Categories
e-ದಿನ

ಮಾರ್ಚ್-04

ಪ್ರಮುಖಘಟನಾವಳಿಗಳು:

51: ಮುಂದೆ ರೋಮ್ ಚಕ್ರವರ್ತಿಯಾದ ನೀರೋ ‘ಯುವಕರ ನಾಯಕ’ ಎಂಬ ಬಿರುದು ಪಡೆದ.

1493: ಈಗಿನ ಬಹಾಮಾಸ್ ಎಂದು ಕರೆಯುವ ಪ್ರದೇಶ ಮತ್ತು ಕ್ಯಾರಿಬಿಯನ್ ದ್ವೀಪಗಳ ಅನ್ವೇಷಣೆಯ ನಂತರದಲ್ಲಿ ನಾವಿಕ ಕ್ರಿಸ್ತೋಫರ್ ಕೊಲಂಬಸ್ ಅವರು ತಮ್ಮ ನೀನಾ ಹಡಗಿನಲ್ಲಿ ಪೋರ್ಚುಗಲ್ಲಿನ ಲಿಸ್ಬನ್ ನಗರಕ್ಕೆ ಹಿಂದಿರುಗಿದರು.

1675: ಜಾನ್ ಫ್ಲಾಮ್ ಸ್ಟೀಡ್ ಅವರು ಇಂಗ್ಲೆಂಡಿನ ಪ್ರಥಮ ಅಸ್ಟ್ರಾನಮರ್ ರಾಯಲ್ ಎಂದು ನೇಮಕಗೊಂಡರು.

1681: ಉತ್ತರ ಅಮೆರಿಕದಲ್ಲಿ ವಸಾಹತು ಸ್ಥಾಪನೆಗಾಗಿ ಎರಡನೇ ಚಾರ್ಲ್ಸ್ ಅವರು ವಿಲ್ಲಿಯಮ್ ಪೆನ್ ಅವರಿಗೆ ಅಧಿಕಾರ ಪತ್ರ ನೀಡಿದರು. ಮುಂದೆ ಈ ಪ್ರದೇಶ ಪೆನ್ಸಿಲ್ವೇನಿಯಾ ಎನಿಸಿತು.

1789: ಅಮೆರಿಕದ ಸಂವಿಧಾನಕ್ಕೆ ಚಾಲನೆ ನೀಡುವ ಅಮೆರಿಕದ ಪ್ರಥಮ ಕಾಂಗ್ರೆಸ್ ಅಧಿವೇಶನ ನ್ಯೂಯಾರ್ಕ್ ನಗರದಲ್ಲಿ ನಡೆಯಿತು. ಅಮೆರಿಕದ ‘ಬಿಲ್ ಆಫ್ ರೈಟ್ಸ್’ ಲಿಖಿತಗೊಂಡು ಕಾಂಗ್ರೆಸ್ ಮುಂದೆ ಪ್ರಸ್ತಾಪಿಸಲ್ಪಟ್ಟಿತು.

1811: ಜಾನ್ ಲೈರ್ಡ್ ಮೈರ್ ಲಾರೆನ್ಸ್ ನಾರ್ತ್ ಯಾರ್ಕ್ ಶೈರಿನ ರಿಚ್ಮಂಡ್ ಎಂಬಲ್ಲಿ ಜನಿಸಿದರು. ಬ್ರಿಟಿಷ್ ವೈಸ್ ರಾಯ್ ಹಾಗೂ ಭಾರತದ ಗವರ್ನರ್ ಜನರಲ್ ಆಗಿದ್ದ ಉವರಿ ಸರ್ ಜಾನ್ ಲಾರೆನ್ಸ್ ಎಂದು ಪ್ರಖ್ಯಾತರಾಗಿದ್ದರು. ಇವರು ಪಂಜಾಬಿನಲ್ಲಿ ವ್ಯಾಪಕ ಸುಧಾರಣೆಗಳನ್ನು ಜಾರಿಗೊಳಿಸಿದ್ದರು.

