Categories
e-ದಿನ

ಮಾರ್ಚ್-17

ಪ್ರಮುಖಘಟನಾವಳಿಗಳು:

ಕ್ರಿಸ್ತ ಪೂರ್ವ 45: ಜೂಲಿಯಸ್ ಸೀಸರನು ತನ್ನ ಕೊನೆಯ ವಿಜಯವಾದ ‘ಬ್ಯಾಟಲ್ ಆಫ್ ಮುಂಡಾ’ದಲ್ಲಿ ಟೈಟಸ್ ಲೆಬೀನಸ್ ಮತ್ತು ಪಾಂಪಿ ದಿ ಯಂಗರ್ ನೇತೃತ್ವದ ‘ಪಾಂಪೀಯನ್’ ಪಡೆಯನ್ನು ಸೋಲಿಸಿದನು.

1805: ನೆಪೋಲಿಯನ್ ಅಧ್ಯಕ್ಷನಾಗಿದ್ದ ‘ಇಟಾಲಿಯನ್ ರಿಪಬ್ಲಿಕ್’, ಆತ ರಾಜನಾದ ‘ಕಿಂಗ್ಡಂ ಆಫ್ ಇಟಲಿ’ ಎಂದು ಬದಲಾಯಿತು.

1941: ಅಮೆರಿಕದ ‘ನ್ಯಾಷನಲ್ ಗ್ಯಾಲರಿ ಆಫ್ ಆರ್ಟ್’ ಅನ್ನು ಅಧ್ಯಕ್ಷ ಫ್ರಾಂಕ್ಲಿನ್ ರೂಸ್ವೆಲ್ಟ್ ಅವರು ವಾಷಿಂಗ್ಟನ್ ನಗರದಲ್ಲಿ ಅಧಿಕೃತವಾಗಿ ಉದ್ಘಾಟಿಸಿದರು.

1959: ‘ದಲೈ ಲಾಮಾ’ ಆದ ಟೆನ್ಸಿನ್ ಗ್ಯಾಟ್ಸೋ ಅವರು ಟಿಬೆಟ್ ತ್ಯಜಿಸಿ ಭಾರತಕ್ಕೆ ಆಗಮಿಸಿದರು. ಅವರಿಗೆ 1959ರ ಮಾರ್ಚ್ 31ರಂದು ಭಾರತದಲ್ಲಿ ರಾಜಕೀಯ ಆಶ್ರಯ ನೀಡಲಾಯಿತು.

1919: ‘ಬಾಲಿ’ಯಲ್ಲಿ ಮೌಂಟ್ ಆಗಂಗ್ ಸ್ಪೋಟಗೊಂಡು 1,100 ಜನರು ಮೃತರಾದರು

1968: ಊಟಾಹ್ನಲ್ಲಿನ ಸ್ಕಲ್ ವ್ಯಾಲಿಯಲ್ಲಿ ನರ್ವ್ ಗ್ಯಾಸ್ ಪರೀಕ್ಷೆಯ ಕಾರಣದಿಂದಾಗಿ ಆ ಪ್ರದೇಶದಲ್ಲಿನ ಆರು ಸಾವಿರಕ್ಕೂ ಹೆಚ್ಚು ಕುರಿಗಳು ಸತ್ತುಬಿದ್ದವು.

1969: ತಮ್ಮ 70ನೇ ವಯಸ್ಸಿನಲ್ಲಿ ಇಸ್ರೇಲ್ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಗೋಲ್ಡಾ ಮೀರ್ ಅವರು, ಆ ದೇಶದಲ್ಲಿ ಪ್ರಧಾನಿ ಹುದ್ದೆಗೆ ಏರಿದ ಪ್ರಪ್ರಥಮ ಮಹಿಳೆ ಎನಿಸಿದರು.

1973: ಈ ದಿನದಂದು ಪುಲಿಟ್ಸರ್ ಬಹುಮಾನ ವಿಜೇತ ‘ಬರ್ಸ್ಟ್ ಆಫ್ ಜಾಯ್’ ಚಿತ್ರದ ಛಾಯಾಗ್ರಹಣವಾಯಿತು. ಯುದ್ಧ ಖೈದಿಯೊಬ್ಬ ಯುದ್ಧಾನಂತರದಲ್ಲಿ ತನ್ನ ಕುಟುಂಬವನ್ನು ಕೂಡಿಕೊಳ್ಳುವ ಚಿತ್ರಣ ಇದರಲ್ಲಿದ್ದು, ಅಮೆರಿಕ ದೇಶವು ಪಾಲ್ಗೊಂಡಿದ್ದ ವಿಯೇಟ್ನಾಂ ಯುದ್ಧದ ಅಂತ್ಯವನ್ನು ಈ ಚಿತ್ರ ಸೂಚಿಸುತ್ತಿತ್ತು.

