Categories
ಜನಪದ ಸಾಹಿತ್ಯ ಬುಡಕಟ್ಟುಗಳು ವಿಶ್ಲೇಷಣೆ ಮತ್ತು ಸಂಶೋಧನೆ ಸಂಸ್ಕೃತಿ-ಪರಂಪರೆ ಸಮುದಾಯ ಸಾಹಿತ್ಯ ಸಾಹಿತ್ಯ

ಮಲೆ ಮಾದೇಶ್ವರ

ಮಾದೇಶ್ವರ ಕಾವ್ಯದ ನಾಯಕನಾದ ಮಾದಪ್ಪ ಅಥವಾ ಮಾದೇಶ್ವರ ಬಾಲ್ಯದಲ್ಲೇ ಉತ್ತರದೇಸದಿಂದ ಹೊರಟು ಗುರುಮಠಗಳಾದ ಸುತ್ತೂರು ಮತ್ತು ಕುಂತೂರಗಳಲ್ಲಿ ಪವಾಡವನ್ನು ಮೆರೆದು ತಿರಸ್ಕೃತನಾಗಿ ಕೊನೆಯಲ್ಲಿ ತನ್ನ ನೆಲೆಯನ್ನು ಕಂಡುಕೊಂಡುದು ಕರ್ನಾಟಕದ ದಕ್ಷಿಣದ ತುದಿಯ ಒಂದು ಗೊಂಡಾರಣ್ಯ ಪ್ರದೇಶದಲ್ಲಿ. ಕಾಲಾನಂತರ ಈ ಪ್ರದೇಶಲ್ಕೆ ಮಾದಪ್ಪನ ಬೆಟ್ಟ(ಮಾದೇಶ್ವರ ಬೆಟ್ಟ) ಎಂಬ ಹೆಸರೇ ಒಪ್ಪಿತವಾಯಿತು.

ಪಿನ್‌ಲ್ಯಾಂಢ್‌ನ ‘ಕಲೇವಾಲಾ’ ಮೌಖಿಕ ಮಹಾಕಾವ್ಯ ಎನ್ನುವುದಾದರೆ ಅಷ್ಟೇ ದೊಡ್ಡದಾದ ಮಾದೇಶ್ವರ ಕಾವ್ಯವು ಒಂದು ಮೌಖಿಕ ಮಹಾಕಾವ್ಯವಾಗುತ್ತದೆ ಎಂಬ ಡಾ.ಹಾ.ಮಾ. ನಾಯಕರ ಹೇಳಿಕೆ ಸೂಕ್ತವೆನಿಸುತ್ತದೆ. ಮಾದೇಶ್ವರ ಕಾವ್ಯದ ಭಾಷೆ ಮತ್ತು ವಿಷಯ ಪ್ರಾದೇಶಿಕವಾಗಿರಬಹುದು. ಆದರೆ ಅದರ ಪ್ರಭಾವ ಮತ್ತು ವಿಸ್ತಾರ ಸಾರ್ವತ್ರಿಕವಾದುದು. ಇಲ್ಲರುವ ಮನುಷ್ಯ, ಪ್ರಾಣಿ ಮತ್ತು ಪರಿಸರ ಸಂಬಂಧವನ್ನು ಕಂಡುಕೊಂಡಾಗ ಸಾರ್ವತ್ರಿಕತೆಯ ಅರಿವಾಗುತ್ತದೆ. ಅಷ್ಟೇ ಅಲ್ಲ ಕಾವ್ಯದಲ್ಲಿ ಸ್ಪುರಿಸುವ ಚಿಂತನೆ ಕೇವಲ ತಾತ್ವಿಕವಾಗಿ ಉಳಿದರೆ ಅದರ ಯಶಸ್ಸು ಪೂರ್ಣವಾಗುವುದಿಲ್ಲ. ಆದರೆ ಅದು ಸರ್ವಕಾಲದಲ್ಲೂ ಅನ್ವಯಿಕ ಸಾಧ್ಯತೆಗಳನ್ನು ತೋರಿದರೆ ಮಾತ್ರ ಅದು ಮಹಾಕಾವ್ಯದ ಗುರಿಯನ್ನು ತಲುಪುತ್ತದೆ. ಈ ಹಿನ್ನೆಲೆಯಲ್ಲಿ ಮಾದೇಶ್ವರ ಕಾವ್ಯದಲ್ಲಿ ಬರುವ ಮೌಲ್ಯಗಳು ಸರ್ವಕಾಲಿಕವಾಗಿವೆ. ಹಾಗೂ ಅಲ್ಲಿನ ಪರಿಸರಪ್ರಜ್ಞೆ, ಸಾಮಾಜಿಕ ತಿಳಿವಳಿಕೆ ಹಾಗೂ ಮನಸ್ಸಿನ ಅರವುಗಳು ಈಗಲೂ ಪ್ರಸ್ತುತವಾಗಿವೆ. ಯುಗಯುಗದಲ್ಲೂ ಜನರ ದೃಷ್ಟಿಯಲ್ಲಿ ಕಾವ್ಯದಲ್ಲಿನ ಮೌಲ್ಯ ಸ್ಪುರಿಸಬೇಕು. ಅದು ಎಂದೆಂದಿಗೂ ಮುಗಿದು ಹೋಗುವುದಿಲ್ಲ.

