ಮಧ್ಯಶಿಲಾಯುಗ ಸಂಸ್ಕೃತಿ

ನಮ್ಮ ಪೂರ್ವಜರ ಸಂಖ್ಯಾತ್ಮಕವಾಗಿ ವೃದ್ಧಿಸಿಕೊಳ್ಳಬಲ್ಲ ಹಾಗೂ ಈ ದೊಡ್ಡ ಸಂಖ್ಯೆಯ ಸಮುದಾಯಗಳನ್ನು ಪೋಷಿಸಬಲ್ಲ ಸಾಮರ್ಥ್ಯಾ ಪ್ರಮುಖವಾಗಿ ಬಂದುದು ಅವರ ಹೆಚ್ಚು ಕೌಶಲ್ಯ ಪೂರ್ಣ, ಹಗುರ ಉಪಕರಣಗಳು ಹಾಗೂ ಚಿಂತನೆ, ಮಾಹಿತಿಗಳನ್ನು ಸ್ಫುಟ ಮಾತುಗಳ ಮೂಲಕ ಪರಸ್ಪರ ಸಂವಹಿಸುವ ಶಕ್ತಿಯಿಂದಲೇ. ಈ ಎರಡೂ, ಒಂದು ಸಾಮೂಹಿಕ ಪ್ರಯತ್ನದ ಮೂಲಕ ಪ್ರಾಣಿಗಳನ್ನು ಬೇಟೆಯಾಡುವಲ್ಲಿ ಬಹಳ ನೆರವಾದವು. ಬದಲಾವಣೆಯ  ವೇಗದಲ್ಲಿ ಆದ ಹೆಚ್ಚಳ ಹೀಗೆ ಪಡೆದ ಈ ಅಪಾರ ಸಾಮರ್ಥ್ಯಾವನ್ನು ಬಿಂಬಿಸುತ್ತದೆ. ಇಂತಹ ಬದಲಾವಣೆಯನ್ನು ಉಪಕರಣಗಳ ವಸ್ತುಗಳ ವೈವಿಧ್ಯತೆಯನ್ನು ಹೆಚ್ಚಿಸುವ ಮೂಲಕ, ಮೂಳೆಗಳು ಮಾತ್ರವಲ್ಲ ಪ್ರಾಣಿಗಳ ಕೊಂಬು, ಕಟ್ಟಿಗೆ, (ವಿಶೇಷವಾಗಿ ಚೀನಾ ಹಾಗೂ ಆಗ್ನೇಯ ಏಷಿಯಾದಲ್ಲಿ) ಬಿದಿರು ಇವುಗಳನ್ನು ಬಳಸುವ ಮೂಲಕ ಸಾಧಿಸಲು ಸಾಧ್ಯವಾಯಿತು. ಇಂತಹ ಸಾವಯವ ಪದಾರ್ಥಗಳು ಬಹಳಷ್ಟು ಸ್ಪಲ್ಪ ಉಳಿದುಕೊಂಡು ಬರುವುದಿಲ್ಲವಾದ್ದರಿಂದ ಆ ಆರಂಭದ ಕಾಲದ ನಮ್ಮ ಉಪಕರಣಗಳ ದಾಖಲೆ ಹೆಚ್ಚಾಗಿ ಶಿಲಾಪರಿಕರಗಳನ್ನೇ ಅವಲಂಬಿಸಿದೆ. ಆದಗ್ಯೂ ನಾವು ಶಿಲಾ ಉಪಕರಣಗಳಲ್ಲಿ ಸಹಭಾರೀ ಸುಧಾರಣೆಗಳನ್ನು ನೋಡಬಹುದು. ಅಷ್ಟೇ ಮಹತ್ವದ ಸುಧಾರಣೆಗಳಿಗೆ ಹಿಂದೆ ಹಲವು ನೂರು ಸಾವಿರ ವರ್ಷಗಳು ತೆಗೆದುಕೊಂಡರೆ, ಈಗ ಕೆಲವು ಹತ್ತು ಸಾವಿರ ವರ್ಷ ತೆಗೆದುಕೊಂಡಿತು, ನಂತರದಲ್ಲಿನ ಬದವಾವಣೆಗಳು ಕೇವಲ ಕೆಲ ಸಾವಿರ ವರ್ಷಗಳಲ್ಲೇ ಆದದ್ದನ್ನು ಕಾಣಬಹುದು. ನಾವು ಮೊದಲು ನೋಡುವ ಪರಿವರ್ತನೆಯೆಂದರೆ ಅಲಗು ತಂತ್ರಜ್ಞಾನದಿಂದ ‘ಸೂಕ್ಷ್ಮ್ ಶಿಲಾ ಪರಿಕರಗಳಿಗೆ’ ಬದಲಾವಣೆ (ಕಲ್ಲಿನ ಸಣ್ಣ ಉಪಕರಣಗಳು, ಮೊನೆಗಳು, ಕೆಲವೊಮ್ಮೆ ಸಣ್ಣ ಅಲಗಿನ ತುಂಡುಗಳನ್ನು ಕಟ್ಟಿಗೆ ಅಥವಾ ಮೂಳೆಯ ಹಿಡಿಗೆ ತಗಲಿಸಿ ಮಾಡಿದ ಉಪಕರಣಗಳು). ಈ ಪರಿವರ್ತನೆಗೆ ಸುಮಾರು ೭೦,೦೦೦ ವರ್ಷ (೧೦೦,೦೦೦ ದಿಂದ ೩೦,೦೦೦ ವರ್ಷಗಳ ಹಿಂದಿನವರೆಗೂ) ತೆಗೆದುಕೊಂಡರೆ, ನಂತರದ ನವಶಿಲಾಯುಗದ ಉಪಕರಣಗಳ ಆಗಮನಕ್ಕೆ ತೆಗೆದುಕೊಂಡ ಕಾಲ ಕೇವಲ ಸುಮಾರು ೨೫,೦೦೦  ವರ್ಷಗಳು( ೩೪,೦೦೦ದಿಂದ ೯,೦೦೦ ವರ್ಷಗಳ  ಹಿಂದಿನವರೆಗೆ).

ಮೈಕ್ರೋಲಿಥ್‌ಗಳು ಅಂದರೆ ಕಲಿನ ಸಣ್ಣ ಪರಿಕರಗಳ ಮೂಲಕ ಗುರುತಿಸಲ್ಪಡುವ ಈ ಸಂಕ್ರಮಣ ಕಾಲವನ್ನು ಮೆಸೊಲಿಥಿಕ್ ಅಥವಾ ಮಧ್ಯ ಶಿಲಾಯುಗ ಎಂದು ಕರೆಯಲಾಗುತ್ತದೆ. ದಕ್ಷಿಣ ಏಷಿಯಾದಲ್ಲಿನ (ಬಹುಶಃ ಪ್ರಪಂಚದಲ್ಲಿಯೇ) ತೀರ ಪುರಾತನ ಸೂಕ್ಷ್ಮ ಶಿಲಾ ಉಪಕರಣಗಳು ಶ್ರೀಲಂಕಾದಿಂದ ಬಂದಿವೆ. ಫಾ ಹೀನ್ ಗುಹೆಯ ಈ ಸರಳ ಸೂಕ್ಷ್ಮ ಶಿಲಾ  ಉಪಕರಣಗಳ ಕಾಲಮಾನ ಸುಮಾರು ೩೪,೦೦೦ ವರ್ಷಗಳ ಹಿಂದೆ ಮತ್ತು ಬಟಾದೊಂಬಾ ಲೇನಾದಲ್ಲಿನ ಸಮಾಂತರ ಸಣ್ಣ ಭೂಮಿತೀಯ ಶಿಲಾ  ಉಪಕರಣಗಳ ಕಾಲಮಾನ ಸುಮಾರು ೨೮,೦೦೦ ವರ್ಷಗಳ ಹಿಂದೆ. ಕೆಲವು ಸಣ್ಣ ಶಿಲಾಪರಿಕರಗಳು ಮಹಾರಾಷ್ಟ್ರದ ಚಾಲಿಸ್ ಗಾಂವ್ ನಲ್ಲಿನ ಪಾಟ್ನೇಯಲ್ಲಿ ಅಂತಿಮ ಮೇಲಣಾ ಶಿಲಾಯುಗದ  ಉಪಕರಣಗಳೊಂದಿಗೆ (ಸುಮಾರು ೨೪,೦೦೦ ವರ್ಷಗಳ ಹಿಂದೆ) ಕಂಡುಬರುತ್ತವೆ. ಹಾಗಿದ್ದಲ್ಲಿ ಶ್ರೀಲಂಕಾದಿಂದ ಈ ಮಧ್ಯ ಶಿಲಾಯುಗದ ತಂತ್ರಜ್ಞಾನ ಉತ್ತರಕ್ಕೆ ಹರಿದುಬಂದಿತೆ? ಅಗ ಮಾನವ ಸಮುದಾಯಗಳು ಗುಹೆಗಳನ್ನು, ಬಂಡೆಗಳು, ದಿಬ್ಬ ಮತ್ತು ಇತರ ಪ್ರಕೃತಿ ಸಹಜ ಆಶ್ರಯಗಳಲ್ಲಿ ತಾತ್ಕಾಲಿಕ ಆಶ್ರಯಗಳನ್ನು ಪಡೆಯುವ ಅಲೆಮಾರಿ ಗುಂಪುಗಳಿದ ಪ್ರಗತಿ ಹೊಂದಿ ಪ್ರಾರಂಭಿಕ ಗುಡಿಸಲುಗಳನ್ನು ಕಟ್ಟಿಕೊಳ್ಳುತ್ತಿದ್ದ ಭಾಗಶಃ  ನೆಲೆನಿಂತ ಸಮುದಾಯಗಳಾಗಿದ್ದವು. ಶ್ರೀಲಂಕಾದ ಬೇಲಿ ಲೇನಾದ ಮಧ್ಯ ಶಿಲಾಯುಗದ ನಿವೇಶನವು ಸುಟ್ಟ ಕಾಡುಧಾನ್ಯಗಳ ಸಾಕ್ಷಿ ಒದಗಿಸುತ್ತದೆ. ಸುಮಾರು ೧೨,೦೦೦ ದಿಂದ ೯,೦೦೦ ವರ್ಷಗಳ ಹಿಂದೆ ಅಥವಾ ೧೦,೦೦೦ ಕ್ರಿ.ಪೂ. ದಿಂದ ೭,೦೦೦ ಕ್ರಿ. ಪೂ. ಕಾಲಮಾನ. ಇದು ಕಾಡು ಧಾನ್ಯಗಳನ್ನಾಗಲೇ ಮಾನವ ಆಹಾರಕ್ಕಾಗಿ ಸಂಗ್ರಹಿಸುತಿದ್ದ ಎಂದು ಸೂಚಿಸುತ್ತದೆ. ನಾವು ಈಗಾಗಲೇ ಬಾಗೋರ್-I ರಲ್ಲಿ ಮೇಲಣ ಶಿಲಾಯುಗದಲ್ಲಿ ಧಾರ್ಮಿಕ ನಂಬಿಕೆ ಹಾಗೂ ದೈವದ ಸಂಕೇತದ ಬಗೆಗೆ ಸಾಕ್ಷಿಯಿರುವುದನ್ನು ನೋಡಿದ್ದೇವೆ. ಮಧ್ಯ ಶಿಲಾಯುಗ ಸಂಸ್ಕೃತಿಗಳಲ್ಲಿ ಇಂತಹ ಆರಾಧನೆಯ ಸಂಕೇತಗಳು ಆಭರಣಗಳಲ್ಲಿ ಕಂಡುಬರುತ್ತವೆ. ಈ ಸಂಕೇತಗಳನ್ನು ಬಹುಶಃ ತಾಯತಗಳಾಗಿ ಧರಿಸಲಾಗುತ್ತಿತ್ತು ಹಾಗೂ ಕಲ್ಲುಗಳ ಮೇಲೆ ಕೊರೆಯಲಾಗುತ್ತಿತ್ತು. ಇದೇ ಮುಂದೆ ಬಂಡೆ ಕಲೆ (ರಾಕ್ ಆರ್ಟ್) ಅಥವಾ ಗುಹಾ ಕಲೆಯಾಗಿ ವಿಕಾಸವಾಯಿತು.