1992: ವರ್ಣಭೇದ ನೀತಿಯನ್ನು ಅಂತ್ಯಗೊಳಿಸುವುದಕ್ಕೆ ದಕ್ಷಿಣ ಆಫ್ರಿಕಾದಲ್ಲಿ ನಡೆಸಲಾದ ಜನಾಭಿಪ್ರಾಯ ಸಂಗ್ರಹಣಾ ‘ರೆಫೆರೆಂಡಮ್’ 68.7% ಪರವಾದ ಮತಗಳಿಂದ ಅಂಗೀಕೃತಗೊಂಡಿತು. ಇದಕ್ಕೆ ವಿರುದ್ಧವಾದ ಮತಗಳು ಶೇಕಡಾ 31.2 ಮಾತ್ರಾ ಇದ್ದವು.

2006: ದೀಪಾ ಮೆಹ್ತಾ ಅವರ ‘ವಾಟರ್’ ಚಿತ್ರದಲ್ಲಿನ ಅಭಿನಯಕ್ಕಾಗಿ ಖ್ಯಾತ ನಟಿ ಸೀಮಾ ಬಿಸ್ವಾಸ್ ಅವರಿಗೆ ಕೆನಡಾದಲ್ಲಿ ನಡೆದ ಅಂತರರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ‘ಅತ್ಯುತ್ತಮ ನಟಿ’ (‘ಬೆಸ್ಟ್ ಅ್ಯಕ್ಟ್ರೆಸ್ ಜೆನೀ’) ಪ್ರಶಸ್ತಿ ಲಭಿಸಿತು.

2007: ಅಮಾನತುಗೊಂಡ ಪಾಕಿಸ್ಥಾನದ ಮುಖ್ಯ ನ್ಯಾಯಮೂರ್ತಿ ಇಫ್ತಿಕಾರ್ ಮೊಹಮ್ಮದ್ ಚೌಧುರಿ ಅವರ ಸ್ಥಾನಕ್ಕೆ ರಾಣಾ ಭಗವಾನ್ ದಾಸ್ ಅವರನ್ನು ಹಂಗಾಮಿಯಾಗಿ ನೇಮಿಸಿರುವುದಾಗಿ ಪಾಕಿಸ್ಥಾನ ಸರ್ಕಾರ ಪ್ರಕಟಿಸಿತು. ರಾಣಾ ಭಗವಾನ್ ದಾಸ್ ಅವರು ಪಾಕ್ ಸುಪ್ರೀಂಕೋರ್ಟಿನ ಏಕೈಕ ಹಿಂದೂ ನ್ಯಾಯಾಧೀಶರೆನಿಸಿದ್ದಾರೆ.

2007: ಮಿತ್ರಪಕ್ಷಗಳ ಒತ್ತಡಕ್ಕೆ ಮಣಿದು ಪಶ್ಚಿಮ ಬಂಗಾಳದ ಎಡರಂಗ ಸರ್ಕಾರವು ನಂದಿಗ್ರಾಮದಲ್ಲಿ ಭೂಸ್ವಾಧೀನವನ್ನು ತತ್ ಕ್ಷಣವೇ ಸ್ಥಗಿತಗೊಳಿಸಿ, ಪೊಲೀಸ್ ಪಡೆಯನ್ನು ಹಿಂದಕ್ಕೆ ಕರೆಸಿಕೊಳ್ಳಲು ನಿರ್ಧರಿಸಿತು.

2009: ಇನ್ನು ಮುಂದೆ ತಂಬಾಕು (ಸಿಗರೇಟ್) ಕಂಪೆನಿಗಳು ಪ್ರಶಸ್ತಿ ಪ್ರದಾನ ಸಮಾರಂಭ, ಕ್ರೀಡಾಕೂಟಗಳನ್ನು ಪ್ರಾಯೋಜಿಸುವಂತಿಲ್ಲ! ತಂಬಾಕು ಕಂಪೆನಿಗಳು ಪ್ರಚಾರ ಗಿಟ್ಟಿಸುವುದನ್ನು ತಡೆಯುವ ನಿಟ್ಟಿನಲ್ಲಿ ಈ ಕಂಪೆನಿಗಳು ಕಾರ್ಯಕ್ರಮಗಳ ಪ್ರಾಯೋಜಕತ್ವ ವಹಿಸುವುದನ್ನು ಕೇಂದ್ರ ಸರ್ಕಾರ ನಿಷೇಧಿಸಿತು.

