಿದ್ದೂ ಗೊತ್ತಿಲ್ಲದ ರೀತಿ ಸುಮ್ಮನಾಗುತ್ತಾರೆ. ಈ ಕ್ರಿಯೆಗೆ ಎಲ್ಲಾ ವಿಧವೆಯರು ಕಡ್ಡಾಯವಾಗಿ ಸೇರಿರುವುದಿಲ್ಲ. ತಮ್ಮ ಸುಪ್ತ ಬಯಕೆಗಳಲ್ಲಿ ಹಿಡಿತವನ್ನು ಸಾಧಿಸದೆ ಇರುವ ವಿಧವೆಯರು ಮಾತ್ರ ಇಂತಹ ದಾರಿಯನ್ನು ಹಿಡಿಯುತ್ತಾರೆ. ಅದರಲ್ಲೂ ಮುಖ್ಯವಾಗಿ ವಿಧವೆಗೆ ಪೋಷಕವರ್ಗದವರು ಗಂಡಸತ್ತ ಮೇಲೆ ಸಹಕಾರ ನೀಡದೆ ಇದ್ದ ಸಂದರ್ಭದಲ್ಲಿ ಅವಳು ಏಕಾಂತವಾಗಿ, ಪ್ರತ್ಯೇಕವಾಗಿ ವಾಸಿಸುವಂತಹ ವಿಧವೆಯರಲ್ಲಿ ನಾವು ಕಾಣಬಹುದು. ಕೆಲವು ಛಲಗಾರ್ತಿ ವಿಧವೆಯರು ಈ ತರಹದ ಯಾವ ಸಂಬಂಧವನ್ನೂ ಇಟ್ಟುಕೊಳ್ಳದೆ ದಿಟ್ಟ ಮಹಿಳೆಯಾಗಿ ಶ್ರಮ ವಹಿಸಿ ಹೊಲ-ಮನೆಗಳಲ್ಲಿ ದುಡಿದು ಬದುಕುವ ವಿಧವೆ ಮಹಿಳೆಯನ್ನು ಬೇಡಸಮುದಾಯದಲ್ಲಿ ಕಾಣುತ್ತೇವೆ.

ಬೇಡರಲ್ಲಿ ವಿಧವೆ ಮಹಿಳೆ ಬಗ್ಗೆ ಕನಿಕರ ಇದ್ದೇ ಇದೆ. ಸರ್ಕಾರದಿಂದ ಕೊಡುವ ವಿಧವಾ ವೇತನವನ್ನು ಪಡೆದುಕೊಳ್ಳುವ ಬೇಡ ಮಹಿಳೆಯರಿದ್ದಾರೆ. ಬೇಡರ ಮಹಿಳೆ ಗಂಡ ಸತ್ತ ಮೇಲೆ ಕೈಗೆ ಬಳೆ ಧರಿಸುವುದಿಲ್ಲ. ತಲೆಗೆ ಹುವು ಮುಡಿಯುವುದಿಲ್ಲ. ಹಣೆಗೆ ಕುಂಕುಮ ಇಡುವುದಿಲ್ಲ. ಕಾಲಿನ ಬೆರಳಿಗೆ ಕಾಲುಂಗರ ತೊಡುವುದಿಲ್ಲ. ಇದೆಲ್ಲಕ್ಕಿಂತ ಮುಖ್ಯವಾಗಿ ಗಂಡ ಕಟ್ಟಿದ ತಾಳಿ ಬಿಚ್ಚುತ್ತಾಳೆ. ಹೀಗೆ ಅವಳ ಸೌಂದರ್ಯಕ್ಕೆ ಸೊಬಗನ್ನು ನೀಡುವ ಈ ಎಲ್ಲಾ ವಸ್ತುಗಳನ್ನು ತೆಗೆಯುತ್ತಾಳೆ. ಇದು ಒಂದು ನಂಬಿಕೆಯಾಗಿ ಬೇಡರಲ್ಲಿ ಬೆಳೆದು ಬಂದಿದೆ. ಆದರೆ ಇತ್ತೀಚೆಗಿನ ವಿಧವೆಯರು ಹಣೆಗೆ ಸ್ಪಿಕ್ಕರ್, ಕೈಗೆ ಪ್ಲಾಸ್ಟಿಕ್‌ಬಳೆ ಅಥವಾ ಗೋಲ್ಡ್‌ಬಳೆ, ಕೊರಳಿಗೆ ಬಂಗಾರದ ಅಥವಾ ಬೇರೆ ರೀತಿಯ ಚೈನ್‌ಧರಿಸುತ್ತಾರೆ. ಸಂಪೂರ್ಣ ಸಾಂಪ್ರದಾಯಿಕವಾಗಿ ಬದುಕುತ್ತಿರುವ ಬೇಡರ ಕುಟುಂಬಗಳಲ್ಲಿ ಇಂತಹ ಬದಲಾವಣೆ ಕಂಡುಬರುವುದಿಲ್ಲ. ಅಂತಹ ಕಡೆ ವಿಧವೆ ಹೇಗೆ ಇರಬೇಕೋ ಹಾಗೇ ಇದ್ದಾಳೆ. ಈ ರೀತಿಯ ಎಲ್ಲಾ ಘಟನೆಗಳ ಜೊತೆಗೆ ಅವಳು ಸದಾ ಚಿಂತೆಯಲ್ಲಿರುತ್ತಾಳೆ. ಬೇರೆ ಹೆಂಗಸರ ರೀತಿಯಲ್ಲಿ ಲವಲವಿಕೆಯಿಂದ ಇರಲು ಸಾಧ್ಯವಾಗುವುದಿಲ್ಲ. ಅವಳು ತನ್ನ ಗಂಡನ ನೆನಪಿನಲ್ಲಿಯೇ ಮನಸ್ಥಿತಿಯನ್ನು ಕಾಯ್ದುಕೊಂಡಿರುತ್ತಾಳೆ. ಆದರೂ ಈ ವಿಧವೆಯನ್ನು ಕಾಣುವ ದೃಷ್ಟಿಯಲ್ಲಿ ಸಾಕಷ್ಟು ಬದಲಾವಣೆಯನ್ನು ಮಾಡಿಕೊಳ್ಳಬೇಕಾಗಿದೆ.

ಸಾವು ಮತ್ತು ಮಹಿಳೆ:

ಬೇಡರಲ್ಲಿ ಗಂಡ ಸತ್ತಾಗ ಹೆಂಡತಿಯನ್ನು ಶವದ ಪಕ್ಕ ಕೂರಿಸಿ ಅವಳಿಗೆ ಮದುಮಗಳ ರೀತಿ ಅಲಂಕಾರ ಮಾಡುತ್ತಾರೆ. ಅವಳ ತವರುಮನೆಯಿಂದ ಅವಳಿಗೆ ಹೊಸಸೀರೆ, ಜಾಕೀಟ್‌, ಬಳೆ, ಹೂವು, ಕುಂಕುಮ, ಅರಿಶಿಣ, ಮಡಿಲಿಗೆ ಒಡ್ಲಕ್ಕಿ ತಂದು ಹಾಕುತ್ತಾರೆ. ಮುತ್ತೈದೆ ಹೆಣ್ಣು ಮಕ್ಕಳು ದುಃಖದಲ್ಲಿಯೇ ಅವಳಿಗೆ ಇವೆಲ್ಲವನ್ನು ಧರಿಸುತ್ತಾರೆ. ಆ ಕ್ರಿಯೆ ನಡೆಯುವಾಗ ಸೇರಿರುವ ಬಂಧುಗಳು ದುಃಖ ಪಡುವುದುಂಟು. ಶವಸಂಸ್ಕಾರ ಮಾಡುವ ಜಾಗಕ್ಕೆ ಅವಳನ್ನು ಹಾಗೆಯೇ ಕರೆದುಕೊಂಡು ಹೋಗುತ್ತಾರೆ. ಶವವನ್ನು ಮಣ್ಣು ಮಾಡಿದ ಮೇಲೆ ಅವಳ ಬಳೆಯನ್ನು ಸಮಾಧಿಯ ಮೇಲೆ ಒಡೆಸುತ್ತಾರೆ. ತಲೆಯ ಹೂವನ್ನು ಕಿತ್ತು ಹಾಕುತ್ತಾರೆ. ಅವಳ ಹಣೆಯ ಮೇಲಿನ ಕುಂಕುಮವನ್ನು ತೆಗೆಯುತ್ತಾರೆ. ಹೀಗೆ ಅವಳು ಮುತ್ತೈದೆತನವನ್ನು ಕಳೆದುಕೊಂಡು ವಿಧವೆಯಾಗುತ್ತಾಳೆ. ಮ್ಯಾಸಬೇಡರಲ್ಲಿ ಮತ್ತು ಊರಬೇಡರಲ್ಲಿ ಶವವನ್ನು ಸಮಾಧಿ ಮಾಡುತ್ತಾರೆ. ಪರಿವಾರದಲ್ಲಿ ಸತ್ತವರನ್ನು ಶವವನ್ನು ಸಮಾಧಿ ಮಾಡುತ್ತಾರೆ. ಅಥವಾ ಸುಡುತ್ತಾರೆ.

ಬೇಡರಲ್ಲಿ ಯಾರಾದರೂ ಸತ್ತರೆ ಅಲ್ಲಿ ಪ್ರಧಾನವಾಗಿ ಪುರುಷರು ಮುಖ್ಯರಾಗುತ್ತಾರೆ. ಸತ್ತ ವ್ಯಕ್ತಿಯ ಮನೆಯ ಮುಂದೆ ಕುಳ್ಳನ್ನು ಇಟ್ಟು ಅದರ ಕಾವಿನಲ್ಲಿ ಹಿಂಡೆಕೂಳು ತಯಾರು ಮಾಡುತ್ತಾರೆ. ಹಿಂಡೆಕೂಳು ತಯಾರು ಮಾಡಲು ಹೊಸ ಮಡಿಕೆಯನ್ನು ಬಳಸುತ್ತಾರೆ. ಕುಳ್ಳಿನ ಕೆಂಡ (ಒಣಗಿದ ಸೆಗಣೆಯ ಕೆಂಡ)ದ ಮೇಲೆ ಹೊಸ ಮಡಿಕೆ ಇಟ್ಟು ಅದರೊಳಗೆ ವಿಧವೆ ಹೆಂಗಸಿನ ಅಂಗೈಯಿಂದ ಮೂರು ಬೊಗಸೆ ಅಕ್ಕಿ ಕೈ ಹೊರಭಾಗದಿಂದ ಮೂರು ಬೊಗಸೆ ಅಕ್ಕಿ ಹಾಕಿಸುತ್ತಾರೆ. ಆಮೇಲೆ ಸ್ವಲ್ಪ ನೀರು ಹಾಕುತ್ತಾರೆ.

ಶವವನ್ನು ಎತ್ತುವವರೆಗೂ ಅದು ತಯಾರು ಆಗುತ್ತದೆ. ಆಮೇಲೆ ಮನೆಯ ಹಿರಿಯ ಮಗನ ತಲೆಯ ಮೇಲೆ ಕರಿಕಂಬಳಿ ಹೊದಿಸಿ ಹಿಂಡೆಕೂಳ್‌ಹೊರೆಸುತ್ತಾರೆ. ಶವ ಮನೆಯ ಅಂಗಳದಿಂದ ಸ್ಮಶಾನಕ್ಕೆ ಹೊರಟರೆ ಇತ್ತ ಕಡೆ ಮನೆಯ ಸೊಸೆಯರು ಮನೆಯನ್ನು ಸ್ವಚ್ಛ ಮಾಡುತ್ತಾರೆ. ಮಣ್ಣಿಗೆ ಹೋದವರು ಬರುವುದರೊಳಗೆ ಮನೆಯಲ್ಲಿನ ಸೊಸೆಯಂದಿರು ಮನೆಯನ್ನೆಲ್ಲಾ ಸಾರಿಸುತ್ತಾರೆ. ಹೊಸ ನೀರು ಶೇಖರಣೆ ಮಾಡುತ್ತಾರೆ. ಇಂತಹ ಸಂದರ್ಭದಲ್ಲಿ ಅಣ್ಣ-ತಮ್ಮಂದಿರು ಆಗುವವರು ಮಾತ್ರ ಮನೆಯ ಒಳಗೆ ಇರಬೇಕು. ನೆಂಟರಿಷ್ಟೆಲ್ಲಾ ಮೂರು ದಿನದ ಕಾರ್ಯ ಮುಗಿಯುವವರೆಗೂ ಒಳಗೆ ಬರುವ ಹಾಗಿಲ್ಲ. ಮನೆಯ ಮಗಳು ಮದುವೆಯಾಗಿದ್ದರೆ ಆ ಸಮಯದಲ್ಲಿ ಗಂಡನ ಮನೆಗೆ ಹೋಗಬೇಕು. ಮಣ್ಣು ಮಾಡಿ ಬರುವುದರೊಳಗೆ ಮನೆಯಲ್ಲಿರುವ ಸೊಸೆಯಂದಿರು ಅಂಗಳದ ಮುಖ್ಯ ಬಾಗಿಲಿನ ಮನೆಯ ಮಧ್ಯಭಾಗದಲ್ಲಿ ದೀಪವನ್ನು ಹಚ್ಚಿ ಇಡಬೇಕು. ಎಲ್ಲರೂ ಮಣ್ಣಿನಿಂದ ವಾಪಸು ಮನೆಯ ಹತ್ತಿರ ಬಂದು ಕೈಕಾಲು ಮುಖ ತೊಳೆದು ಬಾಗಿಲಿನ ಪಕ್ಕದಲ್ಲಿ ಇಟ್ಟಿರುವ ನೀರಿನಲ್ಲಿ ಎಡಗಾಲು ಹೆಬ್ಬರಳು ಮುಟ್ಟಿಸಿ ಮನೆಯ ಒಳಗಿನ ದೀಪವನ್ನು ನೋಡಿಕೊಂಡು ಹೋಗುತ್ತಾರೆ. ಆಮೇಲೆ ಕೇರಿಯಲ್ಲಿನ ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡುತ್ತಾರೆ. ಇಲ್ಲಿಗೆ ಶವಸಂಸ್ಕಾರ ಮುಗಿದ ಹಾಗೆ ಎಂದು ತೀರ್ಮಾನಿಸುತ್ತಾರೆ. ನಂತರ ಮೂರುದಿನದ ತಿಥಿ ಮತ್ತು ೧೮-೨೧ನೇ ದಿನದ ತಿಥಿ ಮಾಡಿ ಸಾವಿನ ಕರ್ಮವನ್ನು ಕಳೆಯುತ್ತಾರೆ.

ಕೃಷಿಕ್ಷೇತ್ರದಲ್ಲಿ ಮಹಿಳೆ:

ಬೇಡರ ಪ್ರಮುಖ ವೃತ್ತಿ ವ್ಯವಸಾಯ. ಮೂಲದಲ್ಲಿ ಇವರು ಪಶುಪಾಲಕರಾಗಿದ್ದರು ಕಾಲಕ್ರಮೇಣ ಒಂದು ಕಡೆ ವಾಸಿಸುತ್ತಾ ವ್ಯವಸಾಯ ಮಾಡುತ್ತಾ ಬದುಕಿತ್ತಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಮ್ಯಾಸಬೇಡರು ಮತ್ತು ಊರಬೇಡರು ವಾಸಿಸುವ ಪ್ರದೇಶವು ಹೆಚ್ಚು ಕಡಿಮೆ ಬರಗಾಲ ಪೀಡಿತ ಪ್ರದೇಶವಾಗಿದೆ. ಇವರು ಬರುವ ಅಲ್ಪ-ಸ್ವಲ್ಪ ಮಳೆಯಲ್ಲಿಯೇ ಬೆಳೆ ಬೆಳೆದು ಬದುಕುತ್ತಿದ್ದಾರೆ. ಕರ್ನಾಟಕದಲ್ಲಿ ಬೇಡರು ೭೦% ಮಳೆ ಆಶ್ರಿತ ಭೂಮಿಯನ್ನು ಹೊಂದಿ ಕೃಷಿ ಮಾಡುತ್ತಿದ್ದಾರೆ. ಮಳೆ ಬಂದರೆ ಕೃಷಿಕರ ಬದುಕು ಸಹನಾಗಿರುತ್ತದೆ. ಒಂದು ವೇಳೆ ಮಳೆ ಬರದೆ ಇದ್ದರೆ ಬೇರೆ ಕಡೆ ವಲಸೆ ಹೋಗುವ ಸಂದರ್ಭವು ಬರುತ್ತದೆ. ಬೇಡರ ಮಹಿಳೆ ಕೃಷಿಕ್ಷೇತ್ರದಲ್ಲಿ ಪುರುಷನಿಗಿಂತ ಹೆಚ್ಚಿನ ಸಮಯ ಕಳೆಯುತ್ತಾಳೆ. ಅವಳು ಪುರುಷನಿಗಿಂತ ಹೆಚ್ಚು ಕೆಲಸವನ್ನು ಕೃಷಿಕ್ಷೇತ್ರದಲ್ಲಿ ಮಾಡುತ್ತಾಳೆ.

ಬೆಳೆಗಳನ್ನು ಬೆಳೆಯುವಾಗ ಮಹಿಳೆಯ ಪಾತ್ರ ಮುಖ್ಯವಾಗಿರುತ್ತದೆ. ಅವಳು ತುಂಬಾ ಜವಾಬ್ದಾರಿಯಿಂದ ಈ ಕಾಳುಗಳನ್ನು ಬಿತ್ತನೆ ಮಾಡಬೇಕು. ಮಳೆರಾಯ ಮಳೆ ಬೀಳಿಸಿ ಭೂಮಿಯನ್ನು ಹಸಿ ಮಾಡಿದರೆ ರೈತರು ಮೂರನೆ ದಿನ ಹೊಲಕ್ಕೆ ಬಿತ್ತನೆ ಮಾಡಲು ಹೋಗುತ್ತಾರೆ. ಹಿಂದಿನ ದಿನದ ರಾತ್ರಿಯೇ ಬಿತ್ತನೆ ಮಾಡುವ ಮಹಿಳೆಯನ್ನು ಆಯ್ಕೆ ಮಾಡುತ್ತಾರೆ. ರಾಗಿಯನ್ನು ಪ್ರಮುಖ ಮಹಿಳೆ ಕೂರಿಗೆ ಮೇಲಿನ ತಲಿಬಿನಲ್ಲಿ ಬಿತ್ತಿದರೆ ಹಿಂದೆ ಗೊಬ್ಬರವನ್ನು ಸೆಡ್ಡೆಯಲ್ಲಿ ಮೂರು ಜನ ಮಹಿಳೆಯರು ಬಿತ್ತುತ್ತಾರೆ. ಅದೇ ಮೈಸೂರು, ಮಂಡ್ಯ ಮತ್ತು ಬಳ್ಳಾರಿಯ ನದಿತೀರದ ಗದ್ದಗೆಗಳಲ್ಲಿ ರಾಗಿ ನಾಟಿಯನ್ನು ಮಾಡುತ್ತಾರೆ. ಅದೇ ರೀತಿ ಬಯಲು ಸೀಮೆಯಲ್ಲಿ ಶೇಂಗಾ, ಸೂರ್ಯಕಾಂತಿ ಬಿತ್ತನೆ ಮಾಡುವಾಗ ಕೂರಿಗೆಯ ಹಿಂದೆ ಮಹಿಳೆಯರು ಬಿತ್ತನೆ ಮಾಡುತ್ತಾರೆ. (ಅದು ಹೇಗೆ ಬಿತ್ತನೆ ಮಾಡುತ್ತಾರೆ ಎಂಬುದನ್ನು ಚಿತ್ರದಲ್ಲಿ ನೋಡಬಹುದು).

ಬಿತ್ತನೆ ಮಾಡಿದ ಮೇಲೆ ಬೀಜ ಭೂಮಿಯ ಮಣ್ಣಿನ ಗೊಬ್ಬರದ ಜೊತೆ ಬೆರತು ಮಳೆಯ ಪ್ರಭಾವದಿಂದ ಚೆನ್ನಾಗಿ ಹುಟ್ಟುವುದು. ನಂತರ ಸ್ವಲ್ಪದಿನವಾದ ಮೇಲೆ ಆ ಹೊಲದಲ್ಲಿ ಕಳೆ ತೆಗೆಯಲು ಮಹಿಳೆಯರು ಪ್ರಾರಂಭಿಸುವರು. ಬೆಳೆ ಕಟಾವು ಆಗುವತನಕ ಮಹಿಳೆ ದಿನವಿಡಿ ಹೊಲದಲ್ಲಿ ಕೆಲಸ ಮಾಡಿ ಬೈಗಿನಲ್ಲಿ ಮನೆಗೆ ಹೋಗಿ ಅಲ್ಲಿ ಅಡಿಗೆ ತಯಾರಿಸುವರು. ಕೂಲಿ ಹೆಂಗಸರು ಜಮೀನ್ದಾರಿಗಳ ಹೊಲಗಳಿಗೆ ಕೆಲಸಕ್ಕೆ ದಿನಕ್ಕೆ (ಇಷ್ಟು ಕೂಲಿಯಂತೆ (೧೫ರಿಂದ ೨೦ರೂ) ಹಣ ಪಡೆದು ಕೆಲಸ ಮಾಡುವರು. ಬಿತ್ತನೆ ಮಾಡಿದ ಬೆಳೆ ಬೆಳೆದು ದೊಡ್ಡದಾಗಿ ಮಾರುಕಟ್ಟೆ ಸೇರುವ ತನಕ ಹೆಂಗಸರು ಅಲ್ಲಿ ಕೆಲಸದಲ್ಲಿ ನಿರತರಾಗಿರುವರು. ಆದರೆ ಇದರಿಂದ ಬಂದ ಹಣ ಮನೆಯ ಯಜಮಾನನ ಜೇಬು ಸೇರುವುದು. ಇಲ್ಲಂದರೆ ಅದು ಅವನ ದುರುಪಯೋಗಕ್ಕೆ ಬಳಕೆಯಾಗುವುದು. ಅಥವಾ ಬೆಳೆದ ಪದಾರ್ಥಗಳಿಗೆ ಸರಿಯಾದ ಬೆಲೆ ಸಿಗದೆ ಇದ್ದಾಗ ಕೃಷಿಕರು ಹಸ್ತ ನೀಡುವಳು. ಕರ್ನಾಟಕದ ಎಲ್ಲಾ ಭಾಗಗಳಲ್ಲಿಯು ಬೇಡರ ಮಹಿಳೆ ಕೃಷಿ ಕ್ಷೇತ್ರದಲ್ಲಿ ಭಾಗಿಯಾಗಿದ್ದಾಳೆ. ಕೃಷಿಕ್ಷೇತ್ರಕ್ಕೆ ಅವಳ ಸೇವೆ ಬಹಳ ಇದೆ.

ಬೇಡ ಜನಾಂಗದವರು ಆರ್ಥಿಕವಾಗಿ ತುಂಬಾ ಹಿಂದೆ ಇದ್ದಾರೆ. ಮ್ಯಾಸಬೇಡರು ಮತ್ತು ಊರ ಬೇಡ ಜನಾಂಗದ ಜನರು ತುಂಬಾ ಬಡತನದಲ್ಲಿದ್ದಾರೆ. ಇವರು ಕೃಷಿಕರಾದರೂ ವರ್ಷಪೂರ್ತಿ ಕೆಲಸ ಸಿಗುವುದಿಲ್ಲ. ಹಾಗಾಗಿ ಸುತ್ತಮುತ್ತಲಿನ ಪಟ್ಟಣಕ್ಕೆ ಸಣ್ಣ ಪುಟ್ಟ ಕೆಲಸಗಳಿಗೆ ಹೋಗುತ್ತಾರೆ. ಚಳ್ಳಕೆರೆ ಸುತ್ತಲಿನ ಮಹಿಳೆಯರು ಪಟ್ಟಣದಲ್ಲಿರುವ ಕೃಷಿ ಮಾರುಕಟ್ಟೆಗೆ ಹಮಾಲಿಯರ ಸಹಾಯಕ ಕೆಲಸಕ್ಕೆ ಹೋಗುತ್ತಾರೆ. ಕೆಲವು ಮಹಿಳೆಯರು ಎಣ್ಣು ಮಿಲ್ಲುಗಳಿಗೆ ದಿನದ ಕೂಲಿಯಲ್ಲಿ ಹೋಗುತ್ತಾರೆ. ಚಿತ್ರದುರ್ಗದ ಸುತ್ತಲಿನ ಬೇಡರ ಮಹಿಳೆ ಹತ್ತಿ, ಬೇಡರ ಮಹಿಳೆ ಪಟ್ಟಣದಲ್ಲಿನ ಬೇರೆ ಬೇರೆ ಕೆಲಸಗಳಿಗೆ ಹೋಗಿ ಮಿಲ್ಲಿನಲ್ಲಿ ಕೆಲಸ ಮಾಡಲು ಹೋಗುತ್ತಾರೆ. ಮತ್ತೆ ಕೆಲವರು ಗಾರೆ ಕೆಲಸಕ್ಕೆ ಹೋಗುತ್ತಾರೆ. ಹೀಗೆ ಬಂದ ಹಣದಿಂದ ಜೀವನ ಮಾಡುತ್ತಾರೆ. ನಗರಗಳಿಗೆ ಕೂಲಿ ಕೆಲಸಕ್ಕೆ ಹೋದ ಮಹಿಳೆ ಪ್ರತಿದಿನ ವಾಪಸು ಮನೆಗೆ ಬರುತ್ತಾಳೆ. ಚಿತ್ರದುರ್ಗದ ಸುತ್ತಮುತ್ತಲಿನ ತಮ್ಮಟ ಕಲ್ಲು, ಕೋಡನಹಟ್ಟಿ, ನಾಯ್ಕರ ಸೊಲ್ಲಾಪುರ, ಮೇದೆಹಳ್ಳಿ ಗೋನೂರು, ಮದಕರಿಪುರ ಇನ್ನೂ ಮುಂತಾದ ಅನೇಕ ಊರುಗಳನ್ನು ಇಲ್ಲಿ ಹೆಸರಿಸಬಹುದು.

ಗ್ರಾಮೀಣ ಪ್ರದೇಶದ ಬೇಡರ ಮಹಿಳೆ ಜಮೀನ್ದಾರರ ಹೊಲಗಳಿಗೆ ಕೂಲಿ ಕೆಲಸಗಳಿಗೆ ಹೋಗಿ ಬದುಕುತ್ತಾರೆ. ಹಳ್ಳಿಯ ಮಹಿಳೆ ತುಂಬಾ ಮುಗ್ಧಳು. ಅವಳಿಗೆ ಸಮಯದ ಪರಿಕಲ್ಪನೆಯೇ ಇರುವುದಿಲ್ಲ. ಸೂರ್ಯ ಹುಟ್ಟುವುದು ಮತ್ತು ಮುಳುಗುವುದೇ ಮುಖ್ಯವಾಗುತ್ತದೆ. ತೀವ್ರವಾದ ಬಡತನವಿದ್ದರೂ ಪ್ರಾಮಾಣಿಕವಾಗಿ ಕೂಲಿಕಾರಳಾಗಿ ಜಮೀನ್ದಾರರ-ಕೂಲಿಗಳಲ್ಲಿ ಕೆಲಸ ಮಾಡುತ್ತಾಳೆ. ಇವರು ಹೆಚ್ಚಿನ ಪಾಲು ಶ್ರಮಜಿವಿಗಳು. ಮ್ಯಾಸಬೇಡರಲ್ಲಿ ಮತ್ತು ಊರಬೇಡರಲ್ಲಿ ತುಂಬಾ ಬಡತನದ ಕುಟುಂಬಗಳು ಇವೆ. ಅಂತಹ ಕುಟುಂಬದ ಮಹಿಳೆ ಧೈರ್ಯಗೆಡದೆ ಛಲದಿಂದ ಕೂಲಿಕಾರಳಾಗಿಯೇ ಬದುಕುತ್ತಾಳೆ. ಜೊತೆಗೆ ಅವಳ ಗಂಡನು ಕೂಲಿಕಾರನಾಗಿಯೇ ಬದುಕುತ್ತಾನೆ. ಆದರೆ ಮಳೆ-ಗಾಳಿ-ಚಳಿ-ಬಿಸಿಲು ಎನ್ನದೆ ಕೂಲಿ ಮಾಡಿಕೊಂಡೇ ಬೇಡರ ಮಹಿಳೆಯರು ಬದುಕುತ್ತಾರೆ. ಇವರು ಕೂಲಿ ಕೆಲಸ ಮಾಡುತ್ತಾ ತಮ್ಮ ಅಸ್ತಿತ್ವವನ್ನು ಉಳಿಸಿಕೊಂಡಿದ್ದಾರೆ. ಇವರು ಶ್ರಮದಲ್ಲಿಯೇ ಸಂತೋಷ ಕಾಣುತ್ತಾರೆ. ಇವರು ಕಠಿಣ ಪರಿಶ್ರಮ ಮತ್ತು ಶ್ರದ್ಧೆಯಿಂದ ಯಶಸ್ಸು ಸಾಧಿಸಿದ್ದಾರೆ.

