Categories
e-ದಿನ

ಮಾರ್ಚ್-24

ಪ್ರಮುಖಘಟನಾವಳಿಗಳು:

1882: ಜರ್ಮನ್ ವಿಜ್ಞಾನಿ ರಾಬರ್ಟ್ ಕೋಚ್ ಅವರು ಕ್ಷಯರೋಗಕ್ಕೆ ಕಾರಣವಾದ ‘ಮೈಕೊಬ್ಯಾಕ್ಟೀರಿಯಮ್ ಟ್ಯೂಬರ್ ಕುಲೋಸಿಸ್’ ಬ್ಯಾಕ್ಟೀರಿಯಾವನ್ನು ಪತ್ತೆಹಚ್ಚಿರುವುದಾಗಿ ಪ್ರಕಟಿಸಿದರು

1896: ಎ.ಎಸ್. ಪೊಪೋವ್ ಅವರು ಪ್ರಪ್ರಥಮ ರೇಡಿಯೋ ಸಿಗ್ನಲ್ ಪ್ರಸರಣವನ್ನು ಮಾಡಿದರು

1921: ಮೊಟ್ಟ ಮೊದಲ ಅಂತರರಾಷ್ಟ್ರೀಯ ಮಹಿಳಾ ಕ್ರೀಡಾಕೂಟವಾದ ‘1921 ವುಮೆನ್ಸ್ ಒಲಿಂಪಿಯಾಡ್’ ಪ್ರಾರಂಭಗೊಂಡಿತು.

1946: ಭಾರತಕ್ಕೆ ಅಧಿಕಾರವನ್ನು ಹಸ್ತಾಂತರಿಸುವ ಕಾರ್ಯಕ್ಕಾಗಿ ಮಾತುಕತೆ ನಡೆಸಿ, ಹಸ್ತಾಂತರದ ಯೋಜನೆಗಳನ್ನು ರೂಪಿಸಲು ಬ್ರಿಟಿಷ್ ಕ್ಯಾಬಿನೆಟ್ ತಂಡವು ಭಾರತಕ್ಕೆ ಆಗಮಿಸಿತು. ಲಾರ್ಡ್ ಪೆಥಿಕ್-ಲಾರೆನ್ಸ್, ಸರ್ ಸ್ಟಾಫರ್ಡ್ ಕ್ರಿಪ್ಸ್ ಮತ್ತು ಎ.ವಿ. ಅಲೆಗ್ಸಾಂಡರ್ ಅವರು ಈ ತಂಡದ ಪ್ರಮುಖರಾಗಿದ್ದರು.

1977: ಮೊರಾರ್ಜಿ ದೇಸಾಯಿ ಅವರು ಭಾರತದ ನಾಲ್ಕನೆಯ ಪ್ರಧಾನ ಮಂತ್ರಿಗಳಾದರು. ಭಾರತದಲ್ಲಿ ಮೊಟ್ಟ ಮೊದಲಿಗೆ ಕಾಂಗ್ರೆಸ್ಸೇತರ ಸರ್ಕಾರವಾದ ‘ಜನತಾ ಪಕ್ಷ’ದ ಸರ್ಕಾರ ಅಧಿಕಾರಕ್ಕೆ ಬಂತು. ತಮ್ಮ 81ನೆಯ ವಯಸ್ಸಿನಲ್ಲಿ ಪ್ರಧಾನಿಗಳಾದ ಮೊರಾರ್ಜಿ ದೇಸಾಯಿ ಅವರು ಅತ್ಯಂತ ಹಿರಿಯ ವಯಸ್ಸಿನ ಪ್ರಧಾನಿ ಎನಿಸಿದರು.

1993: ಷೋ ಮೇಕರ್ ಧೂಮಕೇತು ಪತ್ತೆಗೊಂಡಿತು.