ಮಧ್ಯ ಉತ್ತರಪ್ರದೇಶದ ಬಯಲುಗಳಲ್ಲಿನ ಸರಾಯ್ ನಹರ್ ರಾಯ್ ಮತ್ತು ಅದರ ಪಕ್ಕದಲ್ಲಿರುವ ಮಹಾದಹ ನಂತರದ ಮಧ್ಯ ಶಿಲಾಯುಗದ ಪ್ರಮುಖ ನಿವೇಶನಗಳಲ್ಲಿ ಸೇರಿವೆ. ಸರಾಯ್ ನಹರ್ ರಾಯ್‌ನ ಕಾಲಮಾನವನ್ನು ರೇಡಿಯೋ ಕಾರ್ಬ್‌ನ್ ಪದ್ಧತಿಯ ಮೂಲಕ ೧೦೦೦ ವರ್ಷಗಳ ಹಿಂದೆ (೮,೦೦೦ ಕ್ರಿ.ಪೂ.) ಎಂದು ನಿರ್ಣಯಿಸಲಾಗಿದೆ. ಈ  ನಿವೇಶನಗಳಲ್ಲಿ ಹಲವು ಹೂಳಲ್ಪಟ್ಟ, ಎತ್ತರದ ವ್ಯಕ್ತಿಗಳ (ಗಂಡಿನ ಎತ್ತರ ೧೮೦ ಸೆಂ. ಮೀ. ಹೆಣ್ಣಿನ ಎತ್ತರ ೧೭೦ ಸೆಂ. ಮೀ.) ಆಸ್ಥಿಪಂಜರಗಳು ಪತ್ತೆಯಾಗಿವೆ. ಇವು ದೊಡ್ಡ ಮೂಳೆಗಳ, ಸಾಕಷ್ಟು ದೃಢಕಾಯ ಜನರವು. ಉಪಕರಣಗಳು ಈಗ ಬಹಳವಾಗಿದ್ದರೂ ಅವು ಸಮಾಂತರ ಅಲಗುಗಳನ್ನೇ ಈಗಲೂ ಆಧರಿಸಿದ್ದವು. ಮೂಳೆಗಳ ಹಾಗೂ ಕಠಿಣ ಶಿಲೆಯ ಬಾಣದ ತುದಿಗಳು, ಕಠಿಣ ಶಿಲೆಯ ಬಾಣದ ತುದಿ ಒಂದು ಆಸ್ಥಿಪಂಜರದಲ್ಲಿ ಹೂತಿರುವುದು ಬೆಟೆಗಾರನ ಪರಿಕರಗಳಿಗೆ ಬಿಲ್ಲು, ಬಾಣಗಳ ಸೇರ್ಪಡೆಯಾಗಿರುವುದನ್ನು ಸೂಚಿಸುತ್ತದೆ. ಅವರು ಬೇಟೆಯಾಡಿ, ಆಹಾರವಾಗಿ ತಿನ್ನುತ್ತಿದ್ದ ಪ್ರಾಣಿಗಳಲ್ಲಿ ಜೆಬು ಜಾನುವಾರು, ಕೋಣ (ಹಾಗೂ ಎಮ್ಮೆ), ಕುರಿ, ಮೇಕೆ, ಜಿಂಕೆ, ಹಂದಿ, ಖಡ್ಗಮೃಗ, ಆನೆ, ಆಮೆ, ದೊಡ್ಡ ಆಮೆ ಮತ್ತು ವಿವಿಧ ಪಕ್ಷಿಗಳು ಸೇರಿವೆ. ಜಾನುವಾರು ಅಥವಾ ಕುರಿ, ಆಡನ್ನು ಸಾಕುತ್ತಿದ್ದ ಬಗ್ಗೆ ದೃಢ ಸಾಕ್ಷಿ ಇಲ್ಲ. ಅವರ ವಸತಿಗಳು ಬೇಟೆಯಾಡುವ ಪ್ರಾಣಿಗಳು ಲಭ್ಯವಿರುವ ಕಾಡಿನಲ್ಲಿಯೇ ಇರುತ್ತಿದ್ದವು. ಮಾಂಸವನ್ನು ಹುರಿಯಲು ಬೆಂಕಿಯನ್ನು ಬಳಸಿದ ಸಾಕ್ಷಿ ಇಲ್ಲಿ ದೊರೆಯುತ್ತದೆ. ಬೀಸುವ ಕಲ್ಲು, ಅರೆಯುವ ಕಲ್ಲು ದೊರೆತಿರುವುದರಿಂದ ಅವರು ಧಾನ್ಯಗಳನ್ನು  ಸಂಗ್ರಹಿಸಿ ಹುಡಿ ಮಾಡುತ್ತಿದ್ದಿರಬೇಕು ಅವರು ದಾನ್ಯಗಳನ್ನು ಮುಂದಿನ ಬಳಕೆಗಾಗಿ ರಕ್ಷಿಸಿಕೊಳ್ಳುತ್ತಿದ್ದಿರಬಹುದೆಂಬ ಸೂಚನೆಯೂ ಇದರಿಂದ ದೊರೆಯುತ್ತದೆ. ದಾರದ ಬಟ್ಟೆಯ ಗುರುತುಗಳಿಲ್ಲ. ಬಹುಶಃ ಅವರು ಪ್ರಾಣಿಗಳ ಚರ್ಮದ ತುಂಡುಗಳನ್ನು ಧರಿಸುತ್ತಿದ್ದರಬಹುದು. ಕೂದಲುಗಳನ್ನು ಹಗ್ಗಗಳಾಗಿ ಕೈಯಿಂದ ಹೆಣೆಯಲಾಗುತ್ತಿತ್ತು. ಆದರೆ ನೇಯ್ಗೆಯ ಸಾಕ್ಷಿಗಳು ಲಭ್ಯವಿಲ್ಲ. ಕುಂಬಾರಿಕೆ ಇನ್ನೂ ಇರಲಿಲ್ಲ. ಮೂಳೆಯ ಆಭರಣಗಳು (ಲೋಲಕಗಳು ಮತ್ತು ಕುತ್ತಿಗೆಯ ಹಾರಗಳು) ಮಹಾದಹನಲ್ಲಿ ದೊರೆತಿದ್ದು, ಇವುಗಳನ್ನು ಹೆಂಗಸರು ಧರಿಸುತ್ತಿರಲಿಲ್ಲ ಬದಲಾಗಿ ಗಂಡಸರು ಧರಿಸುತ್ತಿದ್ದಂತೆ ಕಾಣುತ್ತದೆ.

ಮಾನವ ಜೀವನ ಬಹುಶಃ ಇನ್ನೂ ಬಹಳ, ಬಹಳ ಕಷ್ಟಕರವಾಗಿತ್ತು. ಮಹಾದಾಹದಲ್ಲಿ ಹೂಳಲ್ಪಟ್ಟ ೧೩ ವ್ಯಕ್ತಿಗಳ ಸತ್ತ ವಯಸ್ಸನ್ನು ನಿರ್ಣಯಿಸಲಾಗಿದೆ. ಇವರ ಸರಾಸರಿ ವಯಸ್ಸು ೧೯ ರಿಂದ ೨೮ ವರ್ಷಗಳು, ಇದು ೧೯ಕ್ಕೇ ಹೆಚ್ಚು ಹತ್ತಿರ, ಒಬ್ಬನ ವಯಸ್ಸು ಮಾತ್ರ ೪೦ ವರ್ಷಗಳಿಗಿಂತ ಹೆಚ್ಚಿನದ್ದು ಯಾರದ್ದೂ ೫೦ ವರ್ಷ ದಾಟಿರಲಿಲ್ಲ.

ಸತ್ತವರ ಹೂಳುವಿಕೆಯು ಧರ್ಮ ಮತ್ತು ಮೂಢನಂಬಿಕೆಗಳು ಆಸ್ತಿತ್ವದಲ್ಲಿದ್ದವು ಎಂದು ತೋರಿಸುತ್ತದೆ. ಮೂಳೆಯ ಆಭರಣಗಳು ಮತ್ತು ಕೊಂದ ಪ್ರಾಣಿಗಳ ಮೂಳೆಗಳನ್ನು ಸತ್ತವರೊಂದಿಗೆ ಹೂಳುವುದು, ಸತ್ತ ನಂತರ ಬದುಕಿನ ಬಗೆಗೆ ನಂಬಿಕೆ ಸೂಚಿಸುತ್ತದೆ. ಹೆಂಗಸರನ್ನೂ ಗಂಡಸರಂತೆಯೇ ಹೂಳಲಾಗುತ್ತಿತ್ತು. ಜೋಡಿ ಹೂಳೂವಿಕೆ ಹಾಗೂ ಎರಡನೇ ಸಲ ಹೂಳುವಿಕೆ ದೊರೆಯುತ್ತವೆಯಾದರೂ ಒಬ್ಬರನ್ನು ಇನ್ನೊಬ್ಬರ ನಂತರದ ಜೀವನದಲ್ಲಿ ಜತೆಗಿರಲೆಂದು ಹೂಳಲಾಗಿದೆ ಎಂದು ಸೂಚಿಸಲು ಏನೂ ದೊರೆತಿಲ್ಲ. ಬೇಲನ್ ಕಣಿವೆಯಲ್ಲಿ ಮೂಳೆಯಲ್ಲಿ ಕೊರೆದ ಚಿಕ್ಕ ಪ್ರತಿಮೆ ದೊರೆತಿದೆ. ಮಹಾರಾಷ್ಟ್ರದ ಪಾಟ್ನೇಯಲ್ಲಿ ಹಾಗೂ ಮಧ್ಯಪ್ರದೇಶದ ರೋಜ್ಡೆಯಲ್ಲಿ ಉಷ್ಟ್ರಪಕ್ಷಿಯ (ಈ ಪಕ್ಷಿ ಬಹುಕಾಲದ ಮಾನವ ಬೇಟೆಯ ಪರಿಣಾಮವಾಗಿ ನಮ್ಮಲ್ಲಿ ಇಲ್ಲವಾಗಿದೆ.) ಮೊಟ್ಟೆಯ ಕವಚದ ಮೇಲೆ ಸಣ್ಣ ಆಕೃತಿ ಕೆತ್ತಲ್ಪಟ್ಟಿದೆ. ಇದರಲ್ಲಿ ಕೇವಲ ಸೌಂದರ್ಯ ಪ್ರಜ್ಞೆಯಲ್ಲದೆ ಧಾರ್ಮಿಕ ಮಹತ್ವ ಇರಬಹುದು ಅಥವಾ ಇದರ ಹಿಂದೆ ಮೂಢನಂಬಿಕೆ ಇರುವುದನ್ನು ಸಹ ತೋರಿಸುತ್ತಿರಬಹುದು.

ಸುಮಾರು ೮೦೦೦ ವರ್ಷಗಳ ಹಿಂದಿನದೆಂದು (ಕ್ರಿ. ಪೂ. ೬೦೦೦) ನಿರ್ಣಯಿಸಲಾದ ನರ್ಮದಾ ಕಣಿವೆಯ ಅದಮ್‌ಘಡ ಮಧ್ಯಶಿಲಾಯುಗ ಸಂಸ್ಕೃತಿಯಲ್ಲಿ ಇನ್ನೂ ಹೆಚ್ಚಿನ ಪ್ರಗತಿಯಾದುದನ್ನು ತೋರಿಸುತ್ತದೆ. ಇಲ್ಲಿ ಸಾಕುಪ್ರಾಣಿಗಳಾದ ನಾಯಿಗಳು, ಜೆಬು ಜಾನುವಾರು, ಎಮ್ಮೆಗಳು, ಕುರಿಗಳು, ಹಂದಿಗಳ ಜೊತೆಗೆ ಕಾಡುಪ್ರಾಣಿಗಳಾದ ಜಿಂಕೆ, ಮುಳ್ಳುಹಂದಿ, ಹಲ್ಲಿಗಳ ಎಲುಬುಗಳು ಸಮಭಾಗದಲ್ಲಿ ದೊರೆಯುತ್ತವೆ. ಸ್ಪಷ್ಟವಾಗಿಯೇ ಈ ಸಮುದಾಯಗಳು ಬೇಟೆಯಿಂದ ಭಾಗಶಃ ಪಶುಸಂಗೋಪನಾ ಸಮಾಜಗಳಾಗಿ ಪರಿವರ್ತನೆಯಾಗಿದ್ದವು. ಇವುಗಳ ಉಪಕರಣಗಳು ಇನ್ನೂ ಸಮಾಂತರ ಅಂಚಿನ ಅಲಗುಗಳ ಮೂಲದ್ದಾಗಿದ್ದರೂ, ಇವುಗಳು ಡಬ್ಬಳ, ರಂಧ್ರಕ, ಕೆತ್ತುವ ಉಪಕರಣಗಳು ಹೀಗೆ ವಿವಿಧ ಸ್ವರೂಪಗಳಲ್ಲಿ ಇದ್ದವು. ಕೈಯಿಂದ ತಯಾರಿಸಿದ ಮಡಕೆಗಳು ಕೂಡಾ ದೊರೆತಿವೆ. ಈ ಜನಸಮುದಾಯಗಳು ಬಂಡೆಗಳ ಆಸರೆಗಳಲ್ಲಿ ಜೀವಿಸುತ್ತಿದ್ದು ಇವರು ಬಹುಶಃ ಭಾರತದ ಗುಹಾ ಚಿತ್ರಗಳ ಮೊದಲ ಕತೃಗಳು. ಭೂಪಾಲ್‌ ಹತ್ತಿರದ ಬಿಂಬೆಟ್ಕ ಬಂಡೆ ಚಿತ್ರಗಳ ಪ್ರಾಚೀನತೆ (ಕಾರ್ಬನ್‌ ೧೪ ಪದ್ಧತಿಯು ನಂತರದ ಕಾಲಮಾನ ತೋರಿಸುತ್ತಿದ್ದಾಗ್ಯೂ) ಸುಮಾರು ೬,೦೦೦ ಕ್ರಿ. ಪೂ. ದಷ್ಟು ಹಿಂದೆ ಹೋಗಬಹುದು. ಈ ಚಿತ್ರಗಳು ಮನುಷ್ಯರು ಬಿಲ್ಲು ಬಾಣಗಳಿಂದ ಪ್ರಾಣಿಗಳನ್ನು ಬೇಟೆಯಾಡುವುದನ್ನು ತೋರಿಸುತ್ತವೆ. ಇವುಗಳಲ್ಲಿ ಮಾನವ ಆಕೃತಿಗಳನ್ನು ಕಡ್ಡಿಯ ರೂಪದಲ್ಲಿ ಚಿತ್ರಿಸಲಾಗಿದೆ. ಭಾರ ಹೊತ್ತಿರುವ ಹೆಣ್ಣಿನ ಗಮನಾರ್ಹ ಚಿತ್ರವೂ ಇಲ್ಲಿದೆ. ಯಾವುದೇ ಒಂದು ವ್ಯಕ್ತಿಯ ವರ್ಗ ಅಥವಾ ದರ್ಜೆಯನ್ನು ಇತರರಿಂದ ಪ್ರತ್ಯೇಕವಾಗಿ ಗುರುತಿಸುವ ಚಿತ್ರಗಳಿಲ್ಲ. ವ್ಯವಸಾಯ ಅಥವಾ ಪಶುಸಂಗೋಪನೆಯ ಚಟುವಟಿಕೆಗಳನ್ನು ಸೂಚಿಸುವ ಚಿತ್ರಗಳೂ ಇಲ್ಲ. ಹೆಣ್ಣು ನವಿಲಿನ ಚಿತ್ರ ಅವರ ಕಲಾ ಕೌಶಲ್ಯವನ್ನು ಸೂಚಿಸುತ್ತದೆ.