ಬೇಡರ ಮನೆಯ ಆಕಾರ ಮತ್ತು ಮಹಿಳೆ:

ಬೇಡರ ಮಹಿಳೆ ಪ್ರಾರಂಭದಲ್ಲಿ ಚಿಕ್ಕ ಚಿಕ್ಕ ಗುಡಿಸಲಿನಲ್ಲಿ ವಾಸಿಸುತ್ತಿದ್ದಳು. ಅವಳ ಪೋಷಕವರ್ಗದವರು ಸುತ್ತಲು ಆರು-ಏಳು ಅಡಿ ಎತ್ತರದ ಗೋಡೆಯನ್ನು ಕಟ್ಟಿ ಮೇಲೆ ಹುಲ್ಲಿನ (ಕಾಮಂಚಿಹುಲ್ಲು) ಹೊದಿಕೆಯನ್ನು ಹಾಸುವರು. ಆ ಗುಡಿಸಲಿನ ಒಳ ಸುತ್ತಳತೆ ೧೦-೧೫ ಅಡಿ ಇರುತ್ತಿತ್ತು. ಆ ಗುಡಿಸಲಿಗೆ ಒಂದೇ ಒಂದು ಬಾಗಿಲು ಇರುತ್ತಿತ್ತು. ಅದು ಬಿಟ್ಟರೆ ಬೇರೆ ಕಿಟಕಿಗಳು ಇರುತ್ತಿರಲಿಲ್ಲ. ಮ್ಯಾಸಬೇಡರ ಕುಟುಂಬಗಳು ಇಂತಹ ಮನೆಗಳಲ್ಲಿ ವಾಸಿಸುತ್ತಿವೆ. ಇವರು ಮನೆಯ ಸುತ್ತ-ಮುತ್ತ ಮುಳ್ಳಿನ ಬೇಲಿ ಹಾಕಿಕೊಳ್ಳುತ್ತಿದ್ದರು. ಅವರು ಬೇರೆಯವರು ಆ ಮುಳ್ಳಿನ ಬೇಲಿ ದಾಟಿಕೊಂಡು ಒಳಗೆ ಬರಬಾರದು ಎನ್ನುವ ಉದ್ದೇಶ ಇಟ್ಟುಕೊಂಡಿದ್ದರು. ಕ್ರಮೇಣ ಮನೆಯ ಆಕಾರಗಳಲ್ಲಿ ಸಾಕಷ್ಟು ಬದಲಾವಣೆ ಮಾಡಿಕೊಂಡಿದ್ದಾರೆ. ಕೆಲವರು ಈಗಲೂ ಗುಡಿಸಲು ಮನೆಗಳಲ್ಲಿ ವಾಸಿಸುತ್ತಿದ್ದಾರೆ. ಹೀಗೆ ಇರಲು ಬಹು ಮುಖ್ಯಕಾರಣ ಬಡತನ. ಆ ಮನೆಗಳ ಆಕಾರ ಹೇಗೆ ಇವೆ? ಎಂಬುದನ್ನು ಚಿತ್ರದಲ್ಲಿ ನೋಡಬಹುದು. ಚಿತ್ರದುರ್ಗದ ಮ್ಯಾಸಬೇಡು ಮತ್ತು ಊರಬೇಡರು ಮಾಳಿಗೆ ಮನೆ, ಹಂಚಿನ ಮನೆಗಳಲ್ಲಿ ವಾಸ ಮಾಡುತ್ತಾರೆ. ಕೆಲವರು ಆರ್ಸಿಸಿ ಮನೆಗಳನ್ನು ಕಟ್ಟಿಸಿಕೊಂಡಿದ್ದಾರೆ. ಇಂತಹವರ ಸಂಖ್ಯೆ ತುಂಬಾ ಕಡಿಮೆ. ಬೇಡರು ಪರಿಶಿಷ್ಟ ವರ್ಗಕ್ಕೆ ಸೇರುವುದರಿಂದ ಸರ್ಕಾರದ ಆಶ್ರಯಯೋಜನೆಯ ಅಡಿಯಲ್ಲಿ ಮನೆಯ ಸವಲತ್ತುಗಳನ್ನು ಕರ್ನಾಟದ ಎಲ್ಲಾ ಭಾಗಗಳಲ್ಲಿಯೂ ಪಡೆದುಕೊಂಡಿದ್ದಾರೆ. ಮನೆಯಲ್ಲಿ ಶುಚಿತ್ವ ಕಾಪಾಡಿಕೊಳ್ಳುವಳು ಮಹಿಳೆ. ಅವಳ ಪಾತ್ರ ಮನೆತನದಲ್ಲಿ ಹೆಚ್ಚಿನದಾಗಿರುತ್ತದೆ.

ಚಿತ್ರದುರ್ಗದ ಸುತ್ತಮುತ್ತಲಿನ ಬ್ಯಾಲ್‌ಹಾಳ್‌, ಕಬ್ಬಿಗೆಗೆ, ಸಿದ್ದವನದುರ್ಗ, ಚಿಕ್ಕಕಬ್ಬಿಗೆರೆ ಚಿಕ್ಕಗೊಂಡನ ಹಳ್ಳಿ, ಸೆಂಗೆನಹಳ್ಳಿ, ಮಾಡನಾಯ್ಯನಹಳ್ಳಿ, ಅಳಗವಾಡಿ, ಸಿರಿಗೆರೆ ಹೀಗೆ ಇನ್ನೂ ಮುಂತಾದ ಊರುಗಳಲ್ಲಿ ಬೇಡರ ಹೆಚ್ಚಿನ ಮನೆಗಳು ಮುಖ್ಯಮನೆಯ ಹಿಂದಕ್ಕೆ ಮತ್ತು ಮುಂದಕ್ಕೆ ಪಾಗಾರಗಳನ್ನು ಮಾಡಿಕೊಂಡಿದ್ದಾರೆ. ಅದೇ ಮೈಸೂರು ಚಾಮರಾಜನಗರಗಳ ಹಳ್ಳಿಗಳ ಊರುಗಳಲ್ಲಿ ತಟ್ಟೀ ಮನೆ ಮತ್ತು ಹಂಚಿನ ಮನೆ ಇವೆ. ಇಂತಹ ಮನೆಗಳನ್ನು ಅಚ್ಚುಕಟ್ಟಾಗಿ ಇಟ್ಟುಕೊಳ್ಳುವವರು ಮಹಿಳೆ. ಹಬ್ಬ-ಹರಿದಿನ, ಜಾತ್ರೆ, ಸತ್ತಾಗ, ಮೈನೆರೆತಾಗ ಅಂತಹ ಸಂದರ್ಭದಲ್ಲಿ ಮನೆಯ ಹೆಂಗಸಿನ ಕೆಲಸ ಜಾಸ್ತಿಯಾಗುತ್ತದೆ. ಮನೆಯ ಸೂತಕ ಕಳೆಯಲು ಹೆಂಗಸರು ಸಂಪೂರ್ಣ ಮನೆಯನ್ನು ಸುಣ್ಣದಲ್ಲಿ ಬಳಿದು ಸ್ವಚ್ಛ ಮಾಡುತ್ತಾರೆ. ಆಮೇಲೆ ಗೋಮೂತ್ರದಿಂದ ಮನೆಯನ್ನು ಶಾಂತಿ ಮಾಡಿಸುತ್ತಾರೆ. ಇದು ಬೇಡರ ನಂಬಿಕೆಯಾಗಿದೆ.

ಸೂಲಗಿತ್ತಿಯಾಗಿ ಮಹಿಳೆ:

ಬೇಡರ ಮಹಿಳೆ ಸೂಲಗಿತ್ತಿಯಾಗಿ ಕರ್ನಾಟಕದ ಎಲ್ಲಾ ಭಾಗದಲ್ಲಿಯೂ ಸಿಗುತ್ತಾಳೆ. ಪ್ರತಿಯೊಂದು ಹಳ್ಳಿಗಳಲ್ಲಿಯೂ ಸೂಲಗಿತ್ತಿಯರು ಹೆರಿಗೆ ಮಾಡಿಸುವುದರಲ್ಲಿ ತುಂಬಾ ಹೆಸರುವಾಸಿ ಹಳ್ಳಿಗಳಲ್ಲಿನ ಗರ್ಭಧರಿಸಿದ ಹೆಂಗಸರಿಗೆ ಹೆರಿಗೆ ನೋವು ಬಂದಾಗ ಸೂಲಗಿತ್ತಿಯರನ್ನು ಕರೆಸಿಕೊಂಡು ಹೆರಿಗೆ ಮಾಡಿಸುತ್ತಾರೆ. ಇವರು ಪ್ರಕೃತಿದತ್ತವಾಗಿ ಹೆರಿಗೆ ಮಾಡಿಸುವಂತಹ ಪರಿಣತಿ ಹೊಂದಿರುತ್ತಾರೆ. ಬೇಡರ ಸೂಲಗಿತ್ತಿ ಊರಿನಲ್ಲಿ ಯಾವ ಜನಾಂಗದ ಮಹಿಳೆಯ ಹೆರಿಗೆಯಾಗಲಿ, ಅಲ್ಲಿಗೆ ಹೋಗಿ ಸಹಕರಿಸುತ್ತಾಳೆ. ಸೂಲಗಿತ್ತಿಯರು ಸಮಯಪ್ರಜ್ಞೆ ಇಟ್ಟುಕೊಳ್ಳದೆ ಹೆರಿಗೆ ಮಾಡಿಸುವ ಕಾಯಕದಲ್ಲಿ ನಿರತರಾಗುತ್ತಾರೆ. ಮೂಲದಿಂದಲೂ ಹಳ್ಳಿಗಾಡಿನಲ್ಲಿ ಆಸ್ಪತ್ರೆಯ ಸೌಕರ್ಯ ಇರಲಿಲ್ಲ. ಇತ್ತೀಚಿಗೆ ಆ ವ್ಯವಸ್ಥೆ ಇದೆ. ಹಿಂದಿನ ದಿನಗಳಲ್ಲಿ ಹೆರಿಗೆಗೆ ಮಹಿಳೆಯರು ಆಸ್ಪತ್ರೆಗೆ ಹೋಗುತ್ತಿರಲಿಲ್ಲ. ಸೂಲಗಿತ್ತಿಯರೇ ಹೆರಿಗೆ ಮಾಡಿಸುತ್ತಿದ್ದರು. ಹಳ್ಳಿಗಳಲ್ಲಿ ಸೂಲಗಿತ್ತಿಯರಿಗೆ ಒಂದು ಕಾಲದಲ್ಲಿ ತುಂಬಾ ಗೌರವ ಇತ್ತು. ಅವರನ್ನು ಮಗುವಿಗೆ ಜನ್ಮ ನೀಡುವ ತಾಯಿ ಇದ್ದ ಹಾಗೆ ಎಂದು ಭಾವಿಸುತ್ತಾರೆ. ಅದರಲ್ಲೂ ಚೊಚ್ಚಲ ಹೆರಿಗೆ ಮಾಡಿಸುವಾಗ ಸೂಲಗಿತ್ತಿಯರು ತುಂಬಾ ಜಾಗೃತರಾಗುತ್ತಾರೆ. ಸೂಲಗಿತ್ತಿಯರಿಗೆ ವೈಜ್ಞಾನಿಕವಾದ ಜ್ಞಾನ ಇರುವುದಿಲ್ಲ. ಆದರೆ ಅವರು ಹೆರಿಗೆಯಾಗುವ ಹೆಣ್ಣಿನ ದೇಹವನ್ನು ಸುಲಭ ಹೆರಿಗೆಗೆ ಸಜ್ಜುಗೊಳಿಸುತ್ತಾರೆ. ಸೂಲಗಿತ್ತಿಯರಿಗೆ ಅವರದೇ ಆದ ಒಂದು ವಿದ್ಯೆ ಇರುತ್ತದೆ. ಅದನ್ನು ಅನುಸರಿಸಿ ಎಂತಹ ಕಷ್ಟಕರವಾದ ಸಂದರ್ಭ ಬಂದರೂ ಮಗುವನ್ನು ಹೆಣ್ಣಿನ ಶರೀರದಿಂದ ಹೊರ ತೆಗೆಯುತ್ತಾರೆ. ಬೇಡರಲ್ಲಿ ಹೆಚ್ಚಿನ ಸೂಲಗಿತ್ತಿಯರು ಸಿಗುತ್ತಾರೆ. ಅವರಲ್ಲಿ ಮುಖ್ಯವಾಗಿ ಸೂರಮ್ಮ-ಬೆಳಗಟ್ಟ, ಪಾಲಮ್ಮ-ನೆಲಗೇತನಹಟ್ಟಿ, ಮೀನಾಕ್ಷಮ್ಮ-ರೂಮಾಗಟ್ಟಿ, ಖ್ಯಾಸಮ್ಮ-ಬಚ್ಚುಬೋರನಹಟ್ಟಿ, ದೇವಿರಮ್ಮ-ನಂಜನಗೂಡು, ಹೀಗೆ ಇನ್ನೂ ಹಲವಾರು ಮಹಿಳೆಯರು ಪ್ರತಿಯೊಂದು ಭಾಗದಲ್ಲಿಯೂ ಸಿಗುತ್ತಾರೆ. ಕೆಲವು ಸೂಲಗಿತ್ತಿಯರು ನಾಟಿವೈದ್ಯರಾಗಿದ್ದಾರೆ. ಅಂದರೆ ಕೆಲವು ಗಿಡಮೂಲಿಕೆಗಳನ್ನು ದೈಹಿಕ ಕಾಯಿಲೆಗೆ ಕೊಡುವ ಮಹಿಳೆಯರು ಸಿಗುತ್ತಾರೆ. ಅದರಲ್ಲೂ ಕೊಳ್ಳೆಗಾಲ, ಹುಣಸೂರು ತಾಲೂಕಿನ ಸುತ್ತಮುತ್ತಲಿನ ಪರಿವಾರದವರ ಮಹಿಳೆಯರು ನಾಟಿ ಔಷಧಿ ಕೊಡುತ್ತಾರೆ. ಬೇಡರ ಮೂಲವಾಸಸ್ಥಾನ ಅರಣ್ಯ ಪ್ರದೇಶವಾಗಿರುವುದರಿಂದ ಇವರು ಪರಂಪರೆಯ ಉದ್ದಕ್ಕೂ ತಲೆಮಾರಿನಿಂದ ತಲೆಮಾರಿಗೆ ಈ ಕಸುಬುಗಳನ್ನು ಮಾಡುತ್ತಾ ಬಂದಿದ್ದಾರೆ.

ಇಂದಿನ ದಿನಗಳಲ್ಲಿಯೂ ಗ್ರಾಮೀಣ ಪ್ರದೇಶಗಳಲ್ಲಿ ಬೇಡರ ಸೂಲಗಿತ್ತಿ ಮಹಿಳೆಯರು ಇದ್ದಾರೆ. ಆದರೆ ಹಿಂದಿನ ಕಾಲದಲ್ಲಿದ್ದಷ್ಟು ಇವರ ಕ್ರಿಯಾಶೀಲತೆ ಇಂದಿನ ದಿನಗಳಲ್ಲಿ ಕಡಿಮೆಯಾಗಿದೆ. ಇಂದು ಪ್ರತಿಯೊಬ್ಬರೂ ಹೆರಿಗೆಗೆ ಆಸ್ಪತ್ರೆಗೆ ಹೋಗುತ್ತಾರೆ. ಆದರೂ ಕೆಲವು ಹಿಂದುಳಿದ ಹಳ್ಳಿಗಳಲ್ಲಿ ಅನಕ್ಷರಸ್ಥ ಕುಟುಂಬದವರು ಸೂಲಗಿತ್ತಿಯ ಹತ್ತಿರವೇ ಹೆರಿಗೆ ಮಾಡಿಸಿಕೊಳ್ಳುತ್ತಾರೆ. ಸೂಲಗಿತ್ತಿಯರು ಶ್ರಮಜೀವಿಗಳು. ಅವರು ಈ ಕೆಲಸದ ಜೊತೆಗೆ ಮನೆಯ ಬೇರೆ ಬೇರೆ ಕೆಲಸಗಳನ್ನು ಮಾಡುತ್ತಾ ಬಂದಿದ್ದಾರೆ. ಸೂಲಗಿತ್ತಿಯರಿಗೆ ಹೆರಿಗೆ ಮಾಡಿಸಿದ್ದಕ್ಕೆ ಗೌರವಪೂರ್ವಕವಾಗಿ ಒಂದು ಮೊರರಾಗಿ/ಜೋಳ/ಭತ್ತ ಕೊಡುತ್ತಾರೆ. ಜೊತೆಗೆ ಸ್ವಲ್ಪ ಹಣವನ್ನು (೫.೨೫ರೂ, ೧೧.೨೫ರೂ, ೫೧.೨೫ರೂ) ಕೊಡುತ್ತಾರೆ. ಹಾಗೂ ಎಲೆ-ಅಡಿಕೆ ಕೊಡುತ್ತಾರೆ. ಕೆಲವರು ಹಬ್ಬ-ಹರಿದಿನಗಳಲ್ಲಿ ಸೀರೆಯನ್ನು ಉಡಿಸುತ್ತಾರೆ. ಇವರು ಯಾವತ್ತೂ ಹಣದ ಆಸೆಗೆ ಒಳಗಾಗುವುದಿಲ್ಲ. ಸೂಲಗಿತ್ತಿಯರು ಹೆರಿಗೆ ಮಾಡಿಸುವಾಗ ತಾಯಿ ಮತ್ತು ಮಗುವಿನ ಜೀವದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಾರೆ.

ಇಂದು ಗರ್ಭ ಧರಿಸಿರುವ ಮಹಿಳೆ ಹೆರಿಗೆಯಾಗಲು ಆಸ್ಪತ್ರೆಗೆ ಹೋಗುತ್ತಿದ್ದಾಳೆ. ಸರ್ಕಾರ ಹೆರಿಗೆ ಭತ್ಯೆ ಕೊಡೋದ್ರಿಂದ ಎಷ್ಟೋ ಹೆಂಗಸರು ಹೆರಿಗೆಗೆ ಆಸ್ಪತ್ರೆಗೆ ಹೋಗುತ್ತಾರೆ. ಇಂದು ಸೂಲಗಿತ್ತಿಯರು ಹೆರಿಗೆ ಮಾಡಿಸಲು ಭಯಗೊಳ್ಳುತ್ತಾರೆ. ಅವರೇ ಆಸ್ಪತ್ರೆಗೆ ಹೋಗಿ ಅಂತ ಸಲಹೆ ಮಾಡುತ್ತಾರೆ. ಇದೆಲ್ಲವನ್ನು ಮೀರಿ ಇಂದಿಗೂ ಗ್ರಾಮೀಣ ಪ್ರದೇಶದ ತುಂಬಾ ಬಡತನದಲ್ಲಿರುವರು, ಅನಕ್ಷರಸ್ಥರು, ಸೂಲಗಿತ್ತಿಯರನ್ನು ನಂಬಿ ಅವರ ಹತ್ತಿರವೇ ಹೆರಿಗೆ ಮಾಡಿಸುತ್ತಾರೆ.

ಈ ಜನಾಂಗದ ಮಹಿಳೆಯರು ಸೂಲಗಿತ್ತಿಯ ಕಾಯಕದಲ್ಲಿ ಪ್ರಾಮಾಣಿಕತನದಿಂದ, ಛಲದಿಂದ ನಿರತರಾಗಿರುತ್ತಾರೆ. ಅವರು ವೈದ್ಯರ ತರಹ ಹಣದ ಆಸೆಗೆ ಮನಸ್ಸು ಕೊಡುವುದಿಲ್ಲ. ಸೂಲಗಿತ್ತಿಯರು ತುಂಬಾ ಬಡತನದಿಂದಲೇ ಬದುಕುತ್ತಿದ್ದಾರೆ. ಅವರಿಗೆ ರೂ. ೫೦-೧೦೦ ಕೊಟ್ಟರೆ ಅದು ದೊಡ್ಡ ಬೆಲೆಯ ಹಣ ಎಂದು ಭಾವಿಸಿಕೊಳ್ಳುತ್ತಾರೆ. ಅವರು ಯಾವತ್ತೂ ಹಣದ ಆಸೆಯನ್ನು ಇಟ್ಟುಕೊಂಡು ಹೆರಿಗೆ ಮಾಡಿಸಲು ಹೋಗುವುದಿಲ್ಲ. ಸೂಲಗಿತ್ತಿಯಾಗಿ ಊರಿನ ಹೆಂಗಸರಿಗೆ ಹೆರಿಗೆ ಮಾಡಿಸುವುದರಿಂದ ಒಳ್ಳೆಯ ಗೌರವ ಸಿಗುತ್ತದೆ ಎಂಬುದನ್ನು ಮನಸ್ಸಿನಲ್ಲಿಟ್ಟುಕೊಂಡಿರುತ್ತಾರೆ.

ಹೈನುಗಾರಿಕೆ ಮತ್ತು ಮಹಿಳೆ:

ಬೇಡರು ಮೂಲತಃ ಪಶುಪಾಲನೆ ಮಾಡುವವರಾಗಿದ್ದಾರೆ. ಇಂದಿಗೂ ಇವರು ಹಸು, ಎಮ್ಮೆಗಳನ್ನು ಸಾಕುತ್ತಾರೆ. “ಹಸು” ಎಂದರೆ ತುಂಬಾ ಇಷ್ಟ. ರೈತರಾಗಿ ದನ, ಎತ್ತುಗಳನ್ನು ಹೊಲದಲ್ಲಿ ಉಳುಮೆ ಮಾಡಲು ಬಳಸುತ್ತಾರೆ. ಆಮೇಲೆ ಹಸು ಹಾಕುವ ಕರುವನ್ನೇ ಬೆಳೆಸಿ, ದೊಡ್ಡದು ಮಾಡಿ, ಬೇಸಾಯ ಮಾಡಲು ಬಳಸುತ್ತಾರೆ. ಅದು ಹೋರಿಯಾಗಿ ಗುರುತಿಸಿಕೊಳ್ಳುತ್ತದೆ. ಅದನ್ನು “ಮನೆ ಹುಟ್ಟಿನದು” ಅಂತ ಕರೆಯುತ್ತಾರೆ. ಹೀಗೆ “ಹಸು” ಹಾಲು ಕೊಡುವುದರ ಜೊತೆಗೆ ವ್ಯವಸಾಯ ಮಾಡಲು ಹೋರಿಯನ್ನೂ ಕೊಡುತ್ತಿತ್ತು. ಇಂದು ಕೆಲವು ಬೇಡರ ಕುಟುಂಬಗಳು ಮೂರು, ನಾಲ್ಕು ಹಸು (ಸಿಂದಿಹಸು) ಕಟ್ಟಿಕೊಂಡು ಹಾಲಿನ ವ್ಯಾಪಾರ ಮಾಡುತ್ತಾರೆ. ಕರ್ನಾಟಕದ  ಎಲ್ಲಾ ಭಾಗಗಳಲ್ಲಿಯೂ ಬೇಡರ ಕೆಲವು ಮಹಿಳೆಯರು ಹಾಲಿನ ವ್ಯವಹಾರ ಮಾಡುತ್ತ ಬದುಕುತ್ತಿದ್ದಾರೆ. ಹಾಲಿನ ವ್ಯಾಪಾರ ಹೈನುಗಾರಿಕೆಯಲ್ಲಿ ಬೇಡರಿಗೆ ಒಳ್ಳೆಯ ಅನುಕೂಲ ಮಾಡಿದೆ. ನಗರಗಳ ಸುತ್ತಮುತ್ತಲಿನ ಹಳ್ಳಿಯ ಬೇಡರ ಹೆಂಗಸರು ಪ್ರತಿದಿನ ನಗರಗಳಿಗೆ ಬಂದು ಹಾಲು ಮಾರಾಟ ಮಾಡಿ ಹಣ ಸಂಪಾದನೆ ಮಾಡಿಕೊಂಡು ಹೋಗುತ್ತಾರೆ. ತಮ್ಮಟಕಲ್ಲಿನ ಅನಸೂಯಮ್ಮ, ನಾಯ್ಕರ ಸೋಲ್ಲಾಪುರದ ಭಾಗಮ, ಗಂಜಿಗಟ್ಟಿಯ ಕೆಂಚಮ್ಮ, ಜಾನುಕೊಂಡದ ಹನುಮಕ್ಕ, ಇನ್ನೂ ಮುಂತಾದವರು ನಗರಗಳಿಗೆ ಬಂದು ಹಾಲು ಮಾರಾಟ ಮಾಡುತ್ತಾರೆ. ಇವರು ಆರ್ಥಿಕವಾಗಿ ಸ್ವಲ್ಪ ಸುಧಾರಿಸಿಕೊಂಡಿದ್ದಾರೆ. ಮೈಸೂರು, ಚಾಮರಾಜನಗರ ಜಿಲ್ಲೆಯ ಎಷ್ಟೋ ಹಳ್ಳಿಯ ಬೇಡರು ಇಲಾತಿಹಸು (ಸಿಂದಿಹಸು) ಸಾಕಿದ್ದಾರೆ. ಅವರು ಹಾಲಿನ ವ್ಯವಹಾರ ಮಾಡುತ್ತಾರೆ. ಇನ್ನು ಕೆಲವು ಕಡೆ ಬೇಡರ ಹೆಂಗಸರು ಕುರಿ, ಮೇಕೆ, ಆಡುಗಳನ್ನು ಸಾಕಿ ಅದರಿಂದ ಪಡೆದ ಹಾಲನ್ನು ಮಾರಾಟ ಮಾಡುತ್ತಾರೆ.