1998: ಪಶ್ಚಿಮ ಬಂಗಾಳದ ಡಂಟನ್ ಎಂಬಲ್ಲಿ ಉಂಟಾದ ಸುಂಟರಗಾಳಿ(tornado)ಯಿಂದ 250 ಜನ ಮೃತರಾಗಿ 3000 ಮಂದಿ ಗಾಯಗೊಂಡರು.

1998: ಮೊಟ್ಟ ಮೊದಲ ಕಂಪ್ಯೂಟರ್ ಬೆಂಬಲದೊಂದಿಗಿನ ಮೂಳೆಗಳ ಪರಿಧಿಯಲ್ಲಿನ ಸಂಚಲನೆಯನ್ನು (ಬೋನ್ ಸೆಗ್ಮೆಂಟ್ ನ್ಯಾವಿಗೇಶನ್ ಅನ್ನು ) ಜರ್ಮನಿಯ ರೆಗೆನ್ಸ್ ಬರ್ಗ್ ವಿಶ್ವವಿದ್ಯಾಲಯದಲ್ಲಿ ನೆರವೇರಿಸಲಾಯಿತು

2006: ಹ್ಯಾನ್ ಮೈಂಗ್ ಸೂಕ್ ಅವರು ದಕ್ಷಿಣ ಕೊರಿಯಾದ ಮೊದಲ ಮಹಿಳಾ ಪ್ರಧಾನಿಯಾಗಿ ಆಯ್ಕೆಗೊಂಡರು.

2006: ಮೆಲ್ಬೋರ್ನ್ ಕಾಮನ್ವೆಲ್ತ್ ಕ್ರೀಡಾಕೂಟದ ಪುರುಷರ 50 ಮೀ. ರೈಫಲ್ ಶೂಟಿಂಗ್ ಸ್ಪರ್ಧೆಯಲ್ಲಿ ಗಗನ್ ನಾರಂಗ್ ಮತ್ತು ಅಭಿನವ್ ಬಿಂದ್ರಾಗೆ ಮೊದಲ ಎರಡು ಸ್ಥಾನಗಳು ಲಭಿಸಿದವು.

2007: ನಗರ ಸಾರಿಗೆ ವ್ಯವಸ್ಥೆಯನ್ನು ಅಭಿವೃದ್ಧಿ ಪಡಿಸುವ ಉದ್ದೇಶದಿಂದ ಕರ್ನಾಟಕ ರಾಜ್ಯ ಸರ್ಕಾರವು ರಾಜ್ಯ ಮಟ್ಟದ ನಗರ ಭೂ ಸಾರಿಗೆ ನಿರ್ದೇಶನಾಲಯ ಹಾಗೂ ಬೆಂಗಳೂರು ಭೂ ಸಾರಿಗೆ ಪ್ರಾಧಿಕಾರವನ್ನು ರಚಿಸಿ ಆದೇಶ ಹೊರಡಿಸಿತು.

2008: ಮೊಟ್ಟಮೊದಲ ಸಂಸದೀಯ ಚುನಾವಣೆ ಮೂಲಕ ಅಧಿಕೃತವಾಗಿ ಪ್ರಜಾಪ್ರಭುತ್ವಕ್ಕೆ ಕಾಲಿಟ್ಟ ಭೂತಾನಿನಲ್ಲಿ ಜನರು ಸಂಭ್ರಮೋತ್ಸಾಹಗಳೊಂದಿಗೆ ತಮ್ಮ ಮತದಾನದ ಹಕ್ಕನ್ನು ಚಲಾಯಿಸಿದರು. ಭೂತಾನ್ ದೊರೆ ಜಿಗ್ಮೆ ವಾಂಗ್ಚುಕ್ ಅವರು ಸ್ವಯಂ ತಾವೇ ಪ್ರಜಾಪ್ರಭುತ್ವ ಸ್ಥಾಪನೆಗೆ ಮುಂದಾದರು.

