Categories
e-ದಿನ

ಮಾರ್ಚ್-29

ಪ್ರಮುಖಘಟನಾವಳಿಗಳು:

1849: ಲಾರ್ಡ್ ಡಾಲ್ ಹೌಸಿಯು ಪಂಜಾಬನ್ನು ವಶಪಡಿಸಿಕೊಂಡ. ಹೀಗೆ ಅದು ಬ್ರಿಟಿಷ್ ಸಾಮ್ರಾಜ್ಯದ ಭಾಗವಾಯಿತು.

1857: ಯುವ ಸೈನಿಕ ಮಂಗಲಪಾಂಡೆ ಬ್ರಿಟಿಷ್ ಸೇನಾಡಳಿತದ ವಿರುದ್ಧ ಬಂಡೆದ್ದು, ‘ಸಿಪಾಯಿ ದಂಗೆ’ಗೆ ಪ್ರಾರಂಭ ನೀಡಿದರು. ಅವರು ತಮ್ಮ ತುಕಡಿಯ ಸಾರ್ಜೆಂಟ್ ಮೇಜರನತ್ತ ಗುಂಡು ಹಾರಿಸಿದರು. ಮುಂದೆ ಪಾಂಡೆಯನ್ನು ನಿರಾಯುಧರನ್ನಾಗಿ ಮಾಡಿ ಗಲ್ಲಿಗೇರಿಸಲಾಯಿತು. ಈ ಘಟನೆ ಭಾರತದ ಮೊದಲ ಸ್ವಾತಂತ್ರ್ಯ ಸಂಗ್ರಾಮಕ್ಕೆ ಪ್ರೇರಕವಾಯಿತು.

1871: ರಾಣಿ ವಿಕ್ಟೋರಿಯಾ ರಾಯಲ್ ಆಲ್ಬರ್ಟ್ ಹಾಲ್ ಅನ್ನು ಉದ್ಘಾಟಿಸಿದರು.

1886: ಜಾನ್ ಪೆಂಬರ್ಟನ್ ಅವರು ಅಟ್ಲಾಂಟಾದಲ್ಲಿನ ಒಂದು ಹಿತ್ತಲಿನಲ್ಲಿ ಕೋಕಾ-ಕೋಲಾ ತಯಾರಿಕೆಯನ್ನು ಆರಂಭಿಸಿದರು. ಆಗ ಅವರಿಗೆ ಅದನ್ನು ಪೇಟೆಂಟ್ ಔಷದವನ್ನು ಮಾಡುವ ಉದ್ದೇಶ ಇತ್ತು.

1914: ಮದರ್ ಆಫ್ ಅರೋವಿಲ್ಲೆ ಎಂದೇ ಖ್ಯಾತರಾದ ಮೀರಾ ಅಲ್ಫಾಸಾ ಅವರು ಪುದುಚೆರಿಯಲ್ಲಿ ಅರವಿಂದರನ್ನು ಮೊಟ್ಟ ಮೊದಲ ಬಾರಿಗೆ ಭೇಟಿಯಾದರು.

1957: ನೂತನ ಸಂಸತ್ತಿನ ಕಾಂಗ್ರೆಸ್ ಪಕ್ಷದ ನಾಯರಾಗಿ ಪ್ರಧಾನಿ ಜವಾಹರಲಾಲ್ ನೆಹರೂ ಸರ್ವಾನುಮತದಿಂದ ಆಯ್ಕೆಯಾದರು.