ಪ್ರಮುಖಜನನ/ಮರಣ:

1864: ಸ್ವಾತಂತ್ರ್ಯ ಹೋರಾಟಗಾರ ಮತ್ತು ನ್ಯಾಯವಾದಿ ಜೋಸೆಫ್ ಬ್ಯಾಪ್ಟಿಸ್ಟಾ ಮುಂಬೈನಲ್ಲಿ ಜನಿಸಿದರು. ಲೋಕಮಾನ್ಯ ತಿಲಕ್ ಅವರ ಜೊತೆಗಾರರಾಗಿ ಮತ್ತು ಹೋಮ್ ರೂಲ್ ಚಳುವಳಿಯ ಪಾತ್ರಧಾರಿಯಾಗಿ ಪ್ರಸಿದ್ಧರಾದ ಇವರು, 1925ರ ವರ್ಷದಲ್ಲಿ ಬಾಂಬೆ ನಗರದ ಮೇಯರ್ ಆಗಿ ಆಯ್ಕೆಗೊಂಡಿದ್ದರು. 1930ರಲ್ಲಿ ನಿಧನರಾದರು.

1881: ಸ್ವಿಸ್ ವೈದ್ಯ ವಿಜ್ಞಾನಿ ವಾಲ್ಟರ್ ರುಡಾಲ್ಫ್ ಹೆಸ್ ಅವರು ಸ್ವಿಟ್ಜರ್ಲ್ಯಾಂಡ್ ದೇಶದ ಫ್ರೌನ್ಫೆಲ್ಡ್ ಎಂಬಲ್ಲಿ ಜನಿಸಿದರು. ಮೆದುಳಿನಲ್ಲಿ ಅಂಗಾಂಗಗಳ ಚಲನೆಯ ನಿಯಂತ್ರಕಗಳನ್ನು ಗುರುತಿಸುವ ಕಾರ್ಯವನ್ನು ಮಾಡಿದ ಇವರಿಗೆ 1949 ವರ್ಷದ ನೊಬೆಲ್ ವೈದ್ಯಶಾಸ್ತ್ರ ಪುರಸ್ಕಾರ ಸಂದಿತ್ತು.

1887: ಸಾಹಿತ್ಯ, ಸಮಾಜಸೇವೆ, ರಾಜಕೀಯ ಚರ್ಚೆ, ಪತ್ರಿಕೋದ್ಯಮ, ಪಾಂಡಿತ್ಯ, ಸಹೃದಯತೆ ಹೀಗೆ ಎಲ್ಲ ವಿಧಗಳಲ್ಲಿ ಮೇಲ್ಪಂಕ್ತಿಯವರಾದ ಡಿ.ವಿ. ಗುಂಡಪ್ಪನವರು ಮುಳಬಾಗಿಲಿನಲ್ಲಿ ಜನಿಸಿದರು. ಕಾವ್ಯ, ನಾಟಕ, ಪ್ರಬಂಧ, ಜೀವನ ಚರಿತ್ರೆ, ರಾಜಕೀಯ ವಿಚಾರ, ಆಧ್ಯಾತ್ಮ, ಮಕ್ಕಳ ಸಾಹಿತ್ಯಗಳ ಕುರಿತಾದ ವಿಫುಲ ಸಾಹಿತ್ಯ ಸೃಷ್ಟಿ, ಪೂರ್ವಾಗ್ರಹ ಮನೋಭಾವವಿಲ್ಲದ ಆದರೆ ಯಾವುದೇ ಅನ್ಯಾಯವನ್ನೂ ಒಪ್ಪದ ಪತ್ರಿಕಾ ಬರಹ, ಗೋಖಲೆ ಸಾರ್ವಜನಿಕ ಸಂಸ್ಥೆಯ ಸ್ಥಾಪನೆ ಮತ್ತು ಅಭಿವೃದ್ಧಿ, ಕನ್ನಡ ಸಾಹಿತ್ಯ ಪರಿಷತ್ತಿಗೊಂದು ಕಾಯಕಲ್ಪ ಹೀಗೆ ಅವರ ಸೇವೆ ಅಪಾರವಾದದ್ದು. ಅವರಿಗೆ ಪದ್ಮಭೂಷಣ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಗೌರವವೂ ಸೇರಿ ಅನೇಕ ಗೌರವಗಳು ಸಂದವು.

