ಯಜಮಾನರು ಹದಿನೇಳು ವರ್ಷಗಳಿಂದ ಬ್ಯಾಂಕಿನಲ್ಲಿ ಗುಮಾಸ್ತರಾಗಿ ಕೆಲಸ ಮಾಡುತ್ತಿದ್ದಾರೆ. ಕೆಲಸದಲ್ಲಿ ಒಳ್ಳೆಯ ಹೆಸರು ಗಳಿಸಿಕೊಂಡಿದ್ದಾರೆ. ಅವರಿಗೆ ಇರುವ ಒಂದೇ ದುರಭ್ಯಾಸವೆಂದರೆ ಮದ್ಯಪಾನ. ಪ್ರಾರಂಭದಲ್ಲಿ ಮನೆಯಲ್ಲಿ ಮಾತ್ರ ಸ್ವಲ್ಪ ವಿಸ್ಕಿಯನ್ನೋ, ಬ್ರಾಂದಿಯನ್ನೋ ಸೇವಿಸುತ್ತಿದ್ದರು. ಆದರೆ ಈಗ ಹೊರಗಡೆಯೂ ತೆಗೆದುಕೊಳ್ಳುವ ಅಭ್ಯಾಸ ಮಾಡಿಕೊಂಡಿದ್ದಾರೆ. ಒಂದೆರಡು ಬಾರಿ ಕುಡಿದು ಬ್ಯಾಂಕಿಗೆ ಹೋಗಿದ್ದಾಗಿದೆ. ಸ್ನೇಹಿತರು ಮತ್ತು ಬ್ಯಾಂಕ್ ಮ್ಯಾನೇಜರ್ರವರ ಸಲಹೆಯಂತೆ ಅವರನ್ನು ವೈದ್ಯರಲ್ಲಿ ಮನೋವೈದ್ಯರಲ್ಲಿ ತೋರಿಸಿದ್ದೆವು. ಸ್ವಲ್ಪ ಕಾಲ ಬಿಟ್ಟು ಮತ್ತೆ ಯಾವುದಾದರೂ ಸಣ್ಣನೆಪ ಮಾಡಿಕೊಂಡು ಕುಡಿಯುತ್ತಾರೆ. ಈ ಖಾಯಿಲೆಗೆ ತುಂಬಾ ಹೊಸ ಔಷಧಿಗಳು ಬಂದಿವೆ ಎಂದು ಓದಿದ್ದೇನೆ. ನಮ್ಮ ಯಜಮಾನರಿಗೆ ಏಕೆ ಖಾಯಮ್ಮಾಗಿ ಗುಣವಾಗುತ್ತಿಲ್ಲ?

ಮದ್ಯವ್ಯಸನ ಹಾಗೂ ಅದರ ಚಿಕಿತ್ಸಾ ಕ್ರಮದ ಬಗ್ಗೆ ಬಹಳ ಹಿಂದೆ ಇದೇ ಅಂಕಣದಲ್ಲಿ ಬರೆದ ನೆನಪಿದೆ. ಮದ್ಯವ್ಯಸನಕ್ಕೆ ನಿದಿðಷ್ಟ ಚಿಕಿತ್ಸೆ ಇಲ್ಲ, ಅಂದರೆ ಇದರ ಚಿಕಿತ್ಸಾ ಕ್ರಮ ಹಲವಾರು ಅಂಶಗಳನ್ನು ಅವಲಂಬಿಸಿರುತ್ತದೆ. ಅವುಗಳಲ್ಲಿ ಪ್ರಮುಖವಾದುವೆಂದರೆ –

  • ವ್ಯಸನೀಯು ಎಷ್ಟು ವರ್ಷಗಳಿಂದ ಹಾಗೂ ಎಷ್ಟು ಪ್ರಮಾಣದಲ್ಲಿ ಸೇವಿಸುತ್ತಿದ್ದಾರೆ?