2008: ಬೀಜಿಂಗ್ ಒಲಿಂಪಿಕ್ ಕೂಟದ ಕ್ರೀಡಾಜ್ಯೋತಿಯನ್ನು ಗ್ರೀಕಿನ ಪ್ರಾಚೀನ ನಗರಿ ಒಲಿಂಪಿಯಾದಲ್ಲಿ ಬೆಳಗಿಸಲಾಯಿತು. ಇದರೊಂದಿಗೆ 2008ರ ಒಲಿಂಪಿಕ್ ಕ್ಷಣಗಣನೆ ಆರಂಭವಾಯಿತು.

2008: ತುಮಕೂರು ವಿಶ್ವವಿದ್ಯಾಲಯದ ಚೊಚ್ಚಲ ಘಟಿಕೋತ್ಸವದಲ್ಲಿ ಮಂಗಳೂರು ಮತ್ತು ಗೋವಾ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಬಿ. ಶೇಖ್ ಅಲಿ ಹಾಗೂ ಕನ್ನಡದ ಹೆಸರಾಂತ ಹಿರಿಯ ಚಿತ್ರನಟ ಕೆ.ಎಸ್. ಅಶ್ವಥ್ ಅವರಿಗೆ ಗೌರವ ಡಾಕ್ಟರೇಟ್ ನೀಡಲಾಯಿತು. ಶಿಕ್ಷಣ ಪ್ರೇಮಿಗಳಾದ ಎಚ್.ಎಂ. ಗಂಗಾಧರಯ್ಯ ಮತ್ತು ಎಂ.ಎಸ್. ರಾಮಯ್ಯ ಅವರಿಗೆ ಮರಣೋತ್ತರ ಗೌರವ ಡಾಕ್ಟರೇಟ್ ನೀಡಲಾಯಿತು.

ಪ್ರಮುಖಜನನ/ಮರಣ:

1693: ಇಂಗ್ಲಿಷ್ ಬಡಗಿ, ಗಡಿಯಾರ ಮತ್ತು ಮೆರಿನ್ ಕ್ರೋನೋಮೀಟರ್ಗಳನ್ನು ಸಂಶೋಧಿಸಿದ ಜಾನ್ ಹ್ಯಾರಿಸನ್ ಅವರು ಫೌಲ್ಬಿ ಎಂಬಲ್ಲಿ ಜನಿಸಿದರು.

1733: ಹದಿನೆಂಟನೇ ಶತಮಾನದ ಪ್ರಸಿದ್ಧ ತತ್ವಜ್ಞಾನಿ, ವ್ಯಾಕರಣ ಶಾಸ್ತ್ರಜ್ಞ, ಮುಕ್ತ ರಾಜಕೀಯ ವ್ಯಾಖ್ಯಾನಕಾರ ಮತ್ತು ವಿಜ್ಞಾನಿ ಜೋಸೆಫ್ ಪ್ರೀಸ್ಟ್ಲಿ ಅವರು ಬ್ರಿಸ್ಟಲ್ ಎಂಬಲ್ಲಿ ಜನಿಸಿದರು. ಇವರು ವಿವಿಧ ವಿಷಯಗಳಲ್ಲಿ 150ಕ್ಕೂ ಹೆಚ್ಚು ಪ್ರಾಜ್ಞ ಗ್ರಂಥಗಳನ್ನು ರಚಿಸಿದ್ದರು. ಇವರು ‘ಆಮ್ಲಜನಕವನ್ನು’ ಅನಿಲರೂಪದಲ್ಲಿ ಪ್ರತ್ಯೇಕವಾಗಿ ನಿಷ್ಕರ್ಷಿಸಿದ್ದಕ್ಕಾಗಿ ಹೆಸರಾಗಿದ್ದರೂ ಅದೇ ಸಾಧನೆಯನ್ನು ‘ನಾವು ಮಾಡಿದ್ದೇವೆಂದು’ ಕಾರ್ಲ್ ವಿಲ್ಹೆಮ್ ಸ್ಕೀಲಿ ಮತ್ತು ಆಂಟೋಯನ್ ಲೇವೋಯ್ಸರ್ ಅವರುಗಳು ಸಹಾ ಧ್ವನಿ ಎತ್ತಿದ್ದರು.