1905: ಮಹಾನ್ ಕವಿ, ವಿದ್ವಾಂಸ ಪು.ತಿ. ನರಸಿಂಹಾಚಾರ್ ಮೇಲುಕೋಟೆಯಲ್ಲಿ ಜನಿಸಿದರು. ಪು.ತಿ.ನ ಎಂದೇ ಖ್ಯಾತರಾದ ಅವರ ಸಾಹಿತ್ಯಸೃಷ್ಟಿಯು ಕಾವ್ಯ, ನಾಟಕ, ಲಲಿತ ಪ್ರಬಂಧ, ಭಾವ ಪ್ರಬಂಧ, ಕಾವ್ಯಾರ್ಥ ಚಿಂತನೆ, ಅನುವಾದ ಮುಂತಾದ ಹಲವು ಪ್ರಕಾರಗಳಲ್ಲಿ ಸಂದಿದೆ. ‘ಪದ್ಮಶ್ರೀ’ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಪಂಪ ಪ್ರಶಸ್ತಿ, ಗ್ರಂಥಲೋಕ ಪ್ರಶಸ್ತಿ, ಮೈಸೂರು ವಿಶ್ವವಿದ್ಯಾಲಯದ ಡಾಕ್ಟರೇಟ್, 53ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಪದವಿ ಮುಂತಾದ ಅನೇಕ ಗೌರವಗಳು ಇವರಿಗೆ ಸಂದಿದ್ದವು.

1920: ಷೇಖ್ ಮುಜಿಬುರ್ ರಹಮಾನ್ ಅವರು ಬಂಗಾಳದ ತುಂಗಿಪರ ಎಂಬಲ್ಲಿ ಜನಿಸಿದರು. ಬಾಂಗ್ಲಾ ದೇಶದ ಸ್ವಾತಂತ್ರ್ಯಕ್ಕೆ ಹೋರಾಟ ನಡೆಸಿ, ಸೆರೆಮನೆ ವಾಸ ಅನುಭವಿಸಿದ ಇವರು, ಬಾಂಗ್ಲಾದೇಶದ ಪ್ರಥಮ ಪ್ರಧಾನಿಯಾಗಿ ಹಾಗೂ ನಂತರ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ಇವರನ್ನು 1975ರಲ್ಲಿ ಕೊಲೆಗೈಯಲಾಯಿತು.

1927: ‘ಜಾನಪದ ಜಂಗಮ’ರೆಂದು ಪ್ರಖ್ಯಾತರಾದ ಮುದೇನೂರು ಸಂಗಣ್ಣನವರು ಹಿಂದಿನ ಬಳ್ಳಾರಿ ಜಿಲ್ಲೆಗೆ ಸೇರಿದ ಹರಪನಹಳ್ಳಿ ತಾಲೂಕಿನ ಚಿಗಟೇರಿಯಲ್ಲಿ ಜನಿಸಿದರು. ಅನೇಕ ಜಾನಪದ ಸಂಗ್ರಹ ಮತ್ತು ಪ್ರಕಟಣೆಗಳನ್ನು ಮಾಡಿದ ಇವರಿಗೆ ಕರ್ಣಾಟಕ ನಾಟಕ ಅಕಾಡೆಮಿ ಫೆಲೋಶಿಪ್, ಜಾನಪದ ಯಕ್ಷಗಾನ ಅಕಾಡೆಮಿಯ ಜನಪದ ತಜ್ಞ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ‘ಸೂಳೆ ಸಂಕವ್ವೆ’ ನಾಟಕಕ್ಕೆ ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ, ಸುವರ್ಣ ಕರ್ನಾಟಕ ಏಕೀಕರಣ ಪ್ರಶಸ್ತಿ, ನಾಡೋಜ ಪ್ರಶಸ್ತಿ, ‘ಚಿಗಟೇರಿ ಪದಕೋಶ’ಕ್ಕೆ ತ್ರಿವೇಂಡ್ರಮ್ಮಿನಲ್ಲಿರುವ ದ್ರಾವಿಡ ಭಾಷಾ ಸಂಸ್ಥೆಯ ಪುರಸ್ಕಾರ ಮುಂತಾದ ಅನೇಕ ಗೌರವಗಳು ಸಂದಿದ್ದವು.