ಬೇಡರ ಕೆಲವು ಕುಟುಂಬಗಳವರು ಹಸುಗಳನ್ನು ಸಾಕುತ್ತಾರೆ. ಹಸು ಕೊಡುವ ಹಾಲು ಮಾರಾಟ ಮಾಡುವುದಿಲ್ಲ. ಮನೆಯಲ್ಲಿರುವ ಮಕ್ಕಳು-ಮರಿಗಳು ಹಾಲು ಕುಡಿದು ಸುಖವಾಗಿ ಬೆಳೆಯಲಿ ಅಂತ ತೀರ್ಮಾನಿಸುತ್ತಾರೆ. ಬೇಡರ ಬಹುತೇಕ ಮನೆಗಳಲ್ಲಿ ಕನಿಷ್ಟ ಒಂದು ಹಸುವಾದರೂ ಇರುತ್ತದೆ. ಇತ್ತೀಚೆಗೆ ಇವರು ವ್ಯಾಪಾರದೃಷ್ಟಿಯನ್ನು ಬೆಳೆಸಿಕೊಂಡಿದ್ದಾರೆ. ಅದಕ್ಕೆ ಈ ಕಾಲದ ಪರಿಸ್ಥಿತಿ, ಸಂದರ್ಭಗಳು ಕಾರಣ ಇರಬಹುದು. ಇದು ಏನೇ ಇರಲಿ, ಹೈನುಗಾರಿಕೆಯಲ್ಲಿ ಬೇಡ ಮಹಿಳೆ ಸ್ವಲ್ಪ ಮಟ್ಟಿಗಾದರೂ ಯಶಸ್ಸು ಸಾಧಿಸಿದ್ದಾಳೆ. ಚಿತ್ರದುರ್ಗದ ಕೆಲವು ಗ್ರಾಮೀಣ ಮಹಿಳೆಯರು ಸರ್ಕಾರದಿಂದ ಸಾಲ ಪಡೆದು ಸಿಂಧಿ ಹಸುಗಳನ್ನು, ಕೆಲವು ಹಸುಗಳನ್ನು ತೆಗೆದುಕೊಂಡಿದ್ದಾರೆ. ಇಂದು ಇದು ಒಂದು ವಾಣಿಜ್ಯ ವೃತ್ತಿಯಾಗಿದೆ. ಐಮಂಗಲದ ಚಂದ್ರಪ್ಪ ಮತ್ತು ಅವರ ಹೆಂಡತಿ ರುಕ್ಕಮ್ಮ ಸೇರಿಕೊಂಡು ೪-೫ ಸಿಂಧಿ ಹಸುಗಳನ್ನು ಕೆಲವು ಹಸುಗಳನ್ನು ತೆಗೆದುಕೊಂಡಿದ್ದಾರೆ. ಇವರು ದಿನ ೨೫-೩೦ ಲೀಟರ್ ಹಾಲು ಸಂಪಾದನೆ ಮಾಡಿ ಮಾರಾಟ ಮಾಡುತ್ತಾರೆ. ಇವರು ಆರ್ಥಿಕವಾಗಿ ಸ್ವಲ್ಪ ಸುಧಾರಣೆ ಕಂಡುಕೊಂಡಿದ್ದಾರೆ. ಮೈಸೂರು ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿನ ಪರಿವಾರದವರು ಹೈನುಗಾರಿಕೆಯಲ್ಲಿ ತೊಡಗಿಕೊಂಡು ಆರ್ಥಿಕವಾಗಿ ಸುಸ್ಥಿತಿಯಲ್ಲಿದ್ದಾರೆ.

ಉದ್ಯಮ ಮತ್ತು ಮಹಿಳೆ:

ಬೇಡರ ಮಹಿಳೆ ಉದ್ಯಮ ಕ್ಷೇತ್ರದಲ್ಲಿ ಭಾಗಿಯಾಗಿದ್ದಾಳೆ. ಇದನ್ನು ನಗರ ಕೇಂದ್ರಿತ ಮತ್ತು ಸುತ್ತಮುತ್ತಲಿನ ಹಳ್ಳಿಗಳಲ್ಲಿ ಕಾಣುತ್ತೇವೆ. ಗ್ರಾಮೀಣ ಪ್ರದೇಶದಲ್ಲಿ ಹೆಚ್ಚು ಪ್ರಮಾಣದಲ್ಲಿ ಬೆಳೆದಿಲ್ಲ. ಅದಕ್ಕೆ ಬಹುಮುಖ್ಯ ಕಾರಣ ಬಡತನ ಮತ್ತು ಬರಗಾಲ. ಇವೆರಡು ಇರುವ ಕಡೆ ಉದ್ಯಮ ಕ್ಷೇತ್ರಗಳ ಬೆಳವಣಿಗೆ ಕಂಡುಬರುವುದಿಲ್ಲ. ಸ್ವಾತಂತ್ರ‍್ಯ ಪೂರ್ವದಲ್ಲಿ ಗುಡಿ ಕೈಗಾರಿಕೆಗಳು ಗ್ರಾಮೀಣ ಪರಿಸರದಲ್ಲಿ ತುಂಬಾ ಇದ್ದವು. ಆದರೆ ಕಾಲಕ್ರಮೇಣ ಕೈಗಾರೀಕರಣದ ಪ್ರಭಾವದಿಂದ ನಶಿಸಿ ಹೋದವು. ಇಂದು ನಮಗೆ ಏನೇ ವಸ್ತು ಬೇಕಾದರೂ ಮಾರುಕಟ್ಟೆಯಲ್ಲಿ ಅತಿಸುಲಭವಾಗಿ ಸಿಗುತ್ತವೆ. ಹಾಗಾಗಿ ಗುಡಿ ಕೈಗಾರಿಕೆಗಳು ನಶಿಸಿ ಹೋಗಿವೆ. ಈಗ ಆ ತರಹದ ಉತ್ಪನ್ನಗಳ ಯೋಜನೆಯನ್ನು ಬಿಟ್ಟು ಈಗಾಗಲೇ ಸಿದ್ಧವಾಗಿರುವ ವಸ್ತುಗಳನ್ನು ಖರೀದಿಸಿ, ಅವುಗಳನ್ನು ಪುನಃ ಮಾರಾಟ ಮಾಡಿ ಅದರಿಂದ ಬಂದ ಲಾಭದ ಹಣದಿಂದ ಎಷ್ಟೋ ಕುಟುಂಬಗಳು ಜೀವನ ರೂಪಿಸಿಕೊಂಡಿವೆ. ಹೀಗೆ ಉದ್ಯಮಕ್ಷೇತ್ರ ಬೇರೆ ದಾರಿ ಹಿಡಿದಿದೆ.

ವ್ಯಾಪಾರ-ವಹಿವಾಟು ಮಾಡುವುದರ ಮೂಲಕ ಅವರು ಉದ್ಯಮ ಕಂಡುಕೊಳ್ಳಬೇಕಾಗಿದೆ. ಚಿತ್ರದುರ್ಗದ ಮ್ಯಾಸಬೇಡರ ಊರುಗಳಲ್ಲಿ ಆ ಜನಾಂಗದವರೇ “ಅಂಗಡಿ” ಇಟ್ಟುಕೊಂಡು ವ್ಯವಹಾರ ವೃತ್ತಿಯನ್ನೇ ಪ್ರಧಾನ ಎಂದು ಪರಿಗಣಿಸದೇ ಅದು ವೃತ್ತಿಯ ಒಂದು ಭಾಗವೆಂದು ಗುರುತಿಸಿಕೊಂಡಿದ್ದಾರೆ. ಇವರು ಊರುಗಳಲ್ಲಿ ಸಣ್ಣ ಸಣ್ಣ ಅಂಗಡಿ ಇಟ್ಟಿದ್ದಾರೆ. ಗಂಡಂದಿರು ಆ ಅಂಗಡಿಗಳಿಗೆ ಪಟ್ಟಣದಿಂದ ಸಾಮಾನುಗಳನ್ನು ತಂದು ಕೊಟ್ಟರೆ, ಹೆಂಡತಿಯರು ದಿನವಿಡಿ ಮನೆಯ ಕೆಲಸದೊಂದಿಗೆ ಅಂಗಡಿಯ ವ್ಯವಹಾರ ಮಾಡುತ್ತಾರೆ. ಇದು ಸಣ್ಣ ಪ್ರಮಾಣದ ವ್ಯವಹಾರವಾಗಿರುತ್ತದೆ. ಬಚ್ಚುಬೋರನಹಟ್ಟಿ ಬೋರಮ್ಮ, ನೆಲಗೇತನಹಟ್ಟಿ ಪಾಪಮ್ಮ, ಬ್ಯಾಲಹಾಳ್‌ಶಾರದಮ್ಮ, ಹೀಗೆ ಇನ್ನೂ ಅನೇಕ ಹಳ್ಳಿಯಲ್ಲಿನ ಮಹಿಳೆಯರನ್ನು ದಾಖಲಿಸಬಹುದು. ಈ ಅಂಗಡಿಗಳ ಉದ್ದಿಮೆಯಲ್ಲಿ ಬರುವ ಲಾಭದಿಂದ ಆರ್ಥಿಕವಾಗಿ ಸ್ವಲ್ಪ ಮಟ್ಟಿಗಾದರೂ ಸಂಪಾದನೆ ಮಾಡುತ್ತಾರೆ.

ಪಟ್ಟಣದ ಸುತ್ತಮುತ್ತಲಿನ ಊರಿನ ಬೇಡಮಹಿಳೆಯರು ಪಟ್ಟಣಗಳಲ್ಲಿ ತರಕಾರಿ, ಹಣ್ಣು-ಹಂಪಲು, ಹೂವುಗಳನ್ನು ಮಾರಿ ಜೀವನ ಮಾಡುತ್ತಾರೆ. ಇವರು ಪ್ರತಿದಿನ ಬೆಳಿಗ್ಗೆ ಊರಿನಿಂದ ಹೊರಟರೆ ಪುನಃ ಮನೆ ಸೇರುವುದು ಸಾಯಂಕಾಲ. ಈ ರೀತಿಯ ವೃತ್ತಿ ಪಟ್ಟಣದ ಸುತ್ತಮುತ್ತಲಿನ ಮಹಿಳೆಯರಿಗೆ ಮಾತ್ರ ಸಿಕ್ಕಿರುತ್ತದೆ. ಬಚ್ಚುಬೋರನ ಹಟ್ಟಿ, ಸಾಸಲಹಟ್ಟಿ, ಗೋನೂರು, ಮದಕರಿಪುರ, ಕುಂಚಿಗನಾಳು, ಜಾನಕೊಂಡ, ತಮ್ಮಟಕಲ್ಲು, ಗಂಜಿಗಟ್ಟಿ, ಅಮೃತಾಪುರ, ಕ್ಯಾಸಪುರ, ಕೋಡನಹಟ್ಟಿ, ಹೀಗೆ ಚಿತ್ರದುರ್ಗ ನಗರದ ಸುತ್ತಮುತ್ತಲಿನ ಊರಿನ ಮ್ಯಾಸಬೇಡರ ಹೆಂಗಸರು ಪಟ್ಟಣದಲ್ಲಿ ತರಕಾರಿ ಹಾಗೂ ಹಣ್ಣಿನ ಮಾರಾಟ ಮಾಡುತ್ತಾರೆ. ಅದೇ ರೀತಿ ಮೈಸೂರು ನಗರದ ಸುತ್ತಮುತ್ತಲಿನ ಪರಿವಾರದವರ ಹೆಂಗಸರು ಮೈಸೂರಿನಲ್ಲಿ ಹಣ್ಣಿನ ವ್ಯಾಪಾರ ಮಾಡುತ್ತಾರೆ. ಮೈಸೂರು ನಗರದ ಮುಖ್ಯ ಪೇಟೆ ದೇವರಾಜ್‌ಅರಸ್‌ಮಾರುಕಟ್ಟೆಯ ಪ್ರವೇಶ ದ್ವಾರದಲ್ಲಿ ತಮ್ಮನಹಳ್ಳಿಯ ಪರಿವಾರದವರ ಮಹಿಳೆಯರೇ ಹೆಚ್ಚಿನ ಪಾಲು ವ್ಯಾಪಾರ ಮಾಡುತ್ತಾರೆ. ಇವರೆಲ್ಲರೂ ಬೀದಿ ವ್ಯಾಪಾರ ಮಾಡುವರು. ಆದರೆ ಪರಿವಾರದವರ ಮಹಿಳೆಯರಷ್ಟು ಆರ್ಥಿಕವಾಗಿ ಮ್ಯಾಸಬೇಡರ ಮಹಿಳೆಯರು ಮುಂದುವರೆದಿಲ್ಲ. ಮೈಸೂರಿನಲ್ಲಿನ ವ್ಯವಹಾರಕ್ಕೂ ಚಿತ್ರದುರ್ಗದಲ್ಲಿನ ವ್ಯವಹಾರಕ್ಕೂ ಸಾಕಷ್ಟು ವ್ಯತ್ಯಾಸವಿದೆ.

ಕರ್ನಾಟಕದ ಎಲ್ಲಾ ಭಾಗದ ಬೇಡರ ಮಹಿಳೆ ಪ್ರಾದೇಶಿಕವಾಗಿ ಭಿನ್ನ ಭಿನ್ನವಾದ ವ್ಯಾಪಾರದಲ್ಲಿ ತೊಡಗಿಕೊಂಡಿರುತ್ತಾಳೆ. ಅದರಲ್ಲೂ ಪ್ರತಿಯೊಂದು ನಗರದ ಸುತ್ತಮುತ್ತಲಿನ ಹಳ್ಳಿಗಳು ಇಂತಹ ಉದ್ದಿಮೆಗಳಿಗೆ ಆಕರ್ಷಿತವಾಗಿದೆ. ಮಂಗಳೂರು, ಕಾರವಾರ ಇನ್ನೂ ಮುಂತಾದ ಕರಾವಳಿ ಭಾಗದ ಬೇಡರಲ್ಲಿನ ಬೆಸ್ತರ ಮಹಿಳೆ ಮೀನು ವ್ಯಾಪಾರದಲ್ಲಿ ತೊಡಗಿಕೊಂಡಿರುತ್ತಾಳೆ. ಅವಳು ಉದ್ಯಮದಲ್ಲಿ ತೊಡಗಿಕೊಂಡು ಮಧ್ಯಮ ಸ್ಥಿತಿಯಲ್ಲಿ ಜೀವನ ನಡೆಸುತ್ತಿದ್ದಾಳೆ.

ಹೀಗೆ ಉದ್ಯಮದಲ್ಲಿ ತೊಡಗಿರುವ ಬೇಡರ ಮಹಿಳೆಯರು ವರ್ಷದ ಎಲ್ಲಾ ಕಾಲದಲ್ಲಿಯೂ ವ್ಯವಹಾರದಲ್ಲಿ ತೊಡಗಿರುತ್ತಾರೆ. ಮದಕರಿಪುರ (ಚಿತ್ರದುರ್ಗ ಜಿಲ್ಲೆ)ದ ಈರಮ್ಮ ಸು. ೧೦-೧೫ ವರ್ಷದಿಂದ ಚಿತ್ರದುರ್ಗನಗರದಲ್ಲಿ ಕೆಲವು ಬಡಾವಣೆಗಳನ್ನು ಸುತ್ತಿ ಸೊಪ್ಪು ಮಾರಾಟ ಮಾಡುತ್ತಾಳೆ. ಈರಮ್ಮ ಬೆಳಿಗ್ಗೆ ೫ ಗಂಟೆಗೆ ಎದ್ದು ಊರಿನಿಂದ ಬರುವ ಅಟೋ ಹಿಡಿದು ಪಟ್ಟಣಕ್ಕೆ ಬರುತ್ತಾಳೆ. ಚಿತ್ರದುರ್ಗದ ಪಟ್ಟಣದ ಕೇಂದ್ರಭಾಗದಲ್ಲಿ (ಸಂತೆ ಹೊಂಡದ ಹತ್ತಿರ) ಬೆಳಗಿನ ೬ ಗಂಟೆಯಲ್ಲಿ ಹಳ್ಳಿಯ ರೈತರು ತಾವು ಬೆಳೆದು ತಂದ ತರಕಾರಿಯನ್ನು ಹರಾಜು ಹಾಕುತ್ತಾರೆ. ಈರಮ್ಮ ತನಗೆ ಬೇಕಾದ ಸೊಪ್ಪನ್ನು ಹರಾಜಿನಲ್ಲಿ ಕೂಗಿಕೊಂಡು ಒಂದು ಪುಟ್ಟಿಗೆ ಸೇರಿಸಿಕೊಂಡು ತಲೆಯ ಮೇಲೆ ಹೊತ್ತು ನಗರದ ಕೆಲವು ಬಡಾವಣೆಗಳಲ್ಲಿ ತಿರುಗಿ ಸೊಪ್ಪನ್ನೆಲ್ಲಾ ಮಾರಾಟ ಮಾಡುತ್ತಾಳೆ. ಬೆಳಗಿನ ೧೧-೧೨ ಗಂಟೆಗೆ ವ್ಯಾಪಾರ ಮುಗಿಸುತ್ತಾಳೆ. ವ್ಯಾಪಾರದಿಂದ ಬಂದ ಲಾಭದಲ್ಲಿ ಪುನಃ ವಾಪಸು ಊರು ಸೇರುತ್ತಾಳೆ. ಮಧ್ಯಾಹ್ನದ ಮೇಲೆ ಮನೆಗೆಲಸದಲ್ಲಿ ನಿರತಳಾಗುತ್ತಾಳೆ. ಹೀಗೆ ಮದಕರಿ ಪುರದ ಈರಮ್ಮ ಸೊಪ್ಪು ವ್ಯಾಪಾರದಿಂದ ತನ್ನ ಸಂಸಾರವನ್ನು ಸಾಗಿಸುತ್ತಾಳೆ. ಜೊತೆಗೆ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಿದ್ದಾಳೆ. ಈರಮ್ಮ ಹೇಳುವ ಪ್ರಕಾರ ಸೊಪ್ಪು ಮಾರುವುದಕ್ಕೆ ಮೊದಲು ಸಾಕಷ್ಟು ಕಷ್ಟದಿಂದ ಇದ್ದಳು. ಹಳ್ಳಿಯಲ್ಲಿ ದಿನವಿಡಿ ಜಮೀನಿನಲ್ಲಿ ಕೆಲಸಕ್ಕೆ ಹೋದರೆ ೧೦ ರೂ. ಕೊಡುತ್ತಿದ್ದರು. ಆದರೆ ಅದು ಜೀವನ ಮಾಡಲು ಸಾಕಾಗುತ್ತಿರಲಿಲ್ಲ. ಆಮೇಲೆ ಒಂದು ದಿನ ನಾನೇ ಯೋಚನೆ ಮಾಡಿ ಚಿತ್ರದುರ್ಗ ನಗರದಲ್ಲಿ ಸೊಪ್ಪು ಮಾರಾಟ ಮಾಡಲು ಪ್ರಾರಂಭಿಸಿದೆ. ಪ್ರಾರಂಭದ ದಿನದಲ್ಲಿ ನನಗೆ ಹೇಗೆ ಸೊಪ್ಪು ಮಾರಬೇಕು ಅಂತ ಗೊತ್ತಿರಲಿಲ್ಲ. ಒಂದೊಂದು ದಿನ ಏನೂಲಾಭ ಬರುತ್ತಿರಲಿಲ್ಲ. ಜೊತೆಗೆ ಸೊಪ್ಪು ಖರ್ಚಾಗದೆ ಉಳಿದುಕೊಂಡು ಬಿಡೋದು, ಬರ್ತಾ ವ್ಯಾಪಾರ ಮಾಡುವುದು ಹೇಗೆ ಅಂತ ಕಲ್ತುಕೊಂಡೆ ನಂತರ ವ್ಯಾಪಾರದಲ್ಲಿ ಮುಂದೆ ಬಂದೆ ಅಂತ ಹೇಳ್ತಾರೆ.

ಬೇಡರ ಮಹಿಳೆಯರು ಹಣ್ಣು ವ್ಯಾಪಾರ ಮಾಡುವ ಉದ್ಯಮದಲ್ಲಿ ಹೆಚ್ಚು ನಿಷ್ಣಾತರಾಗಿದ್ದಾರೆ. ಚಿತ್ರದುರ್ಗದ ನಗರಕೇಂದ್ರ ಭಾಗದಲ್ಲಿರುವ ಸರ್ಕಲ್‌ಸುತ್ತಮುತ್ತ ಹಾಗೂ ಸಂತೆ ಹೊಂಡದ ಹತ್ತಿರ ವ್ಯಾಪಾರ ಮಾಡುವ ಹೆಂಗಸರಲ್ಲಿ ಬಹುಪಾಲು ಮ್ಯಾಸಬೇಡರ ಮತ್ತು ಊರಬೇಡರ ಹೆಣ್ಣು ಮಕ್ಕಳು ಸಿಗುತ್ತಾರೆ. ಇವರೆಲ್ಲರೂ ವರ್ಷದ ಉದ್ದಕ್ಕೂ ಒಂದಲ್ಲಾ ಒಂದು ಹಣ್ಣಿನ ವ್ಯಾಪಾರ ಕೈಗೊಳ್ಳುತ್ತಾರೆ. ಸೀಜನ್‌ಗೆ ತಕ್ಕಂತೆ ಆಯಾ ಸೀಜನ್‌ನಲ್ಲಿ ಸಿಗುವ ಹಣ್ಣಿನ ವ್ಯಾಪಾರ ಕೈಗೊಳ್ಳುತ್ತಾರೆ.

ಕರ್ನಾಟಕದಲ್ಲಿ ವಾಸಿಸುವ ಬೇಡರ ಕೆಲವು ಮಹಿಳೆಯರು ಅಂದರೆ ನಗರಗಳ ಅಕ್ಕಪಕ್ಕ ವಾಸಿಸುವವರು ಪ್ರತಿದಿನ ನಗರಗಳಿಗೆ ಬಂದು ವ್ಯಾಪಾರೋದ್ಯಮಗಳಲ್ಲಿ ತೊಡಗುತ್ತಾರೆ. ಮೈಸೂರು ಸಮೀಪದ ರಮ್ಮನಹಳ್ಳಿಯಿಂದ ಸುಮಾರು ೪೦-೫೦ ಮಹಿಳೆಯರು ಮೈಸೂರು ನಗರದ ಮುಖ್ಯ ಬೀದಿಗಳಲ್ಲಿ ಹಣ್ಣಿನ ವ್ಯಾಪಾರ ಮಾಡುತ್ತಾರೆ. ಅದೇ ರೀತಿ ಚಿತ್ರದುರ್ಗದ ಸಮೀಪದ ಬಚ್ಚುಬೋರನ ಹಟ್ಟಿಯಿಂದ ಸುಮಾರು ೪೦-೫೦ ಮಹಿಳೆಯರು ಚಿತ್ರದುರ್ಗಕ್ಕೆ ಬಂದು ಮುಖ್ಯ ಬೀದಿಯಲ್ಲಿ ಹಣ್ಣಿನ ವ್ಯಾಪಾರ ಮಾಡುತ್ತಾರೆ.

ಬೇಡರ ಮಹಿಳೆಯರು ನಗರದ ಬೀದಿಗಳಲ್ಲಿ ವ್ಯಾಪಾರ ಮಾಡುವುದರಲ್ಲಿ ಚಾಕಚಕ್ಯತೆಯಿಂದ ಇರುತ್ತಾರೆ. ವ್ಯಾಪಾರ ಮಾಡುವ ಸ್ಥಳಗಳು ಇವರಿಗೆ ತಾತ್ಕಾಲಿಕ ನಗರಸಭೆಯವರು ಪ್ರತಿದಿನ ಜಾಗದ ಶುಲ್ಕ ವಸೂಲಿ ಮಾಡ್ತಾರೆ. ಆಮೇಲೆ ವ್ಯಾಪಾರ ಮಾಡುವ ಹೆಂಗಸರು ಸ್ಥಳೀಯ ದೊಡ್ಡ ದೊಡ್ಡ ಅಂಗಡಿಯವರ ವಿಶ್ವಾಸ ಗಿಟ್ಟಿಸಿಕೊಳ್ಳಬೇಕು. ಏಕೆಂದರೆ ಅವರ ಅಂಗಡಿಯ ಮುಂದಿನ ಅಂಗಳದ ಜಾಗವನ್ನು ಇವರು ವ್ಯಾಪಾರ ಮಾಡಲು ಬಳಸಿಕೊಳ್ಳುತ್ತಾರೆ. ಇದು ಆ ದಿನದ ವ್ಯವಸ್ಥೆಯಾಗಿರುತ್ತದೆ. ವ್ಯಾಪಾರ ಮಾಡುವ ಹೆಂಗಸರು ಈ ರೀತಿಯ ಕೆಲವು ಸಮಸ್ಯೆಗಳನ್ನು ನಿಭಾಯಿಸಿಕೊಂಡು ಹಣ್ಣಿನ ವ್ಯಾಪಾರ ಮಾಡಲು ತೊಡಗುತ್ತಾರೆ. ಹೆಂಗಸರು ಧೈರ್ಯದಿಂದಲೇ ವ್ಯಾಪಾರ ಮಾಡುತ್ತಾರೆ. ಇವರು ಅನೇಕ ಸಮಸ್ಯೆಗಳನ್ನು ಹೊತ್ತುಕೊಂಡು ವ್ಯಾಪಾರ ಮಾಡಲು ಬರುತ್ತಾರೆ. ಮನೆಯಲ್ಲಿ ಕಿತ್ತು ತಿನ್ನುವ ಬಡತನ ಕೆಲವರಿಗಿರುತ್ತದೆ. ಇನ್ನು ಕೆಲವರಿಗೆ ಕುಡುಕಗಂಡನನ್ನು ಸಾಕ ಬೇಕಾದ ಸ್ಥಿತಿ ಬಂದಿರುತ್ತದೆ. ಜೊತೆಗೆ ಮಕ್ಕಳ ವಿದ್ಯಾಭ್ಯಾಸ, ಹೆಣ್ಣು ಮಕ್ಕಳ ಮದುವೆ, ಅಲ್ಪ-ಸ್ವಲ್ಪ ಇರುವ ಹೊಲದ ಉಳುಮೆ-ಬಿತ್ತನೆ, ಕಷ್ಟ-ಸುಖ ಎಲ್ಲವನ್ನೂ ಬರುವ ಆದಾಯದಿಂದ ಸರಿದೂಗಿಸಬೇಕು. ಹೀಗೆ ಹಣ್ಣಿನ ವ್ಯಾಪಾರ ಮಾಡುವ ಹೆಂಗಸರು ಅನೇಕ ಸಮಸ್ಯೆಗಳನ್ನು ಎದುರಿಸಬೇಕಾದ ಅನಿವಾರ್ಯತೆ ಇದೆ.

“ನೇರಳೆಹಣ್ಣು” ವ್ಯಾಪಾರವನ್ನು ಕೆಲವು ಬೇಡರ ಮಹಿಳೆಯರು ಮಾಡುತ್ತಾರೆ. ನೇರಳೆಹಣ್ಣು ಎಲ್ಲಾ ಕಾಲದ ಫಲವಲ್ಲ. ಇದು ಮೇ-ಜೂನ್‌ತಿಂಗಳಲ್ಲಿ ಹೆಚ್ಚಾಗಿ ಸಿಗುತ್ತದೆ. ಸೀಜನ್ನಿನಲ್ಲಿ ಈ ಹಣ್ಣಿಗೆ ಒಳ್ಳೆಯ ಬೇಡಿಕೆ ಇರುತ್ತದೆ. ಅದನ್ನು ಕಂಡ ಬೇಡ ಮಹಿಳೆಯರು ಇದರ ವ್ಯಾಪಾರ ಕೈಗೊಳ್ಳುತ್ತಾರೆ. (ಚಿತ್ರದಲ್ಲಿ ರಸ್ತೆಯ ಬದಿಯಲ್ಲಿ ಕುಳಿತು ನೇರಳೆಹಣ್ಣು ಮಾರಾಟ ಮಾಡುವವರನ್ನು ನೋಡಬಹುದು.) ಈ ಮಹಿಳೆಯರ ಬಚ್ಚುಬೋರನ ಹಟ್ಟಿಯವರು ಇದು ಒಂದು ರೀತಿಯ ತಾತ್ಕಾಲಿಕ ಉದ್ಯಮವಾಗಿದೆ. ಇದೇ ಹಣ್ಣಿನ ವ್ಯಾಪಾರ ಮಾಡಬೇಕು ಎಂಬ ನಿಯಮವಿಲ್ಲ. ವ್ಯವಹಾರದ ವಹಿವಾಟಿನಲ್ಲಿ ಮಾರುಕಟ್ಟೆಯಲ್ಲಿ ಯಾವ ಹಣ್ಣಿಗೆ ಹೆಚ್ಚಿನ ಲಾಭವಿದೆ ಎಂಬುದನ್ನು ಬೇಡರ ಮಹಿಳೆ ಚೆನ್ನಾಗಿ ತಿಳಿದುಕೊಂಡಿದ್ದಾಳೆ. ಹೀಗೆ ಇನ್ನಿತರ ಹಲವಾರು ಹಣ್ಣಿನ ವ್ಯಾಪಾರವನ್ನು ಬೇಡರ ಮಹಿಳೆ ಮಾಡುತ್ತಾ ಬಂದಿದ್ದಾಳೆ.