1775: ಸಂಗೀತದ ಮಹಾನ್ ವಾಗ್ಗೇಯಕಾರರಾದ ಮುತ್ತುಸ್ವಾಮಿ ದೀಕ್ಷಿತರು ತಮಿಳುನಾಡಿನ ತಿರುವಾರೂರಿನಲ್ಲಿ ಜನಿಸಿದರು. ದೀಕ್ಷಿತರ ಕೃತಿಗಳೆಲ್ಲವೂ ಸಂಸ್ಕೃತದಲ್ಲಿ ರಚಿತವಾಗಿದ್ದು, ‘ಗುರುಗುಹ’ ಎಂಬ ಕಾವ್ಯನಾಮದ ಹಾಸುಹೊಕ್ಕು ಅವರ ಎಲ್ಲ ಕೃತಿಗಳಲ್ಲಿ ಕಂಡುಬರುವ ಪ್ರಧಾನ ಅಂಶವಾಗಿದೆ.

1834: ಇಂಗ್ಲಿಷ್ ವಿನ್ಯಾಸಕಾರ, ಕುಶಲಕರ್ಮಿ, ಕತೆಗಾರ, ಸಮಾಜ ಸೇವಕ ವಿಲಿಯಂ ಮೋರಿಸ್ ಅವರು ಎಸ್ಸೆಕ್ಸ್ ಬಳಿ’ಯ ವಾಲ್ಥಾಮ್ ಸ್ಟೌ ಎಂಬಲ್ಲಿ ಜನಿಸಿದರು. ಇವರು ನಿರ್ಮಿಸಿದ ಪೀಠೋಪಕರಣಗಳು, ಬಟ್ಟೆಗಳು, ವಾಲ್ ಪೇಪರ್ ಮತ್ತು ಇನ್ನಿತರ ಅಲಂಕಾರಿಕ ವಸ್ತುಗಳು ಇಂಗ್ಲೆಂಡಿನಲ್ಲಿ ಕಲೆ ಮತ್ತು ಕುಶಲಕಲೆಗಳ ಚಳವಳಿಯನ್ನೇ ಹುಟ್ಟುಹಾಕಿತು.

1874: ಹಂಗೇರಿ-ಅಮೆರಿಕನ್ ಐಂದ್ರಜಾಲಿಕರಾಗಿ ‘ಹ್ಯಾರಿ ಹೌಡಿನಿ’ ಎಂದೇ ಖ್ಯಾತರಾದ ಎರಿಕ್ ವೀಸ್ ಅವರು ಆಸ್ಟ್ರಿಯಾ-ಹಂಗೆರಿಗೆ ಸೇರಿದ್ದ ಬುಡಾಪೆಸ್ಟ್ ಎಂಬಲ್ಲಿ ಜನಿಸಿದರು.

1884: ಡಚ್-ಅಮೆರಿಕನ್ ರಸಾಯನ ಶಾಸ್ತ್ರಜ್ಞ ಪೀಟರ್ ಡೆಬೈ ಅವರು ನೆದರ್ಲ್ಯಾಂಡಿನ ಮಾಸ್ಟ್ರಿಕ್ಟ್ ಎಂಬಲ್ಲಿ ಜನಿಸಿದರು. ‘ಡೆಬೈ ಮಾಡೆಲ್, ಡೆಬೈ ರಿಲಾಕ್ಸೇಷನ್, ಡೆಬೈ ಟೆಂಪರೇಚರ್’ ಮುಂತಾದವುಗಳ ಸಂಶೋಧನೆಗಳಲ್ಲಿ ಹೆಸರಾಗಿರುವ ಇವರಿಗೆ 1936ವರ್ಷದ ನೊಬೆಲ್ ರಸಾಯನ ಶಾಸ್ತ್ರದ ಪುರಸ್ಕಾರ ಸಂದಿತು.