1865: ಅಮೆರಿಕದಲ್ಲಿ ಮೂರನೆಯ ಮತ್ತು ಕೊನೆಯ ರಾಷ್ಟ್ರೀಯ ಧ್ವಜವು ಕಾಂಗ್ರೆಸ್ ಇಂದ ಅಂಗೀಕೃತವಾಯಿತು.

1854: ಸರ್ ವಿಲಿಯಂ ನೇಪಿಯರ್ ಶಾ ಇಂಗ್ಲೆಂಡಿನ ಬರ್ಮಿಂಗ್ ಹ್ಯಾಮ್ ಎಂಬಲ್ಲಿ ಜನಿಸಿದರು. ಇಂಗ್ಲಿಷ್ ಹವಾಮಾನ ತಜ್ಞರಾದ ಈತ ಗಾಳಿಯ ಒತ್ತಡ ಕಂಡು ಹಿಡಿಯಲು ‘ಮಿಲಿಬಾರ್’ ಸಂಶೋಧಿಸಿದರು. ಇದೇ ಮುಂದೆ ಆಧುನಿಕ ಹವಾಮಾನ ವಿಜ್ಞಾನದ ಅಭಿವೃದ್ಧಿಗೆ ಅಪಾರ ಕಾಣಿಕೆ ನೀಡಿತು.

1858: ಜೆ.ಪಿ. ವಾಕರ್ ಇನ್ನೂರು ಮಂದಿ ಖೈದಿಗಳೊಂದಿಗೆ ಅಂಡಮಾನ್ ದ್ವೀಪಗಳಿಗೆ ಹೊಸ ವಸತಿ ವ್ಯವಸ್ಥೆ ಆರಂಭಿಸುವ ಸಲುವಾಗಿ ಹೊರಟರು. ಆತನ ಜೊತೆಗೆ ಇದ್ದ ಖೈದಿಗಳಲ್ಲಿ ಹೆಚ್ಚಿನ ಮಂದಿ ಹಿಂದಿನ ವರ್ಷ ನಡೆದ ‘ಸಿಪಾಯಿ ದಂಗೆ’ಯ ಖೈದಿಗಳಾಗಿದ್ದರು. ಜೊತೆಗೆ ಇಬ್ಬರು ವೈದ್ಯರೂ ಈ ತಂಡದೊಂದಿಗೆ ಇದ್ದರು.

1890: ಗ್ರೇಟ್ ಬ್ರಿಟನ್ನಿನ ಅತ್ಯಂತ ಉದ್ದದ ಸೇತುವೆಯಾದ, 1710 ಅಡಿ ಉದ್ದದ ಸ್ಕಾಟ್ಲೆಂಡಿನ ‘ಫಾರ್ತ್ ಬ್ರಿಡ್ಜ್’ ಅನ್ನು ಪ್ರಿನ್ಸ್ ಆಫ್ ವೇಲ್ಸ್ ಉದ್ಘಾಟಿಸಿದರು. ಇದು ಸ್ಕಾಟ್ಲೆಂಡಿನ ಎಡಿನ್ಬರ್ಗ್ ಎಂಬಲ್ಲಿದೆ.

1951: ನವದೆಹಲಿಯಲ್ಲಿ ಮೊದಲ ಏಷ್ಯನ್ ಗೇಮ್ಸ್ ಆರಂಭವಾಯಿತು. 11 ರಾಷ್ಟ್ರಗಳ 489 ಕ್ರೀಡಾಪಟುಗಳು ಪಾಲ್ಗೊಂಡಿದ್ದರು.

1961: ಭಾರತದ ಮೊದಲ ವಿಮಾನ ವಾಹಕ ನೌಕೆ ‘ಐ ಎನ್ ಎಸ್ ವಿಕ್ರಾಂತ್’ಗೆ ಬೆಲ್ ಫಾಸ್ಟ್ನಲ್ಲಿ ಇಂಗ್ಲೆಂಡಿನ ಭಾರತದ ಹೈಕಮೀಷನರ್ ವಿಜಯಲಕ್ಷ್ಮಿ ಪಂಡಿತ್ ಔಪಚಾರಿಕವಾಗಿ ಚಾಲನೆ ನೀಡಿ, ಭಾರತ ಸರ್ಕಾರದ ಪರವಾಗಿ ಇದನ್ನು ಸ್ವೀಕರಿಸಿದರು.

