ಜನನ : ೧೯೨೯ ರಲ್ಲಿ ಮತ್ತೂರಿನಲ್ಲಿ

ಮನೆತನ : ವೇದ ವಿದ್ವಾಂಸರಿಂದ ಕೂಡಿದ ಸುಂಸ್ಕೃತ ಮನೆತನ. ತಂದೆ ವೇ. ಬ್ರ. ರಾಮಕೃಷ್ಣಯ್ಯ, ತಾಯಿ ನಂಜಮ್ಮ ಅಣ್ಣ ಮತ್ತೂರು ಶಂಕರಮೂರ್ತಿ ಸಂಗೀತ ವಿದ್ವಾಂಸರು.

ಕ್ಷೇತ್ರ ಸಾಧನೆ : ಸಂಯುಕ್ತ ಕರ್ನಾಟಕ ಪತ್ರಿಕೆಯ ಸುದ್ದಿಗಾರರಾಗಿ ವೃತ್ತಿ ಆರಂಭಿಸಿ ಆ ಪತ್ರಿಕೆಯ ಉಪ ಸಂಪಾದಕ ಪದವಿಗೆ ಏರಿದರು. ೧೯೬೯ ರಲ್ಲಿ ಕುಲಸಚಿವರಾಗಿ ಭಾರತೀಯ ವಿದ್ಯಾಭವನ ಸೇರಿದ ಶ್ರೀಯುತರು ಸುಮಾರು ಹದಿಮೂರು ವರ್ಷಗಳ ಕಾಲ ಭವನದ ಲಂಡನ್ ಶಾಖೆಯಲ್ಲಿ ಸೇವೆ ಸಲ್ಲಿಸಿ ಆ ಕೇಂದ್ರವು ವಿಶ್ವಮಾನ್ಯವಾಗುವಂತೆ ಮಾಡಿದರು. ಅನಂತರ ಬೆಂಗಳೂರಿನ ಕೇಂದ್ರಕ್ಕೆ ಬಂದ ಪ್ರಸ್ತುತ ಅಲ್ಲಿನ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಸೇವೆಸಲ್ಲಿಸುತ್ತಿದ್ದಾರೆ. ವೇದ ವೇದಾಂತ ಪುರಾಣಗಳಲ್ಲಿಯೂ ಸಂಸ್ಕೃತ ಭಾಷೆಯಲ್ಲಿಯೂ ಅಗಾಧ ಒಲವು -ಆಸಕ್ತಿ ಕುಮಾರವ್ಯಾಸ ಭಾರತಕ್ಕೆ ವ್ಯಾಖ್ಯಾನ  ನೀಡುವುದನ್ನು ಸಿದ್ದಿಸಿ ಕೊಂಡಿದ್ದಾರೆ.

ಕೃಷ್ಣಮೂರ್ತಿಯವರ ವ್ಯಾಖ್ಯಾನ ಕೇಶವಮೂರ್ತಿಯವರ ವಾಚನದೊಂದಿಗೆ ಕುಮಾರವ್ಯಾಸ ಭಾರತದ ಹತ್ತು ಪರ್ವಗಳನ್ನೂ ಮೂಲ ಭಾರತದ ಶಾಂತಿಪರ್ವ ಮತ್ತು ಅನುಶಾಸನ ಪರ್ವಗಳನ್ನೂ ಇನ್ನೂರು ಧ್ವನಿ ಸುರುಳಿಗಳಾಗಿ ಭಾರತೀಯ ವಿದ್ಯಾ ಭವನವು ಹಿಂದೂಸ್ಥಾನ್ ಮೆಷಿನ್ ಟೂಲ್ಸ್ ಲಿಮಿಟೆಡ್‌ನ ಸಹಕಾರದಲ್ಲಿ ಹೊರ ತಂದಿದೆ.