ಉದ್ಯಮಗಳಲ್ಲಿ ನಿರತರಾಗಿರುವ ಹೆಂಗಸರು ತುಂಬಾ ಶ್ರಮ ಪಡುತ್ತಾರೆ. ಅವರು ಆರ್ಥಿಕವಾಗಿ ಹಿಡಿತ ಸಾಧಿಸುತ್ತಾರೆ. ಮನೆಯಲ್ಲಿನ ಹಣಕಾಸಿನ ವ್ಯವಹಾರದಲ್ಲಿ ಸ್ವತಂತ್ರವಾಗಿ ತೀರ್ಮಾನ ತೆಗೆದುಕೊಳ್ಳುತ್ತಾರೆ. ಕೆಲವು ಹೆಂಗಸರ ಗಂಡಂದಿರು ಕುಡುಕರಾಗಿದ್ದಾರೆ. ಹಣ ಪೋಲು ಮಾಡುವಂತೆ ಇದ್ದರೆ ಅಂತಹ ಕಡೆ ಹೆಂಡತಿಯೇ ಮನೆಯ ವ್ಯವಹಾರ ನಡೆಸುತ್ತಾಳೆ. ತುಂಬಾ ಸಹಜವಾಗಿಯೇ ಹೆಂಗಸರು ಮನೆಗಳಲ್ಲಿ ಯಜಮಾನಿಕೆಯನ್ನು ಮಾಡುತ್ತಾರೆ. ಅದು ಸಾಧ್ಯವಾಗಿರುವುದು ಅವಳು ಹಣ ಸಂಪಾದನೆ ಮಾಡುತ್ತಿರುವುದರಿಂದ ಮಾತ್ರ. ಇನ್ನು ಕೆಲವು ಕಡೆ ಇಷ್ಟೆಲ್ಲಾ ಕಷ್ಟಪಟ್ಟು ದಿನವಿಡೀ ರಸ್ತೆಯ ಬದಿಯಲ್ಲಿ ಹಣ್ಣಿನ ವ್ಯಾಪಾರ ಮಾಡಿ, ಹಣ ಸಂಪಾದನೆ ಮಾಡಿಕೊಂಡು ಮನೆಗೆ ಹೋದರೆ, ಅಲ್ಲಿ ಗಂಡನ ಹಿಡಿತದಲ್ಲಿ ಬದುಕುತ್ತಾಳೆ. ಸಂಪಾದನೆ ಮಾಡಿದ ಹಣವನ್ನೆಲ್ಲಾ ಅವನಿಗೆ ಕೊಡಬೇಕಾಗುತ್ತದೆ. ಅವನು ಹಣವನ್ನು ಏನು ಮಾಡಿದರೂ ಕೇಳುವ ಸಂದರ್ಭ ಕೂಡಿ ಬರುವುದಿಲ್ಲ. ಇಂದಿನ ದಿನಗಳಲ್ಲಿ ಇಂತಹ ಕ್ರಿಯೆಗಳು ಸ್ವಲ್ಪಮಟ್ಟಿಗೆ ಕಡಿಮೆಯಾಗಿವೆ. ಒಟ್ಟಿನಲ್ಲಿ ಬೇಡರ ಹೆಂಗಸರು ಹಣ್ಣಿನ ವ್ಯಾಪಾರವೆ ಉದ್ಯಮಗಳಲ್ಲಿ ಯಶಸ್ವಿಯಾಗಿದ್ದಾರೆ.

ತರಕಾರಿ ಮಾರಾಟ ಮಾಡುವಲ್ಲಿಯೂ ಬೇಡರ ಮಹಿಳೆ ಗುರುತಿಸಿಕೊಂಡಿದ್ದಾಳೆ. ಪ್ರತಿವಾರದ ಸಂತೆಯಲ್ಲಿ ತರಕಾರಿ ಮಾರಾಟ ಮಾಡುವ ಹೆಂಗಸರು ಇದ್ದಾರೆ. ಕೆಲವು ಹೆಂಗಸರು ಹಳ್ಳಿ ಹಳ್ಳಿಯ ಸಂತೆಗೆ ಹೋಗಿ ತರಕಾರಿ ಮಾರಾಟ ಮಾಡಿ ಬರುತ್ತಾರೆ. ಚಿತ್ರದುರ್ಗದ ಸಂತೆ ಸೋಮವಾರ, ಹಿರಿಯೂರಿನ ಸಂತೆ ಶನಿವಾರ, ನಾಯ್ಕನ ಹಟ್ಟಿಯ ಸಂತೆ ಸೋಮವಾರ ನಡೆದರೆ, ಚಿಕ್ಕಗೊಂಡನಹಳ್ಳಿ ಸಂತೆ ಶುಕ್ರವಾರ ನಡೆಯುತ್ತದೆ. ಅಲ್ಲಿಯೂ ಹೆಚ್ಚಿನ ಲಾಭವನ್ನು ಗಳಿಸಿಕೊಳ್ಳುತ್ತಾರೆ. ಗಂಜಿಗಟ್ಟಿಯ ಬಸಮ್ಮ, ಕೂನಬೇವಿನ ದೇವರಮ್ಮ, ಚಿಕ್ಕಗೊಂಡನಹಳ್ಳಿಯ ಹನುಮಕ್ಕ ಮುಖ್ಯರಾಗುತ್ತಾರೆ. ಈ ಹೆಂಗಸರು ವ್ಯಾಪಾರದಿಂದ ಬಂದ ಹಣವನ್ನು ಮನೆಯ ಖರ್ಚಿಗೆ ಬಳಸಿಕೊಳ್ಳುತ್ತಾರೆ. ಹಾಗಾಗಿ ಎಷ್ಟೋ ಬೇಡರ ಕುಟುಂಬಗಳು ಸುಧಾರಣೆಗೊಂಡಿವೆ.

ವಾರದ ಸಂತೆಯ ದಿನ ಅಡಿಕೆ ವ್ಯಾಪಾರ ಮಾಡುವುದರಲ್ಲಿ ಸೊಂಡೆಕೊಳದ ಕೆಂಚವ್ವ ಮತ್ತು ಓಬವ್ವ ಬೇಡರ ಮಹಿಳೆಯರಾಗಿ ಕಂಡು ಬರುತ್ತಾರೆ. ಇವರಿಬ್ಬರು ಅಕ್ಕ ತಂಗಿಯರು ಪ್ರತಿವಾರ ನಡೆಯುವ ಸಂತೆಗಳಿಗೆ ಅಡಿಕೆ ವ್ಯಾಪಾರ ಮಾಡಲು ಹೋಗ್ತಾರೆ. ಚಿತ್ರಹಳ್ಳಿ ಸಂತೆ, ಹಿರಿಯೂರು ಸಂತೆಗಳಿಗೆ ಹೋಗ್ತಾರೆ. ಇವರು ತುಂಬಾ ದಿನಗಳಿಂದ ಅಡಿಕೆ ವ್ಯಾಪಾರ (ಕೈವ್ಯಾಪಾರ) ಮಾಡ್ತಾ ಬಂದಿದ್ದಾರೆ. ಹಳ್ಳಿಯ ಜನರು, ರೈತರು ಅಡಿಕೆ-ಎಲೆ ಹಾಕಿಕೊಳ್ಳುವುದು ಕಂಡುಬರುತ್ತದೆ. ಹಾಗಾಗಿ ಸಂತೆಗಳಲ್ಲಿ ಅಡಿಕೆ-ಎಲೆ ಕೊಂಡುಕೊಳ್ಳುವವರು ಇದ್ದೆ ಇರ‍್ತಾರೆ. ಆದ್ದರಿಂದ ಅಡಿಕೆ ವ್ಯಾಪಾರ ಮಾಡುವವರಿಗೆ ಸಣ್ಣ ಪ್ರಮಾಣದ ದುಡಿಮೆ ಇರ‍್ತದೆ. ಹಾಗಾಗಿ ಈ ಬೇಡರ ಮಹಿಳೆಯರು ವ್ಯಾಪಾರದಲ್ಲಿ ಮುಂದೆ ಇದ್ದಾರೆ. ಅದೇ ಮೈಸೂರಿನ ಮುಖ್ಯ ನಗರದಲ್ಲಿ, ನಂಜನಗೂಡು, ಗುಂಡ್ಲುಪೇಟೆ ಇನ್ನೂ ಮುಂತಾದ ಸ್ಥಳಗಳಲ್ಲಿ ಬೇಡರ ಮಹಿಳೆಯರು ವೀಳ್ಯೆದೆಲೆ ವ್ಯಾಪಾರ, ಗಂಧದ ಕಡ್ಡಿ ವ್ಯಾಪಾರ, ಇಸ್ತ್ರೀ ಎಲೆ ವ್ಯಾಪಾರ, ಬೀಡಿ ವ್ಯಾಪಾರ ಮಾಡುತ್ತಾರೆ.

ಹೀಗೆ ಉದ್ಯಮದಲ್ಲಿ ಬೇಡರ ಮಹಿಳೆ ಕರ್ನಾಟಕದ ಎಲ್ಲಾ ಭಾಗಗಳಲ್ಲಿ ಸಣ್ಣಪುಟ್ಟ ವ್ಯಾಪಾರ ಮಾಡುತ್ತಾ ಬದುಕುತ್ತಾ ಇದ್ದಾಳೆ. ಇದು ಒಂದು ರೀತಿಯ ಚಾಲೆಂಜಿಂಗ್‌ವೃತ್ತಿ. ಏಕೆಂದರೆ ಪ್ರತಿದಿನವು ಒಂದೊಂದು ರೀತಿ ವ್ಯಾಪಾರ, ವಹಿವಾಟು ನಡೆಯುತ್ತದೆ. ಅದೆಲ್ಲವನ್ನು ಗಮನಿಸಿದ ಬೇಡರ ಮಹಿಳೆಯರು ಈ ಕ್ಷೇತ್ರದಲ್ಲಿ ವ್ಯಾಪಾರದಲ್ಲಿ ತೊಡಗಿ ಅಲ್ಲಿ ಉಂಟಾಗುವ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಿಕೊಂಡು ವ್ಯಾಪಾರದಲ್ಲಿ ಯಶಸ್ಸು ಸಾಧಿಸಿ, ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿದ್ದಾಳೆ. ಇದರಲ್ಲಿ ಸಾಕಷ್ಟು ಲಾಭ ಇಲ್ಲದಿದ್ದರೂ ದಿನದ ಊಟ-ಬಟ್ಟೆಗೆ ಏನೂ ತೊಂದರೆ ಕಂಡು ಬರುವುದಿಲ್ಲ. ಇಲ್ಲಿ ಶ್ರಮ ಪಟ್ಟು ಬದುಕುವ ಮಹಿಳೆಯನ್ನು ನಾವು ಕಾಣುತ್ತೇವೆ.

ಬೇಡರು ಮಹಿಳೆಯರು ಹೋಟೆಲ್‌ಉದ್ಯಮದಲ್ಲಿಯೂ ಇದ್ದಾರೆ. ಇದು ಲಾಭ ತಂದು ಕೊಡುವ ಹುದ್ದೆಯಾದರು ಅಲ್ಲಿ ಕಠಿಣ ಪರಿಶ್ರಮ ಇರುತ್ತದೆ. ಹೋಟೆಲ್‌ಉದ್ಯಮದಲ್ಲಿ ಯಶಸ್ವಿಯಾದವರಲ್ಲಿ ಪ್ರಮುಖವಾಗಿ ಜನಕೊಂಡದ ಹೋಟೆಲ್‌ಸುವರ್ಣಮ್ಮನನ್ನು ಗುರುತಿಸಬಹುದು. ಇವರು ತುಂಬಾ ಶ್ರಮಜೀವಿ. ಮ್ಯಾಸಬೇಡರ ಮಹಿಳೆಯಾದ ಇವರು ಜೀವನದಲ್ಲಿ ಸಾಕಷ್ಟು ನೋವುಗಳನ್ನು ಅನುಭವಿಸಿ ಯಾರ ಆಶ್ರಯವಿಲ್ಲದೆ ಸ್ವಂತ ಪರಿಶ್ರಮದಿಂದ ಮುಂದೆ ಬಂದಿದ್ದಾರೆ. ತನ್ನ ಸ್ವಭಾವಕ್ಕೆ ಹೊಂದಿಕೊಳ್ಳದ ಗಂಡನಜೊತೆ ಸಂಸಾರ ಮಾಡದೆ ಪ್ರತ್ಯೇಕವಾಗಿ ಬದುಕಲು ತೀರ್ಮಾನಿಸಿ ಆಮೇಲೆ ಅವರು ತನ್ನ ಮಕ್ಕಳನ್ನು ಕರೆದುಕೊಂಡು ಒಂಟಿಯಾಗಿ ಬಂದು ಜಾನಕೊಂಡದ ಸರ್ಕಲ್‌ನಲ್ಲಿ ವಾಸ್ತವ್ಯ ಮಾಡುತ್ತಾರೆ. ಅಲ್ಲಿ ಪ್ರಾರಂಭದ ದಿನಗಳಲ್ಲಿ ಸಣ್ಣ ಕಾರ ಮಂಡಕ್ಕಿ, ಮೆಣಸಿನಕಾಯಿ ಅಂಗಡಿ ಇಟ್ಟುಕೊಳ್ಳುತ್ತಾರೆ. ಆಮೇಲೆ, ಕಾಲಕ್ರಮೇಣ ತಿಂಡಿ, ಊಟದ ಹೋಟೆಲ್‌ಪ್ರಾರಂಭಿಸುತ್ತಾರೆ. ಇಂದಿಗೂ ಆ ಹೋಟೆಲ್‌ನಲ್ಲಿ ತಿಂಡಿ ತಯಾರು ಮಾಡುವವರೇ ಸುವರ್ಣಮ್ಮ ಅವರು ಸುವರ್ಣಮ್ಮ ಮೂಲದಲ್ಲಿ ಕೃಷಿ ಕೆಲಸ ಮಾಡುತ್ತಿದ್ದರು. ಆದರೆ ನಂತರ ಆಕಸ್ಮಿಕವಾಗಿ ಹೋಟೆಲ್‌ಪ್ರಾರಂಭ ಮಾಡಿ ವೃತ್ತಿಯಲ್ಲಿ ಯಶಸ್ವಿಯಾಗಿದ್ದಾರೆ.

ಹೀಗೆ ಇಡೀ ಕರ್ನಾಟಕದ ಬೇಡರ ಮಹಿಳೆ ವೈವಿಧ್ಯಮಯವಾದ ಉದ್ಯಮಗಳಲ್ಲಿ ಪಾಲ್ಗೊಂಡು ಪರಿಶ್ರಮದಿಂದ ಜೀವನ ರೂಪಿಸಿಕೊಂಡಿದ್ದಾಳೆ. ಈ ಉದ್ಯಮಗಳು ಮಹಿಳೆಗೆ ಮಾನಸಿಕ ರ್ಧೈ ತುಂಬುತ್ತವೆ. ಆರ್ಥಿಕ ಸಂಪತ್ತು ಆಕೆಗೆ ಕೈತುಂಬಾ ಸಿಕ್ಕಾಗ ಸಹಜವಾಗಿಯೇ ಸದೃಢಳಾಗುತ್ತಾಳೆ.

ಜನಪದ ಆಟ ಮತ್ತು ಮಹಿಳೆ:

ಬೇಡರ ಮಹಿಳೆ ಜಾನಪದ ಆಟದಲ್ಲಿಯೂ ಭಾಗಿಯಾಗುತ್ತಾಳೆ. ಯುಗಾದಿ ಹಬ್ಬದಂತಹ ದಿನದಲ್ಲಿ ಹೆಂಗಸರು ಮನೆಯಲ್ಲಿನ ಹಬ್ಬದ ಎಲ್ಲಾ ಕೆಲಸ ಮುಗಿಸಿಕೊಂಡು ಆಮೇಲೆ ವಿಶ್ರಾಂತಿ ಪಡೆಯಲು ಹಟ್ಟಿಯ ಹೆಂಗಸರ ಜೊತೆ ಊರ ಹೊರಗಿನ ಹುಣಸೆಮರದ ಹತ್ತಿರ ಹೋಗಿ ಅಲ್ಲಿ ಜೋಕಾಲಿ ಹಾಕುತ್ತಾರೆ. ತುಂಬಾ ಎತ್ತರವಾದ ಹುಣಸೆ ಮರಕ್ಕೆ ಗಂಡಸರ ಸಹಾಯದಿಂದ ಜೋಕಾಲಿ ಹಾಕಿಸಿಕೊಳ್ಳುತ್ತಾರೆ. ತುಂಬಾ ಸಂತೋಷದಿಂದ ಎಲ್ಲಾ ಗೆಳತಿಯರು ಸೇರಿಕೊಂಡು ಜೋಕಾಲಿಯನ್ನು ಎರಡು-ಮೂರು ಗಂಟೆ ಆಡಿ ಬರುತ್ತಾರೆ. ಬೇಡರ ಕೆಲವು ಹೆಂಗಸರು ಆಟ ಆಡಲು ಹೋಗುತ್ತಾರೆ. ಅದರಲ್ಲೂ ಮದುವೆಯಾದ ಹೆಂಗಳೆಯರು, ಹೊಸದಾಗಿ ಮದುವೆಯಾದ ಹುಡುಗಿಯರು ಈ ಆಟ ಆಡಲು ಹೋಗುತ್ತಾರೆ. ಈ ಆಟ ಮನಸ್ಸಿಗೆ ಒಳ್ಳೆಯ ಮುದ ನೀಡುತ್ತದೆ.

ಬೇಡರ ಮಹಿಳೆಗೆ ಬೇಸಿಗೆ ಕಾಲದಲ್ಲಿ ತುಂಬಾ ವಿಶ್ರಾಂತಿ ಕಾಲ, ಇವರು ಸಮಯವನ್ನು ಕಳೆಯಲು ಚೌಕಬಾರ, ಏಳುಮನೆ ಆಟ, ದಸ್ಯಬಾರ, ಪಗಡೆ ಆಟಗಳನ್ನು ಮನೆಯ ಮುಂದಿನ ಅಂಗಳದಲ್ಲಿ ಆಡುತ್ತಾರೆ. ಮಧ್ಯವಯಸ್ಸಿನ ಮತ್ತು ವಯಸ್ಸಾದ ಅಜ್ಜಿಯರು ಹೆಚ್ಚಿನದಾಗಿ ಈ ಆಟಗಳನ್ನು ಆಡುತ್ತಾರೆ. (ಚಿತ್ರದಲ್ಲಿ ವಯಸ್ಸಾದ ಅಜ್ಜಿಯರು ದಸ್ಯಬಾರ ಆಟ ಆಡುವುದನ್ನು ನೋಡಬಹುದು.) ಇಬ್ಬಿಬ್ಬರು ಸೇರಿ ಒಂದು ಗುಂಪಾಗಿ ಅಥವಾ ಮೂವರು ಸೇರಿ ಈ ಆಟವನ್ನು ಆಡುತ್ತಾರೆ. ಈ ಚಿತ್ರದಲ್ಲಿ ನಾಲ್ಕು ಜನ ಆಟ ಆಡಿದರೆ ಇನ್ನೊಬ್ಬ ಅಜ್ಜಿ ಸ್ವಲ್ಪ ದೂರದಲ್ಲಿ ಕುಳಿತು ಆಟವನ್ನು ಗಮನಿಸುತ್ತಿದ್ದಾಳೆ. ಬೇಸಿಗೆಯಲ್ಲಿ ಚಿತ್ರದುರ್ಗದ ಜಿಲ್ಲೆಯ ಸ್ವಲ್ಪ ದೂರದಲ್ಲಿ ಕುಳಿತು ಆಟವನ್ನು ಆಡುತ್ತಾರೆ. ಬೇಜಾರದ ಸಂದರ್ಭದಲ್ಲಿ ನೆರೆಹೊರೆಯ ಹೆಂಗಸರು ಒಟ್ಟಿಗೆ ಸೇರಿಕೊಂಡು ಈ ಆಟ ಆಡುತ್ತಾರೆ. ಕೆಲವು ಕಡೆ ಪುರುಷರು ಆಡುತ್ತಾರೆ. ಆದರೆ ಹೆಚ್ಚಿನದಾಗಿ ಈ ಆಟ ಆಡುವವರು ಹೆಂಗಸರಾಗಿದ್ದಾರೆ. ಅದರಲ್ಲೂ ವಯಸ್ಸಾದ ಅಜ್ಜಿಯರು ಆಡುವುದು ಜಾಸ್ತಿ.

ಮಕ್ಕಳ ವಯಸ್ಸಿನಲ್ಲಿ ಹುಡುಗಿಯರು ಕುಂಟೆಬಿಲ್ಲೆ, ಕಣ್ಣು ಮುಚ್ಚಾಲೆ ಆಟ ಆಡುತ್ತಾರೆ. ಕುಂಟೆಬಿಲ್ಲೆಯನ್ನು ತನ್ನ ಸಮುದಾಯದ ಅಕ್ಕಪಕ್ಕದ, ನೆರೆಹೊರೆಯ ಸಮವಯಸ್ಕ ಹುಡುಗಿಯೊಂದಿಗೆ ಆಟ ಆಡುತ್ತಾಳೆ. ನೆಲದಲ್ಲಿ ಚೌಕಾಕಾರವಾಗಿ ನಾಲ್ಕು ಮನೆ ಅಥವಾ ಆರು ಮನೆಯನ್ನು ಸುಮಾರು ೮ ಅಡಿ ಉದ್ದದಲ್ಲಿ ಬರೆದು ಅದರಲ್ಲಿ ಕರಿಯಬೋಕಿ ಬಿಲ್ಲೆಯನ್ನು ಬಳಸಿಕೊಂಡು ಕುಂಟೆಬಿಲ್ಲೆ ಆಡುತ್ತಾರೆ. ಇದನ್ನು ಆಡುವುದರಿಂದ ಚಿಕ್ಕ ಹುಡುಗಿಯರಿಗೆ ಒಳ್ಳೆಯ ವ್ಯಾಯಾಮವಾಗುತ್ತದೆ ಮತ್ತು ಮಾನಸಿಕವಾಗಿ ಚುರುಕು ಆಗುತ್ತಾರೆ. ಇದು ಕೂಡ ಜನಪದರಲ್ಲಿ ಮುಖ್ಯವಾಗಿ ಕಂಡುಬರುತ್ತದೆ. ಬೇಡರ ಹುಡುಗಿ ಇಂತಹ ಆಟದಲ್ಲಿ ಪಾಲ್ಗೊಳ್ಳುತ್ತಾರೆ. ಕಣ್ಣು ಮುಚ್ಚಾಲೆ ಆಟವುಕೂಡ ತುಂಬಾ ಸೊಗಸಾಗಿರುತ್ತದೆ. ಈ ಆಟದಲ್ಲಿ ಹೆಣ್ಣು/ಗಂಡು ಬೇಧವಿಲ್ಲದೆ ಎಲ್ಲರೂ ಆಟಕ್ಕೆ ಸೇರುತ್ತಾರೆ. ಅದರಲ್ಲಿಯೂ ಹುಡುಗಿಯರು ಹೆಚ್ಚಿನ ಪಾಲು ಇರುತ್ತಾರೆ. ಅವರಲ್ಲಿ ಯಾರಾದರು ತುಂಬಾ ಹಿರಿಯ ಹುಡುಗಿ ಇನ್ನೊಬ್ಬ ಹುಡುಗಿಯ ಕಣ್ಣು ಮುಚ್ಚುತ್ತಾಳೆ. ಆಟಕ್ಕೆ ಸೇರಿದವರೆಲ್ಲರೂ ಆ ಸಂದರ್ಭದಲ್ಲಿ ಬಚ್ಚಿಟ್ಟುಕೊಳ್ಳುತ್ತಾರೆ. ಆಮೇಲೆ ಕಣ್ಣು ಮುಚ್ಚಿಸಿ ಕೊಂಡಿದ್ದ ಹುಡುಗಿ ಅವರನ್ನು ಹುಡುಕಬೇಕು. ಅದರಲ್ಲಿ ಯಾರು ಮೊದಲು ಅವಳ ಕೈಗೆ ಸಿಗುತ್ತಾರೊ ಅವರು ನಂತರ ಕಣ್ಣು ಮುಚ್ಚಿಸಿಕೊಳ್ಳಬೇಕು. ಇದು ಒಂದು ರೀತಿಯಲ್ಲಿ ಮಕ್ಕಳಿಗೆ ಮೋಜಿನ ಆಟವಾಗಿರುತ್ತದೆ. ಹೀಗೆ ಜನಪದ ಆಟದಲ್ಲಿ ಬೇಡರ ಹೆಂಗಸರು, ಸಣ್ಣವರು, ದೊಡ್ಡವರು, ಮುದುಕರು ಎನ್ನದೆ ಎಲ್ಲರೂ ತಮ್ಮ ತಮ್ಮ ಸಂದರ್ಭಕ್ಕನುಗುಣವಾಗಿ ಬೇರೆ ಬೇರೆ ರೀತಿಯ ಆಟಗಳನ್ನು ಆಡುತ್ತಾರೆ. ಮೇಲೆ ಗುರುತಿಸಿರುವ ಆಟಗಳು ಈಗ ಚಾಲ್ತಿಯಲ್ಲಿರುವ ಆಟಗಳಾಗಿರುತ್ತವೆ. ಇಂದು ಜನಪದ ಆಟಗಳು ದೂರದರ್ಶನ ಪ್ರಭಾವದಿಂದ ನಶಿಸಿ ಹೋಗುತ್ತಿವೆ.

ಶಿಕ್ಷಣ ಮತ್ತು ಮಹಿಳೆ:

ಬೇಡರ ಮಹಿಳೆ ಶಿಕ್ಷಣದಲ್ಲಿ ತುಂಬಾ ಹಿಂದೆ ಉಳಿದಿದ್ದಾಳೆ. ಒಟ್ಟು ಸಮುದಾಯವೇ ಶಿಕ್ಷಣ ಕ್ಷೇತ್ರದಲ್ಲಿ ತುಂಬಾ ಹಿಂದೆ ಇದೆ. ಪರಿಶಿಷ್ಟ ವರ್ಗದವರೇ ಆದ ದಿವಂಗತ ಎಲ್‌.ಜಿ. ಹಾವನೂರ ಅವರ ಶ್ರಮದ ಪ್ರತಿಫಲದಿಂದ “ನಾಯಕ” ಜನಾಂಗವು ಪರಿಶಿಷ್ಟ ಪಂಗಡಕ್ಕೆ ಸೇರಿಕೊಂಡಿತು. ಹಾಗಾಗಿ ಕರ್ನಾಟಕದ ಎಲ್ಲಾ ಭಾಗದ ನಾಯಕ ಜನಾಂಗದವರು ಇತ್ತೀಚೆಗೆ ಸ್ವಲ್ಪಮಟ್ಟಿಗೆ ಶಿಕ್ಷಣ ಕ್ಷೇತ್ರದಲ್ಲಿ ಮುಂದಿದ್ದಾರೆ. ಸ್ವಾತಂತ್ರ‍್ಯ ಬಂದ ಮೇಲೆ ಶಿಕ್ಷಣಕ್ಷೇತ್ರದಲ್ಲಿ ಸಾಕಷ್ಟು ಸುಧಾರಣೆ ಆಗುತ್ತಾ ಇದೆ. ಭಾರತದಲ್ಲಿ ದಶಕದಿಂದ ದಶಕಕ್ಕೂ ಶಿಕ್ಷಣಕ್ಷೇತ್ರದಲ್ಲಿ ಅಭಿವೃದ್ಧಿಯನ್ನು ಕಾಣುತ್ತಿದ್ದೇವೆ. ಬೇಡ ಜನಾಂಗವು ಪರಿಶಿಷ್ಟವರ್ಗಕ್ಕೆ ಸೇರಿದ್ದರಿಂದ ಸರ್ಕಾರದ ಸವಲತ್ತುಗಳು ನಿಶ್ಕುಲ್ಕವಾಗಿ ಸಿಗತೊಡಗಿವೆ. ಶಿಕ್ಷಣ ಪಡೆಯಲು ವಿದ್ಯಾರ್ಥಿಗಳಿಗೆ ಶಾಲೆಗಳಲ್ಲಿ ಶುಲ್ಕ ರಿಯಾಯ್ತಿ, ಹಾಸ್ಟೆಲ್‌ಸೌಲಭ್ಯ, ಸರ್ಕಾರಿ ಉದ್ಯೋಗಕ್ಕೆ ಆಯ್ಕೆಯಾಗಲು ಮೀಸಲಾತಿ ಮತ್ತು ಮಹಿಳಾ ಮೀಸಲಾತಿ ಇರುವುದರಿಂದ ಬೇಡರಿಗೆ ಹೆಚ್ಚಿನ ಅವಕಾಶ ದೊರೆತಿದೆ.