ನವಶಿಲಾಯುಗ ಕ್ರಾಂತಿಃ ವ್ಯವಸಾಯ ಹಾಗೂ ಪ್ರಾಣಿಸಾಕಣೆಯ ಪ್ರವೇಶ
ನವಶಿಲಾಯುಗದ ಕ್ರಾಂತಿಯ ಅರ್ಥ

ಮಾನವ ಪ್ರಾರಂಭಿಕ ಕಾಲದಲ್ಲಿ ಶಿಲಾ ಉಪಕರಣಗಳನ್ನು ಒಂದು ಕಲ್ಲಿನಿಂದ ಇನ್ನೊಂದು ಕಲ್ಲಿಗೆ ಹೊಡೆದು ತಯಾರಿಸುತ್ತಿದ್ದ. ಈ ಕಾರಣಕ್ಕೆ ಅವು ಗಡುಸು, ನಯವಲ್ಲದ ಹಾಗೂ ಅಸಮ ಮೇಲ್ಮೈ ಪಡೆದಿರುತ್ತಿದ್ದವು. ಬಹಳ ತಡವಾದ ಹಂತದಲ್ಲಿಯೇ, ಒಂದು ಕಲ್ಲನ್ನು ಇನ್ನೊಂದು ಕಲ್ಲಿಗೆ ಉಜ್ಜುವ ಅಥವಾ ಗಡುಸು ಕಲ್ಲಿನ ಮೇಲೆ ಮೆದು ಕಲ್ಲನ್ನು ತಿರುಗಿಸುವ ಮೂಲಕವೂ ಇವನ್ನು ಮಾನವ ತಯಾರಿಸತೊಡಗಿದ. ಪರಿಣಾಮವಾಗಿ ಇವು ನಯವಾದ ಮೇಲ್ಮೈ ಹಾಗೂ ದುಂಡು ಮತ್ತು ಸಮಪ್ರಮಾಣಗಳುಳ್ಳ ರೂಪ ಪಡೆದವು. ಅವುಗಳಿಗೆ ಹೆಚ್ಚು ಚೂಪಾದ ತುದಿಯನ್ನು ನೀಡಲು ಕೂಡಾ ಸಾಧ್ಯವಾಯಿತು. ಉದ್ದವಾದ ನಯವಾದ ಪಕ್ಕೆಯನ್ನು ಪಡೆದ ಕೊಡಲಿಯಾಗಿರಲಿ ಅಥವಾ ತೋಡು ಕಟ್ಟಿಗೆಗಳಾಗಿರಲಿ ಅಥವಾ ಬಾಣದ ತುದಿಗಳೇ ಆಗಿರಲಿ, ಹಿಂದಿನ ಹಳೆಶಿಲಾಯುಗ ಹಾಗೂ ಮಧ್ಯಶಿಲಾಯುಗದ ಉಪಕರಣಗಳಿಗಿಂತ ಸಾಮಾನ್ಯವಾಗಿ ಬಹಳ ಹೆಚ್ಚು ಪರಿಣಾಮಕಾರಿಯಾಗಿದ್ದವು. ಈ ನವಶಿಲಾಯುಗದ ಉಪಕರಣಗಳು ಮಾನವನ ಭೌತಿಕ ಜೀವನದಲ್ಲಿ ಬಹಳ ಮುಖ್ಯ ಬದಲಾವಣೆಯೊಂದಿಗೆ ಬಂದವು ಎಂದು ಹೆಸರಾಂತ ಪುರಾತತ್ವಶಾಸ್ತ್ರಜ್ಞ ಗೋರ್ಡಾನ್‌ ಜೈಲ್ಡ್‌ ಅವರು (೧೮೯೨–೧೯೫೭) ಗುರುತಿಸಿದ್ದಾರೆ. ಈ ನಯಗೊಳಿಸಿದ ಪರಿಕರಗಳು ಧಾನ್ಯಗಳ ಕವಚವನ್ನು ತೆಗೆಯಲು, ಅವುಗಳನ್ನು ಕುಟ್ಟಲು, ಉಜ್ಜಲು ಬಳಸುವ ಪರಿಕರಗಳಿಂದಲೇ ಅಭಿವೃದ್ಧಿಯಾಗಿರಬಹುದು ಅಧ್ಯಾಯ ೧.೪ ರಲ್ಲಿ ಕುಟ್ಟಿ ಪುಡಿಮಾಡುವ ಹಾಗೂ ಬೀಸುವ (ತಿರುವುವ) ಶಿಲಾ ಪರಿಕರಗಳನ್ನು ನಾವು ಪ್ರಸ್ತಾಪಿಸಿದ್ದೇವೆ. ಇವು ಸರಾಯ್‌ ನಹರ್ ರಾಯ್‌ ಹಾಗೂ ಮಹಾದಹದಲ್ಲಿ (ಕ್ರಿ. ಪೂ ೮,೦೦೦ ಕಾಲಮಾನದವು) ಪತ್ತೆಯಾಗಿವೆ. ಇವುಗಳನ್ನು ಕಾಡುಧಾನ್ಯಗಳನ್ನು ಅರೆಯಲು ಬಳಸಲಾಗುತ್ತಿತ್ತೆಂದು ತೋರುತ್ತದೆ (ಪಶ್ಚಿಮ ಏಷಿಯಾದಲ್ಲಿ ದೊರೆತ ಒರಳು ಹಾಗೂ ಒನಕೆಗಳ ಕಾಲ ಕ್ರಿ. ಪೂ ೯,೦೦೦ಕ್ಕೂ ಹಿಂದೆ). ಕುಟ್ಟಿ ಪುಡಿ ಮಾಡುವ ಹಾಗೂ ಬೀಸುವ ಪರಿಕರಗಳೆರಡರಲ್ಲೂ ಕಲ್ಲಿನ ಮೇಲ್ಮೈಗೆ ಇನ್ನೊಂದು ಕಲ್ಲು ತಾಕುವ ಸ್ಥಳದಲ್ಲಿ ಉಜ್ಜುವ ಮೂಲಕ ನಯಗೊಂಡಿರಬಹುದು. ಇದು ಉಪಕರಣಗಳನ್ನು ತಯಾರಿಸುವವರಿಗೆ ಪೂರ್ಣ ಮೇಲ್ಮೈಯನ್ನು ನಯಗೊಳಿಸುವ ಸಾಧ್ಯತೆಯನ್ನು ಸೂಚಿಸಿರಬಹುದು.

ಒಮ್ಮೆ ನವ ಶಿಲಾಯುಗದ ಉಪಕರಣಗಳನ್ನು ತಯಾರಿಸಲು ಆರಂಭವಾಯಿತೆಂದರೆ, ಅವುಗಳ ಬಳಕೆಯಿಂದ ಭೂಮಿ ಉಳುಮೆ ಸುಲಭವಾಗುತ್ತದೆ ಎಂದು ಚೈಲ್ಡ್‌ ವಾದಿಸುತ್ತಾರೆ. ಇದು ಮಾನವರು (ಬಹುಶಃ ಹೆಂಗಸರು, ಏಕೆಂದರೆ ಲಿಂಗಾಧಾರಿತ ಶ್ರಮ ವಿಭಜನೆ ಅವರು ಧಾನ್ಯ ಮತ್ತು ಬೇರುಗಳನ್ನು ಸಂಗ್ರಹಿಸುತ್ತಿದ್ದರೆ, ಗಂಡಸರು ಬೇಟೆಯಾಡುತ್ತಿದ್ದರು) ತಾವು ಆಹಾರ ಸರಬರಾಜಿಗೆ ಕಾಡುಧಾನ್ಯಗಳ ಸಂಗ್ರಹಕ್ಕೆ ಸೀಮಿತವಾಗುವ ಅಗತ್ಯವಿಲ್ಲವೆಂತಲೂ, ಬೀಜವನ್ನು ನೆಲಕ್ಕೆ ಹಾಕುವ ಮೂಲಕ ಆಹಾರ ಸರಬರಾಜನ್ನು ತಾವೇ ವೃದ್ಧಿಸಿ ಕೊಳ್ಳಬಹುದೆಂದು ಕಂಡುಕೊಂಡಾಗ ಇದು ಪ್ರಾರಂಭವಾಗುತ್ತದೆ. ನಯಗೊಳಿಸಿದ ಶಿಲಾಕೊಡಲಿಗಳು ಹಿಂದಿನ ಗಡಸು ಪರಿಕರಗಳಿಗಿಂತ ಹೆಚ್ಚು ಪರಿಣಾಮಕಾರಿಯಾಗಿ ಮರಗಳನ್ನು ಕಡಿಯಲು ಸಹಾಯಕವಾಗಿದ್ದವು ಮತ್ತು ಚೂಪಾದ ಕಲ್ಲಿನ ಅಗೆಯುವ ತುದಿ (ಪ್ರಾಚೀನ ಗುದ್ದಲಿಗಳಾಗಿ) ಬೀಜಗಳನ್ನು ಹಾಕಲು ನೆಲವನ್ನು ಹೆಚ್ಚು ನಯ ಮಾಡಲು ಸಹಾಯಕವಾಗಿತ್ತು. ನಯವಾದ ಮತ್ತು ಚೂಪಾದ ಭಲ್ಲೆ ಮತ್ತು ಬಾಣದ ತುದಿಗಳು ಬೇಟೆಯನ್ನು ಸುಲಭವಾಗಿಸಿದವು. ಹೀಗಾಗಿ ಬೇಟೆಗಾರರು ಬೇಟೆಯಲ್ಲಿ ಕ್ರಮಿಸಬೇಕಾದ ದೂರ ಕಡಿಮೆಯಾಯಿತು.

ನವ ಶಿಲಾಯುಗದ ತಂತ್ರಜ್ಞಾನಕ್ಕೆ ಸೇರಿದ್ದೆಂದು ನೇರವಾಗಿ ಹೇಳಲಾಗದ, ಆದರೆ ಕೃಷಿಗೆ ಸಂಬಂಧಿಸಿದ ಇನ್ನೂ ಹಲವು ಬೆಳವಣಿಗೆಗಳನ್ನು ನಾವು ಗಮನಿಸಬಹುದು. ವ್ಯವಸಾಯ ಹೆಚ್ಚು ಹೆಚ್ಚು ಹರಡಿದಂತೆ ಪಶುಸಂಗೋಪನೆಗೆ ಗಟ್ಟಿಯಾದ ತಳಹದಿಯೊಂದು ಒದಗಿ ಬಂತು. ಉತ್ತುಬಿಟ್ಟ ಮೇಲೆ ಉಳಿದ ಕೂಳೆಗಳು ಜಾನುವಾರುಗಳಿಗೆ ಮೇವಾಗಿ ಲಭವ್ಯವಾದವು ಪಶುಸಂಗೋಪನೆ ಹೆಚ್ಚು ಹಾಲು, ಮಾಂಸವನ್ನು ಒದಗಿಸುವ ಮೂಲಕ ಬೇಟೆಯ ಮೇಲಿನ ಅವಲಂಬನೆಯನ್ನು ಕಡಿಮೆಯಾಗಿಸಿತು. ಆಹಾರ ಸರಬರಾಜು ಹೆಚ್ಚುವುದರೊಂದಿಗೆ ಮಾನವನ ಜನಸಂಖ್ಯೆ ವೃದ್ಧಿಸಿತು ಹಾಗೂ ಹಳ್ಳಿಯಲ್ಲಿ ವಾಸಿಸುವ, ಕೃಷಿ ಸಮುದಾಯಗಳು ಉದಯಗೊಳ್ಳಲು ಈಗ ಸಾಧ್ಯವಾಗಿತ್ತು. ಈ ಸಮುದಾಯಗಳು ಕಾಲಾಂತರದಲ್ಲಿ ಮಿಗುತೆಯನ್ನು ಉತ್ತಾದಿಸಬಲ್ಲವಾಗಿದ್ದವು. ಅಂದರೆ ಉತ್ತಾದಕರು ತಮ್ಮ ಕನಿಷ್ಟ ಆಹಾರಗಳ ಅಗತ್ಯಕ್ಕಿಂತ ಹೆಚ್ಚು ಉತ್ಪಾದಿಸತೊಡಗಿದರು. ಜೇಡಿ ಮತ್ತು ಮಣ್ಣಿನ ರಚನೆಗಳು ಧಾನ್ಯ ಸಂಗ್ರಹವನ್ನು ಸಾಧ್ಯವಾಗಿಸಿದವು. ಇಂತಹ ಮಿಗುತೆಯನ್ನು ನಂತರ ಉತ್ಪಾದಕರಲ್ಲದವರೂ, ಬಲವಂತದಿಂದ ತಮ್ಮ ಹಕ್ಕನ್ನು ಸ್ಥಾಪಿಸಿ ತಮ್ಮದಾಗಿಸಿಕೊಂಡರಲೂಬಹುದು. ಕಾಲ ಕಳೆದಂತೆ ಈ ಹಕ್ಕನ್ನು ಪಂಥಗಳು ಮತ್ತು ಸಂಪ್ರದಾಯಗಳ ಮೂಲಕ ದೃಢಗೊಳಿಸರಬಹುದು. ಈ ರೀತಿ ಮಿಗುತೆಯ ಸ್ವಾಧೀನದ ಮೂಲಕ ಈಗ ವರ್ಗಗಳು, ಖಾಸಗಿ ಆಸ್ತಿ ಮತ್ತು ಪ್ರಭುತ್ವ ಕಾಣಿಸಿ ಕೊಳ್ಳಲಾರಂಬಿಸಿದವು.

ಇವೆಲ್ಲವೂ ಯಾವುದನ್ನು ಗೋರ್ಡನ್‌ ಚೈಲ್ಡ್‌ ‘ನವಶಿಲಾಯುಗದ ಕ್ರಾಂತಿ’ ಎಂದು ಕರೆದರೋ ಅದರ ಭಾಗವಾಗಿದ್ದವು. ಅವರ ನಂತರ ಹೊಸ ಸಾಕ್ಷಿಗಳು ಸಂಗ್ರವಾಗಿದ್ದು, ನಮ್ಮ ಉಪಖಂಡವೂ ಸಹ ಹೇಗೆ ಈ ಪ್ರಕ್ರಿಯೆಯಲ್ಲಿ ಪಾಲುಗೊಂಡಿತು ಎಂಬುದನ್ನು ಹೆಚ್ಚು ಸ್ಪಷ್ಟವಾಗಿ ನಾವು ಇಂದು ನೋಡಬಹುದು. ಸಿಂಧೂ ತಪ್ಪಲಿನ ಪಶ್ಚಿಮ ಅಂಚಿನಲ್ಲಿರುವ ಮೆಹರ್ಘಡ್‌ನ (ಬಲೂಚಿಸ್ತಾನ) ನಿವೇಶನಗಳಲ್ಲಿ ಈ ಕ್ರಾಂತಿಯ ಮುಖ್ಯ ಘಟನೆಗಳನ್ನು ಗುರುತಿಸಬಹುದು. ಮೆಹರ್ಘಡದಲ್ಲಿ ಈ ಬದಲಾವಣೆಗಳು ಕಾಲಮಾನ ಕ್ರಿ. ಪೂ. ೭,೦೦೦ ದಿಂದ ಕ್ರಿ. ಪೂ. ೩,೮೦೦. ಚೈಲ್ಡ್‌ರ ನವ ಶಿಲಾಯುಗ ಕ್ರಾಂತಿಯ ಸಿದ್ಧಾಂತದ ವಿಮರ್ಶಕರು ಈ ಕ್ರಾಂತಿ ಹೆಚ್ಚು ಸಮಯ ತೆಗೆದುಕೊಂಡುದರ ಬಗೆಗೆ ಗಮನ ಸೆಳೆಯುತ್ತಾ ‘ಕ್ರಾಂತಿ’ ಎಂಬ ಪದದ ಬಳಕೆಯ ಉಪಯುಕ್ತತೆಯನ್ನು ನಿರಾಕರಿಸುತ್ತಾರೆ. ಏಕೆಂದರೆ ಕ್ರಾಂತಿ ಎಂಬುದು ಅಲ್ಪ ಕಾಲಾವಧಿಯಲ್ಲಿ ಭಾರೀ ಬದಲಾವಣೆಗಳನ್ನು ಸೂಚಿಸುತ್ತದೆ. ಮೆಹರ್ಘಡದಲ್ಲಿ ಇದು ತೆಗೆದುಕೊಂಡು ಕಾಲ ಸುಮಾರು ಮೂರು ಸಾವಿರ ವರ್ಷಗಳು. ಆದರೆ ನಾವು ನವಶಿಲಾಯುಗದ ಕ್ರಾಂತಿ ಕಂಡ ಬದಲಾವಣೆಯ ವೇಗವನ್ನು ಹಿಂದಿನ ಬದಲಾವಣೆಗಳ ವೇಗದೊಂದಿಗೆ ಹೋಲಿಸುವುದು ಹೆಚ್ಚು ಸಮಂಜಸ, ಭಾರತದ ಬಹುಭಾಗದಲ್ಲಿ ಅತಿ ಸಣ್ಣ ಶಿಲಾ ಉಪಕರಣಗಳು ಮಧ್ಯ ಶಿಲಾಯುಗದ ಕಾಲಮಾನ ಸುಮಾರ ೨೫,೦೦೦೦ ವರ್ಷದಷ್ಟು ದೀರ್ಘವಾಗಿತ್ತು. ಈ ಕಾಲದಾದ್ಯಂತ ಮಾನವರು ಮೂಲಭೂತರಾಗಿ ಆಹಾರ ಶೇಖರಣೆಗಾರರಾಗಿ ಹಾಗೂ ಬೇಟೆಗಾರರಾಗಿಯೇ ಉಳಿದಿದ್ದರು. ನವಶಿಲಾಯುಗದ ಪರಿಕರಗಳು ಪಾಕಿಸ್ತಾನದ ಪಶ್ಚಿಮ ಅಂಚಿನಲ್ಲಿ ಕ್ರಿ. ಪೂ. ೭,೦೦೦ದಿಂದ ಕಂಡುಬಂದಂದಿನಿಂದ ಈ ಬದಲಾವಣೆಗಳು ತೆಗೆದುಕೊಂಡ ಕಾಲ ಸುಮಾರು ೩ ಸಾವಿರ ವರ್ಷಗಳು ಮಾತ್ರ, ಹಿಂದಿನ ಬದಲಾವಣೆ ತೆಗೆದುಕೊಂಡ ಕಾಲಮಾನದ ಎಂಟನೆಯ ಒಂದು ಭಾಗದ ಕಾಲವೇ ಈ ಹೊಸ ಬದಲಾವಣೆಗಳಿಗೆ ಸಾಕಾಯಿತು. ಸಾಪೇಕ್ಷವಾಗಿ ನವಶಿಲಾಯುಗ ಹಂತದ ಈ ಕಡಿಮೆ ಕಾಲಮಾನ, ಮಾನವನ ಸಾಮಾಜಿಕ ಜೀವನಲದಲ್ಲಿ ಅಂದು ಉಂಟುಮಾಡಿದ ಅಪಾರ ಬದಲಾವಣೆಗಳು ಅದನ್ನು ಕ್ರಾಂತಿ ಎಂಬ ಪದಕ್ಕೆ ಅರ್ಹಗೊಳಿಸುತ್ತವೆ.