1968: ಟೆನಿಸ್ ಅಧಿಕಾರಿಗಳು ವಿಂಬಲ್ಡನ್ನಿನಲ್ಲಿ ವೃತ್ತಿಪರ ಆಟಗಾರರಿಗೆ ಪ್ರವೇಶ ಕಲ್ಪಿಸಿದರು. ಇದಕ್ಕೆ ಮೊದಲು ವಿಂಬಲ್ಡನ್ನಿಗೆ ಹವ್ಯಾಸಿ ಆಟಗಾರರಿಗೆ ಮಾತ್ರ ಪ್ರವೇಶವಿತ್ತು.

1974: ‘ಪೀಪಲ್’ ಮ್ಯಾಗಜೈನ್ ಮೊದಲಬಾರಿಗೆ ಅಮೆರಿಕದಲ್ಲಿ ವಾರಪತ್ರಿಕೆಯಾಗಿ ಪ್ರಕಟಗೊಂಡಿತು.

1986: ‘ಸೋವಿಯತ್ ವೇಗ 1’ ಉಪಗ್ರಹವು ಹ್ಯಾಲಿ ಕಾಮೆಟ್ ಮತ್ತು ಅವುಗಳ ಕೇಂದ್ರದ ಚಿತ್ರಗಳನ್ನು ಕಳುಹಿಸಲು ಆರಂಭಿಸಿತು.

2006: ವಿಶ್ವಸಂಸ್ಥೆಯ ಮಹಾಪ್ರಧಾನ ಕಾರ್ಯದರ್ಶಿ ಕೋಫಿ ಅನ್ನಾನ್ ಅವರ ವಿಶೇಷ ಸಲಹೆಗಾರರಾಗಿ ಭಾರತೀಯ ರಾಜತಂತ್ರಜ್ಞ ಮತ್ತು ರಾಷ್ಟ್ರೀಯ ಭದ್ರತಾ ಉಪ ಸಲಹೆಗಾರ ವಿಜಯ ನಂಬಿಯಾರ್ ನೇಮಕಗೊಂಡರು.

2007: ಮೂರು ವರ್ಷಗಳ ಅವಧಿಯಲ್ಲಿ ಇದೇ ಮೊದಲ ಬಾರಿಗೆ ಮಾರ್ಚ್ 3ರ ರಾತ್ರಿ ಮತ್ತು ಮಾರ್ಚ್ 4ರ ಮುಂಜಾನೆ ಸಂಭವಿಸಿದ ಸಂಪೂರ್ಣ ಚಂದ್ರಗ್ರಹಣ ಕಾಲದಲ್ಲಿ ಕಡು ಕೆಂಪು ಬಣ್ಣದಲ್ಲಿ ಕಂಗೊಳಿಸಿದ ಚಂದ್ರನನ್ನು ಕಂಡು ಜಗತ್ತಿನಾದ್ಯಂತ ಖಗೋಳ ವೀಕ್ಷಕರು ಮತ್ತು ಖಗೋಳವಿಜ್ಞಾನಿಗಳು ಸಂಭ್ರಮಿಸಿದರು. ಭಾರತೀಯ ಕಾಲಮಾನ ನಸುಕಿನ 1.48 ಗಂಟೆ (ಜಿಎಂಟಿ ಕಾಲಮಾನ ಶನಿವಾರ 20.18 ಗಂಟೆ) ಸಮಯದಲ್ಲಿ ಆರಂಭವಾದ ಚಂದ್ರಗ್ರಹಣ ಯುರೋಪ್, ಆಫ್ರಿಕಾ, ದಕ್ಷಿಣ ಅಮೆರಿಕ ಮತ್ತು ಅಮೆರಿಕ ಹಾಗೂ ಕೆನಡಾದ ಪೂರ್ವ ಭಾಗಗಳಲ್ಲಿ ಕಾಣಿಸಿತು. ಭಾರತದ ಕೆಲವು ಭಾಗಗಳಲ್ಲಿ ಮಾತ್ರ ಈ ಚಂದ್ರಗ್ರಹಣ ಕಾಣಿಸಿತು.