1934: ಸಾಹಿತಿ, ಜಾನಪದ ವಿದ್ವಾಂಸ, ಶ್ರೇಷ್ಠ ಶಿಕ್ಷಕ, ಸಂಶೋಧಕ, ಸಾಂಸ್ಕೃತಿಕ ಪ್ರತಿನಿಧಿಗಳೆನಿಸಿದ್ದ ಪ್ರೊ. ಕು.ಶಿ.ಹರಿದಾಸ ಭಟ್ಟರು ಉಡುಪಿಯಲ್ಲಿ ಜನಿಸಿದರು. ಕರ್ನಾಟಕದ ಜಾನಪದ ಕಲೆಯನ್ನು ವಿಶ್ವಾದ್ಯಂತ ಪರಿಚಯಿಸಿ, ಅದನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಏರಿಸಿದ ಕೀರ್ತಿ ಭಟ್ಟರಿಗೆ ಸಲ್ಲುತ್ತದೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಬಹುಮಾನ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಫಿನ್‌ಲ್ಯಾಂಡ್‌ಪ್ರಶಸ್ತಿ ಮುಂತಾದ ಅನೇಕ ಗೌರವಗಳು ಭಟ್ಟರಿಗೆ ಸಂದಿದ್ದವು.

1962: ಭಾರತೀಯ ಮೂಲಸಂಜಾತೆ, ಅಮೆರಿಕದ ಪ್ರಜೆ ಮತ್ತು ಗಗನಯಾತ್ರಿ ಕಲ್ಪನಾ ಚಾವ್ಲಾ ಅವರು ಪಂಜಾಬಿನ ಕರ್ನಾಲ್ ಪಟ್ಟಣದಲ್ಲಿ ಜನಿಸಿದರು. ಬಾಹ್ಯಾಕಾಶದಲ್ಲಿ ತಮ್ಮ ಹದಿನಾರು ದಿನಗಳ ಯಾನವನ್ನು ಪೂರೈಸಿ ಮರಳಿ ಭೂಕಕ್ಷೆ ಪ್ರವೇಶಿಸುವ ಸಂದರ್ಭದಲ್ಲಿ, ಇವರು ಪಯಣಿಸುತ್ತಿದ್ದ ಕೊಲಂಬಿಯಾ ಬಾಹ್ಯಾಕಾಶ ನೌಕೆಯು ಟೆಕ್ಸಾಸ್ ನಗರದ ಮೇಲ್ಭಾಗದಲ್ಲಿ ಸ್ಪೋಟಗೊಂಡು, ಕಲ್ಪನಾ ಚಾವ್ಲಾ ಅವರನ್ನೂ ಒಳಗೊಂಡಂತೆ ಅದರಲ್ಲಿದ್ದ ಏಳೂ ಜನ ಯಾತ್ರಿಗಳೂ ನಿಧನರಾದರು

1963: ಕನ್ನಡ ಚಿತ್ರರಂಗದ ಪ್ರಖ್ಯಾತ ನಟ ಜಗ್ಗೇಶ್ ಅವರು ತುಮಕೂರು ಜಿಲ್ಲೆಯ ತುರುವೇಕೆರೆ ಬಳಿಯ ಮಾಯಸಂದ್ರದಲ್ಲಿ ಜನಿಸಿದರು. ಅನೇಕ ಚಲನಚಿತ್ರಗಳ ನಟರಾಗಿ ಮತ್ತು ನಿರ್ಮಾಪಕರಾಗಿರುವ ಇವರು ಹಾಸ್ಯರೀತಿಯ ನಟನೆಗೆ ಜನಪ್ರಿಯರಾಗಿದ್ದಾರೆ.

1975: ಪ್ರಖ್ಯಾತ ಚಲನಚಿತ್ರ ನಟ ಪುನೀತ್ ರಾಜ್ ಕುಮಾರ್ ಅವರು ಚೆನ್ನೈ ನಗರದಲ್ಲಿ ಜನಿಸಿದರು. ಬೆಟ್ಟದ ಹೂವು ಚಿತ್ರಕ್ಕೆ ಬಾಲ ನಟನಾಗಿ ರಾಷ್ಟ್ರಪ್ರಶಸ್ತಿ ಪಡೆದಿದ್ದ ಇವರು ಹಲವು ಚಿತ್ರಗಳ ಅಭಿನಯಕ್ಕೆ ಕರ್ನಾಟಕ ರಾಜ್ಯದ ಪ್ರಶಸ್ತಿಯೂ ಸೇರಿದಂತೆ ಅನೇಕ ಗೌರವಗಳನ್ನು ಪಡೆದಿದ್ದಾರೆ.