ಪಶ್ಚಿಮದ ಗಡಿಪ್ರದೇಶದಲ್ಲಿ ಮೊದಲ ಕೃಷಿ ಸಮುದಾಯಗಳು
ಕ್ರಿ. ಪೂ. ,೦೦೦ ದಿಂದ ,೦೦೦ ವರೆಗೆ

ನವಶಿಲಾಯುಗದ ತಂತ್ರಗಳನ್ನು ಮೊದಲು ಸಿರಿಯಾ ಹಾಗೂ ಪ್ಯಾಲೆಸ್ಟೈನಿನ ನತುಫಿಯನ್‌ ಜನರು ಕ್ರಿ. ಪೂ. ೧೦,೦೦೦ ದಿಂದ ೮,೫೦೦ರ ಮಧ್ಯಕಾಲದಲ್ಲಿ ಬಳಸುತ್ತಿದ್ದರು ಎಂದು ಹೇಳಲಾಗುತ್ತದೆ. ಈ ತಂತ್ರಗಳು, ಉತ್ತ ಅಫ್ಘಾನಿಸ್ತಾನದಲ್ಲಿ ಘರ್-ಇ-ಆಸ್ಪ್‌ ಅಥವಾ ಅಕ್‌ ಕುಪ್ರುಕ್‌IIನಲ್ಲಿ ದೊರೆತ ಮಡಕೆ ಪೂರ್ವ ನವಶಿಲಾಯುಗದ ಪರಿಕರಗಳ ಕಾರ್ಬನ್‌ ಕಾಲಮಾನ ನಿಗದಿಯ ಆಧಾರದ ಮೇಲೆ ಹೇಳುವುದಾದರೆ, ಕ್ರಿ. ಪೂ. ೧೦,೦೦೦ ವರ್ಷಗಳಷ್ಟು ಹಿಂದೆಯೇ ಭಾರತೀಯ ಉಪಖಂಡದ ಕದ ತಟ್ಟುತ್ತಿದ್ದವು. ಹೆಚ್ಚು ಖಚಿತ ಕಾಲಮಾನ ಕ್ರಿ. ಪೂ. ೭,೫೦೦ ಇರಬಹುದೆಂದು ಘರ್-ಇ-ಮಾರ್ ಅಥವಾ ಅಕ್‌ ಕುಪ್ರುಕ್‌I ನಲ್ಲಿ ಪಡೆದ ಕಾಲಮಾನ ಸೂಚಿಸುತ್ತದೆ. ಇಲ್ಲಿ ಈ ಕಾಲಕ್ಕಾಗಲೇ ಕುರಿ ಹಾಗೂ ಮೇಕೆಗಳನ್ನು ಸಾಕಿದ ಸಾಕ್ಷಿಗಳು ದೊರೆಯುತ್ತವೆ. ನವಶಿಲಾಯುಗದ ತಂತ್ರಗಳು ಅಫ್ಘಾನಿಸ್ತಾನದಾದ್ಯಂತ ಹರಡಿ ಅವುಗಳ ಸಿಂಧೂ ಬಯಲಿನ ಪ್ರವೇಶಕ್ಕೆ ರಂಗ ಸಿದ್ಧವಾಗಿತ್ತು. ಬಲೂಚಿಸ್ತಾನದ ಪ್ರಖ್ಯಾತ ಬೋಲನ್‌ ಪಾಸ್‌ ಕೆಳಗೆ, ಆದರೆ ಭೌಗೋಳಿಕವಾಗಿ ಸಿಂಧೂ ತಪ್ಪಲಿನಲ್ಲಿರುವ ಕಚ್ಚಿ ಬಯಲಿನಲ್ಲಿ ಮೆಹರ್ಘಡ ಇದೆ. ಈ ಮೆಹರ್ಘಡ ನವಶಿಲಾಯುಗದ ಕ್ರಾಂತಿಯ ಸುಮಾರಾಗಿ ಪ್ರತಿಯೊಂದು ಹಂತವನ್ನೂ ಕಂಡಿದೆ.

ಕ್ರಿ. ಪೂ. ೭,೦೦೦ದಿಂದ ಕ್ರಿ. ಪೂ. ೫,೦೦೦ ವರ್ಷಗಳ (ಕಾರ್ಬನ್‌೧೪ ಕಾಲಮಾನ ಸೂಚಿಸುವಂತೆ) ಪ್ರಾರಂಭಿಕ ಹಂತ ಅಥವ ಕಾಲಮಾನ (ಮೆಹರ್ಘಡ)ದಲ್ಲಿ ಈ ಹಳ್ಳಿಯ ಜನರು ಹಳ್ಳಿಗಳಲ್ಲಿ ನಿಗದಿತ ಗಾತ್ರದ, ಬಿಸಿಲಿನಲ್ಲಿ ಒಣಗಿಸಿದ ಮಣ್ಣಿನ ಇಟ್ಟಿಗೆಗಳಿಂದ ಕಟ್ಟಿದ ಮನೆಗಳಲ್ಲಿ ವಾಸಿಸುತ್ತಿದ್ದರು. ಮನೆಗಳನ್ನು ಸಣ್ಣ ಸಣ್ಣ ಕೋಣೆಗಳಾಗಿ ವಿಭಜಿಸಿಲಾಗುತ್ತಿತ್ತು. ಅಲ್ಲಿ ಬೆಂಕಿಗೆ ನಿರ್ದಿಷ್ಟ ಸ್ಥಳಗಳಿದ್ದವು. ದೊಡ್ಡ ನಿರ್ಮಾಣಗಳಲ್ಲಿ ಕೆಲವು ಗೋದಾಮುಗಳಾಗಿರುವ ಸಾಧ್ಯತೆ ಇದೆ.

ಬೀಜಗಳು ದೊರೆತಿರುವುದರಿಂದ ಕೃಷಿಯ ಅಸ್ತಿತ್ವವು ಖಚಿತವಾಗಿದೆ. ದೊರೆತ ಧಾನ್ಯಗಳಲ್ಲಿ ಮುಖ್ಯವಾದದು ಆರು ಸಾಲುಗಳ ತೆರೆದ ಬಾರ್ಲಿ. ಅಲ್ಲದೆ ಬಾರ್ಲಿಯ ಉಪಸಂಕುಲಗಳು ಹಾಗೂ ಎನಿಕಾರ್ನ್, ಎಮರ್ ಮುಂತಾದ ಗೋದಿಯ ಉಪಸಂಕುಲಗಳ ಬೀಜಗಳು ಅಲ್ಪ ಪ್ರಮಾಣದಲ್ಲಿ ದೊರೆತಿವೆ. ಇಂತಹ ಧಾನ್ಯ ವ್ಯವಸಾಯ ಬಹುಶಃ ಪಶ್ಚಿಮ ಏಷಿಯಾದಿಂದಲೇ ಹರಡಿರಬಹುದು. ವ್ಯವಸಾಯವು ಪಶುಸಂಗೋಪನೆಗೆ ಪ್ರಚೋದಕವಾದಂತೆ ಕಾಣುತ್ತದೆ. ಮೇಕೆಗಳನ್ನು ಆಗಲೇ ಸಾಕಲಾಗುತ್ತಿತ್ತು ಮತ್ತು ಡುಬ್ಬದ ಎತ್ತುಗಳನ್ನು (ಭಾರತಕ್ಕೆ ವಿಶಿಷ್ಟವಾದ ಅಥವಾ ಜೆಬು ಹೋರಿಗಳು ಮತ್ತು ಹಸುಗಳನ್ನು) ಮತ್ತು ಕುರಿಗಳನ್ನು ಸಾಕಾಣಿಕೆಗಾಗಿ ಪಳಗಿಸುವುದು ಚಾಲ್ತಿಯಲ್ಲಿತ್ತು. ಅವುಗಳನ್ನು ಕಾಡಿನಿಂದ ಹಿಡಿದು ತಂದು ಪಳಗಿಸಲಾಗುತ್ತಿತ್ತು. ಇನ್ನೂ ಸಾಕಾಣಿಕೆ ಮಾಡಿಲ್ಲದ ಕೋಣಗಳನ್ನೂ ಒಳಗೊಂಡು ಹಲವು ಕಾಡುಪ್ರಾಣಿಗಳು ಈಗಲೂ ಆಹಾರದ ಮುಖ್ಯ ಭಾಗವಾಗಿದ್ದವು. ಅದರಿಂದಾಗಿ ಬೇಟೆ ಇನ್ನೂ ಪ್ರಮುಖ ವೃತ್ತಿಯಾಗಿತ್ತು.

ಈ ನಿವೇಶನವು ಕಟ್ಟುವ, ಹೆರೆಯುವ, ಬೀಸುವ ಉಪಕರಣಗಳನ್ನೂ ಒಳಗೊಂಡ ಹಲವು ವೈವಿಧ್ಯಮಯ ನವಶಿಲಾಯುಗದ ಪರಿಕರಗಳನ್ನು ಹೊಂದಿತ್ತು. ಇವುಗಳೊಂದಿಗೆ ಚಕ್ಕೆ ಏಳಿಸಿದ ಕಲ್ಲಿನ ಅಲಗು, ಹಲವು ಮೂಳೆಯ ಉಪಕರಣಗಳು ಸಹ ಪತ್ತೆಯಾಗಿವೆ. ಈ ಸ್ತರಗಳ ಮರುಪರಿಶೀಲನೆ ಮೊದಲ ಹಂತ ಅಥವಾ ಕಾಲಮಾನ – I ಮಡಕೆರಹಿತ ಹಂತ ಎಂದು ಸೂಚಿಸುತ್ತದೆ. ಜೊಂಡಿನಿಂದ ಬುಟ್ಟಿ ಹೆಣೆದಿರುವ, ಉಣ್ಣೆಯಿಂದ ಅಥವಾ ಪ್ರಾಣಿಗಳ ಕೂದಲಿನಿಂದ ಬಟ್ಟೆ ನೇಯ್ದ ಗುರುತುಗಳು ದೊರೆಯುತ್ತವೆ. ಸತ್ತವರನ್ನು ಹೂಳಲಾಗುತ್ತಿತ್ತು ಹಾಗೂ ಅವರೊಂದಿಗೆ ಅವರ ಸಾಬೂನುಗಲ್ಲಿನ ಮಣಿಗಳ ಆಭರಣ ಮತ್ತು ಶಂಖುವಿನ ಬಳೆಗಳನ್ನು ಸಹ ಹೂಳಲಾಗಿದೆ. ಈ ಕರಕುಶಲ ವಸ್ತುಗಳು ಮತ್ತು ಬೃಹತ್‌ ಶೇಖರಣಾ ಅನುಕೂಲತೆ ಸಾಮಾಜಿಕ ಭಿನ್ನೀಕರಣದ ಇರುವುಕೆಯನ್ನು ಸೂಚಿಸುತ್ತದೆ. ಶ್ರೀಮಂತರು ಹಾಗೂ ಬಲಾಢ್ಯರು ಮಿಗುತೆಯಲ್ಲಿ ದೊಡ್ಡ ಭಾಗ ಪಡೆಯುತ್ತಿದ್ದರು ಹಾಗೂ ಅದನ್ನು ಬಳಸಿ ಇತರರಿಗಿಂತ ಹೆಚ್ಚು ಬೆಲೆಯುಳ್ಳ ಕರಕುಶಲ ವಸ್ತುಗಳನ್ನು ಪಡೆಯುತ್ತಿದ್ದರು. ಹೀಗೆ ವ್ಯವಸಾಯದ ಉತ್ಪನ್ನ ಕೇವಲ ಪಶುಸಂಗೋಪನೆಗೆ ಮಾತ್ರವಲ್ಲದೆ ಕೈಕಸುಬುಗಳಿಗೂ ಪ್ರೋತ್ಸಾಹವಾಗಿ ಪರಿಣಮಿಸಿತು.