  • ಪ್ರತಿ ದಿನ ನಿಗದಿತ ಸಮಯದಲ್ಲಿ ನಿರ್ದಿಷ್ಟ ಪ್ರಮಾಣದಲ್ಲಿ ಮಾತ್ರ ಸೇವಿಸುತ್ತಾನೆಯೇ ಅಥವಾ ಯಾವ ಸಮಯವಾದರೂ ಸರಿ ಇತಿಮಿತಿ ಇಲ್ಲದೆ ಮದ್ಯಪಾನ ಮಾಡುತ್ತಾನೆಯೇ?
  • ವ್ಯಸನಿಗೆ ಮದ್ಯಪಾನದ ಅವಲಂಬನ ಮಾನಸಿಕವೋ ಅಥವಾ ದೈಹಿಕವೋ?
  • ವ್ಯಸನಿಗೆ ಮದ್ಯಪಾನವನ್ನು ನಿಲ್ಲಿಸಬೇಕೆಂಬ ಪ್ರಮಾಣಿಕ ಆಶಯ ಇದೆಯೇ? ಅದನ್ನು ಬಿಡುವುದಕ್ಕೆ ಎಂತಹ ಪ್ರಯತ್ನ ಮಾಡಲೂ ಆತನು ಸಿದ್ದನಾಗಿದ್ದಾನೆಯೇ?
  • ಇಲ್ಲಿಯವರೆಗೂ ಸೇವಿಸಿರುವ ಮದ್ಯಪಾನದಿಂದ ಯಕೃತ್ ಮತ್ತು ಮೆದುಳಿಗೆ ಎಷ್ಟು ಹಾನಿಯಾಗಿದೆ?

ಮದ್ಯ ವ್ಯಸನಕ್ಕೆ ನಿರ್ದಿಷ್ಟಾ ಚಿಕಿತ್ಸಾ ಕ್ರಮವನ್ನು ಹುಡುಕುವ ಪ್ರಯತ್ನ ಮೂರು ದಶಕದಿಂದ ನಡೆಯುತ್ತಿದೆ. ಪ್ರಾರಂಭದಲ್ಲಿ ಮದ್ಯವನ್ನು ಕಂಡೊಡನೆಯೇ ಹೇಸಿಗೆ ವಾಕರಿಕೆ ವಾಂತಿ ಬರಿಸುವಂತಹ ಅಪೋಮಾರ್ಫಿನ್ ಔಷದಿ ಬಳಕೆಯಾಯಿತು. ಚಿಕಿತ್ಸೆ ಯಶಸ್ವಿ ಎನಿಸುತ್ತಿದ್ದಂತೆಯೇ ಈ ಔಷಧ ಸಹ ವ್ಯಸವನ್ನುಂಟು ಮಾಡುವುದೆಂಬುದನ್ನು ಅರಿತು ಇದರ ಕೈಬಿಡಬೇಕಾಯಿತು. ದೇಹದಲ್ಲಿ ಪ್ರವೇಶಿಸಿದ ಮದ್ಯ ಯಕೃತ್‌ನಲ್ಲಿ ಪ್ರಕ್ರಿಯೆಯ ನಂತರ ಇತರ ರಸಾಯನಿಕ ವಸ್ತುಗಳಾಗಿ ಹೊರ ಹೋಗುತ್ತದೆ. ಆದರೆ ಅದನ್ನು ತಪ್ಪಿಸಿ, ರಕ್ತದಲ್ಲಿ ಮದ್ಯದ ಮಟ್ಟವನ್ನು ಉಳಿಸಿಕೊಂಡು ವ್ಯಸನಿಗೆ ಕಿರಿಕಿರಿಯನ್ನುಂಟು ಮಾಡಿ ಮದ್ಯಪಾನವನ್ನು ಬಿಡಿಸಲು ಸಾಧ್ಯವೇ ಎನ್ನುವ ಪ್ರಯತ್ನವೂ ಫಲಕಾರಿಯಾಗಿಲ್ಲ. ಡೈಸಲ್‌ಫ್ಯೂರಾಮ್, ಸಿ.