1901: ಅನಿಮೇಶನ್ ತಜ್ಞ, ನಿರ್ದೇಶಕ, ನಿರ್ಮಾಪಕ ಮಿಕ್ಕಿ ಮೌಸ್ ಸಹ ಸೃಷ್ಟಿಕರ್ತ ಉಬ್ ಲ್ವೆರ್ಕ್ಸ್ ಅವರು ಅಮೇರಿಕದ ಮಿಸ್ಸೌರಿ ಬಳಿಯ ಕನ್ಸಾಸ್ ಸಿಟಿ ಎಂಬಲ್ಲಿ ಜನಿಸಿದರು.

1903: ಜರ್ಮನಿಯ ಜೈವಿಕ ವಿಜ್ಞಾನಿ ಅಡಾಲ್ಫ್ ಬುಟೆನಾನ್ಡ್ಟ್ ಅವರು ಲೆಹೆ ಎಂಬಲ್ಲಿ ಜನಿಸಿದರು. ‘ಲೈಂಗಿಕ ಹಾರ್ಮೋನ್ಸ್’ ಕುರಿತಾದ ಸಂಶೋಧನೆಗಾಗಿ ಇವರಿಗೆ 1939 ವರ್ಷದಲ್ಲಿ ನೊಬೆಲ್ ಪುರಸ್ಕಾರ ಸಂದಿತು.

1917: ಇಂಗ್ಲಿಷ್ ಜೈವಿಕ ವಿಜ್ಞಾನಿ ಮತ್ತು ಕ್ರಿಸ್ಟಲೋಗ್ರಾಫರ್ ಜಾನ್ ಕೆಂಡ್ರ್ಯೂ ಅವರು ಆಕ್ಸ್ಫರ್ಡ್ನಲ್ಲಿ ಜನಿಸಿದರು. ‘ಸ್ಟ್ರಕ್ಚರ್ ಆಫ್ ಹೆಮೆ ಕಂಟೈನಿಂಗ್ ಪ್ರೊಟೀನ್ಸ್’ ಕುರಿತಾದ ಸಂಶೋಧನೆಗಾಗಿ ಇವರಿಗೆ 1962 ವರ್ಷದಲ್ಲಿ ನೊಬೆಲ್ ಪುರಸ್ಕಾರ ಸಂದಿತು.

1926: ಇಟಲಿಯ ನಾಟಕಕಾರ, ನಿರ್ದೇಶಕ, ಸಂಯೋಜಕರಾದ ಡಾರಿಯೋ ಫೋ ಆವರು ಇಟಲಿಯ ವೆರೇಸೆ ಬಳಿಯ ಲೆಗ್ವಿನೋ ಸಂಗಿಯಾನೋ ಎಂಬಲ್ಲಿ ಜನಿಸಿದರು. ಇವರಿಗೆ 1997 ವರ್ಷದ ನೊಬೆಲ್ ಸಾಹಿತ್ಯ ಪುರಸ್ಕಾರ ಸಂದಿತು.

1943: ಪ್ರಸಿದ್ಧ ನೃತ್ಯ ಕಲಾವಿದರಾದ ಲಲಿತಾ ಶ್ರೀನಿವಾಸನ್ ಶಿವನಸಮುದ್ರದಲ್ಲಿ ಜನಿಸಿದರು. ಬೆಂಗಳೂರಿನಲ್ಲಿ ಪ್ರಸಿದ್ಧವಾದ ‘ನೂಪುರ ಭ್ರಮರಿ’ ನಾಟ್ಯ ಶಾಲೆಯನ್ನು ನಡೆಸುತ್ತಿದ್ದು, ವಿಶ್ವದೆಲ್ಲೆಡೆ ತಮ್ಮ ನಾಟ್ಯಕಲೆಯಿಂದ ಪ್ರಸಿದ್ಧರಾದ ಇವರಿಗೆ ಶಾಂತಲಾ ನಾಟ್ಯರಾಣಿ ಪ್ರಶಸ್ತಿಯೂ ಸೇರಿದಂತೆ ಅನೇಕ ಗೌರವಗಳು ಸಂದಿವೆ.