ಕ್ರಿ. ಪೂ. ಐದನೇ ಸಹಸ್ರಮಾನದಲ್ಲಿ (ಕ್ರಿ. ಪೂ. ೫,೦೦೦ದಿಂದ ೪,೦೦೦) ಮೆಹರ್ಘಡ ಕಾಲಮಾನ – IIರ ಮೂಲಕ ಹಾದುಹೋಯಿತು. ಈ ಕಾಲದ ಜನರು ಬಹುಶಃ ಕಾಲ I ಜನರೇ ಆಗಿದ್ದರು. ಪ್ರಮುಖ ಬದಲಾವಣೆಗಳ ನಡುವೆಯೂ ಹಲವು ನಿರಂತರತೆಗಳು ಇರುವುದು ಇದನ್ನೇ ಸೂಚಿಸುತ್ತದೆ. ಮನೆಗಳನ್ನು ಮಣ್ಣಿನ ಇಟ್ಟಿಗೆಗಳಿಂದ ಕಟ್ಟುವುದು ಮುಂದುವರೆಯಿತು, ಆದರೆ ಇಟ್ಟಿಗೆಗಳು ಈಗ ವೈವಿಧ್ಯಮಯ ಗಾತ್ರಗಳಲ್ಲಿದ್ದವು. ಧಾನ್ಯ ಸಂಗ್ರಹಕ್ಕಾಗಿ ಇರುವಂತೆ ಕಾಣುವ ನಿರ್ಮಾಣಗಳ ಗಾತ್ರ ದೊಡ್ಡದಾಯಿತು. ಇದು ಇನ್ನಷ್ಟು ಕೃಷಿ ಅಭಿವೃದ್ಧಿಯ ಸಾಕ್ಷಿಗಳಿಗೆ ಅನುಗುಣವಾಗಿದೆ. ಕುಡುಗೋಲ ಅಲಗುಗಳನ್ನು ಶಿಲಾಜಲದಲ್ಲಿ (ಬಿಟುಮನ್‌) ಇಟ್ಟು ಬಳಸುವುದು ನಮ್ಮ ಉಪಖಂಡದಲ್ಲಿ ಕೊಯ್ಲಿಗಾಗಿಯೇ ನಿರ್ದಿಷ್ಟ ಉಪಕರಣದ ಬಳಕೆಯ ಮೊದಲ ಸಾಕ್ಷಿ. ಇಲ್ಲಿ ಕಂಡುಬಂದ ಗೋದಿ ಮತ್ತು ಬಾರ್ಲಿ ಬೀಜಗಳು ಬೆಳೆಯಲು ನೀರಾವರಿ ಬೇಕು. ಈ ಪ್ರದೇಶ ಕಡಿಮೆ ಮಳೆಯ ಶುಷ್ಕ ಪ್ರದೇಶವಾಗಿದ್ದು, ಈ ಬೆಳೆಗಳನ್ನು ಕೃಷಿ ಮಾಡಲು ನೀರು ಹರಿದುಹೋಗುವ ಝರಿಗಳ ಮೇಲೆ ಸಣ್ಣ ಅಣೆಕಟ್ಟುಗಳನ್ನು ಹಾಕಿ ನೀರು ಸಂಗ್ರಹಿಸುವ ಮೂಲಕ ಮಾತ್ರ ಸಾಧ್ಯವಾಗಿರಬೇಕು. ನೀರಿನ ಮೇಲೆ ಇಂತಹ ಹತೋಟಿಯಿಂದಾಗಿಯೇ ಅವರಿಗೆ ಬಹುಶಃ ಹತ್ತಿ ಸಸ್ಯಗಳನ್ನು ಬೆಳೆಯಲು ಸಾಧ್ಯವಾಯಿತು. ಮೆಹರ್ಘಡದಲ್ಲಿ ಸುಟ್ಟ ಹತ್ತಿ ಬೀಜಗಳು ದೊಡ್ಡ ಸಂಖ್ಯೆಯಲ್ಲಿ ದೊರೆತಿವೆ. ಇದು ಬಟ್ಟೆಯ ಬಗೆಗೆ ದೊರೆತ ಅತಿ ಪುರಾತನ (ಕ್ರಿ. ಪೂ. ೪,೦೦೦) ಸಾಕ್ಷಿಯಾಗಿದ್ದು ವಿಶ್ವದ ಕೃಷಿ ಇತಿಹಾಸದ ಒಂದು ಪ್ರಮುಖ ಘಟನೆ. ಕ್ರಿ. ಪೂ. ೪,೦೦೦ ರಷ್ಟಕ್ಕಾಗಲೇ ಇಲ್ಲಿ ಮೇಕೆಗಳ ಗಾತ್ರ ಸಾಕಷ್ಟು ಕಿರಿದಾಗಿತ್ತು ಹಾಗೂ ಕುರಿಗಳ ಗಾತ್ರವೂ ಸಹ ಕಿರಿದಾಗುತ್ತಾ ಬಂದಿತ್ತು. ಇವು ಅವುಗಳ ಸಾಕಣೆಯ ನಿಶ್ಚಿತ ಸೂಚನೆಗಳು. ಕೆಲವು ಜೆಬು ಜಾನುವಾರುಗಳನ್ನು ಬಹುಶಃ ಇನ್ನೂ ಕಾಡುಪ್ರಾಣಿಗಳಾಗಿಯೇ ಹಿಡಿಯಲಾಗುತ್ತಿತ್ತು. ಆದರೆ ಮೂಳೆಗಳ ಗಾತ್ರದ ಮೇಲೆ ಊಹಿಸುವುದಾದರೆ ಜನರ ಆಹಾರದಲ್ಲಿ ಸಾಕುಪ್ರಾಣಿಗಳ ಮಾಂಸವು ಕಾಡುಪ್ರಾಣಿಗಳ ಮಾಂಸಕ್ಕಿಂತ ಹೆಚ್ಚುತ್ತಲಿತ್ತು.

ಈ ಹಂತದಲ್ಲಿ ಕೈಕಸುಬುಗಳ ಅಭಿವೃದ್ಧಿ ಕೂಡಾ ಕೆಲವು ಆಸಕ್ತಿದಾಯಕ ಹೊಸ ಅಂಶಗಳನ್ನು ಒಳಗೊಂಡಿತ್ತು. ಮೊದಲು ಬಂದುದು ಕುಂಬಾರಿಕೆ. ಪ್ರಾರಂಭದಲ್ಲಿ ಜೇಡಿ ಮಣ್ಣಿನ ಮುದ್ದೆಗಳನ್ನು ಒಂದರ ಮೇಲೆ ಒಂದು ಇಟ್ಟು ಅದಕ್ಕೆ ಅಷ್ಟೇನೂ ನಿಯಮಿತ ರೂಪವಿಲ್ಲದ ಆದರೆ, ಬಳಸಬಹುದಾದ ಒಣಗಿಸಿದ ಮಣ್ಣಿನ ಮಡಕೆಗಳನ್ನು ತಯಾರಿಸಲಾಗುತ್ತಿತ್ತು. ನಂತರದಲ್ಲಿ ಬುಟ್ಟಿಗಳಿಗೆ ಕಪ್ಪು ರಾಳ ಅಥವಾ ಶಿಲಾಜಲವನ್ನು ಸಿಮೆಂಟಿನಂತೆ ಮೆತ್ತಿ ಮಣ್ಣಿನ ಮಡಕೆಗಳಿಗೆ ಅಚ್ಚುಗಳಾಗಿ ಬಳಸಲಾಗುತ್ತಿತ್ತು ಮತ್ತು ಮಡಕೆಗಳನ್ನು ಗಟ್ಟಿ ಮಾಡಲು ಈ ಬುಟ್ಟಿಗಳನ್ನು ಸುಡಲಾಗುತ್ತಿತ್ತು. ಕಾಲಮಾನ – IIರ ಕೊನೆಗೆ, ಸುಮರು ಕ್ರಿ. ಪೂ. ೪,೦೦೦ರಷ್ಟಕ್ಕೆ, ಕುಂಬಾರನ ಚಕ್ರ ಬಂತು. ಈ ತಾಂತ್ರಿಕ ಸಾಧನ ಕ್ರಿ. ಪೂ. ೫,೦೦೦ಕ್ಕಾಗಲೇ ಪಶ್ಚಿಮ ಏಷಿಯಾದಲ್ಲಿ ಲಭ್ಯವಿದ್ದು, ಅಲ್ಲಿಂದ ಆಮದು ಮಾಡಿಕೊಳ್ಳಲ್ಪಟ್ಟಿತು. ಈ ಸಮತಲದ ಚಕ್ರದ ಮೇಲೆ ಮಡಕೆ ಇರಿಸಿ ವೇಗವಾಗಿ ತಿರುಗಿಸಿ ಮಡಕೆಗಳಿಗೆ ಸಮರೂಪಗಳ ಆಕಾರಗಳನ್ನು ಕೊಡಲಾಗುತ್ತಿತ್ತು. ಕೈಯಿಂದ ತಯಾರಿಸಿದ ಮಡಕೆಗಳಲ್ಲಿ ಇದನ್ನು ಊಹಿಸಲೂ ಸಾಧ್ಯವಿರಲಿಲ್ಲ. ಹೀಗೆ ಇದು ನಿಜಕ್ಕೂ ಒಂದು ಸಮಯ ಉಳಿಸುವ ಆವಿಷ್ಕಾರ. ಮಡಕೆಗಳನ್ನಿದು ಕಡಿಮೆ ಖರ್ಚಿನದಾಗಿಸಿ ಎಲ್ಲರಿಗೂ ದೊರೆಯುವಂತಾಗಿಸಿತು.

ಮರ್ಹೆಘಡ-Iರಲ್ಲಿ ಇದ್ದಂತೆ, ಉಳಿದಿದ್ದ ಉಪಕರಣಗಳು ಇನ್ನೂ ಕಲ್ಲು ಹಾಗೂ ಮೂಳೆಯಿಂದ ಮಾಡಿದವುಗಳಾಗಿದ್ದರೂ ಅವುಗಳ ವೈವಿಧ್ಯತೆ ಹೆಚ್ಚಿತ್ತು. ವಿಶೇಷವಾಗಿ ಆಸಕ್ತಿದಾಯಕವಾದುದೆಂದರೆ ತಥಾಕಥಿತ ಕೈಸುಬುದಾರನ ಸಮಾಧಿ. ಇಲ್ಲಿ ಮನುಷ್ಯನನ್ನು ಒಂದು ನಯಗೊಳಿಸಿದ (ನವಶಿಲಾಯುಗ) ಕೊಡಲಿ, ಮೂರು ಚಕ್ಕೆ ಏಳಿಸಿದ ತಿರುಳುಗಲ್ಲುಗಳು (ಉಪಕರಣಗಳನ್ನು ಮಾಡಲು?), ಒಂಬತ್ತು ಸಮಾಂತರ ಅಲುಗಿನ ಚಕ್ಕೆ ಸಣ್ಣಶಿಲಾ ಪರಿಕರಗಳು, ಹದಿನಾರು ಚಕ್ಕೆ ಏಳಿಸಿದ ಅಲಗುಗಳೊಂದಿಗೆ ಹೂಳಲಾಗಿದೆ. ಇದು ಮಧ್ಯಶಿಲಾಯುಗದ ಉಪಕರಣಗಳನ್ನು ಹೊಸ ಕೆಲಸಗಳಿಗೆ ಹೇಗೆ ಇನ್ನೂ ಒಗ್ಗಿಸಿಕೊಳ್ಳುವುದು ಸಾಧ್ಯವಿತ್ತು ಎಂದು ತೋರಿಸಿಕೊಡುತ್ತದೆ. ಬುಟ್ಟಿ ಹೆಣೆಯುವುದರ ಇರುವಿಕೆ ನೇಯ್ಗೆಯ ಇರುವಿಕೆಯನ್ನು ಸೂಚಿಸುತ್ತದೆ. ಹತ್ತಿಯನ್ನು ಬೆಳೆಯಲಾರಂಭಿಸಿದರು ಎಂದಾದರೆ, ಹತ್ತಿಯನ್ನು ನೂಲುವುದು ಹಾಗೂ ನೇಯ್ಗೆಯ ಮೂಲಕ ಹತ್ತಿ ಬಟ್ಟೆಯನ್ನು ತಯಾರಿಸುವುದು ಇದ್ದಿರಬೇಕೆಂದು ಊಹಿಸಲು ಅವಕಾಶವಾಗುತ್ತದೆ.

ಸತ್ತವರ ಹೂಳಿಕೆಗಳು ಹಲವು ವಿಧಿಗಳ ಆಚರಣೆಗಳು ಇದ್ದುವೆಂಬುದನ್ನು ತೋರಿಸುತ್ತವೆ (ಕಾಲಮಾನ I ರಿಂದಲೇ ಕೆಂಪು ಜೇಡಿಯನ್ನು ಬಳಸುತ್ತಿದ್ದು, ಅದು ಮುಂದುವರೆಯಿತು). ಸಾವಿನ ನಂತರದ ಬದುಕಿನ ಬಗೆಗೆ ನಂಬಿಕೆಯನ್ನು ಇದು ಸೂಚಿಸುತ್ತದೆ. ಈ ಗೋರಿಗಳಲ್ಲಿ ಮೇಲೆ ಹೇಳಿದ ಪರಿಕರಗಳ ಹಾಗೂ ಕೊಲ್ಲಲ್ಪಟ್ಟ ಪ್ರಾಣಿಗಳಲ್ಲದೆ ಹಲವು  ಮಣಿಗಳ (turquoise, lapis lazuli and cornelian)  ಹಾಗೂ ಶಂಕುಗಳಂತಹ ಆಭರಣಗಳನ್ನು ಸಹ ಹೂಳಲಾಗಿತ್ತು. ಈ ಅರೆಪ್ರಶಸ್ತ ಶಿಲೆಗಳು ಮೆಹರ್ಘಡದ ಹತ್ತಿರದಲ್ಲೆಲ್ಲೂ ಲಭ್ಯವಿಲ್ಲ. ಇವು ದೂರದಿಂದ ವ್ಯಾಪಾರದ ಮೂಲಕ ಇಲ್ಲಿಗೆ ತಲುಪಬೇಕಿತ್ತು. ಕೆಲವೊಂದು ಗೋರಿಗಳಲ್ಲಿ ಇಂತಹ ಆಭರಣಗಳಿರುವುದು ಹಾಗೂ ಇತರ ಗೋರಿಗಳಲ್ಲಿ ಇಲ್ಲದಿರುವುದು ಉತ್ಪಾದನೆ ಹಾಗೂ ವ್ಯಾಪಾರ ತಂದ ಸಾಮಾಜಿಕ ವ್ಯತ್ಯಾಸವನ್ನು ಪ್ರತಿಬಿಂಬಿಸುತ್ತದೆ.