ಬೇಡರ ಪುರುಷರಿಗೆ ಆ ಜನಾಂಗದ ಮಹಿಳೆಯರನ್ನು ಹೋಲಿಸಿದರೆ ಸಾಕ್ಷರತೆ ಪ್ರಮಾಣದಲ್ಲಿ ತುಂಬಾ ಕಡಿಮೆಯಿದೆ. ಭಾರತದ ಸಾಕ್ಷರತಾ ಪ್ರಮಾಣದಲ್ಲಿ ಒಟ್ಟು ಮಹಿಳೆಯರ ಸಾಕ್ಷರತಾ ಪ್ರಮಾಣ ಶೇ. ೫೪.೦ (೨೦೦೧ರ ಜನಗಣತಿ) ಇದೆ. ಆದರೆ ಅದೇ ಬೇಡರ ಮಹಿಳೆಯ ಸಾಕ್ಷರತಾ ಪ್ರಮಾಣ ತುಂಬಾ ಕಡಿಮೆ ಇದೆ. ಅಂದರೆ ಸುಮಾರು ಶೇ ೧೦ಕ್ಕಿಂತ ಹೆಚ್ಚಿಗೆ ಇರಲಾರದು. ಒಟ್ಟು ಬೇಡಜನಾಂಗದಲ್ಲಿ ಮಹಿಳೆಯರಿಗೆ ಹೋಲಿಸಿದರೆ ಪುರುಷರು ಹೆಚ್ಚಿನ ಅವಕಾಶ ಪಡೆದು ಸ್ವಲ್ಪ ಮಟ್ಟಿಗೆ ಸುಧಾರಿಸಿದ್ದಾರೆ. ಬೇಡ ಜನಾಂಗಕ್ಕೆ ಸೀಮಿತವಾಗಿ ಹೇಳುವುದಾದರೆ ಪುರುಷರು ಸ್ವಲ್ಪ ಹೆಚ್ಚಿನದಾಗಿ ಸಿಗುತ್ತಾರೆ. ಆದರೆ ಒಟ್ಟಾರೆ ಭಾರತೀಯ ಮಟ್ಟದಲ್ಲಿ ಬೇಡರು ಶಿಕ್ಷಣದಿಂದ ತುಂಬಾ ಹಿಂದೆ ಉಳಿದಿದ್ದಾರೆ.

ಕರ್ನಾಟಕ ಸರ್ಕಾರ ಈಗ ಪ್ರತಿಯೊಂದು ಊರಿನಲ್ಲಿ ಪ್ರಾಥಮಿಕ ಶಿಕ್ಷಣವನ್ನು ಕಡ್ಡಾಯವಾಗಿ ನೀಡುತ್ತಿದೆ. ಇತ್ತೀಚಿನ ದಿನಗಳಲ್ಲಿ ಪ್ರತಿ ಹಳ್ಳಿಯಲ್ಲಿಯೂ ಹುಡು-ಹುಡುಗಿಯರನ್ನು ಶಾಲೆಗೆ ಕಳುಹಿಸುತ್ತಿದ್ದಾರೆ. ಕಳೆದ ಎರಡು-ಮೂರು ದಶಕಗಳ ಹಿಂದೆ ಹುಡುಗ-ಹುಡುಗಿಯರನ್ನು ಶಾಲೆಗೆ ಕಳುಹಿಸುವುದು ಕಷ್ಟದ ಕೆಲಸವಾಗಿತ್ತು. ಅದಕ್ಕೆ ಕೌಟುಂಬಿಕ ವ್ಯವಸ್ಥೆಯಲ್ಲಿನ ಅನೇಕ ಅಂಶಗಳು ಕಾರಣವಾಗಿದ್ದವು. ಬೇಡರಲ್ಲಿ ಪುರುಷ ಪ್ರಧಾನ ವ್ಯವಸ್ಥೆಯೇ ಇರುವುದು. ಜೊತೆಗೆ ಎಲ್ಲಾ ಪೋಷಕ ವರ್ಗದವರು ಅನಕ್ಷರಸ್ಥರಾಗಿರುವುದರಿಂದ ಅವರಿಗೆ ಶಿಕ್ಷಣದ ಮೌಲ್ಯ ಏನು ಎಂಬುದು ತಿಳಿದಿರಲಿಲ್ಲ. ಹುಡುಗ/ಹುಡುಗಿಯರು ಶಿಕ್ಷಿತರಾಗಬೇಕೆಂಬುದು ಅವರಿಗೆ ಮುಖ್ಯವಾಗಿರಲಿಲ್ಲ. ಬೇಡರ ಹೆಚ್ಚಿನ ಪಾಲು ರೈತರಾಗಿದ್ದರು. ಜೊತೆಗೆ ಪಶುಪಾಲಕರಾಗಿದ್ದರು. ಜೊತೆಗೆ ಮೇಕೆ (ಆಡು) ಕುರಿಗಳನ್ನು ಸಾಕುತ್ತಿದ್ದರು. ಹಾಗಾಗಿ ಮನೆಯಲ್ಲಿ ಹುಟ್ಟಿದ ಹುಡುಗರನ್ನು ಮನೆಯಲ್ಲಿನ ದನ-ಕರುಗಳನ್ನು ಕಾಯಲು, ಕುರಿಗಳನ್ನು ಕಾಯಲು, ಮೇಕೆಗಳನ್ನು ಕಾಯಲು ಕಳುಹಿಸುತ್ತಿದ್ದರು. ಇನ್ನು ಹುಡುಗಿಯರು ತಮ್ಮ ತಾಯಂದಿರು ಹೇಳಿದ ಕೆಲಸ ಮಾಡಿಕೊಂಡು ಮನೆಯಲ್ಲಿ ಇರಬೇಕಾಗಿತ್ತು. ಇಂತಹ ಸ್ಥಿತಿಯಲ್ಲಿದ್ದ ಬೇಡರ ಮಕ್ಕಳು ಇಂದು ಆ ವೃತ್ತಿಗಳಿಂದ ಸ್ವಲ್ಪಮಟ್ಟಿಗಾದರೂ ಹೊರಬಂದು, ಕೆಲವು ಹುಡುಗರು ಶಿಕ್ಷಣ ಪಡೆದು ಸಣ್ಣ-ಪುಟ್ಟ ನೌಕರಿಗಳಲ್ಲಿದ್ದಾರೆ. ಆದರೆ ಮಹಿಳೆಯರ ಪಾಲು ಇಲ್ಲಿ ತುಂಬಾ ಕಡಿಮೆಯಾಗಿದೆ.

ಕರ್ನಾಟಕದಲ್ಲಿ ಬೇಡರ ಮಹಿಳೆ ಶಿಕ್ಷಣಕ್ಷೇತ್ರದಲ್ಲಿ ತುಂಬಾ ಹಿಂದೆ ಇದ್ದಾಳೆ. ಪ್ರಸ್ತುತ ಸಂದರ್ಭದಲ್ಲಿ ಇವರ ಹುಡುಗಿಯರು ಪ್ರಾಥಮಿಕ ಶಿಕ್ಷಣ ಕಲಿಯಲು ಹೋಗುತ್ತಿದ್ದಾರೆ. ಈಗ ಪ್ರತಿಯೊಂದು ಹಳ್ಳಿಗಳಲ್ಲಿ ಪ್ರಾಥಮಿಕ ಶಾಲೆಗಳು ಇವೆ. ಹಾಗಾಗಿ ಈ ಜನಾಂಗದ ಮಹಿಳೆ ಶಾಲೆಗೆ ಸೇರುತ್ತಿದ್ದಾಳೆ. ಸರ್ಕಾರವು ಉಚಿತ ಬಟ್ಟೆ, ಪುಸ್ತಕ, ಕೈಚೀಲಗಳನ್ನು ಈ ವರ್ಗದ/ಹುಡುಗ-ಹುಡುಗಿಯರಿಗೆ ಕೊಡುತ್ತಿದೆ. ಜೊತೆಗೆ ಮಧ್ಯಾಹ್ನದ ಹೊತ್ತಿನಲ್ಲಿ ಬಿಸಿಯೂಟ ಕೊಡುತ್ತಿದ್ದಾರೆ. ಜೊತೆಗೆ ಶಾಲೆಯ ಫೀಜ್‌ನಲ್ಲಿ ರಿಯಾಯ್ತಿ ಇದೆ. ಈ ರೀತಿ ಅನುಕೂಲ ಮಾಡಿಕೊಟ್ಟಿರುವುದರಿಂದ ಹೆಚ್ಚಿನ ಹುಡುಗಿಯರು ಶಾಲೆಗೆ ಸೇರುತ್ತಿದ್ದಾರೆ. ಬಿಸಿಯೂಟದ ಆಕರ್ಷಣೆಯಿಂದ ಇಂದು ಹಳ್ಳಿಗಳಲ್ಲಿ ಮಕ್ಕಳು ಶಾಲೆಗೆ ಬರುತ್ತಿದ್ದಾರೆ. ಏಕೆಂದರೆ ಎಷ್ಟೋ ಕುಟುಂಬಗಳಲ್ಲಿ ತಂದೆ-ತಾಯಿಗಳು ಬೆಳಿಗ್ಗೆಯೇ ಕೂಲಿ ಮಾಡಲು ಹೋಗುತ್ತಾರೆ. ಪುನಃ ಅವರು ವಾಪಸು ಬರುವುದು ಸಾಯಂಕಾಲ. ಅಂತಹವರ ಮಕ್ಕಳು ಮಧ್ಯಾಹ್ನದ ಹೊತ್ತು ಸರಿಯಾದ ಊಟವಿಲ್ಲದೆ ಉಪವಾಸ ಇರಬೇಕಾಗಿತ್ತು. ಆದರೆ ಈಗ ಶಾಲೆಯಲ್ಲಿ ನೀಡುವ ಬಿಸಿಯೂಟದ ಪ್ರಭಾವದಿಂದ ಆ ವರ್ಗದ ಮಕ್ಕಳು ಶಾಲೆಗೆ ಬರುತ್ತಾರೆ. ಆ ಮಕ್ಕಳು ಶಾಲೆಯಲ್ಲಿ ಕೊಡುವ ಆಹಾರ ಮುಖ್ಯವೆಂದು ತಿಳಿದು ಅಕ್ಷರ ಕಲಿತೇ ಕಲಿಯುತ್ತಾರೆ ಎಂದು ಹಾಯಸ್ಕೂಲ್‌ನಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರಾದ ಬಿ.ಟಿ.ಉಮೇಶ ಅವರು ಹೇಳುತ್ತಾರೆ.

ಪ್ರಾಥಮಿಕ ಶಿಕ್ಷಣವನ್ನು ಹೆಚ್ಚಿನ ಪ್ರಮಾಣದಲ್ಲಿ ಕಲಿಯುತ್ತಾರೆ. ಆದರೆ ಕೆಲವು ಹಳ್ಳಿಗಳಲ್ಲಿ ೧ರಿಂದ ೪ನೇ ತರಗತಿವರೆಗೆ ಶಾಲೆ ಇರುತ್ತದೆ. ಆಮೇಲೆ ೫ ರಿಂದ ೭ನೇ ತರಗತಿಗೆ ಇನ್ನೊಂದು ಊರಿಗೆ ಹೋಗಬೇಕು. ಅಂತಹ ಕಡೆ ಹುಡುಗಿಯರ ಪ್ರಮಾಣ ಕಡಿಮೆ ಇರುತ್ತದೆ. ಪೋಷಕರು ಹುಡುಗಿಯರನ್ನು ಹಳ್ಳಿಯಿಂದ ಹಳ್ಳಿಗೆ ಓಡಾಡಿಕೊಂಡು ವಿದ್ಯಾಭ್ಯಾಸ ಮಾಡಲು ಕಳುಹಿಸುವವರು. ಇಂತಹವರು ಹುಡುಗರನ್ನು ಕಳುಹಿಸಲು ಮುಂದೆ ಬರುತ್ತಾರೆ. ಒಂದು ವೇಳೆ ೧ ರಿಂದ ೭ನೇ ತರಗತಿವರೆಗೆ ಊರುಗಳಲ್ಲಿ ಶಾಲೆ ಇದ್ದರೆ ಹುಡುಗಿಯರನ್ನು ೭ನೇ ತರಗತಿ ಮುಗಿಯುವವರೆಗೂ ಕಳುಹಿಸಿ ನಂತರ ಮನೆಯಲ್ಲಿ ಇಟ್ಟುಕೊಳ್ಳುತ್ತಾರೆ. ಆ ಹುಡುಗಿ ಎಷ್ಟೇ ಬುದ್ದಿವಂತಳಿದ್ದರೂ ಹೈಸ್ಕೂಲಿಗೆ ಕಳುಹಿಸುವವರು ತುಂಬಾ ಕಡಿಮೆ. ಒಂದೊಂದು ಊರಿನಲ್ಲಿ ೧ರಿಂದ ೧೦ನೇ ತರಗತಿವರೆಗೆ ಶಾಲೆಗಳು ಇರುತ್ತವೆ. ಅಂತಹ ಕಡೆ ಹುಡುಗಿಯರನ್ನು ಶಾಲೆಗೆ ಕಳಿಸುತ್ತಾರೆ. ಆದರೆ ಮುಂದೆ ಕಾಲೇಜುಗಳಿಗೆ ಕಳುಹಿಸುವುದಿಲ್ಲ. ಇದು ಹಿಂದಿನಿಂದಲೂ ನಿರಂತರವಾಗಿ ನಡೆದುಕೊಂಡು ಬಂದ ಕ್ರಿಯೆಯಾಗಿದೆ. ಇದಕ್ಕೆ ಮುಖ್ಯ ಕಾರಣ, ಪೋಷಕರು ಅನಕ್ಷರಸ್ಥರಾಗಿರುತ್ತಾರೆ. ಹೆಣ್ಣು ಮಕ್ಕಳು ಎಷ್ಟೇ ಓದಿದರೂ ಅವಳು ಕೊಟ್ಟ ಮನೆಗೆ ಹೋಗುವವಳು, ಮೇಲಾಗಿ ಎಷ್ಟೇ ಓದಿದರೂ ಅವಳು ಅಡಿಗೆ ಮಾಡೋದು ತಪ್ಪುವದಿಲ್ಲ. ಹಾಗಾಗಿ ಅವಳನ್ನು ವಿದ್ಯಾವಂತೆಯನ್ನಾಗಿ ಮಾಡುವಲ್ಲಿ ಆಸಕ್ತಿ ಇರುವುದಿಲ್ಲ.

ಆದರೆ ಇತ್ತೀಚಿನ ಒಂದು ದಶಕದಿಂದ ಹುಡುಗಿಯರನ್ನು ವಿದ್ಯಾವಂತೆಯರನ್ನಾಗಿ ಮಾಡಲು ಮುಂದೆ ಬಂದಿದ್ದಾರೆ. ಅದಕ್ಕೆ ಇಂದು ಚಾಲ್ತಿಯಲ್ಲಿರುವ ಮಹಿಳಾ ಮೀಸಲಾತಿ (೩೩%) ಯೇ ಕಾರಣವಾಗಿದೆ. ಇದರ ಗಾಳಿ ಪ್ರತಿಯೊಂದು ಹಳ್ಳಿಗೂ ಹಬ್ಬಿದೆ. ಸ್ತ್ರೀಯರ ಸಮಾನತೆಯ ಹೋರಾಟದ ಹವಾಗುಣ ಎಲ್ಲೆಡೆಯೂ ಹಬ್ಬಿರುವುದರಿಂದ ಅದು ಗ್ರಾಮೀಣ ಪ್ರದೇಶದ ಜನರಿಗೂ ಗೊತ್ತಾಗಿದೆ.

ಬೇಡ, ವಾಲ್ಮೀಕಿ, ಪರಿವಾರದವರು, ಮ್ಯಾಸಬೇಡ ಮತ್ತು ಊರಬೇಡರ ಮಹಿಳೆ ಆ ಜನಾಂಗದ ಪುರುಷರಿಗೆ ಹೋಲಿಸಿದರೆ ಶಿಕ್ಷಣ ಕ್ಷೇತ್ರದಲ್ಲಿ ತುಂಬಾ ಹಿಂದೆ ಉಳಿದಿದ್ದಾರೆ. ಈಗಾಗಲೇ ಪ್ರತಿಯೊಂದು ಹಳ್ಳಿಯಲ್ಲಿಯೂ ಬೇಡಸಮುದಾಯದಲ್ಲಿ ಒಬ್ಬರು-ಇಬ್ಬರು ಪದವಿ, ಸ್ನಾತಕೋತ್ತರ, ಪಿ.ಎಚ್‌.ಡಿ, ಟಿ.ಸಿ.ಹೆಚ್‌, ಎಲ್‌.ಎಲ್‌.ಬಿ, ಬಿ.ಇಡಿ, ನರ್ಸ್‌ಟ್ರೇನಿಂಗ್‌, ಮೆಡಿಕಲ್‌, ಇಂಜಿನಿಯರಿಂಗ್‌, ಐ.ಟಿ.ಸಿ, ಇನ್ನಿತರ ಡಿಪ್ಲೋಮಾ, ಕೆ.ಎ.ಎಸ್‌., ಐ.ಎಫ್‌.ಎಸ್‌ಇನ್ನಿತರ ತರಬೇತಿಗಳನ್ನು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಪಡೆದ ಹುಡುಗ-ಹುಡುಗಿಯರು ಸಿಗುತ್ತಾರೆ. ಹುಡುಗರಿಗೆ ಹೋಲಿಸಿದರೆ ಹುಡುಗಿಯರ ಪ್ರಮಾಣ ತುಂಬಾ ಕಡಿಮೆ ಇದೆ. ಅದರಲ್ಲೂ ಹಳ್ಳಿಗಳಲ್ಲಿ ಉನ್ನತ ವಿದ್ಯಾಭ್ಯಾಸ ಮಾಡಿರುವ ಮಹಿಳೆಯರು ಸಿಗುವುದು ತುಂಬಾ ಕಡಿಮೆ.

ಡಾ.ಎನ್‌.ಕೆ. ಲೋಲಾಕ್ಷಿ ಹಾಸನ ಜಿಲ್ಲೆಯ ನುಗ್ಗೆಹಳ್ಳಿಯವರು. ಇವರು ಕನ್ನಡದಲ್ಲಿ ಪಿ.ಎಚ್‌.ಡಿ ಪಡೆದು ಮಂಗಳೂರು ವಿಶ್ವವಿದ್ಯಾಲಯದ ಕನ್ನಡ ಸ್ನಾತಕೋತ್ತರ ವಿಭಾಗದಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡುತ್ತ ಇದ್ದಾರೆ. ಅದೇ ರೀತಿ ಗೋನೂರು ಮೀನಾಕ್ಷಿ ಎಂ.ಎ. ಪದವಿ ಪಡೆದು ಸರ್ಕಾರಿ ಇಲಾಖೆಯೊಂದರಲ್ಲಿ ಪ್ರಥಮ ದರ್ಜೆ ಸಹಾಯಕಳಾಗಿ ಕೆಲಸ ಮಾಡುತ್ತಾ ಇದ್ದಾಳೆ. ತುರನೂರಿನ ರೂಪಾ ಪ್ರಾಥಮಿಕ ಶಾಲೆಯ ಶಿಕ್ಷಕಿಯಾಗಿದ್ದಾರೆ. ಐಮಂಗಲದ ಎಸ್‌.ಜಾನಕಿ, ಬಿ.ಎ. ಬಿ.ಇಡಿ, ಲತಾ ತಮತಿಹಳ್ಳಿ, ಪಿಯುಸಿ, ಟಿ.ಸಿ.ಹೆಚ್‌, ಚಳ್ಳಕೆರೆ ನಾಗಮಣಿ ಬಿ.ಎ., ಬಿ.ಇಡಿ, ಮಂಜುಳಾ ಹಿಂದಿ ಬಿ.ಇಡಿ, ಬಂಗೇರ ಹಟ್ಟಿ ರತ್ನಮ್ಮ, ಹಿಂದಿ, ಬಿ.ಇಡಿ, ಪಿ.ಅಂಬಿಕಾ, ಚಿತ್ರದುರ್ಗ-ಎಂಎಸ್‌.ಸಿ., ರೇಣುಕಾ ಚಿತ್ರದುರ್ಗ, ಬಿ.ಎ., ಎಲ್‌.ಎಲ್‌.ಬಿ, ಕವಿತಾ ಐ.ಪಿ.ಎಸ್‌. ಹೀಗೆ ಇನ್ನೂ ಮುಂತಾದವರು ಪದವಿಗಳನ್ನು ಪಡೆದು, ಇವರಲ್ಲಿ ಕೆಲವರು ಸರ್ಕಾರಿ ಉದ್ಯೋಗದಲ್ಲಿದ್ದಾರೆ. ಹೀಗೆ ಕರ್ನಾಟಕದ ಎಲ್ಲಾ ಭಾಗದಲ್ಲಿಯೂ ಅತಿಕಡಿಮೆ ಮಟ್ಟದಲ್ಲಿಯಾದರೂ ಬೇಡರ ಮಹಿಳೆ ಶಿಕ್ಷಣ ಪಡೆದು ವಿವಿಧ ರೀತಿಯ ಉದ್ಯೋಗದಲ್ಲಿದ್ದಾಳೆ. ಬೇಡರ ಮಹಿಳೆಯು ಇನ್ನೂ ಶಿಕ್ಷಣ ಮತ್ತು ಉದ್ಯೋಗ ಕ್ಷೇತ್ರದಲ್ಲಿ ಸಾಧನೆಯನ್ನು ಮಾಡಬೇಕಾಗಿದೆ. ಹೀಗೆ ಶಿಕ್ಷಣ ಪಡೆದ ಬೇಡರ ಮಹಿಳೆಯರಲ್ಲಿ ಉದ್ಯೋಗಗಳನ್ನು ಪಡೆದಿರುವವರು ತುಂಬಾ ಕಡಿಮೆ ಸಂಖ್ಯೆಯಲ್ಲಿ ಇದ್ದಾರೆ.

ಬೇಡರ ಮಹಿಳೆಯರು ಶಿಕ್ಷಣ ಪಡೆಯುವುದೆ ದುಸ್ತರವಾಗಿರುವಾಗ ಇನ್ನು ಕೆಲಸ ಪಡೆದುಕೊಳ್ಳುವುದು ಎಲ್ಲಿಂದ ಬಂತು? ಈಗ ಉದ್ಯೋಗದ ನಿರೀಕ್ಷೆಯಲ್ಲಿ ಮಕ್ಕಳನ್ನು ಶಾಲೆ-ಕಾಲೇಜುಗಳಿಗೆ ಕಳುಹಿಸುತ್ತಿದ್ದಾರೆ. ಇತ್ತೀಚೆಗೆ ಪ್ರತಿಯೊಂದು ಹಳ್ಳಿಗಳಲ್ಲಿಯೂ ಪದವೀಧರರು ಇರುವುದರಿಂದ ಹೆಣ್ಣುಮಕ್ಕಳನ್ನು ಶಾಲೆಗೆ ಕಳುಹಿಸಲು ಪೋಷಕರು ಆಸಕ್ತಿ ವಹಿಸುತ್ತಾರೆ. ಇಲ್ಲಿ ಹೆಣ್ಣಿಗೆ ಶಿಕ್ಷಣ ಸಿಗುವುದರಿಂದ ಕೌಟುಂಬಿಕ ಜೀವನದ ಸಂದರ್ಭದಲ್ಲಿ ಏನೇ ಸಮಸ್ಯೆ ಕಷ್ಟಗಳು ಬಂದರೂ ಅವುಗಳನ್ನು ಸೂಕ್ಷ್ಮವಾಗಿ ನಿಭಾಯಿಸುತ್ತಾಳೆ. ಇದು ಬಹಳ ಮುಖ್ಯವಾದುದು. ಹೆಣ್ಣು ಶಿಕ್ಷಿತಳಾದರೆ ಸಾಮಾಜಿಕ, ಪ್ರಾಪಂಚಿಕ ಜ್ಞಾನ ತಿಳಿಯುತ್ತದೆ. ಹಾಗಾಗಿ ಇಂದಿನ ಮಹಿಳೆಗೆ ಶಿಕ್ಷಣದ ಅಗತ್ಯ ತುಂಬಾ ಅವಶ್ಯಕವಾಗಿದೆ.