ಉದಯ ದೂರದರ್ಶನ ವಾಹಿನಿಯಲ್ಲಿ ಅವರ ಅನುಭವದ ವಿಚಾರ ಮಂಥನದ ಫಲ ಶ್ರೋತೃಗಳಿಗೆ ಸಿಗುತ್ತಲೆ ಇದೆ. “ಇತಿಹಾಸದ ಮಹಾಪಾತ್ರಗಳು” ಅವರ ಮತ್ತೊಂದು ದೂರದರ್ಶನ ಮಾಧ್ಯಮದ ಕೊಡುಗೆ. ಹಲವಾರು ಪುಸ್ತಕಗಳನ್ನು ಕನ್ನಡ, ತಮಿಳು, ಹಿಂದಿ ಭಾಷೆಗಳಿಂದ  ಆಂಗ್ಲ ಭಾಷೆಗೆ ಮತ್ತು ಆಂಗ್ಲ ಭಾಷೆ ತಮಿಳು ಭಾಷೆಗಳಿಂದ ಕನ್ನಡಕ್ಕೆ ತರ್ಜುಮೆ ಮಾಡಿರುತ್ತಾರೆ. “ನಮ್ಮೆಲ್ಲರ ಶ್ರೀರಾಮ” “ಯೋಗ ಕ್ಷೇಮಂ ವಹಾ ಮ್ಯಹಂ”, “ರಾಮಕಥಾಸಾರ” ಇವುಗಳಲ್ಲಿ ಉಲ್ಲೇಖಾರ್ಹವಾದುವು.

ಪ್ರಶಸ್ತಿ – ಪುರಸ್ಕಾರಗಳು : ಕುಮಾರವ್ಯಾಸ ಭಾರತ ವ್ಯಾಖ್ಯಾನಕ್ಕಾಗಿ ಚಿನ್ನದ ಪದಕ, ’ರಾಜ್ಯೋತ್ಸವ ಪ್ರಶಸ್ತಿ’, ಗಾಂಧಿ ಪ್ರತಿಷ್ಠಾನದ ಪುರಸ್ಕಾರ, ತಮಿಳು ಸಾಹಿತ್ಯ ಸಮ್ಮೇಳನದ ಸ್ವರ್ಣ ಪದಕ, ವಜ್ರ ಕುಮಾರ ಸ್ಮಾರಕ ಪ್ರಶಸ್ತಿ, ಎಂ. ಎಂ. ಪಾಟೀಲ್ ಜನ ಸೇವಕ ಪ್ರಶಸ್ತಿ, “ವ್ಯಾಖ್ಯಾನ ಭಾಸ್ಕರ”, “ಲಲಿತ ಕಲಾಶ್ರಯ”, ಗೊರೂರು ಪ್ರತಿಷ್ಠಾನ ಪ್ರಶಸ್ತಿ. ಇಂಗ್ಲೆಂಡಿನ “ಭಾರತ ಸೇವಾರತ್ನ” ಪ್ರಶಸ್ತಿ, ಹಂಪಿ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್, “ಫೆಲೊ ಆಫ್ ರಾಯಲ್ ಏಷಿಯಾಟಿಕ್ ಸೊಸೈಟಿ” ಮುಂತಾದ ಅಸಂಖ್ಯ ಗೌರವಗಳನ್ನು ಗಳಿಸಿರುವ ಶ್ರೀಯುತರನ್ನು ೨೦೦೪-೦೫ರ ಸಾಲಿನಲ್ಲಿ ರಾಜ್ಯ ಸಂಗೀತ ನೃತ್ಯ ಅಕಾಡೆಮಿ ವಿಶೇಷ ಗೌರವ ಪ್ರಶಸ್ತಿ ನೀಡಿ ಸನ್ಮಾನಿಸಿದೆ. ೨೦೦೯ ರಲ್ಲಿ ಇವರಿಗೆ ಕೇಂದ್ರ ಸರ್ಕಾರದ ಪ್ರತಿಷ್ಠತ ’ಪದ್ಮಶ್ರೀ’ ಪ್ರಶಸ್ತಿ ದೊರೆತಿದೆ.