ಕಲೆ ಇನ್ನೂ ಬಹಳ ಕಡಿಮೆ ಇತ್ತು. ಕಾಲಿನ ಅಥವಾ ವಾಯಲಿನ್ ಆಕಾರದ, ಕೆಂಪು ಪೂಸಿದ, ಮಣ್ಣಿನ ಸಣ್ಣ ಗೊಂಬೆಗಳು ದೊರೆತಿವೆ. ಇವು ಮಾಂತ್ರಿಕ ಯಂತ್ರಗಳಾಗಿ ಮಹತ್ವದ್ದಾಗಿರಬಹುದು. ಅಲ್ಲದೆ ಪ್ರಾಣಿಗಳ ಮಣ್ಣಿನ ಗೊಂಬೆಗಳೂ ಇವೆ. ಒಂದು ಕುತೂಹಲಕಾರಿ ಸ್ತಂಭಾಕೃತಿಯ, ಬಹುಶಃ ಯಾವುದೋ ಸಸ್ಯರಾಶಿಯ ಭಾವನೆ ನೀಡುವ ಅರೆಬೆಂದ (ಟೆರ್ರಕೋಟ) ಮಣ್ಣಿನ ಮಣಿಯೂ ದೊರೆತಿದೆ.

ಮೆಹರ್ಘಡ ಒಂದು ಹಳ್ಳಿ. ಅಂತಹ ಹಲವು ಹಳ್ಳಿಗಳು ಇದ್ದಿರಬಹುದು. ಆದರೆ ಅದಕ್ಕೆ ಹೋಲಿಸಬಹುದಾದ ಹಳ್ಳಿ ಪತ್ತೆಯಾಗಿಲ್ಲವಾದರೂ ಬಲೂಚಿಸ್ತಾನದ ಎತ್ತರದ ಪ್ರದೇಶಗಳಲ್ಲಿನ ಕ್ವೆಟಾ ಹತ್ತಿರದ ಕಿಲಿ ಗುಲ್ ಮೊಹಮದ್‌ನಲ್ಲಿ ಪ್ರಾರಂಭಿಕ ಮಡಕೆ ಪೂರ್ವ ಹಂತ ಕಂಡುಬಂದಿದೆ. ಇಲ್ಲಿ ಜಾನುವಾರುಗಳು, ಕುರಿ, ಆಡು ಸಾಕಾಣಿಕೆ ಪ್ರಾರಂಭವಾದ ಸಾಕ್ಷಿ ಲಭ್ಯವಾಗಿದ್ದು ಈ ಹಂತವನ್ನು ಮೆಹರ್ಘಡ I ರ ಹಂತಕ್ಕೆ ಹೋಲಿಸಬಹುದು ಎಂದು ಭಾವಿಸಲಾಗಿದೆ. ಬಲೂಚಿಸ್ತಾನ ಹಾಗೂ ವಾಯುವ್ಯ ಗಡಿ ಪ್ರಾಂತ್ಯದ (ನಾರ್ಥ್ ವೆಸ್ಟ್ ಪ್ರಾಂಟಿಯರ್ ಪ್ರಾವಿನ್ಸ್) ದಕ್ಷಿಣದ ಜಿಲ್ಲೆಗಳ ಇತರ ನಿವೇಶನಗಳಲ್ಲಿ ಮೆಹರ್ಘಡ I ಹಾಗೂ II  ರಲ್ಲಿ ಕಂಡುಬರುವ ಹಸ್ತಕೃತಿಗಳು ಕಂಡುಬಂದಿವೆ. ಸಿಂಧೂ ಕಣಿವೆಯ ಎರಡು ಬಿಡಿ  ನಿವೇಶನಗಳಲ್ಲಿಯೂ ಇವು  ಕಂಡುಬಂದಿವೆ. ಶುಷ್ಕ ವಾತಾವರಣದ ಹಾಗೂ ಬೆಟ್ಟ ಗುಡ್ಡಗಳಿರುವ ಈ ದೊಡ್ಡ ಪ್ರದೇಶ ಬಹುಶಃ ಭಾರತೀಯ ಉಪಖಂಡದಲ್ಲಿ ಮೊದಲಬಾರಿಗೆ ಕೃಷಿ ಮತ್ತು ಹಳ್ಳಿಗಳ ಆರ್ಥಿಕ ಉದಯವಾದ ಪ್ರದೇಶವೆಂದು ನಾವು ಭಾವಿಸಬಹುದು. ಭೌತಿಕ ಪ್ರಗತಿಯ ಒಂದು ಸ್ಥೂಲ ಮಾದರಿಯಲ್ಲಿ ಈ ಕಾಲದಲ್ಲಿ ಈ ಪ್ರದೇಶವು ಭೂಮಧ್ಯ ಸಾಗರ ಪ್ರದೇಶ (ಮೆಡಿಟರೇನಿಯನ್) ದಿಂದ ಸಿಂಧೂವರೆಗಿನ ವಿಶಾಲ ಕ್ಷೇತ್ರಕ್ಕೆ ಸೇರುತ್ತದೆ. ಏಕೆಂದರೆ ಮೆಹರ್ಘಡದ ಭೌತಿಕ ಪ್ರಗತಿಯ ಸುಮಾರಾಗಿ ಪ್ರತಿ ಹೆಜ್ಜೆಯನ್ನೂ ಈ ವಿಶಾಲ ಕ್ಷೇತ್ರದ ಒಂದಲ್ಲ ಒಂದು ಪ್ರದೇಶದಲ್ಲಿ ಅನುಕರಿಸಲಾಗಿತ್ತು ಅಥವಾ ಅಂತಹುದೇ ಬೆಳವಣಿಗೆಗಳ ಇರುವಿಕೆಯನ್ನು ನಿರೀಕ್ಷಿಸಬಹುದಾಗಿತ್ತು ಈ ಕ್ಷೇತ್ರದಲ್ಲಿ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಚಿಂತನೆಗಳು ಹಾಗೂ ತಂತ್ರಗಳು ಹರಡಲು ಹಲವು ಮಾರ್ಗಗಳಿದ್ದವು. ಅದರೆ ಪಶುಪಾಲಕ ಅಲೆಮಾರಿಗಳು ನೆಲೆನಿಂತ ಸಮುದಾಯಗಳ ನಡುವೆ ವ್ಯಾಪಾರ ನಡೆಸುತ್ತಿದ್ದರಿಂದ ಅವುಗಳ ನಡುವೆ ಉತ್ಪನ್ನಗಳು ಮತ್ತು ವಿಚಾರಗಳ ಪ್ರಮುಖ ವಾಹಕಗಳಾಗಿದ್ದರಬೇಕು. ವಲಸೆಗಳು ಹಾಗೂ ಬಹುಶಃ ಅವುಗಳೊಂದಿಗೆ ಬಂದ ಯುದ್ಧಗಳು ಸಹ ಮಹತ್ವದ ಪಾತ್ರ ವಹಿಸಿದ್ದಿರಬಹುದು. ಆದರೆ ಪುರಾತತ್ವಶಾಸ್ತ್ರಾವು ಈ ಕ್ಷೇತ್ರದ ಎಲ್ಲ ಭಾಗಗಳಲ್ಲಿ ಇದ್ದಿರಬಹುದಾದ ಯಾವುದೇ ಏಕೈಕ ವಿಧಿ ಅಥವಾ ಸಾಂಸ್ಕೃತಿಕ ಗುಣವನ್ನು ಗುರುತಿಸಿಲ್ಲ. ಏಕೈಕವೆನ್ನಬಹುದಾದ ಒಂದು ಜನಾಂಗವೂ ಇಲ್ಲಿರಲಿಲ್ಲ. ಮೆಹರ್ಘಡದಲ್ಲಿ ಕಾಲಮಾನ I ಮತ್ತು II ರಲ್ಲಿ ದೊರೆತ ಹಲವು ಅಸ್ಥಿಪಂಜರಗಳ ಹಲ್ಲುಗಳ ಆಧ್ಯಯನದ ಆಧಾರದ ಮೇಲೆ ಹೇಳುವುದಾದರೆ ಈ ಮೊದಲ ‘ವ್ಯವಸಾಯಗಾರರು’ ಪಶ್ಚಿಮ ಏಷ್ಯಾದಲ್ಲಿನ ಜನರಂತಿರದೆ ದಕ್ಷಿಣ ಹಾಗೂ ದಕ್ಷಿಣ – ಪೂರ್ವ ಏಷಿಯಾದ ಜನರನ್ನು ಹೋಲುತ್ತಿದ್ದರು. ಮೆಹರ್ಘಡದ ವಾಸಿಗಳ ವಂಶಾವಾಹಿಯ ಸ್ವರೂಪದಲ್ಲಿ ಬದಲಾವಣೆ ನವ ಶಿಲಾಯುಗದ ಕ್ರಾಂತಿಯ ನಂತರವೇ ಬಹುಮಟ್ಟಿಗೆ ಪೂರ್ಣಗೊಂಡಂತೆ ಕಾಣುತ್ತದೆ.

ಸಿಂಧೂ ಕಣಿವೆಯಲ್ಲಿ ಕಂಚಿನ ಯುಗದತ್ತ ಕ್ರಿ. ಪೂ. ,೦೦೦ ದಿಂದ ,೨೦೦

ಮಾನವ ಸಂಸ್ಕೃತಿಗಳ ಆನುಕ್ರಮಣಿಕೆಯ ಮಾದರಿಯಲ್ಲಿ ಮಧ್ಯಶಿಲಾಯುಗವನ್ನು ನವ ಶಿಲಾಯುಗ ಅನುಸರಿಸುವಂತೆ ನವ ಶಿಲಾಯುಗವನ್ನು ಕಂಚಿನ ಯುಗ ಅನುಸರಿಸುತ್ತದೆ. ಆದರೆ ಒಂದು ವ್ತತ್ಯಾಸವನ್ನು ಗಮನಿಸಬೇಕು.  ನವಶಿಲಾಯುಗ  ಅಥವಾ ನಯಗೊಳಿಸಿದ ಶಿಲಾಉಪಕರಣಗಳ ಅಗಮನ, ಕೃಷಿಯೊಂದಿಗಿನ ಅದರ ಸಂಬಂಧದಿಂದಾಗಿ ಹಿಂದಿನದಕ್ಕಿಂತ ಅದೆಷ್ಟು ಭಿನ್ನವೆಂದರೆ ಸಮುದಾಯವೊಂದು ತನಗೆ ತಾನೇ   ಮಧ್ಯ ಶಿಲಾಯುಗದಿಂದ ನವ ಶಿಲಾಯುಗಕ್ಕೆ ಕಾಲಿರಿಸುವ ಸಂಗತಿ ಪುರಾತತ್ವಶಾಸ್ತ್ರದ ದಾಖಲೆಗಳಲ್ಲಿ ತೀರಾ ವಿರಳ. ಮೆಹರ್ಘಡ I ಯಾವುದೇ ನವ ಶಿಲಾಯುಗದ ಹಿಂದಿನ ಸಂಸ್ಕೃತಿ ಇಲ್ಲದೆ ಉದಯವಾದಂತೆ ಕಾಣುತ್ತದೆ. ಕಂಚಿನ (ತಾಮ್ರದೊಂದಿಗೆ ತವರವನ್ನು ಸೇರಿಸಿದ ಮಿಶ್ರಲೋಹ) ಆಗಮನದ ವಿಷಯದಲ್ಲಿ ಹೀಗಲ್ಲ. ತಾಮ್ರದ ಅದಿರುಗಳಿಂದ ತಾಮ್ರವನ್ನು ತೆಗೆಯುವುದು ಒಂದು ಮಹತ್ವದ ತಾಂತ್ರಿಕ ಮುನ್ನಡೆಯಾದರೂ ಕಂಚು ಆಗಲೀ ಅಥವಾ ತಾಮ್ರವಾಗಲೀ ಉಪಕರಣಗಳನ್ನು ತಯಾರಿಸುವ ಸಾಮಾನ್ಯ ವಸ್ತುಗಳಾಗಿ ಕಲ್ಲು ಮತ್ತು ಮೂಳೆಗಳಿಗೆ ಪರ್ಯಾಯವಾಗಲಿಲ್ಲ. ಲೋಹಗಳು ಸಣ್ಣ ಪ್ರಮಾಣದಲ್ಲಿ ದೊರಕುವುದೇ ಇದಕ್ಕೆ ಕಾರಣ. ಆದ್ದರಿಂದ ಇವು ವಿರಳವಾಗಿದ್ದವು ಮತ್ತು ವೆಚ್ಚದಾಯಕವಾಗಿದ್ದವು. ಭಾರತದಲ್ಲಿ ಕ್ರಿ. ಪೂ. ಮೊದಲೆನೆಯ ಸಹಸ್ರಮಾನದಲ್ಲಿ (ಕ್ರಿ. ಪೂ. ೧,೦೦೦ದ ನಂತರ) ಕಬ್ಬಿಣ ತಂತ್ರಜ್ಞಾನ ಭಾರತದಲ್ಲಿ ಸಾಕಷ್ಟು ಅಭಿವೃದ್ಧಿಯಾದಾಗ ಮಾತ್ರ ಕಲ್ಲು ಮಾನವನ ಉಪಕರಣಗಳ ಮುಖ್ಯ ವಸ್ತುವಾಗಿ ಉಳಿಯಲಿಲ್ಲ. ಹೀಗೆ ಸಮಾಜಗಳು ನವಶಿಲಾಯುಗದಿಂದ ತಾಮ್ರಶಿಲಾ (ಚಾಲ್ಕೋಲಿತಿಕ್) ಯುಗಕ್ಕೆ ಬರುವುದು ಸಂಪೂರ್ಣ ಭಿನ್ನವೆಂದಾಗಲಿಲ್ಲ. ಏಕೆಂದರೆ ತಾಮ್ರದ ಅಥವಾ ಕಂಚಿನ ಉಪಕರಣಗಳು ಶಿಲಾ ಉಪಕರಣಗಳ ಜೊತೆಗೂಡಿದವಷ್ಟೇ. ಹಾಗೂ ಅವು ಬಹಳ ಸಣ್ಣ ಪ್ರಮಾಣದಲ್ಲಿಯೇ ಇದ್ದವು.