ಗ್ರಾಮೀಣ ಪ್ರದೇಶದ ಬೇಡರ ಮಹಿಳೆ ಶಿಕ್ಷಣದಲ್ಲಿ ತುಂಬಾ ಹಿಂದೆ ಇದ್ದಾಳೆ. ಅದೇ ನಗರ ಪ್ರದೇಶದ ಬೇಡರ ಮಹಿಳೆ ಸ್ವಲ್ಪಮಟ್ಟಿಗೆ ಶಿಕ್ಷಣ ಪಡೆದಿದ್ದಾಳೆ. ಇಂದು ಗ್ರಾಮೀಣ ಮಹಿಳೆ ಸ್ವಲ್ಪ ಮಟ್ಟಿಗಾದರು ಶಿಕ್ಷಣ ಪಡೆಯಲು ಮುಂದೆ ಬರುತ್ತಿದ್ದಾಳೆ. ಅವಳಿಗೆ ಪೋಷಕ ವರ್ಗದ ಸಹಕಾರವು ಸಿಗುತ್ತಿದೆ. ಗ್ರಾಮೀಣ ಮಹಿಳೆ ಪ್ರಾಥಮಿಕ, ಪ್ರೌಢಶಾಲೆ, ಕಾಲೇಜು ಶಿಕ್ಷಣ ಪಡೆಯುವಲ್ಲಿ ಆಸಕ್ತಿದಾಯಕಳಾಗಿದ್ದಾಳೆ. ಚಳ್ಳಕೆರೆ ತಾಲೂಕಿನ ನೆಲಗೇತನಹಟ್ಟಿಯಲ್ಲಿ ಸುಮಾರು ೮೦% ಮ್ಯಾಸ ಬೇಡರೆ ಇರುವುದು. ಅಲ್ಲಿನ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ೧ ರಿಂದ ೭ನೇ ತರಗತಿಯವರೆಗೆ ೪೩೭ ವಿದ್ಯಾರ್ಥಿಗಳಿದ್ದಾರೆ. ಅದರಲ್ಲಿ ೧೯೭ ವಿದ್ಯಾರ್ಥಿಗಳು ಹುಡುಗಿಯರಿದ್ದಾರೆ. (ಚಿತ್ರ ೫ರಲ್ಲಿ ಇರುವ ಬಾಲಕಿಯರು ಮ್ಯಾಸ ಬೇಡ ಜನಾಂಗದವರು). ಇವರು ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ, ನೆಲಗೇತನಹಟ್ಟಿಯಲ್ಲಿ ಓದುತ್ತಿರುವ ವಿದ್ಯಾರ್ಥಿನಿಯರು. ಆದರೆ ಇವರೆಲ್ಲರು ಉನ್ನತ ವಿದ್ಯಾಭ್ಯಾಸಕ್ಕೆ ಹೋಗಲು ಸಾಧ್ಯವಾಗುವುದು ತುಂಬಾ ಕಡಿಮೆ. ಇವರ ಪೋಷಕರು ಅನಕ್ಷರಸ್ಥರು. ಇವರು ಮಕ್ಕಳು ಋತುಮತಿಯಾದ ಎರಡು-ಮೂರು ವರ್ಷದಲ್ಲಿಯೇ ಮದುವೆ ಮಾಡುವುದರ ಬಗ್ಗೆ ಯೋಚನೆ ಮಾಡುತ್ತಾರೆ. ಒಂದು ವೇಳೆ ಬೇಗ ಮದುವೆ ಮಾಡದಿದ್ದರೆ ಸಮಾಜವೇ ಪ್ರಶ್ನೆ ಮಾಡುತ್ತದೆ. ಎಷ್ಟೇ ಚೆನ್ನಾಗಿ ಓದುತ್ತಿದ್ದರೂ ಅವಳನ್ನು ಓದಿಸಲು ಮುಂದೆ ಬರುವುದಿಲ್ಲ. ಪೋಷಕರು ಅವಳಿಗೆ ಮದುವೆ ಮಾಡಲು ತೀರ್ಮಾನಿಸುತ್ತಾರೆ. ಅನಿವಾರ್ಯವಾಗಿ ಮಗಳ ಸ್ಥಾನದಲ್ಲಿದ್ದ ಆ ಹುಡುಗಿ ಮದುವೆಗೆ ಒಪ್ಪಿಕೊಂಡು ಪೋಷಕರು ತೋರಿಸಿದ ಹುಡುಗನನ್ನು ಮದುವೆಯಾಗುತ್ತಾಳೆ. ಮದುವೆ ಮಾಡಿಕೊಂಡ ಆ ಹೆಣ್ಣು ಶಿಕ್ಷಣದಿಂದ ವಂಚಿತಳಾಗುತ್ತಾಳೆ. ಇದು ಬೇಡರಲ್ಲಿ ಸರ್ವೆ ಸಾಮಾನ್ಯವಾಗಿದೆ.

ಇಂತಹ ಸ್ಥಿತಿಯನ್ನು ಕೆಲವರು ಮೀರಿ ಪೋಷಕರಿಗೆ ಅರ್ಥವಾಗುವ ರೀತಿ ಸಾಮಾಜಿಕ ಪ್ರಜ್ಞೆಯನ್ನು ಮೂಡಿಸಿ ಕೆಲವರು ಶಿಕ್ಷಣ ಪಡೆಯಲು ನಗರಗಳಿಗೆ ಊರಿನಿಂದಲೇ ಪ್ರತಿ ದಿನ ಓಡಾಡಿಕೊಂಡು ಶಿಕ್ಷಣ ಪಡೆಯುತ್ತಿದ್ದಾರೆ. ಪ್ರತಿ ಪಟ್ಟಣ ಮತ್ತು ನಗರಗಳ ಸುತ್ತ ಮುತ್ತಲಿನ ಕೆಲವು ಊರಿನವರು ತಮ್ಮ ಹೆಣ್ಣು ಮಕ್ಕಳನ್ನು ಶಾಲಾ ಕಾಲೇಜಿಗೆ ಕಳುಹಿಸಿ ಕೊಡುತ್ತಿದ್ದಾರೆ. (ಚಿತ್ರ ೫ ಸೇರಿಸುವುದು)

ಚಿತ್ರದುರ್ಗ ಜಿಲ್ಲೆಯ ಬೆಳಗಟ್ಟಿ, ಗೋನೂರು, ಚಿಕ್ಕಗೊಂಡನಹಳ್ಳಿ, ಮಾಡನಾಯ್ಯನಹಳ್ಳಿ, ಚಿಕ್ಕಪ್ಪನಹಳ್ಳಿ, ಬಂಗಾರಕ್ಕನಹಳ್ಳಿ, ತುರವನೂರು, ಕೂನಬೇವು, ಹುಣೆಸೆಕಟ್ಟಿ, ತಮ್ಮಟಕಲ್ಲು ಹೀಗೆ ಇನ್ನೂ ಅನೇಕ ಊರುಗಳಿಂದ ಬೇಡರ ಹುಡುಗಿಯರು ಶಾಲಾ, ಕಾಲೇಜಿಗೆ ತಮ್ಮ ತಮ್ಮ ಊರಿನಿಂದ ಬಸ್ಸಿನಲ್ಲಿ ಓಡಾಡಿ ಶಿಕ್ಷಣ ಪಡೆಯುತ್ತಿದ್ದಾರೆ. ಇನ್ನೂ ಕೆಲವು ಹಳ್ಳಿಗಳಾದ ಸುಲ್ತಾನಿಪುರ, ಮುದ್ದಾಪುರ, ಸಿದ್ದವನದುರ್ಗ, ಕಬ್ಬಿಗೆರೆ, ಬ್ಯಾಲಾಳ್‌, ಬಳ್ಳಿಕಟ್ಟಿ, ಕ್ಯಾಸಾಪುರಗಳಲ್ಲಿನ ಬೇಡರ ಹುಡುಗಿಯರು ಶಾಲಾ, ಕಾಲೇಜುಗಳಲ್ಲಿ ಶಿಕ್ಷಣ ಪಡೆಯಲು ಸರ್ಕಾರದ ಅಡಿಯಲ್ಲಿರುವ ಪರಿಶಿಷ್ಟವರ್ಗದ ಹಾಸ್ಟೆಲ್‌ನಲ್ಲಿ ಸೇರಿಕೊಂಡು ಅಲ್ಲಿಯೇ ವಾಸವಾಗಿ ಶಿಕ್ಷಣ ಪಡೆಯುತ್ತಿದ್ದಾರೆ. ಹೀಗೆ ಕರ್ನಾಟಕದ ಎಲ್ಲಾ ಜಿಲ್ಲೆಯಲ್ಲಿಯೂ ಬೇಡರ ಗ್ರಾಮೀಣ ಹುಡುಗಿಯರು ಶಿಕ್ಷಣ ಪಡೆಯುತ್ತಿದ್ದಾರೆ.

ಬೇಡರ ಹೆಣ್ಣು ಇನ್ನೂ ಹೆಚ್ಚಿನದಾಗಿ ಶಿಕ್ಷಣ ಕ್ಷೇತ್ರಕ್ಕೆ ಸೇರಿಕೊಳ್ಳಬೇಕಾಗಿದೆ. ಅವಳು ಇನ್ನೂ ಬೇಡರಲ್ಲಿ ಶೇಕಡ ೧೦%ರಷ್ಟು ಕೂಡ ಸಿಗುವುದಿಲ್ಲ. ಇತ್ತೀಚಿಗೆ ಕಳೆದ ನಾಲ್ಕು-ಐದು ವರ್ಷದಿಂದ ಇಲ್ಲಿ ಶಿಕ್ಷಣ ಪಡೆಯುವವರು ಸಂಖ್ಯೆ ಸ್ವಲ್ಪ ಮಟ್ಟಿಗೆ ಹೆಚ್ಚಾಗಿದೆ. ವೈದ್ಯಕೀಯ ಮತ್ತು ತಾಂತ್ರಿಕ ಭಾಗದಲ್ಲಿ ಇಡೀ ಕರ್ನಾಟಕದ ಮಹಿಳೆಯರಲ್ಲಿ ಸೇರಿರುವುದು ತುಂಬಾ ಕಡಿಮೆ. ಕೆಲವು ಪತ್ರಾಂಕಿತ ಎ ಮತ್ತು ಬಿ ವರ್ಗದ ಬೇಡಕುಟುಂಬದ ಮಕ್ಕಳು ಇತ್ತೀಚಿಗೆ ಇಂತಹ ಶಿಕ್ಷಣ ಪಡೆಯಲು ಸಾಧ್ಯವಾಗಿದೆ. ಚಿತ್ರದುರ್ಗದ ಮಂಜು ಭಾರ್ಗವಿ ಎನ್ನುವ ಬೇಡಹುಡುಗಿ ವೈದ್ಯಕೀಯ ಪದವಿಯ ತರಬೇತಿಯನ್ನು ಪಡೆಯುತ್ತಿದ್ದಾಳೆ. ಹೀಗೆ ತುಂಬಾ ಬೆರಳೆಣಿಕೆಯಷ್ಟು ಹುಡುಗಿಯರು ಮಾತ್ರ ವೈದ್ಯಕೀಯ ಮತ್ತು ತಾಂತ್ರಿಕ ಕ್ಷೇತ್ರದಲ್ಲಿ ಸಿಗುತ್ತಾರೆ. ಹೀಗೆ ಶಿಕ್ಷಣ ಕ್ಷೇತ್ರದಲ್ಲಿ ಹೇಳಿಕೊಳ್ಳುವಷ್ಟು ಪ್ರಮಾಣದಲ್ಲಿ ಬೇಡರ ಮಹಿಳೆ ಶಿಕ್ಷಿತಳಾಗಿಲ್ಲ.

ರಾಜಕೀಯ ಮತ್ತು ಮಹಿಳೆ:

ಭಾರತ ಜಾತ್ಯತೀತ ರಾಷ್ಟ್ರ. ಹಾಗಾಗಿ ಎಲ್ಲಾ ಧರ್ಮಗಳನ್ನು ಸಮಾನತೆಯಿಂದ ಕಾಣುತ್ತಿದೆ. ಭಾರತ ಪ್ರಜಾಪ್ರಭುತ್ವ ಪ್ರಜೆಗಳ ಸರ್ಕಾರ. ಚುನಾವಣೆಗಳ ಮೂಲಕ ಪ್ರಜೆಗಳು ತಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡುತ್ತಾರೆ. ಹೀಗೆ ಆಯ್ಕೆಯಾದ ಪ್ರತಿನಿಧಿಗಳು ಜನರ ಸಮಸ್ಯೆಗಳನ್ನು ತಿಳಿದು, ಅದಕ್ಕೆ ಸಂಬಂಧಿಸಿದ ನಿಯಮಾವಳಿಗಳನ್ನು ರೂಪಿಸಿ ಎಲ್ಲರ ಸುಖವನ್ನು ಸಾಧಿಸುವಲ್ಲಿ ಪ್ರಮುಖ ಜವಾಬ್ದಾರಿ ವಹಿಸುತ್ತಾರೆ. ಇದೇ ಪ್ರಜಾಪ್ರಭುತ್ವ ಸರ್ಕಾರ, ಭಾರತೀಯ ರಾಜಕೀಯ ವ್ಯವಸ್ಥೆಯಲ್ಲಿ ಗ್ರಾಮ ಪಂಚಾಯತಿ, ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ, ವಿಧಾನಸಭೆ ಮತ್ತು ಲೋಕಸಭೆಗಳನ್ನು ಕಾಣುತ್ತೇವೆ. ಪ್ರತಿಯೊಂದು ಕರ್ನಾಟಕದ ಹಳ್ಳಿಗಳಲ್ಲಿ ಗ್ರಾಮ ಪಂಚಾಯತಿ ಇದೆ. ಅದೇ ರೀತಿ ಕರ್ನಾಟಕದಲ್ಲಿ ತಾಲೂಕು ಪಂಚಾಯಿತಿಗಳು ೩೨೫೫ (೨೦೦೦ನೇ ಇಸ್ವಿ ಪ್ರಕಾರ) ಹಾಗೂ ಜಿಲ್ಲಾ ಪಂಚಾಯಿತಿಗಳು ೮೯೦ (೨೦೦೦ನೇ ಇಸ್ವಿ ಪ್ರಕಾರ), ವಿಧಾನಸಭೆಗಳು ೨೨೪ ಮತ್ತು ಲೋಕಸಭೆಗಳು ೨೮ ಇವೆ. ಈ ರೀತಿಯ ರಾಜಕೀಯ ವ್ಯವಸ್ಥೆಯಲ್ಲಿ ಬೇಡರಿಗೆ ಗ್ರಾಮ, ತಾಲೂಕು, ಜಿಲ್ಲೆ ಮತ್ತು ರಾಜ್ಯ ಹಾಗೂ ಕೇಂದ್ರ ಮಟ್ಟದಲ್ಲಿ ಮೀಸಲಾತಿ ಪ್ರಕಾರ ಕೆಲವು ಸೀಟುಗಳು ಮೀಸಲಾಗಿವೆ.

೨೨೪ ವಿಧಾನಸಭೆ ಕ್ಷೇತ್ರಗಳಲ್ಲಿ ಒಟ್ಟು ೧೫ ಕ್ಷೇತ್ರಗಳು ಬೇಡರಿಗೆ ಮೀಸಲಾಗಿರುತ್ತವೆ. ಅವುಗಳೆಂದರೆ; ಗುಲ್ಬರ್ಗದ ಶೋರಾಪುರ, ಬೆಳಗಾವಿಯ ಯಮಕನಮರಡಿ, ರಾಯಚೂರಿನ ರಾಯಚೂರು ಗ್ರಾಮೀಣ, ಮಾನ್ವಿ, ದೇವದುರ್ಗ, ಮಸ್ಕಿ, ಬಳ್ಳಾರಿಯ ಕಂಪ್ಲಿ, ಸಿರಗುಪ್ಪ, ಬಳ್ಳಾರಿ, ಸಂಡೂರು, ಕೂಡ್ಲಗಿ, ದಾವಣಗೆರೆಯ ಜಗಳೂರು, ಚಿತ್ರದುರ್ಗ ಮೊಳಕಾಲ್ಮೂರು, ಚಳ್ಳಕೆರೆ, ಮೈಸೂರಿನ ಹೆಗ್ಗಡದೇವನಕೋಟೆ, ಈ ಎಲ್ಲಾ ಕ್ಷೇತ್ರಗಳು ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿರುತ್ತವೆ. ಆದರೆ ಈ ೧೫ ಕ್ಷೇತ್ರಗಳಲ್ಲಿ ಒಂದು ಕ್ಷೇತ್ರವಾದರೂ ಬೇಡರ ಮಹಿಳೆಗೆ ಮೀಸಲಾಗಿ ಇಲ್ಲದೇ ಇರುವುದು ಒಂದು ದೊಡ್ಡ ದುರಂತವೇ ಸರಿ. ಅದೇ ರೀತಿ ಕರ್ನಾಟಕದಲ್ಲಿ ಬೇಡರಿಗೆ ೨೮ ಲೋಕಸಭಾಕ್ಷೇತ್ರಗಳಲ್ಲಿ ೩ ಲೋಕಸಭಾಕ್ಷೇತ್ರಗಳು ಮೀಸಲಾಗಿರುತ್ತವೆ. ಇದರಲ್ಲಿಯೂ ಮಹಿಳೆಗೆ ಮೀಸಲಾತಿ ಇಲ್ಲ. ಆ ಮೂರು ಲೋಕಸಭಾಕ್ಷೇತ್ರಗಳೆಂದರೆ; ರಾಯಚೂರು, ಬಳ್ಳಾರಿ ಮತ್ತು ಚಿತ್ರದುರ್ಗ.

ಗ್ರಾಮ ಪಂಚಾಯತಿ, ತಾಲೂಕು ಪಂಚಾಯತಿ ಮತ್ತು ಜಿಲ್ಲಾ ಪಂಚಾಯತಿಗಳಲ್ಲಿ ಮೀಸಲಾತಿ ವ್ಯವಸ್ಥೆಯಲ್ಲಿ ಬೇಡ ಜನಾಂಗದ ಮಹಿಳೆಗೆ ಮೀಸಲಾತಿ ಇರುವುದನ್ನು ಕಾಣುತ್ತೇವೆ. ಸರ್ಕಾರದ ಮೀಸಲಾತಿ ಪ್ರಕಾರ (೩೩% ಮಹಿಳಾ ಮೀಸಲಾತಿ ಸೇರಿದಂತೆ) ಹಂಚಿಕೆಯಾಗಿರುತ್ತದೆ. ಬೇಡರ ಮಹಿಳೆ ಹೆಚ್ಚಿನ ರೀತಿ ಗ್ರಾಮ ಪಂಚಾಯಿತಿಯಲ್ಲಿ ಗುರುತಿಸಿಕೊಂಡಿದ್ದಾಳೆ. ಗ್ರಾಮ ಪಂಚಾಯಿತಿಗಳಲ್ಲಿ ಮಹಿಳಾ ಮೀಸಲಾತಿ ದೊರಕಿಸಿದ್ದಾರೆ. ಹಾಗಾಗಿ ಗ್ರಾಮೀಣ ಪರಿಸರದಲ್ಲಿ ಬೇಡರ ಮಹಿಳೆ ರಾಜಕೀಯ ಪ್ರವೇಶವನ್ನು ಅನಿವಾರ್ಯವಾಗಿ ತೆಗೆದುಕೊಂಡಿರುತ್ತಾಳೆ. ಗ್ರಾಮ ಪಂಚಾಯಿತಿಯ ಸದಸ್ಯೆ  ಅಥವಾ ಗ್ರಾಮ ಪಂಚಾಯಿತಿಯ ಅಧ್ಯಕ್ಷೆಯಾಗಿ ಆಯ್ಕೆಗೊಂಡಿದ್ದಾಳೆ. ಆದರೆ ಅದರ ಎಲ್ಲಾ ವಹಿವಾಟುಗಳನ್ನು ಹೆಚ್ಚಿನ ಪಾಲು ಮಹಿಳಾ ಸದಸ್ಯರ ಗಂಡಂದಿರೇ ಪರೋಕ್ಷವಾಗಿ ನಿರ್ವಹಿಸುತ್ತಿದ್ದಾರೆ. ಇದು ಸಾಮಾಜಿಕವಾಗಿ ಅವರ ಗಂಡಂದಿರಿಗೂ ಒಂದು ಪ್ರತಿಷ್ಠೆಯಾಗಿರುತ್ತದೆ. ಊರಿನ ಹೆಚ್ಚು ಜನರು ಗ್ರಾಮ ಪಂಚಾಯಿತಿಯ ಸದಸ್ಯರಿಂದ ಏನಾದರೂ ಕೆಲಸ ಮಾಡಿಸಿಕೊಳ್ಳುವಾಗ ಅವರ ಗಂಡಂದಿರ ಹತ್ತಿರ ಮೊದಲು ಹೋಗುತ್ತಾರೆ. ಈ ಕ್ರಿಯೆ ನಡೆಯುವುದು ಅನಕ್ಷರಸ್ಥ ಗ್ರಾಮ ಪಂಚಾಯಿತಿ ಮಹಿಳಾ ಸದಸ್ಯರಿದ್ದಾಗ ಸಾಧ್ಯವಾಗುತ್ತದೆ. ಅದೇ ಅಕ್ಷರಸ್ಥ ಮಹಿಳಾ ಸದಸ್ಯರಿದ್ದರೆ ಅವರೇ ಹೆಚ್ಚಿನ ಪಾಲು ಕಾರ್ಯ ನಿರ್ವಹಿಸುತ್ತಾರೆ. ಗಂಡಂದಿರು ಅಥವಾ ಪೋಷಕರು ಅವರ ಸಪೋರ್ಟಿಗೆ ಜೊತೆಯಲ್ಲಿರುತ್ತಾರೆ. ಇಂದು ಈ ರೀತಿಯ ವಾತಾವರಣವನ್ನು ಗ್ರಾಮ ಪಂಚಾಯಿತಿಗಳಲ್ಲಿ ಕಾಣಬಹುದು. ಕರ್ನಾಟಕದ ಬೇಡರಲ್ಲಿ ನೂರಾರು ಗ್ರಾಮ ಪಂಚಾಯಿತಿ ಸದಸ್ಯರನ್ನು ಕಾಣುತ್ತೇವೆ. ಅದರಲ್ಲಿ ೩೩% ಮಹಿಳೆಯರು ಸದಸ್ಯರಾಗಿದ್ದಾರೆ. ಇಲ್ಲಿ ಕೆಲವರನ್ನು ಹೇಳುವುದಾದರೆ ಜಾನಕೊಂಡದ ಸುನೀತಾ, ನೆಲಗೇತನಹಟ್ಟಿಯ ಓಬಮ್ಮ, ಹುಣೆಸೆಕಟ್ಟಿಯ ಇಂದ್ರಮ್ಮ, ಬಚುಬೋರನಹಟ್ಟಿ ಬೋರಮ್ಮ, ಸಾಸಲಹಟ್ಟಿ ಸರೋಜಮ್ಮ, ಹೀಗೆ ಒಂದು ದೊಡ್ಡ ಪಟ್ಟಿಯೇ ಆಗುತ್ತದೆ. ಕರ್ನಾಟಕದ ಎಲ್ಲಾ ಜಿಲ್ಲೆಯ ಗ್ರಾಮಗಳಲ್ಲಿ ಮೀಸಲಾತಿ ಅನ್ವಯ ಬೇಡರ ಮಹಿಳೆಯರು ಆಯ್ಕೆಯಾಗಿದ್ದಾರೆ. ಅದರಲ್ಲೂ ಮ್ಯಾಸ ಬೇಡರು ಇರುವ ಕಡೆ ಸರ್ವಾನುಮತದಿಂದ ಚುನಾವಣೆ ಇಲ್ಲದೆ ಆಯ್ಕೆಯಾಗಿದ್ದಾರೆ. ಅದಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ ಜಾನಕೊಂಡದ ಸುನೀತಾ ಅವರು ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ. ಹಾಗೆ ಚಿಕ್ಕ ಬದ್ದನಗಳ್ಳಿಯ ಹನುಮಕ್ಕ ಇದು ಗ್ರಾಮಮಟ್ಟದಲ್ಲಿ ಮಾತ್ರ ಸಾಧ್ಯ. ಅದೇ ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಸಾಕಷ್ಟು ಸ್ಪರ್ಧೆ ಏರ್ಪಟ್ಟಿರುತ್ತದೆ.

ಮಾಜಿ ತಾಲ್ಲೂಕು ಪಂಚಾಯತಿ ಸದಸ್ಯೆ ಹನುಮಕ್ಕ ಸಾಕಷ್ಟು ಪೈಪೋಟಿ ಮಾಡಿ ಗೆದ್ದು ಬಂದವಳು. ಅವರ ಊರು ಚಿಕ್ಕಸಿದ್ದನಹಳ್ಳಿ ಕಳೆದ ಸಾರಿ ಹನುಮಕ್ಕ ಚುನಾವಣೆಗೆ ನಿಂತು ಗೆದ್ದವರು. ತಾಲ್ಲೂಕ ಪಂಚಾಯತಿಯ ಸದಸ್ಯೆಯಾಗಿದ್ದ ಹನುಮಕ್ಕ ಸಾಮಾಜಿಕವಾಗಿ ಸಾಕಷ್ಟು ಒಳ್ಳೆಯ ಕೆಲಸ ಮಾಡಿದ್ದಾಳೆ. ಈಕೆ ಮ್ಯಾಸಬೇಡರ ಮಹಿಳೆ. ಹೀಗೆ ಇನ್ನು ಹಲವಾರು ಬೇಡರ ಮಹಿಳೆಯರು ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ರಾಜಕೀಯ ಪ್ರವೇಶ ಮಾಡಿ ಆಯ್ಕೆಯಾಗಿ ಒಳ್ಳೆಯ ಸಾಧನೆಯನ್ನು ಮಾಡಿದ್ದಾರೆ. ಹೀಗೆ ಬೇಡರ ಮಹಿಳೆಯರು ರಾಜಕೀಯ ರಂಗದಲ್ಲಿ ಸಮಾಜವನ್ನು ಪ್ರಧಾನವಾಗಿಟ್ಟುಕೊಂಡು ತಮ್ಮದೇ ಆದ ರೀತಿಯಲ್ಲಿ ಸೇವೆ ಮಾಡಿದ್ದಾರೆ.

ಅಂಗನವಾಡಿ ಮತ್ತು ಮಹಿಳೆ:

ಕರ್ನಾಟಕ ಸರ್ಕಾರ ಪ್ರತಿಯೊಂದು ಗ್ರಾಮೀಣ ಪ್ರದೇಶಗಳಲ್ಲಿ ೧೯೯೦ರ ದಶಕದಲ್ಲಿ ಅಂಗನವಾಡಿ ಕೇಂದ್ರಗಳನ್ನು ಪ್ರಾರಂಭ ಮಾಡಿದೆ. ಈ ಕೇಂದ್ರಗಳನ್ನು ಹಳ್ಳಿಗಳಲ್ಲಿ ಶಿಶುವಿಹಾರ ಎಂದು ಕರೆಯುತ್ತಾರೆ. ಗ್ರಾಮೀಣ ಪ್ರದೇಶ ಒಂದೇ ಅಲ್ಲ ನಗರ ಪ್ರದೇಶದ ಕೊಳಚೆ ಪ್ರದೇಶ ಮತ್ತು ತುಂಬಾ ಹಿಂದುಳಿದ ಸ್ಥಳಗಳಲ್ಲಿ ಅಂಗನವಾಡಿಗಳು ಸ್ಥಾಪಿತಗೊಂಡಿವೆ. ಅಂಗನವಾಡಿಗಳು ಮಕ್ಕಳ ಪೋಷಣೆಯಲ್ಲಿ ಪ್ರಮುಖಪಾತ್ರವಹಿಸಿವೆ. ಈ ಕೇಂದ್ರಗಳು ಮಕ್ಕಳಿಗೆ ಪೌಷ್ಟಿಕ ಆಹಾರ ನೀಡುತ್ತಿವೆ. ಅವರ ಆರೋಗ್ಯದ ಕಡೆಗೂ ಗಮನ ಹರಿಸುತ್ತಿವೆ. ಜೊತೆಗೆ ಅವರಿಗೆ ಅಕ್ಷರ ಅಭ್ಯಾಸವನ್ನು ಮಾಡಿಸುತ್ತಿವೆ. ಪ್ರತಿಯೊಂದು ಅಂಗನವಾಡಿ ಕೇಂದ್ರಗಳಿಗೆ ಒಬ್ಬ ಟೀಚರ್ ಮತ್ತು ಒಬ್ಬ ಆಯಳನ್ನು ಸರ್ಕಾರ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿದೆ. ಅಂಗನವಾಡಿಗಳಲ್ಲಿ ಇವರ ಪಾತ್ರ ಬಹುಮುಖ್ಯ ಆಗಿರುತ್ತದೆ. ಟೀಚರ್ ಮಕ್ಕಳಿಗೆ ಅಕ್ಷರಾಭ್ಯಾಸ ಮತ್ತು ಆಟ-ಪಾಟ-ಕಥೆಗಳನ್ನು ಹೇಳಿಕೊಟ್ಟು ಅವರ ಬದುಕಿನಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಹಾಗೆಯೇ ಆಯಗಳು ಸರ್ಕಾರ ಕಳುಹಿಸಿರುವ ತಿಂಡಿ ಪದಾರ್ಥಗಳನ್ನು ಉಪಯೋಗಿಸಿ ಮಕ್ಕಳಿಗೆ ಒಳ್ಳೆಯ ಪೌಷ್ಟಿಕ ಆಹಾರವನ್ನು ತಯಾರು ಮಾಡಿಕೊಡುತ್ತಾರೆ. ಜೊತೆಗೆ ಅವರನ್ನು ಶುಚಿಯಾಗಿ ಇಡುವ ಕಡೆ ಗಮನ ಹರಿಸುತ್ತಾರೆ. ಹೀಗಾಗಿ ಅಂಗನವಾಡಿ ಕೇಂದ್ರಗಳು ಮತ್ತು ಅಲ್ಲಿ ಕೆಲಸ ಮಾಡುವ ಟೀಚರ್ ಮತ್ತು ಆಯಗಳು ಮಕ್ಕಳ ಜೀವನದಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ.