ಮಹಾಕಾವ್ಯದ ಮತ್ತೊಂದು ಪ್ರಮುಖ ಅಂಶವೆಂದರೆ, ಕಾವ್ಯದ ನಾಯಕ ಮಹಾಪುರುಷನಾಗಬೇಕು. ಹಾಗೂ ಅಲ್ಲಿ ಬರುವ ವ್ಯಕ್ತಿಗಳೂ ಸಹ ಮಹಾವ್ಯಕ್ತಿಗಳಾಗುತ್ತಾರೆ. ಈ ಕಾವ್ಯದಲ್ಲೂ ಮಾದಪ್ಪ ಮಾದೇಶ್ವರನಾಗಿ ಮಹಾಪುರುಷನಾಗುತ್ತಾನೆ. ಓರ್ವ ಕ್ರಾಂತಿಕಾರಿಯಾಗಿ ಕೆಟ್ಟ ವ್ಯವಸ್ಥೆಯನ್ನು ಖಂಡಿಸಿ ಒಟ್ಟಾರೆ ಸಾಮಾಜಿಕ ಪ್ರಜ್ಞೆಯನ್ನು ತೋರಿಸಿ ವಸ್ತುಸ್ಥಿತಿಯ ಅರಿವುಂಟುಮಾಡುತ್ತಾನೆ. ಶ್ರವಣದೊರೆಯನ್ನು ಕೊಲ್ಲುವುದು ಇದಕ್ಕೊಂಡು ಉದಾಹರಣೆಯಾಗಿದೆ. ಸಂಕಮ್ಮ ಇಲ್ಲಿ ಕೇವಲ ತಾಯಿಯಾಗಲು ಇಚ್ಚಿಸದೆ ಮಹಾತಾಯಿಯಾಗಲು ಬಯಸುವ ಆಕೆಯ ಮನಸ್ಸಿನ ತುಡಿತವನ್ನು ಕಾಣಬಹುದು.

ಭಿಕ್ಷಾಟನೆ ಎಲ್ಲಾ ಧರ್ಮಗಳಲ್ಲೂ ಕಂಡುಬರುವ ಸಾಮಾನ್ಯ ಪ್ರಕ್ರಿಯೆ. ಏಕೆಂದರೆ ಭಿಕ್ಷಾ ಪಾತ್ರೆ ಭೂಮಿಯ ಸಂಕೇತ. ಅದರಲ್ಲಿ ಎಲ್ಲವನ್ನು ಹಾಕಬೇಕು. ಯಾವುದೇ ಭೇದ-ಭಾವವಿಲ್ಲದೆ ಎಲ್ಲರಿಂದಲೂ ಹಾಕಿಸಿಕೊಳ್ಳುವುದು ಸಮಷ್ಟಿ ಭಾವನೆಯುಳ್ಳದ್ದು. ಮಾದೇಶ್ವರನ ಗುಡ್ಡರಾಗಿ(ಶಿಶುಮಕ್ಕಳು) ಧೀಕ್ಷೆ ಪಡೆಯುವ ಮೂಲಕ ಸಮಾಜದಲ್ಲಿ ವಿಶೇಷ ಸ್ಥಾನ ಪಡೆಯುತ್ತಾರೆ. ಅಷ್ಟೇ ಅಲ್ಲ ಭಿಕ್ಷಾಟನೆಯನ್ನು ಮಾಡುತ್ತಾ ಬದುಕನ್ನು ಕಂಡುಕೊಳ್ಳುತ್ತಾರೆ. ಆ ಗುಡ್ಡರು ತೀರ್ಥಂಕರರಷ್ಟೆ ಮಹತ್ವ ಪಡೆದುಕೊಂಡಿದ್ದಾರೆ. ಸಮಾಜ ಇವರಿಗೆ ನೀಡಿರುವ ಮೌಲ್ಯ ದುರುಪಯೋಗ ಆಗದಂತೆ ಕಾಪಾಡಿಕೊಂಡು ಮುಂದುವರಿಸುವ ಅನಿವಾರ್ಯತೆ ಇದೆ. ಇಂದಿಗೂ ಗುಡ್ಡರನ್ನು ಅಷ್ಟೇ ಮಹತ್ವದ ವ್ಯಕ್ತಿಗಳನ್ನು ಗೌರವಿಸುವುದು ಮುಂದುವರಿದಿರುವುದನ್ನು ಕಾಣಬಹುದಾಗಿದೆ. ಇದರಲ್ಲಿ ಸಾರ್ವತ್ರಿಕ ಒಳಿತಿನ ಗುಣಾಂಶ ಇರುವುದರಿಂದಲೇ ಇಂದಿಗೂ ಪ್ರಸ್ತುತವಾಗಿದೆ.