1984: ಭಾರತದ ರಾಷ್ಟ್ರೀಯ ಹಾಕಿ ಆಟಗಾರ ಆಡ್ರಿಯಾನ್ ಡಿಸೋಜಾ ಮುಂಬೈನಲ್ಲಿ ಜನಿಸಿದರು. ಮಧ್ಯ ಆಟಗಾರರಾಗಿ ಮತ್ತು ಗೋಲ್ ಕೀಪರ್ ಆಗಿ ಇವರಿಗೆ ಪರಿಣತಿ ಇದೆ.

1932: ಕ್ರಿಕೆಟ್ ಕ್ರೀಡೆಯ ಪ್ರಮುಖ ಉತ್ತೇಜಕರಆದ ಲಾರ್ಡ್ ಹ್ಯಾರಿಸ್ ತಮ್ಮ 81ನೇ ವಯಸ್ಸಿನಲ್ಲಿ ಮೃತರಾದರು. ಇವರು ಮುಂಬೈಯ ಗವರ್ನರ್ ಆಗಿದ್ದ ಕಾಲದಲ್ಲಿ ಭಾರತದಲ್ಲಿ ಕ್ರಿಕೆಟನ್ನು ಬೆಳೆಸಲು ಪ್ರೋತ್ಸಾಹ ನೀಡಿ, ಐರೋಪ್ಯ ಮತ್ತು ಭಾರತೀಯ ತಂಡಗಳ ನಡುವೆ ವಾರ್ಷಿಕ ದೇಶೀ ಕ್ರಿಕೆಟ್ ಪಂದ್ಯಗಳನ್ನು ಪ್ರಾರಂಭಿಸಿದರು.

1944: ಭಾರತದಲ್ಲಿ ಜನಿಸಿದ ಬ್ರಿಟಿಷ್ ಸೈನ್ಯಾಧಿಕಾರಿ ಆರ್ಡೆ ವಿನ್ಗೇಟ್ ಮಣಿಪುರದ ಬಳಿಯ ಭೀಷ್ನಾಪುರ್ ಎಂಬಲ್ಲಿ ನಿಧನರಾದರು. ಇವರು ಎರಡನೇ ವಿಶ್ವಮಹಾಯುದ್ಧಗಲ್ಲಿ ಜಪಾನ್ ಆಕ್ರಮಣದ ಬರ್ಮಾ ವಲಯದಲ್ಲಿ ಭೀಕರ ಹೋರಾಟಗಳಲ್ಲಿ ಪಾಲ್ಗೊಂಡಿದ್ದು, ಯುದ್ಧದ ಸಂದರ್ಭದಲ್ಲಿಯೇ ವಿಮಾನ ಅಪಘಾತದಲ್ಲಿ ನಿಧನರಾದರು.

2002: ಅರ್ಜೆಂಟೈನ-ಇಂಗ್ಲಿಷ್ ಜೈವಿಕ ವಿಜ್ಞಾನಿ ಸೀಸರ್ ಮಿಲ್ಸ್ಟೀನ್ ಅವರು ಇಂಗ್ಲೆಂಡಿನ ಕೇಂಬ್ರಿಡ್ಜಿನಲ್ಲಿ ನಿಧನರಾದರು. ‘ಆ್ಯಾಂಟಿಬಾಡಿ’ ಸಂಶೋಧನೆಗಳಲ್ಲಿನ ಮಹತ್ವದ ಕೊಡುಗೆಗಳಿಗಾಗಿ ಇವರಿಗೆ 1984 ವರ್ಷದಲ್ಲಿ ನೊಬೆಲ್ ವೈದ್ಯ ಶಾಸ್ತ್ರದ ಪುರಸ್ಕಾರ ಸಂದಿತ್ತು.