ಪ್ರತಿಯೊಂದು ಅಂಗನವಾಡಿ ಕೇಂದ್ರಗಳಲ್ಲಿ ಮಹಿಳೆಯರೇ ಪ್ರಮುಖವಾಗಿ ಕೆಲಸ ಮಾಡುತ್ತಾರೆ. ಅವರ ಸೇವೆ ತುಂಬಾ ಮುಖ್ಯವಾಗಿದೆ. ಬೇಡರ ಮಹಿಳೆಯರು ಎಲ್ಲಿ ಬೇಡಜನಾಂಗದ ಜನರು ವಾಸಿಸುತ್ತಾರೋ ಅಂತಹ ಕಡೆ ಅಂಗನವಾಡಿ ಕೇಂದ್ರಗಳಲ್ಲಿ ಟೀಚರ್ ಆಗಿ ಮತ್ತು ಆಯಾಗಳಾಗಿ ಕೆಲಸ ಮಾಡುತ್ತಾರೆ. ಎಸ್‌.ಎಸ್‌.ಎಲ್‌.ಸಿ., ಪಿ.ಯು.ಸಿ., ಬಿ.ಎ., ಓದಿರುವ ಟೀಚರಗಳು ಇದ್ದಾರೆ. ತಮ್ಮನಹಟ್ಟಿ ಗೌರಮ್ಮ, ಜಾನಕೊಂಡದ ಮಂಜಮ್ಮ, ಬೆಳಗಟ್ಟದ ಪವಿತ್ರಾ, ನೆಲಗೇತನಹಟ್ಟಿಯ ಲೀಲಾವತಿ, ಬಚ್ಚುಬೋರನಹಟ್ಟಿಯ ರತ್ನಮ್ಮ ಹೀಗೆ ಇನ್ನು ಮುಂತಾದ ಬೇಡರ ಮಹಿಳೆಯರು ಅಂಗನವಾಡಿಗಳಲ್ಲಿ ಟೀಚರಗಳಾಗಿ ಕೆಲಸ ಮಾಡುತ್ತಾರೆ. ಹಾಗೆಯೇ ಬೇಡರ ಮಹಿಳೆಯರು ಆಯಾಗಳಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ರುಮಾಗಟ್ಟಿಯ ಜಯಮ್ಮ, ಪೇಲರಹಟ್ಟಿಯ ಪಾಲಮ್ಮ, ದೊಡ್ಡಹಟ್ಟಿಯ ಸೂರಮ್ಮ, ಬೆಳಗಟ್ಟದ ಶಾಂತಮ್ಮ ಹೀಗೆ ಕೆಲವರನ್ನು ಹೆಸರಿಸಬಹುದು.

ಹೀಗೆ ಇಡಿ ಕರ್ನಾಟಕದ ಎಲ್ಲಾ ಜಿಲ್ಲೆಗಳ ಗ್ರಾಮಗಳಲ್ಲಿ ಅಂಗನವಾಡಿ ಕೇಂದ್ರಗಳು ಇವೆ. ಅದರಲ್ಲೂ ವಾಲ್ಮೀಕಿ, ಬೇಡ, ನಾಯಕ, ಪರಿವಾರದವರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುವ ಊರಿನಲ್ಲಿ ಬೇಡರ ಮಹಿಳೆಯರೇ ಟೀಚರ್ ಮತ್ತು ಆಯಾಗಳಾಗಿ ಕೆಲಸ ಮಾಡುತ್ತಿದ್ದಾರೆ. ಇಲ್ಲಿನ ಟೀಚರ್ ಮಕ್ಕಳ ಪೋಷಣೆಯ ಕಡೆ ಗಮನ ಕೊಡುವುದೊಂದೇ ಅಲ್ಲ. ಸ್ಥಳೀಯ ಊರುಗಳಲ್ಲಿ ಗರ್ಭಧರಿಸಿರುವ ಹೆಂಗಸರ ಕಡೆಯೂ ಗಮನ ಕೊಡುತ್ತಾರೆ. ಇವರು ತಮ್ಮ ಕರ್ತವ್ಯದ ಸಮಯದಲ್ಲಿ ಗರ್ಭಧರಿಸಿರುವ ಹೆಂಗಸರನ್ನು ಪತ್ತೆ ಮಾಡಿ ಅವರ ಆರೋಗ್ಯದ ಬಗ್ಗೆ ಅರಿವು ಮೂಡಿಸುತ್ತಾರೆ. ಕಾಲಕಾಲಕ್ಕೆ ವೈದ್ಯರನ್ನು ಭೇಟಿ ಮಾಡಲು ಅವರಿಗೆ ಸಲಹೆ ಮಾಡುತ್ತಾರೆ. ಆಮೇಲೆ ಪೌಷ್ಟಿಕ ಆಹಾರ ಸೇವಿಸಲು ಸಲಹೆ ಕೊಡುತ್ತಾರೆ. ಇಷ್ಟೇ ಅಲ್ಲ, ಅಂಗನವಾಡಿ ಟೀಚರರು ಸ್ತ್ರೀ ಶಕ್ತಿ ಕೇಂದ್ರಗಳನ್ನು ಸ್ಥಾಪನೆ ಮಾಡಿದ್ದಾರೆ. ಇದರ ಉದ್ದೇಶ ಮಹಿಳೆಯರು ಆರ್ಥಿಕವಾಗಿ ಸಬಲೀಕರಣ ಹೊಂದುವುದಾಗಿದೆ. ಉದಾಹರಣೆಗೆ ನೆಲಗೇತನಹಟ್ಟಿಯ ಮ್ಯಾಸಬೇಡರ ಮಹಿಳೆ ಲೀಲಾವತಿ ಅಂಗನವಾಡಿ ಟೀಚರ್ ಅವರು ಸ್ತ್ರೀಶಕ್ತಿ ಕೇಂದ್ರವನ್ನು ಸ್ಥಾಪನೆಮಾಡಿ ಅಲ್ಲಿನ ಮಹಿಳೆಯರಿಗೆ ಹೆಚ್ಚಿನ ಅನುಕೂಲ ಮಾಡಿಕೊಟ್ಟಿದ್ದಾರೆ.

ಗ್ರಾಮೀಣ ಪ್ರದೇಶದಲ್ಲಿ ಕೆಲವು ಕಡೆ ಪ್ರಥಮವಾಗಿ ಸ್ತ್ರೀಶಕ್ತಿ ಸಂಘಗಳು ಅಂಗನವಾಡಿ ಟೀಚರ್‌ಗಳಿಂದ ಪ್ರಾರಂಭವಾದವು. ಪ್ರತಿಯೊಂದು ಹಳ್ಳಿಯಲ್ಲಿಯೂ ಅಂಗನವಾಡಿ ಮೇಡಮ್‌ಪ್ರಭಾವ ಆಯಾ ಹಳ್ಳಿಗಳ ಮೇಲೆ ಇದ್ದೆ ಇದೆ. ಇವರ ಪ್ರಭಾವ ಹಳ್ಳಿಗಳಲ್ಲಿ ಹೊಸ ಜಾಗೃತಿ ಮೂಡಿಸಿದೆ. ಅಂಗನವಾಡಿಗಳು ಮಹಿಳೆಯ ನೇತೃತ್ವದಲ್ಲಿ ಇರುವುದರಿಂದ ಅವುಗಳು ದಿನದಿನಕ್ಕೂ ತಮ್ಮ ಅಸ್ತಿತ್ವವನ್ನು ಗುರುತಿಸಿಕೊಳ್ಳುತ್ತಿವೆ. ಅಂಗನವಾಡಿಗಳು ಮುಖ್ಯವಾಗಿ ಮಕ್ಕಳ ಪೋಷಣೆಯಲ್ಲಿ ಹೆಚ್ಚಿನ ಪಾತ್ರವಹಿಸುತ್ತಿವೆ. ಆ ಕೇಂದ್ರಗಳು ಸ್ತ್ರೀ ಶಕ್ತಿ ಸಂಘದಿಂದಲೂ ತನ್ನ ಪ್ರಭಾವ ಮತ್ತು ಅಸ್ತಿತ್ವವನ್ನು ಪ್ರಧಾನ ನೆಲೆಗಳಲ್ಲಿ ಗುರುತಿಸಿಕೊಂಡಿರುತ್ತದೆ. ಇದು ಅಲ್ಲಿನ ಮಹಿಳೆಯಿಂದ ಮಾತ್ರ ಸಾಧ್ಯವಾಗಿರುವುದು.

ಸ್ತ್ರೀಶಕ್ತಿ ಸಂಘಗಳು ಮತ್ತು ಮಹಿಳೆ:

ಈ ಸಂಘಗಳು ಗ್ರಾಮೀಣ ಪ್ರದೇಶದ ಮಹಿಳೆಯರಲ್ಲಿ ಹೊಸ ಚೈತನ್ಯ ತುಂಬಿವೆ. ಬೇಡರ ಮಹಿಳೆಯರು ಇಂದು ಸ್ತ್ರೀ ಶಕ್ತಿ ಸಂಘಗಳ ಸದಸ್ಯತ್ವ ಪಡೆದು ಆರ್ಥಿಕವಾಗಿ ಸ್ವಾತಂತ್ರ‍್ಯ ಪಡೆದುಕೊಂಡಿದ್ದಾರೆ. ಈ ಮಹಿಳಾ ಸಂಘಗಳು ಕರ್ನಾಟಕದಲ್ಲಿ ತುಂಬಾ ಹೆಸರು ಮಾಡಿವೆ. ಇತ್ತೀಚೆಗೆ ಸುಮಾರು ೪-೫ವರ್ಷದ ಹಿಂದೆ ಹುಟ್ಟಿಕೊಂಡ ಈ ಸಂಘಗಳು ಗ್ರಾಮೀಣ ಪ್ರದೇಶದ ಮಹಿಳೆಯರಿಗೆ ತುಂಬಾ ಸಹಕಾರಿಯಾಗಿವೆ. ಅಕ್ಷರಸ್ಥ ಮತ್ತು ಅನಕ್ಷರಸ್ಥ ಎಂಬ ಭೇದವಿಲ್ಲದೆ ಎಲ್ಲಾ ಮಹಿಳೆಯರು ಸಂಘಗಳಲ್ಲಿ ಸೇರಿದ್ದಾರೆ. ಪ್ರಾರಂಭದ ದಿನಗಳಲ್ಲಿ ಈ ಸಂಘದ ಬಗ್ಗೆ ತಿಳಿವಳಿಕೆ ಇರಲಿಲ್ಲ. ಅಂದಿನ ದಿನಗಳಲ್ಲಿ ವಿದ್ಯಾವಂತ ಮಹಿಳೆಯರು ಸೇರಿಕೊಂಡು ಸಂಘದ ಬಗ್ಗೆ ಅರಿವು ಮೂಡಿಸಿದಾಗ ಎಲ್ಲರೂ ಜಾಗೃತರಾಗಿದ್ದಾರೆ.

ಕರ್ನಾಟಕದ ಗ್ರಾಮೀಣ ಪ್ರದೇಶಗಳಲ್ಲಿ ಮಹಿಳಾ ಸಂಘಗಳು ತುಂಬಾ ಹೆಸರು ಪಡೆದಿವೆ. ಎಲ್ಲಾ ಗ್ರಾಮದ ಬೇಡರ ಮಹಿಳೆಯರು ಸಂಘ ಕಟ್ಟಿಕೊಂಡು ಪ್ರತಿವಾರಕ್ಕೆ ಒಂದು ಸಾರಿ ಒಂದು ಕಡೆ ಸಭೆ ಸೇರುತ್ತಾರೆ. ಬೇಡರ ಮಹಿಳೆಯರು ಊರಿನ ಬೇರೆ ಬೇರೆ ಜಾತಿಯ ಮಹಿಳೆಯರೊಂದಿಗೆ ಸಂಘ ಕಟ್ಟಿಕೊಂಡು ಚೀಟಿ ವ್ಯವಹಾರ ಮಾಡುತ್ತಿದ್ದಾರೆ. ಇವರೆಲ್ಲರು ಹಾಕಿದ ಹಣವನ್ನು ಯಾರಾದರೊಬ್ಬರು ಕಡಿಮೆ ಬಡ್ಡಿಗೆ ಸಾಲವಾಗಿ ಪಡೆಯುತ್ತಾರೆ. ಹೀಗೆ ಇಂದಿನ ಬೇಡರ ಮಹಿಳೆ ತಮ್ಮ ಕಷ್ಟ-ಸುಖಗಳಿಗೆ ಇಂತಹ ಸಂಘಗಳಿಂದ ಹಣ ಪಡೆದುಕೊಳ್ಳುತ್ತಾರೆ.

ಬೇಡರ ಮಹಿಳೆಯರು ಪ್ರತಿಯೊಂದು ಊರಿನಲ್ಲಿಯೂ ಈ ಸಂಘಗಳಿಗೆ ಸೇರಿಕೊಂಡಿದ್ದಾರೆ. ಬೇಡರ ಮಹಿಳೆಯರು ಜಾಸ್ತಿ ಇರುವ ಕಡೆ ಸಂಘಗಳಿಗೆ “ನಾಯ್ಕರ ಮಹಿಳಾ ಸಂಘ” ಅಂತಲೇ ಕರೆಯುತ್ತಾರೆ. ಆಮೇಲೆ ವಾಲ್ಮೀಕಿ ಸಂಘ ಎಂತಲೋ, ಹೆಸರುಗಳಿಂದ ಸಂಘಗಳನ್ನು ಕರೆಯುತ್ತಾರೆ. ಈ ಎಲ್ಲಾ ಸಂಘದವರು ಸಂಘದ ಹೆಸರಿನಲ್ಲಿ ಗ್ರಾಮೀಣ ಬ್ಯಾಂಕುಗಳಲ್ಲಿ ಕಡಿಮೆ ಬಡ್ಡಿಯಲ್ಲಿ ಸಂಘದ ಎಲ್ಲಾ ಸದಸ್ಯರು ಹಣ ಪಡೆದುಕೊಳ್ಳುತ್ತಾರೆ. ಪುನಃ ಎಲ್ಲರೂ ಒಟ್ಟಿಗೆ ಹಣ ಸೇರಿಸಿ ಬ್ಯಾಂಕಿನ ಸಾಲ ತೀರಿಸುತ್ತಾರೆ. ಗ್ರಾಮೀಣ ಪ್ರದೇಶದಲ್ಲಿನ ಮಹಿಳಾ ಸಂಘಗಳ ಕ್ರಿಯಾಶೀಲತೆ ಗಮನಿಸಿ ಸಾಲ ಕೊಡಲು ಬ್ಯಾಂಕುಗಳೇ ಮುಂದೆ ಬಂದಿವೆ. ಎಲ್ಲಾ ಜಿಲ್ಲಾ ಗ್ರಾಮೀಣ ಬ್ಯಾಂಕಿನ ಶಾಖೆಗಳಿಂದ ಹಲವಾರು ಸಂಘಗಳು ಲಕ್ಷಗಟ್ಟಲೇ ಹಣವನ್ನು ಸಾಲ ತೆಗೆದುಕೊಂಡಿವೆ. ಬೇಡರ ಮಹಿಳೆಯರು ಸಂಘಗಳು ಪ್ರಾರಂಭಗೊಂಡ ಮೇಲೆ ಆರ್ಥಿಕವಾಗಿ ಸಬಲೀಕರಣಗೊಂಡಿದ್ದಾರೆ. ಈ ಸಂಘಗಳು ನಮಗೆ ಅರಿವನ್ನು ಮೂಡಿಸಿವೆ ಎಂದು ಸಾಸಲಟ್ಟಿಯ ಸೂರಮ್ಮ ಹೇಳುತ್ತಾರೆ.

ಈ ಸಂಘಗಳು ಹುಟ್ಟಿಕೊಂಡ ಮೇಲೆ ಮಹಿಳೆಯರಲ್ಲಿ ಒಗ್ಗಟ್ಟು ಕಾಣುತ್ತೇವೆ. ಕೆಲವು ಹಳ್ಳಿಗಳಲ್ಲಿ ಸಂಘದ ಹೆಂಗಸರು ಒಟ್ಟಿಗೆ ಸೇರಿಕೊಂಡು ಸರಾಯಿ, ಬ್ರಾಂದಿ ಅಂಗಡಿ ವಿರುದ್ಧ ಹೋರಾಡಿ ಅವುಗಳು ಊರಲ್ಲಿ ಇರದಂತೆ ಮಾಡಿದ್ದಾರೆ. ಇದರ ಪರಿಣಾಮವೋ ಏನೋ ಇಂದು ಕರ್ನಾಟಕ ಸರ್ಕಾರ ಸಾರಾಯಿ ಮಾರಾಟ ರದ್ದು ಮಾಡಿದೆ. ಅಂದರೆ ಇದರ ಪ್ರಭಾವ ಸ್ವಲ್ಪ ಮಟ್ಟಿಗಾದರೂ ಸರ್ಕಾರದ ಮೇಲೆ ಆಗಿದೆ ಎಂದು ಹೇಳಬಹುದು. ಹಾಗೆಯೇ ಈ ಸಂಘದ ಹೆಸರಿನಲ್ಲಿ ಎಲ್ಲಾ ಮಹಿಳೆಯರು ಸೇರಿಕೊಂಡು ವರ್ಷಕ್ಕೆ ಒಂದು ಸಾರಿ ಪ್ರವಾಸ, ತೀರ್ಥಯಾತ್ರೆಗಳನ್ನು ಕೈಗೊಳ್ಳುತ್ತಿದ್ದಾರೆ. ಹೀಗೆ ಮಹಿಳಾ ಸಂಘಗಳು ವ್ಯಾಪಕವಾದ ಕಾರ್ಯಗಳಲ್ಲಿ ತೊಡಗಿಸಿಕೊಂಡಿವೆ.

ಈ ಮಹಿಳಾ ಸಂಘಗಳು ಗ್ರಾಮೀಣ ಪ್ರದೇಶವನ್ನು ದಾಟಿ ನಗರ ಸಮಾಜದಲ್ಲಿಯೂ ಹುಟ್ಟಿಕೊಂಡಿವೆ. ನಗರ ಸಮಾಜದಲ್ಲಿನ ಬೇಡರ ಮಹಿಳೆ ಅಲ್ಲಿನ ಸಂಘಗಳಲ್ಲಿಯೂ ಸೇರಿಕೊಂಡಿದ್ದಾಳೆ. ಅಲ್ಲಿಯೂ ದೊಡ್ಡ-ದೊಡ್ಡ ಯೋಜನೆಗಳನ್ನು ಹಾಕಿಕೊಂಡು ಮಹಿಳೆಯರು ಸಕ್ರಿಯವಾಗಿ ತೊಡಗಿಕೊಂಡಿದ್ದಾರೆ. ನಗರಗಳ ಮಹಿಳಾ ಸಂಘಗಳಲ್ಲಿ ಹೆಚ್ಚಿನ ಪಾಲು ವಿದ್ಯಾವಂತ ಮಹಿಳೆಯರು ಇರುತ್ತಾರೆ. ಜೊತೆಗೆ ಸರ್ಕಾರಿ ಇಲಾಖೆಗಳ ಒಡನಾಟ ಜಾಸ್ತಿ ಇರುತ್ತದೆ. ಹಾಗಾಗಿ ಮಹಿಳಾ ಸಂಘಗಳಿಗೆ ಸರ್ಕಾರದಿಂದ ಸಿಗುವಂತಹ ಅನುಕೂಲಗಳನ್ನು ಗ್ರಾಮೀಣ ಪ್ರದೇಶದ ಸಂಘಗಳಿಗಿಂತ ಹೆಚ್ಚಿನ ಲಾಭವನ್ನು ನಗರದ ಮಹಿಳಾ ಸಂಘಗಳು ಪಡೆದುಕೊಂಡಿವೆ.

ಕರ್ನಾಟಕದ ಬೇಡರ ಕುಟುಂಬಗಳಲ್ಲಿ ಹೆಚ್ಚಿನದಾಗಿ ವ್ಯವಹಾರ ಮಾಡುತ್ತಾ ಇರುವವರು ಅವರವರ ಯಜಮಾನರು. ಆದರೆ ಈ ಸಂಘಗಳು ಊರುಗಳಲ್ಲಿ ಪ್ರಾರಂಭಗೊಂಡ ಮೇಲೆ ಹೆಂಗಸರಿಗೂ ಸ್ವಲ್ಪ ಅವಕಾಶ ಬಂದಿದೆ. ಈ ಸಂಘಗಳು ಇವರಲ್ಲಿ ಜಾಗೃತಿ ಮೂಡಿಸಿವೆ. ಇಂದು ಬೇಡರ ಮಹಿಳೆ ವ್ಯಾವಹಾರಿಕವಾಗಿ ಎಲ್ಲಾ ಬೇಡರ ಮಹಿಳೆಯರ ಮೇಲೆ ಸಾಕಷ್ಟು ಆಗಿದೆ. ಇಂದಿಗೂ ಕೆಲವು ಭಾಗದ ಬೇಡರ ಮಹಿಳೆಯರಿಗೆ ಹೊಲ ಮತ್ತು ಮನೆ ಬಿಟ್ಟರೆ ಬೇರೆ ಊರೇ ಗೊತ್ತಿಲ್ಲ. ಆದರೆ ಈ ಸಂಘಗಳ ಸದಸ್ಯತ್ವದಿಂದ ಹೊರಗಿನ ಪ್ರಪಂಚದ ಜ್ಞಾನವನ್ನು ಪಡೆಯುತ್ತಿದ್ದಾಳೆ.

ಜನಪದ ಸಾಹಿತ್ಯ ಮತ್ತು ಮಹಿಳೆ:

ಕರ್ನಾಟಕ ಜಾನಪದ ಸಾಹಿತ್ಯ ಶ್ರೀಮಂತವಾಗಿದೆ. ಜನಪದ ಕ್ಷೇತ್ರದಲ್ಲಿ ದೊಡ್ಡ ದೊಡ್ಡ ವಿದ್ವಾಂಸರು, ಸಂಶೋಧಕರು, ಜನಪದ ತಜ್ಞರು ಕೃಷಿ ಮಾಡಿದ್ದಾರೆ. ಕರ್ನಾಟಕದ ಜಿಲ್ಲಾ ಮಟ್ಟದ ಎಲ್ಲಾ ಭಾಗಗಳಲ್ಲಿಯೂ ಪ್ರಾತಿನಿಧಿಕವಾಗಿ ಸಾಕಷ್ಟು ಕೆಲಸ-ಕಾರ್ಯಗಳು-ಸಂಶೋಧನೆಗಳು ಜನಪದೀಯ ಹಿನ್ನೆಲೆಯಲ್ಲಿ ನಡೆದು ಬಂದಿವೆ. ಹಾಗೂ ಇಂದಿಗೂ ನಡೆಯುತ್ತಲೇ ಇರುತ್ತದೆ. ಇದು ಒಂದು ರೀತಿಯಲ್ಲಿ ನಿರಂತವಾದ ಕ್ರಿಯೆಯಾಗಿದೆ. ಜನಪದ ಸಾಹಿತ್ಯ ಹುಟ್ಟಿರುವುದೇ ಗ್ರಾಮೀಣ ಪ್ರದೇಶದ ಕೆಳವರ್ಗದ ಸಂಸ್ಕೃತಿಯಲ್ಲಿ ಹಾಗಾಗಿ ಜನಪದ ಅಂದರೆ ಅದು ಕ್ರಿಯಾಶೀಲವಾದ ಸಂಪತ್ತು ಇದ್ದಹಾಗೆ. ಹಾಗಾಗಿ ಇಂದಿಗೂ ಅದು ಚಲನಶೀಲವಾದ ಕ್ರಿಯೆ ಹೊಂದಿದೆ.

ಜಾನಪದ ಸಾಹಿತ್ಯದಲ್ಲಿ ಒಟ್ಟಾರೆ ಸಾಮಾಜಿಕವಾಗಿ ಸಾಕಷ್ಟು ಕೆಲಸ ನಡೆದಿದೆ. ಆದರೆ ಪ್ರತ್ಯೇಕ ಬೇಡರ ಮಹಿಳೆ ಕುರಿತು ಸಂಶೋಧನೆ ಕೈಗೊಂಡಿರುವುದು ತುಂಬಾ ಕಡಿಮೆ. ಬೇಡರ ಮಹಿಳೆಯರು ಕರ್ನಾಟಕದುದ್ದಕ್ಕೂ ಇದ್ದುಕೊಂಡು ಜನಪದ ಸಾಹಿತ್ಯದಲ್ಲಿಯೂ ಸಕ್ರಿಯವಾಗಿ ಸಹಜವಾಗಿಯೇ ಪಾಲ್ಗೊಂಡಿದ್ದಾರೆ. ಆದರೆ ಅವರಿಗೆ ಪಾಲ್ಗೊಂಡಿರುವುದರ ಬಗ್ಗೆ ತನ್ನದೇ ಆದ ತಿಳಿವಳಿಕೆ, ಜ್ಞಾನ, ಅರಿವು ಕಡಿಮೆ. ಒಟ್ಟಿನಲ್ಲಿ ಈ ಎಲ್ಲಾ ಅಂಶವನ್ನು ಮೀರಿ ತಮ್ಮನ್ನು ಜನಪದ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾಳೆ. ಬೇಡರ ಮಹಿಳೆ, ಅದರಲ್ಲೂ ಮ್ಯಾಸಬೇಡರ ಮಹಿಳೆ ಸಾಂಸ್ಕೃತಿಕ ವೀರರಾದ ಗಾದ್ರಿಪಾಲನಾಯಕ, ಜಗಳೂರು ಪಾಪನಾಯಕ (ಜಗಳೂರಜ್ಞ) ಯರಮಂಚಿನಾಯಕ, ಯರಗಾಟನಾಯಕ ಇವರನ್ನು ಕುರಿತು ಕಾವ್ಯಗಳನ್ನು ಹಾಡಿನ ರೂಪದಲ್ಲಿ ಹೇಳಿದ್ದಾಳೆ. ಆದರೆ ಯಾವ ಸಾಂಸ್ಕೃತಿಕ ವೀರನ ಸಂಪೂರ್ಣ ಕಾವ್ಯ ಜನಪದರಲ್ಲಿ ಸಿಕ್ಕಿಲ್ಲ. ಇರುವಷ್ಟೆ, ಸಿಕ್ಕಷ್ಟೆ ವಿಷಯವನ್ನು ಸಂಸ್ಕರಿಸಿಕೊಂಡು ಚಳ್ಳಕೆರೆ ತಾಲೂಕಿನ ಪೆತ್ತಂಬರಹಟ್ಟಿ ಪಾಲಮ್ಮ, ಓಬಮ್ಮ ಮತ್ತು ಬೋರಮ್ಮ ಅವರು ತಮ್ಮ ಜನಾಂಗದ ಸಾಂಸ್ಕೃತಿಕ ವೀರರ ಚರಿತ್ರೆಯನ್ನು ಕಾವ್ಯದ ರೂಪದಲ್ಲಿ ಹಾಡಿದ್ದಾರೆ. ಆದರೆ ಅವರು ಹಾಡಿರುವ ಕಾವ್ಯಗಳು ಎಲ್ಲಾ ಅಪೂರ್ಣವಾಗಿವೆ. ಸಾಂಸ್ಕೃತಿಕ ವೀರರ ಐತಿಹ್ಯ ಮತ್ತು ಜೀವನದ ಕೆಲವು ಪವಾಡದ ಘಟನಾವಳಿಗಳು ಮಾತ್ರ ಸಿಗುತ್ತವೆ. ಒಟ್ಟಿನಲ್ಲಿ ಇವರು ಹಾಡಿರುವ ಜನಪದ ಹಾಡುಗಳೇ ಬೇಡರಿಗೆ ಕಾವ್ಯಗಳಾಗಿ ಕಂಡು ಬರುತ್ತಿವೆ. ಇಂದಿಗೂ ಮ್ಯಾಸಬೇಡರು ಆಚರಿಸುವ ಗುಗ್ಗರಿಹಬ್ಬ (ಸುಗ್ಗಿಹಬ್ಬ)ದ ದಿನ ಸಾಂಸ್ಕೃತಿಕ ವೀರರ ಹಾಡುಗಳನ್ನು ಮಹಿಳೆಯರು ಹಾಡಿ-ಹೊಗಳುತ್ತಾರೆ.