1990: ಭಾರತದ ಪ್ರಸಿದ್ಧ ಬ್ಯಾಡ್ಮಿಂಟನ್ ಆಟಗಾರ್ತಿಯಾದ ಸೈನಾ ನೆಹವಾಲ್ ಅವರು ಹರ್ಯಾಣಾದ ಹಿಸ್ಸಾರ್ ಎಂಬಲ್ಲಿ ಜನಿಸಿದರು. ಒಲಿಂಪಿಕ್ ಕಂಚು ಪದಕದ ಸಾಧನೆಯ ಜೊತೆಗೆ ಇಪ್ಪತ್ತಕ್ಕೂ ಹೆಚ್ಚು ಅಂತರರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದಿರುವ ಇವರು ಕೆಲ ಸಮಯ ವಿಶ್ವದ ನಂಬರ್ ಒನ್ ಆಗ್ರಶ್ರೇಣಿಯನ್ನು ಅಲಂಕರಿಸಿದ್ದರು. ಪದ್ಮಭೂಷಣ ಪ್ರಶಸ್ತಿಯೂ ಸೇರಿದಂತೆ ಅನೇಕ ಗೌರವಗಳು ಇವರಿಗೆ ಸಂದಿವೆ.

1956: ಮೇಡಂ ಕ್ಯೂರಿ ಮತ್ತು ಪಿಯೆರೆ ಕ್ಯೂರಿ ಅವರ ಪುತ್ರಿಯಾದ ಐರೆನೆ ಜೋಲಿಯಟ್ ಕ್ಯೂರಿ ಅವರು ಪ್ಯಾರಿಸ್ ನಗರದಲ್ಲಿ ನಿಧನರಾದರು. ಇವರು ತಮ್ಮ ಪತಿ ಫ್ರೆಡೆರಿಕ್ ಜೋಲಿಯಟ್ ಅವರೊಂದಿಗೆ ಜಂಟಿಯಾಗಿ 1935 ವರ್ಷದಲ್ಲಿ ‘ಆರ್ಟಿಫಿಷಿಯಲ್ ರೇಡಿಯೋ ಆಕ್ಟಿವಿಟಿ’ ಕುರಿತಾದ ಸಂಶೋಧನೆಗಾಗಿ ನೊಬೆಲ್ ರಸಾಯನ ಶಾಸ್ತ್ರದ ಪುರಸ್ಕಾರ ಗಳಿಸಿದರು.

1957: ಫಿಲಿಪೈನ್ಸ್ ದೇಶದ ಅತ್ಯಂತ ಜನಪ್ರಿಯ ನಾಯಕರಾಗಿ ಆ ದೇಶದ 7ನೇ ಅಧ್ಯಕ್ಷರಾಗಿದ್ದ ರಾಮನ್ ಮ್ಯಾಗ್ಸೇಸೆ ಅವರು ವಿಮಾನ ಅಪಘಾತದಲ್ಲಿ ನಿಧನರಾದರು. ನ್ಯೂಯಾರ್ಕಿನ ರಾಕ್ ಫೆಲ್ಲರ್ ಬ್ರದರ್ಸ್ ನಿಧಿಯು ಇವರ ಗೌರವಾರ್ಥವಾಗಿ ಅಂತರರಾಷ್ಟ್ರೀಯ ಪ್ರಶಸ್ತಿ ಸ್ಥಾಪಿಸಿದೆ.

1983: ಅಮೆರಿಕದ ವೈದ್ಯವಿಜ್ಞಾನಿ ಹಲ್ಡಾನ್ ಕೆಫ್ಫರ್ ಹಾರ್ಟ್ಲೈನ್ ಅವರು ಮೇರಿಲ್ಯಾಂಡಿನ ಹಾಲ್ಸ್ಟನ್ ಎಂಬಲ್ಲಿ ನಿಧನರಾದರು. ‘ನ್ಯೂರೋ ಫಿಸಿಯಲಾಜಿಕಲ್ ಮೆಕಾನಿಸಂಸ್ ಆಫ್ ವಿಷನ್’ ಕುರಿತಾದ ಸಂಶೋಧನೆಗಾಗಿ ಇವರಿಗೆ 1967 ವರ್ಷದ ನೊಬೆಲ್ ವೈದ್ಯಶಾಸ್ತ್ರದ ಪ್ರಶಸ್ತಿ ಸಂದಿತ್ತು.