1957: ನ್ಯೂಯಾರ್ಕಿನ ಒಂಟಾರಿಯೋ ಮತ್ತು ಪಶ್ಚಿಮ ರಸ್ತೆ ರೈಲ್ವೆಯನ್ನು ಇಂದಿನ ಕೊನೆಯ ಯಾನದೊಂದಿಗೆ ಪೂರ್ಣವಾಗಿ ರದ್ಧುಗೊಳಿಸಲಾಯಿತು. ಈ ರೀತಿಯಾಗಿ ಪೂರ್ಣವಾಗಿ ರದ್ಧುಗೊಂಡ ಅಮೆರಿಕದ ಪ್ರಮುಖ ರಸ್ತೆ ರೈಲು ಯೋಜನೆಗಳಲ್ಲಿ ಇದು ಪ್ರಥಮದ್ದಾಗಿದೆ.

1974: ನಾಸಾದ ಮೆರಿನರ್ 10 ಬಾಹ್ಯಾಕಾಶ ಅನ್ವೇಷಣಾ ಯೋಜನೆಯು (ಸ್ಪೇಸ್ ಪ್ರೋಬ್) ಮರ್ಕ್ಯುರಿಯ ಸಮೀಪ ಸಂಚರಿಸಿದ ಪ್ರಥಮ ಬಾಹ್ಯಾಕಾಶ ವ್ವವಸ್ಥೆ ಎನಿಸಿತು.

1982: ತೆಲುಗು ಚಲನಚಿತ್ರ ನಟ ಎನ್.ಟಿ. ರಾಮರಾವ್ ಅವರ ಪ್ರಾದೇಶಿಕ ಪಕ್ಷ ‘ತೆಲುಗುದೇಶಂ’ ಹೈದರಾಬಾದಿನಲ್ಲಿ ಉದಯವಾಯಿತು.

1990: ಉತ್ತರ ಪ್ರದೇಶದ ಚಮೊಲಿಯಲ್ಲಿ 6.8 ಪ್ರಮಾಣದ ಭೂಕಂಪನದಲ್ಲಿ 103 ಮಂದಿ ನಿಧನರಾದರು

2006: ದೇಶದಲ್ಲಿ ಗೋಹತ್ಯೆಯ ಮೇಲೆ ಸಂಪೂರ್ಣ ನಿಷೇಧ ವಿಧಿಸಲು ಸುಪ್ರೀಂಕೋರ್ಟಿನ ಮುಖ್ಯ ನ್ಯಾಯಮೂರ್ತಿ ವೈ.ಕೆ. ಸಭರ್ ವಾಲ್ ಮತ್ತು ತರುಣ್ ಚಟರ್ಜಿ ಅವರನ್ನು ಒಳಗೊಂಡ ಪೀಠವು ನಿರಾಕರಿಸಿತು.

2007: ಬಾಲಸೋರ್ ಜಿಲ್ಲೆಯ ಚಂಡಿಪುರ ಬಳಿ ಅತ್ಯಾಧುನಿಕ ‘ಅಸ್ತ್ರ’ ಕ್ಷಿಪಣಿಯನ್ನು ಪರೀಕ್ಷಾರ್ಥ ಪ್ರಯೋಗಿಸಲಾಯಿತು. ಈ ಕ್ಷಿಪಣಿಯನ್ನು ಸಂಪೂರ್ಣವಾಗಿ ದೇಶಿ ತಂತ್ರಜ್ಞಾನ ಬಳಸಿಕೊಂಡು ರಕ್ಷಣಾಪಡೆಯ ಸಂಶೋಧನೆ ಮತ್ತು ಅಭಿವೃದ್ಧಿ ಪ್ರಯೋಗಾಲಯವು (ಡಿ ಆರ್ ಡಿ ಎಲ್) ನಿರ್ಮಿಸಿದ್ದು, ಇದು 80.ಕಿಮಿ ದೂರದವರೆಗಿನ ಗುರಿಯನ್ನು ತಲುಪುವ ಸಾಮರ್ಥ್ಯ ಹೊಂದಿದೆ.