ಸಿ.ಸಿ. (ಸಿಟ್ರೇಟೆಡ್ ಕಾರ್ಬಾನೈಡ್ ಕಾಂಪೌಂಡ್ಸ) ಅಂಟಾಬ್ಯೂನ್ ಮುಂತಾದ ಔಷಧಿಗಳು ಈ ವರ್ಗದಲ್ಲಿ ಬಂದು ಈಗಲೂ ಚಲಾವಣೆಯಲ್ಲಿವೆ. ಮದ್ಯಪಾನ ಯಾವ ರೀತಿಯ ಮಾನಸಿಕ ಕಿಕ್ ಕೊಡುತ್ತದೋ ಅದನ್ನೇ ಅನುಕರಿಸುವ ಪರ‍್ಯಾಯ ಔಷಧಗಳ ಪ್ರಯತ್ನ ನಡೆಸಲಾಯಿತು. ಈ ಚಿಕಿತ್ಸೆಗಳ ಪ್ರಭಾವ ಸಹ ಬಹಳ ಕಾಲ ಪರಿಣಾಮಕಾರಿಯಾಗಲಿಲ್ಲ. ಈಗ ಆಲ್ಕೋಹಾಲಿಕ್ ಅನಾನಿಮಸ್ ಗುಂಪುಗಳು ಇತ್ತೀಚೆಗೆ ಹೆಚ್ಚು ಜನಪ್ರಿಯವಾಗುತ್ತಿವೆ. ನಿಮ್ಮೂರಿನಲ್ಲಿಯೂ ಈ ವ್ಯವಸ್ಥೆಯಿದ್ದರೆ ನಿಮ್ಮ ಯಜಮಾನರನ್ನು ಅಲ್ಲಿಗೆ ಕರೆದೊಯ್ಯಿರಿ.

ನೀವು ನಿರಾಶರಾಗಬೇಕಾದ ಪ್ರಮೇಯವಿಲ್ಲ. ನಿಮ್ಮ ಯಜಮಾನರಿಗೆ ಮದ್ಯಪಾನವನ್ನು ಬಿಡಬೇಕೆಂಬ ಹಂಬಲವಿದ್ದರೆ, ಪ್ರಮಾಣಿಕ ಆಸಕ್ತಿಯಿದ್ದರೆ, ಯಕೃತ್ ಹಾಗೂ ಮಿದುಳಿಗೆ ತೀವ್ರತರ ಆಘಾತವಾಗಿರದಿದ್ದರೆ, ಅವರಿಗೆ ಯಶಸ್ವಿ ಚಿಕಿತ್ಸೆ ನೀಡಲು ಸಾಧ್ಯ. ಅದಕ್ಕೆ ಅವರು ಮೊದಲು ಆಸ್ಪತ್ರೆಗೆ ದಾಖಲಾಗಿ ದೇಹದಲ್ಲಿರುವ ಈ ಮದ್ಯದ ನಂಜನ್ನು ಹೊರ ತೆಗೆದುಹಾಕಬೇಕು. ಅದಕ್ಕೆ ಪರ್ಯಾಯ ವ್ಯವಸ್ಥೆಯನ್ನು ಮಾಡುವವರೆಗೂ ಚಿಕಿತ್ಸೆ ತೆಗೆದುಕೊಳ್ಳುವ ತಾಳ್ಮೆ ಬೇಕು. ಧಾರ್ಮಿಕ, ಸಾಂಸ್ಕೃತಿಕ, ತಾತ್ವಿಕ  ನೆಲೆಯಲ್ಲಿ ಅವರಿಗೆ ಆತ್ಮವಿಶ್ವಾಸ ಮೂಡಿಸಬೇಕು.