ಅಧ್ಯಯನದ ದೃಷ್ಟಿಯಿಂದ ದಾಖಲಾತಿ ಕೆಲಸ ಅತ್ಯವಶ್ಯಕ. ಅಂಥ ಮಹತ್ವದ ಕೆಲಸವೊಂದು ಬುಡಕಟ್ಟು ಅಧ್ಯಯನದ ವಿಭಾಗದಲ್ಲಿ ನಡೆಯುವಂತೆ ಸಾಧ್ಯಮಾಡಿದ ನಮ್ಮ ನೆಚ್ಚಿನ ಕುಲಪತಿ ಡಾ. ಚಂದ್ರಶೇಖರ ಕಂಬಾರ ಅವರಿಗೂ ಮಲೆ ಮಾದೇಶ್ವರ ಕಾವ್ಯವನ್ನು ತನ್ನ ನೆನಪಿನ ಜೋಳಿಗೆಯಿಂದ ಅಳೆದು ಸುರಿದು ಒಂದು ಬೃಹತ್‌ಗ್ರಂಥವಾಗಿ ಹೊರಬರಲು ಕಾರಣಕರ್ತೃವಾದ ಹಿರಿಯ ಕಲಾವಿದ ಶ್ರೀ ಹೆಬ್ಬಣಿ ಮಾದಯ್ಯ ಮತ್ತು ಸಂಗಡಿಗರೆಲ್ಲರಿಗೂ.

ಕಾವ್ಯ ಸಂಪಾದನೆಯಲ್ಲಿ ಸಹಕರಿಸಿದ ನನ್ನ ಸಹೋದ್ಯೋಗಿಗಳಾದ ಚಲುವರಾಜು, ಗಂಗಾಧರ ಮೋಹನಾಚಾರ್ ದೈವಜ್ಞ, ಪ್ರೊ. ಎ.ವಿ. ನಾವಡ, ಡಾ. ಕೆ.ಎಂ. ಮೈತ್ರಿ, ಎ.ಎಸ್‌. ಪ್ರಭಾಕರ, ಚಂಗಪ್ಪ ಚಂಗನ್‌ಪೂವಯ್ಯ, ವಿದ್ಯಾರ್ಥಿ ಮಿತ್ರರಾದ ಕುಶಾಲ, ಸಿದ್ದರಾಜು ಮತ್ತು ಪಿ. ಸತೀಶ್‌ಇವರಿಗೂ.

ಬುಡಕಟ್ಟು ಮಹಾಕಾವ್ಯ ಮಾಲೆ ಸಂಪಾದನೆ ಕೆಲಸ ಬಹಳ ಯಶಶ್ವಿಯಾಗಿ ನಡೆಯಲನುವು ಮಾಡಿದ ಬುಡಕಟ್ಟು ಅಧ್ಯಯನ ವಿಭಾಗದ ಮುಖ್ಯಸ್ಥರು ಹಾಗೂ ಪ್ರಾಧ್ಯಾಪಕರಾದ ಪ್ರೊ.ಹಿ.ಚಿ. ಬೋರಲಿಂಗಯ್ಯ ಅವರು ಅರ್ಥಪೂರ್ಣವಾದ ಪ್ರಸ್ತಾವನೆ ಬರೆದಿದ್ದಾರೆ, ಅವರಿಗೂ.

ಕನ್ನಡ ವಿಶ್ವವಿದ್ಯಾಲಯದ ಸಹೋದ್ಯೋಗಿ ಸ್ನೇಹಿತಯರಿಗೆಲ್ಲ ನನ್ನ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.

ಕೇಶವನ್‌ಪ್ರಸಾದ್‌ಕೆ.