2008: ಮೂವತ್ತೈದು ವರ್ಷಗಳಷ್ಟು ಸುದೀರ್ಘ ಕಾಲ ಪಾಕಿಸ್ಥಾನ ಜೈಲಿನಲ್ಲಿ ಬಂಧಿಯಾಗಿದ್ದ ಕಾಶ್ಮೀರ ಸಿಂಗ್ ಬಿಡುಗಡೆ ಹೊಂದಿ ವಾಘಾ ಗಡಿ ದಾಟಿ ಪತ್ನಿಯನ್ನು ಸಂಧಿಸಿದರು. 67 ವರ್ಷದ ಸಿಂಗ್ 1973ರಲ್ಲಿ ಗೂಢಚರ್ಯೆ ಆಪಾದನೆಗಾಗಿ ಪಾಕಿಸ್ಥಾನ ಸರ್ಕಾರದಿಂದ ಬಂಧನಕ್ಕೆ ಒಳಗಾಗಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿದ್ದರು, ಆದರೆ ಈ ತೀರ್ಪು ಜಾರಿಯಾಗಿರಲಿಲ್ಲ. ಕಳೆದ ಫೆಬ್ರುವರಿಯಲ್ಲಿ ಅಧ್ಯಕ್ಷ ಪರ್ವೇಜ್ ಮುಷರಫ್ ಅವರು ಸಿಂಗ್ ಅವರಿಗೆ ಕ್ಷಮಾದಾನ ನೀಡಿದ್ದರು.

2008: ಬೆಳಗಾವಿ ಮಹಾನಗರಪಾಲಿಕೆಯ ಕನ್ನಡ ಭಾಷಿಕ ಮೊದಲ ಮಹಿಳಾ ಮೇಯರ್ ಆಗಿ ಪ್ರಶಾಂತಾ ಬುಡವಿ, ಉಪಮೇಯರ್ ಆಗಿ ಯೂನುಸ್ ಮೋಮಿನ್ ಆಯ್ಕೆಯದರು. ಇದರೊಂದಿಗೆ ಹದಿನಾರು ವರ್ಷಗಳ ನಂತರ ಕನ್ನಡ ಭಾಷಿಕ ಅಭ್ಯರ್ಥಿಯೊಬ್ಬರಿಗೆ ಮೇಯರ್ ಪಟ್ಟ ಲಭಿಸಿತು. ಈ ಮೊದಲು 1991ರಲ್ಲಿ ಸಿದ್ಧನಗೌಡ ಪಾಟೀಲ ಅವರು ಕನ್ನಡದ ಪ್ರಥಮ ಮೇಯರ್ ಆಗಿ ಆಯ್ಕೆಯಾಗಿದ್ದರು.

2009: ಬ್ರಹ್ಮೋಸ್ ಕ್ಷಿಪಣಿಯ ಪರೀಕ್ಷಾರ್ಥ ಪ್ರಯೋಗ ರಾಜಸ್ಥಾನದ ಮರುಭೂಮಿಯಲ್ಲಿರುವ ಪೋಖ್ರಾನ್‌ನಲ್ಲಿ ಯಶಸ್ವಿಯಾಗಿ ನಡೆಯಿತು. ‘ಬೆಳಗ್ಗೆ 10.30 ಸುಮಾರಿಗೆ ಎರಡನೇ ಮಾದರಿಯ ಬ್ರಹ್ಮೋಸ್ ಕ್ಷಿಪಣಿಯನ್ನು ಉಡಾಯಿಸಲಾಯಿತು. ಎರಡೂವರೆ ನಿಮಿಷದಲ್ಲಿ ಅದು ಗುರಿ ತಲುಪಿತು’ ಎಂದು ರಷ್ಯಾದ ವಿಜ್ಞಾನಿಗಳೊಂದಿಗೆ ಸೇರಿ ಅದನ್ನು ಅಭಿವೃದ್ಧಿಪಡಿಸಿದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಘಟನೆಯ (ಡಿಆರ್‌ಡಿಓ) ಅಧಿಕಾರಿಗಳು ಮಾಹಿತಿ ನೀಡಿದರು.