ಇಂತಹ ನಿರಂತರತೆಗೆ ಬಹುಶಃ ಇನ್ನೊಂದು ಕಾರಣವೂ ಇರಬಹುದು. ಕೃಷಿಯೊಂದಿಗೆ ನವಶಿಲಾಯುಗದ ಸಮುದಾಯಗಳು ಬೇಕಾದುದಕ್ಕಿಂತ ಹೆಚ್ಚು ಉತ್ಪಾದಿಸಲಾರಂಭಿಸಿದವು. ಹೊಸದಾಗಿ ಬಂದ, ಬಹುಶಃ ಸುಧಾರಿತ (ಉದಾಹರಣೆಗೆ  ಕಂಚಿನ) ಆಯುಧಗಳನ್ನು ಹೊಂದಿದ ಜನಗಳ ಕೈಮೇಲಾದರೂ ಅವರು ತಾವು ಸೋಲಿಸಿದ ನಿವಾಸಿಗಳನ್ನು ಕೊಲ್ಲಿತ್ತಿರಲಿಲ್ಲ ಅಥವಾ ಓಡಿಸುತ್ತಿರಲಿಲ್ಲ. ಬದಲಾಗಿ ಆ ಜನರನ್ನು ಭೂಮಿಯಲ್ಲಿಯೇ ಉಳಿಸಿ ಅವರ ಮಿಗುತೆ ಉತ್ಪಾದನೆಯಲ್ಲಿ ಭಾಗ ಪಡೆಯುತ್ತಿದ್ದರು. ಹೀಗೆ ಸಾಕಷ್ಟು ಸಾಂಸ್ಕೃತಿಕ ನಿರಂತರತೆ ಇರಲು ಸಾಧ್ಯವಾಯಿತು. ಏಕೆಂದರೆ ಆಧೀನರಾದ ಜನಗಳು ತಮ್ಮ ಭೌತಿಕ ಮತ್ತು ಆಧ್ಯಾತ್ಮಿಕ ಜೀವನದ ಹಳೆಯ ವಿಧಾನಗಳನ್ನು ಮುಂದುವರೆಸಿಕೊಂಡು ಹೋಗಲು ಸಾದ್ಯವಿತ್ತು.

ಮೆಹರ್ಘಡದಲ್ಲಿ ಕಾಲಮಾನ III ಆಗಮಿಸಿದಾಗ ಇಂತಹ ಯಾವುದೋ ಒಂದು ನಡೆಸಿರಬೇಕು. ಈ ಹಂತದ ಮಡಕೆಗಳ ಕಾಲಮಾನವನ್ನು ಕ್ರಿ. ಪೂ. ೪,೩೦೦ ರಿಂದ ೩,೮೦೦ ಎಂದು ನಿರ್ಧರಿಸಲಾಗಿದ್ದು, ಇವು ಸುಮಾರು ೭೫ ಹೆಕ್ಟೇರ್ ಗಳಲ್ಲಿ ಚದುರಿಹೋಗಿವೆ. ಬಹುಶಃ  ಈ ಸ್ಥಳದಲ್ಲಿ ಎಲ್ಲ ಕಡೆ ಜನರು ಏಕಕಾಲದಲ್ಲಿ ವಾಸಿಸಿರಲಿಕ್ಕಿಲ್ಲ. ಆದರೆ ನೆಲೆಗಳ ಪ್ರಮಾಣದಲ್ಲಿ ಒಂದು ಬಹು ದೊಡ್ಡ ವಿಸ್ತರಣೆ ನಡೆಯಿತು ಎಂಬುದರಲ್ಲಿ ಸಂದೇಹವೇನೂ ಇಲ್ಲ. ಇಂತಹ ವಿಸ್ತರಣೆಯೂ ಇದೇ ರೀತಿಯ ಮಡಕೆಗಳಿರುವ (ತೊಗವೂ ಮಡಕೆ)  ಇತರ ನೆಲೆಗಳಲ್ಲಿಯೂ ಈ ಗಾತ್ರದಲ್ಲೇ ಪ್ರತಿಬಿಂಭಿತವಾಗಿದೆ. ಆದ್ದರಿಂದ ಈ ನಿವೇಶನಗಳು ಅದೇ ಸಂಸ್ಕೃತಿಗೆ ಸೇರಿದವುಗಳು. ತೊಗವೂ ಸಂಸ್ಕೃತಿಯ ಪ್ರದೇಶ ಮೆಹರ್ಘಡ I ಮತ್ತು IIರ ಸಂಸ್ಕೃತಿಯ ಪ್ರದೇಶದಂತೆ ಭಾಸವಾಗುತ್ತದೆ. ಆದರೆ ಆಘ್ಘಾನಿಸ್ತಾನದ ಖಂದಹಾರ್  ಸಮೀಪದ ಮುಂದಿಘಕ್ ಒಂದು ಗಮನಾರ್ಹ ದೂರದ ಸೇರ್ಪಡೆಯಾಗಿದೆ.

ಜನಸಂಖ್ಯೆಯ ಹೆಚ್ಚಳಕ್ಕೆ ಪ್ರಮುಖವಾಗಿ ಕೃಷಿ ಹಾಗೂ ಕೈಕಸುಬಗಳ ಬೆಳವಣಿಗೆ (ಈ ಬಗೆಗೆ ಮುಂದೆ ಹೆಚ್ಚು ವಿವರಿಸಲಾಗಿದೆ) ಕಾರಣವೆನ್ನಬಹುದಾದರೆ, ಹೊಸ ಜನಗಳ ಸೇರ್ಪಡೆಯೂ ಮತ್ತೊಂದು ಅಂಶವಾಗಿರಬಹುದು. ಮೆಹರ್ಘಡ I ಮತ್ತು IIರ ಲ್ಲಿನ ನಿವಾಸಿಗಳು ದಕ್ಷಿಣ ಏಷಿಯಾದ ಜನರನ್ನು ಹೋಲುತಿದ್ದರೆ, ಇದಕ್ಕೆ ಭಿನ್ನವಾಗಿ ಮೆಹರ್ಘಡ IIIರ ಹೂತಿಟ್ಟ ಮಾನವ ಆಸ್ಥಿಪಂಜರಗಳು ಇರಾನ್ ಪ್ರಸ್ಥಭೂಮಿಯ ಜನಗಳೊಂದಿಗೆ ನಿಕಟ ಹೋಲಿಕೆಯನ್ನು ತೋರಿಸುತ್ತದೆ. ಇದು ಪಶ್ಚಿಮದಿಂದ ದೊಡ್ಡ ಪ್ರಮಾಣದ ವಲಸೆ ನಡೆಯಿತು ಎಂಬುದನ್ನು ಬಲವಾಗಿ ಸೂಚಿಸುತ್ತದೆ. ಅದೇನೇ ಇರಲಿ, ಜನಸಂಖ್ಯೆ ಹೆಚ್ಚು ಸಾಂದ್ರಗೊಂಡದು ತನ್ನದೇ ಬಲಿಯನ್ನು ಪಡೆಯಿತು. ಸರಾಸರಿ ವಯಸ್ಸು ನವ ಶಿಲಾಯುಗದ ಲ್ಲಿ ೩೧ ವರ್ಷಗಳಿದ್ದದ್ದು, ಈಗ ೨೪ ವರ್ಷಗಳಿಗೆ ಇಳಿಯಿತು ಎಂದು ಮೆಹರಘಡದಲ್ಲಿನ ಆಸ್ಥಿಪಂಜರಗಳಿಂದ ಅಂದಾಜು ಮಾಡಲಾಗಿದೆ.

ಹಲವು ಬೆಳೆಗಳನ್ನು ಬೆಳೆಯುತ್ತಿರುವುದು ಕೃಷಿಯಲ್ಲಿ ಪ್ರಗತಿಯನ್ನು ಸೂಚಿಸುತ್ತದೆ. ಇಲ್ಲಿ ವ್ಯವಸಾಯ ಮಾಡುತ್ತಿದ್ದ ಬೆಳೆಗಳಲ್ಲಿ ೪ ಭಿನ್ನ ಗೋಧಿ ತಳಿಗಳು, ಬಾರ್ಲಿ ಹಾಗೂ ಓಟ್ ಗಳು ಇದ್ದವು. ಆದರೆ ಕೈಕಸುಬುಗಳಲ್ಲಿ ಈ ಮುನ್ನಡೆ ಇನ್ನೂ ಎದ್ದು ಕಾಣುತ್ತದೆ. ಮೆಹರ್ಘಡ I ಮತ್ತು IIರಲ್ಲಿ ನೈಸರ್ಗಿಕ ತಾಮ್ರದ ತುಂಡುಗಳು ಹಾಗೂ ತಾಮ್ರದ ಕಿಟ್ಟ ಕಂಡುಬಂದರೆ, ಕಾಲಮಾನ IIIರಲ್ಲಿ ಹದಿನಾಲ್ಕು ಮೂಸೆ (ಲೋಹ ಕಾಯಿಸುವ ಕುಡಿಕೆ) ಗಳಲ್ಲಿ ತಾಮ್ರದ ಉಳಿಖೆಗಳು ಇರುವುದು ತಾಮ್ರದ ಅದಿರನ್ನು ಕರಗಿಸಲಾಗುತ್ತಿತ್ತು.  ಎಂಬುದನ್ನು ಖಚಿತಪಡಿಸಿವೆ. ಹಸಿರು ಪ್ಯಾಟನೈಟ್‌ನ (ಒಂದು ತರಹದ ಗಟ್ಟಿ ಕಲ್ಲು) ಸ್ತಂಭಾಕಾರದ, ಬಿಲ್ಲಿನ ದಾರದಿಂದ ತಿರುಗಿಸಬಹುದಾದ ಸಣ್ಣ ರಂಧ್ರಕಗಳು ಸೂಚಿಸುವಂತೆ, ಉಪಕರಣಗಳು ಇನ್ನೂ ಸುಮಾರಾಗಿ ಸಂಪೂರ್ಣವಾಗಿ ಕಲ್ಲಿನವಾದರೂ ತಾಂತ್ರಿಕತೆ ಹೆಚ್ಚು ಸಂಕೀರ್ಣವಾಗಿತ್ತು. ಹಲವು ಅರೆಪ್ರಶಸ್ತ ಶಿಲೆಗಳು, ಶಂಕು, ಶಿಲಾಜಲ (ಬಿಟುಮನ್‌)ಗಳ ಮೇಲೆ ಬಹಳ ಕೆಲಸ ಮಾಡಿದ ಸಾಕ್ಷಿಗಳಿವೆ ಹಾಗೂ ಉಳಿಕೆಗಳು ಸೂಚಿಸುವಂತೆ ಇದನ್ನು ಸ್ಥಳೀಯವಾಗಿಯೇ ಮಾಡಲಾಗುತ್ತಿತ್ತು. ಮಣಿಗಳನ್ನು ಸಾಬೂನುಗಲ್ಲಿನ ಲೇಹ್ಯದಿಂದ ಮಾಡಲಾಗುತ್ತಿತ್ತು. ಕಲ್ಲನ್ನು ಹೆಚ್ಚಿನ ಉಷ್ಣಕ್ಕೆ ಒಡ್ಡುವ ಮೂಲಕ ಲೇಹ್ಯ  ತಯಾರಿಸಲಾಗುತ್ತಿತ್ತು. ಪುಡಿಮಾಡುವ ಕಲ್ಲಿನ ಪರಿಕರಗಳು ಹಾಗೂ ಒಂದು ನಯಗೊಳಿಸಿದ ಕೊಡಲಿ ನವ ಶಿಲಾಯುಗದ ಮೂಲ ತಂತ್ರಜ್ಞಾನ ಮುಂದುವರೆದಿದೆ ಎಂಬುದನ್ನು ನಮಗೆ ನೆನಪಿಸುತ್ತದೆ. ಆದರೆ, ಮಧ್ಯಶಿಲಾಯುಗದ ಗುರುತುಗಳು ಸೂಕ್ಷ್ಮ ಶಿಲಾ ಪರಿಕರಗಳು ಗಣನೀಯವಾಗಿ ಕಡಿಮೆ ಆಗತೊಡಗಿದ್ದವು.

ಕುಂಬಾರಿಕೆಯಲ್ಲಿ ಒಂದು ಪ್ರಮುಖ ಮುನ್ನಡೆಯಾಗಿತ್ತು. ಮಡಕೆಗಳನ್ನು ಚಕ್ರದ ಮೇಲೆ ತಿರುಗಿಸಲಾಗುತ್ತಿತ್ತು ಹಾಗೂ ದೊಡ್ಡ ಭಟ್ಟಿಗಳಲ್ಲಿ ಸುಡಲಾಗುತ್ತಿತ್ತು. ತಾಪಮಾನವನ್ನು ೧೦೦೦ ಡಿಗ್ರಿ ಸೆಂಟಿಗ್ರೇಡ್ ವರೆಗೆ ಹೆಚ್ಚಿಸಲಾಗುತ್ತಿತ್ತು. ಎಲ್ಲ ದಾಸ್ತಾನುಗಳಿಗೆ ಮಡಕೆಗಳು ಪ್ರಧಾನ ಸಾಧನಗಳಾಗಿದ್ದವು. ಮಡಕೆಗಳು ಎಷ್ಟು ದೊಡ್ಡ ಮಟ್ಟದಲ್ಲಿ ಪತ್ತೆಯಾಗಿದೆಯೆಂದರೆ ಪುರಾತತ್ತ್ವ ಶಾಸ್ತ್ರಜ್ಞರು ಅವನ್ನು ಸಾಮೂಹಿಕವಾಗಿ ಉತ್ಪಾದಿಸಿದ್ದು ಎಂದು ಹೇಳಲಾರಂಭಿಸುತ್ತಾರೆ. ಅದೇ ವೇಳಗೆ, ಮಡಕೆಗಳ ಮೇಲಿನ ಮಾನವ ಹಾಗೂ ಪ್ರಾಣಿಗಳ ಚಿತ್ರಗಳು, ಭೂಮಿತೀಯ ಚಿತ್ರಗಳು ನಮಗೆ ಈಗಿನ ‘ಜಾನಪದ’ ಕಲೆಯ ಭಾವನೆಯನ್ನು ಮೂಡಿಸುತ್ತವೆ.

ಮೆಹರ್ಘಡ IIIರಲ್ಲಿ ಕಂಡುಬಂದ ಕಾರ್ಯಗಾರಗಳು ಹಾಗೂ ಭಟ್ಟಿಗಳ ಉಳಿಕೆಗಳು ಅಲ್ಲಿ ಕೈಕಸುಬುಗಳ ಆಭಿವೃದ್ಧಿಯ ಬಗೆಗೆ ತಿಳಿಸುತ್ತವೆ. ಸಮಾಜದಲ್ಲಿ ಶ್ರಮವಿಭಜನೆಯ ಪ್ರಗತಿಯಲ್ಲಿ ಒಂದು ಮುಂದಿನ ಹಂತವನ್ನು ಇದು ಸೂಚಿಸುತ್ತದೆ. ಸರಕು ಉತ್ಪಾದನೆಯ ವೃತ್ತಿಯಲ್ಲಿ ತಮ್ಮನ್ನು ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಂಡವರು ತಮ್ಮ ಉತ್ಪಾದನೆಯನ್ನು ಬೇರೆಯವರಿಗೆ ಮಾರಿಯೇ, ಬಹುಶಃ ವಸ್ತು ವಿನಿಮಯದಿಂದ, ಬದುಕಲು ಸಾಧ್ಯ, ಕೈಕಸುಬುದಾರರು ತಾಮ್ರ, ಅರೆ – ಪ್ರಶಸ್ತ ಕಲ್ಲುಗಳು, ಶಂಖಗಳು ಹೀಗೆ ಹೊರಗಿನಿಂದ ತಂದ ಇಷ್ಟೊಂದು ವೈವಿಧ್ಯಮಯ ರೀತಿಯ ವಸ್ತುಗಳನ್ನು ಉಪಯೋಗಿಸುತ್ತಿದ್ದಲ್ಲಿ ಸಾಕಷ್ಟು ಹೊರಗಿನ ವ್ಯಾಪಾರವೂ ಇದ್ದಿರಬೇಕು.  ತಾಮ್ರದ ಮುದ್ರೆಗಳ ಪತ್ತೆ ವ್ಯಕ್ತಿಗಳಿಗೆ ತಮ್ಮ ವ್ಯಾಪಾರಿ ವಸ್ತುಗಳನ್ನು ಗುರುತಿಸುವ ಆಗತ್ಯವಿದೆ ಎಂದು ಅನಿಸಿದ್ದಕ್ಕೆ ಸಾಕ್ಷಿ. ಇದು ವ್ಯಾಪಾರ ಬೆಳೆದುದರ ಒಂದು ಖಚಿತ ಸೂಚನೆ.