2008: ಚಿಪಾಕ್ ಕ್ರೀಡಾಂಗಣದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಟೆಸ್ಟ್ ಕ್ರಿಕೆಟಿನ ನಾಲ್ಕನೇ ದಿನವಾದ ಈ ದಿನದಂದು, ರಾಹುಲ್ ದ್ರಾವಿಡ್ ಅವರು ಹತ್ತು ಸಾವಿರ ರನ್ ಪೂರೈಸಿ, 25ನೇ ಶತಕ ದಾಖಲಿಸಿದರು. ಭಾರತ ತಂಡ ತನ್ನ ಮೊದಲ ಇನ್ನಿಂಗ್ಸಿನಲ್ಲಿ 627 ರನ್ ಗಳಿಸಿತು.

2008: ಪ್ರಾಚ್ಯವಸ್ತು ಸರ್ವೇಕ್ಷಣಾ ಇಲಾಖೆಯು ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯ ಪಟ್ಟ ಹಳ್ಳಿಯಲ್ಲಿ ನಡೆಸಿದ ಉತ್ಖನನದಲ್ಲಿ 20 ಸಾವಿರ ವರ್ಷಗಳ ಹಿಂದಿನ ಪ್ರಾಚೀನ ನಾಗರಿಕತೆಯ ಪಳೆಯುಳಿಕೆಗಳನ್ನು ಪತ್ತೆ ಮಾಡಿತು.

2009: ಆಸ್ಟ್ರೇಲಿಯಾದ ಕೈರ್ನ್ಸ್‌ನಲ್ಲಿ ಸಾವಿರಾರು ವಿಷಪೂರಿತ ನೆಲಗಪ್ಪೆಗಳನ್ನು ಸಾಮೂಹಿಕವಾಗಿ ಕೊಲ್ಲಲಾಯಿತು. ಇವುಗಳ ಕಳೇಬರಗಳ ಗೊಬ್ಬರವನ್ನು ಕೃಷಿಗೆ ಬಳಸುವ ಪದ್ಧತಿ ಇಲ್ಲಿ ಪ್ರತಿ ವರ್ಷ ಬಳಕೆಯಲ್ಲಿ ಇದೆ.

2009: ದುಬೈ ನ್ಯಾಯಾಲಯದಲ್ಲಿ ಎಬ್ಟಿಸಂ ಅಲಿ ರಷೀದ್ ಬಿದ್ವಾಯಿ ಅವರು ಪ್ರಥಮ ಮಹಿಳಾ ನ್ಯಾಯಾಧೀಶರಾಗಿ ನೇಮಕಗೊಂಡರು.

2014: ಪ್ರಥಮ ಸಲಿಂಗ ಮದುವೆಗಳನ್ನು ಇಂಗ್ಲೆಂಡ್ ಮತ್ತು ವೇಲ್ಸ್ಗಳಲ್ಲಿ ನಡೆಸಲಾಯಿತು.

ಪ್ರಮುಖಜನನ/ಮರಣ:

1815: ಸರ್ ಹೆನ್ರಿ ಬಾರ್ಟಲ್ ಫ್ರೇರ್ ಜನಸಿದರು. ಇವರು ಭಾರತದಲ್ಲಿ ಬ್ರಿಟಿಷ್ ವಸಾಹತಿನ ಆಡಳಿತಗಾರರಾಗಿದ್ದು ಐದು ವರ್ಷಗಳ ಕಾಲ ಬಾಂಬೆಯ ಗವರ್ನರ್ ಆಗಿದ್ದರು.

1869: ಇಂಗ್ಲಿಷ್ ಕಟ್ಟಡ ವಿನ್ಯಾಸಕಾರ ಸರ್ ಎಡ್ವಿನ್ ಲ್ಯುಟಿಯೆನ್ಸ್ ಅವರು ಲಂಡನ್ನಿನಲ್ಲಿ ಜನಿಸಿದರು. ಇವವರು ನವದೆಹಲಿಯ ಯೋಜನಾ ಭವನ ಹಾಗೂ ಮೊದಲಿಗೆ ವೈಸ್ ರಾಯ್ ಹೌಸ್ ಆಗಿದ್ದ ಈಗಿನ ರಾಷ್ಟ್ರಪತಿ ಭವನದ ವಿನ್ಯಾಸಕ್ಕಾಗಿ ಖ್ಯಾತರಾಗಿದ್ದಾರೆ.