ಪ್ರಮುಖಜನನ/ಮರಣ:

1903: ಸಂಗೀತ ವಿದ್ವಾಂಸರೂ ಮತ್ತು ಮಹಾನ್ ವೈಣಿಕರೂ ಆದ ಆರ್.ಎಸ್. ಕೇಶವಮೂರ್ತಿ ಅವರು ಬೇಲೂರಿನಲ್ಲಿ ಜನಿಸಿದರು. ಧ್ವನಿವರ್ಧಕ ಸಾಧನಗಳಿಲ್ಲದ ಕಾಲದಲ್ಲಿ ವೀಣೆಯ ನಾದವನ್ನು ಹೆಚ್ಚಿಸುವುದರ ಬಗ್ಗೆ ಸಂಶೋಧನೆ ನಡೆಸಿ, ಇಪ್ಪತ್ನಾಲ್ಕು ತಂತಿಗಳ ವೀಣೆಯನ್ನು ಪ್ರಥಮವಾಗಿ ರಚಿಸಿದ ಇವರು ಪಿಟೀಲು ಕೊಳಲು, ಜಲತರಂಗ್‌, ಪಿಯಾನೋ, ಬಾಲಕೋಕಿಲ ವಾದ್ಯಗಳನ್ನು ಸಹ ನುಡಿಸುತ್ತಿದ್ದರು. ನಾಲ್ವಡಿ ಕೃಷ್ಣರಾಜ ಒಡೆಯರ್ ಆಸ್ಥಾನ ವಿದ್ವಾಂಸರಾಗಿದ್ದ ಇವರ ವೀಣಾವಾದನಕ್ಕೆ ಗಾಂಧೀಜಿಯವರೂ ಮಾರುಹೋಗಿದ್ದರು. 1971ರಲ್ಲಿ ಗಾನಕಲಾ ಪರಿಷತ್ತಿನ ಸಂಗೀತ ವಿದ್ವಾಂಸರ ಸಮ್ಮೇಳನದ ಅಧ್ಯಕ್ಷರಾಗಿದ್ದ ಮೂರ್ತಿಗಳಿಗೆ ಗಾನಕಲಾಭೂಷಣ ಪ್ರಶಸ್ತಿ ಸಂದಿತು.

1906:  ಅಮೆರಿಕನ್ ಪಿಟೀಲು ವಾದಕ, ತಂತ್ರಜ್ಞ ಮತ್ತು ಫಿಷರ್ ಎಲೆಕ್ಟ್ರಾನಿಕ್ಸ್ ಸ್ಥಾಪಕ ಏವರಿ ಫಿಷರ್ ನ್ಯೂಯಾರ್ಕಿನ ಬ್ರೂಕ್ಲಿನ್ ಎಂಬಲ್ಲಿ ಜನಿಸಿದರು.