ಹಿಂದಿನ ನವಶಿಲಾಯುಗದ ಹಂತದಿಂದ ಭೌತಿಕ ಪರಿಸ್ಥಿತಿಗಳು ಹಾಗೂ ಮನೆಯ ರಚನೆಗಳು ಬಹಳಷ್ಟು ಮುಂದುವರೆದವು. ಈ ನಿರಂತರತೆ ಭಾಹಶಃ ಪದ್ಧತಿಗಳು ಹಾಗೂ ಅಚರಣೆಗಳಿಂದ ವಿಸ್ತರಣೆಗೊಂಡಂತೆ ಕಾಣುತ್ತದೆ. ಹೂಳಲ್ಪಟ್ಟವರು ಧರಿಸಿದ ಆಭರಣಗಳು ಹಿಂದಿನ ಹಂತಗಳಲ್ಲಿರುವಂತೆಯೇ ಇದ್ದುವು. ಆದರೆ ಪ್ರೌಢ ಹೆಂಗಸರು ಗಂಡಸು ಹಾಗೂ ಮಕ್ಕಳಿಗಿಂತ ಹೆಚ್ಚು ಆಭರಣಗಳನ್ನು ಧರಿಸುತ್ತಿದ್ದರು. ಇದು ಹಿಂದಿನ ಸಂಪ್ರದಾಯಕ್ಕಿಂತ ಭಿನ್ನವಾದುದು. ಧಾರ್ಮಿಕ ನಂಬುಗೆ ಹಾಗೂ ಆಚರಣೆಗಳಲ್ಲಿಯೂ ಸಹ ಪ್ರಮುಖ ಬದಲಾವಣೆಗಳಾದಂತೆ ಕಾಣುತ್ತದೆ. ಈಗ ಸತ್ತವರೊಂದಿಗೆ ಅವರ ಇನ್ನೊಂದು ಪ್ರಪಂಚದಲ್ಲಿನ  ಬಳಕೆಗೆ ಸರಕುಗಳನ್ನು ಹಾಗೂ ಪ್ರಾಣಿಗಳನ್ನು ಹೂಳುತ್ತಿರಲಿಲ್ಲ. ಹಿಂದೆ ಸಾಕಷ್ಟು ಕೆಂಪು ಪೂಸುತ್ತಿದುದನ್ನು ಈಗ ಕೈಬಿಡಲಾಗಿತ್ತು . ಬದಲಾಗಿ ಈಗ ಕೆಲವು ಸಾಮೂಹಿಕ ಸಮಾಧಿಗಳು, ಮರು ಹೂಳುವಿಕೆ ಭಾಗಶಃ (ಅಸ್ಥಿಪಂಜರದ ಭಾಗಗಳೊಂದಿಗೆ ಮಾತ್ರ) ಕಂಡುಬಂದಿವೆ. ಈ ಪದ್ಧತಿ ಹಿಂದೆ  ಕಂಡುಬಂದಿಲ್ಲ.

ಮೆಹರ್ಘಡದ ನವಶಿಲಾಯುಗದ ಹಾಗೂ ತಾಮ್ರ ಶಿಲಾಯುಗದ ಹಂತಗಳ ಹಲವು ಅಸ್ಥಿಪಂಜರಗಳ ಅಧ್ಯಯನವು ಒಂದೇ ಕಡೆ ನೆಲೆ ನಿಂತ ಕಡಿಮೆ ಶ್ರಮದ ಜೀವನವು ಜನರ ಆರೋಗ್ಯಕ್ಕೆ ಮಾರಕವಾಯಿತೆಂದು ಸೂಚಿಸುತ್ತದೆ. ಬಹುಶಃ ಇದಕ್ಕೆ ಕಾರಣ ಸ್ವಚ್ಛವಲ್ಲದ ವಸತಿಗಳು ಹಾಗೂ ಕಾರ್ಯಗಾರಗಳ ಅಶುದ್ಧ ಗಾಳಿ, ಸರಾಸರಿ ಆಯುಷ್ಯ ೩೧ ವರ್ಷಗಳಿಂದ ೨೪ಕ್ಕೆ ಇಳಿಯಿತು ಎಂದು ಅಂದಾಜಿಸಲಾಗಿದೆ. ಹಾಗೆಯೇ ಸಾವಿನ ಪ್ರಮಾಣವು ಸಾವಿರಕ್ಕೆ ೩೩ರಿಂದ ೪೨ಕ್ಕೆ ಹೆಚ್ಚಿತು, ಮಕ್ಕಳ (ಐದು ವರ್ಷದ ಕೆಳಗಿನ)  ಸಾವಿನ ಪ್ರಮಾಣ ಸಾವಿರಕ್ಕೆ ೩೬೦ರಿಂದ ೪೫೨ಕ್ಕೆ ಹೆಚ್ಚಿತು, ಹೆಣ್ಣುಮಕ್ಕಳ ಹೆರುವ ಪ್ರಮಾಣ ೪.೫ರಿಂದ ೫.೮ಹೆಚ್ಚಾಗಿರುವುದು, ಹೆಂಗಸರ ಮೇಲೆ ಮಕ್ಕಳನ್ನು ಹೆರುವ ಒತ್ತಡ ಹೆಚ್ಚಿದ್ದನ್ನು ಸೂಚಿಸುತ್ತದೆ. ಈ ಅಂದಾಜುಗಳು ನವಶಿಲಾಯುಗದ ಕ್ರಾಂತಿಯ ನಂತರದ ಕಣ್ಣಿಗೆ ಕಾಣುವ ಭೌತಿಕ ಪ್ರಗತಿ ಹೇಗೆ ಜನಸಮುದಾಯದ ಆರೋಗ್ಯವನ್ನು ಬಲಿಗೊಟ್ಟು ಸಂಭವಿಸಿತು ಎಂದು ಸೂಚಿಸುತ್ತವೆ.  ಇದನ್ನು ನೋಡಿದಾಗ ಆಧುನಿಕ ಕಾಲದಲ್ಲಿ ಫ್ಯಾಕ್ಟರಿ ವ್ಯವಸ್ಥೆ ಬಂದ ನಂತರ ಕೆಲಸಗಾರರ ಆರೋಗ್ಯ ಸ್ಥಿತಿ ಏನಾಯಿತು ಎಂಬುದನ್ನು ನೆನಪಿಸಿಕೊಳ್ಳದಿರಲು ಸಾಧ್ಯವಿಲ್ಲ.

ಕಿ. ಪೂ. ೩,೮೦೦ ಸುಮಾರಿಗೆ ಮೆಹರ್ಘಡದ ವಸತಿಗಳ ಪತನ ಪ್ರಾರಂಭವಾಯಿತು. ಆದರೆ ಪರಾತತ್ವ ಶಾಸ್ತ್ರಜ್ಞರು ಇದೇ ಪ್ರದೇಶದಲ್ಲಿ ಹೊಸ ರೀತಿಯ ಕುಂಬಾರಿಕೆಯಿರುವ ಇತರ ಹಲವು ನಿವೇಶನಗಳನ್ನು ಪತ್ತೆ ಹಚ್ಚಿದ್ದಾರೆ. ಕಿಲಿ ಗುಲ್‌ ಮುಹಮ್ಮದ್‌ ಹತ್ತಿರದಲ್ಲಿರುವ ಕಿಚಿ ಬೇಗ್‌ ಹೆಸರನ್ನೇ ಇದಕ್ಕೆ ಇಡಲಾಗಿದೆ. ಈ ಮಡಕೆ ಪ್ರಕಾರವು ತೊಗವೂ ಮಡಕೆಗೆ ಬದಲಿಯಾಗುತ್ತದೆ. ಇದು ಕ್ರಿ.ಪೂ. ೩,೨೦೦ ರವರೆಗೂ ಮುಂದುವರೆದ ತಡವಾದ ನವಶಿಲಾಯುಗದ ಈ ಹಂತದ ವೈಶಿಷ್ಟ್ಯತೆಯಾಗಿದೆ. ವಾಯುವ್ಯ ಗಡಿಪ್ರಾಂತ್ಯದ ಶೇರಿ ಖಾನ್‌ ತರಾಕೈನಲ್ಲಿ ಹಸ್ತಕೃತಿಗಳು ಹೇರಳವಾಗಿ ದೊರೆತಿದ್ದು, ವಿಶೇಷವಾಗಿ ಕೆಮ್ಮಣ್ಣು (ಟೆರ್ರಕೋಟ) ಗೊಂಬೆಗಳು, ಜತೆಗೆ ಮೂಳೆ ಮತ್ತು ಕಲ್ಲಿನ ಹಸ್ತಕೃತಿಗಳೂ ಇದ್ದವು (ಲೋಹ ಇರಲಿಲ್ಲ). ಮಾನವ ಮೃಣ್ಮೂರ್ತಿಗಳು ಅತ್ಯಂತ ಶೈಲೀಕೃತವಾಗಿದ್ದು ಅದರಲ್ಲಿ ಒಂದು ವಿಧ ಮಹಿಳಾ ಅಂಗಕ್ಕೆ ಒತ್ತು ನೀಡುತ್ತದೆ. ಇದು ಸಂತಾನಾಭಿವೃದ್ಧಿ ದೇವತೆಯಾಗಿದ್ದಿರಬಹುದು (ಮಾತೃ ದೇವತೆ?). ಆರಂಭದ ಕೃಷಿ ಸಮುದಾಯಗಳು ಸಾಮಾನ್ಯವಾಗಿ ಮೊರೆಹೋಗುವಂತೆ ಕಾಣುವ ದೇವತೆಯಿದು. ಬಳೆಗಳನ್ನು ಕೂಡಾ ಈ ಗಟ್ಟಿ ಮಣ್ಣಿನಿಂದ, ಶಂಖು ಹಾಗೂ ಮೂಳೆಗಳಿಂದಲೂ ತಯಾರಿಸಲಾಗುತ್ತಿತ್ತು.

ಇದೇ ಕಾಲಘಟ್ಟದಲ್ಲಿ (ಕ್ರಿ. ಪೂ. ೩,೮೦೦ ರಿಂದ ೩,೨೦೦) ಪಾಶ್ಚಿಮಾತ್ಯ ಸಂಪ್ರದಾಯದ ನವಶಿಲಾಯುಗದ ಸಂಸ್ಕೃತಿಯೊಂದು ಸಿಂಧೂ ಪ್ರದೇಶದಾದ್ಯಂತ ಹಬ್ಬಿತ್ತು. ಹಕ್ರಾ ಮಡಕೆ ಎಂಬ ಕುಂಬಾರಿಕೆಯ ಹೆಸರನ್ನು ಇದಕ್ಕೆ ಇಡಲಾಗಿದೆ. ಈ ನಿವೇಶನಗಳು ಬಹವಾಲಪುರ ಜಿಲ್ಲೆಯ ಭಾಗದಲ್ಲಿ ಕೇಂದ್ರೀಕೃತವಾಗಿವೆ. ಬಹಳಷ್ಟು ನಿವೇಶನಗಳು ಇಂದು ಬತ್ತಿ ಹೋದ ಹಾಕ್ರ ನದಿಯ ರೇವಿನಲ್ಲಿವೆ. ಈ ನದಿಯು ಅಂದು ಒಂದು ಹಂತದವರೆಗೂ, ಕನಿಷ್ಟ ಮಳೆಗಾಲದಲ್ಲಿಯಾದರೂ ಇಲ್ಲಿಯವರೆಗೆ ನೀರು ತರುತ್ತಿರಬೇಕು. ಆದರೆ ಹಕ್ರಾ ಮಡಕೆಯ ಅಗೆದು ತೆಗೆದ ಮುಖ್ಯ ನಿವೇಶನವು ಪಶ್ಚಿಮ ಪಂಜಾಬಿನ ರಾವಿ ನದಿಯ ಪಾತ್ರದಲ್ಲಿರುವ ಜಲೀಲಪುರದಲ್ಲಿ ದೊರೆತ ಪ್ರಾಣಿ ಮೂಳೆಗಳು ಸಾಕು ಜಾನುವಾರಗಳು ಮಾಂಸಾಹಾರದ ಪ್ರಮುಖ ಮೂಲವಾಗಿದ್ದವು ಎಂದು ತೋರಿಸುತ್ತವೆ (ಶೇ. ೯೦ ಕ್ಕಿಂತ ಹೆಚ್ಚು). ಹೀಗೆ ಈ ಜನಸಮುದಾಯ ಬೇಟೆಯ ಮೇಲೆ ಅವಲಂಬಿತವಾಗಿದ್ದದ್ದು ಕಡಿಮೆ. ಇದಕ್ಕೆ ಭಿನ್ನವಾಗಿ ಹಕ್ರಾದ ನೆಲೆಗಳು ಬಹುಶಃ ಅರೆ ಅಲೆಮಾರಿ ಜನಗಳ ತಾತ್ಕಾಲಿಕ ಡೇರೆಗಳಾಗಿದ್ದಿರಬಹುದು. ಈ ಜನಗಳು ಮುಖ್ಯವಾಗಿ ಪಶುಸಂಗೋಪನೆಯನ್ನು ಅವಲಂಬಿಸಿದ್ದರು. ಎರಡನೆಯದಾಗಿಯಷ್ಟೇ ಅವರು ಬದಲು (ಶಿಫ್ಟಿಂಗ್) ವ್ಯವಸಾಯದಲ್ಲಿ ತೊಡಗಿಸಿ ಕೊಂಡಿದ್ದರು. ಬಹುಶಃ ಇದು ಅವರು ಜೀವಿಸುತ್ತಿದ್ದ ಒಂದು ರೀತಿಯ ಮರುಭೂಮಿ ಹಾಗೂ ಕುರುಚಲು ಪರಿಸರಕ್ಕೆ ಸೂಕ್ತವಾಗಿತ್ತು.