1892: ನಮ್ಮ ನಾಡಿನ ಮಹಾನ್ ಸಂಶೋಧಕ, ರಾಷ್ಟ್ರಪ್ರೇಮಿ, ಕರ್ನಾಟಕ ಏಕೀಕರಣಕ್ಕೆ ದುಡಿದ, ಹುಲ್ಲೂರು ಶ್ರೀನಿವಾಸ ಜೋಯಿಸರು ಜನಿಸಿದರು. ಶ್ರೀನಿವಾಸ ಜೋಯಿಸರಿಗೆ ‘ಇತಿಹಾಸ ಸಂಶೋಧನಾ ಪ್ರಸಕ್ತ’, ‘ಐತಿಹ್ಯ ವಿಮರ್ಶನ ವಿಚಕ್ಷಣ’ ಮುಂತಾದ ಬಿರುದು ಗೌರವಗಳು ಅರ್ಪಿತವಾಗಿದ್ದವು. 2000 ವರ್ಷದಷ್ಟು ದೀರ್ಘ ಇತಿಹಾಸ ದಾಖಲಿಸಿರುವ ಹುಲ್ಲೂರು ಶ್ರೀನಿವಾಸ ಜೋಯಿಸರು, ತಾವೇ ಸ್ಥಾಪಿಸಿದ ಚಿತ್ರದುರ್ಗದ ಪ್ರಾಚ್ಯವಸ್ತು ಸಂಗ್ರಹಾಲಯದ ಗೌರವ ಕ್ಯೂರೇಟರಾಗಿಯೂ ಸೇವೆ ಸಲ್ಲಿಸಿದ್ದರು.

1912: ಜರ್ಮನಿಯ ಖ್ಯಾತ ವಿಮಾನ ಹಾರಾಟಗಾರ್ತಿ ಹನ್ನಾ ರೀಟ್ಸ್ಷ್ ಈಗಿನ ಪೋಲೆಂಡ್ ಭಾಗವಾದ ಹಿರ್ಶ್ ಬರ್ಗ್ ಎಂಬಲ್ಲಿ ಜನಿಸಿದರು. ಆಲ್ಫ್ ಪರ್ವತ ಶ್ರೇಣಿಯ ಮೇಲಿನಿಂದ ಗ್ಲೈಡರ್ ಹಾರಿಸಿದ ಪ್ರಥಮ ವ್ಯಕ್ತಿ ಈಕೆ. ಬರ್ಲಿನ್ನಿನ ಭೂಗತ ಬಂಕರಿನಲ್ಲಿ ಹಿಟ್ಲರನನ್ನು ಜೀವಂತವಾಗಿ ನೋಡಿದ ಕೊನೆಯ ವ್ಯಕ್ತಿಗಳಲ್ಲಿ ಇವರು ಕೂಡ ಒಬ್ಬರು.

1914: ಇಂಗ್ಲಿಷ್ ಇತಿಹಾಸಜ್ಞ, ಪತ್ರಕರ್ತ ಮತ್ತು ಬರಹಗಾರ ಚಾಪ್ಮಾನ್ ಪಿಂಚರ್ ಭಾರತದ ಅಂಬಾಲದಲ್ಲಿ ಜನಿಸಿದರು.