1967: ಚಲನಚಿತ್ರ ಕಲಾವಿದೆ ತಾರಾ ಅವರು ಅನುರಾಧಾ ಎಂಬ ಹೆಸರಿನಿಂದ ಬೆಂಗಳೂರಿನಲ್ಲಿ ಜನಿಸಿದರು. ಬಹಳ ವರ್ಷಗಳ ಕಾಲ ರಾಷ್ಟ್ರಮಟ್ಟದ ನಟನಾ ಪ್ರಶಸ್ತಿಗಳಲ್ಲಿ ಕನ್ನಡ ಚಿತ್ರರಂಗದ ಹೆಸರು ಮರೆತುಹೋಗಿದ್ದ ಸಮಯದಲ್ಲಿ, ತಾರಾ ಅವರು ತಮ್ಮ ‘ಹಸೀನಾ’ ಚಿತ್ರದ ಅಭಿನಯದ ಮೂಲಕ ಅದನ್ನು ಕನ್ನಡಕ್ಕೆ ಮತ್ತೊಮ್ಮೆ ತಂದರು. ‘ಕ್ರಮ’, ‘ಕರಿಮಲೆಯ ಕಗ್ಗತ್ತಲು’, ‘ಕಾನೂರು ಹೆಗ್ಗಡತಿ’, ‘ಮುಂಜಾನೆಯ ಮಂಜು’, ‘ನಿನಗಾಗಿ’, ‘ಸಯನೈಡ್’, ‘ಈ ಬಂಧನ’ ಹೀಗೆ ಹಲವು ಚಲನಚಿತ್ರಗಳಲ್ಲಿ ರಾಜ್ಯ ಪ್ರಶಸ್ತಿ ಪಡೆದ ತಾರಾ ಚಲನಚಿತ್ರ ಅಕಾಡೆಮಿ ಅಧ್ಯಕ್ಷರಾಗಿ ಮತ್ತು ವಿಧಾನ ಪರಿಷತ್ ಸದಸ್ಯರಾಗಿ ಸಹಾ ಸೇವೆ ಸಲ್ಲಿಸಿದ್ದಾರೆ.

1980: ಅಂತರರಾಷ್ಟ್ರೀಯ ಟೆನಿಸ್ ಆಟಗಾರ ರೋಹನ್ ಬೋಪಣ್ಣ ಅವರು ಬೆಂಗಳೂರಿನಲ್ಲಿ ಜನಿಸಿದರು. ಕೊಡಗಿನ ಮೂಲದವರಾದ ಇವರು ಪಾಕಿಸ್ಥಾನದ ತಮ್ಮ ಗೆಳೆಯ ಆಯಿಸಂ ಉಲ್ ಹಕ್ ಖುರೇಷಿ ಜೊತೆಗೂಡಿ ವಿಶ್ವ ಟೆನ್ನಿಸ್ ಡಬಲ್ಸ್ ಕ್ರೀಡೆಯಲ್ಲಿ ಪ್ರತಿಷ್ಟಿತ ಸಾಧನೆ ಮಾಡಿದ್ದಾರೆ. ಈ ಜೋಡಿ ‘ಇಂಡೋ ಪಾಕ್ ಎಕ್ಸ್ ಪ್ರೆಸ್’ ಎಂದು ಹೆಸರು ಮಾಡಿದ್ದರು. ಇದರಲ್ಲಿ 2010 ವರ್ಷದ ಯು ಎಸ್ ಓಪನ್ ಸ್ಪರ್ಧೆಯಲ್ಲಿ ಫೈನಲ್ ಪ್ರವೇಶ, 2010 ವಿಂಬಲ್ಡನ್ ಸ್ಪರ್ಧೆಯಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶ, 2011 ಫ್ರೆಂಚ್ ಓಪನ್ ಸ್ಪರ್ಧೆಯಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶ ಮುಂತಾದ ಸಾಧನೆಗಳು ಸೇರಿವೆ.

1986: ಬ್ರೆಜಿಲಿಯನ್-ಅಮೇರಿಕನ್ ಕಂಪ್ಯೂಟರ್ ತಂತ್ರಜ್ಞ ಮತ್ತು ಉದ್ಯಮಿ ‘ಇನ್ಸ್ಟಾಗ್ರಾಮ್’ ಸ್ಥಾಪಕ ಮೈಕ್ ಕ್ರೀಗರ್ ಬ್ರೆಜಿಲ್ ದೇಶದ ಸಾಲ್ ಪಾಲೋ ಎಂಬಲ್ಲಿ ಜನಿಸಿದರು.