ಮ್ಯಾಸಬೇಡರ ಅಪೂರ್ಣ ಸಾಂಸ್ಕೃತಿಕ ವೀರರ ಕಥೆಗಳು ಹಾಡಿನ ಮೂಲಕ ಸಿಕ್ಕು ಒಂದು ರೀತಿಯ ಆಂದೋಲನವನ್ನು ಸೃಷ್ಟಿಮಾಡಿವೆ. ಅದೇ ರೀತಿ ಕಾಡುಗೊಲ್ಲರ ಸಾಂಸ್ಕೃತಿಕ ವೀರರಾದ ಎತ್ತಪ್ಪ-ಜುಂಜಪ್ಪರ ಬಗ್ಗೆ ಇತಿವೃತ್ತವನ್ನು ತಿಳಿಸುವಂತಹ ದಾಖಲೆಗಳು ಸಿಗುತ್ತವೆ. ಬೇಡರ ಸಾಂಸ್ಕೃತಿಕ ವೀರರಿಗೂ ಮತ್ತು ಕಾಡುಗೊಲ್ಲರ ಸಾಂಸ್ಕೃತಿಕ ವೀರರಿಗೂ ಅವಿನಾಭಾವ ಸಂಬಂಧವಿದೆ. ಆದರೆ ಅವರ ಕಾವ್ಯಗಳು ಪೂರ್ತಿ ಸಿಕ್ಕು ಅವರ ಸಂಸ್ಕೃತಿಯನ್ನು ಶ್ರೀಮಂತಗೊಳಿಸಿವೆ. ಜನಪದ ಸಿರಿಯಜ್ಜಿ ಎಂದು ಪಾಪ್ಯುಲರ್ ಆಗಿರುವ ಕಾಡಗೊಲ್ಲರ ಮಹಿಳೆ ಚಳ್ಳಕೆರೆ ತಾಲೂಕಿನವರು. ಅದೇ ತಾಲೂಕಿನಲ್ಲಿ ಮ್ಯಾಸಬೇಡರ ಸಾಂಸ್ಕೃತಿಕ ವೀರರ ಬಗ್ಗೆ ಅಪೂರ್ಣವಾಗಿ ಹೇಳುವ ಮಹಿಳೆಯರು ಇದ್ದಾರೆ. ಜನಪದ ಸಿರಿಯಜ್ಜಿಯಂತಹವರು ಬೇಡರಲ್ಲಿಯೂ ಸಿಗಬೇಕಾಗಿದೆ. ಬೇಡರ ಸಾಂಸ್ಕೃತಿಕ ವೀರರ ಬಗ್ಗೆ ಇರುವ ಪೂರ್ಣ ಮಹಾಕಾವ್ಯಗಳನ್ನು ಹೇಳುವವರನ್ನು ಸಂಶೋಧನೆ ಮಾಡಬೇಕಾಗಿದೆ. ಹಾಗಾಗಿ ಇತ್ತ ಕಡೆ ಗಮನಹರಿಸಬೇಕಾದ ಅಗತ್ಯತೆ ಇದೆ.

ಬೇಡರ ಮಹಿಳೆ ಜನಪದ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಗುರುತಿಸಿಕೊಂಡರೂ ಅದು ಪಾಪ್ಯುಲರ್ ಆಗಲು ಸಾಧ್ಯವಾಗಿಲ್ಲ. ಪ್ರತಿಯೊಂದು ಬೇಡರ ಊರುಗಳಲ್ಲಿ ಜನಪದ ಕಥೆ, ಒಗಟು, ಗಾದೆ, ಒಗಟುಗಳನ್ನು ಹೇಳುವವರು ಸಿಗುತ್ತಾರೆ. ಅದರಲ್ಲೂ ಮುಖ್ಯವಾಗಿ ಮದುವೆ-ಹಬ್ಬ-ಹರಿದಿನಗಳಲ್ಲಿ ಸೋಬಾನೆ ಹೇಳುವ ಹೆಂಗಸರು ಇದ್ದಾರೆ. ಕರ್ನಾಟಕದ ಎಲ್ಲಾ ಭಾಗದ ಬೇಡರಲ್ಲಿನ ಮಹಿಳೆಯರು ಜನಪದ ಸಾಹಿತ್ಯದಲ್ಲಿ ಸಹಜವಾಗಿಯೇ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇವರಲ್ಲಿನ ವಯಸ್ಸಾದ, ಮಧ್ಯವಯಸ್ಸಿನ ಮಹಿಳೆಯರಲ್ಲಿ ಜನಪದ ಸಾಹಿತ್ಯ ಶ್ರೀಮಂತವಾಗಿದೆ. ಸೊಂಡೆಕೊಳದ ಕೆಂಚಮ್ಮ, ಬೆಳಗಟ್ಟದ ಜಯಮ್ಮ, ಲಿಂಗದಹಳ್ಳಿಯ ಹನುಮಕ್ಕ, ರಾಯನಹಳ್ಳಿಯ ಶಾರದಮ್ಮ, ಕೂನುಬೇವಿನ ಬೋರಮ್ಮ, ಗೀತಮ್ಮ, ಪೇಲರಹಟ್ಟಿಯ ಪಾಲಮ್ಮ, ಗಂಜಿಗಟ್ಟಿಯ ಕೆಂಚಮ್ಮ, ಕಡಕೋಳದ ಸಾವಿತ್ರಮ್ಮ, ನಂಜನಗೂಡಿನ ಶಾಂತಮ್ಮ, ಸುತ್ತೂರಿನ ರುಕ್ಮಣಮ್ಮ, ಹೀಗೆ ಅಸಂಖ್ಯಾತ ಬೇಡರ ಮಹಿಳೆಯರು ಸೋಬಾನೆಗಳನ್ನು ಸಾಂಸ್ಕೃತಿಕವಾಗಿ ಹೇಳುತ್ತಾ ಬಂದಿದ್ದಾರೆ. ಇವರು ಹೆಚ್ಚಿನದಾಗಿ ಮದುವೆಗಳಲ್ಲಿ ಮದ್ಲಿಂಗ-ಮದ್ಲಿಗಿತ್ತಿಯರನ್ನು ಪ್ರಧಾನವಾಗಿಟ್ಟುಕೊಂಡು ಸೋಬಾನೆ ಪದಗಳನ್ನು ಹೇಳುತ್ತಾರೆ. ಇಲ್ಲಿ ಹುಡುಗ-ಹುಡುಗಿಯನ್ನು ಹಾಡಿನ ಮೂಲಕ ವರ್ಣನೆ ಮಾಡಿ ಕೊಂಡಾಡುತ್ತಾರೆ. ಅದರಲ್ಲೂ ಶಾಸ್ತ್ರಗಳನ್ನು ಮಾಡುವಾಗ ಸಂದರ್ಭಕ್ಕೆ ತಕ್ಕಂತೆ ಸೋಬಾನೆ ಹೇಳುತ್ತಾರೆ. ಅಲ್ಲಿ ಸೇರಿರುವ ನೆಂಟರಿಷ್ಟರ ಮನಸ್ಸನ್ನು ರಂಜಿಸುತ್ತಾರೆ.

ಇತ್ತೀಚಿನ ದಿನಗಳಲ್ಲಿ ಮದುವೆಗಳ ಶಾಸ್ತ್ರಗಳಲ್ಲಿ ಸೋಬಾನೆ ಹೇಳುವುದು ಕಡಿಮೆಯಾಗಿದೆ ಅಂತ ಸೊಂಡೆಕೊಳದ (ಚಿತ್ರದುರ್ಗ ಜಿಲ್ಲೆ) ಕೆಂಚಮ್ಮ ಹೇಳುತ್ತಾರೆ.

ಅಳಗವಾಡಿಯ ಶಿವಗಂಗಮ್ಮ ಜನಪದ ಕಥೆ, ಹಾಡು, ಗಾದೆ, ಒಗಟುಗಳನ್ನು ಹೇಳುತ್ತಾರೆ. ಹಾಗೆಯೇ ಕೆಲವು ಗಾದೆಗಳನ್ನು ನೆನಪು ಮಾಡಿಕೊಳ್ಳುತ್ತಾರೆ. “ಆಯ್ಕೆಂಡು ತಿನ್ನಕೋಳಿ ಕಾಲು ಮುರಿದ್ಹಂಗಾಯ್ತು” “ಇಲಿ ಹೋಯ್ತು ಅಂದ್ರೆ ಹುಲಿ ಹೋಯ್ತು ಅಂದ್ಹಂಗೆ”, “ಉಂಡೋರು ಏನು ಬಲ್ಲರು ಉಪಾಸ ಇದ್ದೋರ ಕಷ್ಟವಾ” ಹೀಗೆ ಹಲವಾರು ಗಾದೆಗಳನ್ನು ಸಾಮಾಜಿಕವಾಗಿ ಅಭಿವ್ಯಕ್ತಿಸುತ್ತಾರೆ. ಕರ್ನಾಟಕದಲ್ಲಿನ ಬೇಡರ ಮಹಿಳೆಯರು ಹೀಗೆ ಜನಪದ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಸಹಜವಾಗಿ ತೊಡಗಿಕೊಂಡಿದ್ದಾರೆ.

ಗ್ರಾಮೀಣ ಪ್ರದೇಶದ ಬೇಡರ ಮಹಿಳೆಯರು ಹೆಚ್ಚಿನ ಸಮಯ ಹೊಲಗಳಲ್ಲಿ ಕಳೆಯುತ್ತಾರೆ. ನಿರಂತರವಾಗಿ ಅವರು ಕೆಲಸದಲ್ಲಿ ನಿರತಳಾಗ ಬೇಕಾಗಿರುವುದರಿಂದ ಆ ಸಮಯದಲ್ಲಿ ಮನಸ್ಸಿನ ದುಗುಡವನ್ನು, ಬೇಜಾರನ್ನು ನೀಗಿಕೊಳ್ಳಲು ಕೆಲವು ಮಹಿಳೆಯರು ಕತೆ ಕಟ್ಟಿ ಹೇಳುತ್ತಾ ಹೋಗುತ್ತಾರೆ. ಮಾಡನಾಯ್ಕನಹಳ್ಳಿಯ ಹನುಮಜ್ಜಿ ಅವರು ಬುದ್ಧಿವಂತ ಮಗ, ಏಳುರಾಜ್ಯದ ಒಡೆಯ, ಗರತಿ ಓಬವ್ವ ಹೀಗೆ ಇನ್ನು ಅನೇಕ ಕಥೆಗಳನ್ನು ಹೇಳುತ್ತಾರೆ. ಹಾಗೆಯೇ ಬೆಳಗಟ್ಟದ ಸೂರಮ್ಮ ಯರಗಟ್ಟನಾಯಕನ ಚರಿತ್ರೆಯನ್ನು ಕಥೆ ಕಟ್ಟಿ ಕಣ್ಣಿಗೆ ಕಟ್ಟುವಂತೆ ಚಿತ್ರಿಸುತ್ತಾಳೆ. ಹೀಗೆ ಇನ್ನೂ ಅನೇಕ ಬೇಡರ ಮಹಿಳೆ ಜನಪದ ಸಾಹಿತ್ಯ ಪ್ರಕಾರಗಳಲ್ಲಿಯೂ ಗುರುತಿಸಿಕೊಂಡಿದ್ದಾಳೆ. ಇಂದಿಗೂ ವಯಸ್ಸಾದ ಹಿರಿಯ ತಲೆಮಾರಿನ ಮಹಿಳೆಯರ ಹತ್ತಿರ ಜನಪದೀಯ ಅಂಶಗಳನ್ನು ಹೊಂದಿರುವ ಅನೇಕ ಅಂಶಗಳನ್ನು ಕೇಳುತ್ತೇವೆ.

ಉಪಸಂಹಾರ:

ಕರ್ನಾಟಕದ ಬೇಡರ ಮಹಿಳೆಯನ್ನು ಪ್ರಧಾನವಾಗಿಟ್ಟುಕೊಂಡು ಸಾಂಸ್ಕೃತಿಕವಾಗಿ ಸೂಕ್ಷ್ಮ ಪ್ರಜೆಯಿಂದ ಇಲ್ಲಿ ಚರ್ಚಿಸಲಾಗಿದೆ. ಬಡತನ ಮತ್ತು ಬರಗಾಲವನ್ನು ಜೀವನದ ಉದ್ದಕ್ಕೂ ಒಂದು ಸವಾಲು ಅಂತ ಸ್ವೀಕರಿಸಿ ಬದುಕುವ ಚಿತ್ರದುರ್ಗ ಜಿಲ್ಲೆಯ ಮ್ಯಾಸಬೇಡ ಮತ್ತು ಊರಬೇಡರ ಮಹಿಳೆಯರನ್ನು ಪ್ರಧಾನವಾಗಿಟ್ಟುಕೊಂಡು, ಅವರ ಜೊತೆಗೆ ಕರ್ನಾಟಕದ ಒಟ್ಟು ಬೇಡರ ಮಹಿಳೆಯನ್ನು ನೋಡಲಾಗಿದೆ. ಅಂದರೆ ಬೇಡ, ವಾಲ್ಮೀಕಿ, ಪರಿವಾರದವರು, ಗಾಯಕ, ಪಾಳೆಗಾರ ಹೀಗೆ ಒಟ್ಟು ಬೇಡರ ಮಹಿಳೆಯನ್ನು ಪ್ರಧಾನ ಅಂಶವಾಗಿ ಪರಿಗಣಿಸಿ ಅವರ ಒಟ್ಟು ಸಂಸ್ಕೃತಿಯನ್ನು ಚರ್ಚಿಸಲಾಗಿದೆ. ಇಂದಿನ ಬೇಡರ ಮಹಿಳೆ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾಳೆ. ಬಹುಮುಖ್ಯವಾಗಿ ಆರ್ಥಿಕವಾಗಿ ತೊಂದರೆ ಇದೆ. ಅದಕ್ಕಾಗಿ ಹಗಲು-ಇರಳು ಎನ್ನದೆ ಹೊಲಗಳಲ್ಲಿ, ವ್ಯಾಪಾರೋದ್ಯಮದಲ್ಲಿ, ಹೊರಗಿನ ಪ್ರಪಂಚದಲ್ಲಿ ಕೆಲಸ ಮಾಡುತ್ತಿದ್ದಾಳೆ. ಆದರೆ ಬೆರಳೆಣಿಕೆಯಷ್ಟು ಮಹಿಳೆಯರು ಮುಂದುವರೆದಿದ್ದಾರೆ. ಅದರಲ್ಲೂ ಶಿಕ್ಷಣ ಕ್ಷೇತ್ರದಲ್ಲಿ ಮತ್ತು ಉದ್ಯೋಗ ಕ್ಷೇತ್ರದಲ್ಲಿ ತುಂಬಾ ಮುಂದುವರೆದಿದ್ದಾರೆ. ಅದರಲ್ಲೂ ಶಿಕ್ಷಣ ಕ್ಷೇತ್ರದಲ್ಲಿ ಮತ್ತು ಉದ್ಯೋಗ ಕ್ಷೇತ್ರದಲ್ಲಿ ತುಂಬಾ ಹಿಂದೆ ಉಳಿದಿದ್ದಾಳೆ. ಅವಳನ್ನು ಇಂದಿನ ಸಮಾಜದಲ್ಲಿ ಮುಖ್ಯವಾಹಿನಿ ಕಡೆ ತರಬೇಕಾದರೆ ಶಿಕ್ಷಣ ತುಂಬಾ ಅಗತ್ಯವಿದೆ. ಅದು ಸಾಮಾನ್ಯ ಶಿಕ್ಷಣದಿಂದ ಸಾಧ್ಯವಾಗುವುದಿಲ್ಲ. ಇಂದಿನ ಜಾಗತಿಕ ಪ್ರಪಂಚದಲ್ಲಿ ಮಹಿಳೆಯಾಗಲಿ, ಪುರುಷರಾಗಲಿ ಸ್ಪರ್ಧಾ ಪ್ರಪಂಚಕ್ಕೆ ಸ್ಪರ್ಧಿಸಲು ಅದಕ್ಕೆ ಸಂವಾದಿಯಾದಂತಹ ಶಿಕ್ಷಣ ಬೇಕಾಗಿದೆ. ಅಂತಹ ಶಿಕ್ಷಣವನ್ನು ಶ್ರೀಮಂತರ ಮಕ್ಕಳು, ನಗರದಲ್ಲಿನ ನೌಕರದಾರರ ಮಕ್ಕಳು, ದೊಡ್ಡ ದೊಡ್ಡವ್ಯಾಪಾರಸ್ಥರ ಮಕ್ಕಳು ಪಡೆಯುತ್ತಿದ್ದಾರೆ. ಆದರೆ ರೈತನ ಮಕ್ಕಳು ಇವರ ಜೊತೆಯಲ್ಲಿ ಸ್ಪರ್ಧಿಸುವಾಗ ಸಾಕಷ್ಟು ಸಮಸ್ಯೆಗಳನ್ನು ಎದುರಿಸಿ ಬರಬೇಕಾಗಿದೆ. ಅದರಲ್ಲೂ ಮಹಿಳೆಯರು ಪ್ರತಿಯೊಂದು ಕ್ಷೇತ್ರದಲ್ಲಿಯೂ ಸಮಸ್ಯೆಗಳನ್ನು ಇಟ್ಟುಕೊಂಡು ಬದುಕುತ್ತಿದ್ದಾಳೆ.

ಬೇಡರ ಮಹಿಳೆ ತುಂಬಾ ಶ್ರಮಜೀವಿಯಾಗಿದ್ದಾಳೆ. ಅವಳು ಹೇಳಿಕೇಳಿ ಅನಕ್ಷರಸ್ಥ ಮಹಿಳೆ. ಅವಳ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತಿಲ್ಲ. ಗ್ರಾಮೀಣ ಬೇಡರ ಮಹಿಳೆ ಆರ್ಥಿಕವಾಗಿ ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ಹೇಗೆ ತನ್ನನ್ನು ಪರಂಪರೆಯೊಳಗೆ ಗುರುತಿಸಿಕೊಂಡಿದ್ದಾಳೆ ಎಂಬುದನ್ನು ಇಲ್ಲಿ ನೋಡಲಾಗಿದೆ. ಅವಳು ಎಲ್ಲಿಯೋ ಒಂದು ಕಡೆ ಜಡ್ಡುಗಟ್ಟಿದ ಸಂಪ್ರದಾಯ ಮತ್ತು ನಂಬಿಕೆಗಳಲ್ಲಿ ನರಳುತ್ತಿದ್ದಾಳೆ. ಆದ್ದರಿಂದ ಅವಳು ಹೊರ ಬರಬೇಕೆಂದರೆ ಶಿಕ್ಷಣ ಅತ್ಯವಶ್ಯಕವಾಗಿದೆ. ಈ ಮಹಿಳೆ ಹೊಸ ಹೊಸದಾದ ಬದುಕನ್ನು ರೂಪಿಸಿಕೊಳ್ಳಬೇಕೆಂದರೆ ಶಿಕ್ಷಣದ ಅವಶ್ಯಕತೆ ಇದೆ. ಬೇಡರಲ್ಲಿನ ಶಿಕ್ಷಣ ಪಡೆದ ಮಹಿಳೆಗೂ ಮತ್ತು ಶಿಕ್ಷಣ ಪಡೆಯದೆ ಇರುವ ಮಹಿಳೆಯರಲ್ಲಿ ಸಾಕಷ್ಟು ವ್ಯತ್ಯಾಸ ಕಾಣುತ್ತೇವೆ.

ಬೇಡರ ಮಹಿಳೆ ಹಲವು ಕುಟುಂಬಗಳಲ್ಲಿ ಪುರುಷ ಪ್ರಧಾನ ಸಮಾಜದಲ್ಲಿ ಸಾಕಷ್ಟು ಕಷ್ಟಗಳನ್ನು ಪಟ್ಟರೆ, ಇನ್ನು ಕೆಲವು ಕುಟುಂಬಗಳಲ್ಲಿ ಅದೇ ಪುರುಷ ಪ್ರಧಾನ ಸಮಾಜದಿಂದ ನೆಮ್ಮದಿಯಿಂದ ಇರುವುದನ್ನು ನಾವು ಕಾಣುತ್ತೇವೆ. ಹೆಚ್ಚಿನ ಬೇಡರ ಮಹಿಳೆ ರೈತರ ಕುಟುಂಬ ಹೊಂದಿದ್ದಾಳೆ. ಅವಳು ರೈತನ ಹೆಂಡತಿಯಾಗಿ, ತಾಯಿಯಾಗಿ, ಮಗಳಾಗಿ ಸಾಕಷ್ಟು ಕಷ್ಟ-ಸುಖ, ನೆಮ್ಮದಿಗಳನ್ನು ಕಾಣುತ್ತಿದ್ದಾಳೆ. ಇವೆಲ್ಲವನ್ನು ಮೀರಿ ಒಂದು ಮಾನವೀಯ ಮೌಲ್ಯವನ್ನು ಇಟ್ಟುಕೊಂಡಿದ್ದಾಳೆ. ಅವಳಲ್ಲಿ ಸಹಕಾರ, ಸಹಬಾಳ್ವೆಯನ್ನು ಹೆಚ್ಚಿನದಾಗಿ ಕಾಣುತ್ತಿದ್ದೇವೆ.

ಕರ್ನಾಟಕದ ಬೇಡರ ಮಹಿಳೆಯನ್ನು ಅವಳ ಒಟ್ಟು ಬದುಕಿನ ಮೌಲ್ಯಗಳನ್ನು ಸಮೀಕರಿಸಿ ಸೈದ್ಧಾಂತಿಕವಾಗಿ ಆಲೋಚಿಸಲಾಗಿದೆ. ಇಲ್ಲಿ ಮಹಿಳೆಯನ್ನೇ ಪ್ರಧಾನವಾಗಿ ಪರಿಗಣಿಸಿ ಅವಳ ಬದುಕಿನ ಆಳ-ಅಗಲವನ್ನು ಚರ್ಚಿಸಿ, ವಿವೇಚಿಸಲಾಗಿದೆ. ಇದು ಪ್ರತ್ಯೇಕವಾಗಿ ಆಲೋಚಿಸುತ್ತಿರುವ ಹೊಸ ವಿಷಯವಾಗಿದೆ. ಬುಡಕಟ್ಟಿನ ಸೊಗಡನ್ನು ಮೈಗೂಡಿಸಿಕೊಂಡಿರುವ ಬೇಡರು ಸಾಂಸ್ಕೃತಿಕವಾಗಿ ವಿಸ್ತಾರವಾದ ಸಾಮಾಜಿಕ ಪ್ರಜ್ಞೆಯನ್ನು ಹೊಂದಿದ್ದಾರೆ. ಈ ಬೇಡರು ಇನ್ನಿತರ ಬುಡಕಟ್ಟಿನ ಸಂಸ್ಕೃತಿಗೆ, ಆಚರಣೆಗೆ ಮಾದರಿಯಾಗಿದ್ದಾರೆ. ಬೇಡರ ಮಹಿಳೆಯನ್ನು ಕರ್ನಾಟಕದ ಸಂಸ್ಕೃತಿಯ ಸಂದರ್ಭದಲ್ಲಿ ಮುಖ್ಯವಾಹಿನಿಗೆ ತರಬೇಕಾದರೆ ಇಂತಹ ಅಧ್ಯಯನಗಳು ತುಂಬಾ ಸಹಕಾರಿಯಾಗಬಲ್ಲವು. ಹಾಗಾಗಿ ಈ ರೀತಿಯ ಅಧ್ಯಯನವು ಸಂಶೋಧಕರಿಗೆ ಮತ್ತು ಪ್ರತ್ಯೇಕವಾಗಿ ಬುಡಕಟ್ಟಿನ ಸಂಸ್ಕೃತಿ ಅಧ್ಯಯನ ಮಾಡುವವರಿಗೆ ಪ್ರಯೋಜನವಾಗಬಲ್ಲದು. ಆದ್ದರಿಂದ ಇಲ್ಲಿನ ಮಾಹಿತಿಗಳು ಸಾಮಾಜಿಕ, ಸಾಂಸ್ಕೃತಿಕ ಸನ್ನಿವೇಶಗಳಲ್ಲಿ ಅನನ್ಯವಾದ, ವಿಶಿಷ್ಟವಾದ ಸೊಬಗನ್ನು ಹೊಂದಿರುತ್ತದೆ.

 

ಲೇಖಕರ ವಿಳಾಸ

೧.       ಅಬ್ಬಾಸ್‌ಮೇಲಿನಮನಿ.
ಕನ್ನಡ ಉಪನ್ಯಾಸಕರು,
ಸರ್ಕಾರಿ ಪದವಿ ಪೂರ್ವಕಾಲೇಜ್‌
ಇಲಕಲ್, ಬಾಗಲಕೋಟ (ಜಿ)

೨.       ಡಾ. ಬಾಳಾಸಾಹೇಬ ಲೋಕಾಪುರ.
“ರತ್ನತ್ರಯ”
೧೫ನೇ ಕ್ರಾಸ್‌, ವಿದ್ಯಾಗಿರಿ
ಬಾಗಲಕೋಟೆ-೫೮೭೧೦೧

೩.       ಡಾ. ಶಿವಾನಂದ ಕೆಳಗಿನಮನಿ.
ಪ್ರವಾಚಕರು,
ಕನ್ನಡ ವಿಭಾಗ
ಕರ್ನಾಟಕ ಕಲಾ ಮಹಾವಿದ್ಯಾಲಯ
ಧಾರವಾಡ-೫೮೦೦೦೩

೪.       ಡಾ. ಶ್ರೀರಾಮ ಇಟ್ಟಣ್ಣವರ
“ಪಾರಿಜಾತ”
ಗಾಂಧೀನಗರ, ಬೀಳಗಿ (ತಾ)
ಬಾಗಲಕೋಟೆ (ಜಿ)

೫.       ಡಾ. ವಿಜಯಕುಮಾರ ಕಟಗಿಹಳ್ಳಿಮಠ.
ಅಧ್ಯಾಪಕರು,
ಮುಖ್ಯಸ್ಥರು, ಕನ್ನಡ ವಿಭಾಗ,
ಬಸವೇಶ್ವರ ವಿಜ್ಞಾನ ಮಹಾವಿದ್ಯಾಲಯ,
ಬಾಗಲಕೋಟೆ-೫೮೭೧೦೧

೬.       ಡಾ. ಅರ್ಜುನ ಗೊಳಸಂಗಿ.
ಕನ್ನಡ ಉಪನ್ಯಾಸಕರು,
ಗದಗ ಸಹಕಾರಿ ಜವಳಿ ಗಿರಣಿಯ
ಪದವಿಪೂರ್ವ ಕಾಲೇಜ್‌
ಹುಲಕೋಟಿ, ಗದಗ (ಜಿ)

೭.       ಡಾ. ಸಿದ್ದಪ್ಪ ಬೆಳಗಟ್ಟಿ
ಉಪನ್ಯಾಕರು,
ಮಹಿಳಾ ಅಧ್ಯಯನ ಕೇಂದ್ರ, ಜ್ಞಾನಭಾರತಿ
ಬೆಂಗಳೂರು ವಿಶ್ವವಿದ್ಯಾಲಯ,
ಬೆಂಗಳೂರು-೫೬೦೦೫೬.