1927: ಇಂಗ್ಲಿಷ್ ವೈದ್ಯ ವಿಜ್ಞಾನಿ ಜಾನ್ ವೇನ್ ಅವರು ವರ್ಸೆಸ್ಟೈರ್ ಶೈರಿನ ಟಾರ್ಡೆಬಿಗ್ಗೆ ಎಂಬಲ್ಲಿ ಜನಿಸಿದರು. ಇವರಿಗೆ ‘ಪ್ರೋಸ್ಟಾಗ್ಲಾಂಡಿನ್ಸ್’ ಕುರಿತಾದ ಸಂಶೋಧನೆಗೆ 1982 ವರ್ಷದ ನೊಬೆಲ್ ವೈದ್ಯ ಶಾಸ್ತ್ರದ ಪುರಸ್ಕಾರ ಸಂದಿತು. ಆಸ್ಪಿರಿನ್ ಕುರಿತಾದ ಮಹತ್ವದ ಸಂಶೋಧನೆಗಳು ಕೂಡಾ ಇವರದ್ದಾಗಿದೆ.

1929: ಮಹಾನ್ ರಂಗಕರ್ಮಿ, ಚಲನಚಿತ್ರ ಮತ್ತು ಕಿರುತೆರೆಯ ಜನಪ್ರಿಯ ನಟ ಉತ್ಪಲ್ ದತ್ ಅವರು ಪೂರ್ವ ಬಂಗಾಳದ ಬರಿಸಾಲ್ ಎಂಬಲ್ಲಿ ಜನಿಸಿದರು. ಭುವನ್ ಶೋಮೆ ಚಿತ್ರದ ಅಭಿನಯಕ್ಕೆ ರಾಷ್ಟ್ರೀಯ ಚಲನಚಿತ್ರ ಪುರಸ್ಕಾರ ಮತ್ತು ಸಂಗೀತ ನಾಟಕ ಅಕಾಡೆಮಿಯ ಫೆಲೋಶಿಪ್ ಅಂತಹ ಮಹತ್ವದ ಗೌರವಗಳ ಜೊತೆಗೆ ಅನೇಕ ಜನಪ್ರಿಯ ಪ್ರಶಸ್ತಿಗಳೂ ಅವರಿಗೆ ಸಂದಿದ್ದವು.

1941: ಅಮೆರಿಕದ ಖಗೋಳ ಭೌತವಿಜ್ಞಾನಿ ಜೋಸೆಫ್ ಹೂಟನ್ ಟೇಲರ್ ಜ್ಯೂನಿಯರ್ ಅವರು ಫಿಲೆಡೆಲ್ಫಿಯಾದಲ್ಲಿ ಜನಿಸಿದರು. ಇವರಿಗೆ ಪಲ್ಸರ್ಸ್ ಕುರಿತಾದ ಸಂಶೋಧನೆಗೆ 1993 ವರ್ಷದ ನೊಬೆಲ್ ಭೌತಶಾಸ್ತ್ರದ ಪುರಸ್ಕಾರ ಸಂದಿತು.

1943: ಬ್ರಿಟನ್ನಿನ ಬ್ಯಾಂಕರ್ ಮತ್ತು ಪ್ರಧಾನ ಮಂತ್ರಿಗಳಗಿದ್ದ ಜಾನ್ ಮೇಜರ್ ಅವರು ಇಂಗ್ಲೆಂಡಿನ ಸುಟ್ಟಾನ್ ಎಂಬಲ್ಲಿ ಜನಿಸಿದರು.

1965: ಸಂಗೀತ ಹಾಗೂ ಮೃದಂಗದಲ್ಲಿ ಖ್ಯಾತರಾದ ಆನೂರು ಅನಂತಕೃಷ್ಣ ಶರ್ಮ ಅವರು ಬೆಂಗಳೂರಿನಲ್ಲಿ ಜನಿಸಿದರು. ಇವರಿಗೆ ಕರ್ನಾಟಕ ಸರ್ಕಾರದ ಗಾನಕಲಾಶ್ರೀ ಪ್ರಶಸ್ತಿಯೂ ಸೇರಿದಂತೆ ಅನೇಕ ಗೌರವಗಳು ಸಂದಿವೆ.