1939: ಭಾರತೀಯ ಕ್ರಾಂತಿಕಾರಿ ನಾಯಕ, ವಿದ್ವಾಂಸ ಲಾಲಾ ಹರದಯಾಳ್ ತಮ್ಮ 54ನೇ ವಯಸ್ಸಿನಲ್ಲಿ ನಿಧನರಾದರು. 1911ರಲ್ಲಿ ಅಮೆರಿಕಕ್ಕೆ ತೆರಳಿ ಸ್ಯಾನ್ ಫೋರ್ಡ್ ವಿಶ್ವವಿದ್ಯಾಲಯದಲ್ಲಿ ತತ್ವಶಾಸ್ತ್ರದ ಪ್ರಾಧ್ಯಾಪಕರಾದ ಅವರು ಈ ಸಮಯದಲ್ಲೇ ‘ಘದರ್’ ಪಕ್ಷವನ್ನು ಸ್ಥಾಪಿಸಿ ಆರು ಭಾಷೆಗಳಲ್ಲಿ ಗದ್ದಾರ್ ಪತ್ರಿಕೆಯನ್ನು ಪ್ರಕಟಿಸಿದ್ದರು. 1987ರಲ್ಲಿ ಭಾರತ ಸರ್ಕಾರ ಹರದಯಾಳ್ ನೆನಪಿಗಾಗಿ ಇವರ ಭಾವಚಿತ್ರದೊಂದಿಗೆ ಅಂಚೆ ಚೀಟಿಯನ್ನು ಪ್ರಕಟಿಸಿತು.

1941: ಜರ್ಮನಿಯ ಕಾರ್ಯಕರ್ತ ಮತ್ತು ರಾಜಕಾರಣಿ ಲುಡ್ವಿಗ್ ಕ್ವಿಡ್ಡೆ ಜಿನೀವಾದಲ್ಲಿ ನಿಧನರಾದರು. 1927 ವರ್ಷದಲ್ಲಿ ಅವರಿಗೆ ನೊಬೆಲ್ ಶಾಂತಿ ಪುರಸ್ಕಾರ ಸಂದಿತ್ತು.

1952: ಇಂಗ್ಲಿಷ್ ವೈದ್ಯಶಾಸ್ತ್ರ ವಿಜ್ಞಾನಿ ಚಾರ್ಲ್ಸ್ ಸ್ಕಾಟ್ ಷೆರಿಂಗ್ಟನ್ ಅವರು ಸಸೆಕ್ಸ್ ಬಳಿಯ ಈಸ್ಟ್ ಬೌರ್ನೆ ಎಂಬಲ್ಲಿ ನಿಧನರಾದರು. ನ್ಯೂರಾನ್ಸ್ ಕುರಿತಾದ ಸಂಶೋಧನೆಗೆ ಇವರಿಗೆ 1932 ವರ್ಷದಲ್ಲಿ ನೊಬೆಲ್ ವೈದ್ಯ ಶಾಸ್ತ್ರದ ಪ್ರಶಸ್ತಿ ಸಂದಿತ್ತು.

1952: ಡಚ್-ಸ್ವಿಸ್ ಭೌತವಿಜ್ಞಾನಿ ಸೈಮನ್ ವ್ಯಾನ್ ಡೆರ್ ಮೀರ್ ಅವರು ಜಿನೀವಾ ನಗರದಲ್ಲಿ ನಿಧನರಾದರು. ‘CERN’ ಯೋಜನೆಯಲ್ಲಿ ಇವರ ಅಮೂಲ್ಯ ಕೊಡುಗೆಗಾಗಿ 1984 ವರ್ಷದಲ್ಲಿ ನೊಬೆಲ್ ಭೌತಶಾಸ್ತ್ರದ ಪ್ರಶಸ್ತಿ ಸಂದಿತ್ತು.

2016: ಲೋಕಸಭಾ ಸ್ಪೀಕರ್ ಆಗಿದ್ದ ಪಿ.ಎ. ಸಂಗ್ಮಾ ಅವರು ನವದೆಹಲಿಯಲ್ಲಿ ನಿಧನರಾದರು. ಅವರು ಮೇಘಾಲಯದ ಮುಖ್ಯ ಮಂತ್ರಿಗಳಾಗಿ ಮತ್ತು ಕೇಂದ್ರ ಸಚಿವರಾಗಿ ಸಹಾ ಸೇವೆ ಸಲ್ಲಿಸಿದ್ದರು.